ಮಹಾಸಂಸ್ಕಾರ

ಮದುವೆಯನ್ನುವದು ಪ್ರತಿಯೊಬ್ಬನಿಗೆ ಜೀವನದೊಳಗಿನ ಒಂದು ಮಹಾಸಂಸ್ಕಾರವಾಗಿರುತ್ತದೆ. ಗಂಡು ಪುರುಷನಾದರೆ, ಹೆಣ್ಣು ಪ್ರಕೃತಿ. ಧನ-ಋಣ ವಿದ್ಯುತ್ತುಗಳು ಎಲ್ಲಿದ್ದರೂ ಹೇಗಿದ್ದರೂ ಒಂದುಗೂಡುವದಕ್ಕೆ ಹಾತೊರೆಯುತ್ತವೆ. ಆ ಹಾತೊರೆ ತವಕಗಳನ್ನು ಯೋಗ್ಯ ದಿಶೆಯಲ್ಲಿ ಹರಿಯಿಸುವುದಕ್ಕಾಗಿ, ಸಾಮಾಜಿಕರು ಮದುವೆಯೆಂಬ ಮಹಾಸಂಸ್ಕಾರವನ್ನು ಕಲ್ಪಿಸಿದ್ದಾರೆ. ತವರು ಮನೆಯ ಹೆಣ್ಣು ಮಗಳು ಅತ್ತೆಯ ಮನೆಯ ಸೊಸೆಯಾಗಲಿರುವ ಸಂದರ್ಭ; ತಂದೆಯ ಸಂರಕ್ಷಣೆಯಿಂದ ಗಂಡನ ಸಂರಕ್ಷಣೆಗೆ ಒಳಪಡಬೇಕಾಗಿರುವ ಗಳಿಗೆ, ತಾಯಿಯ ಅಕ್ಕರೆಯು ಅತ್ತೆಯ ಸಕ್ಕರೆಯಾಗಲಿರುವ ಮುಹೂರ್ತ; ಬೆಟ್ಟದ ನೆಲ್ಲಿ, ಸಮುದ್ರದ ಉಪ್ಪು ಒಂದು ಭಾಂಡದಲ್ಲಿ ಸಮರವಾಗುವ ಶುಭ ಸಮಯ. ಇವೆಲ್ಲವುಗಳಿಗೆ ಜೀವಾಳವಾಗಿರುವ ಪುರುಷನ ಸಂಕಲ್ಪ ಧನದೊಂದಿಗೆ ಪ್ರಕೃತಿಯ ಶಕ್ತಿಋಣವನ್ನು ಸಂಧಿಸುವ ದಿವ್ಯ ನಿಮಿಷ. ಅಂತೆಯೇ ಮದುವೆ ಮಹಾಸಂಸ್ಕಾರವೆನಿಸುವದು. ನೆರೆದ ಬಳಗ ಅಣಿಗೊಳಿಸಿದ ಅನ್ನಸಾಮಗ್ರಿ, ಬೆಳಗುವ ದೀಪ, ಸಿಂಗಾರದ ಮಂಟಪ ಮೊದಲಾದವುಗಳೆಲ್ಲ ಆ ಸಂಸ್ಕಾರ ಸಿದ್ಧತೆಯೇ ಸರಿ. ಮದುವೆಯ ಹಾಡುಗಳೇ ಅಲ್ಲಿ ಘೋಷಿಸುವ ಮಂತ್ರಗಳು. ದಾಂಪತ್ಯವು ಜೀವನದ ಬಹು ಮುಖ್ಯ ವಿಭಾಗವಾಗಿರುವದರಿಂದ ಅದೊಂದು ಮಹಾ ಪವಿತ್ರ ಯಜ್ಞದಂತೆ ಸಾಗುವುದಕ್ಕಾಗಿ ಯಜ್ಞ ಮಂತ್ರಗಳಂತಿರುವ ಮದುವೆಯ ಹಾಡುಗಳನ್ನು, ಮದುವೆಯ ಕಾಲಕ್ಕೆ ಬೇರೆ ಬೇರೆ ವಿಧಾನಗಳು ನಡೆದಾಗ ಹೆಣ್ಣು ಮಕ್ಕಳು ಹಾಡುವರು.

ವಿವಿಧ ವಿಧಾನಗಳು

ಮದುವೆ ಹೆಣ್ಣಿನ ಮನೆಯ ಮುಂದೆ ಇಲ್ಲವೆ ಗಂಡಿನ ಮನೆಯ ಮುಂದೆ ನಡೆಯಬಹುದು. ಅಥವಾ ಇನ್ನೆಲ್ಲಿಯೋ ನಡೆಯಬಹುದು. ಸಾಮಾನ್ಯವಾಗಿ ಮದುವೆ ಮೂರು ದಿವಸ ನಡೆಯಬೇಕೆಂದು ಇಟ್ಟುಕೊಂಡಿದ್ದಾರೆ. ಮೊದಲನೆಯ ದಿವಸ ಮದುಮಕ್ಕಳಿಗೆ ಅರಿಷಿಣ ಹಚ್ಚುವದು; ಇನ್ನೊಂದು ದಿವಸ ದೇವತಾ ಕಾರ್ಯ; ಮೂರನೆಯ ದಿವಸ ಅಕ್ಷತೆ ಅಂದರೆ ಅಕ್ಕಿಕಾಳು ಹಾಕುವದು. ಇದಕ್ಕೂ ಮೊದಲಿಗೆ ನಿಶ್ಚಯ, ಭಾಟಿಗೆ ಮೊದಲಾದ ವಿಧಾನಗಳು ನಡೆಯುತ್ತವೆ. ಮದುವೆಯ ಕಾಲದಲ್ಲಿ ನಡೆಯುವ ಎಲ್ಲ ವಿಧಾನಗಳಲ್ಲಿಯೂಹಾಡುಹೇಳಲಾಗುತ್ತದೆ. ಆ ಆ ಹಾಡುಗಳು ಆ ಆ ವಿಧಾನಗಳನ್ನು ಹೇಳುವಂತಿವೆ. ಆದ್ದರಿಂದ ಅವು ಕೇವಲ ರಂಜನೆಯ ಹಾಡುಗಳಾಗಲಾರವು. ಆದರೆ ಇನ್ನೊಂದು ದೃಷ್ಟಿಯಿಂದ ಆ ಹಾಡುಗಳನ್ನು ಕೇಳಿ ನೋಡಿದರೆ ಅವುಗಳಲ್ಲಿ ರಸವು ಕಂಡುಬರುವದು.

