ಭಕ್ತಿಯಂಕುರಿಸಲು ಪರಿಸ್ಥಿತಿ

ಭಕ್ತಿಯು ಭಾವನೆಯ ತೆನೆ, ಭಾವನೆಯು ಬುದ್ಧಿಗಿಂತ ಹಿರಿದಾಗಿ ಇರುವಲ್ಲಿ ಭಕ್ತಿಯ ಬೆಳೆಗೆ ಉತ್ತಮವಾದ ಕ್ಷೇತ್ರ ಆಗುತ್ತದೆ. ಬುದ್ಧಿಗೆ ಹರಿಯದಂಥ ಪರಿಸ್ಥಿತಿಯುಂಟಾದಲ್ಲಿ ಭಕ್ತಿ ಮೊಳೆಯುತ್ತದೆ. ಸಂಕಟದಲ್ಲಿ ವೆಂಕಟರಮಣ. ಕಲಿತವರಲ್ಲಿ ವಿಚಾರಶಕ್ತಿಯು ಹೆಚ್ಚು ಕಡಿಮೆ ಪ್ರಮಾಣದಲ್ಲಿ ಹದಗೊಂಡಿರುತ್ತದೆ. ಅಂಥಲ್ಲಿ ಯಾವ ವಿಷಯ ಮುಂದೆ ಬಂದರೂ ಬುದ್ಧಿ ಶಸ್ತ್ರದಿಂದ ವಿಂಗಡಿಸಿನೋಡಲು ತವಕಿಸಲಾಗುತ್ತದೆ. ಅನಾಥನು ಭಿಕ್ಷೆಗೆ ಬಂದಾಗ ಬುದ್ಧಿವಂತನು ಅಂಥ ಜನರ ಲೆಕ್ಕಹಾಕಿ ಅವರ ಉಪಜೀವನದ ಭಾರವನ್ನು ವ್ಯರ್ಥವಾಗಿ ಇಂತಿಷ್ಟು ಹೊರಬೇಕಾಗುತ್ತದೆಂದು ಗುಣಿಸಿ ಮುಂದಿನ ಮನೆಗೆ ಸಾಗು ಅನ್ನುತ್ತಾನೆ. ಭಾವನೆಯುಳ್ಳವನು ಮೊದಲು ಒಂದು ತುತ್ತು ಹಾಕು, ಹಸಿವು ಹಿಂಗಲಿ ಅನ್ನುತ್ತಾನೆ. ಈ ಕರುಣೆ ಬರುವ ಸ್ಥಳವೇ ಭಕ್ತಿಯ ಮನೆ. ಆ ಮನೆಯ ಒಡೆಯನಿಗೆ ಅಂತರಾತ್ಮನೆಂದು ಕರೆಯುತ್ತಾರೆ. ಅಂತರಾತ್ಮನು ಪರಮಾತ್ಮನು ಶಿಸು. ಅಂತರಾತ್ಮನು ಕೈನೀಡಿ ಎತ್ತಿಕೊಳ್ಳಲು ಪರಮಾತ್ಮನನ್ನು ಕರೆಯುತ್ತಾನೆ. ಆತನು ಪರಮಾತ್ಮನತ್ತ ಕೃಪೆಯ ಸಲುವಾಗಿ ಕೃತಜ್ಞತೆಯನ್ನು ತೋರಿಸುತ್ತಾನೆ. ಹಾಗೂ ತನಗಿಂತ ದುರ್ಬಲರ ಮೇಲೆ ಕರುಣೆ ತೋರಿಸುತ್ತಾನೆ. ಅಂತರಾತ್ಮನ ಮುಖವು ಪರಮಾತ್ಮನ ಕಡೆಗಾದಾಗ ಭಕ್ತಿಯೆನಿಸುತ್ತದೆ; ದುರ್ಬಲರ ಕಡೆಗೆ ಹೊರಳಿದಾಗ ಪ್ರೀತಿಯೆನಿಸುತ್ತದೆ. ಅಶಿಕ್ಷಿತರೆನಿಸಿಕೊಳ್ಳುವವರಲ್ಲಿಯೂ, ಬುದ್ಧಿಬಲಕ್ಕಿಂತ ಭಾವನಾಬಲವು ಹಿರಿದಾಗಿರುವವರಲ್ಲಿಯೂ, ಅಥವಾ ಬುದ್ಧಿಯ ಆಟವೇ ಸಾಗಲಾರದಂಥ ಪರಿಸ್ಥಿಯೊಳಗೆ ಝಿವನ ನಡಿಸುವವರಲ್ಲಿಯೂ ಭಕ್ತಿಯೂ ಅಂಕುರಿಸಬಲ್ಲದು. ಹೆಣ್ಣುಮಕ್ಕಳಲ್ಲಿ ಅಂಥ ಪರಿಸ್ಥಿತಿ ಹೆಚ್ಚು. ಹುಟ್ಟಿದ ಮನೆಗೆ ಕೀರ್ತಿ, ಕೊಟ್ಟ ಮನೆಗೆ ಯಶಸ್ಸು ತರಬೇಕಾಗಿರುವ ಭಾರವಾದ ಹೊಣೆ. ತವರುಮನೆಯ ಆಸ್ತಿಯ ಅಧಿಕಾರವನ್ನು ಹುಟ್ಟಾ ಕಳಕೊಂಡು ಬಂದವಳು. ಅತ್ತೆಯ ಮನೆಯ ಒಡೆತನವಿನ್ನೂ ಪ್ರಾಪ್ತವಾಗಿರುವದಿಲ್ಲ. ಒಂಬತ್ತು ತಿಂಗಳ ಗರ್ಭಧಾರಣ, ಪ್ರಸವ ವೇದನೆ, ಮಕ್ಕಳ ಸಂರಕ್ಷಣ, ಮನೆತನದಲ್ಲಿ ರೋಗೊಗಳ ಆರೈಕೆ, ಅತ್ತೆಯ ಸಹಾನುಭೂತಿ ಸಂಪಾದನೆ, ಗಂಡನ ಒಲುಮೆಯ ಪ್ರಾಪ್ತಿ-ಇವೆ ಮೊದಲಾದ ಪರಿಸ್ಥಿತಿಗಳಲ್ಲಿ ಬುದ್ಧಿಯು ಸರಿಯಾದ ಮಾರ್ಗದರ್ಶನ ಮಾಡಲಾರದೆಂದು ಅವಳು ನಿರ್ಣಯಕ್ಕೆ ಬಂದಿರುತ್ತಾಳೆ. ಭಾವನೆಯ ಬಲದಿಂದ ಒಂದು ವಿಶ್ವಾಸವನ್ನು ತಳೆದು ನಡೆಯುವದರಿಂದ ಸರ್ವ ಅಡೆತಡೆಗಳೂ ಬಯಲಾಗುವವಲ್ಲದೆ, ಬರುವ ಕಲ್ಯಾಣಗಳೆಲ್ಲ ಒಳಬರಲು ದಾರಿಯಾಗುತ್ತದೆಂದು ಅವಳಿಗೆ ಮನವರಿಕೆಯಾಗಿರುತ್ತದೆ.

ದೇವನಿಗೇ ಬೇಡೋಣ

ಜೀವನದಲ್ಲಿ ಅನೇಕ ಕಷ್ಟಕಾರ್ಪಣ್ಯಗಳು ಬರುವುದು ಸ್ವಾಭಾವಿಕ. ಆದ್ದರಿಂದ ಪರರಿಂದ ಸಹಾಯ ಬಯಸುವುದೂ ಪರರಿಗೆ ಸಹಾಯ ಸಲ್ಲಿಸುವುದೂ ಕ್ರಮಪ್ರಾಪ್ತವಾಗುವದು; ಪರಸಹಾಯವು ಅದೆಷ್ಟು ದೊರೆತರೂ ಸಾಕೆನಿಸುವದಿಲ್ಲ. ಅನ್ನ, ಆರೋಗ್ಯ, ಮಕ್ಕಳು, ಮಾನ, ಆಯುಷ್ಯ, ಕುಟುಂಬತುಷ್ಟಿ, ಗೆಲವು ಇವೆಲ್ಲ ಮನುಷ್ಯನಿಗೆ ಬೇಕಾಗುವ ಅವಶ್ಯಕ ವಸ್ತುಗಳೆಂದರೆ, ಇವುಗಳನ್ನು ದೊರಕಿಸುವುದಕ್ಕೆ ಮನುಷ್ಯನು ಶಕ್ತಿಮೀರಿ ಪ್ರಯತ್ನಿಸತಕ್ಕದ್ದು. ಪ್ರಸಂಗಾನುಸಾರವಾಗಿ ಪರರಿಂದ ಸಹಾಯ ಪಡೆಯತಕ್ಕದ್ದು. ಆ ಬಳಿಕ ಯಶಸ್ಸಿಗಾಗಿ ಪರಮಾತ್ಮನ ಕೃಪೆಯನ್ನು ದೊರಕಿಸತಕ್ಕದ್ದು ಪರಮಾತ್ಮನ ಕೃಪೆಯನ್ನು ಸಂಪಾದಿಸುವುದಕ್ಕೆ ಭಕ್ತಿಯನ್ನು ಬೆಳೆಯಿಸ ಬೇಕಾಗುತ್ತದೆ. ಭಕ್ತಿಯು ಬೆಳೆದುಬರಬೇಕಾದರೆ ಬಿತ್ತುವ ಬೀಜ ಮೊದಲಿಗೆ ಬೇಕಲ್ಲವೇ? ಹೊಲದಲ್ಲಿ ಬಿತ್ತವ ಧಾನ್ಯದ ಬೀಜಗಳೇ ದುರ್ಲಭವಾಗಿರುವಾಗ ಭಕ್ತಿಯ ಬೆಳೆಗೆ ಇನ್ನಾವ ಬೀಜ ತರಬೇಕೆಂದು ತವರಿಸುವ ಕಾರಣವಿಲ್ಲ. ಬೀಜ ಸಿಕ್ಕರೆ ಹದಮಾಡಿದ ಹೊಲ ದೊರ ಕೊಳ್ಳುವುದು ಹೇಗೆಂದು ಹಗರಣಗೊಳ್ಳುವ ಕಾರಣವಿಲ್ಲ. ಆ ಬೀಜ, ಆ ಬೀಜ ಬಿತ್ತುವ ಕ್ಷೇತ್ರ ಇವೆರಡು ನಮ್ಮ ಗರತಿಯ ತೀರ ಬಳಕೆಯ ವಸ್ತುಗಳಾಗಿಯೇ ಬಿಟ್ಟಿವೆ.

ನಾರಾಯಣ ನಿನ್ನ ನಾಮದ ಬೀಜವ
ನಾನೆಲ್ಲಿ ಬಿತ್ತಿ ಬೆಳೆಯಲಿ | ನಿನ ನಾಮ |
ನಾಲೀಗಿ ಮೇಲೆ ಬೆಳೆದೇನೋ ||

ಪರಮಾತ್ಮನ ನಾಮವೇ ಬೀಜವೆಂದೂ, ಆ ಬೀಜವನ್ನು ಬಿತ್ತಿ ಬೆಳೆಯುವ ಸ್ಥಳವು ನಾಲಿಗೆಯೆಂದೂ ತಿಳಿದಂತಾಯಿತು. ನಾರಾಯಣಾ ಅನ್ನದೆ ಶಿವ ಶಿವ ಅಥವಾ ರಾಮ ರಾಮ ಎಂದರೆ ಆಗುವುದಿಲ್ಲವೇ? ಇದು ಬ್ರಾಹ್ಮಣರಿಗಷ್ಟೇ ಹೊಂದಿಕೆಯಾಗುವ ಉಪಾಯವೇ? ಎಂದು ದಿಗಿಲುಗೊಳ್ಳಬಾರದು. ಗರತಿಯರ ರಾಜ್ಯದಲ್ಲಿ ನಾರಾಯಣ, ಶಿವ, ರಾಮ, ಮಲ್ಲಯ್ಯ, ಪಾರ್ಶ್ವನಾಥ, ಬಸವಣ್ಣ ಈ ಹೆಸರುಗಳೆಲ್ಲ ಒಬ್ಬ ದೇವರಿಗೇ ಇರುವವು. ಆದ್ದರಿಂದ ಬಂದ ಹೆಸರುಗಳೆಲ್ಲ ಪರಮಾತ್ಮನೆಂದು ಇಟ್ಟಕೊಳ್ಳಬೇಕು. ಪರಮಾತ್ಮ ನಾಮವನ್ನು ನಶಲಿಗೆಯ ಮೇಲೆ ಬಿತ್ತುವುದೇ ತಡವಾದೀತು.ಅದರ ಬೆಳೆ ಬರುವುದಕ್ಕೆ ತಡವೇ ಆಗುವದಿಲ್ಲವೆಂದು ಅವರು ಭಾವಿಸುತ್ತಾರೆ. ಹಾವುಗಾರನ ಮಾವಿನ ಗಿಡಕ್ಕೆ ಕಾಯಿಯಾಗುವದಕ್ಕೆ ತಡವಾದೀತು. ಆದರೆ ಈ ಭಕ್ತಿಯ ಬೆಳೆ ಬರುವುದಕ್ಕೆ ತಡವಾಗುವದಿಲ್ಲ. ಹಾಗೆಂದ ಮಾತ್ರಕ್ಕೆ ಹಾವುಗಾರನಂಥ ಠೌಳಿಯೇ ಇದೆಂದು ತಿಳಿದುಕೊಳ್ಳಬಾರದು-

ಶಿವ ಶಿವ ಎಂದರ ಸಿಡಿಲೆಲ್ಲ ಬಯಲಾಗಿ
ಕಲ್ಲು ಬಂದರಗಿ ಕಡೆಗಾಗಿ | ಎಲೆ ಮನವೆ |
ಶಿವನೆಂಬ ಶಬ್ದ ಬಿಡಬೇಡ ||

ಗರತಿಗೆ ಶಿವನ ನಾಮಸ್ಮರಣೆಯಲ್ಲಿ ವಿಶ್ವಾಸ ಹುಟ್ಟಿ ಬೆಳೆದಿದೆ. ಗದರಿಗರ್ಜಿಸಿ ಮೇಲೆ ಬೀಳನಿಂತ ಸಿಡಿಲು ಬಯಲಾಗಿ ಹೋಯಿತು. ಆಕಾಶದ ಬಯಲೊಳಗಿನ ಬಯಲು ವಸ್ತು ಬಯಲಾಯಿತೆಂದು ತಿಳಿಯೋಣ. ಆದರೆ ಎರಗಿದ ಕಲ್ಲು ಬಡಿಯದೆ ಕಡೆಗಾದುದು ಕೌತುಕವನ್ನುಂಟುಮಾಡಲಾರದೇ? ಅದಕ್ಕೆಂತಲೇ ಗರತಿಯು ತನ್ನ ಮನಸ್ಸಿಗೆ ಹೇಳುತ್ತಾಳೆ-ಶಿವನೆಂಬ ಶಬ್ದ ಬಿಡಬೇಡ. ಇಷ್ಟಕ್ಕೆ ಗರತಿಯು ಮಹೇಶ್ವರ ಸ್ಥಳಕ್ಕೆ ಬಂದಳೆಂದು ತಿಳಿಯಬಹುದು. ಅವಳಿಗೆ ಮಹೇಶ್ವರ ಭಕ್ತಳೆಂದು ಅನ್ನಬಹುದು.

ಕೃಷ್ಣ ಕೃಷ್ಣ ಎಂದು ಮತ್ತ ಬೀದಿಗೆ ಬಂದ
ಕೃಷ್ಣ ನಮಗೆಲ್ಲಿ ದೊರೆದಾನ | ಈ ಪರಿ |
ಎಷ್ಟು ದಿನ ಹೀಂಗ ಕಳೆಯಲೇ ||

ಎನ್ನುವಾಗ ಗರತಿಯು ಮಹೇಶ್ವರ ಮಹೇಶ್ವರಿಯವಸ್ಥೆಗೆ ಬಂದಂತೆ. ಯಾಕಂದರೆ ಕೃಷ್ಣ ನಾಮವನ್ನು ಜಪಿಸುತ್ತಲೇ ಇರುತ್ತಾಳೆ. ಆದರೆ ಕೃಷ್ಣನಿನ್ನೂ ದೊರೆತಿಲ್ಲ. ಎಂದು, ಯಾವಾಗ ಎನ್ನುವುದೂ ನಿಶ್ಚಯವಿಲ್ಲ. ಅ ಅನಿಶ್ಚಯಕ್ಕೆ ತಾಳ್ಮೆಗೆಟ್ಟಿಲ್ಲ. ನಾಮಸ್ಮರಣೆ ಮಾಡಿಯೇ ಮಾಡುತ್ತಾಳೆ-ಕೃಷ್ಣ ಕೃಷ್ಣ ಎಂದು.

ಕೇಳಿದರೆ ಕೇಳು, ಕೇಳದಿದ್ದರೆ ಮಾಣು
ಶಿವಶಿವ ಎನ್ನುವುದನ್ನು ಮಾಣೆನು

ಎನ್ನುವ ಅಕ್ಕಮಹಾದೇವಿಯ ವಚನಕ್ಕೆ ಹೋಲಿಸಿ ನೋಡಬಹುದು. ಕೊಡುಗೈ ದೊರೆಯಾದ ಮಹಾದಾನಿಯು ಸಹ ಪ್ರಸನ್ನನಾದರೆ ಎರಡೂ ಕೈಗಳಿಂದ ಮಾತ್ರ ಕೊಟ್ಟಾನು. ಹೆಚ್ಚು ಬೇಡಿದರೆ ಉಡಿತುಂಬ ಕೊಟ್ಟಾನು. ಇನ್ನು ಬೇಡಿದರೆ ಮನೆ ತುಂಬುವಷ್ಟು ಕೊಟ್ಟಾನು. ಆದರೆ ಅದರಿಂದ ಮನತುಂಬಲಾರದು. ಮನತುಂಬುವಂತೆ ಕೊಡುವುದಕ್ಕೆ ದೇವನೊಬ್ಬನೇ ಸಮರ್ಥನು. ಅಂಥ ದೇವನು ಮಂದಿಯೊಳಗೆ ಸಿಗಲಾರನು. ಅವನು ಮಂಜಾನದಲ್ಲಿದ್ದವನು. ಸುಲಭನಲ್ಲ; ದುರ್ಲಭನು.

ಮಂದೇನು ಕೊಟ್ಟೀತ ಮನೆವೇನು ದಣಿದೀತ
ಮಂಜಾನದಾನ ಗಿರಿಮಲ್ಲ | ಕೊಟ್ಟರ
ಮನಿ ತುಂಬಿ ನಮ್ಮ ಮನ ತುಂಬಿ ||

ಇಷ್ಟದೈವತವನ್ನು ನೆನೆವ ಬಗೆ

ಇಷ್ಟದೈವತವನ್ನು ನೆನೆಯುವದಕ್ಕೆ ಒಂದು ವೇಳೆಯೂ, ಅದಕ್ಕೊಂದು ಪದ್ಧತಿಯೂ ಬೇಕಾಗುತ್ತದೆ. ಪರಮಾತ್ಮನಿಗೆ ಕೋಟಿ ಕೈಗಳಿದ್ದರೂ, ಅವೆಲ್ಲ ಕೈಗಳಿಗು ನೀಗದ ಕೆಲಸಗಳೂ ಇರಬೇಕು. ಆ ಕೆಲಸಗಳಲ್ಲಿ ಹೊರಳಿ ನೋಡುವುದಕ್ಕೆ ಅವನಿಗೆ ಅವಕಾಶವಾದರೂ ದೊರೆಯುವಂತಿರಬೇಕು. ಇಲ್ಲವೆ ಸಾವಿರ ಕೆಲಸಗಳನ್ನೂ ಬಿಟ್ಟು ಹೊರಳಿನೋಡುವಂತೆ ಆತ್ಮೀಯತೆಯನ್ನಾದರೂ ಪಡೆದಿರಬೇಕು.

