ಸಾಹಿತ್ಯದ ಅರ್ಥ

ಹಿರಿಯದಿರಲಿ, ಕಿರಿಯದಿರಲಿ ಜೀವನವೆಂದರೆ ನಾಲ್ಕು ಮಾನವನ್ನು ಕುಟ್ಟಿ ಒಮ್ಮೆನವನ್ನು ಮಾಡುವ ಮಾಟವೆಂದೂ, ಪ್ರತಿಯೊಂದು ಜೀವನವು ಅದ್ಭುತವಾದ ರಸಾಯನವೆಂದೂ ಹೇಳುತ್ತಾರೆ. ಜೀವನದಲ್ಲಿ ಅಡಿಗಡಿಗೆ ಘಟಿಸುತ್ತಿರುವ ಹೋರಾಟ, ಉಕ್ಕು, ಅಕ್ಕರತೆ, ಕಾದಾಟ ಮೊದಲಾದ ಪ್ರಸಂಗಗಳಲ್ಲಿ ಹೃದಯದ ಭಾವಗಳು ಮಾತಿನಲ್ಲಿ ಮೂಡಿ ಕೂಡಿಕೊಂಡು ಕಂಗೊಳಿಸಬಹುದು; ಉಸಿರಾಗಿ ನಾದಗೊಳ್ಳಬಹುದು. ಆ ಮಾತಿನ ಕುಡಿ ಉಸುರಿನ ನಾದ ಇವುಗಳಿಗೆ ಸಾಹಿತ್ಯವೆನ್ನುವದಾದರೆ, ಶಬ್ದ ಮಾತ್ರವೂ ಕಾವ್ಯವೆಂದೂ, ಜೀವಮಾತ್ರವೆಲ್ಲ ಕವಿಯೆಂದೂ ಹೇಳುವದು ಸತ್ಯವೇ ಸರಿ. ಶಬ್ದಗಳೆಲ್ಲ ಕಾವ್ಯ, ನುಡಿದವರೆಲ್ಲ ಕವಿಗಳೆಂದರೆ ಸಾಹಿತ್ಯಕ್ಕೆ ಪ್ರತ್ಯೇಕತೆ ಎಲ್ಲಿ ಉಳಿಯುವದು? ಚಿಗಿತುದೆಲ್ಲವು ಗಿಡವೇ ಎನಿಸಿದರೂ ಕೆಲವೊಂದಕ್ಕೆ ಎಲೆ, ಕೆಲವೊಂದಕ್ಕೆ ಹೂ, ಕೆಲವೊಂದಕ್ಕೆ ಕಾಯಿ ಅನ್ನುತ್ತಾರಷ್ಟೇ. ಎಲೆ ತೊಪ್ಪಲುಗಳನ್ನು ಮೀರಿ ಹೂವಿನ ಹರಿಬನ್ನು ದಾಟಿ, ಕಾಯಿ ಹಣ್ಣುಗಳು ಗಿಡದ ಸಾರ್ಥಕ ಬೆಳವಣಿಗೆ ಎನಿಸುವಂತೆ, ಅನುಭವ, ಬಳಕೆ, ನಿಂತ ನೆಲೆ ಇವುಗಳಿಂದ ವೈಶಿಷ್ಟ್ಯ ಪಡೆದ ಶಬ್ದವು ಸಾಹಿತ್ಯವೆನಿಸುತ್ತದೆ. ವಿಶಿಷ್ಟ ಸಾಮಾನ್ಯ ಜನರೆಲ್ಲರಲ್ಲಿಯೂ ಅವೆಷ್ಟೋ ಶಬ್ದಗಳು ವಿಶಿಷ್ಟವಾಗಿ ಚಲಾವಣೆಯಾಗುತ್ತಿರುತ್ತವೆ. ಸಾಮಾನ್ಯರ ವಿಶಿಷ್ಟ ಮಾತುಗಳು ಜನವಾಣಿಯೆನಿಸಿ ಬೆಳೆದು ಸಂಸ್ಕಾರಗೊಂಡು ಪ್ರೌಢಾವಸ್ಥೆಗೆ ಬಂದರೆ, ಕವಿವಾಣಿ ಎನ್ನಿಸಿಕೊಳ್ಳುವವು. ಅಂತೆಯೇ ಜನವಾಣಿ ಬೇರು ಎಂದೂ ಕವಿವಾಣಿ ಹೂವು ಎಂದೂ ಹೇಳುತ್ತಾರೆ. ಹೂವಿಗಿರುವ ಚಲುವು, ಬಣ್ಣ, ಕಂಪು, ಸಾರ್ಥಕತೆ ಬೇರಿನಲ್ಲಿ ಎಷ್ಟೂ ಕಂಡುಬರುವದಿಲ್ಲವಾದರೂ ಅವುಗಳನ್ನು ಪಡಿ ಮೂಡಿಸುವ ರಸವನ್ನು ಸುರಿಯುವ ಕೆಲಸವನ್ನು ಬೇರು ನಿರಂತರ ಮಾಡುತ್ತಿರುತ್ತದೆ.

