ಭೂಮಿಯ ಹಿರಿಮೆ

ನಮ್ಮನ್ನು ಹೊತ್ತು ನಿಂತ ನೆಲವು ತಾನು ಅಸ್ಥಿರವಾದರೂ, ನಮ್ಮನ್ನು ಸ್ಥಿರವಾಗಿ ಎತ್ತಿಹಿಡಿದಿದೆ. ತನ್ನ ಮಣ್ಣು ಮೈಯಿಂದಲೇ ಚಿನ್ಮಯ ಶರೀರದ ಮಕ್ಕಳನ್ನು ಹಡೆದಿದ್ದಾಳೆ. ಭೂಕಂಪದಂಥ ಮಲರೋಗವನ್ನು ಮರೆಯಾಗಿಸಿಕೊಂಡು ಆಕೆ ಪ್ರಸನ್ನ ಮುದ್ರೆಯಿಂದ ಮರೆರೆಯುತ್ತಾಳೆ. ಲಾವಾರಸದ ಕುದಿತವನ್ನು ಹೊಟ್ಟೆಯಲ್ಲಿಟ್ಟುಕೊಂಡು, ಮಕ್ಕಳಿಗೆ ಹಾಳತವಾದ ಮೈಗಾವು ನೀಡುತ್ತಾಳೆ. ಬಹುರಸದ ಮೂಲೆಯುಳ್ಳವಳಾಗಿ ಬಹುವಿಧದ ಮೈಗೆ ಹಿತಕರವಾದ ಹಾಲೂಡಿಸ ಬಲ್ಲವಳಾಗಿದ್ದಾಳೆ; ಬಹು ಸ್ವಭಾವಗಳನ್ನು ಪೋಷಿಸಬಲ್ಲವಳಾಗಿದದಾಳೆ. ಹಲ್ಲಿಲ್ಲದ ಹಸುಳೆಗೂ ಹಲ್ಲುಹೋದ ಮುದುಕನಿಗೂ ಸಹಜವಾಗುವಂಥ ಅನ್ನ ನೀಡುವವಳಾಗಿದ್ದಾಳೆ. ಬಡವಿಯಂತೆ ಕಂಡರೂ ಮುತ್ತು ರತ್ನಗಳ ಬೊಕ್ಕಸವು ಅವಳಿಗಿದೆ’ ಚಿನ್ನ ಬೆಳ್ಳಿಗಳು ಅವಳಿಗೆ ಕಾಲಕಲಸವಾಗಿವೆ. ಕಬ್ಬಿಣ ಕರಗಿಸುವಂಥ ಬೆಂಕಿ ಅವಳಲ್ಲಿದ್ದರೂ, ಮೈದೆಗೆದರೆ ನೀರಿನ ತನುವೇ ಕಂಗೊಳಿಸುತ್ತದೆ. ಒಡಲೊಳಗಿದ್ದರೂ ಕಡಲೊಳಗಿದ್ದರೂ, ಮೈದೆಗೆದರೆ ನೀರಿನ ತನುವೇ ಕಂಗೊಳಿಸುತ್ತದೆ. ಒಡಲೊಳಗಿದ್ದರೂ ಕಡಲೊಳಗಿದ್ದರೂ ಜೀವನಶಕ್ತಿಯನ್ನು ನೀಡುವುದಕ್ಕೆ ಆಕೆ ಸಮರ್ಥಳಾಗಿದ್ದಾಳೆ. ಅವಳ ಮೈಯ ಹುಡಿಯೊಳಗಿನ ರಸವು ನಿಂಬೆಗೆ ಹುಳಿಯನ್ನೂ, ನಲ್‌ಕಬ್ಬಿಗೆ ಸಿಹಿಯನ್ನೂ, ಬೇವಿಗೆ ಕಹಿಯನ್ನೂ ನೀಡಬಲ್ಲುದು. ಮುಗಿಲೆತ್ತರವಾದ ತೆಂಗಿನ ಮರದ ತುದಿಯೊಳಗಿನ ಕಾಯಿಯಲ್ಲಿ ಯಾರಿಗೂ ತಿಳಿಯದಂತೆ ನೀರು ತುಂಬುವ ಮಾಟವನ್ನು ಅರಿತವಳು. ಮುಚ್ಚಿ ಬಿಗಿದ ಮುಷ್ಟಿಯಂಥ ಹಣ್ಣು ಕಾಯಿಗಳಲ್ಲಿ ಮಾಧುರ್ಯ ತಿರುಳನ್ನು ಹದಗೊಳಿಸುವ ಹವಣು ತಿಳಿದವಳು. ಒಂದು ಬೀಜದಿಂದ ಸಾವಿರ, ಲಕ್ಷ ಅದೇಕೆ ಕೋಟಿಗಟ್ಟಲೆ ಬೀಜಗಳನ್ನು ಹುಟ್ಟಿಸಿಕೊಡಬಲ್ಲವಳು. ಹದಗೆಟ್ಟ ಬದುಕನ್ನು ಹದಕ್ಕೆ ತರುವ ಕಲೆ ಅವಳಿಗೆ ಗೊತ್ತಿಗೆ. ಕಸದಿಂದ ರಸ ಹುಟ್ಟಿಸುವುದೂ ಕೊಳೆಯಿಂದ ಬೆಳೆ ನಿರ್ಮಿಸುವುದೂ ಅವಳಿಗೆ ಸಹಜದ ಆಟ. ಕೊರಡು ಕೊನರಿಸುವ ಬರಡು ಹಯನಿಸುವ ಮೋಡಿಯು ಕಣ್ಣಾರೆ ಕಾಣ ಸಿಗುವುದು ಭೂಮಿತಾಯಿಯಲ್ಲಿಯೇ. ಕಣ್ಣು ತೆರೆಯದ ಕುನ್ನಿಯೂ ಆಕೆಗೆ ಕೂಸಾಗುವಂತೆ, ಕಣ್ಣು ಮುಗಿದ ಮುದುಕನೂ ಆಕೆಗೆ ಕೂಸಾಗಬಲ್ಲನು. ಎಲ್ಲಿಯದೋ ಸೆಲೆಯಂತೆ ಬರುವ ನಮ್ಮ ಜೀವನರಸಗಳೆಲ್ಲ ಈಕೆಯ ಮೂಲೆ ಹಾಲಧಾರೆಗಳೇ ಆಗಿವೆ. ಕಣ್ಣು ತೆರೆಯದ ಕುರುಡ ಕುನ್ನಿ, ಕಣ್ಣು ಕಾಣದ ಕೊರಡು ಕೂಸು, ತಿಳಿವಳಿಕೆಯ ಜಾಣ, ತಿಳಿಗೇಡಿಕೋಣ ಇವರೆಲ್ಲರೂ ಆಕೆಗೆ. ಎಲ್ಲವನ್ನೂ ಅಕರ್ಷಿಸುತ್ತಾಳೆ. ಸತ್ತರೂ ಕಡೆಗೊಗೆಯುವದಿಲ್ಲ; ಕೆಟ್ಟರೂ ಹೊರಗೆಸೆಯುವದಿಲ್ಲ. ಎಲ್ಲರೂ ಒಂದೇ. ಎಲ್ಲವೂ ಒಂದೇ. ಒಂದರಿಂದಲೇ ಹಲವಾಗಿರುವಾಗ, ಹಲವೆಲ್ಲ ಒಂದೇಕಲ್ಲ –ಎನ್ನುವ ಸಹಜ ಪ್ರವೃತ್ತಿಯುಳ್ಳವಳು. ಸರ್ವವನ್ನೊಳಗೊಂಡದ್ದದೇ ಭೂಮಿಯೆಂದು ಹಿರಿಯರು ಹೇಳುತ್ತಾರೆ. ಖಂಡರಹಿತವಾದುದರಿಂದಲೇ ಅದು ಭೂಮಿ. “ಖಂಡದಲ್ಲಿ ಸುಖವಿಲ್ಲ. ಅಖಂಡದಲ್ಲಿ ಸುಖವಿದೆ” ಎಂಬ ಮಂತ್ರವು ಉಪನಿಷತ್ ಕಾಲದ ಋಷಿಗಳಿಗೆ ಹೊಳೆದದ್ದು, ಭೂಮಿಯನ್ನು ಕುರಿತು ಧ್ಯಾನಿಸಿದಾಗಲೇ ಇರಬೇಕು. ಭೂಮಿಯು ಸರ್ವವನ್ನು ಒಳಗೊಂಡಿದ್ದರಿಂದಲೇ ಷಡ್ರಸಗಳೆಲ್ಲ ಆಕೆಯ ರಕ್ತಗುಣ. ನವರಸಗಳೆಲ್ಲ ಆಕೆಯ ಸ್ವಭಾವಗುಣ. ತ್ರಿಗುಣಗಳೆಲ್ಲ ಆಕೆಯ ಮೈಗೂಡಿ ಬಂದ ಸತ್ವ; ಷಡ್ಗುಣಗಳೆಲ್ಲ ಆಕೆಯ ಮನಗೂಡಿ ಬಂದ ತತ್ತ್ವ. ಬುದ್ಧಿಯ ಬೆಳಕು ಆಕೆಯ ಮೆದುಳಲ್ಲಿರುವ ಒಂದು ಪಕ್ಷ-ಶುಕ್ಲಪಕ್ಷ; ತಿಳಿಗೇಡಿತನದ ಕತ್ತಲೆ ಇನ್ನೊಂದು ಪಕ್ಷ-ಕೃಷ್ಣಪಕ್ಷ. ಅತ್ತೆ-ಸೊಸೆಯರೆಂಬ ಕದನದ ಕೈಗಳೆರಡೂ ಆಕೆಯವೇ; ತಾಯಿ-ಮಕ್ಕಳಲ್ಲಿರುವ ಮಮತೆಯ ವಾತ್ಸಲ್ಯಕ್ಕೆ ಅವಳದೇ ತುಟಿ, ಅವಳದೇ ಬಾಯ್ದೆರೆ. ಸತಿಪತಿಗಳ ನಲುಮೆಗೆ ಆಕೆಯಿಂದಲೇ ಋಣವಿದ್ಯುತ್ತು ಆಕೆಯಿಂದಲೇ ಧನವಿದ್ಯುತ್ತು ಹುಟ್ಟಿದವು. ಗುರು-ಶಿಷ್ಯರಲ್ಲಿ ಆಕೆಯ ಪಾದ ಒಬ್ಬರಿಗೆ ಹಂಚಲಾಗಿದೆ. ಆಕೆ ಅಮೃತವನ್ನು ಧರಿಸಿದಂತೆ ವಿಷವನ್ನು ಇರಿಸಿಕೊಂಡಿದ್ದಾಳೆ. ಒಂದು ಮುಷ್ಟಿಯಲ್ಲಿ ಅವಕೃಪೆಯನ್ನೂ ಹಿಡಿದಿದ್ದಾಳೆ. ಇಷ್ಟೆಲ್ಲ ಮಾತುಗಳನ್ನು ಬಳಸಿದರೂ ಭೂಮಿತಾಯಿಯ ಹಿರಿಮೆಯಲ್ಲಿ ಶತಾಂಶದಷ್ಟು ಸಹ ಮುಗಿಯಲಿಲ್ಲ. ಕಾಂಚನಾದ್ರಿ ಕನ್ನಡಿಯೊಳಗೆಷ್ಟು ತೋರುವದು?

