ಒಗಟು ಗಾದೆಯ ಮಾತುಗಳು ಅರ್ಥವನ್ನು ಸ್ಪಷ್ಟೀಕರಿಸುವ ವ್ಯಾಖ್ಯೆಗಳಾದರೆ, ಅಡ್ಡಗತೆಗಳು ಅರ್ಥವನ್ನು ನಿಚ್ಚಳಗೊಳಿಸುವ ವ್ಯಾಖ್ಯಾನಗಳೇ ಆಗಿವೆ. ಕೀರ್ತನಕಾರರಾಗಲಿ, ಪುರಾಣಿಕ-ಪ್ರವಚನಕಾರರಾಗಲಿ ತಾವು ಪ್ರತಿಪಾದಿಸುವ ವಿಷಯವನ್ನು ತಿಳಿಗೊಳಿಸುವುದಕ್ಕಾಗಿ ಕಥೆಯನ್ನು ಉದಾಹರಿಸುವುದುಂಟು. ಸಂದರ್ಭಾನುಸಾರವಾಗಿ ವಿಷಯವನ್ನು ತುಸು ಸ್ಥಗಿತಗೊಳಿಸಿ ಕತೆ ಆರಂಭ ಮಾಡುತ್ತಲೇ ಕೇಳುಗರ ತೂಕಡಿಕೆ ತೊಲಗಿ, ನಿಚ್ಚಳಗೊಂಡ ಲಕ್ಷಣ ಕಂಡುಬರುವುದು. ಕಥೆ ಮುಗಿಯುವ ಹೊತ್ತಿಗೆ ಸಂಪೂರ್ಣ ಎಚ್ಚರಿಕೆ ಉಂಟಾಗುವದು. ಆಗ ಸ್ಥಗಿತಗೊಂಡ ವಿಷಯವು ಹಗುರಾಗಿ ಮುಂದುವರಿಯುವುದು. ಪ್ರವಚನಕಾರರು ಉದಾಹರಿಸುವ ಕಥೆಗಳು ದೃಷ್ಟಾಂತ ಕಥೆಗಳೆನಿಸಿದರೆ, ಕೀರ್ತನಕಾರರು ಹೇಳುವ ಕಥೆಗಳು ಅಡ್ಡಗತೆಯೆನಿಸುವವು. ಹಾಗಿದ್ದರೂ ಅವುಗಳ ಜಾತಿ ಒಂದೇ. ಬಯಲಾಟ ನಡೆದಾಗ ಪ್ರೇಕ್ಷಕರು ಮೈಮುರಿದುಕೊಂಡು ಆಕಳಿಸತೊಡಗಿದ ಲಕ್ಷಣ ತೋರುತ್ತಲೇ ಅಡ್ಡಸೋಗು ಕಾಣಿಸಿಕೊಳ್ಳುವುದು, ಅಟ್ಟದ ಮೇಲೆ ಅಡ್ಡಸೋಗು ಎನಿಸಿದರೂ ಅದೊಂದು ಕಥೆಯನ್ನೇ ನಿರೂಪಿಸುವುದು. ವಿಷಯ ನಿರೂಪಣೆ ನಡೆದಾಗ ನುಸುಳಿದ ಕಥೆಗೆ ಅಡ್ಡಗತೆಯೆಂದೇ ಹೇಳಬಹುದಾಗಿದೆ.

