ಭೂಮಿತಾಯಿಯ ಚೊಚ್ಚಿಲ ಸಂತಾನವೇ ಜನಪದ. ಹುಚ್ಚು ತಾಯಿಯ ಹುಚ್ಚು ತಳಿಯೆಂದರೂ ಅದೇ ಜನಪದ. ಭೂಮಿ ತಾಯಿಗೆ ಬುದ್ದಿವಂತಿಕೆಗಿಂತ ಹೃದಯವಂತಿಕೆಯೇ ಗುಂಜಿತೂಕ ಹೆಚ್ಚಿಗಿದ್ದಂತೆ, ಜನಪದಕ್ಕೂ ಹೃದಯವಂತಿಕೆಯೇ ಜೀವಾಳವಾಗಿದೆ. ಅದರಲ್ಲಿಯೇ ಮನುಷ್ಯತ್ವದ ಮೊಳಕೆಯಂತೆ; ಅದೇ ಜನಪದ ಸತ್ವ.

ಅಸತ್‌ನಿಂದ ಸತ್‌ದೆಡೆಗೆ. ಕತ್ತಲೆಯಿಂದ ಬೆಳಕಿನಡೆಗೆ, ಮೃತ್ಯುವಿನಿಂದ ಅಮರತೆಯೆಡೆಗೆ ಕೊಂಡೊಯ್ಯುವುದೇ ಅಸತ್‌x ತ್ವದ ಕೆಲಸ. ಅದು ಒಂದು ವಿಕಾಸಕ್ರಮ.

ಜನಪದವು ಸಹಜವಾಗಿಯೇ ಸತ್‌ನೆಡೆಗೆ ಸಾಗಿದೆ, ಹಾಗೆ ಸಾಗಿದಾಗ ಅದು ಹಾಡಿದೆ, ಕುಣಿದಿದೆ ಕಥಿಸಿದೆ, ಕೇಳಿ ಉಬ್ಬಿದೆ, ಕಂಡು ಹಿಗ್ಗಿದೆ. ಜನಪದ ಜೀವನವು ಸತ್ವಪೂರಿತವಾಗಿದ್ದರೆ, ಜನಪದ ಕಲೆಯು ಸತ್ವಪ್ರೇರಿತವಾಗಿದೆ. ತನ್ನ ದಾರಿಯಲ್ಲಿ ಸಾಗಿದಾಗ ಗಳಿಸಿದ ಜನಪದ ಜೀವನಾನುಭವವೇ ಗೀತವಾಗಿ, ಕಥೆಯಾಗಿ, ಗಾದೆಯಾಗಿ ‘ಒಗಟಾಗಿ’ ಜನಪದ ಸಾಹಿತ್ಯವೆನಿಸಿದೆ, ಜನಪದಕ್ಕೆ ಜೀವನಾನುಭವವೊಂದು ಊಟವಾಗಿದ್ದರೆ, ಸಾಹಿತ್ಯವು ಅದರ ಉಸಿರಾಗಿದೆ. ತಿಂದಿದ್ದೇ ತೇಗುವುದಷ್ಟೇ?

ನಾವೆಲ್ಲರೂ ಆನಂದದೊಳಗಿನಿಂದಲೇ ಬಂದವರು, ಆನಂದದೊಳಗೆ ಹೋಗತಕ್ಕವರು ಎಂಬ ಅರಿವು ಜನಪದಕ್ಕೆ ಇರಲಿಕ್ಕಿಲ್ಲ. ಆದರೆ ಅದರ ಸಂಸ್ಕಾರಮಾತ್ರ ಇದ್ದಿರಲೇಬೇಕು. ಆದ್ದರಿಮದ ಆನಂದದಿಂದ ಬಂದವರು ಆನಂದೊಳಕ್ಕೆ ಹಹೋಗುವವರೆಗಿನ ನೂರು ವರ್ಷಗಳ ಆಯುಷ್ಯದಲ್ಲೇಕೆ ಬೇಡ ಆನಂದವೆನ್ನುವ ಭಾವನೆ ಆ ಸಂಸ್ಕಾರದ ಫಲವೇ ಆಗಿದೆ. ನಿಸರ್ಗದ ಮಕ್ಕಳೆನಿಸುವ ಜನಪದಕ್ಕೆ ಆನಂದವೆನ್ನುವುದು ನೈಸರ್ಗಿಕ ದತ್ತಿಯಾಗಿದೆ. ಆ ಕಾರಣದಿಂದಲೇ ಜನಪದವು ಬಿಸಿಲು-ಮಳೆ-ಗಾಳಿಗಳಿಗೆ ಉಬ್ಬಿನಿಂದ ಮೈಯೊಡ್ಡುತ್ತದೆ; ಗುಡುಗು-ಗದ್ದರಣೆಗಳೊಡನೆ ಕೇಕೆ ಹಾಕುತ್ತದೆ; ಮಿಂಚಿನ ಸಂಚಿನಲ್ಲಿ ಸಂಚಲಿಸುತ್ತದೆ. ಮಕ್ಕಳಂತೂ ಸುರಿಮಳೆಯಲ್ಲಿ-

ಕಳ್ಯಾ ಮಿಳ್ಯಾ ಚಿಪಾಟಿ ಮಿಳ್ಯಾ
ಬಸರೀ ಗಿಡದಾಗ ಬಸಪ್ಪ ಕೂತಾನ
ಮಳಿ ಹೊಡಿಲೋ ಮಳಿ ಹೊಡಿಲೋ||

ಎಂದು ಹಾಡುತ್ತ ಕೈಗಳನ್ನು ಎರಡೂ ಬದಿಗೆ ಚಾಚಿ ಮೈಸುತ್ತು ತಿರುಗಿ ಆನಂದಪಡುತ್ತವೆ. ನಾಗರಿಕರಾದ ನಾವಾದರೋ ಮನೆಸೇರುವವರೆಗೆ “ಮಳೆ ತಡಿಲೋ ಮಳಿ ತಡಿಲೋ” ಎಂದು ಗೋಗರಿದರೆ, ಜನಪದದ, ಮರಿಗಳು “ಮಳಿ ಹೊಡಿಲೋ ಮಳಿ ಹೊಡಿಲೋ” ಎಂದು ಆಹ್ವಾನಿಸುತ್ತವೆ. ಮಕ್ಕಳಿಂದ ಹಾಗೆ ಹಾಡಿಸಿ, ಆಡಿಸಿ, ಓಡಾಡಿಸುವುದೇ ಜನಪದ ಸತ್ವ; ತಣಿಸಿ, ಕುಣಿದಾಡಿಸುವುದೇ ಜನಪದ ಸತ್ವ.

