ಒಗಟು ಹೂರಣ ಕಡಬು ಇದ್ದ ಹಾಗೆ. ಕಣ್ಣಿಗೆ ಒಂದು ವಿಧ ಕಂಡರೆ, ಬಿಚ್ಚಿದಾಗ ಮೂಗಿಗೆ ಕಂಡುಬರುವುದು ಇನ್ನೊಂದು ವಿಧಹ ತುತ್ತುಮಾಡಿ ಬಾಯಿಗಿಟ್ಟಾಗ ನಾಲಿಗೆಗೆ ಮತ್ತೊಂದು ವಿಧ ಕಾಣುವುದು ಹೂರಣಕಡುಬಿನ ಲಕ್ಷಣ.

“ಯಾಕೋ ಮಾವಾ ಮೈಯೆಲ್ಲ ಬೂದಿ |
ಕೈಯೊಳಗ ಹಪ್ಪಳ, ತಲಿಮ್ಯಾಗ ಸಂಡಗಿ ”

ಇದನ್ನೋದಿ ಯಾವ ಮಾವನಿವನು, ಎನ್ನಿಸದಿರದು. ಬೈರಾಗಿಯಂತೆ ಮೈಗೆಲ್ಲ ಬೂದಿ ಬಡಕೊಂಡಿದ್ದರೂ, ಕೈಯಲ್ಲಿ ಹಪ್ಪಳ ಹಿಡಿದು, ತಲೆಯಲ್ಲಿ ಸಂಡಿಗೆ ಹೊತ್ತಿದ್ದಾನ. ಅದೆಂಥ ಬೈರಾಗಿ? ಬೈರಾಗಿ ಅವನೇಕಾದನು? ಔಡಲಗಿಡ! ಮಾವನೂ ಅಲ್ಲ, ಬೈರಾಗಿಯೂ ಅಲ್ಲ. ಆ ವಿಚಿತ್ರ ವೇಷ ಕಂಡು, ಯಾಕೋ ಮಾವ-ಎಂದು ಸಂಬೋಧಿಸಿರಬಹುದಲ್ಲದೆ?

ಬಾಯಲ್ಲಿ ಹಲ್ಲಿಲ್ಲ ಎದಿಯಾಗ ಮೂಲೆಯಿಲ್ಲ
ಮಕ್ಕಳ ಹಡೆದಾಳ ಮನಿತುಂಬ | ಆ ತಾಯಿ |
ತಿಪ್ಪಿ ಕೆದರೂತ ಹೋಗ್ಯಾಳ ||

ಈ ತ್ರಿಪದಿಯಲ್ಲಿ ಹುದುಗಿದ ಅರ್ಥವು ಬಿಚ್ಚಿ ಬೀಳುವವರೆಗೆ ಯಾರಿಗಾದರೂ ದಿದಿಗಲೇ ಆವರಿಸುವುದುಂಟು. ಬಾಯಾಗ ಹಲ್ಲಿಲ್ಲವೆಂದರೆ ಮುಪ್ಪಿನ ಅವಸ್ಥೆ. ಎದಿಯಾಗ ಮೊಲೆಯಿಲ್ಲ ವೆನ್ನುವುದು ತೀರ ಇಳಿತರ ವಯಸ್ಸಿನ ಲಕ್ಷಣ. ಅಂಥದರಲ್ಲಿ ಮನೆತುಂಬ ಮಕ್ಕಳನ್ನು ಹಡೆದಳೆಂದರೆ ಅದೆಂಥ ನಾಚಿಕೊಳ್ಳುವ ಕೆಲಸ? ಹಡೆದರೂ ಹಡೆಯಲಿ, ಮಕ್ಕಳನ್ನು ಸಾಕುವುದಕ್ಕೇ ಬೇಕಾದ ಸಮೃದ್ಧ ಸೌಕರ್ಯವಾದರೂ ಇದೆಯೆನ್ನಬೇಕೇ? ಹಡೆದರೂ ಹಡೆಯಲಿ, ಮಕ್ಕಳನ್ನು ಸಾಕುವುದಕ್ಕೇ ಬೇಕಾದ ಸಮೃದ್ಧ ಸೌಕರ್ಯವಾದರೂ ಇದೆಯೆನ್ನಬೇಕೆ? ಅದೂ ಇಲ್ಲ. ತಿಪ್ಪಕೆದರಿ ಹೊಟ್ಟೆ ತುಂಬಿಕೊಳ್ಳುವುದೇ ಉದರ ನಿರ್ವಾಹದ ದಾರಿ. ಆ ತಾಯಿಯ ಬದುಕಿಗೆ ಅದೇನು ಕಾರಣ ಹಾಗಾದರೆ? ಆ ತಾಯಿ ನಮ್ಮ ನಿಮ್ಮ ಮನೆಯ ತಾಯಿಯಾಗಿರದೆ ಕೋಳೆವ್ವ ಎನ್ನುವುದು ತಿಳಿದಾಗ ಯಾವ ಸಂದೇಹವೂ ಉಳಿಯದೆ, ಸೃಷ್ಟಿಯ ಸಹಜ ವ್ಯಾಪಾರವೆಂದು ತಿಳಿದು ಸಮಾಧಾನವಾಗುವುದು.

