‘‘ಅಧಿಮಾನಸ ಸತ್ಯವು ಪರಮಾತ್ನನಿಂದ ಬಹಳೇ ಕೆಳಗಿದೆ. ಅದು ಸತ್ಯದ ವಾಸ್ತವಿಕ ನೆಲೆ ಅಲ್ಲ. ಅದು ಇತಿಹಾಸದ ಆದಿಕಾಲದಿಂದ ಮನುಷ್ಯನು ತಲೆವಾಗಿಸಿದ ಆ ಎಲ್ಲ ಸೃಜನಕಾರಿಯಾದ ಶಕ್ತಿಗಳ ಮತ್ತು ದೇವತೆಗಳ ಲೋಕಮಾತ್ರವಾಗಿದೆ” ಎಂದು ಶ್ರೀ ತಾಯಿಯವರು ಹೇಳುತ್ತಾರೆ.

ಬ್ರಹ್ಮದೇವನು ದೇವತೆಗಳನ್ನೂ, ಮನುಷ್ಯರನ್ನೂ ಸೃಷ್ಟಿಸಿ, ಪರಸ್ಪರರು ಅವಲಂಬಿಸಿದ್ದರೆ ಇಬ್ಬರಿಗೂ ಸುಖವಾಗುವದೆಂದು ಹೇಳಿದನೆಂದೂ, ದೇವತೆಗಳು ಮಳೆ ಸುರಿಸಬೇಕು, ಮನುಷ್ಯನು ಅದರಿಂದ ಉತ್ತಮವಾದ ಬೆಳೆ ಪಡೆದು, ದನಗಳಿಂದ ಹಯನು ಕಳೆದು ಯಜ್ಞರೂಪದಿಂದ ದೇವತೆಗಳಿಗೆ ತಾವುಣ್ಣುವ ಮೊದಲು ಕೃತಜ್ಞತೆಯಿಂದ ಅರ್ಪಿಸಬೇಕು-ಎಂದು ಕಟ್ಟಪ್ಪಣೆ ಮಾಡಿದನೆಂದು ಭಗವದ್ಗೀತೆಯಲ್ಲಿ ಬರುತ್ತದೆ.

ಹಳ್ಳಿಯ ಜನರ ಬಹುತರ ಉದ್ಯೋಗವು ಒಕ್ಕಲುತನ; ಇಲ್ಲವೆ ಅದಕ್ಕೆ ಸಂಬಂಧಿಸಿದ ಇನ್ನೊಂದು ಕೆಲಸ. ಒಕ್ಕಲುತನವು ಮಳೆಯನ್ನು ಅವಲಂಬಿಸಿದೆ. ಅದು ಮುಗಿಲಿನಿಂದ ಸುರಿಯುತ್ತದೆ; ದೇವತೆಗಳ ಲೋಕವೂ ಅತ್ತಲೇ ಇರುವದೆಂದು ಅವರಿಗೆ ಹೇಗೋ ತಿಳಿದಿದೆ. ಮಳೆಯೆಳಸಿದಾಗ ಮುಗಿಲ ಕಡೆಗೆ ಮುಖ ಮಾಡಿ ಮಳೆ ಕೊಡಿರೆಂದು ದೇವತೆಗಳನ್ನು ಪ್ರಾರ್ಥಿಸುತ್ತಾರೆ. ಒಳ್ಳೆಯ ಗಾಳಿ ಬೀಸಲೆಂದು ಬೇಡಿಕೊಳ್ಳುತ್ತಾರೆ. ಬೆಳೆ ಹುಲುಸಾಗಿ ಬೆಳೆಯಲೆಂದು ಬಗೆಯುತ್ತಾರೆ. ಇಚ್ಛೆ ಕೈಗೂಡಿದಾಗ ನೈವೇದ್ಯ ಮಾಡಿಸುತ್ತಾರೆ. ಬರಡು ಹಯನಾದರೆ ಹರಕೆ ಒಪ್ಪಿಸುತ್ತಾರೆ. ಮದುವೆಯಾದರೆ, ಮಕ್ಕಳಾದರೆ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.

ಕುಲಕ್ಕೊಂದು ಕುಲದೇವತೆ; ಊರಿಗೊಂದು ಗ್ರಾಮದೇವತೆ, ಮನೆಯಿದ್ದಲ್ಲಿ ಮನೆದೇವತೆ, ಹೊಲವಿದ್ದಲ್ಲಿ ಹೊಲದೇವತೆ. ಇವರೆಲ್ಲರೂ ಮನುಷ್ಯನ ಅಪೇಕ್ಷೆಯನ್ನು ಗುಪ್ತವಾಗಿಯೋ ಪ್ರಕಟವಾಗಿಯೋ ಪೂರೈಸಿಕೊಡುವರು. ಅದಕ್ಕೆ ಪ್ರತಿಯಾಗಿ ನೈವೇದ್ಯ ಬೇಡುವರು; ಎಡೆಬೇಡುವರು. ಅವು ಹೋರಿ-ಕರು ಕೊಟ್ಟರೆ, ಮೀಸಲು ತುಪ್ಪ ದೇವತೆಗೆ, ಕೂಸಿನ ಅಳುವಿನ ಕರಕರೆ ತಪ್ಪಿದರೆ ಹಿರಿಯೊಡೆಯನಿಗೆ ಬೋನ ಕಣ್ಣು ಬೇನೆ ಹಗುರಾದರೆ ದೇವತೆಗೆ ಕಣ್ಣು ಬಟ್ಟು, ಕೋರೇಮೀಸೆ, ಒಟ್ಟಾರೆ ತಾನು ಉಪಯೋಗಿಸುವ ತಿನಿಸು, ತುತ್ತು, ಅರಿಣ, ಅಂಗಿ, ಹೆಣ್ಣು, ಹೋರಿ, ಕುದುರೆ, ಹೊಸಮನೆ ಏನಿದ್ದರೂ ಅದು ಸಂಬಂಧಪಟ್ಟ ದೇವತೆಗೆ ನೈವೇದ್ಯವಾಗಬೇಕು; ಅಪರ್ಣವಾಗಬೇಕು; ಯಜ್ಞವಾಗಬೇಕು.

