ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ; ಹೆಣ್ಣು ರಾಕ್ಷಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ.

ಸಚ್ಚಿದಾನಂದ ಶೈಲದಿಂದ

ಪರಮಾತ್ಮ ಸಚ್ಚಿದಾನಂದ ಸ್ವರೂಪನಾಗಿದ್ದಾನೆಂದು ಹೇಳುತ್ತಾರೆ, ಆತನ ಮನಸ್ಸಿನಲ್ಲಿ ಆಡಬೇಕೆಂಬ ಸಂಕಲ್ಪವುಂಟಾಯಿತು. ಸಚ್ಚಿದಾನಂದ (ಸತ್‌, ಚಿತ್, ಆನಂದ)ದೊಳಗಿನ ಸತ್‌ತತ್ತ್ವವು ಸಂಕಲ್ಪಮಾಡಿತು. ಕೂಡಲೇ ಚಿತ್ ತತ್ತ್ವದೊಳಗಿನ ಶಕ್ತಿಯು ಮಾಯೆಯ ರೂಪತಾಳಿತು. ಒಂದು ಶಿವ, ಇನ್ನೊಂದು ಶಕ್ತಿ. ಹೀಗೆ ಅರ್ಧನಾರೀ ನಟೇಶ್ವರನ ವೇಷದೊಟ್ಟು ಜಗತ್ತಿನ ರಂಗಭೂಮಿಯ ಮೇಲೆ ಪರಮತ್ಮನು ಆಟವನ್ನು ಆರಂಭಿಸಿದನು. ಆಟವೆಂದರೆ ಯಾವಾಗಲೂ ಆನಂದದ ವಿಷಯವೇ. ಶಿವನು ಪುರುಷನೆನಿಸಿದನು; ಶಕ್ತಿಯು ಪ್ರಕೃತಿಯೆನಿಸಿಕೊಂಡಳು. ಭಗವದ್ಗೀತೆಯಲ್ಲಿ ಪರಮಾತ್ಮನು ಹೇಳಿದಂತೆ-

ಈ ಪ್ರಕೃತಿಯೇ ನನ್ನ ಯೋನಿಯದು ತಿಳಿಗುಟ್ಟು |
ಗರ್ಭವನ್ನಿಡಲಾನು ಪ್ರಾಣಿಮಾತ್ರರ ಹುಟ್ಟು ||
ಯಾವ ಯೋನಿಯಲಾವ ಪ್ರಾಣಿ ಜನಿಸಿದರೇನು |
ಅದು ನನ್ನ ಪ್ರಕೃತಿ-ಪಿತ ಬೀಜವಿಡುವವನಾನು ||

ಹೀಗೆ ಪುರುಷನೂ ಪ್ರಕೃತಿಯೂ ಪರಮೇಶ್ವರನೇ ಸರಿ. ಅಲ್ಲದೆ, ಶ್ರೀಕೃಷ್ಣ ಪರಮಾತ್ಮನ ಇನ್ನೊಂದು ಮಾತು ಹೀಗಿದೆ.

