ಪ್ರಶ್ನೆ ೧: ಮುಂಜಾವಿನಿಂದ ಸಂಜೆಯವರೆಗೆ ಹೆಣ್ಣುಮಕ್ಕಳು ಹಾಡುವ ಸಂದರ್ಭಗಳು ಯಾವವು?

ಉತ್ತರ : ಬೆಳಗು ಮುಂಜಾನೆ ಬೀಸುವಾಗ, ಕೂಸುಗಳನ್ನು ಆಡಿಸುವಾಗ, ಭತ್ತ ಕುಟ್ಟುವಾಗ, ಗೌರಿಯನ್ನು ಪೂಜಿಸುವಾಗ, ಹತ್ತಿಯನ್ನು ಬಿಡಿಸುವಾಗ, ಉಂಡು ಮಲಗುವಾಗ ಅವರು ಹಾಡಿಯೇ ಹಾಡುತ್ತಾರೆ. “ಹಾಡಿಗೆ ಇತಿಯಿಲ್ಲ, ಹಾಡಿಗೆ ಮಿತಿಯಿಲ್ಲ. ಹಾಡಿಲ್ದ ಕ್ಷಣವಿಲ್ಲ, ಹಾಡೂನು ಬಾರ ಹಾಡೂನು ಬಾ” ಎಂದು ಹೆಣ್ಣು ಮಕ್ಕಳು ಹಾಡುವದಕ್ಕೆ ನಡುಗಟ್ಟಿನಿಂತಂತೆ ತೋರುತ್ತದೆ. ಕುಲ ದೇವರ ಮುಂದೆ ಪ್ರಾರ್ಥನೆ, ಮದುಮಕ್ಕಳ ಮುಂದೆ ವಿಧಾನಗೀತೆ, ಉಡಿತುಂಬುವ ಮುಂದೆ, ಕುಪ್ಪಸ ಮಾಡುವ ಮುಂದೆ, ಶೋಭನ ಗೀತೆ, ಬೆಳದಿಂಗಳಲ್ಲಿ ಕೋಲಾಟದ ಹಾಡು, ಹಾದಿ ನಡೆಯುವಾಗ ಕಥನವಾಡು ಇನ್ನೆಷ್ಟೋ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಹಾಡಬಲ್ಲರು. ಹೆಣ್ಣು ಮಕ್ಕಳಿಗೆ ಇಡಿಯ ಜೀವನವೇ ಹಾಡಿನ ಸಂದರ್ಭವಾಗಿದೆಯೆನ್ನಬಹುದಾಗಿದೆ.

ಪ್ರಶ್ನೆ ೨ : ಆ ಹಾಡುಗಳಲ್ಲಿ ಕಂಡುಬರುವ ಸಾಹಿತ್ಯ ಲಕ್ಷಣಗಳು ಎಂಥವು?

ಉತ್ತರ : ಜೀವನವು ಅರ್ಥಸೃಷ್ಟಿ, ಸಾಹಿತ್ಯವು ಶಬ್ದಸೃಷ್ಟಿ, ಜೀವನವೇ ಕಾವ್ಯವೆಂದೂ, ನಾಟಕವೆಂದೂ ಭಾವಿಸಿದವರಿಗೆ ಅದರ ಅರ್ಥವು ಸಾಹಿತ್ಯದಲ್ಲಿಯೇ ಕಂಡುಬರಬೇಕಲ್ಲವೇ? ಕಾಂತೆಯರ ಮಾತೇ ಕಾವ್ಯಮಾತೆಯಾಗಿರುವಾಗ, ತ್ರಿಪದಿಯೇ ಗಾಯತ್ರಿಯಾಗಿರುವಾಗ ದೇವನಿಃಶ್ವಸಿತ ವೇದಗಳಂತೆ ಸ್ತ್ರೀ ಹೃದಯ ನಿಃಶ್ವಸಿತವೇ ಕಾವ್ಯವಾಗಿರುವಾಗ, ಪ್ರಾಸಾದಿಕತೆಯೇ ಪ್ರಾಸಾನುಪ್ರಾಸವಾಗಿರುವಾಗ, ನಿರಲಂಕಾರವೇ ಅಲಂಕಾರವಾಗಿರುವಾಗ, ಕಟ್ಟುಳ್ಳ ಮೈ-ಹುಟ್ಟು ಸವಿಯುಳ್ಳ ನುಡಿ, ತಿಳಿಯಾದ ಬಗೆ ತಳೆದಿರುವಾಗ ಹೆಣ್ಣು ಮಕ್ಕಳ ಹಾಡುಗಳಲ್ಲಿ ಸಾಹಿತ್ಯ ಲಕ್ಷಣವನ್ನು ಕೇಳಬಹುದೇ? ಹೃದಯದ ನೂರು ಭಾವನೆಗಳನ್ನೆಲ್ಲ ಕನ್ನಡಿಸಿ, ಮನಸ್ಸನ್ನು ನೇರವಾಗಿ ಅರ್ಥಕ್ಕೊಯ್ದು, ದಿನಗಳೆಂತೆ ನಿತ್ಯನೂತನವಾಗಿ, ಹಳಸಿದ ಜೀವನಕ್ಕೆ ಒಸಗೆಯಾಗಿ, ಹೊಸ ಸಾಹಿತ್ಯಕ್ಕೆ ಸಂಜೀವನದಂತಿರುವ ಈ ಹಾಡುಗಳಲ್ಲಿ ಸಾಹಿತ್ಯದ ಸರ್ವ ಲಕ್ಷಣಗಳೂ ಹುದುಕೊಂಡಿವೆ.

