ಮುಗಿಲಲ್ಲಿ ತೇಲುವ ಮೋಡಗಳು ಮಳೆಯರೂಪದಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಇಳಿದ ನೀರು ಆ ಆ ಪ್ರದೇಶಗಳ ನೈಸರ್ಗಿಕ ಸಂಪರ್ಕವನ್ನು ಅನುಸರಿಸಿ, ವಿವಿಧ ವರ್ಣ, ವಿವಿಧ ರುಚಿಗಳನ್ನಲ್ಲದೆ ವಿಶಿಷ್ಟ ಗುಣಧರ್ಮಗಳನ್ನೂ ಧಾರಣಮಾಡುತ್ತದೆ. ಅದರಂತೆ ನೆಲ ದಾಯಿಯ ಸಹಸ್ರ ಮುಖಗಳಂತಿರುವ ನಾಡುಗಳು, ಆಕಾಶದಲ್ಲಿ ಮೊಳಗುವ ಶಬ್ದಗಳನ್ನು ತಂತಮ್ಮ ನೈಸರ್ಗಿಕ ಪರಿಸರದಂತೆ ಗ್ರಹಿಸಿ, ವಿಶಿಷ್ಟನಾದವನ್ನಾಗಿ ಮಾರ್ಪಡಿಸಿಕೊಳ್ಳವಂತೆ ತೋರುತ್ತದೆ. ಇಲ್ಲಿ “ಆಕಾಶದಲ್ಲಿ ಶಬ್ದ ನಾನು” ಎಂಬ ಭಗವದ್ವಾಣಿಯನ್ನು ಸ್ಮರಿಸಿಕೊಳ್ಳಬಹುದು. ಕನ್ನಾಡಿನ ನೈಸರ್ಗಿಕ ಸಂಪರ್ಕದಲ್ಲಿ, ಮಳೆ ರಪರಪ ಸುರಿಯುತ್ತದೆ. ನೀರು ಧಬಧಬ ಹರಿಯುತ್ತದೆ. ಬಿರುಗಾಳಿ ಭರ್ರನೆ ಬೀಸುತ್ತದೆ: ತಂಗಾಳಿ ಸುಯ್ಯನೆ ತೀಡುತ್ತದೆ.

ಕನ್ನಡದ ಬಾಯಿ ಗಪಗಪ ತಿಂದು, ಗಟಗಟ ಕುಡಿಯುತ್ತದೆ. ಕನ್ನಡಿಗನು ಗಳಗಳ ಅಥವಾ ಬುಳುಬುಳು ಅತ್ತು, ಕುಲುಕುಲು ಅಥವಾ ಖೊಕ್ ಖೊಕ್ ನಗುವನು. ಪಿಳಿಪಿಳಿ ಒಮ್ಮೆ, ಹುಳುಹುಳು ಇನ್ನೊಮ್ಮೆ ನೋಡುವನು. ಮಳೆಯಲ್ಲಿ ತಪತಪ ತೊಯ್ದವನು, ಚಳಿಯಲ್ಲಿ ಕಟಕಟ ನಡುಗುವನು. ದುಡುದುಡು ಓಡುವನು: ಗಡಗಡ ಉರುಳುವನು.ದೊಪ್ಪನೆ ಬೀಳುವನು: ಚಟ್ಟನೆ ಎದ್ದು ಕುಳಿರುವನು. ಬೇಸರಿಕೆಯಲ್ಲಿ ತಲೆ ಗಿಮಿಗಿಮಿ ತಿರುಗುವದು: ಕಾಲು ಬಳಬಳ ಹರಿಯುವವು. ಢರ್ರನೆ ನಿದ್ರಿಸುವನು. ಇಂಥ ವಿಶಿಷ್ಟತೆಯಿಂದ ನಮ್ಮ ನಮ್ಮ ನಾಡನುಡಿ ಕನ್ನುಡಿಯೆನಿಸಿದೆ. ಕಾಣ್ ಮತ್ತು ನುಡಿ ಕೂಡಿದ್ದೇ ಕನ್ನುಡಿಯಲ್ಲವೇ ಕಾಣ್ ಮತ್ತು ಆಡು ಕೂಡಿಯೇ ಕನ್ನಾಡು ಆಗಿಲ್ಲವೇ?