ಜನಪದ ಸಾಹಿತ್ಯದ ಪ್ರಯೋಜನ

ಸುಗ್ಗಿಯನ್ನದೆ, ಬೇಸಗೆಯನ್ನದೆ ಬೇರು ತನ್ನ ಸಹಜ ಕರ್ಮವನ್ನು ಸಾಗಿಸುತ್ತಲೇ ಇರುತ್ತದೆ. ಹಂಗಾಮು ನೋಡಿ ಹಣ್ಣಿನ ಗಿಡಗಳಿಗೆ ನೀರು ಸುರಿಯುವ ಚತುರ ತೋಟಗಾರನಂತೆ, ಜನಾಂಗವು ಜನಪದ ಸಾಹಿತ್ಯವನ್ನು ತನ್ನ ಪ್ರಯೋಜನ ಪ್ರಸಂಗಗಳಲ್ಲಿ ಕಾಪಾಡಿಕೊಳ್ಳುವ, ಬೆಳೆಯಿಸಿಕೊಳ್ಳುವ ಹಾಗೂ ಸಾರ್ಥಕಗೊಳಿಸುವ ಕೆಲಸವನ್ನು ಕೈಕೊಳ್ಳುವಂತೆ ತೋರುತ್ತದೆ. ನಾಗರಿಕತೆಯ ಕಾಲದಲ್ಲಿ ಇತಿಹಾಸ, ಪುರಾಣಗಳ ಸಾರವನ್ನು ಜನದ ಮಟ್ಟಕ್ಕಿಳಿಸುವದೂ ಚರಿತ್ರೆಯಲ್ಲಿ ನಡೆದ, ಮರೆಯಲಾಗದ ಸಂಗತಿಗಳನ್ನು ಜನರ ನೆನಪಿನಲ್ಲಿ ನಿಲ್ಲಿಸುವದೂ, ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಮನಮನೆಗೆ ಬೀರುವದೂ ಈ ಜನಪದ ಸಾಹಿತ್ಯದ ಕೆಲಸ. ಇದು ಉಪಯೋಗಿತಾ ವಾದದ ದೃಷ್ಟಿಯಿಂದ ಕಂಡ ಪ್ರಯೋಜನ. ಆದರೆ ಇದಕ್ಕಿಂತಲೂ ಮಿಗಿಲಾದ ಪ್ರಯೋಜನವು ಅದರ ಸಹಜತೆಯಲ್ಲಿದೆ. ಹಾಡು ಹಿಗ್ಗಿನ ಪರಿಣಾಮ; ಕಥೆ ಪರಿತೃಪ್ತಿಯು ಲಕ್ಷಣ; ಬೀಸು ಕುಟ್ಟುವಂಥ ದುಡಿಮೆಯ ಸಮಯದಲ್ಲಿ ಹೆಣ್ಣುಮಕ್ಕಳ ಬಾಯಿಂದ ಹಾಡು ಸೂಸಿ ಬರುತ್ತದೆ, ನಾಲ್ಕು ಮಂದಿ ಕೂಡಿದಲ್ಲಿ ಕತೆ ಹೊರಬೀಳುತ್ತದೆ. ನೇಗಿಲು ಹೊಡೆಯುವಾಗ, ಬಂಡಿ ನಡೆಸುವಾಗ, ಹುಟ್ಟು ಹಾಕುವಾಗ ಹಾಡು ಹೊರಹೊಮ್ಮುತ್ತಿರುತ್ತದೆ. ಮಕ್ಕಳು ಅಳುವಾಗ ರಂಬಿಸುವ ಜೋಗುಳವೂ ಹಾಡೇ. ಸತ್ತಾಗ ಅಳುವದು ಕೂಡಾ ಹಾಡಿಹಾಡಿಕೊಂಡೇ. ನಕ್ಕು ನಗಿಸುವದಕ್ಕೂ, ಕಟ್ಟಾಡಿಸಿ ನಗಿಸುವದಕ್ಕೂ, ರಂಬಿಸಿ ನಗಿಸುವದಕ್ಕೂ ಹಾಡೇ ಬೇಕು. ಹಾಡು ಪದ್ಯ ಇರಬಹುದು, ಗದ್ಯ ಇರಬಹುದು. ಹೀಗೊಬ್ಬ ಅಯ್ಯಿನಿದ್ದ ; ಅಯ್ಯನ ಜೋಳಿಗೆಯಲ್ಲಿ ಹೋಳಿಗೆಯಿದ್ದವು. ಹೂಂ ಅಂದರೆ ಅವನು ಕೊಡುವನೇ? ಗಪ್ಪು ಕುಳಿತರೆ ಕೊಡುವನೇ? ಕಣ್ಣು ಬಡಿದರೆ ಕೊಡುವನೇ? ನಕ್ಕರೆ ಕೊಡುವನೇ? ಹೀಗೆ ನಸಿಗುವವರೆಗೆ ಹೊಸದೆ ಕಥೆ ಮಕ್ಕಳಿಗಾಗಿ ಸಾಹಿತ್ಯವಲ್ಲವೇ? ಮದುವೆ, ಶೋಬನದಂಥ ಸಂತೋಷ ಪ್ರಸಂಗಗಳಲ್ಲಿ ಸಾಹಿತ್ಯಗೋಷ್ಠಿ ಸಾಗಿದಂತೆ, ಹತ್ತಿ ಬಿಡಿಸುವಾಗಲೂ ಹೊದಲ್ಲಿ ಕಳೆ ಕೀಳುವಾಗಲೂ ಕಾವ್ಯಗೋಷ್ಠಿ ಸಾಗಿರುತ್ತದೆ. ಹೀಗೆ ಜೀವನಕ್ಕಾಗಿ ಸಾಹಿತ್ಯವೂ, ಸಾಹಿತ್ಯದಿಂದ ಜೀವನವೂ ಕಳೆಗೊಂಡು ನಿಲ್ಲುತ್ತವೆ. ಸಾಹಿತ್ಯವು ಜೀವನದ ಪ್ರತಿಭಾಜಾತವಾಗಿ, ಜೀವನವು ಸಾಹಿತ್ಯದ ಪ್ರತಿಬಿಂಬ ದರ್ಪಣವಾಗಿ ಏಕರೂಪವಾಗಿ ನಿಲ್ಲುವ ಪ್ರಯೋಜನವು ಅಷ್ಟಿಷ್ಟಲ್ಲ. ದುಡಿದು, ಸೋತು, ಮನೆಗೆ ಹೊರಟ ಕೋಮಲೆಯನ್ನೂ ಆಕೆಯ ತೃಪ್ತ ಜೀವನವನ್ನೂ ಬಿಂಬಿಸುವ ಕಳೆ ಮುಖವನ್ನೂ ಕಂಡು ಸಹೃದಯನಾದ ಕವಿಯಲ್ಲಿ ಸಹಜವಾಗಿ-

