ಹೆಣ್ಣುಮಕ್ಕಳ ಹಾಡು, ಲಾವಣಿ, ಗಾದೆ, ಒಡಪು ಇವುಗಳೆಲ್ಲ ಜನಪದ ಸಾಹಿತ್ಯವೆನಿಸುತ್ತವೆ. ಜನಪದ ಸಾಹಿತ್ಯವು “ಹಾಳರ್ಧ ಹೊಲೆಯರ ಭೀಳರ್ದ ಹೆಂಗಳೆಯರ” ವಾಣಿಯಾಗಿದೆ; ಅದು ಬಹುಸಂಖ್ಯಾತರ ಒಡನುಡಿಯಾಗಿದೆ; ಅಶಿಕ್ಷಿತ ಜನಾಂಗದ ಕೈಗೋಲಾಗಿದೆ; ಅದನ್ನು ಕರ್ಣೋಪಕರರ್ಣಗಳಿಂದ ಬೆಳೆದುಳಿದ ಅಮರ ಸಾಹಿತ್ಯವೆಂದೂ, ಪಂಡಿತ ಮನ್ನಣೆಯನ್ನು ಆಶಿಸದೆ ಲೋಕಮಾನ್ಯವಾಗಿ ಬದುಕಿದ ಸಜೀವ ಸಾಹಿತ್ಯವೆಂದೂ ಕರೆಯಬಹುದು. ಅದು ಏಳಂತಸ್ತಿನ ರಂಗ ಮಹಲಿನಲ್ಲಿ ಮಹಾರಾಜ್ಞಿಯಂತೆ ಉಯ್ಯಾಲಾಡದೆ, ಕೇರಿಕೇರಿಗೂ, ಮನೆ ಮನೆಗೂ-ಗಂಗೆತಂತೆ ತಿಳಿಯಗಿರುವ ಸುಲಭ ಸಾಹಿತ್ಯ. ಈ ಸಾಹಿತ್ಯ ಕುಸುಮವು ಪಂಡಿತ ರಾಜೋದ್ಯಾನದ ರಾಜೀವವಲ್ಲ; ಈ ಸಾಹಿತ್ಯ ಸಂಪತ್ತು ರಾಜಾಶ್ರಯದಲ್ಲಿ ಜೀವ ಹಿಡಿದ ಹಂಗಿನರಮನೆಯದಲ್ಲ; ಅದು ಸಹಜ ಸಾಹಿತ್ಯ. ಹವೆಯಂತೆ ನೆಲ ಮುಗುಲುಗಳನ್ನು ವ್ಯಾಪಿಸಿದ ನಿಸ್ಸೀಮ ಸಾಹಿತ್ಯ; ನಿರಕ್ಷರರ ಕುಟೀರದಿಂದ ಹೊರಹೊಮ್ಮಿದ ಮಹಾ ಮಹಿಮೆ ಸಾಹಿತ್ಯ; ಶಾಸ್ತ್ರಗಳ ಕಟ್ಟಿನಲ್ಲಿ ಸಿಲುಕದಿದ್ದರೂ ಅಚ್ಚುಕಟ್ಟಾಗಿರುವ ನಿಸ್ಸಂಗ ಸಾಹಿತ್ಯ. ಆದ್ದರಿಂದ ಅದಕ್ಕೆ ವೇದಗಳಂತೆ ಅಪೌರುಷೇಯವೆಂದು ಏಕೆ ಅನ್ನಬಾರದು?“ಕುಟ್ಟು ಬೀಸುವ ಹಾಡು ಕೃಷ್ಣನ ತಂಗಿ ಸುಭದ್ರೆ ಕಳಿಸ್ಯಾಳೆ” ಎಂದರೂ ಅದರ ಮೂಲವನ್ನು ಯಾರೂ ತಿಳಿಯರು. ನಮ್ಮಲ್ಲಿ ನೂರಕ್ಕೆ ೮೫ರಂತೆ ಎಂತ ಜನರಿರುವರೋ ಅಂಥ ಅಕ್ಷರಹೀನರೂ ಜನಾಂಗದ ಅರ್ಧಕ್ಕರ್ಧ ಭಾಗವನ್ನೇ ಆಕ್ರಮಿಸಿದ ಸ್ತ್ರೀ ಸಮುದಾಯವೂ ಈ ಸಾಹಿತ್ಯವನ್ನು ಬಳಸಬಲ್ಲರು, ತಿಳಿಯಬಲ್ಲರು, ಹಾಡಬಲ್ಲರು; ಹಿಗ್ಗಬಲ್ಲರು. ಕವಿಯ ಕೃತಿಯನ್ನು ಕವಿಯ ಭಾಷೆಯಲ್ಲಿಯೇ ಓದಬೇಕೆನ್ನುವ ನಿಯಮವು ಜನಪದ ಸಾಹಿತ್ಯವನ್ನು ಅಭ್ಯಸಿಸುವಾಗಲೇ ಬಹುಜನರಿಗೆ ಸಾರ್ಥಕವಾಗುತ್ತದೆ. ಸರಪಳಿಯಲ್ಲಿ ಯಾವ ಕೊಂಡಿಯು ಸಣ್ಣಗಿರುತ್ತದೆಯೋ ಅದೇ ಆ ಸರಪಳಿಯ ಶಕ್ತಿಮಾನವಷ್ಟೇ? ಆದ್ದರಿಂದ ಸಾಮಾನ್ಯ ಜನತೆಯ ಮಟ್ಟವೇ ನಾಡಿನ ಜನಾಂಗದ ಮಟ್ಟ, ನಾಡಿನ ಬಹುಜನರಿಗೆ ಅಡಿಗಡಿಗೆ ಬೇಕಾಗುವುದರಿಂದಲೂ, ಅವರ ಜೀವನಕ್ಕೆ ಕ್ಷಣ ಕ್ಷಣಕ್ಕೂ ಕೈಗೋಲಾಗುವುದರಿಂದಲೂ ಕೆಲಸ ಮಾಡುವಾಗ, ಕದನ ಮಾಡುವಾಗ, ಉತ್ಸವ- ಆಮೋದಗಳಲ್ಲಿ, ಕಷ್ಟ-ಸುಖಗಳಲ್ಲಿ ಉಸುರಿನಂತೆ ಜೀವನದಾಯಿ ಆಗಿರುವುದರಿಂದಲೂ ಜನಪದ ಸಾಹಿತ್ಯವು ಜನಾಂಗದ ಜೀವಾಳವಾಗಿದೆಯೆಂದು ಧಾರಾಳವಾಗಿ ಹೇಳಬಹುದು.

ಕಾವ್ಯದ ಉಗಮಸ್ಥಾನ

ಐಚ್ಛಕ ವಿಷಯವಾಗಿದ್ದರೆ ಮಾತ್ರ ಸುರಕ್ಷಿತರಾದವರು ಸಾಹಿತ್ಯವನ್ನು ಪ್ರೀತಿಸಬಹುದು; ಜನಸಾಮಾನ್ಯವು ಮುಂಜಾವಿನಿಂದ ಸಂಜೆಯವರೆಗೆ ಸಾಹಿತ್ಯದಲ್ಲಿ ಇಚ್ಛೆ ಇರಲಿ-ಇಲ್ಲದಿರಲಿ ಸಹಜವಾಗಿಯೇ ಸಮರಸವಾಗುವದು. ನಸುಕಿನಲ್ಲಿ ಬೀಸುವಾಗ ಹಾಡು, ಹೊಲದಲ್ಲಿ ಉತ್ತು-ಬಿತ್ತುವಾಗ ಹಾಡು, ಹತ್ತಿ ಬಿಡಿಸುವಾಗ ಹಾಡು, ಗಂಟು ಮನೆಗೆ ತರುವಾಗ ಹಾಡು, ನೂಲುವಾಗ ಹಾಡು, ಮದುವೆ ಮುಂಜೆ ಶೋಭನ-ಮಂಗಲೋತ್ಸವಗಳಲ್ಲಿ ಹಾಡು, ಹಂತಿ ಹೋಳಿಗಳಲ್ಲಿ ಹಾಡು; ಅಜ್ಜಿ ಮೊಮ್ಮಕ್ಕಳು ಕೂಡಿದರೆ ಒಗಟು-ಒಡಪು; ಪುರಾಣ ಕೇಳಲಿ, ಕೀರ್ತನ ಕೇಳಲಿ ಏನು ನಡೆದರೂ ಅಲ್ಲೊಂದು ಸಾಹಿತ್ಯ. ಹೀಗೆ ಜಾನಪದ ಸಾಹಿತ್ಯವು ಗಂಗಾ ನದಿಯಂತೆ ಬೇಸಿಗೆಯಲ್ಲಿ ಸಹ ವಿಶಾಲವಾಗಿ, ತಿಳಿಯಾಗಿ ತುಂಬಿ ಹರಿಯುತ್ತಿದೆ. ಇದಕ್ಕೆ ಕಾರಣವೇನು? ಜನಪದ ಸಾಹಿತ್ಯಗಂಗೆಗೆ ಅದಾವ ಹಿಮಗಿರಿಯು ಉಗಮಸ್ಥಾನವಾಗಿದೆ? ಇದನ್ನು ತಿಳಿಯಲು ಮೊದಲು ಕಾವ್ಯದ ಅಥವಾ ಸಾಹಿತ್ಯದ ಉಗಮಸ್ಥಾನವೆಲ್ಲಿಯೆಂಬುದನ್ನು ಯೋಚಿಸಬೇಕು. ಸಾಮಾನ್ಯರಿಗೂ ಸುಶಿಕ್ಷಿತರಿಗೂ ಭೇದವೇನೆಂದರೆ-ಸುಶಿಕ್ಷಿತರ ಮನಸ್ಸು ವಿದ್ಯಾಭ್ಯಾಸದಿಂದ ಸಂಸ್ಕಾರ ಹೊಂದಿ ವಿಚಾರಪ್ರಧಾನವಾಗಿರುತ್ತದೆ; ಸಾಮಾನ್ಯರದು ಹಾಗಲ್ಲ. ಅದು ಭಾವನಾ ಪ್ರಧಾನವಾಗಿರುತ್ತದೆ, ವಿಚಾರಪ್ರಧಾನವಾದ ಮನಸ್ಸುಗಳೆಲ್ಲ ಕಾವ್ಯ ಮೂಲವಾಗಿರುವುದಿಲ್ಲವಾದ್ದರಿಂದ ಅಂಥ ಮನಸ್ಸು ಮಾತ್ರ ಕಾವ್ಯ ಮೂಲವಲ್ಲವೆಂದೂ ಗ್ರಹಿಸಬಹುದು. ಮನಸ್ಸಿಗೂ ಆಚೆಯ ಯಾವುದೋ ಸ್ಥಾನವು ಕಾವ್ಯಕ್ಕೆ ಮೂಲವಿರಬಹುದೇ ಎಂಬ ಅನುಮಾನವು ಬರುವುದು ಸಹಜ. ಅದನ್ನು ಬಲ್ಲವರಿಂದ ತಿಳಿಯಬೇಕು. “ದೃಶ್ಯಾದೃಶ್ಯಗಳ ಮಧ್ಯದಲ್ಲಿ ಅಪಾರವಾದ ಸ್ನೇಹಸಾಗರವೊಂದು ಇರುವುದಾಗಿ ಅನುಭವಕ್ಕೆ ಬರುವದೆಂದೂ. ಅದು ರಸೋದಧಿಯೆಂದೂ ಹೇಳುತ್ತಾರೆ. ಆ ಕಡಲಿನಲ್ಲಿ ಎಲ್ಲ ಜೀವಗಳ ಹಡಗುಗಳು ಕತ್ತಲೆಯಿಂದ ಬೆಳಕಿಗೂ, ದುಃಖದಿಂದ ಸುಖಕ್ಕೂ, ಮೃತ್ಯುವಿನಿಂದ ಅಮೃತಕ್ಕೂ ಹೋಗಲೆಳಸುವವಂತೆ.” ಇದೇ ಕಾವ್ಯ ಮೂಲವಿರಬಹುದು. ಆ ರಸೋದಧಿಯನ್ನು ತಲುಪುವುದಕ್ಕೆ ಬುದ್ಧಿ ಪ್ರಧಾನತೆಯು ಸಾಧನವಾಗುವದೋ ಇಲ್ಲವೋ ತೊಳಿಯದು. ಸಾಧನವಾಗುವುದೆಂದು ತಿಳಿದರೆ ಅದೊಂದು ಸಾಧನವಲ್ಲವೆಂದು ಮಾತ್ರ ಹೇಳಬೇಕಾಗುತ್ತದೆ. ಸಮಸ್ತ ಕವಿತೆಯು ಮೊದಲು ಸ್ವರ್ಗದಲ್ಲಿಯೇ ಬರೆಯಲ್ಪಟ್ಟಿದ್ದು, ಸಹಜ ಜೀವನದಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಆಳದಲ್ಲಿರುವ ಅನುಭವ, ಸಾಹಿತ್ಯಕ್ಕೆ ಆನಂದವೇ ಪರಿಣಾಮವಷ್ಟೇ? ಆ ಆನಂದವನ್ನು ಅನುಭವಿಸುವ ಶಕ್ತಿ ಆತ್ಮಕ್ಕೆ ಮಾತ್ರ ಇದೆಯೆಂದು ಹೇಳುತ್ತಾರೆ. ಆ ರಸೋದಧಿಯನ್ನು ತಲುಪಲು ಸುಶಿಕ್ಷಿತರೇನು ಅಶಿಕ್ಷಿತರೇನು? ಮಹನೀಯರೇನು ಸಾಮಾನ್ಯರೇನು? ಜಾತಿಗೆ ಭೇದವಾದರೆ ನೀತಿಗೆ ಭೇದವೆಲ್ಲಿಯದು? ನೀತಿಯು ಆತ್ಮದ ಶಿಶುವಲ್ಲವೇ? ಬುದ್ಧಿಯು ವಿಚಾರದ ಮೂಲವೆಂದು, ಹೃದಯವು ಭಾವನೆಯ ಮೂಲವೆಂದೂ ಹೇಳುತ್ತಾರೆ. ಸುಶಿಕ್ಷಿತರು ಬಹುಮಟ್ಟಿಗೆ ವಿಚಾರವಂತರೆಂದೂ, ಜನಸಾಮಾನ್ಯರು ಬಹುಮಟ್ಟಿಗೆ ಭಾವುಕರೆಂದೂ ಎಣಿಸಲ್ಪಡುವರು. ಹೃದಯ ಪ್ರಧಾನರಾದ ಭಾವುಕರ ಅಂತರಾತ್ಮನು, ಆ ರಸೋದಧಿಯನ್ನು ಸಮೀಪಿಸುವಷ್ಟು ಸಹಜವಾಗಿ, ವಿಚಾರಪ್ರಧಾನರಾದ ಬುದ್ಧಿವಂತರ ಆತ್ಮವು ಸಮೀಪಿಸಲಾರದು. ಆದುದರಿಂದ ಜನಪದ ಸಾಹಿತ್ಯವನ್ನು ನಿರ್ಮಿಸಿದವರ ಸಂಖ್ಯೆಯೂ ದೊಡ್ಡದು; ಜನಪದ ಸಾಹಿತ್ಯದ ರಸಿಕರೂ ಹೆಚ್ಚು; ಜನಪದ ಸಾಹಿತ್ಯವೂ ಅಪಾರ.

