“ಗುರುವೇ ನಿಮ್ಮ ಪಾದಕ ಬೆರಸಿ
ಪೂಜಿ ಮಾಡುವೆ ಸಹಿತ ತರಿಸಿ ||
ನಿಮ್ಮ ಪಾದಮ್ಯಾಲ ನನ್ನ ಆಸಿ
ನಿಜಾ ತೋರಿಸೊ ಗುರು ಪರಿಹರಿಸಿ ||
-ಖಾಜಾಬಾಯಿ

೧. ಲಾವಣಿಗಳ ಸ್ವರೂಪ

ಕಾಂತೆಯರ ಮಾತೇ ಕಾವ್ಯಮಾತೆಯಾದರೆ, ಕಾಂತೆಯರ ಸಂತಾನವಾಣಿಯು ಕಾವ್ಯಸಂತಾನವಾಗಲಾರದೇ? ಲಾವಣಿ ಹಾಡು ಅಂಥ ಸಂತಾನ ವಾಣಿ. ಅದು ಗಂಡುಮಕ್ಕಳು ರಚಿಸಿದ ಹಾಡು; ಗಂಡುಮಕ್ಕಳು ಹಾಡುವ ರಚನೆ. ಗರತಿಯ ಹಾಡಿನಲ್ಲಿ ನಲುಮೆಯ ಸೃಷ್ಟಿ ಕಂಡುಬಂದರೆ, ಲಾವಣಿಯಲ್ಲಿ ಚಲುವಿನ ದೃಷ್ಟಿ ಕಂಡುಬರುತ್ತದೆ. ಒಂದು ಹೃದಯವನ್ನು ಕರಗಿಸಿ ತನ್ನವರನ್ನಾಗಿ ಮಾಡಿಕೊಳ್ಳುವದಕ್ಕೆ ಹಾತೊರೆಯುತ್ತಿದ್ದರೆ, ಇನ್ನೊಂದು ಹೃದಯವನ್ನು ಬೆರಗಾಗಿಸಿ ತನ್ನದನ್ನಾಗಿ ನೋಡಿಕೊಳ್ಳುವದಕ್ಕೆ ಆತುರಿಸುತ್ತದೆ. ‘‘ರೂಪದಲ್ಲಿ ಹೆಂಗಸಾದರೇನು, ಭಾವಿಸಲು ಗಂಡುರೂಪು” ಲಾವಣಿಯು ಕಾವ್ಯರೂಪದಲ್ಲಿ ಕಾಣಿಸಿಕೊಂಡರೂ ಅದು ಗಂಡು ನುಡಿ; ಗಡಸು ನುಡಿ.

ಲಾವಣಿಯು ಭಾವನೆಯನ್ನು ಮಾತ್ರ ಉಕ್ಕಿಸಿಬಡದೆ, ರಸಾವೇಶವನ್ನು ಮಿಕ್ಕಿಸುವ ಸುಸಂಧಿಯನ್ನೂ ಹುಡುಕುತ್ತಿರುತ್ತದೆ. ಅಂಥ ಸುಸಂಧಿ ದೊರೆತರೆ ಸೌಂದರ್ಯವನ್ನು ಚುಂಚುಮಾಡಿಕೊಂಡು, ತತ್ವವನ್ನೂ ಸತ್ವವನ್ನೂ ಪಕ್ಕ ಮಾಡಿಕೊಂಡು ಲಾವಣ್ಯ ಪಕ್ಷಿಯು ಗಗನಗೇರುತ್ತದೆ.

ಜೀವನವೆಂದರೇನು? ಹೆಣ್ಣಿನಲ್ಲಿ ಹುಟ್ಟಿ, ಹೆಣ್ಣಿನಿಂದ ಬೆಳೆದು, ಹೆಣ್ಣಿನೊಡನೆ ಬೆರೆಯುವದೇ ಜೀವನವೆಂದು ಗಂಡಿಗೆ ತೋರಿದರೆ, ಗಂಡಿನಿಂದ ಮೊಳೆದು ಗಂಡಿಗಾಗಿ ಹೂತು, ಗಂಡಿಗಾಗಿ ಫಲಿಸುವುದೇ ಜೀವನವೆಂದು ಹೆಣ್ಣಿಗೆ ತೋರುವದು. ತಾಯಿ ಮಗುಗಳಾಗಿ ಮುದ್ದಿಸು, ನಲ್ಲ-ನಲ್ಲೆಯರಾಗಿ ಚುಂಬಿಸಿ ಎರಡು ಒಂದಾಗಿ, ಎರಡರಲ್ಲಿ ಮೂರಾಗಿ ಕೂಡಿಕೆ-ದೂಡಿಕೆಗಳನ್ನು ಭೋಗಿಸುತ್ತ ಜಗತ್ತು –ರಾಧಾಕೃಷ್ಣ ಲೀಲೆಯಲ್ಲಿ ಸಾಗಿಯೇ ಇದೆ. ಜೀವನದ ಈ ರಹಸ್ಯವನ್ನು ಕಂಡವನು ಬೆರಗುಬಟ್ಟು ಗುಣುಗುಣಿಸಿದ್ದೇ ಹಾಡಾಗಿ ಕೇಳಿಸುತ್ತದೆ. ಶ್ರೀಕೃಷ್ಣ ಪರಮಾತ್ಮನ ಪೂರ್ವ ಜೀವನದ ಶೃಂಗಾರವು ಮಾಗಿ, ಉತ್ತರ ಜೀವನದಲ್ಲಿ ವೀರ ಅಧ್ಯಾತ್ಮವು ಫಲಿಸಿದ್ದನ್ನು ಕಾಣುತ್ತೇವೆ. ಗಂಡು-ಹೆಣ್ಣುಗಳಿಂದ ತುಂಬಿದ ಈ ಜಗತ್ತಿನಲ್ಲಿ ಮೊಟ್ಟಮೊದಲಿಗೆ ಗಂಡಿನ ಕಣ್ಣಿಗೆ ಹೆಣ್ಣು, ಹೆಣ್ಣಿನ ಕಣ್ಣಿಗೆ ಗಂಡು ಕಾಣಿಸಿತು. ಕಣ್ಣು ತೆರೆಯದ ಕುನ್ನಿ ಒಂದು ‘ಅವ್ವ’ ಅಂದಿತು. ಇನ್ನೊಂದು ‘ಅಪ್ಪ’ ಅಂದಿತು. ಬಳಿಕ ಕಣ್ಣು ತೆರೆದಾಗ ಒಂದು ‘ಚಲುವೇ ಸ್ಥಾಯಿಯಾಗಿ ಉಳಿದ ರಸಗಳೆಲ್ಲ ಉಚಿತವಾಗಿ ಬಳಸಲ್ಪಟ್ಟು ಶಾಂತಿರಸದ ಸಿರಿನಾಡನ್ನು ತಲುಪಿದಾಗ ‘ಇದೇ ಜೀವನ’ವೆನ್ನಲಿಕ್ಕಾಗದು. ದೇಹಾತ್ಮ ಬುದ್ಧಿಯ ಕಳೆಯಿಂದ ಕಡೆಗಾಗಲಿಕ್ಕಾಗದು. ದೇಹಾತ್ಮ ಬುದ್ಧಿಯ ಕಳೆಯಿಂದ ಕಡೆಗಾಗಲಿಕ್ಕಾಗದಿದ್ದರೆ ಜೀವನಕ್ಕೆ ಸಾರ್ಥಕವಿಲ್ಲ.

ಈ ಹಿನ್ನೆಲೆಯಲ್ಲಿ ಲಾವಣಿಗಳನ್ನು ಕಾಣಬೇಕಾಗುತ್ತದೆ. ಲಾವಣಿಗಳಲ್ಲಿ ಎರಡು ವಿಧ. ಗಂಡಿನ ಪಕ್ಷದ ಲಾವಣಿಗಳನ್ನು ಹಾಡುವವರಿಗೆ “ಹರದೇಸಿ”ಯೆಂದೂ, ಹೆಣ್ಣಿನ ಪಕ್ಷದ ಲಾವಣಿಗಳನ್ನು ಹಾಡುವವರಿಗೆ “ನಾಗೇಸಿ”ಯೆಂದೂ ಹೇಳುತ್ತಾರೆ. ಅವರಿಗೆ ತುರಾಯಿ ಮತ್ತು ಕಲ್ಗಿಯೆಂದೂ ಹೆಸರುಗಳುಂಟು. ತಮ್ಮ ತಮ್ಮ ಪಕ್ಷಗಳನ್ನು ಬೆಳೆಸಿ ಹೇಳುವುದಕ್ಕೆ ಇಬ್ಬರೂ ಪ್ರಯತ್ನಿಸುವದೂ ಸ್ವಾಭಾವಿಕ. ತಮ್ಮ ಪಕ್ಷದ ಮೇಲ್ಮೈಯನ್ನು ಹೇಳುವ ಭರದಲ್ಲಿ ‘ಇನ್ನೊಂದಕ್ಕಿಂತ’ ಎನ್ನುವ ಶಬ್ದವು ಅನಿವಾರ್ಯವಾಗಿ ಬರುತ್ತದೆ. ತಮ್ಮ ಪಕ್ಷವನ್ನು ಎತ್ತರಿಸುವುದರ ಜೊತೆಗೆ ಇನ್ನೊಂದನ್ನು ಕತ್ತರಿಸುವುದಕ್ಕೆ ತೊಡಗುವದೂ ಸಹಜವಾಗುತ್ತದೆ. ಸ್ವಾಭಾವಿಕ ಅನಿವಾರ್ಯ ಸಹಜವೆನ್ನುತ್ತ ಲಾವಣಿಯ ಲಾವಣ್ಯಕ್ಕೆ ಭಂಗವನ್ನುಂಟು ಮಾಡುವದು ಮಾತ್ರ ವಾಸ್ತವಿಕವಿಲ್ಲ.

ಮಾಯೆಯ ಕೈಯೊಳಗೆ ಸಿಗಬಾರದೆಂದು ವೈರಾಗ್ಯದ ಕುದುರೆ ಹತ್ತಿ ಓಡಿ ಹೋಗುವ ಆದರ್ಶ ಉಚಿತವಾಗಿ ಬಳಸಿಕೊಂಡು ಸಹೃದಯರಾಗುವ ರಾಧಾ-ಕೃಷ್ಣರ ಇನ್ನೊಂದು ಆದರ್ಶವಿರುತ್ತದೆ. ಅದೇ ಆದರ್ಶವಿರಿಸಿಕೊಂಡ ಲಾವಣಿಕಾರರು ಜೀವನದ ಅನಿತ್ಯಕ್ಕೆ ಅಂಜುವದಿಲ್ಲ; ಅದು ಅಶಾಶ್ವತವೆಂದು ನಿರಾಶರಾಗುವದಿಲ್ಲ. ಅದು ಜಂಜಡವಾಗಿದೆಯೆಂದು ಜಡರಾಗಿ ಬೀಳುವದಿಲ್ಲ. ಲಾವಣಿಕಾರರು ಜೀವನದ ಬಗ್ಗೆ ಏನು ಹೇಳುತ್ತಾರೆ ಗೊತ್ತೇ?

