ಹಳ್ಳಿಯ ಚಾವಡಿಯ ಮುಂದಿನ ಬಯಲಲ್ಲಿ ಅಟ್ಟ ಹೂಡಿ, ಯಾವುದಾದರೊಂದು ಪೌರಾಣಿಕ ಕಥೆಯನ್ನು ಅಲ್ಲಲ್ಲಿ ತಾಳ ಮೃದಂಗಗಳೊಡನೆ, ಹಾಡುತ್ತ, ಕುಣಿಯುತ್ತ ಅಭಿನಯಿಸುವುದಕ್ಕೆ ಬಯಲಾಟ ಎನ್ನುತ್ತಾರೆ. ಬಯಲಾಟವನ್ನು ಹೊತ್ತು ಹೊರಡುವವರೆಗೆ ಅಭಿನಯಿಸುವುದರಿಂದ ಅದಕ್ಕೆ ದೊಡ್ಡಾಟವೆಂತಲೂ ಅನ್ನುತ್ತಾರೆ. ಬಯಲಾಟಕ್ಕೆ ಪದಗಳೇ ಮುಖ್ಯವಾಗಿದ್ದು ಅವುಗಳನ್ನೇ ಮಾತಿನಲ್ಲಿ ವಿವರಿಸುವ ಕೆಲಸವನ್ನೇ ಪಾತ್ರ ಧರಿಸಿದವನು ಮಾಡುತ್ತಾನೆ. ಪಾತ್ರ ಧರಿಸಿದವನಿಗೆ ಹಾಡಲಿಕ್ಕೆ ಬರಲೇಬೇಕೆಂದಿಲ್ಲ. ಒಬ್ಬನಾಗಲಿ, ಇಬ್ಬರಾಗಲಿ ಅಟ್ಟದ ಮುಂಭಾಗದಲ್ಲಿ ನಿಂತು, ಕೈಯಲ್ಲಿ ತಾಳ ಹಿಡಿದು ವಾದ್ಯ ಸರಂಜಾಮದೊಡನೆ ಪದದ ಒಂದು ಭಾಗವನ್ನು ಹಾಡುವನು. ಆಗ ಪಾತ್ರ ಧರಿಸಿದವನು ದನಿಕೂಡಿಸುತ್ತ ಅಭಿನಯಿಸುವನು. ಹೀಗೆ ಮುಮ್ಮೇಳದಲ್ಲಿ ಹಾಡಿಬಿಟ್ಟ ಪದದ ಭಾಗವನ್ನು ಹಿಂಭಾಗದಲ್ಲಿ ನಿಂತ ಹಿಮ್ಮೇಳದವರು ತಾಳದೊಂದಿಗೆ ಪುನಃ ಹೇಳುವರು. ಮುಮ್ಮೇಳದವರಿಗೆ ಕಂಠತ್ರಾಣವು ಕಡಿಮೆಯಿದ್ದರೆ ನಡೆಯುವುದಿಲ್ಲ. ಹಿಮ್ಮೇಳದಲ್ಲಿಯೂ ಸಹ ರಾಗವೆತ್ತಿ ರಂಗ ತುಂಬುವುದಕ್ಕೆ ಒಬ್ಬಿಬ್ಬರು ಇದ್ದೇ ಇರುತ್ತಾರೆ. ಬಯಲಾಟದೊಳಗಿನ ಪದಗಳ ದಾಟಿ ಬಹಳ ಹಿಂದಿನದೂ, ಬಹುಜನರ ಬಳಕೆಯದೂ ಇರುತ್ತದೆ. ಅಷ್ಟೊಂದು ಕಾಲದಿಂದ ಸರ್ವತ್ರವ್ಯಾಪಿಯಾಗಿದ್ದರೂ ಸುಲಭವಾಗಿ ಅದನ್ನು ಎಲ್ಲರೂ ಹಾಡಿಯಾರೆಂದು ತಿಳಿಯುವದು ತಪ್ಪು. ಕಂಠತ್ರಾಣವಂತೂ ಬೇಕು. ತಾಳ ಬಂಧುರತೆ ಅದಕ್ಕೂ ಹೆಚ್ಚಾಗಿ ಬೇಕು. ಇವೆರಡರ ಬಲದಿಂದ ಪಾತ್ರ ಧರಿಸಿದವನು ಉತ್ಸಾಹ ತೊಟ್ಟು ಕುಣಿಯುವಂತಾಗಬೇಕು, ಪ್ರೇಕ್ಷಕರಾಗಿ ಬಂದ ಹಳ್ಳಿಯ ಹೆಣ್ಣು-ಗಂಡು ಅಲ್ಲದೆ ನೆರೆಹಳ್ಳಿಯಿಂದಲೂ ಬಂದ ಜನಜಂಗುಳಿಗೆಲ್ಲ ಕೇಳಿಸುವಂತೆ, ಅವರ ಉತ್ಸಾಹವನ್ನು ಕಥಾಭಾಗವನ್ನು ಬಹುತರವಾಗಿ ಅಭಿನಯಿಸುವುದರಿಂದ ಶಿವ, ಪಾರ್ವತಿ, ದಕ್ಷಬ್ರಹ್ಮ, ವಿಷ್ಣುರಾಜ, ಮಂತ್ರಿ, ಸೇನಾಪತಿ, ರಂಭೆ, ಅಪ್ಸರೆ, ದೇವೇಂದ್ರ, ನಾರದ, ವಶಿಷ್ಠ ಇರುವ ಭೂಲೋಕಕ್ಕೆ ಇಳಿದು ಬರಬೇಕಾಗುತ್ತದೆ. ತಲೆ ಕಿರೀಟ, ಭುಜ ಕಿರೀಟ ಅಲಂಕಾರಗಳನ್ನುಧರಿಸಿ ಮೃತ್ಯುಮಾನವನಿಗಿಂತ ಬೇರೆತರಹದವರಾಗಿ ಕಾಣಿಸಿದರೆ ಸಾಕಾಗುವದು. ಅವರ ಆಗಮನ ವಿಶಿಷ್ಟತರಹದ್ದಾಗಬೇಕಾಗುವುದರಿಂದ ಪಾತ್ರಗಳೆಲ್ಲ ಕುಣಿಯುತ್ತಲೇ ಬರುತ್ತವೆ. ಆ ಕುಣಿತಕ್ಕೆ ಗಂಡು-ಹೆಣ್ಣು ಎನ್ನದೆ ಎಲ್ಲ ಪಾತ್ರಗಳೂ ಭಾಗಿಯಾಗಲೇಬೇಕು. ಆ ಕುಣಿತಕ್ಕೆ ಒಪ್ಪವಾಗುವಂತೆ ಹಾಡು, ಧಾಟಿ, ವಾದ್ಯ ಸರಂಜಾಮು, ಪಾತ್ರದವನ ಕಾಲುಗೆಜ್ಜೆ ಮೊದಲಾದವುಗಳು ಬೇಕಷ್ಟೇ? ಮುಮ್ಮೇಳದವನಿಗೆ ಭಾಗವತನೆಂದೂ ಹೇಳುತ್ತಾರೆ. ಅವನೇ ಬಯಲಾಟದ ಸೂತ್ರಧಾರನು. ಅವನು ತನ್ನ ಹಾಡಿನ ಮೋಡಿಯಿಂದಲೂ, ತಾಳದ ಲಯದಿಂದಲೂ ಪಾತ್ರಗಳನ್ನು ಸೊಗಸಾಗಿ ಕುಣಿಸಬಲ್ಲನು. “ತೋಂ ತತ ಝಣತತ್ತಾ | ಕಡ ಕಡ | ಧೀಂ ತಕ ಝಣತಾ | ತೋಂತತ ಝಣತಾ | ತಯಾ | ತೋಂ ತತ ಝಣತಾ || ತೋಮ್ನ ದರಿನದಾ || ಎಂದು ಗುಂಡಿನ ಕುಣಿತಕ್ಕಿರುವ ಹಿನ್ನೆಲೆ.