ಜನಸಮಾನ್ಯರ ಜೀವನನಿಷ್ಠೆ

ಜನಸಾಮಾನ್ಯರು ಅದರಲ್ಲಿಯೂ ಹೆಣ್ಣುಮಕ್ಕಳು, ಜಗಜ್ಜನನಿಯ ವಿಶ್ವದ ವಿರಾಟ್ ಕಾರ್ಯದಲ್ಲಿ ವಿನೀತರಾದ ಸಹಭಾಗಿಗಳು; ಕೈವಲ್ಯ, ಮುಕ್ತಿ ಬೇಡುವ ಕಾಯ್ದೆಭಂಗವನ್ನೂ, ಸಂಸಾರ ತ್ಯಾಗದಂಥ ಅಸಹಕಾರವನ್ನೂ ಅವರು ಮಾಡಿದ್ದು ಜಗತ್ತಿನ ಇತಿಹಾಸದಲ್ಲಿಯೇ ವಿರಳ. ಅವರು ವಿಶ್ವದ ಲೀಲೆಯಲ್ಲಿ ತಮ್ಮ ಪಾತ್ರವನ್ನು ಆನಂದದಿಂದ ನಿರ್ವಹಿಸಬಲ್ಲವರು; ಪಾತ್ರದೊಡನೆ ತಾದಾತ್ಮ್ಯವನ್ನು ಹೊಂದಿಬಿಡುವ ಸಹಜ-ಅಭಿನಯಕಾರರು; ನಟರಾಜನ ತಾಳದೊಡನೆ ಹೆಜ್ಜೆ ಹಾಕುವ ನಟರವರು. ಅಂತೆಯೇ ಅವರ ಜೀವನವು ಉಳಿದವರಿಗಿಂತ ಸುಖಕರವೂ ಸರಾಗವೂ ಆಗಿದೆ. ಟಾಲಸ್ಟಾಯರಂಥವರಿಗೂ ಸಾಮಾನ್ಯ ಜನರ ಜೀವನದಲ್ಲಿಯೇ ಜೀವನದರ್ಥವು ಹೊಳೆಯಿತೆಂಬುದು ಈ ಮಾತನ್ನು ಬಲಪಡಿಸುತ್ತದೆ. ಸಾಮಾನ್ಯ ಜನರೆಂದರೆ, ಶರೀರ ಪ್ರಾಣ-ಮನಸ್ಸುಗಳ ತಿಳುವಳಿಕೆಯುಳ್ಳವರು. ಅವರಿಗೆ ಸುಖಜೀವನವೇ ಧ್ಯೇಯ. ಸಾಮಾನ್ಯರ ಜೀವನಕ್ಕೆ ಅಹಂಕಾರ ಮಮಕಾರಗಳೇ ಲಕ್ಷಣವೆಂದೂ ಅವನ್ನಿಟ್ಟುಕೊಳ್ಳುವುದರಲ್ಲಿ ಸಾಮಾನ್ಯ ಜನಕ್ಕೆ ಕಲ್ಯಾಣವೆಂದೂ ಶ್ರೀಅರವಿಂದ ಯೋಗಿಗಳು ಸಾರಿ ಹೇಳುತ್ತಾರೆ. “ನಾನು ಕನ್ನಡಿಗ; ಇದು ನನ್ನ ನಾಡು; ಅದರ ಹಿತ ಮಾಡುವುದು ನನ್ನ ಕರ್ತವ್ಯ” ಮೊದಲಾದವು ವಿಚಾರವಂತರ ಅಹಂಕಾರ-ಮಮಕಾರಗಳಾದರೆ, “ನಾನು ಇಂಥವನು, ಇದು ನನ್ನ ಮನೆ; ಅದರ ಏಳಿಗೆಯಾಗಬೇಕು.” ಮೊದಲಾದವು ಸಾಮಾನ್ಯರ ಅಹಂಕಾರ-ಮಮಕಾರಗಳು. ಈ ಮಮತೆಯನ್ನು ಭಾರತೀಯರ ಜೀವನಾಡಿಯಾದ ಆಧ್ಯಾತ್ಮವು ಪವಣಿಸಿಕೊಂಡಿದೆ. ಆದ್ದರಿಂದ ನಮ್ಮ ಸಾಮಾನ್ಯ ಜನರಲ್ಲಿ ಅದರಲ್ಲಿಯೂ ನಮ್ಮ ಹೆಣ್ಣುಮಕ್ಕಳ ಬದುಕಿನಲ್ಲಿ ದೈವಭಕ್ತಿ, ಜೀವನನಿಷ್ಠೆ, ಬಂಧು-ಬಳಗ-ಮಿತ್ರರಲ್ಲಿ ಕಕ್ಕುಲತೆ ಇವು ಹಾಸುಹೊಕ್ಕು-ಬಣ್ಣಗಳಾಗಿವೆ. ಇವೇ ಅವರ ಜೀವನಕ್ಕೆ ಬೆಳಕು ಕೊಟ್ಟಿವೆ; ಅವರ ಸಾಹಿತ್ಯಕ್ಕೆ ಕಳೆಯಿಟ್ಟಿವೆ. ಈ ಮೂರು ಮಾತುಗಳನ್ನು ಹೆಣ್ಣುಮಕ್ಕಳ ಸಾಹಿತ್ಯದಿಂದಲೇ ಸ್ಪಷ್ಟಪಡಿಸಬೇಕು.

೧. ದೈವಭಕ್ತಿ: “ನಾರಾಯಣನ ನಾಮವನ್ನು ನಾಲಿಗೆಯ ಮೇಲೆ ಬಿತ್ತಿ ಬೆಳೆಯುವ” ಗರತಿಗೆ “ಶಿವ ಶಿವ ಎಂದರೆ ಸಿಡಿಲೆಲ್ಲ ಬಯಲಾಗಿ ಕಲ್ಲ-ಬಂದೆರಗಿ ಕಡೆಗಾಗಿ ಎಲೆ ಮನವೆ ಶಿವನೆಂಬ ಶಬ್ದ ಬಿಡಬೇಡ” ಎನ್ನುವ ನಿಷ್ಠೆ ಬಂದಿರುತ್ತದೆ. ಆಕೆಯು “ನಿದ್ದಿಗಣ್ಣೀಲಿ ಸುದ್ಧ ಗುರುವಿನ ಪಾದ” ಕಂಡವಳು. “ಮಂದೇನು ಕೊಟ್ಟೀತ, ಮನವೇನು ದಣಿದೀತ, ಮುಂಜಾನದಾನ ಗಿರಿಮಲ್ಲ ಕೊಟ್ಟರೆ, ಮನೆ ತುಂಬಿ ನಮ್ಮ ಮನ ತುಂಬಿ” ಬಿಡಬಲ್ಲದೆಂಬ ನಂಬಿಗೆಯಳ್ಳವಳು. ಶರಣರ ನೆನೆದರೆ ಸರಗೀಯ ಇಟ್ಟಂಗ ಹವಳಮಲ್ಲೀಗಿ ಮುಡಿದಂಗ” ಎಂಬ ಸಂತಸದಲ್ಲಿದ್ದಳು. “ಊರೆಲ್ಲ ಉಂಡು ಮನಗ್ಯಾನ ಬೆಳಚಿಕ್ಕೆ ಹೊಂಟಾಗ” ದೇವರನ್ನು ನೆನೆಸಬೇಕೆಂಬ ನಿಯಮವನ್ನು ಅರಿತವಳು. “ಲಿಂಗಯ್ಯನು ಹೂವಿನಾಗ ಹುದಗ್ಯಾನ ಮಾಲ್ಯಾಗ ಮನಗ್ಯಾನ | ಮಗ್ಗ್ಯಾಗ ಕಣ್ಣ ತೆರದಾನ|” ಎಂಬುದನ್ನು ಎದೆ ತಟ್ಟಿ ಹೇಳುವವಳು. ಕೆಲಸ ಬೊಗಸೆಗಳಲ್ಲಿಯೂ ದೇವನನ್ನು ಮರೆಯಳೆಂಬ ಮಾತಿಗೆ-“ ಹೋಗಾಗ ಎಡಕಾದ ಬರುವಾಗ ಬಲಕಾದ | ಈಗ ನನ ಕೊಡಕ ಇದಿರಾದ| ಬಲಭೀಮ| ಕೊಡ ಹೊತ್ತು ಕೈಯ ಮುಗದೇನ” ಎಂಬ ಪದ್ಯ ಉದಾಹರಣೆ. ಇದರಂತೆ ಲಾವಣಿಗಳಲ್ಲಿ “ ಗುರುವೆ ನಿಮ್ಮ ಪಾದದ ಮೇಲೆ ಎನ ಆಶೆ” ಎಂಬುದು “ಸೋಹಂ ಶಿವನೆ ನಿನ ಹೊರತು ದೇವರೆ ಇಲ್ಲ” ಎಂಬ ಶ್ರುತಿಯೂ ಕೇಳಿಬರುತ್ತದೆ. ಹೀಗೆ ಇಡಿಯ ಜೀವನವನ್ನೆಲ್ಲ ದೈವಭಕ್ತಿಯು ವ್ಯಾಪಿಸಿದೆ; ಅದಕ್ಕೆ ಪ್ರತಿಯಾಗಿ ದೈವಭಕ್ತಿಯು ‘ಮಣಿಗಳಲ್ಲಿ ಪವಣಿಸಿದ ದಾರದಂತೆ’ ಬೆಂಬಳಿಸಿದೆ. ಹೀಗೆ ಜೀವ ಶಿವರು ಪ್ರಾಣಿಗ್ರಹಣ ಮಾಡಿದಲ್ಲಿ ಆ ಸಂಸಾರವು ಸುಖಕರವಾಗುವುದು ಸಮೃದ್ಧವಾಗುವುದು.

. ಜೀವನ ನಿಷ್ಠೆ: ಜೀವನಕ್ಕೆ ಬಡತನ, ಗೃಹಕಲಹ, ಬಹು ಸಂತಾನ ಮೊದಲಾದವು ಆಧುನಿಕರಿಗೆ ಅನಿಷ್ಟವಾದವುಗಳು. ಇವಕ್ಕೆ ಆಧುನಿಕ ವಿಚಾರವಂತರು ಯಾವ ಕಾರಣವನ್ನೇ ಕಂಡುಕೊಂಡಿರಲಿ, ಯಾವ ಉಪಾಯವನ್ನೇ ಹೇಳಿಕೊಡಲಿ; ಅದರೆ ಸಾಮಾನ್ಯ ಜನರು ಮಾತ್ರ- “ಬಡತನ ನನಗಿರಲಿ ಭಾಳ ಮಕ್ಕಳಿರಲಿ| ಮ್ಯಾಲ ಗುರುವಿನ ದಯವೊಂದಿರಲಿ” ಎಂದು ತಮ್ಮ ಬಡತನದ ಚಿಂತೆಯನ್ನು ಗುರುವಿಗೆ ಹೊರಿಸಿ ತಾವು ನಿಶ್ಚಿಂತರಾಗುವರು. “ಮಕ್ಕಳ ಕೊಡು, ಮುತೈದಿತನ ಕೊಡು, ಮಾರಾಯರ ಮುಂದ ಮರಣ ಕೊಡು” ಇವೇ ನಮ್ಮ ಗರತಿಯ ಬೇಡಿಕೆ. “ಮುರುಕು ತೊಟ್ಟಲಿಗೊಂದು ಹರಕು ಚಾಪೆಯ ಹಾಸಿ| ಅರಚು ಪಾಪನ ಮಲಗಿಸಿ” ಹಾಡಿ ಹಿಗ್ಗುವಳು. ‘ನುಚ್ಚುಂಬಲಿ’ ಉಣಿಸಿ ಮಕ್ಕಳನ್ನು ಸಲಹುವಳು. ಬಹುಮಕ್ಕಳ ತಾಯೊಬ್ಬಳು, ಮಕ್ಕಳಿಗೆ ಸಾಕಾಗುವಷ್ಟು ಹಾಸಿಗೆ ಇಲ್ಲದಾಗಲು ಉಟ್ಟ ಸೀರೆಯನ್ನೇ ಅರ್ಧ ಹಾಸಿ ಅವನ್ನೂ ಮಲಗಿಸಿದಳೆಂದೂ ಅದರ ಮೇಲೆ ಮಕ್ಕಳು ಮಲಗಿ ಸ್ಥಳ ಉಳಿಯಲು ಇನ್ನಬ್ಬರಿದ್ದರೆ ಲೇಸಾಗುತ್ತಿತ್ತೆಂದು ಚಿಂತಿಸಿದಳೆಂದೂ ಕಥೆಯಿದೆ.“ಸಮುದ್ರಕ್ಕೆ ಸೇತು ಕಟ್ಟುವ ಹನುಮಂಥನಂಥ ವೀರ ಸೇವಕನಿದ್ದರೂ ಅಡವಿ ಆರ್ಯಾಣದಾಗ ಹಡೆದಾಳ ಸೀತಮ್ಮ ತೊಡಿಯ ತೊಳೆಯಾಕ ನೀರಿಲ್ಲ” ಎಂಬ ಸೀತೆಯ ಹಾಡು ಬಡವಿಯ ಎದೆಯನ್ನು ಗಟ್ಟಿಗೊಳಿಸುವದು. ಆದರೆ ಬಡತನವು ಸಮಾಜದೋಷವಲ್ಲವೆಂದಾಗಲಿ, ಸಂತಾನ ಸಂಯಮವು ಅನಾವಶ್ಯಕವೆಂದಾಗಲೀ ಯಾರೂ ತಿಳಿಯದಿರಲಿ.