ಭಾಟಗಿ (ನಿಶ್ಚಯ) ಹಾಕುವದು

ಮೊದಲಿಗೆ ಹೆಣ್ಣಿನವರೂ ಗಂಡಿನವರೂ, ತಮ್ಮತಮ್ಮೊಳಗೆ ಮಾತನಾಡಿಕೊಂಡು ನಿಶ್ಚಯ ಮಾಡುವರಲ್ಲದೆ ಕನ್ಯೆಗೆ ಕುಂಕುಮ ಹಚ್ಚುತ್ತಾರೆ. ಆ ಬಳಿಕ ತಮ್ಮ ತಮ್ಮೊಳಗೆ ಮಾತನಾಡಿಕೊಂಡ ನಿಶ್ಚಯದ ಮಾತುಗಳನ್ನು ಸರ್ವಜನ ಸಾಕ್ಷಿಯಾಗಿ ಗಟ್ಟಿ ಮಾಡುತ್ತಾರೆ. ಆ ಕಾಲದ ನೈಮಿತ್ತಿಕ ಕಾರ್ಯಕ್ಕೆ ಭಾಟಿಗೆ ಹಾಕುವದು ಎನ್ನುತ್ತಾರೆ. ವರನ ಕಡೆಯವರು ಕನ್ಯೆ ನೋಡಲಿಕ್ಕೆ ಅಂದರೆ ಹೆಣ್ಣು ಬೇಡಲಿಕ್ಕೆ-ಕೂಸು ಬೇಡಲಿಕ್ಕೆ ಹೋಗುವರು. “ಕೂಸು ಬೇಡಲಿ ಹೋದ್ರ ಕೂಸೇನು ಮಾಡತಿರಲೆ | ಕೂಸ್ಹಾಲುಬಾನಾ ಉಣತಿರಲೇ, ಕೂಸಿನ ತಾಯಿ ಕುಸುಮಾಯದ ನಗೆಯ ನಗುತಿರಲೆ” ಹೀಗಿರುವದು ಶುಭ ಚಿಹ್ನೆ. ಅಲ್ಲದೆ ಗೋಡೆಯ ಮಗ್ಗಲಿನ ಜೋಡು ಮಾವಿನ ಮರದ ತೀರ ತುದಿಯಲ್ಲಿ ಕುಳಿತು ಪಕ್ಷಿಗಳು ಗಲಬಲಿಸುತ್ತಿದ್ದರೆ, ಕನ್ಯಾರ್ಥಿಗಳ ಕೆಲಸ ಅರ್ಥ ಕೈಗೂಡಿದಂತೆಯೇ. ಪಟ್ಟಪಡಸಾಲೆಯಲ್ಲಿ ಕುಳಿತ ದೊಡ್ಡಪ್ಪನು ಒಳಗಿರುವ ಮಡದಿಯನ್ನುಕರೆದು “ಅವರಿಗೆ ಮಗಳನ್ನು ಕೊಡೋಣವೇ?” ಎಂದು ಕೇಳುತ್ತಾನೆ. ಅದಕ್ಕೆ ಗೃಹಿಣಿಯು ಹೇಳವು ಸಲಹೆ ಏನೆಂದರೆ-

ವರ ಸುದ್ದನಿಲ್ಲದ ಕುಲ ಚೊಕ್ಕನಿದ್ದರ
ಫಣಿ ನಾಲಗಿ ಸುದ್ದ ಮಕ ಸುದ್ದ | ನಿದ್ದರ |
ಕುಡ ಹೋಗಿರಿ ನಮ್ಮ ಮಗಳನ್ನ ||

ಆಯ್ತು ದೊಡ್ಡಪ್ಪ ಕನ್ಯೆ ಕೊಡುವುದಕ್ಕೆ ಒಪ್ಪಿಕೊಂಡರು. ಇನ್ನು ಅಲ್ಲಿ ಆ ವರನ ಮನೆಯಲ್ಲಿ ಭಾಟಿಗೆ ಕೆಲಸದ ಗಡಿಬಿಡಿ, ಆ ಮನೆಯ ಅತ್ತಿಗೆಗೂ ಈ ಮನೆಯ ನಾದಿನಿಗೂ ಬಾಲನ ಭಾಟಿಗೆಗೆ ಬರಬೇಕೆಂದು ಆಮಂತ್ರಣ. ಶುಕ್ರವಾರ ದಿನ ಸೂರ್ಯನುದಿಸಿದಂತೆ, ಮಂಗಳವಾರ ದಿನ ಚಂದ್ರನುದಿಸಿದಂತೆ ಅಳಿಯನು ಉದಯವಾಗಲು ಶಾವಿಗೆ-ಸೈದಾನ, ಹಪ್ಪಳ-ಸಂಡಿಗೆ ಹದ ಮಾಡತೊಡಗುವರು. ಕಡಲಿಕಾಳಂಗ ಕಟದ ಮುತ್ತಿಟ್ಟ, ಉದ್ದೀನ ಬಾಳೆಂಗ ತಿದ್ದಿ ಮುತ್ತಿಟ್ಟ ಅಳಿಯನ ಚಲುವಿಕೆ ನೋಡಿದವರೆಲ್ಲ ದೊಡ್ಡವರ ತಕ್ಕ ಅಳಿಯನೆಂದು ಸೈವಡುವರು.