ಭೂಮಿಗೂ ಗರತಿಗೂ ಹೋಲಿಕೆ

ಭೂಮಿ ತಿರೆಯೆನಿಸುತ್ತದೆ. ಗರತಿ ಅಸ್ಥಿರೆಯೆನಿಸುತ್ತಾಳೆ. ಎನ್ನುವ ಮಾತೊಂದು ಬಿಟ್ಟರೆ ಉಳಿದೆಲ್ಲ ಗುಣಗಳೂ ಅವರಿಬ್ಬರಲ್ಲಿ ಸಮಾನವಾಗಿರುವಂತೆ ತೋರುತ್ತದೆ. ಸರ್ವವನ್ನೂ ಒಳಗೊಳ್ಳುವುದೇ ಭೂಮಿಯ ಲಕ್ಷಣವಾಗಿರುವಂತೆ, ಸರ್ವವನ್ನು ಒಳಗೊಂಡು ಬಾಳುವುದೇ ಗರತಿಯ ಕುರುಹಾಗಿರುವುದೆಂದು ಒಂದೇ ಮಾತಿನಿಂದಲೇ ಮುಗಿಸುವುದು ಒಳ್ಳೆಯದು. ಅಷ್ಟರಿಂದಲೇ ಪರಸ್ಪರರ ಸ್ವಭಾವ, ಗುಣಧರ್ಮ, ಐಶ್ವರ್ಯ, ಕಾರ್ಯಪದ್ಧತಿ ಮೊದಲಾದವುಗಳನ್ನು ಹೋಲಿಸಿಯೇ ಬಿಟ್ಟಂತಾಗುವುದು. ಆದುದರಿಂದಲೇ ಶ್ರೀ ಬೇಂದ್ರೆ ಅವರು, ಹೆಂಗಸಿಗೆ ನಡೆದಾಡುವ ಭೂಮಿಯೆಂದು ಹೆಸರಿಸಿ ತಮ್ಮ ಹೃದಯದೊಳಗಿನ ಗೌರವ ಬುದ್ಧಿಯನ್ನು ಭೂಮಿಯೆಂದು ಹೆಸರಿಸಿ ತಮ್ಮ ಹೃದಯದೊಳಗಿನ ಗೌರವ ಬುದ್ಧಿಯನ್ನು ಸಾಕಷ್ಟು ತೋರ್ಪಡಿಸಿಕೊಂಡಿದ್ದಾರೆ. ಇಲ್ಲಿ ಗರತಿಯ ಲಕ್ಷಣವಾದ ಸರ್ವವನ್ನು ಒಳಗೊಳ್ಳುವ ಬುದ್ಧಿಯನ್ನು ರೇಖಿಸಿ ತೋರಿಸಬೇಕಾಗಿದೆ. ಆ ಬುದ್ಧಿಯ ಪರಿಚಯವು ಆಕೆಯ ಹಾಡುಗಳಿಂದಲೇ ನಮಗುಂಟಾಗಬೇಕಾಗಿರುವುದು ಸರಿಯಷ್ಟೇ?