ಬಂದಾಳ ಬಾಲೀ ಬಂದಾಳ |
ಹೊಲದಿಂದ ಬಂದಾಳ || ೧ ||
ತಲಿಮ್ಯಾಲ ಹೊರಿ ಒಂದ
ಬಗಲಾಗ ಕೂಸೊಂದ
ಆಡೊಂದು ಮುಂದ ಮುಂದ
ಮರಿಯೊಂದು ಹಿಂದ ಹಿಂದ || ೨ ||

ಈ ಬಗೆಯ ಹಾಡು ಉಕ್ಕಿ ಬರುವದರ ಮೇಲಿಂದ ಜನಪದ ಸಾಹಿತ್ಯದ ಪ್ರಯೋಜನವನ್ನು ಅಳೆಯಬಹುದು.

ಬೇರಿನಿಂದ ಹೂವಿಗೆ

ನಮ್ಮ ಜೀವನವೃಕ್ಷವು ಗೀತೆಯಲ್ಲಿ ವರ್ಣಿತವಾದ ಅಶ್ವತ್ಥವೃಕ್ಷದಂತೆ ಔನ್ನತ್ಯದಲ್ಲಿ ಬೇರುಗಳುಳ್ಳದ್ದಾಗಿಯೂ, ಕೆಳಗಡೆಯಲ್ಲಿ ಎಲೆ ರೆಂಬೆಗಳುಳ್ಳದ್ದಾಗಿಯೂ ಇರಬಹುದೆಂದು ತೋರುತ್ತದೆ. ಔನ್ನತ್ಯದ ಗೌರಿಶಂಕರ-ಧವಲಗಿರಿಗಳಿಂದ ಜೀವನವೃಕ್ಷದ ಬೇರು ಪರಿಪಕ್ವವಾದ ರಸವನ್ನೂ, ಪರಿಪುಷ್ಟವಾದ ಸತ್ವವನ್ನೂ ತಂದೊಪ್ಪಿಸಿ, ಚಿಗುರೆಲೆ ಚಿಗಿತ ಮಾತ್ರಕ್ಕೆ ಬಿಡದೆ ಕವಿವಾಣಿಯ ಹೂವನ್ನು ಅರಳಿಸಿ ಅದರಲ್ಲಿ ಮಿಡಿಗಾಯಿಗಳನ್ನು ಪ್ರಕಟಗೊಳಿಸುತ್ತದೆ. ಇದೇ ಮಹಾಕವಿಯ ಜೀವನಸಾಹಿತ್ಯದ ಸಂತಾನವಾದ ಕುಲ ಅಥವಾ ಜನಾಂಗದ ಜನ್ಮ. ಇನ್ನೊಂದು ವಿಧದಲ್ಲಿ ಜನವಾಣಿ ಬತ್ತಲಾರದ ಝರಿ, ತೊರೆ; ಕವಿವಾಣಿ ಕಾರಂಜಿ. ಝರಿ, ತೊರೆಗೆ ಸವಿಯದ ಸಂಪತ್ತಿದೆ; ಸರಿಯದ, ಸಿರಿಯಿದೆ. ಹೃದಯ ಪ್ರಮುಖವಾದ ಜನಪದವು ಹೃದಯ ತುಂಬಿ ಹಾಡಿ, ಮನಕರುಗುವಂತೆ ಮಾತಾಡಿ, ಹೃದಯಕ್ಕೆ ತಲುಪಿಸುವ ಶಕ್ತಿಯನ್ನೂ ಮನಕ್ಕೆ ಮುಟ್ಟುವ ಯುಕ್ತಿಯನ್ನೂ ಹಾಡು ನುಡಿಗಳಲ್ಲಿ ಹುದುಗಿಸಿದೆ, ಬಣಗು ಮಾತಾಡದ ಜೀವನನಿಷ್ಠೆಯ ಘೋರ ತಪೋನಿಷ್ಠವಾದ ಜನಪದ ವಾಣಿಯಲ್ಲಿ ಸತ್ವವು ಸ್ಥಿರವಾಗಿದೆ. ಹಾಡಿನದಲ್ಲಾಗಲಿ, ನುಡಿಯಲ್ಲಾಗಲಿ ಮಾತನ್ನು ಜೋಕೆಯಾಗಿ ಬಳಸುವ ಕಕ್ಕುಲತೆಯ ಕಾಂತೆಯರ ಪ್ರಭಾವದಿಂದ ಜನವಾಣಿಗೆ ಅದೊಂದು ತೇಜವುಂಟಾಗಿರುತ್ತದೆ. ಅಪರಾಪ್ರಕೃತಿಯಲ್ಲಿ, ಶುದ್ಧವಾದ ಸತ್ವಯುತವಾದ, ಕಾಂತಿಯುತವಾದ ಜೀವನ ನಡೆಸಿದ ಜನಪದ ಋಷಿಗಳ ಉಸಿರು ಜಾನಪದ ವೇದವಾಗಿದೆ. ಜಾನಪದ ವೇದಕ್ಕೆ ಮಂತ್ರಶಕ್ತಿಯಿದೆ. ಕಿರಿಯದರಲ್ಲಿ ಹಿರಿಯರ್ಥವನ್ನು ಧರಿಸುವ ಸಾಮರ್ಥ್ಯವಿದೆ. ಎದೆಯ ಬಗೆಗಳನ್ನೆಲ್ಲ ಪಡಿಮೂಡಿಸುವ ಕನ್ನಡಿಯೇ ಜನವಾಣಿಯೆಂದರೆ ಅತಿಶಯದ ಮಾತಾಗದು. ಅದರಲ್ಲಿ ಪ್ರಸಾದವಿದೆ; ಗಾಂಭೀರ್ಯವಿದೆ. ಮನಕ್ಕೆ ನೇರವಾದ ಅರ್ಥವನ್ನೊಯ್ಯುವ ಚಾತುರ್ಯವಿದೆ. ಸ್ವಭಾವೋಕ್ತಿ ಪ್ರಾಣವಾಗಿದೆ. ನಿರಲಂಕಾರ ಸುಂದರವಾಗಿದೆ. ಅದು ಅಲಂಕಾರವನ್ನು ತೋರಗೊಡದಂತೆ ಅಲಂಕಾರವಾಗಿದೆ ಎಂದು ಹೇಳುವುದರಲ್ಲಿ ಸುಳ್ಳು ಬೆರೆತಿರಲಾರದು. ಇನ್ನು, ಛಂದಸ್ಸಿನ ಬ್ರಹ್ಮ ದೇವರು ಹೇಳುವ ಪ್ರಸಾದ ಪ್ರಕಾರಗಳೆಲ್ಲ ಜನವಾಣಿಯಲ್ಲಿ ಕಾಣಸಿಗುವವು. ಜನ ಸಾಮಾನ್ಯದ ಹೃದಯದೊಳಗಿನ ಸುಖದ ಕನಸು ತೋರಿಸಬೇಕೆಂದು ಪ್ರಜಾಪ್ರಭುತ್ವದ ಪಕ್ಷಪಾತಿಗಳಾದ ನಮ್ಮನ್ನು ಜನವಾಣಿಯು ನಿತ್ಯವೂ ನಿರಂತರವೂ ಕೂಗುತ್ತಿದೆ. ಈಗ ಕಣ್ಣು ತೆರೆದ ನಾರೀ ಜನ ಪಕ್ಷಪಾತಿಗಳಿಗೆ ಪರಂಪರವಾಗಿ ಬಂದ ಸ್ತ್ರೀ ಸಾಹಿತ್ಯವು ಜನವಾಣಿಯಲ್ಲಿ ವಿಪುಲವಾಗಿ ಕಂಡುಬರುವದಿಲ್ಲವೇ? ಬಡತನ ಬಾಳೂ ಕಾವ್ಯಕ್ಕೆ ವಸ್ತುವಾಗಬಲ್ಲದೆಂದು ಜನವಾಣಿಯು ಸ್ಪಷ್ಟಪಡಿಸುತ್ತದೆ. ರಾಜರ ವಿಜಯ, ಸಿರಿವಂತರ ಸಿಂಗಾರ ಇವುಗಳಂತೆ ಕಂಗಾಲರ ಬೇನೆ ಬೇಗೆಗಳೂ, ನಲುಮೆ ನಗೆಯಾಟಗಳೂ ಕಾವ್ಯದಲ್ಲಿ ಕಂಗೊಳಿಸಬಹುದೆಂದು ಜನಪದ ಸಾಹಿತ್ಯವು ಡಂಗುರಿಸುತ್ತದೆ.

