೪. ನಗೆಯ ಲಾವಣಿ

ನಕ್ಕು ನಗಿಸುವ ನಗೆಯಿದ್ದಂತೆ ಅಳಿಸಿ ನಗುವ ನಗೆಯೂ ಲಾವಣಿಗಳಲ್ಲಿ ಕಂಡುಬರುತ್ತದೆ. ಸಮಾಜದ ಮರುಳುತನಕ್ಕೆ ಕನ್ನಡಿ ಹಿಡಿದು ಒಮ್ಮೆ ತೋರಿಸಿದರೆ, ಅದರ ದುರುಳುತನಕ್ಕೆ ರಾವುಗನ್ನಡಿ ಹಿಡಿದು ಇನ್ನೊಮ್ಮೆ ತೋರಿಸುವ ಲಾವಣಿಗಳು ಸಾಕಷ್ಟುಸಿಗುತ್ತವೆ. ಅವುಗಳಲ್ಲಿ ಒಂದೆರಡು ಸಂದರ್ಭಗಳನ್ನು ಅರಿತುಕೊಳ್ಳೋಣ.

ಸತಿಪತಿಗಳು ಹಿತದಿಂದ ಮಲಗಿಕೊಂಡಾಗ ಹೆಂಡತಿ ಕೇಳುತ್ತಾಳೆ. “ಬಸುರು ಇದ್ದೇನೆ ಹುಟ್ಟಿದ ಕೂಸಿಗೆ ಹೆಸರು ಏನಿಡೋಣ?” ಇದನ್ನು ಕೇಳಿ ಗಂಡನು ಹಿಗ್ಗಿದರೂ ಹುಸಿನಗೆ ನಕ್ಕು “ಸುಳ್ಳು! ನನ್ನ ಮುಂದೆ ಇಂಥ ಮಾತು ಆಡಬೇಡ” ಎಂದು ಸಂಶಯ ಪಡುವನು. “ಔ ಶಿವನೆ ಎಂಥ ಮಾತು. ತಿಂಗಳ ಮೇಲೆ ಒಂದಿನಾ ಆಯ್ತು. ಮಂದಿಯಂತೆ ಸುಮ್ಮಸುಮ್ಮನೆ ಹೇಳುವಳಲ್ಲ” ಎಂದು ವಿಶ್ವಾಸ ಹುಟ್ಟಿಸಲು ಯತ್ನಿಸುವಳು. ಈ ಮಾತಿನಲ್ಲಿ ಗಂಡನಿಗೆ ತನಕ ಇನ್ನು ಮಾತ್ರ ದೇವರು ಕೊಟ್ಟ | ಸಂಶಯವಿಲ್ಲ ಎಳ್ಳಷ್ಟು” ಎಂದು ಬಗೆದು ಮುಂದಿನ ಸಿದ್ಧತೆಗೆ ಅಣಿಯಾಗಬೇಕೆಂದು ಸೂಚಿಸುವನು.

“ಚೊಚ್ಚಿಲ ಮಗ ಹುಟ್ಟಿದರ | ಗಚ್ಚಿಲೆ ಬಚ್ಚಲ ಮುಚ್ಚಬೇಕ |
ಹುಚ್ಚಿಯೇನು ಕೂಸೀಗಿ ನೀರು ಹನಿಸೂದ್ಹ್ಯಾಂಗ ||
ಕೊಡ ಹರವಿ ಇಡೂ ಜಾಗ ಸನೀದಾಗ ಮಾಡಬೇಕ |
ಉಳ್ಳಾದಾಂಗ ಸುರಳಿಸುತ್ತಿ ಸಿಂಬಿ ಇಡಬೇಕ ||
ಸಣ್ಣ ನೂಲಿನ ಎಣ್ಣೀ ಅರವಿ | ತಣ್ಣಗಾದರ ಕಡದಾಡೀನ |
ನುಣ್ಣಗೊರಸಿ ಮೈಯ ಚೊಕ್ಕ ಇಡಬೇಕ |
ಖುಷಿಯಿಂದ ಕೂತುಕೊಂಡು ಅಕ್ಕರ್ತಿ ಬಂದು ಎತ್ತಿಕೊಂಡು |
ಹೌಸದಿಂದ ಮುದ್ದು ಕೊಟ್ಟು ಜೋಗುಳ ಪಾಡಬೇಕ ||”

ತೊಟ್ಟಿಲ ಕಟ್ಟುವದಕ್ಕೆ ಸ್ಥಳ ಸರಿಯಾಗಿಲ್ಲ; ಜಂತಿಗೆ ಕುಲಾಬಿ ವಂಕಿಲ್ಲ. ರೊಕ್ತ ಕೊಟ್ಟರೂ ಕಂಬಾರನು ಹೊತ್ತಿಗೆ ಮಾಡಿಕೊಡುವದಿಲ್ಲ. ಸಂತೆಗೆ ಹೋಗಿ ತರೋಣ ರೊಕ್ಕ ಹೋದರೂ ಹೋಗಲಿ-ಮೊದಲಾದ ವಿಚಾರಗಳಲ್ಲಿ ತೊಡಗುವನು; ಅದನ್ನು ಕೇಳಿ ಹೆಂಡತಿ “ತಿಂಗಳ ಬಸರಾ ಕೇಳಿಕೊಂಡು ಗುಂಗ ಭಾಳ ಸೇರ್ಯಾದವ್ವ | ಮಂಗನಂಗ ಮಾಡತಾನ ಮಾಡಲಿನ್ನೇನ” ಎಂದು ಚಿಂತಿಸುವಳು. “ಎಲ್ಲಿಯಾದರು ಹುಡುಕಾಡಿ ಹೊರಸು ತಂದಿಡು, ಧೈರ್ಯವಾಗುತ್ತದೆ. ಅಗ್ಗಿಷ್ಟಿಕೆಯ ವ್ಯವಸ್ಥೆ ಮಾಡು, ಗಟ್ಟಿಯಾದ ಕುಳ್ಳು ಕೊಂಡುಕೋ. ಮೊದಲೇ ಕಾಡಿಗೆ ಹಿಡಿದಿಡು. ಶಾವಿಗೆ ಸಿದ್ಧವಾಗಲಿ. ಒಂದು ಮಗಿ ತುಪ್ಪ ಸಂಗ್ರಹಿಸು.”

ಕೂಸಿಗ್ಹಾಲ ಹಾಕುವ ಥಾಲಿ ಮಿಳ್ಳಿ | ಸಣ್ಣ ಬಟ್ಟಲದಾಗ ಮಗ ಉಳ್ಳಿ |
ತವರಮನೀದು ತರಹೋಗ ಮಳ್ಳಿ | ಆಯಿ ಮುತ್ಯಾಂದು ಮಗ ಹೆಸರ್ಹೇಳ್ಲಿ |

ಇಗಾ! ನೋಡು !! ಹಡೆಯುವ ದಿನಗಳಂತೂ ಸಮೀಪಸಿದವು. ಮುಂದೆ ಎಂಟೇ ತಿಂಗಳು ಉಳಿದವು. ಕೆಟ್ಟಗಿಟ್ಟ ಹಡೆದರೆ ನಿನ್ನ ಚಟ್ಟ ಬೆಳಗುವೆನು-ಎಂದು ಖಡಾಖಡಿಯಾಗಿ ಹೇಳುವನು.

