ಏನು ಉಣ್ಣಲಿ ಎಷ್ಟು ಉಣ್ಣಲಿ ಎಂದು ಯಾವಾಗಲೂ ಗೇನಿಸುವವರೇ ಸಾಮಾನ್ಯ ಜೀವಿಗಳೆಂದು ಹೇಳುತ್ತಾರೆ. ಇಂಥ ಸಾಮಾನ್ಯರಲ್ಲಿಯೂ ಅಸಾಮಾನ್ಯರಾಗಿ ಬಾಳುವವರೇ ನಮ್ಮ ಜನಪದ. ಯಾಕೆಂದರೆ ಅವರ ಮನಸ್ಸು ಹೃದಯದಲ್ಲಿ ನಿಲ್ಲಲು ತವಕಿಸುತ್ತದೆ. ಅಂತೆಯೇ ಅವರಲ್ಲಿ ಆತ್ಮಜಾಗೃತಿಯ ಮಿಸುಕು ಕಂಡುಬರುತ್ತದೆ.

ನಮ್ಮ ಜನಪದವೆಂದರೆ ನಿಸರ್ಗದ ಮಡಿಲಲ್ಲಿ ಮಡಗಿರುವ ಮುಗ್ಧ ಮಗು. ಭೂಮಿ ತಾಯಿಯ ಚೊಚ್ಚಿಲ ಸಂತಾನ. ಅದು ಕಣ್ಣುತೆರೆದು ಚೆಲುವಿನ ರಾಸಿಯನ್ನು ಕಾಣುತ್ತದೆ. ಕಿವಿಗೊಟ್ಟು ಒಲವಿನ ದನಿಯನ್ನು ಕೇಳುತ್ತದೆ. ಅದೊಂದು ಆತ್ಮಜಾಗೃತಿಯ ಸಾಧನೆ. ದೈವಭಕ್ತಿ, ಬಂಧು ಪ್ರೀತಿ, ತನ್ನಂತೆ ಪರರ ಬಗೆಯುವ ಸ್ನೇಹ ಇವೇ ಅದರ ಆತ್ಮಜಾಗೃತಿಯ ಕುರಿಹುಗಳಾಗಿವೆ. ಆತ್ಮಜಾಗೃತಿಯು ಸುಪ್ತವ್ಯಕ್ತಿತ್ವವನ್ನು ಕೆರಳಿಸುತ್ತದೆ. ಋಷಿಯಂಶದ ಕವಿಮೊಗ್ಗೆಯನ್ನು ಅರಳಿಸುತ್ತದೆ. ಜನಸಾಮಾನ್ಯರೆಲ್ಲ ಒಂದು ವಿಧದಲ್ಲಿ ಕವಿಗಳೇ ಆಗಿದ್ದಾರೆ. ಕವಿತೆ ರಚಿಸುವ ಕವಿಗಳಿದ್ದಂತೆ, ಕವಿತೆ ಕೇಳುವ ಹಾಗೂ ಕವಿತೆ ಹಾಡುವ ಕವಿಗಳೂ ಇರುತ್ತಾರೆ. ಕವಿತೆಯಾಗಿ ಜೀವಿಸಬಲ್ಲ ಶುದ್ಧಕವಿಗಳೂ ಇದ್ದಾರೆ. ಇವರೆಲ್ಲರೂ ಒಂದೇ ದೇಟಿನ ಕಾಯಿಗಳು. ದೇವನ ದೇಟಿನ ಮಾವುಗಳು. ಅವುಗಳಲ್ಲಿ ಹೀಚು, ಮಿಡಿ, ಕಾಯಿ, ಹಣ್ಣುಗಳಿದ್ದರೆ ಆಶ್ಚರ್ಯವೇನು? ಅಂತೆಯೇ ಹೇಳಲಾಗುತ್ತದೆ. “ಕಾವ್ಯವನ್ನು ಓದುವುದು ಉತ್ತಮ’ ಕಾವ್ಯವನ್ನು ಬರೆಯುವುದು ಅತ್ಯುತ್ತಮ; ಕಾವ್ಯವನ್ನು ಜೀವಿಸುವುದು ಸರ್ವೋತ್ತಮ.”

