ಒಡಗತೆಗಳೆಂದರೆ, ಹಿರಿಯ ಮಕ್ಕಳು ಕಿರಿಯ ರಸಿಕತೆಯನ್ನು ಪರೀಕ್ಷಿಸುವ ಒಂದು ಸಾಧನವೆಂದು ಹೇಳಬಹುದು. ಒಡಗತೆಯು ಒಂದು ಸಮಸ್ಯೆಯಂತೆ ಮೈದೊಟ್ಟು ನಿಲ್ಲುವದು. ಆದರೆ ಬುದ್ಧಿಪರೀಕ್ಷೆಯ ಪರಿಪ್ರಶ್ನೆಯಾಗಲಾರದು. ಒಡಗತೆಯಿಂದ ವ್ಯವಹಾರಜ್ಞಾನದ ಇನ್ನೊಂದು ದೃಷ್ಟಿಯು ಅರಳುವದು. ಹಳ್ಳಿಗಳಲ್ಲಿ ರಸಿಕತೆಯು ಬೆಳೆಯುವದಕ್ಕೆ ಒಡಗತೆಯು, ಮಹಾ ಪ್ರಯೋಜನವಾಗಿರುವದನ್ನು ಮನಗಂಡ ಸರ್ವಜ್ಞ ಕವಿಯು ತನ್ನ ತ್ರಿಪದಿಗಳಲ್ಲಿ ಒಡಗತೆಗಳನ್ನು ಒಡಮೂಡಿಸಿದ್ದನ್ನು ನೆನೆಸಿಕೊಳ್ಳಬಹುದಾಗಿದೆ.

ಕಲ್ಲರಳಿ ಹೂವಾಗಿ ಎಲ್ಲರಿಗೆ ಬೇಕಾಗಿ
ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ | ಇದರರ್ಥ |
ಬಲ್ಲಿದರು ಪೇಳಿ ಸರ್ವಜ್ಞ ||

ಚಿತ್ರಕ ಕಾವ್ಯದಂತೆ ಕಂಡರೂ ಒಡಗತೆಯು, ಕಾವ್ಯವನ್ನು ಆಸ್ವಾದಿಸುವ ಒಲವನ್ನು ಉಂಟುಮಾಡಬಹುದು. ಒಡಗತೆಯಲ್ಲಿ ಕಂಡುಬರುವ ಕಲ್ಪನೆ, ಭಾವ, ಉಪಮಾನ ಇವುಗಳ ಪರಿಚಯವಾಗುತ್ತ ಹೋದಂತೆ ಅದರಿಂದಾಗುವ ಆನಂದವು ಅಷ್ಟಿಷ್ಟಲ್ಲ. “ಕಾವ್ಯಮಾನಂದಾಯ” ‘ಕಬ್ಬ ಉಬ್ಬಿಗಾಗಿ” ಎನ್ನುವ ಮಾತಿನಲ್ಲಿ ಕಾವ್ಯದ ಪ್ರಯೋಜನವು ಆನಂದವೇ ಎಂದು ಧ್ವನಿತವಾಗುತ್ತದೆ. ಆನಂದವು ಅಂತರಂಗವನ್ನು ಅರಳಿಸುವಂತೆ, ಅಂತರಂಗದ ಅರಳುವಿಕೆಯು ಆನಂದವನ್ನು ಕೆರಳಿಸುತ್ತದೆ. ಒಡಗತೆಗಳು ಇವೆರಡೂ ಕೆಲಸವನ್ನು ಏಕಕಾಲದಲ್ಲಿ ಕೈಗೂಡಿಸುವವು. ಆನಂದವು ಮಂದಾನಿಲದಂತೆ ಸುಳಿದು ಬಂದರೂ, ದೇವಗಂಗೆಯಂತೆ ಇಳಿದು ಬಂದರೂ ಬುದ್ಧಿಯನ್ನು ಬೆಳಗಿ, ಪ್ರಾಣವನ್ನು ತೊಳಗಿ ಬದುಕಿನಲ್ಲಿ ನೆಮ್ಮದಿಯನ್ನುಂಟು ಮಾಡುವ ಮೋಡಿಯಾಗಿರುತ್ತದೆ.