“ಮೂರು ದಿನದ ಸಂತಿ ಮುನ್ನೋಡಿ ಮಾಡಿಕೋ
ಗರದಿ ನಡಿಯುದು ಮಧ್ಯಾಹ್ನ ಮ್ಯಾಲ |
ಸಂಜಿಯಾದಂಗ ಒಂದು ಗುಂಜಿ ಉಳಿಯಾಕಿಲ್ಲ
ಖಾಲೇ ಮಾರಿ ಆದಾವೋ ಚೀಲ”

ಎಂದು ಒಬ್ಬನು ನುಡಿದರೆ, ಇನ್ನೊಬ್ಬನು-

ಈ ಜನ್ಮಕ ಬಂದು ಮೂರು ದಿನ ಸಂತಿ ಮಾಡೂನು ಬಾ ಖಡಕ |
ಈ ಹರೆಯ ಹೋದ ಮ್ಯಾಲ ಸರದ | ಅಲ್ಲಿಂದ ಬರದ |
ಈಗಿನ ಧಮಕ ||

ಎಂದು ಹೇಳುತ್ತಾರೆ.

“ಜಗದೀಶ್ವರ ತನ್‌ ಕೃಪೆಯ ಕಟಾಕ್ಷವ ಹಿಂದೆಗೆದಾ ಒಡನೆ
ಸಿರಿ ವೈಭವ ಜಯಸೇನೆಯಿವೆಲ್ಲ ಹೋಯಿತು ದಡಬಡನೆ ||”

ಲಾವಣಿಕಾರರು ಮೂರು ದಿನದ ಸಂತೆಯನ್ನು ಸುಂದರವಾಗಿ ಮಾಡುವದಕ್ಕೆಂದೇ ಮೊದಲು ರಾಗರಸಿಕರಾಗಿ ಭೋಗವಿಚಾರವನ್ನು ಕೊಂಡಾಡುತ್ತಾರೆ. ಭೋಗಸಾಮಗ್ರಿಯನ್ನು ಅಡ್ಡಯಿಸುವ ಎದರುಗಳನ್ನು ಸೀಳಿ ಹಾಕುವ ವೀರಕರ್ಮವನ್ನು ಮುಂದಾಡುತ್ತಾರೆ. ಅನ್ಯ ವಿಚಾರವನ್ನು ಅಣಕಿಸುತ್ತಾರೆ; ಹಿಂಜರಿದು ಹಗೆಗಳನ್ನು ನಗೆಗೀಡು ಮಾಡುತ್ತಾರೆ. ಅಂತೆಯೇ ಲಾವಣಿಗಳಲ್ಲಿ ಶೃಂಗಾರರಸದ ಬೆಳಗು ಹೆಚ್ಚು; ಆ ಬಳಿಕ ವೀರರಸ, ಹಾಸ್ಯರಸಗಳಿಗೆ ಸ್ಥಾನ. ಈ ಮೂರು ಮುಖ್ಯ ರಸಗಳ ಮುಖಾಂತರ ನವರಸಗಳೆಲ್ಲ ಮಾಗಿ ಮಾಧುರ್ಯಗೊಂಡು ಶಾಂತಿ ರಸವಾಗಿ ಮಾರ್ಪಡುತ್ತವೆಂದು ತೋರುವದು. ಅಲ್ಲಿಯವರೆಗೆ ಲಾವಣಿಯು ಸಂಚಲೆಯಾಗಿ ಚಂಚಲೆಯಾಗಿ ಸಂಚರಿಸುವದುಂಟು. ಅದನ್ನು ಲಾವಣಿಕಾರರು ತಮ್ಮ ಭಾಷೆಯಲ್ಲಿ “ಸರಿಗಮಪ ದನಿಸ ಸರಿಗಮ ನಾರಿ ನಿನಗತ್ತಾ” ಎಂದು ಹೇಳುತ್ತಾರೆ. ತಮ್ಮ ಹಾಡು-

“ಸಿದ್ದು ಶಿವಲಿಂಗ ಹಾಡೂದು ವರಸಿ | ದನಿಯೆತ್ತರಿಸಿ |
ನುಡಿ ಕತ್ತರಿಸಿ ಸುರಿದಂಗ ಮುತ್ತ |||”

** *

ನಾನಾನ ತೋಡಿ ಮಾಡ್ಯಾರ ಜೋಡಿ
ವೈರಿ ನೋಡಿ ಹೋದಾಳ ಓಡಿ | ನ್ಯಾಮಣ್ಣ ಮಾಡಿದ ಅಕ್ಷರಾ |

***

ಖಾಜಾನ ಕವಿಯ ನೋಡಿರಿ ಮುಡಿದಂಗ ದವನ
ಈ ಜೀವ ದೈಹಕ ಲಾವಣಿ ಮಾಡಿ ರತನಾ |

ಕಳೆದ ಸುಮಾರು ಮೂವತ್ತು ಹಿಂದಿನ ಲಾವಣಿಗಳಲ್ಲಿ ರಸವಂತಿಕೆಯು ಸಾಕಷ್ಟು ತುಂಬಿರುತ್ತಿತ್ತೆಂದು ಕಂಡುಬರುವದು. ಇತ್ತೀಚಿನ ಹಳಸಿದ ಜೀವನದ ಪರಿಣಾಮವಾಗಿ ಸಾಹಿತ್ಯಕ್ಕೂ ಅದೇ ವಾಸನೆ ಬರುತ್ತಿದೆ. ಈಗಿನ ಹಳ್ಳಿಗರ ಹದಗೆಟ್ಟ ಹಸಿವಿಗೆ ಹಳೆಯ ಲಾವಣಿಗಳು ರಚಿವುಸುದಿಲ್ಲ. ‘ಲಾವಣಿ ಹಾಡುಗಳು’ ಎಂದಾಗ ಹಳೆಯ ಲಾವಣಿಗಳೆಂದೇ ಭಾವಿಸಬೇಕಾಗುತ್ತದೆ.

ಲಾವಣಿಗಳಲ್ಲಿ ‘ಚೌಕ’ ಎಂಬ ವಿಭಾಗವನ್ನು ಕಲ್ಪಿಸಿ, ಅದರಲ್ಲಿ ಕೆಲವು ನುಡಿಗಳು ಚಾಲ ಸೇರಿರಬೇಕೆಂದು ಇಟ್ಟುಕೊಂಡಿದ್ದಾರೆ. ಅಂಥ ನಾಲ್ಕೋ ಆರೋ ‘ಚೌಕ’ ಸೇರಿದರೆ ಒಂದು ಇಡಿಯ ಲಾವಣಿ ಆಗುತ್ತದೆ. ಲಾವಣಿ ಹಾಡುವಾಗ ಇಬ್ಬರು ಜೊತೆಯಾಗುವದನ್ನೂ, ಅವರು ಎಡಗೈಯಲ್ಲಿ ಕೈತಾಲ, ಬಲಗೈಯಲ್ಲಿ ಡಪ್ಪ, ಕಾಲಲ್ಲಿ ಗೆಜ್ಜೆ ಸರಗಳಿಂದ ಸಜ್ಜುಗೊಂಡಿರುತ್ತಾರೆ. ಅವರ ಹಿಂದೆ ‘ಸೂರಿನವನು.’ ಅವನ ಕೈಯಲ್ಲಿ ‘ತಿಂತಿಣಿ’ ಎಂಬ ವಾದ್ಯವಿರುತ್ತದೆ. ಸಾಲು ಸಾಲಿಗೋ ನುಡಿ ನುಡಿಗೋ ಮುಂದಿನವರು ಎತ್ತಿಕೊಟ್ಟ ಸೂರನ್ನೆಳೆಯುತ್ತ “ಜೀ-ಜೀ” ಎಂದಾಗಲಿ, “ಗಾ-ಗೀ” ಎಂದಾಗಲೀ ಸೂರಿನವರು ಧ್ವನಿಸುತ್ತಾನೆ. ಅದರಿಂದ ಮುಂದಿನವರೆಗೆ ವಿಶ್ರಾಂತಿ ದೊರೆಯುವದಲ್ಲದೆ, ಹಾಡಿಗೆ ನಾದವೂ, ಮಾಧುರ್ಯವೂ ಉಂಟಾಗುವವು.

ಕರಡಿಡೊಳ್ಳಿನ ‘ಮಜಲಿ’ನಲ್ಲಿಯೂ, ಚಿಟ್ಹಲಗೆ ಊಡಕದ ಮಜಲಿನಲ್ಲಿಯೂ ನಡುನಡುವೆ ವಾದನವನ್ನು ಸ್ತಬ್ಧಗೊಳಿಸಿ ಕೆಲವೊಂದು ಲಾವಣಿ ಹೇಳಿಸುವುದುಂಟು ಅವೇ ಬಯಲು ಲಾವಣಿಗಳು. ಡಪ್ಪ ಬೇಡ, ತಿಂತಿಣಿ ಬೇಡ. ಬಲಗೈಯಿಂದ ಚುಟಕೆ ಹಾಕುತ್ತ ಸುತ್ತಲೂ ಕೂಡಿದ ಜನರಿಗೆಲ್ಲ ಕೇಳುವಂತೆ ನಾಲ್ಕು ನಿಟ್ಟಿಗೂ ಮುಖ ಹೊರಳಿಸುತ್ತ ಒಬ್ಬನೇ ಹಾಡುವನು.

ಲಾವಣಿಯ ಆರಂಭಕ್ಕೆ ಸೂಚನಾ ಪಲ್ಲವಿಯಂತೆ ‘ಸಖಿ’ ಎಂಬ ಹಾಡನ್ನೂ, ಹಾಡು ಮುಗಿದ ಬಳಿಕ ‘ಖ್ಯಾಲಿ’ ಎಂಬ ಹಾಡನ್ನೂ ಹಾಡುವರು. ಲಾವಣಿಕಾರನು ಲಾವಣಿಯ ಕೊನೆಯ ನುಡಿಯಲ್ಲಿ ತನ್ನ ಊರು, ಊರ ದೇವರು, ಗುರು, ಪರಂಪರೆ, ಹಾಡುವ ಜೊತೆಗಾರರು ಮೊದಲಾದ ಸಂಗತಿಗಳನ್ನೆಲ್ಲ ಸೂಚಿಸುವನಲ್ಲದೆ, ತನ್ನ ಹಾಡು ಎಂಥದು, ಪ್ರತಿಪಕ್ಷದವರ ಮೇಲೆ ಏನು ಪರಿಣಾಮ ಮಾಡಬಲ್ಲುದು-ಎಂಬುದನ್ನು ಸ್ಪಷ್ಟಗೊಳಿಸುತ್ತಾನೆ. ಹೇಗೆಂದರೆ

ಮನಸಂತೋಷಾಯ್ತು ಬೆಳಗಿದಂಗ ಮಳಿಕುಟ್ಟಿ | ಮಳಿಕುಟ್ಟಿ |
ಸುತ್ತ ರಾಜ್ಯದಾಗ ಹಲಸಂಗಿ ಊರ ಕರಿಕೋಟಿ | ಕರಿಕೋಟಿ |
ಗುಡು ಬಾಳು ವಸ್ತಾದರ ಆಕಡಿ ನಡಗಟ್ಟಿ | ನಡಗಟ್ಟಿ

***

ಕರನಾಟಕ ಹಲಸಂಗಿ ಊರ | ಮೆರಿತಾಯಾವ ತೂರ |
ಮಲಿಕ ಮೈತರ | ಹಚ್ಚಿ ವರಿಗಿ |
ಖಂಡೂನ ಸೂರಕೇಳಿ ಕಲ್ಲ ಮನಸ ಕರಗಿ ||

ಈ ಒಂದು ಏರ್ಪಾಡಿನಿಂದ ಹಾಡಿನ ಬಗ್ಗೆ ಅನೇಕ ಸಂಗತಿಗಳು ಒತ್ತಟ್ಟಿಗೆ ಸಿಗುತ್ತವೆ.

೨. ಜೀವನದ ಪೂರ್ವರಂಗ ಶೃಂಗಾರ

ದೇಹೋಹಂಭಾವವು ದಟ್ಟವಾಗಿರುವಲ್ಲಿ ಶೃಂಗಾರವು ಅಂಕುರಿಸುತ್ತದೆ. ಹೆಣ್ಣು ಹೆಣ್ಣಲ್ಲದೆ ಇನ್ನೇನೂ ಅಲ್ಲಿ ಕಾಣದು; ಗಂಡು ಗಂಡಲ್ಲದೇ ಬೇರೆ ಏನೂ ಕಾಣಸಿಗದು. ಹೆಣ್ಣಿಗೆ ಗಂಡೇ ಮಾಯೆ; ಗಂಡಿಗೆ ಹೆಣ್ಣೇ ಮಾಯೆ; ಹೆಣ್ಣು ಗಂಡು ಪರಸ್ಪರರನ್ನು ಪ್ರೀತಿಸುವುದು ಪ್ರೇಮಕ್ಕಾಗಿಯಲ್ಲ. ಪ್ರೇಮವು ಆತ್ಮದ್ದು. ದೇಹಕ್ಕಿರುವದು ಕಾಮ. ಕಸ್ತೂರಿಯಲ್ಲಿ ಮುಮ್ಮಡಿ ಮಣ್ಣು ಬೆರೆತರೂ ಅದು ಕಸ್ತೂರಿಯೇ ಅನಿಸುವಂತೆ, ಪ್ರೇಮದಲ್ಲಿ ನಾಲ್ಮಡಿ ಕಾಮದ ಕೊಳೆ ಬೆರೆತರೂ ಅದಕ್ಕೆ ಪ್ರೇಮದ ವಾಸನೆ ಬರುವದರಿಂದ ಅದೂ ‘ಪ್ರೇಮ’ವೆನ್ನಿಸಿಕೊಳ್ಳುತ್ತದೆ. ಪ್ರೇಮದ ಕಂಪು ಬಡೆದ ಕಾಮ-ಕಸ್ತೂರಿಯ ಹವ್ಯಾಸದಲ್ಲಿ ಹೆಣ್ಣು-ಗಂಡು ಮಾಡುವ ತ್ಯಾಗವಾಗಲಿ, ಸಹಿಸುವ ಕಷ್ಟವಾಗಲಿ, ಪಡುವ ಅಪಮಾನವಾಗಲಿ ಅಪಾರವಾದುದು. ಆದರೆ ಅದರಿಂದ ಕಡೆಗಾಗುವದು ಸುಲಭವಲ್ಲ. ಹಸಿವೆಯ ಮುಂದೆ ದೇವನು ಅನ್ನರೂಪದಿಂದ ಬಂದಾಗಲೇ ಅವನನ್ನು ಗುರುತಿಸುವಂತೆ, ಕಾದಲನ ಮುಂದೆ ದೇವನು ಹೆಣ್ಣಾಗಿಯೇ ಬರಬೇಕು, ಆಗಲೇ ದೇವನೆಂದು ಗುರುತಿಸಲಿಕ್ಕಾಗುವದು. ಹೆಣ್ಣಿನ ಮಾಯೆಗೆ ಸಿಲುಕಿ ಗಂಡು ಪಡುವ ಬವಣಿಗಿಂತ, ಗಂಡಿನ ಮಾಯೆಗೆ ಬಲಿಯಾಗಿ ಹೆಣ್ಣು ಪಡುವ ಬವಣಿಯು ಅತಿಶಯವಾಗಿದೆ. ಅದನ್ನು ಸಹಿಸುವದಕ್ಕೆ ಹೆಣ್ಣೇ ಮೊದಲಾಗಬೇಕು. “ಸಾಗರದಷ್ಟು ದುಃಖ”ಗಳಲ್ಲಿಯೂ, ಸಾಸಿವೆಯಷ್ಟು ಸುಖಕ್ಕಾಗಿ ಮೊದಲು ಹಂಬಲಿಸುವದು ಗಂಡು; ಬೇಟ ಗಂಡಿನದು; ಮಾಟ ಹೆಣ್ಣಿನದು.

ವಿರಾಗಿಗಳ ಕಣ್ಣಲ್ಲಿ “ಮಾಂಸದ ತಡಿಕೆ, ಮೂತ್ರದ ಕುಡಿಕೆ; ಮಲದ ಹಡಿಕೆ”ಯಾಗಿ ಕಾಣುವ ಹೆಣ್ಣು ಕಾದಲನ ಕಣ್ಣಿಗೆ ಅದೆಂಥ ಒಪ್ಪು! ಅದೆಂಥ ಒಳ್ಪು !! ನೋಡಿರಿ.

ಹೆಣ್ಣಸಲ ಜಾತ ಪದ್ಮಿನಿ | ಸುರತ ಚಂದ್ರುಣಿ |
ಹೊಂಟೆ ನಾಗಿಣೀ | ನೋಡ ತಿರುಗಿ ||
ಮರಿಗುದರಿ ಕುಣಸಿದಂಗ ನಾಜೂಕ ನಿನ್ನ ನಡಿಗಿ |
ಹೊಳಿ ನೀರ ಥೆರಿಯ ಹೊಡೆದಾಂಗ ಒದುತೆ ನಿಲಗಿ ||
ತ್ರಿಲೋಕ ತಿರುಗಿ ಬಂದೆ ಹಾಡಿ | ಇಲ್ಲ ನಿನ್ನ ಜೋಡಿ |
ರಂಬಿ ನಿನ್ನ ನೋಡಿ ನಾಚ್ಯಾಳ ಕಡಿಗಿ ||
ಗರಗರಾ ತಿರವತೇ ಕಣ್ಣ | ಕೆಂಪ ಮೈಬಣ್ಣ |
ಬೇತಲ ಸಣ್ಣ | ಕತ್ತಿಧಾರಿ |
ನಿನ್ನ ಕಂಡ ಪಕ್ಷಿಗಳು ನಿಂತವು ಹೌವಹಾರಿ
ನಿನ್ನ ನಡಿಗಿ ನೋಡಿ ನವಿಲ ಕುಣಿವುದು ಮರೆತಿತರಿ |
ನಿನ್ನ ಶಬ್ದ ಕೇಳಿ ಆಯ್ತು ಲುಬ್ದ | ಕೋಗಿಲೆ ನಾಚಿ ಕದ್ದ
ವನಾ ಬಿಟ್ಟು ಎದ್ದ | ಹೊಯ್ತು ಹಾರಿ ||
ನಿನ್ನ ಕಂಡು ಬಂತ ಭವಳೀಕಿ | ಕಡೆದಂಗಾಯ್ತ ಚಿಕ್ಕ |
ಪರಿವಾಳದ್ಹಕ್ಕಿ ಕೇಳ್ಯಾವ ಒದಗಿ |
ಆದಿವಿಷ್ಣುನರ್ಧಾಂಗಿ ಅಲ್ಲ ಇಕಿಯ ಸರಿ
ಇಕೀ ನಡಾ ನೋಡಿ ಸಿಂಹ ನಾಚಿ ತಿರುವಿತ ಮಾರಿ |
ಏನು ತಪ್ಪ ಹುಟ್ಟಿದಿ ತರುಣಿ | ಬತ್ತೀಸಲಕ್ಷಣಿ |
ಮಾತ ಕೇಳಿ ಗಿಣಿ | ನಾಚಿ ಬೆದರಿ ||

ಅದರಂತೆ ಅಸಲಜಾತಿ ಹೆಣ್ಣಿನ ಮೂಗು, ಕಂಡು, ಉಳಿದ ಪಕ್ಷಿಗಳಂತೆ ಚವಣಕ್ಕಿಯು ನಾಚಿಕೊಂಡರೆ, ಹಾಲಕ್ಕಿಯು ಗಪ್ಪು ಚಿಪ್ಪಾಯಿತು. ಗರುಡ ಪಕ್ಷಿಯೂ ಬೆಗಡುಗೊಂಡಿತು. “ನಾಗಿಣೀ ಒಂದಿಷ್ಟು ತಿರುಗಿ ನೋಡು” ಎಂದರೆ ಮರಿ ಕುದುರೆಯಂತೆ ಕುಣಿಯುತ್ತ ಸಾಗಿಯೇ ಬಿಟ್ಟಳು-ಹೊಳೆ ನೀರಿನ ತೆರೆ ಹೊಡೆದಂತೆ ನೀರಿಗಿ ಒದೆಯುತ್ತ ಹೋಗಿಯೇ ಬಿಟ್ಟಳು. ಅದನ್ನು ಕಂಡು ಚಿಕ್ಕೆ ಕಡಿದಂತಾಗಿ ಕಣ್ಣಿಗೆ ಬವಳಿಕೆ ಬರುವದು ಆಶ್ಚರ್ಯವೇ? ಆದಿ ವಿಷ್ಣುವಿನ ಅರ್ಧಾಂಗಿಗಿಂತಲೂ, ದುರ್ಮಿಲಳಾದ ‘ರಂಭೆ’ಗಾಗಿ ಕಾದಲನು “ನಾ ಬಿಟ್ಟಿನಿ ಅನ್ನ ನೀರ ನಿನ್ನ ಕಾಲಾಗ ಸೊರಗಿ”ದೆನೆಂದರೆ ಅದೇನು ದೊಡ್ಡ ಮಾತಲ್ಲ.