ಒಳಕಲ್ಲು ಪೂಜೆ

ನಿಶ್ಚಯದ ಕೆಲಸ ಮುಗಿಯುತ್ತಲೇ ಲಗ್ನ ಮುಹೂರ್ತ ತೆಗೆಯಿಸಿ ಹಿಟ್ಟು ಅಕ್ಕಿಯ ಸಾಹಿತ್ಯವನ್ನು ಸಿದ್ಧಗೊಳಿಸುವದಕ್ಕೆ ಆರಂಭಿಸುತ್ತಾರೆ. ಮೊದಲಿಗೆ ಒರಳು, ಕಲ್ಲು ಮೊದಲಾದವುಗಳನ್ನು ಮುತ್ತೈದೆಯರು ಪೂಜಿಸುತ್ತಾರೆ. ಆ ಕೆಲಸಕ್ಕೆ ಬಂಧು-ಬಳಗದವರು ನೆರೆ-ಹೊರೆಯವರು ಸಹ ಕಲೆಯುತ್ತಾಳೆ. “ಕಲ್ಲ ಪೂಜಿ ಮಾಡಲಕ ನನ್ಯಾರು ಕರಸ್ಯಾರ ಸಾಲ ಮಾಳಗಿ ಮನೆಯವಳ” ಸಾಲ ಮಾಳಗಿ ಮನೆಯನ್ನುವದಷ್ಟೇ ಗೊತ್ತು. ಪಿಲ್ಲೆ ಇಟ್ಟ ಕಾಲೀನ ಮಗಳನ್ನು ಕರೆಯಲು ಪಲ್ಲಕ್ಕಿ ಹೋಗಿದೆ. ನಂಟರನ್ನು ಕರೆಯಲು ಮಂಟಪ ಕಳಿಸಿದ್ದಾರೆ. ಮಂಟಿಗೆ ಧರಿಸಿದ ಮಗಳ ಕಡೆಗೆ ಒಂಟಿ ಸಿಂಗಾರಾಗಿ ಹೋಗಿದೆ. ಮದುವೆಯ ಕಾಲದಲ್ಲಿ ಅಳಿಯ-ದೇವರೆನಿಸಿದರೆ ಆಶ್ಚರ್ಯವಲ್ಲ. ಒರಳು ಕಲ್ಲುಗಳೂ ಪೂಜೆಗೊಳ್ಳುತ್ತವೆ! ಒನಕೆಯ ಸಿಂಗಾರವೇ ಬೇರೆ. ಅಣ್ಣ ತಮ್ಮಂದಿರು ಹಾಲಬೋನವನುಂಡು ಹೊನ್ನಿನುಳಿಬಾಚಿಯನ್ನು ಹೆಗಲಿಗೇರಿಸಿ ಗುಡ್ಡಕ್ಕೆ ಹೋಗಿ ಹಿಪ್ಪೆಯ ಮರ ಕಡಿದು ಮಾಡಿದ ಒನಕೆ !! ಮೊರಕೆ ಮುತ್ತಿನ ಕಟ್ಟು! ಒನಕೆಗೆ ಹುರಿ ಗೆಜ್ಜೆ!! ಹೊನ್ನಮಾಣಿಕದ ಮರಜರಡಿ!! ತಕ್ಕೊಂಡು ಕನ್ಯೆಯರು ಶಿವಶರಣು ಎಂದು ಹಾಡುವರು. ಅಂಗೈ ಚಂದಕೆ ಈ ಕೈಯ ತಿರುಹುತ ಆಕಾಶಕೆ ಒನಕೆಯ ನೆಸೆಯುವ ಗೌಡರ ಮಕ್ಕಳು! ಆ ಕೈಯ ಚಂದಕೆ ಈ ಕೈಯ ತಿರುಹುತ ಆಕಾಶಕೆ ಒನಕೆಯ ನೆಸೆಯುವ ಗೌಡರ ಸೊಸೆಯರು!! ಎತ್ತಲಾರದಷ್ಟು ಬಂಗಾರ ಧರಿಸಿ ಸುತ್ತಿ ಬಂದ ಸೆರಗನ್ನು ಮುಡಿಗೆ ಕಟ್ಟಿಕೊಂಡು ಹಾಡು ಹೇಳುತ್ತ ಕುಟ್ಟುಬೀಸುವ ಆ ಅಕ್ಕ-ತಂಗಿಯರ ಉಲ್ಲಾಸವೆಷ್ಟು! ಸೊಗಸೆಷ್ಟು!!

