ಗಂಡು ಮಕ್ಕಳ ಹಾಡುಗಳಲ್ಲಿ ಮುಖ್ಯವಾದವು ಲಾವಣಿಗಳು. ಶೃಂಗಾರ ರಸದಿಂದ ಮೊದಲು ಮಾಡಿ, ಶಾಂತಿರಸದವರೆಗೆ ಎಲ್ಲ ರಸದ ಲಾವಣಿಗಳೂ ಉಂಟು. ಹಲಸಂಗಿಯ ಖಾಜಾ ಭಾಯಿಯು ಶೃಂಗಾರ ರಸಕ್ಕೆ ಕಲಶವಾಗಿದ್ದರೆ, ಮುರಗೋಡದ ರಾಣು-ಕುಬಣ್ಣ, ವೀರರಸಕ್ಕೆ ಎತ್ತಿದ ಕೈ. ತೇರದಾಳದ ಗೋಪಾಳ ದುರದುಂಡಿಯು ವಿಡಂಬನವನ್ನು ಸೂರೆಗೊಳ್ಳುತ್ತಿದ್ದರೆ, ಜನವಾಡದ ನಾನಾ ಸಾಹೇಬನು ಹಾಸ್ಯದಿಂದ ಕಚಗುಳಿ ಆಡಿಸಬಲ್ಲನು. ತೇರದಾಳದ ಇನ್ನೊಬ್ಬ ಲಾವಣಿಕವಿ ನ್ಯಾಮಣ್ಣ, ಚಾಂದಕೋಟಿಯ ನಬಿ ಹಾಗೂ ಗೂಡುಸಾಹೇಬರು, ಕೋರಹಳ್ಳಿಯ ಮೌಲಾ, ಹದರಿಯ ಬಡೇಶಾ, ಕಲಬುರ್ಗಿಯ ಅಂಬಾದಾಸ, ಸಂಕದ ಸಿದ್ಧರಾಮಯ್ಯ, ಹುಲಕುಂದದ ಭೀಮಕವಿ, ಕೆರೂರಿನ ಸತ್ಯಪ್ಪ, ಕಡಣಿಯ ಕಲ್ಲಣ್ಣ ಮೊದಲಾದವರ ಹೆಸರುಗಳನ್ನು ಇಲ್ಲಿ ನೆನೆಯಬಹುದು. ಉತ್ತರ ಕರ್ನಾಟಕದ ಬಹುಜನ ಲಾವಣಿಕಾರರು ಮುಸ್ಲಿಮರಾಗಿದ್ದುದು ಲಕ್ಷಿಸತಕ್ಕ ಸಂಗತಿ.

ತಾಯಿಗರ್ಭದಲ್ಲಿ ಶಿಶುವಿಗೆ ಸಕಲ ಸಲಕರಣೆಗಳೂ ದೊರಕೊಳ್ಳುವ ಏರ್ಪಾಡು ಆಗಿರುವಂತೆ, ಪ್ರತಿಭೆಯ ರಾಜ್ಯದಲ್ಲಿಯೇ ಲಾವಣಿಗೆ ಧಾಟಿ, ತಂತ್ರ, ಅಲಂಕಾರ, ಛಂದಸ್ಸು, ಶಬ್ದ ಸಂಪತ್ತು ಮೊದಲಾದವುಗಳೆಲ್ಲ ಒದಗುತ್ತವೆಂದು ನಿಚ್ಚಳವಾಗಿ ಕಂಡುಬರುತ್ತದೆ.

ಏನು ಮುಂಗಾರಿ ಮಳಿಹಾಂಗ ಸಿಡಲ್‌| ಬಿದ್ದಿತು ಖಡಲ್‌|
ಎದಿ ಅಂತು ಧಡಲ್‌| ಆಗಿ ನಿಂತೆ ಮೂಕಾ
ಸಣ್ಣ ಶಾಲಿ ಉಟ್ಟ ಓಣಿಗುಂಟ
ಪೋರಿ ಎಷ್ಟ ಮಾಡತಿ ಮುರಕ
ನೀರಥೆರಿ ಹಾಂಗ ನಿರಗಿ ಒದ್ದು | ನಾರಿ ನಡೆವುದು ನಾಜೂಕ
ಆನಿ ನಡದಾಂಗ ಮಾಡಿ ಸಿಂಗಾರ |
ಮೈಮ್ಯಾಲ ಬಂಗಾರ ಬಿದ್ದಂಗ ಬೆಳಕ ||

ಈಕೆ ಮಾಟವಾದ ಮೈ ಕಟ್ಟಿನ ಮಹಿಣಿಯಾಗಿರದೆ ಗಿಡ್ಡ ಪೋರಿಯಾಗಿದ್ದಾಳೆ. ಇಲ್ಲಿ ವಿಷಯವೆಂಬ ದಾರವನ್ನು ಪವಣಿಸಿಕೊಂಡು ಶಬ್ದಮೌಕ್ತಿಕಗಳು ಸಾಲು ಹಿಡಿದು ಬರುತ್ತಿರುವುದನ್ನು ಕಂಡು ಆಶ್ಚರ್ಯಪಡದವರಾರು? “ಉರುಳ್ಯಾಡತಾಳ ಬಲು, ಹೊರಳ್ಯಾಡತಾಳ ತಳಮಳಿಸಿ ತಾಳದ ಸಂಕಟ” ಇದು ಸುಭದ್ರೆಯ ಕಳವಳದ ಪರಿ. “ಮಾತಾಡಸ್ತಾನ ಗಾಳಿ ಬೀಸ್ತಾನ ಕೈಹಿಡಿದೆಬ್ಬಿಸ್ತಾನ ಮಾಡಿ ಕೂಗ್ಯಾಟ” ಎಂಬುದು ಅಭಿಮನ್ಯುವಿನ ಸಾಂತ್ವನದ ರೀತಿ. “ಹಾಸಗೊಂಡು, ಮ್ಯಾಲ, ಹೊಚಗೊಂಡು, ಮಾರಿ, ಮುಚಗೊಂಡು ಕೃಷ್ಣ ಮಲಗಿದ” ಎಂಬುದು ಬಾಲಕೃಷ್ಣನ ಚೇಷ್ಟೆಯ ಬಗೆ. ಲಾವಣಿ ಪದವನ್ನು ರಚಿಸುವ ಕವಿಗೆ ಲಾವಣಿಕಾರರೆನ್ನುವಂತೆ, ಅದನ್ನು ಹಾಡುವವನಿಗೂ ಲಾವಣಿಕಾರನೆನ್ನುತ್ತಾರೆ. ಹಾಡಿ ಕೇಳಿದಾಗಲೇ ಕವಿಗೆ ಪೂರ್ಣ ಶ್ರೇಯಸ್ಸು. ತುಂತುನಿ ಹಿಡಿದು ಜೀ ಅಥವಾ ಗೀ ಎಳೆಯುವವನ ಕರಾಮತಿಯೂ ಹಾಡುಗಾರರ ಯಶಸ್ಸಿಗೆ ಕಾರಣವಾಗುತ್ತದೆ.

