ಹಿಡಿದರೆ ಹಿಡಿಕೆಯ ತುಂಬ, ಬಿಟ್ಟರೆ ಮನೆಯ ತುಂಬ-

ಎಂಬ ಒಗಟು ಬಿಚ್ಚಿದರೆ ಎಲ್ಲೆಲ್ಲಿಯೂ ತಿಳುವಳುಕು ಚೆಲ್ಲುವರಿದು ನಿಲ್ಲುವದು. ದೀಪವನ್ನು ಹಿಡಿಕೆಯಲ್ಲಿ ಬಯತಿಡಬಹುದು, ಹಿಡಿಕೆ ಬಿಚ್ಚಿದರೆ ಬಿಚ್ಚಿ ಬೀಳುವ ಬೆಳಕನ್ನು ಹಿಡಿಯಲಾಸಲ್ಲ. ಹಿಂಜಿದ ಅರಳೆಯಂಥ ನಾಲ್ಕು ಶಬ್ದಗಳನ್ನು ತುಂಬಿ ಮಾಡಿದ ತಲೆಬದಿಂಬಿನಂತಿದೆ ಗಾದೆಮಾತು. ಒಗಟು ಸಹ ಅಂಥದೇ ಇನ್ನೊಂದು ದಿಂಬು. ದಿಂಬು ತಲೆದಿಂಬುಗಳನ್ನು ಬಿಚ್ಚಿನೋಡಿದರೆ ಹಳೆ ಅರಳೆಯೋ ಕೆಲಸಕ್ಕೆ ಬಾರದ ಅರಿವೆಯ ಚಿಂದಿಯೋ ನಮ್ಮ ಕಣ್ಣಿಗೆ ಬೀಳಬಹುದು. ಆದರೆ ಗಾದೆ-ಒಗಟುಗಳನ್ನು ಬಿಚ್ಚಿ ನೋಡಿದರೆ, ಅರ್ಥದ ಬೆಳಕು ಕಣ್ಣು ಕುಕ್ಕಿಸಿಬಿಡುವದು. “ಹಿಡಿದರೆ ಹಿಡಿಕೆಯ ತುಂಬ, ಬಿಟ್ಟರೆ ಮನೆಯ ತುಂಬ” ಎಂದು ದೀಪವನ್ನು ಕುರಿತು ಹೇಳಿದ ಒಗಟು. ಶಬ್ದಕ್ಕೆ ವಾಸ್ತವಿಕ ಅರ್ಥವಿರುವಂತೆ, ಲಾಕ್ಷಣಿಕ ಅರ್ಥವೂ ಇರಬಲ್ಲದು. ವಿಶೇಷಣವು ವಾಸ್ತವಿಕಾರ್ಥವನ್ನು ಹೇಳಿಕೊಟ್ಟರೆ, ದೃಷ್ಟಾಂತವು ಲಾಕ್ಷಣಿಕಾರ್ಥವನ್ನು ತಿಳಿಸಿಕೊಡುವದು. ಒಗಟು-ಗಾದೆಗಳು ಶಬ್ದಾರ್ಥವನ್ನು ವಿಶದಗೊಳಿಸುವ ವ್ಯಾಖ್ಯೆಯಿದ್ದಂತೆ ವಾಸ್ತವಿಕ-ಲಾಕ್ಷಣಿಕ ಅರ್ಥಗಳಿಂದ ಬಗೆಹರಿಯುವ ಪ್ರಸಂಗದಲ್ಲಿ ಒಗಟು-ಗಾದೆಗಳ ಪ್ರಯೋಗವು ಅರ್ಥವಿವರಣೆಗೆ ವ್ಯಾಖ್ಯೆಯಾಗಿ ವಿಷಯವನ್ನು ಹೃದಂಗಮಗೊಳಿಸುವದು.

