ಹಳ್ಳಿಗರಲ್ಲಿ ದೇಶಾಭಿಮಾನ

ದೇಶದ ಕಲ್ಪನೆ, ಅಭಿಮಾನ, ರಾಷ್ಟ್ರೀಯತೆ, ರಾಷ್ಟ್ರಧರ್ಮ ಮೊದಲಾದ ಮಾತುಗಳು ನಮಗೆ ಈ ನೂರಾರು ವರ್ಷಗಳಲ್ಲಿ ಪರಿಚಯವಾಗಿವೆ. ಅನೇಕ ವಸ್ತುಗಳಂತೆ ಇವು ಸಹ ಯುರೋಪದಿಂದ ಬಂದ ಬದುಕೆಂದು ಹೇಳುತ್ತಾರೆ. ಯುರೋಪದವರ ಬದುಕನ್ನು ಮೊದಲು ಬಳಸಿದವರೆಂದರೆ ಸುಶಿಕ್ಷಿತ ಜನರು. ಅವರೇ ನಾಗರಿಕರೆನಿಸಿಕೊಂಡವರು. ಆ ನಾಗರಿಕರು ನಗರವಾಸಿಗಳು. ಅಂದಬಳಿಕ ಹಳ್ಳಿಗರಿಗೆ ಆ ನವನಾಗರಿಕತೆಯಾಗಲಿ, ಅವರು ಬಳಸುವ ಐರೋಪ್ಯ ವಸ್ತುಗಳಾಗಲಿ ಗೊತ್ತಿರುವದು ಸಾಧ್ಯವಿಲ್ಲ. ನವನಾಗರಿಕರಲ್ಲಿ ಕಾಣಿಸಿಕೊಂಡ ದೇಶಾಭಿಮಾನವು ರಾಜಸಿಕವಾದದ್ದು. ಅದು ತವಮೋಗುಣವನ್ನು ಕಳೆಯುವದಕ್ಕೆ ಉತ್ತಮ ಔಷಧವೆಂದು ದಿವಂಗತ ಶ್ರೀ ತಿಲಕರೂ, ಶ್ರೀ ವಿವೇಕಾನಂದರೂ, ಶ್ರೀ ಅರವಿಂದರೂ ಹೇಳಿದರು. ಆದರೆ ಆರ್ಯ ಜನಾಂಗಕಕ್ಕೆ ಸತ್ವಯುತವಾದ ರಾಷ್ಟ್ರಧರ್ಮವೊಂದಿದೆಯೆಂದೂ, ಜ್ಞಾನ ಸಂಪಾದನೆ, ಅನಾಥ ರಕ್ಷಣೆ, ಸ್ತ್ರೀ ಮನ್ನಣೆ ಮೊದಲಾದ ಗುಣಗಳು ಆ ಧರ್ಮದ ಫಲಗಳೆಂದೂ ಶ್ರೀ ಅರವಿಂದರು ಹೇಳುತ್ತಾರೆ. ಇತ್ತೀಚೆಗೆ ಬಂದು ನಮ್ಮಲ್ಲಿ ಸ್ವಭಾವ ಕಟ್ಟುತ್ತಿರುವ ಯುರೋಪದ ಮಾದರಿಯ ರಾಷ್ಟ್ರೀಯತ್ವದ ಗೊಡವೆಗೆ ಹೋಗದೆ, ಬುನಾದಿಯಿಂದ ಬಂದ ಆರ್ಯರ ರಾಷ್ಟ್ರಧರ್ಮದ ಜಾಡನ್ನು ಹಿಡಿದು ಸಾಗಿದರೆ ನಮ್ಮ ಹಳ್ಳಿಗರಲ್ಲಿದ್ದ ದೇಶದ ಕಲ್ಪನೆಯೆಂಥದೆಂಬುದನ್ನು ತಿಳಿಯಬಲ್ಲೆವು. “ಆರಂಕುಶವಿಟ್ಟರೂ ನೆನೆವುದೆನ್ನ ಮನಂ ಬನವಾಸಿ ದೇಶವಂ” ಎನ್ನುವ ಪಂಪಕವಿಯ ವಾಣಿಯು ನಮ್ಮ ಜೀವಾಳವಾಗಿದೆ. “ಪೆಸರಿಲ್ಲದ ಮಾನಸರಿಲ್ಲದೆಲ್ಲಿಯುಂ” ಎಂದು ಎದೆ ತಟ್ಟುವಂತೆ ಹೇಳುವ ಮಾತಾಗಲಿ, “ಮುಕ್ತೆಕಾಂತೆ ಕೈಗೂಡುವ ಬೀಡು ಕನ್ನಡ ನಾಡು” ಎಂದು ಹೇಳುವ ಮಾತಾಗಲಿ, ಹಳ್ಳಿಗರಲ್ಲಿರುವ ದೇಶದ ಕಲ್ಪನೆಯನ್ನು ಕಂಡುಹಿಡಿಯಲು ಹೊರಟವನಿಗೆ ಕೈಗಂಬಗಳಂತೆ ಮಾರ್ಗದರ್ಶನ ಮಾಡಿಸುತ್ತವೆ. ರಾಜ್ಯಗಳುದಿಸಲಿ, ರಾಜ್ಯಗಳಳಿಯಲಿ, ಗದ್ದುಗೆ ಮುಕುಟಗಳು ಹಾರಲಿ, ನೇಗಿಲಯೋಗಿಯು ತನ್ನ ಬಿತ್ತುಳುವ ಯೋಗವನ್ನು ಸಾಗಿಸಿಯೇ ಇರುತ್ತಾನಷ್ಟೇ? ಅಂಥ ನೇಗಿಲಯೋಗಿಯು ತನ್ನ ಬಿತ್ತುಳುವ ಯೋಗವನ್ನು ಸಾಗಿಸಿಯೇ ಇರುತ್ತಾನಷ್ಟೇ? ಅಂಥ ನೇಗಿಲಯೋಗಿಯೆನಿಸಿಕೊಳ್ಳುವ ಹಳ್ಳಿಗನ ಹಾಡಿನೊಳಗಿಂದಲೇ ನಾವೀಗ ಆತನ ದೇಶಾಭಿಮಾನವನ್ನು ವಿಚಾರಿಸಬೇಕಾಗಿದೆ. ಆತನ ದೇಶದ ಕಲ್ಪನೆಯು ವಿಶಾಲವಾಗಿರಲಿಕ್ಕಿಲ್ಲ; ಸಂಕುಚಿತವೇ ಆಗಿರಬಲ್ಲದು. ತನ್ನ ಊರು, ರಾಜಧಾನಿ, ತನ್ನ ಮೈತೊಳೆವ ನದಿ, ತನ್ನ ಹೊಲ-ತೋಟ ಇವಿಷ್ಟೇ ಆತನ ದೇಶದ ವ್ಯಾಪ್ತಿಯಲ್ಲಿರಬಹುದು. ಆದರೆ ಆತನು ತನ್ನ ದೇಶದ ಕಲ್ಪನೆಯನ್ನು ಸಂಕುಚಿತವಾಗಿರಿಕೊಂಡಂತೆ ತೋರಿದರೂ ಆತನು ಪಡುವ ದೇಶಾಭಿಮಾನವು ಸಂಕುಚಿತವಾಗಿರಿಸಿಕೊಂಡಂತೆ ತೋರಿದರೂ ಆತನು ಪಡುವ ದೇಶಾಭಿಮಾನವು ಸಂಕುಚಿತವಾಗಿರಲಾರದು. ಅದು ವಿಶಾಲವಾಗಿರುವಷ್ಟು ಉನ್ನತವೂ ಆಗಿದೆ ಎಂಬುದನ್ನು ಅರಿತುಕೊಳ್ಳಬಹುದು.