ಕವಿದೃಷ್ಟಿಯನ್ನು ತೆರೆಯಿಸಿ, ಸೊಬಗನ್ನು ಜೀವನದ ಜೇನನ್ನುಸವಿಯುವ ಶಕ್ತಿಯನ್ನು ಸರಿಗೊಳಿಸುವದಕ್ಕೆ ಒಡಗತೆಗಳು ಕಾವ್ಯದಷ್ಟೇ ಪ್ರಯೋಜನಕಾರಿಯಾದ ಆರಂಭದ ಪಾಠಗಳಾಗಿವೆ. ಕಾವ್ಯಭಾವವನ್ನು ತೊಟ್ಟು ಬಿಡದೆ ಕಾವ್ಯಜೀವನವನ್ನು ಧರಿಸಿ ಸಾಕಾಗದೆ ಕಾವ್ಯದ ಮೈಕಟ್ಟನ್ನು ಹೊತ್ತು ಒಡಗತೆಯು ನಮ್ಮೆದುರಿಗೆ ಬಂದಾಗ ಕೂಸು ಮಾಡಿ ಎತ್ತಿಕೊಳ್ಳುವರಾರು? ಮುಂಡಾಡಿ ಮೋಹಗೊಳ್ಳದವರಾರು?

“ಬಂಗಾರದ ಗುಬ್ಬಿ ಬಾಲಲ್ಲಿ ನೀರು ಕುಡಿಯುತ್ತದೆ” ಎಂದು ದೀವಿಗೆಯನ್ನು ಬಣ್ಣಿಸುವದಕ್ಕೆ ಬಾಯಿ ಬರಬೇಕಾದರೆ, ಆ ಕಣ್ಣು ಎಂಥದಿರಬೇಕು! ದೀಪದ ಕುಡಿಯೇ ಗುಬ್ಬಿ, ಬಂಗಾರದ ಗುಬ್ಬಿ! ಬುತ್ತಿಯ ಜೋಡೇ ಅದರ ಬಾಲ; ಎರ್ಣಣಿಯೇ ಕುಡಿಯುವ ನೀರು. ಬಂಗಾರದ ಗುಬ್ಬಿಯಾಗಲಿ, ಬಾಲಲ್ಲಿ ನೀರು ಕುಡಿಯುವ ಪಕ್ಷಿಯಾಗಲಿ ಈ ಲೋಕದ ವಸ್ತುವಲ್ಲ. ಗುಬ್ಬಿ ಕಂಡಿದ್ದೇವೆ; ಬಾಲವನ್ನು ಬಲ್ಲೆವು; ನೀರು ಪರಿಚಯದ ವಸ್ತು. ಆದರೆ ಬಾಲಲ್ಲಿ ನೀರು ಕುಡಿಯುವ ಬಂಗಾರ ಗುಬ್ಬಿ ಕಾಣಿಸುವದಕ್ಕೆ ಕವಿದೃಷ್ಟಿ ಬೇಕು. ಬಂಗಾರದ ಗುಬ್ಬಿ ಅಗಾಧ ವಸ್ತುವಾದರೆ ಬಾಲಲ್ಲಿ ನೀರು ಕುಡಿಯುವದು ವಿಚಿತ್ರ ವ್ಯಾಪಾರವೆನಿಸುತ್ತದೆ. ಅಂಥ ಸ್ವರ್ಗೀಯ ವಸ್ತುವನ್ನು ಕಂಡ ಕಣ್ಣು, ನಮ್ಮನ್ನು ಕ್ಷಣ ಹೊತ್ತಾದರೂ ಸ್ವರ್ಗದ ಸೀಮೆಯಲ್ಲಿ ವಿಹರಿಹಚ್ಚುವದಿಲ್ಲವೇ”

‘ಬಣ್ಣದ ಸೀರೆಯುಟ್ಟು ಮಣ್ಣಲ್ಲಿ ಕುಳಿತ’ ಗೆಣಸು, ಪೇಟೆಯಲ್ಲಿ ಅಡ್ಡಕ್ಕೆ ಪಂಚೇರು ಮಾರುವ ಗಡ್ಡೆಯ ವರ್ಗದಲ್ಲಿ ಬರದೆ, ಬೆಲೆಯುಳ್ಳ ಸೀರೆಯುಟ್ಟು, ಮಣ್ಣ-ಕೆಸರುಗಳಿಗೆ ಹೇಸದೆ ‘ಸೇವೆಯೇ ಸ್ವರ್ಗದ ದಾರಿ’ಯೆನ್ನುವ ಗರತಿಯನ್ನು ನೆನಪಿಗೆ ತಂದುಕೊಡುತ್ತದೆ. ಚಿಂತಾಕು ಇಟ್ಟುಕೊಂಡು ಚಿಪ್ಪಾಟಿ ಬಳೆಯುವ ಬಾಲೆಯ ಜೀವನದ ಸಮೃದ್ಧಿಯನ್ನೂ, ಬದುಕಿನ ಶ್ರದ್ಧೆಯನ್ನೂ ತೋರಿಸುವದಕ್ಕೆ ಗೆಣಸು ಸಮಥ್ವಾಗುವುದು ಈ ಒಡಗತೆಯ ಮರ್ಮವನ್ನು ಅರಿತಾಗಲೇ ಅಲ್ಲವೇ?