ಅಡ್ಡಗತೆಯ ಅಭ್ಯಾಸವನ್ನು ತೀರ ಆಧುನಿಕ ಮಹತ್ಪುರುಷರಾದ ಶ್ರೀರಾಮಕೃಷ್ಣ ಪರಮ ಹಂಸರೂ, ಶ್ರೀರಾಮತೀರ್ಥ ಸ್ವಾಮಿಗಳೂ ಸಾಕಷ್ಟು ಬಳಸುತ್ತಿದ್ದರು. ಅವುಗಳನ್ನು ಪೌರಾಣಿಕ ಸ್ವರೂಪದಲ್ಲಿ ಹೇಳಿದರೂ, ದಿಲ್ಲಿಯ ಅಕ್ಬರ, ಬೀರಬಲ್ಲ ಇಲ್ಲವೆ ವಿಜಯನಗರದ ಕೃಷ್ಣ ದೇವರಾಜ, ತೆನಾಲಿ ರಾಮಕೃಷ್ಣ ಅವರನ್ನು ಆರೋಪಿಸಿ ಹೇಳಿದರೂ ಅವು ಜಾನಪದ ಜಾಡಿನ ಕಥೆಗಳೇ ಆಗಿವೆ. ಪೌರಾಣಿಕ ಐತಿಹಾಸಿಕ ಸ್ವರೂಪದಲ್ಲಿ ಜನಪದವು ಅಸಂಖ್ಯ ಕಥೆಗಳನ್ನು ಪಾರ್ಪಡಿಸಿಕೊಂಡು ಜಾನಪದ ಹಥೆಗಳನ್ನಾಗಿ ಮಾಡಿಕೊಂಡಿದೆ. ಜಾನಪದ ಕಥೆಗಳಲ್ಲಿ ಕಾಲ್ಪನಿಕ ಕಥೆಗಳ ಸಂಖ್ಯೆಯೂ ಅಪಾರವಾಗಿದೆ. ಅವುಗಳನ್ನು ಸಂದರ್ಭಾನುಸಾರವಾಗಿ ನಡುನಡುವೆ ಹೇಳಲಾಗುವುದರಿಂದ ಅವು ಅಡ್ಡಗತೆಯೆನಿಸುತ್ತವೆ. ಅಡ್ಡಗತೆಯ ಮೂಲ ವಿಷಯಕ್ಕೆ ಅಡ್ಡ ಬರದೆ, ಅಡ್ಡಿಯಾಗದೆ ಅದನ್ನು ಅಡ್ಡಾಡುತ್ತಲೋ ಆಡಾಡುತ್ತಲೋ ಕಡದುದಾರಿಯನ್ನು ತಪ್ಪಿಸಿ ಅಥವಾ ಹತ್ತಿಸಿ ಬಳಸು ದಾರಿಗೆ ತಂದು ನಿಲ್ಲಿಸುತ್ತದೆ. ಆದ್ದರಿಂದ ಮೂಗಿಗಿಂತ ಮೂಗುತಿಯೆ ಮಿಗಿಲಾಗದಂತೆ, ತೋಟಕ್ಕಿಂತ ಕಾಯಿಯೇ ಉದ್ದವಾಗದಂತೆ ನೋಡಿಕೊಳ್ಳಬೇಕಾಗುತ್ತದೆ.

ಇಸೋಪನ ನೀತಿಕಥೆಗಳನ್ನು ಜನಪದದಲ್ಲಿ ಅಡ್ಡಕತೆಗಳಂತೆ ಬಳಸಲಾಗುತ್ತದೆ. ಕನ್ನಡನಾಡಿನ ಇಸೋಪನಂತಿದ್ದ ದಿ. ಶಿವರುದ್ರಪ್ಪ ಸೋಮಪ್ಪ ಕುಲಕರ್ಣಿ ಮಾಸ್ತರರ ‘ನನ್ನ ತಾಯಿ’ ಮತ್ತು ‘ನಾಡನೆಲೆಗಾರ’ ಪುಸ್ತಕದೊಳಗಿನ ಕಥೆಗಳು ಸಹ ಶುದ್ಧ ಜಾನಪದದ ಜಾಡಿನಲ್ಲಿಯೇ ಬರೆದವುಗಳಾಗಿವೆ. ಅವುಗಳನ್ನು ಅಡ್ಡಗತೆಗಳಂತೆ ಬಳಸಿಕೊಂಡು ವಿಷಯವನ್ನು ಹಗುರಗೊಳಿಸಬಹುದು; ಆಕರ್ಷಕಗೊಳಿಸಬಹುದು.

ಶ್ರೀರಾಮಕೃಷ್ಣ ಪರಮಹಂಸರು ಬಳಸುತ್ತಿದ್ದ ಒಂದು ಅಡ್ಡಗತೆಯಿದು :

