ವಿಶೇಷಣಕ್ಕೆ ಉಪಮಾನವೆಂದೂ ಹೇಳಲಾಗುತ್ತದೆ. ಉಪಮಾನದ ಇನ್ನೊಂದು ಸ್ವರೂಪವೇ ದೃಷ್ಟಾಂತ. ಉಪಮಾನವಾಗಲಿ, ಅಲಂಕಾರದ ಸಂತಾನಗಳೇ ಆಗಿವೆ. ದೃಷ್ಟಾಂತಕ್ಕೆ ವಿಶೇಷಣಕ್ಕಿಂತ ಹೆಚ್ಚು ಬೆಲೆಯ ಶಬ್ದ ನಾಣ್ಯವೆಂದು ಹೇಳಬಹುದು. ಕಿರು ನಾಣ್ಯಗಳನ್ನು ಎಣಿಸುತ್ತ ಕುಳಿತರೆ ಬೇಸರವೆನಿಸಬಹುದು. ಆಗ ದೃಷ್ಟಾಂತದ ದೊಡ್ಡ ನಾಣ್ಯಗಳನ್ನು ಸೇರಿಸಿ ಲೆಕ್ಕವನ್ನು ತೀವ್ರವಾಗಿ, ನಿಚ್ಚಳವಾಗಿ ಪೂರ್ತಿಗೊಳಿಸಬಹುದು. ಹಾಗೆ ಮಾಡುವುದರಿಂದ ಗ್ರಹಿಸುವವರು ಯಾವ ಅನುಮಾನವೂ ಇಲ್ಲದೆ ಅರ್ಥವನ್ನು ಒಪ್ಪಿಕೊಳ್ಳುವರು.

ಅಂಥದೇ ಕೆಲಸವನ್ನು ಅಷ್ಟೇ ಸಮರ್ಥವಾಗಿ ಪಡಿನುಡಿಯು ನಿರ್ವಹಿಸಬಲ್ಲದು. ಹೊಟ್ಟೆ ಕಡಿತಕ್ಕೆ ಮದ್ದು ಕೇಳಿದ ರೋಗಿಯ ಕಣ್ಣಲ್ಲಿ ಔಷಧಿ ಹಾಕಿ ಚಿಕಿತ್ಸೆ ಕೊಡುವ ವೈದ್ಯನ ರೀತಿ ಅವರದು.

ಸಣ್ಣಗಿನ ಶಾಲಿಯನ್ನುಟ್ಟ ಗಿಡ್ಡಪೋರಿಯ ಚಿತ್ರಕ್ಕೆ ಹಿನ್ನೆಲೆಯಾಗಿ ನಿಂತ ದೃಷ್ಟಾಂತಕ್ಕೆ ಉಪಯೋಗಿಸಿದ ರೇಖೆಳು ಅದೆಷ್ಟು ವಾಸ್ತವಿಕವಾಗಿವೆ. ನೋಡಿರಿ-

ಸಣ್ಣಶಾಲಿ ಉಟ್ಟ | ಓಣಿಗುಂಟ
ಪೋರೀ ಎಷ್ಟ ಮಾಡುತಿ ಮುರಕಾ |
ನೀರ ಥೆರಿ ಹಾಂಗ ನಿರಗಿ ಒದ್ದು ನಾರಿ ನಡೆಯುವುದು ನಾಜೂಕಾ |
ಆನಿನಡದಾಂಗ ಮಾಡಿ ಸಿಂಗಾರ |
ಮೈಮ್ಯಾಲ ಬಂಗಾರ ಬಿದ್ದಂಗ ಬೆಳಕಾ||

ನೋಡುವುದಕ್ಕೆ ಗಿಡ್ಡಪೋರಿ, ಉಟ್ಟಿದ್ದು ಸಣ್ಣಶಾಲಿ, ನಡೆದದ್ದು ಚಿಕ್ಕ ಓಣಿಯಲ್ಲಿ. ನೋಡುವವರಿಗೆ ಅವಳು ಬಹಳ ಮುರಕು ಮಾಡುವಂತೆ ತೋರುತ್ತದೆ. ಉಟ್ಟುಕೊಂಡ ಸಣ್ಣ ಶಾಲಿಯ ನಿರಿಗೆಗಳನ್ನು ಒದೆಯುತ್ತ ಮುಂದುವರಿದದ್ದು, ನೀರ ತೆರೆಗಳು ಒಂದರ ಹಿಂದೆ ಒಂದು ಸಾಲುಹಿಡಿದು ಬಂದಂತೆ ತೋರುತ್ತದೆ. ಗಾತ್ರದಲ್ಲಿ ಚಿಕ್ಕವಳಾದರೂ ಆನೆ ನಡೆದು ಹೋಗುವ ಸಿಂಗಾರವನ್ನು ತೋರ್ಪಡಿಸುವಳಲ್ಲದೆ, ಮೈಮೇಲೆ ಬಂಗಾರದ ಬೆಳಕು ಚೆಲ್ಲಿಕೊಂಡಿರುವಳೇನೋ ಎಂಬ ಭ್ರಾಂತಿಯನ್ನು ಆಕೆ ಹುಟ್ಟಿಸುತ್ತಾಳೆ.

ದೃಷ್ಟಾಂತವು ಗಿಡ್ಡ ಪೋರಿಯ ವೈಭವ ಚಿತ್ರಕ್ಕೆ ಪ್ರಭಾವಳಿಯಾದಂತೆ, ಕರೆಹುಡಿಗೆಯ ರೂಪಕ್ಕೆ ಒದಗಿಸುವ ಪರಿಸರವೂ ಇನ್ನೊಂದು ಬಗೆಯ ಅಚ್ಚರಿಗೆ ಈಡುಮಾಡುವದು.

