“ಮಾತು ಕತೆ ಯಾವಾಗ? ಕೈ ಕೈ ಹಿಡಿದಾಗ
ಅಳೂದು ಕರೆಯೂದು ಯಾವಾಗ? ಅರ್ಧ ಒಳಸೇರಿದಾಗ
ನಗೂದು ಕೆಲೆಯೂದು ಯಾವಾಗ? ಪೂರಾ ಒಳಸೇರಿದಾಗ”

ಎಂಬ ಒಗಟು ಕೇಳಿ, ರಸಿಕರು ನಗಬಹುದಾಗಿದೆ. ಆದರೆ ಅರ್ಥ ಸಾಮಾನ್ಯವಾಗಿದೆ. ಬಳೆಗಾರ್ತಿ ಹೆಣ್ಮಗಳಿಗೆ ಬಳೆ ತೊಡಿಸುವ ಪ್ರಸಂಗದ ಕ್ರಮವನ್ನು ಕೇಳಿಕೊಡುತ್ತದೆ. ಈ ಒಗಟು ಎಂದು ತಿಳಿದಾಗ ಅಚ್ಚರಿಯೆನಿಸಿ ಮತ್ತೊಮ್ಮೆ ನಗುತ್ತಾರೆ. ಒಗಟಿನಂತೆ ನಮ್ಮ ಜನಪದ ಸಾಹಿತ್ಯದ ಅಧ್ಯಯನಕ್ಕೆ ಮೂರು ಅವಸ್ಥೆಗಳಿರುತ್ತವೆಂದು ಸ್ಥೂಲವಾಗಿ ಹೇಳಬಹುದು. ಮಾತು ಕತೆ, ಅಳೂದು ಕರೆಯುವುದು, ನಗೂದು ಕಲೆಯುವುದು ಇವೇ ಆ ಮೂರು ಅವಸ್ಥೆಗಳು.

ಪ್ರಥಮಾವಸ್ಥೆಯ ಮಾತುಕತೆ

ಸುಮಾರು ಐವತ್ತು ವರ್ಷಗಳ ಹಿಂದೆ ನಮ್ಮಲ್ಲಿ ಜನಪದ ಸಾಹಿತ್ಯವನ್ನು ಕುರಿತು ಮಾತು ಕತೆಗಳು ಆರಂಭವಾದವೆನ್ನಬೇಕು. ಮಾತು ಕಥನವೆನಿಸಿದಂತೆ, ಕಥನವು ಕತೆಯಾಗಿ ಬಿಟ್ಟಿತು. ಜನಪದಸಾಹಿತ್ಯದ ಸ್ವಾರಸ್ಯವನ್ನು ವಿದು ಆನಂದ ಪಟ್ಟವರು, ರಸಿಕರು ತಲೆದೂಗುವಂತೆ ವಿವರಿಸಿ, ಅವರಲ್ಲಿಯೂ ಆನಂದದ ಬಗ್ಗೆಯು ಪುಟಿದೇಳುವಂತೆ ಮಾಡಿದರು. ಜನಪದ ಸಾಹಿತ್ಯದಲ್ಲಿ, ಪದವೀಧರರನ್ನೂ ಬೆರಗುಗೊಳಿಸುವ ಸ್ವತ್ತವಿದ್ದುದೇ ಇದಕ್ಕೆ ಕಾರಣವಾಗಿದೆ.

ಇಂದಿನ ಕನ್ನಡ ಆಚಾರ್ಯ ಪುರುಷರಲ್ಲಿ ಒಬ್ಬರಾದ ಡಾಕ್ಟರ್‌ಮಾಸ್ತಿಯವರು ಒಂದು ಸಂದರ್ಭದಲ್ಲಿ ಹೇಳಿದ್ದು ಹೀಗೆ “ನಾನು ಸಂಸ್ಕೃತ ಹಾಗೂ ಇಂಗ್ಲಿಷ ಕಾವ್ಯಗಳನ್ನು ಸಾಕಷ್ಟು ಅಂದರೆ ಸಾಧ್ಯವಾದಷ್ಟು ಓದಿ ಆನಂದ ಪಟ್ಟಿದ್ದೇನೆ. ಆದರೆ ನಮ್ಮ ಗರತಿಯು ಹಾಡಿದ ಒಂದು ತ್ರಿಪದಿಯನ್ನು ಓದಿದಾಗ ನನಗಾದ ಆನಂದವು, ಶಿಷ್ಯ ಕಾವ್ಯಗಳನ್ನೋದಿ ಹೊಂದಿದ ಆನಂದವನ್ನು ಮೀರಿಸುವಂಥದು.”

ಕನ್ನಡದ ಶ್ರೇಷ್ಠ ಸಂಶೋಧಕರಾದ ಪ್ರೊ. ಕುಂದಣಗಾರರು, ತಾವು ಕನ್ನಡ ಸಾಹಿತ್ಯದಲ್ಲಿ ಮೆಚ್ಚಿಕೊಂಡ ಕೃತಿಗಳನ್ನು ಕುರಿತು ಹೇಳಿದ್ದೇನೆಂದರೆ “ಕುಮಾರ ವ್ಯಾಸನ ಭಾರತ ಕಥಾಮಂಜರಿ, ರತ್ನಾಕರನ ಭರತೇಶವೈಭವ, ಷಡಕ್ಷರಿಯ ರಾಜಶೇಖರವಿಳಾಸ, ಲಕ್ಷ್ಮೀಶನ ಜೈಮಿನಿ ಭಾರತ ಹಾಗೂ ಬೆಲ್ಲದ ಬಾಗೇವಾಡಿಯ ಬಾಳಗೋಪಾಳ ಕರಿಯ ಲಾವಣಿಗಳು” ಈ ರೀತಿ ಜನಪದ ಸಾಹಿತ್ಯವನ್ನು ಸಾಹಿತ್ಯಿಕ ಅಳತೆಗೋಲಿನಿಂದ ಅಳೆಯುವ ಪದ್ಧತಿಯು ಮೊದಲನೇ ಘಟ್ಟದ ಲಕ್ಷಣವಾಗಿತ್ತು. ಆವಾಗ ತ್ರಿಪದಿಗಳ ಕಥನ, ಗೀತಗಳಲ್ಲಿ ಹುದುಗಿದ ಕಾವ್ಯಸೌಂದರ್ಯ ಇವುಗಳನ್ನು ವ್ಯಾಖ್ಯಾನಿಸುವ ಪ್ರವೃತ್ತಿ ಕಾಣಿಸುತ್ತಿತ್ತು.

ಆಕ್ರೋಶದ ಅವಸ್ಥೆ

ಸಂಗ್ರಹವಾದ ಜನಪದ ಸಾಹಿತ್ಯವನ್ನು ಅರಿದು ತಣಿಯದೆ, ಒರೆದು ಸಾಕಾಗದೆ ಹಲವು ಸಂಕಲನಗಳನ್ನೂ, ಅವುಗಳ ಸ್ವಾರಸ್ಯವನ್ನೂ ಪುಸ್ತಕ ರೂಪದಲ್ಲಿ ಪ್ರಕಟಿಸುವ ಕೆಲಸ ನಡೆಯಿತು. ಶಾವಿಗೆ ಸೈದಾನಗಳಿಂದ ಸಿದ್ಧವಾದದ್ದು ಮೂಲತಃ ಪಾಯಸದಂಥ ಸಿಹಿಯಡಿಗೆಗಾಗಿ. ಪಾಯಸವು ನಮ್ಮನ್ನು ತೃಪ್ತಿಪಡಿಸಿದರೆ ತೀರಿತೇ? ಶಾವಿಗೆ ಸೈದಾನಗಳಿಂದ ಉಪ್ಪಿಟ್ಟು ಮಾಡಿದರೆ, ಭಿನ್ನ ಅಭಿರುಚಿಯವರೂ ತಣಿಯಬಲ್ಲರು- ಎನ್ನುವ ವಿಚಾರವು ಬುದ್ಧಿವಂತ ಸಂಶೋಧಕರಲ್ಲಿ ಮೊಳೆಯಿತು; ಅಥವಾ ಹೊಳೆಯಿತು ಆಗ ನಮ್ಮ ಜನಪದ ಸಾಹಿತ್ಯದ ಮಾತುಕತೆಯ ಮೊದಲವಷ್ಟೆ ಮುಗಿಯಲಣಿಯಾಯಿತೆಂದು ಹೇಳಬಹುದು. ಚಿಕಿತ್ಸೆಕಬುದ್ಧಿಯವರು ಇನ್ನೂ ಮುಂದೆ ಹೋಗಿ ಶಾವಿಗೆ ಸೈದಾನಗಳಿಂದ ಉಪ್ಪಿನಕಾಯಿ, ಚಟನಿಗಳನ್ನು ಮಾಡಿಕೊಂಡರೆ ಅದು ಹಸಿವೆಯನ್ನು ಕೆರಳಿಸಿ, ಬಾಯಿಗೆ ನೀರೊರುವಂತೆ ಮಾಡುವುದರಲ್ಲಿ ಹೆಚ್ಚು ಸಫಲವಾಗುವುದೆಂದು ಪ್ರತಿಪಾದಿಸಿದರು. ಅವರೇ ಪ್ರಗತಿಶೀಲರು. ಇದು ಎರಡನೇ ಅವಸ್ಥೆಯ ಸನ್ನಿವೇಶ ಅರ್ಧ ಒಳಸೇರಿದಾಗ. ಹಾಗಾದರೆ ಇದು ಅಳುವಕರೆಯುವ ಅವಸ್ಥೆ ಹೇಗೆ? ಪ್ರಚಲಿತವಿದ್ಧ ಜನಪದಗೀತ, ಕಥೆ, ಒಗಟು, ಗಾದೆಗಳನ್ನೆಲ್ಲ ಸಂಗ್ರಹಿಸಿವುದು, ಅವುಗಳನ್ನು ಪ್ರಕಟಿಸುವುದು; ಅಲ್ಲದೆ ಸಂಶೋಧನ, ವಿಚಾರ ಸಂಕೀರಣ, ಚರ್ಚೆ, ಗೋಷ್ಠಿ ಏರ್ಪಡಿಸುವುದು ಇವೆಲ್ಲ ದ್ವಿತೀಯ ಅವಸ್ಥೆಯಲ್ಲಿ ನಡೆಯಬೇಕಾದ ಕಾರ್ಯಗಳೇ ಆಗಿವೆ. ಮಾತುಕತೆ ನಡೆದ ಅವಸ್ಥೆಯಲ್ಲಿರುವ ತೃಪ್ತಿ ಸಂತೋಷಾದಿಗಳು, ಅತ್ತು ಕರೆಯುವ ಆಕ್ರೋಶದ ಅವಸ್ಥೆಯಲ್ಲಿ ಆವೇಶ-ಆವೇಗಗಳಾಗಿ ಪರಿವರ್ತಿತವಾಗುವಂತೆ ತೋರುತ್ತದೆ. “ನೀನು ಕಂಡೇ ಇಲ್ಲ, ನಾನು ಕಂಡಿದ್ದೇನೆ. ನೀನು ಕಂಡಿರುವೆಯೋ ಇಲ್ಲವೋ, ನಾನು ಮಾತ್ರ ಕಂಡಿದ್ದೇನೆ. ನೀನು ಕಂಡಿದ್ದಕ್ಕಿಂತ ಚೆನ್ನಾಗಿ ಕಂಡಿದ್ದೇನೆ ನಾನು, ನೀನು ಕಂಡಿದ್ದು ಸತ್ಯವಿರಲಿಕ್ಕಿಲ್ಲ, ನಾನು ಕಂಡಿದ್ದು ಮಾತ್ರ ಸತ್ಯ ಸತ್ಯ, ನಿತ್ಯ ಸತ್ಯ”-ಹೀಗೆ ಆವೇಶ-ಆವೇಗಗಳನ್ನು ತಳೆಯುವದೇ ದ್ವಿತೀಯಾವಸಥೆಯ ಲಕ್ಷಣ. ಕುದಿದು ಅನ್ನವೂ ಆಗಿಲ್ಲ, ಅಕ್ಕಿಯಾಗಿಯೂ ಉಳಿದಿಲ್ಲ. ನೆನೆಗುದಿ, ನೀರ್ಗಿಚ್ಚು ಉಣ್ಣುವಂತೆಯೂ ಇಲ್ಲ, ಚೆಲ್ಲುವಂತೆಯೂ ಇಲ್ಲ. ಈ ಅವಸ್ಥೆಗೆ ಅರ್ಧ ಒಳಸೇರಿದ್ದು ಅನ್ನುತ್ತದೆ. ಒಗಟು. ಆದರೆ ಆ ಅವಸ್ಥೆ ಅನಿವಾರ್ಯ. ಇದರೊಳಗಿಂದ ಕಿತ್ತುಕೊಂಡು ಎದ್ದಾಗಲೇ ನಗುವ ಕಲೆಯುವ ಸಂದರ್ಭ ಸಂಗಳಿಸುತ್ತದೆ. ಇಲ್ಲಿ ಗಮನಿಸಬೇಕಾದ ಮಾತೆಂದರೆ ಎರಡನೇ ಅಡಿಪ್ರಸ್ಥಾನದಲ್ಲಿ ಹೊಸ ಹೊಸ ಪ್ರಕಾರಗಳನ್ನು ಗುರುತಿಸಲಾಯಿತು. ತ್ರಿಪದಿಗಷ್ಟೇ ಸೀಮಿತವೆನಿಸಿದ ಪ್ರಸ್ತಾಪವು ಕಥೆ, ಬಯಲಾಟ, ಗಾದೆ, ಒಗಟು, ಯಕ್ಷಗಾನಗಳನ್ನು ಒಳಗೊಂಡಿತು. ಕಥೆಗಳ ಆಶಯ ಮತ್ತು ವರ್ಗಗಳನ್ನು ಗುರುತಿಸುವುದರೊಂದಿಗೆ ನಾನಾ ಮೌಲ್ಯಗಳ ಅಧ್ಯಯನವೂ ನಡೆಯಿತು. ಈ ದ್ವಿತೀಯಾವಸ್ಥೆಯಲ್ಲಿ ಈ ಘಟ್ಟದಲ್ಲಿ ಸಂಗ್ರಹ ಕಾರ್ಯಮಾತ್ರ ಮುಂದುವರಿಯಿತು ಆದರೆ ಆಳವಾದ ಅಧ್ಯಯನ ನಡೆಯಲಿಲ್ಲ.

