ಮಕ್ಕಳೆಂದರೆ, ಗೊಬ್ಬರವನ್ನು ಸಿದ್ಧಪಡಿಸಲು ನಿಸರ್ಗವು ನಿರ್ಮಿಸಿಕೊಟ್ಟ ಚಿಕ್ಕ ಯಂತ್ರಗಳೆಂದು ಇಂದಿನ ತುತ್ತುಬಡಿಕತನದ ಕಾಲದಲ್ಲಿ ಉತ್ತರ ಕೊಡಬಹುದಾಗಿದೆ. ಒಂಬತ್ತು ತಿಂಗಳು ಬಸುರು ಹೊತ್ತು ತಾಯಿಯು ಪಡುವ ಬವಣಿ, ಆಕೆ ಹೆರಿಗೆಯ ಕಾಲದಲ್ಲಿ ತಾಳುವ ನೋವು, ಇವುಗಳನ್ನೆಲ್ಲ ನೆನೆದರೆ ಮಗುವು ಅವ್ಯಕ್ತ ಲೋಕದ ಹೊಸ ಅತಿಥಿಯೆಂದು ಹೇಳದೆ ಗತಿಯಿಲ್ಲ. “ಮರದಾಗ ಮರಹುಟ್ಟಿ ಬಲಚಕ್ರಕಾಯಾಗಿ ತಿನ್ನಲಾರದ ಹಣ್ಣು ಬಲು ಸವಿ” ಎಂದು ಮೈಮರೆತು ನುಡಿಯುವದನ್ನು ಎಲ್ಲರೂ ಕೇಳಿದ್ದೇವೆ. ಬೇನೆ ತಿನ್ನುವಾಗ “ಬೇಡವ್ವ ಮಕ್ಕಳು” ಎಂದವಳೇ ಬಾಗಿ ಬಚ್ಚಲ ಹೋಗುವಾಗ “ನೂರೊಂದು ಫಲವ ಕೊಡು ಶಿವನೆ” ಎನ್ನುವಂತಾಗಬೇಕಾದೆ ಅದು ಆನಂದಪರ್ಯವಸಾಯಿಯಾದ ಸಾತ್ವಿಕ ಸುಖವಾಗಿರಲಾರದೆ?

ದೇವರ ಮನಿಯಾಗ ಜೋಡೆರಡು ದೀವಿಗೆ
ದ್ವಾರೇದ ಕೈಯ ತಲೆದಿಂಬ | ಇಟಗೊಂಡು |
ಕಂದನ ಹಡೆದು ಮಲಗ್ಯಾಳ ||

ಜೋಡಿ ದೀವಿಗೆ, ಕೈ ತಲೆದಿಂಬ, ಮಗ್ಗುಲಲ್ಲಿ ಕಂದ, ಮಲಗಿದ ಬಾಣಂತಿ ಈ ಎಲ್ಲ ಚಿತ್ರಗಳನ್ನು ಹೊಂದಿಕೊಂಡು ನೋಡಿದರೆ, ಕ್ರಿಸ್ತನೂ ಕ್ರಿಸ್ತನ ತಾಯಿಯೂ ಬಂದಿಳಿದಿದ್ದಾರೆಂದು ತೋರುವದು. ಪ್ರತಿಯೊಂದು ಕೂಸು ದೇವಶಿಶು! ಪ್ರತಿಯೊಬ್ಬ ತಾಯಿ ದೇವಮಾತೆ! ಒಬ್ಬ ಅತಿಥಿ ಬರುವನೆಂದರೆ, ಎರಡು ಗಿಂಡಿಗಳಲ್ಲಿ ಹಾಲು ತುಂಬಿ ಬಂದಿರುತ್ತವೆ. ಲೋಕಕ್ಕೇ ಅಪರಿಚಿತವಾದ ಶಿಶು ಬಂದರೂ ಅಗಾಧವಾದ ಸಲಕರಣೆ ಸಿದ್ಧವಾಗಿರುತ್ತದೆ. ಬಂದ ಶಿಶುವಾದರೋ ನವ ಮನುವಿಗೆ ಮರಿ. ಪರಿಸರವು ಬಡತನದ್ದೇ ಇರಲಿ, ಶ್ರೀಮಂತಿಕೆಯದೇ ಇರಲಿ ಅದೇ ದೇವ ಠೀವಿ. ಬತ್ತಲೆ ಬರಿಮೈ, ಹಾಲಿನ ನೋಂಪಿ, ಧ್ಯಾನಾವಸ್ಥೆ, ಮಾತಿಲ್ಲದ ಮೌನ ಇವೆಲ್ಲ ಶಿಶುವಿನ ಆತ್ಮನಿಮಗ್ನತೆಯನ್ನು ವ್ಯಕ್ತಪಡಿಸುವವು. ಅಳು-ನಗುಗಳೇ ಅದರ ಅವ್ಯಕ್ತ ಭಾಷೆ. ಅತ್ತಾಗ “ದೇವಲೋಕದ ಜಾಣಿ, ಭಾವಲೋಕದ ರಾಣಿ”ಯಂತೆ ತೋರುವದು. ನಕ್ಕಾಗ “ಯಾರವ್ವ ಇಂವ ಚಲುವ, ತನ್ನಷ್ಟಕ್ಕೆ ತಾನು ನೋಡಿ ನಗುವ” ಎನಿಸುವದು.