ಜನಪದ ಸಾಹಿತ್ಯದಲ್ಲಿ ಕಂಡುಬರುವ ಕುಂದು

ನಾಗರಿಕರಾದ ಪಂಡಿತರಿಗೆ ಜನಪದ ಸಾಹಿತ್ಯದಲ್ಲಿ ವ್ಯಾಕರಣ ಛಂದಸ್ಸುಗಳ ದೃಷ್ಟಿಯಿಂದ ನೂರು ತಪ್ಪುಗಳು ಕಂಡುಬರುವದು ಸಹಜವೇ ಆಗಿದೆ. ವ್ಯಾಕರಣದ ನಿಯಮಗಳನ್ನೂ, ಛಂದಸ್ಸಿನ ಬಂಧಗಳನ್ನೂ ಬಲ್ಲವರು ಅವು ಕೃತಿಗಳಲ್ಲಿ ಕಾಣಿಸಲೆಂದು ಹಾರೈಸುವುದು ವಾಸ್ತವಿಕವಾಗಿದೆ. ಅವಿಲ್ಲದೆ ಕೃತಿಗೆ ಸಂಪೂರ್ಣತೆ ಬರಲೇಬಾರದೆಂದು ಅವರ ಅಭಿಪ್ರಾಯವಿರುವದೂ ಅರಿದಲ್ಲ. “ಯಾವುದೊಂದು ವಿಚಾರವನ್ನು ಹೇಳುವಾಗ ಉಂಟಾಗುವ ಕಂಪನವೆ ಕವಿತೆ”ಯೆನ್ನುವದಾದರೆ ಅದರಲ್ಲಿ ಇಂದ್ರಿಯಶಕ್ತಿ ಭಾವನಾಶಕ್ತಿ ಇವುಗಳಿಂದ ಉಂಟಾದ ಜೀವನಕೃತಿಯೇ ಕವಿತೆಯನ್ನಲಿಕ್ಕೆ ಅಡ್ಡಿ ತೋರುವದಿಲ್ಲ. ಕಂಡದ್ದನ್ನು ಕಂಡಂತೆ ಚಿತ್ರಿಸುವದು ಇಂದ್ರಿಯ ಶಕ್ತಿ; ವಿಷಯಗಳನ್ನು ಮನಸ್ಸಿನಲ್ಲಿ ಪ್ರತ್ಯಕ್ಷ ಅವತಾರವೆನ್ನುವಂತೆ ಮಾಡುವದು ಭಾವನಾಶಕ್ತಿ. ಕವಿತೆಗೆ ಭಾವನಶಕ್ತಿಯಿಂದ ಅಲಂಕಾರ ನವರಸಗಳು ಕಾಣಿಸಿಕೊಳ್ಳುವವು. ಇಂದ್ರಿಯ ಶಕ್ತಿಯು ವ್ಯಾಕರಣ ಛಂದಸ್ಸುಗಳಿಗೆ ವಶವರ್ತಿಯಾಗಿರುವದು. ವ್ಯಾಕರಣ ಛಂದಸ್ಸುಗಳಿದ್ದು, ಅಲಂಕಾರ ನವರಸಗಳು ಕಂಗೊಳಿಸದಿದ್ದರೆ ಕವಿತೆ ಬರಿಯ ಗಾಳಿಯೆನಿಸಬಹುದುದಾಗಿದೆ. ಈ ವಿಚಾರಸಣಿಯಲ್ಲಿ ಜನಪದ ಸಾಹಿತ್ಯವು ಗಾಳಿಯ ಬುರುಡೆಯಾಗಿದ್ದು, ಅದು ವ್ಯಾಕರಣ ಛಂದಸ್ಸುಗಳ ಮೈಕಟ್ಟು ಕಟ್ಟಿಕೊಳ್ಳಬೇಕಾದುದು ಅನಿವಾರ್ಯವೆಂದೂ ಮೈಕಟ್ಟು ಇಲ್ಲದಿರುವವರಿಗೆ ಅದೊಂದು ತುಂಬಿಬಾರದ ಕುಂದೆಂದೂ ಹೇಳುವದು ಕ್ರಮಪ್ರಾಪ್ತವಾಗಿದೆ. ಆದರೆ ಜನಪದ ಸಾಹಿತ್ಯಕ್ಕೆ ನಾಗರಿಕತೆಯ ಕಟ್ಟುಪಾಡಿಗೆ ಒಳಗಾದ ವೇಷ ಭೂಷಣಗಳು ಇರಲಿಕ್ಕಿಲ್ಲವಾದರೂ, ಅದಕ್ಕೆ ನೈಸರ್ಗಿಕವಾದ ದೇಹಬಂಧವೂ, ಲಲಿತವಾದ ನಡಿಗೆಯೂ ಮನಸ್ಸೆಳೆಯುವ ನಾದವೂ ಇವೆಯೆನ್ನುವದು ಸುಳ್ಳಲ್ಲ.

