ಸಾಮಾನ್ಯವಾಗಿ ಮನುಷ್ಯನು ತನ್ನ ವಿಚಾರಗಳನ್ನು ಅನ್ನಿಗರ ಮುಂದೆ ಸ್ಪಷ್ಟಗೊಳಿಸುವಾಗ, ಅರ್ಥಮುದ್ರೆಯೊತ್ತಿದ ವಿಶಿಷ್ಟ ಶಬ್ದಗಳೊಡನೆ ವಿಶೇಷಣ, ಪಡೆನುಡಿ, ಗಾದೆ, ಅನ್ಯೋಕ್ತಿ ಅಂದರೆ ದೃಷ್ಟಾಂತಗಳನ್ನು ಪ್ರಸಂಗಾನುಸಾರವಾಗಿ ಉಪಯೋಗಿಸುತ್ತಾನೆ. ವೈದ್ಯನು ರೋಗಿಯ ಅಸ್ವಾಸ್ಥ್ಯೆಕ್ಕೆ ಮೊದಲು ಸೌಮ್ಯ, ಬಳಿಕ ತೀವ್ರ ಹಾಗೂ ತೀವ್ರಕರ ಉಪಾಯ ಮಾಡುವಂತೆ ಮಾತಿನಲ್ಲಿ ಅನ್ಯೋಕ್ತಿಯನ್ನು ಉಪಯೋಗಿಸುತ್ತಾನೆ. ಅಂದೊಂದು ಸೂಜಿ ಮದ್ದಿನ ಉಪಾಯ. ಅದು ಶೀಘ್ರ ಹಾಗೂ ನಿಚ್ಚಳ ಪರಿಣಾಮ ಬೀರುವದು; ಮಾತಿನರ್ಥದ ಮೊಗ್ಗೆಯನ್ನು ಅರಳಿಸುವದು. ಕಥನವೇ ಕಥೆಯಾಗುವಂತೆ ಜನಪದವು ಮಾತು ಮಾತಿಗೊಂಡು ಕಥೆಯನ್ನೇ ಕಟ್ಟಿಟ್ಟಿದೆ. ರಾಜರಾಣಿಯರ ಕಥೆ, ಅಡುಗೂಲಜ್ಜಿಯ ಕಥೆ, ಗುಬ್ಬವ್ವ-ಕಾಗವ್ವಗಳ ಕಥೆ ಇತ್ಯಾದಿ.

ಮನುಷ್ಯನಾದವನಿಗೆ ಹಲವು ಪ್ರಾಣಿಗಳ ನಿಕಟ ಸಂಪರ್ಕವಿದೆ. ಶತಶತಮಾನಗಳಿಂದ ಕೆಲವು ಪ್ರಾಣಿಗಳು ಆತನಿಗೆ ಸಹಕರಿಸಿ ಸ್ನೇಹಬೆಳೆಸಿವೆ. ಹಲವು ಪ್ರಾಣಿಗಳು ಆತನಿಗೆ ಈಲಾಗದೆ ವಿರೋಧ ಬೆಳೆಸಿವೆ. ಸ್ನೇಹಿತ-ಪ್ರಾಣಿಗಳ ಒಲವುನಿಲುವುಗಳನ್ನು ತಿಳಕೊಂಡ ಜನಪದವು ವಿರೋಧ ಪ್ರಾಣಿಗಳ ಸುಳುವು-ಹೊಳಪುಗಳನ್ನು ಗುರುತಿಸಿಕೊಂಡಿದೆ. ನರಿಯ ಜಾಣತನ, ನಾಯಿಯ ನಂಬಿಕೆ, ಬೆಕ್ಕಿನ ಚತುರಾಯಿ, ಆಕಳ ವಾತ್ಸಲ್ಯ, ಎಮ್ಮೆಯ ಪರಾಕ್ರಮ, ಚಿಗರೆಯ ಚಾಪಲ್ಯ ಹೀಗೆ ಇನ್ನೂ ವಿವರಿಸಬಹುದು.