ದುಡಿಮೆಯ ದೊಡ್ಡಸ್ತಿಕೆಯನ್ನು ಅರಿತವಳು ಬಣ್ಣದ ಸೀರೆಯನ್ನು ಉಟ್ಟಂತೆ, ಕರಿ ಸೀರೆಯುಟ್ಟು ಬಿಡುವಿಲ್ಲದೆ ದುಡಿಯುವ ಇನ್ನೊಬ್ಬ ಗರತಿಯನ್ನು ಗುರುತಿಸೋಣ.

ಕರಿ ಸೀರೆ ಉಟ್ಟಾಳ | ಕಾಲುಂಗರ ಇಟ್ಟಾಳ |
ಮೇಲೆ ಹೋಗತಾಳ | ಕೆಳಗೆ ಬರತಾಳ ||

ಅವಳಾರು? ಕುಟ್ಟುವ ಒನಿಕೆ. ಒನಿಕೆಯ ಮೈಬಣ್ಣವೇ ಕರೆ ಸೀರೆಯಾಗಿದೆ; ಅದರ ತುದಿಗೆ ಹಾಕಿದ ಅಣಸೇ ಕಾಲುಂಗರವಾಗಿದೆ. ಮೇಲೆ ಹೋಗಿ ಕೆಳಗೆ ಬರುವ ಧಾವತಿಯೇ ಆಕೆಯ ಸತತೋದ್ಯೋಗ, ಎಡೆಬಿಡದ ಪರಿಶ್ರಮ. ನಮ್ಮವರ ಆಳಾಗಿ ದುಡಿದು ಅರಸಾಗಿ ಉಣ್ಣು ಎನ್ನುವ ತತ್ವವಾಗಲಿ, ಕೈ ಕೆಸರಾದರೆ ಬಾಯಿ ಮೊಸರಾಗುವ ಸತ್ವವಾಗಲಿ ಒಡಗತೆಗಳಲ್ಲಿ ಹುದುಗದೆ ಹೋಗಿಲ್ಲ.

ಒಡಗತೆಗಳಲ್ಲಿ ವಿಚಿತ್ರತರವಾದ ಅನೇಕ ಹೆಂಗಳೆಯರು ಸುಳಿದು ಬರುವದುಂಟು.

“ಮನೆ ಮಾಡುವ ರಂಡೆಗೆ ಹಿಂದೆ ಮೊಲೆ” (ಮೊರ)
“ತಗ್ಗಿನಾಗ ಬಸುರಾಗತಾಳ | ತೆವರಾಗ ಹಡಿತಾಳ” (ಮೊಟ್ಟೆ)
“ಸಾವಿರ ರೂಪಾಯಿ ಸರಕು | ನೂರು ರೂಪಾಯಿ ಗೋಣಿ |
ಹೊತ್ತ ಎತ್ತಿಗೂ ಗೊತ್ತಿಲ್ಲ | ಹೇರಿದ ಶೆಟ್ಟಿಗೂ ಗೊತ್ತಿಲ್ಲ ” (ಬಸುರಿ)
“ಬಾಬಾ ಅಂಬೋಳು | ಬಣ್ಣಿಸಿ ಕರೆವಳು |
ಇಕ್ಕಿಸಿಕೊಂಬಳು | ಕಕ್ಕಸಬಡುವಳು” (ಬಳೆಯಿರಿಸಿಕೊಳ್ಳುವವಳು)

