ಕಾವ್ಯಗಳಲ್ಲಿ ನಾಟಕ ಅತ್ಯಂತ ರಮ್ಯವೆಂದು ಹಳಬರ ಹೇಳಿಕೆ. ಅದು ಕಾವ್ಯ, ಸಂಗೀತ, ಅಭಿನಯ, ನೃತ್ಯಗಳನ್ನು ಸಮನ್ವಯಗೊಳಿಸಿಕೊಂಡು ಕಣ್ಮನಗಳನ್ನು ತಣಿಸುವ ರಸಘಟ್ಟಿ. ಕನ್ನಡಿಗರ ನಿಜವಾದ ನಾಟಕಗಳೆನಿಸುವ ಜಾನಪದ ಬಯಲಾಟಗಳಲ್ಲಿ ಶ್ರೀಕೃಷ್ಣಪಾರಿಜಾತವು ಚೂಡಾರತ್ನವೆನ್ನಬಹುದು.

ಮೊದಲನೆಯದಾಗಿ ನಮ್ಮ ರಂಗಭೂಮಿ ಎಲ್ಲ ಜಾತಿಗಳಿಗಳು ಸಮಾನವಾಗಿ ಲಭ್ಯವಾಗುವ ಐದನೆಯ ವೇದವೇನಿಸಿಕೊಂಡಿದೆ. ಎರಡಯೆದಾಗಿ ನಾಟಕವು ಎಲ್ಲರಿಗೂ ತಿಳಿಯುವಂತಾದಾಗಿರಬೇಕೆಂಬ ಭರತಶಾಸ್ತ್ರದ ನಿಯಮವನ್ನು ಅನುಸರಿಸುವ ಕಾರ್ಯವನ್ನು ಗೊಡ್ಡು ಅಥವಾ ದೂತಿ ಎಂಬ ಪಾತ್ರದಿಂದ ಸಫಲಗೊಳಿಸುತ್ತದೆ. ಮೂರನೆಯದಾಗಿ ತಾತ್ಕಾಲೀನ ಸಮಾಜದ ರೀತಿನೀತಿಗಳನ್ನೂ, ಆಚಾರ ವಿಚಾರಗಳನ್ನೂ, ಲೋಪದೋಷಗಳನ್ನೂ ಬಿಂಬಿಸುವ ಘಟನೆಗಳಿವೆ ಅದರಲ್ಲಿ. ನಾಲ್ಕನೆಯದಾಗಿ ದೈವತದ ಬಗೆಗೆ ಗ್ರಾಮೀಣ ಜನರ ಸಮನ್ವಯಭಾವದ ಪ್ರದರ್ಶನವಿದೆ. ಶ್ರೀಕೃಷ್ಣ ಪಾರಿಜಾತವು ಹಳ್ಳಿಯ ಬದುಕಿನ ಪ್ರತಿಬಿಂಬವೇ ಆಗಿದೆ.