“ಅಡಸಿರುವ ಕಾಮದಿಂ ಕಡಕುರುಡರಾದವರು ಜಡಜೀವ ಭೇದವನು ಅರಿಯರಲ್ತೇ” ಎಂದು ಕಾಳಿದಾಸನು ಹೇಳುತ್ತಾನೆ. ಆದರೆ ಜನಪದವು ಜಡಜೀವ ಭೇದವನ್ನೇ ಅರಿಯದ ಕೂಸು ಬುದ್ಧಿಯದು; ಅಡಸಿರುವ ಕಾಮದಿಂದ ಕುಡುಕುರುಡುವಾದುದಲ್ಲ. ಆ ಬುದ್ಧಿ ಜನಪದಕ್ಕೆ ಹುಟ್ಟಿನೊಡನೆ ಸಂಗಳಿಸಿದ್ದು, “ಹೀಂಗ ಒಬ್ಬ ರಾಜ ಇದ್ದ” ಎಂದಾಗಲಿ, “ಒಂದಾನೊಂದು ಊರಲ್ಲಿ ಗಂಡ-ಹೆಂಡಿರಿದ್ದರು” ಎಂದಾಗಲಿ ಕಥೆಯನ್ನು ಹೆಣೆಯಲು ಆರಂಭಿಸುವಂತೆ, “ಕಟ್ಟಾರಣ್ಯದಲ್ಲಿ ಒಂದು ಸಿಂಹ ಹಸಿದಿತ್ತು” ಎಂದೋ, “ಕಳ್ಳ ನರಿಯು ಒಂದು ಗುಡಿಸಲನ್ನು ಹೊಕ್ಕು ಎಕ್ಕಡವನ್ನು ಕದ್ದಿತ್ತು” ಎಂದೋ ಕಥೆ ಹೊಸೆಯಲು ತೊಡಗುವುದಕ್ಕೆ, ಜನಪದಕ್ಕೆ ಯಾವ ಅಡೆ-ತಡೆ, ಎಡಚು-ಗಿಡಚು ಉಂಟಾಗುವುದಿಲ್ಲ. ಅಂತಹ ಅದು ನೂರಾರು ಸಾವಿರಾರು ಅಲ್ಲ, ಲಕ್ಷಗಟ್ಟಲೆ ಕೋಟ್ಯವಧಿ ಕಥೆಗಳನ್ನು ರಚಿಸಿ ಗಾಳಿಗೆ ತೂರಿಬಿಟ್ಟಿದೆ. ಅವುಗಳನ್ನು ಯಾರಾರೋ ಹಿಡಿಕೊಂಡು, ತಮ್ಮವಾಗಿ ಮಾಡಿಕೊಂಡಿದ್ದಾರೆ. ಅಕಬರ-ಬೀರಬಲ್ಲರ ಹೆಸರಿನಲ್ಲಿ, ತೆನ್ನಾಲಿ ರಾಮಕೃಷ್ಣನ ಹೆಸರಿನಲ್ಲಿ ಕಥೆಗಳು ಹುಟ್ಟಿಕೊಂಡಿದ್ದು ಜನಪದರಲ್ಲಿಯೇ. ಪಂಚತಂತ್ರದೊಳಗಿನ ಕಥೆಗಳಿಗೂ, ಕಥಾಸರಿತ್‌ಸಾಗರದೊಳಗಿನ ಕಥೆಗಳಿಗೂ ಜಾನಪದವೇ ಮೂಲವಾಗಿರಬೇಕೆಂದು ಬಲ್ಲವರು ಊಹಿಸುತ್ತಾರೆ. ಇಸೋಪನ ನೀತಿ ಕಥೆಗಳಂತೆ, ದಿವಂಗತ ಶಿ. ಸೋ. ಕುಲಕರ್ಣಿ ಅವರ “ನಾಡನೆಲೆಗಾರ”ದೊಳಗಿನ ಕಥೆಗಳೂ ಜಾನಪದ ಹೂರಣವನ್ನೇ ತುಂಬಿಕೊಂಡ ಕಡಬುಗಳಾಗಿವೆ. ಪುರಾಣಿಕರು, ಕೀರ್ತನಕಾರರು, ಗೊಂದಲಿಗರು ಬಳಸುವ ಅಡ್ಡಕೆತಗಳ ನೀರಾಗಲಿ, ಶ್ರೀರಾಮಕೃಷ್ಣ ಪರಮಹಂಸರು, ಶ್ರೀರಾಮತೀರ್ಥ ಸ್ವಾಮಿಗಳು ತಮ್ಮ ಬೋಧೆಯ ಕಾಲಕ್ಕೆ ಉದಾಹರಿಸಿದ ದೃಷ್ಟಾಂತ ಕಥೆಗಳ ಸಲಿಲವಾಗಲಿ ಜನಪದ ಸೆಲೆಯದೇ ಎಂಬುದು ಸಹಜವಾಗಿ ಕಂಡುಬರುವಂತಿದೆ. ವಿಶಿಷ್ಟ ಕವಿಗಳು ಆ ಮಹಾನಿಧಿಯೊಳಗಿನ ಹಲವಾರು ಕಥೆಗಳಿಗೆ ಸಂಸ್ಕಾರ ಕೊಟ್ಟು, ಶಿಷ್ಟ ಸಾಹಿತ್ಯದಲ್ಲಿ ಸಮಾವೇಶಗೊಳಿಸಿದ್ದಾರೆಂಬ ಮಾತು ಸುಳ್ಳು ಹೇಗೆ?