ಇವುಗಳಲ್ಲಿ ಮನೆವಾರ್ತೆಯ ಒಡವೆಗಳನ್ನೇ ಒಡತಿಯೆಂದು ಭಾವಿಸಿ ಬಣ್ಣಿಸಿದಂತೆ, ಒಡತಿಯನ್ನೇ ಒಡವೆಯೆಂದು ಭಾವಿಸಿ ನುಣ್ಣಿಸಲಾಗಿದೆ. ಮೊರವೇನೋ ಮನೆಮಾಡುವ ಹೆಣ್ಣಿನಂತೆ, ಅನಿವಾರ್ಯವಾದ ಅವಶ್ಯಕವಾದ ವಸ್ತುವಾಗಿದೆ. ಆದರೆ ಆ ಹೆಣ್ಣು ವಿಧವೆ. ವಿಧವೆಯಾದರೂ ಆಕೆ ತಣಿವಿಲ್ಲದೆ ಮನೆವಾರ್ತೆಯನ್ನು ಸಾಗಿಸುತ್ತಾಳೆ. ಸುಮಂಗಲೆಯಾದರೇನು, ವಿಧವೆಯಾದರೇನು ಯಾವ ಹೆಣ್ಣಿಗೂ ಬೆಣ್ಣಿನಲ್ಲಿ ಮೊಲೆಯಿರಲಾರವು. ಎದೆ ಕಾಣಿಸುವ ಪರಿವೆಯಿಲ್ಲದೆ ಹೊದಿಕೆಯನ್ನೇ ಹಿಂದೆ ಹಾಕುವ ಕಾರ್ಯನಿರತ ಹೆಂಗಳೆಯರನನು ಕಂಡಿದ್ದೇವೆ. ಆದರೆ ಈ ವಿಧವೆ ಎದೆಗಳನ್ನೇ ಹಿಂದೆ ಹಾಕಿ ಕೆಲಸಕ್ಕೆ ಟೊಂಕ ಕಟ್ಟಿದ್ದಾಳೆ. ವಿಧವೆಗೆ ಕೈಕೊಂಡ ಕಾರ್ಯವಲ್ಲದೆ, ಮೊಲೆಗಿಲೆಯ ಅವಶ್ಯಕತೆಯೇ ಇಲ್ಲವೆಂದು ಹಾಗೆ ಮಾಡಿರಬಹುದೇನೋ. ಅದರಂಎ ತಗ್ಗಿನಲ್ಲಿ ಬಸುರಾಗಿ ತೆವರಲ್ಲಿ ಹಡೆಯುವ ಮೊಟ್ಟೆ, ಬಸುರಾಗುವುದು ಯಾರಿಗೂ ತಿಳಿಯದು. ಅದು ರಹಸ್ಯವಾದ ಕಾರ್ಯಭಾಗ. ಆದರೆ ಹಡೆಯುವದು ಎಲ್ಲರಿಗೂ ತಿಳಿಯುವ ಸಂಗತಿ. ಅದು ರಹಸ್ಯವಾಗಿರುವಂತೆ ಬಸುರೊಳಗಿನ ಬದುಕೂ ರಹಸ್ಯತರವಾಗಿರುವುದುಂಟು. ಅಂತೇ ಅದು ಸಾವಿರ ಸರಕು! ಆ ಬದುಕು ಹೊತ್ತ ಬಸಿರು ಸಾವಿರ ರೂಪಾಯಿ ಸರಕಲ್ಲವಾದರೂ, ನೂರು ರೂಪಾಯಿಯ ಗೋಣಿಯೆನ್ನುವದು ಸುಳ್ಳಲ್ಲ. ಸರಕು ಮತ್ತೋ-ರತ್ನೋ ತಿಳಿಯದು; ಹೆಣ್ಣೋ ಗಂಡೋ ಎನ್ನುವುದಾಗಲಿ, ಸುಂದರವೋ ಮಾಟಗೇಡಿಯೋ ಎನ್ನುವದಾಗಲಿ, ಬುದ್ಧಿವಂತ-ತಿಳಿಗೇಡಿ ಎನ್ನುವುದಾಗಲಿ ಯಾರಿಗೆ ತಿಳಿಯುವದು? ಬಸುರು ಹೊತ್ತ ತಾಯಿಗಂತೂ ಗೊತ್ತಿರಲಾರದು; ‘ಹೇರಿದ ಶೆಟ್ಟಿಗೂ ಗೊತ್ತಿಲ್ಲ”ವೆನ್ನುವ ಮಾತು ಅಚ್ಚರಿಯದು. ಇದೇ ಒಡಗತೆಯ ಜೀವ-ಜೀವಳ. ಓಣಿ ಹಿಡಿದು ಸಾಗಿದ ಬಳೆಗಾರ್ತಿಯನ್ನು ‘ಬಾ, ಬಾ’ ಎಂದು ಆಲಪರೆದು, ಕರೆದು, ಹಗ್ಗ ಕೊಟ್ಟು ಕೈಕಾಲುಕಟ್ಟಿಸಿಕೊಂಡಂತೆ, ಬಳೆಯಿಕ್ಕಿಸಿಕೊಳ್ಳುವದಕ್ಕೆ ಸಿದ್ಧಳಾಗಿ “ಕಕ್ಕಸಬಡುವ ಮಾತು” ಹಾದಿಗೆ ಹೋಗುವ ದೆವ್ವವನ್ನು ಕರೆದು ಮನೆ ಹೊಗಿಸಿ ಕೊಂಡಂತಲ್ಲವೇ?