ಆನಿ ನಡಿದಾಂಗ ಮಾಡಿ ಸಿಂಗಾರ |
ಮೈಮ್ಯಾಲ ಬಂಗಾರ | ಬಿದ್ದಾಂಗ ಬೆಳಕ ||
ಸಿದ್ದು ಶಿವಲಿಂಗ ಹಾಡುವದು ವರಸಿ
ದನಿ ಎತ್ತರಿಸಿ | ನುಡಿ ಕತ್ತರಿಸಿ
ಸುರದಾಂಗ ಮುತ್ತ ||

ಎನ್ನುವಲ್ಲಿಯೂ,

ಉರುಳ್ಯಾಡತಾಳ ಬಲು ಹೊರಳ್ಯಾಡತಾಳ ತಳಮಳಸಿ ತಾಳದ ಸಂಕಟಾ |
ಖಬರಿಲ್ಲ ಆಕಿಗಿ ಎಳ್ಳಷ್ಟಾ |
ಮಾತಾಡಸ್ತಾನ ಗಾಳಿ ಬೀಸ್ತಾನ ಕೈ ಹಿಡದೆಬ್ಬಸ್ತಾನ ಮಾಡಿ ಕೂಗ್ಯಾಟ |
ಅಭಿಮನ್ಯು ನೋಡಿದಾ ಕಣ್ಮುಟ್ಟಾ ||
ಹಾಸಗೊಂಡುಮ್ಯಾಗ ಹೊಚಗೊಂಡು
ಮಾರಿ ಮುಚಗೊಂಡು ಕೃಷ್ಣ ಮಲಗಿದಾ ||

ಎನ್ನುವಲ್ಲಿಯೂ,

ಏನು ಮುಂಗಾರಿ ಮಳಿ ಹಾಂಗ ಸಿಡಲ್‌
ಬಿದ್ದಿತು ಖಡಲ್‌
ಎದಿ ಅಂತು ಧಡಲ್‌ ಆಗಿ ನಿಂತ ಮೂಕಾ ||

ಎನ್ನುವಲ್ಲಿಯೂ,

ಊರು ಉಪಕಾರವರಿಯದು
ಹೆಣಾ ಸಿಂಗಾವರಿಯದು |

ಎನ್ನುವ ಗಾದೆಯಲ್ಲಿಯೂ

ಹಸಿದು ಹಣ್ಣು ಬೇಡಿದರೆ
ಕಿಸಿದು ಕಣ್ಣು ತೋರಿದರು !

ಎನ್ನುವ ಅನುಭವದಲ್ಲಿಯೂ, ಛಂದಸ್ಸಿಲ್ಲವೆಂದು ಯಾರು ಹೇಳುವ ಧೈರ್ಯ ಮಾಡುವರು? ವ್ಯಾಕರಣ ನಿಯಮಗಳನ್ನು ಅನುಸರಿಸಿ ಶಬ್ದದೋಷ ವಾಕ್ಯದೋಷಗಳು ಇರುತ್ತಿದ್ದರೂ, ಅರ್ಥದೋಷವಾಗುತ್ತಿರುವುದು ಕಂಡುಬರುವುದಿಲ್ಲ. ಅವರಿಂದ ಅರ್ಥದೋಷಕ್ಕಿಂತ ಅರ್ಥ ಸ್ಪಷ್ಟತೆಯು ಇನ್ನೂ ಹೆಚ್ಚಾಗುತ್ತಿರುವದನ್ನು ಮನಗಾಣಬಹುದು.

ಜನಪದ ಸಾಹಿತ್ಯವು ಬಹುಸಂಖ್ಯಾತರು ಬಳಸುವ ಜೀವಂತ ಸಾಹಿತ್ಯವಾಗಿರುವುದರಿಂದ ಅದನ್ನು ಚೆನ್ನಾಗಿ ಅಭ್ಯಸಿಸಿ ಅಚ್ಚಗನ್ನಡದ ಛಂದಸ್ಸನ್ನೂ, ಕೆಚ್ಚುಗನ್ನಡದ ವ್ಯಾಕರಣವನ್ನೂ ಬರೆಯಬಹುದಾಗಿದೆ. ಅದರಿಂದ ನಮ್ಮ ಹೊಸಗನ್ನಡಕ್ಕೆ ಜೀವಕಳೆ ತುಂಬಲಿಕ್ಕೆ ಸಾಧ್ಯವಿದೆ. ಯಾಕೆಂದರೆ ಈಗಾಗಲೇ ಜನಪದ ಸಾಹಿತ್ಯದಲ್ಲಿ ಬಳಸುವ ಕನ್ನಡಕ್ಕೆ ನೇರವಾದ ಅರ್ಥಕ್ಕೆ ತಲುಪಿಸುವ ಬಲ್ಪೂ, ಜೀವನದ ಸರ್ವ ಭಾವಗಳನ್ನೂ ರೇಖಿಸುವ ಬಣ್ಣವೂ, ಯೋಗ್ಯವಾಗಿ ಬಳಕೆ ಮಾಡುವ ಜೋಕೆಯೂ ಉಂಟಾಗಿರುವದಲ್ಲದೆ ಕನ್ನಡವು ಮಂತ್ರಶಕ್ತಿ ಪಡೆದ ಸಂಸಾರ ವೇದವಾಗಿದೆ. ಅಂಥ ಕನ್ನಡದ ವ್ಯಾಕರಣ-ಛಂದಸ್ಸು ಹಿಡಿನುಡಿಗಳೇ ಮೊದಲಾದವುಗಳನ್ನು ಆರಿಸಿಕೊಂಡು ಅನುಸರಿಸಬೇಕಾದುದು ಅನಿವಾರ್ಯವಾಗಿರುವಾಗ ಅದರ ಕುಂದನ್ನೆಣಿಸುತ್ತ ಕುಳ್ಳಿರುವದು ತಪ್ಪಾದೀತು.