ಜನಪದವಾಣಿಯಲ್ಲಿ ಗಾದೆಗಳು, ಒಡಪುಗಳು ಹೆಪ್ಪುಗೊಂಡು ಜನಾಂಗದ ಜೀವನದಲ್ಲಿ ಬಳಕೆಯಾಗುವವು. ಸಾಮಯಿಕ ಕವಿಗಳು ಅವುಗಳನ್ನು ಕಾಲಕಾಲಕ್ಕೆ ತಿದ್ದಿ ತೀಡಿ, ಶಿಷ್ಟತೆಯ ದೀಕ್ಷೆಕೊಟ್ಟು ತಮ್ಮ ಕಾವ್ಯಗಳಲ್ಲಿ ಬಳಸುತ್ತ ಬಂದದ್ದು ಕಂಡುಬರುತ್ತದೆ. ಯಾವ ಹಳೆಯ ಗದ್ದುಗೆಯನ್ನೂ ಏರದೆ ಗಾಳಿಯಲ್ಲಿ ತೇಲಾಡುತ್ತಿರುವ ತೂರಾಡುತ್ತಿರುವ ಸಾವಿರ ಸಾವಿರ ಗಾದೆಯ ಮಾತುಗಳನ್ನು ಇಂದಿಗೂ ಗುರುತಿಸಬಹುದು. ನೂರು ನೂರು ಪೈಸೆಯ ನಾಣ್ಯಗಳನ್ನು ಎಣಿಸುವುದರಲ್ಲಿ ಹೊತ್ತು ಗಳೆಯದೆ, ದೊಡ್ಡ ನಾಣ್ಯಗಳನ್ನು ಬಳಸುವ ಜಾಣ್ಮೆಯನ್ನು ಪ್ರಸಂಗಾನುಸಾರವಾಗಿ ಎಲ್ಲರೂ ತೋರ್ಪಡಿಸುವರು. ನೂರು ಮಾತುಗಳನ್ನು ಖರ್ಚು ಮಾಡದೆ, ಒಂದು ಲೋಕೋಕ್ತಿಯನ್ನಾಡಿಗುಂಬ ನೀರಿನಲ್ಲಿ ಹರಳು ಒಗೆದಂತೆ ತೆಪ್ಪಗೆ ಕುಳಿತುಕೊಳ್ಳುವುದುಂಟು. ಎಷ್ಟು ಹೇಳಿದರೂ ಪ್ರಯೋಜನವಿಲ್ಲವೆಂದು ಹೇಳುವಬದಲು, ಗಾಳಿಗೆ ಸುದ್ದಿ ಮೈನೋಯಿಸಿಕೊಂಡರೆಂದೋ, ಬೋರಲು ಗಡಿಗೆಯ ಮೇಲೆ ನೀರು ಹನಿಸಿದಂತೆ ಎಂದೋ ಹೇಳಿದರೆ ಸಾಕಲ್ಲವೇ?

“ನಾಚಿಕೆಗೇಡಿ ನಾಲಗೆ ಬಾಯಲ್ಲಿದ್ದರೆ ನಾಲ್ಮೆಮ್ಮೆಯ ಹಯನು ಇದ್ದಂತೆ”

ನಾಚುವುದನ್ನು ಅಥವಾ ನಾಚಿಕೆಯನ್ನು ತಲೆಗೆಸುತ್ತಿ ಉಳ್ಳವರಲ್ಲಿ ಬಾಯಿತೆರೆದು ಕೇಳಲು ಸಿದ್ಧನಾದರೆ ಬೇಕಾದದ್ದು, ಬೇಡಿದಷ್ಟು ಸಿಗಬಹುದು; ಸಾಕಾದಷ್ಟೂ ಸಿಗಬಹುದು. ಬೇಡಿ ತಿಂದ ನಾಲಗೆ ನಾಡು ಕಾಣಬಹುದಲ್ಲವೇ?

“ಕಚ್ಚುವ ನಾಯಿ ಬೊಗಳುವದಿಲ್ಲ, ಬೊಗಳುವ ನಾಯಿ ಕಚ್ಚುವದಿಲ್ಲ”