ಬಾಯಲ್ಲಿ ತಿಂದು ಬಗಲಲ್ಲಿ ಕೂರುವುದು ಬೀಸುವಕಲ್ಲು ಎಂದು ತಿಳಿಯುಉವರೆಗೆ ವಿಷಯ ಉಕ್ಕಿನ ಕಡಲೆಯೇ ಸರಿ. ಆರು ಕಾಲು ಬೆನ್ನಲ್ಲಿ ಬಾಲವುಳ್ಳ ಪ್ರಾಣಿ ಇನ್ನಾವುದೂ ಆಗಿರದೆ, ತೂಗುವ ತಕ್ಕಡಿಯೆಂದು ಗೊತ್ತಾದಾಗ ಅನುಮಾನಕ್ಕೆ ಆಸ್ಪದವೇ ಉಳಿಯದು. ಮುಂಜಾನೆ ನಾಲ್ಕು ಕಾಲಲ್ಲಿ ನಡೆದು, ಮದ್ಯಾಹ್ನ ಹೊತ್ತಿಗೆ ಎರಡು ಕಾಲಲ್ಲಿ, ಸಾಯಂಕಾಲ ಮೂರು ಕಾಲಲ್ಲಿ ನಡೆಯುವ ಪ್ರಾಣಿ ಮನುಷ್ಯನೆ ತಿಳಿದು ಬಂದಾಗ ಆಗುವ ಆನಂದಕ್ಕೆ ಅಳತೆಯಲ್ಲ. ಬಾಲ್ಯ, ಯೌವ್ವನ, ವೃದ್ಧಾಪ್ಯಗಳೇ ಆ ತ್ರಿಕಾಲಗಳು.

ಅತ್ತಾಲಿಂದ ಬಂದೇವಮ್ಮ
ಮುತ್ತಿನ ಡೇರೆ ಹೊಡೆದೇವಮ್ಮ
ಪಾಪೀ ಕಣ್ಣಿಗೆ ಬಿದ್ದೇವಮ್ಮ
ಪರದೇಶಾಗಿ ಹೋದೆವಮ್ಮ

ಎಂಬ ಒಗಟು ಮಲ್ಲಿಗೆಯನ್ನು ಕುರಿತದ್ದೆಂದು ಬೇರೆ ಹೇಳುವ ಕಾರಣವೇ ಇಲ್ಲ. ಅದಾವುದೋ ಲೋಕದಿಂದ ಬಂದು, ಮೊಗ್ಗೆಗಳ ರೂಪದಲ್ಲಿ ಮುತ್ತಿನ ಡೇರೆ ಹೊಡೆದು, ಅರಳುವ ಹೊತ್ತಿಗೆ ಅದಾರೋ ಪಾಪಿ ಕಂಡು ಅದನ್ನು ಹರಿದು ಮೂಸಿಯೋ ಹೆರಳಲ್ಲಿ ಸಿಕ್ಕಿಸಿಯೋ ಮೋದಪಟ್ಟು ಬಾಡುವ ಹೊತ್ತಿಗೆ ಚೆಲ್ಲಿ ಕೊಡುವನು. ಆಗ ಆ ಹೂ ಪರದೇಶಿಯಲ್ಲದೆ ಇನ್ನೇನಾದೀತು?