ಈಗ, ಜನಪದ ಕಥೆಗಳಲ್ಲಿ ಬರುವ ಪ್ರಾಣಿಗಳ ಅನ್ಯೋಕ್ತಿಗಳನ್ನು ಕುರಿತು ಮಾತ್ರ ವಿವೇಚಿಸಬೇಕಾಗಿದೆ. ಬೇರೆ ಬೇರೆ ಭಾಷೆಗಳಲ್ಲಿ ರೂಢಿಗೊಂಡ ಹಲವಾರು ಗಾದೆಯ ಮಾತುಗಳು, ಶಬ್ದಗಳಲ್ಲಿ ಬೇರೆಯಾದರೂ ಅರ್ಥದಲ್ಲಿ ಸಾಮ್ಯವಿರುವಂತೆ, ಅನ್ಯ ಪ್ರದೇಶವೆಂದು ಹೇಳಲಾಗುವ ಪ್ರಾಣಿಗಳ ಅವೆಷ್ಟೋ ಕಥೆಗಳು ತುಸು ಹೆಚ್ಚು ಕಡಿಮೆಯಾಗಿ ಒಂದೇ ತಾತ್ಪರ್ಯವನ್ನು ಹೊಂದಿವೆ. ಭಾರತನಾರಾಯಣನ ಒಡಲು, ಒಂದೇ ಶಿರ ಒಂದೇ ನರದಿಂದ ರೂಪಗೊಂಡಂತೆ, ಭಾರತದ ಇಪ್ಪತ್ತುನಾಲ್ಕು ರಾಜ್ಯಗಳಲ್ಲಿ ಬಳಕೆಯಲ್ಲಿರುವ ಪ್ರಾಣಿಗಳ ಅನ್ಯೋಕ್ತಿಗಳ ಸಾರವೆಲ್ಲ ಒಂದೇ ಆಗಿದೆಯೆಂದು ತೋರುತ್ತದೆ. ಅದೇ ಬಗೆಯಾಗಿ ಪೃಥ್ವಿಯ ಮೇಲಿನ ವಿವಿಧ ಕಟಿಬಂಧಗಳಲ್ಲಿ ಹುಟ್ಟಿಬಂದ ಮನುಷ್ಯ ಜಾತಿಯ ವರ್ಣ-ರೂಪಗಳ ಒಡೆದು ಕಾಣುವ ಬೇಧಕಂಡರೂ, ಅವರೆಲ್ಲರೂ ಮಾನವ ವರ್ಗಕ್ಕೆ ಸೇರಿದವರಾಗಿರುತ್ತಾರೆಂದಾಗ, ಅವರು ಉದಾಹರಿಸುವ ಪ್ರಾಣಿಗಳಲ್ಲಿ ಕಥೆಗಳಲ್ಲಿ ಸಾಮ್ಯತೆ ಕಂಡುಬರುವುದು ಸಹಜವಾಗಿರುವಂತೆ ಸ್ವಾಭಾವಿಕವೂ ಆಗಿದೆ.

ಕನ್ನಡ ನಾಡಿನಲ್ಲಿ ಕೇಳಸಿಕ್ಕುವ ಪ್ರಾಣಿಗಳ ಅನ್ಯೋಕ್ತಿಗಳೆಲ್ಲ ಕನ್ನಡ ಜಾನಪದದ ಬದುಕೇ ಆಗಿರಬಹುದು ಅಥವಾ ಆಗಿಲ್ಲದೆಯೂ ಇರಬಹುದು. ಆದರೆ ಅವುಗಳಲ್ಲೆಲ್ಲ ಕನ್ನಡ ಕುಲದ ರೇಷೆಯೇ ಮಿಣುಕುವುದು ಸುಳ್ಳಲ್ಲ. ಕನ್ನಡ ನೆಲದ ಮಣ್ಣ ವಾಸನೆಯೇ ಮಾಗೊಡೆಯುವಂತೆ ತೋರಿಬರುವುದು ಸಟಿಯಲ್ಲ. “ಚೋಟೆಪ್ಪನ ಗೆಳೆಯರು” ಎಂಬ ಕಥೆಯಲ್ಲಿ ಬರುವ ಚೋಟೆಪ್ಪನು, ಎತ್ತುಗಳನ್ನು ಕಟ್ಟಿಕೊಂಡು ತನ್ನ ಹೊಲದಲ್ಲಿಯೇ ವಾಸಮಾಡಿದ್ದನು. ಒಂದು ರಾತ್ರಿ ಮರಮಳೆ ಹೊಡೆಯಹತ್ತಲು, ಚೋಟೆಪ್ಪನು ತನ್ನ ಹೆಸರಿಗೆ ತಕ್ಕಂತೆ ಕುಬ್ಜನಾಗಿದ್ದರಿಂದ, ಡಬ್ಬು ಹಾಕಿದ ಕೊಡದಲ್ಲಿ ಸೇರಿಕೊಂಡು ಕುಳಿತನು. ಹೊತ್ತುಸಾಧಿಸಿ ಕಳ್ಳರು ಬಂದು, ಅವನ ಎತ್ತುಗಳನ್ನು ಬಿಚ್ಚಿಕೊಂಡು ಒಯ್ದುಬಿಟ್ಟರು. ಬೆಳಗಾದ ಬಳಿಕ ಚೋಟೆಪ್ಪನಿಗೆ ಅದು ಗೊತ್ತಾಗಲು, ಎತ್ತುಗಳನ್ನು ಹುಡುಕುತ್ತ ಹೊರಟನು. ದಾರಿಯಲ್ಲಿ ಅವನಿಗೆ ಗುಂಡುಗಲ್ಲು ಮೊದಲೂ ಮಾಡಿ ಹಾವು, ಚೇಳು, ಬುರಲಿಹಕ್ಕಿ ಗೆಳೆಯರಾಗಿ ಅವರಿಗೆ ಸಹಾಯ ನೀಡಲು ಬೆಂಬಲಿಸಿದವು.

ಹಳ್ಳಿಯ ಒಂದು ಮನೆಯಲ್ಲಿ ಚೋಟೆಪ್ಪನ ಎತ್ತುಗಳು ಕಾಣಿಸಿದವು. ಹಾವು ಮೇವಿನ ಗೋದಲಿಯಲ್ಲಿ, ಚೇಳು ದವಣಿಯಲ್ಲಿ, ಬುರಲಿ ಒಲೆಯಲ್ಲಿ ಹೊಕ್ಕೊಂಡವು. ರಾತ್ರಿಯಲ್ಲಿ ಮೇವು ತರಲು ಹೋದಾಗ ಆಳು ಮಗನಿಗೆ ಹಾವು ಕಚ್ಚಿತು. ದವಣಿಯ ಬಳಿಬಂದ ದನಗಾಹಿಗೆ ಚೇಳು ಕುಟುಕಿತು. ಒಲೆ ಹೊತ್ತಿಸಲು ಮನೆಯೊಡತಿ ಬಂದಾಗ ಬುರಲಿ ಪಕ್ಕ ಜಾಡಿಸಿ, ಆಕೆಯ ಕಣ್ಣತುಂಬ ಬೂದಿ ಎರಚಿತು. ದಣಿದು ಮಲಗಿದ ಯಜಮಾನನ ತಲೆಯ ಮೇಲೆ ಗುಂಡುಕಲ್ಲು ಅಪ್ಪಳಿಸಿ ಅವನಿಗೆ ಕವಳು ಹತ್ತಿಸಿತು, ಹೀಗೆ ಮನೆಯವರೆಲ್ಲ ಒಂದಿಲ್ಲೊಂದು ಬಗೆಯಲ್ಲಿ ಅಸಹಾಯಕರಾಗಿರುವಾಗ ಚೋಟೆಪ್ಪ ತನ್ನ ಎತ್ತುಗಳನ್ನು ಸಹಜವಾಗಿ ಬಿಚ್ಚಿಕೊಂಡು ತನ್ನ ಹೊಲಕ್ಕೆ ಹೋದನು ಗೆಳೆಯರೊಂದಿಗೆ. ಹಾವು-ಚೇಳು-ಬುರಲಿಗಳಂಥ ಪ್ರಾಣಿಗಳೂ ಸಂಗಾತಿಗಳಾಗಬಲ್ಲರಲ್ಲದೆ ಕಾರ್ಯಸಾಧನೆಗೆ ನೆರವಾಗಲೂಬಲ್ಲರು. ಈ ತಿಳಿವಳಿಕೆ ಯಾವ ಜನಪದಕ್ಕೆ ಬೇಡವಾಗಿದೆ?

