ಕಥೆಯಿಂದ ವಾಣಿಯ ಸಾರ್ಥಕತೆ

ತನ್ನ ಹೊಟ್ಟೆಯೊಳಗಿನ ಭಾವವನ್ನು ಕಥನ ಮಾಡುವುದಕ್ಕಾಗಿ ಮನುಷ್ಯನು ಮಾತಡತೊಡಗಿದನು. ಮಾತು ನಡೆದಲ್ಲೆಲ್ಲ ಸಂಪೂರ್ಣ ಕಥೆ ಕಾಣದಿದ್ದರೂ ಕಥೆಯ ಅಂಗೋಪಾಂಗಗಳಾದರೂ ಕಂಗೊಳಿಸುತ್ತವೆ. ಮಾತಿನಲ್ಲಿ ಕಥೆ ಮೊಳೆತು, ಸಂವಾದದಲ್ಲಿ ಚಿಗಿತು, ಹಾಡಿನಲ್ಲಿ ಕುಡಿವರಿದು, ಪುರಾಣದಲ್ಲಿ ಹೂತು, ತತ್ವಜ್ಞಾನದಲ್ಲಿ ಸಫಲವಾಗುವದರಿಂದ “ಕತೆಗಳಿಗೆ ಇತಿಯಿಲ್ಲ, ಕತೆಗಳಿಗೆ ಮಿತಿಯಿಲ್ಲ, ಕತೆಯಿಲ್ದ ಜಗವಿಲ್ಲ”ವೆಂದು ಕಥಿಸದೆ ಗತ್ಯಂತರವಿಲ್ಲ. ಜನಾಂಗವು ಸತ್ವಸಂಪತ್ತಿನಿಂದ ಬದುಕಿದೆ. ಆದರೆ ಸತ್ವಸಂಪತ್ತು ಹಿಮಗಿರಿಯಂತೆ ಹಿಮಗಿರಿ ಕರಿ ನೀರಾದರೆ ಪ್ರಾಣಿಕೋಟಿಗೆ ಸುಲಭ ವಸ್ತುವಾಗುವದು. ಮಹಾಕಾವ್ಯವು ಕಥೋಪಕಥನಗಳ ಜಾಳಿಗೆಯಿಂದ ಹೆಣೆದಿರುತ್ತದೆ. ಕೀರ್ತನವು ಕಥೆಯ ಏರಿಳಿತದಲ್ಲಿಯೇ ಹೆಜ್ಜೆ ಹಾಕುತ್ತದೆ. ನಾಟಕವಂತೂ ಕಥೆಯ ಅಸ್ತಿಪಂಜರದಿಂದಲೇ ರೂಪುಗೊಂಡಿರುತ್ತದೆ. ಹಾಡು ಲಾವಣಿಗಳಲ್ಲಿ ಕಥೆಯನ್ನಾಗಲಿ, ಕಥಾಂಗವನ್ನಾಗಲಿ ಕೇಳುವೆವು. ಗಾದೆ, ಒಗಟು, ಲಾಲೆ, ಲಲ್ಲೆನುಡಿ ಇವೆಲ್ಲ ಕಥಾಬೀಜಗಳುಳ್ಳ ತೆನೆಗಳಾಗಿವೆ. ಇಬ್ಬರು ಸೇರಿದಲ್ಲಿ ಕಥೆಕಾಣಿಸಿಕೊಳ್ಳುತ್ತದೆ. ಆ ಇಬ್ಬರು ತಾಯಿ ಮಕ್ಕಳಿರಲಿ, ಮಿತ್ರರಿರಲಿ, ಅಣ್ಣ-ತಮ್ಮಂದಿರಿರಲಿ, ಅಕ್ಕ-ತಂಗೆಯರಿರಲಿ ಅಲ್ಲಿ ಕಥೆಯ ಕುಡಿಯುದಾಂಗುಡಿಯಿಟ್ಟು ಹಬ್ಬತೊಡಗುವದು. ಅಷ್ಟೇ ಏಕೆ, ಆ ಇಬ್ಬರು ಅಪರಿಚಿತರಿರಲಿ, ಅನ್ಯ ಭಾಷಿಗರಿರಲಿ, ಭಿನ್ನ ಜಾತಿಯವರಿರಲಿ, ಲಿಂಗದವರಿರಲಿ ಬಹಳ ಭಿನ್ನವೇಕೆ ಒಬ್ಬರನೊಬ್ಬರು ಕತ್ತು ಹಿಸಕುವ ಜಾತವೈರಿಗಳೇ ಅವರಿಬ್ಬರಿದ್ದರೂ ಅಲ್ಲೊಂದು ಕಥಾವಲ್ಲರಿಯು ಮುಂದುವರಿದು, ಕೈಗೆ ಕೈ ಹತ್ತುವ ಮೊದಲು ಎದುರಾಳಿಯನ್ನು ಅಲ್ಲೊಂದು ಕಥಾವಲ್ಲರಿಯು ಮುಂದುವರಿದು, ಕೈಗೆ ಕೈ ಹತ್ತುವ ಮೊದಲು ಎದುರಾಳಿಯನ್ನು ಸ್ಪರ್ಶಿಸುತ್ತದೆ. ಇನ್ನೊಂದು ಕಡೆಗೆ ನಿರ್ಜೀವ ವಸ್ತುವನ್ನು ಪ್ರೀತಿಸಿ ತನ್ನ ಕಥೆಯನ್ನು ಕೇಳಹಚ್ಚುವ ಪರಿಶುದ್ಧ ಹೃದಯದ ಹಸುಳೆಯನ್ನು ಕಾಣುವೆವು. “ನನ್ನ ಕೂಸ ಮಾಯದ ಗಿಣಿಯೆ | ಕೈಯಾಗ ಬಂಗಾರ ಚಿಣಿಯೆ | ಎಲ್ಲಾಡಿ ಬಂದೆ ಅರಗಿಣಿಯೇ | ನನ್ನ ಕೂಸ ಮಾಯದ ಗಿಣಿಯೆ||” ಎಂಬ ಕಥೆಯ ಮೊದಲ ಮೆಟ್ಟನ್ನು ಹಾಡಿನ ರೂಪದಲ್ಲಿ ಹೊರಡಿಸುವದನ್ನು ಕೇಳಲಾರದವರಾರಿದ್ದಾರೆ? “ಬಂಗಾರದ ಗುಬ್ಬಿ ಬಾಲೀಲೆ ನೀರು ಕುಡಿಯುತ್ತದೆ” ಎನ್ನುವ ಒಡಗತೆಯು ಪಣತಿಯ ದೀಪಕ್ಕೂ ಜೀವ ತುಂಬುವ ಕಥಾಬೀಜವಾಗಿದೆ. ಆದರೆ ವಿಂಗಡಿಸುವದೇ ನಮ್ಮ ಪಂಗಡವಾದುದರಿಂದ ವಸ್ತುವಿನಿಂದಲೇ ತುಂಬಿಕೊಂಡಿದ್ದು ಕಥೆಯೆಂದೂ, ವಸ್ತುವು ಚಿಕ್ಕದಾಗಿ ರಸವಿಶೇಷದಿಂದ ತುಂಬಿಕೊಂಡ ಕಥನವು ಸಣ್ಣ ಕಥೆಯೆಂದೂ, ಅದೇ ಹಾಡಾಗಿದ್ದರೆ ಭಾವಗೀತೆಯೆಂದೂ, ನಾಟಕವೆಂದರೆ ಏಕಾಂಕವೆಂದೂ ವರ್ಗೀಕರಿಸಿದ್ದೇವೆ. ಹೊಟ್ಟೆಯೊಳಗಿನ ಭಾವವು ಮಾತಿನಿಂದ ಹೊಂಟರೆ ಅದು ಕಥೆಯೆನಿಸುವಂತೆ, ಹಾಡಿನಲ್ಲಿ ಹೊರಟರೆ ಭಾವಗೀತೆಯೆನಿಸುತ್ತದೆ.