ದೇಶಾಭಿಮಾನದ ಬೀಜ

ನಮ್ಮ ತಾಯಿ, ಅಕ್ಕಂದಿರು ತಮ್ಮ ಸರಳವಾದ ಹೃದಯದಿಂದ ಹೊರಸೂಸುವ ಹಾಡುಗಳಿಂದ ನಮ್ಮ ವಸ್ತುಗಳನ್ನು ಪ್ರೀತಿಸುವುದಕ್ಕೆ ಕಲಿಸುತ್ತಾರೆ. ಹೇಗೆಂದರೆ-

ಬ್ಯಾಸಿಗಿ ದಿವಸಕ ಬೇವಿನ ಮರ ತಂಪ
ಭೀಮರತಿಯೆಂಬ ಹೊಳಿ ತಂಪ | ಹಡೆದಮ್ಮ |
ನೀ ತಂಪ ನನ್ನ ತವರೀಗೆ ||

ಎನ್ನುವುದರಿಂದ ಈ ವಸ್ತುಗಳ ಒಳ್ಳೆಯ ಗುಣಗಳನ್ನು ಬಣ್ಣಿಸಿ, ಅದರ ಬಗೆಗೆ ಪ್ರೀತಿಯನ್ನು ಹುಟ್ಟಿಸುವಂತೆ-

ತವರುಮನೆಯಾ ದೀಪ ತೆವರೇರಿ ನೋಡೇನ
ಹತ್ತು ಬಿಳ್ಹಚ್ಚಿ ಶರಣೆಂದು | ತಮ್ಮದೇರು |
ಜಯವಂತರಾಗಿ ಇರಲೆಂದ ||

ಎಂದು ಅಕ್ಕನು ಮಂತ್ರವಾದಿಯಂತೆ, ತವರುಮನೆಯ ದೀಪವು ದನೀಯವಾಗಿದೆಯೆಂದು ಸೂಚಿಸುವಳು. ಅಲ್ಲದೆ ತಮ್ಮಂದಿರಿಗೆ ಜಯವಾಗಲೆಂದು ಹರಸುವಳು. ತನ್ನ ಊರಾದ ಭತಗುಣಿಕಿಯು ಆಕೆಯ ಪಾಲಿಗೆ ಭಂಗಾರದ ಪಟ್ಟಣ.

“ಮುನವಳ್ಳಿ ಮುಂದಿನ ತನುವ ಕಂಡೀರಕ್ಕ
ತನುವೀಗಿ ಅರಳ್ಯಾವ ಹೂ ಮಗ್ಗಿ”

ಎಂದೂ,

ಹಲಸಂಗಿ ಹಳದಾಗ ಕುಂಬಳ ಬೀಜೂರಿ |
ಕೂಡಲಮ್ಯಾಲ ಕುಡಿಯೇರಿ | ಹತ್ತೂರ |
ಹೂಡ್ಯಾದ ಮ್ಯಾಲ ಹೂಮೊಗ್ಗೆ ||

ಎಂದು ತನ್ನ ಹಳ್ಳಿ ಹಾಗೂ ನೆರೆಹಳ್ಳಿಗಳನ್ನು ಹೆಮ್ಮೆಯಿಂದ ಹಿರಿನುಡಿಗಳಲ್ಲಿ ಕೀರ್ತಿಸುವಳು.

