ಜಗತ್ತು ನಿರ್ಮಾಣವಾದಂದಿನಿಂದಲೂ ಅದರೊಂದಿಗಿದ್ದ ಶಬ್ದವನ್ನು ಧ್ವನಿಯಲ್ಲಿ ಹೊರಗೆಡಹುವ ಎತ್ತುಗಡೆ ನಡೆದಿದೆ. ಸ್ಥೂಲದ ಬಾಯಿಬಿರಿಯುವುದಕ್ಕೇ ಸಾವಿರಗಟ್ಟಲೆ ಶತಮಾನಗಳು ಗತಿಸಿದವು. ಬಳಿಕ ವನಸ್ಪತಿಯಲ್ಲಿ ಬಾಯಿಯೇನೋ ತೆರೆಯಿತು ಹೂವಿನ ರೂಪದಲ್ಲಿ. ಆದರೆ ಧ್ವನಿ ಹೊರಡಲಿಲ್ಲ. ಮತ್ತೆ ಸಾವಿರಾರು ವರ್ಷ ಕಳೆದಾಗ ಪ್ರಾಣಿವರ್ಗ ಕಾಣಿಸಿಕೊಳ್ಳಲು ನೊಣ ಗುಂಗಾಡಗಳು ಸಹ ದನಿ ತೆಗೆಯಲು ಸಮರ್ಥವಾದವು. ಆದರೆ ಮಾತು ಮೂಡಲಿಲ್ಲ. ಕಾಗೆ ಕಕಾ ಅಂದರೆ, ಗುಬ್ಬಿ ಚಿವ್‌ಚಿವ್‌ಎಂದಿತು (ಅಷ್ಟಕ್ಕೇ ಕೆಲ ಪಕ್ಷಿಗಳು ನುಡಿವಕ್ಕಿ, ಹಾಡುವಕ್ಕಿ ಅನಿಸಿಕೊಂಡವು). ದನ ಅಂಬಾ ಅಂದರೆ, ಕುರಿ ಬ್ಯಾ ಅಂದಿತು. ನಾಯಿ ವವ್‌ಅಂದಂತೆ ಬೆಕ್ಕು ಮ್ಯಾಂವ್‌ಅಂದಿತು. ಕತ್ತೆಯೂ ಕಿರುಚಿತು; ಹಂದಿಯೂ ಡುರುಕಿಸಿತು. ಕುದುರೆ-ಆನೆ-ಸಿಂಹಗಳು ತಂತಮ್ಮ ರೀತಿಯಲ್ಲಿ ಕೇಕರಿಸಿದವು; ಹೇಕರಿಸಿದವು; ಹೂಂಕರಿಸಿದವು. ಬಹು ದೀರ್ಘಕಾಲ ಗತಿಸಿದ ಬಳಿಕ ಹುಟ್ಟಿಬಂದ ಮನುಷ್ಯನು ಮಾತ್ರ ಮಾತು ಮೂಡಿಸಲು ಸಮರ್ಥನಾದನು. ಮಾತನ್ನು ಕಂಡುಹಿಡಿಯಲು ಅವನೆಷ್ಟು ಸಾವಿರ ವರ್ಷ ಪರಿಶ್ರಮಿಸದನೋ ತಿಳಿಯದು. ಮನುಷ್ಯನು ಕೂಸಾಗಿ ಭೂಮಿಗೆ ಬಂದಾಗ ಮೊದಲಿಗೆ ಅತ್ತನು. ಅದೇ ಹಾಡಿನ ಬೀಜವಾಯಿತು. ಬಳಿಕ ನಕ್ಕನು ಬಹುಶಃ ಅದೇ ಮಾತಿನ ಬೀಜವಾಗಿರಬೇಕು. ಅವೇ ಬೀಜಗಳು ಮೊಖಕೆಯೊಡೆದು ಹಾಡು-ಮಾತುಗಳು ಕೊನರಿದವು.