ಆತ್ಮಜಾಗೃತಿಯ ದಾರಿಯಲ್ಲಿ ಅಡಿಯಿಟ್ಟ ಜನಪದವು ಹೃದಯದಲ್ಲಿ ಮನವಿಟ್ಟು ಏಕಾಗ್ರತೆಯಲ್ಲಿ ಸತ್ಯವನ್ನು ಕಂಡಿತು; ಸೌಂದರ್ಯವನ್ನು ಉರಿಡಿತು ಸತ್ಯ ಸೌಂದರ್ಯಗಳು ಬೇರೆ ಬೇರೆ ಅಲ್ಲ, ಕಣ್ಣಿಗೆ ಸಹ್ಯವಾದದ್ದು ಮಾತ್ರ ಚೆಲುವೆಂದೂ, ಅಸಹ್ಯವಾದದ್ದೆಲ್ಲ ಅಸಡ್ಡಾಳವೆಂದೂ ನಾವು ಸಾಮಾನ್ಯವಾಗಿ ತಿಳಿಯುತ್ತೇವೆ. ಆದರೆ ದೃಷ್ಟಿಗೆ ನಿಲುಕುವುದಷ್ಟೇ ಚೆಲುವಾಗಿರದೆ, ಸೃಷ್ಟಿಯೊಳಗೆ ಅಡಕವಾಗುದುದೆಲ್ಲವೂ ಚೆಲುವೆಂದು ಬಲ್ಲವರು ಹೇಳುತ್ತಾರೆ. ಹೂವಿನೊಳಗಿನ ಮಕರಂದವನ್ನು ಹೀರಿಕೊಳ್ಳುವುದಕ್ಕೆ ಸಹಜ ಸಮರ್ಥವಾಗಿದೆ. ಅದು ಗಿಡಮರಗಳಂತೆ, ನದಿ-ತೊರವೆಗಳಂತೆ ಪ್ರಕೃತಿಯ ಭಾಗವಾಗಿ ಬಾಳುತ್ತಿರುವುದೇ ಅದಕ್ಕೆ ಕಾರಣವಾಗಿದೆ.

ಪ್ರಕೃತಿ ಸೌಂದರ್ಯದ ಕೆಲವಂಶ ಮಾತ್ರ ಪ್ರಕಟವಾಗಿ, ಉಳಿದುದೆಲ್ಲ ಸುಪ್ತವೋ, ಗುಪ್ತವೋ ಆಗಿದೆ. ತಾನು ಕಂಡ ಸೌಂದರ್ಯವು ಅಪೂರ್ಣವೆಂದು ಗುರುತಿಸಿ, ಜನಪದವು ತನ್ನ ಕಲ್ಪನೆಯ ಅಲಂಕಾರಗಳಿಂದ ಅದನ್ನು ಸಿಂಗಾರಗೊಳಿಸುವ ಎತ್ತುಗಡೆ ನಡೆಸುತ್ತದೆ. ಅಂತೆಯೇ ಶ್ರೀ ರವೀಂದ್ರನಾಥರು ಹೇಳುತ್ತಾರೆ. “ಓ ಹೆಣ್ಣೇ, ನೀನು ಅರ್ಧ ಚೆಲುವೆ ಮಾತ್ರ ಉಳಿದರ್ಧವನ್ನು ವಸ್ತ್ರಾಭರಣಗಳಿಂದ ನಾವು ಪೂರ್ಣಗೊಳಿಸುತ್ತೇವೆ.”

ಜನಸಮಾನ್ಯರು ನಿಸರ್ಗಕ್ಕೆ ಹತ್ತಿರದವರಾಗಿ ಹತ್ತಗಡೆಯವರಾಗಿ, ಸೃಷ್ಟಿಯ ಸಂಗಡಿಗರಾಗಿ ಸಂಗಾತಿಗರಾಗಿ ಬೆಳೆದು ಬಂದವರು. ಅದರ ಸೊಬಗನ್ನು ಕಂಡುಂಡು ತಣಿದು ತೇಗಿದವರು. ಮಳೆ ಸುರಿಯುವಾಗ ಆಸರಿಲ್ಲದ ಬಯಲಲ್ಲಿ. “ಕಳ್ಳೇ ಮಿರ್ಳಳೇ” ಆಡಿದವರು. ಕಣ್ಣಿಗೆ ಕತ್ತಲೆ ಕವಿಸುವ ಮಿಂಚಿನ ಬಲೆಗಳನ್ನು ಹರಡಿ, ಸಿಡಿಲೊಗೆಯುವ ಗದ್ದರಣೆ ಮೊಳಗುವಾಗ, ಒಳ್ಳೊಳ್ಳೆಯ ಬಂಟ ನಾಗರಿಕರು ಅಂಜಿ ಹೋರು ಸೇರುತ್ತಿರುವ ಸಮಯದಲ್ಲಿ ಮಣ್ಣಿನ ಮಕ್ಕಳು “ಗುಡುಗುಡು ಮುಕ್ತಯಾ ಬಂದ, ಸೆಜ್ಜೀ ರೊಟ್ಟಿ ತಂದ | ಮಾಡದಾಗ ಇಟ್ಟ, ಬೇಡಿದಾಗ ಕೊಟ್ಟ” ಎಂದು ಕೇಕೆ ಹಾಕುತ್ತ ಓಡಾಡಿದವರು ಮೈಕೊರೆಯುವ ಮಾಗಿಯ ಚಳಿಯಲ್ಲಿ, ಮುಗಿಲ ಮೇಲಿನ ಚಿಕ್ಕೆಗಳು ಕಣ್ಣುಚಿವುಟಿ ಮಾಡುವ ಸೂಚನೆಗೆ ಮೈಚಳಿಬಿಟ್ಟು ಮುಸುಕು ಹಾರಿಹೊದೆದವರು. ಬೇಸಿಗೆಯ ಉರಿಸಿಬಿಸಿಲಿಗೆ ಬಸವಳಿಯದೆ, ಬೇವಿಗೆ ಬೆಲ್ಲ ಬೆರಸಿ ತಣಿಯುವ ರಸಿಕರಾಗಿ, ಚಿಗುರಿ-ಹೊಗರುಗಳ ನೆರಳಲ್ಲಿ ಬರಿಮೈಯಲ್ಲಿ ನಿಂತವರು.