“ಸಿದ್ದು ಶಿವಲಿಂಗ ಹಾಡುದುವರಸಿ | ದನಿ ಎತ್ತರಸಿ |
ನುಡಿ ಕತ್ತರಿಸಿ | ಸುರಿದಂಗ ಮುತ್ತ |”
ಎನ್ನುವುದು ಹುಡುಗನ ಸತ್ವಕ್ಕೆ ಮಾದರಿ
“ಸಂಗು ವಸ್ತಾದ ರಾಮಪ್ಪನ ಹೆಸರ | ಶಿಶಾಹಾನ ಶಿಖರ |

ಖಾಜಾ ಕವೀಶ್ವರ ಅನಿಸಿ ಮಿಗಿಲ ||
ಖಂಡೂನ ಸೂರ ವೈರೀಗಿ ಬಿತ್ತು ದಿಗಿಲ ||

ಎನ್ನುವಲ್ಲಿ ತಿಂತಿಣಿಯವನ ಜೀಕಾರವು ಪ್ರತಿಪಕ್ಷದ ಹಾಡುಗಾರರನ್ನು ಮುಂದುಗಾಣದಂತೆ ಮಾಡುವುದೆನ್ನುವ ಭಾವ ಮೂಡಿದೆ.

ಆಶುಕವಿತ್ವ

ಅನೇಕ ಲಾವಣಿಕಾರರು ಆಶುಕವಿಗಳು. ಒಂದು ಸಾರಿ ಶ್ರಾವಣ ಸೋಮವಾರ ಗ್ರಾಮದೇವರ ಉತ್ಸವದ ಕಾಲಕ್ಕೆ ಶಿಡ್ಯಾಣ (ಶಿರಡೋಣ) ಎಂಬ ಊರವರು, ಆ ಭಾಗದಲ್ಲಿ ಹೆಸರಾದ ಲಾವಣಿಕಾರರನ್ನು ಕರೆಸಿದ್ದರು. ಅವರನ್ನು ಊರ ಚಾವಡಿಯಲ್ಲಿ ಇಳಿಸಲಾಗಿತ್ತು. ಹಳ್ಳದಲ್ಲಿ ಜಳಕಮಾಡಿ ಬರುವಷ್ಟರಲ್ಲಿ, ಚಾವಡಿಯಲ್ಲಿಯೇ ಊಟದ ಎಡೆ ಬಂದಿತ್ತು. ಊಟಮಾಡಿ ಅಲ್ಲಿಯೇ ಅಡ್ಡಾದರು. ಹೊತ್ತು ಹೊರಳಿಸಿದ ಬಳಿಕ, ಹಾಡಿಕೆ ಆರಂಭಿಸಲು ಕರೆ ಬಂತು. ಲಾವಣಿಕಾರರು ಅಂಗಿತೊಟ್ಟು, ರುಮಾಲ ಸುತ್ತಿಕೊಂಡರು. ಆದರೆ ಒಣಗಲು ಹಾಕಿದ ಒಂದು ನಡಕಟ್ಟು ಇಲ್ಲದಾಗಿತ್ತು. ಅಲ್ಲೆಲ್ಲ, ಹುಡುಕಾಡಿದರು, ಸಿಗಲಿಲಲ. ಸೊಂಟಕ್ಕೆ ನಡಕಟ್ಟು ಬಿಗಿದರೇ ಹಾಡಿಕೆಗೆ ಹುರುಪು ಬರುವುದು, ಆದರೆ ಅದು ಕಳದೇಹೋಗಿತ್ತು; ಯಾರೋ ಕದ್ದಿದ್ದರು ಅದನ್ನು.

ಲಾವಣಿ ಕೇಳಲು ಆರೆಂಟು ನೂರು ಜನ ನೆರೆದಿತ್ತು. ಲಾವಣಿಕಾರರುದಪ್ಪಿನ ಮೇಲೆ ಢಾಪು ಹಾಕಿದರು. ತುಂತುನಿಯವನು ನಾದವನ್ನೆತ್ತಿದನು. ಗಣಪತಿಯದೋ, ಸರಸ್ವತಿಯದೋ ಪ್ರಾರ್ಥನೆ ಮುಗಿದು, ಮುಖ್ಯ ಲಾವಣಿ ಆರಂಭಗೊಳ್ಳುವ ಮೊದಲು ಸೂಚನಾಪದ್ಯವೊಂದು ಹೊರಬಿತ್ತು. ಏನೆಂದರೆ-

ಶಿಡ್ಯಾಣಶಾರಾ | ಲಜ್ಜಗೇಡಿ ಊರಾ |
ತುಡುಗ ಮಾಡ್ಯಾರೊ ನಮ್ಮ ನಡಕಟ್ಟ ||
ತುಡುಗ ಮಾಡ್ಯಾರ ನಮ್ಮ ನಡಕಟ್ಟ
ನೀವು ಜ್ವಾಕಿಲಿಡಿರೋ ಕಾಲಿನ ಮಟ್ಟ ||