ತಾಯೌವ್ನ ನೆನೆಯೂದು ಯಾಯಾಳಿ ಯಾಹೊತ್ತು
ಊರೆಲ್ಲ ಉಂಡು ಮನಗಾನ | ಬೆಳಚಿಕ್ಕಿ |
ಹೊಂಡಾಗ ಅವಳ ನೆನೆದೇನ ||

ಇಷ್ಟದೈವತವು ಇಲ್ಲಿ ತಾಯವ್ವನೆಂಬ ಅಭಿಧಾನ ಪಡೆದಿದೆ. ಊರೆಲ್ಲವೂ ಉಂಡು ಮಲಗಿದಾಗ ಆಕೆಯನ್ನು ಸ್ಮರಿಸುವುದಕ್ಕೆ ಸರಿಯಾದ ಕಾಲ. ಯೋಗಿಗಳಿಗೆ ಹಗಲೇ ರಾತ್ರಿಯೂ, ರಾತ್ರಿಯೇ ಹಗಲೂ ಆಗಿ ಪರಿಣಮಿಸುತ್ತದೆಂದು ಭಗವದ್ಗೀತೆಯಲ್ಲಿ ಹೇಳಿದೆ. ಲೋಕವೆಲ್ಲ ಭೋಗವಿಲಾಸದಲ್ಲಿ ತೊಡಗಿ ಎಚ್ಚರಿಕೆಯಲ್ಲಿದ್ದಾಗ ಯೋಗಿಯು ಅನಾಸಕ್ತಿಯಿಂದ ಬಿದ್ದುಕೊಂಡಿರುತ್ತಾನೆ. ಲೋಕವು ನಿದ್ರೆಯಲ್ಲಿ ಮುಳುಗಿದಾಗ ಯೋಗಿಯು ‘ಇದೇ ಸಮಯ ಹರಿಯೇ’ ಎಂದು ತನ್ನಿಷ್ಟದೈವತದೊಡನೆ ಸಲಿಗೆಯ ಸಲ್ಲಾಪ ನಡೆಸಿರುತ್ತಾನೆ. ಬೆಳಚಿಕ್ಕೆ ಹೊರಟಮೇಲೆ ಅಂದರೆ ಉಷಃಕಾಲದಲ್ಲಿ, ದಿನದ ಮರಣದಿಂದ ನವಜನ್ಮವನ್ನು ತೊಟ್ಟು ಎದ್ದಕೂಡಲೆ ಇಷ್ಟದೈವತವನ್ನು ಸ್ಮರಿಸುವುದು ಇನ್ನೂ ಒಳ್ಳೆಯದೆಂದು ಹೇಳುತ್ತಾರೆ. ಆದರೆ ‘ಮನದಲ್ಲಿ ನೆನೆವವಗೆ ಮನೆಯೇನು, ಮಠವೇನು’-ಎಲ್ಲೂ ಅಷ್ಟೇ. ಗರತಿಯ ದಿನದ ಹೊತ್ತಲ್ಲ ಉದ್ಯೋಗದಲ್ಲಿಯೇ ಕಳೆಯುವದೆಂದು ಸಾಧಾರಣವಾಗಿ ಹೇಳಬಹುದು. ಆಕೆ ತನ್ನ ಪಾಲಿಗೆ ಬಂದ ಉದ್ಯೋಗವನ್ನು ಗೊಣಗುಟ್ಟುತ್ತ ಹೊತ್ತೆಗೆಯುವದಿಲ್ಲ, ಹಾಡುತ್ತ ದುಡಿಯುತ್ತಾಳೆ. ಹಾಡು ಹಿಗ್ಗಿನಿಂದ ಹೊರಹೊಮ್ಮುವದು; ಹಿಗ್ಗನ್ನು ಹುಟ್ಟಿಸುವದು. ಆಸರು-ಬೇಸರು ಕಳೆಯುವದು. ಈ ಹಾಡು ಹುರುಪಿನ ಚಿಹ್ನ. ಒಂಟಿಗಳಾಗಿದ್ದಾಗ ಹಾಡಿ, ಜೊತೆಗಾರರು ಕೂಡಿದಾಗ ಮಾತು ನಡೆದಿದ್ದರೂ ಆಕೆ ತೀರ ಕಣ್ಣು ಮುಚ್ಚಿ ಸಾಗಿರುವದಿಲ್ಲ. ಎಲ್ಲಿಗೆ ಹೊರಟಿದ್ದೇನೆ; ಎಲ್ಲಿಂದ ಬಂದೆ; ಯಾರೊಡನೆ ನಡಿದಿರುವೆ; ಎಂಥಲ್ಲಿ ಸಾಗಿರುವೆ; ಮುಂದೇನಿದೆ; ಹಿಂದೇ ಏನು ದಾಟಿದೆ- ಈ ಎಚ್ಚರಿಕೆ ಧ್ಯಾನ-ಏಕಾಗ್ರತೆಗಳ ಮಾರ್ಗದೊಳಗಿನ ಒಂದು ಹಿರಿಯ ಅಭ್ಯಾಸ. ಒಳಗಿಂದೊಳಗೆ ಗರತಿಯು ಈ ಅಭ್ಯಾಸವನ್ನು ಸಾಗಿಸಿಯೇ ಇರುತ್ತಾಳೆ. ಅಂತೆಯೇ ಅವಳು-

ಹೋಗಾಗ ಎಡಕಾದಾ ಬರುವಾಗ ಬಲಕಾದಾ
ಈಗ ನನ ಕೊಡಕ ಇದಿರಾದಾ | ಬಲಭೀಮ |
ಕೊಡ ಹೊತ್ತು ಕೈಯ ಮುಗಿದೇನ ||

ಎಂದು ತನ್ನ ದೈವಸೇವೆಯನ್ನು ಸಲ್ಲಿಸುತ್ತಾಳೆ. ಮನೆಯೊಳಗಿನ ಪರಿಸರವಾಗಲಿ ಪರಿಸ್ಥಿಯಾಗಲಿ ಬೇರೆ ಬೇರೆ ವಾತಾವರಣವನ್ನು ಧರಿಸುವುದು ನಮಗೆಲ್ಲರಿಗೂ ಗೊತ್ತಿದೆ. ಒಂದು ಪರಿಸ್ಥಿಯು ಭಣಗುಟ್ಟುವ ವಾತಾವರಣವನ್ನು ಬೀರಿದರೆ, ಇನ್ನೊಂದು ಸಮಾಧಾನ ತೆರೆಗಳನ್ನು ತೂಗುತ್ತಿರುತ್ತದೆ. ಒಮ್ಮೆ ಗಾಂಭೀರ್ಯದ ಉಬ್ಬರವು ಕಂಡುಬಂದರೆ, ಇನ್ನೊಮ್ಮೆ ಹಿಗ್ಗಿನ ಬುಗ್ಗೆ ನೆಗೆದೆದ್ದಿರುತ್ತದೆ. ಅಸಮಾಧಾನ-ನಿರುತ್ಸಾಹಗಳ ವಾತಾವರಣವು ಅದಿವ್ಯವೆಂದೂ, ಸಮಾಧಾನ-ಉತ್ಸಾಹಗಳು ವಾತಾವರಣವು ದಿವ್ಯವೆಂದೂ ಸಾಮಾನ್ಯವಾಗಿ ಹೇಳುತ್ತಾರೆ. ಕೃತ್ರಿಮವಾಗಿ ಅಂಥ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಸಾಧ್ಯವಿಲ್ಲ. ಗರತಿಯು ದಿವ್ಯ ವಾತಾವರಣವನ್ನು ಗುರುತಿಸಬಲ್ಲವಳಾಗಿದ್ದಾಳೆನ್ನುವುದಕ್ಕೆ ಕೆಳಗಿನ ಮಾತೇ ಸಾಕ್ಷಿ.

ಇಂದು ನನ್ನಂಗಳ ಶ್ರೀಗಂಧ ನಾತಾವ
ಬಂದೀದಾನೇನ ಶ್ರೀಹರಿ | ನನ ಮನಿಗ |
ಗಂಧದ ಮಡುವ ಕಲಕೂತ ||

ಆಕೆಯು ಜೀವನದಲ್ಲಿ ನನ್ನವರು; ಆದಾರು ಹೋದಾರು ಎಂದು ಅದೆಷ್ಟು ಕಕ್ಕುಲತೆಪಟ್ಟರೂ, ಮಾನವನಲ್ಲಿ ಅಂತರಾತ್ಮ ಸ್ವಭಾವವಾದ ಕೃತಜ್ಞತೆಯು ಸಾಕಷ್ಟು ಅರಳಿಲ್ಲವಾದ್ದರಿಂದ ಅಸಫಲತೆಯನ್ನು ಕಂಡು, ಸಾಧ್ಯವಾದಷ್ಟು ಹೆಚ್ಚು ಪ್ರಮಾಣದಿಂದ ಇಷ್ಟದೈವತದೊಡನೆ ತಾದಾತ್ಮ್ಯವನ್ನು ಹೊಂದುವದರಲ್ಲಿ ತೊಡಗುತ್ತಾಳೆ.

ಮಂದಿ ಮಂದೀಯೆಂದು ಮಂದಿ ನಂಬಲಿಹೋದ
ಮಂದಿ ಬಿಟ್ಟಾರ ನಡುನೀರ | ಮಲ್ಲಯ್ಯ |
ತಂದಿ ನನ ಕೈಯ ಬಿಡಬ್ಯಾಡ ||

ಹೀಗೆ ತನ್ನ ಶ್ರದ್ಧೆಯ ಸ್ಥಳವನ್ನು ಕಂಡಹಿಡಿದು, ಅದನ್ನು ದೃಡಗೊಳಿಸುವ ಎತ್ತುಗಡೆ ನಡೆಸಿರುತ್ತಾಳೆ.