ನಗೆ ಬಂದು ನಾಕು ತಿಂಗಳಾಯಿತು
ನಗಬೇಕೆಂದರೆ ಪಂಚಕ ಬಿದ್ದಿದೆ
ಅವ್ವಗ ಬಂದು ನೋಡಿ ಹೋಗೆನ್ನು
ಅಪ್ಪಗ ಬಂದು ಕರಕೊಂಡು ಹೋಗೆನ್ನು

ಮೇಲುನೋಟಕ್ಕೆ ಈ ಒಗಟು ಅತ್ತೆಮನೆಯ ಮೊದಲಗಿತ್ತಿಯ ಕರುಣಾಜನಕ ಸ್ಥಿತಿಯನ್ನು ಒತ್ತಿ ಹೇಳಿದಂತಿದೆ. ಆಗ ವಾಡಿಕೆಯಂತೆ ಅವ್ವನು ಮಗಳೂರಿಗೆ ಹೋಗಿ ಮಗಳನ್ನು ಕರೆತರಬೇಕು. ಆದರೆ ಇಲ್ಲಿ ಆ ವಿಷಯ ತಿರುವು ಮರುವೋ, ಹಿಂಚು ಮುಂಚೋ ಆಗಿದೆ. ಅಪ್ಪನೇ ಹೋಗಿ ನೋಡಿಕೊಂಡು ಬರಬೇಕಂತೆ. ತರುವಾಯ ಅವ್ವನು ಹೋಗಿ ಆಕೆಯನ್ನು ಕರೆತರಬೇಕಂತೆ. ಏನಿದೆ ಇದರಲ್ಲಿ ರಹಸ್ಯ?

ಹೊಲದಲ್ಲಿ ಹತ್ತಿಯ ಬೆಳೆಗೆ ಕಾಯಾಗಿದ್ದರೂ, ಕೊರೆಯುವ ಚಳಿಯ ಬಾಧೆಗೆ ಅದು ಒಡೆಯದೆ ಬಾಯಿ ಬಿಗಿದುಕೊಂಡು ನಿಂತಿರುತ್ತದೆ. ಹತ್ತಿಕಾಯನ್ನು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಹತ್ತಿಯಕಾಯಿ ಒಡೆಯುವುದದೆಂದರೆ ಬಿಳಿನಗೆ ಸೂಸಿದಂತೆ. ಬೆಳ್ಳಗಿನ ಹತ್ತಿ ಹೊರಬೀಳುವುದೇ ಬಿಳಿನಗೆ. ಆ ನಗೆ ಚಳಿಯ ಸಲುವಾಗಿ ತಡೆಹಿಡಿದಿದೆ. ನಗೆಯಿಲ್ಲದ ಬಾಳ್ವೆ ಅಸ್ವಾಸ್ಥ್ಯದ ಲಕ್ಷಣವೇ ಸರಿ. ಮುಂದೆ ಚಳಿಯ ಬಾಧೆ ಕಡಿಮೆಯಾಗಲು ಹತ್ತಿ ಒಡೆಯುವದು. ಹೊಲದೊಡೆಯನಾದ ಅಪ್ಪನು ಹೋಗಿ, ಹತ್ತಿ ಬಿಡಿಸುವ ಸಂದರ್ಭ ಒದಗಿದ್ದನ್ನು ಮನವರಿಗೆ ಮಾಡಿಕೊಂಡು ಬರುವನು. ಬಳಿಕ ಒಂದೆರಡು ದಿನಗಳಲ್ಲಿ ಅವವನು ಹತ್ತಿಪ್ಪತ್ತು ಹೆಣ್ಣಾಳುಗಳನ್ನು ಕರೆದೊಯ್ದು ಆ ಹತ್ತಿಯನ್ನು ಬಿಡಿಸಿಕೊಂಡು ತರುವಳು.