ಕಥೆಯ ವ್ಯಾಪ್ತಿ

ಜಗತ್ತಿನ ಸಮಸ್ಯೆಯನ್ನು ಎತ್ತಿ ಕೇಳುವ ಪಾರ್ವತಿಗೆ ಶಿವನು ಕಥೆಯಿಎಂದಲೇ ಉತ್ತರವನ್ನೀಯುವನೆಂದು ಕೇಳುತ್ತೇವೆ. ದಿ. ಜಗದೀಶಚಂದ್ರರ ‘ಅವ್ಯಕ್ತವು’ ರಹಸ್ಯ ಕಥೆಯೆಂದು ಒಪ್ಪಬೇಕು. ಶ್ರೀ ಜವಾಹರಲಾಲರ ‘ಸೃಷ್ಟಿಯ ಹೊತ್ತಿ’ಯೊಂದು ಜಡಜಗತ್ತಿನ ಆತ್ಮಕಥೆಯಲ್ಲದೆ ಇನ್ನೇನು” ಸಾಧಕನ ಹೋರಾಟ, ಯೋಧನ ಸಾಹಸ, ಸಂಚಾರಿಯ ಪ್ರವಾಸ ದುಃಖಿಯ ವನವಾಸ, ಇಷ್ಟಸಿದ್ದಿಯ ಪ್ರಾಪ್ತಿ ಮೊದಲಾದವುಗಳ ನಿರೂಪಣೆಗೆ ಕಥೆಯೇ ದಾರಿ. ಬಾಲಕರು ನಿರ್ಜೀವ ವಸ್ತುಗಳ ಚಲನವಲನ ಕಥೆಯನ್ನು ಮೆಚ್ಚಿದರೆ, ತರುಣರು ಸಾಹಸ-ಶೃಂಗಾರ ಕಥೆಗಳಿಗೆ ಮಾರುಹೋಗುತ್ತಾರೆ. ಮುದುಕರು ನೀತಿಯ ಕಥೆಗಳಿಗೆ ಮನಸೋಲುತ್ತಾರೆ. ಕಥೆ ಕೇಳುವದಕ್ಕೆ ಇಷ್ಟವಾಗಿರುವಂತೆ ಹೇಳುವದಕ್ಕೂ ಇಷ್ಟವಾಗಿರುತ್ತದೆ. ಕೆಲಸ ಮಾಡಿ ದಣಿದು ಒತ್ತಟ್ಟಿಗೆ ಕುಳಿತಾಗ, ಹೊತ್ತು ಹೋಗದೆ ಕಟ್ಟಾದಾಗ, ಮಕ್ಕಳನ್ನು ಒತ್ತಿಟ್ಟಿಗೆ ಕುಳ್ಳಿರಿಸುವಾಗ, ಕಥೆಯ ಉಪಾಯವನ್ನು ಮಾಡುತ್ತಿರುವದನ್ನು ಬಲ್ಲೆವು. ಮಕ್ಕಳು ಗುಬ್ಬವ್ವ-ಕಾಗವ್ವಗಳ ಕಥೆಯನ್ನು ಹೇಳಲು ಅಡಗೂಲಜ್ಜಿಗೆ ದುಂಬಾಲ ಬೀಳುತ್ತವೆ. ಹೆಣ್ಣು ಮಕ್ಕಳು ನೀರಿಗೆ ಹೋದಾಗ, ಸಂಧಿ ಸಿಕ್ಕಿತಂದು ಮನೆತನದ ಸಣ್ಣ ಮಾತನ್ನೇ ಕಥೆ ಮಾಡಿ ಹೇಳುತ್ತಾರೆನ್ನುವ ಮಾತು ಸುಳ್ಳಲ್ಲ. ಕೇಳುವ ಬಾಲಕರಿಗೆ ಬೇಕಾಗಿದ್ದು, ಅಜ್ಜಿಗೆ ಬೇಸರ ಬಂದಿದ್ದರೆ “ಕಥೆಯನ್ನು ಕಳ್ಳರೊಯ್ದರು ನಿಮ್ಮತ್ತೆಯನ್ನು ಡೊಂಬರೊಯ್ದರು” ಎಂದು ಹಾರಿಸಿಬಿಡುವವರೆಗೆ ಕಥಾಶ್ರವಣ ಸಾಗಿತ್ತೆಂದು ಎಣಿಸಬಹುದು. “ಅಯ್ಯನ ಜೋಳಿಗೆಯೊಳಗಿನ ಹೋಳಿಗೆಯಿಂದ ಆರಂಭವಾಗುವ ಮಾತಿನ ಜೋಡಣೆಯಾಗಲಿ, “ಕತಿಕತಿ ಕಾರಣ ಮುದಕೀ ಹೂರಣ ತಿಂದ್ಯೋಚಲ್ಲಿದ್ಯೋ?” ಎಂದು ಪ್ರಶ್ನಿಸುವ ಕೂಡಣೆಯಾಗಲಿ ಕಥಾಶ್ರವಣದ ಮಂಗಳಾರತಿ ಇದ್ದಂತಿದೆ. ಒಟ್ಟಾರೆ ಹರಿಹರ ಕವಿಯು ವರ್ಣಿಸಿದ ಶ್ರೀ ಬಸವಣ್ಣನವರ ಪುಣ್ಯ ಕೀರ್ತಿಲತೆ ಹಬ್ಬಿ ವ್ಯಾಪಿಸಿದಂತೆ ನಮ್ಮ ಕಥೆಗಳ ವ್ಯಾಪ್ತಿಯೆಂದು ಇಲ್ಲಿ ಹೇಳಿದರೆ ಸಾಕು. ಜನಪದ ಕೀರ್ತಿಲತೆಯು ಹೇಳಿದೆಯೆಂದರೆ-ಉರಗೇಂದ್ರಲೋಕದಲ್ಲಿ ಅದರ ಬೇರು, ದಿಕ್ಕುಗಳನ್ನು ಮುಸುಕಿ ನರೇಂದ್ರ ಲೋಕದಲ್ಲಿ ಅದರ ಹಬ್ಬುಗೆ; ಅಮರೇಂದ್ರ ಲೋಕದಲ್ಲಿ ಅದರ ಕುಸುಮಸೌರಭಪೂರ್ಣತೆ; ರುದ್ರಲೋಕದಲ್ಲಿ ಅದರ ಅಮಲವಾದ ಸುಧಾ ಸಫಲತೆ.