ನಾರಿ ವರ್ಗದ ಕೀರ್ತಿವಾಣಿ ಲಕ್ಷ್ಮಿಯು ನಾನು
ಬುದ್ಧಿ ಕ್ಷಮೆ ಧೈರ್ಯ ಸ್ಮೃತಿ ಇವುಗಳೆಲ್ಲವು ನಾನು

ಆದುದರಿಂದ ‘ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ’ ಎಂದು ಸಿದ್ಧರಾಮನು ಹೇಳಿದುದರಲ್ಲಿ ಅತಿಶಯವೇನಿದೆ? ಹೆಣ್ಣು ಸಚ್ಚಿದಾನಂದ ಶೈಲದಿಂದ ಉಗಮಿಸಿದ ಚಿತ್ ತತ್ತ್ವದ ಭಾಗೀರಥಿಯೇ ಆಗಿದ್ದಾಳೆ. ಶೈಲದಿಂದ ಧುಮ್ಮಿಕ್ಕಿ, ದರಿಯಲ್ಲಿ ಪುಟಿದೆದ್ದು, ಬಯಲಲ್ಲಿ ಹರವಾಗಿ ಹರಿದು, ನೊರೆತೆರೆಗಳ ಇಳಿಗೂದಲು ಬೀಸಾಡಿ, ಗುಳಗುಳನೆ ಹಾಡಿ, ಧಡಧಡನೆ ಗಜರಿ ಸಮುದ್ರನಾಥನನ್ನು ಸೇರುವ ದೇವನದಿಯ ಲೀಲೆಯಂತೆ ಗರತಿಯ ಆಟವಾಗಿರುವುದನ್ನು ಕಾಣುವೆವು.

ಮಾನವ ರೂಪದಲ್ಲಿ

ಹೆಣ್ಣು ಮೊತ್ತ ಮೊದಲು ಮಾನವರೂಪತೊಟ್ಟು ಮಗಳಾಗಿ ಹುಟ್ಟುವಳು. ಹೆಂಡತಿಯಾಗಿ ಗಂಡನನ್ನು ಕೂಡುವಳು. ತಾಯಾಗಿ ಮಗುವನ್ನು ಅಪ್ಪುವಳು. ಅತ್ತೆಯಾಗಿ ಸೊಸೆಗೆ ಕಾಣಿಸಿಕೊಳ್ಳುವಳು. ಇವು ಗರತಿಯ ಅವತಾರದಲ್ಲಿ ಮುಖ್ಯವಾದ ಸ್ವರೂಪಗಳು. ಇನ್ನು ಆಕೆಯ ಉಪಸ್ವರೂಪಗಳು ಬೇರೆಯೇ ಅವೆ. ತಾಯಿ ತಂದೆಗಳಿಗೆ ಮಗಳಾಗಿರುವಂತೆ, ಅಣ್ಣನಿಗೆ ತಂಗಿಯಾಗಿಯೂ, ತಮ್ಮನಿಗೆ ಅಕ್ಕನಾಗಿಯೂ ಕಂಗೊಳಿಸುವಳು. ಅಜ್ಜ-ಅಜ್ಜಿಯರಿಗೆ ಮೊಮ್ಮಗಳಾಗುವಳು. ತಾಯಿಯ ಸೋದರನಿಗೆ, ತಂದೆಯ ಸೋದರಿಯರಿಗೆ ಸೋದರ ಸೊಸೆಯಾಗುವಳು. ಅತ್ತಿಗೆಗೆ ನಾದಿನಿಯಗುವಳು. ತವರು ಮನೆಯಲ್ಲಿ ತಳೆಯುವ ಈ ಸ್ವರೂಪಗಳಲ್ಲದೆ ಗಂಡನ ಮನೆ ಹೊಂದುವ ವಿವಿಧ ಉಪಸ್ವರೂಪಗಳು ಯಾರಿಗೆ ಗೊತ್ತಿಲ್ಲ? ಅತ್ತೆಮಾವಂದಿರಿಗೆ ಸೊಸೆಯಾದರೆ, ಭಾವ ಮೈದುನರಿಗೆ ಅತ್ತಿಗೆಯಾಗುವಳು. ನೆಗೆಣ್ಣಿಯಾದಂತೆ, ಒಮ್ಮೆ ಅತ್ತೆಯಾಗಿಯೂ ಅಜ್ಜಿಯಾಗಿಯೂ ಅನ್ನಿಸಿಕೊಳ್ಳುವಳು. ಸರಿವರೆಯದ ಹೆಣ್ಣು ಮಕ್ಕಳಿಗೆ ಗೆಳತಿಯೂ ಆಗುವಳು. ಪೂರ್ವ ವಯಸ್ಸಿನಲ್ಲಿ ಅನಿವಾರ್ಯವಾಗಿ ಕುಮಾರಿಯೆನಿಸುವಳು. ಒಮ್ಮೊಮ್ಮೆ ವಿಧವೆಯ ವೇಷನ್ನು ತೊಡುವಳು.

