ಯಾವ ಸಾಧನೆಯು ವಿಶ್ವಕವಿ-ರವಿಂದ್ರನಾಥರು ಹೇಳಿದರೆ “ಒಂದೇ ಶಿರ | ಒಂದೇ ನರ | ಭಾರತನರ ನಾರಾಯಣ” ಎಂಬ ತಿಳಿವಳಿಕೆಯನ್ನು ಅಳವಡಿಸುವದೋ, ಯಾವ ಸಾಧನೆಯು ಶ್ರೀ ಹೊಯಿಸಳರು ಉಸುರಿದಂತೆ- “ಎಲ್ಲರು ಒಂದೇ ನಾ | ವೆಲ್ಲರೂ ಒಂದೇ | ಎಲ್ಲರು ಒಂದೆಂದು ಎಂದೆಂದು ಹೇಳುವ” ಭಾವನೆಯನ್ನು ಅರಳಿಸುವದೋ, ಯಾವ ಸಾಧನೆಯು ದಿ. ಮಧುರಚೆನ್ನರ ಕವಿವಾಣಿಯಂತೆ – “ನಾವು ಒಂದೇ ದೇಟಿನ ಕಾಯಿಗಳು | ನಾವು ದೇವನ ದೇಟಿನ ಮಾವುಗಳು” ಎಂಬ ಅರಿವನ್ನು ಮೂಡಿಸುವುದೋ ಆ ಸಾಧನೆಯನ್ನು ಋಷಿಮುನಿಗಳು ಮಾತ್ರ ಮಾಡುವುದೆಂದು ಯಾರೂ ಬರೆದಿಟ್ಟಿಲ್ಲ. ಶರಸತ್ಪುರುಷ ಮಟ್ಟಿಗೆಂದು ಅದನ್ನು ಕಾದಿರಿಸಿಲ್ಲ. ಅದನ್ನು ಮಹಾತ್ಮ-ಮಹಾನುಭಾವರಿಗಾಗಿ ಮೀಸಲಾಗಿರಿಸಿಲ್ಲ.ಅದನ್ನು ಆಡಳಿತದ ಕಾಯ್ದೆ ಕಟ್ಟಳೆಗಳು ಸಾಧಿಸಿಕೊಡಲು ಸಮರ್ಥವಾಗಿಲಲ. ನೀತಿ-ನಿಬಂಧನೆಗಳು ತಂದೊದಗಿಸುವ ಭರವಸೆ ನೀಡಿಲ್ಲ. ಸಂಸಾರದ ಜಂಜಡಕ್ಕೆ ಸೋತುಹೋದ ಮುದುಕರು ಅನುಸರಿಸುವ ಗೀತೆಸಂಹಿತೆ ಆ ದಾರಿಗೆ ಅಳವಟ್ಟಿಲ್ಲ. ಅದು ಪುರುಷರಿಗಾಗಿಯೇ ಎಂದು ಕಾಯ್ದಿರಿಸಿದ ಸಂಪರದಾಯವಾಗಿಲ್ಲ. ಅದು ಬಾಲಯುವಕರೆನ್ನದೆ, ಕೊಡಗೂಸು-ಯುವತಿಯರೆನ್ನದೆ ಸರ್ವರಿಗೂ ತೆರೆದಿಟ್ಟ ಮಾರ್ಗ. ಅಂಥ ಸರ್ವತೋಮುಖವಾದ ಸ್ವಾಭಾವಿಕ ಧರ್ಮಪಥ ಯಾವುದು? ಜನಾಂಗದ ಜೀವಾಳವೆನಿಸುವ ಜನಪದವು ಬಾಳಿನ ಒಂದಂಗವಾಗಿಸಿಕೊಂಡು ಅನುಸರಿಸಿದ ಕಲಾರಾಧನೆಯೇ ಹೆದ್ದಾರಿಯಾಗಿದೆ. ಅದನ್ನು ಸಾಧಿಸಿಕೊಳ್ಳುವುದೇ ಜನಪದ ಜೀವನಕ್ಕೆ ಪರಮ ಪ್ರಯೋಜನವಾಗಿದೆ.

