ಹಾಸ್ಯವೆಂದರೇನು?

ಹಾಸ್ಯವೆಂದರೆ ನಗೆಯೆಂದು ಶಾಲೆಯ ಹುಡುಗರು ಸಹ ಹೇಳುತ್ತಾರೆ. ಆದರೆ ನಗೆಯೆಂದರೇನು ಎಂಬ ಪ್ರಶ್ನೆ ಬಂದಾಗ ಏನು ಉತ್ತರ ಕೊಡಬೇಕು? ನಗೆ ಸುಖದ ಲಕ್ಷಣವೆಂದೂ, ಆ ಲಕ್ಷಣವನ್ನು ಕೂಸುಗಳಲ್ಲಿ ನೋಡಬೇಕೆಂದೂ ಹೇಳಬಹುದು. ನಗೆಯು ಮನುಷ್ಯನ ಅಜ್ಞಾನವಿಲಾಸವೆಂದು ಜ್ಞಾನಿಗಳ ಮತವಿದೆ. ಸಾಮಾನ್ಯ ಜನರೆಂದರೆ ಶರೀರ ಮನ ಪ್ರಾಣಗಳೇ ತಾವೆಂದು ತಿಳಿಯುವರೆಂದೂ ಅವರಿಗದು ಅನಿವಾರ್ಯವೆಂದೂ ಬಲ್ಲವರು ಅಭಿಪ್ರಾಯ ಪಡುತ್ತಾರೆ. ಈ ಅವಸ್ಥೆಯೇ ಅಜ್ಞಾನವೆಂದು ವೇದಾದಂತ ಹೇಳುತ್ತದೆ. ಸಾಮಾನ್ಯ ಜನರ ಇಡಿಯ ಜೀವನವೇ ಅಜ್ಞಾನವಿಲಾಸವೇಕಾಗಬಾರದು? ಆದರೆ ನಗೆಯು ಜ್ಞಾನಿಗಳಿಗೂ ಬಿಟ್ಟಿಲ್ಲ. ಮಹಾತ್ಮರಿಗೂ ಬಿಟ್ಟಿಲ್ಲವಲ್ಲ! ಬುದ್ಧನಿಗೆ ಸ್ಮಿತವಾದರೆ, ರಾಮನಿಗೆ ಸರಸ, ಕೃಷ್ಣನಿಗೆ ಹಾಸ್ಯ. “ನಗೆಯಿಂದಲೇ ಬದುಕಿದ್ದೇನೆ” ಎಂದು ಗಾಂಧೀಜಿ ಸಾರಿ ಹೇಳುತ್ತಾರೆ. “ಮೋಡಗಳ ಮುಂದೆ ಸೂರ್ಯನಿದ್ದ ಹಾಗೆ, ವೈರಿಗಳ ಮುಂದೆ ನಗೆಮುಖವೆಂದೂ ಅದರಿಂದ ವೈರಿಗಳನ್ನು ನಿಶ್ಚಯಸ್ತ್ರಗೊಳಿಸಿದಂತಾಗುವದೆಂ”ದೂ ಪಾಂಡಿಚೇರಿಯ ಶ್ರೀ ಮಾತಾಜಿಯವರ ಅಮೃತಬಿಂದುವಿದೆ. ಭಕ್ತಿಭಂಡಾರಿಗಳಾದ ಬಸವಣ್ಣನವರು ಸಹ ತಮ್ಮ ಗಂಭೀರ ವಾಣಿಯಲ್ಲಿ ನಗೆಯನ್ನು ಮಿಂಚಿಸದೆ ಬಿಟ್ಟಿಲ್ಲ. ಅಡ್ಡದಾರಿ ಹಿಡಿದವರನ್ನು “ಕೂಡಲಸಂಗನು ಹಲುದೋರೆ ಮೂಗು ಕೊಯ್ಯುವನು” ಎನ್ನುವಲ್ಲಿಯೂ, “ಏತವು ತಲೆ ಬಾಗದೇ? ಇಕ್ಕುಳವು ಕೈ ಮುಗಿಯದೇ?” ಎನ್ನುವಲ್ಲಿಯೂ, “ತಾನು ಭೋಗಿಸುವ ಊಟ, ರತಿಸುಖ ಇನ್ನೊಬ್ಬರಿಂದ ಮಾಡಿಬಹುದೆ?” ಎನ್ನುವಲ್ಲಿಯೂ ನಗೆ ಕಾಣಿಸಿಕೊಳ್ಳದೆ ಇರದು. ಸರ್ವಜ್ಞನಂತೂ ನಗೆಯ ಮೂರ್ತಿ. ಅಂತೂ ನಗೆಯು ಎಲ್ಲ ಕಡೆಗೂ ಬೆಳಕಿನಂತೆ ತೂರಿದೆ. ಬೆಳಕು ಒಡೆಯ ಏಳು ಬಣ್ಣಗಳಾಗುವಂತೆ, ನಗೆಯ ಬೆಳಕು ಒಡೆದು ಹಲವು ವರ್ಣಗಳನ್ನು ತಳೆಯುವದು. ಕುಹಕ, ಕಟುಕಿ, ವ್ಯಂಗ್ಯ, ಸರಸ, ಮೂದಲಿಕೆ, ಚೇಷ್ಟೆ, ತಮಾಷೆ ಮೊದಲಾದ ಬಗೆಗಳುಂಟು. ನಗದವರನ್ನು ನಗಿಸುವದು ಒಂದು ಬಗೆಯಾದರೆ, ಆಳುವವರನ್ನು ನಗಿಸುವದೂ ಇನ್ನೊಂದು ಬಗೆ. ನಕ್ಕು ನಗಿಸುವದೊಂದು ರೀತಿ, ಅಳಿಸಿ ನಗಿಸುವದೊಂದು ರೀತಿ. “ನಗೆ ನಾ ಬೆರಳಗಾಯ” ಎಂಬ ಗಾದೆಯ ಮಾತಿನಲ್ಲಿ ಅಪಹಾಸ್ಯದ ಶಕ್ತಿಯು ಒಡೆದು ಕಾಣುವದು. “ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು” ಅಂತೆ, ಪರಿಹಾಸವು ವಿರಸವಾದಾಗ “ನಗುವವರ ಹಲ್ಲು ಕಾಣಿಸುವವು” “ಬೈದು ಹೇಳಿದವರು ಬುದ್ಧಿ ಹೇಳಿದರು, ನಕ್ಕು ಹೇಳಿದವರು ಕೆಡಕು ಹೇಳಿದರು” ಎನ್ನುವಲ್ಲಿ ಅಜ್ಞಾನವಿಲಾಸಕ್ಕೆ ನಗುವುದರಿಂದಲೂ ಪ್ರೋತ್ಸಾಹ ಸಿಗುತ್ತದೆ. ಒಟ್ಟಿನ ಮೇಲೆ ಸುಖದ ಕುರುಹಾಗಿ ನಗೆ ಕಾಣಿಸಿಕೊಂಡರೂ ಆ ಸುಖದಲ್ಲಿ ಸುಖವನ್ನು ಹುಟ್ಟಿಸಿಕೊಳ್ಳಲಿಕ್ಕೂ, ಅಸುಖವನ್ನು ಹೊಡೆದೋಡಿಸಲಿಕ್ಕೂ ನಗೆಯು ಕಾಣಿಸಿಕೊಳ್ಳುತ್ತದೆ. ಅದು ಕಾಣಿಸಿಕೊಂಡಾಗ ಏನಾಗುತ್ತದೆಂಬುದನ್ನು ನಾವೆಲ್ಲ ಅನುಭವಿಸಿದ್ದರೂ ಅದನ್ನು ಕಾಣಿಸಿಕೊಂಡಾಗ ಏನಾಗುತ್ತದೆಂಬುದನ್ನು ನಾವೆಲ್ಲ ಅನುಭವಿಸಿದ್ದರೂ ಅದನ್ನು ಶ್ರೀ ಬೇಂದ್ರೆಯವರ ಮಾತಿನಲ್ಲಿಯೇ ಹೇಳಬೇಕು “ನಗೆಯಲ್ಲಿ ಮುಖ ಅಗಲವಾಗುವದು; ಕಣ್ಣು ಹಿಗ್ಗುವವು. ತುಟಿ ಮಿನುಗುವವು. ಹಲ್ಲು ಮಿಂಚುವವು. ಗಲ್ಲ ಬೆಳಗುವವು. ಎದೆ ಉಕ್ಕುವುದು, ಪಕ್ಕಡಿ ನುಗ್ಗುವವು, ಹೊಟ್ಟೆ ತುಂಬುವದು, ಮೈ ಅಲಗುವದು. ನುಡಿ ನಡುಗುವದು. ಕೈಮೀರಿ ಹೋದಾಗ ಕಣ್ಣ ನೀರಿಳಿಯುವದು, ಪಕ್ಕಡೆ ಬಿರಿಯುವಂತೆ, ಹೊಟ್ಟೆ ಹುಣ್ಣಾಗುವಂತೆ ನೋಯುವದು. ಉಗುಳು ತುಂತುರುಗರೆಯುವದು. ಅಟ್ಟಹಾಸದಿಂದ ಶಬ್ದ ಕಲೆದು ನೆಗೆಯುವದು.” ಇಷ್ಟು ಪರಿಣಾಮ ಮಾಡುವ ನಗೆಯ ತವರು ಎಲ್ಲಿ? “ಕತ್ತೆ ಕಿರಚುವಲ್ಲಿ ; ತೊತ್ತು ಹಾಡುವಲ್ಲಿ” ಎಂದು ಮೊದಲಾಗಿ ಸರ್ವಜ್ಞನ ಹೇಳಿಕೆ. “ಹಾಸ್ಯವಾಯುವನ್ನು ಉಸುರಾಡಿಸಿಯೋ, ಕಟ್ಟಾಡಿಸಿದಾಗಲೋ, ಹುಚ್ಚು ಹಿಡಿಸಿದಾಗಲೋ ಜನರು ನಗುತ್ತಿರುವದುಂಟು.” ಇದು ಶ್ರೀ ಬೇಂದ್ರೆಯವರ ಅಭಿಪ್ರಾಯ.

