ಇಲ್ಲಿ ಚಂದ್ರ ಎಂಬ ಶಬ್ದವನ್ನೇ ತೆಗೆದುಕೊಳ್ಳೋಣ. ಎಳೆ, ಅರ್ಧ, ಪೂರ್ಣ ಎಂಬ ವಿಶೇಷಣಗಳಿಂದ ಎಳೆಚಂದ್ರ, ಅರ್ಧಚಂದ್ರ, ಪೂರ್ಣಚಂದ್ರ ಎಂಬ ಪದಗಳನ್ನಾಗಿಸಿ ಚಂದ್ರ ಶಬ್ದದ ಅರ್ಥವನ್ನು ಸ್ಪಷ್ಟಗೊಳಿಸಲಾಗುತ್ತದೆ. ನಿಚ್ಚಳಗೊಳಿಸಲಾಗುತ್ತದೆ.

‘ನನ್ನ ಕಾಂತನ ರೂಪ ಹೊಂಟಂಗ ಹುಣ್ವಿ ಚಂದರ್‌”

ಎಂಬ ಲಾವಣಿಯ ಚುಟುಕು ಕಾಂತನ ರೂಪವನ್ನು ಹುಣ್ಣಿವೆ ಚಂದ್ರ ಎಂಬ ಸ್ಪಷ್ಟ ಚಿತ್ರವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ; ಬೆಳದಿಂಗಳ ರಾಶಿಯನ್ನು ಮುಗಿಲವರೆಗೆ ಒಟ್ಟಿ ನಿಲ್ಲಿಸುತ್ತದೆ.

ಕಂಚಿನ ಗೌರಿಯನ್ನು ಹೋಲುವ ಕಾಂತೆಯ ರೂಪವನ್ನು ಕಂಡ ಮನಸ್ಸಿನ ಮೇಲೆ, ಅದಾವ ಪರಿಣಾಮ ಬೀರುತ್ತದೆ, ಗೊತ್ತೇ?

“ಕಾಂತೀ ರೂಪ ಕಂಚಿನ ಗೌರಿ
ಹಂತೀಲಿ ಹೋಗಿ ಕೇಳಿದರ
ಮಿಂಚಿದಂಗ ಆಯ್ತು ಮುಂಗಾರಿ ಸಿಡಲಾ|
ಬಿದ್ದಿತು ಖಡಲ್‌|
ಎದಿ ಅಂತು ಧಡಲ್‌|
ಆಗಿ ನಿಂತೆ ಮೂಕಾ ||

ಇನ್ನೊಬ್ಬ ಕವಿ ಬಾಯಿಬಿಚ್ಚಿ ಅಚ್ಚೊತ್ತುವಂತೆ ಬೇರೊಂದು ಬಗೆಯಲ್ಲಿ ಹೇಳಲು ಸಾಧ್ಯವಿದೆ.

ಅರಿಸಿನ ತೆನಿಯಂಥ ಹುಡುಗಿ
ಮನಸಿನಾಗ ನೆಟ್ಟಿದಾಳ ಎಳಿಕಮಲ|
ನಿತ್ಯ ಕನಸಿನಾಗ ಬರ್ತಾಳೀಕಿ ಹಗಲೆಲ್ಲ |
ಎನ್ನ ಮನಸ ಇಟ್ಟು ನೆನಿಸಿ ಹೋದು ಕೈಕಾಲಾ ||

ಚೆಲುವಾದ ಒಂದು ಮೂಗು ಕಂಡೇ ಮೂಕವಿಸ್ಮಿತನಾಗಿ ಬೆರಗುಡುವ ರೀತಿಯಲ್ಲಿ ಅಳವಡಿಸಿದ ಚುಟುಕು ಇದು

ನಿನ್ನ ಮೂಗ ಸಂಪಿಗೀ ತೆನೀ |
ಮುತ್ತಿನಾ ಗೊನೀ |
ಕೋಗಿಲ್ಹಂಗ ಧನೀ |
ಎಳಿಯ ಕಮಲಾ ||
ಓಣಿ ಹಿಡಿದು ಹೊಂಟಿ ಕುಣಿದಂಗ ಗಂಡು ನವಿಲಾ |

ಸವಕಳಿ ನಾಣ್ಯ, ಹೇಸಿಗುರು, ಕುರುಡನ ಕೈದೀವಿಗೆ, ಸೆಂಬಾಳ ಗುಂಡಿ ಮೊದಲಾದ ಶಬ್ದಗಳು ವಿಶೇಷಣಗಳಾಗಿ ಬಿಡದೆ, ದೃಷ್ಟಾಂತಗಳಾಗಿ ಪರಿಣಮಿಸುವ ಹಂತಕ್ಕೆ ಬಂದುದನ್ನು ಬಗೆದು ಭಾವಿಸಿಯೇ ಆನಂದಿಸಬೇಕು.