ಬಂಜೀ ಬಾಗಿಲಮುಂದ ಬಂಗಾರದೊಳಕಲ್ಲ
ಬಂದು ಕುಟ್ಟಾಕ ಸೊಸಿಯಿಲ್ಲ | ಮಾನಾಮಿ |
ಬನ್ನಿ ಮುಡಿಯಾಕ ಮಗನಿಲ್ಲ ||
ಬಾಲಕರಿಲ್ಲದ ಬಾಲಿದ್ಯಾತರ ಜನ್ಮ
ಬಾಡೀಗಿ ಎತ್ತು ದುಡಿದಾಂಗ | ಬಾಳೆಲೆಯ
ಹಾಸ್ಯುಂಡು ಬೀಸಿ ಒಗೆದಾಂಗ ||

ಇಂಥ ಬಂಜೆ ಆಗುವದಕ್ಕಿಂತ, ಆಕೆಯ ಪಾಲಿಗೆ ಮಣ್ಣು-ಮರ ಆಗುವದು ಲೇಸು.

ಹೆಣ್ಣು ಆಗುವದಕ್ಕಿಂತ ಮಣ್ಣು ಆಗುದು ಲೇಸು
ಮಣ್ಣೀನ ಮ್ಯಾಲ ಮರವಾಗಿ | ಇದ್ದರ |
ಬಂದವರಿಗೆಲ್ಲ ನೆರಳವ್ವ ||

ಈ ನೋವಿಗಿಂತ

ಬಂಜೀ ಬಾಗಿಲಮುಂದ ಅಂಜೂರಿ ಗಿಡ ಹುಟ್ಟಿ
ಟೊಂಗಿ ಟೊಂಗೆಲ್ಲ ಗಿಣಿ ಕೂತು | ಹೇಳ್ಯಾವ |
ಬಂಜಿನಿನ ಬದುಕ ಹೆರವರಿಗೆ ||

ಇದನ್ನು ಕೇಳಿದ ಕೋಮಲೆಯಾದ ಬಂಜೆಗೆ ಅದೆಂಥ ಕೂರಲಗು ಇರಿಯುತ್ತಿರಬಹುದು? ಅಂಥವಳು ಹಂಗಿನರಮನೆಯ ಬೋನ ಹೇಗೆ ಉಣ್ಣುವಳು? ಬಂಜೆಂಬ ಶಬ್ದವನ್ನು ಹೇಗೆ ಹೊರುವಳು?

ಕೂಸು ಇದ್ದ ಮನೆಗೆ ಬೀಸಣಿಕಿ ಯಾತಕ
ಕೂಸು ಕಂದಯ್ಯ ಒಳಹೊರಗ | ಆಡಿದರ |
ಬೀಸಣಿಕೆ ಗಾಳಿ ಸುಳಿದಾವ ||

ಈ ಗಾಳಿ ಸುಳಿಯುವದು ಯಾರಿಗೆ ಬೇಡ?

ಮಾರಾಯನ ಗೊಡವೆ ಬಿಡಿಸುವ ಮಗುವೆಂದರೆ, ತೊಟ್ಟಿಲದೊಳಗಿನ ತೊಳೆದ ಮುತ್ತು. ಕರಿಯಂಗಿ ಕಸೂತಿ, ತಲೆತುಂಬ ಜಾವುಳ ಆ ಮಗುವಿಗೆ. ಮಗುವಿನ ಆಟ ನವಿಲಿಗಿಂತ ಮಿಗಿಲು. ಗುಲಗಂಜಿ ಗಿಡಕ ಗುರಿ ಇಡುವವ. ಅಂಥ ಬಾಲಕನನ್ನು ಕಂಡು ಬಾಲೆಯರು ಬಸುರು ಬಯಸುವರು. ದೇಶದಿಂದ ಬಂದ ಗಿಳಿಗಳು-‘ಕೂಸೇ, ನೀನು ದಾರಮಗನೆ’ ಎಂದು ಕೇಳಬೇಕು.

ತವರೂರಿಗೋದ್ಹಾಗ ನವಿಲಬಣ್ಣದ ಪಕ್ಷಿ
ತಲಿಬ್ಯಾನಿಯೆದ್ದು ಅಳತಿತ್ತು | ಕಂದ
sನ |
ಛಲುವೀಕಿ ನೋಡಿ ನಗತಿತ್ತ ||

ಅಂಥ ಕೂಸು ಕಾಯದ ರಹಾಲ ಕೆನೆ ಬೇಡಿ ಅಳುವ ಹಟಮಾರಿ, ಆದರೇನು,

ಅಳುವ ಕಂದನ ತುಟಿಯು ಹವಳದ ಕುಡಿಯಂಗ
ಕುಡಿಯುಬ್ಬು ಬೇವಿನೆಸಳಂಗ | ಕಣ್ನೋಟ |
ಶಿವನ ಕೈಯಲಗು ಹೊಳೆದಂಗ ||

ಹಾಲು ಬೇಡಿ ಅಳುವ, ಕೋಲು ಬೇಡಿ ಕುಣಿವ, ಮೊಸರು ಬೇಡಿ ಕೆಸರು ತುಳಿಯುವ. ಕಂದನ ಕುಸಲದ ಗೆಜ್ಜೆ ಕೆಸರಾದರೂ ತಾಯಿ ಆಡಿ ಬಂದರೆ ಅಂಗಾಲು ತೊಳೆಯಲಿಕ್ಕೂ, ತೆಂಗಿನ ತಿಳಿನೀರಿನಿಂದ ಭಂಗಾರ ಮಾರಿ ತೊಳೆಯಲಿಕ್ಕೂ ಸಿದ್ಧಳು. ಒಮ್ಮೊಮ್ಮೆ ಬಿಂದಿಗಿ ಹಾಲು ಸುರುವೆಂದೂ, ಸಂಜೆಯ ಚಂದ್ರನನ್ನು ತಂದು ನಿಲ್ಲಿಸೆಂದೂ ಕಿರಿಕಿರಿ ಮಾಡುವ ಕಂದನಿಗೆ ದೃಷ್ಟಿ ತೆಗೆಯಲಿಕ್ಕೆ ಮುತ್ತೇ ಬೇಕು: ಮೊರೆ ತೊಳೆಯಲಿಕ್ಕೆ ಹಾಲೇ ಬೇಕು.

ಕಂದನು ನಕ್ಕರೊಂದು ರುಚಿ ಆದರೆ ಅತ್ತರೊಂದು ರುಚಿ ಹೇಗೆ?

ಕಂದಯ್ಯ ಅತ್ತರ ಕಣಗೀಲ ಕಾತಾವ
ಒಣಗೀದ ಬಾಳಿ ಚಿಗತಾವ | ಬಾಲನ |
ಬರಡಾಕಳೆಲ್ಲ ಹಯನಾಗೆ ||

ಇನ್ನು ಕದನದ ಕಥೆ : ತನ್ನ ಜೀವನವು ತಿಳಿಯಾಗಿರುವಂತೆ ಸುತ್ತಿನವರದೂ ತಿಳಿಯಾಗಲೆನ್ನುವ ಅದೂ ತನ್ನಂತೆ ಆಗಬೇಕೆನ್ನುವ ಆಶೆಯೂ ಒಮ್ಮೊಮ್ಮೆ ಕದನಕ್ಕೆ ಮೂಲವಾಗುತ್ತದೆ. ಆ ಮೋಡವು ಮನೆಯ ಮುಗಿಲನ್ನು ಮುಸುಕಿ, ಬೈಗುಳ ಗುಡುಗು ಗದ್ದರಿಸಿ, ಬಡೆತ ಹೊಡೆತಗಳ ಸಿಡಿಲೂ ಬೀಳುವ ಪ್ರಸಂಗವಿರುತ್ತದೆ. ರಸಜೀವಿಯು ಅಂತ ಪ್ರಸಂಗದಲ್ಲಿ ವಿಡಂಬನ ಕವನವೊಂದನ್ನು ರಚಿಸಿ ಹಾಡಬಹುದು. “ಅಷ್ಟೂರ ಮಾತಿದೂ ನಿಷ್ಠೂರ ಹೇಳತೀನಿ” ಎಂದು ಗೋಪಾಲದುರದುಂಡಿ ಕವಿಯು ಆರಂಭಿಸುತ್ತಾನೆ. ಸಾಮಾಜಿಕ ದೋಷಗಳನ್ನು ಎತ್ತಿ ಹಾಡುವಾಗ- “ನನ್ನ ಕಡೀ ನಿನ್ನ ಮೊದಲ ಮಾಡಿಕೊಂಡು” ಹೇಳುವೆನೆಂದಿದ್ದಾನೆ. ಹೆರರೊಡನೆ ತನ್ನನ್ನೂ ಪರಿಹಾಸಕ್ಕೀಡು ಮಾಡುವವನು ಶ್ರೇಷ್ಠ ಪರಿಹಾಸಕನಷ್ಟೇ? ಅಂಥವನು ತನ್ನನ್ನು ತಿದ್ದಿಕೊಳ್ಳುವನಲ್ಲದೆ, ಸುತ್ತಲಿನವರನ್ನೂ ತಿದ್ದುಪಡಿ ಮಾಡಬಲ್ಲನು. ಹೇಸಿ ನಗೆ ಅಪಾಯಕಾರಿ, “ನಗೆ ನಾ ಬಳ್‌ಘಾಯಿ” “ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು,”ನಕ್ಕವರ ಹಲ್ಲು ಮಾತ್ರ ಕಾಣಿಸುವವು”

ಅತ್ತೆ-ಸೊಸೆ, ಸವತಿ ಮಕ್ಕಳು ಜಗಳಕ್ಕೆ ಸರಿಯಾಳುಗಳೆಂದು ಪ್ರಸಿದ್ಧಿಯಿದೆ. ಒಮ್ಮೊಮ್ಮೆ ಗಂಡ-ಹೆಂಡಿರು, ತಾಯಿ-ಮಕ್ಕಳು, ಅಣ್ಣ-ತಮ್ಮಂದಿರು ಇವರಲ್ಲಿಯೂ ಭಿನ್ಣ ಮತವು ತಲೆದೋರುತ್ತದೆ; ಅದು ಆಗಲೆ ತಲೆಯಡಸಲೂಬಹುದು; ಒಮ್ಮೊಮ್ಮೆ ಹೆಡಿಯೆತ್ತಿ ವಿಕೋಪಕ್ಕೂ ಹೋಗಬಹುದು. “ಗಂಡ-ಹೆಂಡಿರ ಜಗಳ ಗಂಧ ತೀಡಿದಂಗ, ಲಿಂಗಕ್ಕೆ ನೀರು ಎರೆದಂಗ” ಎನಿಸುವದರಲ್ಲಿಯೂ, “ತಾಯಿ-ಮಕ್ಕಳ ಜಗಳ ತಾಳ ಬಾರಿಸಿದಂಗ” ತೋರುವದರಲ್ಲಿಯೂ ಅದೆಷ್ಟು ಜೀವನ ನಿಷ್ಠೆಯಿದೆ! ಅದೆಂಥ ಜೀವನ ಸೌಂದರ್ಯವಿದೆ! “ತಾಯಿ-ಮಕ್ಕಳ ಜಗಳ ನ್ಯಾಯ ಮಾಡುವವರಾರು? ವಾಲೀಗಿ ಮುತ್ತ ವಜನೇನ? ಹಡೆದಮ್ಮ ನಾ ಆಡಿದ ಮಾತು ನಿಜನೇನ? ಎಂದು ಸಮಾಧಾನಪಡಿಸುವಲ್ಲಿ ಕ್ಷಮಾಯಾಚನೆಯ ಏರಿಯು ಏರಿ ಶೋಭಿಸುತ್ತದೆ.

