ಗರತಿಯ ಬಾಳು” ಹೆಣ್ಣುಮಕ್ಕಳ ಸಲುವಾಗಿ ನಾನು ತಳೆದ ಭಾವನೆಯ ಪ್ರತೀಕವಾಗಿದೆ. ಹೆಣ್ಣುಮಕ್ಕಳ ಹಾಡು, ವಚನಗಳು, ಹೊನ್ನಮ್ಮನ ಹದಿಬದೆಯ ಧರ್ಮ ಮೊದಲಾದವುಗಳ ರಸಪಾಕವನ್ನು, ಜಗತ್ತಿನ ಮಹಾಪುರುಷರ ವಿಚರದ ಪಡಿಯಚ್ಚಿನಲ್ಲಿ ಎರಕ ಹೊಯ್ದು, ಕೆಲವು ಐತಿಹಾಸಿಕ ಸಂಗತಿಗಳ ಬಣ್ಣ ತೀಡಿ, ಪವಿತ್ರವಾದ ಪರಿಶುದ್ಧವಾದ ಸುಂದರವಾದ ಗರತಿಯ ಬಾಳು-ಪ್ರತಿಮೆಯನ್ನು ಕನ್ನಡಿಗರ ಕೈಗೆ ಕೊಟ್ಟಿದ್ದೇನೆ. ಈ ಪ್ರತಿಮೆಯನ್ನು ಕಂಡವರಿಗೆ ಹೆಣ್ಣಿನ ಸಲುವಾಗಿ ಉದಾರವೂ ಪವಿತ್ರವೂ ಆದ ಭಾವನೆಯು ಮೂಡಬಲ್ಲದೆಂದು ಭಾವಿಸಿದ್ದೇನೆ.

ಜಗತ್ತಿನೊಳಗಿನ ಮಾನವ್ಯವು ಹೆಣ್ಣಿನ ಮೈರಕ್ತದ ಕೆನೆಯಾಗಿದೆ: ಹೆಣ್ಣಿನ ವಿಕಾಸದ ಬೆಳೆಗೆ ತೆನೆಯಾಗಿದೆ. ಹೆಣ್ಣು ನಡೆದಾಡುವ ಭೂಮಿ. ಜಗಜ್ಜನನಿಯ ಪ್ರತಿನಿಧಿ. “ಸತ್ಯದ ಸ್ಥಾಪನೆಯು ಮೊದಲಿಗೆ ಸ್ತ್ರೀಯಿಂದಲೇ ಆಯಿತು”(Truth is first conceived at woman Walt whitman) ಎನ್ನುವ ಮಾತಿಗೆ ವಿಚಾರವಂತರು ತಲೆದೂಗದೇ ಗತಿಯೇ ಇಲ್ಲ. ಅದರಂತೆ ಶ್ರೀ ತಾಯಿಯವರು ಹೇಳುವ, ಹೆಣ್ಣಿನ ಹಿರಿಮೆಯ ಮೂಲವಂತೂ ಯಾರನ್ನಾದರೂ ಬೆರಗುಗೊಳಿಸುವಂತಿದೆ.

“ತಮ್ಮ, ಚೈತ್ಯಪುರುಷನನ್ನು ಕಂಡುಕೊಳ್ಳುವುದೂ, ಅವನಿಂದ ಮಾರ್ಗದರ್ಶನ ಪಡೆಯುವದೂ ಸ್ತ್ರೀಯರಿಗೆ ಹೆಚ್ಚು ಸುಗಮವಾಗಿರುತ್ತದೆ.