ಮನಸ್ಸಿನೊಳಗಿನ ಭಾವನೆಯನ್ನು ಹಾಡಿಯೋ, ಮಾತಾಡಿಯೋ ಪ್ರಕಟಗೊಳಿಸುವ ಕ್ರಮವೇ ಸಾಹಿತ್ಯದ ಬುನಾದಿಯನ್ನೆಬಹುದಾಗಿದೆ. ಆದ್ದರಿಂದ ಜೀವನದೊಂದಿಗೇ ಸಾಹಿತ್ಯ ಕಾಣಿಸಿಕೊಂಡಿತೆಂದು ಹೇಳಲು ಅಡ್ಡಿಯಿಲ್ಲ. ಸಾಹಿತ್ಯವೆಂದರೆ ಜೀವನದ ಹಿಂಬದಿ, ಬೆಂಬದಿ. ಹಿಗ್ಗಿದಾಗ ಹಾಡಿದ ಮನುಷ್ಯನು ಹಿಗ್ಗುವ ಸಲುವಾಗಿ ಹಾಡಲು ತೊಡಗಿದನು. ಹಿಗ್ಗಿ ಹಾಡುವುದನ್ನು ಕೇಳಿ ಒಲಿದನು; ಹಾಡಿ ಹಿಗ್ಗುವುದನ್ನು ಕಂಡು ನಲಿದನು. ಒಂದು ಸಣ್ಣ ಮಾತನ್ನೇ ಬಾಯ್ಗೆತ್ತಿಕೊಂಡು ಕಥೆಮಾಡಿ ಹೇಳುವುದರ ಜೊತೆಗೆ, ಹೆರವರು ಕಥನ ಮಾಡಿದ್ದನ್ನು ಕಥೆಯೆಂದು ಕೇಳಿದನು. ಸಾಹಿತ್ಯದ ಬೊಡ್ಡಿಗೆ ಎರಡುಟಿಸಿಲು. ಒಂದು ಹಾಡು ಇನ್ನೊಂದು ಕಥೆ. ಆ ಟಿಸಿಲಿಗೆ ಅನೇಕ ತೊಂಗಲುಗಳು ಒಡೆದವು. ಪರಿಣಾಮವಾಗಿ ಹಾಡಿನಲ್ಲಿ ಹಲವು ವಿಧಗಳೂ, ಕಥೆಯಲ್ಲಿ ಹಲವು ಪ್ರಕಾರಗಳೂ ಕಾಣಿಸಿಕೊಂಡವು.

ಮನುಷ್ಯನು ಒಂಟಿಗನಾಗಿ ಹಾಡಿದನು; ಗುಂಪುಗೂಡಿ ಹಾಡಿದನು. ಹಲವರಿಗೆ ಕಥೆ ಹೇಳಿದನು. ಹಲವರಿಂದ ಕಥೆ ಕೇಳಿದನು. ಒಡಪು ಹಾಕಿದನು; ಒಗಟು ಕೇಳಿಸಿದನು. ಅನುಭವವನ್ನು ಉಸುರಿದನು; ಅನುಭವವನ್ನು ಆಲಿಸಿದನು. ಆಯುತ ಹೊತ್ತಿನಲ್ಲಿ ಆ ಅನುಭವವನ್ನು ಲೋಕೋಕ್ತಿಯಂತೆ ಬಳಸಿದನು; ನಾಣ್ಣುಡಿಯನ್ನಾಗಿ ಮಾರ್ಪಡಿಸಿದನು. ಜೀವನದ ವಿವಿಧ ರಂಗಗಳಲ್ಲಿ ಸಾಹಿತ್ಯವು ವಿವಿಧ ರೂಪಗಳನ್ನು ತಳೆಯಿತು. ಸಾಹಿತ್ಯವು ಒಮ್ಮೆ ಜೀವನದ ಪ್ರತಿಬಿಂಬವೆನಿಸಿದರೆ, ಇನ್ನೊಮ್ಮೆ ಜೀವನಕ್ಕೆ ಪ್ರತಿಭೆಯಾಯಿತು. ಸಾಹಿತ್ಯವನ್ನು ಬಿಟ್ಟು ಜೀವನ ವಿರಲಾರದು; ಜೀವನವನ್ನುಳಿದು ಸಾಹಿತ್ಯವಿರಲಾರದು ಎನ್ನುವ ಮಟ್ಟಿಗೆ ಅವೆರಡರಲ್ಲಿ ಅನ್ಯೂನ್ಯ ಸಂಬಂಧ ಬೆಳೆದುಬಂದಿದೆ; ಉಳಿದುಬಂದಿದೆ. “ಕೈಯಂ ಪಿಡಿದರೆ ಮೈತಾನೆ ಬರ್ಪುದು” ಎನ್ನುವಂತೆ, ಜೀವನವೇ ಒಮ್ಮೆ ಕೈಯಾಗಿ, ಸಾಹಿತ್ಯವನ್ನು ಮೈಯಾಗಿಸಿ ತಡಹುವದು. ಇನ್ನೊಮ್ಮೆ ಸಾಹಿತ್ಯವೇ ಮೇಲುಗೈಯಾಗಿ, ಜೀವನವನ್ನೇ ಮೈಯಾಗಿಸಿ ತಬ್ಬುವುದು. ಈ ತಳಕು ಜೀವನಕ್ಕೆ ಅಪ್ಯಾಯಮಾನವಾದಂತೆ, ಸಾಹಿತ್ಯಕ್ಕೂ ಅಪ್ಯಾಯಮಾನವಾಗಿದೆ.