ಸ್ವಾಭಾವಿಕ ಸಂಚಲನೆ

ಜನಪದವೆಂದರೆ ಮಣ್ಣ ಮುದ್ದೆಯೆಂತೆ ತೋರುವ ಈ ಪೃಥ್ವಿಯ ಪ್ರಥಮವರ್ಗದ ಪ್ರಜೆ. ಪೃಥ್ವಿಗೆ ಸ್ವಾಭಾವಿಕವಾದ ಎರಡು ಸಂಚಲನೆಗಳಿವೆ. ತನ್ನ ಮೈಸುತ್ತಿರುವುದು ಒಂದು; ಸೂರ್ಯನ ಸುತ್ತ ತಿರುವುದು ಇನ್ನೊಮದು. ಒಂದರಿಂದ ಹಗಲು ರಾತ್ರಿಗಳು ಸೊಗಸು ; ಇನ್ನೊಂದರಿಂದ ಋತುಮಾನಗಳ ಸೊಬಗು. ವೈಯಕ್ತಿಕ-ಸಾಧನೆಯಲ್ಲಿ ಜನಪದವು ತನ್ನ ಮೈಸುತ್ತು ತಿರುಗುತ್ತ-

ಕಳ್ಯಾ ಮಿಳ್ಯಾ | ಚಿಪಾಟಿ ಮಿಳ್ಯಾ
ಬಸರೀ ಗಿಡದಾಗ ಬಸಪ್ಪ ಕೂತಾನ
ಮಳಿ ಹೊಡಿಲೋ | ಮಳಿ ಹೊಡಿಲೋ ||
ಮಳಿಬಾರೋ ಮಲ್ಲಯ |
ಗುಡಿಕಟ್ಟೋ ಸಂಗಯ್ಯ ||

ಎಂದು ಹಾಡುತ್ತದೆ. ಅದರಂತೆ ಸಾಮೂಹಿಕ ಸಾಧನೆಯಲ್ಲಿ ಪ್ರಕಾಶವನ್ನು ಬಲಗೊಂಡು ಸುತ್ತುವರಿಯುತ್ತ-

ನಾವು ಮೂರು ಮಂದಿ ದಾರಿಕಾರರಿರುವೆವು
ಸಾವಕಾಶ ಭೂಮಿಯನ್ನು ಸುತ್ತುತಿರುವೆವು

ಎಂಬ ಪಲ್ಲವಿಯನ್ನು ಅನುಸರಿಸಿ, ಆರು ಋತುಮಾನಗಳ ಮೂರು ಕಾಲಗಳನ್ನು ಬಣ್ಣಿಸುವದು. ಆ ಸುತ್ತುವರಿಕೆಗಳು ನೈಸರ್ಗಿಕವಾಗಿವೆ. ಬಾಯಲ್ಲಿ ಹಾಡು, ಕೈಯಲ್ಲಿ ತಾಳ, ಕಾಲಲ್ಲಿ ಕುಣಿತ, ದನಿಯಲ್ಲಿ ರಾಗ, ಹಾಡು ಹಿಗ್ಗಿನ ಕುರುಹಾದರೆ, ಕುಣಿತ ಉಲ್ಲಾಸದ ಚಿಹ್ನೆ. ಆನಂದದೊಳಗಿಂದ ಬಂದವರು ಆನಂದೊಳಕ್ಕೆ ಹೋಗುವವರೆಗಿನ ನೂರುವರ್ಷ ಆಯುಷ್ಯದ ಕಾಲಾವಧಿಯಲ್ಲಿ ಏಕೆ ಬೇಡ ಆನಂದ? “ಮೇಲೆ ನಲಿವ ನೀಲಗಗನವೇ ಗೋಪುರಾಗಿ, ಕಡಲು ತೊರೆ ತಟಾಕ ಪಂಚಪಾತ್ರೆಯಾಗಿ, ಸೂರ್ಯ ಚಂದ್ರರೇ ನಂದಾದೀಪ” ಆಗಿರುವವು ಜಗದ ಗುಡಿಯಲ್ಲಿ. ಗಾಳಿ ಕೊಳಲೂದುತಿರುವಾಗ, ತರಗೆಲೆ ತಾಳಬಾರಿಸುವಾಗ, ತಿಳಿಗೊಳಗಳು ಚಪ್ಪಳಿಕ್ಕುತಿರುವಾಗ, ಜಲಪಾತಗಳು ಧೀಂಕಿಟ್ಟು ಕುಣಿಯುತಿರುವಾಗ ಮನುಷ್ಯನು ತೆಪ್ಪಗೆ ಕುಳಿತುಕೊಳ್ಳಬಹುದೆ? ಅದನ್ನು ಕಂಡು ವಿವೇಕಾನಂದ ಸ್ವಾಮಿಗಳು-“ಥಾತಯ್ಯ ಥಾತಯ್ಯ ಎನುತ ಶಿವ ಕುಣಿತ | ಎನುತ ಶಿವ ಕುಣಿದ” ಎಂದು ಬರೆಗುಬಟ್ಟು ಹಾಡಿದರು. ಅಂಬಿಕಾತನಯರಂಥ ಕವಿಗಳು- “ಕುಣಿತಕ್ಕೆ ಇತಿಯಿಲ್ಲ | ಕುಣಿತಕ್ಕೆ ಮಿತಿಯಿಲ್ಲ | ಕುಣಿತಿಲ್ದ ಜಗ ಇಲ್ಲ |” ಎಂಬುದನ್ನು ಮನಗಂಡು, “ಕುಣಿಯೋಣ ಬಾರ | ಕುಣಿಯೋಣ ಬಾ” ಎಂದು ಜೀವನದ ಜೊತೆಗಾರ್ತಿಯನ್ನು ಆಹ್ವಾನಿಸಿ ಬಿಡದೆ – “ಚಿಗರ್ಯಾಗಿ ತಿಗರ್ಯಾಗಿ | ನಿಗ್ಗೀಯ ‍ಬಗರ್ಯಾಗಿ | ಗಾಳಿಗು ಹಗುರಾಗಿ ಕುಣಿಯೋಣ” ಎಂಬ ಸಂಕಲ್ಪವನ್ನು ದೃಢಪಡಿಸುತ್ತಾರೆ.