ಅಂಥ ದೇವಶಿಶುವನ್ನು ಕಂಡು, ದಿವ್ಯಕ್ಕೊಪ್ಪುವಂತೆ ತಾಯಿಯ ಮನಕರಗಿ, ಎದೆ ಕರಗಿ ಹಾಲಾಗಿ ಅತಿಥಿಗಳಿಗೆ ಬುತ್ತಿಯಾಗಿ ನಿಲ್ಲುತ್ತದೆ. ನೀರಲ್ಲಿ ಬೆರೆಸಿದ ಹಾಲಿನಂಥ “ನಿಟುಕು ನೀರಾಗಿರುವ” ಮೊಲೆಹಾಲು ಮಾತ್ರ ಶಿಶುವನ್ನು ಪೋಷಿಸುವದೆಂದು ತೋರಿದರೂ, ಅಷ್ಟರಿಂದಲೇ ಶಿಶು ಬೆಳೆಯಲಾರದು. ಪೋಷಣೆಯೊಂದಿಗೆ ಅದಕ್ಕೆ ಲಾಲನೆಯೂ ಬೇಕು. ಆ ಲಾಲನೆ ಇರುವದೆಂದೇ ಶಿಶು ತನ್ನ ಭಾವಲೋಕವನ್ನು ಮರೆತು ನಿದ್ರುಸುವದು. ಹಿಂಡನಗಲಿದ ಗಜವು ವಿಂಧ್ಯವನು ನೆನೆಯದೆ ತಾಯ ಮಡಿಲೇ ತವರೆಂದು ಭಾವಿಸುವದು. ಮುಗಿಲ ನಾಡಿಗಿಂತ ತೊಟ್ಟಿಲ ಬೀಡೇ ವಾಸಿಯೆಂದು ಬಗೆಯುವದು.

ಲಾಲೀಯ ಹಾಡಿದರ ಲಾಲೀಸಿ ಕೇಳ್ಯಾನ
ತಾಯಿ ಹಂಬಲ ಮರೆತಾನ | ಕಂದಯ್ಯ |
ತೋಳ ಬೇಡ್ಯಾನ ತಲೆಗಿಂಬ ||

ಹಾಲು, ಹಸಿವೆಯನ್ನು ಮಾತ್ರ ಹಿಂಗಿಸಬಹುದು. ಆದರೆ ಕಸವಿಸಿ ಇಂಗಿಸುವುದಕ್ಕೆ ಸವಿ ಲಾಲಿಯೇ ಬೇಕು.

ಜೋಗೂಳ ಹಾಡಿದರ ಆಗಳೇ ಕೇಳ್ಯಾನ
ಹಾಲ ಹಂಬಲ ಮರತಾನ | ಕಂದಯ್ಯಗ |
ಜೋಗೂಳದಾಗ ಅತಿ ಮುದ್ದ ||

ಜೋಗುಳದ ಲಾಲಿಯುಂಡು ಬೆಳೆಯುತ್ತಿರುವದರಿಂದಲೇ ಆ ಕಂದನ ತುಟಿ ಹವಳದ ಕುಡಿಯಾಗಿರುತ್ತವೆ. ತೀಡಿ ಮಾಡಿದ ಕುಡಿಹುಬ್ಬು ಬೇವಿನೆಸಳಿನಂತಿರುತ್ತವೆ. ಮಾವಿನಹಣ್ಣಿನಂಥ ಕಣ್ಣಿನ ನೋಟ ಶಿವನ ಕೈಯಲಗಿನಂತೆ ಹೊಳೆಯುತ್ತದೆ. ಮಗುವು ನೋಡುವುದಕ್ಕೆ ತೊಳೆದ ಮುತ್ತು. ಮುಖ ಬಂಗಾರದ್ದು. ಬಾಯಿಗೆ ಬಾಯಿ ಹಚ್ಚಿ ಮುದ್ದಿಸಬೇಕೆನ್ನಿಸುತ್ತದೆ. ಅಷ್ಟು ಸವಿ.

ಹೆಣ್ಣು ಹುಟ್ಟಿದ ಮನಿ ಹೆಗ್ಗಣ್ಹತ್ತಿದಾಂಗ
ಗಂಡಸಮ ಗಜಭೀಮ | ಹುಟ್ಟಿದರ |
ಚಿಲಕಿ ಚಿತ್ತರ ನಗತಾವ ||

ಹೀಗಿದ್ದರೂ “ಹೆಣ್ಣು ನಮಗ ರವಿಚಿನ್ನ ಎನಿಸುವದು. ಅದು ಕೂಸಲ್ಲ, ಕುಂದಣ ರಾಸಿ; ಭಂಗಾರ, ಬಗಲಲ್ಲೆತ್ತಿದರೆ ಭಂಗಾರ ಭಾರ. ಕಸ್ತೂರಿಯಂಥ ಬಾಲನು ಅತ್ತರೆ ಮುತ್ತು ಉದುರುತ್ತವೆ. ಹವಳದ ಜೊಲ್ಲು ಸುರಿಯುತ್ತದೆ.

ಕಂದಯ್ಯ ಅತ್ತರ ಕಣಗೀಲ ಕಾತಾವ
ಒಣಗೀದ ಬಾಳಿ ಚಿಗತಾವ | ಬಾಲನ |
ಬರಡಾಕಳೆಲ್ಲ ಹಯನಾಗೆ ||

ನಿರಾಭರಣ ಸುಂದರವಾದ ದೇವಶಿಶುವಿಗೆ ತಾಯಿಯಾದವಳು ತೊಡುವೊಡವೆಗಳಿಂದ ಇನ್ನಿಷ್ಟು ಸಿಂಗರಿಸುವಳು. ತಲೆತುಂಬ ಜಾವುಳವುಳ್ಳ ರಂಗಯ್ಯನಿಗೆ ಕಸ್ತೂರಿ ಕರಿಯಂಗಿ ತೊಡಿಸಿ ಅಂಗಳದಲ್ಲಿ ಬಿಟ್ಟರೆ ಆತನ ಆಟ ನವಿಲಾಟವನ್ನು ಹಂಗಿಸುವಂತೆ ವಿಪರೀತ. ಬೆಳೆದ ಜಾವುಳಕ್ಕೆ “ದೇಶಕ್ಕೇ ಜಾಣನಾದ ಅಕ್ಕಸಾಲಿ ಮಾಡಿದ ಅರಳೆಲೆಯೇ ಒಪ್ಪುವಂಥದು. ಕಾಡಿಗೆ ಹಚ್ಚಿದ ಕಣ್ಣು, ಬಂಗಾರದ ಬಾವುಲಿಯಿಂದ ಜಗ್ಗಿಬಿದ್ದ ಕಿವಿ, ಗುಲಗುಲಿಸುವ ಗೆಜ್ಜೆಕಾಲು ಒಂದು ಸೊಗಸಾದರೆ ಇನ್ನೊಂದು ಬೇರೆಯೇ ಇದೆ. ಮೈಗೆ ಹಸುರಂಗಿ, ಕಾಲಿಗೆ ಹಾಲ್ಗಡಗ ಸಾಕಾಗದೆ,

ಅರಳೆಲೆ ಬೇಕವ್ವ ಬೆರಳಿಗುಂಗುರ ಬೇಕ
ಕೊರಳೀಗಿ ಬೇಕ ಅಸಲಿಯ | ಕಂದನ |
ಕಾಲೀಗಿ ಬೇಕ ಗಿರುಗೆಜ್ಜಿ ||

ಇಷ್ಟು ಸಿಂಗಾರಗೊಂಡ ಕೂಸು ನಡೆದಾಡುವುದನ್ನು ನೋಡಬೇಕೆಂದು ತಾಯಿ ಹಂಬಲಿಸುತ್ತಾಳೆ. ನಡೆದಾಡುವಾಗ ಕಂದಯ್ಯನ ಬಲಗಾಲದಲ್ಲಿ ಪದುಮವನ್ನು ಕಂಡು ಬೇರೊಂದು ಒಡವೆಯ ಕೊರತೆಯನ್ನೇ ಬಗೆದಿರುತ್ತಾಳೆ. ಅದೇ ಕಾಲಿನ ಕಿರುಗೆಜ್ಜೆ! ಅದೂ ತನ್ನ ತಾಯಿ ಕೂಸಿನ ಅಜ್ಜಿ ಮಾಡಿಸಿ ಕೊಟ್ಟದ್ದಾಗಿರಬೇಕೆಂದು ಆಕೆಯ ಹಾರೈಕೆ.