ಹೀಗೆ ಹೆಜ್ಜೆ ಹೆಜ್ಜೆಗೂ ದೇವತೆಗಳ ಸಂಬಂಧವಿರಿಸಿಕೊಂಡ ಮನುಷ್ಯನು ರಾಜ್ಯಾಡಳಿತ ವಿಭಾಗಗಳ ಆಡಳಿತದ ಪರಂಪರೆಯಂತೆ ದೇವತೆಗಳ ಪರಂಪರೆಯನ್ನು ಕಲ್ಪಿಸಿರುವುದರಿಂದ ಅವರ ಸಂಖ್ಯೆ ಮೂವತ್ತು ಮೂರು ಕೋಟಿಯೆಂದು ಎಣಿಸಿದ್ದಾನೆ. ತನ್ನಂತೆ ದೇವತೆಗಳಿಗೂ ಸಂಸಾರ, ಬಳಗ, ಕದನ, ಮುನಿಸು ಇವು ಅನಿವಾರ್ಯ ಎಂದು ಬಗೆದಿರುವನು. ಮಕ್ಕಳ ಮದುವೆಯನ್ನು ಉತ್ಸಾಹದಿಂದ ಉತ್ಸವಪೂರ್ವಕವಾಗಿ ಮಾಡುವಂತೆ ದೇವತೆಗಳ ಲಗ್ನವನ್ನೂ, ವಿಜೃಂಭಣೆಯಿಂದ ಮಾಡುವದಕ್ಕೆ ನಿಯಮಿತ ಹಬ್ಬಗಳನ್ನು ಕಲ್ಪಿಸಿಕೊಂಡಿದ್ದಾನೆ.

ಸೊಗಲೆಂಬ ಗುಡ್ಡದಾಗ ಮಿಗಿಲಾದ ಶರಣರು
ಗಗನವತಿಯೆಂಬ ಗವಿಯಾಗ | ಮಾಡ್ಯಾರ |
ಶಿವನ ಪಾರ್ವತಿಯ ಲಗ್ನ
sವ ||

ದೇವತೆಗಳ ಲಗ್ನವೆಂದರೆ, ಹಕ್ಕಿಪಕ್ಕಿಗಳೂ ಓಡಾಡಲಿಕ್ಕೆ ಹೋಗಿರುವ ಸಂಭವವಿದೆ.

ಕಳಕ ಮಲ್ಲಯ್ಯ ನಿನ್ನ ಕಲ್ಲಿನ ಗಾಲಿಯ ಮ್ಯಾಲೆ
ಉತ್ತತ್ತಿ ಹಣ ಗಿಣಿ ಕಟ್ಟಿ | ಓದಾವ |
ಪರ್ವತ ಮಲ್ಲಯ್ಯನ ಉಲುಪಿಗೆ ||

ಮಾನವ ಜಾತಿಯೇ ಅರಿಯಲಾರದ ಮನದ ಚಿಂತೆಯನ್ನು ಮಾದೇವ ಮಾತ್ರ ಅರಿಯಬಲ್ಲವನೆಂದೂ, ನಿನಗೆನ್ನ ಮ್ಯಾಲ ಅರುವಿರಲೆಂದೂ, ಮಾಕೂಟ ಮಲ್ಲನನ್ನು ಒಬ್ಬರು ಬೇಡಿಕೊಂಡರೆ, ಹರಕೆಗಳು ಹೊತ್ತಿಗೆ ಮುಟ್ಟಲಿಲ್ಲವಾದ ಕಾರಣ ಮುಚಕಂಡಿ ಈರಣ್ಣನು ಬೆಳ್ಳಿಯ ಕುದುರೆ ಬೇಡಿ ಕಾಡಹತ್ತಿದ್ದಾನೆಂದೂ ಇನ್ನೊಬ್ಬರು ನರಳುತ್ತಾರೆ. ಮತ್ತೊಬ್ಬರು ಇಚ್ಛಾಪೂರ್ತಿಯಿತೆಂದು ಹರಕೆ ಮುಟ್ಟಿಸಬಂದಿದ್ದಾರೆ.