ನಿಬ್ಬಣ-ಬೀಗರನ್ನು ಎದುರುಗೊಳ್ಳುವದು

ವರನ ಮನೆಯ ಮುಂದೆ ಮದುವೆಯಾಗದಿದ್ದರೆ ಹೆಣ್ಣಿನವರು, ಕನ್ಯೆಯ ಮನೆಯ ಮುಂದೆ ಮದುವೆಯಾಗುವದಿದ್ದರೆ ಗಂಡಿನವರು ತಂತಮ್ಮ ಬಳಗದವರೊಂದಿಗೆ ದೀಪ, ವಾದ್ಯ ಮೊದಲಾದ ಐಶ್ವರ್ಯದೊಡನೆ ತಮ್ಮೂರಿನಿಂದ ಹೊರಡುವರು. ಅದೇ ನಿಬ್ಬಣ. ಹಾಗೆ ನಿಬ್ಬಣವು ಬೀಗರೂರಿಗೆ ಹೊರಡುವದೇ ಒಂದು ಚಂದ. “ಕಳಸಾ ತಕ್ಕೊಳ್ಳೆ ಕಳೆಯುಳ್ಳ ಮುತ್ತೈದೆ”, “ಗಿಂಡೀ ತಕ್ಕೊಳ್ಳೇ ಅಂದುಳ್ಳ ಮುತ್ತೈದೆ” ಎಂಬ ಕೂಗಾಟಗಳು ಕೇಳಿ ಬರುವವು. ನಿಬ್ಬಣ ಹೊರಟಾಗ ಶುಭ ಚಿಹ್ನೆಗಳು ಕಾಣಿಸಿಕೊಳ್ಳಬೇಕು.

ಬಾಗಿಲ ಬಿಟ್‌ ಹೊರ್ಡುವಾಗ ಬಾಳೆ ಪಲ್ಲವಿಸ್ಯಾವೆ |
ಬಾಗಿಲಾನ ಗೌಳಿ ನುಡಿದಾವೆ ||
ಹಟ್ಟಿ ಬಿಟ್ಟು ಹೊರ್ಡುವಾಗ ಹಣ್ಣು ಪಲ್ಲವಿಸ್ಯಾವೆ |
ಹಟ್ಯಾಗ್ನ ಗೌಳಿ ನುಡಿದಾವೆ ||
ಅಂಗಳ ಬಿಟ್ಟು ಹೊರ್ಡುವಾಗ ನಿಂಬೆ ಪಲ್ಲವಿಸ್ಯಾವೆ |
ಅಂಗಳದ ಗೌಳಿ ನುಡಿದಾವೆ ||

“ಹತ್ತೆಮ್ಮೆ ಜೋಕೆ, ಮನೆ ಜೋಕೆ, ಮಿತ್ರೇನ ಗೆದ್ದು ನಾಳೆ ಬರತೀನಿ” ಎಂದು ಹೊರಡುವ ಮದುವಣಿಗನಿಗೆ ಹೀಗೆ ಹೇಳಲಾಗುತ್ತದೆ-

ಮಿತ್ರೇನ ಗೆದಿಯೋಕೆ ನನ್ನಿಚ್ಚೇ ನಿನ್ನಿಚ್ಛೆ
ಮನೆದೇವರ ಕರುಣೆ ನಿನ್ನ ಮ್ಯಾಲೆ | ಇದ್ದರೆ |
ಮಿತ್ರೇನ ಗೆದ್ದು ನಾಳೆ ಬರಹೋಗು ||

ಆ ಬಳಿಕ “ಅತ್ತ ಶರಣೆನ್ನಿ, ಇತ್ತ ಶರಣೆನ್ನಿ | ಸುತ್ತಲ ದೇವರಿಗೆ ಶರಣೆನ್ನಿ ಎಂದು ಕೈ ಮುಗಿದು, ಮನೆಗಳಿಗೆ ಬೀಗ ಹಾಕಿ, ಕೆಂಬರುಗಣ್ಣಿನ ಕಟ್ಟಾಳುಗಳನ್ನುಕಾವಲಿರಿಸಿ- “ಅಕ್ಕಾ ಅಕ್ಕಯ್ಯ ಹೊರಡಿ! ತಂತೀ ತಂಗೆಮ್ಮ ಹೊರಡಿ!! ತಾಯಿ, ತಾಯವ್ವ ಹೊರಡಿ !!!” ಎಂದು ಒಬ್ಬನೊಬ್ಬರು ಮುಂದೆ ಮಾಡಿಕೊಂಡು ಹೊರಡುವರು. ಹೂ ಬರುವ ಮೊದಲೇ ಕಂಪು ಬರುವಂತೆ ಬೀಗರು ಬಂದರೆಂದು ಮೊದಲೇ ಗೊತ್ತಾಗುತ್ತದೆ. “ಎತ್ತೆಲ್ಲಿ ಬಿಟ್ಟಿರಿ, ಬುತ್ತೆಲ್ಲಿ ಉಂಡಿರಿ! ಸೂರ್ಯ ನಿಮಗೆಲ್ಲಿ ಉದಿಸಿದ” ಎಂದು ಇನ್ನೊಬ್ಬರು ಕೇಳುವರು. “ಅಗೋ ಎತ್ತಿನ ಮುಂದೆ ಕಳಸ ಹಿಡಿದಿರುವವಳೇ ಮದುವಣಿಗನ ಹಿರಿಯಕ್ಕ! ಹೋರಿಯ ಮುಂದೆ ಕಳಸ ಹಿಡಿದಿರುವವಳೇ ಮದುವಣಿಗನ ಕಿರುತಂಗಿ!! ಇತ್ತ ನಂದಿಯ ಮುಂದೆ ಬಳಕುತ್ತ ಬರುವವಳೇ ಸುಂದರ ಮದುಮಗನ ಹಡೆದವ್ವ!!” ಎಂಬ ಉದ್ಗಾರಗಳು ಕೇಳಿ ಬರುವವು. ಅದರೊಂದಿಗೆ,

ಈ ಊರ ಮುಂದೊಂದು ಆಲದ ಮರವಿಲ್ಲ
ಆನಿ ಕಟ್ಟಾಕೆ ನೆರಳಿಲ್ಲ | ಊರಾಗ |
ರಾಯರು ಮುಖ ತೊಳಿಯೋ ಕೊಳವಿಲ್ಲ ||

ಈ ಊರ ಮುಂದೊಂದು ಅತ್ತಿಯ ಮರವಿಲ್ಲ
ಎತ್ತು ಕಟ್ಟಾಕೆ ನೆರಳಿಲ್ಲ | ಊರಾಗ |
ಮಿತ್ರೇರು ಮುಖ ತೊಳಿಯೋ ಕೊಳವಿಲ್ಲ ||

ಎನ್ನುವ ಅನಾನುಕೂಲತೆಯ ಗೀಳುನುಡಿಗಳು ಕೇಳಿಬರುವವು.