ಹಾಡುತ್ತಲೇ ಮಾಡುವ ಹವ್ಯಾಸ ಜನಪದಕ್ಕೆ ಹುಟ್ಟಿನಿಂದಲೇ ಬಂದ ಸ್ವಭಾವ. ದುಡಿಮೆಯ ಶ್ರಮವನ್ನು, ಬೇಸರವನ್ನು ಲೆಕ್ಕಿಸದೆ ಹಾಡುವವನು, ವಿಶ್ರಾಂತಿಯಲ್ಲಿ ಹೊತ್ತುಗಳೆಯುವ ಹೊಸದಾರಿಯನ್ನೆಲ್ಲಿ ಹುಡುಕಿಯಾನು? ಜನಪದಕ್ಕೆ ವಿಶ್ರಾಂತಿಕಾಲವೆಂದರೆ ಹಬ್ಬ ಹುಣ್ಣಿಮೆ, ಉತ್ಸವ ಜಾತ್ರೆ, ಮಂಗಲ ಮಹೋತ್ಸವಗಳ ಸಂದರ್ಭ. ರೊಟ್ಟಿ ನುಚ್ಚುಗಳನ್ನು ತಿನ್ನುವ ದೈನಿಕ ಜೀವನದಲ್ಲಿ ಹಾಡು ಹೊಮ್ಮಿಸುವವನು, ಹುಗ್ಗಿ-ಹೋಳಿಗೆಗಳನ್ನು ಉಣ್ಣಿಸುವ ಹಬ್ಬ ಹುಣ್ಣಿಮೆಯ ದಿನದಲ್ಲಿ ಹಾಡಿನೊಂದಿಗೆ ಕುಣಿಯದೆ ಬಿಟ್ಟಾನೇ?

ನಗುವವರನ್ನು ಕಂಡು ನಗೆಗೆ ಪಕ್ಕಾಗುವಂತೆ, ಆಕಳಿವವರನ್ನು ಕಂಡು ತೂಕಡಿಕೆಗೆ ಈಡಾಗುವಂತೆ, ಹಾಡಿ ಕುಣಿಯುವವರನ್ನು ಕಂಡಾಗ ಯಾರ ಉತ್ಸಾಹ ನೆಲಹಿಡಿಯುವದು? ಇಳಿವಯಸ್ಸಿನವರು ಮಣಿಮಣಿದು ಭಜನೆ ಮಾಡಿದರೆ, ಯುವಕರು ಕುಣಿ ಕುಣಿದು ಹಾಡಲಾರರೇ?ಬಾಲಕರು ಜಿಗಿದಾಡಿ ಕೇಕೆ ಹಾಕಲಾರರೇ? ಅಕ್ಕತಂಗಿಯರು ನುಣ್ಣಗಿನ ಸಣ್ಣಗಿನ ಹೆಣ್ಣುದನಿಯಲ್ಲಿ ಹಾಡಿ ಕೋಲು ಹಾಕಿ, ಇಳಿಗೂದಲನ್ನು ಈಸಾಡಿಸಲಾರರೇ? “ಹುಸಿನಗುತ ಬಂದೇವ | ನಸುನಗುತ ಬಾಳೋಣ | ತುಸುನಗುತ ತೆರಳೋಣ” ಎಂಬ ಕವಿವಾಣಿಯ ಸ್ಪಷ್ಪಟೀಕರಣವೇ ಈ ಜನಪದ ಜೀವನ.

