ನಮಗಿರುವ ದೇಹ-ಪ್ರಾಣ-ಮನಗಳೇ ಪ್ರಕೃತಿಯೆಂದೂ, ಸಾಮಾನ್ಯವಾಗಿ ಈ ಪ್ರಕೃತಿಯೇ ನಾನೆಂಬ ತಿಳುವಳಿಕೆಯು ಅಹಂಭಾವವೆಂದೂ ಹೇಳಲಾಗುತ್ತಿದೆ. ನಮ್ಮ ಈ ಅಹಂಭಾವವೇ ಅಜ್ಞಾನವೆನಿಸುತ್ತದೆ. ಪ್ರಕೃತಿಯು ತ್ರಿಗುಣಾತ್ಮಕವಾಗಿದೆ. ತಮಸ್ಸು ದೈಹಿಕ ಕಿಲುಬಾದರೆ, ರಜ-ಸತ್ವಾದಿಗಳು ಪ್ರಾಣಮನಗಳ ಕಿಲುಬಾಗಿವೆ. ಸತ್ವ-ರಜ-ತಮಗಳೆಂಬ ಮೂರು ಕಿಲಬುಗಳಿಂದ ಮನದಲ್ಲಿ ತರ್ಕ ವಿತರ್ಕಗಳೂ, ಪ್ರಾಣದಲ್ಲಿ ಆಶೆ-ಆಕಾಂಕ್ಷೆಗಳು, ದೇಹದಲ್ಲಿ ಬೇಸರ ಅಲಸಿಕೆಗಳೂ ಕಾಣಿಸಿಕೊಳ್ಳುತ್ತವೆ. ಸಾಮಾನ್ಯ ಜೀವನಕ್ಕೆ ಅಹಂಭಾವದ ಈ ಅಜ್ಞಾನವೇ ಆಧಾರವಾಗಿರುವುದರಿಂದ ತ್ರಿಗುಣಗಳಲ್ಲಿ ಸತ್ವಗುಣಪರಧಾನವಾದ ಜೀವನವು ಸಹ ಸಾಮಾನ್ಯ ಜೀವನವೆಂದೇ ಅನಿಸುತ್ತದೆ. ಸಾಮಾನ್ಯ ಜೀವನಕ್ಕೆ ಕಾರಣವಾದ ಅಹಂಭಾವವು ತೊಲಗಿದಾಗ ಮಾತ್ರ ನಮಗೆ ಅಸಾಮಾನ್ಯ ಜೀವನವು ಪ್ರಾಪ್ತವಾಗುತ್ತದೆ. ಅಹಂಭಾವವು ತೊಲಗುವದೆಂದರೆ ಪ್ರಕತಿಯೇ ನಾನೆಂಬ ದೇಹೋಹಂಭಾವವು ಕಾಣೆಯಾಗುವುದು. ದೇಹೋಹಂಭಾವವು ಕಾಣೆಯಾದಂತೆ ಶಿವೋಹಂಭಾವವು ಕಾಣಿಸಿಕೊಳ್ಳುತ್ತದೆ. ಶಿವೋಹಂಭಾವದಲ್ಲಿ ಪ್ರಕೃತಿಯೇ ನಾನೆಂಬ ತಿಳುವಳಿಕೆಯ ಸ್ಥಳದಲ್ಲಿ ಪ್ರಕೃತಿ ನನ್ನದೆಂಬ ತಿಳುವಳಿಕೆಯು ಅಳವಡುತ್ತದೆ.

ಪ್ರಕೃತಿಯ ಬಗ್ಗೆ ತಿಳುವಳಿಕೆ ಬದಲಾಗುತ್ತಲೆ ತರ್ಕ-ವಿತರ್ಕಗಳಿಗೆ ಆಗರವಾದ ಮನವು ಪ್ರಕಾಶಮಯವಾದ ಜ್ಞಾನಕ್ಕೆ ನೆಲೆಯಾಗುತ್ತದೆ. ಆಶೆ-ಆಕಾಂಕ್ಷೆಗಳಲ್ಲಿ ತೊಳಲಾಡುವ ಪ್ರಾಣವು ಅಜೇಯವಾದ ಶಕ್ತಿಯ ಸೆಲೆಯಾಗುತ್ತದೆ. ಬೇಸರ ಅಲಸಿಕೆಗಳಲ್ಲಿ ಬಿದ್ದುಕೊಂಡಿರುವ ದೇಹವು ಶಾಂತಿಯ ತವರಾಗುತ್ತದೆ. ಪ್ರಕೃತಿಯಲ್ಲಿ ಜ್ಞಾನ, ಶಕ್ತಿ, ಶಾಂತಿಗಳನ್ನು ಅನುಭವಿಸುವದೇ ಶಿವಾನುಭವವಾಗಿರುತ್ತದೆ.

ಅಹಂಭಾವವನ್ನು ಕಳಕೊಂಡು ಶಿವಾನುಭವವನ್ನು ಸಾಧಿಸುವ ಉಪಾಯವನ್ನು ಎಲ್ಲ ಜನಾಂಗದವರು ಎಲ್ಲ ಕಾಲಕ್ಕೂ ಮಾಡುತ್ತ ಬಂದಿದ್ದಾರೆ. ಕರ್ನಾಟಕದಲ್ಲಿ ಶಿವಶರಣರು ಈ ಕೆಲಸಕ್ಕಾಗಿಯೇ ಬಂದಿದ್ದರೆನ್ನುವಷ್ಟು ಆಸ್ಥೆ ವಹಿಸಿದರು. ಅದರಂತೆ ಸಾಮಾನ್ಯ ಜನರೂ ಶಿವಾನುಭವವನ್ನು ಸಾಧಿಸುವ ದಾರಿಯಲ್ಲಿ ಸಾಕಷ್ಟು ದುಡಿದು, ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿದ್ದರೆನ್ನುವುದು ಅವರಿಂದಲೇ ರಚಿತವಾದ ಜನಪದ ಸಾಹಿತ್ಯವನ್ನು ಅಭ್ಯಸಿಸಿದವರಿಗೆ ಸ್ಪಷ್ಟವಾಗಿ ಕಂಡುಬರುತ್ತದೆ.