ಮನುಷ್ಯನ ಕಣ್ಣುಗಳನ್ನು ನೆತ್ತಿಗೇರಿಸಿ, ಕಾಲಿಗೆ ಬಿದ್ದವರನ್ನೂ ಬೀಳದಿದ್ದವರನ್ನೂ ಕೂಡಿಯೇ ತುಳಿಯ ಹಚ್ಚುವ ಎಂಟು ಮದಗಳಲ್ಲಿ ಧನ ಮದವೂ ಒಂದಾಗಿದೆ; ಪ್ರಮುಖವು ಆಗಿದೆ. “ಆರುಣ ಜ್ವಾಳ ಮೊಬಲತ್ಯಾದರ ನೀರ ಗಂಧ ಹಚ್ಚತಾರ ನಟ್ಟಕಡಿವ ಗುದ್ಲಿಗೇಣೇರು” ಎಂಬ ಲಾವಣಿ ಚುಟುಕು, ದುಡ್ಡಿನಿಂದ ಬರುವ ಸೊಕ್ಕನ್ನೇ ಎತ್ತಿಹೇಳುತ್ತದೆ, ಒತ್ತಿಯೂ ಹೇಳುತ್ತದೆ. ದುಡ್ಡಿನಿಂದ ಬರುವ ಸೊಕ್ಕನ್ನೇ ಎತ್ತಿಹೇಳುತ್ತದೆ, ಒತ್ತಿಯೂ ಹೇಳುತ್ತದೆ. ದುಡ್ಡಿನಬಲದಿಂದ ಮನುಷ್ಯನಿಗೆ ಮಾತ್ರ ಸೊಕ್ಕು ಬರುತ್ತದೆಂದು ತಿಳಿಯುವ ಕಾರಣವಿಲ್ಲ. ಮನುಷ್ಯನಲ್ಲದ ಇತರ ಪ್ರಾಣಿಗಳಿಗೂ ಅದು ಬಿಡದು.

ರೊಕ್ಕ್ ರೊಕ್ಕ್ – ಎಂದು ಹಗಲಿರುಳು ಕೀಸರಿಡುತ್ತ ಕುಳಿತ ಕಪ್ಪೆಗೆ ಒಂದು ರೂಪಾಯಿ ಸಿಕ್ಕಿತಂತೆ, ಅದರಿಂದ ಅದಕ್ಕೆ ಸಾವಿರ ಸಿಂಹಗಳ ಬಲ ಬಂದಂತಾಯಿತು. ವಾಡಿಕೆಯಂತೆ ಆ ಕಪ್ಪೆ ಒಂದು ಕೆರೆಯದಂಡೆಯಲ್ಲಿ ಹೆಡಕು ಎತ್ತಿ ಕುಳಿತಿತು. ಅದೇ ಸಮಯಕ್ಕೆ ಅತ್ತ ಕಡೆಯಿಂದ ಒಂದು ಆನೆ ಬರುವುದು ಕಾಣಿಸಿತು. ಅದು ನೀರು ಕುಡಿಯಲು ಕೆರೆಗೆ ಹೊರಟಿತ್ತೇನೋ. ದೂರವಿರುವಾಗಲೇ ಅದನ್ನು ಕಪ್ಪೆ ಕಂಡು, ಗಂಟಲು ಹರಿಯುವಂತೆ ಕೂಗಿ ಹೇಳಿತು“ಏ! ಅನ್ಯಾ!! ದೂರದಲ್ಲಿ ಹಾಯ್ದು ಹೋಗಬಾರದೇ? ನಾವಿಲ್ಲಿ ಕುಳಿತಿದ್ದೇವೆ, ಕಾಣದೇ? ತುಳಿಯಬೇಕೆನ್ನುವೆಯಾ?” ಆನೆಯಂಥ ಅದ್ಭುತ ಪ್ರಾಣಿಗೆ, ಕಪ್ಪೆಯಂಥ ಕ್ಷುದ್ರಪ್ರಾಣಿ ಇಷ್ಟೊಂದು ಗಟ್ಟಿಸಿ ಹೇಳುವುದಕ್ಕೆ ಕಾರಣವೇನು? ಅದರ ಬಳಿಯಲ್ಲಿರುವ ಒಂದೇ ಒಂದು ರೂಪಾಯಿಯ ಬಲವೇ ಕಾರಣವೆನ್ನುವುದು ಸ್ಪಷ್ಟವಲ್ಲವೇ?