ಅಕ್ಕನು ಮಗಳನ್ನು ತನ್ನ ತಮ್ಮನಿಗೂ ಕೊಟ್ಟು ಅಕ್ಕರೆಯಿಂದ ಮದುವೆ ಮಾಡಿದ್ದಾಳೆ. ಆದರೆ ತಮ್ಮನು ಹೆಂಡತಿಯನ್ನು ಸರಿಯಾಗಿ ನಡೆಸಿಕೊಳ್ಳದೆ, ಆಕೆಯ ತವರುಮನೆಗೆ ಕಳಿಸಿ ಬಿಡುವನು. ಆದರೆ ತಾನು “ವಾರಿ ರುಮಾಲು ಸುತ್ತಿ ಒಣ್ಯಾಗ ನಿಂತು” ಹೋಗಿ ಬರುವ ಹೆಂಗಳೆಯರ ಮುಖವನ್ನು ಪಿಳಿಪಿಳಿ ನೋಡುತ್ತ ನಿಂತುಕೊಳ್ಳುವನು. ಅದನ್ನು ಕಂಡು ಅಕ್ಕನು ಅತಿಯಾಗಿ ಕಳವಳಿಸುವಳು. ಆ ಕಳವಳವನ್ನು ಆಕೆ ಪ್ರಕಟಗೊಳಿಸಿದ್ದು ಹೇಗೆಂದರೆ…..

ಮಲ್ಲಿಗ್ಹೂವಿನ ದಂಡಿ ಅಲ್ಲಿಟ್ಟ ಇಲ್ಲಿಟ್ಟ |
ಕಲ್ಲಮ್ಯಾಲಿಟ್ಟ |
ಕಲ್ಲಮ್ಯಾಲಿಟ್ಟ, ಕೈಯಾಗಿಟ್ಟ ಚಂದರಾಮ |
ಪಾದಮ್ಯಾಲಿಟ್ಟ
ಶರಣೆಂದ ಶರಣೆಂದ ಪಾದಮ್ಯಾಲಿಟ್ಟ ||

ಇಲ್ಲಿ ಮಗಳೇ ಮಲ್ಲಿಗೆ ದಂಡಿ. ಅದನ್ನು ಎಲ್ಲಿಟ್ಟರೆ ಕಲ್ಯಾಣ ಎಂಬುದನ್ನು ಅಕ್ಕನು ಚಿಂತಿಸಿ, ಚಿಂತಿಸಿ, ಕೊನೆಯಲ್ಲಿ ತಮ್ಮನ ಕೈಗೆ ಒಪ್ಪಿಸಲು ನಿರ್ಧರಿಸುವಳು. ಆದರೆ ತಮ್ಮನ ಕೈಯಲ್ಲಿಡುವುದೆಂದರೆ ಕಲ್ಲು ಮೇಲೆ ಇಟ್ಟಂತೆಯೇ ಎಂದು ಆಕೆಗೆ ತೋರಿರಬಹುದು. ಆದರೂ ಆಕೆ ಮಲ್ಲಿಗೆ ದಂಡಿಯನ್ನು ತಮ್ಮನ ಕೈಯಲ್ಲಿಡದೆ ನಿರ್ವಾಹವಿಲ್ಲದೆ ಆತನ ಪಾದದಮೇಲಿಟ್ಟು ಶರಣೆಂದೆ ಎಂದು ಕನವರಿಸುವಳು. ಹೀಗೆ ಆರೆಂಟು ಶಬ್ದಗಳಲ್ಲಿ ಮಗಳ ಒಗೆತನದ ವಿಷಯವನ್ನು ಉಸುರುವಳು. ಇದು ಕಿರಿದರಲ್ಲಿ ಪರಿದರ್ಥ ಹೇಳುವ ಚಲಕವಲ್ಲದೆ ಇನ್ನೇನು?

