ಜನಪದ ಸಾಹಿತ್ಯದ ಹಲವು ಮಾತುಗಳಲ್ಲಿ ಹಿಂದಿನ ಕಾಲದ ಹಲವು ರೀತಿರಿವಾಜುಗಳು ಹುದುಗಿರುವುದನ್ನು ಕಾಣಬಹುದು. ಅವೆಷ್ಟೋ ಗಾದೆಯ ಮಾತು, ಲಲ್ಲೆನುಡಿಗಳನ್ನು ಅದಕ್ಕಾಗಿ ಉದಾಹರಿಸಲೂಬಹುದು. ಆ ಸಾಹಿತ್ಯವು ತಾನು ಮೂಡಿಬಂದ ಕಾಲವನ್ನು ನಿರ್ದಿಷ್ಟಪಡಿಸದಿದ್ದರೂ ತನ್ನ ಕಾಲದ ರೀತಿ ರಿವಾಜುಗಳ ಬಗೆಗಳನ್ನು ಬಯಲಿಗೆ ತಂದಿರಿಸುವದು. ಇದೊಂದು ಲಲ್ಲೆನುಡಿ-

ಆನೆ ಬಂತು ಆನೆ! ಯಾವೂರ ಆನೆ?
ವಿಜಾಪುರದ ಆನೆ! ಇಲ್ಲಿಗೇಕೆ ಬಂತು?
ಹಾದಿ ತಪ್ಪಿ ಬಂತು
ಹಾದಿಗೊಂದು ದುಡ್ಡು
ಬೀದಿಗೊಂದು ದುಡ್ಡು
ಅದೇ ದುಡ್ಡು ಕೊಟ್ಟು
ಸೇರು ಕೊಬ್ಬರಿ ತಂದು
ಲಟಲಟ ಮುರಿದು
ಚುಕ್ಕೋಳಕಯ್ಯಾಗ ಕೊಟ್ಟೆ ||

ರಕ್ಕಸಗಿ-ತಂಗಡಗಿ ಕಾಳಗದಲ್ಲಿ ವಿಜಯನಗರದ ಅರಸನಿಗೆ ಸೋಲಾಗದು, ಆತನ ರಾಜಧಾನಿಯನ್ನು ಸುಲಿದು, ಅವೆಷ್ಟೋ ಆನೆಗಳ ಮೇಲೆ ಆ ಸಂಪತ್ತನ್ನು ಹೇರಿಕೊಂಡು ಆದಿಲಶಹನ ದಂಡಿನವರು ವಿಜಾಪುರದತ್ತ ಸಾಗಿಬಂದ ಸಂದರ್ಭವನ್ನು ಈ ಲಲ್ಲೆ ನುಡಿಯು ಸೂಚಿಸುತ್ತದೆಂದು ಹೇಳಬಹುದಾಗಿದೆ. ವಿಜಯನಗರದ ಅಪಾರಸಂಪತ್ತನ್ನು ದೋಚಿ, ಅಸಂಖ್ಯ ಆನೆಗಳ ಮೇಲೆ ಹೇರಿಕೊಂಡು ಹೊರಟಾಗ, ಅವೆಷ್ಟೋ ಆನೆಗಳು ತಪ್ಪಿಸಿಕೊಂಡು ಒಳನಾಡಿನಲ್ಲಿ ಹಾಯ್ದು ಹೋದವು. ಅದನ್ನು ಕಂಡು ಹಳ್ಳಿಗರು ಬೆರಗು ಬಿಟ್ಟು-ಆನೆ ಬಂತು ಆನೆ ಎಂದು ಉದ್ಗರಿಸಿದಾಗ “ಯಾವೂರ ಆನೆ, ಇಲ್ಲಿಗೇಕೆ ಬಂತು” ಎಂಬ ಪ್ರಶ್ನೆಗಳು ಕ್ರಮವಾಗಿ ಹೊರಡುವುದಾಗಲಿ, ಅದನ್ನು ತಿಳಿದವರು ಸರಿಯಾದ ಉತ್ತರ ಹೇಳುವುದಾಗಲಿ ಅರಿದಲ್ಲ ಆನೆಯ ಮೇಲೆ ಹೇರಿದ ನಾಣ್ಯಗಳು ಅಲ್ಲೊಂದು, ಇಲ್ಲೊಂದು ಬಿದ್ದರೆ, ಅದು ಇನ್ನಾರಿಗೋ ಸಿಗುವುದು ವಾಸ್ತವಿಕವಲ್ಲವೇ? ಸಿಕ್ಕವರದಾದ ಆ ನಾಣ್ಯವನ್ನು ಅವರು ವಿನಿಯೋಗಿಸುವುದು ಕ್ರಮ ಪ್ರಾಪ್ತವಲ್ಲವೇ? ಈ ಲಲ್ಲೆ ನುಡಿಯಿಂದ ಕಂಡುಬಂದ ಐತಿಹಾಸಿಕ ಅಂಶಗಳೆಂದರೆ-