ನಮ್ಮವ್ವ ನನ ತಾಯಿ ಹಣ್ಣು ಹಾಗಲಕಾಯಿ
ಸುಮ್ಮನೆ ಬೈದ ಗರತೀಗಿ | ಹಡೆದವ್ವ |
ಉಣ್ಣೇಳ ಕಾಲ ಹಿಡಿವೇನ ||

ಆಡೀನ ಮಲಿಹಾಂಗ ಜೋಡ ನಾವಿಬ್ಬರು
ಆಡಬೇಡ ತಂಗಿ ಕದನವ | ಜಗಳಕ |
ಜೋಡೀನ ಹಕ್ಕಿ ಅಗಲ್ಯಾವ ||

ಎನ್ನುವಲ್ಲಿಯೂ ಕದನ ಕೊನೆಗೊಳ್ಳುವ ರೀತಿಯು ಹೃದಯಸ್ಪರ್ಶಿಯಾಗಿಲ್ಲವೇ? ಅತ್ತೆಯ ಮನೆಯಲ್ಲಿ ಬೆಳದಿಂಗಳು ಬಿಸಿಲಾಗುವದು. ಅದು “ಚಿಂತಾಕು ಇಡಲಿಲ್ಲ ಚಿಂತಿ ಬಿಟ್ಟಿರಲಿಲ್ಲ| ಎಂಥಲ್ಲಿ ಕೊಟ್ಟಿ ಹಡೆದವ್ವ” ಎಂದು ಉಸಿರುಗರೆಯುವ ಸ್ಥಳ. “ಗೋಕಾವಿ ಮುಂದೀನ ಕಾಶೀಯ ಗಿಡಗಳಿರಾ | ತಾಯಿ ಹಡೆದವ್ವನ ಬರಹೇಳಿ | ಅತ್ತೀಮನಿ ಇಗ್ಗರ ಭಾಳ” ಎಂದು ಹೇಳಿ ಕಳಿಸುವ ಪ್ರಸಂಗ ಸಹ ಒಮ್ಮೊಮ್ಮೆ ಸೊಸೆಗೆ ಬರುವದು. ಭಾವಯ್ಯ ಮುನಿದರೆ ಬಲಗಾಲು ಹಿಡಿಯುವಳು. ಆತನ ಮಡದಿ ಮುನಿದರೆ ಬಾರಕ್ಕನೆನುವಳು; ಮಾರಾಯರು ಬೈದರೆ ಕಣ್ಣೀರು ಬಾರವು. ಆದರೆ ವಯಸ್ಸಿನಿಂದ ಚಿಕ್ಕವನಾದ ಮೈದುನ ಬೈದರೆ ಹೊಯ್ದ ಹೋಳಿಗೆಯಾಗುವಳು; ಕೊಯ್ದ ಮಲ್ಲೀಗೆ ನನೆಯಾಗುವಳು. ಅದರಂತೆ ನೆಗೆಣ್ಣಿ ಸಣ್ಣಾಕೆಯಾದರೂ ಆಕೆಯ ಮಾತು ಬೆಣ್ಣ್ಯಾಗ ಮುಳ್ಳು ಮುರಿದಂಗ. ಆದರೆ ಅತ್ತೆಯ ಮನೆ ಹೇಗಿದ್ದರೆ ಬದುಕು ಉತ್ತಮವಾಗುವದು?

ಅರಸು ತೂಕದ ನಲ್ಲ ಗಳಿಸೂವ ಮೈದುನ
ನಡಿಸಿಕೊಳ್ಳುವತ್ತಿ ಸಿರಿಗಂಗಿ | ಮನಿಯಾಗ |
ಬದುಕು ಮಾಡುವುದು ಅರಿದೇನ?

ಇದು ಅತ್ತೆಯ ಮನೆಯಲ್ಲಿ ಅನುಕೂಲತೆ, ಆದರೆ ಬೇರೊಂದು ಮನೆಗೆ ಹೋಗಿ ಹೊಸ ಪರಿಸ್ಥಿತಿಯಲ್ಲಿ ಒಮ್ಮೆಲೆ ನೆಲೆಸಲಿರುವ ಬಾಲೆಗೊಂದು ಕಿವಿಮಾತು ಹೇಳುವದು ತಾಯ ಕರ್ತವ್ಯವೇ ಆಗಿದೆ. ಅದು ಮನೆತನದ ಸ್ಥಿತಿಯನ್ನು ಕಾಯ್ದುಕೊಳ್ಳಲು ಹಕ್ಕುದಾಗಿದೆ.

ಹೆಣ್ಣೀನ ಕಾಯವ ಮಣ್ಣು ಮಾಡಲಿಬೇಕ
ಸುಣ್ಣದಳ್ಳಾಗಿ ಸುಡಬೇಕ | ಈ ಜಲುಮ |
ಮಣ್ಣು ಮಾಡಿ ಮರ್ತ್ಯ ಗೆದಿಬೇಕ ||

ಪ್ರಪಂಚದಲ್ಲಿ ಕಲಹ, ಕೋಪ, ಪ್ರೀತಿ, ಬೇಸರಿಕೆ, ಹುಟ್ಟು, ಸಾವು ಮುಂತಾದವು ಊಟದಲ್ಲಿಯೂ ವಿವಿಧ ರಸಗಳಂತೆ ಇರುವವಾದ್ದರಿಂದ ಬೇಕಾದವನ್ನಿಟ್ಟುಕೊಂಡು ಬೇಡಾದವುಗಳನ್ನು ತಾತ್ಫೂರ್ತಿಕವಾಗಿ ಶಮನಗೊಳಿಸುವದು ಮಾತ್ರ ಸಾಧ್ಯವೆಂಬುದನ್ನು ಮರೆಯತಕ್ಕದ್ದಲ್ಲ.

೩. ಬಂಧು-ಬಳಗ ಮಿತ್ರರಲ್ಲಿ ಕಕ್ಕುಲತೆ

ತಾಯಿಗಿಂತ ಬಂಧುವಿಲ್ಲವಾದ್ದರಿಂದ ತಾಯಿಗೆ ಮೊದಲ ಸ್ಥಾನ. ಆಮೇಲೆ ತಂದೆ, ತವರು ಮನೆ. ಹಿಂದಿನಿಂದ ಅಕ್ಕ- ತಂಗಿ, ಅಣ್ಣ-ತಮ್ಮ, ಗೆಳತಿ ಮುಂತಾದವರು. “ತಾಯಿ ಇದ್ದರೆ ತವರು ಹೆಚ್ಚು. ತಂದೆ ಇದ್ದರೆ ಬಳಗ ಹೆಚ್ಚು” “ಹಡೆದವ್ವನಿಲ್ದ ತವರೀಗಿ ಹೋದರ ಅಡವ್ಯಾಗ ವಸ್ತಿ ಇಳಿದಂಗ” “ಹಡೆದವ್ವನ ಮಾರಿ ನೋಡಿದರೆ ಮೊಲೆಹಾಲು ಉಂಡಂತೆ” ಈ ಕೆಳಗಿನ ಸಾಲುಗಳು ತಾಯ್ತಂದೆಗಳ ಹಿರಿಮೆಯನ್ನು ತೋರಿಸುತ್ತವೆ.

ಯಾರ ಇದ್ದರು ನನ್ನ ತಾಯವ್ವನ್ಹೋಲರ
ಸಾವಿರ ಕೊಳ್ಳಿ ಒಲಿಯಾಗ | ಇದ್ದರ |
ಜ್ಯೋತಿ ನಿನ್ನ್ಯಾರು ಹೋಲರ ||

ಕಣ್ಣೆಂಜಲು ಕಾಡೀಗಿ ಬಾಯೆಂಜಲ ವೀಳ್ಯೆವ
ಯಾರೆಂಜಲುಂಡು ನನ ಮನವ ಹಡೆದೌವ್ನ
ಬಾಯೆಂಜಲುಂಡು ಬೆಳೆದೇನ ||

ತಂದೀಯ ನೆನೆದರೆ ತಂಗಳ ಬಿಸಿಯಾಯ್ತು
ಗಂಗಾದೇವಿ ನನ್ನ ಹಡೆದೌವ್ನ || ನೆನೆದರ |
ಮಾಸೀದ ತಲೆಯು ಮಡಿಯಾಯ್ತು ||

ಯಾಕೆಂದರೆ, ತಾಯಿಯು ತಾಸಿನಲ್ಲಿಯೇ ಸಿಗುವ ತವರೂರಿನ ಕಾಶೀ ಕ್ಷೇತ್ರದ ದೇವತೆ. ಆದುದರಿಂದ “ತಾಯಿಲ್ಲದ ತವರಿಗೆ ಹೋಗುವದೆಂದರೆ ನೀರಿಲ್ದ ಕೆರೆಗೆ ಬಂದು ತಿರುಗಿದಂತೆ” “ಹಡೆದಮ್ಮ ಇದ್ದಾಗ ನಡುಮನಿ ನನಗಿತ್ತು | ಸೊಸಿ ಬಂದು ನಡೆದಾಗ ತುದಿಗಟ್ಟಿ ನನಗ ಎರವಾಯ್ತು” ಯಾಕಂದರೆ, ಎಮ್ಮಿ ಹಾಲೆಂದು ಸುಣ್ಣದ ನೀರ ಬಡಿಸುವ ಅತ್ತಿಗೆ ಮನೆಗೆ ಯಜಮಾನಿ ಆಗಿರುತ್ತಾಳೆ. ಅತ್ತಿಗೆ ಹೇಗಿದ್ದರೂ ಅಣ್ಣ ಬೇಕು: ತಂದೆಯಡಗಿದ ಬಳಿಕ ಅವನೇ ತಂದೆ.

ಅಣ್ಣ ಬರತಾನಂತ ಅಂಗಳಕ ಥಳಿ ಕೊಟ್ಟ
ರನ್ನ ಬಚ್ಚಲಕ ಮಣಿ ಹಾಕಿ | ಕೇಳೇನ |
ಥಣ್ಣಗ್ಹಾರಿಲ್ಲ ತವರವರು ||

ಅತ್ತಿಗೆಯ ಅರಸೇನ ತಾಯಿ ಕುಮಾರೇನ
ಮಕ್ಕಳಿಗೆ ಮಾವ ನನಗಣ್ಣ | ಬಂದರ |
ನಿಚ್ಚ ದೀವಳಿಗೆ ಮನಿಯಾಗ ||

ಇನ್ನೂ ಜೊಗಚಿಕಾಯಂತೆ ಕೂದಲುಳ್ಳ ಗೆಳತಿ, ಕುಲವೆರಡಾದರೂ ಆಕೆಯೊಡನೆ ಮನವೊಂದು. ಆಕೆಯ ‘ದನಿ ಸುದ್ದ’ ಅದಕ್ಕಾಗಿ ಅವಳೊಡನೆ ಗೆಳೆತನ. ಪರಸ್ಪರರಲ್ಲಿ ಒಣ ಮಾಯೆಯಿಲ್ಲ.

ಗೆಳತಿ ಹಡೆದಾಳಂತ ನಗತ ಬಾಗೀಣೊಯ್ದ
ಜರತಾರಂಗಿ ಮುಯ್ಯೊಯ್ದ | ಗೆಳೆದೆವ್ವ |
ಜನಕೊಪ್ಪೂ ಮಗನ ಹಡೆದಾಳ ||

“ಬಡವರ ಸೊಸೆಗೆ ಬಾಯಿ ಸಡಿಲು ಬಿಡುವವರೆಲ್ಲ ಅತ್ತೆಗಳೇ” ಎಂದು ಶ್ರೀ ಬೇಂದ್ರೆಯವರು ಕಥೆಯೊಂದರಲ್ಲಿ ಹೇಳಿದ್ದಾರೆ. ಆದರೆ ಹಚ್ಚಿಕೊಂಡವ್ವನಿಗೆ ಆ ಸೊಸೆ ಚೊಚ್ಚಿಲು ಮಗಳು. ಬಿಟ್ಟಾಡಿಕೊಳ್ಳುವ ವೈರಿಗೆ ಬಿಚ್ಚುಗತ್ಯಾಗಿ ಹೊಳೆಯುವಳು. ಇಡಿಯ ದಿನವನ್ನು ಇಗ್ಗರದಲ್ಲಿ ಕಳೆದ ಸೊಸೆಗೆ ಪತಿಯ ಪ್ರೀತಿಯು ಏಕಾಂತದಲ್ಲಾದರೂ ಪ್ರಟಕವಾದರೆ ಆಕೆಗೆ ಸಂಜೀವಿನಿ ಸಿಕ್ಕ ಹಾಗೆ. ಆಗ “ಕಮಳದ ಹೂ ನಿನ್ನ ಕಾಣದೆ ಇರಲಾರೆ | ಮಲ್ಲಿಗೆ ಮಾಯೆ ಬಿಡಲಾರೆ | ಕೇದಿಗೆ | ಗರಿ ನಿನ್ನ ಅಗಲಿ ಇರಲಾರೆ” ಎನ್ನುವಳು. ತಾಯಿ ಹೇಳಿ ಕಳಿಸಿದರೂ “ಹಚ್ಚಡದ ಪದರಾಗ ಅಚ್ಚ ಮಲ್ಲಿಗೆ ಹೂವ ಬಿಚ್ಚಿ ನನಮ್ಯಾಲ ಒಗೆವಂಥ | ರಾಯರನ ಬಿಟ್ಹ್ಯಾಂಗ ಬರಲೆವ್ವ ಹಡೆದವ್ವ” ಎಂದು ಕೇಳುವಳು. ವಾರೀಗಿ ಪುರುಷನೆಂದರೆ “ಹಣಚಿಬಟ್ಟಿನ ಮ್ಯಾಲೆ ಹರಿದಾಡೂ ಕುಂಕುಮ: ಸರದಾಗ ಇರುವ ಗುಳದಾಳಿ; ಅವನ ಹಲ್ಲು ಹವಳ; ಸೊಲ್ಲು ಸಮಾಧಾನಕರ; ಕಾಲ ಹಿಮ್ಮ,ಡ ಕಮಲ” “ಹಾಸೀಗಿ ಹಾಸೆಂದ ಮಲ್ಲೀಗಿ ಮುಡಿಯೆಂದ | ಬ್ಯಾಸತ್ತರ ಮಡದಿ ಮಲಗೆಂದ | ನನ ರಾಯ ತನನೋಡಿ ತವರ ಮರೆಯೆಂದ” ಒಮ್ಮೊಮ್ಮೆ ತಾಯಿಯು ಸೊಸೆಯನ್ನು ಕುರಿತು ಹೊಸೆಯುವ ರಗಳೆಗೆ ತಲೆ ಕೆಡಿಸಿಕೊಂಡು ಗಂಡನು ಹೆಂಡತಿಯನ್ನು ಬಡಿಯುವನು. ಆಕೆಗೆ ಆಸರವೇ ತಪ್ಪಿದಂತಾಗಿ ತವರಿಗೆ ಕಳಿಸಿರೆಂದು ಹಟ ತೊಡುವಳು. ಪತಿಯು ಹೊಡೆದುದಕ್ಕೆ ಒಳಗೊಳಗೆ ಮರುಗದೆ ಇರುವದಿಲ್ಲ.

