ನಾದವು ಹೆಪ್ಪುಗೊಂಡ ಸದ್ದು, ಸಪಗಪುಳ, ಶಬ್ದ ಆಗುತ್ತದೆ. ಪ್ರತಿಯೊಂದು ಶಬ್ದಕ್ಕೂ ಒಂದು ನಿಶ್ಚಿತ ಅರ್ಥವಿರುತ್ತದೆ. ಒಮ್ಮೊಮ್ಮೆ ಅದು ವಿಶೇಷವಾದ ಅರ್ಥವನ್ನು ತಳೆಯುತ್ತದೆ. ಮನಸ್ಸಿನೊಳಗಿನ ವಿಚಾರವನ್ನಾಗಲಿ ಮನುಷ್ಯನು, ಶಬ್ದಗಳನ್ನು ಬಳಸಿ ಪ್ರಕಟಗೊಳಿಸಿದ್ದೇ ಭಾಷೆ. ಅದು ಹಾಡು ಇರಬಹುದು: ಇಲ್ಲವೆ ಕಥನ ಇರಬಹುದು, ದಿನನಿತ್ಯದಲ್ಲಿ ಕೊಡುಕೊಳ್ಳುವ ವ್ಯವಹಾರವು ಸುಗಮಗೊಳ್ಳಲೆಂದು ಸಣ್ಣ ದೊಡ್ಡ ನಾಣ್ಯಗಳನ್ನೂ, ನೋಟುಗಳನ್ನೂ, ನಿರ್ಮಿಸಿಕೊಂಡಂತೆ, ವಿಚಾರವಿನಿಮಯದ ವ್ಯವಹಾರವು ಸುಗಮಗೊಳ್ಳುವಂತೆ ವಿಶಿಷ್ಟ ಶಬ್ದಗಳನ್ನು, ಶಬ್ದ ಸಮುಚ್ಚಯಗಳನ್ನು ಮನುಷ್ಯನು ಬಳಸಲು ರೂಢಿಸಿಕೊಳ್ಳ ತೊಡಗಿದನು. ನೂರೈವತ್ತು ಪೈಸೆಗಳನ್ನು ಕೂಲಿಯಾಕೆಗೆ ಕೊಡುವಾಗ ಬರಿ ಪೈಸೆಗಳನ್ನು ಎಣಿಸುತ್ತ ಹೊತ್ತುಗಳೆಯುವುದು ಜಾಣತನವೆನಿಸಲಾರದು. ಆದ್ದರಿಂದ ಜಾಣನಾದವನು ರೂಪಾಯಿಯ ನಾಣ್ಯವೊಂದನ್ನು, ಅರ್ಧರೂಪಾಯಿಯ ನಾಣ್ಯವೊಂದನ್ನೂ ಕೊಟ್ಟು ಲೆಕ್ಕ ಬಗೆಹರಿಸುತ್ತಾನೆ. ಅದರಂತೆ ಬಲ್ಲವನು ಬಿಡಿನುಡಿಗಳನ್ನು ಗಳಪುತ್ತ ಕುಳಿತುಕೊಳ್ಳದೆ, ವಿಶೇಷ ನುಡಿಗಳನ್ನು ಬಳಸಿ ವಿಚಾರವಿನಿಮಯದ ಕೆಲಸವನ್ನು ಹಗುರ ಗೊಳಿಸುತ್ತಾರೆ.

ಮನುಷ್ಯನು ಮೊದಲು ಮಾತು ಕಲಿತನು: ಆ ಬಳಿಕ ಅಕ್ಷರ ಕಲಿತನು.ಅಕ್ಷರಹೀನವೆನಿಸಿದ ಜನಪದವು ತನ್ನ ನಿತ್ಯಜೀವನದ ವ್ಯವಹಾರದಲ್ಲಿ ಬಳಸುವುದಕ್ಕೆ ಅವೆಷ್ಟೋ ಶಬ್ದ ನಾಣ್ಯಗಳನ್ನು ನಿರ್ಮಿಸಿಕೊಂಡು ಅವುಗಳಿಗೆ ಅರ್ಥಮುದ್ರೆಯನ್ನೊತ್ತಿತು. ಅಂಥ ಕೆಲವು ಶಬ್ದಗಳನ್ನು ಇಲ್ಲಿ ಉದಾಹರಿಸಬಹುದು-