ಸಾಸಾಸಾನಿಧಪ ಪಮಗರಿಸಾ | ಸಾ | ಸಾ
ರಿಪಸಾ | ರಿಪಸಾ | ಪಮಗರಿಸಾ ||

ಎಂದು ಆರಂಭವಾಗುವದು ಹೆಣ್ಣಿನ ಕುಣಿತಕ್ಕಿರುವ ಹಿನ್ನೆಲೆ. ಹಿನ್ನೆಲೆಯನ್ನು ಹೊಂದಿಕೊಂಡೇ ಹಾಡು ಹರಿದುಬರುವದು.

ಪ್ರಾರಂಭಕ್ಕೆ ವಿಘ್ನೇಶ್ವರ ಸ್ತುತಿಯನ್ನು ಕೇಳುವೆವು.

ಶ್ರೀಗೌರಿ ವರಪುತ್ರಾ | ಶತಿತಾಭವ ಚಾರಿತ್ರಾ |
ಯೋಗಿ ಸಜ್ಜನಸ್ತೋತ್ರಾ | ಶುಭಗಾತ್ರಾ |
ನಿಟಿಲಾನಯನತ್ರನ ಸುತನೇ | ನಿಗಮಾಗಮ ಗೋಚರನೇ |
ಫಣಿಪಾಕಂಕಣ ಕುಂಡಲಧರನೇ ||
ಶಂಕರ ಪಾಲಿಸೋ ಮಾಂಕಾಳಿ ಗೌರೀಶಾ |
ಕಿಂಕರ ಸ್ವರದಿಂದ ಅಂತಃಕರಣ ಮಾಡೋ ||
ವಿದ್ಯಾಕ ಅಧಿಪತಿ ಮಾಡುವೆ ನಿಮ್ಮ ಸ್ತುತಿ |
ನೀ ಬಂದು ಕಾಯೆನ್ನ ಗೌರಿಯ ವರಪುತ್ರ ||

ಮೇಳದವರು ಹೂಡಿರುವ ತಮ್ಮ ಯಜ್ಞ ಸಂರಕ್ಷಣಕ್ಕೆ ದೇವನ ರಕ್ಷಾಶಕ್ತಿಯನ್ನೂ, ವಿಗ್ನವಿನಾಶಕ ಶಕ್ತಿಯನ್ನೂ ಆಪ್ತವಚನಗಳಿಂದ ಪರಿಚಿತರನ್ನು ಕರೆವಂತೆ ಕೂಗಿ, ಕರೆತಂದೇ ಬಿಟ್ಟಂತಾಗುತ್ತದೆ.