ಮನೆಯಲ್ಲಿ ಹೆಂಡತಿಯನ್ನು ಬಿಟ್ಟು, ದೂರ ದೇಶಕ್ಕೆ ವ್ಯಾಪಾರಕ್ಕೆಂದು ಬಹುದಿವಸ ಹೋದ ಗಂಡನು ತನ್ನ ವೇಷಬದಲಿಸಿ, ಹೆಂಡತಿಯ ಮನಸ್ಸನ್ನು ಪರೀಕ್ಷಿಸಲು ಬಂದು, ಪರ್ಯಾಯವಾಗಿ ಮಾತಾಡಿಸುವನು.

ಹಣ್ಣ ಬಂದಾವ ಹಣ್ಣ ಮಗೀಯ ಮಾವಿನ ಹಣ್ಣ
ಹಣ್ಣ ಕೊಳತೇವ ಹಣ್ಣಿನ ಬೆಲೆಯ ಹೇಳ ಜಾಣಿ ||

ಈ ಮಾತಿನ ಅರ್ಥ ತಿಳಿದು ಹೆಂಡತಿ ಪರ್ಯಾಯವಾಗಿಯೇ ಉತ್ತರ ಕೊಡುವಳು.

ಬೆಲೆಯ ಹೇಳುವ ಜಾಣ ಮಲ್ಲಾಡ ದೇಶಾಕ
ಹೋಗ್ಯಾನಲ್ಲೋ ಜಾಣ |
ತಿಳಿಯಲಾರದ ಬೆಲೆಯ ನಾ ಏನೂ ಹೇಳಲೋ ಜಾಣ||
ಗಂಡ-ಕೆರಿಯ ಪಾಳ್ಯದ ಮ್ಯಾಲೆ ಕರೀಕಬ್ಬ
ಹಚ್ಯಾರಲಮ ಜಾಣಿ
ಅದರಾಗ ತುಡುಗು ದನ ಹೂಗತಾವಲಮ ಜಾಣಿ ||
ಹೆಂಡತಿ-ತುಡುಗ ದನ ಹೊಕ್ಕರ ಹೊಡದಾರ
ಬಡದಾರೊ ಜಾಣ
ನಾಲ್ವರು ಕೂಡಿ ಬುದ್ಧಿ ಹೇಳುವವರಲ್ಲೋ ಜಾಣ||

ಹೀಗೆ ಕೆಲವೊಂದು ರೋಚಕವಾದ ಪ್ರಶ್ನೋತ್ತರಗಳು ನಡೆದ ಬಳಿಕ, ಹೆಂಡತಿಯ ತನ್ನ ಕಪಟ ವೇಷವನ್ನು ಕಳಚಿ ನಿಜರೂಪದಲ್ಲಿ ಕಾಣಿಸಿಕೊಳ್ಳುವನು. ಈ ಪ್ರಸಂಗವನ್ನು ಇದ್ದಕ್ಕಿದ್ದ ಹಾಗೆ ವಿಶದಪಡಿಸುತ್ತ ಹೋಗಿದ್ದರೆ ಹತ್ತೆಂಟು ಪುಟದ ಕಥೆಯಾಗಿ ಪರಿಣಮಿಸುತ್ತಿತ್ತೇನೋ. ಆದರೆ ನಮ್ಮ ತಾಯಂದಿರು ಸಂವಾದರೂಪದಿಂದ ಕಿರಿದರಲ್ಲೇ ಪಿರಿದರ್ಥವನ್ನು ತುಂಬುವ ಚಲಕ ತೋರಿಸಿದ್ದು ಮನನೀಯವಾಗಿದೆ. ಅಲ್ಲದೆ ಕೆರೆಯ ಪಾಳ್ಯ, ಕರಿಯ ಕಬ್ಬು, ತುಡುಗುದನ ಮೊದಲಾದ ಶಬ್ದಗಳು ವಿಶೇಷವಾದ ಅರ್ಥವನ್ನು ಸೂರೆ ಮಾಡುವ ಕೌಶಲ್ಯವನ್ನು ಗಮನಿಸುವಂತಿದೆ.