ಸತ್ವಹೀನ ಜೀವನವು ದುಡಿಮೆಗೆ ಬೇಸರಿಯುತ್ತದೆ; ದಣಿಯುತ್ತದೆ; ಮುಖಕ್ಕೆ ಸೆರಗುಹಾಕುತ್ತದೆ; ಒರಗಿ ನರಳುತ್ತದೆ; ದನಿ ತೆಗೆಯದೆ ಮುಳು ಮುಳು ಅಳುತ್ತದೆ. ದುಡಿಮೆ ಕಡಿಮೆಯಾಗಿ, ಪಡಿಮೆ ಮಿಗಿಲಾಗಲೆಂದು ಹಾರೈಸುತ್ತದೆ. ಬಿಳಿಛಾಯೆಯ ನಾಗರಿಕತೆಗೆ ಅದೇ ಹೆಗ್ಗುರುತಾಗಿದೆ.

ಸಾಮಾನ್ಯ ಅನುಭವವಾದರೂ ಅದು ಗಿಳಿಪಾಠಕ್ಕಿಂತ ಹೆಚ್ಚಿನದು ಕಾಲ್ಪನಿಕ ಕಥೆಗಿಂತ ಅನುಭವದ ಕಥನದಲ್ಲಿ ಜೀವಕಳೆ ಹೆಚ್ಚು. ಶ್ರೀಅರವಿಂದರು ಅಗ್ನಿಸೂತ್ರಗಳನ್ನು ಮಾತೆಯವರ ಮುಂದೆ ಓದಿ ಹೇಳುತ್ತಿರುವಾಗ ಅಲ್ಲಿ ಅಗ್ನಿದೇವತೆ ಕಾಣಿಸಿಕೊಂಡಿತೆಂದು ಹೇಳಲಾಗುತ್ತದೆ. ಶ್ರೀ ರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರದಲ್ಲಿ ಭವತಾರಿಣೀದೇವಿಯ ಪೂಜೆ ಮಾಡುವಾಗ ಮಂತ್ರ ಪಠಿಸತೊಡಗುತ್ತಲೇ ಅದರರ್ಥವು ರೂಪತಾಳಿ ನಿಲ್ಲುತ್ತಿತ್ತಂತೆ. ನಮ್ಮ ಗರತಿಯರು ಬೀಸು ಕುಟ್ಟುವಾಗ ಹಾಡುವ ತ್ರಿಪದಿಗಳು ಸಂಸಾರವೇದ ಎನಿಸಿಎ; ಅಂದರೆ ಅವು ಮಂತ್ರಶಕ್ತಿಯನ್ನು ಪಡೆದಿವೆ. ನಿಜವಾದ ಮಂತ್ರವನ್ನು ಪಠಿಸಿದಾಗ ಅದರರ್ಥವು ಸುಳುಹುದೋರಿ ರೂಪದೊಟ್ಟು ನಿಲ್ಲಬೇಕು. ಅಂತೆಯೇ ಬೀಸುಕುಟ್ಟುವ ಶ್ರಮದಿಂದ ಹೆಣ್ಮಕ್ಕಳಿಗೆ ದಣಿವಾಗುವುದು ಒತ್ತಟ್ಟಿಗರಲಿ, ಅದು ಇದ್ದ ಬೇಸರ ಕಳೆದು, ಆವರಿಸಿದ ಜಡತೆಯನ್ನೋಡಿಸಿ, ಮನಕ್ಕೆ ಉತ್ಸಾಹ, ಚಿತ್ತಕ್ಕೆ ಉಲ್ಲಾಸ ತುಂಬುತ್ತದೆ. ಅದಕ್ಕೆ ತ್ರಿಪದಿಗಳು ಮಂತ್ರವಾಗಿದ್ದುದೇ ಕಾರಣವಾಗಿದೆ.

ಮಂತ್ರೋಚ್ಚಾರಣಕ್ಕೆ ಒಂದು ಸೂಕ್ತ ಸಂದರ್ಭಬೇಕಾಗುತ್ತದೆ. ಸಿಕ್ಕ ಸಿಕ್ಕ ಸಮಯದಲ್ಲಿ, ಸಿಕ್ಕ ಸಿಕ್ಕ ಸಂದರ್ಭದಲ್ಲಿ ಮಂತ್ರಪಠಣ ಮಾಡಿದರೆ ಅದು ಸತ್ವಹೀನವಾಗುತ್ತದೆ; ಅಸಾರ್ಥಕವಾಗುತ್ತದೆ. ಚೇಳಿನ ಮಂತ್ರ ಪಠಿಸಿದರೆ ಅದರ ಕಡಿತದಿಂದ ಏರಿದ ವಿಷ ಇಳಿಯಬೇಕಲ್ಲವೇ? ಆದರೆ ಹೊತ್ತು ಹೋಗದೆಂದು, ಆ ಮಂತ್ರವನ್ನು ಉಚ್ಚರಿಸುವುದು ನಿರರ್ಥಕ.

ಬೀಸುವ ಕಲ್ಲು, ಕುಟ್ಟುವ ಒರಳು, ಒನಕೆ ಒಬವ್ವಗಳೆಲ್ಲ ಕಾಣೆಯಾದಾಗ ಬೀಸುವ, ಕುಟ್ಟುವ ಹಾಡು ತಬ್ಬಲಿಯಾದರೆ ಆಶ್ಚರ್ಯವೇನು? ಹಾಡು ಒತ್ತಟ್ಟಿಗೆ, ಧಾಟಿ ಒತ್ತಟ್ಟಿಗೆ ಆಗಿವೆ. ಒಂದು ಹೆಣವಾಗಿ ಬಿದ್ದರೆ ಇನ್ನೊಂದು ಪಿಶಾಚಿಯಾಗಿ ಓಡಾಡುತ್ತಿದೆ. ಋಷಿ-ಮುನಿ-ದೃಷ್ಟಾರರು ಗಳಿಸಿಟ್ಟ ಮಹಾಮಂತ್ರಗಳನ್ನು ಸಹ ಹಳ್ಳಕೂಡಿಸಿದ ಅಚಾತುರ್ಯ ನಮ್ಮದಾಗಿರುವಾಗ ಬೀಸುಕುಟ್ಟುವಾಗ ಹಾಡುವ ತ್ರಿಪದಿಗಳನ್ನು ಹರಳು ಇಲ್ಲದ ಗೆಜ್ಜೆ ಮಾಡುವುದಕ್ಕೆ ಹಿಂಜರಿವೆವೇ?