ಮಾದೇವ ನಿನ ಹೊರತು ನಾನ್ಯಾರ ನಂಬಿಲ್ಲ
ನಾ ಮಾಡೇನೆಂಬ ಅಳವಿಲ್ಲ | ಮಲ್ಲಯ್ಯ |
ನೀ ನಡಸು ನನ್ನ ಸರುವೆಲ್ಲ ||

ಸಫಲತೆಯ ರೀತಿ

“ನಂಬಿದರೆ ಪ್ರಸಾದ, ನಂಬದಿದ್ದರೆ ವಿಷವು.” ನಾವು ಮೂರ್ತಿಗಳನ್ನು ಪೂಜಿಸುವಾಗ ಆ ಪೂಜೆ ಕಲ್ಲಿನ ಲಿಂಗಕ್ಕಾಗಲಿ, ಹಿತ್ತಾಳಿಯ ಶಿವನಿಗಾಗಲಿ ಸಲ್ಲುವದಿಲ್ಲ. ಆ ಸ್ವರೂಪದ ಹಿಂದೆ ಅಡಗಿದ ದೈವತ್ವಕ್ಕೆನಮ್ಮ ಪೂಜೆಯಾಗಲಿ ಪ್ರಾರ್ಥನೆಯಾಗಲಿ ಸಲ್ಲುತ್ತದೆ. ಪೂಜೆ ನಡೆದಲ್ಲೆಲ್ಲಾ ತಾನು ಬಂದು ನಿಂತು ಅದನ್ನು ಸ್ವೀಕರಿಸುತ್ತೇನೆಂದು ಶ್ರೀಕೃಷ್ಣ ಪರಮಾತ್ಮನು ಹೇಳುತ್ತಾನೆ. ಪೂಜೆ ನಡೆಯಬೇಕು, ಪರಮಾತ್ಮ ಸ್ವೀಕರಿಸಬೇಕು. ಪೂಜೆಯಿರುವಲ್ಲಿ ಪರಮಾತ್ಮ ಪೂಜೆಯ ಶ್ರದ್ಧೆಯಿರುವಲ್ಲಿ ಪರಮಾತ್ಮನು ಸಾನಿಧ್ಯವೆನ್ನುವದು ಅದಕ್ಕಿಂತ ಒಪ್ಪುವ ಮಾತು. ಪೂಜೆಯೆಂದರೆ ಕೈಬಾಯಿಗಳ ಚಲನವಲನವೆನ್ನುವುದೂ ಸುಳ್ಳು. ಮೂರ್ತಿಯೆಂದರೆ ಶಿಲ್ಪಿಮಾಡಿಟ್ಟ ಒಂದು ಕಲಾಕೃತಿಯನ್ನುವುದೂ ಸುಳ್ಳು. ಪೂಜೆಯಲ್ಲಿ ಹುದುಗಿದ ಶ್ರದ್ಧೆ, ಮೂರ್ತಿಯಲ್ಲಿ ಅಳವಟ್ಟ ದಿವ್ಯಸಾನಿಧ್ಯ ಇವೆರಡೇ ಸತ್ಯವಾದವುಗಳು. ಶ್ರದ್ಧೆ ತಪ್ಪಿದರೆ ದಿವ್ಯ ಸಾನಿಧ್ಯವೂ ಶೂನ್ಯ.

ಹುತ್ತದ ಮೇಲಣ ರಜ್ಜು ಮುಟ್ಟಿದರೆಯೂ
ಸಾವರು ಶಂಕಿತರಾದವರು
ಸರ್ಪದಂಷ್ಟ್ರವದರೆಯೂ
ಸಾಯರು ನಿಶ್ಯಂಕಿತರಾದವರು
ಕೂಡಲ ಸಂಗಮದೇವಯ್ಯಾ

ಶಂಕಿತಂಗೆ ಪ್ರಸಾದ, ಸಿಂಗಿ ಕಾಳಕೂಟವಿಷವು!

ಎಂಬ ಅನುಭವವನ್ನು ಮಹಾನುಭಾವಿಯಾದ ಬಸವಣ್ಣನವರು ಹೇಳುವುದು ಆಶ್ಚರ್ಯವೇನಲ್ಲ. ಅಂಥದೇ ಮಾತನ್ನು ಅದೇ ಮಾತನ್ನು ಸಂಸಾರತ ಜೀವಿಯಾದ ಗರತಿಯೂ ಹೇಳುವಳೆಂದರೆ ಆಗಾಧವಲ್ಲವೇ?

ಕಸವ ಹೊಡೆದ ಕೈಯ ಕಸ್ತೂರಿ ನಾತಾವ
ಬಸವಣ್ಣ ನಿನ್ನ ಶಗಣೀಯ | ಬಳೆದ ಕೈ |
ಎಸಳ ಯಾಲಕ್ಕಿ ಗೊನಿನಾತ ||

ಇದು ಶ್ರದ್ಧೆಯ ಫಲ. ಸೇವಾಬುದ್ಧಿಯಲ್ಲಿಟ್ಟ ಪಾವಿತ್ರ್ಯದ ಫಲ. ಕುದುರೆಗೆ ನೀರು ತೋರಿಸಿಕೊಂಡು ಬರಹೇಳಿದ್ದರಿಂದ ಅಷ್ಟು ಮಾಡಿದ್ದೇನೆ; ನೀರು ಕುಡಿಸಿಕೊಂಡು ಬರಲಿಕ್ಕೆಲ್ಲಿ ಹೇಳಿದ್ದಿರಿ – ಎಂದು ಮರುಪ್ರಶ್ನೆ ಮಾಡುವ ಆಳುಮಗನ ಮಟ್ಟಕ್ಕಿದ ನಮ್ಮ ಸೇವೆ ಪಾವಿತ್ರ್ಯವಿಲ್ಲದ್ದಾಗಿ, ಪೂಜೆ ಶ್ರದ್ಧೆಯಿಲ್ಲದ್ದಾಗಿ, ಅಟ್ಟಿದ್ದೆಲ್ಲವೂ ಹುಟ್ಟಿಗೇ ಹತ್ತಿ ಹೋಗ ತೊಡಗಿದೆ.

ಗಡುಚಾದ ದಾರಿ

ಪರಮಾತ್ಮನನ್ನು ಒಲಿಸಿಕೊಳ್ಳುವುದು ಸುಲಭವಲ್ಲ. ಆ ದಾರಿ ಬಲು ಬಿಗಿಯಾದುದು.ತೀರ ಗಡುಚಾದ ದಾರಿಯದು. “ಭಕ್ತಿಯೆಂಬುದನ್ನು ಮಾಡಬಾರದು. ಅದು ಕರಗಸದಂತೆ ಹೋಗುತ್ತ ಕೊರೆಯುವದು, ಬರುತ್ತ ಕೊರೆಯುವದು” ಸುಳ್ಳೇನೂ ಅಲ್ಲ. ಆ ಕರಗಸದ ಕೈಯಿಂದ ತಪ್ಪಿಸಿಕೊಳ್ಳುವುದೂ ಆ ಮೇಲೆ ಸಾಧ್ಯವಿದ್ದಂತೆ ತೋರುವದಿಲ್ಲ. ಆದ್ದರಿಂದಲೇ ಆ ದಾರಿಗೆ ಬಿದ್ದವರು “ದೇವರಾಯನ ಹೆಸರನೇಕೆ ಕೇಳಿದೆನಮ್ಮ, ನಾನೇಕೆ ನಂಜು ನುಂಗಿದೆನೆ ತಾಯೀ?” ಎಂದು ಪಶ್ಚಾತ್ತಾಪಪಡುವ ಪ್ರಸಂಗವೂ ಒಮ್ಮೆ ಬಂದುಹೋಗುವದು. ಆ ದಾರಿ ಹಾವಸೆ ಗಲ್ಲಿನಿಂದ ರಚಿತವಾದುದೆಂದು ತೋರುತ್ತದೆ. ಅಂತೆಯೇ ಶ್ರೀ ಬಸವಣ್ಣನವರು-

ಹಾವಸೆಗಲ್ಲ ಮೆಟ್ಟಿ ಹರಿದು ಗೊತ್ತ ಮುಟ್ಟಬಾರದಯ್ಯ.
ನುಡಿದಂತೆ ನಡೆಯಲು ಬಾರದಯ್ಯ
ಕೂಡಲಸಂಗನ ಶರಣಭಕ್ತಿ ಬಾಳ ಬಾಯ ಧಾರೆ

ಎಂದು ಬೆರಗುಬಟ್ಟು ನಿಂತಿದ್ದಾರೆ. ಅಂಥ ಪ್ರಸಂಗದಿಂದ ಪಾರಾಗಿ ಅವರು ಹಿಂದಿನಿಂದ ಗೊತ್ತುಗಂಡರು. ಆ ಮತು ಬೇರೆ. ಗರತಿಯು ತನ್ನ-ಭಕ್ತಿ ದಾರಿಯಲ್ಲಿ ಮುಂದುವರಿದಾಗ ಹಾವಸೆಗಲ್ಲಿನ ದಾರಿಯನ್ನು ಕಂಡು ಬೆಕ್ಕಸಪಟ್ಟಿರಲೂಬಹುದು ಆದರೆ ಇನ್ನೊಂದು ಕ್ಷಣದಲ್ಲಿ ಆ ಹಾವಸೆಗಲ್ಲಿನ ಮೇಲೆ ಯಾರೋ ಹಾಯ್ದು ಹೋದ ಹೆಜ್ಜೆ ಕಂಡುಬಂದಿವೆ ಹಾಯ್ದು ಹೋದವನು ಬಲಭೀಮನೇ ಇರಬಹುದು ಅದು ತುತ್ತಲ್ಲ ಒಬ್ಬನಿಗೆ ಸಾಧ್ಯವಾದದ್ದು, ಇನ್ನೊಬ್ಬನಿಗೆ ಸಾಧ್ಯವಾಗದೇ ಹೋದೀತೇ? ಅವರವರ ಅಳವಿನಂತೆ ಅದು ಸಾಧಿಸೀತು –ಎನ್ನುವ ಧೈರ್ಯತುಂಬಿ ಗರತಿ ಮುಂದೆ ಸಾಗುವಳು.