ಎಲ್ಲರೂ ತನ್ನವರು

ಎಲ್ಲಾ ತನ್ನದು ಎಂದು ಹೇಳುವಲ್ಲಿ ಬಕಾಸುರನಂತೆ ಬಕ್ಕರಿಸುವ ವಿರಾಟ್‌ ಹಸಿವೆಯ ಕಲ್ಪನೆಯುಂಟಾಗಬಹುದಾದ್ದರಿಂದ, ಎಲ್ಲರೂ ತನ್ನವರು ಎನ್ನವು ಉದಾತ್ತವಾದ ಮಾತನ್ನೇ ಎತ್ತಿಕೊಳ್ಳಲಾಗಿದೆ. ಮಕ್ಕಳು ತನ್ನವರು, ಗಂಡ ತನ್ನವ ಎಂದು ಬಿಡದೆ, ಮಕ್ಕಳಿಗಾಗಿ ಬಂದ ಸೊಸೆ, ಮಕ್ಕಳಿಂದ ಹುಟ್ಟಿದ ಮೊಮ್ಮಕ್ಕಳು, ಮಕ್ಕಳ ಗೆಳೆಯರು ಎಲ್ಲರೂ ತನ್ನವರೇ; ಗಂಡನನ್ನು ಪಡೆದ ಅತ್ತೆಮಾವಂದಿರು, ಗಂಡನ ಒಡಹುಟ್ಟಿದ ಭಾವ-ಮೈದುನ-ನಾದಿನಿಯರು ಎಲ್ಲರೂ ತನ್ನವರೇ ಎನ್ನುವ ಭಾವನೆಯನ್ನು ಅವಳಡಿಸಿಕೊಂಡವಳೇ ಗರತಿ. ಅದರ ಸಾಧನೆಯಲ್ಲಿ ತೊಡಗಿದವಳೇ ಗರತಿಯಾಗಬಲ್ಲವಳು. ಹೊಂಗೂಸು ಹುಟ್ಟಿತೆಂದರೆ ಗರತಿಯ ಮರಿ ಹುಟ್ಟಿಕೊಂಡಂತೆ. ಹೆಣ್ಣು ನಡೆಯಿಸುವ ಸಾಧನೆ ಸಂಪೂರ್ಣವಾಗಿ ಭೂಮಿಯಾಗಬೇಕಾದರೆ, ವ್ಯಕ್ತಿತ್ವವನ್ನು ಅದೆಷ್ಟು ಸಾರೆ ಮುರಿದು ಅದೆಷ್ಟು ಸಾರೆ ಕಟ್ಟಬೇಕಾಗುವುದೋ ತಿಳಿಯದು. “ಎಲ್ಲವೂ ನಿನ್ನೊಳಗಿದೆ. ನೀನು ಎಲ್ಲರೊಳಗೂ ಇರುವೆ” ಎನ್ನುವ ಮಹಾಜ್ಞಾನದ ಪ್ರಾಥಮಿಕ ಪಾಠವಿದೆಂದರೂ ಅದು ಸಣ್ಣ ಮಾತಲ್ಲ. ಅದನ್ನು ಸಂಪಾದಿಸಿದರೆ ಸ್ವಲ್ಪ ಸಂಪಾದಿಸಿದಂತಲ್ಲ. ಈ ಸಾಧನೆಯು ಆರಂಭವಾಗುವುದು ಯಾವಾಗ? ಮಗಳಾಗಿದ್ದವಳು ತವರುಮನೆಯಿಂದ ಸೊಸೆಯಾಗಿ, ಹೆಂಡತಿಯಾಗಿ ಅತ್ತೆಯ ಮನೆಗೋ ಗಂಡನ ಮನೆಗೋ ಹೋದಾಗ ಈ ಸಾಧನೆ ಆರಂಭವಾಗುವುದು. ಆನೆಯು ವಿಂಧ್ಯವನ್ನು ನೆನೆಯುವಂತೆ ಆಕೆ ಮೊದಲು ತವರುಮನೆಯನ್ನು ನೆನಸುವಳೆಂದರೆ, ಮುಖ್ಯವಾಗಿ ತಾಯಿ, ತಂದೆ, ಅಣ್ಣ, ಅಕ್ಕ, ತಮ್ಮ, ತಂಗಿ, ಇವರನ್ನು ಕಾಣಲು ಹಂಬಲಿಸುವಳು. ಆ ಪ್ರೇಮವು ಅಗಲಿಕೆಯಿಂದ ಪರಿಪಾಕಗೊಳ್ಳುವುದು. ಅಂತೆಯೇ ತವರುಮನೆಯ ಬಳಗದವರ ಗುಣಗಳು ಕಡ್ಡಿಯಷ್ಟಿದ್ದರೂ ಗುಡ್ಡವಾಗಿ ತೋರುವವು. ಆ ಪ್ರೇಮ ದೃಷ್ಟಿಗೆ ಅಲ್ಪ ಸೌಂದರ್ಯವು ಸಹ ಮಹಾಸೌಂದರ್ಯವಾಗಿ ಕಣ್ಣಿನ ಮುಂದೆ ಸುಳಿಯತೊಡಗುವದು. ಅವರ ಬಡತನವು ಸಹ ಮಹಾಐಶ್ವರ್ಯವಾಗಿ ಗೋಚರಿಸುವದು. ಅವರ ಕಂಠವು ಮಧುರವಾಗಿ ಒಳಗಿವಿಗೆ ಕೇಳಿಸತೊಡಗುವದು. ಹುಸಿಕಲಹದಲ್ಲಿ ಅವರಂದು ಆಡಿದ ಬೈಗಳು ಸಹ ಇಂದು ಸುಖಕರವಾದ ಹೂರಣಂತೆ ಅನಿಸುವವು. ಹಾಲು ಕಾಯುವ ಸಲುವಾಗಿಯೇ ಕಿಚ್ಚಿನ ಮೇಲೆ ಇರಿಸಿದ್ದರೆ ತೀರ ಉಕ್ಕಿ ಹೊರಚೆಲ್ಲುವಾಗ ಕೆಳಗೆ ಇಳಿಸುವ ಉಪಾಯ ಮಾಡುವಂತೆ, ಅಗಲಿಕೆಯ ಪ್ರೇಮಪಾಶಕ್ಕೆ ಅವಶ್ಯಕವಾದರೂ, ತೀರ ಅತಿರೇಕದ ಹಂಬಲವುಂಟಾದಾಗ ಕೂಡಿಕೆಯು ಅವಶ್ಯವಾಗಿ ಬೇಕಾಗುತ್ತದೆ.

ತಾಯಿ ಕಾಣದ ಜೀವ ತಾವೂರಿ ಬಾವೂರಿ
ಭಾಳ ಬಿಸಲಾನ ಅವರೀಯ | ಹೂವಿನ್ಹಾಂಗ |
ಬಾಡತೀನ ತಾಯಿ ಕರೆದೊಯ್ಯೋ ||

ನಲುಮೆಯ ಗಂಡನು ಬಳಿಯಲ್ಲಿಯೇ ಇರುತ್ತಾನೆ. “ಹಚ್ಚಡ ಪದರೊಳಗಿನ ಅಚ್ಚಮಲ್ಲಿಗೆ ಹೂವ ಬಿಚ್ಚಿ ನ್ನ ಮೇಲೆ ಒಗೆವಂಥ ರಾಯನ ಬಿಟಟು ನಾ ಹ್ಯಾಂಗ ಬರಲೇ ಹಡೆದವ್ವ?”