೧. ದುಡ್ಡು ಎಂಬ ನಾಣ್ಯ ಆಗಿನ ಕಾಲದಲ್ಲಿ ಬಳಕೆಯಲ್ಲಿತ್ತು.

೨. ದುಡ್ಡಿಗೆ ಸೇರು ಕೊಬ್ಬರಿ ಸಿಗುತ್ತಿತ್ತು.

೩. ಹಳ್ಳಿಗರಿಗೆ ಕೊಬ್ಬರಿ ಅತಿ ಪ್ರಮುಖವಾದ ಹಾಗೂ ಪ್ರಿಯವಾದ ತಿನಿಸಾಗಿತ್ತು.

೪. ಬೆಳೆಯುವ ಮಕ್ಕಳಿಗೆ ಕೊಬ್ಬರಿ ತಿನ್ನಿಸುವುದು ರೂಢವಾಗಿತ್ತು.

ದುಡ್ಡು ತಾಮ್ರದಿಂದ ಮಾಡಿದ ನಾಣ್ಯವೆಂಬುದು ಸ್ಪಷ್ಟ. ಅದಕ್ಕೆ “ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಕೆಡಿಸಿತು” ಎಂಬ ಗಾದೆ ಸಾಕ್ಷಿಯಾಗಿದೆ. ಬೆಳ್ಳಿಯದಲ್ಲ ಬಂಗಾರದ್ದಲ್ಲ, ತಾಮ್ರದ ದುಡ್ಡು ಅಂದಾಗ ಅದು ಕನಿಷ್ಟ ದರ್ಜೆಯ ನಾಣ್ಯವೆಂದತಾಯ್ತು. ಅಂಥ ಕನಿಷ್ಟ ದರ್ಜೆಯ ನಾಣ್ಯದ ಸಲುವಾಗಿ ತಾಯಿ ಮಕ್ಕಳಲ್ಲಿರುವ ಕರುಳಿನ ಸಂಬಂಧದಂಥ ಸ್ವಾಭಾವಿಕವೂ ಅತಿ ಶ್ರೇಷ್ಠವೂ ಆದ ಬದುಕು ಕೆಡವದುಂಟು. ತಾಯಿ ಮಕ್ಕಳ ಅಕ್ಕರೆಗೂ ಅರೆದಾಟ ಹಚ್ಚಬಲ್ಲ ತಾಮ್ರದ ದುಡ್ಡು, ಉಳಿದ ವ್ಯವಹಾರಿಕ ಸಂಬಂಧವನ್ನು ಮಣ್ಣುಗೂಡಿಸುವುದರಲ್ಲಿ ಆಶ್ಚರ್ಯವೇನು? ಇನ್ನೂ ಹೇಳಿ ಪ್ರತಿಫಲವನ್ನೇ ಉದ್ದೇಶವಾಗಿರಿಸಿಕೊಂಡ ಸಂಬಂಧವನ್ನು ಕ್ಷಣದಲ್ಲಿಯೇ ಕತ್ತರಿಸಿ ಹಾಕುವುದು ಅಗಾಧವೇನಲ್ಲ.

ಕನಿಷ್ಠ ನಾಣ್ಯವೆನಿಸುವ ದುಡ್ಡಿಗಿಂತಲೂ ನಿಕೃಷ್ಟವಾದ ನಾಣ್ಯಗಳಿದ್ದವೆಂದು ಹಿಂದಿನ ಶಬ್ದಗಳು ಹೇಳಿಕೊಡುತ್ತವೆ. ದಮಡಿ, ದುಗ್ಗಾಣಿ, ಪೈ ಮುಂತಾದವುಗಳೆಲ್ಲ ದುಡ್ಡಿನ ವಿಭಾಗಗಳಾಗಿವೆ. ಇವುಗಳಲ್ಲಿ ದುಡ್ಡೇ ಹೆಚ್ಚಿನ ನಾಣ್ಯ.