ನೀ ಬಾರ ಕರ್ರನ ಕರಿಸ್ವಾಗಿ |
ಆಯ್ತ ತಗಬೀಗಿ |
ಹೋಗತೇ ಸಾಗಿ ಹಾಯ್ದು ಇಂಬಾ |
ಗಣಿ ಹೂಡಿ ಮಿಣಿಯ ಮ್ಯಾಲ ನಡೆದಂಗಾಯ್ತು ಡೊಂಬಾ ||

ಡೊಂಬನು ನೆಡು ಹೋಗುವುದಕ್ಕೆ ಮಿಣಿಯಗಲಿನ ದಾರಿ. ಅದೂ ಅಂತರದಲ್ಲಿ. ಎಡಬಲಕ್ಕೆ ನಸುಸರಿದರೂ ಬೀಳುವ ಭಯ, ಅಷ್ಟೊಂದು ಹತ್ತೆಯಾದ ದಾರಿಯಲ್ಲಿ, ನೆಲದಿಂದ ಎತ್ತರದಲ್ಲಿ, ಅಂಬಲುಮೈವರು ಮುಂದಿನ ಮುಟ್ಟುದಾಣದತ್ತಲೇ ಕಣ್ಣಿರಿಸಿ ಸಾಗುವುದು ಒಂದು ಪವಾಡವೇ. ಕಾಲೂರಲು ಸೀಮಿತ ಸ್ಥಳ ಮಾತ್ರ ಇದ್ದರೂ ಕೈಗಳನ್ನು ಇಬ್ಬದಿಗೂ ಚಾಚಿ, ಸಮತೋಲನವನ್ನು ಕಾಯ್ದುಕೊಳ್ಳಲು ಬೇಕಾದಷ್ಟು ಅವಕಾಶವಿರುತ್ತದೆ. ಕರೆಹುಡಿಗೆಯು ಹಿರಿದಾದ ಗಾತ್ರಹೊತ್ತು, ಕಿರಿಯಗಲಿನ ಗೊಂದಿಯಲ್ಲಿ ಮುಂದನ್ನೇ ನಿಟ್ಟಿಸುತ್ತಿದ್ದರೂ ಕೈಗಳನ್ನು ಬೀಸಾಗಿ ಬೀಸಿ, ಸಮತೋಲನವನ್ನು ಕಾಯ್ದುಕೊಳ್ಳುತ್ತಿದ್ದಾಳೆ. “ಗಣಿ ಹೂಡಿ ಮಿಣಿಯ ಮ್ಯಾಗ ನಡೆದಂಗಾಯ್ತು ಡೊಂಬ” ಎಂಬ ಕಿರಿಯ ವಾಕ್ಯವು ಅಷ್ಟೊಂದು ಹಿರಿದಾದ ಅರ್ಥವನ್ನು ಒಳಗೊಂಡಿದಂಗಾಯ್ತು ಡೊಂಬ” ಎಂಬ ಕಿರಿಯ ವಾಕ್ಯವು ಅಷ್ಟೊಂದು ಹಿರಿದಾದ ಅರ್ಥವನ್ನು ಒಳಗೊಂಡಿದೆಯಲ್ಲವೇ? ದೃಷ್ಟಾಂತದ ಆ ನಾಣ್ಯವನ್ನು ಬಳಸದೆ ಇದ್ದರೆ, ಅವೆಷ್ಟು ಚಿಕ್ಕನಾಣ್ಯಗಳನ್ನು ಎಣಿಸುತ್ತ ಕುಳ್ಳಿರಬೇಕಾಗುತ್ತಿತ್ತೋ, ಹಾಗೆ ಎಣಿಸಿದರೂ ಲೆಕ್ಕ ತಪ್ಪಲಾರದೆಂದು ಹೇಳುವ ಧೈರ್ಯ ಯಾರಿಗಿದೆ?

ಎರಳಿ ನೋಟದಂಥ ಹೆಣ್ಣ |
ಸಿಂಹನಂಗ ನಡು ಸಣ್ಣ |
ಕುಡಿಹುಬ್ಬ ಕಾಡಿಗಿ ಕಣ್ಣ |
ಹಾಂಗಿತ್ತು ಗೋಪ್ಯಾರ ವರ್ಣ |
ತುಟಿ ಹವಳದ ಕುಡಿ ||

ಹೆಣ್ಣಿನ ಕಣ್ಣು, ಹುಬ್ಬು, ತುಟಿಗಳನ್ನು ಕಲ್ಪನೆಗೆ ತರುವುದಕ್ಕೆ ಅಚ್ಚಮುದ್ರೆಯೊತ್ತಬಲ್ಲ ದೃಷ್ಟಾಂತವನ್ನು ಬಿಟ್ಟರೆ ಬೇರೆ ಗತಿಯಿಲ್ಲ.

“ಎನ್ನ ಮೇಲಾಡಿ ಶ್ರೀ ಗಂಗೀನ ತಂದೀ | ಎನ್ನ ತಪ್ಪೇನು ಕಂಡಿ” ಎಂದು ಆರಂಭವಾಗುವ ಹಾಡಿನಲ್ಲಿ, ಗೌರಿಯು ತನ್ನ ಸಂತಾಪವನ್ನು ವ್ಯಕ್ತಮಾಡಿದ್ದು ಹೇಗೆಂದರೆ-

ಒಟ್ಟಿದ ಭಣವೀಗಿ ಕಿಚ್ಚಿಗುಳ್ಳ ಬಿದ್ದಂಗ
ಮುತ್ತೀನ ರಾಶೀಗಿ ಕಳ್ಳರು ಬಿದ್ದಂಗ
ಚಿಕ್ಕಂದಿನೊಗೆತಾನ ಮತ್ತೊಬ್ಬಳಿಗಾದಂಗ
ಹೊಟ್ಯಾಗ ಬೆಂಕಿ ಬರುಕ್ಯಾದೋ ದೇವಾ ||
ಎನ್ನ ಮೇಲಾಡಿ ಶ್ರೀ ಗಂಗೀನ ತಂದೀ|
ಎನ್ನ ತಪ್ಪೇನು ಕಂಡೀ |