ಎಚ್ಚರಿಕೆಯ ಆ ಪದ್ಯ ಕೇಳಿದ, ನೆರೆದವರೆಲ್ಲ ಒಮ್ಮೆ ಖೊಳ್ಳನೆ ನಕ್ಕರು. ಆಮೇಲೆ ದಿಗಿಲಿಗೆ ಬಿದ್ದರು. ಹೀಗೆ ಪ್ರಾಸಂಗಿಕವಾಗಿ ಕೆಲವು ಚುಟುಕು ಲಾವಣಿಗಳನ್ನು ಪವಣಿಸಿ ಹಾಡುವುದುಂಟು. ಒಮ್ಮೊಮ್ಮೆ ಪ್ರತಿಪಕ್ಷದವರ ಮುಖಕ್ಕೆ ಕನ್ನಡಿ ಹಿಡಿದಂತೆ ಅವರ ಮೊಂಡು ಮೂಗು, ಗುಜ್ಜು ಕೊರಲು ತೋರಿಸಿ ಕೊಡುವ ಇಡಿಯ ಲಾವಣಿಯನ್ನು ರಚಿಸಿ ಹಾಡುವುದೂ ಉಂಟು.

ಅಪಸ್ವರ ಹಾಡಿಕೆ

ಪ್ರತಿಪಕ್ಷದವರು ದಪ್ಪ-ತುಂತುನಿಗಳ ತಾಳಮೇಳವನ್ನೇ ತಪ್ಪಿಸಿಕೊಂಡು, ತಮ್ಮದೇ ಆದ ಚೀರುದನಿಯಲ್ಲಿಯೋ ಕೇರುದನಿಯಲ್ಲಿಯೋ ಹಾಡಿ ಇಡಿಯಾಗಿ ಅಪಸ್ವರ ಕೇಳಿಸಿ, ನೆರೆದವರಿಗೆ ತಲೆಬೇನೆ ಏಳುವಂತೆ ಮಾಡಿದರು, ಆಗ “ಅಪಸ್ವರ ಗಾಯಕ” ಎನ್ನುವ ಲಾವಣಿಯನ್ನು ರಚಿಸಿ, ಖಾಜಾಭಾಯಿ ಕವಿ ಹಾಡಿದನು-“ಬರೆ ಮೊಟ್ಟಿ ಕವಿ ನೀವು ಕಟ್ಟಿ | ಒಯ್ದೇನು ಒಲಿಯಾಗ ಸುಟ್ಟಿ | ಮುಂಚೆ ತಾಲಸ್ವರ ಇಲ್ಲ ಗಟ್ಟಿ | ಅಪಸ್ವರ ಗಾಯನ ಮಾಡಿ ಹಸಗಟ್ಟಿ”- ಎಂದು ಜರಿದು, “ನಿಮ್ಮಂಥ ಪ್ರಾಣಿ ಒಬ್ಬ ಅಪಸ್ವರ ಗಾಯನ ಕಲಿತ | ನಿಮಗೆ ಹೇಳತೀನಿ ದೃಷ್ಟಾಂತ | ಸಭಾದಾಗ ನಿಂತ |” ಎಂದು ಅಪಸ್ವರ ಗಾಯಕನ ಒಂದು ಪ್ರಸಂಗವನ್ನು ಲಾವಣಿಯಲ್ಲಿ ರಚಿಸಿ ಹಾಡುತ್ತಾನೆ. ಅದನ್ನು ಕೇಳಿ ನೆರೆದವರು ನಕ್ಕರು, ಪ್ರತಿಪಕ್ಷದವರು ನಗೆಗೀಡಾದರು. ಆ ಲಾವಣಿಯು ಕೆಳಗೆ ಕಾಣಿಸಿದ ಸಾಲುಗಳಿಂದ ಮುಕ್ತಾಯಗೊಳ್ಳುವುದು:

ಅಪಸ್ವರ ಗಾಯನದಿಂದ | ದೆವ್ವಾದರು ನಿಂದ್ರುದಿಲ್ಲ ಮುಂದ |
ಸಭಾ ಹ್ಯಾಂಗ ಕೇಳಬೇಕು ಚಂದ |
ತಾಳಬಿಟ್ಟು ಹಾಡಿದರ ದೋಷ ಆದ ಅದರಿಂದ ||

ಡೊಳ್ಳಿನ ಹಾಡುಗಳು

ಲಾವಣಿಗಳಂತೆ ದೀರ್ಘವಾದ ಗಂಡಸರ ಹಾಡುಗಳೆಂದರೆ ಡೊಳ್ಳಿನ ಪದಗಳು, ಡೊಳ್ಳು ಬಾರಿಸುತ್ತಾ ರಗಳೆಯ ರೀತಿಯಲ್ಲಿ ಬೀರನ ಕಥೆಯನ್ನೋ, ಬೀರಭಕ್ತನ ಕಥೆಯನ್ನೋ ಹಾಡಿನಲ್ಲಿ ಹೇಳುವುದುಂಟು. “ದೇವರು ಬಂದಾರ ಬನ್ನಿರೇ | ನಮ್ಮ ಸ್ವಾಮಿ ಬಂದಾರ ಬನ್ನಿರೇ” ಎಂದು ಡೊಳ್ಳಿನ ಪದಗಳು ಆರಂಭವಾಗುವುವು. ಬಂದ ದೇವರು ಎಂಥವನು, ಏನು ಮಾಡಿದನು, ಮೊದಲಾದ ಸಂಗತಿಗಳನ್ನು ಹೇಳಿಬಿಟ್ಟರೆ, ಸಾಕೆನಿಸುತ್ತದೆ.

ಅಂಗೈ ಜೋಳಿಗಿ | ಮುಂಗೈ ಬೆತ್ತ | ತುದಿ ಬೆರಳೀಬತ್ತಿ ಹಚ್ಯಾನೇ |
ತುದಿ ಬೆರಳೀಬತ್ತಿ ಹಚ್ಯಾನೇ ಅವ | ಕಗ್ಗಾಲ ಕಣವೀ ಹಿಡಿದಾನೆ |
ಕಗ್ಗಾಲ ಕಣವೀಯ ಹಿಡಿದಾನೇ
ಅವ | ಮುಗ್ಗಾಲ ದಾರಿಗೆ ಬಂದಾನೇ | ಅವ |
ಗೌಳೇರಣ್ಣನ ಕಂಡಾನೆ ||

ಈ ರೀತಿ “ನಮ್ಮ ದೇವರು” ಬರುವುದನ್ನು ತಿಳಿದರೆ, ಆ ದೇವರ ಭಕ್ತರಲ್ಲೊಬ್ಬನಾದ ಮಾಳಿಂಗರಾಯನ ಬಗೆಯನ್ನಿಷ್ಟು ತಿಳಿಯಬೇಡವೇ?