ವಿರಸ ಮರಣ

ನಗೆಯ ಬಗೆಗಳಲ್ಲಿ ಒಂದಾದ ಸರಸವು ಜೀವನವೆಂದೂ, ವಿರಸವು ಜೀವನವೆಂದೂ ಹೇಳಲಾಗುತ್ತದೆ. ಇತ್ತೀಚಿನ ೩೦-೪೦ ವರ್ಷಗಳಿಂದ ನಮ್ಮಲ್ಲಿ ಅದೇಕೋ ರಸಿಕತೆಯು ಕಡಿಮೆಯಾಗುತ್ತ ಬಂದು, ಕಾಣದಂತಾಗತೊಡಗಿದೆ. ಜನಪದ ಜೀವನದಲ್ಲಿ ಹಿಂದಿದ್ದ ರಸಿಕತೆಯು ಈಗಿಲ್ಲ. ಇದು ನಾಡಿನ ಅಥಃಪತನವೇ ಸರಿ. ಗಾಂಧೀಜಿಯವರು ಅದಾವುದೋ ಮಾತಿಗೆ-“ಹಾಗೆ ಮಾಡಿದರೆ ನನ್ನ ಮಹಾತ್ಮಗಿರಿ ಹೋದಿತಲ್ಲ” ಎಂದು ಒಮ್ಮೆ ಬರೆದಾಗ ಅದರೊಳಗಿನ ಹಾಸ್ಯದ ಅರ್ಥವರಿಯದವರು “ಮಹಾತ್ಮಗಿರಿಯ ಮೇಲೆ ನಿಮಗೂ ಇಷ್ಟೊಂದು ಲಾಲಸೆಯೇ?” ಎಂದೇನೋ ಬರಕೊಂಡಿದ್ದಕ್ಕೆ ಮಹಾತ್ಮರು-“ನಮ್ಮಲ್ಲಿ ವಿನೋದದ ಅರ್ಥ ಸಹ ಆಗದವರು ಇರುವರಲ್ಲ” ಎಂದು ವಿಷಾದವನ್ನು ವ್ಯಕ್ತ ಮಾಡಿದ್ದನ್ನು ನಾವೆಲ್ಲರೂ ಕೇಳಿದ್ದೇವೆ. ಆದುದರಿಂದ ಜನಪದದ ಈಗಿನ ಜೀವನವನ್ನು ನಿರೀಕ್ಷಿಸದೇ ೩೦-೪೦ ವರ್ಷಗಳ ಹಿಂದಿನ ಅವರ ಜೀವನವನ್ನೂ, ಸಾಹಿತ್ಯವನ್ನೂ ನಿರೀಕ್ಷಿಸಿದರೆ ಅವರ ರಸಿಕತೆಯೂ ಹಾಸ್ಯ ಪ್ರವೃತ್ತಿಯೂ ಕಂಡುಬರುವವು.