ಶುದ್ಧ ಬಂಗಾರದಿಂದ ಆಭರಣಗಳನ್ನು ಮಾಡಿಸಿಕೊಂಡಂತೆ, ಅದರಲ್ಲಿ ತುಸು ಹಿತ್ತಾಳೆ ಬೆರೆಯಿಸಿ ನಾಣ್ಯಗಳನ್ನೂ ಮಾಡಿಕೊಳ್ಳುವುದುಂಟು. ಹೆಂಗಸರ ಹಾಡು-ಕಥೆಗಳು ಆಭರಣವೆನಿಸಿದರೆ, ಗಂಡಸರ ಹಾಡು-ಕಥೆಗಳು ನಾಣ್ಯ ಎನಿಸುವವು. ಒರೆಗಲ್ಲಿನಿಂದ ಆಭರಣವನ್ನು ಪರೀಕ್ಷಿಸುವಂತೆ, ನಾಣ್ಯವನ್ನು ಪರೀಕ್ಷಿಸುವ ಕಾರಣವಿಲ್ಲ. ಅದರ ಮುದ್ರೆ ಸ್ಪಷ್ಟವಾಗಿರುವವರೆಗೆ ಅದನ್ನು ಪರೀಕ್ಷಿಸುವ ಅಗತ್ಯವೇ ಇಲ್ಲ. ಮನೆವಾರ್ತೆ-ಮನವಾರ್ತೆಗೆ ಆಭರಣ, ಲೋಕವ್ಯವಹಾರಕ್ಕೆ ನಾಣ್ಯ. ಹೆಣ್ಣುಮಕ್ಕಳ ಸಾಹಿತ್ಯ ಜೀವನವನ್ನು ಉಜ್ವಳಗೊಳಿಸಿದರೆ, ಗಂಡಸಮಕ್ಕಳ ಸಾಹಿತ್ಯ ಹೊರಜೀವನವನ್ನು ನಿಚ್ಚಳಗೊಳಿಸುತ್ತದೆ. ಉದಾಹರಣೆಗಳಿಂದ ಅದನ್ನು ಸ್ಪಷ್ಟಗೊಳಿಸಬಹುದು.

ಇಂದು ನನ್ನಂಗಳ ಶ್ರೀಗಂಧ ನಾತಾವ
ಬಂದಿನದಾನೇನ ಶ್ರೀ ಹರಿಯೇ | ನಮ್ಮನಿಗೆ|
ಗಂಧದ ಮಡುವ ತುಳಕೂತ ||

ಇಲ್ಲಿ, ಶ್ರೀರಾಮಕೃಷ್ಣ ಪರಮಹಂಸರು ಅಧರಸೇನೆನೆಂಬ ಜಿಲ್ಹಾಧಿಕಾರಿಯ ಮನೆಗೆ ಬಹುದಿನಗಳ ತರುವಾಯ ಹೋದಾಗ, ಆ ಅಧಿಕಾರಿಯು ತೆಗೆದ ಉದ್ಗಾರವನ್ನು ನೆನಪಿಸಿಕೊಳ್ಳಬಹುದಾಗಿದೆ.

ಹೂವಿನಾಗ ಹುದುಗ್ಯಾನ ಮಾಲ್ಯಾಗ ಮಲಗ್ಯಾನ
ಮಗ್ಯಾಗ ಕಣ್ಣು ತೆರೆದಾನ | ಲಿಂಗಯ್ಯ |
ನೋಡಟಿಗೆ ನಿದ್ದೆ ಬಯಲಾಗಿ||

ದೆವ್ವಿನ ಕನಸುಗಳನ್ನೋ, ಹಿಂಸ್ರಪ್ರಾಣಿಗಳ ಏರಾಟದ ಭಯಂಕರ ಸ್ವಪ್ನಗಳನ್ನೋ ಕಾಣುವ ನಾವು, ತೃಪ್ತ ಜೀವನವನ್ನು ಗಳಿಸಿದ ಗರತಿ ಕಾಣುವ ಕನಸುಗಳ ಹಿನ್ನೆಲೆಯಲ್ಲಿ ಅರಿತುಕೊಳ್ಳಬೇಕು.

ಬಿತ್ತೂದ ಹೊಲದಾಗ ಒತ್ತಿ ಹಾಯಕಿ ಯಾರ
ಮುತ್ತಿನುಡಿಯಕ್ಕಿ ಬನದಮ್ಮ | ಹಾಯ್ದರ
ಬಿಚ್ಚಿಬಿದ್ದಾವ ಬಿಳಿಜೋಳ ||

ವನದೇವಿಯ ನಿತ್ಯ ಸಂಪರ್ಕದಲ್ಲಿ ಬೆಳೆದ ಗರತಿ ಮಾತ್ರ ಇಂಥ ಮಾತನ್ನು ಸ್ಪಷ್ಟವಾಗಿ ಹೇಳಬಲ್ಲಳು-

ಮಂದೇನು ಕೊಟ್ಟೀತ ಮನವೇನು ದಣಿದೀತ
ಮಂಜಾನದಾನ ಗಿರಿಮಲ್ಲ | ಕೊಟ್ಟರ
ಮನಿತುಂಬಿ ನಮ್ಮ ಮನ ತುಂಬಿ”

ಭಿಕಾರಿಗೋ ಬಿಕನಾಶಿಗೋ ಬೇಡಿದರೆ ಏನು ಕೊಟ್ಟಾನು? “ನಾನೇಕೆ ಬಡವನೋ ನಾನೇಕೆ ಪರದೇಶಿ” ಎನ್ನುವ ದಾಸಭಾವನೆಯ ಎತ್ತರಕ್ಕೇರಿದ ಗೃಹಿಣಿ ಮಾತ್ರ ಈ ಬಗೆಯ ನಿಶ್ಚಿತ ನಿಲುಮೆಯನ್ನು ತಲಪಬಲ್ಲಳು. ಇಂಥ ಅಂತಸ್ಸತ್ವವುಳ್ಳ ಗರತಿ ಬಾಹ್ಯ ಜೀವನದಲ್ಲಿಯೂ ತನ್ನ ಸತ್ವವನ್ನು ತೋರ್ಪಡಿಸದೆ ಬಿಡುವುದಿಲ್ಲ.

ಭಾಗಾದಿ ಬಲಕಿರಲಿ ವೈರಿತಾ ಎಡಕಿರಲಿ
ಛಾಡಿ ನಿನ ಮನಿಯು ಇದರಿರಲಿ | ಬಲಭೀಮ|
ದೇವ ನನ ಮ್ಯಾಲ ದಯವಿರಲಿ||

ಇಲ್ಲಿ, ವಿರೋಧಪರಿಸ್ಥಿತಿಯೇ ಬೇಡವೆಂದು ಅದನ್ನು ತಪ್ಪಿಸುವ ಗೊಡವೆಗೆ ಹೋಗದೆ, ಅದನ್ನೆದುರಿಸುವ ಕೆಚ್ಚನ್ನೇ ಹಾರಯಿಸಿದ ಸುಳುಹು ಕಂಡುಬರುತ್ತದೆ.