ಅತ್ತಿಗೆಯ ಅರಸೇನ ತಾಯಿ ಕುಮಾರೇನ |
ಮಕ್ಕಳಿಗಿ ಮಾವ ನನಗಣ್ಣ | ಬಂದರ |
ನಿಚ್ಚ ದೀವಳಿಗಿ ಮನಿಯಾಗ ||

ತಣಗಣ್ಣನಾದವನು ಅತ್ತಿಗೆಗೆ ಅರಸು, ತಾಯಿಗೆ ಕುಮಾರ, ಮಕ್ಕಳಿಗೆ ಮಾವ ಆಗಿದದಾನೆ. ಅಂಥವನು ಬಂದರೆ ಯಾರಿಗೆ ವಿರಸವಾದೀತು? ಯಾವಾಗ ಬಂದರೂ ಎಲ್ಲರ ಮುಖಗಳೂ ಬೆಳಗಿ ಲಕಲಕಿಸುವವು. ಆಗ ಮನೆಯಲ್ಲಿ ದೀವಳಿಗಿ ಹಂದಂತಲ್ಲವೇ? ಒಳಗೂ ಹೊರಗೂ ದೀಪಾವಳಿ. ಅದರಂತೆ

ಮಗಳ ಮಾವಾ ಬಂದಾ ಸೊಸಿಯ ಅಪ್ಪ ಬಂದಾ
ಯಾರಿಟ್ಟು ಯಾರ ಕಳುಹಲೆ | ನನ್ನಣ್ಣ |
ಮಗಳಿಟ್ಟು ಸೊಸೆಯ ಕರೆದೊಯ್ಯೋ ||

ಮಗಳ ಮಾವ, ಸೊಸೆಯ ಅಪ್ಪ ಬೇರೆ ಬೇರೆಯಲ್ಲ; ಒಬ್ಬನೇ! ಆದರೆ ಅಣ್ಣನ ಮಗನಿಗೆ ಮಗಳನ್ನು ಕೊಟ್ಟು, ಅವನ ಮಗಳನ್ನು ತನ್ನ ಮಗನಿಗೆ ತೆಗೆದುಕೊಂಡು ತಂಗಿಯು ಇದಿರುಗುಪ್ಪಸ ಮಾಡಿದ್ದಾಳೆ. ಮಗಳು ತವರು ಮನೆಯೆಂದು ಸೊಸೆಯು ಅತ್ತಿಯ ಮನೆಯೆಂದು ತನ್ನಲ್ಲಿಯೇ ಇರುವಾಗ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಕಳಿಸುವದು ಒಳ್ಳೆಯದಲ್ಲವೇ? ಮಗಳಿಟ್ಟು ಸೊಸೆಯನ್ನು ಕರೆದೊಯ್ಯುವದಾದರೆ, ನನ್ನ ಮಗಳು ನನ್ನಲ್ಲಿ ಹಬ್ಬ ಮಾಡುವಳು. ನಿನ್ನ ಮಗಳು ನಿನ್ನಲ್ಲಿ ಹಬ್ಬ ಮಾಡುವಳು. ಇಲ್ಲಿ ಭಾವ-ರೀತಿ-ಮಾತುಗಳಲ್ಲಿ ಸೊಗಸು ಸೂರಗೊಳ್ಳುತ್ತಿರುವದರಿಂದ ಈ ಹಾಡು ಅತ್ಯುತ್ತಮ ಸಾಹಿತ್ಯದ ಲಕ್ಷಣಗಳನ್ನು ಒಳಗೊಂಡಿದೆಯೆಂದು ಹೇಳಬಹುದು.

ಪ್ರಶ್ನೆ ೩: ಹಳ್ಳಿಯ ಹೆಣ್ಣು ಮಕ್ಕಳ ಸಾಹಿತ್ಯದಲ್ಲಿ ಪ್ರತಿಬಿಂಬಿಸುವ ಸಾಹಿತ್ಯವಾದರೆ ಇನ್ನೇನೊ ಆದೀತು. ಸ್ತೋತ್ರಪದಗಳಲ್ಲಿ ಹೆಣ್ಕಕ್ಕಳು ದೇವತೆಗಳೊಂದಿಗೆ ತುಂಬ ಸಲಿಗೆಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆಂದು ತಿಳಿಯುವದು. ಗಂಧ-ಕಸ್ತೂರಿ ಪುನಗಗಳನ್ನು ಗೌರವ್ವನ ಕಂದನಿಗೆ ಧರಿಸಿದರೆ ಮತಿಯ ಪಾಲಿಸುವನೆಂದು ಬಗೆದಿದ್ದಾರೆ. ಗಂಗೆಯೊಳಗೆ ಸ್ನಾನ ಮಾಡಿ, ಶಿವನ ಶಿಖರ ಸುತ್ತಿಬಂದು ಹರದಿಯರು ಸಿದ್ಧರಾಮನಿಗೆ ಬೇಡಬೇಕೆಂದು ಅರಿತಿದ್ದಾರೆ.