ಮುರು ಮಗ್ಗಲುಗಳಲ್ಲಿ ಸಮತೋಲ ಕಾಯ್ದುಕೊಳ್ಳುವ ಪ್ರಯತ್ನ ನಡೆದರೂ ಸಾಧ್ಯವಾಗದಿರಲು, ನಾಲ್ಕನೇ ಮಗ್ಗುಲಲ್ಲಿ ಗೆಳತಿಯಿತ್ತ ಅಕ್ಕರೆಯ ಉಡುಗೊರೆಯು ಕಾಣಿಕಟ್ಟಿ, ಸಮತೋಲ ಒದಗಿಸಿದ ಚಾತುರ್ಯವನ್ನು ಈ ತ್ರಿಪದಿಯಲ್ಲಿ ಕಾಣಬಹುದಾಗಿದೆ.

ಮೂಗುತಿ ಮುಂಭಾರ, ತುರುಬಿನ ಹಿಂಭಾರ
ಸೇರಿನ ಒಂಕಿ ಕೈಭಾರ | ನನ ಗೆಳದಿ|
ನಾ ಕೊಟ್ಟ ಸೀರಿ ನಿರಿಭಾರ

ನಾಲ್ಕು ನಿಟ್ಟಿನ ಸಮತೋಲನವೆಂದರೂ ಅದು ನಿಶ್ಚಿಂತೆಯ ಜೀವನಕ್ಕೆ ಪ್ರತೀಕವಾಗಿದೆ. ಯಾವ ನಿಟ್ಟಿನಿಂದಲೂ ಚಿಂತೆಯ ಪ್ರವೇಶವಾಗದಂತೆ ಭದ್ರತೆ ಕಾಯ್ದುಕೊಂಡಂತಿದೆ. ಅದು ಬಿಚ್ಚುಗತ್ತಿಯ ಅಚ್ಚಗಾಗಲು. “ಮನವು ಮಾಧವನೊಳು ಮರೆಯಾಗುವತನಕ | ಅನುಗಾಲವು ಚಿಂತೆ”ಯೆಂದು ದಾಸರು ಹೇಳಿದ್ದಾರೆ. ಯಾವ ಚಿಂತೆಗೂ ಆಸ್ಪದವೀಯದಿದ್ದರೂ ನಮ್ಮ ಗರತಿಗೆ ಒಂದೇ ಚಿಂತೆ, “ಕೂಡಲ ಸಂಗಯ್ಯ ಒಲಿದಾನೋ ಇಲ್ಲವೋ ಎನ್ನುವ ಚಿಂತೆ”ಯೊಂದೇ ಬಸವಣ್ಣನವರಿಗೆ ಹಾಸಿ ಹೊದೆಯುವಷ್ಟು ಇತ್ತೆಂದು ಅವರೇ ಹೇಳುತ್ತಾರೆ. ಬಸವ ಭೂಮಿಗೆ ಬೆಳಸಾಗಿ ಬೆಳೆದ ನಮ್ಮ ಗರತಿಗೂ ಅಂಥದೇ ಒಂದು ಚಿಂತೆ. ಅದನ್ನು ಆಕೆಯೇ ಆರಿಸಿಟ್ಟ ಶಬ್ದಗಳಲ್ಲಿ ಕೇಳಬೇಕು.