ಹಾಸಗಲ್ಲಿನ ಮ್ಯಾಲ ಹಾಯ್ದು ಹೋದವನ್ಯಾರ
ಪಾದ ಮೂಡ್ಯಾವ ಪರಿಪರಿ | ಬಲಭೀಮ |
ಹಾಯ್ದು ಹೋಗ್ಯಾನ ಜಳಕಕ ||

ಅಂತಹ ಧೈರ್ಯ ತುಂಬಿದವಳಾದುದರಿಂದಲೇ, ಅವಳು ಭಕ್ತಿಯ ದಾರಿಯಲ್ಲಿ ಮುಂದುವರಿದ ಲಕ್ಷಣಗಳು ಅಲ್ಲಲ್ಲಿ ಕಂಡುಬರುತ್ತವೆ. ಆಕೆಗೆ ಹಲವು ಬಗೆಯ ಧ್ಯಾನಾನುಭವಗಳು ಬಂದಿರುತ್ತವೆ. ಬೆಳಕು, ದರ್ಶನ ಅವುಗಳ ಮಾತು ಹಾಗಿರಲಿ ಸೃಷ್ಟಿಯ ಚೆಲುವಿನ ಕುಡಿಯನ್ನು ಕಾಣುವ ಕಣ್ಣು ಅವಳಿಗೆ ಉಂಟಾಗುವುದು ಅರಿದಲ್ಲ. ಅಲ್ಲಿ ಪರಮಾತ್ಮನ ಸುಳುಹು ಕಾಣುತ್ತಾಳೆ. ಆಮತು ದೊಡ್ಡದು. ಆ ಮಾತನ್ನು ಇಲ್ಲಿ ಉದಾಹರಣೆಯಿಂದ ಸ್ಪಷ್ಟಪಡಿಸಬಹುದು-

ನಿದ್ದಿಗಣ್ಣಿಲಿ ಕಂಡ ಸುದ್ದ ಗುರುವಿನ ಪಾದ
ಎದ್ದು ನೋಡಿದರ ನಿರಬಯಲ | ಗುರುರಾಯ |
ದುದ್ದರನ ಮಹಿಮೆ ತಿಳಿಯಾವ ||

ಇದು ನಿದ್ದೆಯಲ್ಲಿ ಕಂಡ ಕನಸಿನ ಮಸಕಲ್ಲ. ಎಚ್ಚರಿಕೆಯಲ್ಲಿ ಕಂಡ ಭ್ರಾಂತಿಯ ಕಸಕಲ್ಲ. ಎಚ್ಚರಿಕೆಯ ಆಚೆ, ನಿದ್ರೆಯ ಈಚೆ ಇರುವ ಒಂದು ಧ್ಯಾನಮಗ್ನಾವಸ್ಥೆಯಲ್ಲಿ ಗರತಿ ತನ್ನ ಇಷ್ಟದೈವತದ ಪಾದಗಳನ್ನು ಕಂಡಳು. ಹಾಗೆ ಕಂಡ ಜೀವ ಹಿಗ್ಗಿ ಇನ್ನಿಷ್ಟು ಢಾಳವಾಗಿ ಕಾಣಬೇಕೆನ್ನುವ ತವಕದಲ್ಲಿ ಎಚ್ಚರಕ್ಕಿಳಿದು ಸ್ಥೂಲ ಕಣ್ಣು ತೆರೆದರೆ, ಕಾಣಿಸುವುದೇನು? ಏನೂ ಇಲ್ಲ. ಅದೊಂದು ರುದ್ದರನ ಮಹಿಮೆಯೆಂದು ಬೆರಗುಬಡುವಳು ಇನ್ನೊಮ್ಮೆ ಹೀಗೆಯೇ ಧ್ಯಾನಾವಸ್ಥೆಯಲ್ಲಿರುವಾಗ ದೇವರಿಗೇರಿಸಿದ ಹೂ, ಅರ್ಪಿಸಿದ ಮಾಲೆ, ಮೊಗ್ಗು ಇವುಗಳನ್ನು ಕಂಡು ಭಕ್ತಿಯ ಭರವು ಹೆಚ್ಚಲು, ಅವುಗಳಲ್ಲಿ ತನ್ನ ಇಷ್ಟದೈವತ ಲಿಂಗಯ್ಯನೇ ಗೋಚರಿಸುವನು. “ಭಕ್ತಿಯು ಭೂಮಿಯ ಮೇಲೆ ಮೊದಲು ಪ್ರಕಟವಾದದ್ದು ಹೂವಿನ ರೂಪದಿಂದ” ಎಂದು ಶ್ರೀತಾಯಿಯವರು ಹೇಳುತ್ತಾರೆ. ಪರಮಾತ್ಮನು ವನಸ್ಪತಿ, ಪ್ರಾಣಿ, ಮನುಷ್ಯ ಇವರಲ್ಲಿ ಪ್ರಕಟನಾಗಿರುವಂತೆ ಸೂಕ್ಷ್ಮಾತಿಸೂಕ್ಷ್ಮಕ್ಕೂ ಮಿಗಿಲಾದ ಕಾರಣಲೋಕದ ವಸ್ತು ಸ್ಥೂಲಲೋಕದಲ್ಲಿ ಪ್ರಕೃತಿಯಾಗಬೇಕಾಯಿತು. ದೇವನಲ್ಲಿ, ಗುರುವಿನಲ್ಲಿ ಭಕ್ತಿಯನ್ನು ಪ್ರಕಟಿಸುವವರು ಜೊತೆಗೆ ಹೂಗಳನ್ನೊಯ್ದು ಅರ್ಪಿಸುವರು. “ಹೂ ಅರ್ಪಿಸುವವನ ಭಕ್ತಿಯ ಆರ್ದ್ರತೆ ಹೆಚ್ಚಿಗಿದ್ದಂತೆ, ಆ ಹೂ ಮೊದಲಿಗಿಂತ ಹೆಚ್ಚಾಗಿ ನಳನಳಿಸುವವು; ಬಾಡಲಾಗಿದ್ದ ಆ ಹೂ ನಳನಳಿಸ ತೊಡಗುವವು. ಭಕ್ತಿಯ ಆರ್ದತೆ ಕಡಿಮೆಯಿರುವಲ್ಲಿ ಅರಳಿದ ಹೂ ಸಹ ತೀವ್ರ ಬಾಡುವದು. ಅರ್ಧ ಅರಳಿದ ಹೂ ಮುರುಟುವದು” ಎಂದೂ ಶ್ರೀತಾಯಿಯವರು ತಮ್ಮ ದಿವ್ಯದೃಷ್ಟಿಯಿಂದ ಕಂಡುದನ್ನು ಲೋಕ ಕಲ್ಯಾಣಕ್ಕಾಗಿ ಪ್ರಕಟಪಡಿಸಿದ್ದಾರೆ. ಅರಳಿ ನಳನಳಿಸುವ ಹೂವಿನಲ್ಲಿ ತನ್ನ ದೈವತವು ಹುದುಗಿಕೊಂಡಂತೆ ಕಾಣಿಸಿದರೆ ತಪ್ಪಲ್ಲ. ದೇವನ ಅಡಿಯಿಂದ ಮುಡಿಯವರೆಗೆ ಪವಡಿಸಿದ ಮಾಲೆ ಕಂಡಾಗ ತನ್ನ ದೈವತವೇ ಮಲಗಿಕೊಂಡ ಹಾಗೆ ತೋರುವುದು ಅಸಹಜವಲ್ಲ ಮೊಗ್ಗೆಗಳನ್ನು ದೃಷ್ಟಿಸಿದಾಗ ಯಾರ ಕಣ್ಣನ್ನೇ ದೃಷ್ಟಿಸಿದಂತೆ ಗೋಚರಿಸಿದ್ದರೆ ಅಚ್ಚರಿಯಲ್ಲ. ಇಂಥ ಅಲೌಕಿಕವನ್ನು ಲೌಕಿಕದಲ್ಲಿ ಕಾಣಬಯಸಿದರೆ ಅದು ಕೊಸರಿಕೊಂಡು ಹೋಗುವದುಂಟು. ಈ ವಿಷಯವು ವಿವೇಕಾನಂದರ ಚರಿತ್ರೆಯಲ್ಲಿ ನಮಗೆ ನೋಡಲಿಕ್ಕೆ ಸಿಗುತ್ತದೆ. ತಾನು ಕಂಡುಂಡ ಅನುಭವವನ್ನೇ ಗರತಿಯು ತನ್ನ ಬೀಸುವ ಕಲ್ಲಿನ ಏಕನಾದದಲ್ಲಿ ಹಾಡಿದ್ದಾಳೆ-

ಹೂವಿನಾಗ ಹುದುಗ್ಯಾನ ಮಾಲ್ಯಾಗ ಮಲಗ್ಯಾನ
ಮೊಗ್ಗ್ಯಾಗ ಕಣ್ಣು ತೆರದಾನ | ಲಿಂಗದಾನ |
ನೋಡಟಿಗೆ ನಿದ್ದೆ ಬಯಲಾಗಿ ||

ಬಿಳಿಜೋಳದ ಬೆಳೆಯು ಹೊಡೆಬಿಚ್ಚಿ ಬಿಗಿದು ನಿಂತಿರುವಾಗ ಗರತಿಯು ಆ ಬೆಳೆಯ ಸಿರಿಯನ್ನು ಕಂಡು, ಯಾರೋ ದೇವತೆ ಅದೇಕೆ, ಬನದೇವಿಯೇ ಹೊಲದ ತುಂಬ ಹಾಯ್ದಾಡಿ ತನ್ನ ಉಡಿಯೊಳಗಿನ ಮುತ್ತಿನ ಕಾಳುಗಳನ್ನು ಬೊಗಸೆಬೊಗಸೆಯಂತೆ ತೆರೆದ ಹೊಡೆಯಲ್ಲಿ ತುಂಬಿ ಹೋಗುವಳೆಂದೂ, ಹಾಗೆ ಮಾಡುವುದರಿಂದಲೇ ತೆನೆತೆನೆಗೂ ಬಿಳಿಜೋಳವು ಬಿಚ್ಚಿ ಬೀಳುವಷ್ಟು ತುಂಬಿ ಸೂಸುವದೆಂದೂ ಕಾಣಬಲ್ಲಳು. ಇದೆಲ್ಲ ನಾಮದ ಬೀಜವನ್ನು ಬಿತ್ತಿ ಬೆಳೆದುದರ ಬೆಳೆಸು.

