ವಿಜಾಪುರ ಜಿಲ್ಲೆಯ ಹಲಸಂಗಿಯ ಗೆಳೆಯರ ಗುಂಪಿನ ಮಧುರಚೆನ್ನರ ನೇತೃತ್ವದಲ್ಲಿ ಸಿಂಪಿ ಲಿಂಗಣ್ಣ ಕಾಪಸೆ ರೇವಪ್ಪ, ಪಿ. ಧೂಲಾ- ಜನಪದ ಗೀತೆಗಳಿಗೆ ಸಂಬಂಧಿಸಿದಂತೆ ಮೂರು ಅಮೂಲ್ಯ ಕೃತಿಗಳನ್ನು ಹೊರತಂದರು. ಗರತಿಯ ಹಾಡು (೧೯೩೧) ಸಂಪಾದಕರು ಮಧುರಚೆನ್ನ, ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ; ಮಲ್ಲಿಗೆ ದಂಡೆ (೧೯೩೨) ಸಂಪಾದಕರು ಮಧುರಚೆನ್ನ, ಕಾಪಸೆ; ಜೀವನ ಸಂಗೀತ (೧೯೩೩) ಸಂಪಾದಕರು ಸಿಂಪಿ ಲಿಂಗಣ್ಣ ಹಾಗೂ ಪಿ. ಧೂಲ-ಇಂದಿಗೂ ಈ ಮೂರು ಕೃತಿಗಳು ಅದ್ವಿತೀಯ ಸಂಗ್ರಹಗಳಾಗಿದ್ದನ್ನು ಎಲ್ಲರೂ ಬಲ್ಲರು.

೧೯೨೩ರಷ್ಟು ಮೊದಲೇ ೯ನೇ ಕನ್ನಡ ಸಾಹಿತ್ಯ ಸಮ್ಮೇಳನವು ವಿಜಾಪುರದಲ್ಲಿ ನಡೆದಾಗ ಮಧುರಚೆನ್ನರು ‘ಹಳ್ಳಿಯ ಹಾಡುಗಳು’ ವಿಷಯ ಕುರಿತು, ಪಿ. ಧೂಲಾ ಅವರು ‘ಲಾವಣಿಯ ಲಾವಣ್ಯ’ ಕುರಿತು ಪ್ರಬಂಧ ಮಂಡಿಸಿದ್ದರು. ಇದೇ ಸುಮಾರಿಗೆ ಸಿಂಪಿ ಲಿಂಗಣ್ಣನವರು ಜಯ ಕರ್ನಾಟಕ’ದ ಮೊದಲ ಸಂಚಿಕೆಗಳಿಂದಲೇ ‘ಜನಪದ ಗೀತೆ’ಗಳನ್ನು ಪ್ರಕಟಿಸಲು ಪ್ರಾರಂಭಿಸಿದರು. ನಂತರ ೧೯೭೦ರಲ್ಲಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ‘ಉತ್ತರ ಕರ್ನಾಟಕದ ಜನಪದ ಕಥೆಗಳು’ ಸಂಗ್ರಹಿಸಿಕೊಟ್ಟರು. ಇದೊಂದು ೭೩ ಜನಪದ ಕತೆಗಳ ಉತ್ಕೃಷ್ಟ ಸಂಗ್ರಹವಾಗಿದ್ದು ಕರ್ನಾಟಕದ ಜನಪದ ಕಥೆಗಳು’ ಸಂಗ್ರಹಿಸಿಕೊಟ್ಟರು. ಇದೊಂದು ೭೩ ಜನಪದ ಕತೆಗಳ ಉತ್ಕೃಷ್ಟ ಸಂಗ್ರಹವಾಗಿದ್ದು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಎಂ.ಎ. ವರ್ಗಕ್ಕೆ ಪಠ್ಯಪುಸ್ತಕವಾಗಿದೆ.

ಈ ರೀತಿ ಸಿಂಪಿ ಲಿಂಗಣ್ಣನವರು ಜನಪದ ಗೀತೆಗಳ, ಲಾವಣಿಗಳ ಹಾಗೂ ಜನಪದ ಕತೆಗಳ ಆದ್ಯ ಸಂಗ್ರಾಹಕರಲ್ಲಿ ಒಬ್ಬರಾಗಿದ್ದಾರೆ. ಅಷ್ಟೇ ಅಲ್ಲದೆ ಅವುಗಳ ಹುಟ್ಟಿನ ಹಿನ್ನೆಲೆಯನ್ನು ಅವುಗಳಲ್ಲಿ ಹುದುಗಿದ ಸಾಂಸ್ಕೃತಿಕ, ತಾತ್ವಿಕ, ಆಧ್ಯಾತ್ಮಿಕ ದರ್ಶನವನ್ನು ಆಕಾಶವಾಣಿ ಭಾಷಣಗಳ ಮೂಲಕ ಪತ್ರಿಕೆಗಳಲ್ಲಿ ಬರೆದು ಅಸಂಖ್ಯಾತ ಲೇಖನಗಳ ಮೂಲಕ ಜನಪದ ಸಾಹಿತ್ಯ ಸೌಂದರ್ಯವನ್ನು ನಾಡಿನ ಉದ್ದಗಲಕ್ಕೂ ಹರಡಿದ ಜಾನಪದ ಹಿರಿಯ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ.