ಪೂರ್ಣತೆಯಿದೆ

ಹೆಣ್ಣಿಗೆ ವಿವಿಧ ಸ್ವರೂಪಗಳಿರುವಂತೆ ಗಂಡಿಗೂ ವಿವಿಧ ಸ್ವರೂಪಗಳಿರುವುದರಿಂದ, ಹೆಣ್ಣಿನ ಸ್ವರೂಪಕ್ಕೆ ವೈಶಿಷ್ಟ್ಯವೇನೆಂದು ಕೇಳಬಹುದಾಗಿದೆ. ಹೆಣ್ಣಿನಿಂದ ಬರೀ ಹೆಣ್ಣೇ ಹುಟ್ಟದೆ ಗಂಡು ಸಹ ಹುಟ್ಟುವವು. ಗಂಡಿನ ಜನನಕ್ಕಾಗಿ ಬೇರೊಂದು ಏರ್ಪಾಡು ಆಗಿಲ್ಲ. ಗಂಡು ಬೀಜದಾನ ಮಾಡುವವನೆಂದು, ಬರಿ ಗಂಡಿನ ಜನಕನೇ ಅವನಾಗಲಾರನು. ಹೆಣ್ಣು ರೂಪಿನಲ್ಲಿ ಸಹ ಗಂಡಿಗೆ ಜನ್ಮಕೊಡುವ ಮೈ ಹೆಣ್ಣಿಗಿರುವಂತೆ, ಗಂಡುರೂಪದಲ್ಲಿ ಸಹ ಹೆಣ್ಣಿನ ಬೀಜದಾನ ಮಾಡುವ ಮೈ ಗಂಡಿಗಿರುತ್ತದೆ. ಅಂತೆಯೆ ಗಂಡು-ಹೆಣ್ಣುಗಳೆಲ್ಲ ಅರ್ಧನಾರೀ ನಟೇಶ್ವರನ ಸಂತಾನವೇ ಸರಿ. ಹೆಣ್ಣು ಗರ್ಭಧರಿಸಿದಾಗ ಪಿಂಡಸಾಮಗ್ರಿಯೊಂದು ಕೊರತೆಯಾದರೆ, ಗಂಡು ಜನಿಸುವದೆಂದೂ, ಆ ಪಿಂಡಸಾಮಗ್ರಿಯ ಕೊರತೆ ಬೀಳದಿದ್ದರೆ ಹೆಣ್ಣು ಜನಿಸುವದೆಂದೂ ಇಂದಿನ ಭೌತವಿಜ್ಞಾನದವರ ಅಭಿಪ್ರಾಯವಿರುತ್ತದೆ. ಉಂಡುಟ್ಟು ನಿಶ್ಚಿಂತೆಯಿಂದ ಬಾಳುವ ಗರತಿಯು ಹೆಣ್ಣು ಹಡೆಯುವುದೇ ಹೆಚ್ಚು ಎಂಬುದನ್ನು ವ್ಯವಹಾರದಲ್ಲಿ ನಾವು ಕಾಣುತ್ತೇವೆ. ಸಜ್ಜಿಗೆ, ತುಪ್ಪ, ಸಕ್ಕರೆ ಇವು ಮೂರು ಇದ್ದಾಗ ಅಡುಗೂಲಜ್ಜಿ ‘ಸಿರಾ’ ಮಾಡಿ ತಿನಬಡಿಸುವಳು ಅಥವಾ ಸಜ್ಜಿಗೆ ತುಪ್ಪ ಎರಡೇ ಇದ್ದು ಸಕ್ಕರೆಯಿರದಿದ್ದರೆ ಉಪ್ಪಿಟ್ಟು ಮಾಡಿಡುವಳು. ಒಂದು ಅರ್ಥದಲ್ಲಿ ಹೆಣ್ಣು ಸಿರಾ, ಗಂಡು ಉಪ್ಪಿಟ್ಟು ಉಪ್ಪಿಟ್ಟಿಗಿಂತ ಸಿರಾಕ್ಕೆ ಸಿಹಿ ಹೆಚ್ಚು; ಬೆಲೆ ಬೆಚ್ಚು. ಪ್ರಯೋಜನದಲ್ಲಿ ಯಾವುದೂ ಕಡಿಮೆ ಆಗಲಾರದು.

