ನಾವು ಹಾಡಿನ ಚುಟಿಕೆಗಳನ್ನು ಕೇಳಿರುವಂತೆ, ಚುಟಿಕೆಯ ಕಥೆಗಳನ್ನು ಕೇಳಿದ್ದೇವ. ಅವು ಪೇಪರಮೆಂಟು ಇದ್ದ ಹಾಗೆ. ಬಾಯಲ್ಲಿ ಹಿಡಿದು ಕರಕರಗಿದಂತೆ ರಸ ಚಪ್ಪರಿಸಬೇಕು ಅಲ್ಲವೇ? ಹಲ್ಲಿನಿಂದ ಕರಕರನೆ ತಿಂದು ಆಗುಮಾಡಬಾರದು. ಚುಟಿಕೆಗಳು ಹನಿಯಷ್ಟು ಚಿಕ್ಕವಾದರೂ ಜೇನುಹನಿಯಂತೆ ಸ್ವಾರಸ್ಯಕರವಾಗಿದೆ.

ಒಬ್ಬ ರೋಗಿಗೆ ವೈದ್ಯರು ಗುಳಿಗೆ ಡೋಜುಗಳನ್ನು ಕೊಟ್ಟು ತೆಗೆದುಕೊಳ್ಳುವ ವಿಧಾನವನ್ನು ವಿವರಿಸಿದರು. ಆ ಬಳಿಕ ಪಥ್ಯಾ ಪಥ್ಯಾಗಳನ್ನು ಸೂಚಿಸಿ, ಹಾಸಿಗೆ ಪಥ್ಯವನ್ನು ಕುರಿತು ಒತ್ತಿ ಹೇಳಿದರು.“ಅವಶ್ಯವಾಗಿ ಗಮನಿಸತಕ್ಕದ್ದು ಹಾಸಿಗೆ ಪಥ್ಯ” ಎಂದು ಮತ್ತೊಮ್ಮೆ ಹೇಳಿದರು.

“ಪಾಲಿಸುತ್ತೇನೆ ವೈದ್ಯರೇ ಹಾಸಿಗೆ ಪಥ್ಯವನ್ನು. ಹಾಸಿಗೆಯಿಲ್ಲದಿದ್ದರೂ ನಡೆಯುತ್ತದೆ ನಮಗೆ”

ಹಾಸಿಗೆ ಎಂಬ ಶಬ್ದವನ್ನು ವೈದ್ಯರು ಒಂದರ್ಥದಲ್ಲಿ ಉಪಯೋಗಿಸಿದರು. ರೋಗಿ ಅದೇ ಶಬ್ದವನ್ನು ಬೇರೊಂದು ಅರ್ಥದಲ್ಲಿ ಉಪಯೋಗಿಸಿದನು. ಅರ್ಥ ಭೇದದಿಂದ ಚಿಕ್ಕ ವಿಷಯವು ವಿಸ್ತಾರಗೊಂಡಿತು.

ಹೋಳಿ ಹಬ್ಬದ ಕಾಲಕ್ಕೆ ಬಣ್ಣ ವಾಡುವವರು ಒಂದು ಸ್ವಚ್ಛವಾದ ಹೊಸಮನೆಯ ಬಳಿಗೆ ಬಂದು, ಅದರ ಗೋಡೆ ಮೇಲೆ ಹೊಲಸು ಬಣ್ಣದಿಂದ ದಪ್ಪ ಅಕ್ಷರಗಳಲ್ಲಿ “ಕತ್ತೆ” ಎಂಬ ಶಬ್ದವನ್ನು ಮೂಡಿಸಿದರು. ಆ ಮನೆಯ ಯಜಮಾನರು ತಲೆವಾಗಿಲಿನಲ್ಲಿ ನಿಂತು ಅದನ್ನೆಲ್ಲ ನೋಡುತ್ತಲೇ ಇದ್ದರು ಮುಗಿದ ಬಳಿಕ ಕೇಳಿದರು-“ಏನ್ರೀ ಈ ಮನೆ ಯಾರದು?”