ಶಿವಾನುಭವವನ್ನು ಪಡಕೊಂಡವನ ಜೀವನವೇ ಒಂದು ವಿಶಿಷ್ಟತರದ್ದಾಗಿರುತ್ತದೆ. ಅವನು ಬೇಸರ-ಆಲಸಿಕೆಗಳಿಗೆ ಬಲಿಯಾಗದೆ ಕಾಯಕದಲ್ಲಿ ನಿರತನಾಗಿರುತ್ತಾನೆ. ಕಾಯಕದಲ್ಲಿ ಕೀಳು ಮೇಲುಗಳೆನ್ನದೆ ಅವನು ಆನಂದದಿಂದ “ಶಾರೀರಿಕ ಪ್ರಾರ್ಥನೆ”ಯನ್ನುವಷ್ಟರ ಮಟ್ಟಿಗೆ ಅದರಲ್ಲಿ ತಲ್ಲೀನನಾಗಿರುತ್ತಾನೆ. ದೇಹವೇ ದೇವಾಲಯ, ಕಾಯಕವೇ ಕೈಲಾಸವೆನ್ನುವ ವಿಶಾಲ ದೃಷ್ಟಿಯವನಾಗಿರುತ್ತಾನೆ. ಅವನ ಅನಿತ್ಯವಾದ ಕ್ಷುಲ್ಲಕವಾದ ಆಶೆ ಆಕಾಂಕ್ಷೆಗಳು ಶುದ್ಧಗೊಂಡು ಉಚ್ಚವಾದ ಅಭೀಪ್ಸೆಯೆನಿಸುತ್ತವೆ. ದೇವನುಒಲಿದಾನೋ ಇಲ್ಲವೋ ಎನ್ನುವುದೊಂದೇ ಚಿಂತೆ ಅವನಿಗೆ. ದೇವನೊಲುಮೆಯಾಶೆಯೇ ಅವನಲ್ಲಿರುವ ಅಖಂಡ ಅಭೀಪ್ಸೆ. ದೇವನೊಲಿದರೆ ಕೊರಡು ಕೊನರುವದೆಂದೂ, ಬರಡು ಹಯನವಹುದೆಂದೂ ಅವನಿಗೆ ಗೊತ್ತು. ಅವನ ಮನವು ತರ್ಕ-ವಿತರ್ಕಗಳ ಹುದಿಲೊಳಗಿಂದ ಕಿತ್ತುಕೊಂಡೆದ್ದು ಪ್ರಕಾಶಮಯವಾದ ತಿಳುವಿನ ಬೆಳಕಿನಲ್ಲಿ ಬಂದು ನಿಂತಿದ್ದರಿಂದ ಅವನು ಸಕಲ ಜನರಿಗೆ ಲೇಸನೇ ಬಯಸುವವನಾಗಿರುತ್ತಾನೆ. ಇಲ್ಲಿ ಉಂಬುವವನೂ ದೇವನೇ, ಅಲ್ಲಿ ಉಂಬುವವನೂ ದೇವನೇ ಎನ್ನುವ ಉದಾಹರವಾದಿಯಾಗಿರುತ್ತಾನೆ. ತಿರಕೊಂಡು ತಂದರೂ ಕರಕೊಂಡು ಉಣ್ಣುವ ಯೋಚನೆ ಅವನಿಗಿರುತ್ತದೆ. ಇಲ್ಲಿ ಸಲ್ಲುವವನು ಅಲ್ಲಿಯೂ ಸಲ್ಲುತ್ತಾನೆಂಬ ಶ್ರದ್ಧೆ ದೃಢವಾಗಿದ್ದುದರಿಂದ ಜೀವನದ ಯಾವ ಅಂಗವನ್ನೂ ಅಲಕ್ಷಿಸುವುದಿಲ್ಲ. ಹೀಗೆ ತ್ರಿಗುಣಗಳಿಂದ ಮಾರ್ಪಟ್ಟ ಶಿವಾನುಭವಿಯು, ಜೀವನದಲ್ಲಿ ವ್ಯಕ್ತಿಸ್ವಾತಂತ್ರ್ಯವನ್ನು ಗಳಿಸಿ, ಕೌಟುಂಬಿಕ ಸ್ವಾಸ್ಥ್ಯವನ್ನು ಸಮೃದ್ಧಿಗೊಳಿಸಿ, ಸಾಮಾಜಿಕ ಸಮತೆಯನ್ನು ಅಳವಡಿಸಿಕೊಂಡಿರುತ್ತಾನಲ್ಲದೆ, ಅರ್ಥವನ್ನು ಲೆಕ್ಕಿಸಿ, ಧರ್ಮವನ್ನು ಲಕ್ಷಿಸಿ, ಕಾಮವನ್ನು ಸಂಯಮಿಸಿ, ಮುಕ್ತಿಯನ್ನು ತಕ್ಕಯಿಸುತ್ತಾನೆ. ಪ್ರಕೃತಿಯು ತನ್ನದೆನ್ನುವ ಪುರುಷನೇ ಪುರುಷಾರ್ಥಗಳನ್ನು ಸಾಧಿಸಬಲ್ಲನು. ಪ್ರಕೃತಿಯೇ ತಾನೆನ್ನುವವಳು ಪುರುಷನೇ ಆಗದಿರುವಾಗ ಪುರುಷಾರ್ಥವೆನ್ನಂತು ಸಾಧಿಸುವಳು?

ಪುರುಷಾರ್ಥ ಸಾಧನವನ್ನು ಅಣಿಗೊಳಿಸಿಕೊಡುವ ಶಿವಾನುಭವವು ನಮ್ಮ ಜನಪದ ಸಾಹಿತ್ಯದಲ್ಲಿ ಅದೆಷ್ಟರ ಮಟ್ಟಿಗೆ ಕಾಣಿಸಿಕೊಳ್ಳುವದು, ಅಶಿಕ್ಷಿತರೂ ಗಾವಿಲರೂ ಹೆಂಗಳೆಯರೂ ಅನ್ನಿಸಿಕೊಳ್ಳುವ ಜನಪದವು ಗಳಿಸಿಕೊಂಡ ಶಿವಾನುಭವವು ಅದೆಂಥದು! ಅವರ ಜೀವನದ ಪ್ರತಿಬಿಂಬವೇ ಆದ ಜನಪದ ಸಾಹಿತ್ಯದಲ್ಲಿ ಶಿವಾನುಭವವು ಅದೆಷ್ಟು ಪ್ರತಿಬಿಂಬಿಸಿದೆ! ಈ ವಿಷಯಗಳನ್ನು ಕಂಡುಕೊಳ್ಳೋಣ.