ವಾಕ್ಯಗಳದೇ ಒಂದು ವೈಖರಿ

ಹಾಡುಕುಣಿತ ತಾಳತಂಬೂರಿ, ವೀಣೆಕೊಳಲುಗಳು ಸುಪ್ತ ಆನಂದವನ್ನು ಅರಳಿಸಬಲ್ಲವು. ಕೊಂಬು-ಕಹಳೆ ಉತ್ಸಾಹವನ್ನು ಕೆರಳಿಸಬಲ್ಲವು. ಅದೆಲ್ಲವುಗಳಿಗೆ ಹಿನ್ನೆಲೆಯಾಗಿರುವ ವಾದ್ಯಗಳನ್ನು ಬಿಟ್ಟರೂ ಚರ್ಮವಾದ್ಯಗಳದೇ ಒಂದು ವೈಖರಿಯಾಗಿದೆ. ಕುರುಬರ ಡೊಳ್ಳು, ವಿಲಾಸಿಗಳ ಕರಡಿ ಮೇಳದವರ ಊಡಕ, ಜೋಗಿತಿಯರ ಚೌಡಿಕೆ ಮೊದಲಾದ ಚರ್ಮವಾದ್ಯಗಳಿಗೆ ಒಂದು ವೈಶಿಷ್ಟ್ಯವಿದೆ. ಕುರುಬರ ಡೊಳ್ಳು “ಬ್ರಹ್ಮ ದೊಡ್ಡಾಂವ ಎಂದು ಉಗ್ಗಡಿಸಿದರೆ, ವಿಲಾಸಿಗಳ ಕರಡಿ- “ಸಿಕ್ಕಲೆ ಹುಡಿಗಿ, ಸಿಕ್ಕೆಲೆ ಹುಡಿಗಿ” ಎಂದು ಕಚಗುಳಿಯಾಡಿಸುವದು. ಮೇಳದವರ ಊಡಕ-“ ಊರ ಒತ್ತಟ್ಟಿಗಾದರೆ, ಊಡಕ ಒತ್ತಟ್ಟಿಗೆ” ಎನ್ನುವ ಲೋಕೋಕ್ತಿಗೆ ಸಾಕ್ಷಿಯಾಗಿದ್ದರೂ, ಪೆಟ್ಟುತಾಳ-ಹುಸಿ ತಾಳಗಳನ್ನು ಮೇಳವಿಸಿ ಉಲ್ಲಾಸವನ್ನು ಉಗಿಸುತ್ತದೆ. ಇನ್ನು, ಚೌಡಿಕೆಯನ್ನುವುದು “ದಂಡ ದೈತ್ಯರ ಹೊಡೆದು | ರುಂಡ ಚೌಡಿಕಿ ಮಾಡಿ| ಪರಶುರಾಮನ ಪಡೆದೀ | ಆನಂದಾದೇವಿ | ಪರಶುರಾಮನ ಪಡೆದೀ” ಎಂದು ಎಲ್ಲಮ್ಮನ ಕೀರ್ತಿ ದುಂದುಭಿಯನ್ನು ಬಾಜಿಸುತ್ತದೆ. ಕುಣಿಸುವ ಸಲುವಾಗಿಯೇ ಹುಟ್ಟಿಕೊಂಡ ತಿಲ್ಲಾಣವೆಂಬ ಧ್ವನಿಮಾಲಿಕೆಯೊಂದಿದೆ. ಇಂದಿನ ಕೆಂಧೂಳಿನಲ್ಲಿ ಅದರ ಹಜ್ಜೆಗಳು ಸಹ ಅಳಿಸಿಹೋಗಿವೆ. “ತೋಂತಕ ಝಣತತ್ವ | ಕಡಕಡ | ತೊಂತತ ಝಣತಾ | ತೋಂತತ ಝಣತಾ | ತಯಾತೋಂತತ ಝಣತಾ” ಅಂದಿಂದು ಪೂರ್ತಿಯಾಗಿ ಮರೆಯಾಗಿದ್ದರು ಅದರ ಅಣಕುನುಡಿ ಮಾತ್ರ ಕೇಳಸಿಗುತ್ತದೆ. ಅದಕ್ಕೆ ರಾತ್ರಿ ರಾಜನ ಕಥೆಯೇ ಸಾಕ್ಷಿ.