ತಂತಮ್ಮ ಕರ್ತವ್ಯವನ್ನು ತಾವೇ ಮಾಡಬೇಕಲ್ಲದೆ, ತನ್ನದನ್ನು ಇನ್ಯಾರಿಗೋ ಹೊರಿಸುವುದಾಗಲಿ, ಇನ್ನಾರದೋ ಹೊಣೆಯನ್ನು ತಾನು ಹೊತ್ತುಕೊಳ್ಳುವುದಾಗಲಿ ಜಾಣತನವೆನಿಸಲಾರದು. ಅದರಲ್ಲಿ ಸದುದ್ದೇಶವಿರಬಹುದು, ಕನಿಕರ –ಕಕ್ಕುಲತೆಯಿರಬಹುದು. ಆದರೆ ಅದರಿಂದ ಉದ್ದೇಶ ಸಫಲವಾಗಲಾರದು. ಅಗಸನ ನಾಯಿ ಅರಿವೆ ಕಾಯಲು ಕೆರೆಗೆ ಬಂದಿರಲಿಲ್ಲವೆಂದು ಅದಕ್ಕೆ ಕೂಳುಹಾಕಿರಲಿಲ್ಲ. ಅದು ಅಗಸನ ಅಂಗಳದಲ್ಲಿಯೇ ಮುಸಿನಿಕೊಂಡು ಬಿದ್ದಿತ್ತು. ರಾತ್ರಿ ಕಳ್ಳರು ಅಗಸನ ಮನೆಗೆ ನುಗ್ಗಿದರು. ಅಗಸನು ತನ್ನ ಮಡದಿ ಮಕ್ಕಳೊಡನೆ ಒಳಗೆ ಮಲಗಿದ್ದನು. ಕರ್ಳಳರ ಸುಳುಹು ಕಂಡು ಕತ್ತೆ ಹೇಳಿತು ನಾಯಿಗೆ “ನಾಯರ್ಣಣ, ಕಳ್ಳರು ಅರಿವೆ ಕದಿಯಲು ಬಂದಂತೆ ತೋರುತ್ತದೆ. ನೀನು ಜೋರಾಗಿ ಬೊಗಳಿದರೆ ಕಳ್ಳರು ಓಡಿ ಹೋಗುತ್ತಾರೆ; ಅಲ್ಲದೆ ಯಜಮಾನನಿಗೆ ಎಚ್ಚರವಾಗುತ್ತದೆ. ಅದರಿಂದ ಅಗಲಿರುವ ಕಳವು ತಪ್ಪುತ್ತದೆ. ಬೊಗಳು! ತೀವ್ರವಾಗಿ ಬೊಗಳು” ಎಂದು ಅಂಗಲಾಚಿತು; ಆದರೆ ಆ ಮಾತನ್ನು ನಾಯಿ ಕಿವಿಯಲ್ಲಿ ಹಾಕಿಳ್ಳಲೇ ಇಲ್ಲ. ಉಪವಾಸ ಕೆಡಹಿದ್ದಕ್ಕೆ ಅದು ಅಗಸನ ಮೇಲೆ ಸಿಟ್ಟಾಗಿತ್ತು. ಕಳ್ಳರು ನುಗ್ಗಿ ಅರಿವೆಗಳನ್ನೆಲ್ಲ ಕದ್ದುಕೊಂಡು ಹೋದರೆ ಒಳ್ಳೆಯದೇ ಆಗುವುದೆಂದು ಬಗೆಯಿತು. ಕತ್ತೆ ಜೀವ ಕೇಳಲಿಲ್ಲ. ಯಜಮಾನನ್ನು ಎಚ್ಚರಿಸುವ ಪ್ರಾಮಾಣಿಕ ಉದ್ದೇಶದಿಂದ, ಸೆಟೆದುನಿಂತು ಜೋರಾಗಿ ಕಿರುಚಿತು. ಅದರಿಂದ ಅಗಸನಿಗೆ ಎಚ್ಚರವಾಯಿತು. ಎದ್ದವನೇ ಹೊರಬಂದು “ಅಡ್ಡಹೊತ್ತಿನಲ್ಲಿ ಕಿರುಚುತ್ತೀಯಾ ಕತ್ತೆ?” ಎಂದವನೇ ಟೊಣ್ಣೆಯಿಂದ ಕತ್ತೆಗೆ ಒಳತಾಗಿ ಥಳಿಸಿದನು. ಏಟು ತಿಂದ ಕತ್ತೆ ಒಳಿತಾಗಿ ಕಣ್ಣೀರು ಕರೆಯಿತು. ಬೆಳಗಾದ ಬಳಿಕ ಗೊತ್ತಾಯಿತು. ಅಗಸನಿಗೆ ಕತ್ತೆ ಕಿರಿಚಿದ್ದರ ಅರ್ಥ. ಅರಿವೆಗಳನ್ನೆಲ್ಲ ಕಳ್ಳು ಹೊತ್ತೊಯ್ದಿದ್ದಾರೆ. ಇಲ್ಲಿ ಕತ್ತೆಯ ಕಕ್ಕುಲತೆಯನ್ನು ಕಂಡು, ಕನಿಕರವುಂಟಾದರೂ, ಅದು ಲತ್ತೆ ತಿಂದುದನ್ನು ಕಂಡು ಕಳವಳವುಂಟಾಗದೆ ಇರದು.