ಶ್ರೀಕೃಷ್ಣ ಪಾರಿಜಾತದ ಮೂಲ

ಸುಮಾರು ನೂರೈವತ್ತು ವರ್ಷಗಳ ಹಿಂದೆ, ರಾಯಚೂರು ಕಡೆಯ ಅಪರಾಲ ಎಂಬ ಗ್ರಾಮದ ಪ್ರಾಸಾದಿಭಕ್ತಕವಿಯಾದ ತಮ್ಮಣ್ಣನೆಂಬುವನು, ಶ್ರೀಕೃಷ್ಣಪಾರಿಜಾತವೆಂದ ಗೀತಕೃತಿಯನ್ನು ರಚಿಸಿದನೆಂದೂ, ಮೊದಮೊದಲು ಅದು ಗೇಯ ಕಾವ್ಯವಾಗಿಯೇ ಪ್ರಚಾರದಲ್ಲಿ ಇದ್ದಿತೆಂದೂ ಹೇಳಲಾಗುತ್ತದೆ. ಆ ಬಳಿಕ ಬೆಳಗಾವಿ ಜಿಲ್ಲೆಯ ಕುಲಗೋಡ (ಕುಲಗೋಡ) ಗ್ರಾಮದ ಚಿನಿವಾಲ ತಮ್ಮಣ್ಣನೆಂಬವನು ಆ ಗೇಯ ಕಾವ್ಯವನ್ನು ರಂಗಭೂಮಿಯ ಮೇಲೆ ಆಡುವುದಕ್ಕೆ ಅನುಕೂಲವಾಗುವಂತೆ ಸಂಪಾದನೆ ಮಾಡಿದ್ದಲ್ಲದೆ, ಹಳ್ಳಿಗರಾದ ನಟನಟಿಯರನ್ನು ಕೂಡಿಸಿ, ಅವರಿಗೆ ತಾನೇ ಕಲಿಸಿಕೊಟ್ಟು ರಂಗಭೂಮಿಯ ಮೇಲೆ ತಂದನು. ಸಾಮಾನ್ಯ ಜನರ ರಂಜನೆಗಾಗಿ ಗೌಳಗಿತ್ತಿ-ಬಾಲಕೃಷ್ಣರ ಭಾಗವನ್ನು ಅವನೇ ಅಣಿಗೊಳಿಸಿದ್ದು, ರಾಗತಾಳಗಳ ಶಾಸ್ತ್ರೀಯ ಪದ್ಧತಿಯನ್ನು ಕಡೆಗಣಿಸದೆ, ಹಿತಮಿತವಾದ ನರ್ತನವನ್ನು ಸಂಯೋಜಿಸಿದ್ದರಿಂದ ಹಾಗೂ ಶ್ರೀಕೃಷ್ಣನ ಮಾನವ ಲೀಲೆಯ ಕಥೆ ಜನ ಜೀವನಕ್ಕೆ ಹತ್ತಿರದ್ದಾದ್ದರಿಂದ, ಆಟವು ಪಂಡಿತ ಪಾಮರರಿಬ್ಬರ ಪ್ರೀತಿಗೂ ಪಾತ್ರವಾಯಿತು. ತಮ್ಮಣ್ಣನ ‘ಪಾರಿಜಾತ’ ಆಟವು ಅವನ ತರುವಾಯ ನಾಲ್ಕೈದು ತಲೆಮಾರುಗಳಲ್ಲಿ, ಮೂಲ ಸ್ವರೂಪದಲ್ಲಿಯೇ ಪ್ರದರ್ಶಿತವಾಗುತ್ತ ಬಂದಿತು. ಶ್ರೀನೀಲಾಸಾನಿ ಕೌಜಲಗಿ, ಶ್ರೀಸಿದ್ದರಾಮಪ್ಪ ಹುಕ್ಕೇರಿ ಮೊದಲಾದವರು ಆ ಕಾಲದ ಪ್ರಖ್ಯಾತ ನಟವರ್ಗದವರು. ಮುಂದಿನ ತಲೆಮಾರಿನವರ ಅಭಿರುಚಿಗೆ ತಕ್ಕಂತೆ, ಮೂಲನಾಟಕವು ವ್ಯತ್ಯಾಸಗೊಳ್ಳುತ್ತ ಬಂದಿದ್ದರಿಂದ ಇಂದಿನ ಪಾರಿಜಾತ ಆಟದಲ್ಲಿ ಅಪರಾಲ ತಮ್ಮಣ್ಣ ಕವಿಯ ಮೂಲಗೀತೆಗಳಾಗಲಿ ಪದ್ಯಗಳಾಗಲಿ ಬಹಳಷ್ಟು ಕಡಿಮೆಯಾದವೆಂದು ಹೇಳಲಾಗುತ್ತದೆ.