ಅಶಿಕ್ಷಿತರಿಗೂ ಹೆಂಗಳೆಯರಿಗೂ ಬುದ್ಧಿಗಿಂತ ಶ್ರದ್ಧೆಯೇ ಹೆಚ್ಚಾಗಿ ಜೀವನಾಧಾರವಾಗಿರುತ್ತದೆ. ಶ್ರದ್ಧೆ ಹೃದಯದ ಬೆಳಸು. ಹೃದಯ ಅಂತರಾತ್ಮನ ನೆಲೆ. ಅಂತರಾತ್ಮನೆಂದರೆ ದೇಶವಶಿಶು. ಅವರಿಗೆ ಬುದ್ಧಿ ಕಡಿಮೆಯೆಂದರೂ, ಇದ್ದಷ್ಟು ಬುದ್ಧಿಯು ಶ್ರದ್ಧೆಯಿಂದ ಪ್ಲಾವಿತವಾಗಿರುತ್ತದೆ. ಜೀವನದಲ್ಲಿ ಬರುವ ಅಡೆತಡೆಗಳನ್ನು ನೀಗುಸುವದಕ್ಕೂ, ಜೀವನವನ್ನು ಸಮೃದ್ಧಗೊಳಿಸುವುದಕ್ಕೂ ದೇವ ಶಿಶುವು, ಕೈನೀಡಿ ಕಾಪಾಡಬೇಕೆಂದು ತನ್ನ ತಂದೆಯನ್ನು ಕಣ್ಣು ಮುಚ್ಚಿ ಮೊರೆಯಿಡುವದು, ಕಾಣದ ಕೈಯಿಂದ ಸಹಾಯವೊದಗಲು ಕೃತಜ್ಞತೆಯನ್ನು ತೋರ್ಪಡಿಸುವದು. ಸುಖದುಃಖಗಳಲ್ಲಿ ಅದಕ್ಕೆ ತಂದೆಯಿಂದ ದೊರೆಯುವ ಬೆಂಬಲವೇ ಶಿವಾನುಭವವಾಗಿದೆ.

ಶಿವಶಿವ ಎಂದರ ಸಿಡಿಲೆಲ್ಲ ಬಯಲಾಗಿ
ಕಲ್ಲು ಬಂದೆರಗಿ ಕಡೆಗಾಗಿ | ಎಲೆ ಮನವೆ |
ಶಿವನೆಂಬ ಶಬುದ ಬಿಡಬೇಡ ||

ಅದ್ಭುತ ಶಕ್ತಿ ಪೂರಿತವಾದ ಶಿವ-ಶಿವ ಎನ್ನುವ ಶಬ್ದವನ್ನಾಗಲಿ, ನಾರಾಯಣ ಎನ್ನುವ ನಾಮದ ಬೀಜವನ್ನಾಗಲಿ ಅದೆಷ್ಟು ಆಸ್ಥೆಯಿಂದ ಜೋಪಾನ ಮಾಡಿಕೊಂಡರೂ ಕಡಿಮೆಯೇ. ಬೀಳುವ ಸಿಡಿಲನ್ನೂ ಎರಗುವ ಕಲ್ಲನ್ನೂ ತಡೆದು ಹಿಡಿಯಬಲ್ಲ ನಾಮದ ಬೀಜವನ್ನು ಕಾಪಾಡಿಕೊಂಡು ಬಂದರೆ ಮಾತ್ರ ಸಾಕಾಗದು. ಅಂಥ ಅದ್ಭುತ ಬೀಜವು ಒಂದಕ್ಕೆ ಸಾವಿರವಾಗುವಂತೆ ಕೃಷಿ ಮಾಡಬೇಕಾದೀತು. ನಾಲಗೆಯ ನೆಲದಲ್ಲಿ ಆ ಬೀಜ ಬಿತ್ತಿದರೆ ವಿಪುಲವಾಗಿ ಬೆಳೆದು ಬರದವದೆಂದು ತಿಳಿದಿದೆ.

ಇಂದು ನನ್ನಂಗಳ ಶ್ರೀಗಂಧ ನಾತಾವ
ಬಂದಿದಾನೇನ ಶ್ರೀಹರಿ | ನನ ಮನಿಗೆ |
ಗಂಧದ ಮಾಡುವ ಕಲಕೂತ ||

ಎನ್ನುವಲ್ಲಿ ಕಂಡುಬರುವ ಅನುಭವವು ಅಸಾಮಾನ್ಯವಾಗಿದೆ. ದೇವನ ಸಾನ್ನಿಧ್ಯವನ್ನು ಗುರುತಿಸುವುದಕ್ಕೆ ಹದಗೊಂಡ ಹೃದಯವಿದ್ದರೆ ಸಾಕು; ಚುರುಕು ಬುದ್ಧಿ ಇರದಿದ್ದರೂ ಸಾಗುತ್ತದೆ. ಮೇಲಿಂದ ಮೇಲೆ ತನ್ನಲ್ಲಿಗೆ ದಯಮಾಡಿಸುವ ಶ್ರೀರಾಮಕೃಷ್ಣ ಪರಮಹಂಸರು ಬಾರದೆ ಬಹುದಿನಗಳ ತರುವಾಯ ಬಂದಾಗ ಹಿರಿಯ ಅಧಿಕಾರಿಯೂ ಮನೆಯೊಡೆಯನೂ ಆದ ಅಧರಸೇನನು ಆನಂದದಿಂದ “ಇಂದು ನನ್ನ ಮನೆಯು ಪರಮಹಂಸರ ಆಗಮನದಿಂದ ಸುಗಂಧಪೂರಿತವಾಗಿದೆ” ಎಂದು ಉದ್ಗಾರ ತೆಗೆದನಂತೆ.

ಹೂವಿನಾಗ ಹುದುಗ್ಯಾನ ಮಾಲ್ಯಾಗ ಮಲಗ್ಯಾನ
ಮೊಗ್ಗ್ಯಾಗ ಕಣ್ಣು ತೆರೆದಾನ | ಲಿಂಗಯ್ಯನ |
ನೋಡಟಿಗೆ ನಿದ್ದೆ ಬಯಲಾಗಿ ||

ದೇವನು, ಹೂವಿನಲ್ಲಿ ಹುದುಗಿರುವುದನ್ನೂ ಮಾಲೆಯಲ್ಲಿ ಮಲಗಿರುವುದನ್ನೂ, ಮೊಗ್ಗೆಯಲ್ಲಿ ಕಣ್ಣು ತೆರೆದಿರುವುದನ್ನೂ ಎಚ್ಚರದಲ್ಲಿ ಕಂಡವನು ನಿದ್ರೆಯಲ್ಲಿಯೂ ಅದೇ ಕನಸು ಕಾಣುವನು.