ಬುಳಗೆಗಳು, ಕೊಜ್ಜೆಯರು, ಗಂಡಸಾಗಿಯೂ ಸೀರೆಯುಟ್ಟು, ಹೆಂಗಸಿನ ಹಾವಭಾವಗಳನ್ನು ತೋರ್ಪಡಿಸುತ್ತ, ಜೋಗಿತಿಯರ ಮೇಳದಲ್ಲಿ ಚೌಡಿಕೆ ಬಾರಿಸಿ, ಎಲ್ಲಮ್ಮನ ಸೇವೆಯಲ್ಲಿ ಜೀವನವನ್ನೇ ಬಳೆದುಕಟ್ಟಿ ಮೀಸಲಿಟ್ಟಿದ್ದಾರೆನ್ನಬಹುದು. ಹೆಣ್ಣು ಲಕ್ಷಣದ ಆ ಶಾಪವೂ ತೊಲಗಬಲ್ಲದೆಂದು ಭರವಸೆ ತಳೆದವರಿದ್ದಾರೆ. ಗಂಡು ಜೋಗತಿಯಲ್ಲಿ ನಿಶ್ಚೇಷ್ಟವಾಗಿ ಬಿದ್ದ ಪ್ರಾಣಕೇಂದ್ರವನ್ನು ಕೆಣಕಿ, ಚೌಡಿಕೆಯ ನಾದದ ಪೆಟ್ಟು ಅಥವಾ ಪೆಟ್ಟಿನ ನಾದ ಚೈತನ್ಯವನ್ನು ಜಾಗೃತಗೊಳಿಸಬಲ್ಲದೆಂದು ಬಲ್ಲವರು ಹೇಳುತ್ತಾರೆ. ಚೌಡಿಕೆವಾದ್ಯದ ನಾದಪೆಟ್ಟುಲಯಗಳನ್ನು ಆಕಳಿಸಿ, “ನಾನೂ ಜೋಗತಿಯಾಗಬಾರದಿತ್ತೇ” ಎಂದು ಸಹಜವಾಗಿ ನುಡಿದವರಿದ್ದಾರೆಂದರೆ ಆಶ್ಚರ್ಯವಲ್ಲವೇ? ಊಡಕದ ಗತ್ತಿಗೆ ನೆಲವೇ ಎದ್ದು ಕುಣಿದವರಿದ್ದಾರೆಂದರೆ ಆಶ್ಚರ್ಯವಲ್ಲವೇ? ಊಡಕದ ಗತ್ತಿಗೆ ನೆಲವೇ ಎದ್ದು ಕುಣಿದಂತಾಗುತ್ತಿದ್ದರೆ, ನೆಲದಲ್ಲಿ ಆಶ್ಚರ್ಯವಲ್ಲವೇ? ಊಡಕದ ಗತ್ತಿಗೆ ನೆಲವೇ ಎದ್ದು ಕುಣಿದಂತಾಗುತ್ತಿದ್ದರೆ, ನೆಲದಲ್ಲಿ ಹೂಳಿದ್ದು ಎದ್ದು ಅದೇಕೆ ಕುಣಿಯಲಾರದು?

ಡೊಳ್ಳಿನ ಮೊಳಗು ಮುಗಿಲಿಗೆ ಅಪ್ಪಳಿಸಿ ಪಡಿನುಡಿಗೊಡುತ್ತಿರುವಾಗ ಉತ್ಸಾಹವನ್ನು “ಮತ್ತೇತಕೆ ತಡ ಬಯಲಿಗೆ ಬಾ ನೀನಿ” ಎಂದು ಆಹ್ವಾನಿಸಿದಂತಾಗುತ್ತದೆ.