ಮೂರು ರಾತ್ರಿಯ ಆಟ

ಕುಲಗೋಡ ತಮ್ಮಣ್ಣನು, ತಾನು ಸೇರಿಸಿಕೊಂಡ ಗೌಳಗಿತ್ತಿಯ ಪ್ರಸಂಗದಲ್ಲಿಯೂ, ಶ್ರೀಕೃಷ್ಣ-ರುಕ್ಮಿಣಿಯರ ಶೃಂಗಾರ ಲೀಲೆಯಲ್ಲಿಯೂ ಉಪಯೋಗಿಸಿಕೊಂಡ ಬೇರೆಯವರ ಗೀತಗಳಲ್ಲಿ ಹೆಚ್ಚಾಗಿ ದಾಸರ ಕೀರ್ತನೆಗಳು, ಅಂದು ಬಳಕೆಯಲ್ಲಿದ್ದ ಶೃಂಗಾರಚಾವಡಿಗಳು ಸಮಾವೇಶಗೊಂಡಿದ್ದವು. ಆದರೆ ಉತ್ತರಾರ್ಧವೆಲ್ಲವೂ ಅಪರಾಲ ತಮ್ಮಣ್ಣ ಕವಿಯ ಗೀತಗಳಿಂದ ಪೂರಿತವಾಗಿತ್ತು. ಕಲಿಗೋಡ ತಮ್ಮಣ್ಣನು ಪಾರಿಜಾತ ಕಾವ್ಯದ ಕಥೆಯನ್ನು ಇಡಿಯಾಗಿ ಆಡಿತೋರಿಸುತ್ತಿದ್ದನೆಂದೂ ಅದಕ್ಕೆ ಮೂರು ರಾತ್ರಿಗಳು ಬೇಕಾಗುತ್ತಿದ್ದವೆಂದೂ ಹೇಳಲಾಗುತ್ತದೆ. ಆ ಆಟವನ್ನು ನೋಡಿದ ಹಿರಿಯರು ಮೊನ್ನೆ ಮೊನ್ನೆಯವರೆಗೆ ಇದ್ದರಂತೆ, ಇಂದಿನ ಪಾರಿಜಾತ ನಾಟಕದಲ್ಲಿ ಮೂಲ ಕಾವ್ಯದ ಪದ್ಯವಾಗಲಿ, ಧಾಟಿಯಾಗಲಿ ಸಿಕ್ಕುವುದು ವಿರಳ. ಶ್ರೀಕೃಷ್ಣನು ಕೊರವಂಜಿಯಾಗಿ ಬಂದು, ಸತ್ಯಭಾಮೆಯ ವಿರಹದುಃಖವನ್ನು ನಿವಾರಿಸುವಲ್ಲಿಗೆ ಇಂದಿನ ಮೇಳದವರು ಮುಗಿಸಿಬಿಡುವುದೇ ಹೆಚ್ಚು.

ಶ್ರೀಕೃಷ್ಣಪಾರಿಜಾತ ಬಯಲಾಟವು ನಮ್ಮ ಮನವನ್ನು ಸೂರೆಗೊಂಡದ್ದಷ್ಟೇ ಅಲ್ಲದೆ, ಮಹಾರಾಷ್ಟ್ರದಲ್ಲಿಯೂ ತನ್ನ ಪ್ರಭಾವ ಬೀರಿದ್ದು ಹೆಮ್ಮೆಯ ವಿಷಯ. ಮಹಾರಾಷ್ಟ್ರ ರಂಗಭೂಮಿಯ ಯುಗಪುರುಷರೆನಿಸಿದ ದಿ. ಅಣ್ಣಾರಾವ ಕಿರ್ಲೋಸ್ಕರ ಅವರು, ತಮ್ಮ ಪ್ರಖ್ಯಾತ ನಾಟಕವಾದ “ಸಂಗೀತ ಸೌಭದ್ರ”ದಲ್ಲಿ ಪಾರಿಜಾತ ಆಟದ ರಾಗಗಳನ್ನು ಬಳಸಿಕೊಂಡಿದ್ದಾರೆ. “ಪಾಂಡುನೃಪತಿ ಜನಕ ಜಯಾ” ಎಂಬ ತಮ್ಮ ಲೋಕಪ್ರೀಯ ಹಾಡಿಗೆ ನಮ್ಮ ಪಾರಿಜಾತದ “ಕ್ಷೀರಸಾಗರ ತವರಮನಿ | ದ್ವಾರಕ ನಮ್ಮತ್ತೀಮನಿ” ಎಂಬ ಹಾಡಿನ ಧಾಟಿಯನ್ನು ಆಯ್ದುಕೊಂಡಿದ್ದಾರೆ. ಪ್ರಾಧ್ಯಾಪಕ ಬನಹಟ್ಟಿ ಅವರು “ಮರಾಠಿ ನಾಟ್ಯಕಲಾ ಆಣಿ ನಾಟ್ಯವಾಙ್ಮಯ” ಎಂಬ ಗ್ರಂಥದಲ್ಲಿ “ಮರಾಠಿ ನಾಟಕಗಳ ಅಧ್ಯಯನವು ಪರಿಜಾತದ ಪಡಿಯಚ್ಚೇ ಆಗಿದೆ” ಎಂಬುದನ್ನು ಸ್ಪಷ್ಪಗೊಳಿಸಿದ್ದಾರೆ.