ಅಪ್ಪ ಬ್ರಹ್ಮಲಿಂಗ ಇತ್ತ ಮಾರಿಯ ತಿರುವೊ
ಮುತ್ತು ತಂದೀನಿ ಕೊರಳಿಗೆ | ನೀವು ಕೊಟ್ಟ
ಪುತ್ರನ ತಂದೀನಿ ಜವುಳಿಳಿಸೋ ||

ಗುಡಿಯ ಗಗ್ಗರಗಟ್ಟಿ ಕಲ್ಲಿನಿಂದಾಗದೆ ಬೆಲ್ಲದಚ್ಚಿನಿಂದ ಕಟ್ಟಿಸಿಕೊಂಡವಳು ಎಲ್ಲವ್ವನಾದರೆ, ದ್ಯಾಮವ್ವ ಹೊಸ ತೇರಿನ ಏರ್ಪಾಡು ಮಾಡಿಸಿಕೊಂಡಿದ್ದಾಳೆ. ಮಲ್ಲಿಗೆ ಹೂವಿನ ದಂಡಿ ಮ್ಯಾಲೆ ತೀರ್ಥ ಗಿಂಡಿ ಬೇಕೆಂದು ಎಲ್ಲಮ್ಮನ ಅಪೇಕ್ಷೆಯಿದ್ದರೆ, ಭಕ್ತನ ಅಪೇಕ್ಷೆಯ ಒಂದು ಮಾದರಿಯೇ ಬೇರೆಯಿದೆ, ನೋಡಿರಿ.

ಗಿಡದಾಗ ಗಿಡ ಹುಟ್ಟಿ ಗಿಡಕ ತೊಟ್ಟಿಲ ಕಟ್ಟಿ
ಮಾನಿಂಗನೆಂಬ ಮಗ ಹುಟ್ಟಿ | ನಮ್ಮೂರ |
ಹನುಮಪ್ಪಗೊಂದು ಗುಡಿ ಕಟ್ಟಿ ||

ಉಡುಪಿಯ ಕೃಷ್ಣಗ ಉಡಿಯೊಡ್ಡಿ ಬೇಡುವೆ
ಉಡಿತುಂಬ ಮುತ್ತ ಸುರುವೊವೆ | ಬೇಡುವೆ |
ಉಡದಾರ ಕಟ್ಟಂಥ ಬಾಲನ್ನ ||

ಕುಲದೇವತೆಯನ್ನು ಹೆಸರಿಟ್ಟು ಕರೆಯುವಂತೆ, ಗುರು ಎಂದು ಸಂಬೋಧಿಸುವ ರೂಢಿಯೂ ಇದ್ದಂತೆ ತೋರುತ್ತದೆ. ಆತನ ಅಗಾಧ ಪವಾಡಗಳಿಂದ ಯಾರಿಗೂ ಅಗಾಧವೆನಿಸದೆ ಇರದು. ಶಿರಹಟ್ಟಿಯ ದಾರಿಯಲ್ಲಿ ಶ್ರೀಗಂಧದ ಮರ ಹುಟ್ಟಿ; ನಾಗರಾಳಕ್ಕೆ ಬೇರು ಇಳಿದವಂತೆ. ಅಂಥ ಅಗಾಧ ಮಹಿಮೆ ನಡೆಸಿದ ಶೇಷಪ್ಪಯ್ಯರ ಮಂಚಕ್ಕೆ ಮಗ್ಗಿ ದವನ ಆಗಬೇಕಂತೆ. ಅಗಾಧ ಮಹಿಮೆಯನ್ನು ಮೆರೆಯಿಸುವ ಗುರುವಿಗೆ ತಲೆಬಾಗುವ ರೀತಿಯೆಂಥದೆಂದರೆ-

ಮನವ ಮಲ್ಲಿಗಿ ಮಾಡಿ ತನುವ ಕ್ಯಾದಿಗಿ ಮಾಡಿ
ನನ್ನೈದು ಬೆರಳ ಸಮ ಮಾಡಿ | ನೀಡೇನ |
ನನ್ನ ಸಲಹಂಥ ಗುರುವಿಗೆ ||