ಕರಡಿವಾದ್ಯವು ಗುಡುಗುತ್ತ ಸಾಗಿದಾಗ ಹಿಂಡುವ ದನಗಳು ತೊರೆವು ಬಿಡುತ್ತಿರುವುದನ್ನು ಕಂಡಿದ್ದೇವೆ. ಚಡಚಣದಲ್ಲಿ ಸಮರ್ಥ ಕರಡಿವಾದ್ಯಕಾರ ಸಿದರಾಯನೆಂಬವನು ಕರಡಿ ವಾದ್ಯವನ್ನು ಗುಡುಗಿಸುತ್ತ ಅಲ್ಲಿ ಬರುತ್ತಿದ್ದಾನೆಂದರೆ ಇಲ್ಲಿ ಕೇರಿಮನೆಯ ಎಮ್ಮೆ ಎದ್ದುನಿಂತು, ಅಡ್ಡಹೊತ್ತಿನಲ್ಲಿ ತೊರೆವು ಬಿಡುವದು. ಮನೆಯೊಡತಿ ಆಲಸ್ಯಮಾಡದೆ ಅವಸರದಿಂದ ಎಮ್ಮೆ ಹಿಂಡಿ ಹಾಲಿನ ತಂಬಿಗೆಯನ್ನು ಹಿಡಕೊಂಡು ನಿಲ್ಲುವಳು. ಕರಡಿಮಜಲು ಅಲ್ಲಿಗೆ ಬಂದು, ಸಿದರಾಯನು ಕುಡಿಯಲು ನೀರು ಕೇಳುವಷ್ಟರಲ್ಲಿ ಆತನ ಕೈಗೆ ಹಾಲಿನ ತಂಬಿಗೆ ಇಡುವುದನ್ನೂ, ಆತನು ಆ ಹಾಲನ್ನೆಲ್ಲ ಒಂದೇ ಉಸಿರಿನಲ್ಲಿ ಕುಡಿಯುವುದನ್ನೂ ಕಂಡು ಮನೆಯವರಿಗೆ ಅದೆಷ್ಟು ಆನಂದ! ನೆರೆದವರಿಗೆಷ್ಟು ಹರ್ಷ!!

ಸಾಮರಸ್ಯದ ಸಹಜ ಪಾಠ

ಜಾನಪದ ಕಲಾಪ್ರದರ್ಶನವು ಸಾಮೂಹಿಕವಾಗಿ ನಡೆಯುವುದೇ ಹೆಚ್ಚು. ಹಾಡುಗಾರಿಕೆ ಮುಖ್ಯವಿರಲಿ, ವಾದ್ಯಗಾರಿಕೆ ಮುಖ್ಯವಿರಲಿ ತಾಳ-ರಾಗ-ಲಯ-ಕುಣಿತ ಇವು ಇರಲೇ ಬೇಕು. ಒಂದು ಭಜನಾಮೇಳವನ್ನು ಇಲ್ಲಿ ಉದಾಹರಿಸಬಹುದು. ಆ ಮೇಳದಲ್ಲಿ ಮುದುಕರು, ಯುವಕರು, ಬಾಲಕರು, ಬಾಲಿಕೆಯರು ಸಹ ಇರುವುದುಂಟು. ಒಬ್ಬೊಬ್ಬರ ದನಿ ಒಂದೊಂದು ವಿಧ. ಚೀರುದನಿ-ಏರುದನಿ, ದಪ್ಪದನಿ-ಸಪ್ಪೆದನಿ, ಸೀರುದನಿ-ಕೇರುದನಿ ಮೊದಲಾದವುಗಳೆಲ್ಲ ಒಂದೇ ಶ್ರುತಿಯಲ್ಲಿ ಹೊಂದಿಕೊಳ್ಳಬೇಕು. ತಾಳತಪ್ಪದಂತೆ, ಹೆಜ್ಜೆಗತ್ತಿನಂತೆ ಒಂದುಗೂಡಬೇಕು. ಒಟ್ಟಿನ ಮೇಲೆ ಒಬ್ಬನೇ ಹಾಡಿದಂತೆ ದನಿಗಳೆಲ್ಲ ಬೆರೆತು ಒಂದಾಗಬೇಕು. ಇದು ಅನೇಕದಲ್ಲಿ ಏಕವನ್ನು ಕಾಣುವ ಸಾಧಯೆನಿಸಲಾರದೇ? ಆ ಐಕ್ಯಸಾಧನೆಯನ್ನು ಬುದ್ಧಿಪೂರ್ವಕ ಮುಂದುವರಿಸಿರದಿದ್ದರೂ ಅದರ ಪರಿಣಾಮ ಎಲ್ಲರಿಗೂ ದೊರಕೊಳ್ಳುವದು. ಭಾವೈಕ್ಯವನ್ನು ಸಾಧಿಸುವ ಪ್ರಯತ್ನ ಬಯಲಾಟಗಳಲ್ಲಿಯೂ ಕಂಡುಬರುವದು.