ವೈಧವ್ಯಕ್ಕೀಡಾದ ಹೆಣ್ಣಿಗೆ ರಂಡೆಮುಂಡೆಯೆಂದು ಕನ್ನಡದಲ್ಲಿ ಹೆಸರಿದೆ. ಅಂಥ ವಿಧವೆ ಯಾವನೋ ವಿಧುರನನ್ನು ಹೊಂದಿಕೊಂಡಿರಬಹುದು. ಈಗ ಆ ರಂಡೆಮುಂಡೆ ಸೂಳೆಯೆನ್ನುವ ಅರ್ಥದಲ್ಲಿ ರಂಡೆಯೆನಿಸುವಳು. ಎಲ್ಲ ರಂಡೆಯರೂ ಶ್ರೀ ಮಾಸ್ತಿಯವರ ಒಂದು ಕಾವ್ಯ ವಸ್ತುವಾದ “ಗೌಡರ ಮಲ್ಲಿ”ಯಂತಿರುವುದು ಸಾಧ್ಯವಿಲ್ಲ. ವಿಧುರ-ವಿಧವೆಯರು ಉಡಿಕೆಯ ವಿಧಾನದಿಂದ ಗಂಡ-ಹೆಂಡಿರೆನಿಸುವರು. ಉಡಿಕೆ ಬಹುತರವಾಗಿ ಸಗೋತ್ರ ಸಂಪ್ರದಾಯ ಸಗೋತ್ರವಲ್ಲದ ವಿಧುರ-ವಿಧವೆಯರು ಉಡಿಕೆಯನ್ನು ಅನುಸರಿಸಲಾರರೆಂದು ತೋರುತ್ತದೆ. ಅವರ ಸಂಬಂಧವು ರಂಡೆ ಮಿಂಡ ಎನಿಸಿಕೊಳ್ಳುವದು. ಈ ರಂಡೆ-ಮಿಂಡ ಸಂಬಂಧವು ಸ್ಥಿರವಾಗಿ ನಿಲ್ಲುವ ಸಂಭವ ತೀರ ಕಡಿಮೆ. ಅದು ಮುರಿದು ಹೋದಾಗ ರಂಡೆಗೆ ಬೇರೊಬ್ಬ ಮಿಂಡನನ್ನು ಆಶ್ರಯಿಸಬೇಕಾಗುವದು. ಮಿಂಡನೂ ಬೇರೋಬ್ಬ ರಂಡೆಯನ್ನು ಹೊಂದಿಕೊಂಡಿರಲೂಬಹುದು. ಹೀಗೆ ತಾಳತಪ್ಪಿ ರಂಡೆಮಿಂಡರಿಬ್ಬರೂ ಸಾಗುತ್ತಿದ್ದರೂ ಮಿಂಡನ ಮರ್ಯಾದೆಗೆ ಮುಕ್ಕು ಬರಲಾರದು. ಅಥವಾ ಬರಬೇಕಾದಷ್ಟು ಮುಕ್ಕು ಬರಲಿಕ್ಕಿಲ್ಲ. ಅದಕ್ಕೆ ಅವನು ಗಂಡಸಾಗಿರುವುದೇ ಕಾರಣವಿರಬಹುದು. ಆದರೆ ಗರ್ಭಕೋಶವನ್ನು ಪಡೆದುಬಂದ ಹೆಣ್ಣು ರಂಡೆಯಾಗಿ ದಿನಗಳೆದಂತೆ ಅಗ್ಗದವಳಾಗುವಳು, ದುಗ್ಗಾಣಿ ರಂಡೆಯೆನಿಸುವಳು ಸಾಮಾಜಿಕರ ಅದಾವ ಅವಕೃಪೆಗೋರೋಷಕ್ಕೋ ಈಡಾಗಿ ಶಿಕ್ಷಾರ್ಹಳಾಗುವಳು. ಆಕೆಗೆ ಅದಾವ ಶಿಕ್ಷೆ? ಆಕೆಯ ದರ್ಜೆಗೆ ತಕ್ಕಂತೆ ಅನೇಕ ಶಿಕಷೆಗಳಿರಬಹುದು. ಅವುಗಳಲ್ಲಿ ಆಕೆಯ ತಲೆಬೋಳಿಸುವ ಶಿಕ್ಷೆಯೂ ಒಂದಾಗಿಸಿದೆ ಯೆನ್ನಬಹುದು.