ದಕ್ಷಿಣ ಮಹಾರಾಷ್ಟ್ರವೆನಿಸಿದ್ದ ಉತ್ತರ ಕರ್ನಾಟಕದಲ್ಲಿ ಹೊಸಗನ್ನಡ ಮಿಸುಕು ಆರಂಭಗೊಂಡ ಕಾಲಕ್ಕೆ ಹುಟ್ಟಿಕೊಂಡ ಕೆಲವು ಸಾಹಿತ್ಯ ಕೃತಿಗಳಿಗೆ ಪಾರಿಜಾತ ಬಯಲಾಟದ ಉಸಿರು ಸೋಂಕಿದ್ದು ಕಂಡುಬರುತ್ತದೆ. ದಿ. ಚುರಮುರಿ ಶೇಷಗಿರಿರಾಯರು ಕನ್ನಡಿಸಿದ ಶಾಕುಂತಲದಲ್ಲಿ, ಪಾರಿಜಾತದ ಹತ್ತು ಹಾಡುಗಳ ರಾಗಗಳನ್ನಾದರೂ ಬಳಸಿಕೊಂಡಿದ್ದಾರೆ. ಜಾನಪದ ಸಾಹಿತ್ಯವೆಂದರೆ ಮೂಗುಮುರಿಯುವ ದಿ. ವಾಸುದೇವಾಚಾರ್ಯ ಕೆರೂರ ಅವರ ಪ್ರಖ್ಯಾತ ಕಾದಂಬರಿಯಾದ “ಇಂದಿರೆ”ಯಲ್ಲಿ, “ಪತ್ರವ ಬರೆಯಲಾನಾಥಗೆ, ಮಿತ್ರೆಯ ಕಳುಹಲಾ” ಎಂದು ಪ್ರಿಯಕರನನ್ನು ನೆನೆದು, ನಾಯಕಿ ಚಿಂತಿಸುತ್ತಾಳೆ. ಆ ಪಲ್ಲವಿಯು ಪಾರಿಜಾತದೊಳಗಿನ ಒಂದು ಗೀತದ್ದೆಂದು ಬೇರೆ ಹೇಳುವ ಕಾರಣವಿಲ್ಲ.