ಬಿತ್ತೀದ ಹೊಲದಾಗ ಒತ್ತಿ ಹಾಯಕಿಯಾರ
ಮುತ್ತಿನುಡಿಯಕ್ಕಿ ಬನದಮ್ಮ | ಹಾಯ್ದರ |
ಬಿಚ್ಚಿ ಬಿದ್ದಾವ ಬಿಳಿಜೋಳ ||

ಆ ಗರತಿಯು, ಕಂಡುಂಡ ಮಾತಿನ ಮಂತ್ರ ಇದೇ ಬಿಗಿದ ಬೆಳೆಯನ್ನು ದೇವಿಯ ಕೃಪೆಯೆಂದು ಕಂಡ ಕಣ್ಣು ಬೆಳೆಯ ಹಾನಿಯನ್ನು ದೇವಿಯ ಅವಕೃಪೆಯೆಂದೂ ಕಾಣದೆ ಬಿಟ್ಟಿಲ್ಲ. ಅದಕ್ಕಾಗಿ ಒಂದು ಕಥಾ ಕವನವನ್ನೇ ರಚಿಸಿ, ಜನಾಂಗದ ಕಿವಿಗೆಲ್ಲ ಕೇಳಿದ್ದಾಳೆ. ಅದನ್ನು ಸ್ವಲ್ಪದರಲ್ಲಿ ಸವಿದೇ ಮುಂದೆ ಸಾಗುವಾ. ಒಕ್ಕಲಿಗನೂ ಅವನ ಎತ್ತುಗಳೂ – “ಕೂಡಿಯೇ ದುಡಿಯೋಣ, ಕೂಡಿಯೇ ಉಣ್ಣೋಣ, ಕೂಡಿಯೇ ಬದುಕೋಣ” ಎನ್ನುವ ಹೂಣಿಕೆ ತೊಟ್ಟು ಹೊದಲ್ಲಿ ದುಡಿಯುತ್ತಿರುವುದುಂಟು. ಕಸುಗೊಂಡು ತಿನ್ನುವುದಾಗಲಿ, ಇನ್ನೊಬ್ಬರ ಬಾಯಮೇಲೆ ಬಡಿದು ತಾನೊಬ್ಬನೇ ಬಕ್ಕರಿಸುವುದಾಗಲಿ ಬನದೇವಿಗೆನ್ನಿರಿ, ಭೂಮಿತಾಯಿಗೆನ್ನಿರಿ ಸೊಗಸದು. ದುಡಿದವನು ಉಣ್ಣುವ ಮೊದಲು ತಮಗೆ ನೈವೈದ್ಯವಾಗಲೆಂದು ದೇವತೆಗಳ ಅಪೇಕ್ಷೆಯಿರುವಂತೆ ತೋರುತ್ತದೆ. ಭಗವದ್ಗೀತೆಯಲ್ಲಿ ಹೇಳಲಾಗಿದೆ –“ಪರಮಾತ್ನನು ದೇವತೆಗಳನ್ನೂ ಮನುಷ್ಯರನ್ನೂ ಹುಟ್ಟಿಸಿ ಪರಸ್ಪರ ಸಹಕಾರದಿಂದ ಪೋಷಣ ಹೊಂದಲುಬೇಕು ದೇವತೆಗಳು ಮಳೆ ಸುರಿಸಲಿ. ಮಳೆಯಿಂದ ಬೆಳೆದ ಧಾನ್ಯ, ಹಯನು ಇವುಗಳನ್ನು ಮನುಷ್ಯನು ಯಜ್ಞರೂಪದಿಂದ ದೇವತೆಗಳಿಗೆ ಸಲ್ಲಿಸಲಿ” ಆ ಮಾತು ಶಾಸ್ತ್ರಗಳಲ್ಲಿ ಉಳಿದುಬಿಡದೆ ನಮ್ಮ ದೈನಿಕ ಜೀವನದಲ್ಲಿ ಅದೆಷ್ಟೋ ಕಡಿಗೆ ಬಂದುಬಿಟ್ಟಿದೆ. ಒಕ್ಕಲಿಗರು ಸೀಗಿಹುಣ್ಣಿವೆ, ಎಳ್ಳಾಮಸಿ ದಿವಸ ಹೊದಲ ಲಕ್ಷ್ಮೀಗೆ ಎಡೆ ತೋರಿಸುವ ಪದ್ಧತಿಯಿದೆ. ರಾಸಿ ಬೋನವೂ ಅದೇ ಉದ್ದೇಶದಿಂದ ಮಾಡಲ್ಪಡುತ್ತದೆ. ಅವುಗಳಲ್ಲಿ ಎಳ್ಳಾಮಸಿಯ ಎಡೆಯು ಮುಖ್ಯವಾದುದೆಂದು ತಿಳಿಯಲಾಗುತ್ತದೆ. ದೇವರಿಗೆ ಎಡೆ ಅಷ್ಟೆ ಅಲ್ಲ. ತನ್ನ ಗೆಳೆಯರಿಗೂ ಬಳಗದವರಿಗೂ ಆಮಂತ್ರಿಸಿ ಕರಕೊಂಡು ಹೊಲಕ್ಕೆ ಬನ್ನಿ, ನಮ್ಮ ಹೊಲಕ್ಕೆ ಬನ್ನಿ’ ಎಂದು ಎಲ್ಲರೂ ಕರೆಯುವವರೇ. “ಎಳ್ಳಾಮಸಿ ದಿನ ಉಳ್ಳಿಕ್ಕೆ ಕರೆಯದವರಾರು?” ಎನ್ನುವ ಗಾದೆಯ ಮಾತು ಬಳಕೆಯಾಗುಷ್ಟರ ಮಟ್ಟಿಗೆ ಆ ವಿಷಯವು ಬೆಳೆದಿದೆಯೆನ್ನೋಣ. ಅಂಥದೊಂದು ಎಳ್ಳಾಮಸಿಬಂತು. ಏತಕ್ಕಾದರೂ ಜೀನನ ಕೈ ತುಸು ಹೆಚ್ಚು ಬಿಗಿಯೇ ಇರುತ್ತದೆ. ಹೆಂಡತಿ, ಜೀನನಾದ ಗಂಡನಿಗೆ “ಎಳ್ಳಾಮಸಿ ಬಂತು” ಎಂದು ತಿಳಿಸಿದಳು.

ಅದ್ದನ ಬೀಸ, ಗಿದ್ದನ ಕುಟ್ಟ
ಕುಳ್ಯಾಗ ಅಡುವ, ಕೋಳಿಲೆ ಮುಗಚ

ಎಂದು ಒಪ್ಪಿಗೆ ಸಿಕ್ಕಿತು. ಊರ ಒಕ್ಕಲಿಗರ ಚರಗದ ಬುಟ್ಟಿಗಳೆಲ್ಲ ಹೊರಬಿದ್ದವು. ತಮ್ಮ ದೇವರಿಗೂ ಚರಗ ಸಲ್ಲಬೇಕೆಂದು ಹೆಂಡತಿ ಸೂಚಿಸಿದಳು.

‘ಅವರೆಲ್ಲಾ ಮುಂದ ನಾವೆಲ್ಲಾ ಹಿಂದ’

ಎನ್ನುವುದು ಗಂಡ. ಮುಂದೆ ಹೊರಟರೆ ಕಂಡವರನ್ನೆಲ್ಲ ಔಪಚಾರಕ್ಕಾಗಿಯಾದರೂ ಊಟಕ್ಕೆ ಕರೆಯಬೇಕಾಗುತ್ತದೆ. ಹಾಗೆ ಕರೆಯಲು ಜಿಪುಣನಿಗೆ ಇಷ್ಟವಿಲ್ಲ. ಚರಗದ ಬುಟ್ಟಿಯನ್ನು ಅಟ್ಟದ ಕೆಳಗಿಟ್ಟು, ಅಲ್ಲಿಯೇ ತುಸು ಅಡ್ಡಾದನು. ಆ ಸಂಧಿಸಾಧಿಸಿ ಮಗಿಯೊಳಗಿನ ಮುಕ್ಕು ನೀರು ಕಾಗಿ ಕುಡಿಯಿತು. ಕುಳ್ಳಿಯೊಳಗಿನ ನುಚ್ಚು ಹದ್ದು ಒಯ್ದುಬಿಟ್ಟಿತು. ಎಚ್ಚತ್ತು ನೋಡಿ ಜೀನನು ಚಿಂತೆಯಲ್ಲಿ ಮುಳುಗಿದನು-“ ಉಣ್ಣಲಿ, ಇನ್ನೇನು ತಿನ್ನಲಿ?” ಅಷ್ಟರೊಳಗೆ ಉಧೋ ಉಧೋ ಎನ್ನುತ್ತ ಎಲ್ಲಮ್ಮನು ಜೋಗಿತಿಯ ವೇಷದಿಂದ ಮುಂದೆ ಬಂದು ನಿಂತಳು. ಹಾಗೆಂದರೆ ನೀಡುವವರಾರು? ನೀಡುವುದೇನು?