“ನಿಮ್ಮದು”

“ಹಾಗಾದರೆ ನಮ್ಮ ಮನೆಯ ಮೇಲೆ ನಿಮ್ಮ ಸಹಿ ಏಕೆ?”

ಆ ಮಾತಿಗೆ ಮರುನುಡಿಯಲಿಕ್ಕಾದೆ, ಆ ಗುಂಪು ಅವಸರದಿಂದ ಕಾಲ್ದೆಗೆಯಿತು. ಮೂವರು ಜಾಣರು ಅಡ್ಡಾಡಲು ಹೊರಟಿದ್ದರು, ಅವರಲ್ಲಿ ಯಾವುದೋ ಚರ್ಚೆ ನಡೆದಿತ್ತು. ಒಬ್ಬ ಕೇಳಿದನು-ಸಮುದ್ರಕ್ಕೆ ಬೆಂಕಿ ಹತ್ತಿದರೆ ಮೀನು ಏನು ಮಾಡುತ್ತವೆ? “ಮೀನುಗಳು ಗಿಡ ಏರುತ್ತವೆ” ಎಂದು ಎರಡನೆಯವನು. ತಟ್ಟನೆ ಮರುನುಡಿದನು. ಮೂರನೇಯವನು ಅದಕ್ಕೊಪ್ಪದೆ, “ಗಿಡ ಏರಲಿಕ್ಕೆ ಮೀನುಗಳೇನು ದನಗಳೇ” ಮರು ಪ್ರಶ್ನೆ ಮಾಡಿದನು. ಈ ಪ್ರಶ್ನೋತ್ತರಗಳು ಅವರ ಜಾಣತನಕ್ಕೆ ಭೂತಗನ್ನಡಿಯನ್ನು ಹಿಡಿದಿವೆ.

ಜನಪದವು ತನ್ನ ನಿತ್ಯ ಜೀವನದಲ್ಲಿ ಕೆಲವೇ ಶಬ್ದಗಳನ್ನು ಬಳಸುತ್ತಿದ್ದರೂ ಬಿತ್ತರವಾದ ಮನದಿಂಗಿತವನ್ನು ಪ್ರಕಟಗೊಳಿಸುತ್ತಿದೆ. ಹಾಗೆ ರೂಢಿಸಿಕೊಂಡ ರೀತಿ ಅವರ ಹಾಡಿನಲ್ಲಿ ಕಥೆಯಲ್ಲಿ ನುಸುಳಿ ಬಂದಿದೆ. ಕೊಂಕನುಡಿಯು ನೇರವಾಗಿ ಹೃದಯವನ್ನು ಪ್ರವೇಶಿಸುವದಂತೆ. ಕೊಂಕನುಡಿಯು ಸುಲಭವಾಗಿ ಸುಗಮವಾಗಿ ಗಂಟಲಿಗೆ ಇಳಿಯಬೇಕಾದರೆ ಅದು ಕಿರಿದಾಗಿರಬೇಕು. ನಮ್ಮ ತಾಯಂದಿರ ಸಂಸಾರ ವೇದಾಗ್ನಿಯಿಂದ ಜೀವನಾನುಭವದ ಅವೆಷ್ಟೋ ಕಿರು ನುಡಿಗಳನ್ನು ಪಡೆದು ಪಡನುಡಿಯುತ್ತ ಬಂದಿದ್ದಾರೆ.

“ಬಾಳೀಯ ಕಾಯೀಗಿ ಈಳಿಗ್ಯಾತಕ ಬೇಕ?”
“ಇದ್ದೂರ ಅತ್ತೀಮನಿ ಬಿದ್ದಗ್ವಾಡಿಯ ಸರಿ”

ಮಸೆದಲಗಿನಂಥ ಇಂಥ ಮಾತು ಕೂರ್ಮೆಯಿಂದ ಎದೆ ಸೀಳಿ ಒಳಸೇರುವ ಸತ್ತ್ವ ಪಡೆದಿರುವುದರಿಂದ ಅವುಗಳಿಗೆ ಸೀಳ್ನುಡಿಗಳೆಂದರೂ ತಪ್ಪಾಗದು. ಒಂದೇ ವರ್ಗಕ್ಕೆ ಸೇರಿದ ಅಂಥ ಮೂರು-ನಾಲ್ಕು ಸೀಳ್ನುಡಿಗಳನ್ನು ಓರಣದಿಂದ ಪವಣಿಸಿ ತ್ರಿಪದಿಗಳನ್ನು ಅಳವಡಿಸಿದ್ದುಂಟು-