ಇಂದು ನನ್ನಂಗಳ ಶ್ರೀಗಂಥ ನಾತಾವ
ಬಂದಿದಾನೇನ ಶ್ರೀಹರಿ | ನನ್ನ ಮನೆಗೆ |
ಗಂಧದ ಮಾಡುವ ಕಲಕೂತ ||

ಶ್ರೀಹರಿಯು ಸುಗಂಧವನ್ನು ಬೀರುತ್ತ ತಮ್ಮ ಅಂಗಳಕ್ಕೂ ಬಂದು ಹೋಗುವನೆಂಬ ನಂಬಿಕೆ ನಮ್ಮ ಹೆಣ್ಣು ಮಕ್ಕಳಲ್ಲಿದೆ. ದೇವ ಸಂಸಾರವೂ ತಮ್ಮ ಸಂಸಾರದಂತಿರುವದೆಂದು ಬಗೆದು ಬಿಡದೆ, ದೇವಸಂಸಾರದಂತೆ ತಮ್ಮ ಸಂಸಾರವೂ ಸಮೃದ್ಧಗೊಳ್ಳಲೆಂದು ಹಾರಯಿಸುವರು. ಸಂಸಾರದಲ್ಲಿ ಸರಸದೊಂದಿಗೆ ವಿರಸವೂ ಸ್ನೇಹದೊಂದಿಗೆ ವೈರವೂ ಕಾಣಿಸುವದು. “ಗಂಡಹೆಂಡಿರ ಜಗಳ ಗಂಧ ತೀಡಿದಂತೆ” ಒಂದೆಡೆಗೆ “ತಾಯಿ ಮಕ್ಕಳ ಜಗಳ ತಾಳ ಬಾರಿಸಿದಂತೆ” ಇನ್ನೊಂದೆಡೆಗೆ ಆಡಿನ ಮೊಲೆಯಂತೆ ಜೋಡಿಯಾಗಿರುವ ಅಕ್ಕ-ತಂಗಿಯರಲ್ಲಿ ಕದನ ಬೇಡವೆಂದು ದೂರವಿರುವುದು ಬೇರೊಂದೆಡೆಗೆ. “ವಾರಿ ರುಮ್ಮಾಲ ಸುತ್ತಿ ಓಣ್ಯಾಗ ನಿಣತಾನ | ಹೋರೆಯಿಲ್ಲೇನ | ಮನಿಯಾಗ ಚಂದರಾಮ” ಎನಿಸಿಕೊಳ್ಳುವ ಸಹಜ ರಸಿಕರೂ, “ಹಣ್ಣ ಕೊಳತೇವ ಹಣ್ಣಿನ ಬೆಲೆಯ ಹೇಳು ಜಾಣಿ” ಎನ್ನುವ ಸಹಜಾತ ರಸಿಕರೂ ಹಳ್ಳಿಯಲ್ಲಿ ಸಿಗುವಂತೆ ಹಳ್ಳಿಯ ಸಾಹಿತ್ಯದಲ್ಲಿಯೂ ಸಿಗುತ್ತಾರೆ. “ಪಣತೀ ಮಾರಿಯ ಹೆಣ್ಣೇ ನೀನು ಹಣತೀ ಎಲ್ಲಿಟ್ಟೆ” ಎಂದು ಕೇಳಿದರೆ, ಅರೀಗಿರೀತೆಂದು ಅರಿವೆ ಗಂಟಿನಲ್ಲಿ ರಿಸಿದ್ದೇನೆಂದು ಪಡಿನುಡಿಯುವ ಶ್ರೀಮತಿಯರೂ ಅಲ್ಲಲ್ಲಿ ಸಿಗುತ್ತಾರೆ. ಎತ್ತು ಎರೆಗೆ, ಕೋಣ ಕೆರೆಗೆ ಎಳೆಯುವ ದಾಂಪತ್ಯವು “ಗಂಡನಿದ್ದರಿಂಥವನಿರಬೇಕು | ಹೇಳಿದಾಂಗ ಕೇಳತಿರಬೇಕ” ಎನ್ನುವ ಒಗೆತನವೂ ಸಾಕಷ್ಟಿದೆ. ತಿಂದೋಡಿ ನಿನ ಗಂಡ ತಿಂದೇನು ಮಾಡಂದ” ಎಂಬ ಹಾಡಿನಲ್ಲಿಯ ತಿಂದೋಡಿ ಹೆಣ್ಣಿನಂತೆ ಒಳ್ಳೆಯ ಹೆಂಡತಿಯನ್ನು ಮನೆಯಲ್ಲಿ ಬಿಟ್ಟು, ದೇಶ ತಿರುಗುತ್ತ ಹೋಗುವ ವಾಲೀಕಾರನಂಥ ಗಂಡೂ ಸಿಗುವರು. ಇವೆಲ್ಲ ಅಕ್ಕಿಯೊಳಗೆ ಹೊರಟ ಹರಳುನೆಲ್ಲುಗಳಂತೆ. ಆದರೆ ಅಕ್ಕಿಯೇ ವಿಪುಲವಾಗಿದೆ. ಮಡದಿಯನ್ನು ಬಡಿದರೂ ಮನದಲ್ಲಿ ಮರಗುವ ಗಂಡನೂ, ಗಂಡನೆಂದರೆ ಹಣಚಿ ಬಟ್ಟಿನ ಮೇಲೆ ಹರಿದಾಡುವ ಕುಂಕುಮವೆಂದು ಭಾವಿಸಿದ ಹೆಂಡತಿಯೂ, ತಾಯಿಯ ಕಣ್ಣೆಂಜಲ ಕಾಡಿಗೆಯಿಂದ, ಬಾಯೆಂಜಲ ವೀಳ್ಯದಿಂದ ಬೆಳೆದ ಮಕ್ಕಳೂ ಮನೆಮನೆಗೆ ಸಿಕ್ಕುವರು. ವಾಲ್ಮೀಕಿಯ ಸೃಷ್ಟಿಯಲ್ಲಿ ಸೀತೆಗೆ ಎರಡು ವನವಾಸಗಳಾದರೂ, ಒಂದೇ ವನವಾಸದ ಅನುಭವ ಪೆದ ರಾಮಚಂದ್ರನ ಹೆಸರೇ ಕಾವ್ಯಕ್ಕೆ ನಿಂತು ರಾಮಾಯಣವೆನಿಸಿತು. ಆದರೆ ಸೀತೆಯ ದುಃಖಾನುಭವವನ್ನು ಸಹಾನುಭೂತಿಯಿಂದ ಕಂಡ ಗರತಿಯೂ “ಸೀತಾದೇವಿಯಷ್ಟು ಸಿರಿಯನುಂಡವರಿಲ್ಲ” ಎಂದಿಷ್ಟೇ ಹೇಳಬಿಡದೆ

ಅಡವಿ ಆರ್ಯಾಣದಾಗ ಹಡೆದಾಳ ಸೀತಾದೇವಿ
ತೊಡಿಯ ತೊಳಿಯಾಕ ನೀರಿಲ್ಲ | ಹನುಮಂತ
ಸೇತುಗಟ್ಯಾನ ಸಮುದಕರ ||

ಎನ್ನುವಲ್ಲಿ ಹಳ್ಳಿ ಹಳ್ಳಿಗೂ ಕಾಣಸಿಗುವ ಸೀತಾದೇವಿಯ ಚಿತ್ರವು ಅದೆಷ್ಟು ವಾಸ್ತವಿಕವಾಗಿದೆ!