ಅಪ್ಪಟ ಜಾನಪದ ಪ್ರತಿಭೆಯಾದ ಡಾ. ಸಿಂಪಿ ಲಿಂಗಣ್ಣನವರು ಜನಪದ ಸಾಹಿತ್ಯ ಪ್ರೇಮವನ್ನು ಬಯಲಾಟಗಳಲ್ಲಿ ದಕ್ಷಬ್ರಹ್ಮ ಪಾತ್ರ ವಹಿಸುತ್ತಿದ್ದ ತಮ್ಮ ತಂದೆ ಶಿವಯೋಗಪ್ಪ, ಕರಡಿ ಮಜಲಿನ ವಾದ್ಯಕಾರ ಅಣ್ಣ ಈರಪ್ಪನಿಂದ ಬಳುವಳಿ ಪಡೆದರು. ಮುಂದೆ ಡಾ. ಫ. ಗು. ಹಳಕಟ್ಟಿಯವರು ವಚನ ಸಾಹಿತ್ಯದ ಪಿತಾಮಹರೆನಿಸಿದಂತೆ ಜೀವನದುದ್ದಕ್ಕೂ ತಾವು ನಡೆಸಿದ ಸಾಧನೆಯ ಮೂಲಕ ಸಿಂಪಿ ಲಿಂಗಣ್ಣನವರು ಕನ್ನಡ ಜನಪದ ಸಾಹಿತ್ಯದ ಪಿತಾಮಹರೆನಿಸಿದರು.

ಡಾ. ಸಿಂಪಿ ಲಿಂಗಣ್ಣನವರ ಜಾನಪದ ಪ್ರತಿಭೆ ಅದ್ವಿತೀಯ ಹಾಗೂ ಅನನ್ಯ. ಜಾನಪದ ಸಂಸ್ಕೃತಿಯನ್ನು ಅವರು ಓದಿ ಅರಿಯಲಿಲ್ಲ. ಜೀವಿಸಿ ರಕ್ತಗತ ಮಾಡಿಕೊಂಡುಬಿಟ್ಟರು. ಅವರ ವ್ಯಕ್ತಿತ್ವದ ಪ್ರತಿ ಅಂಗುಲವೂ ಜಾನಪದ ಸತ್ವದಿಂದ ಕೂಡಿತ್ತು. ಹಳ್ಳಿಯಲ್ಲಿ ಹುಟ್ಟಿ ಅಲ್ಲಿಯೇ ಬೆಳೆದ ಅವರಿಗೆ ಹಳ್ಳಿಯ ಜೀವನದ ಎಲ್ಲ ಆಯಾಮಗಳು ಕರತಲಾಮಲಕವಾಗಿದ್ದವು. ಹಳ್ಳಿಯ ಜೀವನದ ಅವಿಭಾಜ್ಯ ಅಂಗಗಳಾದ ಹಾಡುಗಳು, ಲಾವಣಿಗಳು, ಬಯಲಾಟಗಳು, ಕಥೆಗಳು, ಒಡಗತೆಗಳು, ಗಾದೆಗಳು, ಒಗಟುಗಳು, ವಾಕ್‌ ಸಂಪ್ರದಾಯಗಳು, ಪಡೆನುಡಿಗಳು ವಿವಿಧ ವೃತ್ತಿಗಳಿಗೆ ಸಂಬಂಧಿಸಿದ ಬಳಕೆ ಮಾತುಗಳು, ಬೈಗಳು, ಚುಚ್ಚು ಮಾತುಗಳು ಮೆಚ್ಚು ನುಡಿಗಳು ಹಬ್ಬ ಹುಣ್ಣಿಮೆಗಳ ಚರಣೆಗಳು, ಹಾಡುಗಳು ಅವರ ಮುಖೋದ್ಗತವಾಗಿದ್ದವು. ಅವುಗಳ ಜೀವಂತ ಭಂಡಾರವೇ ಅವರಾಗಿದ್ದರು. ಅವುಗಳ ಅರ್ಥ ವಿವರಣೆಯನ್ನು ಅವರಷ್ಟು ನಿಚ್ಚಳವಾಗಿ ನೈಜವಾಗಿ ಹೇಳಿದವರು ಹಾಗೂ ಬರೆದವರು ಕಡಿಮೆ. ಅವರ ಲೋಕಜ್ಞಾನವಂತೂ ಲೋಕದಷ್ಟೇ ವಿಸ್ತಾರವಾಗಿತ್ತು. ಭೂಮ್ಯಾಕಾಶವನ್ನು ಮೀರಿಸುವಂತಾಗಿತ್ತು. ಹೀಗೆ ಅವರು ಜನಪದ ಸಾಹಿತ್ಯದ ಆಳ ಅಗಲಗಳನ್ನು ಬಲ್ಲವರಾಗಿದ್ದರು. ಅವರಿಗೆ ಜನಪದ ಸಾಹಿತ್ಯದ ಇತ್ತೀಚಿನ ಶಾಸ್ತ್ರೀಯ ಬೆಳವಣಿಗೆ, ಅಂತರ್‌ಶಿಸ್ತಿನ ಆಯಾಮಗಳು ಗೊತ್ತಿರಲಿಕ್ಕಿಲ್ಲ. ಆದರೆ ಅವರಿಗೆ ಜನಪದ ಸಾಹಿತ್ಯದ ತಿರುಳು ಸಂಪೂರ್ಣ ತಿಳಿದಿತ್ತು. ಅಂತೆಯೇ ಅವರ ಜನಪದ ಸಾಹಿತ್ಯ ವಿವೇಚನೆ ಇಂದಿಗೂ ಪ್ರಸ್ತುತವಾಗಿದೆ. ಜಾನಪದ ವಿಶ್ವಕೋಶವೇ ಆಗಿದ್ದ ಡಾ. ಸಿಂಪಿ ಲಿಂಗಣ್ಣನವರ ಜನಪದ ಸಾಹಿತ್ಯದ ಸಾಂಸ್ಕೃತಿಕ ವಿವೇಚನೆ ನಮ್ಮ ಇಂದಿನ ವೈಜ್ಞಾನಿಕ ಜನಪದ ಅಧ್ಯಯನಕ್ಕೆ ಒಂದು ಹೊಸ ನೋಟ ಕೊಡಬಲ್ಲದು. ಜನಪದ ಸಾಹಿತ್ಯ ಕುರಿತ ಅವರ ಕೆಲ ಗ್ರಂಥಗಳು ಅವರದೇ ಆದ ಶ್ರೀ ಅರವಿಂದ ಗ್ರಂಥಾಲಯದ ಮೂಲಕ ಪ್ರಕಟವಾಗಿದ್ದವು. ಅವು ಕರ್ನಾಟಕದ ಎಲ್ಲ ಭಾಗಗಳಿಗೆ ತಲುಪಲಿಲ್ಲ. ಈಗ ಅವು ಲಭ್ಯವಿಲ್ಲ ಕೂಡ. ಅವುಗಳನ್ನು ಈಗ ಈ ಸಮಗ್ರ ಸಂಪುಟದಲ್ಲಿ ತರುವ ಮೂಲಕ ಕನ್ನಡಿಗರ ಹೆಮ್ಮೆಯ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಳ್ಳಿಯ ಜನಪದ ಸಾಹಿತಿಗೆ ಗೌರವ ಸಲ್ಲಿಸುತ್ತಿದೆ. ಈ ಗ್ರಂಥ ಜನಸಾಮಾನ್ಯರಿಗೆ ಪ್ರಿಯವಾಗುವಂತೆ ಇಂದಿನ ಜನಪದ ವಿದ್ವಾಂಸರಿಗೂ ಪ್ರಿಯವಾಗಬಲ್ಲದು ಎಂಬ ವಿಶ್ವಾಸ ನನಗಿದೆ.