ಮಾಯೆಯ ಮುಸುಕು

ಹೆಣ್ಣಾಗಲಿ ಗಂಡಾಗಲಿ ವೇಷತೊಟ್ಟು ಬಂದು ಆಟಕ್ಕೆ ನಿಂತ ಮೇಳದವರು. ವೇಷ ತೊಡುವ ಮೊದಲು ಇರುವ ವ್ಯಕ್ತಿತ್ವವನ್ನು ವೇಷದೊಟ್ಟ ಮೇಲೆ ಮರೆಮಾಡಬೇಕಾಗುವದು. ಆಗ ಬೇರೊಂದು ವ್ಯಕ್ತಿಯಂತೆ ಮಾತು ಕುಣಿತ, ಮುದ್ರೆ ತಳೆಯಬೇಕಾಗುವದು. ಹಾಗೆ ಮಾಡುವಾಗ ಮೊದಲಿನ ವ್ಯಕ್ತಿತ್ವವನ್ನು ಪೂರ್ಣ ಮರೆಯಬೇಕಾಗುವದು. ಮರೆವಿನ ಸ್ಥಿತಿಯೇ ಮಾಯೆ ಎನಿಸುತ್ತದೆ. ಸಂಸಾರ ಜೀವನವು ನಾಟಕವಿದ್ದ ಹಾಗೆ. ವೇಷದವನು ತನ್ನ ವ್ಯಕ್ತಿತ್ವ ಮರೆತಾಗಲೇ ವೇಷಗಾರಿಕೆ ಯಶಸ್ವಿಯಾಗುತ್ತದೆ. ಅಂದರೆ ಮಾಯೆಯ ಮುಸುಕಿನಲ್ಲಿಯೇ ಜೀವನವು ಸುಂದರವಾಗುತ್ತದೆ; ಯಶಸ್ವಿಯಾಗುತ್ತದೆ. ಜಗಜ್ಜನನಿಯು ವಿಶ್ವದಲ್ಲಿ ಹೂಡಿದ ವಿರಾಟದ ಲೀಲೆಯಲ್ಲಿ ಜಗತ್ತಿನ ಹೆಣ್ಣು ಗಂಡುಗಳೆಲ್ಲ, ಮಾಯದ ಮುಸುಕಿನಿಂದ ಲೀಲಾ ಭಾಗಿಯಾಗತಕ್ಕವರು. ಆಟವೆಂದರೆ ಆನಂದಕ್ಕಾಗಿಯೇ ಹೂಡಿದ ಮಾಟ. ಆದರೆ ಆ ಆನಂದದಾಟವನ್ನೇ ನಿಗ್ಗರದ ಕುತ್ತೆಂದು ಭಾವಿಸುವದುಂಟು. ಪಗಡೆ, ಚದುರಂಗದಾಟಗಳಲ್ಲಿ ಏರು, ಗೆಲವು ಉಂಟಾದಾಗ ಹಿಗ್ಗುವವರೂ; ಇಳಿವು, ಸೋಲು ಉಂಟಾದಾಗ ಕುಗ್ಗುವವರೂ ಇರುವುದನ್ನು ನಾವು ನೋಡಿಲ್ಲವೇ? ನಾವೇ ಆನಂದಕ್ಕಾಗಿ ಆಟ ಹೂಡಿರುವಾಗ ಸಹ, ಅದರಿಂದ ಅಸಂತೋಷವನ್ನುಂಟು ಆಟಬಿಟ್ಟು ಓಡಿಹೋಗುವ ಮನಸ್ಸು ಬಹು ಜನರಿಗೆ ಬರುತ್ತಿರುವದುಂಟು. ಜಗತ್ತಿನ ಇತಿಹಾಸದಲ್ಲಿ ಈ ದೈವೀಲೀಲೆಯಿಂದ ಕಡೆಗಾಗುವ ಮನಸ್ಸು ಮಾಡಿದವರು ಗಂಡಸರೇ ಹೆಚ್ಚು. ಅವರು ಕೈವಲ್ಯ ಮುಕ್ತಿ ಬೇಡಿದರೂ ದೇವನ ರಾಜ್ಯದಲ್ಲಿ ಕಾಯ್ದೆಭಂಗ ಮಾಡಿದಂತೆಯೇ ವೈರಾಗ್ಯ ಪಟ್ಟವೇರುವುದಕ್ಕಾಗಿ ಸಂಸಾರ ತ್ಯಾಗ ಮಡಿದರೂ ಅದು