ತವರುಮನೆಯಲ್ಲಿ ಹುಟ್ಟಿ; ಕೊಟ್ಟ ಮನೆಗೆ ಹೋಗಿ, ಹೊಸ ಪರಿಸ್ಥಿತಿಯನ್ನು ಪಳಗಿಸಿಕೊಂಡು, ಗಂಡನನ್ನು ಒಲಿಸಿಕೊಂಡು, ಆ ಮನೆಗೆ ಒಡತಿಯಾಗಿ ಒಡೆತನವೊಂದನ್ನೇ ನಡೆಯಿಸದೆ, ಸುಖ-ದುಃಖಗಳ ಹೊಣೆಗೆ ಎದೆಗೊಟ್ಟು, ಬಂದುದಕ್ಕೆ ಹೆಗಲಿತ್ತು ನಿಲ್ಲಬೇಕಾದ ಪರಿಸ್ಥಿತಿಯಲ್ಲಿ ಆಕೆ ಅತ್ಯಂತಿಕವಾಗಿ ಅಪೇಕ್ಷಿಸುವುದು ಏನನ್ನು? ಆಕೆಗಿರುವದು ಮೂರೇ ಅಪೇಕ್ಷೆಗಳು “ಮುತ್ತೈದೆತನ ಕೊಡು, ಮಕ್ಕಳ ಕೊಡು, ಮಾರಾಯರ ಮುಂದೆ ಮರಣ ಕೊಡು” ಎಂದು ಅವಳು ತನ್ನ ಇಷ್ಟದೈವತವನ್ನು ಪ್ರಾರ್ಥಿಸುತ್ತಾಳೆ. ಮುತ್ತೈದಿತನದಿಂದ ಗಂಡನ ಬೆಂಬಲವೂ ಅದರಿಂದ ಅತ್ತೆಯ ಮನೆಯಲ್ಲಿ ಗಟ್ಟಿಯಾಗಿ ಕಾಲೂರುವುದಕ್ಕೆ ಮುಂಬಲವೂ ಸಿಗುತ್ತದೆ. ಮಕ್ಕಳಾದರೆ ಇನ್ನೊಬ್ಬ ಸವತಿ ಬರುವ ಅಂಜಿಕೆ ತಪ್ಪಿತು; ಬಂಜೆಯೆಂಬ ದುರ್ನಾಮ ತಪ್ಪಿತು. ಆಡಿ ಸಂತುಷ್ಟಳಾಗುವದಕ್ಕೂ, ಹಾಡಿ ಸಂತೃಪ್ತಳಾಗುವದಕ್ಕೂ ದಾರಿಯಾಯಿತು. ಇಷ್ಟೆಲ್ಲ ಇದ್ದರೂ ಅಕಾಲಕ್ಕೆ ಗಂಡನು ಕೈಬಿಟ್ಟ ವಿಧವೆಯ ಗೋಳು ನೆನೆಸಿದರೂ ಎದೆ ನಡುಗುವಂತಿರುವದರಿಂದ ಗಂಡನಿಗೂ ಮೊದಲು ತಾನೇ ಸತ್ತು ಹೋಗುವುದು ಕಲ್ಯಾಣಕರವೆನಿಸಿ ಮಾರಾಯರ ಮುಂದ ಮರಣ ಕೊಡಬೇಕೆಂದು ಅಪೇಕ್ಷಿಸುವದಕ್ಕೆ ಕಾರಣವಾಗಿದೆ.

ಗಂಡನ ಬೆಂಬಲ, ಮಕಕಳ ಮುಂಬಲಗಳಿದ್ದರೂ ಹೆಣ್ಣಿಗೆ ತವರಿನ ಹಂಬಲ ತಪ್ಪುವದಿಲ್ಲ. ಕುಂಜರವು ವಿಂಧ್ಯೆಯನ್ನು ನೆನೆವಂತೆ, ಹೆಣ್ಣು ಮಗಳು ತವರುಮನೆಯನ್ನು ಮುಪ್ಪಿನವರೆಗೆ, ಸಾಯುವವರೆಗೆ ನೆನೆನೆನೆದು ಹಂಬಲಿಸುತ್ತಿರುತ್ತಾಳೆ. ಹೊಸ ಪರಿಸ್ಥಿತಿಯಲ್ಲಿ ನಿಂತುಕೊಂಡ ಹೆಣ್ಣಿಗೆ- “ಅಕ್ಕ ತಂಗೇರ ಹೊರತು ಮತ್ತೊಬ್ಬ ಗೆಳತ್ಯಲ್ಲ, ಮಕ್ಕಳ ಹೊರತು ಬಳಗಲ್ಲ, ಹಡೆದವ್ವ ನಿನ ಹೊರತು ನನಗೆ ತವರಲ್ಲ”ವೆಂದೂ ಅನಿಸಿದರೆ ಆಶ್ಚರ್ಯವೇನಲ್ಲ. ಅತ್ತೆಯ ಮನೆ ಮೈತುಂಬ ಕೆಲಸ ಮಾಡಿಸಿಕೊಳ್ಳುವುದನ್ನು ಮಾತ್ರ ತಿಳಿದಿದೆ. ಆದರೆ ತವರು ಮನೆಯಲ್ಲಿ ತಾಯಿ ಹೆಣ್ಣಿನ ಹಸಿವು ಬಲ್ಲವಳಾದುದರಿಂದ ‘ರಸರಾಯ’ ಮಾಡಿ ಉಣಬಡಿಸುವಳು. ಆದರೆ ಏಳು ಸಮುದ್ರದ ಕರಿಮಣಿಯೊಳಗಿರುವ ಗುಳದಾಳಿಯಂತೆ ರಾಯರೊಬ್ಬರಿರುವದರಿಂದ ತಾಳಿಸಾಮಾನಿನಂಥ ಚಿನ್ನದ ತಾಯಿ ತಂದೆಗಳನ್ನು ತುಸು ಮರೆಯುತ್ತಾಳೆ.

ಹಾಗಿದ್ದರೂ – ಕಣ್ಣು ಕಾಣುವತನಕ ಬೆನ್ನು ಬಾಗುವ ತನಕ

ನನಗವ್ವ ಇರಬೇಕ ಮನಿಯಾಗ | ಬೆನ್ನಿಲಿ ಬಿದ್ದ |
ಅಣ್ಣಗೋಳಿರಲಿ ಅನುಗಾಲ ||

ಎಂದು ಹಾರೈಸುವಳು.