ಸೊಕ್ಕು ಗಾತ್ರದಲ್ಲಿ ದೊಡ್ಡದಾಗಿದ್ದರೂ, ಅದರ ನೀರಿಳಿಸುವುದಕ್ಕೆ ಕ್ಷುದ್ರ ಪ್ರಾಣಿ ಬೇಡ, ಕ್ಷುಲ್ಲುಕ ಜಂತುವೇ ಸಾಕಾಗುತ್ತದೆ. ಹತ್ತಿರ ಹಾಯ್ದವರನ್ನು ಬುಸುಗುಟ್ಟಿ ಹೆದರಿಸುತ್ತಿದ್ದ ಕೊಬ್ಬಿನ ಗೂಳಿಯನ್ನು ಒಂದು ಕಡಿ ಜೀರಿಗೆ ಹುಳುವು, ಹಣ್ಣುಗಾಯಿಮಾಡಿ, ತನ್ನ ಮುಂದೆ ಇನ್ನಾರೆಂದು ಕಣ್ಣು ನೆತ್ತಿಗೇರಿಸಿಕೊಂಡಾಗ, ಅದನ್ನು ಜೇಡಹುಳುವು ತನ್ನ ಬಲೆಯಲ್ಲಿ ಬಿಗಿದು ಹಾಕಿ, ತಲೆ ಕೆಳಗು ಮಾಡಿ ನೇತಾಡ ಹಚ್ಚಿ ತ್ರಾಹಿ ತ್ರಾಹಿಯೆನಿಸಿದ ಕಥೆ ಹೊಸದಲ್ಲ.

ಸಿಂಹದಂಥ ವನರಾಜನು ಬೇಟೆಗಾರನ ಬಲೆಯಲ್ಲಿ ಸಿಕ್ಕು ವಿಲಿವಿಲಿ ಒದ್ದಾಡುತ್ತಿರುವಾಗ, ಅದೇ ಸಿಂಹದಿಂದ ಈ ಮೊದಲು ಜೀವದಾನ ಪಡೆದ ಅಲ್ಪ ಜಂತು ಇಲಿಯು, ಕೃತಜ್ಞತೆಯಿಂದ ಓಡಿಬಂದು, ಬಲೆಯ ಹುರಿಗಳನ್ನೆಲ್ಲ ತನ್ನ ಹದನ ಹಲ್ಲುಗಳಿಂದ ಕತ್ತರಿಸಿ ಸಿಂಹವನ್ನು ಬಂಧಮುಕ್ತ ಮಾಡಿದ ಕಥೆಯು ಶಿಷ್ಟಸಾಹಿತ್ಯದ ವಾಸನೆ ಬೀರುತ್ತಿದ್ದರೂ ಅದರೊಳಗಿನ ಜಿಗುಟೆಲ್ಲ ಜನಪದ ಸೊತ್ತೇ ಆಗಿದೆ. ದೊಡ್ಡವರು ನೀಡಿದ ನೆರವಿನಂತೆ, ಚಿಕ್ಕವರು ಒದಗಿಸಿದ ನೆರವು ಸಾಕಷ್ಟು ಫಲಕಲಾರಿಯಾಗುತ್ತದೆಂಬ ಮಾತನ್ನು ದೊಡ್ಡ ಮನುಷ್ಯರಿಗೇ ಮೊದಲು ತಿಳಿಯಬೇಕಾಗಿದೆ.

ಮೂರು ಆಕಳುಕರುಗಳ ಕಥೆಯಿಂದ, ನೈಸರ್ಗಿಕ ರೀತಿಯಲ್ಲಿ ಬೆಳೆದು ಬಂದ ಜೀವಿಯ ಉತ್ಸಾಹವೇ ಬೇರೆ, ಚೈತನ್ಯವೇ ಬೇರೆ-ಎಂಬ ಮಾತು ತಿಳಿಯಲರ್ಹವಾಗಿದೆ. ಊರ ಅಗಸೆಯ ಹೊರಗೆ ಮೂರು ಆಕಳುಕರುಗಳು ಅಡ್ಡಾಡುತ್ತಿರುವಾಗ, ಒಂದು ಕರವು ಅದೆಂಥದೋ ರೊಜ್ಜುಗಾವಲಿಯನ್ನು ಆವೇಶದಿಂದ ಬಾಲವೆತ್ತಿ ಟಣ್ಣನೆ ಜಿಗಿದು ಬಿಟ್ಟಿತು ಒಂದೇಟಿಗೆ ಹಿಂದೆ ಉಳಿದ ಎರಡು ಕರುಗಳು ತಾವು ಜೀಗಿಯಬೇಕೆಂದು ತಡವರಿಸಿದವು. ಆದರೆ ಸಾಧ್ಯವಾಗಲಿಲ್ಲ. ಒಂದಕ್ಕೇನೋ ಅರ್ಧಸಾಧ್ಯವಾಯಿತು ಇನ್ನೊಂದಕ್ಕೆ ಸಂಪೂರ್ಣ ಅಸಾಧ್ಯವಾಯಿತು. ಮುಂದಿನ ಕರುವಿಗೆ ಎರಡನೇಕರು ಕೇಳಿತು. “ ನೀನು ಜಿಗಿದಂತೆ ನಮಗೆ ಜಿಗಿಯಲಿಕ್ಕಾಗಲಿಲ್ಲ. ನಿನಗೇಕೆ ಸಾಧ್ಯವಾಯಿತು?” ಆ ಕರು ಹೇಳಿತು – “ನಾನು ಒಕ್ಕಲಿಗರ ಮನೆಯ ಹೋರಿಕರು, ನಮ್ಮಪ್ಪನ ನಾಲ್ಕು ಮೊಳೆಯೊಳಗಿನ ಹಾಲನ್ನೆಲ್ಲ ನನಗೇ ಬಿಡುತ್ತಾರೆ. ಅದನ್ನು ಕುಡಿದ ನನಗೆ ಇಷ್ಟೊಂದು ಹುರುಪು ಮತ್ತು ಶಕ್ತಿ ಬಂದಿದೆ.”