ತೊಳೆನೀರು, ಬಾಯೆಂಜಲುಮಾಡು, ಉಡಿದೆನೆ, ಹಿಡಿದೆನೆ, ಮತಿಹಿಡಿಸು, ಹಿಡಿಗಲ್ಲು, ಒಣಗಿ ಹಸಗಿ, ಅಡಕೆಹಿಡಿ, ಮೂಗುಮುರಿ, ಬೆರಳುಕಚ್ಚು, ಕಡದು, ಬಳದು,ಸೀತನಿ, ಉಮ್ಮಗಿ, ಹಂಡಬಂಡ, ಎಳೆಗಂದಿ, ಕಡೆಗಂದಿ, ಉಣಮಗ್ಗ, ಏಸು-ಎಷ್ಟು, ಹಣ್ಣು-ಹಂಪಲ, ಮೊದಲಾದ ಶಬ್ದಗಳ ಅರ್ಥವನ್ನು ತಿಳಿಯಲು ಯಾವ ಕೋಶವನ್ನೂ ನೋಡುವ ಅಗತ್ಯೆವಿಲ್ಲ. ನೋಡಿದರೂ ಸಿಗುವಂತಿಲ್ಲ. ಆದರೆ ಆ ಶಬ್ದಗಳ ಅರ್ಥವನ್ನು ವ್ಯಾಖ್ಯೆಯಿಂದಲೋ ವ್ಯಾಖ್ಯಾನದಿಂದಲೋ ತಿಳಕೊಳ್ಳಬಹುದು. ಹೇಗೆಂದರೆ-

ಹಿಂಡಿತಂದ ಹಾಲನ್ನು ಕಾಯಿಸುವುದಕ್ಕೆ ಗಡಿಗೆಯಲ್ಲಿ ಸುರುವಿ, ಹಾಲಿನ ಪಾತ್ರೆಯಲ್ಲಿ ತುಸು ನೀರು ಹಾಕಿ ಹಾಲಲ್ಲಿ ಬೆರೆಸಿದರೆ, ಹಾಲನ್ನು ತೊಳೆನೀರು ಮಾಡಿದಂತಾಗುದು. ತೊಳೆನೀರುಮಾಡಿಟ್ಟ ಹಾಲು ಮಾರಿವಂತಿಲ್ಲ.

ಅಕ್ಕಡಿಕಾಳು-ಬಾಳಕಪಲ್ಲೆಗಳನ್ನು ಕುದಿಸಿ ಅದಕ್ಕೆ ಉಪ್ಪು-ಕಾರ-ಎಣ್ಣೆ ಹಾಕಿ ಸಿದ್ಧಪಡಿಸಿದ ಸಾಧನೆಗೆ ಒಣಗಿ ಅನ್ನುತ್ತಾರೆ. ಹಸಿಕಾಯಿ-ತೊಪ್ಪಲುಪಲ್ಲೆಗಳಿಂದ ಅಳವಡಿಸಿದ ಸಾಧನೆಗೆ ಹಸಗಿ ಅನ್ನುತ್ತಾರೆ.

ರಾಶಿಮಾಡುವಾಗ ತೆನೆಗಳನ್ನು ಮುರಿಯುವ ಕೆಲಸಕ್ಕೆ ಬಂದ ಹೆಣ್ಣಾಳುಗಳಿಗೆ ಗೊತ್ತು ಮಾಡಿದ ಕೂಲಿಯಲ್ಲದೆ, ಕೆಲವು ತೆನೆಗಳನ್ನು ಅವರ ಉಡಿಗೆ ಹಾಕುತ್ತಾರೆ. ಅವೇ ಉಡಿದೆನೆ. ಪರಿಪುಷ್ಟವಾಗಿ ಬೆಳೆದ ಕಾಳುಗಳುಳ್ಳ ತೆನೆಗಳ ಆಯ್ಕೆಮಾಡಿ, ಮುಂದಿನ ಬಿತ್ತಿಗೆಗೆ ಬೀಜವೆಂದು ಕಾಯ್ದಿರಿಸುವರು, ಆತೆನೆಗಳಿಗೆ ಹಿಡಿದೆನೆ ಅನ್ನುತ್ತಾರೆ.