ಇಷ್ಟು ಸಿದ್ಧತೆ ಮಾಡುವಷ್ಟರಲ್ಲಿ ಒಂದೂವರೆ ತಿಂಗಳಾಯ್ತು; ತಡೆದು ಹೊರಗಾದ ಮೇಲೆ ಏನು ಉಪಾಯವಿನ್ನು? “ಹೆಣ್ಣು ಹುಟ್ಟಿದರೆ ಬಣ್ಣದ ಒನಿಕೆ ಸಣ್ಣದು ಬೇಕು” ಎಂಬ ಸ್ವರ ಹೊರಡಲು ಅದನ್ನು ಕೇಳಿ ಗಂಡನ ತಲೆ ತಿರುಗುವದು. ಮತಭೇದದಾದಂತಾಗಿ ಕಡಿದಾಡಿ-ಬಡಿದಾಡಿ ಗಂಡನು ಹೊಲದ ಕೆಲಸಕ್ಕೆ ಹೋಗುವನು. ಬಂದ ಬಳಿಕ ಹೇಳುತ್ತಾಳೆ-

“ನೀ ನನ್ನ ಬಡಿಯಬಾರದಿತ್ತ | ಕೂಸಿಗೆ ಪೆಟ್ಟು ಪೂರಸ್ತ |
ಹೆಣ್ಣಲ್ಲ ಗಂಡು ಹುಟ್ಟಿತ್ತ | ಥೇಟ ಹೋಲಿಕಿ ನಿನ್ನಂಗ ಇತ್ತ ||”
ಈ ಮಾತು ಕೇಳಿ ಗಂಡನಿಗೆ ಅದೆಷ್ಟು ಸಂಕಟವಾಗದಿದ್ದೀತು?
“ಗಂಡಳತಾನ ಭೋರಾಡಿ ಕುಂತ | ಮೊದಲೆ ದೇವರು ಕುಡಬಾರದಿತ್ತ |”
ಇನ್ನು “ತುಂಟ ತುಂಟರಿಗೆ ಗಂಟು ಬಿದ್ದರೆ ಏನಾಗುವದು?” “ಗರದಿ ಆಗತಾದ ಗಮ್ಮತ !”
ಬೀಗನ ಮನಿಗಿ ಬೀಗ ಹೋದನೋ ಅಕ್ಕನ ಮಾತಾಡಿಸಿ ಬರಬೇಕಂತ |
ಅಕ್ಕನ ಗಂಡ ಭಾಳ ಜೀನ ಇದ್ದನೋ ಅವನಿಗಿಂತ ಹೆಂಡತಿ ಕೀಳಾ |
ಒಪ್ಪೊತ್ತು ಉಂಡವರು ಉಪವಾಸ ಮಾಡತಿದ್ರು ಎರಡ್ಹೊತ್ತು ತಿಂತಿದ್ದಿಲ್ಲ ಕೊಳ |

ಇಂಥ ಜೀನರವರು, “ಹೋಳಿಗೆ ಉಣ್ಣುವಂತಾಗಿದೆ”ಯೆಂಬ ಗಂಡನ ಮಾತಿಗೆ ಹೆಂಡತಿ ಒಪ್ಪುವಳು. ಗೋಧಿ, ಬೇಳೆ ಕೈಮುಟ್ಟಿ ತೆಗೆದುಕೊಟ್ಟು, ಎಣ್ಣಿ-ಬೆಲ್ಲ ಅಂಗಡಿಯಿಂದ ತರಹೇಳಿ ಗಂಡನು-“ಬೇಗ ಅಡಿಗೆ ಮಾಡು. ನಾನು ಜಳಕ ಮಾಡಿ ಬರುವೆ”ನೆಂದು ಹಳ್ಳಕ್ಕೆ ಹೋಗುವನು. ಸಾಧಿಸಿದಂತೆ ನೆರೆಹಳ್ಳಿಯ ಬೀಗ ಅಂದರೆ ಹೆಂಡತಿಯ ತಮ್ಮನು ಬರುತ್ತಿರುವದನ್ನು ಹಳ್ಳದಲ್ಲಿಯೇ ಗುರುತಿಸಿ, ಮುಂಚಿತವಾಗಿ ಓಡಿ ಬಂದು ಹೆಂಡತಿಗೆ ತಿಳಿಸುವನು. ಆಕೆ ಮಾಡಿದ ಅಡಿಗೆಯನ್ನೆಲ್ಲ ಮುಚ್ಚಿಟ್ಟು ‘ತಲೆಬೇನೆ’ಯೆಂದು ಮಲಗಿಕೊಳ್ಳುವಳು. ಬಂದ ಬೀಗನಿಗೆ

ಮೂರ್ದಿನಾ ಆಯ್ತು ಕೊಳ್ನೀರಾ ಕಂಡಿಲ್ಲ |
ನೋಡೋ ಬೀಗ ನಮ್ಮ ತಾಪತ್ರಾ | ದಿಕ್ಕಿಲ್ಲ ರೊಟ್ಟೀ ಮಾಡವರ |
ಹೆಂಡ್ತಿ ಅನುವಾಕಿ ತಲಿಕಟ್ಟಿ ಮಲಗ್ಯಾಳ ಸಾಯುವ ಹಾಂಗ ಆಗಿ ಜೇರಾ ||

ಎಂದೂ ಬಾರದ ನೀನು ಬಂದಾಗ ಹೀಗಾಗಬಾರದಾಗಿತ್ತು. ಮನೆಯಲ್ಲಿ ಹಯನಿದ್ದರೆ ಏನಾದರೂ ಪಕ್ವಾನ್ನ ಮಾಡಿ ಉಣ್ಣಿಸಬಹುದಿತ್ತು. “ನೀನು ಇಲ್ಲಿದ್ದರೆ ಉಪವಾಸ ಮರಗುವಿ. ನಿನ್ನೂರಿಗೆ ಹೊರಟುಹೋಗು” ಎಂದು ಸಲಹೆ ಕೊಡುವನು. ಆದರೆ ಇವರಿಗಿಂತ ತುಂಟನಾದ ಆ ಬೀಗನಿಗೆ ಸಂಶಯ ಬಾರದಿರುವದೇ?

ಹೊರಣರಿಯೂ ಕಲ್ಲ ಹೊರಗ್ಯಾಕ ಇಟ್ಟಾದ ಇದರದು ಏನು ಚಮತ್ಕಾರ |
ಮನಿಯೆಲ್ಲ ಹಿಡಿದsದ ಕಮರಿಂದ ದುಂದಕರ ಖಚಿತ ಮಾಡ್ಯಾರ ಹೋಳಿಗಿ ಇವರ ||

ನನ್ನನ್ನು ಕಳಿಸಿಕೊಟ್ಟು ತಾವೇ ಉಣ್ಣುವ ವಿಚಾರ ಮಾಡಿದ್ದಾರೆಂದು ಬಗೆದು, ತನ್ನೂರಿಗೆ ಹೋಗಿಬಿಡಲು, ಗಂಡನು “ಏಳೇಳು ಪೀಡೆ ಹೋಯ್ತೆಂದು” ಹೆಂಡತಿಯನ್ನು ಎಬ್ಬಿಸಿದನು. ಊಟಕ್ಕೆ ಸಿದ್ಧವಾಗಿ ಹಂಡತಿಗೆ ಒಂದು ಕಟ್ಟಳೆಯನ್ನು ಹೇಳುವನು. “ಇಬ್ಬರೂ ಕಣ್ಣು ಕಟ್ಟಿಕೊಂಡು ಉಣ್ಣಬೇಕು, ನನಗೆ ನೀನು, ನಿನಗೆ ನಾನು ತುತ್ತು ಮಾಡಿ ಉಣಿಸಬೇಕು. ಊಟ ಸಾಕು-ಸಾಕು ಅನ್ನುವಂತಾಗಬೇಕು.”