ಜನಪದ ಜೀವನ-ಸಾಹಿತ್ಯ ನಿರೀಕ್ಷಣೆ

ಸಾಮಾನ್ಯ ಜನರ ದಿವಸದ ಇಪ್ಪತ್ನಾಲ್ಕು ತಾಸುಗಳಲ್ಲಿ ನಿದ್ರೆಯ ಕಾಲವೊಂದನ್ನು ಬಿಟ್ಟರೆ ಉಳಿದ ಯಾವತ್ತು ಸಮಯದ ಅವರ ಜೀವನವು ಸಾಹಿತ್ಯ ಜೀವನವೇ ಸರಿ. ಹೊಲವನ್ನು ಉತ್ತು ಬಿತ್ತುವಾಗ ಹಾಡುವರು. ಬೀಸು ಕುಟ್ಟುವಾಗ ಹಾಡುವರು. ಹಬ್ಬ ಹುಣ್ಣಿವೆ, ಮದುವೆ ಮೊದಲಾದ ಪ್ರಸಂಗಗಳಲ್ಲಿ ಅಷ್ಟೇ ಅಲ್ಲ, ಸತ್ತಾಗ ಅತ್ತರೂ ಅಲ್ಲೊಂದು ಶೋಕ ರಸದ ಸಾಹಿತ್ಯವು ಕೇಳಿಸಿಕ್ಕುವದು. ಹಾಡು ಹಿಗ್ಗಿನಲ್ಲಿ ಹೊರಬೀಳುವ ಬದುಕು. ಅಜ್ಜಿ-ಮೊಮ್ಮಕ್ಕಳ ಕಥೆ, ಬಯಲಾಟ, ಕೀರ್ತನ, ವೇಷಗಾರಿಕೆ ಮೊದಲಾದವುಗಳು ನಿಶ್ಚಿಂತೆಯಲ್ಲಿ ಸುಖದಲ್ಲಿ ಮೊಗದೋರುವಂಥವು. ಸುಖದ ಲಕ್ಷಣಗಳು. ಚಾಣಕರಾಯನ ಕಥೆ ಹೇಳುವವರಿಗೆ ಹರಿಯುವ ಹದಿನೆಂಟೂ ಇರುವದಿಲ್ಲ; ತುರಿಸುವ ಮೂವತ್ತೂ ಇರುವದಿಲ್ಲ. ಈ ಜೀವನವೇ ಹಿಗ್ಗಿನ ಬುಗ್ಗೆಯಾಗಿರುವಾಗ, ರಸಿಕತೆಯ ತವರಾಗಿರುವಾಗ, ನವರಸಗಳಲ್ಲಿ ಒಂದಾದ ಹಾಸ್ಯವೂ ಅವರ ಜೀವನದಲ್ಲಿ ಸಹಜವಾಗಿ ಕಾಣಿಸಿಕೊಳ್ಳದಿರುವುದೇ? ಗಂಭೀರವಾದ ಬಯಲಾಟ ನಡೆದಾಗ ನೋಡುಗರು ಬೇಸತ್ತು ತೂಕಡಿಸಹತ್ತುವರು. ಆಗ ಅಡ್ಡಸೋಗು ಬಂದು ನಿದ್ದೆ ಹಾರಿಸುವದು. ಗಾದೆ ಮಾತು, ಹೆಣ್ಣು ಮಕ್ಕಳ ಚುಚ್ಚುನುಡಿ, ಅಡ್ಡಗತೆ, ಚತುರೋಕ್ತಿ ಇವುಗಳನ್ನು ಕೇಳಿ ನಾವು ವಿಪುಲವಾಗಿ ನಗುವೆವು. ಅದರಂತೆ ಕೀರ್ತನಾದಿಗಳಲ್ಲಿ ಅಡ್ಡಗತೆಗಳು ಹಣಿಕೆ ಹಾಕುವವು. ಅಡ್ಡ ಸೋಗುಗಳೂ ಅಡ್ಡ ಕತೆಗಳೂ ಮಕ್ಕಳಿಗೆ ಬಲು ರುಚಿ. ಅವುಗಳನ್ನು ನೋಡಿ ಕೇಳಿ ಮಕ್ಕಳ ಹಿಗ್ಗು ಮೋರೆ ಮೀರಿ ಉಕ್ಕುವದು. ವೇಷಗಾರಿಕೆ, ಹೋಳಿಹಬ್ಬದ ಚೇಷ್ಟೆ ಇವುಗಳನ್ನು ಕಂಡು ನಾವು ಹೊಟ್ಟೆತುಂಬ ನಗುವೆವು. ಕೆಲವು ಬಾಲಕರು ಕಥೆ ಹೇಳಬೇಕೆಂದುಅಜ್ಜಿಗೆ ದುಂಬಾಲು ಬೀಳುತ್ತಾರೆ. ನಗೆಯ ಕಥೆ ಹೇಳೆನ್ನುತ್ತಾರೆ. ಆದರೆ ಆಕೆಗೇಕೋ ಬೇಸರ. ಆದರೂ ಬಯ್ದು ಕಳಿಸುವದಿಲ್ಲ. ಹೇಗೋ ಕಥೆ ಆರಂಭಿಸವಳು. “ಕಥೆಗೆ ಕಳ್ಳರೊಯ್ದರು ನಿಮ್ಮತ್ತೆಗೆ ಡೊಂಬರೊಯ್ದರು” ಎಂದು ನಗೆಯಲ್ಲಿ ಅವರ ಕುತೂಹಲವನ್ನು ಮರೆಯಿಸಿಬಿಡಲು ಯತ್ನಿಸುತ್ತಾಳೆ. ಮಕ್ಕಳು ಮತ್ತು ಕೇಳದಿರಲು “ಹೀಗೊಬ್ಬ ಅಯ್ಯನಿದ್ದ!” ಬಾಲಕ “ಹೂಂ” ಅನ್ನುವನು. “ಅಯ್ಯನ ಬಳಿ ಒಂದು ಜೋಳಿಗೆ ಇತ್ತು.” “ಜೋಳಿಗೆಯಲ್ಲಿ ಮೂರು ಹೋಳಿಗೆಗಳಿದ್ದವು” ಎಂದಾಗ “ಹೂಂ” ಎಂದು ಹುಡುಗರು ಅಂದ ಕೂಡಲೇ ಅಜ್ಜಿ “ಹೂಂ ಅದರೆ ಹೋಳಿಗೆ ಕೊಡವನೇ ಆ ಅಯ್ಯನು?” ಎನ್ನುವಳು. ಹುಡುಗರು ಏನೆಂದರೂ, ಏನು ಮಾಡಿದರೂ ಅಜ್ಜಿಯು –“ಹೀಗೆ ಮಾಡಿದರೆ ಕೊಡುವನೇ?” ಎಂಬ ಒಂದೇ ಪ್ರಶ್ನೆಯನ್ನು ಮೇಲೆ ಮೇಲೆ ಎತ್ತಿ ಹುಡುಗರನ್ನು ಸೋಲಿಸಿ ಓಡಿಸುವಳು. ಆದರೆ ಅಜ್ಜಿಗೂ ಒಮ್ಮೊಮ್ಮೆ ಸೋಲು ತಪ್ಪುವುದಿಲ್ಲ. ಆಕೆಯು ಕಥೆ ಹೇಳಿ ಹುಡುಗರನ್ನು ರಂಬಿಸಬೇಕಾಗುತ್ತದೆ. ಇನ್ನಾವುದನ್ನೋ ಮರೆಸಬೇಕಾಗುತ್ತದೆ. ಒಲೆಯ ಮೇಲಿಟ್ಟಿದ್ದು ಇನ್ನೂ ಅಡಿಗೆಯಾಗಿರುವದಿಲ್ಲ. ಅವನಾದರೋ ಅದನ್ನು ಈಗಲೇ ಕೊಡು ಎನ್ನುತ್ತಾನೆ. ಅಜ್ಜಿ ಇದೊಂದು ಚಿಕ್ಕ ಕಥೆ ಮುಗಿಸಿ ಊಟಕ್ಕೆ ಕೊಡುವೆನೆನ್ನುತ್ತಾಳೆ. ಹಾಗೂ ಹೀಗೂ ಹುಡುಗ ಒಪ್ಪಿಕೊಳ್ಳುತ್ತಾನೆ. ಅಜ್ಜಿ ಕಥೆ ಆರಂಭಿಸುತ್ತಾಳೆ. ಕಥೆಯ ಬಾಲ ಬೆಳೆಸುವ ಮನಸ್ಸು ಅಜ್ಜಿಯದು. ನೂತುದನ್ನೆಲ್ಲ ಉಡದಾರ ಮಾಡುವ ವೃತ್ತಿ ಬಾಲಕನದು. “ಕತಿ ಕತಿ ಕಾರಣ, ಮುದುಕೀ ಹೂರಣ ತಿಂದ್ಯೋಚೆಲ್ದೋ?” ಕೇಳುವಳು ಅಜ್ಜಿ. “ಚೆಲ್ಲಿದೆ” ಎನ್ನಬೇಕು ಹುಡುಗ. “ಎಲ್ಲಿ ಚೆಲ್ಲಿದೆ?” ಎಂಬ ಪ್ರಶ್ನೆ ಅಜ್ಜಿಯದು. “ತಿಪ್ಪೀಲಿ ಚಲ್ಲಿದೆ.” “ತಿಪ್ಪಿ ಏನು ಕೊಟ್ಟಿತು?” “ಗೊಬ್ಬರ ಕೊಟ್ಟಿತು.” “ಗೊಬ್ಬರ ಏನು ಮಾಡಿದೆ?’’ “ತೋಟಕ್ಕೆ ಹಾಕಿದೆ”. ತೋಟವು ಮೇವು ಕೊಟ್ಟಿತೆಂದೂ, ಮೇವು ಆಕಳಿಗೆ ಹಾಕಿತೆಂದೂ, ಅದು ಹಾಲು ಕೊಟ್ಟಿತೆಂದೂ, ಹಾಲು ಅವ್ವನಿಗೆ ಕೊಡಲಾಯಿತೆಂದೂ, ಅವ್ವನು ಬೆಣ್ಣೆ ರೊಟ್ಟಿ ಕೊಟ್ಟಳೆಂದೂ… ಹೀಗೆ ಕಥೆ ಬೆಳೆಯುತ್ತ ಹೋಗುತ್ತದೆ. ಆದರೆ ಅದೆಲ್ಲ ಬಾಲಕನಿಗೆ ಬೇಡಾದ ವಿಷಯ. ಅವನು ಮೊದಲಿನ ಪ್ರಶ್ನೆಗೆ ಅಂದರೆ “ಮುದುಕಿಯ ಹೂರಣ ತಿಂದೆಯೋ ಚೆಲ್ಲಿದೆಯೋ?” ಎಂದು ಕೇಳಿದಾಗ “ತಿಂದೆ” ಎಂದು ಬಿಡುತ್ತಾನೆ. ಅದರಿಂದ ಕಥೆಯ ಬೆಳಿಗೆಯು ಹದಗೆಟ್ಟು ಹೋಗುತ್ತದೆ.