ಪ್ರತಿಯೊಂದು ಬಯಲಾಟದಲ್ಲಿ ನಾರದಮುನಿಗಳು ಒಂದಿಲ್ಲೊಂದು ಕಾರಣವನ್ನು ಮುಂದೆ ಮಾಡಿಕೊಂಡು ಬಂದೇ ಬರುತ್ತಾರೆ. ಅವರು ದೇವಲೋಕದಿಂದ ಹೊರಟವರು ಮಾನವ ಲೋಕಕ್ಕೆ ಬರತಕ್ಕಂಥವರಾಗುತ್ತಾರೆ.ಅವರ ದಾರಿ ಆಕಾಶಮಾರ್ಗ. ಪರಮಾತ್ರನನ್ನು ಸ್ತುತಿಸುತ್ತ ಭೂಮಿಗಿಳಿಯುತ್ತಾರೆ. ಹಾಗೆ ಬಂದಿಳಿದ ಮುನಿವರರು ಮರಳ ದೇವಲೋಕಕ್ಕೆ ಹೋದಾಗ ದೇವೇಂದ್ರನು ಶ್ರೇಷ್ಠ ಮುನಿಗಳನ್ನು, ಆಕಾಶದಿಂದ ಏರಿ ಬಂದವರನ್ನು, ಭೂಲೋಕದವರನ್ನು ಬರಮಾಡಿಕೊಳ್ಳತಕ್ಕ ಮಾತು, ದನಿ, ತಾಳ ಮೊದಲಾದವುಗಳು ಆ ಹಾಡಿನಲ್ಲಿ ಕಂಗೊಳಿಸುತ್ತವೆ. ನಾರದರಂಥ ಮುನಿಗಳಲ್ಲಿ ತೋರಿಸುವ ಆತುರವು ತುಂಬಿ ತುಳುಕುವದನ್ನು ಆ ಹಾಡಿನಿಂದ ಕಂಡುಕೊಳ್ಳಬಹುದು.

ಸತ್ಯಲೋಕೇಶ ಜಾತ ಮುನಿಪುಂಗವಾ |
ಚಿತ್ತಜಪಿತ ಪುತ್ರಾ ಸುರಾ ಮುನಿಪುಂಗವಾ |
ಎತ್ತಲಿಂಗ ಬಂದಿರೀಗ | ಹಿತವ ತಾಳಿರೈ |
ಮೃತ್ಯುಲೋಕದ ವಾರ್ತೆಯೆಮಗೆ ಸತ್ಯ ಪೇಳಿರೈ ||

ದೇವೇಂದ್ರನ ಓಲಗಕ್ಕೆ ಹೋದ ಮುನಿದೇವನನ್ನು ಬರಮಾಡಿಕೊಂಡ ಜೋಕೆ, ಮೃತ್ಯುಲೋಕದ ವಾರ್ತೆ ಕೇಳುವ ಹದ ಇವುಗಳನ್ನು ಅರಿತ ಮೇಲೆ ವಿಶ್ವಾಮಿತ್ರನ ಮಾಯದ ಮಕ್ಕಳಾದ ಮಾತಂಗ ಕನ್ಯೆಯರು ತಂದೆಯ ಅಪ್ಪಣೆಯಂತೆ ಹರಿಶ್ಚಂದ್ರ ಮಹಾರಾಜನ ಬಳಿಗೆ ಬಂದು ತಮ್ಮ ಕಾರ್ಯ ಸಾಧನೆಗಾಗಿ ಅಲು ಪರೆಯುವ ಹಾಡು ಕೇಳಬೇಕು. ವಿಶ್ವಾಮಿತ್ರ ಮುನಿಯ ಅತಿಕೋಪ, ಬದ್ಧದ್ವೇಷ, ಅನಿಮಿತ್ತ ವೈರಗಳೇ ಮೈವೆತ್ತು ಬಂದ ಚಲುವೆಯರು, ಹಾವಕ್ಕೆ ತಕ್ಕ ಭಾವ, ಭಾವಕ್ಕೆ ತಕ್ಕ ಹೆಜ್ಜೆ ಹೊಂದಿಸಿಕೊಂಡು ರಾಜನನ್ನು ಸಮೀಪಿಸುವುದನ್ನು ಕಾಣುವೆವು.