ಹಣದ ಸೊಕ್ಕು : ಒಂದು ಕಪ್ಪೆಗೆ ರೂಪಾಯಿಯ ನಾಣ್ಯ ಸಿಕ್ಕಿತ್ತು. ಅದನ್ನು ಯಾವಾಗಲೂ ಬಾಯಲ್ಲಿ ಹಿಡಿದುಕೊಂಡು ಅದು ರೊಕ್‌ರೊಕ್‌ಎಂದು ಕೂಗುತ್ತಿತ್ತು. ತನ್ನ ಸಮಾನರಾರೂ ಇಲ್ಲವೆಂದೂ, ತಾನಿನ್ನೂ ಯಾರನ್ನೂ ಲೆಕ್ಕಿಸುವ ಕಾರಣವಿಲ್ಲವೆಂದೂ ಅದು ಲೆಕ್ಕಹಾಕಿತ್ತು. ಕಪ್ಪೆ ವಾಸಿಸುತ್ತಿದ್ದ ಕೆರೆಯ ನೀರು ಕುಡಿಯಲೆಂದು ಒಂದು ಆನೆ ಬಂತು. ಅದರ ದೊಡ್ಡ ದೇಹ, ನೀಳವಾದ ಸೊಂಡಿಲು ನೋಡಿ ಕಪ್ಪೆಗೆ ಭಯವೆನಿಸಲಿಲ್ಲ. ತಿರುಗಿ ಅದು ಆನೆಯನ್ನೇ ಕೆಣಕಿ ಕೂಗಿತು- “ಏ ಅನ್ಯಾ, ಇತ್ತ ಬರಬೇಡ. ಆ ಕಡೆಯಿಂದ ಹಾಯ್ದುಹೋಗು. ನಾವಿಲ್ಲಿ ಕುಳಿತಿದ್ದೇವೆ, ಕಾಣುವದಿಲ್ಲವೇ?” ಆ ಮಾತು ಆನೆಯ ಕಿವಿಗೆ ಬೀಳಲು, ಅದು ಚಾರುಗಣ್ಣಿನಿಂದ ಕಪ್ಪೆಯತ್ತ ನೋಡಿದಾಗ ಅದರ ಬಾಯಲ್ಲಿ ರೂಪಾಯಿಯ ನಾಣ್ಯ ಕಾಣಿಸಿತು. ಕಪ್ಪೆ ಇಷ್ಟೊಂದು ಸೊಕ್ಕಿನಿಂದ ಮಾತಾಡುವುದಕ್ಕೆ ಆ ನಾಣ್ಯದ ಪ್ರಭಾವವೇ ಕಾರಣವೆಂದು ಬಗೆದು ತನ್ನ ದಾರಿಯಲ್ಲಿ ಸಾಗಿಹೋಯಿತು.

ದಿ. ಶಿವರುದ್ರಪ್ಪ ಕುಲಕರ್ಣಿ ಅವರ ರಚನೆಯಿದು-

ಸರಾಸರಿ ಭಟ್ಟರ ಜಾಣತನ : ಭಟ್ಟರೊಬ್ಬರು ಪ್ರಯಾಣ ಹೊರಟಾಗ ದಾರಿಯಲ್ಲಿ ತುಂಬಿ ಹರಿಯುವ ಹಳ್ಳವೊಂದು ಅಡ್ಡಗಟ್ಟಿತು. ದಾಟಿಹೋಗುವುದು ಸಾಧ್ಯವಿಲ್ಲವೆಂದು ಅದೆಷ್ಟೋ ಜನ ಪ್ರಯಾಣಿಕರು, ಹರ್ಳಳ ಇಳಿಯುವ ಸಮಯವನ್ನೇ ಕಾದು ಕುಳಿತಿದ್ದರು. ಜಾಣರಾದ ಭಟ್ಟರು ಹಳ್ಳದ ದಂಡೆಯಲ್ಲಿ ನಿಂತು, ಈ ದಡದಿಂದ ಆ ದಡದ ಪ್ರವಾಹದವರೆಗೆ ಒಂದೊಂದು ಹರಳು ಬಗೆಯುತ್ತ, ಇಲ್ಲೆಷ್ಟು ನೀರು, ಅಲ್ಲೆಷ್ಟು ನೀರು ಎಂದು ಕೇಳುತ್ತ ಉತ್ತರ ಪಡೆಯ ತೊಡಗಿದರು. ಪಾದಮಟ್ಟ, ಮೊಳಕಾಲಮಟ್ಟ, ತೊಡಿಮಟ್ಟ, ಸೊಂಟಮಟ್ಟ, ಎದಿಮಟ್ಟ, ಕುತ್ತಿಗೆಮಟ್ಟ ಆ ಬಳಿಕ ನೆಲೆಹಾರುವಷ್ಟು ನೀರಿದೆಯೆಂದೂ, ಬಳಿಕ ಮತ್ತೆ ಕುತ್ತಿಗೆ, ಎದೆ, ಸೊಂಟ, ತೊಡೆ, ಮೊಳಕಾಲಮಟ್ಟ ನೀರಿದೆಯೆಂದೂ ಕೇಳಿ ತಿಳಕೊಂಡರು. ಆ ಬಳಿಕ ಬೇರೆ ಬೇರೆ ಮಟ್ಟಗಳನ್ನು ಕೂಡಿಸಿ ಸರಾಸರಿ ಲೆಕ್ಕ ತೆಗೆದರು. ಹಳ್ಳದ ನೀರಿನ ಸರಾಸರಿ ಆಳ ತೊಡೆಮಟ್ಟ ಎಂದು ನಿರ್ಣಯಿಸಿ ಭಟ್ಟರು ನೀರಲ್ಲಿಳಿದು ಸಾಗಿಯೇ ಬಿಟ್ಟರು. ಕ್ರಮವಾಗಿ ಅರ್ಧಹಳ್ಳ ದಾಟುತ್ತಲೇ ನೆಲೆಹಾರಲು ಪ್ರವಾಹ ಸೆಳವಿಗೆ ಸಿಕ್ಕು ಸರಾಸರಿ ಭಟ್ಟರು ಕೊಚ್ಚಿಕೊಂಡೇ ಹೋದರು.