ಇಲ್ಲಿ ಸಂಕಲಿತವಾದ ಪುಸ್ತಕಗಳ ಸ್ಥೂಲ ಪರಿಚಯವನ್ನು ಇಲ್ಲಿ ಮಾಡಿಕೊಂಡಿದೆ.

೧. ಗರತಿಯ ಬಾಳು (೧೯೫೪)

ಲಿಂಗಣ್ಣನವರು ಬರೆದ ‘ಗರತಿಯ ಬಾಳು’ ಪುಸ್ತಕವನ್ನು ಧಾರವಾಡದ ಲಲಿತ ಸಾಹಿತ್ಯ ಮಾಲೆಯ ದ. ಬಾ. ಕುಲಕರ್ಣಿಯವರು ಪ್ರಕಟಿಸಿದ್ದರು. ನಂತರ ಅದರ ಎರಡನೇ ಆವೃತ್ತಿಯನ್ನು ಸಿಂಪಿ ಲಿಂಗಣ್ಣನವರು ಚಡಚಣದ ಶ್ರೀ ಅರವಿಂದ ಗ್ರಂಥಾಲಯದ ಮೂಲಕ ಪ್ರಕಟಿಸಿದರು. ‘ಗರತಿಯ ಹಾಡಿ’ಗೆ ಬರೆದ ಸುಂದರ ವ್ಯಾಖ್ಯಾನದಂತಿದೆ- ಈ ಗ್ರಂಥ ಗರತಿಯ ಬಾಳಿನ ಪರಿಶುಭ್ರ ಜೀವನದ ಚಿತ್ರಣವನ್ನು ಅವರು ಇಲ್ಲಿ ಕೊಟ್ಟಿದ್ದಾರೆ. ಗರತಿಯ ಹಾಡಿನ ಪ್ರತಿ ತ್ರಿಪದಿಯ ತಲಸ್ಪರ್ಶಿಯಾದ ವಿಶ್ಲೇಷಣೆ ಈ ಗ್ರಂಥದಲ್ಲಿ ಅಡಕವಾಗಿದೆ. ಅಂತೆಯೇ ಗರತಿಯ ಹಾಡಿನ ತ್ರಿಪದಿಗಳ ಆಸ್ವಾದಕ್ಕೆ ‘ಗರತಿಯ ಬಾಳು’ ಪೂರಕವಾಗಿದೆ. ಲೇಖಕರ ಆಧ್ಯಾತ್ಮಿಕ ದೃಷ್ಟಿಯಲ್ಲಿ ಗರತಿ ಮಾನವಳಲ್ಲ, ಲೋಕವನ್ನೆತ್ತಿ ಹಿಡಿಯಬಂದ ಶಕ್ತಿ ಮಾತೆಯಾಗಿದ್ದಾಳೆ. ಗರತಿ ಬಾಲ್ಯದಿಂದ ಮೊದಲು ಮಾಡಿಕೊಂಡು ತನ್ನ ಬಾಳಿನ ವಿವಿಧ ಘಟ್ಟಗಳಲ್ಲಿ ತಪಸ್ವಿನಿಯಂತೆ ಹಾಡಿದ ಹಾಡು ಸಂಸಾರವೇದವೆನಿಸಿತು. ಹೀಗಾಗಿ ಈ ಗ್ರಂಥದಲ್ಲಿ ಗರತಿಯ ಹಾಡಿನ ತ್ರಿಪದಿಗಳ ಸಾಂಸ್ಕೃತಿಕ ವಿಶ್ಲೇಷಣೆಗಿಂತ ಹೆಚ್ಚಾಗಿ ಆಧ್ಯಾತ್ಮಿಕ ವಿವರಣೆಯೇ ಹೆಚ್ಚಾಗಿದೆ.