ಸುಖ ಜೀವನಕ್ಕೆ ಹಾಸ್ಯ

ಹಾಡು ಹಿಗ್ಗಿಗಾಗಿಯೆನ್ನುವದೂ, ನಿಶ್ಚಿಂತೆಯಿರುವಲ್ಲಿ ಚಾಣಕರಾಯನ ಕಥೆ ಹೊರಡುವವೆನ್ನುವದೂ ಸರಿಯೇ. ಆದರೆ ಆ ಹಿಗ್ಗು, ಆ ನಿಶ್ಚಿಂತೆ ನಿರಂತರವೂ ಇರುವಂಥವುಗಳಲ್ಲ. “ಸುಖವು ಬೀದಿಯ ನೆರಳs | ದುಃಖವು ದೂಡುವ ಬಿಸಿಲs” ಎಂದು ಶ್ರೀಮಧುರಚೆನ್ನರು ಹಾಡಿದ್ದಾರೆ. ಸುಖವು ಬೀದಿಯ ನೆರಳಿನಂತೆ ಮನುಷ್ಯನಿಗೆ ಲಭಿಸಿದರೆ, ಸುಖದ ಸಂತಾನಗಳಾದ ಹಿಗ್ಗು ನಿಶ್ಚಿಂತೆಗಳು ಬೀದಿಯ ನೆರಳು ಏಕಲ್ಲ? ಅವು ಯಾವಾಗಲೂ ಸಿಗಲಾರದ ವಸ್ತುಗಳಾಗಿದ್ದಂತೆ, ತೀರ ಲಭಿಸಲಾರದ ವಸ್ತುಗಳೇನೂ ಅಲ್ಲ. ಮಳೆಗಾಲ-ಚಳಿಗಾಲ-ಬೇಸಿಗೆಗಳಂತೆ ಚತುರ್ಯಗಗಳು ಸಹ ದೊಡ್ಡ ಕಾಲಾವಧಿಯಾಗಿ ಬಂದು ಜೀವಿಗಳ ಸುಖವನ್ನು ನಿರ್ಮಿಸುತ್ತಿರುವಂತೆ ತೋರುತ್ತದೆ. ತಂತಾನೆ ನೀರು ಒದಗಿ, ಕಂಡಲ್ಲಿ ಹುಲ್ಲು-ವನಸ್ಪತಿಗಳು ಸಹ ಸ್ವಾಭಾವಿಕವಾಗಿ ನಳನಳಿಸಿ ಬೆಳೆಯುವದು ಮಳೆಗಾಲದಲ್ಲಿ ಸಹಜವಾಗಿರುವಂತೆ, ಸುಖವು ಸ್ವಾಭಾವಿಕವಾಗಿಯೇ ಪ್ರಕಟವಾಗುವದಕ್ಕೆ ಅನುಕೂಲವಾಗುವಂತೆ ಸಾಮಂಜಸ್ಯ ಜೀವನವೇ ಮುಖ್ಯವಾಗಿ ಉಳ್ಳುದು ಸತ್ಯಯುಗವೆಂದು ಹೇಳುತ್ತಾರೆ. ಚಳಿಗಾಲದಲ್ಲಿ ಅವೇ ಹುಲ್ಲು ವನಸ್ಪತಿಗಳನ್ನು ಜೋಪಾನವಾಗಿರಿಸಲು ನೀರು ಕಟ್ಟಿಯೋ ಹೊಯ್ನೀರು ಹಾಯಿಸಿಯೋ ಪ್ರಯತ್ನಿಸಬೇಕಾಗುವಂತೆ ಮುಂದಿನ ಯುಗಗಳಲ್ಲಿ ಸಾಮಂಜಸ್ಯ ಜೀವನವನ್ನು ಉಳಿಸಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಬೇಸಗೆಯಲ್ಲಿ ಏನು ಮಾಡಿದರೆ ಹುಲ್ಲು-ವನಸ್ಪತಿಗಳು ಬತ್ತಿ ಹೋಗುವದೇ ಸ್ವಾಭಾವಿಕವಾಗಿರುವಂತೆ ಕಲಿಯುಗದಲ್ಲಿ ಸಾಮಂಜಸ್ಯ ಜೀವನವು ಕಾಣಸಿಗದಷ್ಟು ಕಡಿಮೆಯಾಗಿ ಬಿಡುತ್ತದೆ. ಅದು ಏನೇ ಇರಲಿ, ಸಹಜವಾಗಿಯೇ ಸುಖವನ್ನೊದಗಿಸುವ ಕಾಲ ಬಂದಾಗ ಮಾನವನು ಹಿಗ್ಗಿನಿಂದ ನಿಶ್ಚಿಂತನಾಗಿ ಬದುಕು ಮಾಡುವನು. ಆಗ ಕಾಲಕಾಲಕ್ಕೆ ಮಳೆ, ಸಾಕಾಗುವಷ್ಟು ಬೆಳೆ ಬರುವವು. ರೋಗ-ರುಜೆಗಳು ಸುಳಿಯವು ಹಾಲುಯಹನ ವಿಪುಲ ಮರಣ ಸುಳಿದು ಹೋದರೂ ಯಾರಿಗೂ ದುಃಖವಾಗದಂತೆ ಮುಪ್ಪಿನವರನ್ನೇ ಮಾತ್ರ ಎತ್ತಿ ಒಯ್ಯುವವದು. ಅಂಥ ಸುಖಜೀವನದ ಅವಧಿಯಲ್ಲಿ ನಿತ್ಯದ ಇಪ್ಪತ್ನಾಲ್ಕು ತಾಸುಗಳೂ, ವರುಷದ ಹನ್ನೆರಡು ತಿಂಗಳೂಗಳು ಹಿಗ್ಗುಗೊಳಿಸುವವು; ನಗಿಸುವವು ಇನ್ನಾವ ಉದ್ದೇಶವೂ ಇಲ್ಲದೆ, ಶುದ್ಧ ಸರಸೋಕ್ತಿಯ ಸೆಲೆಗಳು ಹೊರ ನೆಗೆದು ನಕ್ಕು ನಗಿಸುವವು ಅವು ಎಲ್ಲರಿಗೂ ಪ್ರಿಯವಾಗುವವು. ಇವುಗಳಿಗೆ ಸರ್ವಜ್ಞನು ಲೇಸು ನಗೆ ಎಂದಿದ್ದಾನೆ.

ಆ ಲೇಸು ನಗೆ

ಹೆಂಡತಿ :ಸರದು ಮಲಗಟಿಗೆ ಸರಗೀಯ ಕೊಂಡ್ಯೊತ್ತಿ
ಕಾಲುಂಗರೊತ್ತಿ ಬಳಿಯೊತ್ತಿ | ರಾಯರ |
ಗಂಡ : ಜಾಡಿ ಜಮಖಾನ್ಯೊತ್ತಿ ಕಂಬಳಿಯ ಕರಿಯೊತ್ತಿ
ಉಂಗುರುಡುಗೂಣಿ ಖಡೆಯೊತ್ತಿ | ಸತಿಯಳ |
ಮುರುವೊತ್ತಿ ನಿದ್ದಿ ಬಾರದ ||

ಇಲ್ಲಿ ತುಸು ವಕ್ರೋಕ್ತಿಯಿದ್ದರೂ ಸರಸವು ತಲೆಯೆತ್ತಿ ಜೀವನದ ಜನನವಾಗುತ್ತದೆ. ರಬಕವಿಯ ಒಬ್ಬ ಕನ್ಯೆಯನ್ನು ನಿಂಬರಗಿಗೂ ನಿಂಬರಗಿಯ ಒಬ್ಬ ಕನ್ಯೆಯನ್ನು ರಬಕವಿಗೂ ಕೊಟ್ಟಿದ್ದರೆಂದೂ, ಅವರಿಬ್ಬರೂ ಒಮ್ಮೆ ಒತ್ತಟ್ಟಿಗೆ ಕೂಡಿದ್ದರೆಂದೂ ಒಂದು ಕ್ಷಣ ಕಲ್ಪಿಸೋಣ. ಅವರು ಮೊದಲೇ ಹೆಣ್ಣು ಮಕ್ಕಳು. “ತಮ್ಮ ಮನದಂತೆ” ಮಾತನ್ನೂ ಒಂಕಾಗಿ ನುಡಿದು ನಗೆಯನ್ನು ಮಿಂಚಿಸುತ್ತಾರೆ. ಒಬ್ಬಳು ರಬಕವಿಯನ್ನು ಇಳಿಸಿ ನುಡಿದರೆ ಇನ್ನೊಬ್ಬಳು ನಿಂಬರಗಿಯನ್ನು ಹಿಟ್ಟುಗಳೆಯುತ್ತಾಳೆ.

ಹೆಸರೀಗಿ ರಬಕವಿ ಮೊಸರೀಗಿ ನೀರಿಲ್ಲ |
ಕುಸಲದ ಸಿಂಬಿ ಬರಿಗೊಡ | ಬಾಲ್ಯಾರು |
ಉಸ್ಸೆಂದು ಭಾವಿ ಇಳಿದಾರ ||

ಚಂದಕ ನಿಂಬರಗಿ ಗಂಧಕ ನೀರಿಲ್ಲ
ಟೆಂಗಿನ ಪರಟಿ ಬರಿಗೊಡ | ಬಾಲ್ಯಾರ
ರಂಬ್ಯಾರ ಜಗಳ ವರತ್ಯಾಗ ||

ಮುದುಕರನ್ನು ಕಂಡರೆ ಬಾಲಕರಿಗೆ ಮರ್ಕಟತನದ ಪ್ರತಿಭೆ ಬರುತ್ತಿರುವಂತೆ ತೋರುತ್ತದೆ. ಆಗ ಅವರಿಂದ ಹೊರಟ ಶಬ್ದಗಳ ರಸವು ಹಾಡಿನಂತೆ ಕೇಳಿಸಿ ಅದೆಂಥ ನಗೆ ಹುಟ್ಟಿಸುತ್ತದೆ ಕೇಳಿರಿ.