“ದುಗ್ಗಾಣಿ ರಂಡೆಗೆ ದುಡ್ಡು ಕೊಟ್ಟು ತಲೆ ಬೋಳಿಸಿದರು”

ಹೆಣ್ಮಕ್ಕಳಿಗೆ ತಲೆಬೋಳಿಸುವದೆಂದರೆ ಅವಮಾನದ ಪರಮಾವಧಿ. ಆದರೆ ದುಗ್ಗಾಣಿ ರಂಡೆಗೆ ತಲೆಬೋಳಿಸುವುದು ಸಹ ಅವಮಾನದಲ್ಲಿಯೂ ಒಂದು ಮರ್ಯಾದೆಯೇನೋ. ತೀರ ಕನಿಷ್ಠ ದರ್ಜೆಯವಳೆನಿಸಿದ ದುಗ್ಗಾಣಿ ರಂಡೆ ಅಂಥವಳ ತಲೆಯನ್ನು ಬೋಳಿಸುವುದಕ್ಕೆ ಇಡಿಯ ದುಡ್ಡು ಖರ್ಚು ಮಾಡುವುದೇ? ಅದು ಹಣದ ಅಪವ್ಯಯ; ಶಿಕ್ಷೆಯಿತ್ತ ಮಹಾ ಜನರಿಗೂ ಅವಮಾನ.

ಅಂದಿನ ಕಾಲದಲ್ಲಿ ಕ್ಷೌರಿಕರು ತಲೆಬೋಳಿಸುವುದಕ್ಕೆ ಒಂದು ದುಡ್ಡು ತೆಗೆದುಕೊಳ್ಳುತ್ತಿದ್ದರೆಂದು ಈ ಗಾದೆಯ ಮಾತಿನಲ್ಲಿ ಸೂಚ್ಯವಾಗಿದೆ. ದುಡ್ಡಿಗೆ ಸೇರು ಕೊಬ್ಬರಿ ಸಿಗುವಾಗ, ತಲೆಬೋಳಿಸುವುದಕ್ಕೆ ಹಡಪದವನಿಗೆ ಒಂದು ದುಡ್ಡು ಕೊಡುವುದೇನು ಕಡಿಮೆಯೇ?

ದುಗ್ಗಾಣಿ ರಂಡೆಗೆ ವಿಧಿಸಲು ಬೇರೆ ಶಿಕ್ಷೆಯಿರಲಿಲ್ಲವೇ? ಇದ್ದೀತು! ಆಕೆಯನ್ನು ಊರು ಬಿಡಿಸಿ ಕಳಿಸಿದವರಾಗುತ್ತಿತ್ತು. ಹಾಗೆ ಮಾಡಲು ಸಾಧ್ಯವಿತ್ತೇ?

“ಊರು ಸಾಕಾಯ್ತು ಗೌಡನೂ ಬೇಡವೆಂದ.”

ಎಂಬ ಗಾದೆಯು ಗೌಡನಿಗೆ ಆ ಅಧಿಕಾರವಿತ್ತೆಂದು ಹೇಳುತ್ತದೆ. ಗೌಡನು –‘ಬೇಡ ನೀನು ಈ ಊರಲ್ಲಿರಬೇಡ” ಎಂದು ಹೇಳಿದರೆ ಸಾಕಾಗುತ್ತಿತ್ತು. ಆದರೆ ಆ ದುಗ್ಗಾಣಿ ರಂಡೆ ಊರು ಬಿಟ್ಟು ಹೋಗುವುದಕ್ಕೆ ಸಮ್ಮತಿಸದಿದ್ದಾಗ, ದುಡ್ಡು ಕೊಟ್ಟು ತಲೆಬೋಳಿಸುವ ಶಿಕ್ಷೆ ವಿಧಿಸಬೇಕಾಗುವುದು ಅನಿವಾರ್ಯ.