ಶ್ರೀಕೃಷ್ಣ ಪಾರಿಜಾತ ಬಯಲಾಟವು ಹಳ್ಳಿಯೊಳಗಿನ ಎಲ್ಲ ಧರ್ಮಸಂಪ್ರದಾಯಗಳವರಿಗೂ ಪ್ರಿಯವಾಗುವಂತೆ ಅದರ ರಚನೆಯಿದೆ. ಶೈವ-ವೈಷ್ಣವವರಿಗೆ ಇಲ್ಲಿಯ ಯಾವ ನಾಮವೂ ತೊಡರಿಕೊಳ್ಳುವುದಿಲ್ಲ. ಸತ್ಯಭಾಮೆಯ ಮನೆಗೆ ಬಂದ ಕೊರವಂಜಿವೇಷದ ಕೃಷ್ಣನು ತನ್ನ ಮಾತಿಗೆ ಮಹತ್ವವೊದಗಿಸಲು ಮಾಹುರಿಯ ಎಲ್ಲಮ್ಮ, ಅಲ್ಲೀಪುರಿಯ ಜೋಗುಳಾಂಬೆ, ಸನ್ನತಿಯ ಚೆಂದಮ್ಮ, ತುಳಜಾಪುರ ಅಂಬಾಭವಾನಿ, ಕೊಲ್ಲಾಪುರದ ಮಹಾಲಕ್ಷ್ಮೀ ಎಲ್ಲರನ್ನೂ ಪ್ರಾರ್ಥಿಸುತ್ತಾನೆ. ಸತ್ಯಭಾಮೆಯಾದರೋ ಕೃಷ್ಣನ ಮನಸ್ಸು ಹೊರಳಿಸುವ ಸಲುವಾಗಿ, ಪಾರ್ವತಿಯನ್ನು ಪೂಜಿಸಿ ವರಪಡೆಯುತ್ತಾಳೆ. ಕೃಷ್ಣನನ್ನು ಕರೆತರಲು ಹೋಗುವ ದೂತಿ ಫಾಲಾಕ್ಷನಿಗೆ ಗುಗ್ಗಳ ಹೊರುವುದಾಗಿ ಹರಕೆ ಹೊರುತ್ತಾಳೆ.

ಆಪ್ತಸಖನಾದ ಅರ್ಜುನನಿಗೆ ರಣರಂಗದಲ್ಲಿ ಸಾರಥಿ ಶ್ರೀಕೃಷ್ಣನು ಗುಹ್ಯಾತಿಗುಹ್ಯವಾದ ಅತ್ಯವಿದ್ಯೆಯನ್ನು ಅರುಹಿ, ವಿಶ್ವರೂಪದರ್ಶನದಿಂದ ‘ಕುಶಲಕರ್ಮಿ’ಯಾಗುವಂತೆ ಪ್ರೇರಣೆ ಹುಟ್ಟಿಸುತ್ತಾನೆ. ಅದರಂತೆ ಆತ್ಮಾಭಿಮಾನದ ಪ್ರತೀಕಳಾದ ಸತ್ಯಭಾಮೆಯಲ್ಲಿ ಕೊರವಂಜಿಯಾದ ಶ್ರೀಕೃಷ್ಣನು ಪರ್ಯಾಯದಿಂದ ಆತ್ಮನಿಷ್ಠೆಯನ್ನು ಮೂಡಿಸಿದ್ದಲ್ಲದೆ, ಗರುಡವಾಹನವಾಗಿ ಸತ್ಯಭಾಮೆಯ ತಲೆಬಾಗಿಲವರೆಗೆ ಬಂದು, ದರ್ಶನ ನೀಡುವನು. ಅಲ್ಲಿ ಮೂರು ಲೋಕದ ಗಂಡನೆನಿಸಿದ ಅರ್ಜುನನು ಹೃದಯ ಗ್ಲಾನಿಯಿಂದ ದಿಙ್ಮೂಢನಾಗಿ ಕುಳಿತುಕೊಳ್ಳುವ ಸಂದರ್ಭವಿದೆ. ಇಲ್ಲಿ “ಅನ್ನೋದಕವ ಕೊಂಡರೆ ನಿನ್ನ ಪಾದವೇ ಸಾಕ್ಷಿ ಬೆನ್ನು ಹಚ್ಚೆನು ಹಾಸಿಗೆಗೆ ಇದೇ ಎನಗೆ ದೀಕ್ಷೆ” ಎಂದು ಸತ್ಯಭಾಮೆ ಹೂಣಿಕೆತೊಟ್ಟ ಪ್ರಸಂಗವಿದೆ. ಧನುರ್ಧಾರಿಯಾಗಿ ಅರ್ಜುನನು ಶ್ರೀಕೃಷ್ಣನ ಸನ್ನಿಧಿಯಲ್ಲಿ ಕಂಗೊಳಿಸಿದರೆ, ಇಲ್ಲಿ “ಬಿಳಿಯ ವಸ್ತ್ರವನ್ನುಟ್ಟು ಭಸಿತವನೆಪೂಸಿ, ಪುಲಿಚರ್ಮ ಆಸನವ ಮಾಡಿ ಶಕ್ತಿ ಪೂಜೆಯ ಗೆಯ್ದು-ನಿನ್ನ ಒಲಿಸದಿದ್ದರೆ ನಿನ್ನ ಲಲನೆಯಿಲ್ಲವೋ, ಸತ್ಯಭಾಮೆ ಎಂಬ ಹೆಸರೇಕೆ”- ಎಂದು ಶ್ರೀಕೃಷ್ಣನ ಬಳಿಯಿಂದ ಬಾಣದಂತೆ ಹೋಗಿಬಿಡುವ ರೀತಿ ಗೋಚರಿಸುತ್ತದೆ. ಅಲ್ಲಿ ಸಾರಥಿಯಿಂದ ಅರ್ಜುನನ ಭ್ರಮನಿರಸನ, ಇಲ್ಲಿ ಕೊರವಂಜಿಯಿಂದ ಸತ್ಯಭಾಮೆಯ ಅಹಂಕಾರ ನಿರಸನ. ಶ್ರೀಕೃಷ್ಣನೇ ಒಮ್ಮೆ ಸಾರಥಿ, ಇನ್ನೊಮ್ಮೆ ಕೊರವಂಜಿ, ಗಂಡಿನ ಭ್ರಮೆ ಗಂಡಾಗಿ ಹೆಣ್ಣಿನ ಭ್ರಾಂತಿ ಹೆಣ್ಣಾಗಿ ಪರಿಹರಿಸುವನು.