ಮದುಮಕ್ಕಳಿಗೆ ಅರಿಸಿಣ ಹಚ್ಚುವದು

ಅರಿಸಿಣ ಹಚ್ಚುವದು ಲಗ್ನ ಕಾಲದ ಪ್ರಥಮ ದೀಕ್ಷೆ. ಮುತ್ತೈದೆಯರು ನೆರೆದು ಹಾಡು ಹೇಳುತ್ತ ವೀಳ್ಯದೆಲೆಯಿಂದ ಎಣ್ಣೆಯನ್ನು ಹಚ್ಚಿ, ಮೈಗೆ ಅರಿಸಿಣವನ್ನು ಬಳಿದು ಸ್ನಾನ ಮಾಡಿಸುವರು. ಈ ವಿಧಾನವು ವಧುವರರಿಗೆ ಬೇರೆ ಬೇರೆ ಸ್ಥಳಗಳಲ್ಲಿ ನೆರವೇರಿಸುವರು. ಆಗ ಮಂಗಲವಾದ್ಯಗಳು ಮೊಳಗುವವು. ಮೊದಲು ವರನಿಗೆ, ಹಿಂದುಗಡೆ ವಧುವಿಗೆ ಅರಿಸಿಣ ಹಚ್ಚುವರು. ವಧು-ವರರು ಪಾರ್ವತಿ-ಶಿವ ಸ್ವರೂಪವೆಂದು ಭಾವಿಸುವರು. ನೇರವಾಗಿ ಶಿವ-ಪಾರ್ವತಿಯರಿಗೇ ಎಣ್ಣೆ ಹೊಸೂವರೇನೋ ಎನ್ನುವಂತೆ ಆಸ್ಥೆವಹಿಸುವರು. ನೇಯೆಣ್ಣೆ ಹಚ್ಚುವಷ್ಟರಲ್ಲಿಯೇ ಅಂಗಳಕೆ ಬಿಸಿಲು ಬರುವದು. ನಾಲ್ವತ್ತು ತೋಟಗಳಿಂದ ಬಂದ ಎಲೆಗಳು ಸಾಲದೆ ಹೋಗುವವು.

ನೀರಿಲ್ಲದಂಗಳಾಗ ನೀರ್ಯಾಕನಾಗ್ಯಾವ
ಊರಿಗಿ ದೊಡ್ಡವರ ಮಗ ಮಿಂದ |
ಕೆಸರಿಲ್ಲದಂಗಳಾಗ ಕೆಸರ್ಯಾಕನಾಗ್ಯಾವ
ಊರಿಗೆ ದೊಡ್ಡವರ ಮಗ ಮಿಂದ ||

ಇದೆಲ್ಲ ವರನ ಸಡಗರವಾದ ಬಳಿಕ “ಹಂಚಗೂಣಿ, ಬೆಂಚಗೂಣಿ ಮುತ್ತಿನ ನಾಗುರಣಿ ಕುಸುಮಲ್ಲಿಯಾದ ಭೂದೇವಿಗೆ, ಮುತ್ತೀನ ಬಟ್ಟಿಟ್ಟ ಮುತ್ತೈದೆಯರೆಲ್ಲ” ಎಣ್ಣೆ ಹಚ್ಚುವದಕ್ಕೆ ಸಜ್ಜಾಗುವರು. ಗಂಜಿಯ ಸೀರೆಯುಟ್ಟಿ ಗಂಧದ ಬಟ್ಟಿಟ್ಟ, ಪಿಲ್ಲೆ ಕಾಲುಂಗರಿಟ್ಟ, ಮುಡಿಸಣ್ಣ ಮುತ್ತಿನ ನತ್ತನಿಟ್ಟ ನಲ್ಲೆಯರೈವರು ಕಂಚಿನ ಬಟ್ಟಲಲ್ಲಿ ಮಿಂಚೆಣ್ಣಿ ತಕ್ಕೊಂಡು, ಬೆಳ್ಳಿಯ ಬಟ್ಟಲಲ್ಲಿ ಎಳ್ಳೆಣ್ಣಿ ತಕ್ಕೊಂಡು, ಹವಳಸರ, ಬವಳಸರ ಮ್ಯಾಲ ಮುತ್ತಿನಸರ ತಾಯಿತಲ್ಯಾವಳ ತಾಳಿ ಕಟ್ಟಿಕೊಂಡು ವಧುವಿಗೆ ಎಣ್ಣೆ ಅರಿಸಿಣ ಹಚ್ಚುವರು.