ನಿದ್ದೆಗಣ್ಣಿಲಿ ಕಂಡೆ ಸುದ್ದ ಗುರುವಿನ ಪಾದ
ಎದ್ದ ನೋಡಿದರ ನಿರಬಯಲ | ಗುರುರಾಯ |
ರುದ್ದರನ ಮಹಿಮೆ ತಿಳಿಯದ ||

‘ದೇವನೊಬ್ಬನೇ ನಾಮ ಹಲವು, ಎಂದು ಶರಣರು ಹೇಳಿದಂತೆ, ಜನಪದವು ಆ ಒಬ್ಬ ದೇವನನ್ನೇ ಶಿವನೆಂದು, ನಾರಾಯಣನೆಂದು, ಗುರು ಎಂದು, ತಾಯಿಯೆಂದು, ಮಲ್ಲಯ್ಯನೆಂದು, ಜಕ್ಕವ್ವನೆಂದು ಕರೆದು ತನ್ನ ಭಕ್ತಿಯನ್ನು ಪ್ರಕಟಪಡಿಸುತ್ತದೆ. “ಶಿವನೋ | ಸರ್ವೇಶನೋ | ಜಗದ್ಭರಿತ ರಕ್ಷಿಸಿದಂಥವನೋ” ಎಂದೂ “ಸೋಹಂ ಶಿವನೆ ನಿನ್ನ ಹೊರತು ಯಾವ ದೇವರಿಲ್ಲ” ಎಂದು ಹೇಳುವಾಗ ಎಲ್ಲಿ ನೋಡಿದರೂ ಏನು ನೋಡಿದರೂ ಶಿವನಂಶವೇ ವಿವಿಧ ವಸ್ತುವಾಗಿ ವಿವಿಧ ಶಕ್ತಿಯಾಗಿ ನಿಂತಂತೆ ಕಾಣುತ್ತದೆ. ಆ ಶಿವನೇ “ಎಡಭಾಗ ಹೆಣ್ಣಾದ | ಬಲಭಾಗ ಗಂಡಾದ | ಮುಪ್ಪಿನ ಮುದುಕನಾದ | ಮುತ್ತೈದೆತನವನು ಪಡೆದ | ಅಣುರೇಣು ವ್ಯಾಪಿಸಿದಂಥವ” ಎಂದು ಅದಕ್ಕೆ ಮನವರಿಕೆಯಾಗಿದೆ. ಜಗತ್ತಿನ ಸರ್ವ ಘಟನೆಗಳಲ್ಲಿ ಶಿವನಂಶವು ನಡೆಯಿಸಿದ ಚಲಕವನ್ನು ಕಂಡು, ಅದಕ್ಕೊಪ್ಪುವ ದೈವಶಕ್ತಿಯ ಹೆಸರಿನಿಂದ ಒಪ್ಪಾಗುವಂತೆ ಕರೆಯುತ್ತದೆ.

ಬಿತ್ತೀದ ಹೊಲದಾಗ ಒತ್ತಿ ಹಾಯಕಿ ಯಾರ ?
ಮುತ್ತಿನುಡಿಯಕ್ಕಿ ಬನದಮ್ಮ | ಹಾಯ್ದರ |
ಬಿಚ್ಚಿ ಬಿದ್ದಾವ ಬಿಳಿಜೋಳ ||
ಶರಣೆಂದ ಶಿವನಿಗೆ ಶರಣೆಂದೆ ಗುರುವಿಗೆ
ಶರಣೆಂದೆ ಶಿವನ ಮಡದೀಗೆ | ಗೌರಮಗೆ |
ಶರಣೆಂದು ಕಲ್ಲು ಹಿಡಿದೇನ ||

ಎದ್ದ ಕೂಡಲೇ ಸಿದ್ಧರನ್ನು ನೆನೆಸುವಂತೆ, ಎಳ್ಳು ಜೀರಿಗೆ ಬೆಳೆಯುವ ಭೂಮಿ ತಾಯಿಯನ್ನು ನೆನೆಸಲಾಗುತ್ತದೆ. “ಹೊತ್ತು ಮುಳುಗಿದರೇನು ಕತ್ತಲಾದರೇನು, ಅಪ್ಪ ನಿನ ಗುಡಿಗೆ ಬರುವೆನೋ | ಮಾದಯ್ಯ | ಮುತ್ತಿನ ಬಾಗಿಲ ತೆರೆದೀರೋ” ಎಂದು ಪ್ರಾರ್ಥಿಸುತ್ತದೆ. “ಪುರುಪುತವೆಂಬುದು ಅರವತ್ತು ಗಾವುದ ದೂರವಾದ್ದರಿಂದ ಬರಲಾರೆನಯ್ಯ ಮಲ್ಲಯ್ಯ | ದೂರಿಂದ ಕೈ ಮುಗಿದೇನು” ಎಂದು ಭಿನ್ನವಿಸುತ್ತದೆ. ಮಂದಿ ಎಷ್ಟು ಕೊಟ್ಟರೂ ಮನಸ್ಸು ತಣಿಯುವಂತಿಲ್ಲ. ಆದರೆ ಮುಂಜಾನದೊಳಗಿನ ಗಿರಿಮಲ್ಲ ಕೊಟ್ಟಾಗ ಮಾತ್ರ ಮನ ತುಂಬುವದಲ್ಲದೆ ಮನಸ್ಸೂ ತುಂಬುವದೆಂದು ವಿಶ್ವಾಸವಿರುತ್ತದೆ. ಅಂಥ ಶಕ್ತಿಯು ತಾಯ ಶಕ್ತಿಯೇ ಆಗಿರುವದರಿಂದ ಅವಳನ್ನು ನೆನೆಯದೆ ಇರುವವರಾರು?

ತಾಯವ್ವನ ನೆನೆಯೋದು ಯಾಯಾಳಿ ಯಾ ಹೊತ್ತು
ಊರೆಲ್ಲ ಉಂಡು ಮಲಗಾನ | ಬೆಳಚಿಕ್ಕಿ |
ಹೊಂಡಾಗ ಅವಳ ನೆನೆದೇನ ||

ಶಿವನ ಶಕ್ತಿಯು ತಾಯಿಯಂತೆ ಒಮ್ಮೆ ಅರಯಿಸಿದರೆ, ಇನ್ನೊಮ್ಮೆ ಗುರುವಿನಂತೆ ನಿಜ ತೋರಿಸಿ ಸನ್ಮಾರ್ಗದಲ್ಲಿ ನಡೆಯಿಸುವದರಿಂದ “ನಿನ್ನ ಪಾದದ ಮೇಲೆ ನನ್ನ ಆಶೆ” ಎಂದು ತನ್ನ ಹಂಬಲವನ್ನು ಸೂಚಿಸುವದು. ಯಾಕೆಂದರೆ-“ಜನನ ಮರಣ ನಿನಗೆರಡೂ ಇಲ್ಲ ತಾಯಿ ತಂದೆ ನಿನಗ್ಯಾರ್ಯಾರಿಲ್ಲ | ನಿನಗಾರೂ ಹಡದೇ ಇಲ್ಲ” ಎಂಬ ಸ್ತುತಿಗೀಡಾದವನೇ ಜನನ ಮರಣಗಳ ಬವಣೆ ತಪ್ಪಿಸಿ, ಮೋಕ್ಷ ಸುಖವನ್ನು ನೀಡಬಲ್ಲವನಲ್ಲದೆ, ಯಾರ ಕೈಯಲ್ಲೋ ಜನ್ಮ ತಳೆದ ಕಲ್ಲು-ಮಣ್ಣು-ಕಟ್ಟಿಗೆಯ ದೇವರು, ಸಾಯುವ ಕಾಲಕ್ಕೆ ಗುಡಿಯೊಳಗೆ ಕಲ್ಲಾಗಿ ಕುಳಿತು, ತಾವೇ ಕೊರಳು ಕೊರಳಿಗೆ ಬಿದ್ದು ಅಳುವವೆಂಬುದನ್ನು ಅರಿತುಕೊಂಡಿದೆ.