ಹೂವಿನ ಝಲ್ಲ್ಯಾ ಎತ್ತಿಹನೋ
ಸೀತಾಳ ಬಿಂದೀಗಿ ಹೊಲಿನೋ |
ಹೋಮದ ಕಂಬಳಿ ಮಡಗಿಹನೋ |
ನೇಮದ ಬೆತ್ತ ಹಿಡಿದಿಹನೋ ||

ಮಾಳಿಂಗರಾಯನೆಂದರೆ ಶಿವನ ಮನೆಯ ಸಿದ್ಧ. ಅವನು ಹಗಲು ಹೊತ್ತಿನಲ್ಲಿ ಭಾಗಿ (ಕುರಿಯ ಹಿಂಡು)ಯ ಧ್ಯಾನದಲ್ಲಿ, ಇರುಳು ಹೊತ್ತನ್ನು ಗುರುವಿನ ಧ್ಯಾನದಲ್ಲಿ ಕಳೆಯುವನು. ಅವನು ಅಂಗೈಗೆ ಐನೂರು, ಮುಂಗೈಗೆ ಮುನ್ನೂರು ಲಿಂಗಗಳನ್ನು ಒಳಗೊಂಡು, ಸಾವಿರದ ಏಳುನೂರು ಲಿಂಗಗಳ ಭಕ್ತಿಯನ್ನು ಮಾಡುತ್ತಾನಂತೆ!

ಅಣಿಪೀಣಿ ಹಾಡು

ಅಕ್ಕತಂಗಿಯರು ದೀಪಾವಳಿ ಹಬ್ಬದಲ್ಲಿ ತಮ್ಮ ಅಣ್ಣ-ತಮ್ಮಂದಿರೊಂದಿಗೆ ಆರತಿ ಬೆಳಗಿದರೆ, ಅವರ ಸಹಜಜೀವಿಗಳಾದ ದನಗಳಿಗೇಕೆ ಬೇಡ ಆರತಿ? ಆರತಿ ಬೆಳಗುವಾಗ ಮಂತ್ರೋಚ್ಚಾರಣೆ ಬೇಕಾಗುತ್ತದೆ. ಆ ಮಂತ್ರೋಚ್ಚಾರಣೆಯ ಸ್ವರೂಪದಲ್ಲಿರುವ ಹಾಡುಗಳೇ ಅಣಿಪೀಣಿಯ ಹಾಡುಗಳೆನಿಸುತ್ತವೆ. ಮಾದರಿಯಾಗಿ ಒಂದೆರಡು ಅಣಿಪೀಣಿಯ ಹಾಡುಗಳನ್ನು ಇಲ್ಲಿ ಗಮನಿಸುವಾ.

ಹಿಂಡಾಕಳ ಬಂಡಾಕಳ | ನಡಗಿರಿ ಚಿಂಚಾಕಳ |
ಸಂಗಯ್ಯನ ಗುಡಿಮುಂದ ಸರಸರದು ಹೋಗಾಗ
ನಿಂಗಯ್ಯನ ಗುಡಿಮುಂದೆ ನಿಗನಿಗರಿ ಹೋದಾಗ
ಹಳ್ಳೂರ ಮನಿಮುಂದೆ ಹಲಿಹಲಿ ಅನ್ನುವಾಗ
ಬೇಲೂರು ಮನಿಮುಂದ ಬೇಲಿಯ ಹಾರುವಾಗ
ನಮ್ಮೂರ ಗೂಳಿ ಸರಸರದು ಗುದ್ದಾಗ
ಅಣಿಗೋ ಪೀಣಿಗೋ|
ನಮ್ಮಾಕಳ ಪೀಡಾ ಹೊಳಿ ಆಚಿಗೋ

ಅಣಿಪೀಣಿಯ ಹಾಡುಗಳಲ್ಲಿ ದನಗಾಹಿಗಳ ವಿಚತ್ರ ಬಯಕೆಗಳನ್ನೂ ಕಾಣಬಹುದು. ಮಣಕ ಮಣಕ ಈದಿರಬೇಕು, ಮಣಕಿನ ಗಿಣ್ಣ ಕಾಸಿರಬೇಕು, ಸರಬರ ಸರಬರ ಸುರಿದಿರಬೇಕು ಇತ್ಯಾದಿ.

ಈ ಹಾಡುಗಳಲ್ಲಿ ದನಗಾಹಿಗಳ ನಿರೀಕ್ಷಣ ಶಕ್ತಿಯನ್ನು ಗುರುತಿಸಬಹುದಾಗಿದೆ.

ಹಾದಿಯ ಹಾಡು

ದನಗಾಹಿಯೇ ಇರಲಿ, ಬಂಡಿ ಹೊಡೆಯುವವನೇ ಇರಲಿ, ಅವನಿಗೆ ದಾರಿ ಸಾಗುವುದು ಒಮ್ಮೊಮ್ಮೆ ಬೇಸರವಾಗುತ್ತದೆ. ಆ ಬೇಸರವನ್ನು ಕಳೆಯುವ ಸಲುವಾಗಿ, ಹಾಡಿಗೆ ಮೊರೆ ಹೋಗಬೇಕಾಗುತ್ತದೆ. ಅವೇ ಹಾದಿಯ ಹಾಡು. ಹಾದಿಯ ಹಾಡಿಗೆ ವಿಷಯ ಇಂಥದೇ ಇರಬೇಕೆಂಬ ನಿಯಮವಿಲ್ಲ.