ಪ್ರಶ್ನೆ ೪ : ಬರೆದಿಡದಿದ್ದರೂ ಈ ಹಾಡುಗಳು ಬದುಕಿಕೊಂಡು ಬಂದಿರಲು ಕಾರಣವೇನು?

ಉತ್ತರ : ಈ ಹಾಡುಗಳ ಪರಂಪರೆಯಂತೂ ಕೃಷ್ಣ ತಂಗಿ ಸುಭದ್ರೆಯಿಂದ ಬಂದುದಾಗಿದೆ. ಅಪೌರುಷೇಯವಾದ ವೇದಗಳು ಉಳಿದಿಕೊಂಡಿರುವಂತೆ ಈ ಹಾಡುಗಳು ಉಳಿದುಕೊಂಡಿವೆ. ಈ ಹಾಡುಗಳು ಉಳಿದುಕೊಂಡಿರುವದಕ್ಕೆ ಅಗಾಧವಾದ ಒಂದು ಕಾರಣವಿದೆ. ಅದು ಯಾವುದೆಂದರೆ-

ನಾರಾಯಣಾ ನಿನ್ನ ನಾಮದ ಬೀಜವ
ನಾನೆಲ್ಲಿ ಬಿತ್ತಿ ಬೆಳೆಯಲಿ | ನಿನ್ನ ನಾಮ |
ನಾಲೀಗಿ ಮೇಲೆ ಬೆಳೆದೇನೋ ||

ನಾರಾಯಣನ ನಾಮದ ಬೀಜವನ್ನು ನಾಲಿಗೆಯ ಮೇಲೆ ಬಿತ್ತಿ ಬೆಳೆದುಕೊಳ್ಳುಂತೆ, ಈ ಹಾಡುಗಳನ್ನು ಹೆಣ್ಣು ಮಕ್ಕಳು ತಮ್ಮ ನಾಲಿಗೆಯ ಮೇಲೆ ಬಿತ್ತಿಕೊಂಡು ಬೆಳೆಸಿದ್ದಾರೆ; ಉಳಿಸಿದ್ದಾರೆ. ಕಣ್ಣಿಗೆ ಕಾಣದಂತಿದ್ದರೂ ಕಿವಿಗೆ ಕೇಳಿಸುವಂತಿವೆ. ಒಂದೊಂದು ಹಾಡಿಗೂ ಒಬ್ಬೊಬ್ಬ ಕವಿಯಿತ್ರಿಯಿದ್ದಾಳೆ. ಋಷಿಯಂಶವುಳ್ಳ ಗರತಿ ಕವಿಯಿತ್ರಿಯ ಹೃದಯ ನಿಃಸ್ವಸಿತವಾದ ಹಾಡು ಹಾಡಿದರೆ ಹೃದಯವನ್ನೇ ಸೇರತಕ್ಕದ್ದು. ಹೃದಯವಾಸಿಗೆ ಹದುಳವಲ್ಲದೆ ಹಾನಿಯಿನ್ನೆಲ್ಲಿ? ಜೀವನವನ್ನೇ ಪ್ರತಿಬಿಂಬಿಸಿಕೊಂಡು, ಜೀವಜೀವಕ್ಕೂ ಪ್ರತಿಭೆಯನ್ನೇ ದಾನ ಮಾಡುವ ಈ ಸತ್ವವು ಜೀವನವೇ ಇಲ್ಲದಂತಾದಾಗ ಮಾತ್ರ ತಾನೂ ಇಲ್ಲದಾದೀತು. ಕೂಸು ಒಪ್ಪಿಸುವ ಹಾಡಿನಲ್ಲಿ ಬರುವ ಕೊಡುಗೂಸಿಗೆ ತಾಯಿ ತಂದೆಗಳು ತಳಮಳಿಸುವವದಾಗಲಿ, ಅಣ್ಣ-ತಮ್ಮಂದಿರ ಹೊಟ್ಟೆ ಹೊಯ್ದಾಡುವದಾಗಲಿ ಯಾವ ಕಾಲಕ್ಕೆ ಇಲ್ಲದಾದೀತು? ಅಂಥ ಹಾಡು ಬಂದೊದಗಿದಾಗಲೊಮ್ಮೆ ಈ ಹಾಡು ತಾನಾಗಿಯೇ ಬಾಯಿಗೆ ಬರುತ್ತದೆ.

ಸುಣ್ಣದ ಭಟ್ಯಾಗ ಥಣ್ಣೀರ ಹೊಯ್ದಾಂಗ | ಅಣ್ಣನ ಹೊಟ್ಟೆ ಹೋಯ್ದಾಡೆ ||
ಅಣ್ಣನ ಹೊಟ್ಟೆ ಹೊಯ್ದಾಡೆ ನನ್ನ ತಂಗಿ | ನನ್ನ ಮನಿಗಿಂದು ಎರವಾದೆ ||
ಸಣ್ಣ ತಮ್ಮಾಗಿದ್ರೆ ತಣ್ಣಗೆ ಇರುತ್ತಿದ್ದೆ | ಮಾನೇದ್ಹೊಲದಾಗ ಸರಿಪಾಲು |
ಮಾನೇದ್ಹೊಲದಾಗ ಸರಿಪಾಲು ತಕ್ಕೊಂಡು | ಚಿನ್ನಾ ನನ್ನ ಹಂತೀಲಿ ಇರುತ್ತಿದ್ದೆ ||

ಅದರಂತೆ-

ನಾ ಒಂದ ಬಿತ್ತೀದ | ನಾ ಒಂದ ಬೆಳದೀದ |
ನಾ ಹೋಗಿ ಒಂದು | ಹೊಡಿದಂಟು ತಿಂದರ |
ಬಡ ಬಡಗಿಲೆ ಹೊಡದ್ಯೊ | ನಮ್ಮ ಜೀವ ಹೋದಾವೊ ಕೈಲಾಸಕ ||

ಎಂಬ ಎತ್ತಿನ ಹಾಡು ಕಿವಿಮರೆ ಆಗುವದೆಂದು? ಎತ್ತಿನ ಜಾತಿಯೇ ಕಣ್ಮರೆಯಾದರೂ ಎತ್ತಿನ ಹಾಡು ಕಿವಿಯಲ್ಲಿ ಉಳಿಯತಕ್ಕದೇ ಈ ಹಾಡುಗಳಿಗೆ ಹೃದಯವೇ ಗೂಡು. ಹೃದಯದ ಗೂಡು ಸುರಕ್ಷಿತವೆಂದು ಪರಮಾತ್ಮನೇ ಬಂದು ಅಲ್ಲಿ ವಾಸಿಸುವಾಗ, ಅಲ್ಲಿ ಹಾಡು ಸುರಕ್ಷಿತವಾಗಿರಲಾರದೆ?