ನಡೆದು ಬಾ ಕಂದಯ್ಯ ನಡಗೀಯ ನೋಡೇನ
ಪದುಮದ ಪಾದ ಬಲಗಾಲ | ಕಂದಯ್ಯಗ |
ಕಿರುಗೆಜ್ಜಿ ಇಡಿಸಿ ನೋಡೇನ ||

ನಡೆದಾಡೂ ಕಂದನ ನಡಗೀಯ ನೋಡೇನ
ಸಡಗರದಿಂದ ತೊಡಸೀನ | ಕಂದಯ್ಯಗ |
ಆಯಿ ಮಾಡಿಸಿಕೊಟ್ಟ ಗಿರುಗೆಜ್ಜಿ |

ಮಕ್ಕಳಿಗೆ ಮನಸ್ಸಿನ ತಕ್ಕ ವಸ್ತು-ಒಡವೆಗಳನ್ನು ಕೊಂಡು ತಂದು, ಇಡಿಸಿ ತೊಡಿಸಿ ಅಕ್ಕರೆಪಡುವ ಭಾಗ್ಯವಿರದಿದ್ದರೂ, ಹಾಗೆ ಇಡಿಸಿ ತೊಡಿಸಿದಂತೆ ಬಗೆದು ಹಾಡಿಕೊಳ್ಳುವದರಲ್ಲಿ ತಾಯಿಗೆ ಸುಖವುಂಟು; ಸಮಾಧಾನವೂ ಉಂಟು. ಯಾಕೆಂದರೆ-

ಪುಟ್ಹುಡುಗ ಪುಟ್ಹುಡುಗ ಯಾತರ ಪುಟ್ಹುಡುಗ
ಮಾಗಾಯಿಯಿಲ್ಲ ಮುರುವಿಲ್ಲ | ಪುಟ್ಹುಡುಗ್ಗ |
ಮಾಡಿಸೋರುಂಟು ಹಣವಿಲ್ಲ ||

ಲಾಲಿಯಾಗಲಿ ಜೋಗುಳವಾಗಲಿ ಹಾಡುವುದು ಅಳುವ ಕೂಸನ್ನು ಆಡಿಸಿ ರಂಬಿಸುವ ಸಲುವಾಗಿ, ಆದರೆ ತಾಯಿಯಾದವಳು ಕೂಸು ಅರಳುವ ಕಾರಣವನ್ನು ಕಂಡುಹಿಡಿಯಬಾರದೇ? ಮೈಗೆ ಸ್ವಾಸ್ಥ್ಯವಿಲ್ಲದಿರಬಹುದು, ಹಸಿದಿರಬಹುದು; ಇಲ್ಲವೆ ಅಳುವದಕ್ಕಾಗಿಯೇ ಅಳುತ್ತಿರಬಹುದು. ಆಡಿ, ಬೇಸತ್ತಾಗ ಕೂಸು ಅತ್ತು ದಣಿವಾರಿಸಿಕೊಳ್ಳುವದೆಂದು ಹೇಳುತ್ತಾರೆ. ನಗೆ ಉಲ್ಲಾಸದ ಕುರುಹಾದರೆ, ಅಳುವು ಬೇಸರದ ಚಿಹ್ನೆ. ಒಮ್ಮೊಮ್ಮೆ ಮಗುವು ಅಳುವ ಕಾರಣವೇ ತಿಳಿಯದೆ ತಾಯಿ ದುಗುಡಪಡುವದುಂಟು. ಆಗ ಯಾಕ ಅಳತಾನಂತ ಎಲ್ಲರೂ ಕೇಳುವರು. ಕಾಯದ ಹಾಲಿನ ಕೆನೆ ಬೇಡುವನೇ? ಎಂದೂ ಇಲ್ಲದೆ ಅತ್ತಾಗ-

ಅಳು ಬಂದು ಅತ್ತರಿಯ ಹಸ್ತು ಬಂದುಂಡರಿಯ
ಎತ್ತಿಕೊಳ್ಳೆಂಬ ಹಟವರಿಯ | ನನ ಕಂದ |
ಅಳದಾತ ಅತ್ತ ಬಗೆಯೇನ ||

ಅಳಬೇಡವೆಂದರೆ ಮತ್ತಿಷ್ಟು ಹಠಮಾಡಿ ಅತ್ತು, ಹವಳದ ಜೊಲ್ಲು ಸುರಿಸ ಹತ್ತಲು –ತನ್ನ ಮಾತು ತಿಳಿಯವೆಂದು ಹೀಗೆ ಮಾಡುತ್ತಿರಬಹುದೆ- ಎಂದು ತಾಯಿ ಶಂಕಿತಳಾಗುವಳು. “ಕುಂದದರಗಿಳಿಯೇ ಏಕೆ ಅಳುವಿ? ನಾಕು ಬಜಾರದ ನೆಲಗಬ್ಬಕೊಂಡು ಕೊಡುವೆ”ನೆಂದು ರಂಬಿಸಿದರೂ ಬಿಕ್ಕಿ ಬಿಕ್ಕಿ ಅಳುವದಾಗಲಿ, ಕೈ ಮಾಡಿ ಬೇಡುವದಾಗಲಿ, ಹಾಲಲ್ಲಿ ಸಕ್ಕರೆ ಹಾಕು ಎನ್ನುವ ಸಂಜ್ಞೆಯೇ ಎಂದು ಸಂಶಯಪಡುವಳು. ಅತ್ತು ಕಾಡಿ ಬೇಡಿದರೂ ಒಮ್ಮೊಮ್ಮೆ ಚಿತ್ರದ ಗೊಂಬಿ ನೋಡಿ ಗಪ್ಪುಚಿಪ್ಪಾಗಿ ಮಲಗುವನು. ಇನ್ನೊಮ್ಮೆ ಅಮರಾವತಿಯೆಂಬ ಎಳೆದೋಟದೊಳಗಿನ ಅರಗಿಳಿ ತಂದು ಕೊಡುತ್ತೇನೆಂದರೂ, ಚಂದಪ್ಪನನ್ನೂ ಅದರೊಳಗಿನ ಸುರುವೆಂದೂ, ಸಂಜೆಯ ಚಂದ್ರಮನ ತಂದು ನಿಲಿಸೆಂದೂ ಕರಕರೆ ಪಡುವನು. ಮತ್ತೊಮ್ಮೆ ಭಾವನು ಬಗಲಲ್ಲೆತ್ತಿಕೊಂಡರೂ, ಬಳಗವೆಲ್ಲ ಎತ್ತಾಡಿ ಮುದ್ದಿಸಿದರೂ ಮಗುವಿನ ಆಕ್ರೋಶ ಉಳಿದೇ ಇರುತ್ತದೆ. ಮಗುದೊಮ್ಮೆ ಕವಳಿಯ ಹಣ್ಣನ್ನೋ, ತುಂಬುಚ್ಚಿ ಬೀಳುವ ಮಗಿ ಮಾವನ್ನೋ ಬೇಡಿ ಅಳುವನೆಂದುಭಾವಿಸಿ-ಅಸಾಧ್ಯಕ್ಕೆ ತುಸು ರೇಗಿದರೂ ತೂಕ ತಪ್ಪಗೊಡದೆ ಲಾಲಿಸುತ್ತಾಳೆ.

ಅತ್ತಾನ ಕಾಡ್ಯಾನ ಮತ್ತೇನು ಬೇಡ್ಯಾನ
ಮೆತ್ತ ಮೆತ್ತನ ಧಿಮಕವ | ಕೊಟ್ಟರ |
ಗಪ್ಪುಚಿಪ್ಪಾಗಿ ಮಲಗ್ಯಾನ ||

ಅತ್ತರೂ ಅಳಲಿ, ಮನೆಗೆಲಸ ಕೆಟ್ಟರೂ ಕೆಡಲಿ- ಈ ಕಂದನಂಥ ಮಕ್ಕಳು ಮನೆತುಂಬ ಇರಲೆಂದೇ ತಾಯಿ ಬಯಸುವಳು. “ಕಂದವ್ವ ಕಾಡಿದರೆ ರಿಂದವ್ವ ಮನೆಗೆಲಸ” ಎನ್ನುವದು ತಿಳಿದಿದ್ದರೂ, ಸಕ್ಕರೆಯ ಸವಿಗಾರಿಕೆಯಲ್ಲಿ ವೀಳ್ಯೆದ ರುಚಿಗಾರಿಕೆಯಲ್ಲಿ ಮಗನ ವೀರಭದ್ರಾವತಾರವನ್ನು ಮರೆಯುವಳು. ನಾಲಗೆಯ ಮೇಲೆ ಸರಸ್ವತಿ ನೆಲೆಸಿರುವ ಬಾಲಚಕ್ರವತಿಯಂಥ ಶಿಶು, ತೆಂಗಿನ ಕಾಯಿಯ ತಿಳಿನೀರಿನಿಂದ ತೊಳಯಲರ್ಹವಾದ ಬಂಗಾರದ ಮಾರಿಯ ಮಗು, ಮಾರಾಯರ ಗೊಡವೆ ಮರೆಸಿದ ಮಾಣಿಕದಂಥ ಕಂದ. ಕಂಡವರು ಕೈಮಾಡಿ ಕರೆಯುವ ಚಲುವಿನ ಕೂಸು. ಆದರೇನು? ಓಣ್ಯಾಗ ಅವಿಚಾರಿ, ಮನಿಯಾಗ ರಿಪಿಗೇಡಿ, ಆಡಹೋದಲ್ಲಿ ಕಿಡಿಗೇಡಿ. ಇಂಥವನನ್ನು ಹೇಗೆ ಸಂಬಾಳಿಸಲಿ ಎಂದು ಹಡೆದವ್ವನನ್ನು ಕೇಳುವಳು. ಹಡೆದವ್ವನನ್ನು ಕರೆದು ತೋರಿಸುವಳು.