ಇನ್ನು ಹೇಳುವ ಕಥೆ ಜನಪದದಲ್ಲಿ ಬಹು ಕಾಲದಿಂದ ಪ್ರಚಲಿತವಾಗಿರುವುದಲ್ಲದೆ, ಪ್ರಚೋದಕವೂ ಆಗಿದೆ. ಅದರ ತಾತ್ಪರ್ಯವು ವಿದ್ಯಾರ್ಥಿಯಿಂದ ವೇದಾಂತಿಯವರೆಗೆ ಎಲ್ಲರಿಗೂ ಹೊಂದಿಕೆಯಾಗಬಲ್ಲದು.

ಮೂರು ಹೋರಿಗಳು : ಸುಗ್ಗಿ ಕಾಲದ ಒಂದು ಇಳಿಹೊತ್ತಿನಲ್ಲಿ ಮೂರು ಹೋರಿಕರುಗಳು ಊರ ಅಗಸೆಯ ಮುಂದೆ ಕೂಡಿದವು. ಜೊತೆಗೂಡಿ ಮುಂದೆ ಸಾಗಿದಾಗ ಒಂದು ರೊಜ್ಜಿನ ಹರಿಯನ್ನು ದಾಟಬೇಕಾಯಿತು. ಒಂದು ಕರು ಯಾವ ಅನುಮಾನವಿಲ್ಲದೆ, ಬಾಲವನ್ನೆತ್ತಿ ಟಣ್ಣನೆ ಜಿಗಿದು ಆಚೆಗೆ ಹೋಗಿ ನಿಂತಿತು. ಇನ್ನೊಂದು ಕರು ಅದೇ ರೀತಿಯಲ್ಲಿ ದಾಟಬೇಕೆಂದು ಜಿಗಿದರೂ ಹಿಂಗಾಲು ರೊಜ್ಜು ತಿಳಿಯಬೇಕಾಯಿತು. ಮೂರನೇ ಕರು ಜಿಗಿಯುವ ಹವ್ಯಾಸಕ್ಕೆ ಬೀಳದೆ ರೊಜ್ಜು ತುಳಿಯುತ್ತ ಕಿತ್ತಡಿಯಾಗಿ ಮುಂದಿನ ಕರುಗಳನ್ನು ಕೂಡಿಕೊಂಡಿತು.

ಆ ಮೂರು ಕರುಗಳಲ್ಲಿ ಮುಂದಿನದು ಒಕ್ಕಲಿಗರ ಮನೆಯಲ್ಲಿ ಹುಟ್ಟಿಬೆಳೆದದ್ದು, ಎರಡನೇದು ಉಪಾಧ್ಯಾಯರದು, ಇನ್ನುಳಿದದ್ದು ಗೌಳಿಗರದು. ಉಪಾಧ್ಯರ ಕರು ಕೆಳಿತು ಒಕ್ಕಲಿಗರ ಕರುವಿಗೆ “ನೀನು ಒಂದೇಟಿಗೆ ಜಿಗಿದುಬಿಟ್ಟೆಯಲ್ಲ, ರೊಜ್ಜು ಸೋಂಕದಂತೆ ಹೇಗೆ ಸಾಧ್ಯವಾಯಿತು?” ಒಕ್ಕಲಿಗರ ಕರು ಮರುನುಡಿಯಿತು-

“ನಮ್ಮವ್ವನ ನಾಲ್ಕೂ ಮೂಲೆಯೊಳಗಿನ ಹಾಲನ್ನೆಲ್ಲ ಎರಡೂ ಹೊತ್ತು ಕುಡಿಯುತ್ತಿರುವುದರಿಂದ ನನಗೆ ಇಂಥ ಶಕ್ತಿ, ಉತ್ಸಾಹ ಬಂದಿದೆ.”