ಮಾವನಿಗೆ ಅಳಿಯರು-

ಮಾಮ! ಮಾಮ! ಮಾತಾಡು ಮಾತಾಡು
ಮಾವಿನ ಗಿಡಕ ಜೋತಾಡು ಜೋತಾಡು
ಮಾವಿನ ಟೊಂಗಿ ಮುರೀತು ಮುರೀತು
ಮಾವನ ಅಂಗಿ ಹರೀತು ಹರಿತು ||

ಇನ್ನು ಅಜ್ಜಿಯ ಕಡೆಗೆ ಮೊಮ್ಮಕ್ಕಳು ಬರುವರು-

“ಆಯವ್ವ ! ನಿನ್ನ ತಲೀಯಮ್ಯಾಲ ಹಿಂಜಿದ ಹಂಜಿ ಸುರದಾವ |
ಆಯವ್ವ! ನಿನ್ನ ಕಣ್ಣಿನ ಒಳಗ ಮಲ್ಲಿಗಿ ಮಗ್ಗಿ ಮುರದಾವ |
ಆಯವ್ವ! ನಿನ್ನ ಹಲ್ಲಿನ ಮ್ಯಾಲ ಚಾಚೇಲಿ ಥರಗಳು ಸೋರ್ಯಾವ |
ಆಯವ್ವ! ನಿನ್ನ ನಾಲಗಿ ಮ್ಯಾಲ ತರತರ ಬೈಗಳು ಜಾರ್ಯಾವ |
ಆಯವ್ವ! ನಿನ್ನ ಬೆನ್ನಿನ ಮ್ಯಾಲ ಮರಗವ್ವ ದುರಗವ್ವ ಏರ್ಯಾವ!

ಹೀಗೆ ತುದಿಮೊದಲಿಲ್ಲದೆ ತಾಳ ತಂತಿಯಿಲ್ಲದೆ ಸಾಗುತ್ತದೆ. ನೆರೆಹಳ್ಳಿಯಿಂದ ಕಾಳಿನ ಭಿಕ್ಷೆಗೆ ಬರುವ ಜಂಗಮ ಮುತ್ತಯ್ಯನನ್ನು ಸಾಲೆಯ ಹುಡುಗರು ನೆರೆದು ಕವಳಿಸಿ, ಬಯ್ದು ಬಯ್ಯಿಸಿಕೊಂಡು ಓಡಿ ಹೋಗುವ ಹುಡುಗರು ಅದೇಕೆ ಹಿಗ್ಗುವರೋ? ತಿಳಿಯುವದು ಬಿಗಿ. ಅದೇ ಮುತ್ತಯ್ಯನು ತನ್ನ ಕಥೆಯ ಗಂಟನ್ನು ಬಿಚ್ಚಿದರೆ ನಗುವ ಕಾರಣ ಸ್ಪಷ್ಟವೇ ಇರುತ್ತದೆ. ಅದರೊಳಗಿನ ಅತಿಶಯೋಕ್ತಿಯನ್ನು ಕೇಳಿಯೇ ತಿಳಿಯಬೇಕು. ಗಡಿಯಾರ ಪಟ್ಟಣದ ರಾಜನಿಗೂ, ಲಠ್ಠ ಪಟ್ಟಣದ ಸಾಹುಕಾರನಿಗೂ ನೆಂಟತನವಾಗುವಾಗ ಪರಸ್ಪರರು ತಮ್ಮ ತಮ್ಮ ಮನೆತನದ ಹಿರಿಮೆಯನ್ನು ಹೇಳಿಕೊಳ್ಳುವದು ಹೇಗೆಂದರೆ-

ಗ. ಪಟ್ಟಣದವರು : ರಾಜನ ಮನೆಯೊಳಗಿನ ಕೂಸುಗಳಿಗೆ ದಿನಾಲು ಮುಂಜಾನೆ ಮಮ್ಮು ಮಾಡಬೇಕೆಂದು ಅಕ್ಕಿ ತೊಳೆದರೆ ಆ ನೀರಿನಲ್ಲಿ ೩೬೦ ಹಡಗುಗಳು ಓಡಾಡುತ್ತವೆ.

ಲ. ಪಟ್ಟಣದವರು : ಸಾಹುಕಾರನ ಮನೆಯ ಆಳುಮಕ್ಕಳ ಬೆಳಗಿನೂಟಕ್ಕೆಂದು ಮಾಡುವ ಕಾರುಬೇಳೆಯಲ್ಲಿ ಹಾಕಲಿಕ್ಕೆ ೭೦೦ ಮಣ ಹಿಂಗುಬೇಕಾಗುತ್ತದೆ.

ಕಥೆ ಕೇಳುವವರೆಗೆ ಕೇಳಿ ಗೇಲಿ ಮಾಡಿ ಓಡಿ ಹೋಗುವರು.

ಅಯ್ನ್ಯೊರು ಅಯ್ನ್ಯೊರು ನಮ್ಮವರು |
ಐದು ಹೋಳಿಗೆ ಹೊಡೆಯುವರು |
ಒಬ್ಬರ್ನ ಕರೆದರ ಇಬ್ಬರು ಬರತಾರ |
ಟೊಣ್ಯಾ….. ಮಕ್ಕಳರು ||
ಜಂಗಮ ಜಾತಿ | ಗಡಿಗ್ಯಾಗ ಮೋತಿ
ಹುಟ್ಟಿಲೆ ಹೊಡೆದರ ಪುರು ಪುರು….

ಹೊಣೆಗಾರಿಕೆಯಿಲ್ಲದ ಒಬ್ಬ ಹುಡಿಗೆಗೆ ಒಬ್ಬ ಗರತಿಯು ಹಾಸ್ಯ ಮಾಡುವಳು.

ತಿಂದೋಡಿ ನಿನ್ನ ಗಂಡ | ತಿಂದೇನು ಮಾಡೆಂದ |
ತಿಂದೇಳು ಮನೆಯ ತಿರುಗೆಂದ | ಉಟ್ಟ ಸೀರೆ |
ಉಂಗಟಕ ಹಾಕಿ ಹರಿಯಂದ ||

ಇಂಥವಳೇ ಆದ ಇನ್ನೊಬ್ಬ ಹುಡುಗಿ ಚೆನ್ನಿ. ಆಕೆಯ ಗಂಡನು ಆಕೆಯನ್ನು ನೂಲುವ ಕೆಲಸಕ್ಕೆ ಹಚ್ಚಬೇಕೆಂದು-“ನೂಲೊಲ್ಯಾಕ ಚೆನ್ನಿ! ನೂಲೊಲ್ಯಾಕ ಚೆನ್ನ!!” ಎಂದು ಉಪದ್ರವ ಕೊಡುತ್ತಾನೆ. ಆಕೆ ‘ರಾಟಿಯಿಲ್ಲ ಜಾಣ’ ಎಂದು ನೆಪ ಹೇಳುತ್ತಾಳೆ. ಗಂಡನು ಮನೆಯೊಳಗಿನ ಬಂಡೆ ಮುರಿಸಿ ರಾಟಿ ಮಾಡಿಸಿ ಕೊಡುತ್ತಾನೆ. ಆದರೆ ಆ ಚೆನ್ನಿ ನೂಲಬೇಕಲ್ಲ! ಮತ್ತೆ ಕೇಳುತ್ತಾನೆ. “ನೂಲೊಲ್ಯಾಕ ಚೆನ್ನಿ! ನೂಲೊಲ್ಯಾಕ ಚೆನ್ನಿ” ಆದರೆ ಈ ಸಾರೆ ಕದಿರು ಇಲ್ಲೆಂದು ಹೇಳಲು ಕೈಯೊಳಗಿನ ಗುದ್ದಲಿ ಮುರಿಸಿ ಕದಿರು ಮಾಡಿಸಿಕೊಟ್ಟ. ಹೀಗೆಯ ಅವಳು ಕೇಳುವದನ್ನೆಲ್ಲ ಒದಗಿಸುತ್ತಾನೆ. ಕೊನೆಗೆ ನೂಲುವಾಗ ತಿನ್ನುವದಕ್ಕೆಂದು ಗೋದಿ ಕಡಲೆ, ಗುಗ್ಗರಿ ಹಾಕಿಸಿಕೊಟ್ಟದ್ದೂ ಆಯ್ತು. ಆದರೆ ಆ ಕೆಲಸ ಆರಂಭವಾಗಲೇ ಇಲ್ಲ… “ನೂಲೊಲ್ಯಾಕ ಚೆನ್ನಿ?” ಎಂದಾಗ “ನನಗೆ ಬರೂದಿಲ್ಲೋ ಜಾಣ” ಎಂದು ಹೇಳಿಬಿಡುವಳು.