ಮೂರು ನಾಲ್ಕು ದೃಷ್ಟಾಂತಗಳನ್ನು ಒಂದರ ಹಿಂದೊಂದು ಉಸುರಿ, ಸಂತಾಪವನ್ನು ಭುಗಿಲುಗೊಳಿಸಿ, ಕೇಳುವವರ ಒಡಲು ಕುದಿಯುವಂತೆ ಮಾಡುವುದೋ ಎನ್ನುವಂತಿದೆ. ಮದುವೆಯ ಕಾರ್ಯಕ್ರಮದಲ್ಲಿ ಕೂಸೊಪ್ಪಿಸುವ ಒಂದು ಪ್ರಸಂಗವಿರುವುದು ಎಲ್ಲರಿಗೂ ಗೊತ್ತು. ಈಗ ಕೂಸೂ ಇಲ್ಲ, ಒಪ್ಪಿಸುವ ಪ್ರಸಂಗವೂ ಇಲ್ಲ. ಆ ಮಾತು ಬೇರೆ, ಕೊಡುಗೂಸನ್ನು ಅತ್ತೆಯ ಮನೆಯವರಿಗೆ ಒಪ್ಪಿಸಿಕೊಡುವಾಗ ಹೇಳುವ ಒಂದು ಹಾಡು ಪ್ರಚಲಿತವಿರುತ್ತದೆ. ಅದಕ್ಕೆ ಕೂಸೊಪ್ಪಿಸುವ ಹಾಡು ಎಂಬ ಹೆಸರು. ದೀರ್ಘವಾದ ಆ ಇಡಿಯ ಹಾಡು ಅಂತಃಕರಣವನ್ನು ಕಲಕಿ, ಕರುಳು ಕಿವುಚುವಂತಿದೆ. ಅದರೊಳಗಿನ ಒಂದೇ ಒಂದು ಪದ್ಯವನ್ನು ಉದಾಹರಿಸಿ, ದೃಷ್ಟಾಂತದ ಬೆಲೆಯನ್ನು ಅರಿತುಕೊಳ್ಳುವಾ.

ಕುಂಬಳಕಾಯಿ ಒಯ್ದು ಕುಡುಗೋಲ್ಗೆ ಕೊಟ್ಟಂಗ
ಇಂದ ನಮ್ಮ ಮಗಳ ಕೊಡತೀವ | ಪಾರ್ವತಿ |
ಕಂದನ ಸರಿಮಾಡಿ ಸಲಹವ್ವ |
ನಿಂಬೀಯ ಹಣ್ಣನೆ ನೆಂಬಿ ಗಿಣಿ ಒಯ್ದಂಗ
ಇಂದ ನಮ್ಮ ಮಗಳ ಕೊಡತೀವ | ಪಾರ್ವತಿ |
ಕಂದನ ಸರಿಮಾಡಿ ಸಲಹವ್ವ ||

“ನಿಂಬೀಯ ಹಣ್ಣನೆ ನಂಬಿ ಗಿಣಿ ಒಯ್ದಂಗ” ಎನ್ನುವ ಮಾತು ಯಥಾರ್ಥವಾಗಿದೆ. ಆದರೆ ಪೂರ್ವಾರ್ಧದಲ್ಲಿ ಬರುವ “ಕುಂಬಳಕಾಯಿ ಒಯ್ದು ಕುಡುಗೊಲ್ಗೆ ಕೊಟ್ಟಂಗ” ಎಂಬ ಮಾತು ಹಾದಿತಪ್ಪಿಸುವಂತಿದೆ; ಕಠೋರವೂ ಆಗಿದೆ. ಹೆಣ್ಣಿನವರು ಭಾವಾವೇಶದಲ್ಲಿ ಆಡಿದ್ದರೂ ಅದು ಗಂಡಿನವರ ಎದೆಯಲ್ಲಿ ಬಡಿದು, ಬದಿಯಲ್ಲಿ ಪಾರಾಗುವಂಥ ಕರ್ಕಶ ನುಡಿಯಾಗಿದೆ. ದುಃಖದಾವೇಗದಲ್ಲಿ ತುಟಿಮೀರಿ ನುಸುಳಿ ಬಂದದ್ದು ಕ್ಷಮ್ಯವೆಂದು ಗಂಡಿನವರು ಸಹಿಸಿಕೊಳ್ಳಬೇಕು, ಅಷ್ಟೇ. ಅಂಥ ಕರ್ಕಶದ ಹಿಂದೆಯೇ “ಕಂದನ ಸರಿ ಮಾಡಿ ಸಲಹವ್ವ” ಎಂಬ ಅಂಗಲಾಚುವಿಕೆ ಬೆಣ್ಣೆಯಾಗಿ ಸುಳಿದು ಬಂದು, ಮಾತಿನ ಪೆಟ್ಟು ತಗಲುವಷ್ಟರಲ್ಲಿಯೇ ತೊಡೆದುಹಾಕಿಬಿಡುತ್ತದೆ.

ಕೂಸು ಒಪ್ಪಿಸಿಕೊಡುವಾಗ ಹೆಣ್ಣಿನ ಬಳಗದವರಿಗಾದ ಒಳಸಂತಾಪದ ನಾಲ್ಕು ಮಾತುಗಳನ್ನು ಕೇಳಿಸದೆ ಮುಂದುವರಿಯಲಿಕ್ಕಾಗದು.

ಎಕ್ಕೀಯ ಗಿಡದಾಗ ಹಕ್ಕಿ ಭೋರ್ಯಾಡಿದಂಗ
ಎಣ್ಣೀಯ ಕೊಡಕ ಸಣ್ಣಿರವಿ ಕವಿದಂಗ
ಕಣಿಗಿಲ ಗಿಡದಾಗ ಗಿಣಿಹಿಂಡ ಕೂತಂಗ
ಕಪ್ರ ಗುಡ್ಡಕ ಬೆಂಕಿ ತಪ್ಪದಲೆ ಕೊಟ್ಟಂಗ ||