ಅಂಜೀಕಿ ತೋರಿದರ ಅಂಜವರ ಮಗಳಲ್ಲ
ಮಂಜಾನದಾನ ಹುಲಿಕರಡಿ, ತೋರಿದರ |
ಅಂಜಿ ತಿರುಗವರ ಸೊಸಿಯಲ್ಲ ||

ಅಂಜುವವರ ಮಗಳೂ ಅಲ್ಲ, ಅಂಜಿ ತಿರುಗುವವರ ಸೊಸೆಯೂ ಅಲ್ಲವೆಂದು ಹುಟ್ಟಿದ ಮನೆ ಕೊಟ್ಟಮನೆ ಎರಡಕ್ಕೂ ಕೀರ್ತಿತರಬಲ್ಲ ಹೆಣ್ಣು, ಹೆಣ್ಣೆಂದು ಬೀಳುಗಳೆಯುವವರಾರು? ಚಿನ್ನದಾಭರಣದಂತಿರುವ ಹೆಣ್ಣಿನ ಜೀವನ ಸತ್ವವೆ ಸಾಹಿತ್ಯ ಸತ್ವವಾಗಿ ಆದರ್ಶವನ್ನು ಹೊತ್ತು ನಿಂತಿದೆ.

ಚಲಾವಣೆಯ ನಾಣ್ಯವು ಸವಕಳಿಗೀಡಾಗದಂತೆ, ಚೊಕ್ಕ ಚಿನ್ನದಲ್ಲಿಯೇ ಸೂಕ್ತ ಪ್ರಮಾಣದಲ್ಲಿ ಟಂಕ ಬೆರೆಸಿಕೊಂಡು ವ್ಯವಹಾರ ನೀತಿಯನ್ನು ನಿರ್ವಹಿಸುತ್ತದೆ. ತನಗಿರುವ ಬೆಲೆಯನ್ನು ಕಾಪಾಡಿಕೊಂಡು ಹೆಡೆಯತ್ತಿ ನಿಲ್ಲುತ್ತದೆ. ಅದಕ್ಕೆ ಹೋರಾಟ ಮುಖ್ಯವಲ್ಲದೆ ಸೋಲು ಗೆಲುವು ಮುಖ್ಯವಲ್ಲ ಗೆದ್ದರೆ ಆಳುವ ಪಕ್ಷ, ಸೋತರೆ ವಿರೋಧಿ ಪಕ್ಷ, ದಣಿವು ಉಭಯರಿಗೂ ಅಷ್ಟೇ. ದುಡಿಮೆ ಕಾಯಕಗಳಲ್ಲಿ ಹಾಡುವ ಉತ್ಸವಾಮೋದಗಳಲ್ಲಿ ಕುಣಿಯು ಸಂದರ್ಭ ಬಿಟ್ಟರೂ, ಗಂಡಸಿನ ಶೃಂಗಾರ ಲಾವಣಿಗಳಲ್ಲಿ ಹೋರಾಟದ ಬೀಜ ಮೊಳೆತು, ವೀರಲಾವಣಿಗಳಲ್ಲಿ ಪಲ್ಲವಿಸಿ ಹೂತು, ಭಕ್ತಿಯಲ್ಲಿ ಕಾತುಪಾಡಾಗಿ ಶಾಂತಿಯಲ್ಲಿ ಸಫಲಗೊಳಳುತ್ತದೆ. ಆರಂಭದ ಭಾಷೆಯ ಕುಸುರು ಕುಸುರಿನ, ರಂಗುರಂಗಿನ ಸಡಗರವನ್ನು ರೂಢಿಸಿಕೊಂಡು ಮುಂದುವರಿದಂತೆ ಅನುಭವದ ಸತ್ವವನ್ನು, ಸಮತೋಲನವನ್ನು ಎತ್ತಿ ಹಿಡಿಯುತ್ತದೆ. ಹೊರ ಜೀವನಕ್ಕೆ ಇಷ್ಟೇ ಸಾಕೆಂದರೂ ಸಿಕ್ಕಷ್ಟೂ ಬೇಕೆನಿಸುತ್ತದೆ.

ವಿರಾಗಿಯ ಕಣ್ಣಿಗೆ ಮಾಂಸದ ತಡಕೆ, ಮೂತ್ರದ ಕುಡಿಕೆ, ಮಲದಹಡಿಕೆಯಾಗಿ ತೋರುವ ಹೆಣ್ಣು, ಕಾದಲನ ಕಣ್ಣಿಗೆ ಅಸಲಜಾತ ಪದ್ಮಿನಿ, ಸುರತಚಂದ್ರುಣಿ. ಹೊರಟನಾಗಿಣಿಯಾಗಿ ತೋರುವಳು ಮೂಗು ಅವನ ಪಾಲಿಗೆ ಸಿಂಬಳ ಕುಪ್ಪೆ; ಇವನ ಪಾಲಿಗೆ ಸಂಪಿಗೆ ತೆನೆ. ಕಣ್ಣು ಒಬ್ಬನಿಗೆ ಪಿಚ್ಚಿನ ಚಿಪ್ಪು, ಇನ್ನೊಬ್ಬನಿಗೆ ತಾವರೆಯ ರೊಪ್ಪು, ಅವನಿಗೆ ಹಲ್ಲು ನೆಟ್ಟೆಲವು; ಇವನಿಗೆ ದಾಳಿಂಬರ ಬೀಜ. ಯಾರದು ನಿಜ? ಯಾವ ದೃಷ್ಟಿ ವಾಸ್ತವಿಕ? ಅವೆಲ್ಲ ವಿರಾಗಿಗೆ ಒಲ್ಲದ ವಸ್ತು ; ಒಮ್ಮೊಮ್ಮೆ ನಿಲುಕಲಾರದಕ್ಕೆ ದ್ರಾಕ್ಷಿಹುಳಿಯೆಂದಿರಲೂಬಹುದಾಗಿದೆ. ಆದರೆ ಕಾದಲನಿಗೆ ಅವು ಬೇಕಾದ ವಸ್ತು, ಬೆಲ್ಲಕ್ಕಿಂತ ಸಿಹಿ. ಉಭಯರ ದೃಷ್ಟಿಯೂ ಸರಿಯಲ್ಲವಾದರೆ ಸರಿಯಾದ ಮೂರನೇ ದೃಷ್ಟಿಯೊಂದು ಇರಲೇಬೇಕಲ್ಲವೇ? ಆ ಕಾಣ್ಕೆಯ ನಿಲ್ದಾಣವನ್ನು ತಲುಪಿಸುವುದಕ್ಕೆ ಲಾವಣಿ ಪರಮಸಾಧನೆಯಾಗಬಹುದಾಗಿದೆ. ಆಡುವುದನ್ನೇ ಬಿಟ್ಟುಕೊಟ್ಟು ಆಟದ ದುಷ್ಪರಿಣಾಮವನ್ನು ತಪ್ಪಿಸುವ ಎತ್ತುಗಡೆ ಒತ್ತಟ್ಟಿಗೆ ನಡೆದರೆ, ಯುಕ್ತಿಯಿಂದಾಡಿ ದುಷ್ಪರಿಣಾಮವನ್ನು ಒಪ್ಪಿಸುವ ತೂಕ ಇನ್ನೊತ್ತಟ್ಟಿಗೆ ಸಾಗಿದೆ.