ಆ ಮಾತು ಕೇಳಿ ಉಪಾಧ್ಯರ ಕರುವಿಗೆ ಆಶ್ಚರ್ಯವೆನಿಸಿ, ಮತ್ತೆ ಕೇಳಿತು-

“ಏನಂದೀ ಅವ್ವನ ಮೂಲೆಯಲ್ಲಿ ಹಾಲಿರುವವೇ? ಈವರೆಗೆ ನನ್ನ ಬಾಯಿಗೆ ಒಂದು ಹನಿ ಸಹ ಹಾಲುಬಿದ್ದಲ್ಲ. ನಾಲ್ಕು ಮೂಲೆಗಳನ್ನು ದಿನಾಲು ತಪ್ಪದೆ ಗೀರುತ್ತೇನೆ.”

ಅವೆರಡೂ ಕರುಗಳು ಮಾತಾಡುತ್ತಿರುವುದನ್ನು ಕೇಳಿ, ಗೌಳಿಗಳ ಕರುವಿಗೆ ತೀರ ಸೋಜಿಗವೆನಿಸಿತು. ಏನಿರೋ ಏನೇನೋ ಮಾತಾಡುತ್ತಿರುವಿರಲ್ಲ! ಅವ್ವನಿಗೆ ಮೂಲೆಗಳಿರುವವೇ? ಎಂದು ಕೇಳಿತು.

ಹೋರಿಗರುವನ್ನು ಬದುಕು ಮಾಡುವ ಹವ್ಯಾಸದಿಂದ ಒಕ್ಕಲಿಗರು, ತಮಗಾಗಿ ಹಾಲು ಎಷ್ಟೂ ಹಿಂಡಿಕೊಳ್ಳದೆ ಕರುವಿಗೆ ಬಿಟ್ಟು ಉಣಿಸುತ್ತಾರೆ. ಆದರೆ ಉಪಾಧ್ಯರು ಆವಿನ ಕೆಚ್ಚಲೊಳಗಿನ ಹಾಲನ್ನೆಲ್ಲ ತಮಗಾಗಿ ಜಜ್ಜಿ ಜಜ್ಜಿ ಹಿಂಡಿಕೊಂಡು ಆಮೇಲೆ ಔಪಚಾರಿಕವಾಗಿ ಕರು ಬಿಡುವರು. ಆದರೆ ಅದು ಸೀಪುವುದು ಒಣ ಮೂಲೆಗಳನ್ನೇ ಗೌಳಿಗರಂತೂ ಕರುವಿಗೂ, ಕೆಚ್ಚಲಿಗೂ ದರ್ಶನ ಮಾಡಿವುದೇ ಇಲ್ಲ. ಅಂತೆಯೇ ಆ ಕರು ಕೇಳುತ್ತದೆ. “ಅವ್ವನಿಗೆ ಮೊಲೆಗಳಿವೆಯೇ’’ ಎಂದು.

ಕೀರ್ತನಕಾರರು ಹೇಳುವ ಅಡ್ಡಗತೆಯೊಂದು ಇಲ್ಲಿದೆ.

ಗಿಡ್ಡರನ್ನು ಹೊರಗೆ ಹಾಕಿ : ಒಂದು ದೇವಾಲಯದ ಅಂಗಳದಲ್ಲಿ ಕೀರ್ತನ ಹೇಳಿಸುವ ಏರ್ಪಾಡಾಗಿತ್ತು. ಅಷ್ಟರಲ್ಲಿ ಕೀರ್ತನಕಾರರು ಬಂದು ಸುತ್ತಲು ನೋಡಿದರು. ಬಳಿಕ ಊರ ಪ್ರಮುಖರೊಬ್ಬರನ್ನು ಒತ್ತಟ್ಟಿಗೆ ಕರೆದು, ಹೇಳಿದರು. “ಇಲ್ಲಿ ಸೇರಿದ ಜನರಲ್ಲಿ ಗಿಡ್ಡರಾದವರು. ಇರಕೂಡದು. ಅವರು ಉಳಿದುಕೊಂಡರೆ, ಕೀರ್ತನ ಹೇಳುವುದಕ್ಕೆ ನನಗೆ ಸಾಧ್ಯವೇ ಆಗುವದಿಲ್ಲ.