ಲಿಂಗಣ್ಣನವರ ಭಾವುಕ ನಿಲುವನ್ನು ಇಂದಿನ ವೈಜ್ಞಾನಿಕ ದೃಷ್ಟಿಕೋನದ ವಿದ್ವಾಂಸರು ಒಪ್ಪಲಿಕ್ಕಿಲ್ಲ. ಆದರೆ ಗರತಿಯ ಅರ್ಥಾತ್‌ ಹೆಣ್ಣಿನ ಕುರಿತ ಲಿಂಗಣ್ಣನವರ ಪವಿತ್ರ ಭಾವನೆ ಇಂದಿನ ಜನಾಂಗಕ್ಕೆ ಅವಶ್ಯವಾಗಿದೆಯೆಂಬುದನ್ನು ಮರೆಯುವಂತಿಲ್ಲ. ಹೆಣ್ಣು ಮಕ್ಕಳ ಹಾಡುಗಳು, ಹೊನ್ನಮ್ಮನ ಹದಿಬದೆ, ಅಕ್ಕಮಹಾದೇವಿಯ ವಚನಗಳು, ಶ್ರೀ ರಾಮಕೃಷ್ಣ ಪರಮಹಂಸ, ಶ್ರೀ ಮಾತೇಯವರ ವಿಚಾರಗಳ ಬೆಳಕಿನಲ್ಲಿ ಪವಿತ್ರ, ಪರಿಶುದ್ಧ ಗರತಿಯ ಬಾಳಿನ ಸುಂದರ ಪ್ರತಿಮೆ ಈ ಗ್ರಂಥದಲ್ಲಿ ಮೂಡಿದೆ. ಗರತಿಯು ಸಂಸಾರದಲ್ಲಿ ಇಟ್ಟಿರುವ ನಿಷ್ಠೆ, ದೇವರಲ್ಲಿ ಅವಳಿರಿಸಿದ ಭಕ್ತಿ ಇವುಗಳನ್ನು ಲೇಖಕರು ವಿಶದಪಡಿಸಿದ್ದಾರೆ. ಸ್ತ್ರೀಯರನ್ನು ಹಗುರಾಗಿ ಕಾಣುವವರು ಈ ಗ್ರಂಥವನ್ನು ಅವಶ್ಯ ಓದಬೇಕು. ಈ ಗ್ರಂಥಕ್ಕೆ ೧೯೫೭ರಲ್ಲಿ ಮೈಸೂರು ಸರಕಾರದ ಪುಸ್ತಕ ಬಹುಮಾನ ದೊರೆಯಿತು.

೨. ಜನಾಂಗದ ಜೀವಾಳ (೧೯೫೭)

ಈ ಗ್ರಂಥವನ್ನು ೧೯೫೭ರಲ್ಲಿ ಧಾರವಾಡದ ಮಿಂಚಿನಬಳ್ಳಿ ಪ್ರಕಾಶನ ಸಂಸ್ಥೆ ಪ್ರಕಟಿಸಿತು. ‘ಜನಾಂಗದ ಜೀವಾಳ’ ಜನಪದ ಸಾಹಿತ್ಯ ವಿಮರ್ಶೆಯ ಇತಿಹಾಸದಲ್ಲೇ ಒಂದು ಮೈಲುಗಲ್ಲಾಗಿದೆ. ಮೊಟ್ಟಮೊದಲಿಗೆ ಜನಪದ ಸಾಹಿತ್ಯದ ವಿವಿಧಾಂಗಗಳಾದ ‘ಮಕ್ಕಳನ್ನಾಡಿಸುವ ಹಾಡುಗಳು, ಮದುವೆಯ ಹಾಡುಗಳು’ ಲೇಖನಗಳು ಇಂದಿನ ಕುಟುಂಬ ಜೀವನದ ತಲ್ಲಣದ ದಿನಗಳಲ್ಲಿ ಕುಟುಂಬ ವಾತ್ಸಲ್ಯದ, ಮದುವೆಯ ಆಚರಣೆಯ ಹಬ್ಬದ ವಾತಾವರಣದ ಹಾಡುಗಳು ಓದುಗರಿಗೆ ತಂಗಾಳಿಯ, ಹೃದಯಸ್ಪರ್ಶಿ ಅನುಭವ ಕೊಡಬಲ್ಲವು. ಮತ್ತೆ ಈ ಗ್ರಂಥ ಮೊದಲು ಪ್ರಕಟವಾದಾಗ ಜನಪದ ಸಾಹಿತ್ಯವೆಂದರೆ ಕೇವಲ ತ್ರಿಪದಿಯೆಂದು ತಿಳಿಯುವ ಕಾಲವಿತ್ತು. ಒಗಟುಗಳು, ಬಯಲಾಟದ ಹಾಡುಗಳು, ಜನಪದ ಸಾಹಿತ್ಯದಲ್ಲಿ ಅದ್ಭುತ ಕತೆಗಳು-ಇವುಗಳ ಅಧಿಕೃತ ವಿವರಣೆ-ವಿಶ್ಲೇಷಣೆ ಜನಪದ ಸಾಹಿತ್ಯ ವಿವೇಚನೆಯ ವ್ಯಾಪ್ತಿಯನ್ನೇ ವಿಸ್ತರಿಸಿದ್ದಂತೂ ಸುಳ್ಳಲ್ಲ. ಗರತಿಯ ಹಾಡು, ಹೆಣ್ಣು ಮಕ್ಕಳ ಹಾಡುಗಳು ತ್ರಿಪದಿಗಳಲ್ಲಿ ಅಡಕವಾಗಿರುವ ಹೆಣ್ಣು ಮಕ್ಕಳ ತ್ಯಾಗಮಯ ಜೀವನ, ಔದಾರ್ಯ, ದಿಟ್ಟತನ, ದೈವನಿಷ್ಠೆ, ಕೃತಜ್ಞತೆಗಳಂಥ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ‘ಜನಪದ ಜೀವನದಲ್ಲಿ ಹಾಸ್ಯ’ ಲೇಖನ ಜನಸಾಮಾನ್ಯರ ದಿನನಿತ್ಯದ ಬಾಳಿನಲ್ಲಿರುವ ರಸಿಕತೆಯನ್ನು ಗುರುತಿಸುತ್ತದೆ.