ಹೆಣ್ಣು ಚೆಲುವು, ಹೆಣ್ಣಿನ ಮಾತು ಚೆಲುವು. ಹೆಣ್ಣಿನ ಕಣ್ಣು ಚೆಲುವು, ಕಾಣ್ಕೆ ಚೆಲುವು. ಆಕೆ ಮನೆಯಿಂದ ಹೊಲಕ್ಕೆ ಹೋಗಿ ಹತ್ತಿಯ ಬೆಳೆ ಕಂಡಿದ್ದಾಳೆ. ಹತ್ತಿಯ ಗಿಡ ನಿಟ್ಟಿಸಿದ್ದಾಳೆ. ಗಿಡದೊಳಗಿನ ಹತ್ತಿ ದಿಟ್ಟಿಸಿದ್ದಾಳೆ. ಅಡವಿಯೊಳಗಿದ್ದರೂ ಊರೊಳಗಿನ ವಸ್ತುವಾಗಿ ಅದು ಕಾಣಿಸದೆ ವಸ್ತುವೆಂದರೂ ಅಗ್ಗದ ವಸ್ತುವಲ್ಲ; ಬೆಲೆಯುಳ್ಳ ವಸ್ತು

ಅಕ್ಕಕ್ಕ ತೇರು ನೋಡು | ತೇರ ಮೇಲಿನ ಗೊಂಬೀ ನೋಡು |
ಗೊಂಬೀ ಮೂಗಿನ ಸುಂಬಳ ನೋಡು || (ಹತ್ತೀ ಗಿಡ)
ನಗೀ ಬಂದು ನಾಕು ತಿಂಗಳಾಯ್ತು | ನಗಬೇಕಂದರ ಪಂಚಕ ಬಿದ್ದಾದ
ಅಪ್ಪಗ ಬಂದು ನೋಡಿ ಹೋಗನ್ನು |
ಅವ್ವಗ ಬಂದು ಕರಕೊಂಡು ಹೋಗನ್ನು || (ಹತ್ತಿ)

ತನ್ನ ವಸ್ತುವನ್ನು ಅಕ್ಕರೆಯಿಂದ ನೋಡುವದಕ್ಕೂ ಎಲ್ಲರಿಗೂ ಬರುವದಿಲ್ಲ. ಅಕ್ಕರೆಯಿಂದ ನೋಡಿದಾಗ ತನ್ನ ವಸ್ತು ಚೆಲುವಾಗಿ ತೋರುವುದು. ಒಲವಾಗಿ ತೋರುವುದು ತೇರು, ಗೊಂಬಿ, ಗೊಂಬಿಯ ಮೂಗು ಹತ್ತಿಯ ಗಿಡದಲ್ಲಿ ಕಂಡವಳು, ಅಕ್ಕರೆಯನ್ನು ಹೊತ್ತ ಸಕ್ಕರೆಯೇ ಆಗಿರಬೇಕು. ಆಕೆಯ ಕಣ್ಣಿಗೆ ಚೆಲುವನ್ನು ಸೃಷ್ಟಿಸುವ ಅಂಜನವೇ ಲೇಪಿಸಿರಬೇಕು. ಹತ್ತಿಯ ಕಾಯಿ ತುಂಬಿ ಬಂದಿದ್ದರೂ ಒಡೆದಿಲ್ಲ. ಒಡೆಯುವುದಕ್ಕೆ ಕೆಲವೊಂದು ದಿವಸ ಕಾಯಬೇಕು. ತುಂಬಿದ ಕಾಯಿ ನಗೆಯನ್ನು ಹತ್ತಿಕ್ಕಿಕೊಂಡಂತೆ ಒಡೆದ ಕಾಯಿ ಶುಭ್ರವಾದ ಹಲ್ಲಿನ ಸಾಲುಗಳೊಳಗಿಂದ ಹೊರಬಿದ್ದ ನಗೆಯಂತೆ. ವ್ಯವಹಾರದಲ್ಲಿ ಅತ್ತೆಯ ಮನೆಯ ಹೆಣ್ಣನ್ನು ಕಂಡುಹೋಗುವ ಕೆಲಸವನ್ನು ಅವ್ವನೂ, ಕರೆತರುವ ಕೆಲಸವನ್ನು ಅಪ್ಪನೂ ಮಾಡುವದು ರೂಢಿ. ಆದರೆ ಅಪ್ಪನೇ ಬಂದು ನೋಡಿ ಹೋಗಲೆಂದೂ ಅವ್ವನು ಕರೆದೊಯ್ಯಲಿಕ್ಕೆ ಬರಲೆಂದು ಚಮತ್ಕಾರಿಕವಾಗಿ ಹೇಳಿ ಕಳಿಸಿದ ಹೆಣ್ಣೆಂದು ಈ ಒಡಗತೆಯಲ್ಲಿ ಬಗೆಯಲಾಗಿದೆ. ಹತ್ತಿ ಒಡೆದುದನ್ನು ನೋಡಲಿಕ್ಕೆ ಗಂಡಸು ಹೊಲದವರೆಗೆ ಹೋಗುವದನ್ನೂ ಅದನ್ನು ಬಿಡಿಸಿಕೊಂಡು ತರುವುದಕ್ಕೆ ಹೆಂಗಸು ಹೊಲಕ್ಕೆ ಹೋಗುವುದನ್ನೂ ನಾವೆಲ್ಲರೂ ಬಲ್ಲೆವು.