ಇನ್ನು, ಸುಭದ್ರೆಯು ಮಗ ಅಭಿಮನ್ಯುವನ್ನು ತೆಕ್ಕೆಯಲ್ಲಿ ಅವಚಿಕೊಂಡು ದುಃಖಿಸುವ ಸಂದರ್ಭವನ್ನೂ, ಗೋಕುಲಾಷ್ಟಮಿಯ ದಿವಸ ಗೋಪಿಯರಾಡುವ ಪಗಡಿಯಾಟದ ಪ್ರಸಂಗವನ್ನೂ ಉದಾಹರಿಸಿ, ದೃಷ್ಟಾಂತದ ಗರಿಮೆಯನ್ನೂ, ಅದರಿಂದ ಉಂಟಾದ ಪರಿದರ್ಥದ ಚಲಕವನ್ನೂ ವಿಶದಗೊಳಿಸಬಹುದು. ತಮ್ಮ ಮಗ ಅಭಿಮನ್ಯುವಿಗೆ ಕೊಡುವೆನೆಂಬ ಹೆಣ್ಣು ವತ್ಸಲೆಯನ್ನು ತನ್ನಣನು, ದುರ್ಯೋಧನನ ಮಗ ಲಕ್ಷಣ ಕುಮಾರನಿಗೆ ಕೊಟ್ಟ ಸುದ್ದಿಯನ್ನು ದೂತನು ಹೇಳಿದಕೂಡಲೇ ಸುಭದ್ರೆಯ ಅವಸ್ಥೆ ಹೇಗೆ ಆಗಿರಬಹುದು? ಹದ್ದು, ಹಾವು ಕಚ್ಚಿದಂತೆ ಸುಭದ್ರೆ ಅಭಿಮನ್ಯುವನ್ನು ತೆಕ್ಕೆಯಲ್ಲಿ ತೆಗೆದುಕೊಳ್ಳುವಳು, ಅಷ್ಟರಿಂದ ಸಂತಾಪ ಹಿಂಗುವದೇ?

ಪಾಂಡವರು ವನವಾಸಕ್ಕೆ ಹೋದಾಗ ಸುಭದ್ರೆಯ ವಿದುರನ ಬಳಿಯಲ್ಲಿಯೆ ಉಳಕೊಂಡಿದ್ದಳು. ನಿತ್ಯದಂತೆ ಅರಳಿ ಮರದ ಪ್ರದಕ್ಷಿಣೆಗೆ ಹೋದಾಗ, ಆಕೆ ದೂರದಿಂದಲೇ ದೂತನನ್ನು ಕಂಡಳು. “ಇಲ್ಲಿಗೆ ಬಂದ ಕಾರಣವೇನು? ತವರು ಮನೆಯ ಕಡೆಗೆ ಕ್ಷೇಮವೇ” ಎಂದು ಕೇಳಿದಾಗ ದೂತನು ಹೇಳುತ್ತಾನೆ-ಬಳಿರಾಮನ ಮಗಳನ್ನು ದುರ್ಯೋಧನನ ಮಗನಿಗೆ ನಿನ್ನೆ ಕೊಟ್ಟರು; ಲಗ್ನ ನಾಳಿಗೆ. ವತ್ಸಲೆಯ ಮದುವೆಗೆ ಬಾಯೆಂದು ವಿದುರನಿಗೆ ಹೇಳಿಹೋಗುವ ಸಲುವಾಗಿಯೇ ನಾನು ಬಂದಿದ್ದೇನೆ.

ಕೇಳಿ ಸುಭದ್ರ ಬಿದ್ದಳ ಧರಣಿಗಿ |
ನೀರು ತಂದು ಅಳ್ತಾಳ ಕಣ್ಣಿಗಿ |
ತವರುಮನಿ ಇಲ್ಲದಂಗ ಇಂದಿಗಿ |
ಆಗಿಹೋಯ್ತು ನನ್ನ ಪಾಲಿಗೀ ||
ನನ್ನ ಮಗಗ ಇಟ್ಟ ಹೆಣ್ಣ ಬೇಕಾಗಿ
ಬಿಳಿರಾಮ ಕೊಟ್ಟ ಅವರಿಗೀ ||

ಈ ಪ್ರಸಂಗದಲ್ಲಿ ಕೃಷ್ಣನಾದರೂ ಅಣ್ಣನಿಗೆ ಬುದ್ದಿ ಹೇಳಲಿಲ್ಲವೇ? ಎಂದು ಯೋಚಿಸಿದಾಗ ಮುಗಿಲು ಹರಿದುಕೊಂಡು ಸುಭದ್ರೆಯ ಮೇಲೆ ಬಿದ್ದಂತಾಯಿತು; ಹೊಟ್ಟೆಯಲ್ಲಂತೂ ಕಿಚ್ಚು ಸುರುವಿದಂತೆಯೇ ಆಯಿತು.

ತವರ ಮನಿಯ ಆಶೆಯಿಂದ ನನ್ನ ಪತಿ ಅರ್ಜುನನ ನಾ ಮರೆತೇನೊ |
ನಮ್ಮಣ್ಣಗಳರಿಂದ ಧೈರ್ಯ ಹಿಡಿದೆನೋ |
ನನ್ನ ನೋಡ್ತಾರ ಅಂತ ಭಾಳ ನಂಬಿದೆನೋ |
ಅಯ್ಯಯ್ಯೋ ದೇವಾ, ಮುನಿದ್ಯಾ ಇಂದಿಗೆ
ಅಂಥಾದ್ದೇನು ಅವರಿಗೆ ಮಾಡಿದೆನೋ |
ಇಂದೀಗಿ ಕೊಯ್ದಾರ ನನ್ನ ಕೊರಳವನೊ |
ಆಸರಿಲ್ಲದೆ ನಾ ಇರಲಾರೆನು ಅಯ್ಯಯ್ಯೋ ಉರಲ ಹಾಕಿಕೊಳ್ಳಲೇನೋ
ನಮ್ಮಣ್ಣಗಳ ಮುಂದೆ ಪ್ರಾಣಬಿಡಲೇನೋ |
ಮಾರಿತೋರದೆ ಭೂಮಿಯ ಬಗದ್ಹೋಗಲೇನೋ |