ಮಡದೀನ ಬಡದಾನ ಮನದಾಗ ಮರಗ್ಯಾನ
ಒಳಗ್ಹೋಗಿ ಸೆರಗ ಹಿಡಿಯೂತ ಕೇಳ್ಯಾನ |
ನಾ ಹೆಚ್ಚೋ ನಿನ್ನ ತವರ್ಹೆಚ್ಚೋ ||

ತನ್ನ ಮೇಲೊಬ್ಬ ಸವತಿ ಬರಲಿರುವ ಸಂದರ್ಭದಲ್ಲಿ – ರಾಯ ಬರತಾರಂತ ರಾತ್ರೀಲಿ ನೀರಿಟ್ಟ | ರನ್ನ ಬಚ್ಚಲಕ ಮಣಿ ಹಾಕಿ | ಸಣ್ಣವಳು. ಮ್ಯಾಲ ಸವತ್ಯಾಕ? ಎನ್ನುವಳು. “ಅಂಗೀಯ ಮ್ಯಾಲಂಗಿ ಛಂದೇನೊ ರಾಯ” ಅನ್ನುವಳು. ಇಲ್ಲಿ ಹೊನ್ನಮ್ಮನ “ನೆನೆಯಿಪೆನಲ್ಲದೆ ನೇಮಿಪುದಿಲ್ಲೆ”ನ್ನುವ ವಿನಯವು ನೆನಪಿಗೆ ಬರುವದು.

ಕೂಲಿ ಮಾಡಿದರೂ, ಕೋರಿ ಹೊತ್ತರೂ ರಾಯ ಬಡಚಲ್ಲ; ಬಂಗಾರ ಮಾಲ ಇದ್ದಂತೆ ಗರತಿಯ ಪಾಲಿಗೆ. ಆಕೆ ಬಹು ಉದಾರ ಮನಸ್ಸಿನವಳು. ಗಂಡನಿಗೆ ಬೇಕಾದರೆ ಅದು ಆಗಲೆನ್ನುವಳು. “ಗಂಡ ಪಂಡಿತರಾಯ ರಂಡೀಯ ಮಾಡಿದರ ಭಂಡ ಮಾಡವರ ಮಗಳಲ್ಲ | ಕೊರಳಾನ | ಗುಂಡು ಬೇಡಿದರ ಕೊಡುವೆನು” ಯಾರೋ ಕೇಳುವರು-“ಚಿಂತಾಕು ಇಟಕೊಂಡು ಚಿಪ್ಪಾಟಿ ಬಳಿಯುವಾಕೇ | ಚಿಂತಿಲ್ಲ ಏನು ನಿನಗಿಷ್ಟು | ನಿಮ್ಮ ರಾಯ ಅಲ್ಲೊಬ್ಬಳ ಕೂಡ ನಗತಾನ” ಅದಕ್ಕವಳು –“ನಕ್ಕರೆ ನಗಲೆವ್ವ ನಗೆಮುಖದ ಕ್ಯಾದೀಗಿ | ನಾಮುಟ್ಟಿ ಮುಡಿದ ಪರಿಮಳ |ದಾ ಹೂವ | ಅವಳೊಂದು ಗಳಿಗೆ ಮುಡಿಯಲಿ” ಅನ್ನುವಳು. ಆದರೆ ಅನ್ನಿಗರು ಆತನಿಗೆ ಬುದ್ಧಿ ಹೇಳದಿರುವದಿಲ್ಲ. ಅದು-

ಕಾಗೀಗಿ ಕಣ್ಣಿಟ್ಟ ಕರಿಯ ಹುಬ್ಬಿನ ಜಾಣ |
ಮಾವೀನ ಹಣ್ಣು ಮನಿಯಾಗ | ಇಟಗೊಂಡು |
ನೀರಲಕ್ಯಾಕ ನೆದರಿಟ್ಟ ||

ಹೆರವರ್ಹೆಣ್ಣೀಗಾಗಿ ಹೊರಗ ಮಲಗುವ ಜಾಣ |
ಗಿಡದ ಮ್ಯಾಲೆರಡು ಗಿಣಿ ಕೂತು | ನುಡಿದಾವ |
ಎರವನ್ನೊರಾಯ ನಿನ ಜೀವ ||

ಹೀಗೆ ಸೊಸೆಯಾಗಿರುವವಳು ಕೀಡಿ ಕುರಡೀಕುಠಾರವಾದಂತೆ ಮಗನು ಪ್ರಾಯಕ್ಕೆ ಬಂದಾಗ ಒಮ್ಮೆ ಅತ್ತೆಯಾಗಿ ಬಿಡುವಳು. ಮಗಳು ದೊಡ್ಡವಳಾಗಿ ಅತ್ತೆಯ ಮನೆಯ ಸೊಸೆಯಾಗುವಳು. ಒಮ್ಮೊಮ್ಮೆ ಮಗಳ ಒಗೆತನವು “ಹುಲ್ಲಾಗ ಬೆಂಕಿ ಒಗೆದಂಥದೂ” ಆ ಸಂಬಂಧವು “ಗುಡ್ಡದ ಕಲ್ಲೀಗಿ ಧಾರಿ ಎರೆದ ಹಾಗೆ”ಯೂ ಆಗುವದು. “ಹಾಲು ಬಾನ ಉಣಿಸಿ ಮಾರಿ ಸೆರಗೀಲೆ ಒರೆಸಿದೆ | ಬಾಲನೇ | ಬಂದಂಥ ನಾರಿಗಾದೆಲ್ಲೊ ಹಡದಪ್ಪ” ಎಂದು ಮಗನಿಗಾಗಿ ಮಿಡುಕುವಳು. ಆದರೆ ಅಂಥದೇ ಇನ್ನೊಂದು ಪ್ರಸಂಗದಲ್ಲಿ “ವಾರೀಗಿ ಪುರುಷರ ತೋಳಮ್ಯಾಲೀನ ನಿದ್ದಿ | ಎಳ ನನಮಗಳ ಬೆಳಗಾಗಿ | ದೊಡ್ಡ್ಯಾನ ಕೀಲ ಕರುಗೋಳು ಮೊಲೆಯುಂಡು”ಎಂದು ತಾಯಿಯಾದವಳು ಅಕ್ಕರೆಯಿಂದ ಎಬ್ಬಿಸುವಳು. ಆದರೆ ಅತ್ತೆಯು ಇದನ್ನು ಸಹಿಸುವಳೇ” ಆದರೆ ಸೋದರತ್ತೆ ಮಾತ್ರ “ನನ್ನ ಅಣ್ಣನ ಮಗಳ ನನಗೆ ಹೋಲಲಿ ಬ್ಯಾಡ | ನನ್ನಲ್ಲಿ ಭಾರಿ ಗುಣವಿಲ್ಲ | ಹೇಮರಡ್ಡಿ ಮಲ್ಲಮ್ಮಗ್ಹೋಲ ನನ ಸೊಸಿಯೇ” ಎಂದು ಹರಸುವಳು: ಹಾರೈಸುವಳು. ತವರುಮನೆಯೊಡನೆ ಇದಿರುಗುಬಸ ಮಾಡಿದ್ದು, ಮಗಳೂ ಸೊಸೆಯೂ ತನ್ನಲ್ಲಿಯೇ ಇದ್ದಾಗ – “ಮಗಳ ಮಾವ ಬಂದ ಸೊಸಿಯ ಅಪ್ಪ ಬಂದ | ಯಾರಿಟ್ಟ ಯಾರ ಖಳುವಲೇ | ನನ್ನಣ್ಣ | ಮಗಳಿಟ್ಟು ಸೊಸಿಯ ಕರೆದೊಯ್ಯೋ””” ಎನ್ನುವ ಮಾತಿನಲ್ಲಿರುವ ಸಂಸ್ಕಾರ ಸಾಮಂಜಸ್ಯವನ್ನೂ, ಕರುಳಿನ ಕಕ್ಕುಲತೆಯನ್ನೂ ಊಹಿಸಿಯೇ ತಿಳಿಸಬೇಕು.

ಜೀವನದಲ್ಲಿ ಆನಂದ ಪ್ರಕಟಣೆ

ಹಾಡು ಎನ್ನುವದೇ ಒಂದು ಆನಂದದ ಲಹರಿಯ ತೆರೆ. ಮಾಗಿಯಲ್ಲಿ ಕೋಗಿಲೆಯ ಕಂಠ ಕುಲರುತಿಗಳೂ ಕುಗ್ಗುವವು. ನಮ್ಮ ಜನಜೀವನದಲ್ಲಿ ಬೆಳಗಿನಿಂದ ಬೈಗಿನವರೆಗೂ, ಹುಟ್ಟು-ಸಾವುಗಳಲ್ಲಿಯೂ, ಕಷ್ಟ-ಸುಖಗಳಲ್ಲಿಯೂ ಹಾಡು ಜೀವದುಸಿರಾಗಿರುಚದು ಕಂಡುಬರುತ್ತದೆ. ಆ ಹಾಡು ಮರೆತುದರಿಂದಲೇ ನಮ್ಮ ಹಿಗ್ಗು ಅಡಗಿದೆಯೇನೋ ಅನ್ನುವಂತೆದೆ. ನಮ್ಮವರು ಶವ ಸಂಸ್ಕಾರದಂಥ ದುಃಖ ಪ್ರಸಂಗಕ್ಕೆ ಸಹ “ಸ್ಮಶಾನ ಯಾತ್ರ” “ನಿರ್ಯಾಣ ಮಹೋತ್ಸವ” ಎನ್ನುತ್ತಿರುವುದರ ಮರ್ಮವೇನು? ನಮ್ಮ ಲಾವಣಿಗಳಲ್ಲಿ ಬರುವ ವಿವಿಧ ಮಟ್ಟುಗಳೂ ಪ್ರಸಂಗಗಳೂ ಹಿಗ್ಗಿನ ಸೆಲೆಯೇನೋ ಅನ್ನುವಂತಿದೆ. “ಸಿದ್ದು ಶಿವನಿಂಗ ಹಾಡೂದುವರಿಸಿ | ನುಡಿ ಎತ್ತರಿಸಿ ಸುರಿದಂಗ ಮುತ್ತಾ | ಶ್ರೀ ಸಾನಿದಪಮಗರಿಸ ಸರಿಗಮ ನಾರಿ ಗತ್ತಾ” ಎನ್ನುವ ದನಿಯಲ್ಲಿರುವ ಲಹರಿಯು ಆನಂದ ಜೀವನದ ಕುರುಹು. “ಪುಗಡಿ ಆಟ ಏನ ಹೇಳಲಿ ತಾಳಗತ್ತ ಮಾಡಿದಾಂಗ | ನಗಾರಿ ನುಡಿದಂಗ ದುಮ ದುಮಿ ಹೊಡೆದಂಗ | ಚಿಟ್ಟ ಔಡ್ಲ ಸಿಡಿದಂಗ | ಮಗ್ಗೀ ಪಾಟ್ಲಿ ಹೆಣಿದಂಗ | ಸುದ್ಧ ನವಿಲು ಕುಣಿದಂಗ | ತಂಡ ನೆರೆದಿತೋ ಜನ” ಇದರಲ್ಲಿಯ ಮಾತಿನ ಒನಪು ಹಿಗ್ಗಿನ ಬುಗ್ಗೆಯಲ್ಲದೆ ಮತ್ತೇನು? ನೂಲೊಲ್ಯಾಕ ಚೆನ್ನಿ’ ಬಸುರಿದ್ದೀನು ಹೆಸರಿನ್ನೇನಿಡೂಣ? “ತುಂಟ ತುಂಟರಿಗಿ ಗಂಟು ಬಿದ್ದರ ಗರದಿ ಆಗತಾದ ಗಮ್ಮತ”, ಗೋಕುಲಾಷ್ಟಮಿ,’ ‘ಸೊಲ್ಲಾಪುರದ ಸಿದ್ಧರಾಮ’ ಮೊದಲಾದ ಹಾಡು ಲಾವಣಿಗಳು ಕೇಳಿದವರನ್ನೂ ಹಾಡಿದವರನ್ನೂ ಹಿಗ್ಗುಗೊಳಿಸುವದನ್ನು ಬಹು ಜನರು ಬಲ್ಲರು. ಆ ಹಾಡುಗಳಿಗಿರುವ ನೈಸರ್ಗಿಕ ಗುಣವೇ ಅಂಥದು. ಅದು ಕಟುಗಾರರ ಜೀವನ ಪ್ರತಿಭೆ. ನಮಗೆ ಗೊತ್ತಿದ್ದ ಮಟ್ಟಿಗೆ ಹಲಸಂಗಿ ಖಜಾಭಾಯಿ ಲಾವಣಿ ನೋಡಿದವರೂ, ಮಾಲಿಂಗಪುರದ ಕುಬಣ್ಣನವರ ಕತೆ ಕೇಳಿದರೂ ಅವರ ಜೀವನವು ಒಂದೊಂದು ರೀತಿಯಲ್ಲಿ ಪರಿಪಕ್ವವಾಗಿದ್ದವೆಂಬುದನ್ನು ಒಪ್ಪುವರು (ಈ ಪ್ರಸಂಗದಲ್ಲಿ ಚಾಂದಕೋಟೆಯ ನಬೀಸಾ, ಕೋರಹಳ್ಳಿಯ ಮೌಲಾಸಾ, ಹಜರಿ ಬಡೇಶಾ, ತೇರದಾಳದ ಗೋಪಾಲ ದುರದುಂಡಿ, ಜನವಾಡದ ನಾನಾ ಸಾಹೇಬ,ಕಲಬುರ್ಗಿಯ ಅಂಬಾದಾಸ ಮೊದಲಾದ ಲಾವಣಿ ಕವಿಗಳ ಹೆಸರನ್ನು ನೆನಪಿಗೆ ತಂದುಕೊಡುತ್ತೆನೆ).ನಮ್ಮ ಬದುಕಿನಂತೆ ನಮ್ಮ ಸಾಹಿತ್ಯ. ಇತ್ತೀಚಿನ ನಮ್ಮ ಬದುಕು ಹಸಗೆಟ್ಟಿದ್ದರಿಂದ ನಮ್ಮ ಸಾಹಿತ್ಯಕ್ಕೂ ಅದೇ ವಾಸನೆ. ಉತ್ತಮ ಜೀವನಕ್ಕೆ ಉತ್ತಮ ಸಾಹಿತ್ಯವೂ ಉತ್ತಮ ಸಾಹಿತ್ಯಕ್ಕೆ ಉತ್ತಮ ಜೀವನವೂ ಅವಶ್ಯಕ. ಜೀವನ ಕೃಷಿ ನಡೆದಿರುವಲ್ಲಿ ಉತ್ತಮ ಸಾಹಿತ್ಯವು ನಿರ್ಮಾಣ ಹೊಂದುತ್ತಲೂ, ಅದರಿಂದ ಸುತ್ತಲಿನ ಜೀವನವೂ ಉತ್ತಮಗೊಳ್ಳತ್ತಲೂ ಸಾಗುವದು. ಜೀವನಕ್ಕೆ ಹಿಗ್ಗಿಲ್ಲದಿದ್ದರೆ ಸಾಹಿತ್ಯಕ್ಕೆ ಎಲ್ಲಿಂದ ಬರಬೇಕು? ಬದುಕೇ ಹಳಸಿದ ಮೇಲೆ ಲೇಸು ನಗೆಯೆಲ್ಲಿ? ಹೇಸಿ ನಗೆಯು ಪಾಡಲ್ಲ ಕೇಡು: ನಗೆಗೀಡು-ನಗೆಗೇಡು.