ಅದ್ವಿತೀಯ ತೃತೀಯಾವಸ್ಥೆ

ಶಾವಿಗೆ ಸೈದಾನಗಳಿಂದ ಉಪ್ಪಿಟ್ಟು ಮಾಡಿ ಸವಿದರೆ ತೀರಲಿಲ್ಲ; ಅವುಗಳಿಂದ ಉಪ್ಪಿನಕಾಯಿ ಚಟನಿಗಳನ್ನೂ ಮಾಡಿಕೊಂಡು ಬಾಯಾಡಿಸಿಕೊಳ್ಳುವುದು ನಮ್ಮ ಗುರಿ. ಸಂಕಲನವಾಗಿಯೋ, ಸಂಗ್ರಹವಾಗಿಯೋ ಇರುವ ಜನಪದ ಸಾಹಿತ್ಯವು ಬೇಯಿಸಲಾರದೆ ತಿನ್ನುವ ಹಣ್ಣು-ಕಾಯಿ, ಗಡ್ಡೆ-ಬೇಕು ಇದ್ದಂತೆ; ಕರೆದಿಟ್ಟ ಹಾಲು ಇದದಂತೆ. ಅವುಗಳಿಗೆ ಉಪ್ಪುಕಾರ, ಹುಳಿ, ಒಗೆರು, ಸಿಹಿ-ಕಹಿ ಬೆರಸಿ ಷಡ್ರಸಾನ್ನ ಮಾಡಿಕೊಳ್ಳುವ ವಿಚಾರವು ಪ್ರಗತಿಪರವೆನ್ನದೆ ಇರಲಿಕ್ಕಾಗದು, ಹಾಗೆ ಮಾಡುವ ವಿಧಾನವೂ ಪಾಕಶಾಸ್ತ್ರದ ಮುನ್ನಡೆಯೇ ಅಹುದು. ಆದರೆ ಈ ಎಲ್ಲ ಖಟಾಟೋಪಗಳು, ಹಿಂದಿನ ಜನಪದ ಸಾಹಿತ್ಯವನ್ನು ಬಳಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿವೆ; ಬೆಳೆಸಿಕೊಳ್ಳುವುದಕ್ಕಲ್ಲ. ಗೀತ ಸಂಗ್ರಹ ಹಾಗೂ ಅವುಗಳ ಧ್ವನಿ ಮುದ್ರಿಕೆ, ಕಥಾಸಂಕಲನ ಹಾಗೂ ಅವುಗಳ ಪ್ರಾಂತಭೇದದ ಭಾಷೆ, ಗಾದೆ ಒಗಟುಗಳಲ್ಲಿ ಕಂಡುಬರುವ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹೊಗರು ಇವುಗಳನ್ನು ಕಂಡುಹಿಡಿಯುವುದು ಒಂದು ಕೆಲಸವಾದರೆ, ಅವುಗಳನ್ನು ಮುಂದಿನ ಜೀವನಕ್ಕೆ ಅಳವಡಿಸಿಕೊಳ್ಳುವುದಾಗಲಿ, ಪ್ರಚೋದಿಸುವುದಾಗಲಿ ಇನ್ನೊಂದು ಕೆಲಸ. ಈ ಮೂರನೇ ಅವಸ್ಥೆಯಲ್ಲಿ ಜಿ.ಪ.ನಿ. ವಸ್ತು ಮಾನವ ಶಾಸ್ತ್ರೀಯ ದೃಷ್ಟಿ ಭಾಷಾಶಾಸ್ತ್ರೀಯ ದೃಷ್ಟಿಗಳಿಂದ ಅಳೆಯುತ್ತಿರುತ್ತದೆ. ಇಂಥ ಅಧ್ಯಯನದಿಂದ ಜನಾಂಗದ ಸಂಸ್ಕೃತಿಯನ್ನು ಅರಿಯಲು ಸಹಾಯವಾಗುತ್ತದೆ.

ಸಾಹಿತ್ಯ ಜೀವನದ ಇನ್ನೊಂದು ಮಗ್ಗಲು

ಜೀವನಕ್ಕೆ ಒಮ್ಮೆ ಪ್ರತಿಭೆಯೂ ಅಹುದು, ಇನ್ನೊಮ್ಮೆ ಸಾಹಿತ್ಯವು ಜೀವನವು ಪ್ರತಿಬಿಂಬವೂ ಅಹುದು: ಪ್ರಚೋದಕವೂ ಅಹುದು. ಜನಪದ ಸಾಹಿತ್ಯವು ಜೀವನಕ್ಕೆ ಇನ್ನೊಂದು ಮಗ್ಗುಲೇ ಆಗಿರುತ್ತದೆನ್ನುವುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಅದು ಕಾಯಕದಲ್ಲಿ ನಿರತವಾದ ಜೀವನಕ್ಕೆ ಭಾವಗೀತೆಯಾಗಿ ದಣಿವು ತೋರಗೊಡದಂತೆ ಮೈದಡಹುತ್ತದೆ: ಬೋಳಯಿಸುತ್ತದೆ. ಆಡುತ್ತ ಕಲಿಯುವುದು ಶಿಕ್ಷಣದ ಜೀವಾಳವಾದಂತೆ, ಹಾಡುತ್ತ ದುಡಿಯುವುದು ಜಾನಪದ ಜೀವನಕ್ಕೆ ಸ್ವಾಭಾವಿಕವೇ ಆಗಿದೆ. ಗೀತವನ್ನು ಹಾಡುವುದಾಗಲಿ, ಕಥೆಯ ಹೇಳವುದಾಗಲಿ, ಒಗಟು ಗಾದೆಗಳನ್ನು ಉಸುರುವುದಾಗಲಿ ಕೆಲಸಗೇಡಿಗಳ ಕೆಲಸವೇನಲ್ಲ. ಒಮ್ಮೆ ಅವು ಕೆಲಸದಲ್ಲಿ ಮೈಮರೆಸಿದರೆ, ಇನ್ನೊಮ್ಮೆ ಕೆಲಸಮಾಡುವವರಿಗೆ ಮನ ಮರೆಸುತ್ತವೆ. ಮನುಷ್ಯನು ಹುಟ್ಟಿದಂದಿನಿಂದ ಅವನಿಗೆ ಜೋಗುಳ, ಲಲ್ಲೆನುಡಿ, ಶತಿಕತಿಕಾರಣ, ಒಗಟು ಮೊದಲಾದ ಸಂಪರ್ಕಗಳನ್ನು ಒದಗಿಸಿಕೊಡುವ ಕೆಲಸವನ್ನು ಜನಪದವು ನಿರ್ವಹಿಸುತ್ತಲೇ ಇರುತ್ತದೆ. ಅದರಿಂದ ಅವನಲ್ಲಿರುವ ಋಷಿಯಂಶವಾದ ಕವಿ ಮೊಗ್ಗ ಸಹಜವಾಗಿ ಅರಳುತ್ತದೆ: ಅನಂದದ ಊರ್ಮೆಯು ಕೆರಳುತ್ತದೆ: ಮನುಷ್ಯತ್ವವು ಸಹಜಯೋಗದಿಂದ ರೂಪಗೊಳ್ಳತ್ತದೆ. ದುಡಿಯಲಾರದವರಿಗೆ ಉಣ್ಣುವ ಅಧಿಕಾರವಿಲ್ಲವಂತೆ. ಅದೇ ಬಗೆಯಾಗಿ ಶ್ರಮಿಸಲಾರದವನಿಗೆ ಹಾಡುವ, ಅಧಿಸುವ ಒಗಟಿಸುವ ಅಧಿಕಾರವಿಲ್ಲವೆನ್ನುವುದು ಜನಪದ ಜೀವನದ ಕಟ್ಟಳೆಯೇ ಆಗಿದೆಯೇನೋ ಹಾಡು ಕಥೆಗಳೊಡನೆ ಶ್ರಮಿಸುವಂತೆ ಶ್ರಮವನ್ನು ತಣಿಸುವಾಗ, ಶ್ರಮಿಸಲು ನವೋತ್ಸಾಹವನ್ನು ತುಂಬುವಾಗ, ಹಾಡು-ಕಥೆಗಳನ್ನು ಆಶ್ರಯಿಸಬಹುದು. ಜನಪದಸಾಹಿತ್ಯವು ಹಲವು ಕಲೆಗಳ ಮುಖಾಂತರ ವ್ಯಕ್ತಿಯ ಪ್ರಕೃತಿಯಲ್ಲಿ ಸಮನ್ವಯ ಸಾಮರಸ್ಯಗಳನ್ನು ಉಂಟುಮಾಡಬಹುದಾದಂತೆ, ಸಮಷ್ಠಿಯ ಪ್ರಕೃತಿಯಲ್ಲಿಯೂ ಸಮನ್ವಯ-ಸಾಮರಸ್ಯಗಳನ್ನು ಉಂಟು ಮಾಡಬಹುದಾಗಿದೆ ಅದು ವ್ಯಕ್ತಿಯ ಆರೋಗ್ಯಕ್ಕೆ ಸ್ವಾಸ್ಥ್ಯಕ್ಕೆ ಜೀವಕಳೆಯೆಂದು, ಸಮಾಜದ ಆರೋಗ್ಯ ಸ್ವಾಸ್ಥ್ಯಗಳಿಗೆ ಸಂಜೀವನದಾಯಿಯೆಂದು ಬಲ್ಲವರು ಹೇಳುತ್ತಾರೆ. ಕೈಕೆಲಸಕ್ಕೆ ತೊಡಗುತ್ತಲೆ, ಬಾಯಿ ಹಾಡಲು ತೊಡಗಿದರೆ ವ್ಯಕ್ತಿಯಂತೆ ಸಮಷ್ಠಿಯೂ ಆಂತರಿಕ ಸಮನ್ವಯ ಸಾಮರಸ್ಯಗಳನ್ನು ಸಂಗಳಿಸಿಕೊಳ್ಳುವಂತೆ ತೋರುತ್ತದೆ. ಕೋಲಾಟ-ಕುಣಿತ, ಭಜನೆ ಗೀತಗೋಷ್ಠಿ, ಲಾವಣಿ ಸ್ಪರ್ಧೆ ನಡೆದಾಗ, ಹಂತಿ ತುಳಿಸುವಾಗ, ಹತ್ತಿ ಬಿಡಿಸುವಾಗ ಹಾಡುವ ಗೀತಗಳಾಗಲಿ, ಕೇಳಿಸುವ ಕಥೆಗಳಾಗಲಿ ಜನಪದದ ಆಂತರಿಕ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಮರ್ಥವಾಗುವುದ್ಕೆ ಸಪ್ಪುಳಿಲ್ಲದೆ ಮೈಗೂಡಿದ ಸಮನ್ವಯ-ಸಾಮರಸ್ಯಗಳಿಂದಲೇ ಎಂಬುದು ಸ್ಪಷ್ಟವಾಗುತ್ತದೆ.