ಎನ್ನವಾರೀಗಿ ತಕ್ಕವನು | ತಕ್ಕವನು ಕೇಳ್‌ಸುಂದರಾ |
ಹರಿಶ್ಚಂದರಾ | ಬಾರೋ ಬಾ |
ಕಂದರ್ಪನಾ ಸತಿ | ಬಂಧನಾ ತಾಳದೆ | ಇಂದು ನೊಂದು ಬಂದೆವೋ |
ಬಂದೇವೋ ನೀ ಸುಂದರಾ ಹರಿಶ್ಚಂದರಾ ಬಾರೋ ಬಾ ||

ಒಟ್ಟಾರೆ ಕವಿತ್ವ ಗಾಯನ, ಕುಣಿತಗಳಿಂದ ಹಳ್ಳಿಗರ ಸಂಸಾರಕ್ಕೆ ತಕ್ಕಂತೆ ರಸವನ್ನು ಸುರಿಸುವ ಕೆಲಸವು ನಡೆಯುತ್ತದೆ. ಶಿವನ ಓಲಗಕ್ಕೆ ಆತನ ಮಾವನಾದ ದಕ್ಷಬ್ರಹ್ಮನು ಬಂದಾಗ ಯಾರೂ ಮಾತನಾಡಿಸಲಿಲ್ಲವೆಂದು ಅಪಮಾನಿತನಾಗಿ ದಕ್ಷಬ್ರಹ್ಮನು ಬಂದಾಗ ಯಾರೂ ಮಾತನಾಡಿಸಲಿಲ್ಲವೆಂದು ಅಪಮಾನಿತನಾಗಿ ಹೋದ ಬಳಿಕ; ಆ ಪ್ರಸಂಗದಿಂದ ಕಳವಳಗೊಂಡ ಪಾರ್ವತಿಯು ಈ ಪ್ರಕಾರ, ಪತಿಯ ತಪ್ಪನ್ನು ತೋರಿಸಿಕೊಡುತ್ತಾಳೆ.

ಯಾತಕೆ ನೀವು ಮನ್ನಿಸಿ ಕರೆಯಲಿಲ್ಲ?
ತಾತನೇ ಬಂದು | ಜನಕನೇ ಬಂದು | ಕೋಪಿಸಿ ಪೋದನಲ್ಲಾ ||
ಒಂದು ಈ ಸಭೆಯಲ್ಲಿ | ನಿಂದು ನೋಡಿದ ನಿಮ್ಮ |
ಛಂದದಿ ನುಡಿಸದೆ | ಕುಂದಿಟ್ಟು ಜರದಾನಲ್ಲ ||

ಅಯೋಧ್ಯೆಯಿಂದ ಕಾಶೀ ಪಟ್ಟಣಕ್ಕೆ ಹೊರಟ ಹರಿಶ್ಚಂದ್ರನ ಪರಿವಾರದ ಪರಿತಾಪ ಪ್ರಸಂಗವೇ ಮೊದಲು ಹೃದಯದ್ರಾವಕವಾಗಿರುತ್ತದೆ. ಅಂಥ ಪ್ರಸಂಗದಲ್ಲಿ ರಾಜನ ಪಟ್ಟಧರಸಿಯಾದ ತಾರಾಮತಿಯು ದಾರಿಯ ದಣಿವು, ಸುಡುವ ನೆಲ, ಒಡಲ ಕಳವಳವನ್ನು ಪತಿಯ ಮುಂದೆ ತೋಡಿಕೊಳ್ಳುವಳು, ಮರಣವನ್ನು ಮೀರಿಸುವ ಈ ತಾಪವನ್ನು ಹೇಗೋ ಸಹಿಸಿಕೊಂಡು ಕೋಮಲೆಯಾದ ಅರಸುವೆಣ್ಣು ದಿಕ್ಕು ತೋರದೆ ಒಡನುಡಿಯುವಳು.