ಎಂದು ಕೇಳಿದವಳೇ ಈಗ ‘ತಾಯಿ ಕರೆದೊಯ್ಯೇ’ ಎಂದು ಹಂಬಲಿಸುತ್ತಾಳೆ. ಅಣ್ಣ, ಅಕ್ಕ, ತಮ್ಮ, ತಂಗಿ ಇವರಾರು ಬಂದು ಹೋದರೂ ಆಕೆಗೆ ಸಮಾಧಾನವಿಲ್ಲ. ನೀರಡಿಸಿದವರಿಗೆ ಗಾಳಿಹಾಕಿದಂತೆ ಮಾತ್ರ ಆಗುತ್ತದೆ.

ಯಾರು ಇದ್ದರು ನನ್ನ ತಾಯವ್ವನ್ಹೋಲರ
ಸಾವಿರ ಕೊಳ್ಳಿ ಒಲಿಯಾಗ ಇದ್ದರ
ಜ್ಯೋತಿ ನೀನ್ಯಾರು ಹೋಲರ

ತಾಯಿಯನ್ನುಳಿದು ಮಿಕ್ಕ ಬಳಗವೆಲ್ಲ ಸಾವಿರವಾದರೂ ಅವರೆಲ್ಲರೂ ಒಲೆಯೊಳಗಿನ ಕೊಳ್ಳಿಯಿದ್ದ ಹಾಗೆ. ತಾಯಿ ಮಾತ್ರ ಜ್ಯೋತಿಯಿದ್ದ ಹಾಗೆ ಯಾಕರೆಂದರೆ-“ ಹಡೆದವ್ವನ ಮಾರೀ ನೋಡಿದರೆ ಮೊಲೆಹಾಲುಂಡಂತೆ” ಹೊಸ ಜೀವ ಬರುತ್ತದೆಂದು ಆಕೆಯ ಅನುಭವದ ಮಾತು. ನಾಲ್ಕು ದಿವಸ ಉಪವಾಸವಿದ್ದು ಊಟಕ್ಕೆ ಕುಳಿತರೂ ಕ್ಷಣದಲ್ಲಿ ಅನ್ನ ಸಾಕಾಗುವದು. ಹಂಬಲಿಸಿ ಹಂಬಲಿಸಿ ತವರುಮನೆಗೆ ಬಂದರೂ ಇರುವುದು ಇನ್ನೆಷ್ಟು ದಿವಸ? ಅದು ಸಾಕಾಗುವುದು. ಹೊಟ್ಟೆ ತುಂಬಿದ ಬಳಿಕ ಹುಗ್ಗಿ ಮುಳ್ಳು ಮುಳ್ಳು. ಆಗ ಮತ್ತೆ ಪ್ರೇಮವು ವಿಪಾಕಗೊಳ್ಳತೊಡಗುವಂತೆ ತೋರುತ್ತದೆ. ಜೀವ ಗಂಡನ ಮನೆಯ ಕಡೆಗೆ ಎಳೆಯುತ್ತದೆ.

ಗಂಜೀಯ ಕುಡಿದರು ಗಂಡನ ಮನಿ ಲೇಸ
ಅಂದಣದ ಮ್ಯಾಲ ಚವುರವ | ಸಾರಿದರ |
ಹಂಗೀನ ತವರ ಮನಿ ಸಾಕ ||

ಹೀಗಾಗುವುದೇನು ಅಸ್ವಾಭಾವಿಕವಲ್ಲ. ಸ್ವಾಭಾವಿಕವೇ ಆಗಿದೆ. ಹೆಣ್ಣು ಬಾಲ್ಯದಲ್ಲಿ ತಾಯ್ತಂದೆಗಳ ಕಣ್ಣರಿಕೆಯಲ್ಲಿಯೂ ಪ್ರಾಯದಲ್ಲಿ ಗಂಡನ ಕಣ್ಣರಿಕೆಯಲ್ಲಿಯೂ ಇರಬೇಕೆನ್ನುವುದು ಸಹಜಧರ್ಮವಾಗಿದ್ದುದರಿಂದ, ತವರುಮನೆಯ ಅಂದಣ-ಚವರಿಗಳ ಐಶ್ವರ್ಯವೂ ಬೇಡವಾಗಿ, ಗಂಜಿ ಕುಡಿಯುವ ಗಂಡನ ಬಳಿಯಿರುವುದೇ ಯೋಗ್ಯವೆಂದು ಅವಳಿಗೆ ತೋರುವದು. ಮಗಳನ್ನು ಗಂಡನ ಮನೆಗೆ ಕಳಿಸಬೇಕಾದರೆ, ಬರಿಗೈಯಿಂದ ಕಳಿಸುವರೇ? ದಾರಿಯ ಬುತ್ತಿ, ಬಣ್ಣಬಣ್ಣದ ವಸ್ತ್ರ ಇಷ್ಟಾದರೂ ಬೇಡವೇ? ಅಷ್ಟು ಅಣಿಗೊಳಿಸಿದ ಗಂಟು ತಂದು ಮಗಳು ಕುಳಿತ ವಾಹನದಲ್ಲಿ ತಾಯಿ ಇರಿಸುವಳು. ಅರ್ಧ ದಾರಿ ದಾಟಿದ ಬಳಿಕವೇ ಅದನ್ನು ಬಿಚ್ಚಿ ನೋಡುವುದು! ಬೇಡಿ ಇಸಗೊಂಡ ವಸ್ತುವಿಗಿಂತ ಬೇಡದೆ ತಾಯಿತ್ತುದು ಮಿಗಿಲಾಗಿರುವುದು. ಆದ್ದರಿಂದಲೇ ದೇವರಿಗೆ ಸಹ ಬೇಡಿದರೆ ಅವನು ಬೇಡಿದ್ದನ್ನೇ ಕೊಡುವನೆಂದೂ ಬೇಡದಿದ್ದರೆ ಬೇಕಾಗಿದದುದೆಲ್ಲವನ್ನು ಕೊಡುವನೆಂದೂ ಹೇಳುತ್ತಾರೆ. ತಾಯಿ ಕಟ್ಟಿಕೊಟ್ಟ ಬುತ್ತಿಯನ್ನು ದಾರಿಯಲ್ಲಿಯ ಭೀಮರತಿ ಹೊಳೆಯ ಸುರಿಯುವುದನ್ನು ಕಣ್ಣಾರೆ ಕಾಣಬಹುದು. ಆಕೆ ಕಟ್ಟಿಕೊಟ್ಟಿದ್ದ ಬುತ್ತಿ ಕಡಿಮೆ ಬೆಲೆಯದಿರಲ್ಲೊಲ್ಲದೇಕೆ, ಆದರೆ ಅದಕ್ಕೆ ಹಿರಿಮೆ, ಸವಿ ಬಂದುದು ಆಕೆಯ ನಲುಮೆಯಿಂದ; ಆ ವಿಷಯವನ್ನು ಗರತಿಯು ಮೈಮರೆತು ಹಾಡಿಬಿಡುವಳು-

ತಾಯಿ ಕಟ್ಟಿದ ಬುತ್ತಿ ತರತರದ ಯಾಲಕ್ಕಿ
ಜರತರದ ಜಾಣಿ ಹಡೆದವ್ವ | ನಿನ ಬುತ್ತಿ |
ಬಿಚ್ಚುಂಡ ಭೀಮರತಿ ಮ್ಯಾಲ ||

ಗಂಡನ ಮನೆ ತಲುಪಿ ಕೆಲವು ದಿನಗಳಾದ ಮೇಲೆ ಮತ್ತೆ ತವರು ಮನೆಯ ದೃಶ್ಯಗಳು ತಲೆಯಲ್ಲಿ ಸುಳಿದು ಕಣ್ಣು ಮುಂದೆ ಕುಣಿಯತೊಡಗುವವು.

