ಬಳಸುವ ಭಾಷೆಗೆ ಜೋರು ಬರುವಂತೆ ಜನಪದವು ಉಪಾಯಗಳನ್ನು ಯೋಜಿಸಿಕೊಂಡು ಬಂದಿದೆ. ಅವುಗಳಲ್ಲಿ ಮುಖ್ಯವಾದ ಉಪಾಯಗಳೆಂದರೆ-

೧. ಶಬ್ದಕ್ಕೆ ವಿಶೇಷಣವನ್ನು ಬೆಂಬಲಿಸುವುದು

೨. ಶಬ್ದವನ್ನು ಧೃಷ್ಟಾಂತದಿಂದ ಅಥವಾ ಪಡನುಡಿಯಿಂದ ಅಲಂಕರಿಸುವುದು.

೩. ಗಾದೆಯಮಾತು, ಒಡಪಿನನುಡಿ ಬಳಸಿ, ವಿಷಯದರ್ಥವನ್ನು ತಿಳಿಗೊಳಿಸುವುದು.

೪. ಅಡ್ಡಕತೆಯನ್ನು ಹೇಳಿ ಬಿಚ್ಚುಮೊಗ್ಗೆ ಮಾಡಿ, ಗೂಢವನ್ನು ವಿಶದಗೊಳಿಸುವುದು.

ವಿಶೇಷಣ, ದೃಷ್ಟಾಂತ ಅಥವಾ ಪಡನುಡಿ, ಗಾದೆಯ ಮಾತು ಅಥವಾ ಒಡಪಿನ ನುಡಿ, ಅಡ್ಡಗತೆ ಇವು ಕ್ರಮವಾಗಿ ದೊಡ್ಡ ಬೆಲೆಯ ಶಬ್ದ-ನಾಣ್ಯಸಂಪತ್ತು. ಶಬ್ದವನ್ನಾಗಲಿ, ಮನಸ್ಸಿನೊಳಗಿನ ವಿಚಾರವನ್ನಾಗಲಿ ಪ್ರಸಂಗಕ್ಕೆ ತಕ್ಕಂತೆ, ಚತುರೋಪಾಯಗಳನ್ನು ಹಿತಮಿತವಾಗಿ ಬಳಸಿ ವಿವರಿಸುವುದಕ್ಕೆ ಹದವರಿಕೆ ಬಳಕೆಯೆನ್ನುತ್ತಾರೆ. ಇಲ್ಲದಿದ್ದರೆ ಅದು ಶಬ್ದಗಳ ಅತಿ ಬಳಕೆಯಾಗಿ ಜಾಬಾಳವೆನಿಸುತ್ತದೆ. ಉದಾ-

“ನಾನು ಬರಕೊಡುವ ಪಾವತಿಯೇನಂದರೆ – ಎಂದು ಆರಂಭಿಸಿ, ವಿಷಯವನ್ನು ವಿಶದ ಪಡಿಸಿದ ಮೇಲೆ ಕೊನೆಗೆ ಅಂತ ಬರಕೊಟ್ಟ ಪಾವತಿ, ಸಹಿ, ತಾರೀಖು” ಅಂದಂತಾಗುತ್ತದೆ. ಅದರಿಂದ ಅನಾವಶ್ಯಕವಾದ ಶಬ್ದಗಳ ಬಳಕೆ ವಿಷಯವನ್ನು ಪುನರುಕ್ತಿಗೊಳಿಸುವುದುಂಟು. ಈ ಸಂದರ್ಭದಲ್ಲಿ ಪಾಂಡಿಚೇರಿ ಶ್ರೀ ಅರವಿಂದ ಆಶ್ರಮದ ಮಾತೆಯವರು ಹೇಳಿದ ಮಾತು ನೆನಪಿಗೆ ಬರುತ್ತದೆ-“ನಿರರ್ಥಕವಾದ ಶಬ್ದಗಳಿಂದ ಜಗತ್ತು ಕಿವುಡುಗಟ್ಟಿ ಹೋಗಿದೆ.”