ಪ್ರಶ್ನೆ ೫ : ಹೆಣ್ಣು ಮಕ್ಕಳ ಹಾಡುಗಳು ಹೃದಯಸ್ಪರ್ಶಿಯಾಗಿರುವುದೇಕೆ?

ಉತ್ತರ : ಹೆಣ್ಣು ಮಕ್ಕಳ ಬುದ್ಧಿ ಮೊಳಕಾಲ ಕೆಳಗೆ ಎಂದು ಹೇಳುತ್ತಾರೆ. ಅದು ತಲೆಯಲ್ಲವಂತೂ ಇರುವುದಿಲ್ಲವೆಂದಂತಾಯಿತು. ಆಧುನಿಕ ಶಿಕ್ಷಣಾದಿಗಳಿಂದ ಅವರ ಬುದ್ಧಿಯು ಇನ್ನೂ ಹರಿತವಾಗದೆ ಉಳಿದದ್ದರಿಂದ ಅವರ ಭಾವನೆಯೇ ಚುರುಕಾಗಿ ಕೆಲಸ ಮಾಡುತ್ತದೆ; ಭಾವನೆ ಹೃದಯದ ಬದುಕು ಅದು ಹೃದಯದಿಂದ ಹೊರಬಿದ್ದರೂ ಇನ್ನೊಂದು ಹೃದಯವನ್ನೇ ಆಶ್ರಯಿಸತಕ್ಕದ್ದು. ಕಾಂತೆಯರ ಮಾತು ಅವರ ಭಾವನೆಯ ಬೆಳಸು. ಕಾವ್ಯವು ಭಾವನೆಯ ಬೆಳಸೇ. ಆದ್ದರಿಂದ ಅದು ಹೃದಯವನ್ನು ಅರಸುತ್ತಲೇ ಸಾಗುವದು. ಬೀಗರ ಕ್ಷುಲ್ಲಕ ವೃತ್ತಿಯನ್ನು ವಿಡಂಬಿಸುವಾಗ-

ಬೀಗೂತೊಳ್ಳೆವಳಂತ ಅಡಿಗೆಯ ಮನೆ ಕೊಟ್ಟೆ |
ಹೋಳಿಗಿ ಘಳಿಗಿ ಬಗಲಾಗ | ಸರಕ್ಕ ||
ಹೋಳಿಗಿ ಘಳಿಗಿ ಬಗಲಾಗ | ಅವರಣ್ಣ |
ನೀಡಲಿಕ್ಕಿಲ್ಲೆಂದು ಕಸಗೊಂಡ | ಸರಕ್ಕ ||

ಕೊಟ್ಟರೊಲ್ಲೇನ ಜೈನರಿಗೆ ಎಂದು ತನ್ನ ತಾಯಿಗೆ ಪ್ರತಿನುಡಿದ ಮಹಾದೇವಿಗೆ ಯಾರೊ ಕೇಳಿದರು-

ಶಾವೀಗಿನಾಗತಾವ | ಸೈದಾನನಾಗತಾವ |
ಇಂದೇನ ಅವರ ಮನಿಯಾಗ ಕೋಲೆನ್ನ |
ಇಂದ ಏನ ಅವರ ಮನಿಯಾಗ ಹಡೆದವ್ವ |
ಅವ್ವನೌವ್ವ ಸತ್ತ ದಿನಗಳ ಕೋಲೆನ್ನ ||

ಅವರ ಹಾಡುಗಳು ಹೃದಯಸ್ಪರ್ಶಿಯಾಗುವದಕ್ಕೆ ಅವರ ವ್ಯಕ್ತಿತ್ವವೇ ಕಾರಣ. ಆ ವ್ಯಕ್ತಿತ್ವವು ಎಂಥದೆಂದರೆ-

ಹಚ್ಚಿಕೊಂಡವ್ವಗ ಚೊಚ್ಚಿಲು ಮಗಳಾದ |
ಬಿಟ್ಟಾಡಿಕೊಳುವ ವೈರಿಯ | ಮನೆಮುಂದೆ |
ಬಿಚ್ಚುಗತ್ಯಾಗಿ ಹೊಳೆದೇನ ||

ಪ್ರಶ್ನೆ ೬: ಯಾವ ದೃಷ್ಟಿಯಿಂದ ಇವು ನೂತನವಾಗಿವೆ?