ಆದರೆ ಊರಿಗೆಂದು ಹೋಗ ಬೀಗನು, ಹೇಗೋ ಮರಳಿ ಬಂದು ಮಾಳಿಗೆ ಏರಿ ಕೂತಿದ್ದನೆಂದು ತೋರುತ್ತದೆ. ಇಳಿದವನೇ ಅವರು ಉಣ್ಣುವಲ್ಲಿ ಸಪ್ಪಳಿಲ್ಲದೆ ಬಂದು ಕುಳಿತು, ಬರುವ ಕೈತುತ್ತಿಗೆ ಬಾಯಿ ತೆರೆಯುತ್ತ ಗಪಗಪನೆ ನುಂಗತೊಡಗಿದದು. ಊಟಕ್ಕೆ ಕುಳಿತು ಇಷ್ಟೊತ್ತಾದರೂ ಒಂದೂ ತುತ್ತು ಬರಲೊಲ್ಲದೆಲ್ಲ ಎಂದು ಇಬ್ಬರಿಗೂ ಆಶ್ಚರ್ಯ! ಆದರೆ ಹೊಟ್ಟೆ ತುಂಬಿದ ಬಳಿಕ ಬೀಗನು ಡರ್ರನೆ ತೇಗಿದ್ದನ್ನು ಕೇಳಿ, “ಏನೋ ಘಾತಾಯ್ತು ಕಣ್ಣು ತೆರೆ”ಯೆಂದು ನೋಡುವಷ್ಟರಲ್ಲಿ ಬೀಗ ಎರಡೂ ಕಡೆಯ ತುತ್ತು ನುಂಗುತ್ತ ಗಡ್ಡ ಮೀಸೆಗಳೆಲ್ಲ ಸೋರಾಡುವಂತೆ ಉಂಡು ಕುಳಿತಿದ್ದಾನೆ. “ಬೀಗ ಇವ ಗುಲಾಮ ಭಾರಿ” ಎಂದಿದ್ದಕ್ಕೆ “ಹೋಗಿ ಬರತೀನಿ ಕುಶಾಲ ಇರ್ರಿ” ಎಂದು ಮರುನುಡಿದು ಹೊರಡುವನು.

ಪ್ರತಿಸ್ಪರ್ಧಿಯ ಅಪಸ್ವರದಲ್ಲಿ ಹಾಡುವದನ್ನು ಸಹಿಸಲಾರದೆ ಖಾಜೇ ಭಾಯಿ ಕವಿಯು “ಪಂಚಮುಖದ ಪರಮಾತ್ಮ ದೈವ ದೇವರ | ಕುಂತಿರಿ ಹಿರಿಯರ | ನನ್ನ ಮಾತ ಲಾಲಿಸಿವರಿಗಿ ಹಚ್ಚಿರಿ ಪೂರಾ” ಎಂದು ಆರಂಭಿಸಿ ಕಥೆಗೆ ತೊಡಗುತ್ತಾನೆ. ಅಪಸ್ವರದ ನಾಗೇಶಿಯೊಬ್ಬನು ಸೊಲ್ಲಾಪುರದ ಜಾತ್ರೆಯಲ್ಲಿ ಹಾಡುವದಕ್ಕೆಂದು ಡಪ್ಪ, ತಿಂತಿಣಿ ಸಮೇತವಾಗಿ ಹೊರಟನು.

ಬಿಸಿಲು ಹೊತ್ತಿನಲ್ಲಿ ದಣಿವಾರಿಸಿಕೊಳ್ಳಬೇಕೆಂದು ‘ಕಂಚಾಳ’ ಮರದ ಕೆಳಗೆ ಅಡ್ಡಾಗಿ ಎದ್ದರೂ ಬಿಸಿಲು ಕಡಿಮೆಯಾಗಿರಲಿಲ್ಲ. ‘ತಂಬೂರಿಯಂಥ ತಿಂತೀಣಿಯನ್ನು ಬಾರಿಸುತ್ತ ಹಾಡಲು ಆರಂಭಿಸಿದನು. ಅದನ್ನು ಕೇಳಿ ಮರದೊಳಗಿನ ದೆವ್ವ ಬಂದು “ಅಪ್ಪಾ ! ಬಿಸಿಲು ಹೊತ್ತಿನಲ್ಲಿ ಏಕೆ ಕೀಸರಿಡುವಿ? ನಿನ್ನ ಹಾಡು ಕೇಳಿ ನನ್ನ ತಲೆಬೇನೆಯೆದ್ದಿದೆ. ಸಾಕು ಮಾಡು” ಎಂದು ಕೇಳುತ್ತದೆ. “ಸಾಕುಮಾಡಿದರೆ ಹೊಟ್ಟೆಗೆ ಯಾರು ಕೊಡುತ್ತಾರೆ?” ಎಂದು ‘ಗಾವನ್ನ’ನ ಪ್ರಶ್ನೆ.

“ನಾನು ಹೇಳಿದಂತೆ ಮಾಡು. ಕಡೆತನಕ ಹಾಡುವದನ್ನು ಬಿಡು” ಅಂದಿತು ದೆವ್ವ.

“ಅದಾವ ಉಪಾಯ?”

“ಸೊಲ್ಲಾಪುರದ ಒಬ್ಬ ಶ್ರೀಮಂತನ ಮಗಳಿಗೆ ನಾನು ಬಡಕೊಳ್ಳುತ್ತೇನೆ. ಯಾವ ಮಾಂತ್ರಿಕನಿಗೂ ನಾನು ಬುಡಿವುದಿಲ್ಲ. ನೀನು ಬಂದು ಮಂತ್ರ ಹಾಕಿ ಬೂದಿ ಎರಚಿದಂತೆ ಮಾಡಿದರೆ ಸಾಕು. ನಾನು ಅಲ್ಲಿ ನಿಲ್ಲದೆ ಹೋಗಿಬಿಡುತ್ತೇನೆ. ಅದರಿಂದ ನೀನು ಕೇಳಿದಷ್ಟು ಪ್ರತಿಫಲ ಸಿಗುತ್ತದೆ. ಹಾಡುವದನ್ನು ಬಿಡುವೆಯಾ?”

ಗಾಯಕನು ಆ ಮಾತಿಗೆ ಒಪ್ಪಿಕೊಂಡು ಸೊಲ್ಲಾಪುರಕ್ಕೆ ಹೋದಾಗ ಶ್ರೀಮಂತನ ಮಡದಿಗೆ ದೆವ್ವ ಬಡಿದ ಸುದ್ದಿ ಊರೆಲ್ಲ ಹಬ್ಬಿತ್ತು. ಯಾವ ಮಂತ್ರ-ತಂತ್ರ ಮಾಡಿದರೂ ವ್ಯರ್ಥ ಖರ್ಚು ಮಾತ್ರ ಆಯಿತಲ್ಲದೆ ಯಾವ ಉಪಾಯವೂ ಆಗಿರಲಿಲ್ಲ. ಮಂತ್ರ ಹಾಕುತ್ತೇನೆಂದು ಗಾಯಕನು ಹೇಳಿ ಬೂದಿ ಎರಚಿದ ಕೂಡಲೇ ದೆವ್ವ ಬಿಟ್ಟು ಹೋಗಿದ್ದರಂದ, ಶ್ರೀಮಂತನಿಗೆ ಸಂತೋಷವಾಗಿ ಕೈತುಂಬ ಹಣಕೊಟ್ಟು ಕಳಿಸಿದನು.