ವೀರ ಜೀವನ

ತನ್ನ ಊರು, ತನ್ನ ಸೀಮೆ, ತನ್ನ ಹೊಳೆ ಇವುಗಳ ಬಗೆಗೆ ಅಭಿಮಾನವನ್ನು ತಳೆದ ಬಾಲಕ-ಬಾಲಕಿಯರಾಗಲಿ ಪ್ರಬುದ್ಧರಾದ ಮೇಲೆ ವೀರಜೀವನವನ್ನು ಗಳಿಸುವ ಹಂಬಲವುಳ್ಳವರಾಗುವದರಲ್ಲಿ ಸಂಶಯವಿರಲಾರದು. ಇದಕ್ಕೆ ಗಂಡುಮಕ್ಕಳ ಹಾಡುಗಳೇ ಸಾಕ್ಷಿಯಾಗಿವೆ. ಲಾವಣಿಗಳೆಂದು ಕರೆಯಿಸಿಕೊಳ್ಳುವ ಹಾಡುಗಳೆಲ್ಲ ಗಂಡಸರವೇ ಆಗಿವೆ. “ಲಾವಣಿಯೆಂದರೆ ಗರಡಿಯವರು ಹಾಡುವ ಹಾಡು” ಎಂದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಷಟ್ಪದಿ ಕಾವ್ಯಗಳಲ್ಲಿ ಲಾವಣಿಯೆಂಬ ಶಬ್ದವು “ಯುದ್ಧದ ಕುಣಿತ” ಎಂಬರ್ಥದಲ್ಲಿ ಉಪಯೋಗಿಸಲ್ಪಡುವದೆಂದು ಹೇಳುತ್ತಾರೆ. “ಸೈನ್ಯವಾಟಿಕೆಯಲ್ಲಿ ಉತ್ಸಾಹ ವಿಜೃಂಭಣೆಗಾಗಿ, ವಿಜಯಾನಂದದ ವಿವರ್ಧನೆಗಾಗಿ, ಕುಣಿಯುತ್ತ ಹಾಡುತ್ತಿದ್ದ ಲಯಪ್ರಧಾನವಾದ ಗೀತೆಗಳಿಗೆ “ರಣಗೀತೆಗಳು” ಎನ್ನುತ್ತೇವೆ. ದೇಶಾಭಿಮಾನವನ್ನು ಎದೆಯಲ್ಲಿ ತಳೆದು, ಯುದ್ಧೋತ್ಸಾಹವನ್ನು ಹುಟ್ಟಿಸುವುದಕ್ಕೂ, ವಿಜಯಾನಂದವನ್ನು ಪ್ರಕಟಿಸುವದಕ್ಕೂ ಕುಣಿಕುಣಿದು ಲಾವಣಿ ಹಾಡುವ ವ್ಯಕ್ತಿಯು ವೀರಜೀವನವನ್ನು ನಡೆಸಿರಲಾರನೇ? ಅಭಿಮನ್ಯುವಿಗೆ ಕೊಡುವದೆಂದು ವಚನವಿತ್ತರೂ, ಬಲರಾಮನು ವತ್ಸಲೆಯನ್ನು, ಪಾಂಡವರು ವನವಾಸಕ್ಕೆ ಹೋದಾಗ ದುರ್ಯೋಧನನ ಮಗ ಲಕ್ಣ ಕುಮಾರನಿಗೆ ಕೊಟ್ಟು ಲಗ್ನ ನಿಯಮಿಸಿ ಮಿದುರನ ಬಳಿಯಲ್ಲಿದ್ದ ಸುಭದ್ರೆಯನ್ನು ಲಗ್ನಕ್ಕೆ ಕರೆತರಲು ದೂತನನ್ನು ಕಳಿಸಿದಾಗ, ಆ ವಾರ್ತೆ ಕೇಳಿ-

ಕೇಳಿ ಸುಭದ್ರಾ ಬಿದ್ಹಾಳ ಧರಣೀಗಿ | ನೀರ ತಂದು ಅಳ್ತಾಳ ಕಣ್ಣೀಗಿ |
ತವರಮನಿ ಇಲ್ಲದಾಂಗ ಇಂದಿಗಿ | ಆಗಿ ಹೋಯ್ತು ನನ್ನ ಪಾಲೀಗಿ |
ನನ್ನ ಮಗ ಇಟ್ಟ ಹೆಣ್ಣ ಬೇಕಾಗಿ | ಬಳಿರಾಮ ಕೊಟ್ಟ ಅವರಿಗಿ |
ಕೃಷ್ಣ ಬುದ್ಧಿ ಹೇಳಲಿಲ್ಲೇನಣ್ಣಗ ಕರಣವಿಲ್ಲದೆ ಕೊಟ್ಟಾರ ಅವಗ |
ನನಗಾತು ಮುಗಿಲು ಹರಿದು ಬಿದ್ದಾಂಗ |
ಕಿಚ್ಚು ಸುರುವಿತು ಸುಭದ್ರಾನ ಹೊಟ್ಯಾಗ |
ತವರುಮನೆಯ ಆಶೆಯಿಂದ ನನ್ನ ಪತಿ ಅರ್ಜುನನ ನಾ ಮರೆತೆನೋ |
ನನ್ನ ಅಣ್ಣಗೋಳದಿಂದ ಧೈರ್ಯ ಹಿಡಿದಿನೋ |
ನನ್ನ ನೋಡತಾರಂತ ಭಾಳ ನಂಬಿದೆನೋ |
ಅಯ್ಯಯ್ಯೋ ದೇವಾ ಮುನಿದ್ಯಾ ಇಂದಿಗಿ ಅಂಥಾದ್ದೇನು ಅವರಿಗೆ ಮಾಡಿದೆನೋ |
ಇಂದಿಗೀ ಕೊಯ್ದಾರ ಕೊರಳವನು ||
ಆಸರಿಲ್ಲದೆ ನಾ ಇರಲಾರೆನೋ ಅಯ್ಯಯ್ಯೋ ಉರುಲು ಹಾಕಿ ಕೊಳ್ಳಲೇನೋ |
ನಮ್ಮ ಅಣ್ಣಗೊಳ ಮುಂದ ಪ್ರಾಣ ಬಿಡಲೇನೋ
ಮಾರಿ ತೋರದೆ ಬಗದ್ಹೋಗಲೇನೋ
ಎದ್ದೆದ್ದು ಬೀಳತಾಳ ಪದ್ಮಗಂಧಿ ಹದ್ದಹಾವ ಕಚ್ಚಿಧಾಂಗ ಅಭಿಮನ್ಯನ್ನಾ
ತೆಕ್ಹಾದು ಮಾಡತಾಳ ದುಃಖವನಾ ||