ನಿರ್ವ್ಯಾಜ ಪ್ರೇಮ

ಉಪಕಾರಕ್ಕೆ ಅಪಕಾರ ಬಯಸುವ ಅಮಾನುಷತೆಯಿಂದ ಮೇಲೆದ್ದು ಬಂದರೆ, ಉಪಕಾರಕ್ಕೆ ಪ್ರತ್ಯುಪಕಾರ ಬಯಸುವ ಮನುಷ್ಯನು ನಲುಮೆಯ ಪಾಠದಲ್ಲಿ ಆರಂಭದ ವಿದ್ಯಾರ್ಥಿ. ಕಡಬು ಕೊಡುವ ಕೆಲಸವನ್ನು ಕಲ್ಲಕ್ಕ ಮಾಡಿದರೆ, ದೋಸೆ ಕೊಡುವ ಕೆಲಸವನ್ನು ದ್ಯಾಮಕ್ಕ ಮಾಡುವಳು. ಆದ್ದರಿಂದ ಇಷ್ಟು ಪ್ರೇಮ ಅಸಂಸ್ಕೃತರಾದ ಕಲ್ಲಕ್ಕ ದ್ಯಾಮಕ್ಕಳಗಳಲ್ಲಿಯೂ ಕಾಣಸಿಗುತ್ತದೆ. ಅದು ಅಷ್ಟೊಂದು ಹೆಚ್ಚಿನ ತರಗತಿಯದಾಗಲಿಕ್ಕಿಲ್ಲ. ಆದರೂ ತೀರ ಕಡಿಮೆಯದೇನೂ ಅಲ್ಲವೆಂದು ತಿಳಿದರೆ ಸಾಕು. ಪ್ರತ್ಯುಪಕರಾದ ಆಶೆಯಿಲ್ಲದೆ ಮಾಡುವ ಉಪಕಾರವೂ, ಪ್ರತಿಕ್ರಿಯೆಯುಂಟಾದರೂ ಮಾಡುವ ಉಪಾಕಾರವೂ ಬೇರೆಯೇ ಇರುವವು. ಪ್ರೇಮದ ತರಗತಿಗಳನ್ನೇ ಯೇಸು ಕ್ರಿಸ್ತರು ಹೇಳಿರುವದು ಹೇಗೆಂದರೆ-ಮೊದಲನೆಯದಾಗಿ ನೆರೆಯವನನ್ನು ಪ್ರೀತಿಸು. ಎರಡನೆಯದಾಗಿ ವೈರಿಯನ್ನೂ ಪ್ರೀತಿಸು. ಕೊನೆಯದಾಗಿ ಎಡಕೆನ್ನೆಗೆ ಹೊಡೆದವಿಗೆ ಬಲಕೆನ್ನೆಯನ್ನು ಮುಂದೆ ಮಾಡು. ಹಸುಗಳನ್ನು ಕದ್ದೊಯ್ದರವರ ಮನೆಗೆ ಕರುಗಳನ್ನೂ ಬಿಟ್ಟು ಬನ್ನಿರೆನ್ನುವ ಬಸವಣ್ಣನವರ ಲೋಕಪ್ರೇಮವೂ ಅದೇ ಜಾತಿಯದು. ನಾವು ಕಲಿಯಬೇಕಾದುದು ಅಲ್ಲಿಯವರೆಗೆ ಮಾತ್ರ. ತೇರ್ಗಡೆಯಾದವರೆಲ್ಲರೂ ನೂರಕ್ಕೆ ನೂರರಂತೆ ಗುಣಗಳನ್ನು ದೊರಕಿಸಲಾರರು. ನೂರಕ್ಕೆ ನೂರು ಗುಣ ಪಡೆಯದಿದ್ದರೆ ತೇರ್ಗಡೆಯಾದವನೆಂದರೂ ಇನ್ನೂ ವಿದ್ಯಾರ್ಥಿಯೇ ಎನ್ನಬೇಕಾಗುತ್ತದೆ. ನಾವೀಗ ಕಲ್ಲಕ್ಕ-ದ್ಯಾಮಕ್ಕಳ ವರ್ಗಗಳನ್ನು ದಾಟಿದ್ದರೆ ಪ್ರತ್ಯುಪಕಾರದ ಆಶೆಯಿಲ್ಲದೆ ಉಪಕಾರ ಮಾಡುವ ಪಾಠಕಲಿಯಬೇಕಾಗುತ್ತದೆ. ಪ್ರಯೋಜನಕ್ಕಾಗಿ ಪ್ರೇಮಿಸುವುದು ಸಾಮಾನ್ಯ ತರಗತಿಯ ಪಾಠ. ಪ್ರಯೋಜನವಾಗುತ್ತಿದ್ದರೆ ಆಗಬಹುದು. ಆಗುವುದಿಲ್ಲವಾದರೆ ಬಿಡಲೂಬಹುದು. ಪ್ರಯೋಜನದ ಉದ್ದೇಶ ಮಾತ್ರ ಇರದಿದ್ದರೆ ಆ ಪ್ರೇಮವು ನಿರ್ವ್ಯಾಜ ಪ್ರೇಮವೆನಿಸಿಕೊಳ್ಳುತ್ತದೆ. ಆ ಪಾಠವನ್ನು ನಾವು ಕಲಿಯದಿದ್ದರೂ ನಮ್ಮ ತಾಯಂದಿರಾದರೂ ಕಲಿಯುವರೆಂಬುದನ್ನು ಅರಿತುಕೊಳ್ಳುವಾ-

ಸೊಲ್ಲಾಪುರದಣ್ಣಗ ನಿಲ್ಲದಲೆ ಬರಹೇಳ|
ಸೀರ್ಯೊಲ್ಲ ಅವನ ಕುಬಸೊಲ್ಲ | ಅಣ್ಣ |
ಮಾರಿ ನೋಡಂಥ ಮನವಾಗಿ ||

ತಂಗಿಯ ಮಾತಿಗೆ ಮನ್ನಣೆಕೊಟ್ಟು ಅಣ್ಣನು ಬಂದೇ ಬಿಡುತ್ತಾನೆ. ಅವನು ಬಂದಾಗ ಸಹ ಆ ಮಾತಿನ ಪರೀಕ್ಷೆಯಾಗುತ್ತದೆ.