“ಓಡ್ಯಾಡಿ ಪುಂಡಿಕಟಿಗಿ ಕಿತ್ಯಾನೊ ಜೀನಾ |
ಎಲ್ಲವ್ವನ ಬೆನ್ನ ಬೆನ್ನ ಸೆಳೆದಾನೊ ಜೀನಾ |
ಹೊಡಿಬ್ಯಾಡೊ ಜೀನಾ ಹೊಡಿಬ್ಯಾಡೋ ಜೀನಾ |
ಬಂದ ಹಾದಿಕೂಡಿ ಹೋಗತೇನೊ ಜೀನಾ ||
ಜೋಳದ ಹೊಲಕ ಹೋಗ್ಯಾಳ ಎಲ್ಲ |
ಕಣ್ಣಾನ ಕಾಡೀಗಿ ಉದರಸ್ಯಾಳೆಲ್ಲ ||
ಹತ್ತಿಯ ಹೊಲಕ ಹೋದಾಳೆಲ್ಲಾ |
ಕೈಮ್ಯಾಲಿನ ಗಂಧ ಉದರಸ್ಯಾಳೆಲ್ಲಾ ||
ಗೋಧಿಯ ಹೊಲಕ ಹೋದಾಳೆಲ್ಲಾ
ಉಡಿಯನ ಭಂಡಾರ ಉದರಸ್ಯಾಳೆಲ್ಲಾ ||
ಕಡ್ಲೀಯ ಹೊಲಕ ಹೋದಾಳೆಲ್ಲಾ
ಹಣಿಮ್ಯಾಲಿನ ಕೂಕಮ್ಮ ಉದರಸ್ಯಾಳೆಲ್ಲಾ ||

ಜೀನನು ಜೋಳದ ಹೊಲಕ್ಕೆ ಹೋಗಿ ನೋಡಿದರೆ ಹತ್ತು ಖಂಡಗ ಆಗುವಷ್ಟು ಜೋಳಕ್ಕೆಲ್ಲ ಕಾಡಿಗೆ ಬಿದ್ದಿದೆ ! ಹತ್ತಿಯ ಹೊಲದಲ್ಲಿ ಹತ್ತು ಖಂಡಗ ಹತ್ತಿಯೆಲ್ಲ ಬಂಜಿಯಾಗಿ ನಿಂತಿದೆ! ಗೋದಿಯ ಹೊಲದ ಗೋದಿಯೆಲ್ಲ ಭಂಡಾರ ರೋಗದಿಂದ ಹಾಳಾಗಿದೆ; ಹತ್ತು ಖಂಡಗ ಆಗುವಂತಿತ್ತು. ಕಡಲೆಯ ಬೆಳೆಯಲ್ಲ ಕೊಳ್ಳಿಹಾಯ್ದಿದೆ, ಅದೂ ಹತ್ತು ಖಂಡಗ ಆಗುವಷ್ಟಿತ್ತು. ಜೀನನು ಬಹಳ ಚಿಂತೆಯಿಂದ ಕಂಬಳಿಯ ಮುಸುಕು ಹಾಕಿ ಜಗಲಿಗೆ ತಲೆ ಕೊಟ್ಟು ಮಲಗಿಕೊಂಡು ಬಿಟ್ಟನು. ಆಗ ಹೆಂಡತಿ ಬಂದು-

“ಉಣ್ಣೇಳೊ ಜೀನಾ ತಿನ್ನೇಳೊ ಜೀನಾ” ಎಂದರೆ
“ಇನ್ನೇನ ಉಳ್ಳೇ ಇನ್ನೇನ ತಿಲ್ಲೇ” ಎಂದು ಕೇಳುವನು.

ದೇವಿಯ ಅವಕೃಪೆಯಾಗಲಿಕ್ಕೆ ನೈವೇದ್ಯವಾಗದಿರುವುದೂ, ಕೂಡಿಕೊಂಡು ಉಣ್ಣುವ ಮೂಲತತ್ವ ಮರೆತುದೂ, ಕಾರಣವೆಂದು ಈ ಸಂದರ್ಭದಿಂದ ತಿಳಿದುಬರುವುದು. ಅಲ್ಲದೆ, ದೈವೀ ಅವಕೃಪೆಯಿಂದಲೇ ಬೆಳೆಗಳಿಗೆ ಕಾಡಿಗೆರೋಗ, ಭಂಡಾರರೋಗ, ಇಟ್ಟಂಗಿರೋಗ ಮೊದಲಾದವು ಬೀಳುವವು. ಮಳೆ ಎಳಸುವುದಕ್ಕೂ, ಅಡ್ಡಮಳೆ ಬರುವುದಕ್ಕೂ ಇಂಥ ಅವಕೃಪೆಯೇ ಕಾರಣವೆಂದು ಗರತಿಯು ಹಾಡಿನಲ್ಲಿ ಸ್ಪಷ್ಟವಾಗಿ ಸಾರಿಹೇಳಿ, ಅದು ಎಂದೆಂದಿಗೂ ನಿನದಿಸುತ್ತಿರುವಂತೆ ನಾಡಿನ ಮುಗಿಲ ಬಯಲಲ್ಲಿ ತೂರಿಬಿಟ್ಟಿದ್ದಾಳೆ.

ವಿವಿಧ ದೈವಶಕ್ತಿಗಳು

ಭಕ್ತಿಯ ಬೆಳಕು ಕಂಡ ಗರತಿಯು ವಿವಿಧ ದೈವೀ ಶಕ್ತಿಗಳಿಗೆ ಬೆದರುವುದಿಲ್ಲ. ಅವುಗಳ ಸ್ಥಾನಮಾನಗಳನ್ನರಿತು ಆಕೆ ತನ್ನ ಭಕ್ತಿಯ ಸೇವೆಯನ್ನು ಸಲ್ಲಿಸುತ್ತಾಳೆ. ದೂರದಲ್ಲಿ ಶ್ರೀಶೈಲಕ್ಕೆ ಹೋಗುವದಾಗದೆ, ಮೈಗೆ ದೂರವಾದರೆ ಮನಕ್ಕೆಲ್ಲಿ ದೂರವೆನ್ನುವಂತೆ ಆಚರಿಸುತ್ತಾಳೆ.

ಪರವೂತ ಅಂಬುದು ಅರವತ್ತು ಗಾವುದ
ಬರಲಾರೆನಯ್ಯೊ ಬಹುದೂರೋ | ಮಲ್ಲಯ್ಯ
ದೂರಿಂದ ಕೈಯ ಮುಗಿದೇನೋ ||

ಎಂದು ತನ್ನ ವಂದನೆಗಳನ್ನು ಸಲ್ಲಿಸುತ್ತಾಳೆ.

ಅಳವಿನಲ್ಲಿದ್ದ ದೇವಾಲಯಕ್ಕೆ ಅವೆಷ್ಟು ಜಂಜಾಟಗಳಿದ್ದರೂ ಅನುಕೂಲ ಮಾಡಿಕೊಂಡು ವಂದಿಸಿ ಬರುತ್ತಾಳೆ.

ಹೊತ್ತು ಮುಳುಗಿದರೇನು ಕತ್ತಲಾದರೇನು
ಅಪ್ಪ ನಿನ ಗುಡಿಗೆ ಬರುವೆನೋ | ಮಾದಯ್ಯ |
ಮುತ್ತೀನ ಬಾಗಿಲು ತೆರೆದೀರೋ ||

ಯಾವ ದೇವತೆಯಾದರೇನು? ಆ ಆ ದೇವತೆಯನ್ನು ತಕ್ಕ ಸಲಕರಣೆಗಳಿಂದ ಪೂಜಿಸಬೇಕೆಂದೂ, ಇಷ್ಟವಾದ ನೈವೇದ್ಯ ಅರ್ಪಿಸಬೇಕೆಂದೂ ಗರತಿ ತಿಳಿದಿರುವಳಲ್ಲದೆ, ಪಡಕೊಳ್ಳಬೇಕಾದ ಪ್ರಯೋಜನವನ್ನೂ ಅರಿತುಕೊಂಡಿರುತ್ತಾಳೆ. ಗಂಧಕಸ್ತೂರಿ ಪುನಗಗಳಿಂದ ಗಣಪತಿಯನ್ನು ಪೂಜಿಸಿ, ಮಲ್ಲಿಗೆ ಮಳೆಗರೆಯಬೇಕೆಂದೂ ಮತಿಯ ಪಾಲಿಸಲು ಸ್ತುತಿ ಮಾಡಬೇಕೆಂದೂ ಹೇಳುತ್ತಾಳೆ-

ಗಂಧ ಕಸ್ತೂರಿ ಪುನಗ |
ಗೌರವ್ವನ | ಕಂದಗ ಧರಿಸಿದರ |
ಮುಂದ ಮಡಿಚಿಯಿಟ್ಟು ಮಲ್ಲೀಗಿ ಮಳೆಗರೆದ |
ಮತಿಯ ಪಾಲಿಸೊ ಎನಗ |
ಶ್ರೀಗಣರಾಯ | ಸ್ತುತಿಮಾಡಿ ಉಣಿಸುವೆನು ||

ರಾಜಾನ್ನ ಕೆನೆಮೊಸರು, ರುಚಿಗಾಯಿ, ಸವಿಮಜ್ಜಿಗೆ ಗಣಪತಿಗೆ ಇಷ್ಟವಾದ ನೈವೇದ್ಯವೆನಿಸುವದರಿಂದ, ಅದನ್ನು ಸ್ವೀಕರಿಸಿ “ಸಾಜನಾಗಿ ಬಂದು ಸೆರೆಮಂಚದಲಿ ಕುಳಿತು ಮತಿಯ ಪಾಲಿಸಬೇಕೆಂದು” ಬಿನ್ನಯಿಸುತ್ತಾಳೆ. ಅದರಂತೆ ಪಂಡರಪುರದ ವಿಠ್ಠಲಸ್ವಾಮಿಯು “ನಾದಬ್ರಹ್ಮ ಮೇಘ ಶ್ಯಾಮನೂ ಸೃಷ್ಟಿಕರ್ತ ಸರ್ವಗೋಮನೂ ಸಾಧು ಸಂತರ ಪ್ರೇಮನೂ” ಆಗಿ ಇಟ್ಟಿಗೆಯ ಮೇಲೆ ಎರಡೂ ಪಾದಗಳನ್ನು ಊರಿ ನಿಂತಿರಲು ಅದೆಷ್ಟು ಸೊಗಸಾಗಿ ಕಾಣಿಸಿಕೊಳ್ಳುವನೆಂಬುದನ್ನು ಹೇಳುವುದಕ್ಕೆ ಆಕೆಗೆ ಶಬ್ದಗಳೇ ಸಾಲುವದಿಲ್ಲ-