ದೇವರೊಡನೆ ಅಸಹಕಾರ ಮಾಡಿದಂತೆಯೇ ಸರಿ. ಆದರೆ ಕೈವಲ್ಯ ಮುಕ್ತಿ ಬೇಡುವ ಅವಕಾಶವಾಗಲಿ, ವೈರಾಗ್ಯಭಾವವನ್ನು ತಳೆಯುವ ಅವಶ್ಯಕತೆಯಾಗಲಿ ಹೆಣ್ಣು ಮಕ್ಕಳಿಗೆ ಕಂಡುಬರಲಾರದು. ಕಂಡುಬಂದರೂ ತೀರ ಕ್ವಚಿತ್ತಾಗಿ, ಹೆಣ್ಣುಮಕ್ಕಳು ವಿಶ್ವದ ಲೀಲೆಯಲ್ಲಿ ತಮ್ಮ ಪಾತ್ರವನ್ನು ಆನಂದದಿಂದ ನಿರ್ವಹಿಸಬಲ್ಲವರು. ಪಾತ್ರದೊಡನೆ ತಾದಾತ್ಮ್ಯವನ್ನು ಹೊಂದಿಬಿಡುವ ಸಹಜ ಅಭಿನಯಕಾರರು. ನಟರಾಜನ ತಾಳಿನೊಡನೆ ಹೆಜ್ಜೆ ಹಾಕುವ ನಟವರರು. ವಿಶ್ವಲೀಲೆಯಲ್ಲಿ ಅವರು ಹೊತ್ತ ಹೊಣೆ ಹಿರಿಯದು. ಜಗತ್ತಿನ ಬೊಕ್ಕಸವೇ ಅವರ ಬಳಿಯಲ್ಲಿದೆ. ಜೀವನದ ಜೀವಾಳವೇ ಅವರ ಹೃದಯದಲ್ಲಿ ಹುದುಗಿದೆ. ಅವರು ಹೊದೆದುಕೊಂಡ ಮಾಯದ ಮುಸುಕು ಹೆರವರನ್ನು ಹೆದರಿಸುವುದಕ್ಕಾಗಿ ಅಲ್ಲ; ದೇವನ ಉದ್ದೇಶವನ್ನು ಸಫಲಗೊಳಿಸುವುದಕ್ಕಾಗಿ. ಆದ್ದರಿಂದಲೇ ವಿದ್ಯೆ, ಸಂಪತ್ತು, ಅನ್ನ, ಬಲ ಇವುಗಳನ್ನು ಕೈವಶದಲ್ಲಿಟ್ಟುಕೊಂಡ ಸರಸ್ವತಿ, ಲಕ್ಷ್ಮೀ, ಅನ್ನಪೂರ್ಣೇ, ಕಾಳಿ ಮೊದಲಾದವರು ಸ್ತ್ರೀದೈವತರೇ ಆಗಿದ್ದಾರೆ. ಜಗಜ್ಜನನಿಯು ಅಶ್ವತ್ಥವೃಕ್ಷದ ಬೊಡ್ಡೆಯಂತಿದ್ದರೆ, ಸರಸ್ವತಿ, ಲಕ್ಷ್ಮಿ, ಕಾಳಿಯರೇ ಮೊದಲಾದವರು ಆ ವೃಕ್ಷಕ್ಕೆ ಟಿಸಿಲುಗಳಿದ್ದ ಹಾಗೆ. ಜಗತ್ತಿನೊಳಗಿನ ಹೆಂಗಳೆಯರೆಲ್ಲರೂ ಆ ಟಿಸಿಲು-ತೊಂಗಲುಗಳಿಗೆ ಎಲೆಗಳಿದ್ದ ಹಾಗೆ. ಜಗಜ್ಜನನಿಯು ಬೊಡ್ಡೆ. ಹೆಣ್ಣು ಎಲೆ-ತೊಪ್ಪಲು. ಅಂದಬಳಿಕ ನಮಗೆ ಕಾಣುವ ಹೆಣ್ಣು, ಜಗಜ್ಜನನಿಯ ಮುಖವಾದಂತಾಯಿತು. ಆ ಮುಖವು ಮಹಾದೇವಿಯಂತೆ ಕಂಡಿದ್ದರಿಂದ ಶರಣರು – “ಪರವಧುವನು ಮಹಾದೇವಿಯೆಂದು ಕಾಂಬೆನು ಕೂಡಲ ಸಂಗಮ ದೇವಾ” ಎಂದಿದ್ದಾರೆ. ಅಲ್ಲದೆ-