ವಾಲಿಕಾರನ ಸೋಗು ಊರಾಗ ಕೇರ್ಯಾಗ
ಸೂಳಿ ನಿನ್ನ ಸೋಗು ಸೀರ್ಯಾಗ | ಗಂಡುಳ್ಳ
ಬಾಲಿ ನಿನ ಸೋಗು ಬಲಿಯಾಗ ||

ಈ ತ್ರಿಪದಿಯಲ್ಲಿ ಕೇಳಿಬರುವ ಗಂಡುದನಿಯು, ಗಂಡಿನ ಧ್ವನಿಯೆಂದೇ ಸಾರಿ ಹೇಳುವಂತಿದೆ. ಹೆಣ್ಣುದನಿ ಹೆಚ್ಚಾಗಿ ಹೃದಯಸ್ಪರ್ಶಿ: ಗಂಡುದನಿ ಬಹುತರವಾಗಿ ಮರ್ಮಸ್ಪರ್ಶಿ. ಕೆಳನೋಡಿ ಕೇರು ಹಾಕುವ ಕಲೆ ಉಭಯರಿಗೂ ಗೊತ್ತಿದೆ. ಹೊರಬುದ್ದಿ ಗೀಡಾದವನ ಹಾಡು ಏನಾಗುತ್ತದೆಂಬುದನ್ನು ಮಮಸ್ಪರ್ಶಿಯಾಗಿ ಹೇಳಿದ ತ್ರಿಪದಿ ಇಲ್ಲಿದೆ-

ಸರಗಿ ಸಾಲಕ ಹೋಗಿ, ಚರಗಿ ಪಾಲಕ ಬಂತು
ಬಡ್ಡ್ಯಾಗ ಹೋತ ಒಡ್ಡ್ಯಾಣ | ಒಡ್ಡೀನ |
ಹೊಲಹೋತು ರಡ್ಡ್ಯಾ ಹುಡುಗೀಗೆ ||

ಕೊಟ್ಟ ವಿಷಯವನ್ನು ೧/೩ ದಲ್ಲಿ ಸಂಕ್ಷೇಪಗೊಳಿಸುವ ಕೆಲಸವು ಇಲ್ಲಿ ಎರಡು ಮೂರುಸಾರೆ ನಡೆದಿರಬಹುದೇನೋ ಅನಿಸುತ್ತದೆ. ಎದುರು ನೋಡುವ ಭರದಲ್ಲಿ ತನ್ನತ್ತ ನೋಡಿಕೊಳ್ಳವುದನ್ನು ಸಾಮಾನ್ಯರ ಸ್ವಭಾವವೇ ಆಗಿದೆ. ಅನ್ನಿಗರನ್ನು ಮೈಯೆಲ್ಲ ಕಣ್ಣುಮಾಡಿ ನೋಡುವ ರೂಢಿ ಅವರಲ್ಲಿ ಸಾಮಾನ್ಯವಾಗಿದೆ. ಹೆರವರ ಮುಖಕ್ಕೆ ಕನ್ನಡಿ ಹಿಡಿಯುವುದೇ ಸುಗಮವೆನಿಸಿದೆ: ಸುಲಭವೂ ಅನಿಸಿದೆ.

ಹಾದರಗಿತ್ತಿ ಹಾವೀನ ಕುಬ್ಬಸ
ಚೇಳಿನಕೊಂಡಿ ಮಲಗಂಟ | ಹಾಕಿದರ |
ಹಾದರತನವ ಬಿಡಲಿಲ್ಲ ||

ಇದು ಒಂದು ಬದಿಯಿಂದ ನೋಡಿದ ನೋಟ. ಹಾದರದ ಚಪ್ಪಾಳೆ ಹೊಡೆದ ಒಂದು ಕೈ ಮಾತ್ರ ಈ ತ್ರಿಪದಿಯಲ್ಲಿ ಕಾಣಿಸಿಕೊಂಡಿದೆ. ಇನ್ನೊಂದು ಕೈ ಎಲ್ಲಿ ಅಡಗಿತು? ಅದು ಬಹುಶಃ ತಿರುಬೊಬ್ಬೆ ಹಾಕುವುದರಲ್ಲಿ ತೊಡಗಿತೇನೋ. ಆ ಕೆಲಸ ಮಾತ್ರ ಕುಂದಿಲ್ಲದಂತೆ ನಡೆದಹಾಗಿದೆ.