ಗರತಿಯ ಬಾಳಿಗೆ ಅಸಂಖ್ಯ ಗರತಿಯರ ಜೀವನ ಕೃಷಿಯು ಕಾರಣವಾಗಿರುವಂತೆ ನಮ್ಮ ಈ “ಗರತಿಯ ಬಾಳಿ”ಗೂ ಅನೇಕ ಹಿರಿಯ ಜೀವಿಗಳ ವಿಚಾರ-ಕೃಷಿಯೇ ಕಾರಣವಾಗಿರುತ್ತದೆ. ಗರತಿಯ ಬಾಳು, ಜಗತ್ತಿಗೆ ಉತ್ತಮತೆಯನ್ನು ಬೆಳೆದು ಕೊಡುತ್ತ ಬಂದಿದೆ. ಅದರಂತೆ ಈ “ಗರತಿಯ ಬಾಳು” ಕನ್ನಡಿಗರ ಜೀವನವನ್ನು ಉತ್ತಮಗೊಳಿಸುವುದಕ್ಕೆ ಸತ್ತ್ವಯುತವಾದ ಪೌಷ್ಟಿಕವಾಗಬಲ್ಲದೆಂದು ನಮ್ಮ ನಂಬಿಗೆಯಿಂದ. ಅಂಥ ಸತ್ತ್ವರಸಾಯನವನ್ನು ಕನ್ನಡನಾಡಿನ ಸ್ತ್ರೀ-ಅಧಿದೇವತೆಯು ನನ್ನ ಕಡೆಯಿಂದ ಸಿದ್ಧಪಡಿಸಿಕೊಂಡಿರುವುದಕ್ಕೆ ನಾನು ಧನ್ಯನೆಂದು ಬಗೆಯುತ್ತೇನೆ. ನನ್ನ ಈ ಪುಟ್ಟ ಕೈಗೆ ಕನ್ನಡನಾಡಿನ ಹಿಂದಿನ ಇಂದಿನ ಅವೆಷ್ಟೋ ಹಿರಿಯ ಕೈಗಳ ಮುಂಬಲ-ಬೆಂಬಲಗಳಿವೆಯೆಂಬುದನ್ನು ನಾನು ಮರೆತಿಲ್ಲ, ಬದುಕಿನಲ್ಲಿ ಸಹ ಜೀವಿಗಳಾಗಿರುವ ಶ್ರೀಯುತರುಗಳಾದ ಮಾಸ್ತಿಯವರು, ಬೇಂದ್ರೆಯವರು, ದಿ.ಮಧುರಚೆನ್ನರು ಮೊದಲಾದ ಹಿರಿಯರನ್ನು ಈಗ ನಾನು ಸ್ಮರಿಸಿಕೊಳ್ಳದೆ ಇರಲಾರೆನು. ಈ ಪ್ರಬಂಧದ ಉಪಯುಕ್ತತೆಯ ಯಶಸ್ಸು ಅವರೆಲ್ಲರಿಗೂ ಸಲ್ಲಬೇಕಾಗಿದೆ.

ಪ್ರತಿಯೊಬ್ಬರು ಓದಿ ಅರಗಿಸಿಕೊಳ್ಳಬಹುದಾದ ತತ್ತ್ವ, ಸುಲಭವೂ ಲಲಿತವೂ ಆದ ನಿರೂಪಣೆ ಇವುಗಳಿಂದ ವಾಚಕರಲ್ಲಿ ಭಾವೈಕ್ಯವೂ ಸದಭಿರುಚಿಯೂ ಉಂಟಾಗಿ ಯುಗವಾಣಿಗೆ ಕಿವಿಗೊಡಲು ಆಸ್ಪದವಾಗುವುದೆಂದು ಬಗೆದಿರುವೆವು. ವರ್ಷಕ್ಕೆ ರೂ. ೫ ಕೊಟ್ಟು ಗ್ರಾಹಕರಾದವರಿಗೆ ೬ರೂ.ಗಳಿಗೆ ಮಿಕ್ಕಿದೆ ಬೆಲೆಯ ನಾಲ್ಕು ಪುಸ್ತಕಗಳು ಮನೆಬಾಗಿಲಿಗೆ ಅಂಚೆವೆಚ್ಚವಿಲ್ಲದೆ ಬರುವವು. ಪ್ರತಿಯೊಂದು ಪುಸ್ತಕವು ಮುಕ್ಕಾಲು ಬೆಲೆಗೆ ದೊರೆತಂತಾಗುವದು.

ಮುಖಪುಟದಲ್ಲಿ ಕಂಗೊಳಿಸುವ ಚಿತ್ರವು ಕಲಾವಿದ- ಶ್ರೀ ವಿಶ್ವನಾಥ ಬುರಾಣಪುರ, ಮುಂಬಯಿ ಅವರು ಎಂದಿನಂತೆ ಬಹು ಆಸ್ಥೆಯಿಂದ ಬರಕೊಟ್ಟುದು. ಅದಕ್ಕಾಗಿ ಅವರಿಗೆ ಅಭಿನಂದನೆಗಳು.

ಸಿಂಪಿ ಲಿಂಗಣ್ಣ
ಚಡಚಣ