ಬಯಲಾಟದ ಅಡ್ಡ ಸೋಗಿನಲ್ಲಿ ಒಬ್ಬ ಸಂಸಾರಗಿತ್ತಿ ಬರುವಳು. ಆಕೆ ತಾನು ಸಂಸಾರವನ್ನು ನೆರವೇರಿಸುವ ಚಾತುರ್ಯವನ್ನು ಆಢ್ಯತೆಯಿಂದ ಹೇಳಿಕೊಳ್ಳುವಳು-

ಮುಗ್ಗಲಗೇಡಿ ನನ್ನ ಸವತೇರಕಂಡರೆ ಮಗ್ಗಲುಯತೈತೆ |
ವಾರಕ ಸೇರು ಹಂಜಿ ನೂತ ನುರಿಸತೇನಿ ನಾ ಸಂಸಾರಗಿತ್ತೇ ||
ಹಡೆದಾಗೊವ್ಮೇ ಹಲ್ಲ ತಿಕ್ಕೊಂಡಿನಿ ಬೂಳಸಗಟ್ಟೈತೆ |
ಬಚ್ಚಲಾನ ಸೀರೆ ಅಲ್ಲೆ ಒಣಗತಾವ ಪುರಸೊತ್ತು ಎಲ್ಲೈತೆ |
ತಿಂಗಳಿಗೊಮ್ಮ ಬಾಚಿಕೊಂಡರೆ ತಲೆಯೇ ಸೀಳತೈತೆ ||

ಒಬ್ಬ ಜಾಣ ವಿದ್ಯಾರ್ಥಿಯ ತಾಯಿ ತನ್ನ ಮಗನ ಜಾಣತನವನ್ನು ಹೇಳುವುದು ಹೇಗೆಂದರೆ –“ನನ್ನ ಮಗ ಅಂಕಲಕೋಟಿ ರಾಜ್ಯಾನ ಹೆಸರು ಬರೀತಾನೆ!” ಕಲಿತುದನ್ನೆಲ್ಲ ಮರೆತು ಬಿಟ್ಟ ವಿದ್ಯಾರ್ಥಿಯು ಗುರುಗಳಿಗೆ ಹೇಳುವನು-

ಕಕಾನ ಕಾಗಿ ಒಯ್ತೋ | ಗಗಾನ ಗೂಗಿ ಒಯ್ತೋ |
ನನಾನ ನಾಯಿ ಒಯ್ತೋ | ಮಾಸ್ತರಾ ||

ಬೀಗನ ಮನೆಗೊಬ್ಬ ಬೀಗನು ಹೋದನು. ಅಕ್ಕನನ್ನು ಮಾತಾಡಿಸಿ ಬರಬೇಕೆಂಬುದೇ ಅವನ ಉದ್ದೇಶ. “ಅಕ್ಕನ ಗಂಡ ಭಾಳ ಜೀನ ಇದ್ದನೊ ಅವನಿಗಿಂತ ಹೆಂಡತಿ ನಿಗಳಾ” “ಒಪ್ಪತ್ತsಉಂಡವರು ಉಪ್ಪಾಸ ಮಾಡುತ್ತಿದ್ದರು, ಎರಡ್ಹೊತ್ತು ತಿಂತಿದ್ದಿಲ್ಲ ಕೂಳ.” ಅಂದೇ ಅವರು ಹೋಳಿಗೆ ಮಾಡುವ ಸಿದ್ಧತೆ ನಡೆಸಿದ್ದರು. ಹೆಂಡತಿ ಅಡಿಗೆಗೆ ತೊಡಗಿದಳು. ಗಂಡನು ಜಳಕಕ್ಕೆಂದು ಹಳ್ಳಕ್ಕೆ ಹೋದನು. ಅಲ್ಲಿಯೇ ಊರಿಂದ ಬಂದ ಬೀಗನ ಭೆಟ್ಟಿಯಾಯಿತು. ಶರಣಾರ್ಥ ಆಯ್ತು. ಲಗುಬಗೆಯಿಂದ ಮನೆಗೆ ಬಂದವನೇ ಹೆಂಡತಿಗೆ, ನಿಮ್ಮ ತಮ್ಮ ಬಂದಿದ್ದಾನೆಂದೂ, ನೀನು ತಲೆ ಕಟ್ಟಿ ಮಲಗಿಕೊಂಡು ಬಿಟ್ಟರೆ ಅವನು ಹೊರಟು ಹೋಗುವನೆಂದೂ ಸೂಚಿಸಿದನು-

ನೋಡೋ ಬೀಗ ! ನಮ್ಮ ತಾಪತರಾ |
ಮೂರ್ದಿನಾ ಆಯ್ತು ಕೂಳ್ನೀರ ಕಂಡಿಲ್ಲ –ದಿಕ್ಕಿಲ್ಲ ರೊಟ್ಟಿ ಮಾಡವರ |
ಹೆಂಡತಿ ಅನ್ನುವಾಕಿ ತಲೆ ಕಟ್ಟಿ ಮಲಗ್ಯಾಳ ಸಾಯುವ ಹಂಗ ಆಗಿ ಜೇರಾ ||

ಈ ಮಾತಿಗೆ ತುಂಬ ಬೀಗ ಕೇಳುತ್ತಾನೆ _

ಹೂರಣ ಅರಿಯುವ ಕಲ್ಲು ಹೊರಗ್ಯಾಕ ಇಟ್ಟದೆ ಇದರದು ಏನು ಚಮತ್ಕಾರ |
ಮನಿಯೆಲ್ಲ ಹಿಡಿದಾದ ದುಂದಕಾರ ಕಂದು ಖಚಿತ ಮಾಡ್ಯಾರ ಹೋಳಿಗಿ ಇವರ ||

ಬೀಗನು ಊರಿಗೆ ಹೋದಂತೆ ನಟಿಸಿ, ಅವರ ಮಾಳಿಗೆಯನ್ನೇರಿ ಕೂಡ್ರುವನು. ಗಂಡ ಹೆಂಡಿರು ಲಗುಬಗೆಯಿಂದ ಎದ್ದು ಕುಳಿತು ಪರಸ್ಪರರಲ್ಲಿ ಕರಾರು ಮುಗಿಸಿ, ಕಣ್ಣು ಕಟ್ಟಿಕೊಂಡು ಊಟಕ್ಕೆ ಕೂಡುವರು. ಪರಸ್ಪರರು ತುತ್ತು ಮಾಡಿ ಉಣಿಸಬೇಕು. ಆದರೆ ಅವರಿಬ್ಬರ ತುತ್ತುಗಳನ್ನು ತಿನ್ನುವವನು ಮಾಳಿಗೆಯಿಂದ ಇಳಿದು ಬಂದ ಬೀಗನೇ. ನಾನು ಹಾಕುವ ತುತ್ತು ತಕ್ಕೊಂಡರೂ ನನಗೆ ತುತ್ತು ಬರಲ್ಲೊಲ್ಲದೆಂದು ಇಬ್ಬರಿಗೂ ಸಂಶಯ. ಎದುರಾಳಿ ಹಸಿದಿರಬೇಕೆಂದು ಇಬ್ಬರಿಗೂ ಕಲ್ಪನೆ. ಆದರೆ ಬೀಗನು ಹೊಟ್ಟೆ ತುಂಬಿ ಢರಿ ಬಿಡಲು-“ಏನೋ ಘಾತವಾಯಿತೆಂದು” ಆ ಗಂಡು ಹೆಂಡರು ಕಣ್ತೆರದು ನೋಡುತ್ತಾರೆ! ಇಬ್ಬರ ನಡುವೆ ಕುಳಿತವನು ಬೀಗ! ಅಂತೇ “ತುಂಟ ತುಂಟರಿಗಿ ಗಂಟುಬಿದ್ದರ ಗರದಿ ಆಗತದ ಗಮ್ಮತ್ತ!!”

ಇದರಂತೆ ಅಪಸ್ವರ ಗಾಯಕ, ಕಿವುಡರ ಹಾಡು, ಬಸುರಿದ್ದೇನ್ಹೆ ಸರಿನ್ನೇನಿಡೋಣ ಇವು ನಕ್ಕು ನಗಿಸುವ ಲೇಸು ನಗೆಗ ಒಳ್ಳೆಯ ಉದಾಹರಣೆಗಳು.