ಒಮ್ಮೆ ಉಪಯೋಗಿಸಿದ ಶಬ್ದಗಳನ್ನು ಮತ್ತೆ ಮತ್ತೆ ಉಪಯೋಗಿಸುದಾಗಲಿ, ಉಪಯುಕ್ತವಲ್ಲದ ಶಬ್ದಗಳನ್ನುನಡು ನಡುವೆ ತುರುಕಿ ವಿಷಯವನ್ನು ತರಲಗೊಳಿಸುವುದಾಗಲಿ ಪಿರಿದರ್ಥವನ್ನು ಹದಗೆಡಿಸಿಬಿಡುತ್ತದೆ. ಅದನ್ನು ಅನುಭವದಿಂದ ಕಂಡುಕೊಂಡು ಜನಪದವು ಕಡಿಮೆ ಶಬ್ದಗಳನ್ನು ಬಳಸಿ, ಹೆಚ್ಚು ಅರ್ಥವನ್ನು ಮೂಡಿಸುವ ರೀತಿಯನ್ನು ಮೈಗೂಡಿಸಿ ಕೊಂಡಿದೆ.

ಈ ರೀತಿಯನ್ನು ಗಂಡಸರು ಹೆಂಗಸರೆನ್ನದೆ ಮಕ್ಕಳು ಸಹ ಅನುಸರಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಮೊದಲಿಗೆ ಮಗುವಿನ ಮಾತನ್ನೇ ಆಲಿಸೋಣ.

ಕಾಗೆ ಕಾಗೆ ಕವ್ವ
ಯಾರ ಬತ್ತಾರವ್ವ
ಮಾವ ಬತ್ತಾನವ್ವ
ಮಾವ್ಗೇನ್ ಊಟ?
ರಾಗೀ ಕಲ್ಲ ಗೂಟ

ಚಿಕ್ಕ ಸಂಭಾಷಣೆಯ ರೂಪವನ್ನು ತಳೆದಿರುವ ಈ ಲಲ್ಲೆನುಡಿಯನ್ನು ಅರ್ಥಸ್ಪಷ್ಟತೆಗಾಗಿ ವಿವರಿಸಲು ನಿಂತರೆ, ನೂರಾರು ಶಬ್ದಗಳಾದರೂ ಸಾಲುವದಿಲ್ಲ.

ಇದು ದೊಂಬಿದಾಸರ ಹಾಡಿನ ತುಣುಕು-
ಹುಟ್ಟಿದಳೆ ಶ್ರೀಗೌರಿ ಭೂಲೋಕದಲ್ಲಿ
ಅಷ್ಟಾಗಿ ಇಷ್ಟಾಗಿ ತಾ ದೊಡ್ಡೋಳಾಗಿ||

ಒಂದೇ ವ್ಯಾಕ್ಯದಲ್ಲಿ ಗೌರಿಯ ಬಾಲ್ಯದಿಂದ ವಿಷಯವು ಯೌವ್ವನಕ್ಕೆ ಚಿಮ್ಮಿ ಬರುವುದು. ಇನ್ನು, ಆ ದುರ್ಗುವನ್ನು ಕಟ್ಟಿನಿಲ್ಲಿಸಿದ ಕವಿಯ ಕೈವಾಡವನ್ನು ನೋಡೋಣ.

ದುರಗ ದುರಗೆಂಬೋದು ಅದು ಎಂಥ ದುರುಗವೊ
ಗಗನ ಮೇಲೈತೋ ಕೈಕಳಗೈತೋ ಕಾಮನ ದುರಗ|
ಏಳೇ ಕಲ್ಲಾಗ ಕಡದೈತೋ||

ಏಳೇ ಕಲ್ಲುಗಳಲ್ಲಿ ಕಟ್ಟಿನಿಲ್ಲಿಸಿದ ದುರ್ಗವು ಗಗನ ಮೇಲಿದೆಯೋ, ಕೈ ಕೆಳಗಿದೆಯೋ ತಿಳಿಯದಷ್ಟು ಅದ್ಬುತವಾಗಿದೆ. ಅದರಂತೆ ಆ ಅದ್ಬುತವನ್ನು ಏಳೇ ಶಬ್ದಗಳಲ್ಲಿ ಪವಣಿಸಿದ ಕವಿಯ ಕೈಚಲಕವೋ, ಬಾಯಿಚಲಕವೋ, ಅದಕ್ಕಿಂತ ಅದ್ಬುತವಾಗಿಲ್ಲವೇ? ನಾಲ್ಕೇ ಶಬ್ದಗಳಲ್ಲಿ ಮೈವೆತ್ತು ಚತುರ್ದಿಶೆಗಳವರೆಗೂ ವ್ಯಾಪಿಸಿ, ಚತುರ್ಯುಗಗಳನ್ನೂ ಕಂಡು ಅಜರಾಮರವಾಗಿರುವ ಈ ಲೋಕೋಕ್ತಿಯನ್ನು ಕೇಳಿರಿ-

“ಮನಕ ಮನ ಕೂಡಿದರ ಮನಿಮಾರ”