ತಾವು ಸೂಚಿಸಿದಂತೆ ಗಿಡ್ಡರನ್ನೆಲ್ಲ ಹೊರಹಾಕಿದ್ದು ಮನವರಿಕೆಯಾದ ಬಳಿಕ, ಕೀರ್ತನಕಾರರು ತಮ್ಮ ವಿಷಯವನ್ನು ಆರಂಭಿಸಿದರು. ದೇವಸ್ತುತಿ, ವಿಷಯ ಪ್ರಸ್ತಾವನೆ ಮುಗಿಸಿ ಕಥೆ ಆರಂಭಗೊಂಡಾಗ ಅವರು ಒಂದು ಅಡ್ಡಗತೆಯನ್ನು ಹೇಳತೊಡಗಿದರು. ಒಂದು ತಿಪ್ಪೆಯಲ್ಲಿ ಹಲವು ಪತ್ರಾವಳಿಗಳು ಬಿದ್ದಿದ್ದವು: ಒಂದೆರಡು ಮಣ್ಣು ಹೆಂಟೆಗಳೂ ಉರುಳಾಡುತ್ತಿದ್ದವು. ಸುಂಟರಗಾಳಿ ಬೀಸಿ ನಾಲ್ಕು ಹನಿ ಮಳೆ ಬಿದ್ದು ಮಳೆಗಾಲವನ್ನು ಸೂಚಿಸುತ್ತಿದ್ದವು. ಆಗ ತಿಪ್ಪೆಯೊಳಗಿನ ಪತ್ರಾವಳಿ ಹಾಗೂ ಹೆಂಟೆಗಳು ಹತ್ತಿರ ಹತ್ತಿರ ಬಂದು-ನಾವು ಪರಸ್ಪರ ಸಹಕಾರದಿಂದ ಸುಂಟರಗಾಳಿ ಮಳೆಗಳಿಂದ ಸುರಕ್ಷಿತವಾಗಿ ಬದುಕುವ ಉಪಾಯವನ್ನು ಮಾಡಲೇಬೇಕೆಂದು ಯೋಚಿಸಿದವು. ಸುಂಟರಗಾಳಿ ಬೀಸುವಾಗ ಪತ್ರಾವಳಿಯ ಮೇಲೆ ಹೆಂಟೆ ಕುಳಿತುಕೊಳ್ಳಬೇಕು. ಮಳೆಯ ಹನಿ ಉದುರುತ್ತಿರುವಾಗ ಹೆಂಟೆಯ ಮೇಲೆ ಪತ್ರಾವಳಿ ಕುಳಿತುಕೊಳ್ಳಬೇಕು. ಹೀಗೆ ಮಾಡಿದರೆ ಸುಂಟರಗಾಳಿಗೆ ಪತ್ರಾವಳಿ ಹಾರಿಹೋಗದು, ಸುರಿ ಮಳೆಯಲ್ಲಿ ಹೆಂಟೆ ಕರಗಿಹೋಗದು.

ಅಷ್ಟರಲ್ಲಿ ಶ್ರೋತೃವೃಂದದೊಳಗಿಂದ ಒಂದು ಧ್ವನಿ ಕೇಳಿ ಬಂದಿತು- “ಸುಂಟರಗಾಳಿ, ಸುರಿಮಳೆ ಏಕಕಾಲಕ್ಕೆ ಆರಂಭವಾದರೆ ಹೇಗೆ?”

ಆ ಪ್ರಶ್ನೆಯನ್ನು ಕೇಳಿ ಕೀರ್ತನಕಾರನ ಕೈಕಾಲೇ ತಣ್ಣಗಾದವು. ಊರ ಪ್ರಮುಖರತ್ತ ಹೊರಳಿ “ಈ ಸಭೆಯಲ್ಲಿ ಇನ್ನೊಬ್ಬ ಗಿಡ್ಡನುಳಿದಿದ್ದಾನಲ್ಲ! ಅವನನ್ನೂ ಹೊರಹಾಕಿರಿ ಮೊದಲು” ಎಂದನಂತೆ. ಪುರಾಣಿಕರ ಬಾಯಿಂದ ಒಂದು ಅಡ್ಡಗತೆ ಕೇಳೋಣ.

ಬೊಬ್ಬಾಟಕ್ಕೆ ತಡೆ: ಕುದುರೆಯ ಮೇಲೆಕುಳಿತು ಸಾಗಿರುವ ದಾರಿಕಾರನನ್ನು ಕಂಡು, ಎದುರುಬಂದ ದಾರಿಕಾರನು ಕಂಡು- ಏನಯ್ಯ, ಕುದುರೆಯ ಬಾಯಿಯನ್ನು ಹಗ್ಗದಿಂದ ಬಿಗಿದಿರಿವಿಯಲ್ಲ ! ಏನು ಕಾರಣ” ಎಂದು ಕೇಳಿದನು-

ಅದಕ್ಕೆ ಕುದುರೆಯವನು ಹೇಳಿದ್ದೇನಂದರೆ-

“ಕುದುರೆಯ ಮೇಲೆ ಸಾಗಿರುವಾಗ ತೂಕಡಿಕೆಯಲ್ಲಿ, ನನಗೂ ಗೊತ್ತಾಗದಂತೆ ಒಂದು ಅಪಾನವಾಯು ಹೊರಬಿತ್ತು. ಆ ಸಪ್ಪಳಕ್ಕೆ ಎಚ್ಚತ್ತು ಗಾಬರಿಯಾಗಿ, ನಾನು ಹೂಸು ಬಿಟ್ಟಿದ್ದನ್ನು ಯಾರಾದರೂ ಕೇಳಿದರೋ ಏನೋ ಎಂದು, ಹಿಂದೆ ಮುಂದೆ ನೋಡಿದೆ. ಪುಣ್ಯಕ್ಕೆ ಯಾರೂ ಇರಲಿಲ್ಲ. ಆದರೆ ಈ ಕುದುರೆ ಮಾತ್ರ ಕೇಳಿತ್ತು. ಅದು ಆ ಸಂಗತಿಯನ್ನು ಯಾರ ಮುಂದಾರರೂ ಹೇಳಿದರೆ, ನನಗೆ ಅವಮಾನವಾಗುವದೆಂದು ಬಗೆದು, ಅದರ ಬಾಯಿ ಬಿಗಿದು ಯಾರ ಮುಂದೆಯೂ ಅದು ಉಸಿರೊಡೆಯದಂತೆ ಮಾಡಿದ್ದೇನೆ”

ಆ ಮಾತಿಗೆ ದಾರಿಕಾರನು ನಕ್ಕು- “ಕುದುರೆಯ ಬಾಯಿ ಕಟ್ಟಿ, ನೀನು ಹೂಸುಬಿಟ್ಟ ಸಂಗತಿ ಗುಟ್ಟಾಗಿ ಉಳಿಯುವಂತೆ ಮಾಡಿದ ನೀನೆ ಆ ಸುದ್ದಿಯನ್ನು ಮುಂಚಿತವಾಗಿ ನನ್ನ ಮುಂದೆ ಹೊರಗೆಡುಹಿದಿಯಲ್ಲ !” ಎಂದು ನುಡಿದು ಮುಂದಕ್ಕೆ ಸಾಗಿದನು.

“ಓಹೋ, ಹೀಗಾಯಿತೇ?” ಎನ್ನುತ್ತ ಕುದುರೆಯನ್ನು ಮುಂದೆ ಹೊಡೆದನು. ಮಾತೇ ಅರಿಯದ ಕುದುರೆಯ ಬಾಯಿಕಟ್ಟಿದ್ದು, ಗುಟ್ಟು ಬಯಲಾಗಬಾರದೆಂದು. ಆದರೆ ಕುದುರೆಗಿಂತ ಮುಂಚಿತವಾಗಿಯೇ ಕುದುರೆಯವನು ರಹಸ್ಯವನ್ನು ನಿರಾತಂಕವಾಗಿ ಹೊರಗೆಡಹಿ ನಗೆಗೀಡಾದನು.

ಎಂದೋ ಕೇಳಿದ ಒಂದು ಹಳೆಯ ಕಥೆ.

ಹೆಂಡತಿಗೆ ಹೆದರುವ ಗಂಡ : ಹೆಂಡತಿಗೆ ಹೆದರುವ ಗಂಡನು, ತನ್ನ ಕೈಯಿಂದ ತಾನೆ ಉಣಬಡಿಸಿಕೊಂಡು ಊಟಕ್ಕೆ ಕುಳಿತನು. ಅವನಿಗೆ ಅನ್ನದಲ್ಲಿ ಹಾಕಿಕೊಳ್ಳಲು ತುಪ್ಪಬೇಕಾಯಿತು. ತುಪ್ಪದ ಪಾತ್ರೆ ಸಿಗಲಿಲ್ಲ. ಹೊರಗೆ ವಾಮಕುಕ್ಷಿ ಮಾಡಿದ ಹೆಂಡತಿಗೆ ಕೇಳಿದನು-

“ತುಪ್ಪದ ಪಾತ್ರೆಯಲ್ಲಿ?”