***

ಊರಿಗೇ ಬೆಂಕಿಹಚ್ಚುವ ಕೆಲಸವನ್ನು ಮಾಡುವವನಿಗೆ ಗೌಡನು ಊರಲ್ಲಿರಬೇಡವೆಂದು ಹೇಳಬಲ್ಲನು. ಆದರೆ ಹನುಮಪ್ಪನನ್ನು ಊರು ಬಿಡಿಸಿ ಹೊರಹಾಕುವುದು ಸಾಧ್ಯವೇ ಇಲ್ಲ. ಯಾಕೆಂದರೆ ಆತನು ಮೊದಲೇ ಊರ ಹೊರಗೆ ಬೀಡುಬಿಟ್ಟಿದ್ದಾನೆ. ಊರಿಗೆ ಬೆಂಕಿ ಹಚ್ಚುವ ಕೆಲಸವನ್ನೂ ಆತನು ಮಾಡುವದಿಲ್ಲ. ಮತ್ತು ಊರಿಗೆ ಬೆಂಕಿ ಹತ್ತಿದಾಗ ಅದನ್ನು ಆರಿಸುವಗೊಡವೆಗೂ ಹೋಗುವದಿಲ್ಲ. “ಊರು ಸುಟ್ಟರೂ ಹನುಮಪ್ಪ ಹೊರಗೇ” ಅಂತೆ. ಹನುಮಪ್ಪನ ಗುಡಿ ನಡು ಊರಲ್ಲಿ ಇರಬಾರದಂತೆ.

ಊರಿಗೊಬ್ಬ ಹನುಮಪ್ಪನಿರುವಂತೆ, ಊರಿದ್ದಲ್ಲಿ ಒಂದು ಹೊಲಗೇರಿಯಿರುವುದು ವಾಡಿಕೆಯಾಗಿದೆ. ಊರಿನ ಒಂದು ಕೆರೆಯೇ ಆಗಿದ್ದರೂ ಅದು ಹೊಲಗೇರಿ. ತನ್ನ ಹೊಲೆತನದ ಕಾರಣದಿಂದ ಅದು ಹೊರಕೇರಿಯಾಗಿ ನಿಲ್ಲುವುದು ಆಶ್ಚರ್ಯವಲ್ಲ. ಹೊಲೆಯು ಹೊರಕೇರಿಯಲ್ಲಿಯೇ ಹಚ್ಚಿಗಿರಬೇಕೆಂಬ ನಿರ್ಬಂಧವಿಲ್ಲ. ಅದು ಊರಲ್ಲಿ ಸಹ ಹೆಚ್ಚಾಗಿರಬಹುದು. ಹೊರಕೇರಿಗೇ ಹೊಲಗೇರಿಯೆನಿಸಿಕೊಳ್ಳಲು ಹೆಚ್ಚಿನ ಹಕ್ಕಿದೆ. ಹೊಲಗೇರಿಗೆ ಹೊಲೆಯ ಕಾರಣವಲ್ಲದೇ ಹೊಲೆಯರೆಂಬುವರು ಕಾರಣವೆನಿಸಲಾರರು.