ಆಟದ ಬಯಲಿನಲ್ಲಿ ಮೈಗೂಡಿಸಿಕೊಡುವುದಕ್ಕೆ ಕಾರಣವಾಗುವಂತೆ, ಭಜನಾ ಮಂಡಳದಲ್ಲಿ ಸಾಧಿಸಿಕೊಂಡ ಸಾಮರಸ್ಯ-ಭಾವೈಕ್ಯಾದಿಗಳು ಜೀವನರಂಗದಲ್ಲಿ, ರಾಷ್ಟ್ರೀಯ ರಂಗದಲ್ಲಿ ನೆಮ್ಮದಿಯನ್ನುಂಟು ಮಾಡುವುದಕ್ಕೆ ಕಾರಣವಾಗಲಾರವೇ? ಈ ಸಿದ್ಧಿಯನ್ನು ಸಂಪೂರ್ಣದೊರಕಿಸಿ ಕೊಡಬಲ್ಲ ಶರಣರ ಶಿವಯೋಗ, ಅರವಿಂದರ ಸಮನ್ವಯಯೋಗಗಳನ್ನು ಬಿಟ್ಟರೆ, ಜನಸಾಮಾನ್ಯರು ಅಂದರೆ ಜನಪದವು, ಜಾನಪದ ಕಲಾರಾಧನೆಯಿಂದ ಆ ಸಿದ್ಧಿಯನ್ನು ಸಂಗಳಿಸಬಹುದಾಗಿದೆ. ಸಾಮೂಹಿಕ ಸಾಮರಸ್ಯವು ರಾಷ್ಟ್ರಕಲ್ಯಾಣಕ್ಕೂ ವ್ಯಕ್ತಿಕಲ್ಯಾಣಕ್ಕೂ ಅಗತ್ಯವಾದ ಸಂಗತಿ. ಬಿನ್ನ ಬಿನ್ನ ವ್ಯಕ್ತಿಗಳಲ್ಲಿ ಸಮರಸತೆಯನ್ನು ಒದಗಿಸಿಕೊಡಬಲ್ಲ ಜಾನಪದ ಕಲಾರಾಧನೆ ವ್ಯಕ್ತಿಯ ಬುದ್ಧಿ-ಭಾವ-ಪ್ರಾಣ-ದೇಹಗಳಲ್ಲಿಯೂ ಸಮರಸತೆಯನ್ನು ಉಂಟುಮಾಡುವುದೆಂದು ಬೇರೆ ಹೇಳುವ ಕಾರಣವಿಲ್ಲ. ಭಾವೈಕ್ಯ –ಸಾಮರಸ್ಯಗಳನ್ನು ಸಾಧಿಸುವುದಕ್ಕೆ ಲೋಕಸಭೆಯಂತ ರಾಷ್ಟ್ರ ಸಂಸ್ಥೆಗಳೂ ಕೈಯೂರಿ ಕುಳಿತಾಗ ಜಾನಪದ ಕಲಾರಾಧನೆಯು ಆಶಾದಾಯಕ ಭರವಸೆ ಕೊಡಬಲ್ಲದು.