ಜನಪದವು ಹಮ್ಮಿಕೊಂಡ ಹಬ್ಬಹುಣ್ಣಿವೆಗಳಾಗಲಿ, ಕಲ್ಪಿಸಿಕೊಂಡ ಉತ್ಸವಾಮೋದಗಳಾಗಲಿ ಅವರ ಸೌಂದರ್ಯದೃಷ್ಟಿಗೆ ಸಾಕ್ಷಿಗಳಾಗಿವೆ. ತನ್ನ ಸಿಂಗಾರವಂತಿರಲಿ, ಜನಪದವು ತಾನು ಸಾಕಿದ ದನ ಪ್ರಾಣಿಗಳನ್ನು, ಕಟ್ಟಿಕೊಂಡ ಮನೆ-ಮಂದಿರಗಳನ್ನು ಸಿಂಗರಿಸುವ ಪರಿಯು ಅವರ ಸೌಂದರ್ಯ ಕಲ್ಪನೆಗೆ ಪಡಿಗನ್ನಡಿಯಾಗಿದೆ. ಕೆಸರಿನಿಂದ ಬಸವಣ್ಣ, ಗೌಡಿ, ಗಣಪಗಳನ್ನು ಮಾಡಿಕೊಂಡಂತೆ ಅವುಗಳನ್ನು ಗುಲಗಂಜಿ, ಕುಸುಬಿ, ಕರ್ಕಿ ಪತ್ರಿ-ಅರಳು ಮೊಗ್ಗೆಗಳಿಂದ ಸಿಂಗರಿಸಿ ಅದರ ಚೆಲುವನ್ನು ಇಮ್ಮಡಿಸುವ ತವಕ ಅವರ ಸೌಂದರ್ಯಾನುಭೂತಿಯನ್ನು ಪ್ರತಿಪಾದಿಸುತ್ತದೆ. ಹುಟ್ಟಿದ್ದು ಹಿಗ್ಗಿನಗಳಿಗೆ, ಸತ್ತಿದ್ದು ಕಳವಳದ ನಿಮಿಷ. ನವಜಾತ ಶಿಶುವನ್ನು ಒಂದು ವಿಧದ ಸಡಗರ ಸಂಗೀತಗಳೊಡನೆ ಬರಮಾಡಿಕೊಂಡಂತೆ, ಪರಲೋಕ ಪಯಣವನ್ನು ಇನ್ನೊಂದು ವಿಧದ ಸಡಗರದೊಡನೆ (ಅತ್ತರೂ ಹಾಡಿಹಾಡಿಕೊಂಡು) ದಿಮಡಿ ತಾಳಗಳೊಂದಿಗೆ ಭಜನೆ ಮಾಡುತ್ತ ನಿರ್ಮಾಣ ಮಹೋತ್ಸವ ಮಾಡುವುದು ನಮ್ಮವರ ಶೃಂಗಾರ ಪ್ರಿಯತಮೆ ಮಾದರಿ.

ತಾನು ಬದುಕಿದ ಸೌಂದರ್ಯ ವಿಲಾಸದ ಕಥೆಯನ್ನೋ ಚಿತ್ರವನ್ನೋ ಮಾರ್ಮಿಕವಾಗಿ, ಹೃದಯಸ್ಪರ್ಶಿಯಾಗಿ ಹಾಡುತ್ತ ಕಥಿಸುತ್ತ ಬಂದಿದೆ. ನಮ್ಮ ಜನಪದ, ಅದರ ಗೆರೆ-ಬಣ್ಣಗಳನ್ನೆಲ್ಲ ಜನಪದ ಸಾಹಿತ್ಯದಲ್ಲಿ ನಿಚ್ಚಳವಾಗಿ ಗುರುತಿಸಬಹುದು ಕಣ್ಣಿಗೆ ಸಹ್ಯವಾಗಿ, ಮನಕ್ಕೆ ಮೋದವಾಗಿ, ಹೃದಯಕ್ಕೆ ಆಕರ್ಷಕವಾಗುವ ಚೆಲುವಿನ ಮಿಂಚುರೇಖೆಗಳು ಆ ಸಾಹಿತ್ಯದ ತುಂಬ ಚೆಲ್ಲುವರಿದಿವೆ. ಜನಪದ ಸಾಹಿತ್ಯದಲ್ಲಿ ಹೆಣ್ಣಿನದು ಹಾರ್ದಿಕವಾದರೆ, ಗಂಡಿನದು ಮಾರ್ಮಿಕವಾಗಿ ಸ್ಥೂಲವಾಗಿದೆ ಹೇಳಬಹುದು. ಎದೆಯ ಅಪ್ಪುಗೆ ಒಂದಾದರೆ, ಬುದ್ಧಿಯ ಒಪ್ಪಿಗೆ ಇನ್ನೊಂದು. ವೀರಭದ್ರ ದೇವರ ಭವ್ಯ ಸೌಂದರ್ಯವನ್ನು ಹೆಣ್ಣು ಹೇಗೆ ಕಂಡಿತು ತಿಳಿಯುವಾ-

ಹಣೆಯ ಮ್ಯಾಲಿನ ಗಂಧ ಗಿಣಿರಾಮ ಕುಂತಂಗ
ಕರಿಯ ಕುಂದಲದ್ಹರಳ ಕಿವಿಯಾಗ ಇಟ್ಟಾನ
ಏಸೊಂದು ಸಿಂಗಾರ ಎಡಗೈಲಿ ಹಿಡಿದಾನ
ಚಳ್ಳುಂಗ್ರ ಚಿಮ್ಮೂತ ಕ್ವಾರ್ಮೀಸಿ ತಿದ್ದುತ

***

ಕಣಬಟ್ಟ ಕ್ವಾರ್ಮೀಸಿ ಕಂಡರಂಜಿಕಿ ಬರುವ
ಮಂಜಾನದಾಗ ನೆನೆದಾನ ಶ್ರೀ ವೀರಭದ್ರ

ಅದೇ ವೀರಭದ್ರ ದರ್ಶನವನ್ನು ಗಂಡು ಕಂಡು ರೀತಿ ಹೀಗದೆ-

ನಿಮ್ಮ ರಟ್ಟಿ ಹೊಟ್ಟಿ ಮಾಡಿಕುಟ್ಟಿ ಗಟ್ಟಿ ನೀವು ರಣದ ಒಳಗ ಮರದಾ,
ಮೈಕಟ್ಟಿಗಿಟ್ಟ ಭಾಳದಿಟ್ಟ ಸಿಟ್ಟ ನಿಮ್ಮ ಉಗ್ರ ಎಷ್ಟು ಉರದಾ||
ನಿಮ್ಮ ಹಸ್ತ ಶಿಸ್ತ ಇಟ್ಟ ವಸ್ತ ಪುಸ್ತರುಳಿ ಕೈಯಾಗ ಭಂಗಾರದ
ಕಪ್ಪಗೊರಳ ಸರಳ ಕೈ ಬೆರಳ ಹರಳ ಮ್ಯಾಲಿ ಹೊಳೆಯುವುದು ಕುಂದಲದ

ಸ್ಥೂಲಸೌಂದರ್ಯ ಕಲ್ಪನೆಯಾದ ಬಳಿಕ ಸೂಕ್ಷ್ಮ ಸೌಂದರ್ಯವನ್ನು ಕಲ್ಪಿಸಬೇಡವೇ? ಹೂವಿನಲ್ಲಿ ಹುದುಗಿದ, ಮಾಲೆಯಲ್ಲಿ ಮಲಗಿದ, ಮೊಗ್ಗೆಯಲ್ಲಿ ಕಣ್ಣು ತೆರೆದ ದೈವತದ ಪ್ರಶಾಂತ ಸೌಂದರ್ಯದಂತೆ ಬಿತ್ತಿದ ಹೊಲದಲ್ಲಿ ಒತ್ತಿಹಾಯುವ ಹಾಗೂ ಬಿಳಿಜೋಳ ಬಿಚ್ಚಿ ಬೀಳುವಂತೆ ಮಾಡುವ ಮುತ್ತಿನುಡಿಯಕ್ಕಿಯ ಬನದಮ್ಮನ ಸಮೃದ್ಧ ಸೌಂದರ್ಯವೂ ಅಚ್ಚಳಿಯದೆ ಉಳಿಯುವಂಥದ್ದು. ನಮ್ಮ ಜನಪದವು ಮೆಚ್ಚಿಕೊಂಡುದಾದರೂ ಏತಕ್ಕೆ? ಚೆಂದವೆಂದು ತೀರ್ಮಾನಿಸಿದ್ದರೂ ಏತಕ್ಕೆ.

“ಬಸರ ಬಯಕೆ ಚಂದ. ಹಸರ ಕುಪ್ಪಸ ಚಂದ
ನಸುಗೆಂಪಿನವಳ ನಗೆಚಂದ.
ಅಕ್ಕಯ್ಯ ಬಸಿರಾದರೆ ಬಳಗಕ್ಕೆ ಚಂದ.”
“ಬಾಳೆ ಹಣ್ಣಿನಂತೆ ಬಾಲಕನ ಮೈಚಂದ”
“ಬಂಗಾರ ಬಳಿ ಮುಂದೆ ಬಿಂದುಲಿದ್ದರೆ ಚಂದ”
“ಬಾಳಿ ಹಣ್ಣಿನ ಮಾಟ, ಬಾದಾಮಿ ಎಲಿದೋಟ”