ಮುಂಜಾನೆ ಎದ್ದೀವಪ್ಪ ಕಾಜಿರಯ್ಯ
ರೊಟ್ಟಿಮಸರ ಉಂಡಿವಪ್ಪ ಕಾಜಿರಯ್ಯ
ಊರದಾರಿ ಹಿಡಿದೀವಪ್ಪ ಕಾಜಿರಯ್ಯ
ಸಜ್ಜೀ ಹೊಲ ಕಂಡೀವಪ್ಪ ಕಾಜಿರಯ್ಯ
ನಾಕು ತೆನಿ ಮುರಿದೀವಪ್ಪ ಕಾಜಿರಯ್ಯ

ಹಗಲು ಹೊತ್ತಿನಲ್ಲಿ ಕೆಲಸಮಾಡಿ ದಣಿದರೂ ಸಂಜೆಯ ಊಟವಾದ ಮೇಲೆ ತಾಸೆರಡು ತಾಸು ವಿನೋದ-ರಂಜನೆಗಳಲ್ಲಿ ಹೊತ್ತು ಕಳೆಯಬೇಕೆನಿಸುತ್ತದೆ. ತರುಣರು-ಯುವಕರು ಬಯಲಾಟದ ಮೇಳದಲ್ಲಿ ಸೇರಿಕೊಳ್ಳುವುದು ಸ್ವಾಭಾವಿಕ.

ಬಯಲಾಟದಲ್ಲಿ ಸೇರಿದವರು ಲಹರಿ ಬಂದಾಗಲೆಲ್ಲ – “ನೀ ಕೊಟ್ಟ ವಚನವನು ಬಲು ಜ್ವಾಕಿಲಿಡು ಕಂಡ್ಯಾ” ಎಂಬ ಚುಟುಕೆಯನ್ನೋ, “ಎನ್ನವಾರೀಗಿ ತಕ್ಕವನು | ತಕ್ಕವನು | ನೀ ಸುಂದರಾ | ಹರಿಶ್ಚಂದರಾ ಬಾರೋ ಬಾ” ಎಂಬ ಪಲ್ಲವಿಯನ್ನೋ ಗೊಣಗುತ್ತಿರುವುದನ್ನು ಕೇಳಬಹುದು.

ಭಜನೆ-ಅನುಭಾವ

ನಿಜಗುಣ ಶಿವಯೋಗಿಗಳ ಹಾಗೂ ಸಣ್ಣಪ್ಪನಂಥವರ ಹಾಡುಗಳನ್ನೂ, ದಾಸರ ಪದಗಳನ್ನೂ ಬಿಟ್ಟರೂ ಭಜನೆಗೆ ಜಾನಪದ ಅನುಭಾವವು ಸಾಕಷ್ಟು ಪದಗಳನ್ನು ಅಳವಡಿಸಿಕೊಟ್ಟಿದೆ. ಅನುಭಾವದ ಬಾಲಹಿಡಿದು ತನುಭಾವದ ಪದಗಳೂ ಬರುವುದುಂಟು. ಹೆಚ್ಚಾಗಿ ಸಂಸಾರದ ಬಗ್ಗೆ ಹೇಯ ಹುಟ್ಟಿಸುವ ಪದಗಳನ್ನು ಹಾಡಿ, ಮನಸ್ಸನ್ನು ಹಗುರ ಮಾಡಿಕೊಳ್ಳುವರು. ಹೆಣ್ಣು, ಹೊನ್ನು, ಮಣ್ಣುಗಳನ್ನು ಹೀಗಳಿಯುವ ರೂಢಿ ಜನಪದಕ್ಕೂ ಅಂಟಿಕೊಂಡಿದೆ “ಏನು ಭಲಾ ನಟ್ಟಿತಪ್ಪ ಎನಗ ಮುಳ್ಳಾ | ಬ್ಯಾನಿ ಹೇಳಲಾರೆನಪ್ಪ ಇದರ ಘೋಳಾ” ಎಂಬ ಪಲ್ಲವಿಯ ಹಾಡು, ಹಲವು ವಿಧದ ಮುಳ್ಳುಗಳಿಂದಾಗುವ ನೋವು-ಅಳುಕುಗಳನ್ನು ಹೇಳುತ್ತಾ ಹೋಗುತ್ತದೆ.

ಗುರುಶಿಷ್ಯರ ಸಂಬಂಧವನ್ನು ಹೇಳುವ ಹಾಡುಗಳೂ ಅಸಂಖ್ಯವಾಗಿರುತ್ತವೆ. “ಕಡಕೊಳ್ಳದ ನಾ ಗುಲಾಮ | ನೀವು | ಕರೆದಲ್ಲಿಗೆ ನಾ ಬರಾವ | ಹಾಕಿಕೊಟ್ಟ ಜಾಗಿರಿ ಇನಾಮ | ನಾ ಗುರುವಿಗೆ ಮಾಡತಿನಿ ಸಲಾಮ” ಎಂದು ಆರಂಭಗೊಂಡ ಹಾಡು, “ಕೈಲಾಸದೊಳಗ, ನಾ ಇರಾಂವ | ನಾ | ರಸರಾಯ ಹೋಳಿಗಿ ತುಪ್ಪ ಜಡ್ಯಾಂವ | ಗುಣಬಿಟ್ಟು ಗುರುವಿನ ಕೂಡಾಂವ |

ಗುರು ಮಡಿವಾಳಯ್ಯನ ಹಾಡಿ ಹರಸಾಂವ” ಎಂಬಲ್ಲಿಗೆ ಮುಕ್ತಾಯಗೊಳ್ಳುವುದು.

ಕೆಲವೊಂದು ಬೆಡಗಿನ ಹಾಡುಗಳೂ ಬಳಕೆಯಲ್ಲಿವೆ. ಭಾಷೆಯೇನೋ ಸುಲಭ; ಅರ್ಥ ಬಿಗಿ.