ಮುನ್ನ ಪರಸತಿ ಪಾರ್ವತಿ ಎಂದು ನಡಿಸಿತ್ತು, ನುಡಿಸಿತ್ತು, ಗುರುವಚನ.
ಬಳಿಕ ಶರಣಸತಿ ಪಾರ್ವತಿ ಎಂದು ನಡಿಸಿತ್ತು, ನುಡಿಸಿತ್ತು ಗುರುವಚನ.
ಇನ್ನು ಸತಿಯರೆಲ್ಲ ಗುರುಸತಿಯರೆಂದು ನಡಿಸಿತ್ತು, ನುಡಿಸಿತ್ತು ಗುರುವಚನ.
ಶಂಭು ಸೋಮನಾಥಲಿಂಗನ ಸಂಗ ಸುಸಂಗವ ಮಡಿತ್ತು ಗುರುವಚನ.

ಎಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಇಂದಿನ ಸರ್ವಧರ್ಮಗಳನ್ನು ಸಾಕ್ಷಾತ್ಕರಿಸಿಕೊಂಡು ಶ್ರೀರಾಮಕೃಷ್ಣ ಪರಮಹಂಸರು – “ಹೆಣ್ಣು ಹೆಣ್ಣಲ್ಲ. ಜಗಜ್ಜನನಿಯ ಪ್ರತಿನಿಧಿ ಸ್ವರೂಪ” ಎನ್ನುವ ಮಾತು ಕಣ್ಣು ಮುಚ್ಚಿ ಗಳಪುವ ಬುಡಬುಡಿಕೆಯಲ್ಲ. ನಿತ್ಯಸತ್ಯದ ಮಾತು. ಅನುಭವದಲ್ಲಿ ಅಟ್ಟುಂಡ ಮಾತು. ಮಾಯದ ಮುಸುಕಲ್ಲ; ಮರುವಿನ ಕಸುಕಲ್ಲ; ಎಚ್ಚರದ ಎಸಕ.