ಜನಪದ ಕಥೆಗಳಲ್ಲಿ ಬರುವ ಪಾತ್ರಗಳು

ಜನಪದ ಸಾಹಿತ್ಯವು ಕೆಳಗಿನ ಪ್ರಕೃತಿಯಲ್ಲಿ ನಿಂತು ಜೀವನ ನಡೆಸುವ ಸಾಮಾನ್ಯ ಜನರ ತತ್ವಜ್ಞಾನವಾಗಿದೆ. ಮಹಾಕಾವ್ಯವು ಪರಾಪ್ರಕೃತಿಯ ಬಾಳಿನ ಕಡೆಗೆ ಬೆರಳುಮಾಡಿ ತೋರಿಸುತ್ತದೆ. ಜಾನಪದ ವೇದವು ಅಪರಪ್ರಕೃತಿಯ ಜನಸಾಮಾನ್ಯರಿಗೆ ಬಾಳಿನ ತುತ್ತು ನೀಡಿ ಸಲಹುತ್ತದೆ. ಕಲ್ಲು, ಮಣ್ಣು, ಗುಡ್ಡ, ಮುಗಿಲು, ಮೋಡ, ಹೊಳೆ, ಮರ, ಪಶು, ಪಕ್ಷಿ ಇವುಗಳ ಸಹವಾಸದಲ್ಲಿಡುವ ಮನುಷ್ಯನು ಅವುಗಳೊಡನೆಯೂ ಮಾತಾಡಿಸಲೆಳಸುತ್ತಾನೆ. ಸೃಷ್ಟಿಯ ವಸ್ತುಗಳು ಅವನೊಡನೆ ಪ್ರತ್ಯಕ್ಷವಾಗಿ ಮಾತಾಡದಿದ್ದರೂ ಅವು ಮಾತಾಡಿದಂತೆ ಕಲ್ಪಿಸುವನು. ಕಥೆಯಲ್ಲಿ ಬರುವ ನರಿಯು ಮಾತಿಲಿಯಲ್ಲ; ಮಾತಾಳಿ ಮಾತಿನಲ್ಲಿ ಗಿಣಿಗೆ ಸರಿಯಾದ ಮಗುವು ಮೇಲ್ತರದ್ದೆಂಬ ಕಲ್ಪನೆಯು ಇರುವಂತೆ ತೋರುತ್ತದೆ. “ಮಾತಿನ ಗಿಳಿಯೇ” ಎಂದು ಅವ್ವನು ಮಗುವನ್ನು ಸಂಬೋಧಿಸುವಳು. ನಮ್ಮ ಕಥಾ ಸಾಮ್ರಾಜ್ಯದ ಶಾಸನಪದ್ಧತಿಯನ್ನು ಅರಿಯಲಿಕ್ಕೆ ಆಗದಿದ್ದರೂ ಅಲ್ಲಿ ಪಶುಗಳು ಮಾತಾಡುವವು. ಪಕ್ಷಿಗಳು ಓಲೇಕಾರನ ಕೆಲಸ ಮಾಡುವವು. ಇಲಿ-ಇಣಚಿಗಳು ಪ್ರತ್ಯುಪಕಾರ ಮಾಡುವವು. ಅಳಿಲುಸೇವೆ ಶ್ರೀರಾಮಚಂದ್ರನಂಥ ಅವತಾರಿ ಪುರುಷನಿಗೂ ಸಂದಿದೆ. ಹಾವು ಚೇಳುಗಳು ಗೆಳೆಯರಾಗಬಲ್ಲವು. ಶಿವನು ಇಳಿದು ಬರುವನು. ರತಿಯು ಹೊಟ್ಟೆಯಲ್ಲಿ ಹುಟ್ಟುವಳು. ಇಂದ್ರನ ಐರಾವತವಾಗಲಿ, ಕಾಮಧೇನುವಾಗಲಿ ಕೊಟ್ಟಿಗೆಯ ಪಶುವಾಗಿ ನಿಲ್ಲುವದು ಅರಿದಲ್ಲ. ಕೃಷ್ಣನ ಕೊಳಲು, ಶಿವನ ಡಮರು, ಸರಸ್ವತಿಯ ನವಿಲು, ವಿಷ್ಣುವಿನ ಗರುಡ ಅವು ನಮ್ಮ ನಿಮ್ಮ ಮನೆಯ ವಸ್ತು ಒಡವೆಗಳೆನಿಸಲು ತಡವಾಗುವದಿಲ್ಲ. ಗಾಳಿಯಲ್ಲಿ ಈಸುವ ಕೂಸು, ನೀರಮೇಲೆ ನಡೆಯುವ ನಲ್ಲ, ಏನು ತಿಂದರೂ ತುಂಬದ ಹೊಟ್ಟೆ, ಎಷ್ಟು ತಂದರೂ ಸರಿಯದ ಬಂಗಾರ, ತಲೆಯ ಮೇಲೆ ಕೈಯಿಟ್ಟರೆ ಬರುವ ಸರಿಯಲಾರದ ಸೌಭಾಗ್ಯ, ನಾಲಗೆಯ ಮೇಲೆ ಬರೆದರೆ ಹರಿಗಡೆಯುದೆ ಸುರಿಯುವ ವಿದ್ಯೆ ಇವೆಲ್ಲ ನಮ್ಮ ಕಥಾ ಸಾಮ್ರಾಜ್ಯದೊಳಗಿನ ಅದ್ಭುತಗಳು. ಏಳು ಮಲ್ಲಿಗೆ ಹೂವಿನ ತೂಕದ ತರುಣಿಯನ್ನು ನಕ್ಕರೆ ಸಕ್ಕರೆ ಚೆಲ್ಲುವ ಚಲುವೆಯನ್ನೂ, ಕಣ್ಣರಳಿಸಿದರೆ ತಂಬೆಳಕು ಸೂಸುವ ಸುಭಗೆಯನ್ನೂ, ಹೆಜ್ಜೆ ಹೆಜ್ಜೆಗೂ ಕುಂಕುಮ ಮೂಡಿಸುವ ಮಾಟಗಾತಿಯನ್ನೂ ನಮ್ಮ ಜಾನಪದ ಕಥೆಗಳಲ್ಲಿ ಕಾಣಬಹುದು. ಸಾವಿರ ಕಣ್ಣಿನ ಮನುಷ್ಯ, ಇಪ್ಪತ್ತು ಕಾಲಿನ ನಾಯಿ, ಹಾಡುವ ಕಲ್ಲು, ನಗುವ ಗುಡ್ಡ, ಬೆಳಕು ಹುಟ್ಟಿಸುವ ಗಡ್ಡ ಮೊದಲಾದ ವಿಚಿತ್ರಗಳೂ ಕಥಾಸಾಮ್ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಸ್ಯದ ಕಥೆಯೇ ಇರಲಿ, ನೀತಿಯ ಕಥೆಯೇ ಇರಲಿ, ತತ್ವದ ಕಥೆಯೇ ಇರಲಿ, ಕಥನವೇ ಪ್ರಯೋಜನವಾದ ಕಥೆಯಿರಲಿ, ಯಾವ ಗುಂಪಿನೊಳಗಿನ ಕಥೆಯಲ್ಲಿಯೂ ನಾವು ವಿಚಿತ್ರ ತರವಾದ ಅಗಾಧವಾದ ಅದ್ಭುತವನ್ನು ಕಾಣಬಲ್ಲೆವು; ಕೇಳಬಲ್ಲೆವು; ಹೇಳಬಲ್ಲೆವು; ಮೂಕರಾಗಬಲ್ಲೆವು.