ಅಪಹಾಸ್ಯ

ನಗೆಯೊಂದು ಅಜ್ಞಾನ ವಿಲಾಸವಾದರೂ ಅದೊಂದು ಬೆಳಕು. ಲೇಸು ನಗೆಯಿಂದ ಸೂಸುವ ಬೆಳಕು ಆಹ್ಲಾದಕರವಾದ ಬೆಳದಿಂಗಳಿನಂತೆ. ಆದರೆ ಕಣ್ಣು ಮುಚ್ಚಿ ಮುನ್ನುಗ್ಗುತ್ತಿರುವ ಕುರಿ ಹಿಂಡಿನ ಮೇಲೆ ಬ್ಯಾಟರುಯ ಥಳಕು ಸುರಿದಂತೆ ಅಪಹಾಸ್ಯವು. ಆ ಥಳಕಿಗೆ ಕುರಿತನದ ಅರಿವುಂಟಾಗುತ್ತದೆ. ಇಲ್ಲವೆ ಮುಖಕ್ಕೆ ಹಿಡಿದ ಕನ್ನಡಿಯಲ್ಲಿ ತನ್ನ ಸ್ವರೂಪದರ್ಶನವಾದಂತಾಗಿ ಕುಂದು ಕೊರತೆಗಳನ್ನು ಹೊಂದಿಸಲಿಕ್ಕಾಗುತ್ತದೆ. ಆ ಕೆಲಸವನ್ನು ಮಾಡುವದಕ್ಕೆ ಗಾದೆಯ ಮಾತಿನಂತಿರುವ ಹೆಣ್ಣುಮಕ್ಕಳ ಚುಚ್ಚ ನುಡಿಗಳು ತುಂಬ ಸಮರ್ಥವಾಗಿವೆ. ಈಗ ಪ್ರಕಟವಾಗಿರುವ ಗಾದೆಯ ಮಾತುಗಳಲ್ಲಿ ಅವಾವವೂ ಪವಣಿಸಲ್ಪಟ್ಟಿಲ್ಲ. ಅವಿನ್ನೂ ಸಂದರ್ಭಾನುಸಾರ ಬಾಯಿಮಾತಿನಲ್ಲಿಯೇ ಅವೆ. ಬಾಳುವೆಯ ವಿವಿಧ ಪ್ರಸಂಗಗಳಲ್ಲಿ ಅವು ಸಂದರ್ಭಾನುಸಾರವಾಗಿ ಬಳಸಲ್ಪಡುತ್ತವೆ. ಅವುಗಳಲ್ಲಿಯ ಕೆಲವೊಂದನ್ನು ಮಾದರಿಗಾಗಿ ನೋಡಬಹುದು.

೧. ಬೇಸತ್ತು ಬೇರೆಯಾದರೆ ಪಾಲಿಗೆ ಅತ್ತೆ ಬಂದಳು.
೨. ಸಿರಿಗೇಡಿಗೆ ಸೀರೆ ಉಡಿಸದರೆ ಹೊಲಗೇರಿಗೆ ಹೋಳಹೋಗಿತ್ತು.
೩. ಹಾದಿಗೆ ಹೋಗುವವನಿಗೆ ಅಪ್ಪಾ ಅಂದರೆ ಯಾರ ಹೊಟ್ಟೆಯವನೋ ಮಗನೇ ಅಂದನಂತೆ.
೪. ಊರ ತುಂಬ ಗಂಡರು ಉಡಲಿಕ್ಕೆ ಸೀರೆಯಿಲ್ಲ.,-ಇತ್ಯಾದಿ.

“ಸರಕ್ಕ ಸರಿತಲ್ಲ-ಬೀಗರ ಸ್ವರೂಪ ತಿಳಿತಲ್ಲ” ಎಂದು ಆರಂಭವಾಗುವ ಬೀಗರ ಹಾಡಿನಲ್ಲಿ,ದೊಡ್ಡಸ್ತಿಕೆ ಹೇಳಿಕೊಳ್ಳುವ ಬೀಗರ ದೊಡ್ಡಸ್ತಿಕರಯು ವಾಸ್ತವಿಕದಲ್ಲಿ ಕಾಣಬರದೆ, ಕಾಣಿಸಿದ ಕೀಳ್ಮೆಯನ್ನು ಆಡಿ ತೋರಿಸಿ. ಮೂದಲಿಸುವುದುಂಟು. ಬೀಗರ ನಿಬ್ಬಣದಲ್ಲಿ ಆನಿ ಬರುವವೆಂದು ಆರು ಬಣವಿಗಳನ್ನು ಒಂಟಿ ಬರುವವೆದು ಎಂಟು ಬಣಿವೆಗಳನ್ನು ಕೊಂಡಿಟ್ಟರೆ ಆನೆಯ ಬದಲಾಗಿ ಬೋಳುಹೋರಿ, ಒಂಟೆಯ ಬದಲು ಕುಂಟೆತ್ತು ಬರಬೇಕೇ? ಇಳಕೊಳ್ಳಲಿಕ್ಕೆ ದೇವರ ಮನೆ ಕೊಟ್ಟರೆ ಬೀಗರು ದೇವರನ್ನು ಕದಿಯಬೇಕೆ? ಅಡಿಗೆಮನೆಯಲ್ಲಿ ಇಳಕೊಂಡ ಬೀಗಿತ್ತಿಯು ಹೋಳಿಗೆ ಕದ್ದುಕೊಂಡು ಬಗಲಲ್ಲಿ ಇಟ್ಟುಕೊಂಡಳೆಂದೂ, ತನ್ನ ಪಾಲಿಗೆ ಬರಲಿಲ್ಲವೆಂದು ಅದನ್ನು ಅವರಣ್ಣನು ಕಸಗೊಂಡನೆಂದೂ ಹೀಗಳೆಯುತ್ತಾಳೆ. ಎಲ್ಲರ ಮಲ್ಲಗೆದಂಡೆ ಕಟ್ಟಿಕೊಂಡೆ, ಬೀಗಿತ್ತಿ ಹುಲ್ಲುಹೊರೆಯನ್ನು ಕಟ್ಟಿಕೊಂಡಳಂತೆ, ಎಲ್ಲರೂ ಗುಳ್ಳ-ಬೇಳೆಮಣಿ ಕಟ್ಟಿಕೊಂಡರೆ, ಆಕೆ ಕೈಪಾಳಿ ಕಟ್ಟಿಕೊಂಡರೆ ಬಳಸಲಿಕ್ಕೆ ಬೇಕೆಂದು ಅವರ ಅಣ್ಣನು ಕಸುಕೊಂಡನಂತೆ! ಈ ಬಗೆಯ ನಗೆಗಳಿಂದ ಹೊಗೆಯೆದ್ದ ಮದುವೆಯ ಉದಾಹರಣೆಗಳು ಎಷ್ಟೋ ಅವೆ.

ಹಾಡಿದರೆ ಸೊಗಸಾಗಿ ರಾಗವಾಗಿ ಸಭಿಕರ ಮುಂದೆ ಹಾಡಬೇಕೆಂದೂ, ಅಪಸ್ವರದಲ್ಲಿ ಹಾಡಿ ಕೇಳುಗರ ತಲೆಬೇನೆ ಎಬ್ಬಿಸಬಾರದೆಂದೂ ಲಾವಣಿಕಾರನು ತನ್ನ ಪ್ರತಿಪ್ರಕ್ಷದವನಿಗೆ ಉದಾಹರಣೆ ಕೊಟ್ಟು ಹೇಳುವ ಮಾತು ಅವನ ಹೃದಯಕ್ಕೆ ಚುಚ್ಚುವಂಥವಿರುತ್ತದೆ. ಆ ಹಾಡಿನ ಹೆಸರು ಅಪಸ್ವರ ಗಾಯಕ. ಅವನ ಗಾಯನಕ್ಕೆ ದೆವ್ವ ಸಹ ಮುಂದೆ ನಿಲ್ಲಲಿಲ್ಲ. ಸಬೆ ಹೇಗೆ ಶಾಂತಚಿತ್ತದಿಂದ ಕುಳಿತೀತು?