ಹಿಂದಿನ ಜೀವನ ಹಾಗೂ ಸಾಹಿತ್ಯಗಳು ಗತಿ

ಜನಪದದ ಜೀವನಕ್ಕೂ ಸಾಹಿತ್ಯಕ್ಕೂ ಇರುವನಂಟು ಇಂದು ಸಡಿಲಾಗುತ್ತಿದೆ. ಹಾಡಿಹಾಡಿ ಸಂಸಾರವೇದವಾಗಿದ್ದ ಗರತಿಯ ಹಾಡು, ನುಡಿದು ನುಡಿದು ವ್ಯವಹಾರ ಕುಸಲತೆಯೆನಿಸಿದ ಅನುಭವಕಥನ ಇವು ಅರೆಜೀವವೋ ನಿರ್ಜೀವವೋ ಆಗುತ್ತಲಿದೆ. ಹಾಡು-ಕತೆಗಳ ಕಲೆವರಗಳು ಸಂಗ್ರಹಿತವಾಗಿ ಮಹಾವಿದ್ಯಾಲಯಗಳ ಕಪಾಟಗಳಲ್ಲಿ ಸಂಪುಟಗಳ ರೂಪದಲ್ಲಿ ಒಟ್ಟಲಾಗಿವೆ. ಅದರಂತೆ ಹಾಡಿನ ಧಾಟಿ-ಕಥನ ಶೈಲಿಗಳು ಧ್ವನಿಮುದ್ರಿಕೆಯ ರೂಪದಲ್ಲಿ ಇನ್ನೊತ್ತಟ್ಟಿಗೆ ಶೇಖರಗೊಂಡಿವೆ. ಒಂದಕ್ಕೆ ಜೀವವಿಲ್ಲ; ಇನ್ನೊಂದಕ್ಕೆ ದೇಹವಿಲ್ಲ ಅದು ಹೆಣ, ಇದು ಪಿಶಾಚಿ. ಇವುಗಳನ್ನು ಸಂಗಳಿಸುವುದೆಂತು? ಮುಂಚಿನಂತೆ ದುಡಿಮೆಯ ರಂಗಸ್ಥಳ ಸಿದ್ಧವಾದರೆ ಹಾಡು ಧಾಟಿಗಳ ಸೇರುವೆಯಾಗಲಿ, ಕಥೆ-ನಿರೂಪಣೆಗಳ ಮೋಡಿಯಾಗಲಿ ಕಾಣಿಸಿಕೊಳ್ಳಲು ಸಾಧ್ಯವಾಗಬಹುದು. ನಮ್ಮ ಜನಪದ ಸಾಹಿತ್ಯದಲ್ಲಿ ಹೆಣ್ಮಕ್ಕಳ ಹಾಡು, ವಿದ್ಯಾರಣ್ಯರ ‘ಪಂಚದಶಿ’ಯೆನಿಸದರೆ, ಗಂಡು ಮಕ್ಕಳ ಕಥನವು ‘ವ್ಯವಹಾರ ಮಾಧವೀಯ’ಎನಿಸುವುದು. ಸಂಸಾರವೇದವೆನಿಸಿದ ತ್ರಿಪದಿಗಳಿಗೆ ಮಂತ್ರಶಕ್ತಿ ಪ್ರಾಪ್ತವಾಗಿತ್ತೆಂದು ತೋರುತ್ತದೆ. ಅಂತೆಯೇ ಅದನ್ನು ಕೇಳಿದವರು ಮಂತ್ರಮುಗ್ಧರಾಗುತ್ತಾರೆ. ಬೀಸುವ ಕಲ್ಲು, ಕುಟ್ಟುವ ಒರಳು ಯಜ್ಞವೇದಿಕೆಯಾದರೆ, ಗೃಹಿಣಿಯರೇ ಅದರ ಋತ್ವಿಜಯರು. ಹಾಡುವ ತ್ರಿಪದಿಗಳೇ ಗಾಯಿತ್ರೀ ಮಂತ್ರ. ಅಂತೆಯೇ ಅಲ್ಲಿ ಜೀವನಸಿದ್ಧಿ ಮೊಳೆಯುತ್ತಿತ್ತು. ರಾಮಕೃಷ್ಣ ಪರಮಹಂಸರಿಗೆ ಕೇಳಿದರಂತೆ ಶಿಷ್ಯರು-ಸಂಸಾರದಲ್ಲಿ ಹೋಗಿರಬೇಕು? ಅವರು ಹೇಳಿದರು-ನೆಲ್ಲು ಕುಟ್ಟುವ ಹೆಂಗಸಿನಂತೆ. ತೊಡೆಯ ಮೇಲೆ ಒರಗಿನ ಮಗುವನ್ನು ತಮ್ಮಣಿಸುತ್ತಿದ್ದಾಳೆ; ಗಿರಾಕಿಗೆ ಅಕ್ಕಿಯ ಧಾರಣಿ ಹೇಳುತ್ತಿದ್ದಾಳೆ. ಬಲಗೈಯಿಂದ ಒನಕೆಯೆತ್ತಿ ಪೆಟ್ಟು ಹಾಕುತ್ತಿದ್ದಾಳೆ. ಎಡಗೈಯಿಂದ, ಹೊರಬಿದ್ದ ನೆಲ್ಲು ಕಾಳುಗಳನ್ನು ಒರಳಿಗೆ ನೂಕುತ್ತಿದ್ದಾಳೆ. ಕೈಮೇಲೆ ಒನಕೆಯ ಪೆಟ್ಟು ಬೀಳದಂತೆ ಸುರಕ್ಷಿತವಾಗಿದ್ದಾಳೆ. ಪರಮ ಹಂಸರು ಹೇಳಿದ್ದು ಉದಾಹರಣೆ. ಆದರೆ ನಮ್ಮ ಗರತಿಗೆ ಅದು ಪ್ರತ್ಯಕ್ಷ ಆರಚಣೆಯಾಗಿದೆ. ಇಂಥ ಸಂಗ್ರಹಿತ ತ್ರಿಪದಿಗಳನ್ನು ಶಾಸ್ತ್ರೋಕ್ತ ಸಂಗೀತದಲ್ಲಿ ಹಾಡಿದರೇನು, ಧ್ವನಿ ಮುದ್ರಿಕೆಗಳನ್ನು ಹೊತ್ತಲ್ಲದ ಹೊತ್ತಿನಲ್ಲಿ ಕೇಳಿದರೇನು? ಅದರಿಂದಾಗುವ ಆನಂದ ಕ್ಷಣಭಂಗುರವೇ. ಹಾವು-ಚೇಳಿನ ಮಂತ್ರ ಕಲಿತವರು, ಅವು ಕಡಿದವರ ಮುಂದೆ ಆ ಮಂತ್ರ ಸೂಕ್ತವಾಗಿ ಪಠಿಸಿದರೆ ಏರಿದ ವಿಷಯ ಇಳಿಯಬಹುದು. ಆದರೆ ಹಾವು ಕಚ್ಚಿಲ್ಲ, ಚೇಳೂ ಕುಟುಕಿಲ್ಲ ಅಂಥ ಸಂದರ್ಭದಲ್ಲಿ ಹೊತ್ತು ಹೋಗದೆಂದೋ, ಸಮಯ ದೊರಕಿದೆಯೆಂದೋ, ಇಲ್ಲವೆ ಮನೋರಂಜನೆಗೆಂದೋ ಹಾವು-ಚೇಳಿನ ಮಂತ್ರ ಪಠಿಸಿದರೆ ಪ್ರಯೋಜನವೇನು? ತಿರುಗಿ ಕೇಳಿದರೆ ಅದರಿಂದ ಮಂತ್ರಗಳು ಮಂತ್ರ ಶಕ್ತಿಯನ್ನೇ ಕಳಕೊಳ್ಳಬಹುದಾಗಿದೆ. ಇಲ್ಲಿ ಶ್ರೀ ಅಲ್ಲಮಪ್ರಭುಗಳ ಈ ವಚನವನ್ನು ಸ್ಮರಿಸಿಕೊಳ್ಳುವಂತಿದೆ-

“ಊರದ ಚೇಳಿಂಗೆ, ಏರದ ವಿಷಕ್ಕೆ
ಜಗವೆಲ್ಲ ಉರುಳಿ ಹೊರಳಿ ನರಳುತ್ತಿದೆ.
ಹುಟ್ಟದ ಗಿಡುವಿನ ಬಿಟ್ಟಲೆಯ ತಂದು
ಮುಟ್ಟದೆ ಪೂಜಿಸು ನಮ್ಮ ಗುಹೇಶ್ವರನ”
ಹಳೆಯ ಬಾಳು ಹಿಂಜರಿದಿದೆ, ಹೊಸದು ಹುಟ್ಟಿಲ್ಲ.

ಅದೆಂಥದೋ ಭೂಕಂಪದಿಂದ ಸಪ್ತಸಮುದ್ರಗಳೆಲ್ಲ ಉಕ್ತಿ, ಬೋರ್ಗರೆದು, ತುಳುಕಾಡಿ ಒಂದುಗೂಡಿದರೆ, ವಿಶಿಷ್ಟ ಮನುಷ್ಯತ್ವವನ್ನೇ ಧಾರಣ ಮಾಡುತ್ತಲಿವೆ. ಒಂದು ಪಾರತಂತ್ರ್ಯವನ್ನು ಕಳಚಿಹಾಕುವಷ್ಟರಲ್ಲಿ ನೂರೊಂದು ಪರಾಧೀನತೆಗಳು ಸಂಕೋಲೆಯಾಗಿ ಪರಿಣಮಿಸುತ್ತವೆ. ಪರಿಣಾಮವಾಗಿ ಮೂಲ ಉದ್ಯೋಗ-ದಂಧೆಗಳೆಲ್ಲ ಕೈಬಿಟ್ಟು ಓಡುತ್ತಿವೆ, ಕೈಕೊಟ್ಟು ಅಡಗುತ್ತಿವೆ. ಹೊಸವಿನ್ನೂ ಕೈನೀಡಿಲ್ಲ. ಪಶುಗಳ ಸಹಕಾರವನ್ನು ಕಳಕೊಂಡು, ಯಾಂತ್ರಿಕ ಸಾಹುಕಾರಿಕೆಗೆ ಶರಣಾಗತರಾಗುತ್ತಿದ್ದೇವೆ. ಅದರಿಂದ ನಮ್ಮ ಬದುಕು, ಕಲ್ಲಿನೊಡನೆ ಕವಣೆಯನ್ನೂ ಕಳಕೊಂಡಂತಾಗಿದೆ. ಸಾಮೂಹಿಕ ಭೂವ್ಯವಸಾಯದಲ್ಲಿಯೋ ಯಾಂತ್ರಿಕ ಕಾರಖಾನೆಯಲ್ಲಿಯೋ ನಾವು ಕಾರ್ಮಿಕರಾಗಿ ಗತಿಗಾಣಬಹುದು. ಅಲ್ಲಿ ಹಿಂದಿನ ಗೀತಗಳಾಗಲಿ ಕಥೆಗಳಾಗಲಿ ಅದೆಷ್ಟು ಪ್ರಯೋಜನ ಪಡೆಯುವವೋ ತಿಳಿಯದು. ಹೊಸಗೀತ, ಹೊಸಕಥೆ ಹುಟ್ಟಿಕೊಳ್ಳಬಹುದು. ಆ ಹೊಟ್ಟೆಯ ಹೋರಾಟದ ಹಾಡಿದ ಗೀತೆ, ಹೇಳಿದ ಕಥೆ ಸಾರ್ಥಕ ಸಾಹಿತ್ಯವೆನಿಸಬಲ್ಲವೇ? ಅದು ವಿಷಮ ಜ್ವರದಲ್ಲಿ ಅರಿವುಗೆಟ್ಟು ವಟವಟಿಸುವ ಆಲಾಪವೆನಿಸಬಹುದೇನೋ-ಈಗಲೇ ಹೇಳಲಿಕ್ಕಾಗದು.

