ಸುಮಾರು ನಲ್ವತ್ತು ವರ್ಷಗಳಿಂದಲೂ ಜನಪದ ಸಾಹಿತ್ಯದ ಸಂಪರ್ಕ ನನಗಿದೆ. ನಾನು ಅದರ ಸಾಹಿತ್ಯ ಸತ್ವವನ್ನು ಮಾತ್ರ ಸವಿಯುತ್ತ ಬಂದವನೇ ಹೊರತು, ಅದರ ಹುಟ್ಟು ಎಲ್ಲಿ, ಗುಟ್ಟು ಏನು, ಸಾಹಿತ್ಯ ಸತ್ವವನ್ನು ಸವಿಯುವುದರ ಹೊರತು ಜಾಗತಿಕ ದೃಷ್ಟಿಯಿಂದ ಅದರ ಪ್ರಯೋಜನವುಂಟೇ-ಮೊದಲಾದ ವಿಚಾರಗಳನ್ನು ಗಮನಿಸಿದವನಲ್ಲ. ಉತ್ತಮವಾದ ಮಾವಿನ ಹಣ್ಣನ್ನು ಸಮೀಚೀನವಾಗಿ ಸವಿದು, ದೈಹಿಕ ಮಾನಸಿಕ ಸ್ವಾಸ್ಥೆವನ್ನು ಬೆಳೆಸಿಕೊಂಡೆನಲ್ಲದೆ, ಅದರ ಬೀಜಗಳನ್ನೂರಿ ಹೊಸಗಿಡ ಬೆಳೆಸುವ ಎತ್ತುಗಡೆಯನ್ನಾಗಲಿ, ಅದೇ ಬೀಜವನ್ನು ಸುಟ್ಟು ಚೂರ್ಣಮಾಡಿ ಮುಖಶುದ್ಧಿಗಾಗಿ ಉಪಯೋಗಿಸುವ ಏರ್ಪಾಡನ್ನಾಗಲಿ ಮಾಡಲೇ ಇಲ್ಲ. ಬಹಳವಾದರೆ ಬೀಜದಿಂದ ಪೀಪಿಮಾಡಿ ಊದಿ ಕುಣಿದದ್ದುಂಟು. ಕೆಲವೇ ಶಬ್ದಗಳನ್ನು ಸೂಕ್ತವಾಗಿ ಉಪಯೋಗಿಸಿ, ಹೇಳುವ ಯಾವುದೇ ವಿಷಯವನ್ನು ಹರಿತವಾಗಿ, ಮಾರ್ಮಿಕವಾಗಿ ಹೇಳುವ ಜನಪದ ಸಾಹಿತ್ಯದ ಮೋಡಿಗೆ ನಾನು ಸಂಪೂರ್ಣ ಆಕರ್ಷಿತನಾದೆನು. ಅದರ ಅನುಸರಣೆಯಲ್ಲಿ ನಾನು ಒಂದಿಷ್ಟು ಯಶಸ್ವಿಯಾದೆನೆಂದೂ ತೋರುತ್ತದೆ. ಜನಪದ ಸಾಹಿತ್ಯದಲ್ಲಿ ಲೇಖಕನು ಅನುಸರಿಸಲೇಬೇಕಾದ ಹಲವು ಆದರ್ಶಗಳಿದ್ದುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಂಥ ಹಲವು ಆದರ್ಶಗಳಲ್ಲಿ ಒಂದನ್ನು ಕುರಿತು ಮಾತ್ರ ಇಲ್ಲಿ ವಿವೇಚಿಸಿರುವೆನು. “ಜನಪದ ಸಾಹಿತ್ಯದಲ್ಲಿ ಕಿರಿದರೊಳೆ ಪಿರಿದರ್ಥದ ಚಲಕ”ವನ್ನು ಕನ್ನಡ ಬಂಧುಗಳಿಗೆ ಸಾಧ್ಯವಾದಷ್ಟು ಮನಗಾನಿಸಿಕೊಡಲು ಮಾಡಿದ ಅಲ್ಪ ಪ್ರಯತ್ನ ಮಾತ್ರವಿದು ಎಂದು ಹೇಳಬಯಸುವೆನು. ನನ್ನ ಈ ಅಲ್ಪ ಪ್ರಯತ್ನವು ಅದೆಷ್ಟು ಸಾರ್ಥಕವಾಗಿದೆಯೋ ತಿಳಿಯದು. ಅದನ್ನು ಸಹೃದಯರೇ ಹೇಳಬೇಕು.

ಬೆಳಗಾವಿ ಜಿಲ್ಲೆಯ ತುರಮರಿ ಗ್ರಾಮದಲ್ಲಿ ನನ್ನ ಪ್ರಚಾರೋಪನ್ಯಾಸವಾಗಬೇಕೆಂದು ಸಂದರ್ಭ ಒದಗಿಸಿಕೊಟ್ಟ ಕರ್ನಾಟಕ ವಿಶ್ವವಿದ್ಯಾಲಯ (ಧಾರವಾಡ) ಅಧಿಕಾರ ವರ್ಗದವರಿಗೂ, ಆ ಉಪನ್ಯಾಸವು ಪುಸ್ತಕರೂಪದಲ್ಲಿ ಪ್ರಕಟವಾಗುವುದಕ್ಕೆ ಸಲಹೆ ಸೂಚನೆ ನೀಡಿದ ಪ್ರಕಾಶನ ವಿಭಾಗದ ನಿರ್ದೇಶಕರಾದ ಶ್ರೀ ಚೆನ್ನವೀರ ಕಣವಿ ಅವರಿಗೂ ನಾನು ಋಣಿಯಾಗಿದ್ದೇನೆ.

ಸಿಂಪಿ ಲಿಂಗಣ್ಣ
ಚಡಚಣ
ಶ್ರೀ ಅರವಿಂದ ಗ್ರಂಥಾಲಯ
೧-೬-೧೯೭೬