ನೀರು ಇಲ್ಲದೆ ಜಳಕ ಮಾಡಿರಬೇಕು ಅರಿವೆಯಿಲ್ಲದೆ
ಮಡಿ ಉಟ್ಟಿರಬೇಕು ||
ಉಣ್ಣದೆ ಹೊಟ್ಟಿ ತುಂಬಿರಬೇಕು
ಎಚ್ಚರದೊಳಗೆ ನಿದ್ರೆ ಹತ್ತಿರಬೇಕು ||
ಚಿಂತ್ಯಾಗ ಸಂತೋಷ ಆಗಿರಬೇಕು
ಭ್ರಾಂತಿ ಬಡಿದು ಬ್ರಹ್ಮ ದೊರಕಿರಬೇಕು
ಜನರಿಗೆ ಹುಚ್ಚನಾಂಗ ಕಾಣಿಸಬೇಕು
ಹಿಂದುಮುಂದಿನ ಸುದ್ದಿ ತಿಳಿದಿರಬೇಕು ||

ಇದೇ ಕುಂದಿಲ್ಲದ ಮುಕ್ತಿಯೆಂದೂ, ನಿರುಪಾಧಿಗೆ ಹುಟ್ಟಿದ ಮಗನೆಂದೂ ಹೇಳಾಗುವದು.

ಶೃಂಗಾರ ರಸ

ಹಲಸಂಗಿಯ ಖಾಜಾಭಾಯಿ ಹುಟ್ಟಾ ಶೃಂಗಾರ ಕವಿ, ಈ ಕೆಳಗಿನ ಸಾಲುಗಳಲ್ಲಿ ಅವನ ಶೃಂಗಾರ ರಸದ ಸ್ವಾರಸ್ಯವನ್ನು ಗುರುತಿಸಬಹುದಾಗಿದೆ.

ಹಲಸಂಗಿ ಊರ ಪ್ಯಾಟಿಯೊಳಗ
ಅರಿಸಿಣ ತೆನಿಯಂಥಾ ಹುಡುಗಿ
ಮನಸೀನಾಗ ನಟ್ಟಿದಾಳ ಎಳಿ ಕಮಲಾ |
ನಿತ್ಯ ಕನಸೀನಾಗ ಬರ್ತಾಳೀಕಿ ಹಗಲೆಲ್ಲ |
ಎನ್ನ ಮನಸ ಇಟ್ಟು ನೆನಿಸಿ ಹೋದ್ವು ಕೈಕಾಲ |
ಗದ್ದಲ ಮ್ಯಾಲ ಗರಿಯನತ್ತ, ಮೆಲ್ಲಕ ಪೋರಿ ಮಾತಾಡಿದರ
ಕಲ್ಲಿನಂಥ ಮನಸು ಕರಗಿ ಆದೀತ ಸಾಪ |
ಈಚೀ ಸ್ವರ ಸಂಪ ||

ಉಚ್ಚ ಜೀವನದ ಕೃಷಿ ನಡೆಯಿಸಿದವರು, ಸಂಸಾರದ ನೆಲೆಗಾಣದೆ ಮುಳುಗುತ್ತಿರುವವರನ್ನು ತಮ್ಮತ್ತ ಕರೆಯುವುದೂ ಉಂಟು. ಅಂಥ ಕರೆಗಳು, ಜನಪದ ಗೀತೆಗಳಾಗಿವೆ.

ವಿರಕ್ತಿ ಮಾರ್ಗ

“ಬರತೀರ್ಯಾ | ಇಲ್ಲೇ ಇರತೀರ್ಯಾ?” ಎಂಬುದು ಒಂದು ಹಾಡಿನ ಪಲ್ಲವಿ, “ಧರೆಯ ಭೋಗವ ನೀಗಿ ವರಮೋಕ್ಷ ಪಡೆಯಲು” ಎನ್ನುವುದೇ ಅನುಪಲ್ಲವಿ. ಇದ್ದ ಸ್ಥಿತಿಯಂತೂ ಈಗ ಅತಿ ಆಕರ್ಷಕವಾಗಿದೆ. ಇನ್ನೊಂದನ್ನು ಯೋಚಿಸುವುದಕ್ಕೆ ಅವಕಾಶವೇ ಇಲ್ಲ. ಆದರೆ ಇದ್ಧ ಸ್ಥಿತಿ ಅದೆಷ್ಟು ಗಂಡಾಂತರದ್ದಾಗಿದೆ; ಅದೆಷ್ಟು ಹೇಸಿಕೆಯದಾಗಿದೆ- ಎಂಬುದನ್ನು ಮುಂದಿನ ನುಡಿಗಳು ಸ್ಪಷ್ಟಗೊಳಿಸುತ್ತವೆ.

ಅಕ್ಕರೆಯ ಬಳವನ್ನೂ ಸಕ್ಕರೆಯ ಸವಿಯೂಟವನ್ನೂ ಬಿಟ್ಟು ಕೊಡಬೇಕಾಗುವುದಲ್ಲದೆ, ರೂಡಿಸಿದ ಸೊಕ್ಕುಸಡಗರವನ್ನೂ ತೆಕ್ಕೆಗಾದಿಗಳನ್ನೂ ಅಲ್ಲದೆ ರೊಕ್ಕ-ತಿಜೂರಿಯ ಕೀಲಿ ಕೈಯನ್ನೂ ಬಿಟ್ಟು ಬರಬೇಕಾಗುವುದು, ಆದ್ದರಿಂದ ಬರತೀರ್ಯಾ, ಇಲ್ಲೇ ಇರತೀರ್ಯಾ?

ತುಂಟತಗಲವ ಮಾಡಿ ಗಳಿಸಿದ ಹೊಲ ಮನೆಗಳನ್ನೂ, ಎಂಟೆತ್ತಿನ ಕಮತ-ಸಕಲೈಶ್ವರ್ಯಗಳನ್ನೂ, ನೆಂಟರು ಬಂಟರುಗಳ ಕೂಡ ಗುದ್ದಾಡಿ ಗಂಟಲು ಹರಕೊಂಡು ಗಳಿಗೆ ಮಾಡುವುದನ್ನು ಬಿಟ್ಟುಕೊಟ್ಟು ಬರಬೇಕಾಗುವುದು. ಆದ್ದರಿಂದ ಬರತೀರ್ಯಾ, ಇಲ್ಲೇ ಇರತೀರ್ಯಾ?