ಕಾಯ ದುಡಿಸದ ಕಾಯಕ

ನಾವಿಂದು ವಿಚಿತ್ರಕಾಲದ ಸಂದುಕಟ್ಟಿನಲ್ಲಿ ಸಿಕ್ಕುಬಿದ್ದಿದ್ದೇವೆ. ಹಗ್ಗ ಕೊಟ್ಟು ಕೈಕಾಲು ಕಟ್ಟಿಸಿಕೊಂಡಿದ್ದೇವೆ. ದುಡಿಮೆಯಿಲ್ಲದ ಗಳಿಕೆಗೆ ಕೈಯೊಡ್ಡುತ್ತಿದ್ದೇವೆ. ನೀರ ಮೇಲಿನ ಬೆಣ್ಣೆಯನ್ನು ಕಬಳಿಸಲು ತವಕಿಸುತ್ತಿದ್ದೇವೆ. ದುಡಿತ ಶೂನ್ಯ, ಗಳಿಕೆ ಪೂರ್ಣ ಅಥವಾ ದುಡಿತ ಕಡಿಮೆ, ಗಳಿಕೆ ಹೆಚ್ಚು ಇದೆ ನಮ್ಮ ಕಾಯಕದ ಮೂಲ ಸೂತ್ರವಾಗಿದೆ. ಕಾಯವನ್ನು ದುಡಿಸದಿರುವುದೇ ಮಿಗಿಲಾದ ಕಾಯಕವೆಂದು ದೃಢವಾಗಿ ಗ್ರಹಿಸಿದ್ದೇವೆ. ಕೆಲಸಿಯಾಗಿ ಕೈ ಹೊಸಲು ಮಾಡಿಕೊಳ್ಳುವುದಕ್ಕಿಂತ ಆಲಸಿಯಾಗಿ ಅಂಗಳವನ್ನೆಲ್ಲ ಹೊಸಲು ಮಾಡಿಕೊಳ್ಳುವುದೇ ಸೂಕ್ತವೆಂದಿದ್ದೇವೆ. ಕೆಲಸ ಮಾಡದಿರುವುದು ಉತ್ತಮ, ಕೆಲಸ ಮಾಡಿಸುವುದು ಮಧ್ಯಮ, ಕೆಲಸ ಮಾಡುವುದು ಅಧಮ ಎಂದು ಬಗೆದಿದ್ದೇವೆ. ಕೆಲಸ ಬೇಡ, ಹಾಡು ಬೇಕೆಂದರೆ ಬಾನುಲಿಗೆ ಶರಣು ಹೋಗುವುದೇ ನೇರವಾದ ದಾರಿ. ಗಳಿಕೆ ನೀಡುವುದೇ ಉದ್ಯೋಗವೆನಿಸಿದೆ. ನಮಗೆ ಸಾರ್ವಜನಿಕ ಸೇವೆಯ ನಟನೆಯೇ ಸರ್ವಶ್ರೇಷ್ಠ ಉದ್ದಿಮೆಯೆನಿಸಿದೆ. ಹೆರವರ ತಟ್ಟೆಯೊಳಗಿನ ನೊಣತೆಗೆದು, ನಮ್ಮ ತಟ್ಟೆಯೊಳಗೆ ಬಿದ್ದ ಕತ್ತೆಯನ್ನು ಬದುಕಿಸುವುದೇ ಮಿಗಿಲಾದ ಕಾಯಕವೆಂದು ಹೇಳತೊಡಗಿದ್ದೇವೆ. ಶರಣರು ಹೇಳುವ ಕಾಯಕಕ್ಕೂ ನಾವು ಕೈಕೊಳ್ಳುವ ಉದ್ಯೋಗಕ್ಕೂ ಮಹದಂತರವಿದೆ. ಒಂದು ಸಿಂಹ, ಇನ್ನೊಂದು ಗ್ರಾಮಸಿಂಹ. ಕಾಯಕದಲ್ಲಿ ಪ್ರಾಪ್ತಿ ಅನಿವಾರ್ಯವಾದರೂ ಅದೇ ಮುಖ್ಯವಲ್ಲ; ಏಕಾಗ್ರತೆ ಮುಖ್ಯ. ಕಾಯಕದಲ್ಲಿ ಮೇಲು ಕೀಳು ಇಲ್ಲ, ಆತ್ಮಶಾಂತಿ-ಅಂತರ್ಮುಖತೆಗಳ ಪ್ರಾಪ್ತಿಗೆ ತೀವ್ರ ಸಹಾಯಕವಾಗುವುದೇ ಕಾಯಕ. ಕೆಲಸವಿಲ್ಲದಿದ್ದರೆ ಹುಚ್ಚು ಹಿಡಿದಂತಾಗುವುದೆಂದು ಹಿಂದಿನ ತಲೆಮಾರಿನವರು ಹೇಳುತ್ತಿದ್ದರು. ಆ ಹುಚ್ಚು ಹಿಡಿಯಬಾರದೆಂದಿದ್ದರೆ ಕೆಲಸ ವಹಿಸಿಕೊಳ್ಳಬೇಕಲ್ಲವೇ? ಒಂದಾನೊಂದು ಕಾಲಕ್ಕೆ ರಾಜರು, ಶ್ರೀಮಂತರು ಅರಸೊತ್ತಿಗೆಯನ್ನೋ ಶ್ರೀಮಂತಿಕೆಯನ್ನೋ ತೊರೆದು, ಸಾಮಾನ್ಯ ಕಾಯಕ ಕೈಕೊಂಡು ಶರಣಪದ ಪಡೆದದ್ದು, ನಮ್ಮ ಈ ಜನಪದದಲ್ಲಿಯೇ. ಆಯ್ದಕ್ಕಿ ಮಾರಯ್ಯ, ನುಲಿಯ ಚಂದಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಹಡಪದ ಹಂಪಯ್ಯ ಮೊದಲಾದ ಶರಣರು ತಮ್ಮ ಹೆಸರಿನ ಹಿಂದೆ, ತಮ್ಮ ಕಾಯಕವನ್ನು ಕಾಣಿಸಿಕೊಳ್ಳಲಿಕ್ಕೆ ಎಷ್ಟೂ ಹಿಂಜರಿಯುತ್ತಿರಲಿಲ್ಲ; ನಾಚುತ್ತಿರಲಿಲ್ಲ ಅಂತೆಯೇ ಅವರು ಕೈಕೊಂಡ ಕಾಯಕದಿಂದ ಶರಣಪದ ಪಡೆಯಲು ಸಾಧ್ಯವಾಯಿತು. ನಮ್ಮ ಸೋದರಿಯರಂತೂ ತಮ್ಮ ಅವ್ಯಾಹತವಾದ ಕಾಯಕ ನಿಷ್ಟೆಯಿಂದ ಅತೀಂದ್ರಿಯ ಸ್ಪರ್ಶವನ್ನು ಪಡೆದಿದ್ದರೇನೋ ಎನ್ನುವಂತಿದೆ. ಆ ಮಾತಿಗೆ ಸಾಕ್ಷಿಯಾಗಿ ಕೆಳಗಿನ ತ್ರಿಪದಿಗಳನ್ನು ಉದಾಹರಿಸಬಹುದು.

ಇಂದು ನನ್ನಂಗಳ ಶ್ರೀಗಂಧ ನಾತಾವ
ಬಂದಿದಾನೇನ ಶ್ರೀಹರಿ | ನನ ಮನಿಗೆ
ಗಂಧದ ಮಡುವ ತುಳಕೂತ ||
ಬಿತ್ತೀದ ಹೊಲದಾಗ ಒತ್ತಿ ಹಾಯಕಿಯಾರ
ಮುತ್ತಿನುಡಿಯಕ್ಕೀ ಬನದಮ್ಮ | ಹಾಯ್ದರ |
ಬಿಚ್ಚಿ ಬಿದ್ದಾವ ಬಿಳಿಜೋ ||
ಹೂವಿನಾಗ ಹುದುಗ್ಯಾನ ಮಾಲ್ಯಾಗ ಮಲಗ್ಯಾನ
ಮೊಗ್ಯಾಗ ಕಣ್ಣು ತೆರೆದಾನ | ಲಿಂಗಯನ
ನೋಡಟಿಗೆ ನಿದ್ದಿ ಬಯಲಾಗಿ ||

ಶರಣ ಪದಕ್ಕ ಶರಣು

ಕಾಯಕಕ್ಕೆ ಕಾಲುಬಿದ್ದು, ಶರಣಪದಕ್ಕೆ ಶರಣು ಹೊಡೆದು, ನಾವಿಂದು ಅದೆಂಥದೋ ಶಿಕ್ಷಣ-ದೀಕ್ಷೆಹೊಂದಿ, ಸಾಹೇಬರ ವೇಷತೊಟ್ಟು ಪರರ ಸೇವೆಗೆ ಅಣಿಯಾಗಿದ್ದೇವೆ. ಅದು ಕಾಯಕವಂತೂ ಅಲ್ಲವೇ ಅಲ್ಲ. ಉದ್ಯೋಗವೆನ್ನಬಹುದಾದರೆ ಅದರಲ್ಲಿ (ಉತ್‌)ಯೋಗದ ಲಕ್ಷಣವೇ ಕಂಡುಬರುತ್ತಿಲ್ಲ. ದುಡಿಮೆಯಿಲ್ಲದ ಸೋಮಾರಿ ಹಗಲು ತೂಕಡಿಸುತ್ತಾನೆ; ರಾತ್ರಿ ನಿದ್ದೆ ಮಾಡುವದಿಲ್ಲ. ಕನಸಿನಲ್ಲಿ ಸಹ ನಿದ್ದೆ ಮಾಡದವನು ಕಾಲುಕುಣಿಸುತ್ತ ತನನತರಲ ಹಾಡಬಲ್ಲನೆಂತು? ಕಟ್ಟೆಗೆ ಕುಳಿತು ಕಥೆ ಹೇಳಬಲ್ಲನೆಂತು? ದುಡಿಮೆಯಿಲ್ಲದ ಬದುಕು ಜಾನಪದ ಜೀವನವೂ ಅಲ್ಲ; ನಾಗರಿಕ ಜೀವನವೂ ಅಲ್ಲ. “ದುಡಿದು ಬೇಸತ್ತಾಗ, “ದುಡಿದು ಬೇಸತ್ತಾಗ, ದುಡಿದುಡಿದು ಸತ್ತಾಗ” ಮಾತ್ರ ಜನಕೆ ಹಿಗ್ಗಿನ ಹಾಡು ನೀಡಲು ಸಾಧ್ಯವಿದೆ. ಆದ್ದರಿಂದ ನಮ್ಮ ಬದುಕು ಭಾಗ್ಯವಾಗುವುದಕ್ಕೆ ಮೊದಲು ದುಡಿಮೆಯ ಒಲುಮೆ ಮೂಡಬೇಕು. ದುಡಿಮೆಯ ಒಲವು ಇದ್ದಲ್ಲಿ ಹಾಡಿನ ನಿಲುವು, ಕಥೆಯ ಚೆಲುವು ಸಂಗಳಿಸಬಹುದಾಗಿದೆ. ದುಡಿಮೆಯ ಒಲುಮೆ ಉದ್ಯೋಗ ಮೇಲುಕೀಳುಗಳನ್ನು ಗಣಿಸದೆ ಅದನ್ನು ಕಾಯಕವನ್ನಾಗಿ ಮಾರ್ಪಡಿಸಿಕೊಳ್ಳುತ್ತದೆ. ಆಗ ಅನಿಸುತ್ತದೆ. “ಕಸವ ಬಳಿದ ಕೈ ಕಸ್ತೂರಿ ನಾತಾವ” ಹೀಗೆನ್ನುವವರಿಗೆ ಕಸ ಕಸ್ತೂರಿಗಳಲ್ಲಿ ಭೇದವೇ ತೋರುತ್ತಿಲ್ಲವೆಂದಲ್ಲ ಈ ಮಾತಿಗೆ “ಕಸ್ತೂರೆಂಥ ಬಾಲ ಕಸದಾಗ ಆಡಿದರ, ಕಸವೀಸಿ ನನ್ನ ಮನದಾಗ” ಈ ಪದ್ಯವೇ ಸಾಕ್ಷಿ.

“ಕಸಬರಿಗೆ ನೀನಿದ್ದರೀ ಮನೆಯು ಹಸನಾವೆ” ಎನ್ನುತ್ತಾಳೆ ಗ್ರಹಿಣಿ.
“ಹಂತೀಯ ನಮ್ಮೆತ್ತು ಹಂತೀಲಿ ಬಂದವರ | ಸೆರಗೀಲಿ ಸುಂಕ ವರೆಸೇನ”

ಅನ್ನುತ್ತಾಳೆ ಅಕ್ಕ. ಕುರಿಕಾಯುವ ತಮ್ಮನ ಕಾಯಕದ ಸೊಗಸನ್ನೂ ಬಲು ಅಭಿಮಾನದಿಂದ ಹೇಳಿಕೊಳ್ಳುತ್ತಾಳೆ ಆಕೆ,

ಎಳೆ ಹುಲ್ಲು ಆಡಿವ್ಯಾಗ ತಿಳಿನೂರು ಕೊಳದಾಗ
ಬಲವುಳ್ಳ ನಾಯಿ ಸಾಕ್ಯಾನ | ನನ ತಮ್ಮ
ಒನಪೀಲೆ ಕುರಿಯ ಕಾಯ್ದಾನ ||

ಮಗ ಮಾಡಿದ ಕಬ್ಬಿನ ತೋಟ ಅಲೌಕಿಕವಾದುದೆಂದೇ ಭಾವಿಸುತ್ತಾಳೆ ಆತನ ತಾಯಿ.

ಕಾಮನ ತೋಟಕ ಭೀಮನ ಕಾವಲ
ಜೇನತುಪ್ಪದಲೆ ಮಡಿಯೆಳೆದು | ನನ ಬಾಲ |
ಕಾಮ ಬೆಳೆದಾನ ಕರಿಕಬ್ಬ ||

ನಮ್ಮ ಜನಪದ ಜೀವನದಲ್ಲಿ ಹೆಣ್ಣುಮಕ್ಕಳು, ಮನೆ-ಮನೆತನ ಮಕ್ಕಳ ಸಲುವಾಗಿ ನಿಷ್ಕಾಮ ಕರ್ಮಮಾಡಬಲ್ಲವರಾಗಿದ್ದರು. ಆಡಿ ಬಂದ ಕಂದಮ್ಮನ ಅಂಗಾಲನ್ನು ತೆಂಗಿನ ನೀರಿನಿಂದ ತೊಳೆಯಲು ತವಕಿಸುತ್ತಾಳೆ ತಾಯಿ. ಆಕೆ ತೊಡುವ ಹೂಣಿಕೆ ಎಂಥದೆಂದರೆ

ಹೆಣ್ಣಿನ ಕಾಯವ ಮಣ್ಣು ಮಾಡಲು ಬೇಕ
ಸುಣ್ಣದರಳಾಗಿ ಸುಡಬೇಕ | ಈ ಜನ್ಮ |
ಮಣ್ಣು ಮಾಡಿ ಮರ್ತ್ಯಗೆದಿಬೇಕ ||

ಈ ತ್ರಿಪದಿ ಭಗವದ್ಗೀತೆಯ ಸಾರವಾಗಿದೆ. ಇಥ ಉಚ್ಚವಿಚಾರ ಸರಣಿಯ ತಂಬಾಕದ ಬೆಳೆಯಲ್ಲಿ ಮಾರಕವಾದ ಬಂಬಾಕದ ಕಸವನ್ನು ಕಾಣಬಹುದಾಗಿದೆ. ಶ್ರೀಮಂತ ಮನೆತನದಿಂದ ಬಂದ ಮೊದಲಗಿತ್ತಿಯ ವಿಚಾರ ಸರಣಿಯೇ ಬೇರೆಯಾಗಿದೆ-

ಹೆಂಡ್ಹೆಡಗಿ ಹೊರಲಾಕ ಬಡವರ ಮಗಳೇನ
ಮುಂದಿನೂರಾಗ ತವರವರು | ಕೇಳಿದರ
ಮುಂಜಾನೆ ತೊತ್ತು ಕಳವ್ಯಾರ ||

ಇದು ಶ್ರೀಮಂತಿಕೆಯ ಸೊಲ್ಲು ಮೊದಲಗಿತ್ತಿಯದು. ಆದರೆ ಹಣ್ಣಿನ ರುಚಿಯನ್ನು ಹೀಚಿನಲ್ಲಿಯೇ ತೋರಬಲ್ಲ ಕೊಡುಗೂಸಿನ ಮಾದರಿಯಿಂತಿದೆ.