ಹೊಸಗನ್ನಡ ಸಾಹಿತ್ಯಕ್ಕೆ ಪೌಷ್ಠಿಕ

ಕನ್ನಡವು ಹೊಸ ರೀತಿಯಲ್ಲಿ ಬೆಳೆಯಲಿರುವ ಸಂಧಿಕಾಲವಿದು. ರಾಜ್ಯಾಂಗ ರಚನೆಯ ಬದಲಾವಣೆ, ಸಮಾಜರಚನೆಯ ಮಾರ್ಪಾಡು, ಜೀವನಾಭಿರುಚಿಯ ರೂಪಾಂತರ ಆಗುತ್ತಿರುವ ಕಾಲದಲ್ಲಿ ಜೀವನವು ಮೊದಲಿನಂತೆ ಉಳಿಯಲಾರದು. ಅದರಂತೆ ಜೀವನದ ಭಾಷೆಯಾದ ಸಾಹಿತ್ಯವೂ ಮೊದಲಿನಂತೆ ಉಳಿದರೆ ಸಾಗದೆನ್ನುವುದನ್ನು ಲಕ್ಷ್ಯದಲ್ಲಿರಿಸಿಕೊಂಡರೆ ಸಾಹಿತ್ಯದ ತವರೆನಿಸಿದ ಜನವಾಣಿಗೆ ನಾವೆಲ್ಲರೂ ಶರಣೆನ್ನಬೇಕಾಗಿದೆ. ಜನವಾಣಿಯ ಹಾಲು ಕುಡಿದೇ ಹೊಸ ಸಾಹಿತ್ಯವು ಪರಿಪುಷ್ಟವಾಗಬೇಕಾಗಿದೆ. ಮಂತ್ರಶಕ್ತಿಯ ಜನವಾಣಿಯಲ್ಲಿಯೇ ನಮ್ಮೆದೆಯ ಕೂಗನ್ನು ಮುಗಿಲಿಗೇರಿಸಬೇಕಾಗಿದೆ. ಅರ್ಥಪೂರ್ಣವಾದ ಜನವಾಣಿಯಲ್ಲಿ ಮಾತಾಡಿಯೇ ನಾಡಿನ ಅರ್ಥ ಪರಂಪರೆಯಲ್ಲಿ ಸ್ವಾರಸ್ಯವನ್ನು ತುಂಬಬೇಕಾಗಿದೆ. ಸಾಹಿತ್ಯದ ಸರ್ವ ಲಕ್ಷಣಗಳನ್ನು ಒಳಗೊಂಡ ಮೂರೇ ಲಕ್ಷಣಗಳೆಂದು ಹೇಳಿಸಿಕೊಳ್ಳುವ ಭಾವದ ಸೊಗಸು, ಮಾತಿನ ಸೊಗಸು, ರೀತಿಯ ಸೊಗಸು ಇವುಗಳನ್ನು ಜನಪದ ಸಾಹಿತ್ಯದ ಅನಂತ ಆಕಾಶದೊಳಗೆ ಗುರುತಿಸಿಕೊಳ್ಳಬೇಕಾದ ಕೆಲಸವಿದೆ. ಆ ಮೂರು ಲಕ್ಷಣಗಳಿಗೆ ಉದಾಹರಣೆಗಳನ್ನು ಜನಪದ ಸಾಹಿತ್ಯದಿಂದ ಎತ್ತಿ ತೋರಿಸುವೆನು.

ಮುಂದೇನು ಕೊಟ್ಟೀತ ಮನವೇನು ದಣಿದೀತ
ಮುಂಜಾನದಾನ ಗಿರಿಮಲ್ಲ | ಕೊಟ್ಟರ
ಮನ ತುಂಬಿ | ನಮ್ಮ ಮನೆ ತುಂಬಿ ||