ಆದರೆ ಕೆಲವು ದಿನ ಕಳೆಯುವಷ್ಟರಲ್ಲಿ ಸವಿಗಂಡ ದೆವ್ವನು ಆ ತರುಣಿಯನ್ನು ಮತ್ತೆ ಬಡಕೊಂಡಿತು. ಮತ್ತೆ ಮಂತ್ರ ತಂತ್ರ ಆರಂಭವಾಯ್ತು. ಹಿಂದೆ ಯಶಸ್ವಿಯಾದ ಗಾಯಕನನ್ನು ಹುಡುಕಿ ತಂದು ದೆವ್ವನ ಮುಂದೆ ಕುಳ್ಳಿರಿಸಿದರು.

ಗಾಯನ ಮಾಡುವ ಬಂದಿದ | ಮಂತ್ರ ಹಾಕಿದಂಗ ಮಾಡಿದ |
ಬಗಿಹರಿಯಲಿಲ್ಲ ಅದರಿಂದ | ತಂತೂನಿ ತಗೊಂಡು ಗಾಯನ ಸುರುಮಾಡಿದ |
ದೆವ್ವ ಕುಣಿಯತಿತ್ತರಿ ಮುಂದ | ಮತ್ಯಾಕ ತಾಳ ಬಂತಂದ |
ತಲಿಬ್ಯಾನಿ ಎದ್ದಿತ ಹೆಚ್ಚಿಂದ | ನಿನ್ನ ದರ್ಶನ ಬ್ಯಾಡೋ ಹೋಗತೀನಿ ಇಲ್ಲಿಂದ ||

ಅದೇನು ನಿಜವಾದ ಮಂತ್ರವೇ ? ಅವನು ಹೂಡಿದ್ದು ನಿಜವಾದ ತಂತ್ರವೇ? ಕೂಡಲೇ ದೆವ್ವ ಹುಚ್ಚೆದ್ದು ಕುಣಿಯತೊಡಗಿ ಬಿಟ್ಟುಹೋಗುತ್ತೇನೆ, ಹಾಡು ನಿಲ್ಲಿಸೆಂದು ಬೇಡಿಕೊಂಡಿತು.

ಅಪಸ್ವರ ಗಾಯನದಿಂದ | ದೆವ್ವಾದರು ನಿಂದ್ರುದಿಲ್ಲ ಮುಂದ |
ಸಭಾ ಹೆಂಗ ಕೇಳಬೇಕು ಚಂದ? ತಾಳ ಬಿಟ್ಟು ಹಾಡಿದರ ದೋಷ ಆದ ಅದರಿಂದ ||

ಎಂದು ಪ್ರತಿಸ್ಪರ್ಧಿಯನ್ನು ನಗೆಗೇಡು ಮಾಡಿದ ಲಾವಣಿಯು ಪ್ರಖ್ಯಾತವಾಗಿದೆ.

ನಗೆಗೇಡು ಮಾಡುವ ಮಾತಿನಂತೆ ವಿಡಂಬನವೂ ಕಠೋರವಾಗಿರುತ್ತದೆ. ತೇರದಾಳದ ಗೋಪಾಳ ದುರದುಂಡಿಯಂತೆ ಅನೇಕ ಕವಿಗಳು ಅಂಥ ಹಾಡುಗಳನ್ನು ಮಾಡಿದ್ದಾರೆ.

“ಊರತುಂಬ ಸಣ್ಣದೊಡ್ಡ ಸರ್ವರಿಗೆಲ್ಲಾ ಹೇಳತೀನಿ
ನನ್ನ ಕಡಿ ನಿನ್ನ ಮೊದಲ ಮಾಡಿಕೊಂಡಕೇರಾ |
ಬಾರಾ ತೇರಾ ವರ್ಷದಾಗ ಆಗಬೇಕಂತಾರ ದೊಡ್ಡ ಹಿರಿಯರಾ
ಕೂಲಿಗ್ಹೋಗೂದು ಬಿಟ್ಟು ಕಟ್ಟಿಗಿ ಕೂತು ಮಾಡಬೇಕಂತಾರ ಕಾರಭಾರಾ ||”

ಎಂಬ ಮಾತು ಎಂದಿನದಿದ್ದರೂ ಎಂದೆಂದಿಗೂ ಹೊಸದೆನ್ನುವಂತಿದೆ. ಇಂಗ್ರೇಜಿ ಅಮಲು ಬಂದ ಹೊಸದರಲ್ಲಿ – ‘ಇಂಗ್ರೇಜಿ ಅಮಲಾ | ಗಂಡಸರೊತ್ತುದು ಹೆಂಗಸರ ಕಾಲ’ವೆನಿಸಿ ‘ಹೆಣ್ಣ ಸರ್ಕಾರ ಇದು ಮಣ್ಣಾಗ ಹಾಕಲಿ’ ಎನ್ನುವ ಬೇಸರದ ನುಡಿಗಳು ಎಲ್ಲೆಲ್ಲಿಯೂ ಕೇಳಿಬಂದವು.

“ಸಾಲಿಗ್ಹಾಕಿ ಮಗನ ಶಾಣೇರ ಮಾಡತೀರಿ | ಹೆಂಡಿತಿನೂದು ಇವರು ಬಿಟ್ಟಿಲ್ಲ |
ಸಾಲಿ ಕಲ್ತಾವರೆಲ್ಲ ಶಾಣ್ಯಾರ್ಯಾಕ ಆಗಿಲಲ – ತಿನ್ನಾಕ ಮನಿಯಾಗ ಕೂಳಿಲ್ಲ |
ಸೆರೆಗಾರ ಅಂಗಡಿ ಶಿವನ ಗದ್ದುಗಿ ನ್ಯಾಯ ನಡಿಯುದು ರಾತರಿಹಗಲಾ |
ಸಿಂದಿ ಖಾನ್ಯಾಗ ಮುಂದೆಷ್ಟು ಇರತಾರ ಕುಡಿಯೂದು ಬಿಟ್ರು ಎಮ್ಮಿ ಹಾಲ ||
ಕಮಾನ ಝಟ್ಟ ಬಿಟ್ಟು ಕಾಲಾಗ ಬೂಟ ಮೆಟ್ಟು ಕೋಟ ತೊಟ್ಟು, ಮಾಡತಾರ ಒಣ ಡೌಲಾ |