ಅಕ್ಕನ ಬಂಗಾರವನ್ನು ಸಹ ಬಿಡದೆ ದೋಚುವ ಅಕ್ಕಸಾಲಿಯು ಊರಲ್ಲಿರದ ಹೊಲಗೇರಿಯಲ್ಲಿ ಇರುವನೇ? ಹೊಲೆಯರು ಊರೊಳಗಿಲ್ಲವೇನಯ್ಯ-ಎಂದು ಶರಣರು, ದಾಸರು ಅದೇಕೇ ಕೇಳಿದರು? ಕದಿಯುವವನು ಹೊಲೆಯನೇಕಲ್ಲ? ಹರೆಯದ ಕಾಲಕ್ಕೆ ಹಾದರ ಮಾಡಿ, ಮುಪ್ಪಿನ ಕಾಲಕ್ಕೆ ಆಚಾರ ಹೇಳುವವರು ಊರಲ್ಲಿಯೂ ಇರಬಹುದು; ಹೊಲಗೇರಿಯಲ್ಲಿಯೂ ಇರಬಹುದು; ಅವರಿಗೆ ಊರಲ್ಲಿ ಸಾಕಷ್ಟು ಮನ್ನಣೆಯಿದೆ. ಆದ್ದರಿಂದ ಅವರೇಕೇ ಊರುಬಿಟ್ಟು ಹೊಲಗೇರಿ ಸೇರಿಕೊಳ್ಳಬೇಕು. ಹೊಲೆ, ಹೊಲೆಗೆಲಸಗಳ ಕಾರಣದಿಂದ ಹೊಲೆಯರೆನಿಸಿಕೊಂಡು, ಹೊಲಗೇರಿಯೆಂಬ ಹೊರಕೇರಿಯಲ್ಲಿ ನೆಲೆಸಿದವರಿಗೂ ಒಬ್ಬ ದೇವರಿದ್ದಾನೆ; ದೈವತ್ವವಿದೆ. ದೈವತ್ವು “ಪತ್ರಂ ಪುಷ್ಪಂ ಫಲಂ ತೋಯಂ” ಇವುಗಳಿಂದ ಮಾತ್ರ ಸಂತುಷ್ಟವಾಗದೆ ಬಲಿದಾನ ರೂಪದಿಂದ ಕುರಿ, ಕೋಳಿ, ಕೋಣಗಳನ್ನು ಬೇಡುತ್ತದೆ. ಹೆಣ್ಣುಗಳನ್ನು ದೇವರ ಹೆಸರಿನಲ್ಲಿ ಬಿಡಲು ಹೇಳುತ್ತದೆ. ಹಾಗೆ ದೇವದಾಸಿ ಹೆಣ್ಣುಗಳನ್ನು ಅವಿವಾಹಿತವಾಗಿರಿಸಿ ಸೂಳೆತನಕ್ಕೆ ದಾರಿ ಮಾಡಿಕೊಡುವ ಸಂಪ್ರದಾಯ ಹೊರಕೇರಿಯಲ್ಲಿ ಇಂದಿಗೂ ಒಂದಿಷ್ಟು ಕಾಣಸಿಗುತ್ತದೆ. ಸೂಳೆತನಕ್ಕೆ ಸುಗ್ಗಿಯ ಕಾಲವೆಂದರೆ ಪ್ರಾಯ ಆ ಹರೆಯವೇ. ಸರಿದುಹೋದ ಮೇಲೆ, ಸೂಳೆ ಸಂಪೂರ್ಣವಾಗಿ ದೇವರನ್ನೇ ಆಶ್ರಯಿಸುತ್ತಾಳೆ. ಮುಪ್ಪಿನಲ್ಲಿ ಕುಳಿತು ಉಣ್ಣುವುದಕ್ಕೆ ಅನುಕೂಲವಾಗುವಂತೆ ಆಕೆ ಗಳಿಸಿಟ್ಟುಕೊಂಡಿರುವದಿಲ್ಲ. “ಹೊಲೆಯನ ಸುಗ್ಗಿ ಒಲೆಯ ಮೇಲೆ” ಎನ್ನುವ ಮಾತು ಗಂಡಿಗೆ ಅನ್ವಯಿಸುವಂತೆ, ಹೆಣ್ಣಿಗೂ ಅನ್ವಯಿಸುತ್ತದೆ. ಆದ್ದರಿಂದ ಮುಪ್ಪಿನ ಕಾಲಕ್ಕೆ ಸೂಳೆಯು, ಎಲ್ಲಮ್ಮನ ಜಗ ಹೊತ್ತು, ಚೌಡಿಕಿ ಬಾರಿಸುವ ಜೋಗಿತಿಯಾಗದೆ ಗತ್ಯಂತರವಿಲ್ಲ. ಜೋಗಿತಿಯರು ಹೊರಕೇರಿಯಲ್ಲಿಯೂ ಕಂಡುಬರುತ್ತಾರೆ. ಅವರು ಊರು ಬಿಟ್ಟು ಬೇರೂರಿಗೂ ಬೇಡಿಕೊಳ್ಳುವುದಕ್ಕೆ ಹೋಗುತ್ತಾರೆ.