ಈ ಪ್ರಕಾರ ಸಂತಾಪಗೊಂಡು ಸುಭದ್ರೆಯು-

ನೆಲಕುರಳ್ಯಾಡತಾಳ ಬಲು ಹೊರಳ್ಯಾಡತಾಳ ತಳಮಳಸಿ ತಾಳದ ಸಂಕಟಾ
ಖಬರಿಲ್ಲಾ ಆಕಿಗಿ ಎಳ್ಳಷ್ಟಾ ||

ಮಾತಾಡಸ್ತಾನ ಗಾಳಿ ಬೀಸ್ತಾನ ಕೈ ಹಿಡಿದೆಬ್ಬಸ್ತಾನ ಮಾಡಿ ಕೂಗ್ಯಾಟ |
ಅಭಿಮನ್ಯು ನೋಡಿದ ಕಣ್ಮುಟಾ ||

ಹೀಗೆನ್ನುತ್ತ ಮೂರ್ಛಿತಳಾಗಿ ಬಿದ್ದೆದ್ದು ಗುಂಡುಗಲ್ಲಿನಿಂದ ಎದೆಗೆ ಗುದ್ದಿಕೊಳ್ಳುವದನ್ನು ಕಂಡು ಅಭಿಮನ್ಯುವು ಆಕೆಯ ಕೈಹಿಡಿದು ಧೈರ್ಯದಿಂದ ಹೂಣಿಕೆ ತೊಟ್ಟು ನುಡಿದುದೇನೆಂದರೆ-

ಕೇಳೆ ತಾಯೆ ನಿನ್ನ ದಯಾ ಇದ್ದರೆ ಪೂರ್ವಾದ್ರಿ ಪಶ್ಚಿಮಕ್ಕಿಡುದರಿದೇನ |
ಪಶ್ಚಿಮಾದ್ರಿ ಪೂರ್ವಕ ತರುವೆನು ನಾನ |
ಒಂದೇ ಬಾಣದಿಂದೆ ಅರಿಸುವೆ ಸಮುದ್ರವನಾ |
ವಾಸುಕಿ ಫಣಿ ಮೆಟ್ಟಿ ಕುಣಿದಾಡಿ ಪಾತಾಳದಿಂದೆಳತರುವೆನಾ ಶೇಷನ್ನ |
ಬುಡಮೇಲ ಮಾಡುವೆ ಬ್ರಹ್ಮಾಂಡವನಾ |
ಇಂಥಾ ಮಗನು ನಾ ನಿನ್ಹಂತಿರಲಿಕ್ಕೆ ನೆನಸುದ್ಯಾಕ ನಿಮ್ಮ ಅಣ್ಣಗಳನಾ |
ನೆಪ್ಪ ತಗೀಬ್ಯಾಡ ದನದ್ಹಿಂಡ ಕಾಯವನ |
ನೇಗಿಲ್ಹೊಡೆವ ಒಕ್ಕಲಿಗ ಬಳಿರಾಮನ |
ಮಾನಭಂಗ ಮಾಡಿ ಆ ಹೆಣ್ಣ ತಂದರ –ಆಗನ್ನ ಪಾಂಡವರ ಕುಲರನ್ನಾ |
ಯಾವ ಒಯ್ತಾನ್ನಡಿ ಆ ಹೆಣ್ಣನ್ನ |
ನನಗ ಕೊಟ್ಟಂಥ ಹೆಣ್ಣ ಆ ವತ್ಸಲನ |
ತರದಿದ್ದರೆ ನಮ್ಮ ತಂದಿ ಅರ್ಜುನನ ವೀರ್ಯದಿಂದ ಹುಟ್ಟಿ ಫಲವೇನ |
ಮೂರು ಲೋಕದೊಳಗಾಗುವೆ ಅವಮಾನ ||

ಈ ಪದವೆಲ್ಲವೂ ವತ್ಸಲಾಹರಣದ ಕಥೆಯನ್ನು ಹೇಳುತ್ತಿದ್ದರೂ ಇದು ನಮ್ಮ ವೀರ ಜೀವನವನ್ನು ಕನ್ನಡಿಸುತ್ತದೆ.