ತಾನು ಕೈಕೊಂಡ ಕಾಯಕವು ಎಂಥದಿದ್ದರೂ ಅದೊಂದು ದೇವರ ಪೂಜೆ, ದಿವ್ಯ ಸೇವೆಯೆಂಬ ಭಾವವುಂಟಾಗಿದ್ದರೆ ಅದರಲ್ಲಿ ಆಸ್ಥೆ ಹುಟ್ಟದು. ಅದರಿಂದ ಆನಂದ ಪ್ರಾಪ್ತವಾಗದು. ಆನಂದ-ಆಸ್ಥೆಗಳಿಲ್ಲದೆ ಶ್ರಮಿಸುವಾಗ ಬಾಯಿಂದ ಹಾಡುಬರುವಂತಿಲ್ಲ. ಹಾಡುತ್ತ ಮಾಡುವ ಉದ್ಯೋಗವೇ ಉತ್‌+ಯೋಗವಾಗಿರುತ್ತದೆ. ಇಡಿಯ ಜೀವನವನ್ನೇ ಯೋಗ ಮಾಡಿಕೊಂಡಿರುವ ಜಾನಪದವು

ಹಿಟ್ಟನೆ ಬೀಸುವಾಗ | ರೊಟ್ಟಿಗೆ ಮಾಡುವಾಗ
ವಿಠ್ಠಲ ವಿಠ್ಠಲ ಅನಬಾರದೆ?
ಮನಿಯ ಕೆಲಸದಾಗ ಅದೂ ಒಂದು ಕೆಲಸ-
ವೆಂದನಬಾರದೇ?

ಎಂದು ಪ್ರಶ್ನಿಸಿ ತನ್ನ ಮನಸ್ಸಿಗೆ ಬುದ್ಧಿ ಕಲಿಸುತ್ತದೆ.

ಕಸವ ಹೊಡೆದ ಕೈಯು ಕಸ್ತೂರಿ ನಾತಾವ
ಬಸವಣ್ಣ ನಿನ್ನ ಸೆಗಣೀಯ | ಬಳೆದ ಕೈ |
ಎಸಳ ಯಾಲಕ್ಕಿ ಗೊನಿನಾತ ||

ಹೀಗೆ ಅಲ್ಪವೆಂದೂ ಕ್ಷುಲ್ಲಕವೆಂದೂ ತಿಳಿಯುವ ಕೆಲಸಗಳಲ್ಲಿ ಮಹಾನತೆಯನ್ನು ಕಂಡುಕೊಳ್ಳುವ ಬುದ್ಧಿಯು ಶಿವಾನುಭವ ಪಡೆಯುವುದರಿಂದಲೇ ಬರಬಲ್ಲುದಾಗಿದೆ.

ಹಸನುಳ್ಳ ವಿಭೂತಿ ನೊಸಲೀಗೆ ಹಚಿಕೊಂಡು
ಬಸವಣ್ಣನ ಮೇವು ಕೊರೆಯುವ | ತಮ್ಮಗ |
ಬಸವೇಶ ವರವ ನೀಡ್ಯಾನ ||
ಹಂತೀಯ ನಮ್ಮೆತ್ತು ಹಂತೀಲಿ ಬಂದರ ಸೆರಗೀಲಿ ಸುಂಕ ವರಸೇನ | ತಮ್ಮನ |
ಹಂತೀಯ ಎತ್ತು ಹದಿನಾರು ||
ಬೆಳ್ಳಾನ ಬಿಳಿಯತ್ತ ಬೆಳ್ಳಿಯ ಬಾರಕೋಲ
ಹಳ್ಳದ ಹೊಲವ ಹರಗ್ಯಾನ | ಬಾಲನ |
ತೆಳ್ಳನ ಹೊಟ್ಟಿ ಹಸಿದಾವ ||
ಕಾಮನ ತೋಟಕ ಭೀಮನ ಕಾವಲ
ಜೇನುತುಪ್ಪಧಲೆ ಮಡಿಯೆಳೆದು | ನನ್ನ ಬಾಲ |
ಕಾಮ ಬೆಳೆದಾನ ಕರಿಕಬ್ಬ ||

ದನಗಳಿಗೆ ಮೇವು ಕೊರೆಯುವ ತಮ್ಮನು ಬಸವೇಶನಿಂದ ವರ ಪಡೆದಂಥ ಚೊಕ್ಕಟದಿಂದಿರುವ ಚಿತ್ರವಾಗಲಿ, ಹಂತಿಯ ಹದಿನಾರು ಎತ್ತುಗಳಿಗೆ ತಗುಲಿದ ಸುಂಕವನ್ನು ಸೆರಗಿನಿಂದ ಒರೆಸುವ ಬೆರಗಾಗಲಿ, ಬೆಳ್ಳಿಯ ಬಾರಕೋಲು ಹೆಗಲಿಗೆ ಹಾಕಿ ಹಟೊಟೆ ಹಸಿಯುವ ತನಕ ಹೊಲ ಹರಗುವ ಸಡಗರವಾಗಲಿ, ಚೆಲುವಾದ ತೋಟವನ್ನು ಭೀಮಕಾವಲು ಮಾಡಿ ಜೇನುತುಪ್ಪವನ್ನೇ ಮಡಿಯಲ್ಲಿ ಹರಿಯಿಸಿ ಕರಿ ಕಬ್ಬು ಬೆಳೆಯುವ ಜೋಕೆಯಾಗಲಿ ಕಾಯಕವೇ ಕೈಲಾಸವೆನ್ನುವ ಸುಪ್ತ ತಿಳುವಳಿಕೆಗೆ ಸಾಕಷಿಯಾಗಲಾರದೇ? ಗೊಬ್ಬರ ಗಾಡಿ ಹೊಡೆಯುವ ಅಣ್ಣಯ್ಯನ ಹುಬ್ಬು ನೇರುಳ್ಳದ್ದಾಗಿಯೂ, ಗದ್ದೆಯಲ್ಲಿ ಬಿತ್ತುತ್ತ ನಿಂತ ಆತನ ಕಾಲು-ನಿಡುದೋಳುಗಳು ಮುತ್ತಿನಂತೆಯೂ ಕಾಣುವದಕ್ಕೆ ಕಾಯಕ ಪ್ರೀತಿಯೇ ಕಾರಣವಾಗಿರಬೇಕಲ್ಲವೇ? ಗೊಂಡೇದ ಲಗಾಮಿನ ಹಂಡಬಂಡ ಕುದುರೆಯೇರಿ ಗಂಡಾಡಿ ದುರ್ಗ ಹೋಗುವ ಅಣ್ಣನು ಊರ ತೆವರಲ್ಲಿ ಕಾಣಿಸಿಕೊಂಡಾಗ ಆಗುವಷ್ಟೇ ಆನಂದವು ಕುರಿಕಾಯುವ ತಮ್ಮನನ್ನು ನೋಡಿದಾಗಲೂ ಆಗುವುದು ಏತರ ಎಕ್ಷಣ?