ಕೊರವಂಜಿ

ಕೊರವಂಜಿಯ ಹೆಸರು ನಾರಾಯಣಿ. ಆಕೆ ಥೆಳ್ಳಾನ ಹೊಟ್ಟೆಯವಳು, ತಾವರೆಯ ಮೊಗದವಳು. ಸಾಮುದ್ರಿಕ, ಶಕುನ ಹೇಳಬಲ್ಲವಳು “ಪ್ರೇಮಿಸಿ ಬಿಟ್ಟ ಗಂಡನನ್ನೊಲಿಸಿ ಕೊಡಬಲ್ಲೆ, ಕೆಟ್ಟಸವತಿಯ ಬಾಯಕಟ್ಟಬಲ್ಲೆ” ಎಂದು ತನ್ನ ಶಕ್ತಿಯ ಹಿರಿಮೆ ವಿವರಿಸಿ ಕಣಿ ಹೇಳಿದಳು-“ನಿನ್ನ ತಪಕೆ ಕಾಳಿ ವರವಿತ್ತಳು. ಕಣಕ ತುಪ್ಪದಲ್ಲಿ ಬಿತ್ತು. ಸಂದೇಹವೇಕೆ? ಇಂದು ಯೋಗ ಬಂದು ನಿಂದಿದೆ. ಬಂದನೆಂದು ತಿಳಿಯೇ, ಸ್ಮರಣ ಮಾತಿನ ಗಿಳಿಯೇ” ಎಂದು ಎದೆ ತಟ್ಟಿ ಹೇಳಿದಳು. ಸತ್ಯಭಾಮೆ ಉಣಬಡಿಸಿದ ಊಟ ಉಂಡು, ಮರದ ತುಂಬ ಮುತ್ತಿನ ನುಡಿಯಕ್ಕಿ ಪಡೆದು “ದಿಟವಾಗಿ ಪೇಳುವೆನು ದಿವಿಜರೊಡೆಯ ಗಟ್ಟಾಗಿ ಬರುವನು” ಎಂದು ಶೀಘ್ರ ಭವಿಷ್ಯ ನುಡಿದು ಹೋಗುವಳು.

