“ಹೆಡಿಗೆ ಜಾತ್ರೆ” ನಮ್ಮ ಗ್ರಂಥಾಲಯದ ೭೧ನೇ ಪ್ರಕಟನೆ. ಜಾನಪದ ವಿಷಯವೇ ಜೀವಾಳವಾಗಿರುವ ೧೭ ಪ್ರಬಂಧಗಳ ಸಂಕಲನವೇ ಈ “ಹೆಡಿಗೆ ಜಾತ್ರೆ” ಶ್ರಾವಣ ಸೋಮವಾರದ ಹೆಡಿಗೆ ಜಾತ್ರಯಲ್ಲಿ ಹುದುಗಿರುವ ತಿನಿಸು-ಉಣಿಸುಗಳು ಲೆಕ್ಕಹತ್ತದಷ್ಟು ಅವುಗಳ ಸ್ವಾರಸ್ಯವನ್ನು ಸವಿದ ರುಚಿಗಾರರೇ ಉಸಿರಬಲ್ಲರು.

“ಜಾತ್ರೀಗಿ ಹೋಗೋಣಂತ ಮಾಡs ಗಿಲಮಿಂಚಿ |
ನೀ ಎಳ್ಳ ಹಚ್ಚಿ ಬುತ್ತಿಕಟ್ಟು ಸಜ್ಜಿ ರೊಟ್ಟಿ |
ಹುಳಿಬಾನದ ಗಂಟು ಅದು ಬ್ಯಾರೀ |
ನಾಳೆ ಮೊದಲಿಗಿ ಮಾಡೂದು ನ್ಯಾರೀ ||

ಎಂದು ಕುಣಿದಾಡುವ ಕಾಲ ಇಂದಿಲ್ಲವಾದರೂ ಅದರ ನೆನಹು ನೀರೂರಿಸದೆ ಬಿಡದು “ಹೆಡಿಗೆ ಜಾತ್ರೆ”ಯಲ್ಲಿ ಸಂಕಲಗೊಂಡ ಪ್ರಬಂಧಗಳು ಹಸಿವೆ ಹಿಂಗಿಸುವ ಸವಿದಿನಿಸು ಮಾತ್ರ ಆಗಿರದೆ, ಹಸಿವೆ ಹುಟ್ಟಿಸುವ ಶಕ್ತಿವರ್ಧಕವೂ ಆಗಿರುವವೆಂದು ನಾನೆಣಿಸಿದ್ದೇನೆ. ಈ ನನ್ನೆಣಿಕೆಯನ್ನು ಕುಲರಸಿಕರಾದ ಕನ್ನಡಿಗರು ಬೀಳುಗಳೆಯುವದಿಲ್ಲವೆಂದೇ ನಂಬಿದ್ದೇನೆ.

ಇಲ್ಲಿಯ ಹಲವಾರು ಪ್ರಬಂಧಗಳು ಒಂದಿಲ್ಲೊಂದು ಬಗೆಯಿಂದ ಕನ್ನಡಿಗರ ಕಣ್ಣಿಗೆ ಬಿದ್ದಂತೆ, ಕಿವಿಗೂ ಬಿದ್ದಿರಬಹುದು. ಆದರೂ ಇಡಿಯ ಪವಣಿಕೆಯಲ್ಲಿ ಅವುಗಳ ಸೇರುವೆ ಹೆಚ್ಚಿನ ಸೊಗಸು ಕೊಡಲಾರದೆ ಇರದು.

ನಮ್ಮ ಪ್ರಕಟನೆಗಳ ಧ್ಯೇಯ, ಧೋರಣೆ, ಉದ್ದೇಶ, ಗುರಿಗಳಲ್ಲಿ ಅದಾವ ಬದಲಾವಣೆಯೂ ಆಗಲಾರದು. ಈವರೆಗಿನ ನಮ್ಮ ಪ್ರಕಟನೆಗಳನ್ನು ಬರಮಾಡಿಕೊಂಡಂತೆ, ನಮ್ಮ ವಾಚಕರು ಈ “ಹೆಡಿಗೆ ಜಾತ್ರೆ”ಯನ್ನೂ ಅತ್ಯುತ್ಸಾಹದಿಂದ ಬರಮಾಡಿಕೊಳ್ಳುವುದರಲ್ಲಿ ಸಂದೇಹವಿಲ್ಲ.

ಸಿಂಪಿ ಲಿಂಗಣ್ಣ
ಚಡಚಣ
೨೪-೮-೮೧