ಹಾರೈಸಿ ಹಡೆದವ್ವ ಒಳಗೇನು ಮಾಡೂತಿ
ನೋಡುಬಾ ತಾಯಿ ಮಗನಾಟ | ನನ ಬಾಲ |
ಗುಲಗಂಜಿ ಗಿಡಕ ಗುರಿಯಿಟ್ಟ ||

ಮತ್ತೊಮ್ಮೆ

ಚಿಕ್ಕ ನನ್ನ ಕಂದಯ್ಯ ಚಿಣಿದಾಂಡು ಅಡ್ಯಾನ
ಚಿಕ್ಕ ಹೊಳಿ ದಾಟಿ ತೊರೆಗಲ್ಲ | ಬಾಲ್ಯಾರ |
ಚಿತ್ರದ ಕೊಡಕ ಚಿಣಿ ಒಗೆದ ||

ಮಗುದೊಮ್ಮೆ

ಗುಜ್ಜಿ ನನ ಕಂದಯನ ಗೆಜ್ಜಿ ಸಪ್ಪಳ ಕೇಳಿ
ನಿಬ್ಬಣದೆತ್ತು ಬೆದರ್ಯಾವ | ಬೆಟ್ಟ ಸೇರಿ |
ಮದ್ಯಾಣ ಮೇವ ಮರತಾವ ||

ಲಾಲಿಯ ಹಾಡುಗಳು ಮಕ್ಕಳನ್ನು ಸಮಾಧಾನಪಡಿಸುವ ಸಲುವಾಗಿ ಹುಟ್ಟಿಸಿಕೊಂಡಂತೆ ಕಂಡರೂ, ಅವು ಇನ್ನೊಂದು ವಿಧದಲ್ಲಿ ತಾಯಿಯ ಸಮಾಧಾನವನ್ನೂ ಉದ್ದೇಶಿಸಿರುವಂತೆ ತೋರುತ್ತದೆ. ತಾಯಿ ಆಸರಿಕೆ ಬೇಸರಿಕೆ ಯಾರಿಂದ ಕಳೆಯಬೇಕು? “ಕೂಸ ನನ್ನ ಶರಣಯ್ಯ ತೊಡಿಮ್ಯಾಲ ಆಡಿದರ ಬಂದ ಬ್ಯಾಸರಿಕಿ ಬಯಲಾಗಿ” ಎಂದು ಆಕೆಯೇ ಒಪ್ಪಿಕೊಳ್ಳುತ್ತಾಳೆ. ಕೂಸು ಆಡುವಾಗ ಸುತ್ತಲೂ ಹಿಗ್ಗು ಸೂಸುವದು. ಆದರೆ ಅಳುವು, ಹಟ, ಚಲ್ಲುವರಿದಾಗಲೂ ತಾಯಿ ಹಾಡುತ್ತಲೇ ಅದನ್ನು ಸಹಿಸುವಳು. ಆಕೆ ಹರುಷದಲ್ಲಿ ಆನಂದವನ್ನು ಉಕ್ಕಿಸುವಂತೆ ಬೇಸರದಲ್ಲಿಯೂ ಆನಂದವನ್ನು ಮಿಕ್ಕಿಸುವಳು. ಹಾಲು ಬೇಡಿ ಅತ್ತು, ಕೋಲುಬೇಡಿ ಕುಣಿದು, ಮೊಸರು ಬೇಡಿ ಕೆಸರು ತುಳಿದು, ಕುಸಲದ ಗೆಜ್ಜೆ ಕೆಸರು ಮಾಡಿಕೊಂಡರೂ ತಾಯಿಯ ಹಿಗ್ಗು ಕುಂದದು. ಕೊಳೆ ಒರಸಿ ಸೆರಗು ಮಾಸದು. ಒಳಹೊರಗು ಆಡುವ ಕೂಸಿನಿಂದ ಬೀಸಣಿಕೆ ಗಾಳಿ ಸುಳಿಯುವದೆಂದು ಬಗೆಯುತ್ತಾಳೆ.

ಚೆಯ್ಯವ್ವ ಚಿಂಚುಣಿ ಆಡಿಬಾ ಹೊಲದಾಗ
ಮೆಯ್ದು ಬಾ ಕಬ್ಬ ಕವಳೀಯ | ನನ ಬಾಗಿಲ |
ಓದಿ ಬಾ ಚಿನ್ನ ಗಿಣಿಯಾಗಿ ||