ಉತ್ತರ: ಇಂದಿನ ಮಗು ನಾಳೆ ತಂಗಿಗೋ ತಮ್ಮನಿಗೋ ಅಣ್ಣ. ನಾಡದು ಹೆಂಡತಿಗೆ ಗಂಡ, ಮಗುವಿಗೆ ತಂದೆ. ಮಗು ಅಣ್ಣ-ಗಂಡ-ತಂದೆಗಳನ್ನು ಕನ್ನಡಿಸುವಂತೆ ತಂಗಿ ಹೆಂಡತಿ-ತಾಯಿಂದಿರನ್ನು ಈ ಹಾಡು ಕನ್ನಡಿಸುತ್ತದೆ. ಮುಂದೆ ನಿಂತಂತೆ ಕನ್ನಡಿಯು ಪ್ರತಿಬಿಂಬಿಸುತ್ತದೆ. ಹಾಗೆಯೇ ಯಾವ ಸ್ಥಿತಿಯಲ್ಲಿ ಈ ಸಾಹಿತ್ಯವನ್ನೋದಿದರೂ ಹೃದಯದ ಹಸಿವೆ ಹಿಂಗುವದು ಎದೆಯ ನೋವು ಹಗುರಾಗುವದು. ಜೀವನವು ಭಾರವಾಗಿ ನೆಲವೆದ್ದು ಒದೆಯ ಬಂದಾಗ ಈ ಹಾಡುಗಳ ಬಳಿಗೆ ಬನ್ನಿರಿ. ಅದೇ ತಾಯಿ, ಅದೇ ಮೊಲೆ, ಅದೇ ಹಾಲು ಇದ್ದರೂ ಹಸಿವೆಗೊಮ್ಮೆ ಹೊಸ ಹಾಲು ಎನಿಸುವಂತೆ ತನ್ನ ಹೊಸತನದಿಂದ ಮುಗುಳುನಗೆ ಬೀರಿ, ಸಂತಸವಿಟ್ಟು ಮೈದಡವಿ ಸಾಂತ್ವನಗೊಳಿಸುವ ಅತ್ವವು ತಾಯಿಶಕ್ತಿಯ ಸ್ರೀ ಸಾಹಿತ್ಯದಲ್ಲಿ ಸೂಸುತ್ತದೆ.

*‘ಮಂದೇನು ಕೊಟ್ಟೀತ ಮನವೇನು ದಣಿದೀತ!’ ಎನ್ನುವ ಹಾಡು ದೇವರ ನೆರವಿನ ಹಂಬಲ ಬಿಟ್ಟು ಪರಮಾತ್ಮನ ಕೃಪೆಗೆ ಕೈಯೊಡ್ಡಿದರೆ ಮನವು ತಣಿಯುವದೆಂದು ಸಾರಿ ಹೇಳಿ, ನೂತನ ವಿಶ್ವಾಸ-ಧ್ಯೇಯಗಳನ್ನು ಹುಟ್ಟಿಸಲಾರದೇ?

ಹೋಗಂದರ ಹೋಗಳು ಹೊಸ್ತಿಲ ದಾಟಳು |
ಮಾರಿ ನೋಡಿ ನೋಡಿ ಅಳತಾಳ | ಕಂದಮ್ಮ |
ಹ್ಯಾಂಗತ್ತಿಮನೆಗೆ ಕಳುಹಲ್ಲೇ ||

ಈ ಹಾಡು ಹಳೆಯದು, ಹಾಡಿನೊಳಗಿನ ಪ್ರಸಂಗ ಅದಕ್ಕೂ ಹಳೆಯದು. ಆದರೇನ? ಇಂದು ಅತ್ತೆಯ ಮನೆಗೆ ಹೊರಟ ಮಗಳ ಮುಖದಲ್ಲಿ ಈ ಹಾಡು ಅದೇ ಬರೆದಿಟ್ಟಂತೆ ಕಾಣುತ್ತದೆ. ನಾಳೆ ಸಹ ಹಾಗೆ ಕಾಣುವದರಲ್ಲಿ ಸಂಶಯವಿಲ್ಲ.

*‘ಬಂಜಿ ಬಾಗಿಲ ಮುಂದೆ ಅಂಜೂರ ಗಿಡ ಹುಟ್ಟಿ’ ಈ ಹಳೆ ಹಾಡು ಹೊಸ ಗಾಯ ಮಾಡುವದಕ್ಕೆ ಹರಿತವಾದ ಅಲಗಿನಂತಿದೆ.

ಪ್ರಶ್ನೆ ೭: ಈ ಸಾಹಿತ್ಯದಲ್ಲಿ ನವಜೀವನದ ಬೀಜಗಳನ್ನು ಕಂಡಿದ್ದರೆ ಅವುಗಳನ್ನೆತ್ತಿ ತೋರಿಸುವಿರಾ?

ಉತ್ತರ: ಹಳೆಯ ಜೀವನವು ಹಳಸಿ, ಚೆಲ್ಲಿಕೊಡುವ ಪ್ರಸಂಗ ಬಂದಾಗ ನವಜೀವನದ ಬೀಜಗಳು ಬೇಕು. ಅನಿತ್ಯವಾದ ಜೀವನವೂ ಅಶಾಶ್ವತವಾದ ದೇಹವೂ ತಾವಾಗಿ ಕೈಬಿಡುವ ಮೊದಲು ನಾವೇ ಚೆಲ್ಲಿಕೊಡುವುದು ಬುದ್ಧಿವಂತಿಕೆಯೆನಿಸಿದಾಗ, ಬಾಳಿನಲ್ಲಿ ಅಡಿಗಡಿಗೂ ವಿರಸ ತೋರಿ ಬದುಕುವದಕ್ಕಿಂತ ಸಾಯುವದೇ ಲೇಸೆನಿಸಿದಾಗ ಜೀವನವು ಹಳಸಿತೆಂದು ತಿಳಿಯಬಹುದು. ನಿಜವಾಗಿ ಜೀವನವು ತಿಳುವಳಿಕೆಯಲ್ಲಿ ಹಳಸಬಲ್ಲದೇ ಹೊರತು ವಾಸ್ತವದಲ್ಲಿ ಅಲ್ಲವೆಂದು ಈ ಹಾಡುಗಳು ನಮಗೆ ಉಪದೇಶಿಸುತ್ತವೆ.