ಎಳೆಹುಲ್ಲು ಅಡವ್ಯಾಗ ತಿಳಿನೀರು ಕೊಳದಾಗ
ಬಲವುಳ್ಳ ನಾಯಿ ಸಾಕ್ಯಾನ | ನನ ತಮ್ಮ |
ಒನಪೀಲೆ ಕುರಿಯ ಕಾಯ್ದಾನ ||

ಬಡತನ-ಸಂಕಟಗಳಲ್ಲಿಯೇ ಮನುಷ್ಯನ ಸತ್ವಪರೀಕ್ಷೆಯಾಗುತ್ತದೆ. ಬಡತನದಲ್ಲಿ ಕಂಗೆಡದೆ, ಸಂಕಟದಲ್ಲಿ ಸೈಗೆಡದೆ ಅವುಗಳನ್ನು ಎದುರಿಸಿ ಗೆದ್ದು ಮುಂದುವರಿಯುವದರಲ್ಲಿಯೇ ಜೀವನದ ಕೆಚ್ಚು ಕಂಗೊಳಿಸುತ್ತದೆ. ಬಡವನಾದರೂ ಕಡುದೈನ್ಯಕ್ಕಿಳಿಯದಿದ್ದರೆ, ಬಡವಿಯಾದರೂ ಲೇಸುಗಿತ್ತಿಯಾಗಿದ್ದಾರೆ. ಗುರುವಿನ ಕೃಪೆಯು ಭೀಮರಕ್ಷೆಯಾಗಿ ಕಾಪಾಡುವದು. “ಗಂಜೀಯ ಕುಡಿದರೂ ಗಂಡನ ಮನೆ ಲೇಸು” ಎನ್ನುವ ಗರತಿಗೆ ಮುತ್ತಿನ ಮೂಗುತಿಯನ್ನು ಅವರಪ್ಪ ಮಾಡಿಸಿಕೊಟ್ಟರೂ, ಮುತ್ತೈದೆತನ ಶಿವ ಕೊಟ್ಟನೆಂಬ ಮಾತು ಮರೆಯಾಗದು. ಬಡತನವಿದ್ದರೂ ಬಹಳ ಮಕ್ಕಳಿದ್ದರೂ ಮೇಲೆ ಗುರುವಿನ ದಯೆಯೊಂದಿದ್ದರೆ ಸಾಕೆನ್ನುವ ಜೀವನಶ್ರದ್ಧೆ ಅಚ್ಚಳಿಯದಿರುತ್ತದೆ.

ಕೂಲಿ ಮಾಡಿದರೇನ ಕೋರಿ ಹೊತ್ತರೇನ
ನಮಗ ನಮರಾಯ ಬಡವೇನ | ಬಂಗಾರ |
ಮಾಲ ಇದ್ದಾಂಗ ಮನಿಯಾಗ ||

ಬಡತನದಲ್ಲಿರಲಿ ಸಂಕಟದಲ್ಲಿರಲಿ ಶ್ರದ್ಧಾಯುಕ್ತಳಾದ ಗರತಿಗೆ ಜೀವನದಲ್ಲಿರುವ ಆಶೆಗಳೆಂದರೆ ಮೂರೇ ಮೂರು. “ಮಕ್ಕಳ ಕೊಡು ಶಿವನೇ ಮುತ್ತಯ್ದೆತನ ಕೊಡು, ಮರಾಯರ ಮುಂದೆ ಮರಣ ಕೊಡು” ಇಷ್ಟಾದರೆ ಯಾವ ಆಸರಿಕೆಗೂ ಅಳಕುವಂತಿಲ್ಲ; ಎಂಥ ಬೇಸರಿಕೆಗೂ ಬಳಕುವಂತಿಲ್ಲ.

ಆಸರಿಕಿ ಅಳದಿಟ್ಟ ಬ್ಯಾಸರಿಕಿ ಬಳದಿಟ್ಟ
ಚಿಂತಿ ಕಾಲಾಗ ತುಳಿದಿಟ್ಟ | ಈ ದೇಹ |
ಶೀಲ ಮಾಡಿಟ್ಟ ಜನದಾಗ ||

ಎಂದು ಹೂಣಿಕೆ ತೊಟ್ಟಿರುವುದರಿಂದ ಅತ್ತೆಯ ಮನೆಯ ಸಂಕಟದಲ್ಲಿಯೂ ಶುಬವನ್ನು ಕಾಣುವಳು. ದುಡಿಮೆಯ ಶ್ರಮದಲ್ಲಿಯೂ ಮಂಗಲವನ್ನು ಕಾಣುವಳು. ಅವಳ ಪಾಲಿಗೆ ಅತ್ತೆ ಅತ್ತೀಕಾಯಿ, ಮಾವ ಮಲ್ಲಿಗೆ ಹೂ; ಹಿರಿಭಾವ ಬಂಗಾರಗೋಲು, ಅರಸರು ಅರಸಿನಕೆನೆ. ಸಿರಿಗಂಧದ ಚಕ್ಕೆ ಒಡೆದು ಒತ್ತಲು ತುಂಬಿ, ತಿರುಗಾಡಿ ನೀರು ಬೆರಸುವೆನೆಂದು ಹಿರಿಹಿಗ್ಗಿನಲ್ಲಿ ಹೇಳುತ್ತಾಳೆ. ಅಳುಬುರುಕ ಕೂಸಿದ್ದರೂ-ಈ ಕೂಸು ನನಗಿರಲೆನ್ನುವಳು, ಮನೆಗೆಲಸ ಕೆಟ್ಟರೂ ಕೆಡಲಿ ಕಂದನಂಥ ಮಕ್ಕಳು ಮನೆತುಂಬ ಇರಲೆಂದು ಹಾರೈಸುವಳು. ಅವಳಿಗಿರುವ ಶಿವದೃಷ್ಟಿಯೆಂಥದೆಂದರೆ-