ದೇವರಕಾರ್ಯ ವಿಧಾನ

ಐವರು ಮುತ್ತೈದೆಯರು ಕುಂಬಾರನ ಮನೆಯಿಂದ ಹೊಸ ಕೊಡಗಳನ್ನು ತಂದು ನೀರು ತುಂಬಿಕೊಂಡು ಬರುವರು. ಆ ಕೊಡಗಳು ಎಂಥವು? ಎಡಬಲದಲ್ಲಿ ಕಪ್ಪುರದ ತಿಪ್ಪೆಯುಳ್ಳ ಮನೆಯ ಕುಂಬಾರಣ್ಣನು, ಮೊಸರು ಬೋನವುಂಡು ಹಾರಿ ಹಾರಿ ಕೆಸರು ತುಳಿದು ಸಿದ್ಧಮಾಡಿದ ಐರಾಣಿ ಕೊಡಗಳಿಗೆ, ಕಡಗದ ಕೈಯುಳ್ಳ ಕುಂಬಾರವವನು ಬಾಳಿ ಬನದ ಒಂದು ಅರಗಿಳಿಯನ್ನು ಬರೆದಿದ್ದಾಳೆ. ಅಂಥ ಐರಾಣಿ ತಂದಬಳಿಕ ಮುತ್ತೈದೆಯರು ಒಂದು ಮಡಿ ಬಟ್ಟೆಯಮೇಲೆ ನಂದಿಯ ಮೂರ್ತಿಯಿಟ್ಟು, ಕಡಲೆ ಹಿಟ್ಟಿನ ಮುದ್ದೆಯನ್ನು ಕೈಯಲ್ಲಿ ದುಂಡಗಿನ ಗುಳಿಗೆ ಮಾಡಿ ಆ ಮೂರ್ತಿಯ ಮೇಲೆ ಮಳೆಗರೆದಂತೆ ಎಸೆಯುವರು. ಅದಕ್ಕೆ “ನಂದಮಾಕ” ವಿಧಾನವೆನ್ನುವರು.

ನೂಲು ಸುತ್ತುವದು (ಸುರಿಗೆ ಎರೆಯುವದು)

ಮದುಮಕ್ಕಳನ್ನು ಸ್ನಾನ ಮಾಡಿಸುವ ಇನ್ನೊಂದು ಪ್ರಸಂಗವು ಅಕ್ಷತೆಯ ಕಾಲಕ್ಕೆ ಬರುವದು. ಆಗ ನಾಲ್ಕು ಮೂಲೆಗೆ ನಾಲ್ಕು ತಂಬಿಗೆ ಇರಿಸಿ ಅವುಗಳ ಸುತ್ತುಮುತ್ತು ಮೇರೆಯಂತೆ ನೂಲು ಸುತ್ತಿ ನಟ್ಟನಡುವೆ ಮಣಿಯಿಟ್ಟು ಮದುಮಕ್ಕಳನ್ನು ಎರೆಯುತ್ತಾರೆ. ಅದೇ ಕಾಲಕ್ಕೆ ಮದುವಣಿಗರ ತಾಯಿಯರೂ ಸ್ನಾನಕ್ಕೆ ನಿಲ್ಲುವದುಂಟು. ಅದಾವುದೋ ನಾಡಿನ ಬಡಿಗನು ಮಾಡಿ ಮಾಣಿಕ ಜಡಿಸಿದ ಮಣಿಯಿರಿಸಿ, ಅಲ್ಲೆಂಬ ಹರಿವೆಯಲ್ಲಿ ಗಿಲ್ಲೆಂಬ ಮಗಿ ಹಾಕಿ ನೀರು ಬೆರೆಸಿ, ಪಿಲ್ಲೆಯ ಕಾಲು ಕೆಸರಾಗುವಂತೆ ಮುತ್ತೈದೆಯರು ತಾಯಿ-ಮಕ್ಕಳನ್ನು ಮೀಯಿಸುವರು. ಸರ್ವರು ವಧು-ವರರಿಗೆ ಅಕ್ಷತೆ ಹಾಕಿದ ಬಳಿಕ ಕೆಲಹೊತ್ತಿನ ಮೇಲೆ ಅವರಿಂದ ನಗೆಯಾಟ ಆಡಿಸುವರು. ಅದೇ ಅಡಿಕೆಯಾಟ. ಆಗ ಹಾಡುವ ಹಾಡಿನಲ್ಲಿ ವಧುವು ವರನ ಪಾದ ತೊಳೆಯುವಳೆಂದೂ, ಆಗ ಪಾದದಲ್ಲಿ ಪದುಮ ಕಾಣುವಳೆಂದೂ ಅದು ಆನೆ ಏರುವಂಥ ಬಲ ಬರುವ ಕುರುಹೆಂದೂ ಭಾವಿಸುವಳು. ಆದರೆ ವರನು ಕೇಳುವ ಒಂದು ಪ್ರಶ್ನೆಗೆ, ವಧುವಿತ್ತ ಉತ್ತರವೇನಿದೆ ನೋಡಿರಿ,

“ಆರೂರ ರಾಜ್ಯ ನಿಮ್ಮ ತಮ್ಮ ಆಳಿದರೇನ?
ನತ್ತೀಗಿ ನಮ್ಮ ಕಾಲ ತೊಳೆದಲ್ಲ”
“ನತ್ತೀಗಿ ನಿಮ್ಮ ಕಾಲ ನಾವ್ಯಾಕ ತೊಳೆಯೂನು ಧೊರೆಯೇ
ಮುತ್ತೈದಿತನ ಪಡೆದೇವ”

ಎಂಬ ಅರ್ಥದ ಸಂವಾದಗಳೆಷ್ಟೋ ಬರುವವು.