ಜಾನಪದ ಅನಾಗರಿಕತೆ

ನಾಗರಿಕತೆ ನಗರದ ಸ್ವತ್ತು ಎಂದೂ, ಹಳ್ಳಿ ಹಾಗೂ ಜಾನಪದವು ಶುದ್ಧ ಅನಾಗರಿಕವೆಂದೂ ತಿಳಿದುಕೊಂಡ ನಾವು, ಹಳ್ಳಿಯ ಕಲೆಗಳನ್ನು ಅನಾಗರಿಕ ವೃತ್ತಿಯೆಂದು ಭಾವಿಸಿ, ಎಂದು ನಕ್ಕು ಬಿಟ್ಟೆವೋ, ಹಳ್ಳಿಯದೆಂದು ಮೂಗುಮುರಿದೆವೋ ಅಂದಿನಿಂದ ಜಾನಪದ ಕಲೆಗಳು ಕಳೆಗುಂದ ತೊಡಗಿದವು. ಅವುಗಳತ್ತ ಕ. ಸಾ. ಪರಿಷತ್ತು, ಕರ್ನಾಟಕ ಸರ್ಕಾರ ಸೂಕ್ತ ದೃಷ್ಟಿಯಿಂದ ಇತ್ತೀಚೆಗೆ ನೋಡಲು ಆರಂಭಿಸಿವೆ. ಆದರೆ ಜಾನಪದ ಕಲೆಗಳಲ್ಲಿ ಕೆಲವು ಈಗಾಗಲೇ ಅರೆ ಜೀವಿಯಾಗಿವೆ. ಕೆಲವು ನೀರ್ಜಿವಿಯೂ ಆಗಿವೆ. ಇನ್ನಿಷ್ಟು ತಡೆದು ಗಮನಹರಿಸಿದ್ದರೆ, ನಿರ್ಯಾಣ ಮಹೋತ್ಸವವನ್ನೇ ಪೂರಯಿಸಬಹುದಾಗಿತ್ತು. ಅರೆ ಜೀವಿಯಾಗಿದ್ದ ಕಲೆಗಳನ್ನಾದರೂ ಯೋಗ್ಯ ಚಿಕಿತ್ಸೆಯಿಂದ ಸಂಜೀವಿನಿಗೊಳಿಸಿಕೊಳ್ಳಬಹುದಾಗಿದೆ. ಐವತ್ತು ವರ್ಷಗಳ ಹಿಂದೆ ನಮ್ಮವರಿಗೆ ಈ ಬುದ್ಧಿಬಂದಿದ್ದರೆ, ಬಹುಶಃ ಯಾವ ಕಲೆಯೂ ಕೈಬಿಡುತ್ತಿದ್ದಿಲ್ಲ.

ಕಲಾವಿದರನ್ನು ಮೊದಲು ಬದುಕಿಸೋಣ

ಕುಗ್ರಾಮವಾಸಿಯಾಗಿ, ಕುಲಹೀನ ಸೇವೆಮಾಡಿ ದುರ್ದೇಶೆಗೀಡಾದವರಂತೆ ಉಸಿರಾಡಿಸುತ್ತಿರುವ ಕಲೆಗಳನ್ನು ಕಲಾವಿದರನ್ನು ಗುರುತಿಸ, ಅವರು ಮೈ-ಮನ-ಮಾತುಗಳಿಂದ ಬದುಕುವಂತೆ ಆರ್ಥಿಕ ಸಹಾಯವನ್ನು ಒದಗಿಸಬೇಕು; ಆ ಕಲೆಗಳು ಮತ್ತೆ ದಿನಬಳಕೆಯಲ್ಲಿ ಬರುವಂತೆ ಆರ್ಥಿಕ ಸಹಾಯವನ್ನು ಒದಗಿಸಬೇಕು; ಆ ಕಲೆಗಳು ಮತ್ತೆ ದಿನಬಳಕೆಯಲ್ಲಿ ಬರುವಂತೆ ಪ್ರೋತ್ಸಾಹಿಸಬೇಕು. ಮಕ್ಕಳು, ಯುವಕರು, ಹೆಣ್ಣು, ಗಂಡು, ಎನ್ನದೆ ಜಾನಪದ ಕಲೆಯತ್ತ ಒಲಿದು ಬರುವಂತೆ, ಅದನ್ನು ಕಲ್ತುಕೊಳ್ಳುವಂತೆ ಸ್ಪರ್ಧೆ, ಬಹುಮಾನ, ಪ್ರಚಾರ ಕಾರ್ಯಕ್ರಮಗಳನ್ನು ನಡೆಸಬೇಕು. ಹಾಗೆ ಮಾಡಿದರೆ ಬದುಕಿಗೆ ಪರಮ ಪ್ರಯೋಜನವಾದ ಸಾಮರಸ್ಯ ಭಾವ್ಯಕ್ಯಗಳು ಸುಲಭವಾಗಿ ಸಾಧಿಸಿ ರಾಷ್ಟ್ರದೇಳಿಗೆಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ.