ಗರತಿಯ ಹಾಡು’ ನಮ್ಮ ಸ್ತ್ರೀ ಜೀವನದ ಒಳಗನ್ನಡಿ. ಅದರಲ್ಲಿ ಮಮತೆಯ ಮಾಧುರ್ಯವು ಮೈವೆತ್ತಿದೆ; ಪ್ರೇಮದ ಸತ್ವವು ಅಳವಟ್ಟಿದೆ. ತ್ಯಾಗ ಬುದ್ಧಿಯು ತುಳುಕುತ್ತಿದೆ. ಕೌಟುಂಬಿಕ ಬಾಳಿನ ರಸವು ಪರಿಪಾಕಗೊಂಡಿದೆ. ಅದು ಜೀವನದ ಜೀವಾಳವಾಗಿದೆ. ಸುಖದ ಸೆಲೆಯಾಗಿದೆ. ಅದು ನಿಮ್ಮಿಂದ ದೂರವಾದಂತೆ ಬಾಳು ಕಿಚ್ಚಿನ ಕುಂಡವಾಗುತ್ತಲೇ ಇದೆ. ಯಾಕಂದರೆ-

“ಜಗತ್ತಿನೊಳಗಿನ ದುಃಖವು ನಾಶವಾಗಬೇಕೆಂದೂ, ಮನುಷ್ಯ ಸುಖಿಯಾಗಬೇಕೆಂದೂ ನಮಗನಿಸುತ್ತಿದ್ದರೆ, ನಮ್ಮ ಕೌಟುಂಬಿಕ ಸಂಬಂಧವನ್ನು ಚೆನ್ನಾಗಿ ಸರಿಪಡಿಸಿಕೊಳ್ಳತಕ್ಕದ್ದು. ತ್ಯಾಗವೇ ಅದಕ್ಕೆ ಏಕಮಾತ್ರವಾದ ಉಪಾಯ ತ್ಯಾಗವೆಂದರೆ ಅರಣ್ಯವಾಸವಲ್ಲ; ಸಮಾಜದಿಂದ ದೂರವಿರುವದಲ್ಲ; ಭಾರತೀಯರು ತ್ಯಾಗವನ್ನು ಮನೆಯಲ್ಲಿಯೇ ಆಚರಿಸಬೇಕಾಗಿದೆ. ನಾವು ಎಲ್ಲಿದ್ದರೂ ಹೇಗಿದ್ದರೂ ತ್ಯಾಗವು ನಮ್ಮನ್ನು ಉಚ್ಛಸ್ಥಿತಿಯಲ್ಲಿರಿಸುತ್ತದೆ; ನಮ್ಮ ಶಕ್ತಿಯನ್ನು ಬೆಳೆಸುತ್ತದೆ; ನಮ್ಮ ಎಲ್ಲ ದುಃಖ ಚಿಂತಗಳನ್ನು ನಿವಾರಿಸಿ ನಮ್ಮಲ್ಲಿ ಸುಖವನ್ನೂ ನಿರ್ಭಯವನ್ನೂ ತುಂದುಬಿಡುತ್ತದೆ.”

ಗರತಿ ತ್ಯಾಗದ ಪುತ್ಥಳಿ. ತನ್ನವರೆಂದರೆ ಆಕೆಗೆ ಮಮತೆಯ ಚಿನ್ನ. ಪತಿಯ ಅರ್ಧಾಂಗಿಯಾಗಿ ಕೂಡುವಳು. ಮಕ್ಕಳಿಗೆ ರಕ್ತ ರಸಗಳನ್ನು ದಾನವಾಗಿ ಕೊಡುವಳು. ಹುಟ್ಟಿದ ಮನೆಗೆ ಎರವಾಗಿ, ಕೊಟ್ಟ ಮನೆಗೆ ಹೆಸರಾಗುವಳು. “ತಾವರೆಯ ಗಿಡಹುಟ್ಟಿ ದೇವರಿಗೆ ನೆರಳಾದೆ” ಹಾಗೆ ಆಕೆ, ಆಡಿಬಂದ ಕಂದನ ಅಂಗಾಲು ತೊಳೆಯುವಳು. ತೆಂಗಿನ ನೀರಿನಿಂದ ಮಗುವಿನ ಬಂಗಾರ ಮಾರಿಯನ್ನು ತೊಳೆಯಬಲ್ಲಳು. ತವರವರು ತನ್ನನ್ನು ಸರಮುತ್ತು ಮಾಡಿ ಸಲಹಿದರೂ ಅತ್ತೆಯ ಮನೆಯಲ್ಲಿ ಅರವತ್ತು ಗಂಗಾಳುಗಳನ್ನು ಬೆಳಗಲಿಕ್ಕೆ ಬೇಸರಿಯಳು. ಭಾವಯ್ಯ ಮುನಿದರೆ ಬಲಗಾಲು ಹಿಡಿಯಲಿಕ್ಕೂ, ಭಾವಯ್ಯನ ಮಡದಿ ನೆಗೆಣ್ಣಿ ಮುನಿದರೆ ಬಾರಕ್ಕನೆಂದು ಕರೆಯಲಿಕ್ಕೂ ಸಿದ್ಧಳಾಗುವಳು. ಮಾರಾಯರು ಬೈದರು ಕಣ್ಣೀರು ಕರೆಯದವಳು, ಮಾರಾಯರ ತಮ್ಮ ಮೈದುನ ಬೈದರೆ ಮಾಡಿಲ್ಲದ ಮಳೆ ಸುರಿದಂತೆ ಅಳುವವಳು. ಅತ್ತಗೆಯೆಂದರೆ ಆಕೆಯ ಪಾಲಿಗೆ ಹೆತ್ತಾಯಿ. ಬೆಣ್ಣೆಯಲ್ಲಿ ಮುಳ್ಳು ಮುರಿದಂತೆ ಮಾತಾಡಿದರೂ ನೆಗೆಣ್ಣಿಯ ಮಾತು ಕ್ಷಮ್ಯವೇ. ಹೊಟ್ಟೆಯ ಕೂಸು ತೊಡೆಯ ಮೇಲೆ ಮಲಗಿದರೂ ಬೀಸುವ ಕಾರ್ಯ ನಡೆಸುವ ಬಂಟಳು ಶ್ರಮದಲ್ಲಿಯೂ ಹಿಗ್ಗು ಸೂಸುವಳು. ಆಸರಿಕೆ ಅಳೆದಿಟ್ಟವಳು, ಬೇಸರಿಕೆ ಬಳಿದಿಟ್ಟವಳು, ಹಾಡುತ್ತಲೇ ದುಡಿಯುವವಳು. ಆಕೆಯು ತ್ಯಾಗಕ್ಕೆ ಇದಕ್ಕಿಂತಲೂ ಹೆಚ್ಚಿನ ಉದಾಹರಣೆಗಳು ಇನ್ನೇನು ಬೇಕು?

ಆಕೆ ಪ್ರೇಮದ ಕಣಿ. ಕೂಲಿ ಮಾಡಿದರೂ ಕೋರಿ ಹೊತ್ತರೂ ಗರತಿಗೆ ಆಕೆಯ ಪತಿಯು ಸರದಾರನೇ, ಅರಸನೇ, ಮಾರಾಯರೇ. ಓರಿಗೆಯ ಪತಿಪುರುಷನು ಹಣಚಿಬಟ್ಟಿನ ಮೇಲೆ ಹರಿದಾಡುವ ಕುಂಕುಮವಿದ್ದ ಹಾಗೆ; ಅವನಿಂದ ಆಕೆ ತವರುಮನೆ ಮರೆಯುವಳು. ಆತನು ಸರದೊಳಗಿರುವ ಗುಳದಾಳಿಯಂತೆ ಸರ್ವ ಬಳಗದಲ್ಲಿ ಶ್ರೇಷ್ಠನು; ಅವನಿಂದ ಸರ್ವ ಬಳಗವನ್ನು ಮರೆಯುವಳು. ಆತ ನನಗೆ ಹಚ್ಚಡದ ಪದರೊಳಗಿನ ಅಚ್ಚ ಮಲ್ಲಿಗೆ ಹೂವಿದ್ದಂತೆ. ಪತಿಯ ರೂಪ ಕಮಳದ ಹೂ; ಆತನ ಸಹವಾಸ ಮಲ್ಲಿಗೆಯ ಮಾಯೆ. ಬೆಂದಿರುಗಿ ಸಾಗಿದ ರಾಯರ ಕಾಲ ಹಿಮ್ಮಡ ಕಾಣಿಸಿದರೂ ಅದು ಕಮಲವೇ; ಚಂದರನಿಗಿಂತ ಬಲು ಚೆಲುವಾಗಿರುವದು. ಅರಸರ ದಯದಿಂದ ದೊರಕೊಂಡ ಅರಿಸಿಣ. ಕುಂಕಮ, ಮಲ್ಲಿಗೆಯ ನೆನೆದಂತೆ ಇವೇ ಆಕೆಯ ಸಕಲೈಶ್ವರ್ಯ. ಪತಿಯು ಇನ್ನೊಬ್ಬಳನ್ನು ಲಗ್ನವಾಗುವ ಸಂದರ್ಭ ಕಾಣಿಸಿಕೊಂಡಾಗ, “ಮಕ್ಕಳಾಗಲಿಲ್ಲವೆಂದು ಬೋರೊಂದು ಲಗ್ನವೇ? ನಾನು ಚಲುವೆಯಲ್ಲವೆಂದು ಇನ್ನೊಬ್ಬಳೊಡನೆ ವಿವಾಹವೇ?” ಎಂದು ಶಂಕಿತಳಾಗಿ ಪತಿದೇವನಲ್ಲಿ ಹೇಳಿಕೊಳ್ಳುವ ಮಾತು ಹೊಟ್ಟೆಯೊಳಗಿನ ಹರಳು ಕರಗುವಂಥದು! ಹಾಗೆ ಮಾತನಾಡುವದಕ್ಕೆ ಹಿನ್ನೆಲೆ ಯಾವುದೆಂದರೆ ಅಲ್ಲಿ ಹೃದಯದ ಮಾತು ಹೃದಯಕ್ಕೆ ಅರ್ಥವಾಗುವದು!

ರಾಯ ಬರತಾರಂತ ರಾತ್ರಿಲೆ ನೀರಿಟ್ಟ
ರನ್ನ ಬಚ್ಚಲಕ ಮಣಿ ಹಾಕಿ | ಕೇಳೇನ |
ಸಣ್ಣವಳ ಮ್ಯಾಲ ಸವತ್ಯಾಕ ||

ಅಂಗಿಯ ಮ್ಯಾಳಂಗಿ ಛಂದೇನೋ ನನರಾಯ
ರಂಬಿ ಮ್ಯಾಲರಂಬಿ ಪ್ರತಿರಂಬಿ | ಬಂದರ |
ಛಂದೇನೋ ರಾಯ ಮನಿಯಾಗ ||

ಎಂಬ ಹಾಡುಗಳಲ್ಲಿ ಪುನರ್ವಿವಾಹಕ್ಕೆ ಇರಬಹುದಾದ ಎರಡು ಕಾರಣಗಳಿಗೂ ಸಮಾಧಾನ ಹೇಳುವಳು. ಇಷ್ಟಾಗಿಯೂ ಬೋರೊಬ್ಬ ಸ್ತ್ರೀಯಳ ಅವಶ್ಯಕತೆಯಿದ್ದರೆ ತನ್ನ ಒಪ್ಪಿಗೆ ಇರುವದನ್ನು ಸೂಚಿಸುವಳು.

ಗಂಡ ಪಂಡಿತರಾಯ ರಂಡೀಯ ಮಾಡಿದರ
ಭಂಡ ಮಾಡುವರ ಮಗಳಲ್ಲ | ಕೊರಳಾನ |
ಗುಂಡು ಬೇಡಿದರ ಕೊಡುವೇನ ||

ಸತಿಯ ಔದಾರ್ಯವನ್ನು ದುರುಪಯೋಗಪಡಿಸಿಕೊಂಡ ಪತಿಯು ಅಡ್ಡ ಹಾದಿ ಹಿಡಿದುದನ್ನು ಯಾರಾದರೂ ಹಿತಚಿಂತಕರು ಆಕೆಯ ಕಿವಿಗೆ ಸುದ್ದಿ ತಗಲಿಸುವರು. ಆಗ ಆ ಬಾಲೆ ಸೈಗೆಡಲಾರಳು.

ಚಿಂತಾಕು ಇಟಕೊಂಡು ಚಿಪ್ಪಾಟೆ ಬಳೆವಾಕೆ
ಚಿಂತಿಲ್ಲವೇನು ನಿನಗಿಷ್ಟು | ನಿಮ್ಮ ರಾಯ |
ಅಲ್ಲೊಬ್ಬಳ ಕೂಡ ನಗತಾನೆ ||

ಎಂಬ ಮಾತಿಗೆ ಮರುನುಡಿಯುವದೇನೆಂದರೆ –

ನಕ್ಕಾರ ನಗಲೆವ್ವ ನಗೆಮುಖದ ಕ್ಯಾದೀಗಿ
ನಾ ಮುಚ್ಚಿ ಮುಡಿದ ಪರಿಮಳ | ದಾ ಹೂವ |
ಅವಳೊಂದು ಬಾರಿ ಮುಡಿಯಲಿ ||

ಅತಿಶಯದ ಸಹನೆಯು ಒಮ್ಮೊಮ್ಮೆ ಹೇಡಿತನಕ್ಕಿಳಿಯಬಲ್ಲದು, ಹೇಸಿತನಕ್ಕೆಳಸಬಲ್ಲದು. ಆದರೆ ಗರತಿ ಹೊತ್ತು ನೋಡಿ ಸಹನೆ ಮೀರಿದ ಚಂಡಿಯೂ ಆಗಿ ನಿಲ್ಲುವಳು. ಆಗ ಆಕೆಗೆ ಯಾರು ಈಡು?

ಪರಿಮಳದರಸರು ಪರನಾರಿಗ್ಹೋದರ
ಮನಿ ಮಡದಿ ಬಾಯಿ ಬಿಡಬ್ಯಾಡ | ತಾವ್ತಮ್ಮ |
ಮನ ಹೇಸಿ ಮನಿಗೆ ಬರತಾರ ||

ಎಂದು ಸಂತವಿಸಿಕೊಳ್ಳುವ ಹೆಣ್ಣೇ – ಹಿಂದುಗಡೆಯಲ್ಲಿ

ಹೆರವರ್ಹೆಣ್ಣಿಗಾಗಿ ಹೊರಗ ಮಲಗುವ ಜಾಣ
ಗಿಡದಮ್ಯಾಲೆರಡು ಗಿಣಿ ಕೂತು | ನುಡಿದಾವ |
ಎರವೆನ್ನೋ ರಾಯ ನಿನ ಜೀವ ||

ಎಂದು ಕಿಡಿ ಕಾರುವ ಕಿಂಕಾಳಿಯಾಗಿ ನಿಲ್ಲುವಳು.

ಗರತಿ ಹಚ್ಚಿಕೊಂಡವರಿಗೆ ಚೊಚ್ಚಿಲ ಮಗಳಾಗುವಳಾದರೂ ಬಿಟ್ಟಾಡಿಕೊಳ್ಳುವ ವೈರಿಯ ಮನೆಮುಂದೆ ಬಿಚ್ಚುಗತ್ತಿಯಾಗಿ ಹೊಳೆಯುವಳೆಂಬುದನ್ನು ಲಕ್ಷಿಸತಕ್ಕ ಸಂಗತಿಯಾಗಿದೆ. ಹೀಗೆ ತವರಿಗೂ, ಅತ್ತೆಯಮನೆಗೂ ಕೂಡಿಯೇ ಕೀರ್ತಿ ತರುವ ಕುಲಾಂಗನೆ. ಅಲ್ಲದವರು ಆಡಿಕೊಂಡರೆ ಹೊಯ್ದ ಹೋಳಿಗೆಯಾಗಿ ನಿಲ್ಲುವ ವೀರಾಂಗನೆ. ಜಗತ್ತೇ ಪ್ರತಿಕೂಲವಾಗಿದ್ದರೂ ತನ್ನ ಸತ್ವ ತೊರೆಯಳು; ತತ್ವ ಮರೆಯಳು.

ಅರಾದಡವ್ಯಾಗ ಯಾರಾಣಿ ಕೊಡಲೆವ್ವ
ಸೂರ್ಯಾ ನಿನ್ನಾಣಿ ಶಿವನಾಣಿ | ಕೊಟ್ಟೇನ |
ಅರಣ್ಯ ಗೆದ್ದು ಬರುವೇನ ||

ಎಂಬುದೇ ಆಕೆಯ ಹೂಣಿಕೆ; ಅದೇ ರಭಸವೇ ಜೀವನಸಂಗ್ರಾಮದಲ್ಲಿ ಹೋರಾಡುವುದಕ್ಕೆ ಆಕೆಗೆ ಬಲವನ್ನು ನೀಡುವದು. ಅಂಥ ಗರತಿಯರ ಸಂತಾನವೇ ರಾಜ್ಯ ಕಟ್ಟಿ ಆಳಿತು; ಜ್ಞಾನಸಿದ್ಧಿಯನ್ನು ಪಡೆಯಿತು; ಅಷ್ಟೈಶ್ಚರ್ಯಗಳನ್ನು ಪ್ರಪಂಚಕ್ಕೆ ನೀಡಿತು. ಆ ಕಥೆಗೆ ಕಾರಣಳಾದ ಗರತಿಯ ಅಂತರಂಗದ ಚಿತ್ರವೇ ‘‘ಗರತಿಯ ಹಾಡಿ”ನಲ್ಲೆಲ್ಲ ಚಿತ್ತಿತವಾಗಿದೆ. ಹಾಡು ಸಹ ಹುಡಿ ಕೂಡಿ ಹೋಗುತ್ತಿರುವಾಗ ಆಕೆಯ ಅಂಥ ಬಾಳು ನೋಡುವುದಕ್ಕೆ ಸಾಧ್ಯವೆಲ್ಲಿ? ಮುಂಚಿತವಾಗಿ ಇಂದು ಆ ಹಾಡು ಪಡೆಯಬೇಕಾಗಿದೆ, ಆ ಪಾಡು ಹಡೆಯಬೇಕಾಗಿದೆ. ಹಾಡು ಅಳಿದಿದ್ದರಿಂದಲೇ ಬಾಳು ಕಾಣೆಯಾಗಿದೆ. ಗರತಿಯ ಬಾಳೇ ಹುಳದ ಬಾಯಿಗೀಡಾಗಿರುವಾಗ ಆಕೆಯ ಸಂತಾನಕ್ಕೆ ಉಜ್ಜಳವೆಲ್ಲಿ? ಮನೆ ಅಗ್ನಿಕುಂಡ, ಬಾಳು ಬೀದಿಯ ಹುಡಿ ಆಗಿ ನಿಂತಿರುವಾಗ ನಾಡಿನ ಪುನರ್ಜಿವನಕ್ಕೂ, ಕೌಟುಂಬಿಕ ಸ್ವಾಸ್ಥ್ಯಕ್ಕೂ ಗರತಿಯ ಹಾಡಿನ ಪಾರಾಯಣ ನಡೆಯಬೇಕಾದುದು ಅತ್ಯವಶ್ಯ.

“ಹೆಂಗಸಿನ ಬುದ್ಧಿ ಮೊಳಕಾಲ ಕೆಳಗೆ” ಎಂದು ಬುದ್ಧಿವಂತ ಗಂಡಸು ಹೀಗಳೆಯುವದುಂಟು. ಅಹುದು. ಬುದ್ಧಿ ಅಷ್ಟು ಕೆಳಗಿರುವದರಿಂದಲೇ ಹೆಂಗಸಿನ ಹೃದಯವು ಅಷ್ಟು ಮಾಸದೆ ಉಳಿದಿದೆ. ಗಂಡಸಿನ ಬುದ್ಧಿ ಅವನ ಹೃದಯವನ್ನೂ ಮುಸುಕಿ ತಲೆಯವರೆಗೇರಿ ನಿಂತಿದೆ. ತಲೆಗೂ ಮೇಲಕ್ಕೆ ನೆಗೆದಿದೆ. ಆದ್ದರಿಂದಲೇ ಆತನ ಮಾತುಗಳು ಹೃದಯದಿಂದ ಹೊರಡದೆ ಗಂಟಲಿನಿಂದ ಹೊರಡುತ್ತವೆ. ಅಂತೆಯೇ ಅವು ಒಂದು ಕಿವಿಯಲ್ಲಿ ಸೇರಿ, ಇನ್ನೊಂದು ಕಿವಿಯಿಂದ ಹೊರಬಿದ್ದು ಹೋಗುತ್ತವೆ. ಹೃದಯದ ಮಾತು ಗಂಟಲಿನವರೆಗೇರಿ, ನಾಲಿಗೆಯಲ್ಲಿ ಜಾರಿ ಹೊರನುಸುಳುತ್ತವೆ. ಹಾಗೆ ನುಸುಳಿದ ಮಾತು ಕೇಳುವವನ ಕಿವಿಯಿಂದ ಗಂಟಲಿಗಿಳಿದು ಹೃದಯವನ್ನು ತಲುಪುತ್ತದೆ. ಅಂತೆಯೇ ಅವುಗಳಲ್ಲಿ ಕಾಂತತೆಯಿರುತ್ತದೆ; ಕಾಂತೆಯರ ಮಾತು ಕಾಂತಿಯುತವಾಗಿರುವುದರಿಂದ ಕಾವ್ಯದ ಮಾತು ಎನ್ನಿಸುತ್ತದೆ. ಕಾಂತೆಯೆಂದರೆ ಹೆಂಡತಿ ಮಾತ್ರವಲ್ಲ; ಅಕ್ಕ-ತಂಗಿ, ತಾಯಿ-ಮಗಳು ಮೊದಲಾದ ರೂಪಗಳಲ್ಲಿರುವ ಗರತಿ.

ಗರತಿಯೇ ಗೃಹಿಣಿ ಎನಿಸುತ್ತಾಳೆ. ಗೃಹಿಣಿಗೆ ಗೃಹವೇ ಕ್ಷೇತ್ರ; ತನ್ನ ಕ್ಷೇತ್ರವನ್ನು ಪರಿಶುದ್ಧವಾಗಿರಿಸುವದೂ, ವಾತಾವರಣವನ್ನು ಪವಿತ್ರವಾಗಿರಿಸುವುದೂ ಗೃಹಿಣಿಯ ಆಡಳಿತೆಗೆ ಸೇರಿದ್ದು. “ನೂರು ಜುಟ್ಟಗಳು ಒಂದೆಡೆಯಲ್ಲಿ ಧಾರಾಳವಾಗಿ ಇರಬಲ್ಲವು; ಆದರೆ ಮೂರು ಮುಡಿಗಳು ಒಟ್ಟಿಗೆ ಇರಲಾರವು” ಎನ್ನುವ ಮಾತಿನಲ್ಲಿ ಸತ್ಯಾಂಶವು ಸಾಕಷ್ಟಿದೆ. ಗಂಡಸರು ನಿತ್ಯದ ಉದ್ಯೋಗಕ್ಕಾಗಿ ಹೊರಗೆ ಹೋಗಿ ವೇಳೆ ಕಳೆದು ವಿಶ್ರಾಂತಿಗಾಗಿ ನವೋಲ್ಲಾಸವ ಪಡೆಯುವದಕ್ಕಾಗಿ ಮನೆಗೆ ಬರುವರು. ಅವರು ಬುದ್ಧಿವಂತರಾಗಿರುವದರಿಂದ ಹೊರಗಿನ ಸುದ್ಧಿ, ಓದಿದ ವಿಷಯ ಮಾತನಾಡಲು ಅವರಲ್ಲಿ ವಸ್ತುವಿರುತ್ತದೆ. ಆದರೆ ಹಗಲು ಹನ್ನೆರಡು ತಾಸು, ಹೆಣ್ಣು ಮಕ್ಕಳು ಒಟ್ಟಿಗಿರುವುದರಿಂದಲೂ, ಅವರಿಗೆ ಮಾತಾಡಲು ಬೇರೊಂದು ವಿಷಯ ಗೊತ್ತಿರದ ಕಾರಣದಿಂದಲೂ ಪರಸ್ಪರರ ಕುಂದು ಕೊರತೆಗಳನ್ನು ಹಿಗ್ಗಿಸಿ ಹೇಳುವುದಾಗಲೀ, ಸಣ್ಣ ಮಾತನ್ನು ಬೆಳೆಸಿ ಕತೆಮಾಡಿ ಹೇಳುವದನ್ನಾಗಲಿ ಮಾಡುವುದು ಅವರಿಗೆ ಸಹಜವಾಗಿರುತ್ತದೆ. ನಿಂತ ನೀರು ಮಲೆಯುತ್ತದೆ, ಉರಳದ ಕಲ್ಲಿಗೆ ಹಾವಸೆ ತಗಲುತ್ತದೆ. ಅದರಂತೆ ಹೆಣ್ಣುಮಕ್ಕಳ ಮನಸ್ಸು ಸರಿಕರ ಆಗಿಬಾರದ ಮಾತು, ನಡೆ, ಘಟನೆ ಇವುಗಳನ್ನು ಕೇಳಿ ಕಂಡು ಸಹಿಸಿ ಹೊಟ್ಟೆಯಲ್ಲಿ ಇರಿಸುತ್ತ ಹೋಗುವುದರಿಂದ ಜೀವನವು ಬೇಸರವಾಗುತ್ತದೆ. ಅದರಿಂದ ಸೊಸೆ ತವರುಮನೆಯನ್ನು ನೆನೆಸುತ್ತಾಳೆ. ಅತ್ತೆ ಮಗಳ ಮನೆಯನ್ನೋ, ತನ್ನ ಅಕ್ಕ-ತಂಗಿಯರ ಮನೆಯನ್ನೋ ಹಾರೈಸುತ್ತಾಳೆ. ಸೊಸೆಯಾಗಲಿ, ಅತ್ತೆಯಾಗಲಿ ಹಾಗೆ ಬೇರೆಡೆಗೆ ಹೋಗಿ ಬಂದರೆ ವಾತಾವರಣವು ತಿಳಿಯಾಗುತ್ತದೆ. ಇಲ್ಲದಿದ್ದರೆ ಹೊಟ್ಟೆಯೊಳಗೆ ನುಂಗಿಕೊಂಡ ವಿಷಮ ವಿಷಯದಿಂದ ತಲೆ ತಿರುಗತೊಡಗುತ್ತದೆ; ವಿಚಾರ ಹದಗೆಡುತ್ತದೆ; ಮಾತಿಗೆ ಮಾತು ಬೆಳೆದು ಕದನ ಕಾಣಿಸಿಕೊಳ್ಳುತ್ತದೆ. ಗುಡುಗು ಗದ್ದರಣೆ ಮೊಳಗುತ್ತವೆ; ಅಡಿಗೆ ಮನೆಯಲ್ಲಿ ಕಣ್ಣೀರಿನ ಮಳೆ ಸುರಿಯುತ್ತದೆ. ಮನೆತನದವರು ನುಂಗಿಕೊಂಡ ಮಾತುಗಳನ್ನೆಲ್ಲ ಕಕ್ಕಬೇಕಾಗುತ್ತದೆ; ಹೊರಗಿನಿಂದ ಬಂದ ಗಂಡಸು ಸಿಡಿಲು ಚಲ್ಲುತ್ತಾನೆ. ಹಾಡಿಹಾಡಿಕೊಂಡು ಅತ್ತು ಎದೆಯನ್ನು ಹಗರು ಮಾಡಿಕೊಂಡು, ಉಪವಾಸ ಮಲಗಿ, ಹೊಟ್ಟೆ ಹಗುರು ಮಾಡಿಕೊಂಡು, ಮೈತುಂಬ ಏಟು ತಿಂದು ಮೈ ಹಗುರು ಮಾಡಿಕೊಳ್ಳುವವರೆಗೆ ಚಿಕಿತ್ಸೆ ನಡೆಯುವದು. ಅಷ್ಟಾದ ಮನಸ್ಸು ತಿಳಿಯಾಗಿ; ಹೃದಯವು ಬಿಳಿಯಾಗಿ ಬಾಳಿನಲ್ಲಿ ಹೊಸ ಹುರುಪು ಕಾಣಿಸಿಕೊಂಡು ಇನ್ನೊಂದು ವಿನೂತನ ಪ್ರಕರಣವು ಆರಂಭವಾಗುತ್ತದೆ. ಇದೊಂದು ನೈಸರ್ಗಿಕ ಚಿಕಿತ್ಸೆಯೇ ಸರಿ. ಇದಕ್ಕೊಂದು ಸುಲಭವೂ ಸುಖಕಾರಕವೂ ಇದೆ. ಆ ಉಪಾಯವೆಂದರೆ “ಗರತಿಯ ಹಾಡಿ”ನ ಪಠನವೇ ಸರಿ.

ಬೆಳಗು ಮುಂಜಾವು ಬೇಸರಳಿಯುವ ಹೊತ್ತು; ಸೃಷ್ಟಿಯೆಲ್ಲ ಉಲ್ಲಾಸದಲ್ಲಿ ಹಾಡಿ, ಕುಣಿದು ಹಿಗ್ಗುವ ಹೊತ್ತು. ಇದು ಹಿನ್ನೆಲೆಯಾಯಿತು. ಬೀಸುವಕಲ್ಲಿನ ಮಂದ್ರ ಷಡ್ಜದ ಸ್ವರವು ಮನವನ್ನು ಏಕಗ್ರಗೊಳಿಸಿ, ಚಿತ್ತಕ್ಕೆ ಸಮಾಧಾನವನ್ನು ತಂದುಕೊಡಬಲ್ಲದು. ಹೊಟ್ಟೆಯಲ್ಲಿ ನುಂಗಿಕೊಂಡ ಬೇಸರ-ಬಳಲಿಕೆಗಳನ್ನಾಗಲಿ, ನಲಿವು ಆಮೋದನೆಗಳನ್ನಾಗಲಿ ಕಕ್ಕಿ ಎದೆ ಹಗುರು ಮಾಡಿಕೊಳ್ಳುವದಕ್ಕಿಂತ, ಎದೆಯ ಭಾರವನ್ನು ಹಾಡಿ ಹಾಡಿ ಹಿಗ್ಗಿನಲ್ಲಿ ಓಲಾಡಿ ಹಗುರುಗೊಳಿಸುವುದರಿಂದ ಕದನಗಳ ಅವಶ್ಯಕತೆ ತಪ್ಪುವದಲ್ಲದೆ, ಹಿಗ್ಗು ಹೃದಯದಲ್ಲಿ ನೆಲಸಿ ನಿಲ್ಲುವುದು. ಹೃದಯದ ಹಿಗ್ಗು ಪರಮ ಮಂಗಲಕರ; ಕಲ್ಯಾಣಪರದ. ಈ ಪ್ರಯೋಜನಕ್ಕಾದರೂ ‘ಗರತಿಯ ಹಾಡು’ ನಿತ್ಯ ನಿತ್ಯವೂ ಕೇಳಸಿಗಬೇಕಾಗಿದೆ; ಹಾಡಿ ನಲಿಯಬೇಕಾಗಿದೆ. ಗೃಹಿಣಿಗೆ ನಲಿವುಂಟಾದರೆ ಹಿಗ್ಗಿನ ಬೀಡು; ಗೃಹಸ್ಥನು ತಣಿಯುವ ತಾಣ, ಅದರಿಂದ ಮನೆತನದಲ್ಲಿ ಮಮತೆ ಮೈದೋರಿ ಮನೆಯು ಶಾಂತಿಯ ನಿಲಯವಾಗುತ್ತದೆ; ಜೀವನವೇ ಸುಖದ ಆಲಯವಾಗುತ್ತದೆ.

ಮನೆಯನ್ನು ಶಾಂತಿಯ ನಿಲಯ ಮಾಡಿಕೊಂಡ ಜೀವನವನ್ನು ಸುಖದ ಆಲಯ ಮಾಡಿಕೊಂಡ ಗೃಹಿಣಿಯ ಕಾಂತಿಯುತವಾದ ಮಾತೇ ಕಾವ್ಯಮಾತೆಯಾದ ಗರತಿಯ ಹಾಡಾಗಿ ಮುಗಿಲವರೆಗೆ ತೆರೆತೆರೆಯಾಗಿ ತೂರಿ ನಿಂತಿದೆ. ಗರತಿಯ ಬಾಳಿನ ಪ್ರತಿಬಿಂಬವಾಗಿ ಗರತಿಯ ಹಾಡು ಅಂದು ಕಾಣಿಸಿಕೊಂಡರೆ, ಇಂದು ಗರತಿಯ ಹಾಡಿನ ಪ್ರತಿಭೆಯಲ್ಲಿ ಗರತಿಯ ಬಾಳು ಪಡಿಮೂಡಬೇಕಾಗಿದೆ. ಹೆಂಡಿರು ಮಕ್ಕಳಲ್ಲಿ ಮಮತೆ ಮೈದೋರಿ, ಪ್ರೇಮವು ಪರಿಪಾಕವಾಗದಿದ್ದರೆ, ನಾಡ ಬಾಂಧವರಲ್ಲಾಗಲಿ, ಮಾನವ ಕುಲಕೋಟಿಯಲ್ಲಾಗಲಿ, ಪ್ರೇಮವು ಕಾಣಿಸಿಕೊಳ್ಳಬಲ್ಲದೇ? ಬೀಸುವಕಲ್ಲಿನ ಬಳಿಯೇ ತವರುಮನೆಯಾದರೆ, ಬೀಸುವಕಲ್ಲಿನ ಪದಗಳೇ ದುಃಖ ಹೊರಬೀಳಿಸುವ ಉಪಾಯವಾದರೆ, ಬೀಸುವಕಲ್ಲಿನ ಗರ್ಗರ ಸಪ್ಪಳವೇ ಏಕಾಂತವಾದರೆ ಗರತಿಯು ಸುಖ ಸಮಾಧಾನಗಳಿಂದಲೂ ಹಿಗ್ಗು ಹರುಪುಗಳಿಂದಲೂ ಮನೆತನದ ಭಾರವನ್ನೆಳೆಯುವದಕ್ಕೆ ಸಮರ್ಥಳಾಗುತ್ತಾಳೆ. ಆಗ ಆಕೆ ಹಾಡುವ ಲಾಲಿಯು ಕಳೆಗೊಳ್ಳುತ್ತದೆ. ಬಡತನದ ಕಾರಣದಿಂದ ಹಿಟ್ಟಿಗೆ ಕೊರತೆಯಾದರೂ, ಅಕ್ಕರೆಯ ಸುರಿಮಳೆಯಲ್ಲಿ ಲಾಲಿಯು ಹಸುಳೆಗೆ ಅರ್ಥವಾಗಿ ಅದು ಸಮಾಧಾನ ತಳೆಯುತ್ತದೆ; ಆಗ ಗಂಡ ಹೆಂಡರು ಜಗಳಾಡಿದರೆ ಗಂಧ ಹೊರಡುತ್ತದೆ. ತಾಯಿ-ಮಕ್ಕಳಲ್ಲಿ ನಡೆಯುವ ವಾಗ್ವಾವಾದವು ತಾಳ ಬಾರಿಸಿದಂತಾಗುತ್ತದೆ.

ಕಟ್ಟಾಣಿ ಗುಂಡೀಗಿ ಸಿಟ್ಟು ಮಾಡಲಿಬ್ಯಾಡ
ಬಿಟ್ಟೂ ಬಂದೀದ ಬಳಗೆಲ್ಲ | ಪತಿಪುರುಷ |
ಕಟ್ಟಾರ ತಮ್ಮ ಪದರಾಗ ||

ಎಂಬ ಮಾತಿನ ಅರ್ಥವು ಪತಿಗಷ್ಟೇ ಆಗುತ್ತದೆಂದಲ್ಲ, ಮನೆತನದವರಿಗೆಲ್ಲ ಮನವರಿಕೆ ಆಗುತ್ತದೆ. ಪರಸ್ಪರರಲ್ಲಿ ಕೃತಜ್ಞತೆ ತಲೆದೋರುತ್ತದೆ. “ಕೃತಜ್ಞತೆಯೇ ಮನುಷ್ಯನ ಹಿರಿಮೆಯನ್ನು ಅಳೆಯುವದಕ್ಕೆ ಅಳತೆಗೋಲು” ಆಗಿರುವುದರಿಂದ ಮನೆಯವರ ಮತ್ತು ಮನೆತನದ ಮಟ್ಟ ಮುತ್ತರವಾಗುವುದರಲ್ಲಿ ಸಂಶಯವಿಲ್ಲ.

ಮನಸ್ಸಿಗೆ ನೆಮ್ಮದಿ ಇಲ್ಲವೆಂತಲೇ ಸಂತಾನವೃದ್ಧಿಯು ಅತಿಶಯವಾಗಿರುವದೆಂದು ಬಲ್ಲವರು ಹೇಳುತ್ತಾರೆ; ಮಕ್ಕಳೆಂದರೆ ನೊಣದ ಪಾಯಸವೆನ್ನುವಷ್ಟು ಹೇಸಿಕೆ ಹಿಡಿದಿದೆ. ಅನ್ನದ ಪ್ರಶ್ನೆಗಿಂತ ಈಗ ಸಂಯಮದ ಪ್ರಶ್ನೆಯೇ ಅಧಿಕವಾಗಿದೆ. ಅಂಥ ಸಂಯಮಕ್ಕೆ ಮನಸ್ಸಿನ ನೆಮ್ಮದಿ ಉಪಾಯವಾಗಬೇಕಾಗಿದೆ. ಮನೆಯಲ್ಲಿ ಹಿಗ್ಗು ನೆಲೆಯೂರಬೇಕಾಗಿದೆ. ಮನೆತನದಲ್ಲಿ ಶಾಂತಿ ಬೇರು ಬಿಡಬೇಕಾಗಿದೆ. ಹಾಗೆ ಆದಾಗಲೇ ನಾವು ತೊಟ್ಟಿಲದಾಗೊಂದು ತೊಳೆದ ಮುತ್ತು ಕಾಣಬಲ್ಲೆವು. ಅದು ಅತ್ತರೊಂದು ರುಚಿ, ನಕ್ಕರೊಂದು ರುಚಿ ಆಗುವದು ಆವಾಗಲೇ. “ಅಮರಾವತಿಯೆಂಬ ಎಳೆದೋಟದೊಳಗಿನ ಅರಗಿಳಿಯ ತಂದು ಕೊಡುವೆನು “ಅಳದಿರೋ ಅಣ್ಣಯ್ಯ” ಎಂದು ರಂಬಿಸುವ ಮಾತುಗಳನ್ನು ಆಗ ಮಾತ್ರ ಕೇಳಬಲ್ಲೆವು. “ಕೂಸೇ ನೀದಾರ ಮಗ”ನೆಂದು ದೇಶದಿಂದೆರಡು ಗಿಳಿ ಬಂದು ಕೇಳುವಂಥಹ ಮಗುವನ್ನು ಪಡೆಯುವದು ಆಗ ಮಾತ್ರ ಶಕ್ಯ. ಮಕ್ಕಳು ಹೊಟ್ಟೆ ಕಟ್ಟಿಕೊಂಡು ಬಂದ ಹುಳುಗಳಾಗದೆ, ಸಕ್ಕರಿಯ ಸವಿಗಾರ, ವೀಳ್ಯೆದ ರುಚಿಗಾರ, ವೀರಭದ್ರನ ಅವತಾರ ಆಗುವದಕ್ಕಾಗಲೀ, ಆಕಳ ಹಿಂದೆ ಕರುಬಂದಂತೆ, ಗಾಳಿದೇವರ ಕೂಡ ಗೂಳಿದೇವರು- ಮಾರಾಯರ ಹಿಂದೆ ಮಗ ಬಂದ ಬರುವದಕ್ಕಾಗಲಿ, ಗರತಿಯ ತಲೆಯೊಳಗಿನ ದುಗುಡು, ಹೃದಯದೊಳಗಿನ ಸೊಗಡು ಬಯಲಾಗಬೇಕಾಗಿದೆ. ಕೂಸು ಇದ್ದ ಮನೆಗೆ ಬೀಸಣಿಕೆ ಏಕೆ ಎನ್ನುತ್ತ, ಕಸ್ತೂರೆಂತಾ ಬಾಲ ಕಸದಾಗ ಆಡಿದರ ಕಸಿವಿಸಿ ಪಡುವ, ಹನ್ನೆರಡು ಬಟ್ಟಲು ಹಾಲು ಬೇಡಿದರೂ ಕುಡಿಯಕೊಡುವ ಸಂದರ್ಭ ಬರುವದು ಆಗಲೇ ಸಾಧ್ಯ. ಮನೆತನದಲ್ಲಿ ಬಡತನವು ಕಂಗೆಡಿಸದು. ಪ್ರೇಮ ಸಂಪತ್ತಿನಲ್ಲಿ ಬಡತನವು ಏತರ ಕುಂದು?

ಮುರುಕು ತೊಟ್ಟಿಲಿಗೊಂದು ಹರಕು ಚಾಪಿಯ ಹಾಸಿ
ಅರಚು ಪಾಪsನ ಮಲಗೀಸಿ | ಅವರಕ್ಕ |
ಕಲಕೇತ ಹಾಡಿ ಹಿಗ್ಯಾಳ ||

ಕಲೆಯುತ್ತ ಹಾಡಿ ಹಿಗ್ಗುವದಕ್ಕೆ ಮುರುಕು ತೊಟ್ಟಿಲು ತಡೆಯಾಗದು; ಹರಕು ಚಾಪೆ ಅಡ್ಡೈಸದು. ಪಾಪನ ಅರಚು ಸಹ ಹಾಡಿನ ಹಿಗ್ಗಿನಲ್ಲಿ ಕೊಚ್ಚಿ ಹೋಗಿ, ನಿದ್ರೆಯಲ್ಲಿ ತಣಿಯಿತು. ಲಾಲಿ ಬೇಸರ ಕಸಿವಿಸಿಗಳನ್ನು ಹೋಗಲಾಡಿಸಬಲ್ಲದು. ಲಾಲಿಯಿದ್ದರೆ ಕಂದಯ್ಯನು ತಾಯ ಹಂಬಲವನ್ನೂ ಮರೆಯುವನು. ಲಾಲಿ ತಾಯಿಯ ಎದೆಯೊಳಗಿನ ಹಿಗ್ಗಿನ ಬುಗ್ಗೆ.