ಕಾದಲನು ಚಂದನದ ಗೊಂಬೆಯನ್ನೋ ರತ್ನದ ಕಂಬಿಯನ್ನೋ ಕಂಡು-“ನಾ ಬಿಟ್ಟಿನಿ ಅನ್ನನೀರು ನಿನ್ನ ಕಾಲಾಗ ಸೊರಗಿ” ಅಂದುಕೊಳ್ಳುವುದು ಅರಿದಲಲ. ಅರಿಸಿನ ತೆನಿಯಂಥ ಹುಡುಗಿ, ಎಳೆ ಕಮಲದಂತೆ ಮನಸ್ಸಿನಲ್ಲಿ ನೆಟ್ಟರೆ “ನಿತ್ಯ ಕನಸಿನಲ್ಲಿ ಬರುವುದು” ಆಶ್ಚರ್ಯವೇನಲ್ಲ.

ಮನಸಿನಾಗ ನೆಟ್ಟಿದಾಳ ಎಳಿಕಮಲಾ |
ನಿತ್ಯ ಕನಸಿನಾಗ ಬರ್ತಾಳೀಕಿ ಹಗಲೆಲ್ಲ |
ಎನ್ನ ಮನಸ ಇಟ್ಟ ನೆನಸಿ ಹೋದೂ ಕೈಕಾಲ |
ಕಾಂತೀರೂಪ ಕಂಚಿನಗೌರಿ ಹಂತೀಲಿ ಹೋಗಿ ಕೇಳದರ
ಮಿಂಚಿದಂಗ ಆಯ್ತ ಮುಂಗಾರಿ ಸಿಡಲ |
ಮನ್ಮಥದಮಲಾ ||

ಅದೆಷ್ಟು ವಾಸ್ತವಿಕವಾಗಿ ಹೇಳಿದ್ದಾನೆ ಈ ಕಾದಲ? ಮುಚ್ಚುಮರೆಯಾಗಲಿ ತಗಲುತಿಪಲಾಗಲಿ ಆತನ ಮಾತಿನಲ್ಲಿ, ದೀಪಹಚ್ಚಿ ಹುಡಿದಿದರೂ ಸಿಗುವದಿಲ್ಲ.

ಹಸರ ಹಳದಿಯಂಥ ಬಣ್ಣ | ಚಕ್ಕರದಂಗ ತಿರುವಿಕಣ್ಣ
ನಕ್ಕರ ಸಣ್ಣ ಸುಳಿ ಹಲ್ಲ ತುಟಿಗೆಂಪ |
ನಂದು ಕುಂತ್ರ ನಿಂತ್ರ ಮನಸಿನಂದು ಹೋಗಲ್ದು ನೆಪ್ಪ |
ಗಲ್ಲದಮ್ಯಾಲ ಗರಿಯನತ್ತ ಮೆಲ್ಲಕಪೋರಿ ಮಾತಾಡಿದರ
ಕಲ್ಲಿನಂಥ ಮನಸು ಕರಗಿ ಆಯಿತ ಸಾಪ |
ಈಕೀ ಸ್ವರ ಸಂಪ ||
ಎರಳೀನೋಟದಂಥ ಹೆಣ್ಣ | ಸಿಂಹನಂಗ ನಡುಸಣ್ಣ |
ಕುಡಿ ಹುಬ್ಬ ಕಾಡಿಗಿ ಕಣ್ಣ | ಹಾಂಗಿತ್ತು ಗೋಪೇರವಣ್ಣ |
ತುಟಿ ಹವಳದ ಕುಡಿ |

ಇಂಥ ಚೆಲುವು ಹಲವು ಸಾರೆ ಕನ್ನಡಿಯೊಳಗಿನ ಗಂಟೇ ಸರಿ- ಎಂದವನು ಕೈಯೊಳಗಿನ ಗಂಟನ್ನು ಕಳಕೊಳ್ಳಲಾರನು. ಪ್ರಾಯದಲ್ಲಿ ನಾಯಿಯೂ ಚಂದ ಕಾಣುತ್ತಿರುವಾಗ ಮಡ್ಡ ಹರೆಯದ ಗಿಡ್ಡಪೋರಿಯಾಗಲಿ, ಖಂಡೋಬನ ಮುರುಳಿಯಂಥ ಕರೆಹುಡಿಯಾಗಲಿ ಕಾದಲನನ್ನು ಹುಚ್ಚುಹಿಡಿಸದಿರಬಹುದೇ? ಅಂತೆಯೇ ಗಿಡ್ಡ ಪೋರಿಯನ್ನು ಕಂಡು “ಏನು ಮುಂಗಾರಿ ಮಳಿ ಹಾಂಗ ಸಿಡಲ್‌| ಬಿದ್ದಿತು ಖಡಲ್‌| ಎದಿ ಅಂತು ಧಡಲ್‌| ಆಗಿನಂತೆ ಮೂಕ” ಎಂದು ತನ್ನ ದೌರ್ಬಲ್ಯವನ್ನು ಒಪ್ಪಿಕೊಳ್ಳುವನು.

ಕಾವ್ಯವಸ್ತುವಾಗಲಿ ಸಾಹಿತ್ಯ ವಿಷಯವಾಗಲಿ ಸತ್ವಪೂರಿತವಾಗಿದ್ದರೆ ಅದು, ಕಲ್ಲು ಸಕ್ಕರೆ ಸವಿದಂತಾಗುವುದೆಂಬುದಕ್ಕೆ ಈವರೆಗಿನ ಉದಾಹರಣೆಗಳಿಂದ ಮನಗಂಡದ್ದಾಯಿತು. ಮಾತು ಸತ್ವದಿಂದ ತುಂಬಿಟ್ಟರೆ ಅದು ಸಕ್ಕರೆ ಗೊಂಬೆಯ ಸೈ. ಅದನ್ನು ಎಲ್ಲಿ ಮುದ್ದಿಟ್ಟರೂ, ಹೇಗೆ ಮುದ್ದಿಟ್ಟರೂ ರುಚಿಕಟ್ಟು ಕೇಳಿರಿ-