***

ಇದೊಂದು ಚಿತ್ರವಾದರೆ ಇನ್ನೊಂದು ವಿಚಿತ್ರವಾಗಿದೆ. ಏನೆಂದರೆ-

ಆಣಿ ಮಾಡಿ ಮಾಡಿ ದೇಣೆ ತಂದಾರಪ್ಪ ಘಾಣ ಬರಕೊಟ್ಟಾರ ಎಲ್ಲಾ |
ಆಣಿ ಕಾಗದ ಮೇಲೆ ದೇಣೆ ಹೆಗಲಮೇಲೆ ಬರಕೊಂಡವರ್ಹೊಯಕೊಂಡರೆಲ್ಲಾ ||
ಕುಂಡಿ ತುಂಬಿದ ಮಂದಿ ಕೂಗಿ ದೇವರ ಹೇಳಿ ಹಿಡಿಸಿಕೊಂಡಾರಪ್ಪ ತಮ್ಮ ಕಾಲ |
ಮನಸ್ಯಾನ ಮೈಯಾಗ ದೇವರು ಬಂದರ ಜಗಲಿಮ್ಯಾಲ ಒಂದು ಇರಲಾಕಿಲ್ಲ ||
ಸತ್ತುಳ್ಳ ದೇವರು ಸಡಿಲಾದ ಕಾಲ |
ಜೋಳ ಸುರವಿ ತರತಾರಪ್ಪ ಬೆಲ್ಲ |
ಗಂಡ ನಟ್ಟ ಕಡಿದು ತಂದ ಜೋಳೆಲ್ಲಾ |
ಬೆಲ್ಲ ಆಗೂದು ಪೂಜಾರಿ ಪಾಲಾ ||

ಇಂಥ ನಗೆಯನ್ನು ಕುರಿತೇ “ನಗೆ ನಾಬಳ್‌ಘಾಯಿ” ಎಂಬ ಗಾದೆಯಾದಂತೆ ತೋರುತ್ತದೆ. “ಬಯ್ದು ಹೇಳಿದವರು ಬುದ್ದಿ ಹೇಳಿದರು” ಎಂಬ ಗಾದೆಗೆ ಈ ಬಗೆಯ ವಿಡಂಬನೆಗಳೇ ಮೂಲಾಧಾರವಾಗಿರಬಹುದೇ?

೫. ಲಾವಣಿ ಹಾಡು ಸಾಹಿತ್ಯವೇ?

ಲಾವಣಿಗಳು ಕರ್ಣೋಪಕರ್ಣವಾಗಿ ಬದುಕಿ ಬಂದಿವೆ. ಈವರೆಗೆ ವಿವರಿಸಿದ ಶೃಂಗಾರ, ವೀರ, ಹಾಸ್ಯದ ಲಾವಣಿಗಳು ತಮ್ಮ ಉದ್ದಿಷ್ಟವಾದ ರಸವನ್ನು ಪೋಷಿಸುವದರಲ್ಲಿ ಎಷ್ಟೂ ಕಡಿಮೆಯಿಲ್ಲ ಎಂಬುದನ್ನು ಅರಿತೆವು. ಜೀವನಕ್ಕೆ ಸಾಹಿತ್ಯವು ಪ್ರತಿಭೆ. ಸಾಹಿತ್ಯವು ಜೀವನದ ಪ್ರತಿಬಿಂಬ-ಎಂಬ ಮಾತಿಗೆ ಅವೆಷ್ಟೋ ಲಾವಣಿಗಳು ಉದಾಹರಣೆಯಾಗಿ ನಿಂತಿವೆ. ಉತ್ತಮ ಸಾಹಿತ್ಯಕ್ಕೆ ಅನೇಕ ಲಕ್ಷಣಗಳನ್ನು ಅನೇಕ ವಿಧವಾಗಿ ಹೇಳಿದ್ದಾರೆ. ಅವೆಲ್ಲವುಗಳನ್ನು ಕ್ರೋಢೀಕರಿಸಿ ಶ್ರೀ ಮಾಸ್ತಿಯವರು ಮೂರು ಮಾತುಗಳಲ್ಲಿ ಮುಗಿಸಿದ್ದಾರೆ. ೧. ಭಾವದ ಸೊಗಸು ೨. ಮಾತಿನ ಸೊಗಸು ೩. ರೀತಿಯ ಸೊಗಸು- ಈ ಅಳತೆಗಳಿಂದ ಲಾವಣಿಗಳನ್ನು ಅಳೆದರೆ ಲಾವಣಿಯ ಹಾಡು ಸಾಹಿತ್ಯವೇ ಎಂದು ಸ್ಪಷ್ಟವಾಗಿ ಹೇಳಬಹುದು. ಪದ್ಯಕ್ಕೊಂದು ದೇಹವೇ ಬೇರೆಯಾಗಿರುವಂತೆ, ಆ ದೇಹದ ನಡಿಗೆಯೂ ಬೇರೆಯಿರುತ್ತದೆ. ದೇಹದಲ್ಲಿ ಗುರುತಿಸದಿದ್ದರೂ ನಡಿಗೆಯಲ್ಲಾದರೂ ಗುರುತಿಸಬಹುದು. ಕುಂಟು-ಬೇರೆ ಕುಣಿತ ಬೇರೆಯೆಂದು ತಿಳಿಯದವರಾರು?

ಹಸಿ ಹಾಲು ಕರೆವುದು | ಬಸವನ ಹೆರೆವುದು
ಕಸುವನು ತರುವದು | ಹುಸಿಯಲ್ಲ ಗೋವಿನ ತಳಿಯೇ ||
ಧಾನ್ಯ ಕಾಳು ಬೆಳೆಯಲು | ತನ್ನ ಹೋರಿ ಕೊಡುವದು
ಘನ್ನ ರೋಗ ಕಳೆವುದು | ಅಣ್ಣ ಕೇಳದ್ರಿ ಗೋವಿಗೆ ಬೆಲಿಯೇ ||
ಮಕ್ಕಳಂತೆ ಸಲುಹಲು ಚಿಕ್ಕ ಕೂಸಿನಂತೆ ಅದು
ತಕ್ಕಂತೆ ಕಾಯುವ ನೆಲಿಯೆ ||

ಭಾವದ ಸೊಗಸಿನೊಂದಿಗೆ ರೀತಿಯ ಸೊಗಸೂ ಮಾತಿನ ಸೊಗಸೂ ಸೇರದಿದ್ದರೆ ಹಂಡ ಬಂಡಾಗುವಂತೆ, ಮಾತಿನ ಸೊಗಸಿನೊಂದಿಗೆ ಭಾವ-ರೀತಿಗಳ ಸೊಗಸು ಬೆರೆಯದಿದ್ದರೆ ಹಸಿಬಿಸಿಯಾಗುತ್ತದೆ. ಸಂಗಣ್ಣ ಕವಿಯ ‘ಪುಗಡಿಯಾಟ’ದ ಚಿತ್ರದಲ್ಲಿ ಭಾವ-ರೀತಿ-ಮಾತುಗಳು ನಾ ಮುಂದೆ – ತಾಮುಂದೆಯನ್ನುತ್ತಲಿರುವದನ್ನು ಕಾಣಬಹುದು.

ಪುಗಡಿ ಆಟ ಏನ ಹೇಳಲಿ?
ತಾಳಗತ್ತ ಮಾಡಿದಾಂಗ, | ನೌಬತ್ತ ಬಡಿದಾಂಗ |
ಕೊಂಬಕಾಳಿ ಹಿಡಿದಾಂಗ | ಸಿಡ್ಲ ಮಿಂಚೆ ಕಡಿದಾಂಗ |
ಮಗ್ಗಿ ಪಾಟ್ಲಿ ಹೆಣಿದಾಂಗ | ಸುದ್ದ ನವಿಲು ಕುಣಿದಾಂಗ
ತಂಡ ತಂಡ ನೆರೆದಿತೋ ಜನಾ ||

“ನಾರದ ನೋಡಿಕೇರಿ ಹೇಳ್ಯಾನ ಕಿಡಿಗೇಡಿ’ ಎಂಬ ಲಾವಣಿ ಹಾಡನ್ನು ನಿರೀಕ್ಷಿಸಿದಾಗ ಬಟ್ಟೆಗಳನ್ನು ಅಪಹರಿಸಿಕೊಂಡು ಹೋದ ಶ್ರೀಕೃಷ್ಣನನ್ನು ಹುಡುಕುತ್ತಿರುವ ಗೋಪಿಕೆಯರು ನಾರದರು ಕಿಡಿಗೇಡಿತನಕ್ಕೀಡಾದಾಗ ನಡೆಯಿಸಿದ ಗಡಿಬಿಡಿಯಲ್ಲಿ ಏತರ ಕೊರತೆಯಿದೆ?