ಕೋಪವ್ಯಾಕಣ್ಣಯ್ಯ ಕೊಳ್ಳೊ ಕಾಲಿಗೆ ನೀರ
ಬಾಯ ತುಂಬುಳವ ಉಗಳಯ್ಯ | ನೀ ಬರುವ |
ದಾರಿಯ ನೋಡಿ ಬಡವಾದೆ ||

ಎನ್ನುವಲ್ಲಿಯೂ-

ಅಣ್ಣ ಬರತಾನಂತ ಅಂಗಳಕ ಥಳಿಕೊಟ್ಟ
ರನ್ನ ಬಚ್ಚಲಕ ಮಣಿಹಾಕಿ | ಕೇಳೇನ |
ಥಣ್ಣಗ್ಹಾರಿಲ್ಲ ತವರವರು ||

ಎನ್ನುವಲ್ಲಿಯೂ ನಿರ್ವ್ಯಾಜ ಪ್ರೇಮವು ಕಂಡುಬರುತ್ತಿದರೂ, ಕೆಳಪ್ರಕೃತಿಯ ಜೀವನದಲ್ಲಿ ಪ್ರಾಣವು ಮುಖ್ಯ ಪಾತ್ರವಾಗಿರುವದರಿಂದ ಕೊಡು-ಕೊರ್ಳಳು ನಡೆದರೇನೆ ಅದಕ್ಕೆ ಸಮಾಧಾನವಾಗುವಂತೆ ತೋರುತ್ತದೆ. ಗರತಿ ಮಗನ ಮದುವೆ ಮಾಡಿದಾಗ, ಆಕೆಯ ಶ್ರೀಮಂತ ಸಂಬಂಧಿಕರು ತಂದ ಉಡುಗೊರೆಗಳು ಗುಡ್ಡದಷ್ಟು ಎತ್ತರವಾಗಿ ಒಟ್ಟಿದ್ದರೂ ಆಕೆಯ ತವರು ಮನೆಯವರ ಉಡುಗೊರೆ ಇನ್ನೂ ಏಕೆ ಬರಲಿಲ್ಲವೆಂದು ಹಸಿದ ಕಣ್ಣುಗಳಿಂದ ನೋಡುತ್ತಿರುತ್ತಾಳೆ.

ನೂಲಾಗ ಕುಂತೀದ ನೂರೆಂಟು ಮಯ್ಯಾಗಿ
ಮತ್ತ ನನ ಜೀವ ಅನುಮಾನ | ಅಣ್ಣನ |
ನೂಲೆಳೆ ಯಾಕ ತಡೆದಾವ ||

ತವರುಮನೆಯ ಉಡುಗೊರೆಯು ನೂಲೆಳೆಯದಿದ್ದರೂ ಅದರ ಮೇಲೆ ಹೊದಿಸಿದ ಪಾವುಡವು ಅಕ್ಕರೆಯ ಕಿನಕಾಬಿನದಿರುತ್ತದೆ. ಅದರ ಮೇಲೆ ಜರದಿಂದ ಮಾಡಿದ ಸುಳುಹಿನ ಕುಸುರು ಕಂಗೊಳಿಸುತ್ತದೆ. ವಸ್ತುವಿನ ಬೆಲೆಗಿಂತ ಅಕ್ಕರೆಯ ಬೆಲೆ ಹೆಚ್ಚು. ಅಕ್ಕರೆಯ ಸ್ಪರ್ಶದಿಂದ ಹೃದಯವು ಪರಿಪಾಕಗೊಳ್ಳುತ್ತದೆ. ಇದನ್ನು ಮಾಡುವವರೆಲ್ಲರೂ ಅರಿತೇ ಮಾಡುವರೆಂದು ಅರ್ಥವಲ್ಲ. ಅದು ಸುಖಕರವೆಂದು ಮಾಡುವೆವು-

ಅಚ್ಚಮಲ್ಲಿಗಿ ಹೂವು ಬಿಚ್ಚಿ ಮಾರುವ ಜಾಣ
ನಾ ಕೊಳುವೆನಿದರ ಬೆಲೆ ಹೇಳೊ | ತಂಗೀಗಿ |
ಸುರುಳಿಗೂದಲದ ಸುಗುಣೀಗಿ ||

ತಂಗಿಯ ಸಲುವಾಗಿ ಅಚ್ಚುಮಲ್ಲಿಗೆ ಹೂ ಕೊಂಡುಕೊಳ್ಳುವಂತೆ ಗೆಳದಿಯ ಸಲುವಾಗಿಯೂ ಆ ಅಕ್ಕರತೆ ತೋರಿಸುವಳು.

ಪಟ್ಟಣಕ ಬಂದಾವ ಬಟ್ಟಬಾರೀಹಣ್ಣ
ಊರಿಗ್ಹೋಗಣ್ಣ ಇವು ಒಯ್ಯೋ | ಆ ಊರ |
ಕಟ್ಟಿಮನಿ ಗೆಳದಿ ಬಸುರ್ಹಾಳ ||

ಬಸುರಿಯಾದ ಗೆಳತಿಗೆ ಬಾರೀಹಣ್ಣು ಕಳಿಸಿದರೆ, ಹಡೆದ ಮೇಲೇನು?

ಗೆಳತಿ ಹಡೆದಾಳಂತ ನಗತ ಬಾಗೀ ಹೊಯ್ದ
ಜರತಾರದಂಗಿ ಮುಯ್ಯೊಯ್ದ | ಗೆಳದೆವ್ವ |
ಜನಕೊಪ್ಪು ಮಗನ ಹಡೆದಾಳ ||

ಕಲ್ಯಾಣ ಚಿಂತನೆ

ಕೃತಿಯಿಲ್ಲದ ಮಾತೇ ಬಾಯಿಪ್ರಸಾದವೆನಿಸುತ್ತದೆ. ಅಂದರೆ ಸುಳ್ಳು ಕೊಡುಗೆಯು ಬೆಲೆಯಿಲ್ಲದೆ ಹೋಗುವಾಗ ಕಲ್ಯಾಣ ಚಿಂತನೆಗೆ ಕವಡಿಯ ಬೆಲೆಯೂ ಬರಲಾರದೆಂದು ವ್ಯವಹಾರ ಕುಶಲರು ಅದರ ಬೆಲೆ ಕಟ್ಟುವುದುಂಟು. ಆದರೆ ನಿಜವಾಗಿಯೂ ಅದು ಕೊಟ್ಟದ್ದಕ್ಕಿಂತ ಹೆಚ್ಚು ಕೊಡ ಮಾಡಿದಂತೆ. ಕಟ್ಟಿದ ಬುತ್ತಿ ಎಷ್ಟು ದಿನ ಸಾಕಾದೀತು? ಪ್ರತ್ಯಕ್ಷ ಕೊಟ್ಟಿದು ಕಟ್ಟಿದ ಬುತ್ತಿಯಂತೆ ಕರಗಿ ಹೋಗುವದು; ಹಳಸಿಯೂ ಹೋಗಬಹುದು; ತಂಗೂಳಾಗಲೂಬಹುದು. ಕಲ್ಯಾಣ ಚಿಂತನೆಯನ್ನು ಹೊತ್ತು ಹೊರಟವನು ಊರಿಗೊಂದು ಮನೆಕಟ್ಟಿದಂತೆ. ಎರಡೂ ಹೊತ್ತು ಬಿಸಿಯೂಟ ಸಿಗುತ್ತದೆ. ಕಲ್ಯಾಣ ಚಿಂತೆಯಲ್ಲಿ ಪ್ರತಿಫಪಾಲಾಪೇಕ್ಷೆ ಇರಲಾರದು. ಆದರೆ ಅದರ ಪ್ರತಿಕ್ರಿಯೆ ಅಂದರೆ ವಿರೋಧವಲ್ಲ. ಅದರಿಂದುಂಟಾದ ಹಿತಚಿಂತನೆಯು ವರ್ಗ-ಗಣಗಳಂತೆ ಗುಣಿಸುತ್ತ ಹೋಗುವದರಲ್ಲಿ ಸಂಶಯವಿಲ್ಲ. ಗರತಿಯು ತವರು ಮನೆಯನ್ನು ಚಿಂತಿಸುವಂತೆ, ಅಕ್ಕನ ಸಂಸಾರವನ್ನೂ ಎಣಿಕೆ ಹಾಕುತ್ತಿರುತ್ತಾಳೆ. ಅಲ್ಲಿ ಅರ್ಣಣನಿಗೆ ಮಕ್ಕಳಾಗಲೆಂದು ಹಾರೈಸಿದರೆ ಇಲ್ಲಿ ತಮ್ಮನ ಮನೆಯಲ್ಲಿ ಹಯನಾಗಲೆಂದು ಕೋರುತ್ತಾಳೆ.