ತಂಗಿ ಹೇಳುತ್ತಾಳೆ ಅಕ್ಕನಿಗೆ ‘ನೋಡು’ ಎಂದು! ಒಂದಲ್ಲ ಎರಡಲ್ಲ ನಾಲ್ಕು ವಸ್ತುಗಳನ್ನು ‘ನೋಡಲು’ ಹೇಳುತ್ತಾಳೆ. ಅದರ ಮೈಗಟ್ಟು ಒಡಗತೆ ಅಹುದು. ಆದರೆ ಅದರ ಹರವು ಕಥೆಯಾಗಿ ಹಬ್ಬಿದೆ. ತೂತಿನ ಕಂತೆಯಲ್ಲ. ಮಾತಿನ ಬೆಳ್ಳಿ. ನೆಲ ಬಿಟ್ಟು ಮಲಗಿನೇರಿಲ್ಲವಾದರೂ, ಆ ಬಳ್ಳಿ ಹಿಡಿದ ಕುಡಿ, ಬಿಟ್ಟ ಹೂ, ತೊಟ್ಟ ಹಸಿರು ಒಂದಕ್ಕಿಂತ ಒಂದು ಚಂದ.

ಅಕ್ಕಕ್ಕ ಬಾವಿ ನೋಡು | ಬಾವೀ ಮೇಲಿನ ಗಿಡ ನೋಡು |
ಗಿಡದ ಮೇಲಿನ ಕಾಯಿ ನೋಡು ಕಾಯಿ ತಿಂದವರ ಬಾಯಿ ನೋಡು |

ಬಾಯಿ ನೋಡೆಂದು ಹೇಳುವ ಕಾಯಿ ಅದಾವುದಿರಬಲ್ಲದು? ಬಾಯಿಗೆ ರುಚಿ ತರುವ ಕಾಯಿಯೇ, ಬಾಯಿ ಕಂಪಿಡುವ ಕಾಯಿಯೇ? ಅವಾವವೂ ಅಲ್ಲ. ನೋಡಿ ಗುರುತಿಸಬೇಕಾಗಿದೆಯಲ್ಲವೇ? ಕಂಪಿಡುವ ಕಾಯಿಯಾಗಲಿಕ್ಕಿಲ್ಲ, ಕೆಂಪಡಿವು ಕಾಯಿಯಾಗಿರಬಹುದೇ? ಬಾಯಿಯಂತೆ ಕಾಯಿ, ಕಾಯಿಯಂತೆ ಗಿಡ, ಗಿಡದಂತೆ ಬಾವಿಯಿದ್ದರೆ ಮಾತ್ರ ತಂಗಿ. “ಅಕ್ಕಕ್ಕ ಬಾವಿ ನೋಡು” ಎಂದು ಆಶ್ಚರ್ಯಪಟ್ಟು ಕೇಳಬಲ್ಲಳು. ಬಾವಿಯ ನೀರು ತಿಳಿನೀಲ, ಅದರ ಮೇಲೆ ಗಡದು ಹಸರಿನ ಎಲೆಗಳುಳ್ಳ ದಟ್ಟವಾದ ನೆರಳಿನ ಗಿಡ. ಗಿಡದ ತುಂಬ ಕಪ್ಪು! ನೀರಲ ಹಣ್ಣು. ಅವುಗಳನ್ನು ತಿಂದವರ ಬಾಯಿ ಕೂಡ ಕಪ್ಪು ಕಪ್ಪು! ಕೇಳುವದೇನಿದೆ? ತಂಗಿ ಅಚ್ಚರಿಪಟ್ಟು “ಅಕ್ಕಕ್ಕ” ಎನ್ನುವದಾಗಲಿ, ಬಾವಿ ನೋಡು, ಗಿಡ ನೋಡು ಕಾಯಿ ನೋಡು, ಬಾಯಿ ನೋಡು ಎನ್ನುವದಾಗಲಿ ಸಹಜವಲ್ಲದೆ ಮತ್ತೇನು?

ಮನೆವಾರ್ತೆಯಲ್ಲಿ ಹೆಣ್ಣು ಮಕ್ಕಳು ತಮಗೆ ತೀರ ಸಂಬಂಧವಿರುವ ಕುಳ್ಳಬಾನು, ಬೀಸುವಕಲ್ಲು, ತಕ್ಕಡಿ, ಹೊಲ-ತೋಟದೊಳಗಿನ ಬೆಳೆ, ಸೆಗಣಿ ಮೊದಲಾದ ಜೀನಸುಗಳನ್ನು ಅದೇ ಸೌಂದರ್ಯ ದೃಷ್ಟಿಯಿಂದ ನೋಡುವದನ್ನು ಕಲಿತಿದ್ದಾರೆ. ತಮ್ಮ ಸಂಜೀವಿನಿ ದೃಷ್ಟಿಯಲ್ಲಿ ಅವುಗಳಿಗೂ ಜೀವದಾನ ಮಾಡಬಲ್ಲರು.