ಹೊಸದಾಗಿ ಅತ್ತೆಯ ಮನೆಗೆ ಹೋದ ಬಾಲಿಕೆಯನ್ನು ನಾಗರಪಂಚಮಿ ಹಬ್ಬಕ್ಕೆಂದು ತವರವರು ಕರೆಯಲಿಕ್ಕೆ ಹೋದಾಗ ತಡವಾದಾಗ ಆಕೆಯು, ಭಾವಿಸಿದ ಭಾವನೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಹಸರ ಡಪಳಾ | ಸೀರಿ ಪಪ್ಪಳಾ | ಜರಕಾಟಿ |
ನಿತ್ತ ನಿಲಗಿ ತೀಡಕ್ಕಿ ತುದಿ ಗಟ್ಟಿ ||
ಮಗ್ವಿ ತಗಿಸಿ ಒಗಿಸಿದ ಕುಬಸಾ ಕರವತಕಾಟಿ |
ಹಾಂಗೆ ಇಟ್ಟಿದನವ್ವ ಗಂಟಿನಾಗ ಕಟ್ಟಿ |

ಸೀರೆ ಕುಪ್ಪಸಗಳ ನೆನಪಿನೊಂದಿಗೆ ಕದದಬಾರಿ ಜೊತೆಯಾಡಿದ ಗೆಳತಿಯರೆಲ್ಲ ಸಾಲಾಗಿ ಕಣ್ಣಮುಂದೆ ಸುಳಿದಂತಾಗುತ್ತದೆ. ಅದರ ನೆನಹು ಮನಕ್ಕೊಂದು ಸುಖವೊಡ್ಡಿದರೆ ಅವರ ಹೆಸರು ಬಾಯಿಗೆ ಇನ್ನೊಂದು ಸುಖವೊದಗಿಸುತ್ತದೆ.

ಸುಂದರ ಸಖಿಯರ ಮುಖ | ಎಂದಾರೆ ಕಂಡೇನೇನ
ಬಂದಾರೆ ಹೋಗಿರಬೇಕು ಎಲ್ಲಾರು | ನನ್ನ ಗೆಳತ್ಯಾರು |
ಚಂದರಗೊಂಬಿ ನಿನ್ನ ಎಂದಾರೆ ಕಂಡೇನೇನ |
ಬಂದ ಬಂದ ಹೋಗಿರಬೇಕು ಬಸಲಿಂಗಿ ಜಾಡರ ಶಿವಲಿಂಗಿ ||

ಬೆಳದಿಂಗಳ ಆಡಲಕ ಬ್ಯಾಸರಕಿ ಇಲ್ಲದಾಕಿ
ಬಂದ ಬಂದ ಕರಿಯಾಕಿ ನಮ್ಮ ರಂಗಿ | ಆರ್ಯಾರ ಗಂಗಿ |
ಮೂರುಸಂಜೀಲಿ ಗುಳ್ಳವನ ಬೆಳಗಲಾಕ
ಮನಿ ಮನಿ ಕರಿಯಕ್ಕಿ ನಮ್ಮ ಸಂಗಿ | ಮಾಲಗಾರ ನಿಂಗಿ ||
ಎಲ್ಲಗ್ವಾಳೇ ಆಗವರ ಬಾಳಿಬಸಿ
ಪಂಚಮಿಗೊಮ್ಮೆ ಕೊಡವರ ಪುನಮಾನ್‌ಸಿ ||

ಮೇಲಮಾಳಿಗೇರಾಕೆ ನನ್ನ ಕಾಸಿ
ಕೈಯ ಬೀಸಿ ಕರಿಯಾಕಿ ಹುಬ್ಬ ಹಾರ್ಸಿ |
ನನ್ನ ಮಾತ ಮೀರವಳಲ್ಲವ್ವ ಕುಂಬಾರ ಶೇಷಿ |
ಇಬ್ಬರು ಮುಂದೆ ಇರುವವರ ನೇಮಸಿ |

ಆತುರತೆಯು ಅತಿಶಯಗೊಂಡಾಗ ಕ್ಷಣವು ಯುಗವಾಗುವದು. ತನ್ನವರೆಲ್ಲ ಇನ್ನವರೆಂಬ ಕಲ್ಪನೆಯ ಕತ್ತಲೆ ಆವರಿಸುವದು. ಮುಂದುವರಿಯದಂತಾಗಲು ಸಿಕ್ಕವರ ಮೇಲೆ ಹರಿಹಾಯುವದೂ, ಹೆರವರ ಮೇಲೆ ತಪ್ಪು ಹೊರಿಸುವದೂ ಸ್ವಾಭಾವಿಕ. ದುಃಖ ನಿರಾಶೆಗಳಲ್ಲಿ ಮೈದಾಳಿದ ತಮೋಗುಣವೆಂದರೆ ಇದೇ. ತನ್ನನ್ನು ಕರೆಯ ಬರುವದಕ್ಕೆ ಕಲ್ಲು ಹಾಕಿದ ಕೆಲವರು ತವರಿನಲ್ಲಿದ್ದಾರೆಂದು ಬಗೆದು ಬಸವಳಿಯುವಳು-

ಅಣ್ಣನ ಹೇಣತಿ | ಆಕಿ ಭಾಳ ಘಾಲ್ಗಡಕಿ
ಆಣಿ ಹಾಕಿ ತರುಬಿ ಕಲಿಸುವರಾ | ಮನಸ ಒಡೆಸವರಾ ||
ಸ್ವಾದರತ್ತಿ ಮಗಳೊಬ್ಬಾಕಿ | ಹಾದ್ರಗಿತ್ತಿ ಇದ್ದಾಳ್ರೆವ್ವ
ಹೋದವರೀಗಿ ಸೇರೂದಿಲ್ಲ ಘಾಲ್ಗಡಿಕಿ | ಇಂಥಾ ಕಾಲ್ಗಡಿಕಿತಿ ||
ಚಿಗವ್ವ ನಮ್ಮ ಕಾಕಾನ ಹೇಣತಿ |
ಆಕಿ ಬ್ಯಾಡಂತ ಅಂದಿದ್ದಾಳು ಬೆರಕಿ | ಮಾರಿ ಗಂಟ ಹಾಕಿ ||
ಮತ್ತೊಬ್ಬಾಕಿ ಸ್ವಾದರತ್ತಿ | ಹೋದರಾಕಿಗಿ ಹತ್ತುದು ಬಿಸಿ |
ಎಲ್ಲಾರೊಳಗ ರಸಿ ಉಂಡು ತಿರಗಕ್ಕಿ | ಇದೇ ಕೆಲಸಿನಾಕಿ |
ಅಣ್ಣ ತಮ್ಮರ ಒಳಗ ನಮ್ಮ | ಸಣ್ಣ ತಮ್ಮನ ಹೇಣತಿ
ಪಣತಿ ಮಾರಿಯಾಕಿ ಆಕಿ ಖೊಟ್ಟಿ | ನಿಂದರಸ್ಯಾಳ ಗಟ್ಟಿ |
ತಾಯಿ ತಂದಿ ಇವರು | ನಾಯಿ ಮಾರಿಯವರು |
ಮಾಯಾಯಿಲ್ಲದೆ ಮರತಾರ ಬಿಟ್ಟೆ | ಹೋಡಿಸಬೇಕೆ ಕಟ್ಟಿ |
ಆಯಿ ಒಬ್ಬಾಕಿ ಇದಿಮಾಯಿ ಕಾಡತಾಳ |
ಎಂದು ಹರದೀತ ಇವಳ ರಗಟಿ | ಧಡಗಿಯ ಕಟ್ಟಿ ||