ಹಲಸಂಗಿ ಊರ ಪ್ಯಾಟಿವಳ | ಅರಿಸಿನ ತೆನಿಯಂಥ ಹುಡುಗಿ |
ಮನಸೀನಾಗ ನಟ್ಟಿದಾಳ ಎಳಿ ಕಮಲ |
ನಿತ್ಯ ಕನಸಿನಾಗ ಬರ್ತಾಳೀಕಿ ಹಗಲ್ಲೆಲ್ಲ | ಎನ್ನ ಮನಸ ಇಟ್ಟು ನೆನಸಿ ಹೋದ್ವು ಕೈಕಾಲ |
ಕಾಂತಿ ರೂಪ ಕಂಚಿನ ಗೌರಿ ಹಂತಿಲ್ಹೋಗಿ ಕೇಳಿದರ
ಮಿಂಚಿದ್ಹಾಂಗ ಆಯ್ತು ಮುಂಗಾರಿ ಸಿಡಲಾ | ಮನ್ಮಥಮಲಾ |
ಪಟ್ಟದ ಗೌರಿಯಂಥ ರಂಬಿ | ದೃಷ್ಟಿಯೊಳಗ ಕಂಡೆನಪ್ಪ
ಸೃಷ್ಟಿಯೊಳಗ ಹುಟ್ಟಿ ಬಂದಳೇನು ತಿಳಪ |
ಸರಳ ಪ್ಯಾಟ್ಯಾಗ್ಹಾಯ್ತು ಹೊಂಟಿ ಎರಳಿ ನೋಟದ ಒನಪ |
ನಿಂದ್ರ ಸುಂದ್ರಿ ನಾನೂ ಬರತ ಮುರಕ ಮಾಡಿ ಮುಂದಕ ಹೋದಿ
ಹುಣ್ವಿ ಚಂದ್ರ ಮೂಡಿದ್ಹಂಗ ಚಂದ್ರುಣಿ ರೂಪ | ಜ್ಯೋತಿ ರತ್ನದದೀಪ |
ಹಸರ ಹಳದಿಯಂಥ ಬಣ್ಣ | ಚಕ್ಕರದಂಗ ತಿರುವಿ ಕಣ್ಣ
ನಕ್ರ ಸಣ್ಣ ಸುಳಿಹಲ್ಲ ತುಟಿಗೆಂಪು |
ನಂದು ಕುಂತ್ರು ನಿಂತ್ರು ಮನಸಿನಂದು ಹೊಗ್ವಲ್ದು ನೆಪ್ಪ |
ಗಲ್ಲದ ಮ್ಯಾಲ ಗರಿಯ ನತ್ತ ಮೆಲ್ಲಕ ಪೋರಿ ಮಾತಾಡಿದರ
ಕಲ್ಲಿನಂಥ ಮನಸ ಕರಗಿ ಆಯಿತ ಸಾಪಾ | ಈಕಿ ಸ್ವರ ಸಂಪ |

ನಿತ್ಯವೂ ಕನಸಿನಲ್ಲಿ ಬರುವ ಕಂಚಿನ ಗೌರಿಯ ಹತ್ತಿರ ಹೋಗುತ್ತಲೇ ಮನ್ಮಥದಮಲು ಮುಂಗಾರಿ ಸಿಡಿಲಿನಂತೆ ಮಿಂಚಿದಂತಾಗುವದು. ಅದೆಂಥ ವಾಸ್ತವ ಚಿತ್ರ! ಗಲ್ಲದ ಮ್ಯಾಲ ಗರಿಯ ನತ್ತು ಧರಿಸಿದ ಪೋರಿ ಮೆಲ್ಲಗ ಮಾತಾಡಿದರೆ ಕಲ್ಲಿನಂಥ ಮನಸೂ ಕರಗಿ ನೀರಾಗುವದರಲ್ಲಿ ಕೃತ್ರಿಮತೆ ಏನಿದೆ?

ಅಸಲಜಾತಿ ಹೆಣ್ಣು ಸಂಪಿಗಿ ತೆನೆಯಂಥ ಹುಡುಗನನ್ನು ಕಂಡಾಗ ಅದಾವ ಭಾವನೆಗಳು ಏಳಬಹುದೆಂಬುದನ್ನು ಪರಾಂತಃಕರಣಪ್ರವೇಶಿಯಾದ ಕವಿಯು ಬಣ್ಣಿಸಿದ್ದನ್ನು ಕೇಳಿದರೆ, ಸಹಜತೆಯನ್ನು ಮೀರಿಲ್ಲವೆಂದು ತೋರದಿರದು.

ಸಂಪಿಗಿ ತೆನಿಯಂಥ ಹುಡುಗ | ಸಂತ್ಯಾಗ್ಹಾಯ್ದು ಹೋಗತಾನ |
ಹಂತೀಲ್ಗೋಗಿ ಕೇಳಲೇನ ಹೆಸರ್‌|
ನನ್ನ ಕಾಂತನರೂಪ ಹೊಂಟಂಗ ಹುಣ್ವಿ ಚಂದರ್‌|
ಇವನ ಚಿಂತಿಯೊಳಗ ಜೀವಕಿಲ್ಲ ಸ್ಥಿರಾರ |
ಕನಸಿನಾಗ ಕಂಡಂಗಾಯ್ತು | ಮನಸಿನಂದು ಹೋಗುವಲ್ದು |
ಹಲಸಂಗಿ ಊರಾಗಿಲ್ಲ ಇವನಂಥವರ ||
ಇಂದ್ರಲೋಕದ ಪುರುಷ ಇವ | ಅರಸನ ಹೊಟ್ಟಿಲೆ ಹುಟ್ಯಾನೇನ
ಸರಸ ಕಾಮನಾಟಕ್ಹಾನ ದುರುಳ್‌|
ಇವನ ರೂಪ ಅಪರೂಪ | ಹಚ್ಚಿದಾಂಗ ಚಂದ್ರದೀಪ
ಏನು ತಿಳಪ ಹೊಟ್ಯಾಗಿನ ಕರಳ್‌||
ಕುಂತ್ರ ನಿಂತ್ರ ಇವನ ಧ್ಯಾನ | ಜೀವಕಿಲ್ಲ ಸಮಾಧಾನ
ನಿದ್ದಿ ಇಲ್ಲ ಕಣ್ಣಿಗಿ ಹಗಳಿರಳ್‌|
ಇವನ ಹಸ್ತ ಏನ ಶಿಸ್ತ ಮಾವಿನತರಳ್‌
ಮ್ಯಾಲ ಕುಂದಲದ ಹರಳ ಉಂಗುರೊಪ್ಪೊ ಬೆರಳ್‌|
ಮನಸೋತ ನನ್ನ ಕೂಡ | ಮಾತ ಒಂದೂ ಆಡವೊಲ್ಲ |
ಪ್ರೀತಿಯಿಟ್ಟು ನನ್ನ ಮ್ಯಾಲ ಸರಳ್‌||

ಹಾಯ್ದು ಹೋದರೆ ಹೆಸರು ಕೇಳಬೇಕೆನಿಸುವದು. ಹುಣ್ಣಿವೆ ಚಂದ್ರನಂಥವನ ಚಿಂತೆಯಲ್ಲಿ ಜೀವಕ್ಕೆ ಸ್ಥಿರತೆಯೆಲ್ಲಿ? ಕನಸಿನಲ್ಲಿ ಕಂಡಂತಾಗಿದ್ದು, ಮನಸ್ಸಿನಿಂದ ಅಳುಕದಾಗಿದೆ. ಮೊದಲು ಇಂದ್ರಲೋಕದವನಾಗಿದ್ದು, ಇಲ್ಲಿ ಯಾರೋ ಅರಸು ಮಗನಾಗಿ ಹುಟ್ಟಿರಬೇಕು! ಇವನ ತೋಳ ತೊಡಿ-ಕೇದಿಗಿ ಹೊಡಿಯಿದ್ದ ಹಾಗೆ. ಅಪರೂಪವಾದ ಇವನ ರೂಪದ ಚಂದ್ರದೀಪವು ಹೊಟ್ಟೆಯೊಳಗಿನ ಕರುಳುಗಳೆಲ್ಲ ಕಾಣಿಸುವಂತೆ ತಿಳಿಯಾಗಿದೆ. ಮಾವಿನ ತಳಿರಿನಂಥ ಹಸ್ತ! ಬೆರಳಿನುಂಗರಿಗೆ ಒಪ್ಪುವ ಕುಂದಲದ ಹರಳು! ಮನಸೋತ ನನ್ನೊಡನೆ ಒಂದು ಮಾತು ಸಹ ಆಡಬಾರದೇ? ನಿದ್ರೆಯಿಲ್ಲದೆ ಹಗಲಿರುಳು, ಕುಳಿತಲ್ಲಿ ನಿಂತಲ್ಲಿ ಇವನನ್ನೇ ಧ್ಯಾನಿಸಿದರೂ ಜೀವಕ್ಕೆ ಸಮಾಧಾನವೇ ಇಲ್ಲ.

ಚಂದನದ ಗೊಂಬಿಯಂಥ, ರತ್ನದ ಕಂಬಿಯಂಥ, ಆದಿಜಗದಂಬೆಯಂಥ ಠೀವಿಯ ಜಾತಪದ್ಮಿನಿಯನ್ನು ಬಣ್ಣಿಸುವದು ಬಿಗಿಯಲ್ಲ ಆದರೆ ಒಬ್ಬ “ಗಿಡ್ಡ ಪೋರಿ’ಯ ಬೆಡಗನ್ನು ಚಿತ್ರಿಸಿ, ಮನಸೋಲುವಂತೆ ಮಾಡುವದು ಅದೆಷ್ಟು ಬಿಗಿಯಾಗಿದ್ದರೂ, ಕವಿ ಅದರಲ್ಲಿ ಯಶಸ್ವಿಯಾದುದನ್ನು ಇಲ್ಲಿ ಕಾಣಬಹುದು.