ವೇಷಬದಲಿಸಿದ ಕೃಷ್ಣನು ಗರುಡನನ್ನೇರಿ ಸತ್ಯಭಾಮೆಯ ಮಂದಿರಕ್ಕೆ ಬಂದು “ತಾವರೆ ಗಂಧಿಯೇ, ಬೇಗ ಕದವ ತೆರೆಯೇ” ಎನ್ನಬೇಕಾದರೆ ಯಾರು ಸೋತು ಯಾರು ಗೆದ್ದಂತಾಯಿತು? “ಕೃಷ್ಣನೇ ಕೈಗೆಟಕಿದಾಗ ಸತ್ಯಭಾಮೆಗೆ ಪಾರಿಜಾತ ದೂರ ಉಳಿಯುವುದೇ?” ನಂದನವನದಿಂದ ಪಾರಿಜಾತವೃಕ್ಷವನ್ನೇ ತಂದು ಭಾಮೆಯ ಅಂಗಳದಲ್ಲಿ ಬೆಳೆಸಿದರೆ, ಬಿಟ್ಟ ಹೂಗಳು ರುಕ್ಮೀಣಿಯ ಅಂಗಳದಲ್ಲಿ ಬೀಳಬೇಕೆ? ಕೃಷ್ಣ ಸಲಹೆಯಂತೆ ಸತ್ಯಭಾಮೆ ಅಹಂಕಾರವನ್ನು ಶೂನ್ಯಗೊಳಿಸಿ ಅಕ್ಕನಲ್ಲಿಗೆ ತೆರಳುವಳು. ಅಕ್ಕ ರುಕ್ಮಿಣಿ ತಂಗಿ ಸತ್ಯಭಾಮೆಯನ್ನು ಬಿಗಿದಪ್ಪಿ ಸಿಂಗರಿಸಿ ಸನ್ಮಾನಿಸುವಳು. “ಭಾಮೆ-ರುಕ್ಮಿಣಿಯರು ಕೂಡೋ ಪ್ರೇಮ ನೋಡಲಿಕ್ಕೆ ಸ್ವಾಮಿ ಬಂದ ಮೇಘಶ್ಯಾಮ ಬಂದ” ಅಲ್ಲಿಗೆ.

ಹೀಗೆ ಪಾರಿಜಾತದ ಸಲುವಾಗ ಉಂಟಾದ ವಿರಸವು ಗೃಹಕಲಹವಾಗಿ ಪರಿಣಮಿಸಿ ದೇವತೆಗಳಡೊನೆಯೂ ಹೋರಾಡಿ, ಪಾರಿಜಾತ ವೃಕ್ಷವನ್ನೇ ತಂದರೂ, ಅಹಂಕಾರ ನಿಶ್ಯೇಷವಾಗುವವರೆಗೆ ಅದು ಅಪ್ಯಾಯಮಾನವಾಗಲಿಲ್ಲ. ಅಹಂಕಾರ ಶೂನ್ಯವಾದಾಗ ಎಲ್ಲೆಲ್ಲಿಯೂ ಪಾರಿಜಾತವೇ, ಎಲ್ಲವೂ ಪಾರಿಜಾತವೇ. ಇಂಥದೈವೋದಾತ್ತವಾದ ತತ್ವವನ್ನು ಸರಳವಾಗಿ ಸರ್ವರಿಗೂ ಹೃದಯಂಗಮಗೊಳಿಸುವ ಪಾರಿಜಾತ ಬಯಲಾಟವು ಕನ್ನಡಿಗರಿಗೆ ಹೆಮ್ಮೆಯ ಆಸ್ತಿ.