ಈ ಗ್ರಂಥವನ್ನು ಆಕಾಶವಾಣಿಯಲ್ಲಿ ವಿಮರ್ಶೆ ಮಾಡುತ್ತ ‘ಈ ಪುಸ್ತಕದಲ್ಲಿ ಜನಪದ ಸತ್ವದಿಂದ ಪರಿಪುಷ್ಟವಾದ ಭಾವಕೋಶದ ಅಭಿವ್ಯಕ್ತಿಯನ್ನು ಕಾಣುತ್ತೇವೆ. ಈ ಪುಸ್ತಕ ಜನಪದ ಸಾಹಿತ್ಯದ ಕೈಪಿಡಿ ಇಲ್ಲವೆ ಕೈಗನ್ನಡಿಯಾಗಿದೆ. ಲೇಖಕರಿಗೂ ಪ್ರಕಾಶಕರಿಗೂ ಕೂಡಿಯೇ ಹೆಸರು ತರುವ ಪುಸ್ತಕವಾಗಿದೆ’ಯೆಂದು ಕವಿ ಚೆನ್ನವೀರ ಕಣವಿಯವರು ಹೇಳಿದರು. ಇಂದು ಜನಪದ ಅಧ್ಯಯನ ತುಂಬ ವಿಸ್ತಾರವಾಗಿ ವ್ಯಾಪಕವಾಗಿ ಬೆಳೆದಿದೆ. ಆದರೆ ಅಂದಿನ ಕಾಲಕ್ಕೆ ಈ ಗ್ರಂಥ ಜಾನಪದ ಅಧ್ಯಯನಕ್ಕೆ ಭದ್ರವಾದ ತಳಹದಿ ಒದಗಿಸಿದ್ದು ಸುಳ್ಳಲ್ಲ. ಈ ಗ್ರಂಥಕ್ಕೂ ೧೯೫೯ರಲ್ಲಿ ಮೈಸೂರು ಸರಕಾರದ ಪುಸ್ತಕ ಬಹುಮಾನ ದೊರೆಯಿತು.

೩. ಜನಪದ ಸಾಹಿತ್ಯದಲ್ಲಿ ಕಿರಿದರೋಳ್‌ಪಿರಿದರ್ಥದ ಚಲಕ (೧೯೭೧)

ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸ ಮಾಲೆಯ ಪುಸ್ತಕ. ಈ ಕೃತಿ ಗಾತ್ರದಲ್ಲಿ ಕಿರಿದಾದರೂ ಅರ್ಥದಲ್ಲಿ ಹಿರಿದಾಗಿದೆ. ಜನಪದ ಸಾಹಿತ್ಯದ ವಿವಿಧಾಂಗಗಳ ಹುಟ್ಟಿನ ಬಗೆಯನ್ನು ತಮ್ಮದೇ ಆದ ರೀತಿಯಲ್ಲಿ ವಿವರಿಸುತ್ತಾರೆ. ಈ ದೃಷ್ಟಿಯಿಂದ ಹಾಡು, ಕಥೆ, ಒಡಪು, ಲೊಕೋಕ್ತಿಗಳ ಹುಟ್ಟನ್ನೂ ಶೋಧಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಕನ್ನಡ ಭಾಷೆಗೆ ವಿಶಿಷ್ಟವಾಗಿರುವ ಅನುಕರಣ ಶಬ್ದಗಳನ್ನು ಕೊಡುತ್ತಾರೆ. ಕನ್ನಡ ಬಾಯಿ ಗಪಗಪ ತಿಂದು ಗಟಗಟ ನೀರು ಕುಡಿಯುತ್ತದೆ. ಕನ್ನಡಿಗರು ಬುಳುಬುಳು ಅಥವಾ ಗಳಗಳ ಅತ್ತು ಕುಲುಕುಲು ಅಥವಾ ಖೊಕ್‌ಖೊಕ್ ನಗುತ್ತಾರೆ. ಕಣ್ಣು ಒಮ್ಮೆ ಪಿಳಿಪಿಳಿ ಇನ್ನೊಮ್ಮೆ ಹುಳುಹುಳು ನೋಡುತ್ತದೆ. ಮಳೆಯಲ್ಲಿ ಮನುಷ್ಯ ತಪತಪ ಅಥವಾ ತಟತಟ ನಡಗುತ್ತಾನೆ, ದುಡುದುಡು ಓಡುತ್ತಾನೆ, ಗಟಗಟ ಉರುಳುತ್ತಾನೆ. ಇಲ್ಲಿ ಕನ್ನಡದ ಅನುಕರಣ ಶಬ್ದಗಳ ಶ್ರೀಮಂತಿಕೆಯನ್ನು ಅವಶ್ಯ ಗಮನಿಸಬೇಕು. ತೊಳೆನೀರು, ಬಾಯೆಂಜಲು, ಉಡಿದೆನೆ, ಹಿಡಿದೆನೆ ಮತಿಹಿಡಿಸು, ಹಿಡಿಗಲ್ಲು, ಒಣಗಿ ಹಸಗಿ, ಉಣಮಗ್ಗ ಮೊದಲಾದ ಅಪರೂಪದ ಶಬ್ದಗಳ ಅರ್ಥಕೊಟ್ಟಿದ್ದಾರೆ. ಮನೆಗೆ ಬಂದ ಅತಿಥಿಗೆ ಬಡಲ್ಲ ಕೊಟ್ಟ ಮೇಲೆ ನೀರು ಕೊಟ್ಟರೆ ಅದಕ್ಕೆ ಬಾಯೆಂಜಲು ಅನ್ನುತ್ತಾರೆ. ಇನ್ನೂ ಪಡೆನುಡುಗಳ ಸೊಗಸನ್ನು ನೋಡಬೇಕು. ತಲೆ ತಿರುಗುವುದೇ ಬೇರೆ, ತಲೆದೂಗುವುದೇ ಬೇರೆ, ತಲೆಯರತ್ತುವುದು ಬೇರೆ, ತಲೆಕೊಡಬಹುದು ಬೇರೆ, ತಲೆ ಕಾಯುವರು ಬೇರೆ, ಇವುಗಳ ಜೊತೆಗೆ ದೃಷ್ಟಾಂತರ ಅಡ್ಡಕತೆಗಳ ಅಡ್ಡಕತೆಗಳ ಗಟುಗಳ ಸೌಂದರ್ಯವನ್ನೂ ಎತ್ತಿ ತೋರಿಸಿದ್ದಾರೆ.

ಹೆಡಿಗೆ ಜಾತ್ರೆ (೧೯೮೧)

ಜಾನಪದ ಬದುಕಿನ ವೈವಿದ್ಯಪೂರ್ಣ ವಿವೇಚನೆ ಈ ಸಂಕಲನದ ವೈಶಿಷ್ಟ್ಯವಾಗಿದೆ. ‘ಆನಿ ಬಂತೊಂದು ಆನಿ, ಯಾವೂರ ಆನಿ’ ಎನ್ನುವ ಲಲ್ಲೆನುಡಿ ತೆಗೆದುಕೊಂಡು ಲೇಖಕರು ರಕ್ಕಸಗಿ ತಂಗಡಗಿ ಕಾಳಗದಲ್ಲಿ ವಿಜಯನಗರದ ಅರಸನಿಗೆ ಸೋಲಾಗದು ಆದಿಲಶಾಹಿ ದಂಡಿನವರ ಆತನು ಸಂಪತ್ತನ್ನು ದೋಚಿಕೊಂಡು ಬಂದಿರಬಹುದೆಂದು ಈ ಲಲ್ಲೆನುಡಿಯ ಅರ್ಥ ಹೇಳುತ್ತಾರೆ. ನಿಸರ್ಗದ ಮಡಿಲಲ್ಲಿ ಬೆಳೆದ ಜನಸಾಮಾನ್ಯರು ನಿಸರ್ಗದಲ್ಲಿ ಕಂಡ ಸೊಬಗು, ಹಮ್ಮಿಕೊಂಡ ಹಬ್ಬ ಹುಣ್ಣಿಮೆಗಳು, ಆಮೋದ ಪ್ರಮೋದಗಳು – ಅವರ ಸಂದರ್ಯದೃಷ್ಟಿಗೆ ಸಾಕ್ಷಿಯೆನ್ನುತ್ತಾರೆ. ‘ಜನಪದ ಸಾಹಿತ್ಯದ ಮುನ್ನಡೆ’ ಲೇಖನದಲ್ಲಿ ಜನಪದ ಸಾಹಿತ್ಯ ಅಧ್ಯಯನದ ಇತಿಹಾಸ ಹೇಳುತ್ತಾರೆ. ಜನಪದ ಸಾಹಿತ್ಯದ ಸತ್ವವನ್ನು ಸೋದಾಹರಣಗಳೊಂದಿಗೆ ‘ಬಾಳಕೈಪಿಡಿ’ ಹಾಗೂ ‘ಜನಪದ ಸತ್ವ’ ಲೇಖನಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ‘ಲೋಕಸಾಹಿತ್ಯದಲ್ಲಿ ಗಾಂಧಿಜಿ’ ಎಂಬ ಲೇಖನ ಹಳ್ಳಿಯ ಜನಸಾಮನ್ಯರು ಗಾಂಧಿಜಿಯನ್ನು ಹೇಗೆ ಕಂಡಿದ್ದರು ಎಂಬುದನ್ನು ವಿವರಿಸುತ್ತದೆ. ‘ಜನಪದ ಕಲೆಗಳ ಪರಮ ಪ್ರಯೋಜನ’ ಲೇಖನ ಜನಪದ ಕಲೆಗಳಿಂದ ಭಾವೈಕ್ಯತೆ ಸಾಧಿಸಬಹುದೆಂಬುದನ್ನು ಸ್ಪಷ್ಟಪಡಿಸುತ್ತದೆ. ಜಾನಪದ ಜೀವನದ ಔದ್ಯಮಿಕ ಶಬ್ದಗಳು, ಜಾನಪದ ಚಿಕಿತ್ಸೆಗಳು, ಜನಪದ ವೈದ್ಯ ಹಾಗೂ ವೃತ್ತಿಪರ ಶಬ್ದಗಳ ವ್ಯಾಪ್ತಿಯನ್ನು ವಿವರಿಸುತ್ತದೆ. ‘ಚೌಡಿಕೆಯ ಹಾಡುಗಳು’ ‘ಡೊಳ್ಳಿನ ಹಾಡುಗಳು’ ಲೇಖನಗಳು ಹಳ್ಳಿಯ ಆಚರಣೆಗಳಲ್ಲಿ ಹಾಡುವ ಹಾಡುಗಳು ವಿಶ್ಲೇಷಣೆಯನ್ನೊಳಗೊಂಡಿವೆ. ಒಟ್ಟಿನಲ್ಲಿ ‘ಹೆಡಿಗೆ ಜಾತ್ರ’ ಜಾನಪದ ಜೀವನದ ಒಂದು ಸಾಂಸ್ಕೃತಿಕ ಅಧ್ಯಯನವಾಗಿದೆ.

ಗರತಿಯ ಬಾಳಸಂಹಿತೆ (೧೯೮೫)

ಗರತಿಯ ನಾಲ್ಕು ಅವತಾರಗಳನ್ನು ಅಂದರೆ ಹುಟ್ಟಿದ ಮನೆಯ ಮಗುವಾಗಿ, ಕೊಟ್ಟ ಮನೆಯ ಸೊಸೆಯಾಗಿ, ಪತಿಯ ಸತಿಯಾಗಿ, ಮಗುವಿಗೆ ತಾಯಾಗಿ-ಬದುಕುವ ಗರತಿಯ ನಾಲ್ಕು ಅವತಾರಗಳನ್ನು ಲೇಖಕರು ಗರತಿಯ ಹಾಡಿನ ತ್ರಿಪದಿಗಳ ಮೂಲಕ ಹಿಡಿದಿರಿಸಿದ್ದಾರೆ. ಬಾಳನ್ನು ಎದುರಿಸಿ ಜೀವಿಸುವುದರಲ್ಲಿಯೇ ಗರತಿಯ ಧರ್ಮ ಸಂಹಿತೆಯಿದೆಯೆಂಬುದನ್ನು ವರ್ಣಿಸಿದ್ದಾರೆ. ಪ್ರತಿ ಜನಪದ ಹಾಡಿನ ಹುಟ್ಟನ್ನು ಗುರುತಿಸಿದ್ದಾರೆ. ಗಂಡ ಹೆಂಡಿರ ಪ್ರೀತಿಕಲಹ, ಮೋಹ ಮುನಿಸು, ಸರಸ ವಿರಸ, ಅತ್ತೆ ಸೊಸೆಯರ ಇರಿಸು ಮುರಿಸು, ಮಕ್ಕಳ ಆಟದಿಂದ ತಾಯಿಗುಂಟಾದ ಹರ್ಷ ಇವೆಲ್ಲ ಸೊಗಸಾಗಿ ಮೂಡಿವೆ.

ಗಾದೆಗಳ ಗಾರುಡಿ (೧೯೮೮)

ಗಾದೆಗಳ ಹುಟ್ಟಿನಿಂದ ಹಿಡಿದು ಹೆಣ್ಣುಮಕ್ಕಳ ಗಾದೆಗಳು, ಕೂಳಿನ ಕುರಿತ ಗಾದೆಗಳಿಂದ ಹಿಡಿದು ಬಡತನ ದಾರಿದ್ರ್ಯ ವಿಷಯದವರೆಗೆ, ಗಾದೆಗಳಲ್ಲಿ ನಾಯಿಯವರೆಗೆ-೧೭ ವಿಷಯಗಳ ಕುರಿತ ಗಾದೆಗಳ ವಿಶ್ಲೇಷಣೆ ಮಾಡಿಸಿದ್ದಾರೆ. ‘ಲೋಕೋಕ್ತಿಗಳ ಮೇಲೆ ಕ್ಷಕಿರಣ’ ಲೇಖನ ಗಾದೆಗಳ ವೈಜ್ಞಾನಿಕ ದೃಷ್ಟಿಕೋನದ ವಿವೇಚನೆ ಮಾಡುತ್ತದೆ. ಗಾದೆಗಳು ನೈತಿಕ ಸಂಹಿತೆಯಾಗಿರುವುದನ್ನು ಸ್ಪಷ್ಟಪಡಿಸುತ್ತಾರೆ. ಮನುಷ್ಯ ಸ್ವಭಾವದ ಮೇಲೆ, ವಿವಿಧ ಜಾತಿಗಳ ವಿಶಿಷ್ಟ ಗುಣಗಳ ಮೇಲೆ ಒತ್ತನ್ನು ಕೊಡುತ್ತಾರೆ. ಹೀಗೆ ‘ಗಾದೆಗಳ ಗಾರುಡಿ’ಯಲ್ಲಿ ಅಪಾರ ಜೀವಾನಾನುಭವ ತುಂಬಿದೆ. ಗಾದೆಗಳ ಕುರಿತ ಎ.ಕೆ.ರಾಮಾನುಜನ್‌ರ ಪುಸ್ತಕ ಪಾಂಡಿತ್ಯಕ್ಕೆ ಸೂಕ್ಷ್ಮ ನಿದರ್ಶನವಾಗಿದ್ದಂತೆ ಸಿಂಪಿಯವರ ಗಾದೆಗಳ ಗಾರುಡಿ ಪುಸ್ತಕ ಜೀವಾನಾನುಭವ ಹಾಗೂ ಸಂಸ್ಕೃತಿಗಳ ವಿರಾಟ್‌ದರ್ಶನ ಮಾಡಿಸುತ್ತದೆ.