ಬಹಳ ಮಾತಾಡುವವನಿಂದ ಕೃತಿಯನ್ನು ಆಶಿಸುವಂತಿಲ್ಲ. ಮಾಡಿ ತೋರಿಸುವವನು ಮಾತಾಡುವುದೇ ಇಲ್ಲ. ಬಹಳ ಮಾತಾಡುವುದರಲ್ಲಿ ಕೃತಿಯ ಗಂಧ ಒತ್ತಟ್ಟಿಗಿರಲಿ ಸುಳ್ಳು ಸೊಟ್ಟುಗಳೇ ಹೆಚ್ಚಾಗಿ ಬೆರೆತುಬರುವವು. ಮಾತು ಭರತಿ ಮಾಡುವ ಭರದಲ್ಲಿ ಕೆಳಗೆ ಕುಳಿತ ಗಾಳ ಕೊಳಚೆಯನ್ನು ಎಬ್ಬಿಸಬೇಕಾಗುವದೆಂದು ಮಹಾತ್ಮಾ ಗಾಂಧಿ ಹೇಳಿದರೆ, ಮಾತು ಪ್ರತ್ಯಕ್ಷ ಕಾರ್ಯವಾಗಿರದೆ, ಕಾರ್ಯಕ್ಕೆ ಪ್ರೇರಣೆಯೆಂದು ಶ್ರೀ ಅರವಿಂದರು ಹೇಳುತ್ತಾರೆ. ಊಟ ಆರಂಭವಾಗುವವರೆಗೆ ಪಂತಿಯಲ್ಲಿ ಗಲವಿಲಿ ಬಹಳವೆಂದು ಶ್ರೀರಾಮಕೃಷ್ಣ ಪರಮಹಂಸರು ಉದಾಹರಿಸುತ್ತಾರೆ.

“ಗೋಡೆ ಕಟ್ಟಿ ನೆರಕೆ ಒದಿಯಬೇಕು”

ಮೊದಲು ನೆರಕೆಯನ್ನೇ ತೆಗೆದುಬಿಟ್ಟರೆ ಮರೆಯೆನ್ನುವುದೇ ಉಳಿಯುವುದಿಲ್ಲ; ಗೋಡೆ ಕಟ್ಟುವ ಕೆಲಸ ಮೆಲ್ಲಗೆ ನಡೆಯುವಂಥದು. ಒಮ್ಮೊಮ್ಮೆ ನೆರಕೆ ಒದ್ದುದೇ ನಿಜವಾಗಿ, ಗೋಡೆ ಕಟ್ಟುವ ಕೆಲಸ ಆರಂಭವಾಗುವುದೇ ಇಲ್ಲ. ಹಳೆಯ ನೆರಕೆಯೂ ಉಳಿಯಲಿಲ್ಲ; ಹೊಸ ಗೋಡೆಯೂ ಏಳಿಲ್ಲ. ಇದ್ದೂರ ಕೋರಾಣಿ, ಬೇರೂರ ಭಿಕ್ಷೆ ಎರಡೂ ಕೈಬಿಟ್ಟಂತಾಗುವುದುಂಟು.

“ಬೆನ್ನು ಒಬ್ಬನದು; ತುರಿಸುವವ ಇನ್ನೊಬ್ಬ”

ತಿಂಡಿ ಒತ್ತಟ್ಟಿಗೆ, ತುರಿಸುವುದು ಒತ್ತಟ್ಟಿಗೆ ಆದಾಗ ಅದರ ಪರಿಣಾಮವನ್ನು ಏನೆಂದು ಹೇಳುವುದು? ತುರಿಸುವುದರಿಂದ ಉಂಟಾಗಬಹುದಾದ ತಾತ್ಪೂರ್ತಿಕ ಸುಖವಂತೂ ದೂರ ಉಳಿದು, ಬೇರಡೆ ತುರಿಸಿದ್ದರ ಪರಿಣಾಮವಾಗಿ ಉರುಪು ಮಾತ್ರ ಉಂಟಾಗುವ ಸಂಭವವೇ ಲೋಕೋಕ್ತಿಯು ಹಿತೋಕ್ತಿಯನ್ನು ಉಸುರುವದು.

“ಆಸತ್ತು ಬೇಸತ್ತು ಅಕ್ಕನ ಮನೆಗೆ ಹೋದರೆ’
ಅಕ್ಕನ ಗಂಡ ಅವುಕ್‌ಅಂದನು”

ಹೀಗೆ ಹೇಳುವ ಹೆಣ್ಣು ಮಗಳು, ಏತಕ್ಕೆ ಬೇಸತ್ತಿದ್ದಾಳೆನ್ನುವುದು ಯಾರಿಗಾದರೂ ಸಹಜವಾಗಿ ತಿಳಿಯುವ ವಿಷಯ. ಅಕ್ಕನ ಮನೆಗೆ ಹೋದದ್ದು ವಿಶ್ರಾಂತಿಗಾಗಿ ಎನ್ನುವುದು ಸ್ಪಷ್ಟ ಆದರೆ ಅಕ್ಕನ ಗಂಡ ಅವುಕ್‌ಎಂದುದೇ ಗೂಢ ವಿಷಯವಾಗಿದೆ. ಅದು ವಿಚಾರಿಸಬೇಕಾದ ವಿಷಯ.