ಅದ್ಭುತ ರಸಾಯನ

ಜಗತ್ತಿನಲ್ಲಿ ಮನುಷ್ಯ ಪ್ರಾಣಿಯು ತಲೆದೋರಿದ ಮೇಲೆ ಕ್ರಮೇಣ ಮನುಷ್ಯ ಸಮುದಾಯವು ಅಸಂಖ್ಯವಾಗಿ ಕಾಣಿಸಿಕೊಂಡಿತು. ಎಲ್ಲೆಲ್ಲಿಯೂ ಸುಖ, ಏನೆಲ್ಲವೂ ಸಂತೋಷಕರ, ಬೇಸರವಿಲ್ಲ, ಬೇಗುದಿಯಿಲ್ಲ, ಜಂಜಡವಿಲ್ಲ, ಜಂಜಾಟವಿಲ್ಲ. ಮಾನವನು ಹುಟ್ಟಿದ್ದೇ ಹುಟ್ಟಿದ್ದು. ಸಂಖ್ಯೆ ಬೆಳೆದಿದ್ದೇ ಬೆಳೆದಿದ್ದು. ಮನುಷ್ಯ ಸಂಖ್ಯೆಯ ಈ ಭಾರವು ಇಳಿದು ನೆಮ್ಮದಿಯಿಂದ ಮನುಷ್ಯನು ಬದುಕಲೆಂದು ದೇವನು ಮಾನವ ವರ್ಗಕ್ಕೆ ಮರಣವೆಂಬುದನ್ನು ವರವಾಗಿ ಕರುಣಿಸಿದನೆಂದಾಗಲಿ, ಅಥವಾ ಮನುಷ್ಯನೇ ಅದನ್ನು ದೇವನನ್ನೊಲಿಸಿ ಪಡಕೊಂಡನೆಂದಾಗಲಿ ಕಥೆಯನ್ನು ಮಹಾ ಭಾರತದಲ್ಲಿ ಕೇಳುತ್ತೇವೆ. ಇದೇ ರೀತಿಯ ತತ್ವವನ್ನು ಜಾನಪದ ಕಥೆಯು ತನ್ನ ಕೋಮಲವಾದ ನಾಲಗೆಯಿಂದ ನಮ್ಮ ಕಿವಿಯಲ್ಲಿ ನೋವರಿಯದಂತೆ ಹನಿಸಿದ್ದನ್ನು ಕೇಳಬಹುದು. ಅದೇನೆಂದರೆ ಒಬ್ಬ ಅಜ್ಜಿಗೆ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಮೊದಲಾದವರ ವಂಶಾಭಿವೃದ್ಧಿಯಲ್ಲಿಯೂ ಅವರೆಲ್ಲರಿಂದ ತನಗೊದಗುವ ಸಂತೋಷಾತಿಶಯದಲ್ಲಿಯೂ ಏಕೋ ಜಿಗುಪ್ಸೆ ಬಂದಿತು. ಏನಾದರೊಂದು ಕೊರತದಿಂದ ಅತ್ತರೆ ಆ ಜಿಗುಪ್ಸೆ ಕರಗಿ ಎದೆ ಹಗುರಾಗಬಹುದೆಂದು ಯೋಚಿಸಿದಳು. ಆದರೆ ಯಾವ ಕೊರತೆವನ್ನು ಕಲ್ಪಿಸಬೇಕು? ಕೂಸೊಂದು ಸತ್ತರೆ ಹೊಟ್ಟೆತುಂಬ ಅಳಬಹುದೆಂದಳು. ಆದರೆ ಅದಕ್ಕೆ ಸಾವೆಲ್ಲಿಂದ ಬರಬೇಕು? ಜಗತ್ತೇ ಸಾವರಿಯದಿದ್ದಾಗ ಈ ಮುದುಕಮ್ಮನ ಮನೆಗೆ ಸಾವು ತಾನೇ ಬರುವ ಬಗೆ ಹೇಗೆ? ಕಲ್ಪನೆಯಲ್ಲಿ ಸಾವು ಮಾತ್ರ ಹೇಗೋ ಬಂದಿತ್ತೆಂದು ತೋರುತ್ತದೆ. ಒಂದು ಚೆಲುವಾದ ಮಗುವನ್ನು ಸಿದ್ಧಪಡಿಸಿಕೊಳ್ಳಲು ಕಲಡೇಬೇಲೆ ಬೀಸಿ ಹಿಟ್ಟು ಕಲೆಸಿ ನಾದಿ ಇಟ್ಟಳು. ಕ್ಷಣ ತಡೆದು ಒಂದು ಗೊಂಬೆ ಮಾಡಿದಳು. ಆದರೆ ಅದಕ್ಕೆ ಜೀವವಿರಲಿಲಲ. ಜೀವವಿಲ್ಲವೆನ್ನುವುದೇ ಸತ್ತಂತೆಯೆಂದು ಭಾವಿಸಿ ಹಾಯಾಗಿ ಅತ್ತು ಕರೆಯಬೇಕೆಂದು ಅಣಿಯಾದಳು. ಅಷ್ಟರಲ್ಲಿ ಹೊರಗೆ ಆಡಲಿಕ್ಕೆ ಹೋದ ಮರಿಮಕ್ಕಳು, ಸಾಲೆಗೆ ಹೊಲಕ್ಕೆ ತೋಟಕ್ಕೆ ಹೋದ ಬಾಲಕರು ಒಬ್ಬೊಬ್ಬರಾಗಿ ಬರತೊಡಗಿದರು. ಒಂದು “ಅಜ್ಜಿ! ಉಣ್ಣುತ್ತೇನೆ ರೊಟ್ಟಿ ಕೊಡು” ಎಂದರೆ, ಇನ್ನೊಂದು “ನನಗೆ ಬರೇ ನೀರು ಕೊಡು ಕುಡಿಯಲಿಕ್ಕೆ” ಅನ್ನುತ್ತಿದೆ. ಇತ್ತ ತಿನ್ನಬೇಡುವ ಕೂಸು, ಅತ್ತ ಕುಡಿಯಬೇಡುವ ಹಸುಳೆ. ಒಂದು ಕುಣಿಯುತ್ತದೆ, ಇನ್ನೊಂದು ಜಿಗಿಯುತ್ತದೆ. ಇಲ್ಲಿ ಕೂಸು ಕೇಳಿಸುತ್ತದೆ, ಅಲ್ಲಿ ಕೇಕೆ ಕೇಳಿಸುತ್ತದೆ. ಹೀಗೆ ಒತ್ತರಿಸಿ ಬರುವ ಹಿಗ್ಗಿನ ಪ್ರವಾಹದಲ್ಲಿ ಅಜ್ಜಿ ತನ್ನ ಕಾಲ್ಪನಿಕ ಅಳುವನ್ನು ಬಯತಿಟ್ಟಳು. ಮಗುಗಳು ರಿಂಗಣಗುಣಿತದೊಡನೆ ಅಜ್ಜಿಯನ್ನು ಅಡಿಗೆಮನೆಗೆ ಎಳದೊಯ್ದ ಮೇಲೆ ಆಕೆ ಅವರವರು ಬೇಡಿದ್ದನ್ನು ಅವರವರಿಗೆ ಕೊಟ್ಟು ಕಡೆಗಾಗುವಷ್ಟರಲ್ಲಿ “ಅದ್ದೀ! ನಾನು ಉಲತ್ತೇನೆ” ಎಂದು ಹಿಂದುಳಿದ ಕೂಸು ಕೂಗಿತು. ಇದೆಲ್ಲಿಂದ ಬಂತೆಂದು ಅಜ್ಜಿ ಹೊರಳಿ ನೋಡಿದರೆ ಕಡಲೇಬೇಳೆಯ ಹಿಟ್ಟಿನಿಂದ ಮಾಡಿಟ್ಟ ಬೊಂಬೆ ! ಜೀವ ತುಂಬಿ ಉಣ್ಣನಲು ಬಂದಿದೆ!! ಅಯ್ಯೋ! ನನ್ನ ದೈವದಲ್ಲಿ ಅಳುವೆಂಬುದನ್ನೇ ನಾನು ಬೇಡಿ ಬಂದಿಲ್ಲವೆಂದು ನಗುತ್ತ ಹಣೆ ಹಣೆ ಬಡಕೊಂಡಳಂತೆ. ಈ ಬಗೆಯಾಗಿ ಜನಪದ ಕಥೆಗಳಲ್ಲಿ ಬರುವ ಪಾತ್ರಗಳಂತೆ ಅವುಗಳಲ್ಲಿ ತುಂಬಿದ ರಾಸಾಯನವೂ ಅದ್ಭುತ ಸತ್ವವುಳ್ಳದ್ದಾಗಿದೆ. ನಮ್ಮ ಕಥೆಯೊಳಗಿನ ಪಾತ್ರಗಳು ಬಂಧುರವಾದ ಇಟ್ಟಿಗೆಗಳಂತೆಯೂ, ಅವುಗಳೊಳಗಿನ ರಾಸಾಯನವು ಅದ್ಭುತ ಸತ್ವಪೂರಿತವಾದ ಗಚ್ಚಿನಂತೆಯೂ ಪರಿಣಮಿಸಿ ನಮ್ಮ ಸಂಸ್ಕೃತಿಯ ಕೋಟೆಯನ್ನು ಮುಗಿಲೆತ್ತರವಾಗಿ ನಿಲ್ಲಿಸಿವೆ; ಪಾತಾಳದವರೆಗೆ ಬೇರಿಸಿವೆ; ನಮ್ಮ ಸಂಸ್ಕೃತಿಯು ಸೃಷ್ಟಿಯ ಕೂಡ ಸೃಷ್ಟಿಯಾಗಿ ಸೂರ್ಯಚಂದ್ರರ ಆಯುಷ್ಯವನ್ನು ಗಳಿಸಿಕೊಂಡಿದೆ.