ಅರ್ಥ ಲೋಭ, ಅಧಿಕಾರ ಮದ, ಇಷ್ಟಮಿತ್ರ, ದುಷ್ಟಚಟ ಇವುಗಳೊಡನೆ ಕಟೆದ ಕಲ್ಲಿನ ಕಂಬ ಕಟ್ಟಿದ ಮನೆಯನ್ನೂ, ಕುಟಿಲ ಸಂಸಾರದ ಕಿಟಕಿಯನ್ನೂ ಬಿಟ್ಟುಕೊಟ್ಟು ಬರಬೇಕಾಗುವುದು. ಆದ್ದರಿಂದ ಬರತೀರ್ಯಾ, ಇಲ್ಲೇ ಇರತೀರ್ಯಾ?

“ಕರೆದರೆ ಬರುವುದಿಲ್ಲ; ಕೈ ಹಿಡಿದರೆ ಬರುವುದು. ಅದಾವ ದೀನಸು?” ಎಂಬ ಒಡಪಿದೆ. ಆ ದೀನಸು ತಂಬಿಗೆಯೆಂದು ಹೇಳಲಾಗುವುದು. ಅದು ಸಹ ಕರೆದರೆ ಬರಲಾರದು, ಕೈ ಹಿಡಿದರೆ ಮಾತ್ರ ಬರಬಲ್ಲದು. ಉಚ್ಚ ಜೀವನದ ದಾರಿಗೆ, ವಿಕಾಸಜೀವನದ ಹಾದಿಗೆ ಕರೆದರೆ ಬರುವವರು ಕಡಿಮೆ; ಸಿದ್ಧತೆಯಾದವರೇ ಬರಬಲ್ಲರು.

ಎರಡು ಸೂಚನೆ

ಜನಪದ ಗೀತೆಗಳ ಬಗ್ಗೆ ಎರಡು ಮುಖ್ಯ ಮಾತುಗಳನ್ನು ಹೇಳಬೇಕಾಗಿದೆ. ಒಂದು ಅವುಗಳ ಧಾಟಿಯನ್ನು ಕಾಪಾಡಿಕೊಳ್ಳುವ ಇನ್ನೊಂದು ಆ ಸಂದರ್ಭವನ್ನು ಕಳಕೊಂಡ ಬಗ್ಗೆ ವಿಷಾದ.

ಜೀವನವನ್ನು ಬೆಂಬಲಿಸಿ ಬರುವ ಜನಪದ ಗೀತೆಗಳು, ಜೀವನವು ಎಡವಿದಲ್ಲಿ ಎಡವಿ, ಕುಂಟಿದಲ್ಲಿ ಕುಂಟಿ, ಮುಗ್ಗರಿಸಿದಲ್ಲಿ ಮುಗ್ಗರಿಸುವುದು ಅನಿವಾರ್ಯವೇ ಆಗಿದೆ. ಜನಪದಕ್ಕೆ ಹಳ್ಳಿಯೇ ನೆಲೆಯಾಗಿದೆ. ಹಳ್ಳಿಯ ಮುಖ್ಯ ಉದ್ಯೋಗಗಳಾದ ಮೇಟಿ-ರಾಟಿಗಳೇ ಅಳಿದರೆ ದೇಶದ ಆಟವೇ ನಿಂತು ಹೋಗುವುದರಲ್ಲಿ ಸಂಶಯವಿಲ್ಲ. ಇನ್ನು ಉಳಿದ ಉದ್ಯೋಗಗಳ ಬವಣೆ ಹೇಳತೀರದು. ಒಕ್ಕಲಿಗನು ಉತ್ತುವಾಗ, ಬಿತ್ತುವಾಗ, ಹಂತಿ ತುಳಿಸುವಾಗ ಹಾಡುವ ಹಾಡುಗಳು ಆ ಉದ್ಯೋಗಗಳಿಗೆ ಮಂತ್ರಗಳಿದ್ದ ಹಾಗೆ. ಒಕ್ಕಲಿಗನ ಉಪಕರಣಗಳೇ ಇಂದು ಬದಲಾಗಿರುವಾಗ, ಕೃಷಿ ಮಾಡುವ ರೀತಿಯೇ ಬೇರ್ಪಟ್ಟಾಗ ಅವನು ಹಾಡುವುದು ಯಾವಾಗ? ಹಳ್ಳಿಯಲ್ಲಿ ಬೀಸುಕುಟ್ಟುವ ಕೆಲಸಗಳನ್ನು ಯಂತ್ರಗಿರಣಿಗಳು ಮಾಡಹತ್ತಿದರೆ, ಹೆಣ್ಣು ಮಕ್ಕಳು ಹಾಡುವುದೆಲ್ಲಿ? ಹಾಡುವ ಸಂದರ್ಭವೇ ಅಡಗಿ ರೂಢಿಯೇ ತಪ್ಪಿದರೆ ಆ ಧಾಟಿಗಳು ಉಳಕೊಳ್ಳುವ ಬಗೆ ಹೇಗೆ? ಅಲ್ಲಿಯ ಇಲ್ಲಿಯ ಜನಪದ ಗೀತೆಗಳನ್ನು ಸಂಗ್ರಹಿಸಿ ಸುಶಿಕ್ಷಿತರು ಅವುಗಳನ್ನು ಪುಸ್ತಕರೂಪದಲ್ಲಿ ತರಬಹುದು. ಅಲ್ಲದೆ ಅವುಗಳ ಸ್ವಾರಸ್ಯವನ್ನೂ ಮಹತಿಯನ್ನೂ ಅರಹುವ ವಿವೇಚನೆ-ವಿಮರ್ಶೆಗಳ ದೊಡ್ಡ ದೊಡ್ಡ ಗ್ರಂಥಗಳನ್ನು ರಚಿಸಬಹುದು. ಆದರೆ ಆ ಗೀತೆಗಳು ಉದ್ಯೋಗದ ಸಾಂಗತ್ಯವನ್ನು ಕಳಕೊಂಡು ಈಗಾಗಲೇ ವೈಧವ್ಯಕ್ಕೆ ಈಡಾಗಿವೆ. “ಹಣಚಿಬೊಟ್ಟಿನ ಮ್ಯಾಲ ಹರಿದಾಡುವ ಕುಂಕುಮ” ಅಳುಕಿ ಹೋಗಿದೆ. ಹಣಚಿಬೊಟ್ಟಿನ ಹಸಿರು ಮಾತ್ರ ಉಳಿದಿದೆ.