“ಊರಲ್ಲಿರಬೇಡ” ಎಂದು ಗೌಡನು ಗಟ್ಟಿಸಿ ಹೇಳಿದರೆ ಅದು ಸುಗ್ರೀವಾಜ್ಞೆಯಾಗಿಯೇ ಪರಿಣಮಿಸುತ್ತದೆ. ಅದು ಗೌಡನ ಕ್ಷಾತ್ರವೃತ್ತಿಯೆಂದು ಹೇಳಬಹುದು. ದಂಡಧಾರಿಯಾದ ಗೌಡನ ಪಾತ್ರದೊಡನೆ, ಲೇಖನಿಧಾರಿಯಾದ ಕುಲಕರ್ಣಿಯ ಪಾತ್ರವೂ ಅಡಿಗಡಿಗೆ ಕಾಣಿಸಿಕೊಳ್ಳುವದು. ಗೌಡನಲ್ಲಿ ಸರ್ವಾಧಿಕಾರತ್ವದ ಸತ್ವವು ತುಂಬಿಕೊಂಡಿದ್ದರೆ, ಕುಲಕರ್ಣಿಯಲ್ಲಿ “ಕಳೆನೋಡಿ ಕೇರುಹಾಕುವ ಕಲೆಗೆ ಅಳವಟ್ಟಿರುತ್ತದೆ. ಕುಲಕರ್ಣಿ ಹೆಚ್ಚಾಗಿ ಬ್ರಾಹ್ಮಣನಾಗಿದ್ದರೂ ಪ್ರಾಚೀನರು ಹಾಕಿಕೊಟ್ಟ ದಾನ ಸ್ವೀಕಾರದ ಅಧಿಕಾರವನ್ನು ತುಂಬ ಮಾರ್ಪಡಿಸಿಕೊಂಡಿದ್ದು ಕಂಡುಬರುತ್ತದೆ. ಕರೆದುಕೊಟ್ಟಿದ್ದನ್ನು ದಾನವೆಂದು ಸ್ವೀಕರಿಸಲು ಅಡ್ಡಿಯಿಲ್ಲವಾದರೆ, ಬೇಡಿ ಇಸಗೊಳ್ಳುವುದಕ್ಕೆ ದಾನವೆಂದು ಏಕೆ ಅನ್ನಬಾರದು? ಇನ್ನೂ ಮುಂದುವರಿದು ಇಸಗೊಳ್ಳುವ ಬದಲಾಗಿ ಕಸಗೊಳ್ಳುವ ಕಾಯಕ ನಡೆದಿದೆಯೆಂದರೂ ಅದು ಒಂದು ದಾನದ ಬಗೆಯೆಂದೇ ಬಗೆಯಲಾಗುತ್ತದೆ.

“ಕುಳಿತುಕೊಳ್ಳಲಿಕ್ಕಾಗದೆ
ಕುಲಕರ್ಣಿಯ ಮನೆಗೆ ಹೋದರೆ
ಕುಳ್ಳಿರಿಸಿ ಮೂರು ರೂಪಾಯಿ
ತೆಗೊಂಡನು!”

ಬಡವರಿಗೆ ಕಾಯ್ದೆ ಕಾನೂನುಗಳ ಚಕ್ರವ್ಯೂಹದ ತೊಡಕನ್ನು ವಿವರಿಸಿ, ಅವರು ಬೆದರಿಕೊಳ್ಳುವಂತೆ, ಮುದುರಿಕೊಳ್ಳುಂತೆ ಆ ದಾರಿಯಲ್ಲಿ ತುಂಬ ಯುಕ್ತವಂತಿಕೆಯನ್ನು ಗಳಿಸಿಕೊಂಡಿದ್ದಾನೆ. ಕುಲಕರ್ಣಿ ಮೂರು ರೂಪಾಯಿ ಸಿಕ್ಕರೂ ಅವನಿಗೆ ಸಂತೋಷವೇ.

ಗೌಡನ ಅಧಿಕಾರಕ್ಕೆ ಸಾಕ್ಷರತೆಯಾಗಲಿ, ಶಿಕ್ಷಣವಾಗಲಿ ಅನಿವಾರ್ಯವಲ್ಲ, ಆದರೆ ಕುಲಕರ್ಣಿಯ ಯುಕ್ತಿವಂತಿಕೆಗೆ ಸಾಕ್ಷರತೆಯೂ ಬೇಕು. ಹೀಗಿದ್ದರೂ ಕೆಲವರಿಗೆ ಯುಕ್ತಿಯು ಸ್ವಾಭಾವಿಕವಾಗಿದೆ. ಅಕ್ಕಸಾಲಿ, ಗಾಣಿಗ ಇವರ ಹೆಸರನ್ನಿಲ್ಲಿ ಉದಾಹರಿಸಬಹುದು. “ಅಕ್ಕ ಸಾಲಿಯ ಮಗುವು ಚಿಕ್ಕದೆನಬೇಡ; ಚಿಕ್ಕಾಡು ಇದ್ದಂತೆ. ಗಾಣಿಗನಂತೂ ದೇವರು ಮನೆಗೆ ಬಂದರೂ ಕೆಲಹೊತ್ತು ಗಾಣವಾಡಿಸುವ ಕೆಲಸವನ್ನು ಮಾಡಿಸಿಕೊಳ್ಳದೆ ಬಿಡುವುದಿಲ್ಲ.”