ಚಿಂತೀಯ ಮಾಡುವಾಗ ಅಂತರಲೆ ಶಿವಬಂದ
ಚಿಂತಿ ನಿನಗ್ಯಾಕ ನನ ಮಗಳ | ನಾ ನಿನಗ |
ಚಿಂತಿಲ್ದ ಸಂತsಸಕೊಡತೀನಿ||

ಮಾತು ದೊಡ್ಡದು. ವಿಷಯ ಹಿರಿಯದು; ಅನುಭವ ಅದಕ್ಕೂ ಹಿರಿಯದು, ಅದನ್ನು ಮನೆವಾರ್ತೆಯ ಚಿಕ್ಕ ಕ್ಷೇತ್ರದಲ್ಲಿ, ಇರುವೆ ಸಕ್ಕರೆ ಮೇದಂತೆ ಸಾಧಿಸಿಕೊಂಡವಳು, ಮಸೆದಲಗಿನಂಥ ಒಂದೇ ಮಾತಿನಲ್ಲಿ ಮಂತ್ರದಂತೆ ಉಸುರುತ್ತಾಳೆ. ಆಕೆ ಲೋಕಮಾತೆಗೆ ಕೇಳಿಕೊಂಡ ಒಂದೇ ಒಂದು ಮಾತು, ಜಗದಗಲ ಮುಗಿಲಗಲ ವಿಷಯವನ್ನು ಬಯತಿರಿಸಿಕೊಂಡಿದೆ.

ಸತ್ತು ಹುಟ್ಟೂದೊಲ್ಲೆ ಸಾವಗಂಡನ್ನೊಲ್ಲೆ
ಸತ್ತಿಕರ ಮಗಳ ಗೌರವ್ವ | ನಿನ್ನಂತ |
ಮುತ್ತೈದಿತನವ ಕೊಡು ನಮಗ ||

ಅಕ್ಕಮಹಾದೇವಿಯ ಮರಿಸಂತಾನವೆನಿಸುವ ನಮ್ಮ ಗರತಿ, ಜೀವನವನ್ನು ಕ್ಷುಲ್ಲಕವೆಂದು ಬಗೆದಿಲ್ಲ. ಮೂರುದಿನದ ಸಂತೆಯೆಂದು ಕಡೆಗಣಿಸಿಲ್ಲ, ವೇಗಪೂರಿತ ಬಾಳಿಗೆ ನಿಗ್ರಹದ ಕೀಲು ಜಡಿದಿಲ್ಲ. ಅದೂ ಕಿರಿದರಲ್ಲಿ ಪಿರಿದರ್ಥಕೊಡುವಂಥದು. ಉಪಾಯ ಕಿರಿಯದು; ಪ್ರಯೋಜನ ಹಿರಿಯದು. ಆ ಹಿರಿ ಅನುಭವವನ್ನೇ ಕಿರಿದರಲ್ಲಿ ಹೇಳುವಳು.

ಮನಿಯ ಮುಂದಿನ ಭಾವಿ ಯಾರು ಕಟಸ್ಯಾರ ಶಿವನೆ
ಕಾಲ ಜಾರಿದರ ಒಳಿಯಾಕ | ಹೆಣ್ಜಲ್ಮ |
ಮನವ ಜಾರಿದವ ವನವಾಸ||

ಇದಕ್ಕೆನಬೇಕು ಹೊಣೆಗಾರಿಕೆಯೆಂದು ಸಂಸಾರವೆನ್ನುವುದು ಮನೆಯ ಮುಂದಿನ ಭಾವಿ ಯಾರು ಕಟ್ಟಿಸಿದ್ದಾರೋ ಆ ಶಿವನಿಗೇ ಗೊತ್ತು. ತುಸು ಕಾಲು ಜಾರಿದರೂ ಹೆಣ್ಣು ನೀರುಪಾಲು. ಭಾವಿಯಲ್ಲಿ ಕಾಲು ಜಾರಿದಂತೆ, ವಿಷಯದಲ್ಲಿ ಹೆಣ್ಣಿನ ಮನಜಾರಿದರೆ ಜೀವನವೆಲ್ಲ ವನವಾಸವೇ ಸರಿ. ಇದರಿಂದ ಪಾರಾಗುವ ಕೆಚ್ಚೆದೆ ಕನ್ನಾಡಿನ ಸಹೋದರರಿಗೆ ಸಹಜ ಸಾಧ್ಯ. ಆಕೆ ತನ್ನ ಹಿರಿಮೆಯನ್ನು ಹೇಳಿಕೊಳ್ಳುವುದರಲ್ಲಿಯೂ ಹಿಂದೆ ಬೀಳುವುದಿಲ್ಲ.