ಎಂದು ಹಾಡಿ ನಲುಮೆಯ ಚಿಲುಮೆಯನ್ನು ಚಿಮ್ಮಿಸುತ್ತಾಳೆ. ಗರತಿಗೆ ಮೂರು ಅಪೇಕ್ಷೆಗಳಿರುತ್ತವೆಂದು ಕಂಡುಬರುತ್ತದೆ. ಮುತ್ತಯ್ದೆತನ, ಮಕ್ಕಳು, ಮಾರಾಯರ ಮುಂದೆ ಮರಣ ಈ ಮೂರರಲ್ಲಿ ಮೊದಲಿನವೆರಡು ಏಕಕಾಲಕ್ಕೆ ದೊರಕೊಂಡರೆ ತಾನು ಮಹಾ ಭಾಗ್ಯವತಿಯೆಂದೇ ಭಾವಿಸುವಳು. ಗಂಡನನ್ನು ಮಗು ಹಿಂಬಾಲಿಸಿದ ಪ್ರಸಂಗವನ್ನು ನೆನೆದು, ಲಾಲಿಯಲ್ಲಿ ಹರುಷದ ಹೊಳೆಯನ್ನು ಹರಿಯಿಸಿಬಿಡುವಳು. ಹೇಗೆಂದರೆ,

ಗಾಳಿದೇವರ ಕೂಡ ಗೂಳಿ ದೇವರು ಬಂದ
ಆಕಳ ಹಿಂದ ಕರ ಬಂದ | ನನ ಮನಿಯ|
ಮಾರಾಯರ ಹಿಂದ ಮಗ ಬಂದ ||

“ತಾಯಿಯಿದ್ದರೆ ತವರು ಹೆಚ್ಚು, ತಂದೆಯಿದ್ದರೆ ಬಳಗ ಹೆಚ್ಚು” ಎಂದು ತಿಳಿಕೊಂಡಂತೆ ಇಲ್ಲವೆ ಅದಕ್ಕಿಂತ ಹೆಚ್ಚಾಗಿ ಅಂದರೆ “ಸಾವಿರಕ್ಕೆ ಹೆಚ್ಚು ಪತಿಪುರುಷರ, ಹೊಟ್ಟೆಯ ಮಾಣಿಕದ ಹರಳು ಮಗ ಹೆಚ್ಚು” ಎಂದೂ ತಿಳಕೊಂಡಿರುತ್ತಾಳೆ. ಅಂತೆಯೇ ಮಗುವಿನ ಕಿಡಿಗೇಡಿತನವೂ ಅವಳಿಗೆ ಮುದ್ದಿನ ವಿಷಯವೇ.

ಸಾರಿಸಿದ ಮನಿಯಾಗ ನೀರ್ಯಾರು ಚಲ್ಯಾರ
ಪಾರಿವಾಳಾಡಿ ಗಿಣಿಯಾಡಿ | ಹಡೆದವ್ನ |
ಮೊಮ್ಮಕ್ಕಳಾಡಿ ಮನಿಗ್ಯಾರ ||

ಮಗುವನ್ನು ಲಾವಂಗದರಸನೆಂದು ಬಗೆದು ಹಾಡುವಳು.

ಏಳುಸತ್ತಿನ ಕ್ವಾಟಿ ಎಳಿಯ ಬೆಳದಿಂಗಳ
ಏರಿ ಬಂದಾಳ ನಿನಗಾಗಿ | ನನ ಬಾಳ |
ಲಾವಂಗದರಸ ಹೊರಹೊಂಡ ||

ತಲೆ ಬೇನೆಯೆದ್ದು ಅಳುವ ನವಿಲುಬಣ್ಣದ ಪಕ್ಷಿಯು ತನ್ನ ಕಂದನ ಚಲುವಿಕೆಯನ್ನು ಕಂಡು ನಗುತ್ತಿತ್ತೆಂದು ಹೇಳುವ ತಾಯಿಯು; “ಅಂಗಳದಲ್ಲಿ ಹುಟ್ಟಿದ ಮಲ್ಲಿಗೆ ಗಿಡವನ್ನು ಝಲ್ಲಿಸಬೇಡ ಗಿಳಿರಾಮಾ. ನಿಮ್ಮಂಥ ಬಾಲರು ಜಳಕಕ್ಕೆ ಹೋಗಿದ್ದಾರೆ” ಎಂದು ನುಡಿವಕ್ಕಿಯೊಡನೆ ಮಾತಾಡುವಳು. “ಬಾಲನಿನ ಭಾಷೆ ತಿಳಿಯವೆಂ”ದು ಬೆಕ್ಕಸಬಡುವ ಜನನಿಯೇ, ಮಗುವಿನಬಾಯಿಗೆ ಬಾಯಿಟ್ಟು, ಮುದ್ದಿಸಿ ಮುದ್ದಿಸಿ ಮಾತು ಮುದ್ರಿಸಿಬಿಡುತ್ತಾಳೆ. ಎಲ್ಲ ಭಾಷೆ ಗೊತ್ತಿದ್ದರೂ ತಾಯಿಗಾಗಿ ಆಕೆಗೆ ಬರುವ ಒಂದು ಭಾಷೆಯನ್ನೇ ಮಗು ಆಡುತ್ತದೆನ್ನುವಂತೆ ತಾಯ್ನುಡಿಯನ್ನು ಕಲಿತು ಆಡುತ್ತದೆ. ದೃಷ್ಟಿ ತಗುಲಿದಾಗ ಮುತ್ತಿನದೃಷ್ಟಿ ತೆಗೆಯಲಿಕ್ಕೂ ತಾಯಿ ಸಿದ್ಧಳು. ಯಾಕೆಂದರೆ “ಕೂಸ ನನ್ನ ಕಂದಯ್ಯ ಕೇಸ ಬಿಟ್ಟಾಡಾಗ | ದೇಶದಿಂದೆರಡು ಗಿಣಿ ಬಂದಿ | ಕೇಳ್ಯಾವ | ಕೂಸ ನೀದಾರ ಮಗನೆಂದು” ಇಂಥ ಮಗುವಿಗೆ ದೃಷ್ಟಿ ತಾಗುವದು ಒತ್ತಟ್ಟಿಗಿರಲಿ, ಬಾಲ ಹನುಮನ ಮುಂದೆ ಬಾಗಿ ಚಂಡಾಡುವಾಗ ಬಾವುಲಿಗಿವಿಯ ಬಾಲನನ್ನು ಕಂಡ ಬಾಲೆಯರು ಬಸಿರು ಬಯಸಲೂಬಹುದು. ಬಾಗಿಲ್ಲಲಾಡುವ ಮಗನ ಮಾಟ, ಕರಕೇರಿ ತೇರಿನಂತೆ ಬಲು ಮಾಟ. ಆದ್ದರಿಂದ-