ತ್ಯಾಗದಿಂದಲೇ ದೇಶಾಭಿಮಾನಕ್ಕೆ ಸಫಲತೆ

ತನ್ನ ನಾಡನ್ನು ಪ್ರೀತಿಸುವುದಾಗಲಿ, ಅದರ ಬಗ್ಗೆ ಅಭಿಮಾನ ಪಡುವದಾಗಲಿ ಸಣ್ಣ ಮಾತಲ್ಲವಾದರೂ, ಅದು ಅಷ್ಟಕ್ಕೆ ನಿಂತರೆ ಕಾರ್ಯ ಸಫಲತೆ ಪೂರ್ಣವಾಗಲಾರದು. ಹಿರಿಯ ವಸ್ತು ಬೇಕಾಗಿದ್ದರೆ ಹಿರಿಯ ಬೆಲೆ ಕೊಡಬೇಕಾಗುತ್ತದೆಂಬ ಮಾತು ಮರೆಯುವಂತಿಲ್ಲ. ಬೆಟ್ಟಕ್ಕೆ ಹುಲಿ ಬಂದು ಸೇರಿಕೊಂಡಿತು. ಆ ಅಪಾಯಕರ ಪ್ರಾಣಿಯನ್ನು ನೀಗಿಸುವದೆಂತು? ಊರ ಗೌಡನಿಗೆ ದಿಗಿಲುಬಿತ್ತು. ಆದರೆ ಹುಲಿಯನ್ನು ಯಾರಿಂದ ಕೊಲ್ಲಿಸಬೇಕು? ಮೃತ್ಯುವಿಗೆ ಕೈದುಡುಕುವುದಕ್ಕೆ ಒಂದು ಆಸೆ ಬೇಕಲ್ಲವೇ? ಹುಲಿಯನ್ನು ಕೊಂದವರಿಗೆ ತನ್ನ ಅತಿ ಚಲುವೆಯಾದ ಮಗಳನ್ನು ಕೊಟ್ಟು ಲಗ್ನ ಮಾಡುವೆನೆಂದು ಗೌಡನು ಸಾರಿದನು. ಅಣ್ಣ ತಮ್ಮಂದಿರಲ್ಲಿ ಹಿರಿಯನೊಬ್ಬನು ಹೋಗಿ ಹುಲಿಯ ಬಾಯಲ್ಲಿ ಹತನಾದನು. ಮರುದಿನ ಕಿರಿಯನೂ ಹೋದನು. ತಾಯಿ ತಳಮಳಿಸಿ ಅತ್ತಳು. ತಮ್ಮನು ಹೋದವನೇ ಹುಲಿಯನ್ನು ಹೊಡಕೊಂಡೇ ಬಂದನು. ಅದರಿಂದ ತಾಯಿಗೆ ಹಿರಿಯ ಮಗನ ಸಾವಿನಿಂದಾದ ದುಃಖವೂ ಕಡಿಮೆಯಾಯಿತಲ್ಲದೆ “ಹತ್ತು ಮಕ್ಕಳ್ಯಾಕೋ, ನಿನ್ನಂತವನೊಬ್ಬ ಸಾಕೋ ಎಂದು ಮಗನನ್ನು ಅಪ್ಪಿದಳು. ಈ ಕಥೆಯನ್ನು ಹಳ್ಳಿಯ ಹಾಡೊಂದು ರಮ್ಯವಾಗಿ ಹೇಳುತ್ತದೆ. ಆ ಅಣ್ಣ-ತಮ್ಮಂದಿರು ಧೀರರು. ಮೃತ್ಯುವನ್ನು ಕೆಣಕಿದಂತೆ ಹುಲಿಯ ಮೇಲೇರಿ ಹೋದರು. ಅಣ್ಣನು ಪ್ರಾಣ ಕಳಕೊಂಡನೆಂಬ ವಿಲಗವನ್ನು ತೊಡೆದುಹಾಕಬೇಕೆಂದು ತಮ್ಮನು ತ್ಯಾಗಕ್ಕೆ ಸಿದ್ಧನಾದನು. ತನ್ನ ಗುರಿಯನ್ನು ಸಾಧಿಸಿದನು. ಆದರೆ ಇಷ್ಟೆಲ್ಲಾ ಖಟಾಟೋಪಕ್ಕೆ ಗೌಡನ ಮಗಳು ದೊರಕೊಳ್ಳುವಳೆಂಬ ಆಶೆಯೂ ಒಂದು ಕಾರಣವಾಗಿರಬಹುದು. ಆದರೆ ಹೆತ್ತ ಕರುಳು ಹಿರಿಯ ಮಗನಿಗೆ

ನನ್ನಪ್ಪ ನನ್ನಮ್ಮ ನೀ ಹೋಗಬೇಡವೋ ಒಂಟ್ಯಾಗಿ | ತಂದಾನ ತಾನ |
ಹೆತ್ಹೊಟ್ಟೆ ನಾನ್ಹೆಂಗೆ ತಡೆಯೊಲೋ ಕಂದಮ್ಮ | ತಂ | ತಾ |

ಎಂದು ಅಂಗಲಾಚುಳು.

“ಅಣ್ಣಾ ವ್ಯಾಘ್ರನ ಬಿಟ್ಗಿಟ್ಟು ಬಂದೀಯೇ | ತಂ | ತಾ |” ತಮ್ಮನೆಂದಾಗ
“ಯೋಚನೆ ಮಾಡಬೇಡ ಬಿಡಬಿಡೋ ತಮ್ಮಯ್ಯ | ತಂ | ತಾ |
ನಾ ಹೋದ್ರೆ ವ್ಯಾಘ್ರವು ನನ್ನ ಎದೆಯ ಮೇಲೆ! ತಂ | ತಾ |
ನಾ ಬಂದ್ರೆ ವ್ಯಾಘ್ರವು ನನ್ನ ಹೆಗಲ ಮೇಲೆ | ತಂ | ತಾ |

ಎಂದು ಅಣ್ಣನು ಮರುನುಡಿಯುವನು. ತಾನೆಂದ ಎರಡು ಮಾತುಗಳಲ್ಲಿ ಒಂದನ್ನು ಸಾಧಿಸಿಯೇ ಬಿಡುವನು. “ನಾನ್ಹೋದ್ರೆ ವ್ಯಾಘ್ರವು ನನ್ನ ಎದೆಯ ಮ್ಯಾಲೆ”

“ರೊಟ್ಟಿಯ ಸುಡಮ್ಮ ಬುತ್ತಿಯ ಕಟ್ಟಮ್ಮ” ಎಂದು ತಮ್ಮನು ತಾಯ ಬಳಿ ಬರಲು ಆಕೆ ಅವನಣ್ಣನ ಗತಿಯನ್ನು ನೆನಪಿಗೆ ತರುವಳು. ಆಗ