ಭೂಮದ ಹಾಡು

ಭೂಮವೆಂದರೆ ಲಗ್ನಶಾಂತಿಯ ಮಹಾನೈವೇದ್ಯ. ಸರ್ವವಿಧದ ಪಕ್ವಾನ್ನಗಳನ್ನು ಮದುಮಕ್ಕಳ ಮುಂದೆ, ಹೊಸ ದುರುಡಿಯ ಕೆಳಗೆ ಮುಚ್ಚಿಟ್ಟು ಮುತ್ತೈದೆಯರು, ವಿವಾಹಿತ ಪುರುಷರು ಅದನ್ನು ತೆರೆದು ಉಣ್ಣುವರು. ಸರ್ವವನ್ನೊಳಗೊಂಡಂದ್ದೇ ಭೂಮ ಭೋಜನದ ಸರ್ವಪದಾರ್ಥಗಳ ಸಮಾವೇಶವನ್ನೂ ಅಲ್ಲಿ ಕಾಣಬಹುದು. ಜೀವನದ ಸರ್ವಾಂಗೀಣ ಸ್ವರೂಪವನ್ನು ಮಹಾ ನೈವೇದ್ಯದಂತೆ ಈಶಪ್ರಸಾದವೆಂದು ಸ್ವೀಕರಿಸುವದಕ್ಕೆ ದಂಪತಿಗಳು ದೀಕ್ಷೆ ಹೊಂದುವಂತೆ ತೋರುತ್ತದೆ. ಹಂದರದಲ್ಲಿ ಚಂದದ ಒಲೆ ಹೂಡಿ ಗಂಧದ ಚೆಕ್ಕೆಯಿಂದ ಬೆಂಕಿ ಹೊತ್ತಿಸಿ ಮದುಮಗನ ಅಕ್ಕ ಮಾಡಿದ ಒಂದಗಡಿಗೆ ಕಪ್ಪುರದ ಚೆಕ್ಕಯಿಂದ ಬೆಂಕಿ ಹೊತ್ತಿಸಿ ಮದುಮಗನ ತಾಯಿ ಮಾಡಿದ ಇನ್ನೊಂದಡಿಗೆ. ಹತ್ತು ಮಾನದ ಪರಡಿಯ ಪಾಯಸವನ್ನು ಮುತ್ತಿನ ಕಂಕಣ ತಿರುವುತ್ತ ತಂಗೆವ್ವ ಎಡೆ ಮಾಡಿದರೆ, ಹವಳದ ಕಂಕಣ ತಿರುಹುತ್ತ ಇನ್ನೊಬ್ಬ ತಂಗಿ ಎಡೆ ಮಾಡುವಳು. ಹಾಳಿನಲ್ಲಿ ಇಂಬಾಗಿ ಬೆಳೆದ ನಿಂಬೆಯ ಹೋಳು; ಮರಡಿಯಲ್ಲಿ ಬೆಳೆದು ತಂದರೆ ಬರುವ ಮೂಕಣಿಯ ಹಪ್ಪಳ; ಎರೆಯಲ್ಲಿ ಬೆಳೆದು ತಂದವರ ಮನೆಗೆ ಬರುವ ಕಡಲೆಯ ಶಂಡಿಗೆ, ಮೆಂತಿಯಲ್ಲಿ ಕಡ್ಡಿ ಹಾಕಿ ಅತ್ತೆ ಕಾಸಿದರೆ ಇಪ್ಪತ್ತೊಂದು ಓಣಿ ಕಂಪಿಡುವ ತುಪ್ಪ, ಮೇಲಿಟ್ಟ ಕುರುಡೆ, ಮಾವಿನುಪ್ಪಿನಕಾಯಿ-ಇವೆಲ್ಲ ಭೂಮದಲ್ಲಿ ಭೋಜನ ಪದಾರ್ಥಗಳು, ಭೋಜನಕ್ಕೆ ಅಪ್ಪಗಳಲ್ಲಿ ಅವ್ವನಾದ ಹಿರಿಯವ್ವ ಎಲ್ಲರೂ ಬರಬೇಕು.

ಬೀಗರ ಅಪಹಾಸ

ಮದುವೆಯ ಮುಖ್ಯ ವಿಧಾನಗಳೆಲ್ಲ ಮುಗಿದ ಮೇಲೆ ಮದುಮಕ್ಕಳ ಮೆರವಣಿಗೆ ಹೊರಡುವದು. ಆ ಕಾಲಕ್ಕೆ ಬೀದಿಯಲ್ಲಿ ಎರಡೂ ಕಡೆಯ ಬೀಗರ ಪಕ್ಷದಿಂದ ಎರಡು ತಂಡಗಳಾಗಿ ಹೆಣ್ಣು ಮಕ್ಕಳು ಒಬ್ಬರನೊಬ್ಬರು ಅಪಹಾಸ ಮಾಡುವ ಹಾಡು ಹೇಳುತ್ತಾರೆ. ಅದು ಒಮ್ಮೊಮ್ಮೆ ಕದನದವರೆಗೂ ಹೋಗುತ್ತದೆ. ಆದರೆ ಭೂಮಾಪುಜಕರಾದ ಮೊದಲಿಗರು ಈ ತರದ ನಗೆಚಾಟಿಕೆಗೆ ಬೇಕೆಂತಲೇ ಅವಕಾಶವಿಟ್ಟಂತೆ ತೋರುತ್ತದೆ.