ಲಾಲೀಯ ಹಾಡಿದರ ಲಾಲೀಸಿ ಕೇಳ್ಯಾನ
ತಾಯ ಹಂಬಲ ಮರೆತಾನ | ಕಂದಯ್ಯಾ |
ತೋಳ ಬೇಡ್ಯಾನ ತಲೆಗಿಂಬ ||

ವ್ಯಕ್ತಿ ಸಂಬಂಧಗಳಲ್ಲಿ ಎರಡು ಬಗೆ. ಪ್ರೀತಿಯವರೊಡನೆ ಬರುವ ಸ್ನೇಹ ಸಂಬಂಧ; ಸೇರದವರೊಡನೆ ಬರುವ ವೈರಸಂಬಂಧ. ಇವೆರಡರ ಹೊರತು ಇನ್ನೊಂದು ಸಂಬಂಧವೇ ವ್ಯಕ್ತಿಗೆ ಬರಲಾರದು. ವಾತ್ಸಲ್ಯ ಭಕ್ತಿಯಿರುವಂತೆ, ವೈರಭಕ್ತಿಯಿಂದಲೂ ಸಾಧಕನಿಗೆ ಸಿದ್ಧಿಯುಂಟಾಗುವದೆಂದು ಕಥೆಗಳಲ್ಲಿ ಕೇಳುತ್ತೇವೆ. ಸ್ನೇಹವಾಗಲಿ ಸಂಬಂಧದ ಎರಡು ಮಗ್ಗುಲಗಳೇ ಸರಿ. ವೈರಿ ಸಂಬಂಧವು ಕಸುಗಾಯಿಯಿದ್ದಂತೆ. ಸ್ನೇಹ ಸಂಬಂಧವು ಹಂಗಾಯಿಯಿದ್ದಂತೆ ಹುಳಿ ಬಿರುಸುಗಳು ಹಸುಗಾಯಿಯ ಲಕ್ಷಣಗಳಾದರೆ, ಸಿಹಿ ಮೃದುತ್ವಗಳು ಹಂಗಾಯಿಯ ಲಕ್ಷಣ. ಕಸುಗಾಯಿಯೇ ಮಾರ್ಪಟ್ಟು ಹಂಗಾಯಿಯಾಗಬೇಕಾಗಿದೆ. ವೈರ ಸಂಬಂಧವೇ ಪಾಡಾಗಿ ಸ್ನೇಹಸಂಬಂಧವಾಗಬೇಕಾಗಿದೆ. ಒಂದು ವಿಪಾಕ, ಇನ್ನೊಂದು ಪರಿಪಾಕ. ಜೀವನದ ಅದ್ಭುತ ರಸಾಯನದಲ್ಲಿ ವಿಪಾಕವೇ ಪರಿಪಾಕಗೊಳ್ಳುತ್ತದೆ. ಜೀವನವು ಕತ್ತಲೆಯಿಂದ ಬೆಳಕಿಗೆ ಸಾಗುವಂತೆ ಅದು ವಿಪಾಕದಿಂದ ಪರಿಪಾಕಕ್ಕೆ ಸಾಗಿದೆ. ಜೀವನದಲ್ಲಿ ಅಡಿಗಡಿಗೆ ಬರುವ ಬಿಸಿಲು ನೆರಳುಗಳಿಂದ, ತೂಗಾಟ ತೂರಾಟಗಳಿಂದ ಮುದ್ದು ಮೂದಲಿಕೆಗಳಿಂದ ಕಸುಗಾಯಿ ಪಾಡುಗೊಳ್ಳುತ್ತ ಸಾಗುವದು. ಹಾಗೆ ಪಾಡುಗೊಳ್ಳುವ ಜೀವಿಯ ಭಾವಗೀತೆಯೇ ಗರತಿಯ ಹಾಡಾಗಿದೆ.

ಆರಂಭದಲ್ಲಿಯೂ ಮುಗಿತಾಯದಲ್ಲಿಯೂ ಸುಖವನ್ನೆರೆಯುವ ‘ಗರತಿಯ ಹಾಡು, ಅಂತರಾತ್ಮನ ನೆಲೆ ಎನಿಸುವ ಹೃದಯದ ಹೊನಲಾಗಿದೆ.’ ಅಂತೆಯೇ ಅದಕ್ಕೆ ಆನಂದದ ಕಳೆ ಇದೆ; ಅದರಲ್ಲಿ ಹಿಗ್ಗಿನ ಬೆಳೆಯಿದೆ; ತೀರದ ರಸವಿದೆ; ಕುಂದದ ತಿಳಿಯಿದೆ. ಗರತಿಯ ಹಾಡುಗಳನ್ನು ನಮ್ಮ ಹೆಣ್ಣು ಮಕ್ಕಳು ಹಾಡುವದೆಂದರೆ, ಕಾಮನಬಿಲ್ಲು ಕೋಗಿಲೆಯ ದನಿಯಲ್ಲಿ ಕೂಡಿಸಿ ಜೇನು ಹರಿಯಿಸಿದಂತೆ, ನೋಡಿದರೆ ಚಲುವು; ಕೇಳಿದರೆ ಸೊಂಪು. ಸವಿದರೆ ಇನಿದು. ದೇಶದ ಪುನರುದ್ಧಾರದ ಹಲವು ಹೆಸರುಗಳೊಡನೆ ಗರತಿಯ ಹಾಡಿನ ನವಜನ್ಮವನ್ನು ಕಂಡೆವಾದರೆ ನಾವು ಧನ್ಯರೇ ಸರಿ. “ಭಾರತದ ಆತ್ಮವೇ ಜಾಗೃತಗೊಂಡಿದೆ” ಎಂದು ಶ್ರೀ ಅರವಿಂದರು ಹೇಳುವುದನ್ನು ಆಕೆಯ ಅಂಗೋಪಾಂಗಗಳೆಲ್ಲ ಚೇತರಿಸಿ ಯೋಗ್ಯ ದಿಸೆಯಲ್ಲಿ ಪರಿಪುಷ್ಠಿ ಹೊಂದಿಬಿಡುವದೆಂದು ಪ್ರತ್ಯೇಕವಾಗಿ ಹೇಳುವ ಕಾರಣವೇ ಇಲ್ಲ;

ಗರತಿಯು ತನ್ನ ತಿಳಿಯಾದ ಬಾಳನ್ನೇ ಹಾಲಾಗಿ ಸುರಿದಂತೆ, ಹಾಡಾಗಿ ಉಸುರಿ ನಾಡತುಂಬ ಹರಿಯಿಸಿದ್ದಾಳೆ. ‘ಗರತಿಯ ಹಾಡು’ ತಾಯಿ ಕಟ್ಟಿದ ಬುತ್ತಿಯಂತಿದೆ. ಆ ಬುತ್ತಿಯ ಸವಿಯನ್ನು ಗರತಿಯೇ ಹೇಳಬೇಕು.

ತಾಯಿ ಕಟ್ಟಿದ ಬುತ್ತಿ ತರತರದ ಯಾಲಕ್ಕಿ
ಜರತರದ ಜಾಣಿ ಹಡೆದವ್ವ | ನಿನ ಬುತ್ತಿ
ಬಿಚ್ಯುಂಡ ಭೀಮರತಿಮ್ಯಾಲ ||

ಕೃತಜ್ಞತಾಬುದ್ಧಿಯನ್ನು ಎಚ್ಚರಿಸಿದರೆ ಮಾತ್ರ ಆ ಬುತ್ತಿಯ ಸೊಗಸು ಗೊತ್ತಾಗುವದು. ಕೃತಜ್ಞತೆಯೆಂದರೆ ಪರರು ನಮಗೆ ಮಾಡಿದ ಉಪಕಾರವನ್ನು ಸ್ಮರಿಸವದು. ಮನುಷ್ಯನಿಗೆ ತೀರ ಹತ್ತಿರದ ಪರರೆಂದರೆ ತಾಯಿ-ತಂದೆಗಳು. ಆಮೇಲೆ ಅಣ್ಣ-ತಮ್ಮ, ಅಕ್ಕ-ತಂಗಿ ಮೊದಲಾದ ಬಂಧು-ಬಳಗದವರು; ಮಿತ್ರರು, ನೆರೆಹೊರೆಯವರು, ಊರವರು, ನಾಡಿನವರು ಅವರೆಲ್ಲರೂ ಒಂದಿಲ್ಲೊಂದು ಬಗೆಯಿಂದ ನಮ್ಮ ಮೇಲೆ ಉಪಕಾರ ಮಾಡಿರುತ್ತಾರೆಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ತಾಯಿಯ ರಕ್ತಮಾಂಸಗಳಿಂದಲೇ ನಮ್ಮ ಮೈ ಸಿದ್ಧವಾಗಿರುತ್ತದೆ; ಆಕೆಯ ಮೊಲೆಹಾಲು ಕುಡಿದು ಬೆಳೆದಿರುತ್ತೇವೆ; ಆಕೆಯ ಮುದ್ದನುಂಡು ಚೆಲುವಾಗಿರುತ್ತೇವೆ; ಆಕೆ ಮೈದಡವಿ ನಮ್ಮ ಬೆನ್ನಿಗೆ ಭೀಮರಕ್ಷೆ ಇರಿಸಿದ್ದಾಳೆ. ಆಕೆ ಹಸಿವೆ, ನೀರಡಿಕೆ, ಹೇಸಿಕೆ ಮೊದಲಾದವುಗಳನ್ನು ನಮಗಾಗಿ ತ್ಯಾಗ ಮಾಡಿದ್ದರಿಂಎಲೇ ನಾವು ಒಂದು ವ್ಯಕ್ತಿಯಾಗಿ ನಿಲ್ಲುತ್ತೇವೆ. ಬಹಳವೇನು-

*ಕಣ್ಣೆಂಜಲ ಕಾಡೀಗಿ ಬಾಯೆಂಜಲ ವೀಳ್ಯವ-

ತಾಯಿಯಂತೆ ತಂದೆಯೂ ನಮಗಾಗಿ ಮಹಾತ್ಯಾಗ ಮಾಡಿರುತ್ತಾನೆ. ಆತನ ದುಡಿಮೆಯಿಂದಲೇ ನಮಗೆ ಅನ್ನ-ಅರಿವೆ ಆಶ್ರಯಗಳು ದೊರೆಯುತ್ತವೆ. ಆತನ ಹೋರಾಟದಿಂದಲೇ ನಮಗೆ ವಿದ್ಯಾಭ್ಯಾಸ-ವ್ಯವಹಾರ ಕುಶಲತೆಗಳು ದೊರೆಯುತ್ತವೆ; ಅದರಿಂದಲೇ-