ತಿಂದೋಡಿ ನಿನಗಂಡ ತಿಂದೇನು ಮಾಡಂದ
ತಿಂದೇಳು ಮನೆಯ ತಿರುಗೆಂದ | ಉಟ್ಟಶಾಲಿ |
ಉಂಗುಟಕ ಹಾಕಿ ಹರಿಯಂದ ||

ಚೊಕ್ಕ ಚಿನ್ನ, ಚಿನ್ನದ ನಾಣ್ಯ

ಹೆಣ್ಣು, ಹೆಣ್ಣಿನ ಸಾಹಿತ್ಯವೆಂದರೆ ಚೊಕ್ಕ ಚಿನ್ನ. ಗಂಡು, ಗಂಡಿನ ಗಂಡಿನ ಸಾಹಿತ್ಯವೆಂದರೆ ಚಿನ್ನದ ನಾಣ್ಯ. ಚಿನ್ನದಲ್ಲಿ ಟಂಕು ಬೆರೆಯದೆ ನಾಣ್ಯವಾಗದು. ನಾಣ್ಯಕ್ಕೆ ತಾಳಿಎಕ ಬರುವುದೂ ಸವಕಳಿಯನ್ನು ತಡೆಯುವುದು ಚಿನ್ನದಲ್ಲಿ ಟಂಕು ಬೆರೆಯುವುದರಿಂದಲೇ. ಅಕ್ಷರಗಳಲ್ಲಿ ಸ್ವರ, ವ್ಯಂಜನಗಳಿರುವಂತೆ, ನಮ್ಮ ಜನಪದದಲ್ಲಿ ಹೆಣ್ಣು ಗಂಡು ಇದ್ದಾರೆ. ಹೆಣ್ಣು ಸ್ವರ. ಗಂಡು ವ್ಯಂಜನ. ಸ್ವರವು ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರ. ಆದರೆ ವ್ಯಂಜನವು ಸ್ವರ ಕೂಡಿದಾಗಲೇ ಉಚ್ಚರಿಸಲ್ಪಡುವಂಥದು. ಇನ್ನು, ಸ್ವರದಲ್ಲಿಯೂ ಸೇರದ ವ್ಯಂಜನದಲ್ಲಿಯೂ ಸೇರದ ಆಯೋಗವಾಹಗಳಿರುವಂತೆ, ಮಗುಗಳು. ಅವು ಒಂದು ದೃಷ್ಟಿಯಿಂದ ಸ್ವರವೂ ಅಹುದು, ಇನ್ನೊಂದು ದೃಷ್ಟಿಯಿಂದ ವ್ಯಂಜನವೂ ಅಹುದು. ಸ್ವರ, ವ್ಯಂಜನ, ಆಯೋಗವಾಹ ಅಕ್ಷರಗಳಿರುವಂತೆ, ಮಗುಗಳು. ಅವು ಒಂದು ದೃಷ್ಟಿಯಿಂದ ಸ್ವರವೂ ಅಹುದು, ಇನ್ನೊಂದು ದೃಷ್ಟಿಯಿಂದ ವ್ಯಂಜನವೂ ಅಹುದು. ಸ್ವರ, ವ್ಯಂಜನ, ಅಯೋಗವಾಹ ಅಕ್ಷರಗಳಿರುವಂತೆ, ಹೆಂಗಸರ ಹಾಗೂ ಗಂಡಸರ ಮತ್ತು ಮಗುಗಳ ಸಾಹಿತ್ಯವಿರುತ್ತದೆ. ಹೆಣ್ಣು ಮಕ್ಕಳ ಪಂಚದಶಿ, ಗಂಡುಮಕ್ಕಳ ವ್ಯವಹಾರ ಮಾಧವೀಯಗಳನ್ನು ಮೀರಿದ್ದೇ ಮಕ್ಕಳ ಸಾಹಿತ್ಯ. ಕಾಯಕದಲ್ಲಿ ತಲ್ಲೀನಗೊಂಡ ಹೆಣ್ಣು ಮಕ್ಕಳ ತ್ರಿಪದಿಸಾಹಿತ್ಯವನ್ನು ಈಗಾಗಲೇ ಉದಾಹರಿಸಲಾಗಿದೆ. ಇನ್ನು, ಕಾಯಕದಲ್ಲಿ ಸಾಮರಸ್ಯಗೊಂಡ ಗಂಡು ಮಕ್ಕಳು ಹಾಡಿದಂತೆ ಕಥೆಯನ್ನೂ ಹೇಳಿದ್ದಾರೆ, ಇಲ್ಲಿ ಕಥೆಗಳಿಂದಲೇ ಅವರ ವ್ಯವಹಾರ ಮಾಧವೀಯನ್ನು ಅರಿತುಕೊಳ್ಳಬಹುದಾಗಿದೆ.

ಗಂಡಿನ ವ್ಯವಹಾರ ಕುಶಲತೆ

ಗಂಡಸು ವ್ಯವಹಾರ ಜೀವಿ. ಆದ್ದರಿಂದ ಅವನಲ್ಲಿ ಕರುಳಿನ ಕಕ್ಕುಲತೆಗಿಂತ, ಬುದ್ಧಿಯ ಚಾತುರ್ಯವೇ ಹೆಚ್ಚು. ಒಂದು ಗುಂಜಿತೂಕ, ಅದೇ ಚಾತುರ್ಯ ಹೆಣ್ಣಿನಲ್ಲಿ ಚತುರಾಯಿಯೆನಿಸುತ್ತದೆ. ಅಕಬರ ಬೀರಬಲರನ್ನೋ, ತೆನ್ನಾಲಿ ರಾಮಕೃಷ್ಣನನ್ನೋ ಆರೋಪಿಸಿ, ಗಂಡಸು ಅವೆಷ್ಟೋ ಚಾತುರ್ಯದ ಕಥೆಗಳನ್ನು ಸೃಷ್ಟಿಸಿದ್ದಾನೆ. ಅದರಂತೆ ಇಸೋಪನ ಕಥೆಗಳನ್ನು ಹೋಲುವ “ನಾಡನೆಲೆಗಾರ” “ನನ್ನ ತಾಯಿ”ಯಂಥ ಅಸಂಖ್ಯ ಕಥೆಗಳನ್ನು ರಚಿಸಿದ ಒಟ್ಟಿದ್ದಾನೆ. ವ್ಯವಹಾರ ಜ್ಞಾನವೇ ಅವುಗಳ ಜೀವಾಳವೆಂದು ಸ್ಥೂಲವಾಗಿ ಹೇಳಿದರೂ, ಅವುಗಳ ಸತ್ವವು ಅವೆಷ್ಟೋ ಆಂತರಿಕ ಜಡ್ಡುಗಳನ್ನು ಹಗುರುಗೊಳಿಸಬಲ್ಲವು. ಮೂರು ಹೋರಿಕರುಗಳ ಕಥೆ ಎಲ್ಲರೂ ಕೇಳಿದ್ದು. “ಅವ್ವನ ಮೂಲೆಯಲ್ಲಿ ವಿಪುಲಹಾಲು ಇರುವದೆಂದು” ಒಕ್ಕಲಿಗರ ಕರುಜಿಗಿದಾಡಿ ಹೇಳಿದರೆ, ಉಪಾಧ್ಯರ ಕರು “ಅವ್ವನ ಮೂಲೆಯಲ್ಲಿ ಹಾಲಿರುವುದೇ” ಎಂದು ಕಾಲೆಳೆಯುತ್ತ ಕೇಳುವದು ಗೌಳಿಗರ ಕರುವಾದರೋ “ಅವ್ವನಿಗೆ ಮೊಲೆಗಳಿರುವವೇ” ಎಂದು, ಸೊಂಟತಗ್ಗಿಸಿ ಚಕಿತಗೊಳ್ಳುವುದು. ಬದುಕು ಮಾಡುವ ಹವ್ಯಾಸದಿಂದ ಒಕ್ಕಲಿಗರು ಆಕಳನ್ನು ಹಿಂಡಿಕೊಳ್ಳದೆ, ಹಾಲನ್ನೆಲ್ಲ ಜಬ್ಬಿ ಹಿಂಡಿಕೊಂಡು, ಶಾಸ್ತ್ರಕ್ಕಾಗಿ ಕರುಬಿಡುವುದರಿಂದ ಅದು ಹಾಲಿಲ್ಲದ ಮೊಲೆಯನ್ನೇ ಗೀರುತ್ತದೆ ಗೌಳಿಗರು ಕರುವಿಗೆ ಹಾಲು ಬಿಡುವುದಂತೂ ಒತ್ತಟ್ಟಿಗಿರಲಿ ಕೆಚ್ಚಲಿನ ದರ್ಶನವನ್ನೂ ಅದಕ್ಕೆ ಮಾಡಿಸುವುದಿಲ್ಲ. ಆ ಮೂರು ಕರುಗಳಂತೆ ಮೂರು ವಿಧದ ಧಾರ್ಮಿಕರನ್ನೂ, ವಿದ್ಯಾರ್ಥಿಗಳನ್ನೂ ಕಾಣಬಹುದಾಗಿದೆ. ಚಂಚಲಚಿತ್ತ ವಿದ್ಯಾರ್ಥಿಗಳು ಶಾಲೆಯಲ್ಲಿ ಕುರಿತು ಇನ್ನೊಮದು ಕಥೆ ಮಾವಿನಹಣ್ಣನ್ನು ಕುರಿತ ಪಾಠ ನಡೆದಾಗ, ಚಂಚಲ ಬಿತ್ತನೆಂದು ಕಂಡು ಬಂದ ಬಾಲಕನಿಗೆ ಗುರುಗಳು ಕೇಳಿದರು “ಮಾವಿನ ಮರಕ್ಕೆ ಏತರ ಕಾಯಿ ಆಗುತ್ತವೆ?” ವಿದ್ಯಾರ್ಥಿ ತಟ್ಟನೆ ಹೇಳಿದನು “ಕಾರ್ಚಿಕಾಯಿ” ಎಂದು. ಅಂದು ಆತನು, ತಾಯಿ ಮನೆಯಲ್ಲಿ ಕಾರ್ಚಿಕಾಯಿ ಮಾಡುವುದನ್ನು ನೋಡಿ, ಜುಕ್ಕು ಜುಲುಮೆಯಿಂದ ಶಾಲೆಗೆ ಬಂದಿದ್ದನು. ಮತ್ತೊಂದು ಕಥೆಯಲ್ಲಿ ಮೂಡಿನಿಂತಿದೆ. ಭಕ್ತನನ್ನೂ ಕಾಡುವದೇವರ ರೀತಿ ಊರಗೌಡನ ಕನಸಿನಲ್ಲಿ ಹನುಮಂತ ದೇವರು ಬಂದು, ತನಗೆ ಸೊಂಟನೋವು ಆಗಿರುವುದರಿಂದ ಎಣ್ಣೆ ಮಜ್ಜನ ಮಾಡಿಸೆಂದು ಒತ್ತಾಯಪಡಿಸಹತ್ತಲು ಗೌಡ ಕೇಳಿದನು-“ಸೊಂಟನೋವು ಆಗಲು ಕಾರಣವೇನು?” ವಿದ್ಯಾರ್ಥಿ ತಟ್ಟನೆ ಹೇಳಿದರು-“ಕಾರ್ಚಿಕಾಯಿ” ಎಂದು. ಅಂದು ಆತನು ತಾಯಿ ಮನೆಯಲ್ಲಿ ಕಾರ್ಚಿಕಾಯಿ ಮಾಡುವುದನ್ನು ನೋಡಿ, ಜುಕ್ಕು ಜುಲುಮೆಯಿಂದ ಶಾಲೆಗೆ ಬಂದಿದ್ದನು. ಮತ್ತೊಂದು ಕಥೆಯಲ್ಲಿ ಮೂಡಿನಿಂತಿದೆ. ಭಕ್ತನನ್ನೂ ಕಾಡುದೇವರ ರೀತಿ ಊರಗೌಡನ ಕನಸಿನಲ್ಲಿ ಹನುಮಂತ ದೇವರು ಬಂದು, ತನಗೆ ಸೊಂಟನೋವು ಆಗಿರುವುದರಿಂದ ಎಣ್ಣೆ ಮಜ್ಜನ ಮಾಡಿಸೆಂದು ಒತ್ತಾಯಪಡಿಸಹತ್ತಲು ಗೌಡ ಕೇಳಿದನು –“ಸೊಂಟನೋವು ಆಗಲು ಕಾರಣವೇನು?” ನಿನ್ನೆ ಚಾವಡಿಯಲ್ಲಿ ಇಳಕೊಂಡ ಫೌಜದಾರನು ನನ್ನ ಹೆಗಲ ಮೇಲೆ ಕಾಲೂರಿ, ಜಿಗಿದು ಕುದುರೆ ಹತ್ತಿದ್ದರಿಂದ ಆ ಇಸಲಿಗೆ ಸೊಂಟು ಚಳಕ್‌ಅಂದಿತು” ಎಂದು ಹನುಮಂತ ದೇವರು ಹೇಳಲು, ಆ ಫೌಜದಾರನನ್ನು ಏಕೆ ಬಿಟ್ಟೆ” ಎಂದ ಗೌಡನ ಪ್ರಶ್ನೆಗೆ “ಆ ಮ್ಲೇಂಛನು ನನ್ನ ಭಕ್ತನಲ್ಲವಲ್ಲ! ಆದ್ದರಿಂದ ನನ್ನ ಪರಮಭಕ್ತನಾದ ನಿನ್ನನ್ನು ಹಿಡಿದ್ದೇನೆ” ಎಂದನಂತೆ ಆಂಜನೇಯ ಅಂಜಿದವರ ಮೇಲೆ ದಬ್ಬಾಳಿಕೆ ಮಾಡುವ ಅಧಿಕಾರಿಗಳಂತಿದ್ದಾರೆ ಇಲ್ಲಿಯ ಆಂಜನೆಯ ಜಂಗಮ ಪಂಕ್ತಿಯಲ್ಲಿ ಒಬ್ಬ ವೇಷದ ಜಂಗಮಯ್ಯನು ಸೇರಿದ್ದನು. ಮನೆಯ ಶೆಟ್ಟರು ಸಂಶಯಪಟ್ಟು ನೀನಾರು ಎಂದು ಕೇಳಿದರು. ಅದಕ್ಕವನು ಜಂಗಮ ಎನ್ನಲಿಕ್ಕೆ ಸಾಧ್ಯವಾಗದೆ ಒಮ್ಮೆ ಗಂಜಮ, ಇನ್ನೊಮ್ಮೆ ಮಂಗಜ, ಮಗುದೊಮ್ಮೆ ಗಜಮ್ಮ ಎಂದು ಬಾಯಿಸವರುತ್ತ ನುಡಿದು, ಅಲ್ಲಿಂದ ಎದ್ದು ಓಡಿದನು. ಈ ರೀತಿ ಸಾಮಾನ್ಯನರ ನಿತ್ಯದ ಜೀವನದಲ್ಲಿ ನುಸುಳಿ ಹೋಗುವ ಘಟನೆಗಳ ಚಮತ್ಕಾರಿಕ ವರ್ಣನೆ ಜನಪದ ಕಥೆಗಳಲ್ಲಿ ಅಡಕವಾಗಿವೆ. ನಮ್ಮ ಜನಾಂಗದ ಸಂಸ್ಕೃತಿ ಈ ಕಥೆಗಳಲ್ಲಿ ಪ್ರಕಟವಾಗಿದೆ.