ಸಿಂಪಿ ಲಿಂಗಣ್ಣನವರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ನೂರು ಗ್ರಂಥಗಳನ್ನು ರಚಿಸಿದ್ದರೂ ಅವರ ಪ್ರಮುಖ ಸಾಧನೆಯಿರುವುದು ಜನಪದ ಸಾಹಿತ್ಯದಲ್ಲಿಯೇ. ಜಾನಪದ ಸಾರ ಸರ್ವಸ್ವವನ್ನು ಅಧ್ಯಯನ ಮಾಡಿದ್ದಲ್ಲ ಜೀವಿಸಿದ್ದ ಲಿಂಗಣ್ಣನವರ ಹೆಜ್ಜೆಯ ಗುರುತು ಉಸುಕಿನ ಮೇಲೆ ಇಟ್ಟಂತಹದಲ್ಲ, ಕಲ್ಲಿನ ಮೇಲೆ ಕಡೆದು ನಿಲ್ಲಿಸಿದಂತಹದು ಎಂದು ಹೇಳಿದ ಹಿರಿಯ ಜನಪದ ವಿದ್ವಾಂಸ ಗೊ.ರು.ಚನ್ನಬಸಪ್ಪನವರ ಮಾತು ನಿತ್ಯಸತ್ಯ.

ಅಪ್ಪಟ ಜಾನಪದ ಪ್ರತಿಭೆ ಡಾ. ಸಿಂಪಿ ಲಿಂಗಣ್ಣನವರ ಸಮಗ್ರ ಜನಪದ ಸಾಹಿತ್ಯ ಸಂಪುಟವನ್ನು ಪ್ರಕಟಿಸಲು ತುಂಬ ಅಕ್ಕರೆಯಿಂದ, ತುಂಬ ಅಭಿಮಾನದಿಂದ ಮುಂದೆ ಬಂದ ಹಿರಿಯ ಜಾನಪದ ವಿದ್ವಾಂಸರೂ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳೂ ಆದ ಡಾ. ವಿವೇಕ ರೈ ಅವರಿಗೆ ನಾವು ಚಿರಋಣಿಗಳೆಂದು ಹೇಳಿದರೆ ಏನೂ ಹೇಳಿದಂತಾಗುವುದಿಲ್ಲ. ಅವರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಅವರ ಕುಲಪತಿಯಾಗಿರುವ ಅವಧಿಯಲ್ಲಿ ಈ ಗ್ರಂಥ ಪ್ರಕಟವಾಗುತ್ತಿರುವುದು ತುಂಬ ಔಚಿತ್ಯಪೂರ್ಣವಾಗಿದೆ.

ಅದರಂತೆ ಈ ನಮ್ಮ ಯೋಜನೆಗೆ ಬೆಂಬಲ ಸೂಚಿಸಿ ಈ ಗ್ರಂಥ ಪ್ರಕಟವಾಗಲು ಪ್ರೇರಣೆಕೊಟ್ಟು ಆತ್ಮೀಯ ಮಿತ್ರರೂ ಕನ್ನಡದ ಹಿರಿಮೆಗಾಗಿ ಹಲವು ಯೋಜನೆಗಳ ಹೊಳಹು ಹಾಕುತ್ತಿರುವ ಶ್ರೇಷ್ಠ ಸಂಶೋಧಕರು ಆಗಿರುವ ಡಾ. ಎಂ.ಎಂ. ಕಲಬುರ್ಗಿ ಅವರಿಗೆ, ನನ್ನ ಎಲ್ಲ ಸಾಹಿತ್ಯಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುತ್ತಿರುವ ಹಿರಿಯ ಅಣ್ಣ ಹಿರಿಯ ವಿದ್ವಾಂಸ, ಗುರುಲಿಂಗ ಕಾಪಸೆ ಅವರಿಗೆ ನನ್ನ ಅನಂತ ಕೃತಜ್ಞತೆಗಳು. ಈ ಸಂಪುಟವು ಇಷ್ಟೊಂದು ಅಂದವಾಗಿ ಬರಲು ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರು ಕಾರಣ. ಮುದ್ರಣದ ವಿವಿಧ ಹಂತದಲ್ಲಿ ಅವರ ಸಹಕಾರ ನನಗೆ ದೊರೆತದ್ದು ಹಿಗ್ಗು ತಂದಿದೆ. ಇವರಿಗೆ ನನ್ನ ಕೃತಜ್ಞತೆಗಳು.