ಬಡತನವಿದ್ದರೂ ಬಹಳ ಮಕ್ಕಳಿರಬೇಕೆಂದೂ, ಮೇಲೆ ಗುರುವಿನ ದಯೆಯೊಂದು ಇದ್ದರೆ ಸಾಕೆಂದು ಬಯಸುವ ಹೆಣ್ಣು ಬಂಜೆಂಬ ಶಬ್ದವನ್ನು ಅದೆಂತು ಸಹಿಸುವಳು? ಹತ್ತು ಗಂಡು ಹಡೆದರೂ, ಬಂಜೆತನ ಹಿಂಗುವುದಕ್ಕೆ ಒಂದಾದರೂ ಹೆಣ್ಣು ಹುಟ್ಟಲೇಬೇಕು.

ಹತ್ತು ಗಂಡ್ಹಡೆದರ ಮತ್ತ ಬಂಜೆನ್ನೂರ
ದಟ್ಟೀಯ ಉಡುಪ ಧರಣೀಯ | ಹಡೆದರ
ಮಕ್ಕಳ ತಾಯೆಂದು ಕರೆದಾರ ||

ತಾನೊಂದು ಹೆಣ್ಣು ಹಡೆದು ಅಣ್ಣನ ಮಗನಿಗೆ ಕೊಟ್ಟು ಮದುವೆ ಮಾಡುವ ಸಡಗರ ಹೆಣ್ಣಿನ ಮನದಲ್ಲಿ ಉಕ್ಕಿ ಬರುತ್ತಿರುವುದು.

ನನ್ನ ಹೊಟ್ಟೇಲೆ ಹೊನ್ನು ನಿನ್ನ ಹೊಟ್ಟೇಲೆ ಚಿನ್ನ
ಮದಿವಿ ಮಾಡೂಣು ಬಾರಣ್ಣ | ಹಂದರದಾಗ |
ನೋಡಬಾರಣ್ಣ ಸಡಗರವ ||

ಅದರಂತೆ ತನ್ನ ಮಗನ ಮದುವೆಯ ಕಾಲಕ್ಕೆ ಅಣ್ಣನ ಉಡುಗರೆಯ ಸಡಗರವನ್ನೂ ಹಂಬಲಿಸುತ್ತಾಳೆ.

ಸರದಾರನೆತ್ತಿಕೊಂಡು ಸುರಗ್ಯಾಗ ನಾ ಕುಂತೆ
ಸುತ್ತ ನೆರದಾವ ನನ ಬಳಗ | ನನ್ನಣ್ಣ |
ಮುತ್ತೀನ ದಂಡಿ ಮಯ್ಯ ತಂದ ||

ತನಗೆ ದೊರೆತ ಮಕ್ಕಳ ಸಂಪತ್ತು ತನ್ನವರಿಗೆಲ್ಲ ದೊರೆಯಲೆಂದು ಹೆಣ್ಣು ಆಶಿಸುತ್ತದೆ. ಒಂದಲ್ಲ ಎರಡಲ್ಲ ಮನೆಯಲ್ಲಿ ನಾಲ್ಕು ತೊಟ್ಟಿಲು ತೂಗಬೇಕೆಂದು ಆಕೆಯ ಕನಸು.

ನಾಗನೂರ ಬಡಗಿ ನಾಕು ತೊಟ್ಟಿಲ ಮಾಡೊ
ನಾದಿನಿಗೊಂಡು ನನಗೊಂದು | ಮನಿಯಾನ |
ಅತ್ತೆವ್ವಗೊಂದು ಸೊಸಿಗೊಂದು ||

ಮೈತುಂಬ ಆಭರಣ, ಮನೆತುಂಬ ಮಕ್ಕಳು ತನಗೆ ಭೂಷಣವೆನಿಸಿದ್ದರಿಂದ ತನ್ನ ದೇವತೆಗೂ ಅವಿದ್ದರೆ ಆಕೆಗೆ ಸೊಗಸು.

ಕಾಲಿಗೆ ಕಾಲುಂಗ್ರ ಮ್ಯಾಲ ಸಿಂಗಾರ ಸರ
ವಾಲಿ ವಜ್ಜರ ಧರಿಸ್ಯಾಳ | ಪಾರ್ವತಿ |
ಕಂದ ಗಣಪಣ್ಣನ ಜನಿಸ್ಯಾಳ ||