ಅಕ್ಕನ ಊರಾಗ ಮೆಕ್ಕೀಯ ಫಡದಾಗ
ಗಕ್ಕನೆ ಬಾರೊ ಮಳೆರಾಜ | ನನ್ನಕ್ಕ |
ಮಕ್ಕಳ ತಾಯಿ ಮರಗ್ಯಾಳೋ ||

ಅಕ್ಕ ವಿಧವೆಯೆಂದು ತೋರುತ್ತದೆ. ಸಣ್ಣ ಸಣ್ಣ ಮಕ್ಕಳನ್ನು ಕಟ್ಟಿಕೊಂಡಿದ್ದಾಳೆ. ಮತ್ತೆ ಬದುಕು ಮಾಡುವರು ಯಾರೂ ಇಲ್ಲ. ಬಾವಿಯ ನೀರೂ ಇಲ್ಲದಾಗಿವೆ. ಅಕ್ಕನ ಮನೆಯನ್ನು, ಕೊಟ್ಟು ನಡೆಯಿಸಲು ತನಗೆ ಶಕ್ಯವಿಲ್ಲ. ಇಲ್ಲವೆ ಸ್ವಾತಂತ್ರ್ಯವಿರಲಿಕ್ಕಿಲ್ಲ. ಅಂಥ ಪ್ರಸಂಗದಲ್ಲಿ ಅಕ್ಕನ ಸಲುವಾಗಿ ಮಳೆರಾಯನನ್ನು ಪ್ರಾರ್ಥಿಸುವುದೇ ತನಗೆ ನೀಗಬಲ್ಲ ಕರ್ತವ್ಯವೆಂದು ತಂಗಿ ಬಗೆದಿದ್ದರೆ, ಅದು ಒಳ್ಳೆಯ ದಾರಿಯೇ. ಉಂಡುಂಟ್ಟು ಸುಖವಾಗಿರುವ ಅಣ್ಣ ಸಂಸಾರವೂ ಉನ್ನತಿಗೇರಲೆಂದು ಅವಳು ಚಿಂತಸತಕ್ಕವಳೇ.

ಅತ್ತೀಗಿ ಹಡೆಯಲಿ ಹತ್ತೆಮ್ಮಿ ಕರೆಯಲಿ
ಹಿತ್ತಲ ಬಾಳಿ ಚಿಗಿಯಲಿ | ಅತ್ತೆಂದು |
ಅತ್ತಿಗೆಯ ಮಗಳು ಕರೆಯಲಿ ||

ನಿರ್ಜನವಾದ ಪ್ರದೇಶವೊಂದರಲ್ಲಿ ಒಬ್ಬೊಂಟಿಗನಾಗಿದ್ದರೂ ದೇಶಸೇವೆ ಮಾಡುವುದಕ್ಕೆ ಸಾಧ್ಯವಿದೆಯೆಂದೂ, ಅಲ್ಲಿ ಮುಸುಕುಹಾಕಿ ಮಲಗಿಕೊಂಡಿದ್ದು ದೇಶಕ್ಕಾಗಿ ಜನಾಂಗಕ್ಕಾಗಿ ಶುಭಚಿಂತನೆ ಮಾಡಿದರೆ ಸಾಕೆಂದೂ ವಿವೇಕಾನಂದರು ಹೇಳಿದ್ದಾರೆ. ಆ ವಿವೇಕಾನಂದರಿಗೂ ಮೊದಲಿಗಳಾದ ಗರತಿಯಲ್ಲಿಯೇ ಆ ತತ್ವವನ್ನು ಸ್ವಾಮಿಗಳು ಕಲಿತಿರಬಹುದೇನೋ ಎಂಬ ಶಂಕೆಯುಂಟಾಗುತ್ತದೆ. ಯಾವ ಕಾರಣದಿಂದಲೋ ಕಂದಯ್ಯನನ್ನು ಅಗಲುವ ಪ್ರಸಂಗದಲ್ಲಿ ಗರತಿಯು ಆತನ ಕಲ್ಯಾಣವನ್ನು ಚಿಂತಿಸುವ ಬಗೆ ಹೇಗೆಂದರೆ-

ಎಲ್ಲ್ಯಾರೆ ಇರಲೆವ್ವಾ ಹುಲ್ಲಾಗಿ ಬೆಳೆಯಲಿ
ನೆಲ್ಲಿ ಬಡ್ಡ್ಯಾಗಿ ಚಿಗಿಯಲಿ | ಕಂದಯ್ಯ |
ಜಯವಂತನಾಗಿ ಬೆಳೆಯಲಿ ||

ಇರುವೆಯಾಗಿ ಸಕ್ಕರೆ ಮೇದಂತೆ ಕಂದಯ್ಯನು ಹುಲ್ಲಾಗಿ ಎಲ್ಲಿಯಾದರೂ ಬೆಳೆಯಲೆನ್ನುವಳು. ಅವೆಷ್ಟು ಕುತ್ತುಗಳು ಆವರಿಸಿದರೂ ಅವುಗಳಿಂದ ಪಾರಾಗಿ ಬೆಳೆದು ದೊಡ್ಡವನಹಾಗಲೆನ್ನುವ ಅರ್ಥದಲ್ಲಿ ನೆಲ್ಲಿ ಬಡ್ಯಾಗಿ ಚಿಗಿಯಲೆಂದು ಹಾರಯಿಸುವಳು. ಹುಲ್ಲು-ನೆಲ್ಲಿ ಬೊಡ್ಡೆಯಂತೆ ಬೆಳೆದರೂ ಜಯವಂತನಾಗಲೆನ್ನುವ ಮಾತು ಬಹಳ ಹಿರಿಯದು. ಜಯವಂತನಾಗಿರದ ಜೀವನವು ಜೀವನವೇ ಅಲ್ಲ, ಜೀವನ ಬೇಕಿದ್ದರೆ ಜಯವಂತಿಕೆ ದೊರಕಿಸಬೇಕು, ಅದಿಲ್ಲದ ಬಾಳು, ರುಂಡವಿಲ್ಲದ ಮುಂಡದಂತೆ ಬೋಳು.