ಸರಕ್‌ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ || ಪ ||
ಆನಿ ಬರತಾವಂತ ಆರು ಬಣವಿ ಕೊಂಡೆ
ಆನೆಲ್ಲಿ ನಿಮ್ಮ ದಳವೆಲ್ಲಿ? ಬೀಗಾ |
ಬೋಳ್ಹೋರಿ ಮ್ಯಾಲ ಬರತಾರ ||೧||

ಬೀಗತೊಳ್ಳೆವಳಂತ ಅಡಗಿ ಮನೆಯ ಕೊಟ್ಟ
ಹೋಳೀಗಿ ಘಳಿಗೆ ಬಗಲಾಗ | ಅವರಣ್ಣ |
ನೀಡ್ಲಿಕ್ಕಿಲ್ಲೆಂದು ಕಸಗೊಂಡ || ೨ ||

ಎಲ್ಲಾರು ಕಟ್ಯಾರ ಮಲ್ಲಿಗ್ಹೂವಿನ ದಂಡಿ
ಬೀಗೂತಿ ಕಟ್ಯಾಳ ಹುಲ್ಹೊರಿಯ || ಅವರಣ್ಣ |
ಕುದಿರೀಗಿಲ್ಲೆಂದು ಕಸಗೊಂಡ || ೩ ||

ಕೂಸು ಒಪ್ಪಿಸುವುದು

ಮದುವೆಯ ವಿಧಾನಗಳಲ್ಲಿ ಕೊನೆಯದೇ ಕೂಸು ಒಪ್ಪಿಸುವದು. ವರನ ತಾಯಿ ತಂದೆಗಳಿಗೆ ಸರ್ವರ ಸಾಕ್ಷಿಯಾಗಿ ವಧುವಿನ ತಾಯ್ತಂದೆಗಳು ಮಗಳನ್ನು ಒಪ್ಪಿಸಿಕೊಡುವರು. ಆಗ ಹೇಳುವ ಹಾಡು ಕೇಳಿ ಕಣ್ಣೀರು ಸುರಿಸದವರು ಯಾರೂ ಇರಲಿಕ್ಕಿಲ್ಲ. ಕೂಸು ಒಪ್ಪಿಸುವ ಈ ವಿಧಾನಕ್ಕೆ ‘ನಾಗೋಲಿ ಚೌಗೋಲಿ’ ಎಂಬ ಇನ್ನೊಂದು ಹೆಸರೂ ಇದೆ.

ಒಂಬತ್ತು ತಿಂಗಳು ನಿನ್ನ ತುಂಬಿಕೊಂಡು ತಿರಗೇನ ||
ಹಂಬಲಿಸಿ ನಿನ್ನ ಹಡೆದೇನ ||
ಹಂಬಲಿಸಿ ನಿನ್ನ ಹಡೆದೇನ ಚಿತ್ರದಗೊಂಬಿ
ನಿನಗೊಪ್ಪಿಸಿ ಕೊಡಲ್ಹ್ಯಾಂಗ ||
ತೊಟ್ಟೀಲ ತೂಗಂದ್ರ ಸಿಟ್ಟೀಲೆ ಕೂಡೋಳ |
ಬಟ್ಟಲ ಬೆಳಗಾಕ ಅರಿಯಳ ||
ಬಟ್ಟಲ ಬೆಳಗಾಕ ಅರಿಯಾದ ಮಗಳನ್ನು ಕೊಟ್ಟೇನು ಮಾವನ ಕೈಯಾಗ ||

ಕಪ್ಪುರದ ಗುಡ್ಡಕ್ಕೆ ತಪ್ಪದಲೆ ಬೆಂಕಿ ಕೊಟ್ಟಂತೆ, ಅವರಪ್ಪನ ಹೊಟ್ಟೆ ತಳಮಳಿಸುತ್ತದೆ. ಸುಡುವ ಬೆಂಕಿಗೆ ಎಣ್ಣಿಕೊಡ ಸುರವಿದಂತೆ ಹಡೆದವ್ವನ ಹೊಟ್ಟಿ ತಳಮಳಿಸುತ್ತದೆ. ಸಣ್ಣ ತಮ್ಮಾಗಿದ್ದರೆ, ಮಾನ್ಯದ ಹೊಲದಲ್ಲಿ ಸರಿಪಾಲು ತಕ್ಕೊಂಡು ದೊರಿಯೇ ನನ್ನ ಹತ್ತರ ಇರುತ್ತಿದ್ದಿಯೆಂದು ತಮ್ಮನ ಕಸಿವಿಸಿ. ಕೊನೆಗೆ – “ನಮ್ಮ ಮಗಳಲ್ಲವ್ವ, ನಿಮ್ಮ ಮಗಳೀಕೆಂದು, ಛಂದಾಗಿ ಮಗಳನ್ನು ಸಲಹವ್ವ | ಛಂದಾಗಿ ಮಗಳನ್ನ ಸಲಹವ್ವ ಅನ್ನುವ್ವ ಅತ್ತೆವ್ವನ ಕೈಯಾಗ ಕೊಡಿರೆವ್ವ” ಎಂದು ಕುಸು ಒಪ್ಪಿಸಿಕೊಡುವರು.

ಇದಾದ ಮೇಲೆ ಬೀಗರು ತಮ್ಮೂರ ಹಾದಿ ಹಿಡಿಯುತ್ತಾರೆ. ಅಲ್ಲಿ ನಿಂತು ನೀರು ಕುಡಿಯುವದಿಲ್ಲ. ನಾಗಾಲೋಟವೇ “ನಾಗೋಲಿ ಚೌಗೋಲಿ ಆದ ಬಳಿಕ ನಾಯಿ ಸಹ ನೀರು ಕುಡಿಯುವುದಿಲ್ಲ” ಎಂಬ ಗಾದೆಯಿದೆ.

ಹೀಗೆ ಮದುವೆಯ ಹಾಡುಗಳು ನಮ್ಮ ದಾಂಪತ್ಯ ಜೀವನದ ವಿಧಾನವನ್ನು, ವಿವಿಧ ಛಂದಸ್ಸುಗಳಲ್ಲಿ ಮನೋಜ್ಞವಾಗಿ ರಸ ಸೂಸುತ್ತ ಬತ್ತದ ಸೆಲೆಗಳಾಗಿ ನಿಂತು ಅಜರಾಮರವೆನಿವೆ.