ಇದರೊಳಗಿನ ಭಾವದ ಸೊಗಸನ್ನು ಹೇಳುವ ಕಾರಣವೇ ಇಲ್ಲ. ಈ ತ್ರಿಪದಿಯಲ್ಲಿ ಅರ್ಥವಾಗದ ಕಠಿಣ ಶಬ್ದವೊಂದೂ ಇಲ್ಲ. ವ್ಯಾಕರಣದ ತಪ್ಪು, ಭಾವಾರ್ಥಗಳಿಗೆ ತಡೆಯಾಗುವದಿಲ್ಲ. ಪುರುಷ-ಸ್ತ್ರೀಯರೆಂದು ಹೇಳುವ ಮಂದಿಯೆಂಬ ಶಬ್ದವನ್ನು ಉಪಯೋಗಿಸಿದ್ದರಿಂದ ಕೊಟ್ಟೀತು ಎಂಬ ಕ್ರಿಯಾಪದವೂ, ದಣಿದೀತು ಎಂಬ ಕ್ರಿಯಾಪದವೂ ಸಮಾನವಾದ ಪುರುಷ ಲಿಂಗಗಳಲ್ಲಿ ಇರಿಸಲು ಸಾಧ್ಯವಾಯಿತು. ಮಂದಿಯೂ ನಪುಂಸಕಲಿಂಗ; ಮನವೂ ನಪುಂಸಕ ಲಿಂಗ, ಅವುಗಳಲ್ಲಿ ಕೊಡಕೊಳ್ಳುವ ವ್ಯವಹಾರ ನಡೆದರೆ ಪ್ರಯೋಜನವಾಗದು. ಪುಲ್ಲಿಂಗ ಸ್ವರೂಪನಾದ ಗಿರಿಮಲ್ಲ ಕೊಟ್ಟರೆ ಮಾತ್ರ ಮನ-ಮನೆಗಳಿಗೆ ಸಾಕಾಗಿ ಬಿಡಬಹುದು. ಗರತಿ ತನ್ನಷ್ಟಕ್ಕೆ ತಾನೇ ಹೇಳಿಕೊಂಡಿದ್ದು ರೀತಿಯ ಸೊಗಸೆನಿಸುತ್ತದೆ. ಸವಿಮಾತಿನಲ್ಲಿ, ಸರಿಯಾದ ರೀತಿಯಲ್ಲಿ, ಸಾವಿಲ್ಲದ–ಕೇಡಿಲ್ಲದ ಚೆಲುವಿನ ನುಡಿಯನ್ನು ಹೇಳಿದ್ದು ಅದೆಂಥ ರಸಾಯನವಾಗಿ ನಿಂತಿದೆ! ನೋಡಿರಿ ಈ ಪದ್ಯದ ಮನನದಿಂದ ಮನಸ್ಸು ತನನವೆಂದು ಅಂತಮುರ್ಖವಾಗಿ ತೃಪ್ತ ಜೀವನದ ಸೊಗಸನ್ನು ಸವಿಯುತ್ತದೆ. ಅಂತೆಯೇ ಇದು ಸಾರ್ಥಕ ಸಾಹಿತ್ಯ. ಶಾಸ್ವತ ಸಾಹಿತ್ಯ; ಜೀವಂತ ಸಾಹಿತ್ಯ. ಈಗ ಉದಾಹರಿಸಿದ ತ್ರಿಪದಿಗೆ ಗರತಿಯ ಧವಳಗಿರಿ ಹೃದಯವು ತವರುಮನೆಯಾಗಿದೆ. ಇನ್ನು ಗೌರಿಶಂಕರದ ತಾಯುಡಿಯಿಂದ ಧುಮುಕಿದ ಗಂಡುಗಾಡಿಯ ನಿನಾದವೊಂದನ್ನು ಉದಾಹರಿಸಿ ನನ್ನ ಮಾತು ಮುಗಿಸುತ್ತೇನೆ.

ನಿಮ್ಮ ರಟ್ಟಿ ಹೊಟ್ಟಿ ಮಾಡಿ ಕಟ್ಟಿ ಗಟ್ಟಿ
ನೀವು ರಣದ ಒಳಗ ಮರದಾ |
ಮೈ ಕಟ್ಟಗಿಟ್ಟ ಭಾಳ ಸಿಟ್ಟ ದಿಟ್ಟ ನಿಮ್ಮ
ಉಗ್ರ ಎಷ್ಟು ಉರದಾ ||

ನಿಮ್ಮ ಹಸ್ತ ಶಿಸ್ತ ಇಟ್ಟ ವಸ್ತ ಮಸ್ತ ರುಳಿ
ಕೈಯಾಗದ ಬಂಗಾರದ |
ಕಪ್ಪಗೊರಳ ಸರಳ ಕೈಬೆರಳ ಹರಳ
ಮ್ಯಾಲ ಹೊಳಿವುದು ಕುಂದಲದ ||

ಉರಿಗಣ್ಣ ಕಣ್ಣ ಮೈ ಬಣ್ಣ ಸಣ್ಣ ತುಟಿ
ಕ್ವಾರಿಮೀಸಿ ಕೊರದ |
ಮೂಗ ತಿಳಪ ಹೊಳಪ ನಿಮ್ಮ ರೂಪ
ದೀಪ ಮುಂದ ಚಂದ್ರಜ್ಯೋತಿ ಉರದಾ ||

ಸಾಹಿತ್ಯ ಲಕ್ಷಣವನ್ನೊಳಗೊಂಡು ಜನಜೀವನದ ಅಂತರಂಗವನ್ನು ಬೆಳಗಬಲ್ಲ ನಿತ್ಯ ದೀಪಾವಳಿಯಂತಹ ಜನಪದ ಸಾಹಿತ್ಯದ ಸ್ಥಾನವನ್ನು ಬಲ್ಲಿದರು ಇನ್ನೂ ಆಳವಾಗಿ ಅರಿತು ನಿರ್ದೇಶಿಸಬೇಕಾಗಿದೆ.