ಗೆಣ್ಯಾನಗಲಾಗ ಹಾಲುತುಪ್ಪ ಹಣಸಿ |
ಮುಂದ ಕೂತು ಉಣಿಸಿ
ಮ್ಯಾಲ ಎಣ ಎಣಸಿ |
ಕೊಟ್ಟಾಳೆಲಿ ಅಡಿಕಿ ||

ಶೃಂಗಾರ ರಂಗದಲ್ಲಿ ಜನಪದವು ಅಳವಡಿಸಿಕೊಂಡ ಅನುಭವದ ಸತ್ವದೊಡನೆ ಅದನ್ನು ವ್ಯಕ್ತಪಡಿಸುವ ಭಾಷೆಯ ಸತ್ವದ ಸ್ವರೂಪವನ್ನು ಸ್ಥೂಲವಾಗಿ ತಿಳಿದೆವು. ಇನ್ನು ವೀರರಂಗದ ವೈಭವವನ್ನು ಒಂದಿಷ್ಟು ನಿರೀಕ್ಷಿಸುವಾ-

ಅಭಿಮನ್ಯುವಿಗೆ ಕೊಡಬೇಕೆಂದು ವತ್ಸಲೆಯನ್ನು ಬಳಿರಾಮನು, ಕೃಷ್ಣನ ಮಾತು ಮೀರಿ, ಕೌರವನ ಮಗ ಲಕ್ಷಣಕುಮಾರನೊಡನೆ ಲಗ್ನ ಮಾಡಲು ನಿರ್ಧರಿಸುತ್ತಾನೆ. ಆ ಸುದ್ದಿ ಸುಭದ್ರಗೆ ತಿಳಿಯುತ್ತದೆ. ಆಕೆ ನೆಲಕ್ಕುರುಳಿ ಕಣ್ಣೀರು ಹರಿಸುವಳು. ತವರುಮನೆ ತನಗಿಲ್ಲದಾಯ್ತೆಂದು ತಳಮಳಿಸುವಳು. ಆಗ ಅಭಿಮನ್ಯು ತಾಯಿಯನ್ನು ಸಂತಯಿಸುತ್ತ, ನಿಮ್ಮಣ್ಣಗಳ ಆಶೆಯನ್ನು ಬಿಡಬೇಕೆಂದರೂ, ನನಗೆ ಕೊಟ್ಟಂಥ ಆ ಹೆಣ್ಣು ವತ್ಸಲನ ತರದಿದ್ದರೆ ತಂದೆ ಅರ್ಜುನನ ವೀರ್ಯೆದಿಂದ ಹುಟ್ಟಿಬಂದರೂ ಮೂರು ಲೋಕದೊಳಗಾಗುವೆ ಅವಮಾನ ಎಂದೂ ವೀರ ನುಡಿಯಾಡಿ ಧೈರ್ಯ ತುಂಬುತ್ತಾನೆ.-

ಕೇಳೆ ತಾಯೆ ನಿನ್ನ ದಯಾ ಇದ್ದರ
ಪೂರ್ವಾದ್ರಿ ಪಶ್ಚಿಮಕಿಡೂ ದರಿದೇನ |
ಪಶ್ಚಿಮಾದ್ರಿ ಪೂರ್ವಕ ತರುವೆನು ನಾನು |

ಎಂದು ವೀರಶಪಥ ಮಾಡಿ, ಮುಂದಿನ ಕಾರ್ಯಕ್ಕೆ ಅಣಿಗೊಳ್ಳುತ್ತಾನೆ; ಆಡಿದಂತೆ ಮಾಡಿಯೇ ತೋರಿಸುತ್ತಾನೆ. ಇದಕ್ಕೆನ್ನಬೇಕು ಜೀವನ ಎಂದು. ನಮ್ಮ ಜನಪದಕ್ಕಿರುವ ಮಹದಾದರ್ಶ ಇದೆ.

ಭೀಷ್ಮಾರ್ಜುನರ ಯುದ್ಧಾರಂಭದಲ್ಲಿ ಅರ್ಜುನನ ಆರ್ಭಟವು ಗಗನಕ್ಕೇರಿದಾಗ; ಭೀಷ್ಮನು ಆವೇಶದಿಂದ ಹಲ್ಲುತಿಂದು, ಬಾಣಗಳನ್ನು ಹೂಡಿ ಹೂಡಿ ಹೊಡೆದು, ನೆತ್ತರ ಕಾವಲಿಯನ್ನೇ ಹರಿಸಿಬಿಟ್ಟನು. ಕಣ್ಣಬಳಿ ಇಳಿದಿದ್ದ ಬೆವರಹಣಿಯನ್ನು ತೆಗೆದೊಗೆಯುವಷ್ಟರಲ್ಲಿ ಭೀಷ್ಮನು ಹತ್ತು ಸಾವಿರ ತಲೆಹಾರಿಸಿದರೂ ಆ ದಂಡಿನ ದೊರೆ ನೆಲಕ್ಕೆ ಬೀಳುವನು. ಜೀವ ಬಿಡದೆ ಶರಪಂಜರದ ಮೇಲೆ ಪವಡಿಸಿದ ಭೀಷ್ಮನು, ದುರ್ಯೋಧನನ್ನು ಕರೆದು ತಲೆದಿಂಬು ಹಾಗೂ ಕುಡಿಯಲು ನೀರು ಕೇಳಲು, ಆತನು ಅರಳಿಯ ಲೋಡು, ನೀರು ತುಂಬಿದ ಬಂಗಾದ ಝರಿ ತಂದರೆ – “ಹಾಸಿಗೆಯ ತಕ್ಕಲೋಡಲ್ಲ” ಎಂದು ಕಣ್ತೆರೆದು, ಅರ್ಜುನನ ಮುಖ ನೋಡುತ್ತಲೇ ಅವನು ಬಾಣದ ತಿಗಟಿಕಟ್ಟಿ ತಲೆದಿಂಬು ಒದಗಿಸಿದನು. ಅಲ್ಲದೆ-

ಶ್ವೇತವಾನ ಹೊಡೆದಾನ ಬಾಣ
ಪಾತಾಳದಂದು ತಗದಾನ ಝರಿ |
ಪುಟದೀತೋ ಮ್ಯಾಲ ಕಾರಂಜಿ ಪರಿ |
ಬಾಯಾಗ ಬಿತ್ತು ನೀರಿsನ ಧಾರಿ |
ದುರ್ಯೋಧನ ಜಂಬುಕನ ಸಮಾನ
ನೀನೇ ಒಬ್ಬ ಸಿಂಹದ ಮರಿ
ಅಂದಾ ಭೀಷ್ಮಾಚಾರಿ ||

ಈ ಕಥೆ ರಾಜಮನೆತನದ್ದಾದರೂ ಜನಪದಕ್ಕೆ ಆದರ್ಶವೆನಿಸಿತು. ವೀರರಸ ರಾಜಪರಂಪರೆಗೆ ಹಾಕಿಕೊಟ್ಟ ಉಂಬಳಿಯಲ್ಲ. ಜನಪದಕ್ಕೆ ಪ್ರಭುತ್ವದ ಒಡೆತನವೂ ಇಲ್ಲವೆ?