ಮಕ್ಕಳ ಹೂ ಸಾಹಿತ್ಯ

ಎಂದೋ ಕಲಿತು ಮರೆತ ಹಾಡನ್ನೋ ಕಥೆಯನ್ನೋ ಮಕ್ಕಳ ಬಾಯಿಂದ ಕೇಳಬಹುದಾಗಿದೆ. “ಕಳ್ಯಾ ಮಿಳ್ಯಾ ಚಿಪಾಟಿ ಮಿಳ್ಯಾ ಬಸರೀ ಗಿಡದಾಗ ಬಸಪ್ಪ ಕೂತಾನ ಮಳಿಹೊಡಿಲೋ ಮಳಿಹೊಡಿಲೋ” ಎನ್ನುವ ಸಾಭಿನಯ ಗೀತೆ ಯಾರು ಕೇಳಿಲ್ಲ? “ಗುಡುಗುಡು ಮುತ್ಯಾ ಬಂದ, ಸಜ್ಜೀ ರೊಟ್ಟಿ ತಂದ | ಮಾಡದಾಗ ಇಟ್ಟ | ಬೇಡಿದಾಗ ಕೊಟ್ಟ” ಮತ್ತು “ಮಾಮಾ ಮಾಮಾ ಮಾತಾಡು | ಮಾವಿನ ಗಿಡಕ ಜೋತಾಡು, ಮಾವಿನ ಟೊಂಗಿ ಮುರಿತು | ಮಾಮನ… ಹರೀತು” ಅವ್ವಾ ಅವ್ವಾ ಗೆಣಸ | ಕುಳ್ಯಾಗ್ಹಾಕಿ ಕುದಿಸ | ಹೊಸ ಸೀರಿ ಉಡಿಸ | ಗಂಡನ ಮನೀಗಿ ಕಳಿಸ” ಮೊದಲಾದವು ಹಾಡೆಂದರೆ ಹಾಡು. ಕಥೆಯೆಂದರೆ ಕಥೆ. ಮಕ್ಕಳ ಬಾಯಿಂದ ಹೇಗೆ ಬಂದರೂ ಅದು ಹೂವಿನ ಸಾಹಿತ್ಯ. ಅದನ್ನು ಜೋಕೆಯಾಗಿ ಅರಳಿಸಿ, ಜೋಪಾನವಾಗಿ ಅಳವಡಿಸಿ ನಲಿಯುವುದಕ್ಕೂ ತಾಯಿ ತಂದೆಗಳು ಎಚ್ಚರವಹಿಸಬೇಕು; ಆಸ್ಥೆವಹಿಸಬೇಕು ಇಷ್ಟೇ.

ನಿರಕ್ಷರಿಗಳ ಸಂಸ್ಕೃತಿ

ನಮ್ಮ ಜನಪದವು ನಿರಕ್ಷರಿಯಾಗಿದ್ದರೂ ಸುಸಂಸ್ಕೃತವಾಗಿತ್ತು. ಆ ಮಾತಿಗೆ ಗಾದೆಯ ಮಾತುಗಳೂ, ಒಗಟು-ಒಡಪುಗಳೂ ಸಾಕ್ಷಿಯಾಗಿವೆ. ಗಾದೆಗಳು ವೇದಕ್ಕೆ ಸಮಾನವೆನಿಸಿದರೆ, ಒಗಟು ಒಡಪುಗಳು ಉಜ್ವಲತರ ಕಾವ್ಯ ಬೀಜಗಳೇ ಆಗಿವೆ. ಕೌಟುಂಬಿಕ ಜೀವನದಂತೆ, ಸಾಮಾಜಿಕ ಪ್ಞಜ್ಞೆಯಲ್ಲಿಯೂ ಗಾದೆಗಳು ಗದ್ದುಗೆಗೊಂಡಿವೆ. ಅನುಭವ ಹೆಣ್ಣಿನದೇ ಇರಲಿ, ಗಂಡಿನದೇ ಇರಲಿ, ಅದು ಬಳಸಿ ಬಳಸಿ ಗಾದೆಯಾಗಿ ನಿಲ್ಲುತ್ತದೆ.

೧. ಬೇಸತ್ತು ಬೇರೆಯಾದರೆ ಪಾಲಿಗೆ ಅತ್ತೆ ಬಂದಳು

೨. ಆಸತ್ತು ಬೇಸತ್ತು ಅಕ್ಕನ ಮನೆಗೆ ಹೋದರೆ ಅಕ್ಕನ ಗಂಡ ಅವುಕ್‌ಅಂದನು.

೩. ಎಂದಿಲ್ಲದೊಮ್ಮೆ ಎಲಗ ಅಂದರೆ, ತಿಂಗಳಿಗೊಮ್ಮೆ ನಗೆಬಂದಿತು.

೪. ಸಿರಿಗೇಡಿಗೆ ಸೀರೆ ಉಡಿಸಿದರೆ, ಹೊಲಗೇರಿಗೆ ಹೇಳಹೋಯಿತು.

ಈ ಗಾದೆಗಳಲ್ಲಿ ನಮ್ಮ ಹೆಣ್ಮಕ್ಕಳ ಅನುಭವವೂ ವ್ಯವಹಾರ ಕೌಶಲ್ಯಕ್ಕೆ ತಳಹದಿ ಹಾಕಿರುವುದನ್ನು ಮನಗಾಣಬಹುದು.

೧. ಕೈ ಕೆಸರಾದರೆ ಬಾಯಿ ಮೊಸರು

೨. ನಾಚಿಕೆಗೇಡಿ ನಾಲಗೆ ಬಾಯಲ್ಲಿದ್ದರೆ, ನಾಲ್ಕೆಮ್ಮೆಯ ಹಯನು ಕಟ್ಟಿದಂತೆ

೩. ಅಪ್ಪನಿಗೆ ಅಪ್ಪಾ ಎನ್ನಲು ಒಪ್ಪೊತ್ತಿನ ಕೂಲಿ ಬೇಡಿದರು

೪. ಹಾದಿಗೆ ಹೋಗುವವನಿಗೆ ಅಪ್ಪಾ ಎಂದರೆ ಯಾರಿಗೆ ಹುಟ್ಟಿದೆಯೋ ಮಗನೇ ಅನ್ನುವನು.

ರುಮ್ಮು ಹಿಡಿಯುವ ಹುಂಬನ ಅನುಭವಗಳಾದ ಈ ಗಾದೆಗಳು, ಗಡಸು ನುಡಿಯಲ್ಲಿ ಅಳವಟ್ಟಿದ್ದರೂ ಸಾಕಷ್ಟು ಹೆಡಸಿನಿಂದ ತುಂಬಿಕೊಂಡಿವೆ.

ಒಡಪುಗಳು ತೋರಿಕೆಯಲ್ಲಿ ಮುಂಡಿಗೆಯಂತಿದ್ದರೂ ಕೋರಿಕೆಯಲ್ಲಿ ಜಾಣ್ನುಡಿಗಳೇ ಆಗಿವೆ, ಜಾಣೆಯರ ಕುಡಿನುಡಿಗಳೇ ಆಗಿವೆ.

“ಎಲೀ ಇಲ್ಲ ಅಡಕಿಲ್ಲ, ತುಟಿ ಮಾತ್ರ ಕೆಂಪಗ
ಮಳಿಯಿಲ್ಲ ಮೋಡಿಲ್ಲ ಹೊಲ ಮಾತ್ರ ಹಚ್ಚಗ.”
ಅವ್ವ ಅಂದ್ರ ಕೂಡೂದಿಲ್ಲ, ಅಪ್ಪ ಅಂದ್ರ ಕೂಡ್ತದೆ-
ಕುತನೀಚಿಲದಾಗ ರತನ ತುಂಬ್ಯಾದ-

ಮನೀ ಮಾಡೂ ರಂಡೀಗಿ ಹಿಂದೆ ಮೊಲೆ
ತಲೀಮ್ಯಾಲ ಕುಂಡಿ, ಬಾಯಾಗ ಬೊಳ್ಳ-

ಎಂಬ ಒಡಪುಗಳು ತುಟಿ ಮೆನಸಿನಕಾಯಿ ಮೊರ, ಹೊತ್ತ ಕೊಡ ಇವುಗಳನ್ನು ಕುರಿತ ಚಿಕ್ಕ ಕವನಗಳೇ ಆಗಿವೆ. ಕಾಂತೆಯ ಮಾತೇ ಕಾವ್ಯ ಮಾತೆಯೆನ್ನುವುದಕ್ಕೆ ನಿದರ್ಶನವಾಗಿವೆ.

ಅಡ್ಡಗೋಡಿಮ್ಯಾಲ ಗಿಡ್ಡಪ್ಪ ಕೂತಾನ
ಹೋಗಿ ಬರುವವರಿಗೆ ಪರಸಾದ ಕುಡತಾನ – ಚೇಳು
ತೆಗ್ಗಿನಾಗ ಬಸರಾಗಿ ತೆವರಾಗ ಹಡೀತಾಳ – ಕಪಲಿ

ಈ ಒಡಪುಗಳಲ್ಲಿ ಗಂಡು ಗಾಡಿ ಕಂಡುಬಂದರೂ, ಜೀವಾಳ ಹೆಣ್ಣಿನದು. ಗಂಡನ ಹೆಸರು ಹೇಳುವಾಗ ಮದುವಣಗಿತ್ತಿ, ಹೆಂಡತಿಯ ಹೆಸರು ಹೇಳುವಾಗ ಮದುವಣಿಗ ಅರ್ಥ ಹಾಕಿ ಹೇಳುವ ನುಡಿಗಡಣಕ್ಕೆ ಒಗಟು ಅನ್ನುತ್ತಾರಷ್ಟೇ?

ಸಜ್ಜಿರೊಟ್ಟಿ ಮಜ್ಜಿಗಿಸಾರ
ಇಕ್ಕಾಕ ಹೋದ್ರ ಕುಕ್ಕಾಕ ಬರ್ತಾನ-
ಈ ಒಗಟು ಮದುವಣಗಿತ್ತಿಯ ಅರ್ಥವಾದರೆ-
ಗಂಡುಗಚ್ಚಿ ಹಾಕ್ಯಾಳ | ದುಂಡ ಬುಟ್ಟಿ ಹಿಡಿದಾಳ
ಹೆಂಡೀ ಹಿಡೀತ ನಡಿದಾಳ

ಎನ್ನುವುದು ಮದುವಣಿಗನ ಪಡಿಯೊಗಟಾಗಿದೆ.