ಅತಿಶಯೋಕ್ತಿಯಿಂದ ಅದ್ಭುತ

ಅಲಂಕಾರಗಳಿಂದ ಕವಿತೆಗೆ ಒಂದು ಬಗೆಯ ಶೋಭೆ ಬರುವದೆಂದೂ, ನಾವು ಅಲಂಕಾರಗಳಲ್ಲಿ ಅತಿಶಯೋಕ್ತಿಯೊಂದಿದೆಯೆಂದೂ ಬಲ್ಲೆವು. ಮಾತಿನಲ್ಲಾಗಲಿ, ಕಥನದಲ್ಲಾಗಲಿ ಅತಿಶಯವನ್ನು ಬಳಸಿದರೆ ಅದು ‘ಅಖಂಡ’ವಾಗಿ ಮಾತಾಡಿದಂತೆ ತೋರುವದಲ್ಲದೆ ಮಾತುಗಾರನು ಬೂಟಾಳಿಯೆನಿಸುವದೂ ಸಹಜವಿದೆ. ನಾವು ಕೇಳಿದ ಒಂದು ಕಥೆಯಲ್ಲಿ ಒಂದು ‘ಅಖಂಡ’ ಮಾತುಗಳನ್ನು ಕಾಣುವೆವಾದರೂ ಆ ಮಾತುಗಾರನಿಗೆ ಬೂಟಾಳಿಯೆಂದು ಹೆಸರಿಡುವದಕ್ಕೆ ನಮ್ಮ ಹಿರಿಯರು ಒಪ್ಪಿಗೆ ಕೊಡಲಿಲ್ಲ. ಹೇಳುವ ಕಥೆ ಯಾವುದೆಂದರೆ-