ನಿನ್ನೆ ಇಷ್ಟೊತ್ತಿನಾಗ ನಮ್ಮಣ್ಣನ ತಿಂದೈತೆ | ತಂ | ತಾ |
ನಮ್ಮಣ್ಣನ ತಿಂದ್ರವ್ವ ನನ್ನನ್ನು ತಿನಲೆಮ್ಮ | ತಂ | ತಾ |”

ಎನ್ನುವ ಮಗನ ಮಾತು ಕೇಳಿ,

“ಮಾರಿ ಮುಂದೆ ನನ್ಮಕ್ಳ ನೀರ್ಕುಡಿದಳೋ | ತಂ | ತಾ | ”
“ಹಾದಿರ್ಗಿತ್ತಿ ಮುಂದೆ ನೆಗೆದ್ಬೀಳೋಕಿಲ್ಲವೋ | ತಂ | ತಾ |”

ಎಂದು ಉಸಿರುಗರೆಯುವಳು. ಆದರೆ ಗೆಲವು ತಂದ ಮಗನನ್ನು ಎದಿರುಗೊಂಡು

“ಬಾರೋ ನನ ತಮ್ಮ ಬಾರೋ ನನ್ನ ಚಿತ್ತಾ | ತಂ | ತಾ |
ಹತ್ತು ಮಕ್ಕಳ್ಯಾಕೊ ನಿನ್ನಂಥವನೊಬ್ಬ ಸಾಕೋ | ತಂ | ತಾ |”

ಎಂದು ತೃಪ್ತಿಪಡುವ ಮಾತು ದೊಡ್ಡದು. ಅದೆಂಥ ಹಿರಿಯ ತ್ಯಾಗವನ್ನಾದರೂ ಮಾಡಿ ಗೆಲವು ಗಳಿಸಬೇಕೆನ್ನುವ ಮಾತೂ, ಊರ ಕಲ್ಯಾಣದಂಥ ಒಂದು ಶ್ರೇಷ್ಠ ಉದ್ದೇಶಕ್ಕಾಗಿ ಒಂದು ಪ್ರಾಪ್ತಿಯ ಉದ್ದೇಶವನ್ನು ಗೌರವವಾಗಿಸಿಕೊಂಡು ಸಹ ಮೃತ್ಯುವಿನ ದವಡೆಯಲ್ಲಿ ಕೈದುಡುಕುವ ಬಲಿದಾನಕ್ಕೆ ಸಿದ್ಧರಾಗಬೇಕೆನ್ನುವ ಮಾತೂ ಇಲ್ಲಿ ಸ್ಪಷ್ಟವಾಗಿದೆ.

ಸತಿಯೊಡನೆ ಸಹಗಮನ

ಕನ್ನಡ ಜಾನಪದವು ಗಂಡಿನ ತ್ಯಾಗವನ್ನೂ, ನಾಡಿನ ಅಭಿಮಾನವನ್ನೂ ಬಿತ್ತರಿಸುವಂತೆ ಹೆಣ್ಣಿನ ತ್ಯಾಗವನ್ನೂ ಆಕೆಯ ನಾಡಿನಾಭಿಮಾನವನ್ನೂ ಹೇಳದೆ ಬಿಟ್ಟಿಲ್ಲ. ವೀರಕಲ್ಲುಗಳಿದ್ದಂತೆ ಮಾಸ್ತಿಯ ಕಲ್ಲುಗಳೂ ನಮ್ಮ ಕಣ್ಣುಗಳ ಮುಂದೆ ಕಂಗೊಳಿಸುತ್ತವೆ. ಊರ ಕೋಟೆಯನ್ನು ಕಟ್ಟಿಸುತ್ತಿರುವಾಗ ಗಟ್ಟಿಗಾವಾಲಾಗಿ ನಿಲ್ಲದಿರುವಾಗ ಬಸುರಿಯದ ಮುತ್ತೈದೆಯ ಬಲಿ ಬೇಕೆಂದು ತಿಳಿದವರು ಹೇಳಲು ಜಕ್ಕವ್ವನೆಂಬ ಮಾದಿಗರ ಬಾಲೆಯು ತನ್ನಿಚ್ಛೆಯಿಂದ ಮುಂದೆ ಬಂದು ಬಲಿ ಅರ್ಪಿಸಲು ಕೋಟೆಯು ಕಟ್ಟಲ್ಪಟ್ಟು ಬಂಧುರವಾಗಿ ನಿಂತಿತೆಂದೂ ಆಕೆಯ ಇಚ್ಛಾಪೂರ್ವಕವಾದ ತ್ಯಾಗದಿಂದ ಆಕೆಯ ಮನೆತನದವರಿಗೆ ಬಾದಶಹನಿಂದ ವಂಶಪರಂಪರೆಯಾದ ‘ವತನ’ ಸಿಕ್ಕಿತೆಂದೂ ಹಲಸಂಗಿ ಕೋಟೆಯ ಇತಿಹಾಸವಿದೆ. ಅದರಂತೆ ಕಲ್ಲನಕೇರಿ ಮಲ್ಲನಗೌಡರು ಊರಿಗಾಗಿ ಒಂದು ಕೆರೆ ಕಟ್ಟಿಸುತ್ತಾರೆ. ಆದರೆ ಅದರಲ್ಲಿ ಒಂದು ಬೊಗಸೆ ಸಹ ನೀರು ಬರಲಿಲ್ಲ. ಗೌಡರು ಹೊತ್ತಿಗೆ ತೆಗೆಸಿ ಕೇಳಿದರೆ “ಹಿರಿ ಸೊಸೆ ಮಲ್ಲವ್ವನ ಕೆರೆಗೆ ಹಾರ ಕೊಡಬೇಕು” ಎಂದು ಹೊರಟಿತು. ಗೌಡನು ವಿಚಾರದಲ್ಲಿ ಮುಳುಗಿದನು-