*ತಂದೀಯ ನೆನೆದರ ತಂಗೂಳ ಬಿಸಿಯಾಯ್ತು-

ತಾಯಿತಂತೆಗಳ ಉಪಕಾರಕ್ಕೆ ಕೃತಜ್ಞರಾದವರಿಗೆ ತಂದೆಯನ್ನು ನೆನಿಸಿ ಊಟ ಮಾಡಿದರೆ ತಂಗೂಳು ಸಹ ಬಿಸಿಯಾಗುತ್ತದೆ. ತಾಯಿಯೆಂತೂ ಗಂಗಾದೇವಿ! ಆಕೆಯ ನಿಸ್ವಾರ್ಥ ಉಪಕಾರದ ಮಹಾಖನಿಯೇ ಆಗಿರುವದರಿಂದ ಆಕೆಯನ್ನು ನೆನೆಸುವುದರಿಂದ ಮಾಡಿದ ತಲೆಯು ಮಡಿಯಾಗುತ್ತದೆ. ಅವರ ಹಿಂದೆ ಅಣ್ಣ, ಅಕ್ಕ, ಅಜ್ಜಿ, ಮುತ್ತಯ್ಯ ಮೊದಲಾದವರ ಉಪಕಾರವೂ ಮರೆಯದಷ್ಟು ಇರುತ್ತದೆ. ಕೃತಜ್ಞತಾಬುದ್ಧಿಯೇ ಮೈವೆತ್ತು ನಿಂತ ಗರತಿಯು ಅಂಥವರಿಗಾಗಿ ಮೈಮರೆತು ಹಾಡುವದೇನಂದರೆ-

ಹಾಲುಂಡ ತವರೀಗಿ ಏನೆಂದು ಹಾಡಲೆ
ಹೊಳೆದಂಡಿಲಿರುವ ಕರಕೀಯ | ಕುಡಿಯಂಗ |
ಹಬ್ಬಲೇ ಅವರ ರಸಬಳ್ಳಿ ||

ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ಅವಕಾಶ ದೊರೆಯದೆ ಹೋಗಬಹುದು. ಆದರೆ ಉಪಕಾರಸ್ಮರಣೆಗೆ ಯಾವ ಅವಕಾಶವೂ ಕಾರಣವಿಲ್ಲ. ಆಪ್ತರಿಂದ, ಗೆಳೆಯರಿಂದ ನೂರಾರು, ಸಾವಿರಾರು ಉಪಕಾರಗಳು ನಮಗೆ ಒದಗಿರುತ್ತವೆ. ನಾವು ನಿರ್ಭಯರಾಗಿ ಜೀವಿಸುವದಕ್ಕೂ, ಬಾಳಿನಲ್ಲಿ ಎಷ್ಟೇ ಆಗಲಿ ಸುಖ ಪಡುತ್ತಿರುವುದಕ್ಕೂ ನಮ್ಮ ನೆರೆಹೊರೆಯವರೂ, ನಾಡಿನವರೂ ಕಾರಣರಾಗಿರುತ್ತಾರೆ. ಇನ್ನೊಂದು ದೃಷ್ಟಿಯಲ್ಲಿ ಪ್ರಪಂಚದ ಮಾನವರೆಲ್ಲರ ಉಪಕಾರವೂ ನಮ್ಮ ಮೇಲೆ ಆಗಿರುತ್ತದೆ. ಹೇಗೆಂದರೆ-ನಮ್ಮ ವಿದ್ಯಾಭ್ಯಾಸವನ್ನು ಹಗುರಗೊಳಿಸಿದ ಶಾಲೆ, ಪುಸ್ತಕ, ಮುದ್ರಣಾಲಯಗಳೂ, ನಮ್ಮ ಪ್ರವಾಸವನ್ನು ಸುಲಭಗೊಳಿಸಿದ ಉಗಿಬಂಡಿ-ವಿಮಾನ-ಹಡುಗುಗಳೂ, ಚಲನಚಿತ್ರ-ಬಾನುಲಿ ಮೊದಲಾದವುಗಳೂ, ಪ್ರಪಂಚದೊಳಗಿನ ಮಾನವರು ನಮಗಾಗಿ ಹುಡುಕಿಕೊಟ್ಟು ಉಪಕರಿಸಿದ ಸಲಕರಣೆಗಳಾಗಿರುತ್ತವೆ.

ಮಾಂಸದ ಮುದ್ದೆಯ ರೂಪದಲ್ಲಿ ಭೂಮಿಗೆ ಬಂದಂದಿನಿಂದ, ಪ್ರೌಢಾವಸ್ಥೆಯನ್ನು ದಾಟಿ, ಮುಪ್ಪಿನವರಾಗುವವರೆಗೆ ನಮ್ಮನ್ನು ಎತ್ತಿಹಿಡಿದು, ನಮ್ಮ ಅಜ್ಞಾನ-ಅವಗುಣಗಳನ್ನು ಲೆಕ್ಕಿಸದೆ ಸಲಹುತ್ತ ಬಂದ ಭೂಮಿತಾಯಿಯ ಉಪಕಾರಕ್ಕಾಗಿಯೇ ದೇಶಭಕ್ತಿಯು ಮೈದೋರಿದೆ, ನಮ್ಮ ಒಳಗೂ ಹೊರಗೂ ಹರಹಿ ನಿಂತ ಕುತ್ತುಗಳನ್ನು ಹತ್ತೆಯಿರಿಸಿ, ರಕ್ಷಣೆಯನ್ನೇ ನೀಡುತ್ತಿರುವ ದೈವ ಶಕ್ತಿಯನ್ನು ಕಂಡುಂಡು ಸಾರಿದ್ದಾನೆ.

ಮುಂದೇನು ಕೊಟ್ಟೀತ ಮನವೇನು ದಣಿದೀತ
ಮುಂಜಾನದಾನ ಗಿರಿಮಲ್ಲ | ಕೊಟ್ಟರ |
ಮನಿ ತುಂಬಿ ನಮ್ಮ ಮನ ತುಂಬಿ ||

ಎನ್ನುವಲ್ಲಿಯೂ

ಶಿವ ಶಿವನೆಂದರ ಸಿಡಿಲೆಲ್ಲ ಬಯಲಾಗಿ
ಕಲ್ಲ ಬಂದೆರಗಿ ಕಡೆಗಾಗಿ | ಎಲೆ ಮನವೆ |
ಶಿವನೆಂಬ ಶಬುದ ಬಿಡಬೇಡ ||

ಎನ್ನುವಲ್ಲಿಯೂ ದೈವಭಕ್ತಿಯಲ್ಲಿರುವ ದೃಢವಾದ ಶ್ರದ್ಧೆಯನ್ನು ಸ್ಪಷ್ಟವಾಗಿ ಅಳೆಯಬಹುದು. ದೈವಭಕ್ತಿಯ ತೆನೆಯಾಗಿ ನಿಂತ ಶರಣರೂ, ದಾಸರೂ ತಮ್ಮೊಳಗಿನ ಕೃತಜ್ಞತಾಬುದ್ಧಿಯನ್ನು ಹಲವು ವಿಧದಲ್ಲಿ ತೋರ್ಪಡಿಸಿಕೊಂಡಿದ್ದಾರೆ. “ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ” ಎಂದು ವಚನಿಸಿ ದೇವದೇವನ ಉಪಕಾರವನ್ನು ಸ್ಮರಿಸಿದ್ದಾರೆ.

“ಅನುಪಮ ದಾನಿ ಅಪ್ರತಿಮ ದಾನಿ
ಸಂದ ಪೆಂಪಿನ ಘನ ದಾನಿ
ಕೌತುಕದ ದಾನಿ ಮಹೋನ್ನತ ದಾನಿ”

ಎಂದು ಕೀರ್ತಿಸಿದ್ದಾರೆ. “ನೀನಿತ್ತ ಸೌಭಾಗ್ಯ ನಿಬಿಡವಾಗಿರಲಿಕ್ಕೆ ಏನು ಬೇಡಲಿ ನಿನ್ನ ಬಳಿಗೆ ಬಂದು” ಎಂದು ಎದೆ ಬಿಚ್ಚಿ, ಬಾಯಿ ಬಿಚ್ಚಿ ಹಾಡಿದ್ದಾರೆ. “ನಾನೇಕೆ ಬಡವನೋ ನಾನೇಕೆ ಪರದೇಶಿ” ಎಂದು ಬಾಯಿ ತುಂಬಿ ಎದೆ ತುಂಬಿ ಉಸುರಿದ್ದಾರೆ. ಹೀಗೆ ಹಾಡಿದ ಶರಣರಲ್ಲಿ, ದಾಸರಲ್ಲಿ, ಕವಿವರರಲ್ಲಿ ಕೃತಜ್ಞತೆಯನ್ನು ತುಂಬಿದವರಾರು? ಅದೆಲ್ಲ ತಾಯ ಗರತಿಯ ಕಣ್ಣೆಂಜಲ-ಬಾಯೆಂಜಲಗಳನ್ನು ಪ್ರಸಾದವೆಂದು ಗ್ರಹಿಸಿದವರು ಶರಣರಾದರು; ಕವಿಗಳಾದರು; ದಾಸರಾದರು. ಧರ್ಮಸ್ಥಾಪಕ ಧರ್ಮರಕ್ಷಕರಾಗಲಿ, ಪಂಡಿತ ಮೇಧಾವಿಗಳಾಗಲಿ ಅದೇ ಕಣ್ಣೆಂಜಲಿನ ಕಾಡಿಗೆ ಅಂಜನವಾಗಿ ದಿವ್ಯದೃಷ್ಟಿಯನ್ನೂ, ಅದೇ ಬಾಯಂಜಲಿನ ವೀಳ್ಯೆ ಅಮರ ಜೀವನವನ್ನೂ ನೀಡಿವೆ.