ಗಿಡ್ಡಪೋರಿ ಮಡ್ಡಹರಿ ಮಕರ್‌| ಕಣ್ಣ ತಿರವಿ ಚಕ್ಕರ್‌|
ನಿಂತು ನೀ ನಕ್ಕರ ಉಳ್ಳತಾವ ಮುತ್ತಾ ||
ವಸ್ತ ಕಾರಿಪಟ್ಟಿ ವಾಲಿಗಂಟಿ ಮೂಗನಾಗ ಸರಜಾಮ ನತ್ತಾ |
ಶ್ರೀಸಾನಿಧಪ ಪಧನೀಸ ಸರಿಗಮ ನಾರಿ ನಿನ್ನ ಗತ್ತಾ |
ನಮ್ಮ ಕಂಡು ಹೋಗಬ್ಯಾಡ ಚದರಿ | ಓಡಿದಾಂಗ ಬೆದರಿ |
ಕಾರ್ಹುಣವೆತ್ತಾ ||
ಏನು ಮುಂಗಾರಿ ಮಳಿಹಾಂಗ ಸಿಡಲ್‌| ಬಿದ್ದಿತು ಖಡಲ್‌|
ಎದಿ ಅಂತು ಧಡಲ್‌| ಆಗಿ ನಿಂತೆ ಮೂಕಾ |
ನಿನ್ನ ಸುರತ ಕಂಡು ಮೈಮರೆತ ಮಾತಾಡಧಾರಿತುತರಕ |
ಮತ್ತ ಯಾದ ಹಚ್ಚಿ ಶೋಧ ಮಾಡಿ ಕೇಳತ ನಿನಗೊಂದು ಸೋಕಾ ||
ನಿನ್ನ ಎದಿಮ್ಯಾಲ ಕುಚಗಳು ಬಗರಿ | ನಿಂತಾವ ನಿಗರಿ |
ಗಂಡೆರಳಿ ಚಿಗರಿ ಹಾಂಗ ನಿನ್ನ ರೂಕಾ |
ಸಣ್ಣ ಶಾಲಿಯುಟ್ಟು ಓಣಿಗುಂಟ ಪೋರೀ ಎಷ್ಟು ಮಾಡತಿ ಮುರಕಾ |
ನೀರಥೇರಿ ಹಾಂಗ ನಿರಗಿ ಒದ್ದು ನಾರಿ ನಡೆವುದು ನಾಜೂಕಾ |
ಆನಿ ನಡಿದಾಂಗ ಮಾಡಿ ಸಿಂಗಾರ | ಮೈಮ್ಯಾಲ ಬಂಗಾರ |
ಬಿದ್ದಾಂಗ ಬೆಳಕ ||

ತುಂಬುಪ್ರಾಯದ ಚಕ್ರಗಣ್ಣಿನ ಹುಡುಗಿ, ನಕ್ಕರೆ ಮುತ್ತು ಉರುಳುವವು. ಕೊರಳಲ್ಲಿ ಕಾರಿಪೆಟ್ಟಿ, ಕಿವಿಯಲ್ಲಿ ವಾಲಿಗಂಟಿ, ಮೂಗಿನಲ್ಲಿ ಸರಂಜಾಮದನತ್ತುಳ್ಳ ಬಾಲೆಯನ್ನು ಕಂಡಾಗ ಮುಂಗಾರಿಯ ಸಿಡಿಲು ಕಡಲ್ಲನೆ ಬಿದ್ದಂತಾಗಿ ಎದೆ ಧಡಧಡಿಸಿ ಮೂಕನಾಗಿ ನಿಲ್ಲಬೇಕಾಗುತ್ತದೆ. ಉಟ್ಟಿದ್ದು ಸಣ್ಣಶಾಲಿ ಓಣಿಗುಂಟಿ ಆ ನಾರಿ ನಡೆಯುವ ಜೋಕೆ. ಆನೆಯನಡಿಗೆಯ ಆ ಸಿಂಗಾರವನ್ನು ಕಂಡು “ನಿನ್ನ ಬೆಲಿ ಹೇಳಬಾಲಿ ಎಷ್ಟರದ | ಹೋಗಬ್ಯಾಡ ಮುರದ | ವಸ್ತ ಬಂಗಾರದ ತಗೋ ನಿನ್ನ ತೂಕಾ” ಎಂದರೆ ಆಶ್ಚರ್ಯವಿಲ್ಲ.

ಗಿಡ್ಡಪೋರಿಯಂತೆ ‘ಕರಿಹುಡಿಗೆಯು’ ಕವಿಯ ಸೌಂದರ್ಯ ದೃಷ್ಟಿಯಲ್ಲಿ ಅಡಗಿಕೊಂಡಿರಲಾರಳು. ಕರಿಹುಡಿಗಿ ಉಟ್ಟಿದ್ದೂ ಅಂಥ ಸೀರೆಯನ್ನೇ. ತಲೆಗೂದಲು, ಹುಬ್ಬು, ಕಣ್ಣು ಎಲ್ಲಾ ಅದೇ ಬಣ್ಣದವು. ಗಲ್ಲದ ಮೇಲೆ ಚುಚ್ಚಿದ ಹಣಚಿಬೊಟ್ಟು ಬೇರೆ ಬಣ್ಣದಲ್ಲ. ಹಲ್ಲಿಗೆ ಕರಿ ಜಾಚೇಲಿ ಹಚ್ಚಿದೆ. ಕೊರಳಲ್ಲಿ ಕರಿಮಣಿ, ಕೈಯೊಳಗೆ ಕಂಗೋಟಿನ ಬಳಿ.

ನೀ ಬಾರ ಕರ್ರಾನ ಕರಿ ಸ್ವಾಗಿ | ಆಯ್ತು ತಗಬೀಗಿ |
ಹೋಗತೇಸಾಗಿ | ಹಾಯ್ದು ಇಂಬಾ |
ಗಣಿಹೂಡಿ ಮಿಣಿಯಮ್ಯಾಗ ನಡೆದಂಗಾಯ್ತು ಡೊಂಬಾ |
ಏನ ಸುದ್ದ ತೋಳ ತೋಡಿ ಕರಿಕಾಜಿನ ಕಂಬಾ |
ಮದವೇರಿಸಿ ಹೊಂಟಂಗ ಗೂಳಿ | ಕರಿಯ ಗಂಡೆರಳಿ |
ಖಂಡೋಬನ ಮುರಳಿ | ಕುಚಾ ಕುಂಭಾ ||

ಯಾರ್ಯಾರು ಇಲ್ಲ ನಿನ್ನ ಸರಿ | ಸೃಷ್ಟಿಯೊಳು ಧೊರಿ
ಕಂಡಾಂಗ ಎರಿ | ನೆಲಿಯಗುಂಬಾ |
ಮುಂಚ ಮಥನ ಮಾಡುವಾಗ ಹುಟ್ಟಿಸಿದಾನೆ ಸಾಂಬಾ |
ಕರಿಕತ್ತಲಿರೂಪಕ ಅನಿಸಿದೆ ಜಗದಂಬಾ |
ನಿನ್ನ ಕಂಡು ಹಾರಿತು ನನ್ನ ಹರಣ | ತುಸು ಇಲ್ಲ ಕರುಣ
ಕರೀ ನೀಲವರಣ | ನಿಂದು ಜಂಬಾ ||

ಕಾಡಿಗೆ ತೆನೆಯಂಥ ಮೂಗಿನಿಂದ, ಹೆಣ್ಣು ನಾಗಿಣಿಯಂತೆ, ಸಣ್ಣ ಸ್ವರದ ಧ್ವನಿಯಿಂದ ಕೋಗಿಲೆಯಂತೆ ತೋರುವಳು. ಕರಿ ಕುತನಿಯಂಥ ಕಾಮಿನಿ, ಕಾರೆಳ್ಳದ ಗೊನಿ, ದೃಷ್ಟಿಯ ಮಣಿ ಇಂಥ ವರ್ಣವನ್ನು ಶಿವನುಸಹ ಬಹು ಕಷ್ಟದಿಂದ ಹುಟ್ಟಿಸಬೇಕಾಗುತ್ತದೆ.

ಏನು ಹೇಳಲಿ ನಾರಿ ನಿ ಕಪ್ಪ | ಎಂಥ ನಿನ್ನ ರೂಪ |
ಆಯಿತ ನೆಪ್ಪ | ನೀಲದ್ಹಣ್ಣಾ ||

ಈ ವರೆಗಿನ ಹೆಣ್ಣು-ಗಂಡುಗಳೆಲ್ಲ ಮರ್ತ್ಯಲೋಕದ ಮಾನವರು. ಶ್ರೀಕೃಷ್ಣನ ಕಾಲಕ್ಕೆ ಆಗಿಹೋದ ಗೋಪಿಕಾಸ್ತ್ರೀಯರು, ಅದೇಕೋ ಈ ಲೋಕದವರಲ್ಲವೆಂಬ ಕಲ್ಪನೆ, ಎಲ್ಲೋ ಆಳದಲ್ಲಿ ಮನೆಮಾಡಿರುತ್ತದೆ. ಆದುದರಿಂದ ಅವರ ಸ್ವರೂಪವೇ ಬೇರೆ, ಅವರ ನಿಲುಮೆಯೇ ಬೇರೆ. ಆ ನಾರಿಯರ ಬಳಗವನ್ನು ನೋಡಿ-

ನಾರ್ಯಾರ ಹೆಜ್ಜಿಗತ್ತ ಕೈ ಕೈ ಹಿಡಿವುದು | ಪುಗಡಿ ಹಾಕಿ ಆಡುದು |
ಗಾಯನ ಮಾಡುದು | ರಾಗ ಛೆತ್ತೀಸ ರಾಗಿಣಿ |
ಬಾವನ್ನ ತಾಳ ಮ್ಯಾಲ ರಾಗ ಮಾಡತಾಳ ಬನದ ಕೋಗಿಲಾಂಗ ಧನಿ |
ಸ್ತ್ರೀಯರ ಚಲುವಕಿ ಒಬ್ಬರು ಸೇಲ |
ನಾ ಮೇಲ ನೀ ಮೇಲ | ಬೇಯಲ ಗುಲ್ಲಾಲ |
ಓಕಳಿ ಮೈಯಲ್ಲ | ಹಚ್ಚಿದಾಂಗ ಹಿಲ್ಲಾಲ | ಮೂಡಲತರಂಗಿಣಿ |
ಭಂಗಾರ ಬಳಿ ಚಂದ್ರದ ಹಾರ ಕೊರಳಾಗ ರತ್ನದ ಮಣಿ ||
ತಬಲ ತಂಬೂರಿ ವೀಣಾ ತಗೊಂಡು ನಾಚ ಮಾಡ್ತಾಳ ನಾಯ್ಕಣಿ |
ತಾಳ ಮದಲಿ ಗತ್ತಿನ ಒಳಗ ರಾಧಕಿ ಕುಣಿಯತಾಳ ಶಿರೋಮಣಿ |

ಅದೇ ದೃಶ್ಯವನ್ನು ಪ್ರತಿಸ್ಪರ್ಧಿಯಾದ ಕವಿಯು ವರ್ಣಿಸಿದ ಬಗೆ ಹೇಗೆಂದರೆ –

ಎರಳಿ ನೋಟದಂಥ ಹೆಣ್ಣ | ಸಿಂಹನಾಂಗ ನಡ ಸಣ್ಣ |
ಕುಡಿ ಹುಬ್ಬ ಕಾಡಿಗಿ ಕಣ್ಣ | ಹಾಂಗಿತ್ತು ಗೋಪ್ಯಾರ ವರ್ಣ |
ತುಟಿ ಹವಳದ ಕುಡಿ |
ಬಂಗಾರ ವಸ್ತ ಸಿಂಗಾರ ಮಾಡಿ ಇಟ್ಟಾರ ಬೆಂಕಿಯ ಕಿಡಿ ||

ತೀರ ಜಡವಾದ ದೇಹೋಹಂ ಬುದ್ಧಿಯಲ್ಲಿಯೂ, ಕವಿಜೀವನಕ್ಕೆ ಬೆಳಕಿನ ರೇಷಗಳು ಮೂಡದೆ ಇರುವುದಿಲ್ಲ. ಆ ಮಾತು ಬುದ್ಧಿಗೋಚರವಾದಂತೆ, ಅನುಭವಗೋಚರವೂ ಆಗ ಬೇಕಾಗುತ್ತದೆ.