ಕಾಂತಾ ಏನಿದು ಉಷ್ಣಾ | ಕಾಂತಾರದೊಳೆನ್ನ
ಎಂಥಾ ಬಿಸಿಲು ಕಾಯ್ವುದೋ ||
ಅಂತಕನ ಜನಕನ | ಅಂತರ ತಿಳಿಯದು
ಅಂತ್ಯಕಾಲವು ಬಂತೇನೋ ||
ಗಾಳಿ ಬೀಸಲು ಈಗ | ತಾಳಲಾರೆನಮ್ಮ |
ಭಾಗಳ ಕಳವಳಿಸುವೆನು | ಫಲಮೂಲ ಸಹ ಇಲಲ ||
ಭಾಳ ಕಳವಳಿಸುವೆನು | ಫಲಮೂಲ ಸಹ ಇಲ್ಲ ||
ಉಳಿದಿಲ್ಲ ವನದೊಳು | ಕಾಳ ಒದಗಿ ಬಂತೇನೋ ||

ದಕ್ಷಿಣೆಯ ಹಣವನ್ನು ಕೇಳಿ ಕೇಳಿ ಕೋಪಗೊಂಡು ಮುನಿಯು ಹರಿಶ್ಚಂದ್ರನನ್ನು ಬಡಿಯುವಾಗ ಸತ್ವಶಾಲಿಯ ಮಗನಾದ ರೋಹಿತಾಶ್ವನು ಹೇಳಿಕೊಳ್ಳುವ

ಬಡಿಯ ಬ್ಯಾಡಿರಯ್ಯಾ ತಂದೆ | ಒಡೆಯ ಹರಿಶ್ಚಂದ್ರನಿಗೆ |
ದುಡಿದು ನಿಮ್ಮರಿಣವ ನಾವು | ತೀರಿಸುವೆವೋ ||

ಎಂಬ ಮಾತು ಹಾಡಿನಿಂದ ಹೃದಯಹೊಕ್ಕಾಗ ಎಂಥ ಕಲ್ಲೆದೆಯಾದರೂ ಕರಗಿ ನೀರಾಗಿ ಹರಿಯದೆ ಇರಲಾರದು.

“ಕೊಲ್ಲಲಿ ಕರೆತಂದೆ | ಎಲ್ಲೇರೆ ನಡಿಯೋ ತಂದೆ ||
ಇಂಗಳು ತುಳಿದಂತೆ | ಅಂಗಾಲು ಸುಡುತಿಹವು||”
“ಸುಡುವ ಈ ದೇಹವ ಒಡಲೊಳು ಇಟ್ಟುಕೊಳ್ಳಮ್ಮಾ ತಾಯಿ |
ತಣ್ಣಗಿರುವ ಸ್ಥಳಕ್ಕೆ ಎನ್ನನ್ನು ಕರೆದೊಯ್ಯೋ ತಾಯಿ |”

ಎಂದು ಚಡಪಡಿಸುವ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಸಾಸಿವೆ ಎಣ್ಣೆ ಹೊಯ್ದಂತೆ ಆಗಲಾರದೇ? ಹೂ ತರಬೇಕೆಂದು ಏಕಾಂಗಿಯಾಗಿ ಹೋದ ರೋಹಿದಾಸನಿಗೆ ಹಾವು ಕಚ್ಚುವದು. ಆ ಪ್ರಸಂಗದಲ್ಲಿ ಹೇಳವು ಹಾಡು ಕೇಳಿರಿ.

ಕಚ್ಚಿತೋ ಸರ್ಪವು | ಇಚ್ಛಿಕರ್ಯಾರಿಲ್ಲ ||
ಮುಚ್ಚೆ ಬಂದಿತು ಇಂಥ ಕಾಳಾ | ದಾರಿಗ್ಹೇಳಲಿ ಘೋಳಾ ||
ಅಯೋಧ್ಯಾಪುರದಲ್ಲಿ ಘನವೈದ್ಯರುಳಿದರು |
ಅಯ್ಯೋ ಕೈ ಬಿಡಿಸುವವರಾರು | ಹಲ್ಲು ನಟ್ಟಾವ ಮೂರು ||
ತಾಯಿ ತಾರಾಮತಿ | ತಿಂದಿ ಹರಿಶ್ಚಂದ್ರಾ |
ಸಾಯುಕಾಲಕೆ ಬರಲಿಲ್ಲಾ | ದೇಹಾ ವ್ಯರ್ಥಾಯಿತಲ್ಲಾ ||

ಸತ್ವಶಾಲಿಯಾದ ರಾಜಕುಮಾರನಿಗೆ ಒದಗಿದ ಈ ಅಸಹಾಯಕತೆಯನ್ನು ಕಂಡು ಮರುಗದಿಹ ಮಾನವನು ಪಾಪಿಯಲ್ಲವೇ?