ನಿಸರ್ಗ ಸಾಹಿತ್ಯ

ರಸಜೀವ, ಭಾವವೊಡಲರ್ಧವಯವ ಶಬ್ದ-
ವಿಸರದೇ ನುಡಿಯಲಂಕಾರವೇ ತೊಡಿಗೆಯುತ
ವೆ ಸುಲಕ್ಷಣವೇ ಲಕ್ಷಣ ವಿಮಳ ಪದನ್ಯಾಸ ನಡೆ ರೀತಿ ಸುಕುಮಾರತೆ ||

ಎಂದು ರಾಘವಾಂಕನ ಕವಿಯು ಉತ್ತಮ ಕಾವ್ಯದ ಲಕ್ಷಣವನ್ನು ಸ್ಪಷ್ಟೀಕರಿಸಿದ್ದಾನೆ. ಈ ಲಕ್ಷಣಗಳಲ್ಲಿ ಬಹುತರ ಅನೇಕ ಲಕ್ಷಣಗಳು ಜನಪದ ಸಾಹಿತ್ಯದಲ್ಲಿ ಕಂಡುಬರುತ್ತವೆ. ನಿಸರ್ಗ ಸಾಹಿತಿಗಳು ಲಕ್ಷಣ ಶಾಸ್ತ್ರವನ್ನು ಅಭ್ಯಸಿಸಿದವರೂ ಅಲ್ಲ, ಕೇಳಿ ಕಲಿತವರೂ ಅಲ್ಲ. ಆದರೆ ಸ್ವಾಭಾವಿಕವಾಗಿಯೇ ಆ ವಾಣಿಯಲ್ಲಿ ಉತ್ತಮ ಕಾವ್ಯದ ಅನೇಕ ಲಕ್ಷಣಗಳು ಕಂಗೊಳಿಸುತ್ತವೆ. ಅವರು ಅಲ್ಪಶೃತರು, ಬಳಸುವ ಶಬ್ದ ಸಂಖ್ಯೆ ಸಣ್ಣದು; ವ್ಯಾಕರಣ ಛಂದಸ್ಸುಗಳ ಕಟ್ಟಳೆ ತಿಳಿಯರು. ವಿಶೇಷವಾದ ಆಡಂಬರವನ್ನರಿಯದೆ ಸಹಜವಾಗಿ ಹೇಳಿದ ಕಥೆ, ಹಾಡು, ಒಡಪು, ಗಾದೆ, ವರ್ಣನೆಗಳಿಂದ ಆನಂದವು ಲಭಿಸಿದರೆ ಅದು ಉತ್ತಮ ಸಾಹಿತ್ಯವಲ್ಲವೇ? ಸೂರ್ಯ, ಚಂದ್ರ, ಆಕಾಶ, ನಕ್ಷತ್ರ, ಪರ್ವತ, ನದಿ ಮೊದಲಾದ ಸೃಷ್ಟಿಯ ದೃಶ್ಯಗಳಂತೆ ಹಳ್ಳಿಯ ಸಾಹಿತ್ಯವು ನಿಸರ್ಗ ರಮಣೀಯವಾಗಿದೆ. ಅದರ ಬಹುಭಾಗವೆಲ್ಲ ಸವಿಯಲ್ಲಿ ಕಾಂತೆಯರ ಮಾತಿನಂತಿದೆ. ಅದನ್ನು ತುಸು ಆಲಿಸುವಾ. ಈ ಕೆಳಗಿನ ಸಾಲುಗಳಲ್ಲಿ ಹರಿಹರನ ಓಟ, ಶೈಲಿ ಕಂಡುಬರುತ್ತದೆ.

ಮಂಗಳಾರs ದಿನ ವೀರ ನಿನ್ನೋಲಗ |
ಚಿಟ್ಟ ಚಿಣಗೀ ಹುವ್ವ ದುಂಡ ಮಲ್ಲಿಗಿ ಹುವ್ವ |
ಕೊಂಡಾಡೊ ದಾಸ್ಯಾಳ ಮಂಡ್ಲೆ ಸೂರದ ಹುವ್ವ |
ಏಳು ಸಮುದರದಾನ ಪಾರಿಜಾತದ ಹುವ್ವ |
ಕಂಚಿಯ ಈ ಮಗ್ಗಿ ಕಮಳದ ಈ ಮಗ್ಗಿ
ಖ್ಯಾದೀಗ ಗರಿ ನೂರು ಖ್ಯಾದೀಗ ಹೊಡಿ ನೂರು |
ಎಲ್ಲಕ ಹೆಚ್ಚಿಂದು ಬೆಲ್ಲಪತ್ತರಿ ನೂರು
ಕರಕೀಯ ಪತ್ತರಿ ಕರಿಯ ತುಂಬೀ ಹುವ್ವ |
ಕರಿ ಈರಭದ್ರನ ಕರಣ ನೋಡಿ ಪೂಜೆಗೊಳ ಬನ್ನೇ |

ಕೃಷ್ಣ ಗೋಪಿಯರ ಪ್ರಸಂಗವನ್ನು ಕೇಳುವಾಗ ನಾವು ಭರತೇಶವೈಭವವನ್ನು ಓದುತ್ತಿರುವಂತೆ ತೋರದಿರದು.

ನೀರಾಟ ಜಕಣ್ಯಾರು ನಿಂತಾರ ನಿಸ್ಸಂಗ | ಪೀತಾಂಬರ ಇಲ್ಲದಂಗ |
ಕೃಷ್ಣ ಹೋದ ಕಳ್ಳನಂಗ | ಮರದ ಮ್ಯಾಲ ಹಾಸಿದ |
ಹಾಸಗೊಂಡು | ಮ್ಯಾಗ ಹೊಚಗೊಂಡು | ಮಾರಿ ಮುಚಗೊಂಡು |
ಕೃಷ್ಣ ಮಲಗಿದಾ ||

ಸ್ತ್ರೀಯರ ಚಲುವಿಕಿ ಒಬ್ಬರಕಿಂತ ಒಬ್ಬರು ಸೇಲ | ನಾ ಮೇಲ | ನೀ ಮೇಲ |
ಬೇತಲ ಗುಲ್ಲಾ | ಓಕಳಿ ಮೈಯೆಲ್ಲ | ಹಚ್ಚಿದಂಗ ಹಿಲ್ಲಾಲ |
ಮೂಡಲ ತರಂಗಿಣಿ | ಭಂಗಾರ ಬಳೀ ಚಂದ್ರಹಾರ |
ಕೊರಳಾಗ ರತ್ನದಾ ಮಣಿ ||

ನಾರದ ನೋಡಿಕೇರಿ ಹೇಳ್ಯಾನ ಕಿಡಿಗೇರಿ | ಬಾಲ್ಯಾರ ಗಡಿಬಿಡಿ |
ನಾ ಹಿಡಿ ನೀ ಹಿಡಿ | ಏರತಾರ ಗೋಡಿ ಹೂಡಿ | ಇಂದ್ರವನ ಶೋಧ ಮಾಡಿ |
ಶೋಧ ಮಾಡಿ | ಶೋಕ ಮಾಡಿ | ಬಟ್ಟ ಮುರದು ಸಿಟ್ಟ ಮಾಡಿ |
ಒಂದಿನಾರೆ ಸಿಕ್ಕಾನ್ನಡಿ | ನೆಲ ನುಂಗಿತೇನ ಕೃಷ್ಣನ |
ಕುಣಿ ಕುಣಿದು ದಣಿದು ಬ್ಯಾಸತ್ತು ನಿಂತಿದಾರ ಗೋಕುಲಾಷ್ಟಮಿ ದಿನಾ ||

ಇನ್ನು ಭೀಷ್ಮ ಪರ್ವತದಲ್ಲಿ ಬಂದ ಯುದ್ಧ ವರ್ಣನೆ.

ಮೀಸಿ ಹುರಿಯ ಹಾಕಿ ಖಡಡಡ ಬಾಣ ಜಗ್ಗಿ ಬಿಟ್ಟ | ಬಿಟ್ಟ ತಾನು ಬಿಟ್ಟ |
ಆನಿ ಸೊಂಡಿ ಹಿಡಿದು ದರರರ ಎಳೆದು ಭೀಟಿ ಜಿಗಿದ | ಜಿಗಿದ | ತಾನು ಜಿಗಿದ |
ಹೊಡೆದು ಶಾಪಾ ಮಾಡಿ ಕೆಡವಿದ್ದ ರಣದಾಗ ಹೆಣಕ ತಟ್ಟಿದಾವು ರಥದ ಗಾಲಿ |
ನೆತ್ತರದ ಹರಿದಿತರಿ ಕಾವಲಿ | ತಗಿಲಾಕ ಹೊಂಟಿತರಿ ನದಿಯ ನೆಲಿ |
ಪಾಂಡುಪ್ರತಾಪದೊಳಗಾದ ಔತುಕಾ ಎಷ್ಟೆಂತ ನಾ ವರ್ಣಿಸಲಿ |
ಒಂದೆ ಬಾಯೀಲಿ ||

ಇಂಥ ಅಪರಾತ್ರಿಯಲ್ಲಿ ಮನೆಯೊಳಗೆ ನಾನೊಬ್ಬಳೇ ಇದ್ದೆ; ನೀವೆಲ್ಲಿಗೆ ಹೋಗಿ ಬಂದಿರೆಂದು ಹೆಂಡತಿಯು ಗಂಡನಿಗೆ ಕೇಳಲು ತನುಘಾಳಿಗ್ಹೋಗಿದ್ದೇವೆಂದು ಹೇಳುತ್ತಾನೆ.

ಹೆಂ : ಎದೆಯ ಮ್ಯಾಲಿನ ಘಾಯಿ | ಎಳೆಯ ಚಂದ್ರಮನಂಗ | ನೀವೆಲ್ಲಿ ಹಾದು ಬಂದ್ರೀ?

ಗಂ : ಜಾಣೀ | ಬಾಳೀಯ ಬನದಾಗ ಹಾದು ಬರುವಾಗ ಬಾಳೆಯ ಗರಿ ತಾಕ್ಯಾವ |

ಹೆಂ : ಹುಬ್ಬು ಹುಬ್ಬಿನ ಘಾಯಿ ಇದೇನು?

ಗಂ : ಜಾಣೀ | ತೋಟದಾಗ ಇರುವ ನೀಟುಳ್ಳ ಗಜನಿಂಬಿ ಗರಿ ತಾಕ್ಯಾವ |

ಹೆಂ : ನಾರ್ಯಾರ್ಹಚ್ಚೋಹಲ್ಪುಡಿ ನಿಮ್ಹಲ್ಲಿಗ್ಯಾಕ ಹತ್ಯಾವ?

ಗಂ : ಗೊಲ್ಲರೋಣ್ಯಾಗ ಹಾದು ಬರುವಾಗ ಅವರು ತಂದು ಹಲ್ಲೀಗಿ ಹಚ್ಚಿದರು.