ಈ ದೇಹವೆಂಬುದು ಹೆಣ್ಣ | ಆಗುದು ಮಣ್ಣು |
ಗಂಡ ಜೀವ ಬಣ್ಣ ಇರುದಾ |
ಜೀವ ಕಡಗಿ ಆದಮ್ಯಾಲ ದೇಹ ಕತ್ತಲಗೊಯ್ದೂ |
ಬೆಳಕ್ಹಾರಿ ಆಕಾಶದಕಡಿ | ಒಳಗಿನ ಕುಡಿ |
ಹೋಯ್ತು ಇನ್ನು ಹಿಡಿ ಹಾರಿ ಜಿಗಿದಾ ||

೩. ರಾಜಕರ್ಮದ ವೀರ

ಕಣ್ಣಿಗೆ ಕಾಣಿಸಿದ ಮಾತ್ರಕ್ಕೆ ಸೌಂದರ್ಯದ ಸಾರ್ಥಕವಾದಂತಲ್ಲ. ಆ ಸೌಂದರ್ಯವನ್ನು ಸೂಸುವ ವಸ್ತು ತನ್ನದಾಗಬೇಕೆಂದು ಪ್ರತಿಯೊಬ್ಬರಿಗೂ ಅನಿಸುತ್ತದೆ. ಕಾಮಿಸಿದ್ದು ಪ್ರಾಪ್ತವಾಗದಿದ್ದರೆ ಕ್ರೋಧ ಬರುವದಾಗಲಿ, ಪ್ರಾಪ್ತವಾದದ್ದು ಕೈಬಿಡಬಾರದೆಂದು ಲೋಭಗೊಳ್ಳುವದಾಗಲಿ ಹೊಸ ಮಾತಲ್ಲ. ಪಡಕೊಳ್ಳುವದಕ್ಕೆ ವೀರಸಾಹಸ ಬೇಕಾಗುವಂತೆ ಕಾಪಾಡಿಕೊಳ್ಳುವದಕ್ಕೂ ವೀರಸಾಹಸ ಬೇಕು. ಒಂದು ದೃಷ್ಟಿಯಿಂದ ಇದು ಶೃಂಗಾರದ ಮುಂದಿನ ನೆಲೆ. ವೀರಸಾಹಸಕ್ಕೆ ತಕ್ಕ ಕ್ಷೇತ್ರವೆಂದರೆ ರಣ-ರಂಗ. ಅದು ಜೀವನರಂಗ ಇರಬಹುದು. ಇಲ್ಲವೆ ಯುದ್ಧರಂಗ ಇರಬಹುದು. ವೀರಸಾಹಸ ಹೆಣ್ಣಿಗಾಗಿ ನಡೆಯಬಹುದು. ಇಲ್ಲವೆ ಯುದ್ಧರಂಗ ಇರಬಹುದು. ವೀರಸಾಹಸ ಹೆಣ್ಣಿಗಾಗಿ ನಡೆಯಬಹುದು. ಇಲ್ಲವೆ ನೆಲವೆಣ್ಣಿಗಾಗಿ ನಡೆಯಬಹುದು. ‘ವತ್ಸಲಾಹರಣ’ವು ವೀರರಸದ ಲಾವಣಿಗೆ ವಸ್ತುವಾಗುವಂತೆ ‘ಭೀಷ್ಮಪರ್ವ’ವೂ ವೀರರಸಕ್ಕೆ ಉಗಮ ಸ್ಥಾನವಾಗುತ್ತದೆ. ‘ಸರ್ಜಪ್ಪನಾಯಕ’ನು ಸೋತರೂ, ‘ಕಿತ್ತೂರ ಚೆನ್ನಮ್ಮ’ಳು ಮಡಿದರೂ, ಶ್ರೀರಂಗಪಟ್ಟಣದ ಕೋಟೆ ನೆಲಸಮವಾದರೂ ವೀರ ಕಾರ್ಯð ನಡೆಯಲೇಬೇಕು. ಅಲ್ಲಿ ಜೀವವೂ ಕಾಲುಕಸ. ವೈರಿಗಳನ್ನು ಸದೆಬಡಿಯಲು ಸಿದ್ಧವಾದ ಕೈಯೇ ಆತ್ಮ ಬಲಿದಾನಕ್ಕೂ ಸನ್ನದ್ಧವಾಗಿರಬೇಕಾಗುತ್ತದೆ.

ಅಭಿಮನ್ಯುವಿಗೆ ಕೊಡಬೇಕೆಂದು ಹೆಣ್ಣು-ವತ್ಸಲೆಯನ್ನು ಬಳಿರಾಮನು ಕೃಷ್ಣನ ಮಾತು ಮೀರಿ ಕೌರವನ ಮಗ ಲಕ್ಷ್ಮಣಕುಮಾರನಿಗೆ ಕೊಡಲು ನಿರ್ಧರಿಸುತ್ತಾನೆ, ಆ ಸುದ್ಧಿ ಸುಭದ್ರೆಗೆ ತಿಳಿಯುತ್ತಲೇ ಆಕೆ ನೆಲಕ್ಕೆ ಬೀಳುವಳು. ಕಣ್ಣೀರು ಕರೆಯುವಳು. ತವರುಮನೆ ತನಗಿಲ್ಲದಾಯ್ತೆಂದು ಪರಿತಪಿಸಿದಳು. ಕೃಷ್ಣನು ಸಹ ಅಣ್ಣನಿಗೆ ಬುದ್ಧಿ ಹೇಳಲಿಲ್ಲವೇ- ಎಂದು ಸಂದೇಹಗೊಳ್ಳುವಳು. ಹೀಗೆ ಆಕೆಯ ಹೊಟ್ಟೆಯಲ್ಲಿ ಕಿಚ್ಚು ಸುರುವಿದಂತಯೂ ಮೇಲೆ ಮುಗಿಲು ಹರಿದುಬಿದ್ದಂತಯೂ ಆಗಿಬಿಟ್ಟಿತು.

ತವರುಮನೆಯ ಆಶೆಯಿಂದ ನನ್ನ ಪತಿ ಅರ್ಜುನನ ನಾ ಮರೆತೆನೋ |
ನಮ್ಮ ಅಣ್ಣಗೋಳದಿಂದ ಧೈರ್ಯ ಹಿಡಿದೇನೋ |
ನನ್ನ ನೋಡ್ತಾರ ಅಂತ ಭಾಳ ನಂಬಿದೆನೋ |
ಅಯ್ಯಯ್ಯೋ ದೇವಾ ಮುನಿದ್ಯಾ ಇಂದಿಗೆ –
ಅಂಥಾದ್ದೇನು ಅವರಿಗೆ ಮಾಡಿದೆನೋ |
ಇಂದಿಗಿ ಕೊಯ್ದಾರ ನನ್ನ ಕೊರಳವನೋ ||
ಆಸರಿಲ್ಲದೆ ನಾನು ಇರಲಾರೆನು ಅಯ್ಯಯ್ಯೋ ಉರಲ ಹಾಕಿಕೊಳ್ಳಲೇನೋ |
ನಮ್ಮಣ್ಣಗೋಳ ಮುಂದ ಪ್ರಾಣ ಬಿಡಲೇನೋ |
ಮಾರಿ ತೋರದೆ ಭೂಮಿಯ ಬಗದ್ಹೋಗಲೇನೋ |
ಎದ್ದೆದ್ದು ಬೀಳ್ತಾಳ ಪದ್ಮಗಂಧಿ ಹದ್ದ |
ಹಾವ ಕಚ್ಚಿಧಾಂಗ ಅಭಿಮನ್ಯನ್ನ |
ತೆಕ್ಹಾದು ಮಾಡತಾಳ ದುಃಖವನು ||

ಮಗನೆ ನಿನ್ನ ದೈವ ಏನಾತಂತ ಮರಮರಗಿ ಬಡಕೋತಾಳ ಎದೆಯನ್ನಾ |
ಈಗ ಹೋಗ್ಯಾರು ಪಾಂಡವರು ವನವಾಸವನಾ
ಅವರಿದ್ದರ ಬಿಡತಿದ್ದಿಲ್ಲ ಹೆಣ್ಣನ್ನ |
ಯಾರಿಗ್ಹೇಳಲಿ ಏನು ಮಾಡಲಿ ದಿಕ್ಕವನಾ |
ಇಲ್ಲದ್ಹಾಂಗ ಆಗೈತಿ ನನಗ ದಿಕ್ಕವನಾ |
ಕಿತ್ತಿದ್ಹಾಂಗ ಹಾರ್ಯಾಡು ಹಕ್ಕಿ ಪಕ್ಕವನಾ ||

ಸುಭದ್ರೆಯ ಆ ಅಳುವು-ಗೋಳಾಟಗಳು ಆಕೆಯಲ್ಲಿ ಹುದುಗಿದ ವೀರರಸವನ್ನು ಬಡಿದೆಬ್ಬಿಸಿದವಲ್ಲದೆ, ಅದನ್ನು ಕಣ್ಣಾರೆ ಕಂಡ ಅಭಿಮನ್ಯುವಿನಲ್ಲಿ ಅವಿತಿದ್ದ ಕಿಚ್ಚು ಕಿಚ್ಚಾಗಿ ಸಿಡಿಯಲಿಕ್ಕೆ ಕಾರಣವಾಗುವವು. ಅವರ ಹಾಡು ಕೇಳಿದ ಹೇಡಿ ಕುಣಿದು ಹುರಿದುಂಬಿ ಕುಣಿಯಬಹುದಾಗಿದೆಯೆಂಬುದು, ಕೆಳಗೆ ಕಾಣಿಸಿದ ಲಾವಣಿಯ ಚುಟುಕಿನಿಂದ ಗೊತ್ತಾಗುವದು.

“ನೆಲಕುಳ್ಯಾಡತಾಳ ಬಲು ಹೊರಳ್ಯಾಡತಾಳ ತಳಮಳಿಸಿ ತಾಳದ ಸಂಕಟಾ |
ಖಬರಿಲ್ಲಾ ಆಕಿಗಿ ಎಳ್ಳಷ್ಟಾ |
ಮಾತಾಡಸ್ತಾನ ಗಾಳಿ ಬೀಸ್ತಾನ ಕೈಹಿಡದೆಬ್ಬಸ್ತಾನ ಮಾಡಿ ಕೂಗ್ಯಾಟ |
ಅಭಿಮನ್ಯು ನೋಡಿದಾ ಕಣ್ಮುಟ್ಟಾ ||”

ಅಷ್ಟರಲ್ಲಿ ಸುಭದ್ರೆಯ ಸ್ಮೃತಿ ತಪ್ಪಲು ಚಿಕ್ಕವನಾದ ಅಭಿಮನ್ಯು ಗಾಬರಿಯಾಗಿ ಅಳತೊಡಗುತ್ತಾನೆ. ಬಹಳ ಹೊತ್ತಿನ ಮೇಲೆ, ಸುಭದ್ರೆಯು ಎಚ್ಚರಗೊಂಡು, ಕೈಯಲ್ಲಿ ಒಂದು ಕಲ್ಲು ತಕ್ಕೊಂಡವಳೇ ಎದೆಯನ್ನು ಗುದ್ದಿಕೊಳ್ಳುವದಕ್ಕೆ ತೊಡಗಲು ತಾಯಿಯ ಕೈಹಿಡಿದು, ಆಕೆಗೆ ಸಮಾಧಾನವಾಗುವಂತೆ ನುಡಿಯುವ ವೀರವಾಣಿಯನ್ನು ಕೇಳಬೇಕು.