ಪದ್ಮಗಂಧಿ ಎದ್ದೆದ್ದು ಬೀಳುತ್ತ ತೆಕ್ಕೆಯಲ್ಲಿದ್ದ ಮಗನನ್ನು ಕುರಿತು, “ಮಗನೇ, ನಿನ್ನ ದೈವ ಏನಾಯಿತು” ಎಂದು, ಮರು ಮರುಗಿ ಎದೆಯನ್ನು ಬಡಕೊಳ್ಳುತ್ತಾಳೆ, ನೆಲದ ಮೇಲೆ ಉರುಳಾಡಿ, ಹೊರಳಾಡಿ ಸ್ಮೃತಿತಪ್ಪಲು, ಅಭಿಮನ್ಯು ತಾಯಿಗೆ ಮಾತನಾಡಿಸುತ್ತ ಗಾಳಿಬೀಸುತ್ತಾನೆ; ಕೈಹಿಡಿದೆಬ್ಬಿಸುತ್ತಾನೆ; ಕೂಗಾಡುತ್ತಾನೆ. ತಾಯಿ ವಿಸ್ಮೃತಿಗೊಂಡು ಜೀವ ಹೋದಂತೆ ಬಿದ್ದುಕೊಂಡಿದ್ದನ್ನು ಕಂಡು ಅಭಿಮನ್ಯು ಅಡ್ಡರಾಸುತ್ತಾನೆ; ಆಕ್ರೋಶಿಸುತ್ತಾನೆ. ಅಷ್ಟರಲ್ಲಿ ಸುಭದ್ರೆಯ ವಿಸ್ಮೃತಿ ತೊಲಗುತ್ತದೆ. ಆದರೆ ಹಿಡಿಗಲ್ಲಿನಿಂದ ಎದೆಯನ್ನು ಗುದ್ದಿಕೊಳ್ಳಲು ತೊಡಗುತ್ತಾಳೆ. ಆಗ ಅಭಿಮನ್ಯು ಧೈರ್ಯದಿಂದ ತಾಯಿಯ ಕೈಹಿಡಿದು, ಸಾಂತ್ವನಪಡಿಸಲು ಪ್ರಯತ್ನಿಸುತ್ತಾನೆ. “ತಾಯಿ, ಅಳಬೇಡ; ನಿಮ್ಮಣ್ಣಗಳ ಆಶೆಯನ್ನು ಬಿಟ್ಟುಬಿಡು. ನನಗೆ ಕೊಟ್ಟಂಥ ಹೆಣ್ಣು ಆ ವತ್ಸಲೆಯನ್ನು ತರದಿದ್ದರೆ ನಮ್ಮ ತಂದೆ ಅರ್ಜುನನ ವೀರ್ಯದಿಂದ ಹುಟ್ಟಿದ ಫಲವೇನು? ನಾನು ಮೂರು ಲೋಕಗಳಲ್ಲಿ ಅವಮಾನಗೊಳ್ಳುವುದು ಬೇಡ. ಮೊದಲು ನನ್ನನ್ನು ಆಶಿರ್ವದಿಸು; ಮುಂದಿನ ಕಾರ್ಯಸಾಧನೆಯನ್ನು ನಾನು ಮಾಡುವೆನು.

ಕೇಳೇ ತಾಯೆ, ನಿನ್ನ ದಯಾ ಇದ್ದರ
ಪೂರ್ವಾದ್ರಿ ಪಶ್ಚಿಮಕಿಡುದರಿದೇನ |
ಪಶ್ಚಿಮಾದ್ರಿ ಪೂರ್ವಕ ತರುವೆನು ನಾನ |
ಒಂದೆ ಬಾಣದಿಂದ ಆರಿಸುವೆ ಸಮುದ್ರವನ |
ವಾಸುಕಿ ಫನಿಮೆಟ್ಟಿ ಕುಣಿದಾಡಿ-
ಪಾತಾಳದಿಂದೆಳತರುವೆನಾ ಶೇಷನ್ನಾ |
ಬುಡಮೇಲು ಮಾಡುವೆ ಬ್ರಾಹ್ಮಾಂಡವನಾ ||

ಇಂಥಾ ಮಗನು ನಾನಿನ್ಹಂತಿರಲಿಕ್ಕೆ
ನೆನಸುದ್ಯಾಕ ನಿಮ್ಮಣ್ಣಗಳನಾ |
ನೆಪ್ಪ ತಗೀಬ್ಯಾಡ ದನದ್ಹಿಂಡ ಕಾಯವನಾ |
ನೇಗಿಲ್ಹೊಡಿವ ಒಕ್ಕಲಿಗ ಬಳಿರಾಮನ್ನ |
ಮಾನಭಂಗಮಾಡಿ ಆ ಹೆಣ್ಣ ತಂದರ
ಆಗನ್ನ ಪಾಂಡವರ ಕುಲರನ್ನ |
ಯಾಂವ ಒಯ್ತಾನ್ನಡಿ ಆ ಹೆಣ್ಣಿನ್ನ ||

ದುಃಖಿತಳಾದ ಸುಭದ್ರೆ ಮಗ ಅಭಿಮನ್ಯುವನ್ನು ತೆಕ್ಕೆಯಲ್ಲಿ ತೆಗೆದುಕೊಂಡಿದ್ದು, ಹದ್ದು-ಹಾವುಗಳ ಸೇರುವೆಯಂತೆ ಗೂಢಾರ್ಥವೇ ಸರಿ. ಅದು ಈ ಬಗೆಯಾಗಿ ಸ್ಫೋಟಗೊಂಡದ್ದು ಜ್ವಾಲಾಮುಖಿಯ ಅಮೋಘ ಪ್ರಪಾತವೆನಿಸುವದಿಲ್ಲವೆ?

ಗೋಕುಲಾಷ್ಟಮಿಯ ದಿವಸ ಯಮುನಾತೀರದಲ್ಲಿ ಸೇರಿದ ಗೋಪಿಕಾಸ್ತ್ರೀಯರ ಚೆಲುವಿಕೆಯನ್ನು “ಒಬ್ಬರಿಗಿಂತ ಒಬ್ಬರು ಸೇಲ | ನಾ ಮೇಲ ನೀ ಮೇಲ” ಎಂದು ಕವಿ ತನಗರಿಯದಂತೆ ನುಡಿದರೂ ಮಾತು ಮುಗುಳಿ ಕೆಂಚಿಗುರನ್ನು ಸೂಸುತ್ತದೆ ಅದು-

ಬೇತಲ ಗುಲ್ಲಾಲ
ಓಕಳಿ ಮೈಯೆಲ್ಲ
ಹಚ್ಚಿದಂಗ ಹಿಲ್ಲಾಲಿ
ಮೂಡಲ ತರಂಗಿಣಿ ||

ಎಂದು ಮಿಂಚು ರೇಖೆಗಳನ್ನು ಎಳೆದು ಢಾಳವಾದ ಚಿತ್ರವನ್ನು ಕಣ್ಣಿದುರಿಗೆ ತಂದು ನಿಲ್ಲಿಸುತ್ತದೆ. ಅಂಥ ಗೋಪಿಕಾ ವೃಂದವು ಆಡಿದ ಪುಗಡಿಯಾಟದ ಪರಿಯನ್ನು ಕವಿಯ ಭಾಷೆಯಲ್ಲಿಯೇ ಹೇಳಲು ಸಾಧ್ಯ.

“ಪುಗಡಿ ಆಟ ಏನು ಹೇಳಲಿ?
ತಾಳಗತ್ತ ಮಾಡಿದಂಗ
ನಗಾರಿ ನುಡಿದಂಗ
ದುಮದುಮಿ ಹೊಡಿದಂಗ
ನೌಬತ್ತ ಬಡಿದಂಗ
ಚಿಟ್ಟ ಔಡ್ಲ ಸಿಡದಂಗ
ಕೊಂಬಕಾಳಿ ಹಿಡಿದಂಗ
ಸಿಡ್ಲ ಮಿಂಚ ಕಡಿದಂಗ
ಮಗ್ಗೀ ಪಾಟ್ಲಿ ಹೆಣಿದಂಗ
ಸುದ್ದ ನವಿಲ ಕುಣಿದಂಗ
ತಿಪ್ಪರಲಾಗ ಒಗಿದಂಗ
ತಂಡ ತಂಡ ನೆರೆದಿತೊ ಜನ |
ಕುಣಕುಣದು ದಣದು ಬ್ಯಾಸತ್ತು ನಿಂತಿದಾರ
ಗೋಕುಲಾಷ್ಟಮೀ ದಿನ ||”

ನವಮಾಸ ತುಂಬಿದ ಬಳಿಕ ತಾಯಿ ಗರ್ಭದಿಂದ ಶಿಶು ಭೂಮಿಗೆ ಬರಬೇಕಾದರೆ ಅರ್ಧ ಮರ್ಧ ಸಿದ್ಧತೆಯಿಂದ ಬರುವದಿಲ್ಲ. ಇಡಿಯ ಸಿದ್ಧತೆಯೊಡನೆ ಬರುತ್ತದೆ. ಕವಿಯ ಪ್ರತಿಭೆಯ ಬಸುರಿನಲ್ಲಿ ಗುಪ್ತವಾಗಿಯೋ, ಸುಪ್ತವಾಗಿಯೋ ಬೆಳೆದುನಿಂತ ಕಾವ್ಯ ಶಿಶುವು ಇಡಿಯಾಗಿಯೇ ಬರುತ್ತದೆ. ಮೇಲೆ ಕಾಣಿಸಿದ ಗೋಪಿಕಾವೃಂದದ ಪುಗಡಿಯಾಟದ ಅಂದವು ದೃಷ್ಟಾಂತದ ಕೋಲ್ಮಿಂಚಿನಲ್ಲಿ ನೂರ್ಮಡಿಯೋ ಸಾಸಿರಮಡಿಯೋ ಹೆಚ್ಚಾಗಿಯೇ ಗೋಚರಿಸುತ್ತದೆ. ಗರ್ಭಸ್ರಾವವನ್ನೋ ಗರ್ಭಪಾತವನ್ನೋ ಹೋಲುವ ಕವನಗಳನ್ನು ಮಾತ್ರ ನಾವು ಕೇಳಬಲ್ಲೆವು. ಬಹಳವಾದರೆ ಏಳರಲ್ಲಿ ಹುಟ್ಟಿದ ಹಸುಳೆಯನ್ನು ಕಂಡು ಕುಣಿದವರು ನಾವು. ದಿನತುಂಬಿ ಹುಟ್ಟಿದ ಮುದ್ದಿನ ಮುದ್ದೆಯಂಥ ಕಂದನನ್ನು ಹೋಲುವ ಈ ಕವನವು ಜಾನಪದ ಗೀತೆಯಲ್ಲಿಯೇ ಶಿರೋಮಣಿಯಾಗಿದೆಯೆಂದು ಹೇಳಬಹುದು. ಅದಕ್ಕೆ ಅಲ್ಲಿ ಧಾರಾಳವಾಗಿ, ವಿಪುಲವಾಗಿ ಉಪಯೋಗಿಸಿದ ದೃಷ್ಟಾಂತಗಳ ಕೋಲ್ಮಿಂಚೆ ಕಾರಣವೆನ್ನಬೇಕು.

ಮಕ್ಕಳ ನುಡಿಕೇಳಿ ನಕ್ಕೀತು ಗುಳದಾಳಿ
ಹಕ್ಕಿ ಅಂಗಳಕ ಇಳದಾವ | ದನಿ ತಗದು |
ಅಕ್ಕರಿಯ ಮಾತು ಕಲಿಸ್ಯಾವ |