ಇನ್ನು ಗಂಭೀರ ಪರಿಸ್ಥಿತಿಯನ್ನು ಉಸುರುವ ಕಥಾ ಭಾಗವನ್ನು ನೋಡುತ್ತ ಬೇಸತ್ತ ಪ್ರೇಕ್ಷಕರನ್ನು ಕಟ್ಟಾಡಿಸಿ ನಗಿಸುವ ಅಡ್ಡ ಸೋಗೊಂದು ಬರುವದು. ಹಳ್ಳಿಯ ದಂಪತಿಗಳು ನೆರೆಹಳ್ಳಿಯ ಜಾತ್ರೆಗೆ ಹೊರಡುವದನ್ನು ನಿಶ್ಚಯಿಸುವರು. ಅವರಿಗೆ ಅದೊಂದು ಹಿಗ್ಗಿನ ಪ್ರಸಂಗ. ಹಿಗ್ಗುತುಂಬಿ ಹೊರಸೂಸುವ ಗಂಡನು ಜಾತ್ರೆಯ ಸಿದ್ಧತೆಯನ್ನೇ ಹೇಗೆ ಮಾಡಬೇಕೆನ್ನುವದನ್ನು ಕುಣಿದಾಡಿ ಹೇಳುವನು. ಅವನೊಡನೆ ಪ್ರೇಕ್ಷಕರು ನಿದ್ದೆಯಿಂದ ಎಚ್ಚತ್ತು ಕುಣಿದಾಡಬೇಕೆನ್ನುತ್ತಾರೆ. ಕಟ್ಟಿಕೊಳ್ಳಬೇಕಾದ ಬುತ್ತಿಯ ನಾನಾ ಪ್ರಕಾರಗಳನ್ನೇ ಕೇಳಿ ಬಾಯಲ್ಲಿ ನೀರೂರುವದು. ಆ ಅಸಂಸ್ಕೃತ ದಂಪತಿಗಳೊಡನೆ ತಾವೂ ಜಾತ್ರೆಗೆ ಹೊರಟಷ್ಟು ಹಿಗ್ಗು ಪ್ರೇಕ್ಷಕರಲ್ಲಿಯೂ ತಲೆದೋರುವದು. ಆ ಹಾಡು ಯಾವುದೆಂದರೆ-

ಜಾತ್ರಿಗಿ ಹೋಗೂಣಂತ ಮಾಡು ಗಿಲಮಿಂಚಿ |
ನೀ ಎಳ್ಳಾ ಹಚ್ಚಿ ಬುತ್ತಿಕಟ್ಟಿ ಸೆಜ್ಜಿರೊಟ್ಟಿ ||
ಹುಳಿ ಬೋನದ ಗಂಟು ಅದು ಬ್ಯಾರಿ
ಅದು ನಾಳಿಗಿ ಮಾಡುದು ನ್ಯಾರಿ ||