ಹೆಂಡತಿಯ ನಿದ್ರಾಭಂಗವಾದಂತಾಗಿ-“ಏನಂದಿರಿ” ಎಂದು ಅಡ್ಡಾದಲ್ಲಿಯೇ ಕೇಳಿದಳು. ಹೆಂಡತಿಯ ಮೇಲುದನಿಗೆ ಬೆದರಿ, ನಡುಗುತ್ತ-“ಉಪ್ಪು ಎಲ್ಲಿದೆ” ಎಂದು ಗೊಣಗಿದನು. ಆಗಲೂ ಆ ಮಾತು ಹೆಂಡತಿಗೆ ಕೇಳಿಸಲಿಲ್ಲ.

“ಕೇಳಿಸುವಂತೆ ಗಟ್ಟಿಯಾಗಿ ನುಡಿಯಬಾರದೇ” ಎಂದು ಹೆಂಡತಿ ಅಬ್ಬರಿಸಿದಳು.

ಆಗಂತೂ ಗಂಡನ ಕೈಕಾಲೇ ತಣ್ಣಗಾದವು. “ನಾನೇನೂ ಕೇಳಲೇ ಇಲ್ಲ. ಅನ್ನ ಸುಡುತ್ತಿತ್ತು, ಉಫ್ ಉಫ್ ಎಂದು ಊದಿಕೊಳ್ಳುತ್ತಿದೆ” ಎಂದು ಗಂಡನು ಬಾಯಿ ಸವರಿದನು.

ತುಪ್ಪ ಹೋಗಿ ಉಪ್ಪು ಆಯಿತು. ಉಪ್ಪು ಹೋಗಿ ಊಫ್ ಆಯಿತು, ಹೆಂಡತಿಯ ಗಡಸು ನುಡಿಯಿಂದ.

ಬಾಲವಿವಾಹಕ್ಕೆ ಸಂಬಂಧಿಸಿದ ವಿಷಯವನ್ನು ಹೇಳುವಾಗ, ಮದುಮಕ್ಕಳು ಅದೆಷ್ಟು ಚಿಕ್ಕವರಿರುವರೆಂಬುದನ್ನು ಒಬ್ಬ ಹಳ್ಳಿಯ ಸ್ನೇಹಿತನು ಅತಿಶಯೋಕ್ತಿಯಲ್ಲಿ ಹೇಳಿದ ಕಥೆ.

ತೊತ್ತಲಾದ ಹಾತಿಲ್ಲ: ಮದುವೆಯ ಕಾಲಕ್ಕೆ ಅಕ್ಷತೆಬಿದ್ದ ಬಳಿಕ ಮದುಮಕ್ಕಳಿಗೆ ಹೆಸರು ಕೇಳುವ ವಾಡಿಕೆಯಿದೆಯಷ್ಟೇ? ಮದುಮಗನು ಹೆಂಡತಿಯ ಹೆಸರು, ಮದುಮಗಳು ಗಂಡನ ಹೆಸರು ಹೇಳಬೇಕು. ಮದುಮಗಳಾಗಿ ಕೊರಳಲ್ಲಿ ತಾಳಿಕಟ್ಟಿಕೊಂಡ ಹೆಂಗೂಸು ಮೊಲೆಯೂದುತ್ತ ತಾಯಿಯ ತೊಡೆಯಲ್ಲಿ ಒರಗಿದೆ. ಅದಕ್ಕೆ ಹೆಸರು ಕೇಳುವಂತಿಲ್ಲ. ಕೇಳಿದರೂ ಅದು ಹೇಳುವಂತಿಲ್ಲ. ಮೊನ್ನೆ ಹುಟ್ಟಿ ನಿನ್ನೆ ಕಣ್ಣು ತೆರೆದಿದೆ. ಮದುಮಗನಿಗೆ ಕೇಳಲಾಯಿತು ಹೆಂಡತಿಯ ಹೆಸರೇನೆಂದು.

“ಇನ್ನಾ ತೊತ್ತಲಾದ ಹಾತಿಲ್ಲ”(ಇನ್ನು ತೊಟ್ಟಿಲಲ್ಲಿ ಹಾಕಿಲ್ಲ) ಎಂಬುದು ಮದುಮಗನ ಉತ್ತರ.