“ಗಡಿಯಾಳ ಪಟ್ಟಣದಲ್ಲಿ ಒಬ್ಬ ರಾಜನಿದ್ದನು. ಅವನ ಮನೆತನದ ಖರ್ಚು ದೊಡ್ಡದು. ಆ ಖರ್ಚಿನ ಮೇಲಿಂದ ಆ ಮನೆತನದ ಹಿರಿಮೆಯನ್ನು ಅಳೆಯುವಂತಿತ್ತು. ಅವನ ಮನೆಯೊಳಗಿನ ೩-೪ ವಯಸ್ಸಿನ ಮಕ್ಕಳ ಸಲುವಾಗಿ ಮುಂಜಾವಿನ ಊಟಕ್ಕೆಂದು ಮಮ್ಮು ಮಾಡುತ್ತಿದ್ದರು. ಆ ಅಕ್ಕಿಯನ್ನು ತೊಳೆದರೆ ಚೆಲ್ಲಿದ ನೀರು ದೊಡ್ಡ ಹೊಳೆಯಾಗಿ ಹರಿಯುತ್ತಿತ್ತು. ಆ ಹೊಳೆ ದೊಡ್ಡದೆಂದ ಮಾತ್ರಕ್ಕೆ ಕಲ್ಪನೆ ಬರಲಿಕ್ಕಿಲ್ಲ. ಆ ಪ್ರವಾಹದಲ್ಲಿ ಮುನ್ನೂರರವತ್ತು ಹಡಗುಗಳು ತೇಲಾಡುತ್ತಿದ್ದವು! ಇಂಥ ದೊಡ್ಡ ಮನೆತನಕ್ಕೆ ಹೆಣ್ಣು ಕೊಡುವದಕ್ಕೂ, ಕೊಳ್ಳುವದಕ್ಕೂ ಅದೆಂಥ ದೊಡ್ಡ ಮನೆತನ ಬೇಕಾದೀತು! ಬಹಳ ಕಡೆಯಲ್ಲಿ ಹುಡುಕಲಾಯಿತು. ಆದರೆ ಅಷ್ಟು ಹಾಳತವಾದ ಮನೆತನವು ದೊರೆಯುವದು ದುಸ್ತರವಾಯಿತು. ಕಡೆಗೆ ಇದ್ದುದರಲ್ಲಿಯೇ ಒಂದು ಒಳ್ಳೆಯ ಮನೆತನವನ್ನು ಗುರುತಿಸಿದರು. ಈ ಮನೆತನವಿದ್ದುದು ಲಠ್ಠಪಟ್ಟಣದಲ್ಲಿ ಮನೆತನದ ಒಡೆಯನು ರಾನನೆನಿಸಿಕೊಳ್ಳುತ್ತಿರಲಿಲ್ಲ. ಸಾಹುಕಾರನೆನಿಸುತ್ತಿದ್ದನು. ಅವನ ಮನೆತನದ ಹಿರಿಮೆಯನ್ನು ಹೇಳಿಕೊಳ್ಳುವದಕ್ಕೂ ಒಂದು ಮಾತು ಬಳಕೆಯಲ್ಲಿತ್ತು. ಅದೇನೆಂದರೆ “ಸಾಹುಕಾರನ ಆಳುಮಕ್ಕಳ ಮುಂಜಾನೆಯ ಊಟಕ್ಕೆ ಮಾಡಿಸುವ ಕಾರುಬೇಳೆಯಲ್ಲಿ ಮೂರುಖಂಡುಗ ಅಥವಾ ಅರವತ್ತು ಮಣ ಹಿಂಗು ಬೇಕಾಗುತ್ತಿತ್ತು. ಇತ್ಯಾದಿ” ಕಥೆ ಇನ್ನೂ ಮುಂದೆ ಹೊಸೆಯುತ್ತದೆ. ನೊಗಕ್ಕೆ ಹಾಕುವ ಕೀಲುಗಳನ್ನು ಮಾತ್ರ ಹೇರಿಕೊಂಡೇ ಎಷ್ಟೋ ಬಂಡಿಗಳು ಹೊಲಕ್ಕೆ ಹೋಗುವವು. “ಒಬ್ಬನ ಮನೆತನದಲ್ಲಿ ಆಡನ್ನು ಹಿಂಡಿಕೊಳ್ಳುವಾಗ ಮೊದಲನೆಯದಾದ ಎಂಜಲು ಧಾರೆಯೊಂದನ್ನು ಭಾಂಡದಲ್ಲಿ ಬರಗೊಡದೆ ಕಡೆಗೆ ಚಿಮ್ಮುವ ರೂಢಿಯಿರುತ್ತದೆ. ಹಾಗೆ ಎಂಜಲು ಧಾರೆಯೊಂದನ್ನು ಕಡೆಗೆ ಚಿಮ್ಮಿದರೆ, ಅಸಂಖ್ಯ ಒಡ್ಡುಗಳು ಹಾಲಿನಿಂದ ತುಂಬಿ ಕೆಲವು ಒಡೆದು ಹೋಗುವವು. ಅಂಥ ಆಡು ಇನ್ನೊಬ್ಬನ ಮನೆತನದಲ್ಲಿ.” ಈ ಅತಿಶಯೋಕ್ತಿಯಲ್ಲಿ ಅದ್ಭುತತೆಯಿಲ್ಲದಿಲ್ಲ. ಭಯಾನಕ ರಸವನ್ನು ಪ್ರಚೋದಿಸುವ ಅದ್ಭುತತೆಯ ಕಥೆಗಳನ್ನು ನಾವೀಗ ಕೇಳುವದು ಕಡಿಮೆಯಾಗಿದೆ. ಕಥೆ ಹೇಳುತ್ತ ಕೂಡುವದಾಗಲಿ, ಕಥೆ ಕೇಳುತ್ತ ಕುಳಿತುಕೊಳ್ಳುವದಾಗಲಿ ನಿಶ್ಚಿಂತ ಪುರುಷರಿಗೆ ಸಲ್ಲುವದು. ಅಂಥ ನಿಶ್ಚಿಂತ ಪುರುಷರು ಕಾಣಿಸಿಕೊಳ್ಳುವುದಕ್ಕೆ ಸುಖದ ಕಾಲವು ಕಾಲುಚಾಚಿಕೊಂಡು ಬಿದ್ದಿರಬೇಕು. “ಕಾಲು ಮುರಕೊಂಡು ಲಕ್ಷ್ಮಿ ಬಿದ್ದಾಳ ಊರ ತುಂಬಿತ್ತು” ಎಂದು ಒಬ್ಬ ಲಾವಣಿಕಾರನು ಹೈದರಾಬಾದಿನ ಐಶ್ವರ್ಯವನ್ನು ವರ್ಣಿಸುವನು. ಹಾಗೆಯೆ, ಸುಖದ ಕಾಲವು ಕಾಲುಚಾಚಿಕೊಂಡು ಬಿದ್ದಿರುವಾಗ ನಿಶ್ಚಿಂತ ಪುರುಷರು ಕಾಣಿಸಿಕೊಳ್ಳುವರು. ಆ ನಿಶ್ಚಿಂತ ಪುರುಷರಲ್ಲಿ ಚಾಣಕರಾಯನ ಕಥೆ ಹೇಳುವವರು ಹುಟ್ಟಿಬರುವರು. ಆಗ ಮಾತ್ರ ಇದ್ದು ಬಿದ್ದು ಸುಕ್ಕಿಕೊಂಡು ಕಥೆಗಳು ಕುಡಿಯೊಡೆದು ಬರುವವು.

ಜೋಟಪ್ಪನ ಗೆಳೆಯರು

ಇನ್ನು ಜೋಟಪ್ಪನು ತನ್ನ ಗೆಳೆಯರೊಡನೆ ಮಾಡಿದ ಒಂದು ಅದ್ಭುತವಲ್ಲದಿದ್ದರೂ ಸಾಹಸ ಕಥೆಯನ್ನು ಹೇಳಿ ಮುಗಿಸಬೇಕಾಗಿದೆ. ಚೋಟಪ್ಪನೆಂಬುವನು ಹೆಸರಿಗೆ ತಕ್ಕಂತೆ ಚೋಟುದ್ದವಾಗಿಯೇ ಇದ್ದನು. ಅವನು ದಿನಾಲು ಎತ್ತುಗಳನ್ನು ಬಿಟ್ಟುಕೊಂಡು ಹಲಕೆ ಹೋಗುವನು. ಅಲ್ಲಿ ಗಳೆ ಹೊಡೆಯುವ ಕೆಲಸ ಮುಗಿಸಿ ಸಂಜೆಗೆ ಮರಳಿ ಮನೆಗೆ ಬರುವನು. ಒಂದು ದಿನ ಚೋಟಪ್ಪನು ಗಳೆ ಹೊಡೆಯುತ್ತಿರುವಾಗ ಮೋಡ ಮುಸುಕಿ ಮಳೆ ಬರುವ ಲಕ್ಷಣಗಳು ಕಾಣಿಸತೊಡಗಿತು. ಚೋಟಪ್ಪನು ಅವಸರವಾಗಿ ಎತ್ತುಗಳ ಕೊರಳು ಬಿಟ್ಟು ಬಿಡುವ ಹೊತ್ತಿಗೆ ಮಳೆ ಆರಂಭವಾಗಿಯೇ ಬಿಟ್ಟಿತು. ಅದರೊಡನೆ ಗಾಳಿಯೂ ಭರದಿಂದ ತೀಡತೊಡಗಿತು. ಸುರಕ್ಷಿತವಾಗಿ ಎಲ್ಲಿ ನಿಲ್ಲಬೇಕೆಂದು ಯೋಚಿಸಿ ಚೋಟಪ್ಪನು ನೀರಿನ ಬಿಂದಿಗೆಯನ್ನು ಬೋರಲು ಹಾಕಿ ನೀರು ಚಲ್ಲಿದನು. ಅದು ಬರಿದಾಗಲು ಅದರಲ್ಲಿ ಸೇರಿಕೊಂಡು ಮಳೆಯ ಇರಿಸಲು ಸಹ ತಗುಲಬಾರದೆಂದು ಬಿಂದಿಗೆಯ ಮೇಲೆ ಮಗ್ಗಿ ಸರಿಸಿಕೊಂಡನು. ಮಳೆಯು ರಪರಪನೆ ಸುರಿಯತೊಡಗಿದ್ದು, ಸಂಜೆಗೂ ಬಿಡಲಿಲ್ಲ, ನಡುರಾತ್ರಿಗೂ ಬಿಡಲಿಲ್ಲ. ಬೆಳತನಕ ಹೊಡೆಯಿತು. ಎಲ್ಲೆಲ್ಲಿಯೂ ಮಳೆಯ ನೀರು ನಿಂತು ತುಳಕಾಡಿತು. ಮಳೆಯ ಲಕ್ಷಣವು ಕಡಿಮೆಯಾದದ್ದನ್ನು ತಿಳಿದು ಚೋಟಪ್ಪನು ಮಗಿ ಉರುಳಿಸಿ ಬಿಂದಿಗೆಯೊಳಗಿನಿಂದ ಕಡೆಗೆ ಬಂದನು. ಆದರೆ ತನ್ನ ಎತ್ತುಗಳು ಕಾಣಿಸಲಿಲ್ಲ. ಸುತ್ತಲೂ ನೋಡಿದನು. ಒಡ್ಡಿನ ಮೇಲೆ, ಒಡ್ಡಿನ ಬದಿಗೆ, ಗಿಡದ ಕೆಳಗೆ, ಮಹಡಿಯ ಹತ್ತಿರರ ಎಲ್ಲಿಯೂ ಎತ್ತುಗಳು ಹೆಜ್ಜೆ ಮಾತ್ರವಲ್ಲದೆ ಅವುಗಳೊಂದಿಗೆ ಮನುಷ್ಯನ ಹೆಜ್ಜೆಗಳು ಕಾಣಿಸಿದವು. ತನ್ನ ಎತ್ತುಗಳನ್ನು ಕಳ್ಳರೇ ಕದ್ದೊಯ್ದಿದ್ದಾರೆಂದು ಚೋಟಪ್ಪನು ನಿರ್ಣಯಿಸಿದನು. ಆ ಹೆಜ್ಜೆಯ ಹೊಳಹು ಹಿಡಿದು ಎತ್ತುಗಳನ್ನು ಹುಡುಕುವುದಕ್ಕೆ ಮುಂದೆ ಸಾಗಿದನು.