ನಮೋ ಎಂಬೆ

ಗರತಿಯ ಅವತಾರವು ಗಂಗೆಯ ಅವತರಣದಂತೆ ದೈವನಿಯಾಮಕವಾದುದು. ದೈವಾಯತ್ತವಾದುದು. ಅವಳ ಅವತಾರವು ಪಾವನತರವಾದುದು; ಫಲಪ್ರದವಾದುದು. ಮಂಗಲಕರವಾದುದು; ಶುಭಕರವಾದುದು. ಅದು ಸತ್ಯಸೃಷ್ಟಿಯ ತಾಯಿ ಶಿವತತ್ತ್ವದ ತವರು; ಸುಂದರದ ನೆಲೆವೀಡು. ಅದು ಶ್ರೀ ಮಾಸ್ತಿಯವರ ಮಾತಿನಲ್ಲಿ ಆನಂದಾಬ್ಧಿಯ ಅಮೃತದ ತುಂತುರು. ನೆಲಕ್ಕಿಳಿದು ಹೂವಾಗಿ ಅರಳಿತು. ಮೊಗಕ್ಕೆ ಬಂದು ನಗೆಯಾಗಿ ಕಲೆಯಿತು. ನಭದಲ್ಲಿ ತಾರೆಯಾಗಿ ಕಂಗೊಳಿಸಿತು. ಗಂಗೆಯು ಗಂಗೋತ್ರಿಯನ್ನು ತೊರೆದು ಇಳಿದುದು ಲೋಕಕಲ್ಯಾಣಕ್ಕಾಗಿ ಇರುವಂತೆ, ಗರತಿ ಸಚ್ಚಿದಾನಂದ ಶಿಖರದಿಂದ ಇಳಿದು ತಾನು ಅಧಃ ಪತನಹೊಂದಿದರೂ ಲೋಕವನ್ನೆತ್ತಿ ಹಿಡಿಯಬಂದ ಶಕ್ತಿಮಾತೆ; ಅದನ್ನು ಪವಿತ್ರಗೊಳಿಸಲಣಿಯಾದ ಶಿವೆ. ಅವಳು ಸ್ವರ್ಗತೊರೆದು ಬಂದವಳು; ಬಯಲ ಜರೆದು ಬಂದವಳು. ಆದರೂ ನೆಲದಲ್ಲಿ ಹರಿದು ಬಂದವಳು. ನೆಲಕ್ಕೆ ಹರಿದು ಬರದಿದ್ದರೆ ಮಣ್ಣು ಮೃಣ್ಮಯವಾಗುತ್ತಿರಲಿಲ್ಲ.

ಮಗುವಾಗಿ ತಾಯ್ತಂದೆವಿರ ಮನವ ನಲಿಸಿ
-ಸತಿಯಾಗಿ ಪತಿಯ ಹೃದಯದ ಸುಖದ ಸಲಿಸಿ
ಜಗದಂಬೆಯವತಾರದಂತೆ ಕಳಕಳಿಸಿ
-ಸುತರ ಹಡೆದತ್ತಿ ಮುದ್ದಾಡಿ ಸಲೆ ಬೆಳೆಸಿ
ಲಲನೆ ಅಂದುದ್ದೇಶಿಸದೆ ಕಣ್ಣ ತಣಿಸಿ
ಸುಳಿದಳೆದುರಿಗೆ ನನ್ನ ಆತುಮವ ಮಣಿಸಿ ||
-ಶ್ರೀನಿವಾಸ

ಶ್ರೀ ಅಂಬಿಕಾತನಯದತ್ತರು ಜಾಹ್ನವಿಯನ್ನು ಕುರಿತು ಹೇಳಿದ ಮಾತುಗಳನ್ನೇ ನಾವು ಗರತಿ-ಗಂಗಾದೇವಿಗೆ ಅನ್ವಯಿಸಿಕೊಳ್ಳಬಹುದಾಗಿದೆ. ಆ ಮಾತು ಯಾವುದೆಂದರೆ – “ಕೂಸು ಅಳುವುದು ಕೇಳಿ ತೀರಿ ಹೋಗಿಹ ತಾಯಿ ಬಂದಳೆಂಬಂತೆ ಭರದಿ. ಸ್ವರ್ಗವಾಸವ ತೊರೆದು ಬಂದೆನೀ ಭವಬಂಧ ನಿರ್ಭೀತಳೆಂಬ ತೆರದಿ”

ಹೀಗೆ ಭವಬಂಧ ನಿರ್ಭೀತಳಾದ ಗರತಿಗೆ ‘ನಮೋ’ ಎಂಬೆ.