ತೆಳ್ಳನ ರೊಟ್ಟಿ | ಬೆಳ್ಳನ ಮೊಸರ
ತಂಪತ್ತಿನಾಗ ಎದ್ದು ನ್ಯಾರೀ ಮಾಡ್ತಾರ-

ಇಲ್ಲಿ ಹೆಂಡತಿ ತನ್ನ ಗಂಡನ ಒಂದು ಕಾರ್ಯಕ್ರಮವನ್ನು ವರ್ಣಿಸಿದ್ದರೆ

ಕಾಲಾಗ ತೋಡೆ | ಉಡ್ಯಾಗ?
ಮ್ಯಾಳಿಗಿ ಮ್ಯಾಲ ಕೂತ | ಮಾವ ಅಂತ ಬರ್ತಾಳ-

ಇಲ್ಲಿ ಹೆಂಡತಿಯ ಆಗಮನವನ್ನು ಗಂಡ ಬಣ್ಣಿಸಿದ್ದಾನೆ.

ಹೀಗೆ ನಮ್ಮ ಜನಪದವು ತನ್ನ ಸಹಜಯೋಗದ ಸಹಯೋಗದಲ್ಲಿ ತನ್ನನ್ನು ಅಸತ್‌ನಿಂದ ಸತ್ಯದೆಡೆಗೆ ಸಪ್ಪುಳಿಲ್ಲದೆ ಕೊಂಡೊಯ್ಯುತ್ತ, ಆನಂದದಿಂದ ಹಾಡಿದೆ; ಉಲ್ಲಾಸದಿಂದ ಕುಣಿದಿದೆ. ಕಥೆ ಹೇಳಿದೆ; ಕಥೆಕೇಳಿದೆ; ನಕ್ಕಿದೆ, ನಗಿಸಿದೆ. ನಮ್ಮ ನುಡಿಯಲ್ಲಿ ಹಲವು ವಿಧದ ತೊಡವುಗಳಿಂದ ಸಿಂಗರಿಸಿದೆ. ಪಡೆನುಡಿ, ಕೂಡುನುಡಿ; ನಂಬಿಗೆ ರೂಢಿ ಮೊದಲಾದ ಅಷ್ಟೈಶ್ವರ್ಯಗಳನ್ನು ಕನ್ನಡ ಬೊಕ್ಕಸಕ್ಕೆ ನಿರರ್ಗಳವಾಗಿ ನೀಡುತ್ತಿದೆ. ಅವುಗಳನ್ನು ವಿಶದಪಡಿಸುವುದು ಒತ್ತಟ್ಟಿಗಿರಲಿ; ಅವುಗಳ ಪರಿವಿಡಿಯನ್ನು ವಿವರಿಸುವುದಕ್ಕೂ ಅವಕಾಶವಿಲ್ಲ; ಸ್ಥಳವೂ ಇಲ್ಲ.

ಮಹಾಪೂರದ ಹಾವಳಿ

ಎಲ್ಲಿಯವರೆಗೆ ನಮ್ಮ ಹೆಣ್ಣುಮಕ್ಕಳು-ಗಂಡು ಮಕ್ಕಳೆಲ್ಲಾ ಒಂದೊಂದು ಕಾಯಕವನ್ನು ವಹಿಸಿ ಅದರಲ್ಲಿ ತಲ್ಲೀನರಾಗುವದಿಲ್ಲವೋ ಅಲ್ಲಿಯವರೆಗೆ ಅವರು ಹಾಡುತ್ತ, ಕಥೆ ಹೇಳುತ್ತ ಗಾದೆ ಒಗಟುಗಳನ್ನು ಬಳಸುತ್ತ ಆನಂದವನ್ನು ಪಡೆಯಲೂ ಸಮರ್ಥರಾಗುವುದಿಲ್ಲ ಅಥವಾ ಹಿಂದಿನ ತ್ರಿಪದಿಗಳನ್ನೇ ವಿಧಾನ-ಸನ್ನಿವೇಶಗಳಿಲ್ಲದೆ ಹಾಡುತ್ತ ಹೋದರೆ ಅವು ಪ್ಲ್ಯಾಸ್ಟಿಕ್ ಹೂಗಳಂತೆ ಆಕರ್ಷಿಸಬಹುದು ಅಷ್ಟೇ. ಆದರೆ ಅವುಗಳ ಸುಗಂಧ ಎಂದೂ ಅನುಭವಕ್ಕೆ ಬರಲಾರದು, ಬೀಸುಕುಟ್ಟುವ ಹಾಗೂ ಹತ್ತಿಬಿಡಿಸುವ ಕಾಯಕಗಳೇ ಹೇಳ ಹೆಸರಿಲ್ಲವಾದ ಬಳಿಕ, ಆನುಷಂಗಿಕವಾಗಿ ಹಾಡುವ ತ್ರಿಪದಿಗಳು ಯಾವ ಹೆಸರಿನಲ್ಲಿ ಮುಂದೆ ಬಂದಾವು? ಅರಿಸಿಣ ಬಚ್ಚಿ, ನೂಲು ಸುತ್ತಿ, ಸೆಂಡಿಗೆ ಕಡಿದು, ಐರಾಣಿ ತಂದು, ಭೂಮ ಮಾಡಿ, ಅಕ್ಷತೆ ಹಾಕಿ,ಕೂಸು ಒಪ್ಪಿಸಿಕೊಡುವ ವಿಧಾನಗಳಿಲ್ಲದೆ ಗುಡಿಯಲ್ಲಿಯೋ ಗದ್ದುಗೆಯ ಬಳಿಯಲ್ಲಿಯೋ ಅರೆಚಣದಲ್ಲಿ ಮದುವೆ ಮುಗಿದು ಹೋಗುತ್ತಿರುವಾಗ, ವಿಧಾನದ ಹಾಡುಗಳು ಹವ್ಯಾಸಿಗಳ ತರಲಲವಾಗಿಮಾತ್ರ ಉಳಿಯಬಲ್ಲವು. ಹೊಲದೊಳಗಿನ ರೆಂಟೆಕುಂಟಿ, ಮೊಟ್ಟೆ ಹಂತಿ ಮೊದಲಾದ ಕೃಷಿಕರ್ಮಗಳನ್ನು ಯಂತ್ರಗಳೇ ಮಾಡಿ ಮುಗಿಸತೊಡಗಿದಾಗ ಹಂತಿಯ ಹಾಡು, ಮೊಟ್ಟೆಯ ಹಾಡು, ಆಣೀಪೀಣಿ ಹಾಡು ಹಾಡುವುದು ಯಾವಾಗ? ಅಪ್ರಸಂಗವೇ ಇರಲಿ, ಅಧಿಕ ಪ್ರಸಂಗವೇ ಇರಲಿ ಧ್ವನಿಮುದ್ರಿಕೆಗಳನ್ನು ಹಚ್ಚಿ ಒದರಿಸುವುದೊಂದೇ ಸುಗಮ-ಸುಲಭ ದಾರಿ. ರಥೋತ್ಸವ ಜಾತ್ರೆ ಸಪ್ತಾಹ ಸತ್ಯನಾರಾಯಣ ವ್ರತ-ಸಣ್ಣದಿರಲಿ ದೊಡ್ಡದಿರಲಿ ಊರೆಲ್ಲಾ ಕೀಸರಿಡುವಂತೆ ಧ್ವನಿಮುದ್ರಿಕೆಯನ್ನು ಲೌಡಸ್ಪೀಕರ್ ಹಚ್ಚಿ ಕೇಳಿಸಲು ತೊಡಗುವವರಿಗೆ, ಹಾಡುವುದಕ್ಕೆ ಹೆಂಗಸರು ಬೇಡ: ಕಥಿಸುವುದಕ್ಕೆ ಗಂಡಸರೂ ಬೇಡ. ಪುರಾಣ, ಕೀರ್ತನ, ಗೊಂದಲ, ಪ್ರವಚನಗಳೆಲ್ಲ ಧ್ವನಿಮುದ್ರಿಕೆಯ ಮುಖಾಂತರವೇ ಕೇಳುವ ಪ್ರಸಂಗ ಸಾರ್ವತ್ರಿಕವಾಗಿದೆ. ಕೃತ್ರಿಮ ಗರ್ಭಧಾರಣೆಸ್ವಾಗತಿಸಿದ ನಾವು ಈ ಸೌಕರ್ಯವನ್ನು ಅಲ್ಲಗಳೆಯುವವೇ?ಜಗತ್ತು ತನ್ನಿಣದ ತಾನೇ ಅಸ್ತವ್ಯಸ್ತಗೊಳ್ಳುವುದು ಕಡಿಮೆ. ಲೋಕದ ಡೊಂಕು ತಿದ್ದುವವರ ಕಣ್ತಪ್ತು-ಕೈತಪ್ಪುಗಳಿಂದಲೇ ಹೆಚ್ಚು ಅಸ್ತವ್ಯಸ್ತವಾಗಿದೆ. ಗಣಪತಿ ಮಾಡುವಾಗ ಸೊಂಡಿ ಹಚ್ಚು ಸ್ಥಳವನ್ನೇ ಮರೆತರೆ ಅದು ಮಂಗನೋ ಜೋಕುಮಾರನೋ ಆಗುವದರಲ್ಲಿ ಆಶ್ಚರ್ಯವೇನು?

ತಪ್ಪದ ದಾರಿಯಲ್ಲಿ

ನಮ್ಮ ಜನಪದವು ಸಾಮೂಹಿಕ ಜೀವನದಲ್ಲಿ ಮೂಡಿಸಿದ ಹೆಜ್ಜೆಗಳನ್ನು ಇಂದಿನ ದುಮ್ಮಣ್ಣಿನಲ್ಲಿಯೂ ಗುರುತಿಸಬಹುದಾಗಿದೆ. ಹಿಂದಿನವರಿಗೆ ನಾಣ್ಯ-ನೋಟುಗಳ ಮೇಲಿನ ಮುಖ ಕಾಣಿಸುವದಕ್ಕಿಂತ ಮೊದಲು, ಮುಂಡದ ಮೇಲೆ ಕಂಗೊಳ್ಳಿಸುತ್ತಿರುವ ಜೀವಂತ ಮುಖ ಮಾತ್ರ ಕಾಣಿಸುತ್ತಿತ್ತು. ಅಂದು ಸಮಷ್ಠಿಯ ಅಂತರಾತ್ಮವೇ ಜನಪದ ಜೀವನದ ಆಡಳಿತವನ್ನು ನಿರ್ವಹಿಸುತ್ತಿತ್ತೇನೋ. ಅದಕ್ಕೊಂದು ಜೀವನದ ಉದಾಹರಣೆಯಾಗಿ ಬಂದಿದೆ ಕೆಳಗೆ ಕಾಣಿಸಿದ ಕಥೆ.

ಹನುಮರಡ್ಡಿ ಗೋವಿಂದರಡ್ಡಿ ತನ್ನ ಹೊಲಮಾರಿದ್ದನು. ಗೋವಿಂದರಡ್ಡಿ ಹೊಲದಲ್ಲಿ ನೇಗಿಲು ಹೊಡೆಯುತ್ತಿರುವಾಗ ಹೊನ್ನ ತುಂಬಿದ ಕೊಪ್ಪರಿಗೆ ಸಿಕ್ಕಿತು. ಅದನ್ನು ಹನುಮರಡ್ಡಿಗೆ ಒಪ್ಪಿಸಹೋದನು. ನೀನು ಮಾರಿದ ಹೊಲದಲ್ಲಿ ಸಿಕ್ಕಿತೆನ್ನಲು, ಮಾರಿದ ಹೊಲದಲ್ಲಿ ಹನುಮರಡ್ಡಿಯ ಅಂದಿದ್ದೇನೆಂದರೆ ಇದ್ದುದೆಲ್ಲ ನಿನ್ನದೇ. ಆದ್ದರಿಂದ ಅದನ್ನು ನಿನ್ನ ಮನೆಗೆ ತೆಗೆದುಕೊಂಡು ಹೋಗು ಎಂದು ಅವನು ಗೋವಿಂದರಡ್ಡಿಗೆ ಹೇಳಿದನು. ಆನ್ಯಾಯವು ಅರಸನ ಬಳಿಗೆ ಒಯ್ಯಲು, ಆತನು ಅದನ್ನು ತನ್ನ ಬೊಕ್ಕಸಕ್ಕೆ ಸೇರಿಸಿಕೊಳ್ಳದೆ ಹನುಮರಡ್ಡಿಯ ಮಗನಿಗೆ ಗೋವಿಂದರಡ್ಡಿಯ ಮಗಳನ್ನು ಕೊಡಿಸಿ ಲಗ್ನಮಾಡಿಸಿ, ಆ ಹೊನ್ನ ತುಂಬಿದ ಕೊಪ್ಪರಿಗೆಯನ್ನು ಮದುಮಕ್ಕಳಿಗೆ ಉಡುಗೊರೆಯೊಡನೆ ಕೊಡಿಸಿದನು. ಇದು ಅಂತರಾತ್ಮನ ಆಳಿಕೆಗೊಂದು ಉದಾಹರಣೆ. ಆ ಕಾದ ನ್ಯಾಯ ನೀತಿಗಳು ಬೀಜ ರೂಪದಲ್ಲಿ ಇಂದಿಗೂ ಸಿಗುತ್ತಿವೆ.