ಜಾಜಿ ಮಲ್ಲಿಗಿ ಜೂಜು ಮಲ್ಲಿಗಿ ಅರಳ ಮಲ್ಲಿಗಿ ಸಾವಂತಿಗ್ಹೂವ |
ನಿಮ್ಮ ಪೂಜಿಗಿ ಬಂದಾವೇಳಯ್ಯ | ಸಿದ್ಧರಾಮ |
ಬಾಜಿ ಬಾಜಿ ಬಾಜಿಯಂತರಿ ಬಾಳಿ ಬನದಾಗ ಹಲಗಿ ಕೊಂಬ |
ಭೋರಗೆಜ್ಜಿ ಗಿಲ್ ಅಂದಾವೇಳಯ್ಯ |ಸಿದ್ಧರಾಮ |

ಎಂದು ಸಿದ್ಧರಾಮನನ್ನು ಭಕ್ತಿ-ವಾತ್ಸಲ್ಯವು ನವುರಾಗಿ ಎಬ್ಬಿಸುವಂತೆ, ನಿರಾಶೆಯ ಹುದಿಲಲ್ಲಿ ಬಿದ್ದವರನ್ನು ಈ ಹಾಡು ಎಬ್ಬಿಸಿ ನವಜೀವನದ ದಾರಿ ಹಿಡಿಸಬಲ್ಲದು.

ಗಂಡುಳ್ಳ ಬಾಲೇರು ಮಳೆರಾಜ | ಅವರ ಭಿಕ್ಷಾಕ ಹೊರಟಾಗ ಮಳೆರಾಜ |
ಗಂಡುಳ್ಳ ಬಾಲೇರು ಭಕ್ಷಾಕ ಹೋದರು | ಅನ್ಯದ ದಿನ ಬಂದು ಮಳೆರಾಜ |
ಸ್ವಾತೀಯ ಮಳೆ ಬಂದು ಮಳೆರಾಜ | ಸುತ್ತ ದೇಶದ ಆಗ್ಯಾದ ಮಳೆರಾಜ |
ಹಳ್ಳಕೊಳ್ಳ ಹೆಣ ಹರಿದಾಡಿ ಹೋದವು | ಯಾವಾಗ ಬಂದೆಪ್ಪ ಮಳೆರಾಜ ||

ಇಂಥ ಮಹಾಗಂಡಾಂತರಕ್ಕೆ ಸಿಲುಕಿದರೂ ಜನಾಂಗವು ಬದುಕಿ ಉಳಿದು ಬಂದಿರುವಾಗ, ತಾತ್ಪೂರ್ತಿಕ ನಿರಾಶೆ ಹೆದರುವರೇ-ಎಂದು ಕೇಳಿ ಈ ಹಾಡು ಸ್ಫೂರ್ತಿಯನ್ನು ನೀಡುತ್ತದೆ.

‘ಬ್ಯಾಸಿಗೆ ದಿವಸಕ ಬೇವಿನ ಮರ ತಂಪ’ ಎಂಬ ಪದ್ಯದಲ್ಲಿ ಮನೆಯವರೆಲ್ಲ ಎದ್ದಲಗಾಟ ಕೊಟ್ಟರೂ ತವರುಮನೆಯ ತಂಪಾದ ತಾಯಿ ಸಂತಯಿಸಲಿಕ್ಕೆ ಇದ್ದೇ ಇದ್ದಾಳೆ. ಅದರಂತೆ “ಅಂಗಳಕೆ ಥಳಿ ಕೊಟ್ಟು, ರನ್ನ ಬಚ್ಚಲಕೆ ಮಣಿ ಹಾಕಿ, ತವರವರು ತಣ್ಣಗಿರುವರೆ” ಎಂದು ಕೇಳುವ ಅಕ್ಕ, “ಕೋಪ ವೇಕಣ್ಣಯ್ಯ ಕೊಳ್ಳೊ ಕಾಲಿಗೆ ನೀರ, ಬಾಯ ತಂಬುಲವ ಉಗಳಣ್ಣ” ಎಂದು ಆಲಪೆಯುವ ತಂಗಿ ಇರುವಾಗ ಮೈತುಂಬ ಇಟ್ಟಣಿಸಿದ ವ್ಯಾಧಿಗಳೆಲ್ಲ ಮಾಯ್ದು ಬಿಟ್ಟರೆ ನವ ಜೀವನ ತಲೆದೋರಲಾರದೇ? “ಕಟ್ಟಾಣಿ ಗುಂಡಿಗಿ ಸಿಟ್ಟು ಮಾಡಲಿ ಬೇಡ, ಬಿಟ್ಟು ಬಂದೀದ ಬಳಗೆಲ್ಲ | ಪತಿಪುರುಷ, ಕಟ್ಟ್ಯಾರ ನಿಮ್ಮ ಪದರಾಗ” ಎಂದು ಅಂಗಲಾಚುವ ಮಡದಿಯನ್ನು ಕಂಡಮೇಲೆ ಸಹ ಜೀವನದ ಜಂಜಡ ಉಳಿದೀತೆ? “ಸಣ್ಣವಳ ಮ್ಯಾಲ ಸವತ್ಯಾಕ? ಅಂಗಿಯ ಮ್ಯಾಲಂಗಿ ಛಂದೇನೋ ನನರಾಯ?” ಎಂದು ನಯವಾಗಿ ಕೇಳಿ ಕೊಂಡಾಗ ಕತ್ತಲೆಯ ಇರುಳು ಕಾಣದೇ?

ಅತ್ತರ ಅಳಲೆವ್ವ ಈ ಕೂಸು ನನಗಿರಲಿ |
ಕೆಟ್ಟರ ಕಡಲಿ ಮನೆಗೆಲಸ | ಕಂದನಂಥ |
ಮಕ್ಕಳಿರಲೆವ್ವ ಮನಿತುಂಬ ||

ಎನ್ನುವ ಹಾಡು ಕೇಳಿದ ಹೆಂಗುಸಿನಷ್ಟಾದರೂ ಗಡಸುತನ ಬರಲಿಕ್ಕಿಲ್ಲವೇ? ನವಜೀವನಕ್ಕೆ ಬೇಕಾದ ಬೀಜಗಳು ಈ ಸಾಹಿತ್ಯದಲ್ಲಿರುವಂತೆ, ನವಸಾಹಿತ್ಯಕ್ಕೆ ಬೇಕಾದ ಜೀವನವೂ ಇದರಲ್ಲಿದೆ.

ಪ್ರಶ್ನೆ ೮: ವಿಶ್ವಸಾಹಿತ್ಯದಲ್ಲಿ ಹೆಣ್ಣು ಮಕ್ಕಳ ಹಾಡುಗಳಿಗೆ ಸ್ಥಾನವಿದ್ದರೆ ಏತಕ್ಕಾಗಿ?