ಸಣ್ಣಂಗಿ ತೊಡದೀರೋ ಸರಪಳಿ ಹಾಕದಿರೋ
ಚನ್ನಿಗ ನೀ ಇಲ್ಲಿ ಬರದೀರೋ | ನಿನ ಕಂಡು |
ಹೆಣ್ಣಿಲ್ದ ಅಮ್ಮಮರಗ್ಯಾಳು ||

ಎಂದು ಎಚ್ಚರಿಸುವಳು. ಹೀಗೆ ತಾಯಿಯು ಮಗುವನ್ನು ರಂಬಿಸುವ ಭರದಲ್ಲಿ ತನ್ನ ಮನಸ್ಸನ್ನು ತನಗೇ ತಿಳಿಯದಂತೆ, ಸಮಾಧಾನಪಡಿಸಿಕೊಳ್ಳುತ್ತಾಳೆ. ಶಿಶುವು ಹಾರ್ದಿಕವಾದ ಹರಕೆಯುಂಡು ಪುನೀತವಾಗುತ್ತದೆ.

ಅನಂತ ಆಕಾಶದಲ್ಲಿ ತೇಲುವ ಚತುರ್ದಶ ಭುವನಗಳಿರುವಂತೆ, ತೊಟ್ಟಿಲು ಒಂದು ಮನೆಯ ಮುಗಿಲಿನ ಅಂತರದಲ್ಲಿ ತೇಲುತ್ತಿರುತ್ತದೆ. ಚತುರ್ದಶ ಭುವನಗಳಲ್ಲಿಯ ಭೂತಮಾತ್ರಗಳೆಲ್ಲ ಅದ್ಯಾಶಕ್ತಿಯ ಪಾಲನೆಯನ್ನುಂಡು, ಆಕೆಯ ಲಾಲನೆಯಲ್ಲಿ ಮಿಂದು ಜೀವನಶಕ್ತಿಯನ್ನು ಬೆಳೆಸುವಂತೆ, ತೊಟ್ಟಿಲು ತೂಗುವ ಕೈ ನಾಡ ತೂಗಿಸಬಲ್ಲದೆಂದು ಹೇಳುತ್ತಾರೆ. ತಾಯಿಯ ಕಣ್ಣೆಂಜಲವಾದ ಕಾಡಿಗೆಯಿಂದಲೂ, ಬಾಯೆಂಲಜವಾದ ವಿಳ್ಯದಿಂದಲೂ ಕಂಡು ನುಡಿಯುವ ಕನ್ನಡಿಗನಾಡಗಬೇಕಾಗಿರುವಂತೆ, ಲಾಲಿಯನ್ನಾಲಿಸಿ, ಲಲ್ಲೆಯಿಂದ ಬೆಳೆದು ಮಗು ಮಾನವನ ತಂದೆಯಾಗಿ ನಿಲ್ಲಬೇಕಾಗಿದೆ. ಮಗುವನ್ನು ಮಾನವನ ತಂದೆಯನ್ನಾಗಿಸುವ ಚೋದ್ಯವು ಮನೆ ಮನೆಯಲ್ಲಿಯೂ, ಹರಕು ಗುಡಸಲಿನ ಮುರುಕು ತೊಟ್ಟಿಲಲ್ಲಿಯೂ ಲಾಲಿಯ ಸಂಜೀವನದ ಮುಖಾಂತರ ಸಾಗಿಯೇ ಇದೆ.