ಭಾವ-ರೀತಿ-ಮಾತುಗಳು ರಸಪಾಕಗೊಂಡಾಗ, ಬಹುವ್ರೀಹಿ ಸಮಾಸವು ಬೇರೊಂದು ವಸ್ತುವನ್ನು ಕಣ್ಣ ಮುಂದೆ ಕಟ್ಟುವಂತೆ ಬೇರೊಂದು ಸತ್ವವು ನಮ್ಮನ್ನು ತಣಿಸಿ, ಅದಾವುದೋ ಲೋಕವನ್ನು ಕಾಣಿಸುವುದನ್ನು ನೋಡಬೇಕಾದರೆ, ಉಡುಗೆಗಳನ್ನೆಲ್ಲ ಎತ್ತುಕೊಂಡೊಯ್ದು ಗಿಡವೇರಿ ಕುಳಿತ ಶ್ರೀ ಕೃಷ್ಣನನ್ನು ಎದೆಮಟ್ಟ ನೀರಿನಲ್ಲಿ ದುಂಡಗೆ ನಿಂತ ಗೋಪಿಯರು ಮಾಡುವ ಪ್ರಾರ್ಥನೆಯನ್ನು ಕೇಳಬೇಕು.

ಕಯ್ಯ ಮುಗಿದು ನಿನ್ನ ಸ್ತವ | ಮಾಡತೇವು ಮಾಧವಾ |
ಯದುಕುಲ ಯಾದವ | ನಾರಾಯಣ ಕೇಶವ |
ಪರಶುರಾಮ ಭಾರ್ಗವಾ | ರಾಮಚಂದ್ರ ರಾಘವಾ |
ವಾಮನ ನರಸಿಂಹ| ಸೋಳಾಸಾವಿರ ಗೋಪೇರ ದೇವ |
ಮತ್ಸ್ಯಕೊರಮವರಾ | ಹಿಡಿದು ಹತ್ತು ಅವತಾರ |
ಪೃಥುವಿ ಭೂಭಾರ | ಇಳಿಸಿದ ಶ್ರೀವರಾ |
ಸೀರಿ ಕುಡೋ ರಘುವರಾ ||

ಇಲ್ಲಿಯ ಭಾವ, ಅದು ತೊಟ್ಟ ಮಾತು, ಆ ಮಾತಿನ ರೀತಿ, ಇವೆಲ್ಲ ಒಂದಕ್ಕಿಂತ ಒಂದು ಸೊಗಸಾಗಿ ಸ್ವರ್ಗದಲ್ಲಿ ಬರೆದಿಟ್ಟ ಕಾವ್ಯವು ಏತರಲ್ಲಿಯೂ ಬೆರೆಯದೆ ಮೊದಲು ಕವಿಯ ಹೃದಯಕ್ಕಿಳಿದು, ಬಾಯಿಗೆ ಏರಿ ಬಂದು ಮಾತಿನ ಕುಡಿಯಾಗಿ ಕೇಳುಗರ ಹೃದಯವನ್ನು ತಲುಪುತ್ತದೆ. ಕವಿತೆಯ ತವರುನಾಡಿಗೊಯ್ದು ವಿಹರಿಸ ಹಚ್ಚುತ್ತದೆ.

ಹಾಡಿನಮಟ್ಟು, ಅದರ ಹಿಂದೆ ಕೇಳದಂತೆ ತಟ್ಟುವ ತಾಳ, ಅದರೊಡನೆ ಒಂದಾಗಿ ಸೂಸುವ ಆ ನಾದ ಇವೆಲ್ಲ ಲಾವಣಿಯ ಲಾವಣ್ಯಕ್ಕೊಪ್ಪುವ ಒಡವೆ ವಸ್ತುಗಳು. ಅವೆಲ್ಲ ಲಾವಣ್ಯವನ್ನು ಒಪ್ಪುಗೊಡುವ ರತ್ನಾಭರಣಗಳು. ಮೈಯನ್ನು ಸಿಂಗರಿಸುವ ಬಂಗಾರ, ಮಿರುಗಿಸುವ ಜರತಾರಿ ಇವನ್ನೆಲ್ಲ ಕವಿಯ ಪ್ರತಿಭೆಯು ಯೋಗ್ಯವಾಗಿ ಬಳಸಿ ಯಶಸ್ವಿಯಾಗುತ್ತದೆ.

“ಬೇಕಾದ್ದು ಉಂಡಾಳು ಉಟ್ಟಾಳು ತೊಟ್ಟಾಳು ಚೂರ ಮಾಡಬೇಡ

ನೀ ಚಿಂತಿ ಕುಡು ವಚನ, ಇದಕ ಹೇಳು ಏನಂತಿ “

ಎಂಬ ಮಾತು ಶಕುನಿಯ ವಿಚಾರಕ್ಕೆ ಒಪ್ಪುವಂತಿದೆ. ಅದರಂತೆ ಬಾಕುಳಿಗೊಂಡ ಸುಭದ್ರೆಯ ಚಿತ್ರವೂ, ಆಕೆಯ ಸಾಂತ್ವನಪಡಿಸುವ ಅಭಿಮನ್ಯುವಿನ ಚಿತ್ರವೂ ಯಥಾವತ್ತಾಗಿ ಮೂಡಿನಿಂತಿದೆ.

ಅದರಂತೆ “ತೂರಿದ ಬಾಣಗಳಿಂದ ಮೀರಿದ ದೈತ್ಯರುಂಡ ಕಾರಿದ ರಕ್ತದೊಳು ಕೆಡಹುತ” ಎಂಬ ಮಾತು ಅಭಿಮನ್ಯುವಿನ ವೀರತನವನ್ನು ಮೂಡಿಸುವದಕ್ಕೆ ಶಕ್ತವಾಗಿದೆ. ಶ್ರೀಕೃಷ್ಣನು ಗೋಪಿಯರೊಡನೆ ನಡೆಸಿದ ಚಲ್ಲಾಟದ ವೈವಿಧ್ಯಗಳು ಕೆಳಗಿನ ಮಾತುಗಳು ಅಚ್ಚೊತ್ತಿದಂತಿರುವವು.