“ಎಂದಿಲ್ಲದೆ ಒಮ್ಮೆ ಎಲಗ ಅಂದರೆ, ತಿಂಗಳಿಗೊಮ್ಮೆ ನಗೆ ಬಂತು”

ಇದು ಅರ್ಧಶತಮಾನಗಂಡಹೆಂತಿ ಮೂಕಸನ್ನೆಯಲ್ಲಿ ಸಂಸಾರ ಮಾಡಿದ್ದರ ಪರಿಣಾಮ. ಅಷ್ಟು ದೀರ್ಘಕಾಲ ತಾಯಿ ತಂದೆಗಳಿಗೆ ಗೌರವಕೊಡುವ ಸಲುವಾಗಿ, ಅವರೆದುರಿಗೆ ಆ ದಂಪತಿಗಳು ಮಾತಾಡುವುದನ್ನು ರೂಢಿಸಿಕೊಂಡಿರಲಿಲ್ಲವೆಂದು ತೋರುತ್ತದೆ. ಎದೆ ಗಟ್ಟಿಮಾಡಿ ಗಂಡ ಒಂದು ಮಾತಾಡಿದರೂ ಅಳ್ಳೆದೆಯ ಹೆಣ್ಣು ಮರುನುಡಿಯುವುದೇ ದುಸ್ತರ.

“ಮಾರಿ ನೋಡಿದರೆ ನ್ಯಾರಿ ಮಾಡಿಂತಾಗುತ್ತದೆ”
ಯಾರಿಗೆ? ಬಹುಶಃ ಗಂಡನಿಗೆ ಇರಬೇಕು.
“ಬೇಸತ್ತು ಬೇರೆಯಾದರೆ ಪಾಲಿಗೆ ಅತ್ತೆ ಬಂದಳು”

ಇಲ್ಲಿ ಬೇರೆಯಾದ ಪ್ರಯೋಜನವೇನೂ ಆಗುವಂತಿಲ್ಲ. ತಿರುಗಿ ಕೇಳಿದರೆ ದಿನನಿತ್ಯದ ಕೀಟಲೆ ಮಾತ್ರ ಸ್ಥಿರಗೊಳ್ಳುತ್ತದೆ.

ತಾಳುಮೇಳುಗಳಿಲ್ಲದ ದಾಂಪತ್ಯವನ್ನೋ, ಮನೆತನವನ್ನೋ ವರ್ಣಿಸುವುದಕ್ಕೆ ಶಬ್ದ ಸಾಲದೆ, “ಎತ್ತು ಎರೆಗೆ ಎಳೆದರೆ, ಕೋಣ ಕೆರೆಗೆ ಎಳೆಯುವದು’’ ಎಂದ ಹೇಳಿ ಮುಗಿಸಬಹುದು. ಜಡ್ಡಿನ ಮೂಲಕ್ಕೆ ಕೈಹಚ್ಚದೆ, ಅದರ ಲಕ್ಷಣವನ್ನು ಮಾತ್ರ ಕೆಣಕುವ ರೀತಿಯನ್ನು “ಹೀನ ಸುಳಿ ಬೋಳಿಸಿದರೂ ಹೋಗದು” ಎಂಬ ಗಾದೆಯ ಮಾತು ನಿಚ್ಚಳಗೊಳಿಸುತ್ತದೆ.

“ಹಬ್ಬದ ದಿನವೂ ಹಳೆಯ ಗಂಡನೇ?”

ಈ ನಾಣ್ಣುಡಿಯನ್ನು ಕೇಳಿ ದಿಘ್ಭ್ರಮೆಗೊಳ್ಳುವವರಿಗೆ ಶ್ರೀ ಗೊರೂರ ಅವರಂತೆ ಹೀಗೆ ಸಮಾಧಾನ ಹೇಳಬಹುದಾಗಿದೆ. ಇಡಿಯ ವರ್ಷವೂ ಹೊದಲ್ಲಿಯೇ ದುಡಿಯುತ್ತ ಇದ್ದು, ಕಾಲಕಳೆಯುವ ಗಂಡನನ್ನು ಹಬ್ಬದ ದಿವಸ ಮನೆಗೆ ಕರೆತಂದು, ಹೆಂಡತಿ ಆತನ ಕ್ಷೌರಮಾಡಿಸಿ, ಎಣ್ಣೆ ಹೂಸಿ ಎರೆದು, ಉಡುತೊಡಲು ಹೊಸಬಟ್ಟೆಗಳನ್ನು ತೆಗೆದುಕೊಟ್ಟು, ಬಿಸಿ ಅಡಿಗೆಯನ್ನು ಉಣಬಡಿಸಿದರೆ ಅವನು ಸಹಜವಾಗಿ ಹೊಸಗಂಡನೆನಿಸುವನು.