ಆಳುವ ಕಂದನ ತುಟಿಯು ಹವಳದ ಕುಡಿಹಾಂಗ
ಕುಡಿಹುಬ್ಬು ಬೇವಿನೆಸಳ್ಹಾಂಗ | ಕನ್ನೋಟ |
ಶಿವನ ಕೈಯಲಗು ಹೊಳೆದಾಂಗ ||

ಮುರುಕು ತೊಟ್ಟಿಲಿದ್ದರೂ ಹರಕು ಚಾಪೆ ಹಾಸಿದ್ದರೂ ಅರಚುವ ‘ಪಾಪ’ವನ್ನು ಮಲಗಿಸಿ ಕೆಲೆಯುತ್ತಲೇ ಜೋಗುಳ ಹಾಡಿ ಹಿಗ್ಗುವಳು. ಮಾಗಾಯಿಯಿಲ್ಲ ಮುರುವಿಲ್ಲವೆಂದು ಪಟ್ಟ ಹುಡುಗನ ಸಲುವಾಗಿ ಕೊರಗುತ್ತಿದ್ದರೂ ಮಾಡಿಸುವರುಂಟು, ಮನಸ್ಸುಂಟು ಆದರೆ ಹಣವಿಲ್ಲವೆಂದು ಸಮಾಧಾನವನ್ನೇ ತಳೆಯುವಳು.

ಬಡವೆಯ ಮಕ್ಕಳು ನಡೆದರೆ ಸಂತೋಷ
ಹುಡಿಯಾಡಿ ಮನೆಗೆ ಬರುವಾಗ | ತಾಯಿಗೆ |
ಬಡತನದ ಜಾನ ಮರೆಯಿತು ||

ಸಂಕಟಕ್ಕೆ ಸೈಗೆಡುವ ಬುದ್ಧಿಯು ಶ್ರದ್ಧಾಹೀನರಲ್ಲಿ ಕಂಡುಬರುವದು. ಒಂದಂಶವಾದರೂ ಶಿವಾನುಭವದ ಸವಿಗಂಡವರು ಸಂಕಟಗಳನ್ನು ಎದುರಿಸುವರು. ಬಿಕ್ಕಟ್ಟುಗಳನ್ನು ಬದಿಗಿರಿಸುವರು. ಹೋರಾಡಿ ಕುತ್ತುಗಳನ್ನು ಗೆದಿಯುವದರಲ್ಲಿಯೇ ನಲುಮೆ ಕಾಣುವರಲ್ಲದೆ, ಅವುಗಳಿಗೆ ತಲೆಮರೆಸಿ ಕುಳಿತುಕೊಳ್ಳುವ ಯೋಚನೆ ಮಾಡುವದಿಲ್ಲ.

ಭಾಗಾದಿ ಬಲಕಿರಲಿ ವೈರಿ ತಾ ಎಡಕಿರಲಿ
ಛಾಡಿ ನಿನ ಮನೆಯು ಇದರಿರಲಿ | ಬಲಭೀಮ |
ದೇವ ನನಮ್ಯಾಲ ದಯೆಯಿರಲಿ ||

ಮನುಷ್ಯನಲ್ಲಿರುವ ಕೃತಜ್ಞತೆಯ ಮಾನದಿಂದ ಆತನ ಹಿರಿಮೆಯನ್ನು ಅಳೆಯಬಹುದಂತೆ. “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ” ಎಂದ ಶರಣರ ಹಾಗೆ, ಅಶಿಕ್ಷಿತರೂ ಹೆಣ್ಮಕ್ಕಳೂ ಎನಿಸುವ ಸಾಮಾನ್ಯ ಜನರು ತಮ್ಮ ತಮ್ಮ ಮಟ್ಟದಂತೆ ಕೃತಜ್ಞತಾ ಸ್ವಭಾವವನ್ನು ತಳೆದವರಾಗಿದ್ದಾರೆ. ಹೆಣ್ಮಕ್ಕಳು ತವರು ಮನೆಯ ಬಗೆಗೆ ತುಂಬ ಕೃತಜ್ಞರಾಗಿ, ಅದರ ಸುಸ್ಥಿತಿಯು ಸ್ಥಿರವಾಗಿ ಉಳಿಯಲೆಂದು ಹೃದಯ ತುಂಬಿ ಹರಸುತ್ತಾರೆ. ತವರುಮನೆಯ ದೀಪವನ್ನು ತೆವರೇರಿ ನಿಂತು ನೋಡಿ ಹತ್ತೂ ಬೆರಳು ಹೊಂದಿಸಿ ಶರಣೆಂದು ಬಿಡದೆ, ತಮ್ಮಂದಿರು ಜಯವಂತರಾಗಿಲೆಂದು ಬಗೆಯುತ್ತಾರೆ. ಹಾಲುಂಡ ತವರು ಹೊಳೆದಂಡೆಯಲ್ಲಿರುವ ಕರಕೀಯ ಕುಡಿಯಂತೆ ರಸಬಳ್ಳಿಯಾಗಿ ಹಬ್ಬಲೆನ್ನುತ್ತಾರೆ. ತಾಯಿಯೆಂದರೆ ಮನೆಯೊಳಗೆ ಕುಳಿತ ತೀರ ಹತ್ತಿರದ ಕಾಸಿ. ಆಕೆ ಕಟ್ಟಿಕೊಟ್ಟ ಬುತ್ತಿ ಏನಿದ್ದರೂ ತರತರದ ಯಾಲಕ್ಕಿ. ಕಟ್ಟಿದ್ದು ಹರಕು ಅರಿವೆಯಿದ್ದರೂ ಅದು ಜರತರದವಸ್ತ್ರ. ಕರು ಅಂಬಾ ಎನ್ನುತ್ತ ತಮ್ಮವ್ವನ ಮೂಲೆಯನ್ನು ನಲಿನಲಿದು ಉಂಬಾಗ ಅವರಿಗೆ ತಾಯಿಯ ನೆನಪು ಬಂದರೆ ಆಶ್ಚರ್ಯವೇನು? ತಾಯಿಯನನು ನೆನೆದರೆ ತಂಗೂಳು ಬಿಸಿಯಾಗುವದೆಂದೂ, ತಂದೆಯನ್ನು ನೆನೆದರೆ ಮಾಸಿದ ತಲೆ ಮಡಿಯಾಗುವದೆಂದೂ ಭಾವಿಸುವ ಬುದ್ಧಿಯು ಅದೆಂಥ ಕೃತಜ್ಞತೆ? ತಾಯ್ತಂದೆಗಳ ವಿಷಯದಲ್ಲಿ ಮೊಳೆತ ಕೃತಜ್ಞತೆಯು, ತವರಿನ ಬಗೆಗೆ ಕುಡಿವರಿದು, ಬಂಧುಬಳಗದ ಸಲುವಾಗಿ ಚೆಲ್ಲುವರಿದು, ಸ್ನೇಹಿತ ಮಿತ್ರರಿಗಾಗಿ ದಾಂಗುಡಿಯಿಟ್ಟು ನೆರೆಯವರಲ್ಲಿ ಸುಳಿಚಾರಿ ಬೆಳೆದು ನಿಂತರೆ, ಸಕಲ ಜನರಿಗೆ ಲೇಸನೇ ಬಯಸುವ ಕಕ್ಕುಲತೆಯನ್ನು ಹುಟ್ಟಿಸಲಾರದೇ? ಅಲ್ಲಿ ಉಂಬುವವನೂ ಸಂಗನು, ಇಲ್ಲಿ ಉಂಬುವವನೂ ಸಂಗನು ಎನ್ನುವ ದಿವ್ಯ ಸಮತೆಯನ್ನು ಮೊಳೆಯಿಸಲಾರದೇ?

