ನಾಡಿನ ಜನಪದ ಸಾಹಿತ್ಯವೆಂದರೆ, ಅಲ್ಲಿಯ ಜೀವನದ ಕೈಪಿಡಿ. ಜೀವನವನ್ನು ಅಲ್ಲಗಳೆಯದೆ, ಒಲ್ಲಗಳೆಯದೆ ಹುಸಿನಗುತ ಬಂದ ನಾವು, ತುಸುನಗುತ ತೆರಳಬೇಕಾಗಿರುವುದರಿಂದ ನಸುನಗುತ ಬಾಳುವುದೇ ಸೂಕ್ತ ದಾರಿ.

“ಒಬ್ಬಗೆ ಬಂದುದು ಎಲ್ಲರಿಗುಂಟು
ಕೊಡಬೇಕು | ಹಿಡಿಕೊಡಬೇಕು
ಕೊಟ್ಟ ದೇವನಿಗೆ ಕೊಡುವೆನು ಎಂದು
ತೊಡಬೇಕು | ಪಣ ತೊಡಬೇಕು”

ಮಾಡುವುದೆಲ್ಲ ಮಾಟವಾದಾಗಲೇ ಅದು ಸಾರ್ಥಕಗೊಳ್ಳುತ್ತದೆ. ಹಾಡುತ್ತ ಮಾಡುವುದೇ ಆಟ. ಮಾಡಿದ್ದೆಲ್ಲ ಮಾಟವಾಗಬೇಕಾದರೆ ಅದಕ್ಕೆ ಹಾಡಿನ ಬೆಂಬಲಬೇಕು. ಮಾಡು-ಹಾಡುಗಳೆರಡೂ ಬಾಳನಾಣ್ಯದ ಎರಡು ಮಗ್ಗುಲದ ಅಚ್ಚುಗಳು. ಮಾಡು-ಮಾಟಗಳು ಕೈಕೈ ಹಿಡಿದ ಸ್ನೇಹಿತರಾಗಬೇಕು.

ಹಾಡುತ್ತ ಮಾಡು, ಮಾಡಿದ್ದನ್ನು ಕೂಡಿಕೊಂಡು ತಿನ್ನು. ಆ ಸಿದ್ಧಿಯನ್ನು ಸಾಧಿಸಿದ್ದೇ ಬಾಳು. ಆ ಸಾಧನದ ವಿಧಾನವೇ ಜನಪದ ಸಾಹಿತ್ಯ. ಈ ಮಾತು ಕನ್ನಡಿಗರಿಗೆ ಅರವತ್ತು ವರ್ಷಗಳ ಹಿಂದೆಯೇ ತಿಳಿದುಬಂದಿದೆ. ಅದು ಸಾಕಾರಗೊಳ್ಳುವಂತೆ ಹಾಡಿಕೊಂಡು, ಕಾಪಾಡಿಕೊಂಡು ಬರಬೇಕಾಗಿದೆ. ಅಟ್ಟಿದ್ದೆಲ್ಲ ಹುಟ್ಟಿನ ಪಾಲೇ ಆಗದೆ, ಮುಖ್ಯವಾಗಿ ಹೊಟ್ಟೆಯ ಪಾಲು ಆಗುವಂತೆ ನಾವು ಜನಪದ ಸಾಹಿತ್ಯದ ಉಪಾಸನೆ ಸಾಧಿಸಬೇಕಾಗಿದೆ.

ನಮ್ಮದೇ ಆದ ಆದರ್ಶವನ್ನು ಬದಿಗೆ ಬಿಟ್ಟು, ಇನ್ನೆಂಥದೋ ಕೃತ್ರಿಮತೆಗೆ ಮನಸೋಲುತ್ತಿರುವ ನಾವು ಅಮೃತ ಸದೃಶವಾದ ಅದರ್ಶವನ್ನು ಉಳಿಸಿಕೊಳ್ಳಬೇಕಾಗಿದೆ. ಉದ್ದೇಶವನ್ನು ಸಫಲಗೊಳಿಸಬಲ್ಲ ಶಕ್ತಿ ಜನಪದ ಸಾಹಿತ್ಯದೆಯೆಂಬ ಮನವರಿಕೆ ಆಗಿದ್ದರಿಂದ, ಆ ಸಾಹಿತ್ಯವನ್ನು ಪುನರ್ಮುದ್ರಣ ಮಾಡಿ ಒದಗಿಸುವುದು ಅನಿವಾರ್ಯವಾಗಿದೆ.

ಕನ್ನಡಿಗರು ತೆರೆದ ಮನದಿಂದ ನಮ್ಮ ಉದ್ದೇಶವನ್ನು ಗಮನಿಸುವರೆಂದೇ ನಂಬಿರುವೆವು. ಮುದ್ರಣಭಾರವು ಸಹಿಸಲಸದಳವಾಗಿದ್ದರೂ, ಆ ದಿಶೆಯಲ್ಲಿ ಮುಂದುವರಿಯುವುದು ಅನಿವಾರ್ಯವೆಂದೇ ಭಾವಿಸಿದ್ದೇವೆ. ಈ ನಮ್ಮ ಧೋರಣೆ ಹುಚ್ಚು ಹವ್ಯಾಸವೆನಿಸದಿದ್ದರೆ, ನಮ್ಮ ಈ ಶ್ರಮ-ಕ್ರಮಗಳು ಸಾರ್ಥಕವೆನಿಸುವುದರಲ್ಲಿ ಸಂದೇಹವಿಲ್ಲ.

ಈ ಧೋರಣೆಗೆ ಹಿಂಬಲ-ಮುಂಬಲ ನೀಡಲು ಹೆಗಲು ಕೊಟ್ಟ ನನ್ನ ಚಿರಂಜೀವರು (ಪ್ರಾ. ವೀರೇಂದ್ರ ಮತ್ತು ಪ್ರಾ. ರಾಜೀವ) ಗೆಲುವಡೆಯಲೆಂದು ಹಾರೈಸುವೆನು.

ಪುಸ್ತಕವನ್ನು ಅಂದವಾಗಿ ಮುದ್ರಿಸಿಕೊಟ್ಟ………………………. ನಮ್ಮ ಕೃತಜ್ಞತೆಗಳು.

ದಿನಾಂಕ : ೩-೬-೧೯೯೨

– ಸಿಂಪಿ ಲಿಂಗಣ್ಣ
ಶ್ರೀ ಅರವಿಂದ ಗ್ರಂಥಾಲಯ, ಚಡಚಣ