ತುಳಸಿಮಾಲಿ ಬುಕ್ಕಿಟ್ಟು
ದುಕ್ಕ ಇಲ್ಲ ಎಳ್ಳಿನಷ್ಟು
ಹಗಲು ಇರಳು ಭಜನಿಗೋಳು
ಅವಂದೆ ಅಂಸ ಮೃದಂಗ ತಾಳ
ಮದನಮೂರ್ತಿ ಗೋಪಾಳ
ಸಾಧುಸಂತರ ಮ್ಯಾಳ
ಹ್ಯಾಂಗ ನಿಂತಾರೆನಗ ಪೇಳಿರೇ | ಶ್ರೀ ಪಾಂಡುರಂಗ |
ಹ್ಯಾಂಗ ನಿಂತಾರೆನಗ ಪೇಳಿರೇ ||

ಎನ್ನುತ್ತಾಳೆ. ಇನ್ನು ಆಕೆಗೆ ಸೊಗಸುವ ಸೊನ್ನಲಾಪುರದ ಸಿದ್ಧರಾಮನ ಪೂಜೆಯ ಸಿಂಗಾರವೇ ಒಂದು ವಿಧ-

ಅಕ್ಕಿ ಪೂಜಿ ಬ್ಯಾಳಿಪೂಜಿ ಮ್ಯಾಲ ಎಲಿಯ ಘಟ್ಟಿಪೂಜಿ
ನಿತ್ಯಪೂಜಿ ಕಟ್ಯಾರೇಳಯ್ಯ | ಸಿದ್ಧರಾಮ|
ನಿಮಗ ಪೂಜಿ ಕಟ್ಯಾರೇಳಯ್ಯ
||

ಕೆಂಪ ಗಂಧ ಬಿಳಿಯ ಗಂಧ ಅಷ್ಟಗಂಧ ಸಿರಿಯ ಗಂಧ

ಛಂದದಿಂದ ಏರ್ಯಾವೇಳಯ್ಯ | ಸಿದ್ಧರಾಮ |
ಛಂದದಿಂದ ಏರ್ಯಾವೇಳಯ್ಯ ||
ಅಚ್ಚದಚ್ಚ ಬೆಲ್ಲದಚ್ಚ ಮ್ಯಾಗ ಎಳ್ಳಚಿಗಳಿನೆಚ್ಚಾ
ನಿಮಗ ನೇವುದಿ ಬಂದಾವೇಳಯ್ಯ | ಸಿದ್ಧರಾಮ |
ನಿಮಗ ನೇವುದಿ ತೋರ್ಯಾರೇಳಯ್ಯ ||

ವೀರಭದ್ರದೇವರು ಹುಟ್ಟಾ ಭೀಕರ. ಆತನ ಅರ್ಭಟವೇ ಆರ್ಭಟ. ಆತನ ವೇಷ, ಆತನ ವಾಸಸ್ಥಳ ನೆನೆದರೆ ನಡುಗು ಬರಬೇಕು. ಅಂಥ ದೇವನನ್ನು ಪ್ರಸನ್ನಗೊಳಿಸುವುದಕ್ಕೆ ತುಂಬಿದಾರತಿಯನ್ನೇ ಒಯ್ಯಬೇಕಾದೀತು.

ಕಣಬಟ್ಟ ಕೋರ್ಮೀಸಿ ಕಂಡರಂಜಿಕಿ ಬರುವ
ಮುಂಜಾನದಾಗ ನೆನೆದಾರ | ವೀರಭದ್ರ |
ತುಂಬಿದಾರೂತಿ ತರುವೇನ ||

ಆದರೆ, ಭಕ್ತರ ಬಳಗದಲ್ಲಿ ಕಂಗೊಳಿಸುವ ವೀರಭದ್ರನ ಸ್ವರೂಪವೇ ಬೇರೆ. ನಂದಿಕೋಲ, ಅಪ್ತಾಗಿರಿ, ಹಾರುವ ಹೂಬಾಣ, ಗುಗ್ಗಳದಾರುತಿ ಗುಡಿಯ ಮುಂದೆ ಕಾಣಿಸುವವು. ಹಣೆಯ ಮೇಲೆ ಗಿಣಿರಾಮ ಕೂತಂತೆ ಗಂಧ, ಕಿವಿಯಲ್ಲಿ ಕರಿಯ ಕುಂದಲದ ಹರಳ, ಎಡಗೈಯಲ್ಲಿ ಅವೆಷ್ಟೊ ಶೃಂಗಾರ ಹಿಡಿದಿದ್ದಾನೆ. ಬಲಗೈಯಲ್ಲಿ ಪರ್ವತಗಿರಿ ಗುಡ್ಡ ಎತ್ತಿ ಹಿಡಿದಿದ್ದಾನೆ. ಚಳ್ಳುಂಗುರ ಚಿಮ್ಮುತ್ತಲೂ, ಕೋರ್ಮಿಸಿ ತಿದ್ದುತ್ತಲೂ ನಿಂತಿದ್ದಾನೆ. ಬಿಳಿಯಂಗಿ ತೊಟ್ಟು ಬಿಗಿದುಟಟು ನಿಂತಿದ್ದಾನೆ. ಸರಗಂಟ ಸರಮಾಲೆ ಕೊರಳಲ್ಲಿ ಹಾಕಿದ್ದಾನೆ. ಅಸಂಖ್ಯ ರುದ್ರಾಕ್ಷಿಗಳನ್ನು ಧರಿಸಿದ್ದಾನೆ. ಅಂಥ ಸ್ವಾಮಿಯ ಪೂಜೆ ನಡೆಯುವ ಬಗೆ ಹೀಗೆ –

ಮಂಗಳಾರ ದಿನ ವೀರ ನಿನ್ನೋಲಗ
ಚಿಟ್ಟ ಚಿಣಗೀ ಹೂವ ದುಂಡ ಮಲ್ಲಿಗೆ ಹೂವ
ಕೊಂಡಾಡೊ ದಾಸ್ಯಾಳ ಮಂಡಲೇಸೂರದ ಹೂವ
ಏಳು ಸಮುದರದಾನ ಪಾರಿಜಾತದ ಹೂವ
ಕಂಚೀಯ ಈ ಮಗ್ಗಿ ಕಮಲದ ಈ ಮಗ್ಗಿ
ಖ್ಯಾಈಗಿ ಹೊಡಿ ನೂರು ಖ್ಯಾದೀಗಿ ಗರಿ ನೂರು
ಎಲ್ಲಾಕ ಹೆಚ್ಚಿಂದು ಬೆಲ್ಲಪತ್ತುರಿ ನೂರು
ಕರಕೀಯ ಪತ್ತೂರಿ ಕರಿಯ ತುಂಬಿಯ ಹೂವ
ಕರಿವೀರಭದ್ರನ ಕರಣನೋಡಿ ಪೂಜಿಗೋಳ ಬನ್ನೆ |
ಜಯಮಂಗಳ ನಿತ್ಯ ಶಿವಮಂಗಳ ||

ಎಂದು ಮಂಗಳವನ್ನು ಪಾಡುತ್ತಾಳೆ. ಹೆಣ್ಣುಮಕ್ಕಳಿಗೆ ಹೊಸದರಲ್ಲಿ ಆಭರಣಗಳ ಹುಚ್ಚು ಬಹಳ. ಬಂಗಾರದ ಬೀಸುವಕಲ್ಲು ಮಾಡಿ ಕೊರಳಲ್ಲಿ ಕಟ್ಟಿದರೂ ಹೆಂಗಸರು ಒಲ್ಲೆನ್ನುವದಿಲ್ಲವೆಂದು ನಗೆಯಾಡುವುದುಂಟು. ಆದರೆ ಪರಿಪಕ್ವಗೊಂಡ ಜೀವನದಲ್ಲಿ ಗರತಿಯು, ಆಭರಣಗಳನ್ನು ಹೊರುವದಕ್ಕಿಂತಲೂ, ದೈವಭಕ್ತಿಯನ್ನು ಹೊರುವುದು ಹೆಚ್ಚು ಭೂಷಣವೆಂತಲೂ, ಅದರಿಂದ ಮೈಮನ ಮಾತುಗಳಿಗೆ ಭಾರವಾಗದೆ ಹಗುರೇ ಆಗುವದೆಂತಲೂ ಆಕೆ ಬಾಯಿಬಿಚ್ಚಿ ಹೇಳುತ್ತಾಳೆ-

ಶರಣರ ನೆನೆದರ ಸರಗೀಯ ಇಟ್ಟಂಗ
ಹವಳ ಮಲ್ಲಿಗಿ ಮುಡಿದಂಗ | ಕಲ್ಯಾಣ |
ಶರಣರ ನೆನೆಯೊ ನನ ಮನವೇ ||

ಚಿನ್ನ, ಬೆಳ್ಳಿ, ಹೂ, ಮಗ್ಗಿ, ಮುತ್ತು ರತ್ನ ಎಲ್ಲವೂ ಸತ್ಯವಂತರಾದ ಸತ್ಪುರುಷರನ್ನು ನೆನೆಯುವದರಿಂದ ಧರಿಸಂದಾಗುತ್ತದೆಂದು ಹೇಳಿ, ಅದುದರಿಂದಲೇ ಗರತಿಯು ಸುಂದರಳಾಗಿ, ಸಮೃದ್ಧಳಾಗಿ, ಸೌಭಾಗ್ಯಶಾಲಿಯಾಗಿ ಕಂಗೊಳಿಸುವವಳು.