ಸವಕಳಿ ನಾಣ್ಯವು ಮುದ್ರೆಯನ್ನು ಮಾತ್ರ ಕಳಕೊಂಡಿರುವುದಲ್ಲದೆ, ಅದು ತೂಕದಲ್ಲಾಗಲಿ ಆಕಾರದಲ್ಲಾಗಲಿ ಹಿರಿದು ಕಿರಿದಾಗಿಲ್ಲ. ಮೂಲಧಾತುವಂತೂ ಇದ್ದದ್ದು ಇದ್ದ ಹಾಗೆಯೇ ಇದೆ. ಆದರೆ ಸವಕಳಿಯ ಕಾರಣದಿಂದಾಗಿ ಅದು ನಡೆಯದ ನಾಣ್ಯವಾಗಿ ಪರಿಣಮಿಸಿದೆ.

ಹೇಸಿ ಗುರುವನ್ನು ಬೆಂಬಲಿಸಿಯೋ ಬೆನ್ನುಹತ್ತಿಕೊಂಡೋ ಸಮಗಾರ ಶಿಷ್ಯನು ಕವನೆರಳಿನಂತೆ ಹಿಂಬಾಲಿಸುತ್ತಾನೆ. ಆ ಸಮಗಾರ ಶಿಷ್ಯನಿಗಾಗಿ ಹೇಸಿಗುರುವಿನ ನೆರಳು ಸಹ ಬೇಡವೆನ್ನುವಂತಾಗುತ್ತದೆ.

ಕುರುಡನ ಕೈದೀವಿಗೆ ಮೇಲು ನೋಟಕ್ಕೆ ಆತನಿಗೆ ಯಾವ ಪ್ರಯೋಜನವೂ ಇಲ್ಲವೆನಿಸುವಂತಿದೆ. ಆ ಕೈದಿವೀಗೆಯ ಬೆಳಕು ಕಣ್ಣುಳ್ಳವರು ಮುಗ್ಗರಿಸಿ ಬೀಳದಂತೆ ನೋಡಿಕೊಳ್ಳುವುದು. ಆದರೆ ಆ ಬೆಳಕು ಕಣ್ಣು ಕುಕ್ಕಿಸಿದರೇನು ಗತಿ? ಅಪ್ಪಿ ತಪ್ಪ ಮುಗ್ಗರಿಸಿದರೂ ತನ್ನ ಮೇಲೆ ಬೀಳದಿದ್ದರೆ, ಕೈದೀವಿಗೆಯ ಪ್ರಯೋಜನವು ಸಾಕಷ್ಟು ಆಯಿತೆಂದೇ ಕುರುಡನು ಬಗೆಯುತ್ತಾನೆ.

ಅಗಸನು ಅವೆಷ್ಟೋ ಊರ ಬಟ್ಟೆಗಳನ್ನು ಜಲಾಶಯದ ತೀರದಲ್ಲಿ ಒಣಗು ಹಾಕಿದಾಗ ಭರ್ರನೇ ಬಿರುಗಾಳಿ ಬೀಸತೊಡಗಿದರೆ, ಯಾವ ಬಟ್ಟೆಯನ್ನೂ ಹಿಡಿದಿರಿಸಿಕೊಳ್ಳಲಿಕ್ಕಾಗದೆ ತೂರಿ ಹೋಗುವ ಬಟ್ಟೆಗಳನ್ನು ನೋಡುತ್ತ ಕೂಗಿಕೊಳ್ಳುತ್ತಾನೆ. ಆ ಕೂಗಾಟಕ್ಕೆ ಹಿಮ್ಮೇಳ ವಾದ್ಯ ಯಾವುದು ಬಲ್ಲಿರಾ? ಎರಡೂ ಹಸ್ತಗಳಿಂದ ಸೊಂಟದ ಹಿಂಭಾಗದ ಕುಂಡಿಗಳನ್ನು ಬಡಕೊಳ್ಳುವನು ಅದೇ ಸಂಬಾಳಗುಂಡಿ.