ಹೆಂ : ಮೈಮೇಲಿನ ಹೂವಿನ ಶಾಲ್ಗೋಳು ಮಾಸಿವೆ | ನೀವು ಇಷ್ಟೇಕೆ ಬೆವತಿರುವಿರಿ?

ಗಂ : ಗರಡೀಯ ಮನೆಯಾಗ ಸಗತಿ ಹೊಡವಾಗ ಕಿರಿಬೆವರ ಬಿಟ್ಟಿವೆ.

ಈ ಸಂವಾದವು ಯಾರಿಗಾದರೂ ತಲೆದೂಗಿಸುವಂತಿದೆ.

ಇನ್ನು ಶಿವನು ಗಂಗೆಯನ್ನು ಸವತಿಯನ್ನಾಗಿ ತಂದನೆಂದು ಗೌರಿಯು ತನ್ನ ಹೊಟ್ಟೆಯೊಳಗಿನದನ್ನೆಲ್ಲ ತೋಡಿಕೊಂಡು ಸಂತಾಪವನ್ನು ವ್ಯಕ್ತಮಾಡುತ್ತಾಳೆ.

ಅಡವಿ ಯನ್ನೀಮರನೆ | ಗಿಡವೆ ಬನ್ನೀಮರನೆ
ಅಡವ್ಯಾಗ ಇರುವಂಥ ಸಾರಂಗ ಸರದೂಳಿ |
ಹೆಬ್ಬುಲಿ ಹುಲಿ ಕರಡಿ | ಎಡಬಲ ಹಾವುತೇಳೊ ದೇವಾ |
ಎನ್ನ ಮೇಲಾಡಿ ಶ್ರೀ ಗಂಗೀನ ತಂದೀ | ಎನ್ನ ತಪ್ಪೇನು ಕಂಡಿ ||

ಒಟ್ಟೀದ ಬಣವೀಗಿ ಕಿಚಗುಳ್ಳ ಬಿದ್ದಂಗ |
ಚಿಕ್ಕಂದಿನೊಗೆತನ ಮತ್ತೊಬ್ಬಳಿಗಾಯ್ತೆಂದು
ಹೊಟ್ಯಾಗ ಬೆಂಕಿ ಬರಕ್ಯಾದೊ ದೇವಾ |
ಎನ್ನ ಮೇಲಾಡಿ ಶ್ರೀ ಗಂಗೀನ ತಂದಿ | ಎನ್ನ ತಪ್ಪೇನು ಕಂಡಿ ||

ಒಮ್ಮೆ ಮಳೆಯು ಮುಂದಕ್ಕೆಳಸಿದಾಗಿ ನಾಡಿನಲ್ಲಿ ಕಾಳು ಸಿಗಲು ಹಾಹಾಕಾರವೆದ್ದಿತು.

ಒಕ್ಕಲಗೇರ್ಯಾಗ ಮಳೆರಾಜ | ಅವರು | ಮಕ್ಕಳ ಮಾರ್ಯಾರ ಮಳೆರಾಜ |
ಮಕ್ಕಳ ಮಾರಿ ರೊಕ್ಕ
s ಹಿಡಕೊಂಡು ಭತ್ತಂತ ತಿರಗ್ಯಾರೋ ಮಳೆರಾಜ |
ಗಂಡುಳ್ಳ ಬಾಲೇರು ಮಳೆರಾಜ | ಅವರು ಭಿಕ್ಷಕ ಹೊಂಟರು ಮಳೆರಾಜ |
ಗಂಡುಳ್ಳ ಬಾಲೇರು ಭಿಕ್ಷಕ ಹೋದರು | ಅನ್ಯ
sದ ದಿನ ಬಂದು ಮಳೆರಾಜ ||

ಇದರಲ್ಲಿ ನಾಡಿಗರಿಗೆಲ್ಲ ಕಾಳು ಕೊಡುವ ಒಕ್ಕಲಗೇರಿಯಲ್ಲಿಯೇ ಮಕ್ಕಳ ಮಾರಾಟ, ಅದೂ ಹೊಟ್ಟೆಯ ಹಿಟ್ಟಿಗಾಗಿ | ಗಂಡುಳ್ಳ ಬಾಲೆಯರೂ ಭಿಕ್ಷೆಗೆ ಹೊರಟಿದ್ದು | ದುರ್ದಿನದ ಲಕ್ಷಣಗಳನ್ನು ಚಿತ್ರಿಸುವ ಈ ಮಾತಿನಲ್ಲಿ ಎಷ್ಟು ಔಚಿತ್ಯವಿದೆ!

ಈಗ ವೀರಭದ್ರನ ವ್ಯಕ್ತಿತ್ವವನ್ನು ತುಸು ನಿರೀಕ್ಷಿಸುವಾ.

ನಿಮ್ಮ ರಟ್ಟಿ ಹೊಟ್ಟಿ ಮಾಡಿ ಕುಟ್ಟಿ ಗಟ್ಟಿ ನೀವು ರಣದ ಒಳಗ ಮರದಾ |
ಮೈಕಟ್ಟಗಿಟ್ಟ ಭಾಳ ದಿಟ್ಟ ಸಿಟ್ಟ ನಿಮ್ಮ ಉಗ್ರ ಎಷ್ಟು ಉರದಾ ||

ನಿಮ್ಮ ಹಸ್ತ ಶಿಸ್ತ ಇಟ್ಟವಸ್ತ ಮಸ್ತರುಳಿ ಕೈಯಾಗ ಭಂಗರದ |
ಕಪ್ಪಗೂರಳ ಸರಳ ಕೈಬೆರಳ ಹೆರಳ ಮ್ಯಾಲ ಹೊಳೆವುದು ಕುಂದಲದ |
ಉರಿಗಣ್ಣ ಕಣ್ಣ ಮೈಬಣ್ಣ ಸಣ್ಣ ತುಟಿ ಕ್ವಾರಿಮೀಸಿ ಕೊರೆದ |
ಮೂಗ ತಿಳಪ ಹೊಳಪ ನಿಮ್ಮ ರೂಪ ದೀಪ ಮುಂದ ಚಂದ್ರಜ್ಯೋತಿ ಉರದಾ ||

ಲಕ್ಷ್ಮೀಶ ಕವಿಯ-“ನಡೆ ಪಜ್ಜೆವಿಡು ಪೋಗು ತಡೆ ಮುಂದೆ ಜಡಿಬೊಬ್ಬೆ” ಎಂಬ ಪದ್ಯದಲ್ಲಿದ್ದಂತೆ ಇಲ್ಲಿ ಪ್ರತಿಗಣದಲ್ಲಿಯೂ ಪರಾಸದ ಠಣತ್ಕಾರವು ಕೇಳಿ ಬರುತ್ತದೆ.

ಒಬ್ಬ ಸಾವುಕಾರನ ಮಗಳಿಗೆ ದೆವ್ವ ಬಡಿದಾಗ, ಒಬ್ಬ ಅಪಸ್ವರ ಗಾಯಕನು ಬರುವನು. ಅವನು ಮೊದಮೊದಲು ಮಂತ್ರ ಹಾಕುವನು. ಆ ಕಥೆಯಲ್ಲಿಯ ಹಾಸ್ಯವೆಂಥದು ನೋಡಿ :

ಗಾಯನ ಮಾಡುವ ಬಂದಿದ | ಮಂತ್ರ ಹಾಕಿದಂಗ ಮಾಡಿದ |
ಬಗಿಹರಿಯಲಿಲ್ಲ ಅದರಿಂದ | ತುಂತೂನಿ ತಗೊಂಡು ಗಾಯನ ಸುರು ಮಾಡಿದ |
ದೆವ್ವ ಕುಣಿಯುತ್ತಿತ್ತರಿ ಮುಂದ | ಮತ್ಯಾಕ ಕಾಳ ಬಂತಂದ |
ತಲಿಬ್ಯಾನಿ ಎದ್ದೀತ ಹೆಚ್ಚಿಂದ | ನಿನ ದರ್ಶನ ಬ್ಯಾಡೋ ಹೋಗತೀನಿ ಇಲ್ಲಿಂದ ||
ಅಪಸ್ವರ ಗಾಯನದಿಂದ | ದೆವ್ವಾದರು ನಿಂದ್ರುದಿಲ್ಲ ಮುಂದ |
ಸಭಾ ಹೆಂಗ ಕೇಳಬೇಕೊ ಛಂದ | ತಾಳ ಬಿಟ್ಟ ಹಾಡಿದರೆ ದೋಷ ಆದ ಅದರಿಂದ ||

ಹೆಂಡತಿಯು “ತಿಂಗಳಮ್ಯಾಲ ಒಂದಿನಾಯ್ತು | ಬಸರಿದ್ದೀನಿ ಹೆಸರಿನ್ನ ಏನಿಡೋಣ?” ಎಂದುಕೇಳಿದಾಗ ಗಂಡನು ಎಚ್ಚರಿಕೆ ಕೊಡುತ್ತಾನೆ.

ಹಡಿಯೂ ದಿನಾ ಸನಿ ಬಂದು | ಎಂಟೇ ತಿಂಗಳು ಮುಂದ ಉಳಿದು |
ಕೆಟ್ಟಗಿಟ್ಟ ಹಡದೀ ನಿನ್ನ ಚಟ್ಟಾ ಎತ್ತೀನ ||

ಲಾವಣಿಕಾರರ ಬಣ್ಣನೆಗೆ ಸಿಕ್ಕ “ಗಿಡ್ಡ ಕರೆ ಹುಡುಗೆ”ಯರೂ ಕವಿತ್ವ ವಸ್ತುವಾಗಿದ್ದಾರೆ. ಶ್ರೀ ಮಾಸ್ತಿಯವರ ಕೈಗೆ ಸಿಕ್ಕ “ಮಾಂಬಿ” “ಕುರಿಮರಿ”ಗಳಂತೆ ಇವಳು ಕರಿ ಹುಡಿಗೆ

ನೀ ಬಾರ ಕರ್ರನ ಕರಿ ಹುಡಿಗಿ | ಕರಿಯಸೀರಿ ಉಡಗಿ | ನವಿಲಿನಂಗ ನಡಿಗಿ |
ನಡುತೆ ಸವನಾ | ಕರಿ ಹುಬ್ಬ ಕೊರೆದಂಗ ಕರಿಕಾಡಿಗಿ ಕಣ್ಣಾ |
ಕರಿ ಕೂದಲ ಬೇತಲ ತೀಡಿ ತೆಗೆದೆ ಸಣ್ಣಾ | ಕರಿಗೋಟ ಕೈಯಾಗ ಬಳಿ |
ಚಿಕ್ಕ ಪ್ರಾಯ ಎಳಿ | ನಿನ್ನ ಬೆಳಿ | ಕರಿ ಬಾಳಿಯ ಬಂಬ ||

ವರ್ಣನೆಗೆ ನಿಂತ ನಮ್ಮ ಹೆಣ್ಣು ಮಕ್ಕಳ ತ್ರಿಪದಿಯು ವಾಮನ ಮೂರ್ತಿಯ ಮೂರು ಪಾದಗಳಂತೆ ಮೂರು ಲೋಕಗಳನ್ನೆಲ್ಲ ಆವರಿಸಿ ನಿಲ್ಲುತ್ತದೆ.

ಹಾಂವ ಅಂದರ ಜೀವ ಹರಣವ ಹಾರ್ಯಾವ
ಹಾಂವಲ್ಲ ಹಂಪಿ ವಿರುಪಾಕ್ಷಿ | ನಿನಮುಂದ |
ಹಾಂವಾಗಿ ಗಂಗಿ ಹರದಾಳ ||

ಬೆಳ್ಳಗ ಬೆಳಗಾಗಿ ಬೆಳ್ಳಿ ಮೂಡಲವಾಗಿ
ಒಳ್ಳೊಳ್ಳೆ ಮೀನು ಗರಿ ತೆಗೆದು | ಆಡ್ಯಾವ |
ಗರತಿ ಗಂಗಮ್ಮನ ಉಡಿಯಾಗ ||

ಒರಳ ಸುತ್ತಲೆ ಅಕ್ಕಿ ಕೊರಳ ಸುತ್ತಲೆ ಮುತ್ತ
ಗುಡಿ ಸುತ್ತ ಘೂಳಿ ಬಸವಣ್ಣ | ಸೊನ್ನಲಿಗಿ |
ಸಿದ್ಧರಾಮನ ಸುತ್ತ ಸಿರಿಗಂಗಿ ||

ಮಹಾಕಾವ್ಯದಿಂದ ಮಹಾನಂದವೂ ಮಹೋದ್ದೇಶ ಸಾಧನೆಯೂ ಸಹಜ. ಖಂಡಕವನಗಳೂ ಚುಟಿಕೆಗಳೂ ಒಂದೊಂದು ಪ್ರವೃತ್ತಿಯನ್ನು ಸಂಸ್ಕಾರಗೊಳಿಸುವದೂ ಒಂದೊಂದು ಒಳ್ಳೆಯ ತ್ರಿಪದಿಯು ತ್ರಿಕರ್ಣಗಳನ್ನು ಪರಿಷ್ಕಾರಗೊಳಿಸುವದೂ ಅಷ್ಟೇ ಸಹಜ, ಅಷ್ಟೇ ಸತ್ಯ. ಆದರೆ, ಒಂದೊಂದು ಮಾತು ಕೆಂಡದಂತೆ ಯಾವ ನಿಟ್ಟಿಗೂ ಬಿಸಿ ಅಥವಾ ಕಲ್ಲು ಸಕ್ಕರೆಯಂತೆ ಎತ್ತ ಕಡಿದರೂ ರುಚಿ. ಅಂಥ ಮಾತುಗಳು ಗಾದೆಗಳಾಗಿ, ವೇದಕ್ಕೆ ಸರಿಯಾಗಿ, ಪದ್ಯದರ್ಥವನ್ನು ಪಲ್ಲವಿಯಲ್ಲಿ ತೋರಿಸುತ್ತ ನಮ್ಮ ಸಾಹಿತ್ಯದಲ್ಲಿ ತುಂಬಾ ಕಾಣಿಸಿಕೊಳ್ಳುತ್ತವೆ. ಗಾದೆಗಳಲ್ಲಿ ಅನುಭವವೂ ಅರ್ಥವೂ ದ್ರಾಕ್ಷೆಯಂತೆ ತುಂಬಿರುತ್ತದೆಂದು ಎಲ್ಲರೂ ಬಲ್ಲರು. ಗಾದೆಗಳಷ್ಟೇ ಅಥವಾ ಅದಕ್ಕೂ ಮಿಗಿಲಾಗಿ ಒಗಟುಗಳು ಬಳಕೆಯಲ್ಲಿರುತ್ತವೆ.