“ಸುಭದ್ರೆ ಅಳುವುದು ಕೇಳಿ ಅಭಿಮನ್ಯು ಅಳಬ್ಯಾಡ ತಾಯಿ ಧೈರ್ಯ ಹಿಡಿಯಿನ್ನಾ |
ನಿಮ್ಮ ಅಣ್ಣಗಳ ಆಶಾ ಇನ್ನು ಬಿಡು ನೀನ |
ನನಗೆ ಕೊಟ್ಟಂಥ ಹೆಣ್ಣ ಆ ವತ್ಸಲನ |
ತರದಿದ್ದರ ನಮ್ಮ ತಂದಿ ಅರ್ಜುನನ ವೀರ್ಯದಿಂದ ಹುಟ್ಟಿ ಫಲವೇನ |
ಮೂರು ಲೋಕದೊಳಗಾಗುವೆ ಅವಮಾನ ||

ಕೇಳೆ ತಾಯಿ ನಿನ್ನ ದಯಾಯಿದ್ದರ ಪೂರ್ವಾದಿ ಪಶ್ಚಿಮಕ್ಕಿಡುದರಿದೇನ |
ಪಶ್ಚಿಮಾದ್ರಿ ಪೂರ್ವಕ ತರುವೆನು ನಾನ |
ಒಂದೇ ಬಾಣದಿಂದ ಆರಿಸುವೆ ಸಮುದ್ರವನಾ ||
ವಾಸುಕಿ ಫಣಿ ಮೆಟ್ಟಿ ಕುಣಿದಾಡಿ ಪಾತಾಳದಿಂದೆಳತರುವೆನ ಶೇಷನ್ನ |
ಬುಡಮೇಲು ಮಾಡುವೆ ಬ್ರಹ್ಮಾಂಡವನಾ ||

ಇಂಥಾ ಮಗನು ನಾನಿನ್ಹಂತಿರಲಿಕ್ಕೆ ನೆನಸುದ್ಯಾಕ ನಿಮ್ಮ ಅಣ್ಣಗಳನಾ |
ನೆಪ್ಪ ತಗೀಬ್ಯಾಡ ದನದ್ಹಿಂಡ ಕಾಯವನ |
ನೇಗಿಲ್ಹೊಡೆವ ಒಕ್ಕಲಿಗ ಬಳಿರಾಮನ್ನ |
ಮಾನಭಂಗ ಮಾಡಿ ಆ ಹೆಣ್ಣ ತಂದರ ಆಗನ್ನ ಪಾಂಡವರ ಕುಲರನ್ನಾ |
ಯಾಂವ ಒಯ್ತಾನ್ನಡಿ ಆ ಹೆಣ್ಣನ್ನ ||”

ಭೀಷ್ಮಾರ್ಜುನರಲ್ಲಿ ಯುದ್ಧವು ಪ್ರಾರಂಭವಾಗುತ್ತದೆ. ಅರ್ಜುನನ ಮೊದಲ ಬಾಣದಿಂದ ಭೀಷ್ಮಾಚಾರ್ಯರನ್ನು ವಂದಿಸುವದೂ, ಭೀಷ್ಮಾಚಾರ್ಯರು ಅಂತೆಯೆ ಆಶೀರ್ವಾದಿಸುವದೂ ಮುಗಿಯುವದು. ಕೃಷ್ಣನು ಅರ್ಜುನನಿಗೆ ಸಾರಥಿಯಾಗಿ ರಥ ನಡೆಸುತ್ತಿದ್ದಾನೆ. ಧ್ವಜಸ್ತಂಭದಲ್ಲಿ ಕುಳಿತ ಹನುಮಂತನು ಹೂಂಕಾರ ಮಾಡುತ್ತಾನೆ. ಆ ಕಾಲಕ್ಕೆ –

“ತ್ವಾಳಾಗಿ ಹೊಕ್ಕ ಅರ್ಜುನ, ಮಾಡಿ ಕುರಿ ಹಿಂಡ ಕೌರವರ ದಂಡ |
ಗರ್ಜನೆ ಮಾಡಿ ಬಾಣ ಹಾರಿಸಿದ ರುಂಡ | ಆಡಿದಾಂಗ ಚಂಡ |
ಆ ಭೀಮ ಹೊಡೆದ ಹಾಕಾರಿ ಗದಾ ಎತ್ತಗೊಂಡ | ಹೊಕ್ಕಾನಂವಾ ಪುಂಡಾ |
ಆನಿ ಸೊಂಡಿ ಹಿಡಿದು ಗರಗರ ತಿರುವಿಕೇರಿ ಒಗೆದ | ಒಗೆದ ತಾ ಒಗೆದಾ |
ಕಾಲಮಂದಿನ ಹಿಡಿದು ದರದರ ಎಳದು ಭೀಟಿ ಜಿಗಿದ | ಜಿಗಿದ ತಾ ಜಿಗಿದ ||
ಸಿಟ್ಟಿಗೇರಿ ಭೀಷ್ಮ ಕರರರ ಹಲ್ಲ ತಿಂದು ತೆಗೆದ | ತೆಗೆದ | ಬಾಣ ತೆಗೆದ ||
ಹೊಡೆದು ಶಪಾ ಮಾಡಿ ಕೆಡವಿದ್ದ ರಣದಾಗ – ಹೆಣಕ ತಟ್ಟಿದವು ರಥದಗಾಲಿ
ನೆತ್ತರದು ಹರಿದಿತ ಕಾವಲಿ | ತಗಿಯಾಕ ಹೊಂಟಿತರಿ ನದಿಯ ನೆಲಿ ||”

ಮೂಲೋಕದ ಗಂಡನಾದ ಅರ್ಜುನನು ಜಿಗಿಜಿಗಿದು ಭೀಷ್ಮ ಮುತ್ತಯ್ಯನೊಡನೆ ಯುದ್ಧ ಮಾಡಿ ದಣಿದು ಬೆವೆತನು. ಮುಕುಟಹನಿಯು ಕಣ್ಣಿನಬಳಿಯಲ್ಲಿಳಿದಿದ್ದನ್ನು ತೆಗೆದೊಗೆಯುವಷ್ಟರಲ್ಲಿ “ಭೀಷ್ಮ ಹತ್ತುಸಾವಿರ ತಲೆ ಹಾರಿಸಿದ್ದ”ನಂತೆ! ಆದರೇನು! ಮೊದಲೇ ನಿರ್ಣಯವಾದಂತೆ ದಂಡಿನ ದೊರೆಯು ನೆಲಕ್ಕೆ ಬೀಳುತ್ತಲೇ- ಲಗುಮಾಡಿ ದುರ್ಯೋಧನನನ್ನು ಕರೆಯೆಂದೂ, ತಲೆದಿಂಬು ತನ್ನಿರೆಂದೂ ಕೇಳುವನು. ಆಗ

“ಕೇಳಿ ದುರ್ಯೋಧನ ಅರಳಿಲೋಡ ತಂದಾ –
ನೀರ ತುಂಬಿ ಬಂಗಾರ ಝರಿ |
ಹಾಸಿಗಿ ತಕ್ಕ ಲೋಡಲ್ಲ ಸರಿ |
ಕಣ್ತೆರದು ನೋಡಿದ ಅರ್ಜುನನ ಮಾರಿ |
ಬಾಣ ದತಿಗಟಿ ಕಟ್ಟಿ ಕೊಟ್ಟಾನ ಆವಾಗ ಮಾತ ಸರಾಸರಿ |
ಕೂಡೀತರಿ ||
ಶ್ವೇತವಾನ ಹೊಡದಾನ ಬಾಣ-ಪಾತಾಳದಂದು
ತಗದಾನ ಝರಿ ||
ಪುಟದೀತೋ ಮ್ಯಾಲ ಕಾರಂಜಿ ಪರಿ |
ಬಾಯಾಗ ಬಿತ್ತು ನೀರಿನ ಧಾರಿ |
ದುರ್ಯೋಧನ ಜಂಬುಕನ ಸಮಾನ- ನೀನೇ ಒಬ್ಬ
ಸಿಂಹನ ಮರಿ | ಅಂದಾ ಭೀಷ್ಮಾಚಾರಿ ||”

ವೀರಜೀವನವು ವಿಜಯಕಾಲದಲ್ಲಿ ಸಾರ್ಥಕಗೊಳ್ಳುವಂತೆ, ಅಪಜಯ- ವಿನಾಶ ಕಾಲಗಳಲ್ಲಿ ನೂತನ ವೀರವೃತ್ತಿಯನ್ನು ಪ್ರೇರಿಸುತ್ತದೆ. ಟಿಪ್ಪುವಿನ ಕಥೆಯಾಗಲಿ, ಕಿತ್ತೂರಿನ ಕೊನೆಯಾಗಲಿ ಅದನ್ನೆ ತೋರಿಸಿ ಕೊಡುತ್ತದೆ. ಆ ಸೋಲಿಗೂ ಆ ವಿನಾಶಕ್ಕೂ ಇನ್ನಾವುದೋ ಮಹಾನಿಯಮವು ಕಾರಣವಾಗಿ ತೋರ್ಪಡುತ್ತದೆ. ಟಿಪ್ಪುಸುಲ್ತಾನನಿಗೆ ಇರುವ ಅನುಕೂಲತೆಗಳಿವು;

ರಣಬಲಗರ್ವಿಗಳೆದೆದಲ್ಲಣಿಸುತ ಹುಬ್ಬನುಗಂಟಿಕ್ಕಿ
ನೂರಾರ್ ದುರ್ಗುಣಗಳೆಸೆದವು ಗಿರಿ ಗಿರಿ ಶಿಖರದಿ ಬಲು ಸೊಕ್ಕಿ ||
ಕಾವೇರಿಯ ಹೊಳೆ ಮಂಗಳ ಜಲದಲ್ಲಿ ಸುತ್ತಲು ಸುತ್ತಿರಲು
ಮೂರು ಸುತ್ತಿನ ಕೋಟೆಯಗೋಡೆ ಹೊರಹೊರ ಬಳಸಿರಲು
ದಿಡ್ಡೀಬಾಗಿಲ ಮೇಲೆತ್ತರದಲಿ ಬಿರುದನಿ ಬೀರುತ್ತ
ದಿಗಿಲೆರಚುತ ಬಲ್ ಬುರಜುಗಳಿದ್ದವು ಸಜ್ಜನು ತೋರುತ್ತ ||