ನೇಕಾರನು ಊಟಕ್ಕೆಂದು ಮಗ್ಗ ಬಿಟ್ಟು ಎದ್ದಾಗ, ಅವನ ಮಗನೋ ತಮ್ಮನೋ ಅಥವಾ ಇನ್ನಾವನೋ ಆ ಮಗ್ಗದಲ್ಲಿ ಕುಳಿತು, ಚೋಕೆಯಾಗಿ ಲಾಳಿಹಾಕಿ ನೇಯಲು ಕಲಿಯತೊಡಗುವನು. ಆ ಅಭ್ಯಾಸವು ನೇಕಾರನ ಊಟ, ವಿಶ್ರಾಂತಿ ಮುಗಿದು ಮಗ್ಗಕ್ಕೆ ಬರುವವರೆಗೆ ನಡೆಯುವದು ಅದೇ ಉಣಮಗ್ಗ.

ಒಂದು ಕೈಯಲ್ಲಿ ಅಮರುವ ಕಲ್ಲು, ಹಿಡಿಗಲ್ಲು ಎನಿಸುತ್ತದೆ. ಅದರಂತೆ ಗಂಟುಗಲ್ಲು, ಹಿಟ್ಟುಗಲ್ಲು,ಕವಣಿಗಲ್ಲು ಇತ್ಯಾದಿ.

ಕರು ಎಳೆಯದಿದ್ದಾಗ ಆಕಳು ಎಳೆಗಂದಿಯೆನಿಸಿದರೆ, ಕರುದೊಡ್ಡದಾಗಿ ಹಾಲು ಒಪ್ಪೊತ್ತು ಕರೆಯತೊಡಗಿದರೆ ಅದು ಕಡೆಗಂದಿಯೆನಿಸುತ್ತದೆ.

ಹಾಲುತುಂಬಿದ ಜೋಳದ ತೆನೆಯನ್ನು ಸುಟ್ಟು, ಕಾಳು ಉದುರಿಕೊಂಡು ತಿನ್ನುತ್ತಾರೆ. ಆ ಕಾಳು ಸೀತನಿ. ಜೋಳದ ಎಳೆತೆನೆಯಿಂದ ಸೀತನಿ ಸಿಕ್ಕರೆ, ಗೋದಿಯ ಎಳೆತೆನೆಯಿಂದ ಉಮ್ಮಗಿ ಸಿಗುತ್ತದೆ.

ನೆಲದಲ್ಲಿ ಲಂಬವಾಗಿ ನಿಂತ ನೇಗಿಲು ಕಡದು, ತುಸು ಓರೆಯಾಗಿ ನಿಂತ ನೇಗಿಲು ಬಳದು ಅನಿಸುತ್ತದೆ.

ಮನೆಗೆ ಬಂದ ಅತಿಥಿಗೆ ಕೈಕಾಲು ತೊಳೆಯಿಸಿದ ಬಳಿಕ, ಒಂದಿಷ್ಟು ಬೆಲ್ಲವನ್ನು ತಿನ್ನಗೊಟ್ಟು ಕುಡಿಯಲು ಒಂದು ತಂಬಿಗೆ ನೀರು ಕೊಡುವುದುಂಟು. ಆಗ ಅತಿಥಿ ಬಾಯೆಂಜಲು ಮಾಡಿದಂತಾಗುವದು.

ಹೊಸದಾಗಿ ಶಾಲೆಗೆ ಕಳಿಸುವ ಮಗುವಿನಿಂದ ಹಲಗೆ-ಬಳಪಗಳಿಗೆ ಪೂಜೆ ಮಾಡಿಸಿ, ಗುರುಗಳಿಂದ ‘ಓಂ ನಮಃ ಸಿದ್ಧ’ ಎಂದು ಬರೆಯಿಸಿಕೊಟ್ಟು, ಮಗುವಿನ ಕೈಯಿಂದ ಅದನ್ನು ತೀಡಿಸುವ ಕ್ರಿಯೆಗೆ ಮತಿಹಿಡಿಸುವುದು ಅನ್ನುತ್ತಾರೆ.