ತವರ ಮನೆಯಾ ದೀಪ ತೆವರೇರಿ ನೋಡೇನ
ಹತ್ತು ಬಳ್ಹಚ್ಚಿ ಶರಣೆಂದ | ತಮ್ಮದೇರು |
ಜಯವಂತರಾಗಿ ಇರಲೆಂದ ||

ತೆವರೇರಿದರಾದರೂ ಕಾಣಿಸುವ ತವರುಮೆಯ ದೀಪ ಆ ಮನೆ ತನ್ನ ಜನ್ಮಸ್ಥಳ. ಆ ದೀಪದಿಂದಲೇ ತನ್ನ ಬಾಳಿಗೆ ಬೆಳಕು ದೊರೆತಿದೆ. ಜನ್ಮಕ್ಕೆ ಜೀವವಿತ್ತಿದೆ. ಅದಕ್ಕೆ ಶರಣೆನ್ನದೆ ಇನ್ನಾರಿಗೆ ವಂದಿಸಲಿ? ಆ ಮೆಯ ಆ ದೀಪದ ಬೆಳಕಿನಲ್ಲಿ ತಮ್ಮಂದಿರು ಬದುಕಿ ಬಾಳಿ ಬೆಳಗಲೆಂದು ಗರತಿಯು ಹರಕೆ ಕೊಡುತ್ತಾಳೆ.

ನಿಂತ ನೆಲದ ಗುಣ

ನೆಲವು ಕಾಳಿನ ಕಣಜವಾಗಿರುವಂತೆ ಗರತಿಯು ಬಡವಿಯಂತೆ ಕಾಣಿಸಿದರೂ ಭಾಗ್ಯವು ಅವಳ ಉಡಿಯಲ್ಲಿದೆ. ಗಂಡನಿಗೆ, ಮಕ್ಕಳಿಗೆ ಎಷ್ಟು ಉಣಿಸಿದರೂ ಸಾಕಾಗದ ಮನಸ್ಸು. ಸಾಕು ಸಾಕೆಂದರೂ ಇನ್ನಿಷ್ಟು ಹಾಕಿದಾಗಲೇ ಅವಳಿಗೆ ತೃಪ್ತಿ. ತನ್ನ ಅನ್ನಭಾಂಡವು ಬರಿದಾಗಲಾರದೆಂದು ಆಕೆಗೆ ಭರವಸೆಯಿದೆ. ಹುಲಿಯ ಬೇಟೆಯಾಡಬಲ್ಲ ಗಂಡನ ಕೈಯಲ್ಲಿ ಎಳೆಗೂಸು ಕೊಟ್ಟು, ಮುದ್ದು ಕೊಡಹಚ್ಚಿದ ಮಾಟಗಾರಿಕೆಯು ಗರತಿಗಿದ್ದರೂ ಅದು ಆಕೆ ನಿಂತ ನೆಲದಿಂದಲೇ ತಂದುಕೊಂಡ ಗುಣವೆಂದು ಹೇಳಲಿಕ್ಕೆ ಅಡ್ಡಿಯಿಲ್ಲ. ಆಕೆಯ ಸಹನೆ, ಸೌಹಾರ್ದ, ತ್ಯಾಗ, ಇವು ಒಂದೊಂದು ಮಹಾಗುಣದ ಪರ್ವತವೇ ಸರಿ. ಗಂಡನ ಗೆಳೆಯರೆಂದಕೂಡಲೇ ಅವರ ಸತ್ಕಾರಕ್ಕೆ ನಡುಗಟ್ಟಿ ನಿಲ್ಲಬೇಕು. ಮಗನ ಸರಿಯರೆಂದರೆ, ಮಗನಷ್ಟೇ ಮಮತೆಯಿಂದ ಅವರನ್ನು ಕಾಣಬೇಕು. ಕಕ್ಕುಲತೆ ಕಡ್ಡಿಯಷ್ಟೂ ಕಡಿಮೆ ಆಗಕೂಡದು; ನಗೆಯ ಬಗೆಯು ಅರಳಿಯೇ ಇರಬೇಕು; ಮಾತಿನ ಸಿಹಿ ಎಷ್ಟೂ ಕುಂದದಿರಬೇಕು. ಇವನ್ನೆಲ್ಲ ಕೃತ್ರಿಮವಾಗಿ ಅದೆಷ್ಟು ಸಾಧಿಸಲಿಕ್ಕಾದೀತು? ಹಿಡಿ ಬಿತ್ತಿದರೆ ಪಡಿ ಬೆಳೆಸಿ ಕೊಡುವುದು ಭೂಮಿಯ ಗುಣ. ಧಾನ್ಯದ ಕಾಳುಕೊಟ್ಟರೆ ಹೊನ್ನಿನ ಗುಂಡು ಕೊಟ್ಟಂತೆ, ಪ್ರತಿಯಾಗಿ ಸಲ್ಲಿಸುವುದೇ ಭೂಮಿಗೆ ಅಕ್ಕರತೆ. ಕೊಡುವುದಕ್ಕೆ ಅಳತೆಯಿಲ್ಲದಷ್ಟು ಔದಾರ್ಯ ತೋರಿಸಿದರೂ, ಬಿತ್ತುವ ಬೀಜದಷ್ಟಾದರೂ ಕಣ್ಣು ಮುಚ್ಚಿ ತ್ಯಾಗಮಾಡದೆ ಗತ್ಯಂತರವಿಲ್ಲ. ಬಿತ್ತುವ ಬೀಜವಿಲ್ಲದೆ ಬೆಳೆ ಕೊಡು ಎಂದು ಅದೆಷ್ಟು ಪ್ರಾರ್ಥಿಸಿದರೂ ಆ ಪ್ರಾರ್ಥನೆಯನ್ನು ಭೂದೇವಿ ಕಿವಿಯಲ್ಲಿ ಹಾಕಿಕೊಳ್ಳಲಾರಳು. ತಾನಿತ್ತ ವಿವಿಧ ದಾನವನ್ನು ಸ್ವೀಕರಿಸಿದ ಮನುಷ್ಯನು ಅದನ್ನು ಉಪಭೋಗಿಸನಿಂತಾಗ, ಅದರ ನೈವೇದ್ಯ ತನಗಾಗಬೇಕೆಂದು ಭೂದೇವಿ ಆಶಿಸುತ್ತಾಳಂತೆ. ಇವೆಲ್ಲ ಗುಣಗಳೂ ನಡೆದಾಡುವ ಭೂಮಿಯೆನಿಸುವ ಗರತಿಯಲ್ಲಿಯೂ ಇರುವವೆಂದು ಭಾವಿಸಿ ಅದಕ್ಕೆ ತಕ್ಕಂತೆ ವರ್ತಿಸಿದರೆ ಒಳಿತಾಗುವವೆಂದು ಬೇರೆಯಾಗಿ ಹೇಳುವ ಕಾರಣವೇ ಇಲ್ಲ. ಕೊನೆಯದಾಗಿ –“ಕಣ್ಣೆಂಜಲ ಕಾಡೀಗಿ, ಬಾಯೆಂಜಲ ತಂಬುಲ, ಮುಖನೋಡಿ ಹಾಲುಂಡ” ನೆನಪಿಟ್ಟು ಗರತಿಯ ಉಪಕಾರಕ್ಕಾಗಿ ಕೃತಜ್ಞನಾಗಿರುವುದು ಮನುಷ್ಯನ ಕರ್ತವ್ಯವೇ ಆಗಿರುತ್ತದೆಂದು ಹೇಳಬಹುದು.