ವೀರಭದ್ರಪ್ಪ ಒಂದು ಹಳ್ಳಿಯ ಬಡಿಗ. ದಿನಾಲು ಇಳಿಹೊತ್ತಿನವರೆಗೆ ಜೋಳ ಸಿಗದೆ ಹೊಟ್ಟೆ ಹುರಿಹಾಕಿಕೊಂಡು ಅಲೆದಾಡುವ ಕಡುಬಡವ, ಆದರೆ, ನೆಲಗಡಲೆಯನ್ನು ಬೆಳೆದ ರೈತನು, ಬಡಿಗನಿಗೆಂದು ತೆಗೆದಿರಿಸಿದ ಗಂಟನ್ನು ನೋಡಿ ವೀರಭದ್ರಪ್ಪ ಹೇಳಿದನು ಅಷ್ಟೇಕೆ ಕೊಡುವಿರಿ: ಸ್ವಲ್ಪ ಕೊಡಿರಿ. ಆಳು-ಹೋಳು-ಲಾಗೋಡಿ ಹೋಗಿ ನಿಮಗೇನು ಉಳಿಯುತ್ತದೆ.

ನಮಗೆ ಹಾಲು ಕೊಡುವ ಗುರುಸಿದ್ದವ್ವ ವರ್ಷದಲ್ಲಿ ಕನಿಷ್ಟ ಎರಡು ಸಾರೆಯಾದರೂ ತವರುಮನೆಗೆ ಹೋಗಿ ಹದಿನೈದು ದಿನ ನೆರೆಹೊರೆಯ ಹೆಂಗಸರು ಆಡಿಸಾಡುವರಂತೆ “ತವರು ಮನೆಯಲ್ಲಿ ತಿಂದುಂಡು, ಮಲಗಂಟಿನ ಸೀರೆಯುಟ್ಟು ವಠಾಣಿ ತನ್ನುವ ಹುಡುಗಿಯಂತೆ ಕಾಣಿಸುತ್ತಿರುವಿ”

ಪ್ರೇಮವೇ ಸಾಮೂಹಿಕ ಜೀವನವನ್ನು ಪವಣಿಸಿದ್ದರಿಂದ ಅದಕ್ಕೊಂದು ಪ್ರಸನ್ನತೆಯುಂಟಾಗಿತ್ತು. ಇನ್ನೂ ಒಂದೆರಡು ಉದಾಹರಣೆಗಳನ್ನು ಕೇಳೋಣ-

೧. ಒಂದಾನೊಂದು ಮನೆಯಲ್ಲಿ ಹೆರಿಗೆಯ ಸಂದರ್ಭವೊದಗಿದಾಗ ಹೊರಸಲು ಸಿದ್ಧಪಡಿಸಬೇಕಾದರೆ, ಬಡಿಗನಿಂದ ತುಂಬಿಸಿದ ಹೊರಸಲು, ಅದಕ್ಕೆ ಬೇಕಾದ ನುಲಿ, ಒಂದು ತೆಂಗು ಬೀದಿಯಲ್ಲಿ ಇರಿಸಿಬಿಟ್ಟರಾಯಿತು. ಅದನ್ನು ಕಂಡವರು ಮುಂದಡಿಯಿಡದೆ, ಹೊರಸು ಹೆಣೆದ, ತೆಂಗು ಒಡೆದು ಕೊಬ್ಬರಿ ಹಂಚಿಹೋಗುತ್ತಿದ್ದರು.

೨. ಹೊಸಮನೆ ಹೊದಿಸುವಾಗ ತೊಲೆ-ಜಂತಿ-ಚಿಲಕೆಗಳನ್ನು ಹರಹಿ, ಅಂಗಳದಲ್ಲಿ ಎರಡು ತುಳಿ ಕೆಸರು ಕಲೆಸಿಟ್ಟರೆ ತೀರಿತು. ಹೋಗಿಬರುವವರೆಲ್ಲರೂ ಗಂಡುಗಚ್ಚೆಹಾಕಿ, ಆ ಮನೆಗೆ ಮೇಲು ಮುದ್ದೆಒಗೆದು ಹೋಗುತ್ತಿದ್ದರು. ಅಲ್ಲಿ

ಪ್ರತಿಫಲದ ಪ್ರಶ್ನೇಯೇ ಇಲ್ಲ.

೩. ಬಿತ್ತುವಾಗ, ಹರಗುವಾಗ, ಹಂತಿ ತುಳಿಸುವಾಗ ಒಕ್ಕಲಿಗರು, ಪರಸ್ಪರ ಸವಡೀಕ್ರಮವನ್ನು ಅನುಸರಿಸಿ, ಕೆಲಸ ಪೂರ್ತಿಗೊಳಿಸುತ್ತಿದ್ದರು. ಅದರಿಂದ ಕೆಲಸ ಸಕಾಲಕ್ಕೆ ಆಗಿಬಿಡುತ್ತಿತ್ತು.

೪. ಮದುವೆ ಹಮ್ಮಿದಾಗ ಕುಲದವರು ಮನೆಯ ಕೆಲಸ ಬಿಟ್ಟು, ಹಗಲು ರಾತ್ರಿಯೆನ್ನದೆ ಕಾರಣವನ್ನು ಸುವ್ಯಸ್ಥಿತವಾಗಿ ನಿಸ್ತರಿಸಿಕೊಟ್ಟು ಹೋಗುತ್ತಿದ್ದರು. ಅದಕ್ಕಾಗಿ ಮನೆಯವನು ಸ್ವಸಂತೋಷದಿಂದ ಓಡಾಡುವವರ ಊಟ ಕೊಡುತ್ತಿದ್ದನು.

೫. ಎಮ್ಮೆ ಈದ ಮನೆಯವರು, ಎಮ್ಮೆ ಒದೆದ ನೆರಮನೆಗೆ ದಿನಾಲು ತಂಬಿದ ಹಾಲು ಕೊಟ್ಟು, ಅವರ ಎಮ್ಮೆ ಈದಾಗ ಅದೇ ಕ್ರಮದಿಂದ ಹಾಲನ್ನು ಮರಳಿ ಪಡೆಯುತ್ತಿದ್ದರು.

೬. ಮಜ್ಜಿಗೆ ಮಾರಿಕೊಳ್ಳುವ ವಸ್ತುವಾಗದೆ ಶಿವಾದಾನವೆನಿಸಿತ್ತು. ಅದರಂತೆ ಪಡುವಲಕಾಯಿ, ಹತ್ತರಕಿ ಪಲ್ಲೆ, ಕೋತಂಬರಿ, ಪುಟ್ಟೀಕಾಯಿಗಳು ಮಾರುಕಟ್ಟೆಗೆ ಬರುತ್ತಿರಲಿಲ್ಲ. ಕೋತಂಬರಿಗೆ ಕೆದ್ದಿಲ್ಲವೆಂಬ ಗಾದೆಯ ಮಾತು ಇಂದಿಗೂ ಕೇಳಿ ಬರುತ್ತದೆ. ಅವು ಪುಕ್ಕಟೆ ಕೊಡಕೊಳ್ಳುವ ದೀನಸಾಗಿದ್ದವು. ಚಿಕ್ಕತಕ್ಕಡಿಯಂಗಡಿಯಲ್ಲಿ ಕಾಚು, ಲವಂಗ, ಪೆನ್ಸಿಲು ಇವು ಕೊಸರಿನ ವಸ್ತುವಾಗಿದ್ದವು.

೭. ವೈದ್ಯಕೀಯ ಸಹಾಯಕ್ಕಾಗಲಿ, ವಿದ್ಯಾದಾನಕ್ಕಾಗಲಿ, ಪ್ರತಿಫಲ ನಿಷಿದ್ಧವಾಗಿತ್ತು. “ಎಲ್ಲಿಯವರೆಗೆ ಭಾರತೀಯರು ತಮ್ಮ ಪೂರ್ವಿಕರ ಆದರ್ಶವನ್ನು ಮರೆಯುವದಿಲ್ಲವೋ ಅಲ್ಲಿಯವರೆಗೆ, ಭಾರತೀಯರಿಗೆ ಸಾವಿನ ಭಯವಿಲ್ಲ” ಎಂದು ಹೇಳಿದ ವಿವೇಕಾನಂದಸ್ವಾಮಿಗಳು, ಊಟ, ಉಡಿಗೆ ತೊಡಿಗೆ, ಆಡುನುಡಿಗಳನ್ನು ಪೂರ್ವಿಕರ ಆದರ್ಶಗಳೆಂದು ಎತ್ತಿ ತೋರಿಸಿ, ಪರಾನುಕರಣಕ್ಕೆ ಆಸ್ಪದವವೀಯದಂತೆ ಕಾಪಾಡಿಕೊಂಡು ಬಂದರೆ, ನಮಗೆ, ನಮ್ಮ ಸಂಸ್ಕೃತಿಗೆ ಚ್ಯುತಿಯಿಲ್ಲವೆಂದು ಅಭಯ ನೀಡಿದ್ದಾರೆ. ಅಂಥ ಅದ್ಭುತ ಸಿದ್ಧಿಗೆ ನಮ್ಮ ಜನಪದ ಸಾಹಿತ್ಯದ ಉಪಾಸನೆಯೇ ಪರಮಸಾಧನೆಯಾಗಿದೆ. ಶಿಷ್ಟ ಸಾಹಿತ್ಯದ ಹೂವಿಗೆ ಜನಪದಸಾಹಿತ್ಯವು ತಾಯಬೇರಾಗಿರುವಂತೆ, ನಾಗರಿಕ ಜೀವನದ ಸಫಲತೆಗೆ ಜನಪದ ಜೀವನದ ತಳರಸವು ಏರಿಬರುವಂತೆ ಸುಗಮಗೊಳಿಸಬೇಕಾಗಿದೆ.

ಚಂಡಮಾರುತ ಪ್ರಸನ್ನಗೊಂಡ ಬಳಿಕ

ಹಿಂದಿನ ಜೀವನ ಉಳಿದಿಲ್ಲ, ಮುಂದಿನದು ಮೊಳೆದಿಲ್ಲ ಎಂದಾಗ, ಅಂದಿನ ಜನಪದವಾಗಲಿ, ಜನಪದಸಾಹಿತ್ಯವಾಗಲಿ, ಉಳಿಯಬಲ್ಲವೇ? ಮುಂದಿನದರ ಕುರುಹು ಮೊಳೆಯ ಬಲ್ಲವೇ? ಬೆಳಗಾಗಲಾರದ ಕಗ್ಗತ್ತಲೆಯ ರಾತ್ರಿ ಇರುವುದುಂಟೆ? ನಾವು ಅದೆಷ್ಟು ಅಧೋಗತಿಗಿಳಿದಿದ್ದರೂ, ನಮಗೆ ಪ್ರಗತಿಯ ಕಡೆಗೆ ಸರಿಯಲು ಮಾತ್ರ ಸ್ಥಳವಿದ್ದೇ ಇದೆ. ಭಾರತಾಂತರ್ಗತ ಕನ್ನಾಡು, ಶರಣರ ಕಾಯಕದ ಮಾದರಿಯನ್ನು ಭಾರತದೇಶಕ್ಕೆ ಮಾತ್ರವಲ್ಲದೆ ಇಡಿಯ ವಿಶ್ವಕ್ಕೇ ತೋರಿಸಿಕೊಡುವ ಸುಸಂದರ್ಭವೀಗ ಪ್ರಾಪ್ತವಾದಂತಿದೆ. ಕಾಯಕವೆಂದರೆ ನೌಕರಿಯಲ್ಲ; ಕೆಲಸ ಉದ್ಯೋಗವಷ್ಟೇ ಅಲ್ಲ; ಉಪಜೀವನದ ಉಪಾಯವಂತೂ ಅಲ್ಲವೇ ಇಲ್ಲ. ಕಾಯಕವೆಂದರೆ ಕಾಯಕ. ಕೈಲಾಸದ ಆದರ್ಶ ಮನುಷ್ಯರೂಪದ ತತ್ತಿಗೆ ಕಾವುಕೊಟ್ಟು ಮಾನವ ಮರಿಯನ್ನು ಹೊರಗೆಡಹುವ ಕಲೆಯೇ ಕಾಯಕ; ಅದೊಂದು ಜೀವನಯೋಗ. ಆ ಯೋಗದಲ್ಲಿ ನಿರತರಾದಾಗ ಹಿಂದಿನ ತ್ರಿಪದಿಗಳನ್ನು ಮೀರಿಸುವ ಗೀತಗಳನ್ನು ನಮ್ಮ ಸೋದರಿಯರು ರಚಿಸಬಹುದಾಗಿದೆ. ಅಂದು ಕಾಯಕಕ್ಕೆ ಶರಣಾಗತರಾದ ನಮ್ಮ ಸೋದರರು ಹಿಂದಿನ ಕಥೆಗಳ ಮೋರೆಯ ಮೇಲೆ ಹೊಡಯಬಲ್ಲ ಕಥೆಗಳನ್ನು ನೀಡಬಲ್ಲರು, ಜನಪದ ಸಾಹಿತ್ಯ ಸಮ್ಮಳನಗಳು ನಮ್ಮ ರಥವನ್ನು ಆ ದಾರಿಯಲ್ಲಿ ನಡೆಸಿ, ಆ ಗೊತ್ತಿನ ಮುಟ್ಟುಗಟ್ಟೆಯನ್ನು ತಲುಪಿಸಲು ಸಮರ್ಥವಾಗಲಿ.