ಹಾಸಗೊಂಡು ಮ್ಯಾಗ ಹೊಚಗೊಂಡು ಮಾರಿ ಮುಚಗೊಂಡು ಕೃಷ್ಣ ಮಲಗಿದಾ ಉಟ್ಟ ಶಾಲಿ ಪೀತಾಂಬರ ಸೆಳದ ಮರದ ಮ್ಯಾಲ ಎಳದ ಮೈಯ ಮುಟ್ಟಿದಾ ||

ಗೌಳಿಗಿತ್ತಿ ಶಂಖ ಹೊಡೆದಾಳ ಶೋಕ ಮಾಡ್ಯಾಳ ಜಿಗಿದು ಹರಿದಾ |
ಬನದಾಗ ಬಿಂದ್ರ ವನದಾಗ ಹೋಗಿ ಶ್ರೀ ಕೃಷ್ಣ ಸ್ವಾಮಿ ಅಡಗಿದಾ ||

ವೀರಭದ್ರದೇವರ ಮೈಕಟ್ಟು, ತೊಟ್ಟ ಕಾಸಿ, ಬಿಗಿದ ಚಲ್ಲಣ, ಅವನ ರೌದ್ರಾವೇಶ ಮೊದಲಾದವುಗಳು ಆತನ ಘನತೆಯನ್ನು ಭಾವಪೂರಿತವಾಗಿ, ಆವೇಶ ಪ್ರೇರಿತವಾಗಿ “ನಿಮ್ಮ ರಟ್ಟಿ ಹೊಟ್ಟಿ ಮಾಡಿ ಕುಟ್ಟಿ ಗಟ್ಟಿ ನೀವು ರಣದ ಒಳಗ ಮರದಾ |[1]” ಎಂಬ ಲಾವಣಿ ಹಾಡಿನಲ್ಲಿ ಪ್ರತಿಬಿಂಬಿಸುವದು.

ಈ ಎಲ್ಲ ಉದಾಹರಣೆಗಳಿಂದ ಲಾವಣಿ ಹಾಡುಗಳು ಸಾಹಿತ್ಯವೇ – ಎಂಬ ಸಮಸ್ಯೆಯು ತಾನಾಗಿಯೇ ಬಿಟ್ಟು ಹೋಗಬಲ್ಲದೆಂದು ಯಾರಿಗಾದರೂ ಅನಿಸುವಂತಿದೆ.

೬. ರಸಪರಿಪಾಕದಲ್ಲಿ ಶಾಂತಿ

ಲಾವಣಿಕಾರರು ಶೃಂಗಾರರಸವನ್ನು ಉಚಿತವಾಗಿ ಬಳಸಿ, ವೀರರಸವನ್ನು ಖಚಿತವಾಗಿ ಗಳಿಸಿ, ಹಾಸ್ಯರಸವನ್ನು ಹದವರಿತು ನುರಿಸಿ ತಮ್ಮ ಜೀವನವನ್ನು ಶಾಂತಿರಸದ ನಿಲ್ದಾಣಕ್ಕೆ ತಲುಪಿಸುವದು. ಅಂಥ ಕವಿಗಳ ಉತ್ತರಾಯುಷ್ಯವನ್ನು ಬಲ್ಲವರಿಗೆ, ಅವರಲ್ಲಿ ಋಷಿತೇಜ, ಧೀರತೆಗಳು ಕಾಣಸಿಗುತ್ತವೆ. ಅವರು ಶಾಂತಿ ರಸದ ನೆಲೆಯಲ್ಲಿ ನಿಂತು ನವರಸಗಳನ್ನು ನವ್ಯವಾಗಿಸುವ ಅವೆಷ್ಟೋ ಕಥಾಲಾವಣಿಗಳನ್ನೂ, ತತ್ವಲಾವಣಿಗಳನ್ನೂ ಹಾಡಿ ಕೇಳುವವರಿಗೂ ತಮ್ಮ ನೆಲೆಯ ಪರಿಚಯ ಮಾಡಿಕೊಡುವದುಂಟು. ಅಂಥ ಒಂದು ಹಾಡನ್ನು ಈ ಲಾವಣಿ ಹಾಡುಗಳು ಮುಗಿಯುವ ಕಾಲಕ್ಕೆ ‘ಖ್ಯಾಲಿ’ಯಂತೆ ಹೇಳಿ ಕೊನೆಗೊಳಿಸುತ್ತೇನೆ.

ಸೋಹಂ ಶಿವನೆ ನಿನ್ನ ಹೊರತು ದೇವರೇ ಇಲ್ಲ ||
ನಿನ್ನ ಬಿಟ್ಟು ಯಾವ ದೇವರಿಲ್ಲ |
ಕಲ್ಲು ಮಣ್ಣು ಕಟ್ಟಿಗಿವೇ ಎಲ್ಲ |
ಜನನ ಮರಣ ನಿನಗೆರಡೂ ಇಲ್ಲ |
ತಾಯಿ ತಂದಿ ನಿನಗ್ಯಾರ್ಯಾರಿಲ್ಲ ||
ನಿನಗಾರೂ ಹಡದೇ ಇಲ್ಲ ||

***

ಸಾವು ಹೊತ್ತಿಗೆ ಯಾವ ದೇವರಿಲ್ಲ |
ಏನು ಮಾಡತಾವ ಗುಡಿಯಾನ ಕಲ್ಲ |
ಕೊರಳಿಗೆ ಬಿದ್ದು ಅಳತಾವಲ್ಲ |
ಅಲ್ಲಾನ ಹೊರತು ಬಗಿಹರಿಯುವದಿಲ್ಲ
ಅವನ ಹೊರತು ದೇವರೇ ಇಲ್ಲ.
ಸೋಹಂ ಶಿವನೆ ನಿನ್ನ ಹೊರತು ದೇವರೇ ಇಲ್ಲ ||

ಶೃಂಗಾರ ಕವಿಶ್ರೇಷ್ಠನಾದ ಕವಿಯೇ ಇಷ್ಟೊಂದು ಪ್ರಶಾಂತವಾದ ಶಾಂತಿ ರಸೋದಧಿಯಲ್ಲಿ ಈಸುಬಿದ್ದು ಅವೆಂಥ ತತ್ವರತ್ನಗಳನ್ನು ಕಂಡುಕೊಂಡಿದ್ದಾನೆಂಬುದನ್ನು ಬಗೆದರೆ ಉಚಿತವಾಗಿ ರಸಗಳನ್ನು ಬಳಸಿಕೊಂಡು ಜೀವನವನ್ನು ಉದಾತ್ತಕ್ಕೇರಿಸುವುದು ಅಸಾಧ್ಯವಲ್ಲವೆಂಬ ಮಾತು ಮನದಟ್ಟಾಗುವದರಲ್ಲಿ ಸಂಶಯವೇ ಇಲ್ಲ. ಲಾವಣಿ ಹಾಡುಗಳು ಲಾವಣ್ಯಮಯವಾದ ರೂಪಲಾವಣ್ಯಗಳಿಂದ ಮೈವೆತ್ತಿದರೂ, ಲವಣಸಾಗರವನ್ನು ಕ್ಷೀರಸಾಗರವನ್ನಾಗಿ ಮಾರ್ಪಡಿಸುವ ಹವ್ಯಾಸವು ಅವುಗಳಿಗೆ ಇದ್ದೇ ಇರುತ್ತದೆ. ಅವು ಹಾಗೆ ಪರಿಪಾಕಗೊಳ್ಳುವುದು ಕವಿಯ ಸಹೃದಯತೆಯನ್ನು ಅವಲಂಬಿಸಿರುತ್ತದೆ.

 

[1] ಟೀಪು–ಲಾವಣಿ೧೭ನೆಯಪುಟದಲ್ಲಿದೆ.