ಹತ್ತೂರ ಆಳವರ ಅತ್ತೀಗಿ ನಾನವ್ವ
ಕಿತ್ತೂರ ಆಳವರ ಸೊಸಿನಾನ | ಕುರುಬ್ಯಾಟ |
ಮಾನೆ ಉಣ್ಣವರ ಮಗಳ್ನಾನು ||

ಇಂಥ ವಜ್ರವಾಣಿಯನ್ನು ಉಸುರುವ ಕೆಚ್ಚಿನ ಹಿಂದೆ, ಮಲ್ಲಿಗೆಗೂ ಮೃದುವಾದ ಅಂತಃಕರಣವಿದೆ, ನೆಲದಲ್ಲಿ ಊರಿದ ಬೀಜದ ಮೊಳಕೆ ಅದೆಷ್ಟು ಮೃದುವಾದರೂ, ಬಿರುಭೂಮಿಯನ್ನು ಸೀಳಿ ಮೇಲೆ ಮೊಗವೆತ್ತಿ ನಿಲ್ಲುತ್ತದಲ್ಲವೇ? ಅಗಲುವ ತಂಗಿಗೆ ಹೊಟ್ಟೆಹೊಕ್ಕು ಹೇಳುವ ಒಂದೇ ಒಂದು ಮಾತು ಅನುಗಾಲವೂ ಮರೆಯದಂತೆ, ಮನದ ಭಿತ್ತಿಯ ಮೇಲೆ ಕೊರೆದು ತೆಗೆಯುತ್ತದೆ.

ನಾಳೆ ಇಷ್ಟೊತ್ತಿನಾಗ ನಾಡಮ್ಯಾಲಿನ ಹಕ್ಕಿ
ಕೂಡಿ ಉಣ್ಣೂನು ಬಾ ತಂಗಿ | ನಾವಿನ್ನ |
ಜೋಡಾದ ಹಕ್ಕಿ ಅಗಲೇವಿ||

ಅತ್ತೆ ಮನೆಗೆ ಹೊರಟ ಮಗಳಿಗೆ, ತಾಯಿಯಾದವಳು ಅವೆಷ್ಟೋ ಬುದ್ಧಿಯ ಮಾತುಗಳನ್ನು ಹೇಳುವಳು. ಯಾವ ತಾಯಿ ಹೇಳಿದರೂ ಅವೇ ಮಾತು; ಎಷ್ಟು ಸಾರೆ ಹೇಳಿದರೂ ಅದೇ ವಿಷಯ. ಕಿರಿದರಲ್ಲಿ ಪಿರಿದರ್ಥ ಹೇಳುವುದನ್ನು ಹುಟ್ಟಾ ಮೈಗೂಡಿಸಿಕೊಂಡ ಗೃಹಿಣಿಯು ಕಿರಿದಾದುದನ್ನು ಇನ್ನೂ ಕಿರಿದಾಗಿ ಹೇಳುವ ಚಳಕವನ್ನು ಸಾಧಿಸಿಕೊಂಡಿದ್ದು ಇಲ್ಲಿ ಮನಗಾಣಬಹುದಾಗಿದೆ.

ಅತ್ತಿ ಮನಿಗ್ಹೋಗಾಕಿಗೆ ಹತ್ತೆಂಟು ಹೇಳೀನಿ|
ಮತ್ತೊಂದು ಹೇಳೋದು ಮರೆತೀನಿ | ತಂಗೆವ್ವ |
ಅತ್ತಿಗುತ್ತರವ ಕುಡಬ್ಯಾಡ ||

ಅತ್ತೆಯ ಮನೆಯ ಸೊಸೆಗೆ ಇಷ್ಟೊಂದು ಸಂಕ್ಷೇಪವಾದ ನೀತಿಸಂಹಿತೆ ಇನ್ನೊಂದು ಸಿಗಲಾರದೆಂದೇ ತೋರುತ್ತದೆ.