ಸಾಮಾನ್ಯವಾಗಿ ಹುಟ್ಟಿ, ಅಸಾಮಾನ್ಯತೆಯನ್ನು ಪಡೆದು, ಸಾವಿಲ್ಲದ ಕೇಡಿಲ್ಲದ ಕೀರ್ತಿ ಕಾರ್ಯವನ್ನು ಗಳಿಸಿದವರು ಕೃತಜ್ಞರಾಗಿಯೇ ಇದ್ದರೆಂದು ಕಂಡುಬರುವದು. ಕೆರೆಯ ನೀರು ಕೆರೆಗೆ ಅರ್ಪಿಸಿ ವರ ಪಡೆಯುವ ಸುಲಭೋಪಾಯದಿಂದಲೇ ಅವರು ಶ್ರೇಷ್ಠ ಮಾನವರಾಗಿ ಹೋದರೆನ್ನುವ ಮಾತು ಮರೆಯುವಂತಿಲ್ಲ. ಬೆಳೆ ಕೊಟ್ಟ ಹೊಲದ ಲಕ್ಷ್ಮೀಗೆ ನೈವೇದ್ಯ ಅರ್ಪಿಸುವದಾಗಲಿ, ಮಳೆ ಸುರಿದ ದೇವತೆಗೆ ಯಜ್ಞ ಸಲ್ಲಿಸುವದಾಗಲಿ ಕೃತಜ್ಞತೆಯಲ್ಲದೇ ಮತ್ತೇನು? ಅಜ್ಜನ ಹೆಸರು ಮೊಮ್ಮಗನಿಗಿಟ್ಟು ಕರೆಯುವದೂ, ಜಯಂತಿ ಪುಣ್ಯತಿಥಿಗಳನ್ನು ಆಚರಿಸುವದೂ ಕೃತಜ್ಞತೆಯ ಲಕ್ಷಣಗಳಲ್ಲವೇ? ಪ್ರಜೆಯೇ ಪರಮೇಶ್ವರನೆಂದು, ತನ್ನ ಶಕ್ತಿಗಳನ್ನು ಅವರ ಸೇವೆಯಲ್ಲಿ ತೊಡಗಿಸಿದವನೂ ನಾಡ ಸಂರಕ್ಷಣೆಗಾಗಿ ಅದರ ಸುಹಿತಕ್ಕಾಗಿ ಬಲಿದಾನ ಮಾಡಿದವನೂ, ಕೃತಜ್ಞತೆಯ ಪಾಠವನ್ನು ಅಭ್ಯಸಿಸಿದವನೇ ಆಗಿರುತ್ತಾನೆ.

ಕೃತಜ್ಞತೆಯೆಂದರೆ ಬಾಳಿನಲ್ಲಿ ಗೆಲುವಿನ ಗುಟ್ಟು, ಆ ಗುಟ್ಟು ರಕ್ತಗುಣವಾದವನು ಶ್ರೇಷ್ಠ ಮನುಷ್ಯನಾಗುವದು ಸಹಜವಾಗಿದೆ; ಸುಲಭವಾಗಿದೆ. ಅದು ಖರ್ಚಿಲ್ಲದ ಹಾದಿ.

“ಒಡೆಯರ ಬರವಿಂಗೆ ಕುನ್ನಿ ಬಾಲ ಬಡಿದರೆ
ವೆಚ್ಚವೇನು ಹತ್ತುವದು ಕೂಡಲಸಂಗಮದೇವಾ?”

ತನ್ನನ್ನು ಸಾಕಿ ಸಲಹಿದವನ ಬರಹೋಗುಗಳನ್ನು ನಾಯಿಯು ಕೃತಜ್ಞತೆಯಿಂದ ಕಾಯುತ್ತಿರುತ್ತದೆ. ನಾಯಿಯ ಕುನ್ನಿಗೂ ಆ ಗುಣವು ಸ್ವಾಭಾವಿಕವಾಗಬೇಕಷ್ಟೇ? ತಿಳುವಳಿಕೆಯಿಂದ ತುಳುಕುವ ಮಾನವನಿಗೆ ಆ ಗುಣವು ಅಸ್ವಾಭಾವಿಕವೆಂದು ಹೇಗೆ ಹೇಳಲಿಕ್ಕಾಗುವದು? ಮಕ್ಕಳಲ್ಲಿ ತಾನೇ ಹಂಚಿಹಾಕಿದ ತಿನಿಸಿದ್ದರೂ ತಾಯಿ, ತನಗಿಷ್ಟು ಕೊಡಿರೆಂದು ಕೈಮಾಡಿ ಕೇಳುವಂತೆ ನಮ್ಮನ್ನು ಸಲುಹುವ ಶಕ್ತಿ ಕೆಳುತ್ತಿದೆ. ತನಗೆ ಬಂದ ಪಾಲಿನಲ್ಲಿ ಉಗುರಿನಿಂದ ಚಿವುಟಿ ಒಂದಿಷ್ಟು ತಾಯ ಕೈಗಿತ್ತ ಮಗುವನ್ನು ಆಕೆ ಬರಸೆಳೆದು, ಮುದ್ದು ಕೊಟ್ಟು ದಾನದ ತಿನಿಸನ್ನು ತಿರುಗಿ ಸಲ್ಲಿಸುತ್ತಾಳೆ; ತಗೆದಿರಿಸಿದಳೆಂದರೆ ಮತ್ತೊಮ್ಮೆ ಕೊಡುತ್ತಾಳೆ. ಇಷ್ಟೆಲ್ಲವನ್ನು ನಾವು ವ್ಯವಹಾರದಲ್ಲಿ ಕಂಡರೂ ನಮ್ಮ ಕೃತಜ್ಞತೆ ಅರಳಲೊಲ್ಲದಾಗಿದೆ. ಶ್ರೇಷ್ಠನಾಗಬೇಕೆನ್ನುವ ಹಂಬಲವಿದ್ದರೂ ಅದಕ್ಕೆ ಸರಿಯಾದ ಉಪಾಯ ಮಾಡಲಾರದೆ ನಾವು ಅಪಯಶಿಗಳಾಗುತ್ತಿದ್ದೇವೆ.

ನಮ್ಮ ಅಪಶಯದ ಪರಿಸ್ಥಿತಿ ನೀಗಿಸುವದಕ್ಕೂ, ನಮ್ಮಲ್ಲಿ ಕೃತಜ್ಞತೆಯನ್ನು ಮೊಳೆಯಿಸುವದಕ್ಕೂ ಗರತಿ ನಡುಗಟ್ಟಬೇಕಾಗಿದೆ. ಗರತಿಯ ಹಾಡು ಆಕೆಗೆ ಪೌಷ್ಟಿಕವಾಗಬೇಕಾಗಿದೆ. ಹೊಸದಾಗಿ ನಾಡು ಕಟ್ಟುವದೆಂದರೆ, ಹಾಳು-ಬೀಳುಗಳಿಗೆ ಕೆಸರು ಮೆತ್ತುವದಲ್ಲ; ಗಟ್ಟಿಯಾದ ನೆಲಗಟ್ಟಿನಿಂದ ಕಟಟಡವು ಏರುತ್ತ ಹೋಗಿ ತಲೆಯೆತ್ತಿ, ಹೆಡೆಯೆತ್ತಿ ನಿಲ್ಲಬೇಕಾಗಿದೆ. ಗರತಿಯ ಹಾಡು ನಮ್ಮ ನಾಡ ಕಟ್ಟಡಕ್ಕೆ ನೆಲೆಗಟ್ಟಾಗಬೇಕಾಗಿದೆ. ಕೌಟುಂಬಿಕ ಜೀವನದಲ್ಲಿ ಉತ್ತಮತೆಯನ್ನು ತುಂಬಿ, ಗೃಹಸ್ಥಾಶ್ರಮದೊಳಗಿನ ವಟುಗಳಲ್ಲಿ ಕೃತಜ್ಞತೆಯನ್ನು ಮೊಳೆಯಿಸಬೇಕಾದರೆ ಗರತಿಯು ಕಣ್ಣೆಂಜಲ ಕಾಡಿಗೆ ಬಾಯಂಜಲ ವೀಳ್ಯೆ ಅವಶ್ಯವಾಗಿ ಬೇಕು. ಆ ಸಾಹಿತ್ಯದ ಹಾಲುಂಡ ಮಕ್ಕಳು – “ಹೆಸರಿಲ್ಲದ ಮಾನಸರಿಲ್ಲದೆಲ್ಲಿಯುಂ” ಎನಿಸುವ ನಿಜವಾದ ಕನ್ನಡಿಗರು ನಾವಾಗಲು ಗರತಿಯ ಹಾಡು ನಮ್ಮನ್ನು ಪ್ರಚೋದಿಸಬೇಕು.