ಗಿಡದೊಳಗಿನ ಮೆಣಸಿನಕಾಯಿಗಳು ಗಿಡ್ಡನ ಗಿಡ್ಡಕ್ಕೆ ಗಿಣಿ ಮುಕುರಿಯಂತೆ ಕಾಣಿಸಿದರೆ, ಅಸಂಖ್ಯ ಕುಳ್ಳುಗಳ ಒಟ್ಟಿಲು ಆನೆಯ ಹೊಟ್ಟೆಯಲ್ಲಿ ಆರು ಸಾವಿರ ಮಕ್ಕಳಂತೆ ಕಾಣಿಸುತ್ತದೆ. ಊಟದ ತಾಬಾಣದಲ್ಲಿ ಬೀಳುವ ಬಾಳೆ ಹಣ್ಣು ‘ತಂಗಿ ಕಳೆದು ಬಾವಿಯಲ್ಲಿ ಇಳಿ’ಯುವಂತೆ ತೋರುವದು ಒಂದು ತೆರವಾದರೆ; ಹಸಿರು ಗಿಡದಲ್ಲಿ ಮೊಸರು ಚೆಲ್ಲಿದಂತೆ ಮಲ್ಲಿಗೆ ಕಂಗೊಳಿಸುವಂತೆ ತೋರುದು ಇನ್ನೊಂದು ತೆರ.

“ಭಂಡಿ ಹೋಗತಾದ | ಭಾಂಡಾರ ಚೆಲ್ಲತಾದ” ಎಂದೂ
“ಬಾಯಲ್ಲಿ ತಿಂದು ಬಗಲಲ್ಲಿ ಕಾರುತ್ತದೆ” ಎಂದೂ

ಬೀಸುವ ಕಲ್ಲಿನ ಸ್ವರೂಪವನ್ನು ವರ್ಣಿಸಿದವರೇ ದೀಪವನ್ನು “ಹಿಡಿದರೆ ಹಿಡಿಕೆಯ ತುಂಬ ಬಿಟ್ಟರೆ ಮನೆಯ ತುಂಬ “ ಎಂದು ಬಣ್ಣಿಸುತ್ತಾರೆ. “ಯಾದವಾಡದಲ್ಲಿ ಯಾತ ಹೊಡೆದರೆ, ಕಲಕೇರಿಯಲ್ಲಿ ಕಾಯಾಗುತ್ತವೆ”ಯೆಂದು ಕೈಯೊಳಗಿನ ಹಂಜಿಯಿಂದ ಕದರಿನ ಮೇಲೆ ನೂಲಿನ ಕುಕ್ಕಡಿಯೆಂದು ಭಾವಿಸುತ್ತಾರೆ. “ಆರು ಕಾಲು, ಬೆನ್ನಲ್ಲಿ ಬಾಲು” ಎಂದು ತಕ್ಕಡಿಯನ್ನು ವಿಚಿತ್ರಪ್ರಾಣಿಯೆಂದು ಬಗೆಯುತ್ತಾರೆ.

“ಅಂಗಡ್ಯಾಗ ಇಟ್ಟು ಮಾರುವದಿಲ್ಲ | ತಕ್ಕಡ್ಯಾಗ ಹಾಕಿ ತೂಗುವದಿಲ್ಲ |
ಅದಿಲ್ಲದೆ ಹಬ್ಬವಾಗುವದಿಲ್ಲ.

ಎಂಬ ಬೆಡಗಿನ ನುಡಿಯು ತಲೆ ತುರುಸಿಕೊಳ್ಳಹಚ್ಚುತ್ತದೆ. ಹಬ್ಬವೆಂದರೆ ಮೊದಲು ಅಂಗಡಿಗೆ ಓಡಬೇಕಾಗುತ್ತದೆ. ಆದರೆ ಅಂಗಡಿಯಲ್ಲಿ ಇರಲಾರದು. ತಕ್ಕಡಿಯಲ್ಲಿ ಹಾಕಿ ತೂಗಲಾರದು. ಆದರೇನು? ಅದು ಹಬ್ಬಕ್ಕೆ ಅವಶ್ಯವಾಗಿ ಬೇಕಾದ ವಸ್ತು. ಅದಾವುದು? ಆ ವಸ್ತು ಸೆಗಣಿಯೆಂದು ತಿಳಿದಾಗ ನಮ್ಮ ಅಚಾತುರ್ಯಕ್ಕೆ ನಾಚುತ್ತೇವೆ. ಸೆಗಣಿಯ ಹಿರಿಮೆಗೆ ಸೈಗುಡುತ್ತೇವೆ. ಸೆಗಣಿಯಿಂದ ಸಾರಿಸಿದಾಗಲೇ ಮನೆಗೆ ಹಬ್ಬದ ಕಳೆ ಬರುವುದೆಂದೂ ತಲೆದೂಗುತ್ತೇವೆ.