ಕೆಲವೊಂದು ದಾರಿ ನಡೆದ ಬಳಿಕ ಅಲ್ಲೊಂದು ಚೇಳು ಸಂದಿಸಿತು. ಕೇಳಿತು “ಚೋಟಪ್ಪಾ! ಎಲ್ಲಿ ಹೊರಟಿರುವಿ?”

“ನನ್ನ ಎತ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಅವನ್ನು ಹುಡುಕಿಕೊಂಡು ತರಬೇಕಾಗಿದೆ. ಆದ ಕಾರಣ ಹೊರಟಿದ್ದೇನೆ” ಎಂದು ಚೋಟಪ್ಪನ ಉತ್ತರ.

“ನಾನೂ ನಿನ್ನ ಸಂಗಡ ಬರಲಿಯಾ?” ಎಂದು ಚೇಳು ಕೇಳಿಕೊಂಡಿತು. ಚೋಟಪ್ಪನು ‘ಆಗಲಿ’ ಎನ್ನಲು ಚೇಳು ಚೋಟಪ್ಪನ ಹಿಂದಿನಿಂದ ಹೊರಟಿತು. ಹೀಗೆ ಇಬ್ಬರೂ ನಡಿದಾಗ ಹಾದಿಯ ಮೇಲೆ ಬಿದ್ದ ಒಂದು ಗುಂಡುಗಲ್ಲು ಮಾತಾಡಿಸಿತು- “ಇಬ್ಬರೂ ಎಲ್ಲಿ ನಡೆದಿರಿ?”

ಚೇಳು ಹೇಳಿತು – ‘‘ಚೋಟಪ್ಪನ ಎತ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ನಾವು ಹುಡುಕಲು ಹೊರಟಿದ್ದೇವೆ.”

“ಹಾಗಾದರೆ ನಾನು ನಿಮ್ಮೊಡನೆ ಬರುವೆನು” ಎಂದು ಗುಂಟುಕಲ್ಲು ಉತ್ಸಾಹ ತೋರಿಸಲು, ಚೋಟಪ್ಪನು “ಆಗಲಿ ಹೊರಡು” ಎಂದನು.

ಈಗ ಮೂವರು ಪ್ರವಾಸಿಕರ ಜೊತೆ ಆಯಿತು. ಹೊರಟರು-ಹೊರಟರು, ಎತ್ತುಗಳು ಕಣ್ಣಿಗೆ ಬೀಳಲಿಲ್ಲ. ಮುಂದೆ ಒಂದು ಕಂಟಿಯಲ್ಲಿ ಒಂದು ‘ಬುರಲಿ’ ಎಂಬ ಕಾಡು ಪಕ್ಷಿ ಕುಳಿತಿತ್ತು. ಅದು ಕೇಳಿತು “ಎಲ್ಲಿಗೆ ಸಾಗಿದ್ದೀರಿ ಜೋಡಿಯಾಗಿ?”

ಅವರು ತಾವು ಹೊರಟ ಕಾರಣವನ್ನು ಹೇಳಿದರು. ಅವರ ಅಪ್ಪಣೆ ಪಡಕೊಂಡು ಬುರಲಿಯೂ ಅವರೊಡನೆ ಮುಂದುವರಿಯಿತು. ತುಸು ದೂರ ಸಾಗಿ ಒಂದು ಹಳ್ಳಿಯನ್ನು ತಲುಪಿದರು. ಅಷ್ಟೊತ್ತಿಗೆ ಹೊತ್ತು ಮುಳುಗಿತು. ಆ ನಸುಬೆಳಕಿನಲ್ಲಿಯೇ ಚೋಟಪ್ಪನು ತನ್ನ ಎತ್ತುಗಳನ್ನು ಒಂದು ಕೊಟ್ಟಿಗೆಯಲ್ಲಿ ಕಂಡನು. ತನ್ನ ಸಂಗಡಿಗರಿಗೆ ತಾನು ಹೇಳಬೇಕಾದುದನ್ನೆಲ್ಲ ಹೇಳಿ ಚೋಟಪ್ಪನು ದವಣಿಯಲ್ಲಿ ಅಡಗಿಕೊಂಡನು. ಚೇಳು ಮೇವಿನ ಹತ್ತಿರ ಸುಳಿದಾಡತೊಡಗಿತು. ಗುಂಡು ಚಪ್ಪರದ ಮೇಲೆ ಏರಿ ಕುಳಿತಿತು. ಬುರಲಿಯು ಅಡಿಗೆ ಮನೆಯ ಒಲೆಯಲ್ಲಿ ಅವಿತುಕೊಂಡಿತು.

ಎತ್ತುಗಳನ್ನು ಅಟ್ಟಿಕೊಂಡು ಬಂದ ಒಕ್ಕಲಿಗನು ಸಂಜೆಯ ಊಟ ತೀರಿಸಿಕೊಂಡು ಕೊಟ್ಟಿಗೆಯ ಕಡೆಗೆ ಬಂದನು. ಎತ್ತುಗಳ ಮುಂದೆ ಮೇವು ಕಾಣಲಿಲ್ಲ. ಕಣಿಕೆ ಕತ್ತರಿಸಿ ತಂದು ಹಾಕಬೇಕೆಂದು ಮೇವಿನ ಕಡೆಗೆ ಗೋದಲೆಗೆ ಹೋದನು. ಒಕ್ಕಲಿಗನ ಮನೆ, ಅದೂ ಹಳ್ಳಿಯಲ್ಲಿ. ಅಂದ ಮೇಲೆ ಒಂದೇ ಒಂದು ದೀಪ ಜಿಣಿಮಿಣಿ ಉರಿಯುತ್ತಿತ್ತು ಎಲ್ಲಿ? ಅಡಿಗೆಮನೆಯಲ್ಲಿ. ಒಕ್ಕಲಿಗನು ಕತ್ತಲೆಯಲ್ಲಿಯೇ ಕೈಯಾಡಿಸುತ್ತ ಮೇವಿನ ಬಳಿಗೆ ಹೋಗಿ, ಕಣಿಕೆಯನ್ನು ತೆಕ್ಕೆಯಲ್ಲಿ ಹಿಡಿದು ಎತ್ತುವಷ್ಟರಲ್ಲಿ ಕಾಲಿಗೊಂದು ಚೇಳು ಕುಟುಕಲು ಬಲವಾಗಿ ಕೂಗಿದನು.