“ನಗೀ ಬಂದು ನಾಕು ತಿಂಗಳಾಯತು; ನಗಬೇಕೆಂದರೆ ಪಂಚಕ ಬಿದ್ದದ ಅಪ್ಪಗ ಬಂದು ನೋಡಿ ಹೋಗೆನ್ನಿ ; ಅವ್ವಗ ಬಂದು ಕರಕೊಂಡು ಹೋಗೆನ್ನಿ” ಎಂದು ಹೊಲದೊಳಗಿನ ಹತ್ತಿ ಬೆಳೆ ಹೇಳುತ್ತದೆ. “ಅವ್ವಂದರೆ ಹೊಂದುವದಿಲ್ಲ; ಅಪ್ಪಂದರೆ ಹೊಂದುತ್ತದೆ.” ಯಾವುದು? ತುಟಿ.

ನೆಟ್ಟನ ಗಿಡಕ್ಕೆ ನೆರಳಿಲ್ಲ –ಹಾದಿ.
ಗಿಡ್ಡನ ಗಿಡಕ ಗಿಣಿ ಮುಕರ್ಯಾವ –ಮೆಣಸಿನಕಾಯಿ.

ಇನ್ನು ಗಾದೆಯ ಮಾತುಗಳೆಂದು ಪುಸ್ತಕರೂಪದಿಂದ ಬಂದವುಗಳನ್ನು ಬಿಟ್ಟರೂ, ಹೆಣ್ಣುಮಕ್ಕಳ ಬಾಯಲ್ಲಿ ಕೆಲವು ಚುಚ್ಚು ನುಡಿಗಳಿವೆ. ಅವು ಬೈಗಳ ಸ್ವರೂಪವೆಂದು ತೋರಿದರೂ ಅವು ಸಂಗ್ರಾಹ್ಯವೆಂದು ಕಂಡುಬಾರದಿರವು.

೧. ಪದಗೇಡೀನ ಪಲ್ಲಕ್ಯಾಗ ಕೂಡ್ರಿಸಿದರೆ ಝಾವಝಾವಕ್ಕೆ ಇಳಿಸು ಅಂತಿತ್ತು.
೨. ಆಸತ್ತು ಬೇಸತ್ತು ಅಕ್ಕನ ಮನೆಗೆ ಹೋದರೆ, ಅಕ್ಕನ ಗಂಡ ಅವಕ್‌ಅಂದನು.
೩. ಸಿರಿಗೇಡಿಗೆ ಸೀರಿ ಉಡಿಸಿದರೆ, ಹೊಲಗೇರಿಗೆ ಹೇಳಲಿಕ್ಕೆ ಹೋಗಿತ್ತು.
೪. ಧರ್ಮಕ್ಕೆ ದಟ್ಟಿ ಉಡಿಸಿದರೆ, ದಡ್ಡಿಯಲ್ಲಿ ಒಯ್ದು ಮೊಳ ಹಾಕುತ್ತಿತ್ತು.
೫. ಬೇಸತ್ತು ಬೇರೆಯಾದರೆ ಪಾಲಿಗೆ ಅತ್ತೆ ಬಂದಳು.
೬. ಭತ್ತ ಇದ್ದೂ ಬಡತನ; ಗಂಡ ಇದ್ದು ರಂಡೆತನ.

ಈ ಪ್ರಕಾರ ನಿಸರ್ಗ ಸಾಹಿತ್ಯವು ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ವ್ಯಾಪಿಸಿಕೊಂಡಿದೆ. ದುಡಿಮೆ ಕಾಯಕಗಳಲ್ಲಿಯೂ, ಮನೆಗೆಲಸ, ಕೈ ಕೆಲಸಗಳಲ್ಲಿಯೂ ಜನಪದ ಸಾಹಿತ್ಯದ ಗುಪ್ತಗಂಗೆಯನ್ನು ಪುಣಹ ಪ್ರಕಟಗೊಳಿಸಲು ಸಾಧ್ಯವಿದೆ; ಮಕ್ಕಳು ಸಾಲೆಯ ಬೈಲಲ್ಲಿ “ಕಳ್ಯಾ ಮಿಳ್ಯಾ ಚಿಪ್ಪಾಟಿ ವಿಳ್ಯಾ | ಬಸರೀ ಗಿಡದಾಗ ಬಸಪ್ಪ ಕುಂತಾನ | ಮಳಿ ಹೊಡಿಲ್ಯೋ ಮಳಿ ಹೊಡಿಲ್ಯೋ|” ಎಂದು ಲಲ್ಲೆ ವಾಡಿದಾಗ ಸೈಯೆಂದು ಅವರ ಉತ್ಸಾಹವನ್ನು ಇಮ್ಮಡಿಸಲು ಶಕ್ಯವಿದೆ. ಸಭೆ ಉತ್ಸವಗಳಲ್ಲಿಯೂ, ಆಟ ಬೈಲಾಟಗಳಲ್ಲಿಯೂ ಈ ವಾಸ್ತವ ಸಾಹಿತ್ಯವು ತನ್ನ ಸ್ಥಾನವನ್ನು ಆಕ್ರಮಿಸಬಲ್ಲದು.

ನವಜೀವನದ ಬೀಜ

ಇದು ದಲಿತರು ಉದ್ದಾರವಾಗುವ ಕಾಲ, ದುಡಿಮೆಗಾರರು ರಾಜ್ಯ ಶಾಸಕರಾಗುವ ಕಾಲ; ಒಕ್ಕಲಿಗನು ನೇಗಿಲಯೋಗಿಯೆನಿಸುವ ಕಾಲ; ನಿರಕ್ಷಕರರು ಸಾಕ್ಷರರಾಗುವ ಕಾಲ; ಸಾಮಾನ್ಯ ಜನರು ಸುಖ ಬಯಸುವ ಕಾಲ. ಇದೀಗ ಉರಿ ಬಿಸಿಲು ಸುರಿಯುವ ಬೇಸಿಗೆಯು ಸರಿದು, ಕಣ್ಣಿಗೆ ಹಸುರಿನ ಹಬ್ಬ ಮಾಡುವ, ಮನಕ್ಕೆ ತಂಪನ್ನು ನೀಡುವ, ಹುಡಿಯು ನೆಲಕ್ಕೆ ಕೂಡುವ ಮುಂಗಾರಿನ ಮುಂಚಿಹ್ನಗಳು ಕಂಗೊಳಿಸುತ್ತಿವೆ. ಆದುದರಿಂದ ನಮ್ಮ ಸಂಸ್ಕೃತಿಯ ಉತ್ತಮ ಬೀಜಗಳನ್ನು ಸಂಗ್ರಹಿಸಿ, ಬುದ್ಧಿ ಹೃದಯಗಳನ್ನು ಹದಗೊಳಿಸಿಕೊಂಡಿಡುವದು ಪ್ರಗತಿಪರ ಜೀವಿಯ ಕರ್ತವ್ಯವಾಗಿದೆ. ಅದಕ್ಕೆ ತಕ್ಕಂತೆ ಅನೇಕ ಕೆಲಸಗಳು ಕೈಕೊಳ್ಳಲ್ಪಟ್ಟಿವೆ; ಹೊಸ ಕಾಲಕ್ಕೆ ತಕ್ಕಂತೆ ನಮಗೆ ಹೊಸ ಬದುಕು ಬೇಕು. ಹೊಸಬದುಕಿಗೆ ಹೊಸ ಸಾಹಿತ್ಯವು ಬೇಕು. ಕನ್ನಡ ಸಾಹಿತ್ಯವು ಹಿಂದೆ ಕಾಲಧರ್ಮಕ್ಕೆ ತಕ್ಕಂತೆ ಸಂಸ್ಕೃತ ಸಾಹಿತ್ಯವನ್ನು ಅರಗಿಸಿಕೊಂಡಿತು; ಈಗ ಪಾಶ್ಚಾತ್ಯ ಸಾಹಿತ್ಯವನ್ನು ಅನುಕರಿಸಿದೆ; ಅವುಗಳ ಫಲವಾಗಿ ಕನ್ನಡಕ್ಕೆ ಅದೆಷ್ಟೋ ಕಾಂತಿಯೂ, ಬಲವೂ ಬಂದಿವೆ. ಶ್ರೀಮಾನ್‌ ಬಿ. ಎಂ. ಶ್ರೀ. ಅವರು ಹೇಳಿದಂತೆ “ತನ್ನದನ್ನು ದೇಶ್ಯವೆಂದು ಧಿಕ್ಕರಿಸಿ, ಅನ್ಯಮಾರ್ಗದಲ್ಲಿಯೇ ಸ್ವೇಚ್ಛೆಯಾಗಿ ಮದಿಸಿ ತಿರುಗುತ್ತ ಇದ್ದು, ಕಡೆಗೆ ನವೀನತೆಯ ಕುತೂಹಲವೂ, ಸಾಮರ್ಥ್ಯವೂ ಹಳಸಿ, ಯಾವ ನಿಜವಾದ ಸತ್ವವೂ ಇಲ್ಲದೆ, ಜನರಿಂದ ದೂರವಾಗಿ ಸಾಹಿತ್ಯವೂ ನಿಸ್ಸಾರವಾಗುವದು; ತೇಜೋಹೀನವಾಗುವದು; ಸಣ್ಣ ಪಂಡಿತ ಸಂಸ್ಥೆಗಳಲ್ಲಿ ಘೋಷಿತವಾಗುವದು. ಆಗ ಮತ್ತೆ ಹಳೆಯ ಸಾಹಿತ್ಯದ ಪುನರುತ್ಥಾನವಾಗುವದು. ಮತ್ತೆ ಸಹೃದಯಯರು ತವರು ನಾಡಿನ ತಾಯಿ ಹಾಡಿನ ಹಾಲನ್ನು ಕುಡಿದು ಸಜೀವರಾಗಬೇಕೆಂದು ಹಿಂದಿರುಗುವರು. ಜನರೊಡನೆ ಜನರಾಗುವರು; ಆ ಭಾಷೆ, ಆ ಛಂದಸ್ಸು, ಆ ಜೀವ ಮತ್ತೆ ಹೊಳಪುಗೂಡಿ ಹೆಮ್ಮೆಗೇರುವದು. ಸಾಹಿತ್ಯದ ಏಳಿಗೆಯ ಕಾಲದಲ್ಲೆಲ್ಲ ಪ್ರಪಂಚದ ಎಲ್ಲ ಕಡೆಗಳಲ್ಲಿಯೂ ಹೀಗೆಯೇ ಆಗಿದೆ; ಆಗುತ್ತಿದೆ.”

ಜನಪದ ಸಾಹಿತ್ಯದಲ್ಲಿರುವ ಪ್ರಾಸಾದಿಕತೆಯನ್ನೂ ನೇರವಾಗಿ ಹೃದಯವನ್ನು ಮುಟ್ಟುವ ಸ್ವಾಭಾವಿಕತೆಯನ್ನೂ, ಅದರ ಶೈಲಿಯನ್ನೂ ಅದರಲ್ಲಿರುವ ಕನ್ನಡದ್ದೇ ಆದ ಛಂದಸ್ಸನ್ನೂ ಗುಣಪಕ್ಷಪಾತಿಗಳಾದವರು ಮನಮೆಚ್ಚಿದ್ದಾರೆ; ಹಳ್ಳಿಯ ಹಾಡು, ಅಜ್ಜಿಯ ಕಥೆಗಳು, ಗಾದೆಗಳು ಮುದ್ರಾಮಂದಿರವನ್ನು ಪ್ರವೇಶಿಸಿ, ಶಾಲೆಯ ಪಠ್ಯಪುಸ್ತಕಗಳಲ್ಲೇರಿ, ನಮ್ಮ ಮಕ್ಕಳ ಬಾಯಲ್ಲಿ ನಲಿಯಲಿಕ್ಕೆ ಆರಂಭವಾಗಿವೆ. ಇನ್ನು ಮುಂದೆ ವೃತ್ತಿಶಿಕ್ಷಣಗಳಲ್ಲೇರಿ, ನಮ್ಮ ಮಕ್ಕಳ ಬಾಯಲ್ಲಿ ನಲಿಯಲಿಕ್ಕೆ ಆರಂಭವಾಗಿವೆ. ಇನ್ನು ಮುಂದೆ ವೃತ್ತಿಶಿಕ್ಷಣವು ನಾಡಿನಲ್ಲಿ ಹರಡಿ, ಪ್ರತಿಯೊಂದು ಆಲುಗಾಟದಲ್ಲಿಯೂ ಜಾನಪದ ಹಾಡುಗಳು ನುಸುಳಿ ಗೀತಮಯ ಜೀವನವನ್ನು ಕಲಿಸಲಿರುವದು.