ಜನಪದವು ಮೈಮುರಿದು ದುಡಿದು, ಹೊಟ್ಟೆತುಮಬ ಉಂಡು, ಕಣ್ಣು ತುಂಬ ನಿದ್ದೆ ಮಾಡಿ ಹೊತ್ತು ಮೂಡುವಷ್ಟರಲ್ಲಿ ಎದ್ದು ಹೊಸ ಉತ್ಸಾಹದೊಡನೆ ಹೊಸ ದಿವಸವನ್ನು ಸ್ವಾಗತಿಸಲು ಸಿದ್ಧವಾಗುವುದು. ತನಗೂ ತಿಳಿಯದಂತೆ ಜನಪದವು ಒಂದು ಉಪಾಸನೆಯನ್ನೇ ನಡೆಸಿದೆ. ಅದಾವುದು ಗೊತ್ತೆ? ಪ್ರತಿಯೊಬ್ಬನ ಹೊಟ್ಟೆಯಲ್ಲಿ ಜಠರಾಗ್ನಿಯಾಗಿ ಕುಳಿತು ಅನ್ನ ಪಚನಮಾಡುವ ಭಗವಂತನೇ ಜನಪದ ಜೀವನ ರಥಕ್ಕೆ ಸಾರಥಿ. ಅಂತೆಯೇ ರಥಿಯ ಅರ್ಜುನನಂತೆ ಮೂರು ಲೋಕದ ಗಂಡನೆನಿಸಿದ್ದಾನೆ. ಯೋಗೇಶ್ವರ –ಧನುರ್ಧಾರಿಗಳಂಥ ಜರಾಗ್ನಿ ಜೀವಿಗಳಿರುವಲ್ಲಿ ಸಿರಿಗೇನು ಕಡಿಮೆ, ಸಿಂಗರಕೇನು ಕಡಿಮೆ?

ಜೀವನವಿಡಿ ಸಾಧನೆ ಮಾಡುತ್ತ ಬಂದ ಜನಪದದ ಜೀವನಾನುಭವವೇ ಒಂದು ಮಹಾಸತ್ವವಾದರೆ, ಜನಪದಕಲೆಗಳಲ್ಲಿ ಒಂದಾದ ಸಾಹಿತ್ಯವು ಪರಮಸತ್ವವಾಗುವುದು, ಸಹಜ ಪ್ರೇಮವೇ ಆಗಿದೆ; ವಾಸ್ತವಿಕವೂ ಆಗಿವೆ. ಗರತಿಯ ಹಾಡು ಹಾಗೂ ಅವಳ ಸಾಹಿತ್ಯ ವಿದ್ಯಾರಣ್ಯರ ‘ಪಂಚದಶಿ’ಯಾದರೆ, ಗಂಡಸಿನ ಹಾಡು ಮತ್ತು ಅವನ ಸಾಹಿತ್ಯ ಅದೇ ವಿದ್ಯಾರಣ್ಯರ ‘ವ್ಯವಹಾರ ಮಾಧವೀಯ’ವಾಗಿದೆ.

ಸತ್ತ್ವಪೂರಿತ ಅನುಭವವನ್ನು ಸತ್ತ್ವಪ್ರೇರಿತವಾಗಿ ಹೇಳುವುದೇ ಜನಪದ ಸಾಹಿತ್ಯ ಅಭಿವ್ಯಕ್ತಿಯು ಸತ್ವಯುತವಾಗುವುದಕ್ಕೆ ಜನಪದವು ಹಲವಾರು ಉಪಾಯಗಳನ್ನು ಕಲ್ಪಿಸಿಕೊಂಡಿದೆ. ಜನಪದಕ್ಕೆ ತನ್ನದೇ ಆದ ಸ್ವಯಂಭೂ ಶಬ್ಧನಿಧಿ ಇರುವದಲ್ಲವೇ?

೧. ಮೂಲಭೂತ ಶಬ್ದಕ್ಕೆ ವಿಶೇಷಣದ ಹಿನ್ನೆಲೆಯಲ್ಲಿ ಜೋಡಿಸುವುದು ಉದಾ-ಎಳೆಚಂದ, ಕಿಸುಬಾಯಿ ಇತ್ಯಾದಿ.

೨. ಉಪಮಾನ, ದೃಷ್ಟಾಂತಾದಿ ಅಲಂಕಾರಗಲನ್ನು ಅಳವಡಿಸುವುದ ಉದಾ-ನೀರಥೆರಿ ಹಾಂಗ ನಿರಗಿ ಒದ್ದು ನಾರಿ ನಡೆವುದು ನಾಜೂಕಾ ಕುಂಬಳಕಾಯಿ ಒಯ್ದು ಕುಡುಗೋಲ್ಗೆ ಕೊಟ್ಟಂತೆ ನಮ್ಮ ಮಗಳನ್ನು ನಿಮಗೊಪ್ಪಿಸುವೆವು. ಎಕ್ಕೀಯ ಗಿಡದಾಗ ಹಕ್ಕಿ ಭೋರ್ಯಾಡಿದ್ಹಂಗ ಕನ್ಯೆಯ ತಾಯ್ತಂದೆಗಳ ಒಡಲು ಕಸಿವಿಸಿಗೊಳ್ಳುವುದು.

೩. ಗವಸಣಿಗೆಯಲ್ಲಿರುವ ಗಾದೆಯ ಮಾತನ್ನೋ ಒಡಪಿನ ನುಡಿಯನ್ನೋ ಬಳಸುವುದು ಉದಾ-ಆಸತ್ತು ಬೇಸತ್ತು ಅಕ್ಕನ ಮನೆಗೆ ಹೋದರೆ ಅಕ್ಕನ ಗಂಡ ಅವುಕ್ ಅಂದನು. ಹೀನ ಸುಳಿಯು ಬೋಳಿಸಿದರೂ ಹೋಗದು. ಹಿಡಿದರೆ ಹಿಡಿಕೆಯ ತುಂಬ, ಬಿಟ್ಟರೆ ಮನೆ ತುಂಬ. ಕರೆದರೆ ಬರೂದಿಲ್ಲ, ಕೈಹಿಡಿದರೆ ಬರುತ್ತದೆ.