ಬಾಗಿಲಾಡಗಾಡು ಮಗನಾಟ, ಕಲಕೇರಿ ತೇರಿನಮಾಟ ಬಲುಮಾಟ” ನಮ್ಮವರ ಸೌಂದರ್ಯ ಪ್ರಜ್ಞೆಯಲ್ಲಿ ಗಿಡ್ಡರು-ಉದ್ದರು ಎಂಬ ವರ್ಣಬೇಧವಾಗಲಿ, ಕೆಂಪು-ಕಪ್ಪು ಎಂಬ ವರ್ಣಭೇದವಾಗಲಿ, ಅಡ್ಡಬರಲಾರವು ಒಮ್ಮೊಮ್ಮೆ ಅಸಡ್ಢಾಳವೆನಿಸುವ ಕಪ್ಪು ಬಣ್ಣದವರೇ ಯೋಗ್ಯರೆಂದೊ, ಕೆಂಪು ಬಣ್ಣದವರೇ ಅಯೋಗ್ಯರೆಂದೂ ತೋರುವುದುಂಟು. ಗರತಿ ಹೇಳುತ್ತಾಳೆ.

“ಗಿಡ್ಡರು ನಡೆದರೆ ಗಿಣಿ ಹಿಂಡು ನಡೆದಂಗ
ಉದ್ದನ ಬಾಲಿ ನನತಂಗಿ ನಡೆದರೆ ರುದ್ದರನ ತೇರು ಎಳೆದಂಗ”
“ಕಪ್ಪು ಹೆಂಡತಿಯಂತ ಕರಕರಿ ಮಾಡಬ್ಯಾಡ
ನೀರಲ ಹಣ್ಣು ಬಲು ಕಪ್ಪು ಇದ್ದರೂ ತಿಂಗ ನೋಡಿದರ ರುಚಿಭಾಳ
ಕೆಂಪು ಹೆಂಡತಿಯೆಂದು ಸಂತೋಷಪಡಬೇಡ
“ಅತ್ತೀಯ ಹಣ್ಣು ಅತಿಕೆಂಪು ಇದ್ದರೂ ಒಡೆದು ನೋಡಿದರ ಹುಳಭಾಳ”

ಇನ್ನೂ ಮುಂಭಾರದ ಮೂಗುತಿಯಿಟ್ಟು, ಹಿಂಭಾರದ ತುರುಬು ಕಟ್ಟಿ ಕೈಗೆ ಭಾರವಾಗುವಂಥ ಸೇರಿನ ಒಂಕಿ ಧರಿಸಿದ ಗೆಳತಿಗೆ, ಒಬ್ಬ ಗೃಹಿಣಿ ನಿರಭಾರವಾಗಬಲ್ಲ ಸೀರೆ ಉಡಿಸಿದ್ದು ಆಕೆಯ ಸೌಂದರ್ಯವನ್ನು ಹೆಚ್ಚಿಸುವುದಕ್ಕಾಗಿಯೇ.

ಪ್ರಾಯದಲ್ಲಿ ನಾಯಿಯೂ ಚಂದ. ಮೆಚ್ಚಿದ ನಾಯಿಗೆ ಮರಣವೂ ಸುಖ. ಕಾಗೆ ತನ್ನ ಮರಿಗೆ ಕೋಗಿಲೆಯೆನ್ನುವುದಾಗಲಿ, ಗುಂಗೀಹುಳ ತನ್ನ ಮಗನಿಗೆ ಗಂಗಾಧರ ಅನ್ನುವುದಾಗಲಿ ಸಾಮಾನ್ಯವೇ. ಅಂಗಿ ತೊಡಿಸಿದರೆ ಮಂಗ ಮುಚ್ಚದು, ಹೆಣ್ಣು ಗಂಡಿಗೂ ಗಂಡು ಹೆಣ್ಣಿಗೂ, ಚಂದ ಕಾಣಿಸುವುದಕ್ಕೆ ಅವರವರ ಮನದ ಮುಂದಿನ ಮೋಹವೇ ಕಾರಣವೆಂದು ಹೇಳುತ್ತಾರೆ. ಅದೇ ಮಾಯೆ. ಮಾಯೆಯ ಪರದೆಗೆ ಅಹಂಕಾರ ದೃಷ್ಟಿಯೇ ಕಾರಣ. ತನ್ನ ತಾನರಿಯುವುದೇ ಅಹಂಕಾರ ನಿರಸನಕ್ಕೆ ದಾರಿ. ನಿರಹಂಕಾರದ ದೃಷ್ಟಿಗೆ ಸಮಸ್ತವೂ ದಿವ್ಯ, ಸರ್ವಸ್ವವೂ ಸುಂದರ. ನಮ್ಮ ಗರತಿಯ ದಿವ್ಯ ದೃಷ್ಟಿಯು ಕಂಡ ದಿವ್ಯ ದರ್ಶನದ ಒಂದು ಮಾದರಿ ಇಲ್ಲಿದೆ.

ಇದು ಕ್ರಿಸ್ತ-ಮೇರಿಯರ ದರ್ಶನವಿರಬಹುದೇ? ಕ್ರಿಸ್ತ ಮೇರಿಯರ ಹೆಸರು ಸಹ ಕೇಳಿ ಅರಿಯದ ನಮ್ಮ ಗರತಿಗೆ ಈ ಸೌಂದರ್ಯ ದರ್ಶನ ಎಲ್ಲಿಯದು? ಮಗುವಿನ “ಕಣ್ಣೋಟ ಶಿವನ ಕೈಯೆಲಗು ಹೊಳೆದ್ಹಂಗ” ಎಂದು ಗುರುತಿಸಿದ ತಾಯಿ ದೃಷ್ಟಿಗೆ, ಅದಾವ ಸೌಂದರ್ಯ ಮರೆಯಾಗುವುದು? ಮುಗಿಲಿನಾಚೆಯ ಲೋಕದಿಂದ ಬಂದ ನವಜಾತಶಿಶು ತಂಗುವುದಕ್ಕೆ ನೆಲವು ತಕ್ಕುದಲ್ಲ, ಹೊಸಪರಿವಾರ, ಹೊರಪರಿಸರ | ಅಂಥಲ್ಲಿ ಅದು ಪವಡಿಸಿ ತಣಿಯಲಾರದೆಂದು ಅಂತರದಲ್ಲಿ ತೇಲಾಡುವ ತೊಟ್ಟಿಲ ಏರ್ಪಾಡು ಮಾಡಿದ್ದಾಗಲಿ, ಅದಕ್ಕೆ ಚಿಕ್ಕ ಆಕಾಶವನ್ನು ಹೋಲುವ ಚೆಟ್ಟಿನ ಎತ್ತುಗಡೆ ಮಾಡಿದ್ದಾಗಲಿ ಅಲೌಕಿಕ ಸೌಂದರ್ಯಾನುಭೂತಿಯ ಫಲವೇ ಆಗಿರಬಹುದಾಗಿದೆ.

ಕರಿಯಂಗಿ ಕಸೂತಿ ತಲೆತುಂಬ ಜಾವುಳದ ರಂಗಯ್ಯನಾಟವು, ಅಂಗಳದಲ್ಲಾಡುವ ನವಿಲಾಟದ ಮಾಟಕ್ಕೆ ಸರಿದೊರೆಯೆನ್ನುವ ತಾಯಿ-

“ಕೂಸು ನನ ಕಂದಯ್ಯ ಕೇಸ ಬಿಟ್ಟಾಡಾಗ
ದೇಶದಿಂದೆರಡು ಗಿಣಿಬಂದು ‘ಕೇಳ್ಯಾವ’
ಕೂಸು ನೀದಾರ ಮಗನೆಂದು”

ಮಾಣಿಕದ ಮೂಗಿನವನೂ ಪಚ್ಚರತ್ನದ ಮೈಯವನೂ ಆದ ನುಡಿಗಾರ ಗಿಣಿರಾಮನು ಕೂಸಿನ ಚಲುವಿಗೆ ಮನಸೋತು, ನೀ ದಾರಮಗನೆಂದು ಕೇಳಿದರೆ ಆಶ್ಚರ್ಯವೇನು? ಮೊದಲೇ ಕೂಸು! ಆಮೇಲೆ ಕೇಸ ಬಿಟ್ಟಾಡುವ ಕಂದ!! ಹುಟ್ಟಾ ಬಂಗಾರ ಮಾರಿ. ತೆಂಗಿನ ನೀರಿನಿಂದ ತೊಳೆದದ್ದು. ತೊಟ್ಟಿಲಲ್ಲಿ ಮಲಗಿಸಿದರೆ ತೊಳೆದ ಮುತ್ತು! ಇಲ್ಲಿ, ಚೆಲುವು ಹಿರಿಯದೋ ಹೃದಯದೊಲವು ಹಿರಿಯದೋ ಎಂದು ಬುದ್ಧಿ ತತ್ತರಾಡಿಸುತ್ತದೆ.

ಗರತಿ ತವರೂರಿಗೆ ಹೋದಾಗ, ನವಿಲು ಬಣ್ಣದ ಪಕ್ಷಿ ತಲೆಬೇನೆಯೆದ್ದು ಅಳುತ್ತಿತ್ತಂತೆ. ಆದರೆ ಆಕೆಯ ಕಂದನ ಚೆಲುವಿಕೆಯನ್ನು ಕಂಡು ಅದು ನಗತೊಡಗಿತಂತೆ, ನೋವು ಮರೆತು ಹರ್ಷದಿಂದ ಅದು ಮಾಟದ ಗೊಂಬೆಯೋ ಮೋಡಿಯ ಸಿಂಬೆಯೋ?

ಇಗೋ, ಇಲ್ಲಿ ಹಳ್ಳಿಯ ಗೌಡರ ಹಿರಿಮಗಳು ಉಟ್ಟಿದ್ದು ಎಳ್ಳು ಹೂವಿನ ಸೀರೆ ಇಟ್ಟದ್ದು ಕಾಲಲ್ಲಿ ಬೆಳಳಿ ಕಾಲುಂಗರ. ಕೊಡಹೊತ್ತು ಹಳ್ಳದ ನೀರು ತರುತ್ತಿದ್ದಾಳೆ. ಹರೆಯದ ಹೆಣ್ಣು ನಾಚಿದರೊಂದು ಚೆಲುವು; ಬೆಚ್ಚಿದರೊಂದು ಚೆಲುವು; ಶ್ರಮದಿಂದ ಬೆವೆತರೊಂದು ಚೆಲುವು ಕುಂಕುಮ ಹಣೆಗೆ. ಅರಿಸಿಣ ಗಲ್ಲಕ್ಕೆ. ಕಾಡಿಗೆ ಕಣ್ಣಿಗೆ, ಮೇದಿ (ಆಲತಿಗೆ)ಉಗುರಿಗೆ-ಹೂಜಡೆಗೆ ಮಾಲೆ ಮುಡಿಗೆ. ಕೈತಪ್ಪಿಯೋ ಕಾಣ್ತಪ್ಪಿಯೋ ಸ್ಥಳದ ಬದಲಾವಣೆಯಾದರೆ ಸೌಂದರ್ಯಕ್ಕೆ ಭಂಗ, ಚಲುವಿಗೆ ಬಾಧೆ.

“ಕುಂಬಾರ ನಿನಗ್ಯಾಕೊ ಗೊಂಬೆ ಮಾಟದ ಹೆಣ್ಣ?”

ಇಲ್ಲಿ, ಬೇಡವೆನ್ನುವುದಕ್ಕೆ ಒಂದು ಕಾರಣವಿರಲೇಬೇಕು. “ತುಂಬೆಂದ ಮಣ್ಣ ತುಳಿಯೆಂದ, ಮನೆ ಮನೆಗೆ ಹೊತ್ತು ಮಾರೆಂದ ಹೊಸಮಡಕೆ” ಅಹುದೇ? ಅದರಂತೆ-

“ವಾಲೀಕಾರ ನಿನಗೆ ಒಳ್ಳೆ ಹೆಂಡತಿ ಯಾಕೋ?”

ಅದಕ್ಕೂ ಕಾರಣವಿದೆ. ಏನೆಂದರೆ-“ನೀ ಹೋದಿ ದೇಶ ತಿರುಗೂತ, ನಿನನಾರಿ! ಬಾಡ್ಯಾಳೋ ಬಾಳಿ ಸುಳಿಯಾಗಿ” ಇಂಥ ಇಜ್ಜೋಡಿನ ಒಗೆತನದಲ್ಲಿ ಸೊಗಸೇ ಇಲ್ಲವೆಂದಾಗ ಸೌಂದರ್ಯವಿನ್ನೆಲ್ಲಿ?

ಹೆಣ್ಣು ಗೊಂಬೆಮಾಟದಿದ್ದರಬಹುದು. ಕಣ್ಣು ಮೂಗಿನಲ್ಲಿ ಚೆಲುವೆಯಾಗಿರಬಹುದು. ಬಟ್ಟಲಗಣ್ಣಿನಾಕೆಯೋ ನೆಟ್ಟನ ಮೂಗಿನಾಕೆಯೋ ಇರಬಹುದು. ಆದರೆ ಅದೆಲ್ಲ ಹೊರ ಚೆಲುವು. “ಚೆಲುವಿದ್ದರೇನು ಗುಣವಿಲ್ಲ. ಕೊಳೆ ನೀರು ತಿಳಿಯಿದ್ದರೇನು ರುಚಿಯಿಲ್ಲ” ಎನ್ನುವಂತಾಗುತ್ತದೆ. ಒಗೆತನವೆಂದರೆ ಚೆಲುವಿಗೆ ಚೆಲುವು ಸಂಗಳಿಸುವುದು; ಸುವರ್ಣಕ್ಕೆ ಸುಗಂಧಕ್ಕೆ ಪುಟ ಕೊಡುವುದು.

“ಗರಡಿಮನೆಗೆ ಗಂಭೀರ ಹೋಗವ್ನೆ, ಗಂಘದ ಲೋಡ ತಿರುಹುವ ದೊರೆ ಮಗನಿಗೆ ಮಗಳ ಕೊಡಬೇಕು” ಸರಿ. ಆದರೆ ಮಗಳು ಎಂಥವಳಿರಬೇಕು?-