“ಗುಳದಾಳಿ ನಕ್ಕೀತು” ಎಂಬ ಮಾತು ಇಲ್ಲಿ ಒಡೆದು ಕಾಣುತ್ತದೆ. ಗುಳದಾಳಿಯೆಂದರೆ ದಾಂಪತ್ಯದ ಕುರುಹು. ಅದು ನಕ್ಕಿತೆಂದರೆ ದಾಂಪತ್ಯ ಸಾರ್ಥಕಗೊಂಡಿತೆಂದು ಅರ್ಥ. ಪ್ರೇಮವನ್ನು ವಿಸ್ತರಿಸುವುದೇ ಮದುವೆಯ ಉದ್ದೇಶವೆಂದು ಹೇಳಲಾಗುತ್ತದೆ. ಅದರಂತೆ, ಮಕ್ಕಳು ತನ್ನಂತೆ ಪರರ ಕಾಣುವ ಸುಲಭ ಪಾಠವೆಂದು ಹೇಳಬಹುದು. ದಂಪತಿಗಳ ಪ್ರತಿರೂಪವೇ ಆಗಿರುವ ಮಕ್ಕಳು ಮುದ್ದುಮುದ್ದಾಗಿ ಮಾತಾಡಿದ್ದನ್ನು ಕೇಳಿದಾಗ ಅದಾವ ದಂಪತಿಗಳು ಕೃತಕೃತ್ಯರಾಗುವುದಿಲ್ಲ? ಹಕ್ಕಿಗಳೂ ಅಂಗಳಕ್ಕಿಳಿದು ಮಕ್ಕಳೊಡನೆ ಆಡಬಯಸುತ್ತವೆ. ಮಕ್ಕಳೂ ಹಕ್ಕಿಗಳಂತೆ ಕೂಗಿ, ಕೇಕಿ, ಗುಬ್ಬಳಿಸುವುದನ್ನು ಕೇಳಿ, ಹಕ್ಕಿಗಳ ಜೊತೆಯಲ್ಲಿ ಮಕ್ಕಳು ಮಾತನಾಡ ಕಲಿಯುವುದನ್ನು ಕಲಿಯುವುದನ್ನು ಕಂಡು ತಾಯಿ-ತಂದೆಗಳ ವಾತ್ಸಲ್ಯವು ಉಕ್ಕಿಬಂದರೆ ಆಶ್ಚರ್ಯವೇನು? ದೃಷ್ಟಾಂತದ ಒಂದು ಚಿಕ್ಕ ಕಿಂಡಿಯಿಂದ ಭವ್ಯವಾದ ಅರಮನೆಯ ಸೊಬಗನ್ನು ನೋಡಿದಂತೆ, ದಿವ್ಯವಾದ ಅರ್ಥವನ್ನು ಕಂಡು, ಆಗಿನಮಟ್ಟಿಗಾದರೂ ಒಂದು ಗುಂಜಿ ತೂಕ ಹೆಚ್ಚಿದ ಹಿರಿ ಮನುಷ್ಯರಾಗುವುದರಲ್ಲಿ ಸಂದೇಹವೇ ಇಲ್ಲ.

ಹೂವಿನಾಗ ಹುದಗ್ಯಾನ ಮಾಲ್ಯಾಗ ಮಲಗ್ಯಾನ
ಮಗ್ಗ್ಶ್ಯಾಗ ಕಣ್ಣು ತೆರೆದಾನ

ಎನ್ನುವ ಮಾತು ಕೇಳಿದಾಗ ಮಹಾತ್ಮ ಗಾಂಧಿಯವರ ಹಾಗೂ ಶ್ರೀ ರಾಮಕೃಷ್ಣ ಪರಮ ಹಂಸರ ಒಂದೊಂದು ಅನುಭವ ನೆನಪಿಗೆ ಬರುತ್ತದೆ. ಮಹಾತ್ಮ ಗಾಂಧಿ ಅವರು ಹೇಳುತ್ತಾರೆ- “ಈ ಕೋಣೆಯಲ್ಲಿ ಇಷ್ಟೊಂದು ಜನ ಇರುವುದು ಅದೆಷ್ಟು ಸತ್ಯವೋ ಅದಕ್ಕಿಂತ ಹೆಚ್ಚಾಗಿ ಇಲ್ಲಿ ದೇವನಿದ್ದುದು ಸತ್ಯವೆಂದು ನನಗೆ ಕಂಡುಬರುತ್ತದೆ”. ಶ್ರೀರಾಮಕೃಷ್ಣ ಪರಮಹಂಸರು ಒಂದು ಬೆಳಗು ಮುಂಜಾನೆ, ಪೂಜೆಗಾಗಿ ಹೂ ತರಲು ತೋಟಕ್ಕೆ ಹೋದರು. ಅಲ್ಲಿ ಅವರು ಕಂಡುದೇನು” ಕರೆಮಲ್ಲಿಗೆಯ ಹೂಗಳು ಕಂಟಿಯ ತುಂಬ ಅರಳಿ ಘಮಘಮಿಸುತ್ತಿವೆ! ಪರಮಹಂಸರು ಹೂ ಬುಟ್ಟಿಯನ್ನು ಕೆಳಗಿರಿಸಿ ಕೈಮುಗಿದು ನಿಂತು –‘ತಾಯೀ, ನಿನ್ನ ಪೂಜೆಗಾಗಿ ಹೂ ಆರಿಸಲು ಇಲ್ಲಿಗೆ ಬಂದರೆ, ನಿನ್ನ ಪೂಜೆಯನ್ನು ನೀನೇ ಮಾಡಿಕೊಂಡು ಪ್ರಸನ್ನ ಚಿತ್ತದಿಂದ ಕುಳಿತಿರುವೆಯಲ್ಲ ! ಎಂದು ಗದ್ಗದಿಸಿ ಆನಂದಬಾಷ್ಪವನ್ನು ಸುರಿದರು.

ಮೇಲೆ ಕಾಣಿಸದ ತ್ರಿಪದಿಯ ಅನುಭವವು ಮಹಾತ್ಮರ ಹಾಗೂ ಪರಮಹಂಸರ ಮಹಾನುಭಾವಕ್ಕಿಂತ ಏತರಲ್ಲಿ ಕಡಿಮೆಯಿದೆ? ದೇವನು ಹೂವಿನಲ್ಲಿ ಹುದುಗಿರುವುದನ್ನೂ, ಮಾಲೆಯಲ್ಲಿ ಮಲಗಿರುವುದನ್ನೂ ಕಂಡ ಕಣ್ಣು, ಮೊಗ್ಗೆಯಲ್ಲಿ ಕಣ್ಣು ತೆರೆದುದನ್ನು ಕಾಣಲಾರದೇ? ಇಂಥ ಮಹಾನುಭಾವವನ್ನು ದೃಷ್ಟಾಂತದಲ್ಲಿ ಬಯತಿರಿಸಿದ ತ್ರಿಪದಿಗೆ ಸಾವಿರ ವಂದನೆಗಳನ್ನು ಸಲ್ಲಿಸಿದರೂ ಕಡಿಮೆಯೇ.