ಮನೆಗೆ ಮಕ್ಕಳು ಭೂಷಣವಾದರೆ, ದನಗಳು ಮನೆಯಲ್ಲಿ ಸರಿಯದ ಸಂಪತ್ತು. ಹರಿನಾಮದ ಹಂಡೆತ್ತು ಗಿಳಿರಾಮದ ಗುಂಡೆತ್ತು ಸಾಕಾಗದೆ, ಎಂಟು ಸೇರು ಎಣ್ಣಿ, ಮಣ ಹಿಂಡಿ ತಿನ್ನುವಂಥ ಬಂಟ ಸಾರಂಗೀನ ಕಟ್ಟಬೇಕೆಂಬ ಕಳವಳವು ಮನೆಮನೆಗೂ, ಮನಮನಕ್ಕೂ ಇರುತ್ತದೆ. ಹುಗ್ಗಿ ಹೋಳಿಗೆ ಉಂಡರೇನು, ಮಗ್ಗಿ ವಸ್ತ್ರ ಸುತ್ತಿದರೇನು, ನನ್ನ ತಮ್ಮ ಬಗ್ಗಿ ಕೂರಿಗೆ ಬಿಗಿದು ದೊಡ್ಡ ಒಕ್ಕಲಿಗನಾಗಿ ಹೊರಹೊಡುವಂಥನಾಗಬೇಕೆಂದು ಹಿರಿಯಾಶೆ ತುಂಬಿ ತುಳುಕುತ್ತದೆ. ಕರಿಯೆತ್ತು ಕಾಳಿಂಗ, ಬಿಳಿಯೆತ್ತು ಮಾಲಿಂಗ, ಸರಕಾರದ ಎತ್ತು ಶಿವಲಿಂಗ ಕೊಟ್ಟಿಗೆಯಲ್ಲಿ ಮೇಯುತ್ತಿರಬೇಕು. ಬೆಳ್ಳಗಿನ ಬಿಳಿಯೆತ್ತು, ಬೆಳ್ಳಿಯ ಬಾರಕೋಲು, ಬಂಗಾರದ ಮಂಡಿ ಬಲಗೈಯಲ್ಲಿ ಹಿಡಕೊಂಡು ಹೊಳೆಸಾಲಿನಲ್ಲಿ ಹೊನ್ನ ಬಿತ್ತುವ ಕೆಲಸಕ್ಕೆ ಮಳೆಯಪ್ಪನು ಬೇಡಿದ ಫಲ ಕೊಡಲು ನಿಂತಿರುತ್ತಾನೆ. ಬನ್ನಿಯ ಗಿಡದ ಬುಡದಲ್ಲಿ ಬಣ್ಣದ ಕೂರಿಗಿ ನೊಸಿ ಉಡಿ ಕಟ್ಟಿ ಶಿವರಾಯನು ‘ಶಿವ’ನ ಹೆಸರು ನುಡಿದು ಬೀಜ ಬಿತ್ತುವನು. ಆದರೆ ಹೊಲಕ್ಕೆ ಬರುವಾಗ ಶಕುನನೊಡನೆ ಬರುವದಿಲ್ಲ.

ಕಾಗಿ ಬಲವನ ಕಟ್ಟಿ ಹಂಗ ಎಡವನ ಕಟ್ಟಿ
ಬಿತ್ತವ್ವ ಶಕುನ ಚಲುವ
sದು | ಶಿವರಾಯ |
ಬಿತ್ತಾಕ್ಹೋಗ್ಯಾನ ಮಾಣೀಕ ||

ಇಷ್ಟಾದರೆ ಹಿಡಿ ಬಿತ್ತಿ ಪಡಿ ಬೆಳೆಯುವದು ಆಶ್ಚರ್ಯವೇ? ಕಾಳು, ಮೇವು, ಹಯನುಗಳು ಮನೆಮನೆಯಲ್ಲಿ ತುಂಬಿ ಸೂಸುತ್ತವೆ. ಕೈತುಂಬ ದಾನ, ಮನೆ ತುಂಬ ಧರ್ಮ, ಹಂದರದ ತುಂಬ ಮದುವೆ, ತುಪ್ಪ ತುಂಬಿದ ಭೂಮದೂಟಗಳು ನಡೆಯುವವು. ಆಯಗಾರರು, ಉಪಾಧ್ಯಾಯರು, ಜಂಗಮರು ವರುಷದ ಸಂಗ್ರಹವನ್ನು ತುಂಬಿಟ್ಟುಕೊಳ್ಳುವರು.

ಬೇಸಿಗೆಯಲ್ಲಿ ಮದುವೆಗಳು ಮನೆಮನೆಗೆ, ಜಾತ್ರೆಗಳು ಊರೂರಿಗೆ. ಶ್ರಾವಣದಲ್ಲಿ ಮನೆಮನೆಯಲ್ಲಿ ನೋಂಪಿ, ಗುಡಿ ಮಠಗಳಲ್ಲಿ ಪುರಾಣ ಪುಣ್ಯಕಥೆ, ಮಣ್ಣಮುದ್ದೆ ಗುಳ್ಳವ್ವನಾಗಿ, ಗೌರವ್ವನಾಗಿ, ಶೀಗವ್ವನಾಗಿ ಪೂಜೆಗೊಳ್ಳುವದು; ಜೋಕುಮಾರನಾಗಿ ಊರತುಂಬ ಮೆರೆಯುವದು; ಗಣಪಣ್ಣನಾಗಿ ಹಬ್ಬಗೊಳ್ಳುವದು. ಊರ ಚಾವಡಿಯ ಮುಂದೆ ಹಾಡು-ಕುಣಿತ, ಬಯಲಾಟ-ಸ್ಪರ್ಧೆಯಾಟ. ಜೋಕಾಲಿಯೇರಿ ಹೆಣ್ಣು ಗಂಡು ತೂಗಿ ತೂಗಿ ಹಿಗ್ಗಿನಲ್ಲಿ ಸ್ವರ್ಗವನ್ನು ಕಾಲಿನಿಂದೊದ್ದು ಬರುವದು. ಉಂಡಿ ತಂಬಿಟ್ಟು, ಕೊಬ್ಬರಿ-ಎಳ್ಳಿನುಂಡೆಗಳನ್ನು ತಿಂದು ತೇಗುವದು. ಕುಲದೇವರ ಹೆಸರಿನಲ್ಲಿ ನವರಾತ್ರಿಯ ನಂದಾದೀವಿಗೆ ಢಾಳಿಸುವದು. ಮನೆ ಹಸನ, ಮನ ಹಸನ; ಹೊಟ್ಟೆಗೆ ಹೋಳಿಗೆ ತುಪ್ಪ, ನೆತ್ತಿಗೆ ತಿಳುವಿನ ಒಪ್ಪ, ಜೂಲು ಕೊಂಬಣಸುಗಳಿಂದ ಎತ್ತಿನ ಸಿಂಗಾರ; ಬಾಣಬಿರಸುಗಳಿಂದ ಮಕ್ಕಳ ಉಲ್ಲಾಸ. ಬೆಳ್ಳಿ-ಬಂಗಾರ ತೂಗಿ ತೂಗಿ ಅಂಗಡಿಕಾರನು ದಣಿಯುತ್ತಾನೆ.

ಅಂಗಡಿಕಾರನ ಅಂಗ್ಯಾಕ ಮಾಸ್ಯಾವ
ಲಿಂಗದ ಕಾಯಿ ಸಡಿಲ್ಯಾವ | ನನ ಮಗ |
ಭಂಗಾರ ತೂಗಿ ಬೆವತಾನ ||

ಅಗೋ! ಆ ಹೆಣ್ಣು ಮಕ್ಕಳ ಮೈಮೇಲೆ ಬಂಗಾರವೆಷ್ಟು? ಮಾಡಿಕೊಂಡ ಸಿಂಗಾರವೆಷ್ಟು?

ಕೆಂಪನ್ನ ಸೀರಿಗೆ ಅಂಚೆಲ್ಲ ಜರತಾರಿ
ಕಂಪೂಲಿ ಧೊರೆಯು ನನ್ನ ಅಣ್ಣ | ಉಡಿಸಿದ ಸೀರಿ |
ಚಿಂತಾಕಿನ ಮ್ಯಾಲ ಹೊಡೆದಾವ ||

ಹೊರಗಿನ ಸಿಂಗಾರವಷ್ಟೇ ಅಲ್ಲ, ಮನಸ್ಸೂ ಸಿಂಗಾರಗೊಂಡಿದೆ. ಹೊರಗೆ ಸಕ್ಕರೆ, ಒಳಗೆ ಅಕ್ಕರೆ. ಗೆಳಗೆಳತಿಯರು ಕೂಡಿ ಗೆಣಸಿನ ಹೋಳಿಗೆ ಮಾಡಿದರಂತೆ, ನೆನೆಸಿದರೆ ಅಣ್ಣ ಬರಲೇ ಇಲ್ಲವಂತೆ, ಮನಸ್ಸಿಗೆ ಬಹಳ ಕಸಿವಿಸಿಯಾಯಿತೆಂದು ಹಡೆದವ್ವನ ಮುಂದೆ ಮನಬಿಚ್ಚಿ ಹೇಳುತ್ತಾಳೆ. ಇಂಥ ಅಕ್ಕರೆ ಯಾರಿಗೆ ಬೇಡ? ಯಾಲಕ್ಕಿ ಹಾಕದ ಯಾವ ಅಡಿಗೆ ಮಾಡಲಿ? ಇದ್ದೂರಿನಲ್ಲಿರುವ ಒಬ್ಬ ಅಳಿಯನನ್ನು ಬಿಟ್ಟರೆ ಹಬ್ಬವೇನು ಚೆಂದ ಹಡೆದವ್ವ? ಎಂದು ಕೇಳುವಲ್ಲಿ ಹೆಣ್ಣಿನ ಕಕ್ಕುಲತೆಯ ಆಳ-ಎತ್ತರಗಳು ಕಂಡುಬರುವವು.

ಸುಖದ ಆನಂದವೇ ಸೂರೆಗೊಂಡರೆ ಸಕ್ಕರೆಯ ತಿನಸಿನಂತೆ ಬಾಯಿ ಕಟ್ಟುವದು. ದುಃಖದ ಆನಂದವೂ ಆಗಿಷ್ಟು ಈಗಿಷ್ಟು ಸುಳಿದರೆ ಉಪ್ಪಿನಕಾಯಿಯ ವ್ಯಂಜನದಂತೆ ಬಾಯಿಗೆ ನೀರೂರುವದು. ದೈವಾನುಕೂಲದಿಂದ ಸಕಲ ಸೌಭಾಗ್ಯಗಳು ಸುತ್ತೂ ಕಡೆಯಿಂದ ನೆರೆದು ಬರುವಂತೆ, ಚಳಿಯ ಮಾಗಿಯಲ್ಲಿಯೇ ಬೇಸಿಗೆಯ ಬೇಗೆಯೂ ಮೈದಾಳಿ ಬರುವದು. ಅದೂ ಒಂದು ಸೊಗಸೇ.

ಇಬ್ಬರೆಂಡಿರ ಕಾಟ ಇರವು ತಗಣಿಯ ಕಾಟ |
ಕಬ್ಬಕ್ಕಿ ಕಾಟ ಹೊಲದಾಗ | ಅಳವೂವ |
ಮಕ್ಕಳ ಕಾಟ ಮನಿಯಾಗ ||

ಇಂಥ ಕಾಟ ಸಂಕಟಗಳು ಮನುಷ್ಯನ ಮುಂದೆ ಏಕೆ ಬರುವವು? ಎಂಬ ಪ್ರಶ್ನೆಗೆ ಉತ್ತರ ಕಾರಣವಿಲ್ಲ. ಅವು ಬರುವುದು ಅನಿವಾರ್ಯ ಅಷ್ಟೇ. ಅವುಗಳಿಂದ ಪ್ರಯೋಜನವೂ ಇದೆ. ಗರಡಿಮನೆಯ ಮುಂದೆ ದೊಡ್ಡ ದೊಡ್ಡ ಗುಂಡುಗಳು ಬಿದ್ದುಕೊಂಡಿದ್ದರೂ ಗರಡಿಯಾಳುಗಳನ್ನು ಅವು ಕೈ ಮಾಡಿ ಕರೆಯುತ್ತವೆ. ಕಸುವಿದ್ದರೆ ನನ್ನನ್ನು ಎತ್ತಿ ಒಗೆದು ಹೋಗಿರಿ ಎನ್ನುವುದೇ ಅವುಗಳ ಕಣ್ಸನ್ನೆ. ಅವು ಗೆಲುವು ನೀಡಬಂದರೆ ಜಯಪತ್ರದ ಕುರುಹು. ಆದ್ದರಿಂದ ಅವುಗಳನ್ನು ಆಹ್ವಾನಿಸಲೇಬೇಕು.

ಸರಗಿ ಸಾಲಕ ಹೋತು ಬಳಿಯು ಬಾಳೆವಕ್ಹೋತು
ಒಡ್ಯಾಣ ಹೋತು ಬಡ್ಯಾಗ | ರಡ್ಡೇರ ಹುಡಿಗಿ |
ದಡ್ಯಾಗ ನಿಂತು ಅಳತಾಳ ||

ಹಗಲು ಕಳೆದು ರಾತ್ರಿ ಬಂದರೆ, ಬೆಳಕು ಅಡಗುವದು; ನಿದ್ರೆ ಆವರಿಸುವದು. ಗೂಬೆ ಹೆದರಿಸುವುದು, ಬಾಗಿಲಿಗೆ ಅಗಳಿ ಹಾಕಿ, ಹಚ್ಚಿದ ದೀಪವನ್ನು ಆರಿಸಿ, ಮುಸುಕು ಹೊದೆದು ಬಿದ್ದ ಮನುಷ್ಯನ ಪರಿಪಾಡು ನೋಡುವುದಕ್ಕೆ ಮುಗಿಲ ಮೇಲೆ ಚಿಕ್ಕೆಗಳು ನೆರೆಯುವವು. ಕತ್ತಲೆಯು ಬತ್ತಲೆಯಾಗಿ ನೆಲ-ಮುಗಿಲಿಗೆ ಹೊಂದಿ ನಿಲ್ಲುವದು. ಆಗ ನಿತ್ಯದ ಮರಣವಾದ ನಿದ್ರೆಯೊಂದೇ ಸುಖದ ದಾರಿ.

ಗಂಡರ ಮುಂದಕ ಹೆಂಡರು ಸತ್ತರ
ಶಂಕರನ ಮಡದಿ ಶಿವಶರಣಿ | ಬರತಾಳೆಂದು |
ಡಂಗೂರ ಸಾರ್ಯಾರ ಶಿವನಲ್ಲಿ ||

ಆದರೆ? ಕೈಬಿಟ್ಟುಹೋದ ಗಂಡನ ಹಿಂದೆ ಉಳಿದ ಹೆಂಡತಿಯ ಕುಂಕುಮ ಸೌಭಾಗ್ಯ ಮರೆಯಾದರೂ, ಗಂಗಾಭಾಗೀರತಿಯ ಪಾವಿತ್ರ್ಯವು ಬಂದು ಆಕೆಯನ್ನು ಆವರಿಸುತ್ತದೆ; ಅಪ್ಪಿಕೊಂಡು ತಪ್ಪುತಡೆಗಳಿಂದ ರಕ್ಷಿಸುತ್ತದೆ. ಮಕ್ಕಳಿಗೆ ದಿಕ್ಕೇನೆಂಬ ದಿಗಿಲಿನಿಂದ ದಿಗ್ಗನೆಂದು ಸಾಹಸಕ್ಕೆ ನಡುಗುಟ್ಟತ್ತದೆ. ಮುಂದಿನ ಜೀವನವನ್ನು ತಪವಾಗಿಸುತ್ತದೆ. ಹೀಗೆ ನಮ್ಮ ಬಾಳು ಜಾನಪದ ಸಾಹಿತ್ಯದಲ್ಲಿ ಬದುಕಾಗಿ ಬದುಕಿಕೊಂಡು ಬಂದಿರುತ್ತವೆ. ಇಂದು ನಾವು ಬದುಕಿಕೊಂಡಿರುವುದಕ್ಕೂ ಹಿಂದಿನ ಬದುಕು ಬುನಾದಿಯಾಗಿ ನಿಂತಿರುತ್ತದೆ.