“ಹಿರಿ ಸೊಸಿನ ಕೊಟ್ಟರ ಹಿರಿತನಕ ಯಾರಿಲ್ಲ |
ಕಿರಿ ಸೊಸೆ ಭಾಗೀರತಿನ್ಹಾರ ಕೊಡಬೇಕು”

ಎಂದು ಮನೆಯವರೊಡನೆ ಮಾತಾಡಿ ಗೊತ್ತುಪಡಿಸಿದನು. ಆದರೆ ಕಲಿಯದ ಹಳ್ಳಿಯ ಬಾಲಿಕೆಯಾದ ಭಾಗೀರತಿಯು ಮನೆಯವರು ನಿಶ್ಚಯಿಸಿದ ಮಾತುಗಳನ್ನು ಕೇಳಿಕೊಂಡು ಕೆರೆಗೆ ಹಾರವಾಗಲು ಸಿದ್ಧಳಾದಳು. ಊರ ಹಿತಕ್ಕಾಗಿ ತಾನು ಬಲಿಯಾಗುವದು ಪುಣ್ಯದ ಕೆಲಸವೆಂದು ಗಟ್ಟಿ ಮಾಡಿಕೊಂಡಳು. ಬಲಿಯಾಗುವ ಮುಂಚೆ ತಾಯಿ ತಂದೆ ಅಕ್ಕ ಗೆಳತಿಯರನ್ನು ಕಂಡುಬರೋಣವೆಂದು ಅತ್ತೆಯನ್ನು ಕೇಳಿ ಹೊರಟಳು.

“ಎಂದಿಲ್ಲದ ಭಾಗೀರತಿ ಇಂದ್ಯಾಕ ಬಂದೆವ್ವ
ಬಾಡೀದ ಮಾರ್ಯಾಕ ಕಣ್ಣಾಗ ನೀರ್ಯಾಕ”? ಎಂದು ಕೇಳಿದ್ದಕ್ಕೆ
“ನಮ್ಮಾವ ನಮ್ಮತ್ತೆ ಬ್ಯಾರೆ ಇಡುತಾರಂತೆ” ಎನ್ನುವಳು
“ಇಟ್ಟರೆ ಇಡಲೇಳು ಹೊಲ ಮನಿ ಕೊಡತೇನಿ”
“ಹೊಲ ಮನಿ ಒಯ್ದು ಹೊಳಿದಂಡ್ಯಾಗ ಹಾಕಪ್ಪ”

ಹೀಗೆ ತಂದೆಗೆ ಹೇಳಿದಂತೆ, ಅವ್ವನಿಗೂ ಅಕ್ಕನಿಗೂ ಒಂದೊಂದು ಸುಳ್ಳು ಕಾರಣ ಹೇಳಿದಾಗ ಅವರೂ ತಂದೆಯಂತೆ ಸಂತೈಸುವರು. ಕಡೆಗೂ ತಾನು ಕೈಕೊಂಡ ಪುಣ್ಯಕಾರ್ಯವನ್ನು ಪ್ರಕಟಮಾಡದೆ ಗೆಳತಿಯ ಮನೆಗೆ ಹೋಗುವಳು. ಅಲ್ಲಿ ನಿಜ ಸಂಗತಿಯೆಲ್ಲ ಅರುಹಲು ಗೆಳತಿಯು ಅಂಜಿ ಕಳವಳಗೊಳ್ಳುವಳು. ಆದರೆ ಆಕೆಗೆ ಭಾಗೀರತಿಯೇ ಸಮಾಧಾನ ಹೇಳುವಳು. ಬಳಿಕ ನೇರವಾಗಿ ಅತ್ತೆಯ ಮನೆಗೆ ಮರಳುವಳು. ಅಲ್ಲಿ ಅಕ್ಕಿ ಬೇಳೆ ಹಸನಿಸುವಾಗು ಕರುಳು ಕುದಿದು ಕಣ್ಣೀರುಕ್ಕುವಾಗ ಕಾರಣ ಕೇಳಿದವರಿಗೆ ಹರಳು ಬಿತ್ತೆಂದು ನೆವ ಹೇಳುವಳು. ಹಾರಕೊಡುವ ದಿವಸ ಬಂತು. ಅನ್ನ, ಸಕ್ಕರೆ, ಶಾವಿಗೆ ಸಿದ್ಧವಾಯಿತು. ಜಳಕಕ್ಕೆ ನೀರು ಕಾಯ್ದವು. ಬಂಗಾರ ಬುಟ್ಟಿ ತುಂಬಿಕೊಂಡು ಸಿಂಗಾರ ಸಿಂಬೆ ಮಾಡಿಕೊಂಡು ಭಾಗೀರತಿ ಮುಂದೆ ಮುಂದೆ ನಡೆದಳು. ಉಳಿದವರು ಹಿಂದಿನಿಂದ ಸಾಗಿ ಬಂದು ಕೆರೆಯನ್ನು ತಲುಪಿದರು. ಅಲ್ಲಿ ಅವರೆಲ್ಲರೂ ಗಂಗೆಯನ್ನು ಪೂಜಿಸಿ ಬೆಲ್ಲಪತ್ರಿಯನ್ನು ಏರಿಸಿ, ಸೀರಿ ಕುಬುಸ ಏರಿಸಿ ಹೂವಿನ ದಂಡೆಯನ್ನು ಮುಡಿಸಿ ನೈವೇದ್ಯ ಮಾಡಿದರು. ಆ ಬಳಿಕ ಎಲ್ಲರೂ ಉಂಡು, ಉಳಿದುದನ್ನು ಬುಟ್ಟಿಯಲ್ಲಿರಿಸಿಕೊಂಡು ಮನೆಯ ಹಾದಿ ಹಿಡಿದರು. ಆದರೆ ಬೇಕಂತಲೇ ಕೆರೆಯಲ್ಲಿ ಬಂಗಾರದ ಬಟ್ಟಲು ಮರೆತು ಬರಬೇಕೆಂದು ಸಂಕೇತವಾಗಿತ್ತು. ಅದರಂತೆ ಮರೆತೂ ಬಂದರು. ಅದನನು ತರುವುದಕ್ಕೆ ಕೆರೆಗೆ ಮರುಳುವದಕ್ಕೆ ಯಾರೂ ಒಪ್ಪಲಿಲ್ಲ. ಭಾಗೀರತಿಯೇ ಹೋಗಬೇಕಾಯ್ತು. ಬಿಟ್ಟ ಬಟ್ಟಲು ಕೈಯಲ್ಲಿ ತಕ್ಕೊಂಡು ಮೆಟ್ಟಲೇರುವಷ್ಟರಲ್ಲಿ ನೀರಿನ ಪ್ರವಾಹವು ಬಂದು ನೆಲೆ ಮುರಿಯಿತು. ಭಾಗೀರತಿ ಕೆರೆಗೆ ಆಹುತಿಯಾದಳು. ಈ ಸುದ್ದಿಯು ದಂಡಿನಲ್ಲಿದ್ದ ಆಕೆಯ ಗಂಡನಾದ ಮಹಾದೇವರಾಯನಿಗೆ ದುಃಸ್ವಪ್ನವಾಗಲು ಸಂಶಯಪಟ್ಟುಕೊಂಡು ಬತ್ತಲೆ ಕುದುರೆ ಹತ್ತಿದವನೇ ಊರ ಹಾದಿ ಹಿಡಿದನು. ಮನೆಗೆ ಬಂದು ಹೆಂಡತಿಯ ಸುಳಿವು ಕಾಣದೆ ತವರುಮನೆಗೆ ಹೋದಳೆಂದು ಕೇಳಿ ಅಲ್ಲಿಗೆ ಧಾವಿಸಿದನು. ಅಲ್ಲಿಯೂ ಹೆಂಡತಿಯನ್ನು ಕಾಣದೆ ನಿರಾಶನಾಗಿ ಗೆಳತಿಯ ಮನೆಗೆ ಬರಲು ಅಲ್ಲಿ ನಿಜ ಸಂಗತಿ ತಿಳಿಯಿತು. ಕೂಡಲೇ ಕುದುರೆ ಇಳಿಯದೆ ನೇರವಾಗಿ ಕೆರೆಯ ದಂಡೆಗೆ ಬಂದು ಕಣ್ಣೀರಿಟ್ಟನು.