ಅಕ್ಕೀಲಿ ಕುಸುಮದ ತೆಗೆಯುವ ಕುಶಲಿ ನೆಲ್ಲಿಕಾಯಲ್ಲಿ ಒಳನಾರು ತೆಗೆಯುವ ಜಾಣಿ, ಹುಬ್ಬಿನಲ್ಲಿ ಹುಲಿಯನ್ನು ತಿವಿಯುವ ಚದುರಿ ಹೊತ್ತು ಹೊರಟರೆ ಕಣ್ಣಿಗೆ ಬೀಳುವ ಜನಪದದ ವಸ್ತುಗಳೆಂದರೆ ಹೊಳೆ-ಹಳ್ಳ, ಗುಡ್ಡ-ಬೆಟ್ಟ, ಮುಗಿಲು-ಮೋಡ, ಚಿಕ್ಕೆ-ಚಂದ್ರ ಮೊದಲಾದವು. ಪ್ರಾಣಿಗಳೆಂದರೆ ನವಿಲು, ಗಿಳಿ, ಸಿಂಹ, ಚಿಗರಿ ಮೊದಲಾದವು ಬದಾಮಿ ಸಂತೆಗೆ ಹೋದ ತಾಯಿಗೆ ಮಲ್ಲಿಗೆ ಹೂ ನೋಡುತ್ತಲೇ ಮಗಳ ನೆನಪಾದಂತೆ; ಹೋರಿಗರು ಜಿಗಿಜಿಗಿದು ಆಕಳ ಮೊಲೆಯುಣ್ಣುವಾಗ, ನೋಡಿದವ್ವನಿಗೆ ಮಗನ ನೆನಪಾದಂತೆ; ಚಂದ್ರನನ್ನು ಕಂಡು ಕಂದನ ದುಂಡಗಿನ ಮುಖ, ಚಿಗರಿಯನ್ನು ಕಂಡುಕೊಡಗೂಸಿನ ಚಂಚಲಗಣ್ಣು, ನವಿಲನ್ನು ಕಂಡು ಬಾಲಚಕ್ರವರ್ತಿಯ ಕುಣಿತ, ಸಿಂಹವನ್ನು ಕಂಡು ಚಲುವೆಯ ಚಿಕ್ಕನಡು. ನೆನಪಾಗುವುದು ಆ ನೆನಹೇ ಸೌಂದರ್ಯ ಪ್ರಜ್ಞೆ. ಗಿಳಿ ಸೊಗಸು ಮಾತಿಗೆ, ಕೋಗಿಲೆ ಇನಿದನಿಗೆ ಎನ್ನುವ ಭಾವವೇ ಸೌಂದರ್ಯ ಕಲ್ಪನೆ.

ಎರಳಿ ನೋಟದಂಥ ಹೆಣ್ಣ | ಸಿಂಹನಂಗ ನಡು ಸಣ್ಣ
ಕುಡಿಹುಬ್ಬ ಕಾಡಿಗಣ್ಣ | ಹಾಂಗಿತ್ತು ಗೋಪೇರ ವರ್ಣ|
ತುಟಿ ಹವಳದ ಕುಡಿ|
ಬಂಗಾರದ ವಸ್ತು ಸಿಂಗಾರಮಾಡಿ ಇಟ್ಟಾರ ಬೆಂಕಿಯ ಕಿಡಿ ||

ದುಡಿಮೆಗೂ ಹಾಡಿಗೂ ನಿಜವಾದ ಗಂಟು; ಬಿಚ್ಚಲಾರದ ಗಂಟು. ಅಲ್ಲಿಯೇ ಬಾಳ ಸೊಗಸು, ಜೀವನ. ಸೌಂದರ್ಯ

ಕಾಯಕವನ್ನೆಲ್ಲ ಯಂತ್ರಕ್ಕೆ ಮಾರುಗೊಟ್ಟು, ಒತ್ತೆಗೊಟ್ಟು ಕೈಜಾಡಿಸಿದಾಗ ನಮಗೆ ಹಾಡೂ ಇಲ್ಲ, ಪಾಡೂ ಇಲ್ಲ.

ಜನಪದ ಜೀವನವೆಂದರೆ ಜಲಪ್ರವಾಹ. ಇಳುಕಲದತ್ತ ಸಾಗಿದೆಯೆಂದರೂ ಅದು ಪತನವಲ್ಲ; ಸಹಜ ಕ್ರಿಯೆ. ಪ್ರವಾಹ ನಿಂತ ನೀರಾದರೆ ಮಾತ್ರ ಅದು ಮಲೆಯುತ್ತದೆ. ಇಳಿಮುಖವಾಗಿ ಸಾಗಿದರೂ ಉಗಿಯಾಗಿ ಮುಗಿಲಿಗೆ ಜಿಗಿಯುವ ಎತ್ತುಗಡೆ ನಡೆದೇ ಇರುತ್ತದೆ. ಜಗದ ಜಂಜಾಟ ತಪ್ಪಿಸಿಕೊಂಡು ನೆಮ್ಮದಿಯಿಂದ ಇರಬೇಕೆನ್ನುವ ಸನ್ಯಾಸಿಯ ನೀತಿ ಜನಪದಕ್ಕೆ ಮಾನ್ಯವಿಲ್ಲ. ಯುಕ್ತಿಯರಿತು ಜಗದ ಜಂಜಾಟವನ್ನು ಆಡುವ ಸಂಸಾರಿಯ ರೀತಿ ಜನಪದಕ್ಕೆ ವಾಸ್ತವಿಕ ಹಾಗೂ ಕೇಳಿ ಮಾಡಿಸಿದ ಯುಕ್ತಿ ಜಂಜಾಟದಲ್ಲಿಯೂ ಆಟವನ್ನು ಕಾಣಬಲ್ಲ ಜನಪದಕ್ಕೆ, ಸುಪ್ತಸತ್ಯವನ್ನು ಅನ್ವೇಷಿಸಿಕೊಳ್ಳುವುದೇ ಸೌಂದರ್ಯ ಕಲ್ಪನೆಯಾಗಿದೆ.