ವಿಧವೆಗೆ ಮತ್ತೊಬ್ಬ ಗಂಡಸು ದೊರೆಯಬಹುದು, ಆದರೆ ಅವನು ಗಂಡನೆನಿಸನು. ಆದ್ದರಿಂದ ಆಕೆ ಮತ್ತೆ ಮುತ್ತೈಯದೆ ಆಗುವ ದಾರಿಯಲ್ಲಿದೆ. ಸತ್ತುಹೋದ ಗಂಡ, ಸತ್ತಂತೆ ಬದುಕಿದ ಹೆಂಡತಿ. ಕಳಚಿಹೋದ ಉದ್ಯೋಗ ಹಳಸಿಹೋದ ಜನಪದಗೀತ. ಜೀವನದ ವಸ್ತುವೇ ಇಲ್ಲವೆಂದಾಗ ಅದನ್ನು ಆಶ್ರಯಿಸುವ ನೆರಳೆಲ್ಲಿ?

ಗೀತ ಸಂಗ್ರಹವು ಪುಸ್ತಕರೂಪ ತಾಳಿದರೆ, ಅವುಗಳ ಧಾಟಿಗಳ ಸಂಗ್ರಹವು ಧ್ವನಿಮುದ್ರಿಕೆಯ ರೂಪ ತಾಳುವುದು! ಆ ಪುಸ್ತಕ ಹಾಗೂ ಆ ಧ್ವನಿಮುದ್ರಿಕೆಗಳು ಸದ್ಯಕ್ಕಂತೂ ನಮ್ಮ ಪಾಲಿಗೆ ಶವದ ಪೆಟ್ಟಿಗೆಗಳಾಗಿ ಪರಿಣಮಿಸಿವೆಯೆಂದು ವಿಷಾದಿಸಬೇಕಾಗಿದೆ.

ಉದ್ಯೋಗ ಮಾಡುವಾಗ ಮತ್ತು ಶುಭಶೋಭನ ಪ್ರಸಂಗ ಒದಗಿದಾಗ ಹಾಡುವ ಗೀತಗಳಿಂದ ಒಂದು ಸಾರ್ಥಕವಾದ ಪರಿಣಾಮವಾಗುತ್ತದೆ; ಅದರಿಂದ ಮೈ-ಮೈನಗಳಿಗೆ ನೆಮ್ಮದಿ ಸಾಧಿಸುತ್ತದೆ. ಅದು ಸಂಸಾರಸಾಗರದಲ್ಲಿ ಈಸಬೇಕೆಂಬ ಈರ್ಷೆಯನ್ನೂ ಹುಮ್ಮಸ್ಸನ್ನೂ ಹುಟ್ಟಿಸುತ್ತದೆ; ಅಲ್ಲದೆ ಜೈಸಬೇಕೆಂಬ ಹೇವವನ್ನು ಬೆಳೆಸುತ್ತದೆ. ಈ ಎಲ್ಲ ನಮ್ಮ ಜೀವನ ಸಂಪತ್ತುಗಳಿಗೆ ಇಂದು ಅರದಾಳ ಹತ್ತಿ ಹೋಗಿದೆ. ಅದು ನಮ್ಮ ಸಂಸ್ಕೃತಿಗೆ ಬಿದ್ದ ದೊಡ್ಡ ಪೆಟ್ಟು; ಮಾಯಲಾರದ ಗಾಯ.

ನಮ್ಮ ಉದ್ಯೋಗಗಳೆಲ್ಲ ಕೈಬಿಟ್ಟಂತೆ, ಆರ್ಥಿಕ ಪರಿಸ್ಥಿತಿ ಹಾಗೂ ಜಾಗತಿಕ ರಾಜಕಾರಣ ಇವುಗಳಿಂದ ಶುಭಶೋಭನ ಪ್ರಸಂಗಗಳೂ ವಿರೂಪ ತಳೆದಿವೆ. ಅದರ ಪರಿಣಾಮವಾಗಿ ಜನಪದ ಗೀತಗಳ ಸಾರ್ಥಕವಾದ ಪ್ರಯೋಜನಕ್ಕೆ ತಡೆಯುಂಟಾಗಿದೆ.

ಸದ್ಯಕ್ಕೆ ಜನಪದಗೀತಗಳೊಡನೆ, ಅವುಗಳ ಧಾಟಿಗಳನ್ನೂ ಸಂಗ್ರಹಿಸಿ ಕಾಪಾಡಿಕೊಂಡು ಹೋಗುವ ಕೆಲಸ ನಡೆಯಬೇಕಾಗಿದೆ. ಮುಂದಿನ ಕಾಲಕ್ಕೆ ಅವುಗಳಿಂದ ಅದಾವುದೇ ವಿಧದಲ್ಲಿ ಪ್ರಯೋಜನ ಪಡೆಯಲಿಕ್ಕಾಗುತ್ತದೆ. ಜನಪದಗೀತಗಲು ನಮ್ಮ ಸಂಸ್ಕೃತಿಯ ಬೀಜಗಳನ್ನು ಒಳಗೊಂಡ ಹಿಡಿದೆನೆಗಳಾಗಿವೆ. ನಾಳಿನ ಬೇಳೆಯ ಸಲುವಾಗಿ ಅವನ್ನು ಕಾದಿಡಬೇಕಾಗಿದೆ. ಕೃಷಿಕರು ಬೇಸಿಗೆಯಲ್ಲಿ ಬೀಜಗಳನ್ನು ಅಳವಡಿಸಿಕೊಂಡು, ಮಳೆಗಾಲದ ದಾರಿಯನ್ನು ನೋಡುವಂತೆ, ನಾವು ನಮ್ಮ ಸಂಸ್ಕೃತಿಯ ಉದ್ಧಾರದ ಸಂದರ್ಭವನ್ನು ನಿರೀಕ್ಷಿಸುತ್ತಾ ಇರೋಣ.