ಈ ಮೈಲಾರನ ಒಳಗೆಲ್ಲ ಸಣಬು ಎನ್ನುವುದನ್ನು ಚೆನ್ನಾಗಿ ಮನವರಿಕೆ ಮಾಡಿಕೊಂಡವನು ಸರ್ವಜ್ಞ. ಅವನ ವಚನಗಳೆಂದರೆ ಜಾನಪದ ಸಾಹಿತ್ಯವಲ್ಲರಿಯಲ್ಲಿ ಬಿಟ್ಟ ಹೂಗಳಲ್ಲವೇ? ಅವನು ತನ್ನ ತ್ರಿಪದಿಗಳಲ್ಲಿ ಕಿರಿದರೊಳೆ ಪಿರಿದರ್ಥವನ್ನು ತುಂಬಿದ ಚಲಕವೂ, ಅದೆಷ್ಟೋ ಶಿಷ್ಟಕವಿಗಳಿಗೂ ಅದರ್ಶಪ್ರಾಯವಾಯಿತೆನ್ನುವುದಕ್ಕೆ ಯಾರಲ್ಲಿಯೂ ಭಿನ್ನಾಭಿಪ್ರಾಯವಿಲ್ಲ. ಅವನ ತ್ರಿಪದಿಗಳು ಜನಪದ ಸಾಹಿತ್ಯದ ಮಟ್ಟವನ್ನು ಮೀರಿ, ಜನಾಂಗದ ಸಾಹಿತ್ಯವೆನಿಸುವ ಮಟ್ಟಕೇರಿವೆ. ಈ ಮಾತು ಕೆಳಗಿನ ಎರಡೇ ಪದ್ಯಗಳನ್ನೋದಿದರೂ ಸ್ಪಷ್ಟವಾಗುತ್ತದೆ.

ನಲ್ಲ ಒಲ್ಲಿಯನೊಲ್ಲ, ನೆಲ್ಲಕ್ಕಿ ಬೋನೋಲ್ಲ
ಅಲ್ಲವನು ಒಲ್ಲ, ಮೊಸರೊಲ್ಲ | ಯಾಕೊಲ್ಲ
ಇಲ್ಲದಕ್ಕೆ ಒಲ್ಲ ಸರ್ವಜ್ಞ ||
ನೋಡಿದರೆ ಎರಡೂರು ಕೂಡಿದಾ ಮಧ್ಯದಲ್ಲಿ
ಮೂಡಿಹ ಸ್ಮರನ ಮನೆಯಲ್ಲಿ | ಜಗವು ಬಿ-
ದ್ದಾಡುತ್ತಲಿಹುದು ಸರ್ವಜ್ಞ ||

“ವಚನದೊಳಗೆಲ್ಲರೂ ಶುಚಿವೀರ ಸಾಧುಗಳು” ಎನ್ನುವ ಒಂದೇ ಮಾತು, ಕಿರಿದರೊಳೆ ಪಿರಿದರ್ಥವನ್ನು ತುಂಬುವ ಸರ್ವಜ್ಞನ ಚಲಕವನ್ನು ಇಡಿಯಾಗಿ ತೋರಿಸುತ್ತದೆ. ಅದನ್ನು ಸರ್ವಜ್ಞನು ಜನಪದದಿಂದ ಕಲಿತರೆ, ಇಂದು ಜನಪದವು ಅದೇ ಪಾಠವನ್ನು ಸರ್ವಜ್ಞನಿಂದ ಕಲಿಯಬೇಕಾಗಿದೆಯೇನೋ.