ಜೀವಿತವನ್ನು ಬಿಡಿಸಲಿಕ್ಕೆ ಎಲ್ಲಮ್ಮದೇವತೆಯೇ ನಿಲ್ಲಬೇಕಾದ ಒಂದು ಹಾಡುಗತೆಯಿದೆ. ಅದೇನೆಂದರೆ-ಎಳ್ಳಾಮಾಸಿಗೆ ಎಡೆ ಮಾಡಿಕೊಂಡು ಹೊಲಕ್ಕೆ ಹೋಗಿ ಭೂಮಿ ತಾಯಿಗೆ ನೈವೇದ್ಯ ತೋರಿಸುವ ಪದ್ಧತಿಯಿದೆಯಷ್ಟೇ? “ಎಳ್ಳಾಮಾಸಿಗೆ ಉಳ್ಳಿಕ್ಕೆ ಕರೆಯುವವರಾರು?” ಎನ್ನುವ ಗಾದೆಮಾತಿನಿಂದ ಅದನ್ನು ಪ್ರತಿ ಮನೆಯಲ್ಲಿಯೂ ಮಾಡುವವರೆಣದೂ, ತಂತಮ್ಮ ಆಪ್ತೇಷ್ಟರನ್ನು ಕರೆಕೊಂಡು ಹೋಗುವದಕ್ಕೆ ಮರೆಯುವದಿಲ್ಲವೆಂದೂ ಸ್ಪಷ್ಟವಾಗುತ್ತದೆ. ಹೀಗಿದ್ದರೂ ಜೀನನೊಬ್ಬನು “ಅದ್ನ ಬೀಸಿ, ಗಿದ್ನ ಕುಟ್ಟಿಸಿ, ಕುಳ್ಲ್ಯಾಗ ಆಡಿಸಿ, ಕೋಲಿನಿಂದ ಮುಗಿಚಿಸಿದನು. ಊರೆಲ್ಲಾ ಅಡವಿಗೆ ಹೋದ ಮೇಲೆ ಇವನು ಹೊರಟನು. ಯಾಕಂದರೆ ಮೋದಲೇ ಹಿರಟರೆ ಮಂದಿಯನ್ನು ಕರೆಯಬೇಕಾಗುತ್ತದೆ. ತಾನೊಯ್ದ ಎಡೆಯನ್ನು ಅಟ್ಟದ ಕೆಳಗಿಟ್ಟು, ಅದಕ್ಕೆ ತಲೆ ಕೊಟ್ಟು ಮಲಗಿದನು, ಆದರೇನು? ಮಗಿಯೊಳಗಿನ ನೀರು ಕಾಗೆ ಕುಡಿಯಿತು. ಕುಳ್ಳಿಯೊಳಗಿನ ನುಚ್ಚು ಹದ್ದು ಒಯಿತು. ಅವನು “ಇನ್ನೇನುಣ್ಣಲಿ? ಇನ್ನೇನು ತಿನ್ನಲಿ?” ಎಂದು ಗೋಳಾಡಹತ್ತಿದನು. ಅಂಥ ಹೊತ್ತಿನಲ್ಲಿ ಉದೇ ಉದೇ ಅನ್ನುತ್ತ ಎಲ್ಲವ್ವನು ಭಿಕ್ಷೆಗೆ ಬಂದಳು. ಜೀನನು ಪುಂಡಿ ಕಟ್ಟಿಗೆ ಕಿತ್ತುಕೊಂಡು ಹೊಡೆಯುತ್ತ ಆ ಜೋಗಿಣಿಯನ್ನು ಬೆನ್ನಟ್ಟಿದನು. ಆಕೆಯು ಹೊಡೆಯಬೇಡ, ಹಾದಿ ಹಿಡಿದು ಹೋಗುವೆನೆಂದು ಹೊರಟಳು. ಆಕೆಯು ಜೋಳದ ಹೊಲದಲ್ಲಿ ಹಾಯ್ದು ಹೋಗುವಾಗ ಕಣ್ಣಿನ ಕಾಡಿಗೆಯನ್ನೂ, ಹತ್ತಿಯ ಹೊಲದಲ್ಲಿ ಕೈಗಂಧವನ್ನೂ, ಗೋದಿಯ ಹೊಲದಲ್ಲಿ ಉಡಿಯ ಭಂಡಾರವನ್ನೂ, ಕಡಲೆಯ ಹೊಲದಲ್ಲಿ ಹಣೆಯ ಕುಂಕುಮವನ್ನೂ ಉದರಿಸಿಬಿಟ್ಟಳು. ಹಿಂದಿನಿಂದ ಜೀನನು ತನ್ನ ಹೊಲವನ್ನೆಲ್ಲ ಅಡ್ಡಾಡಿ ನೋಡಿದರೆ ಬೆಳೆಗಳೆಲ್ಲ ರೋಗ ಬಿದ್ದು ಕೆಟ್ಟು ಹೋಗಿವೆ! ಅದನ್ನೆಲ್ಲ ನೋಡಿ ಆತನು ಎದೆಯೊಡೆದುಕೊಂಡು ಅನ್ನ ನೀರು ಬಿಟ್ಟನು. ಹೊಲದಧಿದೇವತೆ ಮುನಿದರೆ ಬೆಳೆಗಳಿಗೆ ಕಾಡಿಗೆ ರೋಗ, ಇಟ್ಟಂಗಿ ರೋಗ, ಭಂಡಾರ ರೋಗ ಬೀಳುತ್ತವೆಂದು ಹೇಳುತ್ತಾರೆ.

ನಗೆಗೇಡು

ಶಸ್ತ್ರವನ್ನು ಜೋಕೆಯಾಗಿ ಉಪಯೋಗಿಸಿದರೆ ಚಿಕಿತ್ಸೆಯೆನಿಸುವದು. ಅಸ್ತವ್ಯಸ್ತವಾದರೆ ಸಂಹಾರವೆನಿಸುವದು. ಪರರ ಕೇಡಿನಲ್ಲಿ ಪಾಡು ಕಾಣುವ ನಗೆ ಹೊಗೆಯೆಬ್ಬಿಸುವದು. ಜೀವ ತಿನ್ನುವದು, ಸುಟ್ಟುಹಾಕುವದು. ಮಾತು ಮನೆ ಕೊಲ್ಳುವದೆಂದು ಹೇಳುವರಲ್ಲ ! ‘‘ಮರದ ತುಂಬ ಮುತ್ತು ಕೊಟ್ಟರೂ ಮುತ್ತೈದಿತನ ಸಿಗಲಾರದೆ” ಎಂದು ಮನೆಮುರುಕರು ಹೇಳಿ ಗುದ್ದಾಡ ನಿಲ್ಲುವ ಉದಾಹರಣೆಗಳು ಜನಪದ ಜೀವನದಲ್ಲಿ ವಿಪುಲವಾಗಿ ಸಿಗುತ್ತಿರುವಾಗ, ಅಂಥ ಜೀವನಗಳನ್ನು ನಾವು ಪ್ರತಿ ದಿನ ಕಾಣುತ್ತಿರುವಾಗ ಸಾಹಿತ್ಯದ ಉದಾಹರಣೆ ಕೊಟ್ಟು ಸಿದ್ಧಮಾಡಬೇಕೆ? ಇನ್ನು ಮೇಲೆ ಈ ಜೀವನವನ್ನು ಚಿತ್ರಿಸುವ ಸಾಹಿತ್ಯಗಳು ವಿಪುಲವಾಗಿ ಹುಟ್ಟಬಹುದು. ಆದರೆ ಹೇಸಿ ನಗೆಯ ಹುತ್ತಿನೊಳಗಿನ ಹಾವನ್ನು ಹೊಡೆದುಹಾಕಿ, ಲೇಸುನಗೆಯ ಬಿತ್ತನೂರುವ ಕೆಲಸವು ಅದರೊಡನೆ ಸಾಗಬೇಕಾಗಿದೆ.

ಜೀವನ ಸಾಹಿತ್ಯಾಭ್ಯಾಸ

ಹಿಂದಿನಿಂದ ಬಂದ ರೂಢಿಯಲ್ಲಿರುವ ಜನಪದ ಸಾಹಿತ್ಯಾಭ್ಯಾಸವನ್ನು ಮಾಡುವದರಿಂದ ನಮ್ಮ ಜೀವನದ ಮೇಲೂ ಸಾಹಿತ್ಯದ ಬೆಳಕು ಬೀಳುವದು. ಹೇಳಬೇಕಾಗಿರುವ ಮಾತನ್ನೂ ನಯವಾಗಿ ಅಂದರೆ, ಸತ್ಯವನ್ನು ಪ್ರಿಯವಾಗಿ ಹೇಳುವ ಕಲೆಯು ನಮಗೆ ಲಭಿಸುವದರ ಅಗತ್ಯ ಬಹಳವಿದೆ. ಅದನ್ನು ನಮ್ಮ ಹೆಣ್ಣುಮಕ್ಕಳು ಪರ್ಯಾಯವಾಗಿ ನೀತಿ ಹೇಳುವ ರೀತಿಯನ್ನು ತೀಳಿಯಬೇಕು.

-ಕಾಗೀಗಿ ಕಣ್ಣಿಟ್ಟ ಕರಿಯ ಹುಬ್ಬಿನ ಜಾಣ
ಮಾವಿನ ಹಣ್ಣು ಮನಿಯಾಗ | ಇಟ್ಟುಗೊಂಡು |
ನೀರಲಕ್ಯಾಕ ಮನಸಿಟ್ಟಾ ||

ಕೆಂಪು ಹೆಂಡತಿಯೆಂದು ಸಂತೋಷಪಡಬೇಡ
ಅತ್ತಿಯ ಹಣ್ಣು ಅತಿ ಕೆಂಪು | ಇದ್ದರು |
ಒಡೆದು ನೋಡಿದರೆ ಹುಳು ಬಾಳ ||

ಇಬ್ಬರ್ಹೆಂಡಿರನಾದಾ ಏಡಿಯ ಮುಳ್ಳಾದಾ
ಕೋಡಗನಾದ ಕೊರವಾದ | ಬಾಲ್ಯಾರು |
ಮಾಡಿಟ್ಟ ಸಿಂಬಿಯರಿವ್ಯಾದಾ ||