“ಸಾವಿರ ವರಹ ಕೊಟ್ಟರೂ ಸಿಗಲಾರದ ಸತಿ ನೀನು
ಸಿಗಲಾರದ ಸತಿ ನೀನು ನನ್ನ ಬಿಟ್ಟು ಎಲ್ಲಿ ಹೋದೆ?
ಮುನ್ನೂರು ವರಹ ಕೊಟ್ಟು ಮುತ್ತಿನೋಲೆ ಮಾಡಿಸಿದ್ದೆ
ಮುತ್ತಿನೋಲೆ ಇಟ್ಟುಕೊಳ್ಳೋ ಮುತ್ತೈದೆ ಎಲ್ಲಿ ಹೋದೆ?”

ಎಂದವನೇ ಕೆರೆಗೆ ಹಾರಿದನು. ಊರ ಜನರ ನಿರಂತರ ಕಲ್ಯಾಣದ ಸಲುವಾಗಿ ಕೆರೆಗೆ ಹಾರವಾದ ಸತಿಯೂ, ಸತಿಗಾಗಿ ಸಹಗಮನ ಮಾಡಿದ ಪತಿಯೂ ಆದರ್ಶವಾಗಿ ನಿಲ್ಲಲಾರರೇ?.

ದೇಶದರ್ಥವು ವಿಶಾಲವಾಗಿದ್ದರೂ, ಅವರಿಟ್ಟ ದೇಶಾಭಿಮಾನವು ವಿಶಾಲತಮವಾಗಿದೆ. ದೇಶಾಭಿಮಾನದ ಪರಮಾವಸ್ಥೆಯಾದ ಆತ್ಮದಾನಕ್ಕೆ ಮುಟ್ಟದಿದ್ದರೆ ಅದು ಸಾರ್ಥಕಗೊಳ್ಳಲಾರದು. ತಮ್ಮ ಜೀವನವು ಪರರಿಗುಪಯುಕ್ತವಾಗುವಂತೆ ಅದನ್ನು ಸವೆಯಿಸಿದರೆ ಹುಟ್ಟಿದ್ದು ಸಫಲವಾಗುವದಲ್ಲದೆ ಬಲಿದಾನವೂ ಸಫಲವಾಗಿ ಶಾಶ್ವತವಾಗಿ ನಿಂತುಕೊಳ್ಳುವದೆಂಬ ಸಂದೇಶವು ಹಳ್ಳಿಯ ಹಾಡುಗಳಲ್ಲಿ ವಿಫುಲವಾಗಿ ಸಿಗುತ್ತದೆ, ಅದು ನಮ್ಮ ಜೀವನದ ಪರಿಶುದ್ಧತೆಗೆ ದಾರಿದೀಪವಾಗುವಂತೆ ಮುಂದಿರಿಸಿಕೊಳ್ಳಬೇಕಾಗಿದೆ.