ಅತಿರಥ ಮಹಾರಥರ ಸಾಲಿನಲ್ಲಿ ಸಾವಿರ ಕುದುರೆಯ ಸರದಾರನೂ ನಿಲ್ಲುವನು. ಅವನ ಹಿರಿಮೆಯೊಡನೆ ಅವನ ಕಿರಿಮೆಯನ್ನೂ ತೋರಿಸಿಕೊಟ್ಟಿದ್ದುಂಟು. “ಸಾವಿರ ಕುದುರೆಯ ಸರದಾರ; ಮನೆಯ ಹೆಂಡತಿಗೆ ಪಿಂಜಾರ” ಎಂಬ ಗಾದೆಯಲ್ಲಿ ಸೂಚಿತವಾದಂತೆ, ನೆಯ ಹೊರಗೆ ಅದೆಂಥ ದೊಡ್ಡತನವನ್ನು ಮೆರೆದರೂ, ಮನೆವಾರ್ತೆಯಲ್ಲಿ ಕೀಳು-ಕಿಗ್ಗಳವೆನ್ನದೆ ಕಿರಿತನದ ಪಾತ್ರವಹಿಸುತ್ತಾನೆ; ವಹಿಸಬೇಕು- ಎಂದು ಗಾದೆಯ ಮಾತು ಘೋಷಿಸುತ್ತದೆ.

“ಸಾವಿರ ಸುದುರೆಯ ಸರದಾರ!
ಮನೆಯ ಹೆಂಡತಿಗೆ ಪಂಜಾರ!!”

ಸಾವಿರ ಕುದುರೆಯ ಸರದಾರನ ಹೆಂಡತಿಯಾಗಿದ್ದರೂ ಆಕೆ ಮನೆಯಲ್ಲಿ ಆತ್ಮ ತುಷ್ಟಿಗಾಗಿಯೋ ಮನೆತನದ ಮೇಲ್ಮೆಗಾಗಿ ನೂಲುವ ಕೆಲಸವನ್ನು ವಹಿಸಿಕೊಳ್ಳುತ್ತಾಳೆ. ನೂಲುವ ಕಲೆಯಲ್ಲಿ ಪ್ರವೀಣತೆ ಬರಬೇಕಾದರೆ, ಮನೆಯಲ್ಲಿಯೇ ಹಂಜಮಾಡಿಕೊಳ್ಳುವುದು ಅಪರಿಹಾರ್ಯವಾಗಿದೆ. ಅರಳೆ ಹಿಂಜಿ, ಹೊಡೆದು, ಹಂಜಿಮಾಡಿಕೊಳ್ಳುವುದು ಗಂಡುಗೆಲಸವೇ ಆಗಿದೆ. ಆ ಕೆಲಸವನ್ನು ಗಂಡನಾದವನು ನಿರ್ವಹಿಸಿ ಸಹಧರ್ಮಿಣಿಗೆ ನೆರವಾಗಬೇಕಾಗುವದು. ಹಾಗೆ ಪರಸ್ಪರ ಸಹಕರಿಸಿ, ನೂಲು ತೆಗೆಯುತ್ತಿದ್ದರೆಂದೇ ಸೂಕ್ಷ್ಮಾತಿಸೂಕ್ಷ್ಮವಾದ ಅರಿವೆ ಸಿದ್ಧಗೊಳಿಸಲು ಅಂದು ಸಾಧ್ಯವಾಯಿತು.

ಹೆಂಡತಿಯ ಮುಂದೆ ಮೂಗು ತಿಕ್ಕುವ ಮೂಗಿಲಿಗಳ ಸಲುವಾಗಿಯೂ ಈ ಮಾತು ಹೇಳಿರಬಹುದಾಗಿದೆಯೆಂದು ಕೆಲವರು ವಾದಿಸಲಿಕ್ಕೆ ಆಸ್ಪದವಿದೆ. ಆದರೆ ಪಂಜಾರನಾಗಿ, ನೂಲುವ ಕೆಲಸದಲ್ಲಿ ಹೆಂಡತಿಗೆ ಸಹಾಯಕನಾಗುವುದು ಸಾವಿರ ಕುದುರೆಯ ಸರದಾರನಿಗೂ ತಪ್ಪಿಸಲಿಕ್ಕಾಗದ ಕರ್ತವ್ಯವಾಗಿದೆ ಎನ್ನುವ ಮಾತೇ ಸೂಕ್ತವೆನಿಸುತ್ತದೆ.