***

ಅಲ್ಲದೆ, ದೊಡ್ಡ ದೊಡ್ಡ ನೂರಾರು ಕಣಜಗಳವಿದ್ದವು ನಗರದಲಿ
ಹದಿನೆಂಟೂ ಬಗೆಯುಣಸಿನ ಧಾನ್ಯವನೊಳಕೊಂಡವುಗಳಲಿ
ಕಾರೊಡಲಾಯುಧ ಶಾಲೆಗಳಲ್ಲಿ ನೆಲಸಿದವಾದರಲಿ |
ರಣದ ಭಯಂಕರ ಶಸ್ತ್ರಸಮೂಹಗಳುರಿ ಬಾಯ್ ಪರಿಕರದಿ ||

***

ಹೊರತಾಗಿ, ಅವನೋ ಎಂದರೆ ನಾಯಕ ತಲೆಮಣಿ ತಾನೇ ಮಹಾಶೂರ |
ಕಳದೊಳಗೆದುರಿಸಿ ನಿಲ್ಲುವರಿಲ್ಲ ಅವನೇ ರಣಧೀರ
ಆದರೇನು? ಕಣ್ಣೆವೆ ಮುಚ್ಚಿ ಬಿಡುವಷ್ಟರ ಒಳಗೆ
ಭೀತಿಯನರಿಯದ ನಮ್ಮಾ ವೀರನೇ ಮಡುದುರುಳಿದ ಕೆಳಗೆ ||

ಅಮಂಗಳ ಕಳೆ ಬೀರುವ ನಡುಮಧ್ಯಾಹ್ನವು ನಡುಗುತ್ತ ಬಂದಂತಾಯ್ತು. ಹೆಣವು ಮೌನವನ್ನು ಸಾರಿ ನೆಲಕ್ಕುರುಳಿತು! ಹೆಣಗಳ ಬಣಬೆಯ ಮಧ್ಯದಲ್ಲಿ ಸುಲ್ತಾನನು ಕುಸಿದನು! ‘ಅಲ್ಲಾ’ ದೇವರ ಮಿಗೆ ವಿಖ್ಯಾತಿಯ ಬಲ್ಲವೆಡಗಿತ್ತೋ? ಭಗವತ್ ಪ್ರೇರಣೆಯಿತ್ತೆಂದುಯಲ್ಲವೆ- ಆ ಬಲ ಈಗೆಲ್ಲಿ?

‘ಆಹಾ! ಕೃಷ್ಣನ ಕೃಪೆಯ ಕಟಾಕ್ಷವು ತೊಲಗಿದಾ ಒಡನೆ |
ನಮ್ಮಾ ದೊರೆಯೂ ನಮ್ಮ ರಾಜ್ಯವೂ ಹೋದವು ದಡಬಡನೆ ||”

ಮಹಿಮಾಶಾಲಿ ಕಮ್ರುದ್ದೀನನಾಗಲಿ, ಕೀರ್ತಿಯನ್ನೊಲಿಸಿದ ಷೇರಖಾನಾಗಲಿ ಎಲ್ಲಿಯೂ ಹೋಗಿರಲಿಲ್ಲ. ಶೂರ ನಾಯಕನಾದ ಮೀರಸಾದಕನೂ, ಸುಂದರದಾಯಕನಾದ ಮೀರಾಹುಸೇನನೂ ಅಲ್ಲಿಯೇ ಇದ್ದರು. ಸುಬ್ಯಶಯ ಮೂರ್ತಿ, ಬಿಜ್ಜರಜಂಗ, ಬಿರುದಿನ ಭೀಮ್ರಾಮ ಮೊದಲಾದವರೊಡನೆ ಕದನ ನಿರ್ಭಯನಾದ ದಿವಾಣ ಪೂರ್ಣಯ್ಯನು ಮಂತ್ರಾಲೋಚನೆಯಲ್ಲಿ ಬೃಹಸ್ಪತಿಯ ಹಾಗೆ! ಆದರೆ-“ಕಮಲನಯನ ತನ್ನಾ ಮುಗುಳ್ ನಗೆಯನು ಹಿಂದೆಗೆದ ಒಡನೆ | ಆ ಸಾಮ್ರಾಜ್ಯದ ವೈಭವವೆಲ್ಲ ಹೋಯಿತು ದಡಬಡನೆ ||”

ಅಂಗಳ ಹೊಡಿ ಹೊತ್ತಿಗೆ | ಗಂಗಾಳ ಬೆಳಗು ಹೊತ್ತಿಗೆ ಬಂದಾರ ಈರವ್ವನ ಕರಿಯಾಕ |
ನಾನ ಹೇಳಿದ ಮಾತ ನೀ ಕೇಳ ಈರವ್ವ ಆಳುವ ರಾಜ್ಯ ನಿನಗೆಂದ |
ನೀ ಹೇಳಿದ ಮಾತ ನಾ ಕೇಳಿದರೆ ತಂದೆ ಮಲ್ಲ ಸರ್ಜನ ಮಗಳಲ್ಲ |
ನೀ ಹೇಳಿದ ಮಾತ ನಾ ಕೇಳಿದರ ತಾಯಿ ಚೆನ್ನವ್ವನ ಮಗಳಲ್ಲ |
ಈರವ್ವ ನಿರಕತೊಟ್ಟ ನೆಲೆನಿಂತ | ಈರವ್ವ ಕೈಮುಗಿದ ಮೇಲಣ ಹತ್ತ್ಯಾಳ |

ಎಂದು ಕಿತ್ತೂರ ಈರವ್ವನು ಅಸಹಾಯಕಳಾಗಿದ್ದರೂ, ಬೇಬರ ಸಾಹೇಬನು ಕೊಟ್ಟ ವಿಷವನ್ನು ಬಾಯಿಗಿರಿಸಿಕೊಂಡು ದುರಂತ ಮರಣವನ್ನಪ್ಪಿದ ಕಥೆ ರೋಮಾಂಚನಕಾರಿಯಾಗಿದೆ.

ಹತ್ತಕಾಲ ನಿಚ್ಚಣಿಕಿ ಹತ್ಯಾಳ ಈರವ್ವ ಹತ್ತಿ ನೋಡ್ಯಾಳ ತನ್ನ ಸೀಮೆ |
ಕಿತ್ತೂರ ವಾಡೇಕ ದಿಕ್ಕ ಇಲ್ಲದಾಂಗ ಐತೆ ನಮ್ಮಪ್ಪ ನನಗ ಹೇಳಿ ಹೋಗಲಿಲ್ಲ
ಕಿತ್ತೂರ ವಾಡೇವು ಇಂದಿಗೆ ಹಾಳಾಯ್ತು | ಮಲ್ಲಸರ್ಜನ ಮಹಲಿನಾಗ |
ಮಂಗ್ಯಾ ಮನಿ ಕಟ್ಯಾವು | ಈರವ್ವ ಗೋಡಿಗೆ ಹಾದು ಅಳತಾಳ |
ನನ್ನ ಬೆನ್ನಿಲ್ಲೊಬ್ಬ ಅಣ್ಣನಿದ್ದರ ನನ್ನಂತೆ ನ್ಯಾಯ ನುಡಿತಿದ್ದ |
ನನ್ನ ಬೆನ್ನಿಲೊಬ್ಬ ಅಣ್ಣನಿದ್ದರ ನನ್ನಂತೆ ನ್ಯಾಯ ನುಡಿತಿದ್ದ |
ನನ್ನ ಬೆನ್ನಿಲೊಬ್ಬ ತಮ್ಮ ನಿರಬಾರದೇನ ನನ್ನಪ್ಪನ ವಂಶ ಉಳಿತಿತ್ತ |
ಈರವ್ವ ಕಂಬಕ ಹಾದು ಅಳತಾಳ ||

ಹೀಗೆ ತಳಮಳಿಸಿ ಈರವ್ವ ಸಾಯಲು ಬೇಬರ ಸಾಹೇಬನು ಕದನಗಳನ್ನು ತೆಗೆದು ನಗುತ್ತಾನೆ. ಹಾಲು ಅನ್ನದ ಬುತ್ತಿ \ ಕೈಲಿ ಚಿನ್ನದ ಕತ್ತಿ | ಹೊಸಕೋಟಿ ಏರೀ ಮೇಲೆ ಹೊರಪಯಣ ಮಾಡಿದ ಸರಜಪ್ಪನಾಯಕನು

ಕುರುಬರ ಸಂಗವ ಮಾಡಿ ಕುರಿಗಳ ಮೇಯ್ಸೋದ ಕಲಿತು |
ಬಂಡ ನೂಲೋದು ಕಲಿತು | ವಲ್ಲಿ ನೆಯ್ಯೋದ ಕಲಿತು |
ಕಾರೆಗಿಡದಲ್ಲಿ ಕೈಜಗಳ ಸರಜಪ್ಪನಾಯ್ಕ ||

ಒಂದ ಹೆಣ ಹಳ್ಳದಲ್ಲಿ ಬಿತ್ತು. ಲಾಯದಲ್ಲಿ ಕುದುರೆ ಬಿತ್ತು. ಸರಜಪ್ಪನ ಕತ್ತಿ ಬಿತ್ತಣ್ಣ ರಣಸೂರದಲ್ಲಿ. ಸೂಲೆಯ ಮನೆಯಲ್ಲಿ ಸುಖನಿದ್ರೆ ಮಾಡುವಾಗ ಆಕೆ ಮೋಸ ಮಾಡಿ ಫಿರಂಗಿಗಳಿಗೆ ಹಿಡಿದು ಕೊಡುವಳು.

ಮುಂದೆ ಮುನ್ನೂರು ದಂಡು | ಹಿಂದೆ ಇನ್ನೂರು ದಂಡು |
ನಡುವೆ ಫಿರಂಗಿ ಗುಂಡು | ಸುತ್ತು ಮುತ್ತು ಫಿರಂಗಿ ದಂಡು |

ಈ ಬಗೆಯಾಗಿ ಹೆಸರುಪಡೆದ ಸರ್ಜಪ್ಪನಾಯಕನ ವೀರ ಕಥೆಯನ್ನು ಲಾವಣಿ ಕವಿಯು ಹೃದಯಂಗಮವಾಗಿ ಹೆಣೆಯುತ್ತಾನೆ. ವೀರ ಜೀವನಕೆ ಹೋರಾಟವೇ ಜೀವಾಳ. ಹೋರಾಟದ ಕೊನೆಯು ವಿಜಯವಾಗಲಿ, ದುರಂತವಾಗಲಿ ಆಗಿಯೇ ತೀರಬೇಕು!