ಕಣ್ಣೆಂಜಲ ಕಾಡಿಗಿ ಬಾಯೆಂಜಲ ವೀಳ್ಯವ
ಯಾರೆಂಜಲುಂಡಿ ನನ ಮನವೆ | ಹಡೆದವ್ನ |
ಬಾಯೆಂಜಲುಂಡು ಬೆಳೆದೇನ ||

ಹಡೆದವ್ವನ ಮಟ್ಟಿಗಿದ್ದ ಈ ತಿಳಿವು ನಾಡತಾಯಿ, ನುಡಿದಾಯಿ, ರಾಷ್ಟ್ರಮಾತೆಯರನ್ನು ಮೀರಿ ವಿಶ್ವಜನನೀಯವರೆಗೆ ವ್ಯಾಪಿಸಲು ಸಾಧ್ಯವಿಲ್ಲವೆಂದು ಯಾರು ಹೇಳುವರು? ನಾಡ ತಾಯಿಯು ತನ್ನ ಕಣ್ಣೆಂಜಲ ಕಾಡಿಗೆಯನ್ನು ಕಾಣದ ಕೈಯಿಂದ ನಮ್ಮೆಲ್ಲರ ಕಣ್ಣಿಗೆ ಸವರಿದ್ದರಿಂದಲೇ ನಮ್ಮ ಕಾಣ್ಕೆ ಬೆಳ್ಕೆಗಳು ಹಿರಿದಾಗಬಲ್ಲವು. ಆಕೆಯ ಬಾಯೆಂಜಲದ ಪುಣ್ಯದಿಂದಲೇ ಹಳೆಯ ಮಾತುಗಳನ್ನೇ ಹೊಸದಾಗಿ ಕಲಿತು ಹೊಸ ಹೊಸ ರೀತಿಯಲ್ಲಿ ಬಳಸಬಲ್ಲೆವು.

ಮತಿಯ ಪಾಲಿಸುವ ಶಿವನಶಕ್ತಿಯನ್ನು ಗಣಪತಿಯೆಂದೂ ಶಾರದೆಯೆಂದೂ ಪೂಜಿಸಲಾಗುವದು; ಸ್ತುತಿಸಲಾಗುವದು. ದೈವಶಕ್ತಿಯನ್ನು ಮಗುವಿನಂತೆ ಬಗೆದು, ತಂದೆಯೆಂದು ಭಾವಿಸಿ, ತಾಯಿಯೆಂದು ತಿಳಿದು ಸೇವಿಸುವಾಗ ಕೆನೆಮೊಸಲು, ರುಚಿಗಾಯಿ, ಸವಿಮಜ್ಜಿಗೆಗಳನ್ನು ಉಣಬಡಿಸುವದಾಗಲಿ, ಕುಳಿತುಕೊಳ್ಳಲು ಸೆಳೆ ಮಂಚ ಒದಗಿಸುವುದಾಗಲಿ, ಮುತ್ತು ರತ್ನಗಳ ಆಭರಣಗಳಿಂದ ಸಿಂಗರಿಸುವದಾಗಲಿ ಅರಿದಲ್ಲ. ಛತ್ತರಕಿ, ಅಬತಾಗಿರಿಗಳಿಂದ ನೆರಳು ಹಿಡಿದು, ಹೂಬಾಣ-ಹೂಬತ್ತಿಗಳಿಂದ ಬೆಳಕು ಕೆಡಹಿ, ಪಾತ್ರದವರ ಹಾಡು ಕುಣಿತಗಳಿಂದ ಹಿಗ್ಗುಗೊಳಿಸುವ ಮೋಡಿ ಎಲ್ಲರಿಗೂ ಬರುವ ಮಾತಲ್ಲ. ಅಲ್ಲಿ ಸಲ್ಲುವ ಸಲುವಾಗಿ, ಇಲ್ಲಿ ಸಲ್ಲುವ ಎತ್ತುಗಡೆ ನಡೆಸಿದರೂ ಅದೇನು ಸಣ್ಣ ಮಾತಲ್ಲ.

ನಮ್ಮ ಜನಪದ ಸಾಹಿತ್ಯವು ನಮ್ಮವರ ಜೀವನದ ಪ್ರತಿಬಿಂಬವಾಗಿರುವಂತೆ, ನಮ್ಮವರ ಜೀವನಕ್ಕೆ ಪ್ರತಿಭೆಯೂ ಆಗಬೇಕಾಗಿದೆ. ಜನಪದ ಸಾಹಿತ್ಯದಲ್ಲಿರುವ ಪ್ರತಿಭೆಯನ್ನುವದೆಲ್ಲವೂ ಜಾನಪದವು ತನ್ನ ಜೀವನದಲ್ಲಿ ಕಂಡ ಶಿವಾನುಭವವೇ ಆಗಿರುವದೆಂದು ತೋರಿ ಬರುವದು. ವಿದ್ಯಾಪ್ರಸಾರವು ಕಡಿಮೆಯಾಗಿದ್ದರೂ, ಕೇಳಿ ತಿಳಿದ ಜನಪದ ಸಾಹಿತ್ಯದಿಂದ ಹೊರಹೊಮ್ಮುವ ಶಿವಾನುಭವದಿಂದ ಜಾನಪದವು ಪ್ಲಾವಿತಗೊಳ್ಳಬಲ್ಲದೆಂದು ಧಾರಾಳವಾಗಿ ಹೇಳಬಹುದಾಗಿದೆ.