ಬಾಯಾಗ ಹಲ್ಲಿಲ್ಲ ಎದಿಯಾಗ ಮೊಲಿಯಿಲ್ಲ
ಮಕ್ಕಳ ಹಡೆದಾಳ ಮನಿತುಂಬ | ಕೋಳೆವ್ವ,
ತಿಪ್ಪಿ ಕೆದರೂತ ಹೊರಟಾಳ ||

೪. ಅಡ್ಡಕತೆಯ ಆಖ್ಯಾನ-ವಿಶೇಷಣ-ಅಲಂಕಾರಗಳ ಬಳಕೆಯಿಂದ ವಿಷಯ ವಿವೇಚನೆ ಸಾಕಷ್ಟಾಗಿದ್ದರೂ ಹೆಚ್ಚು ಸ್ಪಷ್ಟಿಕರಣದ ಅಗತ್ಯವೆನಿಸಿದರೆ, ಗಾದೆಯ ಮಾತು ಉದಾಹರಿಸಿ, ವಿಷಯವನ್ನು ವ್ಯಾಖ್ಯೆಯಿಂದ ಪಡಿಮೂಡಿಸುತ್ತದೆ. ಅದೂ ಸಾಕಾಗದೆ ಇನ್ನೂ ಬೇಕೆನ್ನಿಸಿದರೆ ಅಡ್ಡಕತೆಯ ಆಖ್ಯಾನವನ್ನು ಪ್ರಯೋಗಿಸಬಹುದಾಗಿದೆ. ಇಸೋಪನ ನೀತಿಕಥೆಗಳೂ, ಶ್ರೀರಾಮಕೃಷ್ಣ ಪರಮಹಂಸರ ಹಾಗೂ ರಾಮತೀರ್ಥ ಸ್ವಾಮಿಗಳ ದೃಷ್ಟಾಂತ ಕತೆಗಳೂ ಉತ್ತಮ ಅಡ್ಡಗತೆಗಳಾಗಿವೆ. ಅದರಂತೆ ಕರ್ನಾಟಕ “ಇಸೋಪನೆನಿಸಿದ ದಿ.ಶಿವರುದ್ರಪ್ಪ ಸೋಪಮ್ಮ ಕುಲಕರ್ಣಿ ಅವರ “ನಾಡನೆಲೆಗಾರ”ದಂಥ ಪುಸ್ತಕಗಳಲ್ಲಿ ಬಂದ ಕಥೆಗಳೂ ಒಳ್ಳೆಯ ಅಡ್ಡಗತೆಗಳಾಗಿವೆ. ಈ ಎಲ್ಲ ಕಥೆಗಳನ್ನು ಶಿಷ್ಯರು ಬಳಸಿದ ಮಾತ್ರಕ್ಕೆ ಅವು ಶಿಷ್ಟಸಾಹಿತ್ಯವೆನಿಸಲಾರವು. ಅವು ಮೂಲತಃ ಜನಪದ ಸಂಪದವೇ ಆಗಿವೆ.”

ಶ್ರೀ ಪರಮಹಂಸರು ಹೇಳುವ, ಕಪ್ಪೆಗೊಂಡು ರೂಪಾಯಿ ಸಿಕ್ಕಿತ್ತು ಕಥೆಯಾಗಲಿ, ಶ್ರೀ ಕುಲಕರ್ಣಿಯವರು ಹೇಳಿದ, ಮಾವಿನ ಮರದಲ್ಲಿ ಕರ್ಚಿಕಾಯಿ ಆಗುವವೆಂದು ಉತ್ತರ ನೀಡಿದ ವಿದ್ಯಾರ್ಥಿಯ ಕಥೆಯಾಗಲಿ, ಜನಪದ ಜೀವನಾನುಭವದ ಸತ್ವವನ್ನುಂಡೆ ಮೈತೊಟ್ಟಿದೆಯೆಂದು ಕಂಡುಬರುವುದು.

ಜನಪದವು ತನ್ನ ನಿತ್ಯಜೀವನದಲ್ಲಿ ಬಳಸುವ ಇಡಿಯಭಾಷೆ ಕನ್ನಡ ಶಬ್ದಗಳಿಂದಲೇ ಪೂರ್ತಿಗೊಂಡಿದೆ. ಎರವಲಾಗಿ ತಂದ ಶಬ್ದ ಸಿಕ್ಕುವುದೇ ಕಠಿಣ. ಅನ್ಯದೇಶ್ಯ ಶಬ್ದವಾಗಿದ್ದರೆ, ಅದಕ್ಕೆ ಕನ್ನಡ ದೀಕ್ಷೆ ಕೊಡಲಾಗುತ್ತದೆ.

ಉದಾ – ಟೇಶನ್, ಬಂಗ್ಲೆ, ಮಾಸ್ತರ.

ವೈಜ್ಞಾನಿಕ ಶಬ್ದಗಳು ಕನ್ನಡದಲ್ಲಿ ಕಾಣಿಸಿಕೊಳ್ಳಬೇಕಾದರೆ, ಆ ಪರಿಭಾಷೆಯ ಅನ್ಯದೇಶ್ಯ ಶಬ್ದಗಳನ್ನು ಜನಪದದ ಬಾಯಲ್ಲಿ ಕೊಡಬೇಕು. ಬಳಿಕ, ವಿಷಯವಾಗಿದ್ದರೆ ಸ್ಪಷ್ಟಗೊಳಿಸಬೇಕು; ವಸ್ತುವಾಗಿದ್ದರೆ ತೋರಿಸಬೇಕು. ಆಗ ಜನಪದವು ಮೆಲ್ಲನೆ ಮೆಲಕಾಡಿಸಿ ಆ ಶಬ್ದ ರಸಾಯನವನ್ನು ಕನ್ನಡ ಪಡಿಯಚ್ಚಿಗಿಳಿಸಿ ಹೊರತೆಗೆಯುವ ಹೊತ್ತಿಗೆ ಅದು ಕನ್ನಡ ಶಬ್ದವೇ ಆಗಿರುತ್ತದೆ.

ಜನಪದ ಸತ್ವದಲ್ಲಿ ಭಾಷೆಯ ಪೆಂಪೂ, ಸಂಸಕೃತಿಯ ಸೊಂಪೂ ಯಥೇಚ್ಛವಾಗಿ ಹುದುಗಿರುತ್ತವೆ. ಅಂತೆಯೇ ಜನಪದ ಜೀವನವು ಅನ್ಯಭಾಷೆ ಸಂಸ್ಕೃತಿಗಳ ದಾಳಿಗೀಡಾಗುವುದು ಕಡಿಮೆ. ಪ್ರಭಾವಕ್ಕೀಡಾದರೂ ಅದು ಪೌಡರ್‌ಎನಿಸಬಹುದಲ್ಲದೆ, ಮೈಬಣ್ಣವಾಗಿ ಪರಿಣಮಿಸಲಾರದು. ಜನಪದ ಜೀವನದ ಉಸಿರಾದ ಜನಪದ ಸಾಹಿತ್ಯದ ಆಳವಾದ ಅಭ್ಯಾಸದಿಂದ, ನವಜೀವನಕ್ಕೆ ಬೇಕಾದ ಜೀವಸತ್ವಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.