“ಹೂಟಗೇಡಿಯ ಮುಂದೆ ಹುಲ್ಲು ಹಾಕಿದರೆ’
ಗೂಟ ಕಿತ್ತುಕೊಂಡು ಇದಿರಿಗೆ ಬಂತು”

ಈ ಉಕ್ತಿಯು, ಒಂದೆಡೆಗೆ ಸ್ಥಿರವಾಗಿ ನಿಲ್ಲದೆ ಬಿಡಾಡಿಯಂತೆ ಅಂಡಲೆಯುವ ಸ್ವಭಾವವನ್ನು ಸೂಚಿಸುತ್ತದೆ.

“ಹಸಿದ ಹಾರುವನನ್ನೂ, ಉಂಡ ಮುಸಲನನ್ನೂ ಕೆಣಕಬಾರದು”

ಕೆಣಕಿದರೆ ಕನದ ಮೈಮೇಲೆ. ಹಾದಿಗೆ ಹೋಗುವ ದೆವ್ವವನ್ನು ಕರೆದು ಮನೆ ಹೊಗಿಸಿಕೊಂಡ ಹಾಗೆ. ಬುದ್ಧಿಜೀವಿ ಉಂಡಾಗ ಉಲ್ಲಸಿತನಾಗುವನೆಂದೂ, ದೈಹಿಕ ಪರಿಶ್ರಮಿಯು ಹಸಿದಾಗ ನಮ್ರನಾಗುವನೆಂದೂ ಗಾದೆಯ ಅರ್ಥವಿರಬೇಕು. ಆದರೆ ಕೆಲವರು ಉಣ್ಣುವವರೆಗೆ ಹಾರುವನಾಗಿ, ಉಂಡಬಳಿಕ ಮುಸಲನಾಗಿ ವರ್ತಿಸುವುದುಂಟು. ಅಂಥವರಿಗಾಗಿ ಒಂದು ಲೋಕೋಕ್ತಿ ಇರಬಹುದುದೇನೋ.

“ಕುರುಬ ಕುಂಬಾರತಿಗೆ ಹೋದರೆ ಜೇಡ ಹೋಗಿ
ಆಡಿನ ಕಾಲು ಮುರಿಯುವ ಕಾರಣವೇನು?”

ಇದನ್ನು ತಿಳಿಯುವ ಬಗೆ ಹೇಗೆ? ಬಹುಶಃ ಕುಂಬಾರತಿ ಜೇಡನು ಹಳೆ ಗೆಳೆಯರಿರಬಹುದು. ಕುರುಬನು ಕುಂಬಾರತಿಯನ್ನು ತನ್ನವಳಾಗಿ ಮಾಡಿಕೊಂಡಾಗ ಜೇಡನಿಗೆ ಸಿಟ್ಟು ಬಹುರುವುದ ಸಹಜ. ಆದರೆ ಹೊಟ್ಟೆಯೊಳಗಿನ ಸಿಟ್ಟು ರಟ್ಟೆಯಲ್ಲಿರಬೇಡವೇ? ಅದಕ್ಕಾಗಿ ಜೇಡನು ನೇರವಾಗಿ ಕುರುಬನನ್ನು ತಡವದೇ ಆತನ ಆಡಿನ ಕಾಲು ಮಾತ್ರ ಮುರಿಯುವುದು ಸುಲಭ.

ಶ್ರೀ ಗೊರೂರ ಅವರು ಹೇಳಿದಂತೆ –ಗಾದೆ ಶಾಶ್ವತ ನಾಣ್ಯ. ಅಹುದು, ಆದರೆ ಸರಕಾರದ ನಾಣ್ಯದಂತೆ ನಡೆದಷ್ಟು ದಿನ ನಾಣ್ಯ-ಎಂಬಷ್ಟು ಅನಿಶ್ಚಿತತೆ ಇದಕ್ಕಿಲ್ಲ.