ಹಾಸಿದ ಹಗ್ಗದಲ್ಲಿ ಗೂಳಿ ಮಲಗಿದಂತೆ ಕುಂಬಳಕಾಯಿಯ ಬೆಡಗು, ಸಾಗುಗಿಡಗಳು ಸಪ್ಪಳಿಲ್ಲದೆ ಬಡಿಯುವ ಕಣ್ಣೆವೆಯ ಮಾಟ, ಅವ್ವನೆಂದರೆ ಕೊಡದೆ ಅಪ್ಪನೆಂದಾಗ ಕೂಡುವ ತುಟಿಗಳ ರೀತಿ, ಒಡಗತೆಯಲ್ಲಿ ಹಾಸುಹೊಕ್ಕಾಗಿರುತ್ತವೆ.

ಅಂತರದಲ್ಲಿ ಹಾರಾಡುವದು – ಪಕ್ಷಿ ಅಲ್ಲ.
ಕೋಡುಗಳುಂಟು – ಪಶುವಲ್ಲ.
ಬಾಲವುಂಟು – ಮಂಗವಲ್ಲ.

ಪಕ್ಷಿ-ಪಶು-ಮಂಗಗಳ ಲಕ್ಷಣವನ್ನು ಹೊತ್ತು ಪ್ರಾಣಿಯನ್ನು ಹುಡುಕಹೋದರೆ ಅದಕ್ಕೆ ಜೀವವೂ ಇರುವದಿಲ್ಲ. ನಿರ್ಜೀವವಾಗಿದ್ದರೂ ಸಚೇತನ ವಸ್ತು ಯಾವದು? ಮಕ್ಕಳಾಡುವ ಗಾಳಿಪಟವು ಒಡಗತೆಯ ಲೋಕದಲ್ಲಿ ವೈಚಿತ್ರ್ಯವನ್ನು ತೆಳೆದಿರುತ್ತದೆ.

ಮುಂಜಾನೆ ನಾಲ್ಕು ಕಾಲು | ಮಧ್ಯಾಹ್ನ ಎರಡು ಕಾಲು |
ಸಂಜೆಗೆ ಮೂರು ಕಾಲು | ಊರಿ ನಡೆಯುವ ಪ್ರಾಣಿ?

ಅದೇ ಲೋಕದ ಇನ್ನೊಂದು ವೈಚಿತ್ರ್ಯ. ಜೀವನ ನಿರೀಕ್ಷಣೆಯಲ್ಲಿ ಕಂಡ ಈ ವೈಚಿತ್ಯವೆಂದರೆ ಮನುಷ್ಯ. ಆತನ ಬಾಲ್ಯ, ಯೌವ್ವನ, ವೃದ್ಧಾಪ್ಯದ ಲಕ್ಷಣಗಳನ್ನು ಒಂದು ಮಾತಿನಲ್ಲಿ ಹೇಳಿ ಮುಗಿಸುವ ಠೌಳಿ ಒಡಗತೆಗಿರುತ್ತದೆ. ಅರ್ಥಯಿಸಿದರೆ ವೈರಾಗ್ಯದ ವಿಚಾರಕ್ಕೆ ತಂದು ನಿಲ್ಲಿಸುವ ಮಾತು ಆನಂದವನ್ನುಂಟು ಮಾಡಿ ಮರೆಯಾಗುವದು. ಆನಂದದ ಉಕ್ಕಿನಲ್ಲಿ ಬಾಲ್ಯದ ಅಸಹಾಯಕತೆಯು ಅಳಿಯುವದು; ಮುಪ್ಪಿನ ಮೋಡಿಯು ಮಾಯವಾಗುವದು.

ಹೀಗೆ ಒಡಗತೆಗಳು ಸೃಷ್ಟಿ ವಸ್ತುಗಳನ್ನು ಅಲೌಕಿಕವಾಗಿ ಕಾಣಹಚ್ಚುವವಲ್ಲದೆ, ಜೀವನವನ್ನು ಹದಬೆದೆಯಿಂದ ನಿರೀಕ್ಷಿಸಲು ಕಲಿಸುವವು. ಇಂಥ ಅಲೌಕಿಕ ಸಾಮರ್ಥ್ಯವುಳ್ಳ ಒಡಗತೆಗಳು ಬಳಕೆಯಲ್ಲಿ ಬರುವದು ತೀರ ಅವಶ್ಯವಾಗಿದೆ.