“ಹುತ್ತದ ಮೇಲೊಂದು ಮುತ್ತುಗದ ಗಿಡಹುಟ್ಟಿ
ಸೂರ್ಯಚಂದ್ರಗಿರಿ ನೆರಳಾಗಿ”

ಮುಗಿಯೇ ಇಲ್ಲದ ಮುಗಿಲಿನ ಮೂಲೆಯಲ್ಲಿ ಎಲ್ಲಿಯೋ ಚಂಡಿನಂತೆ ತೇಲಾಡುವ ಸೂರ್ಯಚಂದ್ರರು ನಮ್ಮ ಕಲ್ಪನೆಗೂ ಮೀರಿದ ಹಿರಿಮೆಯುಳ್ಳವರು. ಅವರ ಎತ್ತರ-ಬಿತ್ತರಗಳನ್ನು ಉದಾಹರಿಸಲು ಬೇರೆ ಶಬ್ದಗಳೇ ಇಲ್ಲ. ಅದರಲ್ಲಿಯೂ ರವಿಯೆಂದರೆ ಲೋಕದ ಸರ್ವಚೇಷ್ಟೆಗಳಿಗೂ ಆದಿಬೀಜ. ಅಂಥ ಸೂರ್ಯನಿಗೂ, ಚಂದ್ರನಿಗೂ ನೆರಳು ನೀಡುವಷ್ಟು ವಿಸ್ತಾರವಾಗಿ ಆಕಾಶದಗಲವಾಗಿ ಮುತ್ತುಗದ ಮರ ಬೆಳೆದದ್ದು ಒಂದು ಹುತ್ತದ ಮೇಲಂತೆ, ನ್ಯಗ್ರೋಧಬೀಜಂ ಕೆಲಂ ಸಿಡಿದುಂ ಪೆರ್ಮರವಾಗದೆ? ಚಿಕ್ಕ ಚಿಕ್ಕ ಆಲದ ಬೀಜಗಳಿಂತಿರುವ ಶಬ್ದಗಳನ್ನು ಹದವರಿತು ಪವಣಿಸುವ ಚಲಕದಿಂದ, ಪೆರ್ಮರವಾಗಿ ಬೆಳೆಸುವ ಹದ ನಮ್ಮ ಜನಪದಕ್ಕೆ ಸಹಜವಾಗಿತ್ತೆಂದರೆ ಅತಿಶಯೋಕ್ತಿಯೇನಲ್ಲ; ದೃಷ್ಟಾಂತವೂ ಅಂಥ ಒಂದು ಹದ.

ದೃಷ್ಟಾಂತವು ಮಾತನ್ನು ಕೋಲ್ಮಿಂಚಿನ ರೇಖೆಗಳಿಂದ ಕಟ್ಟುನಿಟ್ಟುಗೊಳಿಸಿದರೆ, ಪಡನುಡಿಯ ಮಿಂಚುಗಳ್ಳಿಯ ಗೀಚುಗೆರೆಗಳಿಂದ ಅಚ್ಚುಕಟ್ಟಾಗಿಸುತ್ತದೆ. ತಿಳಿಗಣ್ಣು ಕಾಣದ್ದನ್ನು ಹೊಳೆಗಣ್ಣು ಕಂಗೊಳಿಸುತ್ತದೆ. ಉದಾಹರಣೆ-

ಕೈತೊಳಕೊಂಡು ಬೆನ್ನು ಹತ್ತು ಎಂಬ ಪಡಿನುಡಿಯಲ್ಲಿ ಶಬ್ದಗಳೆಲ್ಲ ಬಳಕೆಯವಾಗಿದ್ದರೂ ಅದರಲ್ಲಿ ಹುದುಗಿರುವ ಅರ್ಥ ಬೆಳಕಿನದಾಗಿರುತ್ತದೆ. ಕೈತೊಳಕೊಳ್ಳುವುದೆಂದರೆ ಕೈಗೆತ್ತಿಕೊಂಡ ಕೆಲಸವನ್ನು ಅಷ್ಟಕ್ಕೆ ನಿಲ್ಲಿಸುವುದು. ಬೆನ್ನು ಹತ್ತುವುದೆಂದರೆ, ಸಾಂಪ್ರತದ ಕೆಲಸಕ್ಕೆ ಕೂಡಲೇ ತೊಡಗಿ ಮುಗಿಸಲೆತ್ನಿಸುವುದು.

ನಾಲ್ವರು ಸದ್ಗೃಹಸ್ಥರು ಇತ್ತ ತೀರ್ಥವನ್ನು ಅಸವಿಗೊಳ್ಳದೆ ಶಿರಸಾವಹಿಸುವುದು ಎಂಬರ್ಥದಲ್ಲಿ ‘ಕೈಕಾಲು ತೊಳಕೊಂಡು ಹೇಳಿದಷ್ಟು ಕೊಟ್ಟು ಮಲಗಿಸಿದೆ” ಎಂಬ ಪಡೆ ನುಡಿಯಿದೆ.

ತಲೆ ತಿರುಗುವುದೇ ಬೇರೆ, ತಲೆ ದೂಗುವುದೇ ಬೇರೆ, ತಲೆಯೆತ್ತುವುದರಲ್ಲಿ ಒಂದು ಪರಿಯಿದ್ದರೆ, ತಲೆ ಕೊಡುಹುವುದರಲ್ಲಿ ಇನ್ನೊಂದು ಪರಿಯಿದೆ. ತಲೆ ಬಾಗುವ ಪ್ರಸಂಗ, ತಲೆ ಹಾಕುವ ಪ್ರಸಂಗ, ಒಂದೇ ಅಲ್ಲ. ತಲೆ ಕಾಯುವುದರ ಲಕ್ಷಣ, ತಲೆ ನೋಯುವುದರ ಲಕ್ಷಣ ಬೇರೆ ಬೇರೆ. ಕಣ್ಣು ಬಡಿಯುವುದಕ್ಕೆ ಒಂದರ್ಥವಿದ್ದರೆ, ಕಣ್ಣು ತೆರೆಯುವುದಕ್ಕೆ ಇನ್ನೊಂದು ಅರ್ಥವಿದೆ. ಎದೆ ಹಾರುವ ಸಂದರ್ಭವೇ ಬೇರೆ; ಎದೆ ಬಡೆಯುವ ಸಮಯವೇ ಬೇರೆ.

ಹೀಗೆ ನೂರಾರೋ ಸಾವಿರಾರೋ ಉದಾಹರಣೆ ಕೊಟ್ಟರು ಮುಗಿಯದಷ್ಟು ಪಡೆನುಡಿಗಳು ಕನ್ನುಡಿಯಲ್ಲಿ ಚಲ್ಲುವರಿದಿವೆ.