ವಸ್ತುಗಳ ಪ್ರಮಾಣವನ್ನು ಕುರಿತು ಹೇಳುವಾಗ ಎಷ್ಟು ಎಂಬ ಶಬ್ದವನ್ನೂ, ವಸ್ತುಗಳ ಸಂಖ್ಯೆಯನ್ನೂ ಕುರಿತು ಹೇಳುವಾಗ ಏಸು ಎಂಬ ಏಸು ಎಂಬ ಶಬ್ದವನ್ನು ಉಪಯೋಗಿಸಲಾಗುತ್ತದೆ.

ಸರ್ವಜ್ಞನು ಹೊಟ್ಟೆಗೆ ತುತ್ತಿನ ಚೀಲ ಎಂದು ನೂತನ ಹೆಸರಿನಿಂದ ಕರೆದರೆ, ಜನಪದವು “ಖರ್ಚಿನಮನೆ”ಯೆಂದು ಕರೆಯುವುದುಂಟು. ‘ಹುಳಿತಿಳಿ’ ಎನ್ನುವುದು ಸರ್ವಜ್ಞನ ಶಬ್ದಕೋಶದಲ್ಲಿ ಮಜ್ಜಿಗೆ ಎನ್ನುವ ಅರ್ಥದಲ್ಲಿ ಬಳಸಲಾಗಿದ್ದ ಹುಳಿತಿಳಿಗೆ ಕನ್ನಡ ಜನಪದವು ಶಿವದಾನ ಎಂದು ಕರೆಯಿತು. ಅದು ಮಾರುವ ಬದುಕಬಲ್ಲವೆನ್ನುವುದನ್ನು ಆ ಹೆಸರು ಸ್ಪಷ್ಟಪಡಿಸುತ್ತದೆ.

ಪಾದರಕ್ಷೆಗೆ ಕನ್ನಾಡಿನಲ್ಲಿ ಮೆಟ್ಟು, ಕಾಲ್ಮರೆ, ಕೆರಹು, ಎಕ್ಕಡ ಎಂಬ ವಿಶೇಷ ಶಬ್ದಗಳನ್ನು ಬಳಸಲಾಗುತ್ತದೆ.

ಮೂತ್ರವಿಸರ್ಜನೆಗೆ ಕಾಲುಮಡಿಯೆನ್ನುವುದು ಸವಾರ್ಥದಲ್ಲಿಯೂ ಸೂಕ್ತವಾಗಿದೆ. ಕಾಲುಮಡಿ ಮಾಡಿಕೊಳ್ಳುವುದರಿಂದ ಪೂರ್ತಿಗೊಳ್ಳುವ ವಿಧಾನಕ್ಕೆ ಕಾಲುಮಡಿಯೆನ್ನುವುದು, ಹೆಣ್ಣುಮಕ್ಕಳ ದೃಷ್ಟಿಯಲ್ಲಿ ಇನ್ನೂ ಸೂಕ್ತವಾಗಿದೆ.

ಜೇನುಮುತ್ತಿಗೆ: ಜೇನ್ನೊಣಗಳು ತಮ್ಮ ಹುಟ್ಟಿಗೆ ಮುತ್ತಿಕೊಂಡಿರುವುದನ್ನು ನಾವೆಲ್ಲರೂ ಕಂಡಿದ್ದೇವೆ. ಸರ್ಜಪ್ಪನಾಯಕನನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಕವಿಯು-

“ಆರುಸಾವಿರ ದಂಡು, ಮೂರು ಸಾವಿರ ಕುದುರೆ

ಜೇನು ಮುತ್ತಿಗೆ ಹಾಕ್ಯಾರಲ್ಲೋ”

ಎಂದು ನುಡಿದು, ಜೇನುಮುತ್ತಿಗೆ ಶಬ್ದದ ಅರ್ಥವನ್ನು ಸ್ಪಷ್ಟಗೊಳಿಸಿದ್ದಾನೆ. ಇಂಥ ಶಬ್ದಗಳೆಲ್ಲ ಕನ್ನುಡಿಯ ನಾಣ್ಯಸಂಪತ್ತು ಎನಿಸುತ್ತದೆ.