ಹೀಗೆ ವಿವಿಧ ಸಂದರ್ಭಗಳಿಗೆ ತಕ್ಕಂತೆ, ಪಾತ್ರ, ಪದ, ತಾಳ, ಕುಣಿತಗಳಿಂದ ಪ್ರೇಕ್ಷಕರನ್ನು ಬೆಳ್ಳಬೆಳತನಕ, ಎವೆ ಹಳಚದಂತೆ ಕುಳ್ಳಿರಿಸುವರಲ್ಲದೆ ತಾವು ಸಹ ಕಿರೀಟು ಹೊತ್ತು ಕೂಗಿ, ಹಾಡಿ, ಕುಣಿದು, ಜಿಗಿದು ದಣಿದಿದ್ದರೂ ಉತ್ಸಾಹಗೆಡದೆ, ಗೆಲುವಿನ ಹುರುಪಿನಲ್ಲಿ ಕಥೆಯನ್ನು ಮುಂದುವರಿಸುವವರು. ಇದು ಆಟವನ್ನು ಆಡುವ ಒಂದು ರಾತ್ರಿಯಾಯಿತು. ಅದಕ್ಕೆ ಹಿನ್ನೆಲೆಯಾಗಿ ಆರು ತಿಂಗಳುಗಳನ್ನು, ಆಟವನ್ನು ಕಲಿಯುವದರಲ್ಲಿಯೇ ನಿದ್ದೆಗೆಟ್ಟು, ಅವರು ದಣಿವು ಗೆದ್ದಿರುತ್ತಾರೆ. ಬಯಲಾಟದ ಪದಗಳನ್ನೂ, ಆ ಪಾತ್ರ, ಆ ಮೇಳ, ಆ ಬೆಳಕು, ಆ ಕುಣಿತ, ಆ ವಾದ್ಯ ಇವುಗಳೊಡನೆ ಅಟ್ಟದ ಮೇಲೆಯೇ ನೋಡಿ ಹರುಷಪಡಬೇಕಲ್ಲದೆ ಅವರ ದಣಿಯದ ಪ್ರಾಣಶಕ್ತಿಯ ದ್ಯೋತಕವಾದ ಹಾಡಿನ ಕಡಲನ್ನು ಕೈಗನ್ನಡಿಯಲ್ಲಿ ಇನ್ನೆಷ್ಟು ತೋರಿಸಲಿಕ್ಕಾದೀತು? ನಿರ್ದಿಷ್ಟ ಅವಧಿಯಲ್ಲಿ ಪದ ಸೌಂದರ್ಯದ ರಾಗಗರತಿಯನ್ನು ಅದರ ಛಂದಪಾದಗಳನ್ನು ರೇಖಿಸಲಿಕ್ಕಾಗದೆಂದು ನಮ್ರತೆಯಿಂದ ಒಪ್ಪಿಕೊಳ್ಳಬೇಕಾಗುತ್ತದೆ. ಕೊನೆಯದಾಗಿ ಸರ್ವೇಶನ ಒಂದು ಪ್ರಾರ್ಥನೆಯೊಂದಿಗೆ ಈ ವಿಷಯವನ್ನು ಪೂರ್ತಿಗೊಳಿಸುತ್ತೇನೆ.

ಶರಣು ಶ್ರೀ ಮಾಧವಾ | ಕರುಣಿಸು ಸಹಜ ಭಾವಾ |
ಚರಣವ ನಂಬಿ ಮಾಳ್ಪೆ ಸೇವಾ || ಪಲ್ಲ ||
ಸಕಲ ಜೀವರಿಗೆ ಸದ್ಭೋದಕ ಚರಿತಾರ್ಥನೇ

ಆಕಳಂಕ ರೂಪ ಅಮಳಾತ್ಮ ಗುಣಾತ್ರಯತೀತನೇ
ಮುಕುತಿ ಲಲನೆಯೊಡಗೂಡಿ ಸುಖಿಪ ಸುರನಾದನೇ

ಮುಕುತಿಯಿಂದ ನಿನ್ನರಿವ ಕೋವಿದರ ಸ್ವಾರ್ಥನೇ
ಶರಣು ಶ್ರೀ ಮಾಧವಾ ಕರುಣಿಸೋ ಸಹಜ ಭಾವಾ
ಚರಣವ ನಂಬಿ ಮಾಳ್ಪೆ ಸೇವಾ |