ಉತ್ತರ: ಯಾವ ದೇಶದವನೇ ಆಗಿರಲಿ, ಯಾವ ಭಾಷೆಯನ್ನೇ ಆಡಿತ್ತಿರಲಿ, ಯಾವ ಧರ್ಮವನ್ನೇ ಅನುಸರಿಸಲಿ, ಯಾವ ಮತವನ್ನೇ ಆಶ್ರಯಿಸಲಿ, ಅವನು, ಪುಟ್ಟ. ನಾಡಿನ ಚಿಕ್ಕ ಹಳ್ಳಿಯ ಮುರುಕು ಗುಡಿಸಲಿನ ಬಡ ಹೆಂಗಸು ಹಾಡಿದ ಈ ಹಾಡು ಕೇಳಿ, ಹೃದಯ ತುಳುಕಿ ಆನಂದವನ್ನು ಸೂಸಾಡಿದರೆ ಅದೇ ವಿಶ್ವಸಾಹಿತ್ಯೆವೆನಿಸೀತು. ತವರು ಮನರಗೆ ಹೋಗಿ ಬಂದ ಪಾರ್ವತಿಗೆ ಶಿವನು ಕೇಳಿದನಂತೆ- “ತವರುಮನೆಗೆ ಹೋಗಿದ್ದೆ, ನಿನಗೆ ಏನೇನು ಕೊಟ್ಟರು?” ಅದಕ್ಕೆ ಉತ್ತರವಾಗಿ ಆಕೆ – “ಬಡವರು ಏನು ಕೊಟ್ಟಾರು? ಹತ್ತು ಖಂಡಗ ಅಕ್ಕಿ-ಗೋದಿ, ನೂರಾರು ಆಕಳು, ಹತ್ತೆಂಟು ಹೇರು ಮುತ್ತು-ರತ್ನ… ಇತ್ಯಾದಿ ಕೊಟ್ಟರು?” ಎಂದು ಮರುಪ್ರಶ್ನೆ ಮಾಡಿದರೆ ಪಾರ್ವತಿ ಏನು ನುಡಿದಳು ಗೊತ್ತೆ? “ಇಷ್ಟಲ್ಲ ನನಗಿತ್ತು, ನನ್ನನ್ನೇ ನಿಮಗೆ ಕೊಟ್ಟರು” ಈ ಕಥೆಯನ್ನೊಳಗೊಂಡ ಹಾಡು ವಿಶ್ವಸಾಹಿತ್ಯದಲ್ಲಿ ಸ್ಥಳ ದೊರಕಿಸಲಾಗದೇ? ಇಂಥ ಹಾಡುಗಳ ಹಗೆಯೇ ಕನ್ನಾಡಿನಲ್ಲಿದೆ.

ಬಡತನ ನನಗಿರಲಿ ಭಾಲ ಮಕ್ಕಳಿರಲಿ |
ಮ್ಯಾಗ ಗುರುವಿನ ದಯವಿರಲಿ | ನನ ಗುರುವೆ |
ಬಡತನದ ಚಿಣತಿ ನಿನಗಿರಲಿ ||

ಸಂತಾನ ನಿಯಂತ್ರಣದ ಈ ಯುಗದಲ್ಲಿ ಸಹ ಯೋಗ್ಯ ಮಾರ್ಗದರ್ಶನ ಮಾಡಿ ಬಡತನವನ್ನು ನಿವಾರಿಸುವದಕ್ಕೆ ಸೂಕ್ತ ಸಲಹೆ ನೀಡಬಲ್ಲ ಈ ಮಂತ್ರವು ವಿಶ್ವಸಾಹಿತ್ಯಕ್ಕೆ ಭೂಷಣಪ್ರದವಾಗಿದೆ. ಬಹುಸಂತಾನ, ಬಡತನಗಳಿಗೆ ಬೇಸರಗೊಂಡಂತೆ ಪರಿಸರದ ದುಂದುಗಕ್ಕೆ ದಿಕ್ಕುಗಾಣದೆ ಕಂಗೆಡುವ ಜನಕ್ಕೆ ಕೆಳಗಿನ ಪದ್ಯವು ಸಂಜೀವಿನಿ ಆಗಬಲ್ಲದು.

ಭಾಗಾದಿ ಬಲಕಿರಿಲಿ ವೈರಿ ತಾ ಎಡಕಿರಲಿ
ಛಾಡಿ ನಿನ ಮನೆಯು ಇದಿರಿರಲಿ | ಬಲಭೀಮ |
ದೇವ ನನ ಮ್ಯಾಲ ದಯವಿರಲಿ ||

ಗಂಡಾಂತರಗಳು ಬರಬಾರದೆಂದು ಹಾರಯಿಸದೆ, ಬಲಭೀಮದೇವರ ದಯದಿಂದ ಆ ಗಂಡಾಂತರಗಳೊಡನೆ ಹೋರಾಡಿ ಗೆಲ್ಲಬೇಕೆನ್ನುವುದೇ ನಮ್ಮ ಹೆಣ್ಣುಮಕ್ಕಳಲ್ಲಿರುವ ಪೌರುಷವಾಗಿದೆ. ಪುರುಷರಿಗೂ ಅಸಾಧ್ಯವಾದ ಪೌರುಷವನ್ನು ಸ್ತ್ರೀ ಗೀತೆಯು ನೀಡಬಲ್ಲದೆನ್ನುವುದು ಹೆಮ್ಮೆಯ ಮಾತು. ಹೆಣ್ಣು ಮಕ್ಕಳ ಹಾಡುಗಳು ನಿತ್ಯ ಜೀವನದಲ್ಲಿ ಹಾಡುವದಕ್ಕಲ್ಲದೆ, ನಿತ್ಯ ಜೀವನವನ್ನು ನೀಡುವದಕ್ಕೂ ಸಮರ್ಥವಾಗಿರುತ್ತವೆ.