ಎತ್ತಿನ ಮೈ ತಿಕ್ಕುತ್ತಿದ್ದ ಒಕ್ಕಲಿಗನ ಮಗನು ಅವಸರದಿಂದ ತಂದೆಯ ಬಳಿಗೆ ಬರುವಷ್ಟರಲ್ಲಿ ಚಪ್ಪರದ ಮೇಲೆ ಕುಳಿತ ಗುಂಡುಕಲ್ಲು ಉರುಳಲು ಅವನ ತಲೆಯೊಡೆದು ನೆತ್ತರು ಸುರಿಯತೊಡಗಿತು. “ದೀಪವನ್ನಾದರೂ ತಕ್ಕೊಂಡು ಬರಬಾರದೇ?” ಎಂದು ಅರಚಲು ಅಡಿಗೆಮನೆಯಲ್ಲಿದ್ದ ಹೆಣ್ಣು ಮಗಳು ಸಾವರಿಸಿಕೊಂಡು ಆ ಜಿಣಿಮಿಣಿ ದೀಪ ಎತ್ತಿಕೊಳ್ಳುವಷ್ಟರಲ್ಲಿ ಒಲೆಯೊಳಗಿನ ಬುರಲಿ ಹಾರಿಹೋಗಿದ್ದರಿಂದ ದೀಪ ಆರಿತಲ್ಲದೆ, ಆ ಒಕ್ಕಲಗಿತ್ತಿಯ ಕಣ್ಣೊಳಗೆ ಬೂದಿ ತೂರಿಬೀಳು ಕಣ್ಣೊರಿಸುತ್ತ “ಅಯ್ಯಯ್ಯೋ’ ಎಂದು ಹಲಬತೊಡಗಿದಳು. ಆ ಸಂಧಿಯನ್ನು ಸಾಧಿಸಿ ದವಣಿಯಲ್ಲಿ ಅಡಗಿಕೊಂಡಿದ್ದ ಚೋಟಪ್ಪನು ತನ್ನ ಎತ್ತುಗಳನ್ನು ಬಿಟ್ಟುಕೊಂಡು ಹೊರಟನು. ಚೇಳು, ಗುಂಡುಕಲ್ಲು, ಬುರಲಿ ಅವನನ್ನು ಬೆಂಬಲಿಸಿದರು. ಹೀಗೆ ಚೋಟಪ್ಪನು ಗೆಳೆಯರ ನೆರವಿನಿಂದ ತನ್ನ ಎತ್ತುಗಳನ್ನು ದೊರಕಿಸಿಕೊಂಡು ಮನೆಗೆ ಮರಳಿದನು.

ಮುಗಿತಾಯ

ಚೋಟಪ್ಪನ ಕಥೆ ನೀವೆಲ್ಲ ಕೇಳಿರಬಹುದು. ಆ ಕಥೆ ಮಕ್ಕಳಿಗಾಗಿ ಹೇಳಿದ್ದಿರಬಹುದು. ಚೋಟಪ್ಪನ ನಿಲವು ಚೋಟುದ್ದವಾದರೂ, ಅವನ ಸಾಹಸ ಮುಗಿಲೆತ್ತರವಾಗಿದೆ. ಚೇಳಿನಂಥ ವಿಷಜಂತುವೂ, ಗುಂಡುಗಲ್ಲಿನಂಥ ಜಡವಸ್ತುವೂ, ಬುರಲಿಯಂಥ ಜೊಳ್ಳು ಪಕ್ಷಿಯೂ ಅವನಿಗೆ ಗೆಳೆಯರು. ಅವನೊಡನೆ ಮಾತಾಡುತ್ತವೆ, ನಡೆದಾಡುತ್ತವೆ. ಅವನು ಹೇಳಿದ ಸೂಚನೆ ಪಾಲಿಸುತ್ತವೆ. ಅವಿತುಕೊಂಡು ಕುಳ್ಳಿರುವ ಬಿಗಿಯಾದ ಕೆಲಸವನ್ನು ಅವು ತಾಳ್ಮೆಯಿಂದ ಪೂರಯಿಸಿದವು. ತಮ್ಮ ಸಹಜೋಪಾಯಗಳನ್ನು ಪ್ರಯೋಗಿಸಿ ಗೆಳೆಯನಿಗೆ ಉಪಕರಿಸಿದವು. ಅನ್ಯಾಯ ಅಸಗತ್ಯಗಳನ್ನು ದಂಡಿಸಿದವು. ಈ ನೀತಿಯನ್ನು ಮಕ್ಕಳಿಗೆ ತಗುಲಿಸಿ ನಾವು ಕಡೆಗಾಗಲಾರೆವು. ಮಕ್ಕಳಿಗೆ ಕಲಿಸಬಹುದಾದ ನೀತಿಯನ್ನು ಈ ಕಥೆಯು ನಮಗೂ ಕಲಿಸಲಿಕ್ಕೆ ಸಿದ್ಧವಿದೆ. ಯಾಕೆಂದರೆ ಪ್ರೌಢರಾದ ನಾವೂ, ಆ ನೀತಿಯಿಂದ ಬಲುದೂರ ಇದ್ದೇವೆ. ನಮಗೆ ತಿಳಿಯದ ಪಾಠವನ್ನು ಕಲಿಯಲಿಕ್ಕೆ ನಾವು ಯಾವ ವರ್ಗದಲ್ಲಿ ಕುಳಿತರೂ ನಾಚಬೇಕಾದುದಿಲ್ಲ. ಅಸಡ್ಡೆ ಪಡಬೇಕಾದುದೂ ಇಲ್ಲ. ಇನ್ನೊಂದು ಮಾತೆನೆಂದರೆ ಚೋಟಪ್ಪನಂತೆ ಅಸಹಾಯರಾದ ನಾವು, ಚೇಳು, ಗುಂಡುಕಲ್ಲು, ಬುರಲಿಗಳಂಥ ಅಲ್ಪವೆನಿಸುವ ವಸ್ತುಗಳಿಂದಲೂ ಸಹ ನೆರವು ಪಡೆದು ಕಳೆದುಹೋದ ನಮ್ಮ ಸಂಸ್ಕೃತಿ, ಸಭ್ಯತೆಗಳೆಂಬ ವಸ್ತುಗಳನ್ನು ಪುನಃ ದೊರಕಿಸಿಕೊಳ್ಳುವದು ಕರ್ತವ್ಯವಾಗಿದೆ. ಅಲ್ಪರೆನಿಸುವವರೂ ಮಾಡಿದರೆ ಅದ್ಭುತ ಕಾರ್ಯವನ್ನು ಸಾಧಿಸಬಹುದಾಗಿದೆಯೆಂಬ ಅದ್ಭುತ ನೀತಿಯನ್ನು “ಚೋಟಪ್ಪನ ಗೆಳೆಯರು” ಎಂಬ ಕಥೆಯು ಹೇಳುವದು.