ಎರಡನೇ ಕರು ಉಪಾಧ್ಯರ ಮನೆಯಲ್ಲಿ ಬೆಳೆದದ್ದು ಕೇಳಿತು- “ಏನಂದೀ? ಅವ್ವನ ಮೊಲೆಯಲ್ಲಿ ಹಾಲಿರುವವೇ? ಕೆಚ್ಚಲೊಳಗಿನ ಒಣ ಮೊಲೆಗಳನ್ನು ಮಾತ್ರ ನಾನು ಗೀರುತ್ತೇನಲ್ಲದೆ, ಒಂದು ತೊಣಕು ಸಹ ಹಾಲು ಕಂಡಿಲ್ಲ ಅಂತೆಯೇ ನಿನ್ನಷ್ಟು ಶಕ್ತಿ ನನಗಿಲ್ಲ”

ಮುಂದೆ ಸಾಗಿದ ಆ ಎರಡು ಕರುಗಳ ಸಂಭಾಷಣೆಯನ್ನು ಕೇಳಿ, ಮೂರನೇ ಕರು ನುಡಿಯಿತು-“ ಏನಿರೋ, ನೀವೇನೇನೋ ಮಾತನಾಡುತ್ತಿರುವಿರಿ. ಆದರೆ ನನಗೆ ಅರ್ಥವೇ ಆಗಲಿಲ್ಲ –ಅವ್ವನ ಮೊಲೆಯಲ್ಲಿ ಸಾಕಷ್ಟು ಹಾಲಿರುವವೆಂದು ನೀನು ಹೇಳುವಿ. ಅವ್ವನ ಮೊಲೆಯಲ್ಲಿ ಹಾಲೇ ಇರುವುದಿಲ್ಲವೆಂದು ಇವನು ಹೇಳುವನು. ನಿಮ್ಮ ಮಾತು ಕೇಳಿ ನನಗೆ ಸೋಜಿಗವೆನಿಸುತ್ತದೆ. ಅವ್ವನಿಗೆ ಮೊಲೆಗಳು ಇರುವವೇ ಎಂದು ನಾನು ಕೇಳುತ್ತೇನೆ. ನಾನು ಗೌಳಿಗರ ಮನೆಯಲ್ಲಿ ಬೆಳೆದ ಕರು

ಒಕ್ಕಲಿಗರಿಗೆ ಹೋರಿಕರುವೆಂದರೆ ಭಾಗ್ಯದ ಬದುಕು, ಆಕಳು ಹಾಲನ್ನೆಲ್ಲ ಕರುವಿಗೇ ಬಿಟ್ಟುಕೊಟ್ಟು ಬೆಲೆಯುಳ್ಳ ಬದುಕುಮಾಡುತ್ತಾರೆ. ಉಪಾಧ್ಯರು ಆಕಳು ಸಾಗಿದ್ದೇ ಹಾಲು ಉಣ್ಣುವುದಕ್ಕಾಗಿ, ಆದ್ದರಿಂದ ಆಕಳನ್ನು ಜಬ್ಬಿಜಬ್ಬಿ ಹಿಂಡಿಕೊಂಡು, ಹಿಂದಿನಿಂದ ಕರುವನ್ನು ಬಿಡುತ್ತಾರೆ ಶಾಸ್ತ್ರಕ್ಕಾಗಿ ಆದರೆ ಅದು ಒಣಮೊಲೆ ಮಾತ್ರ ಸೀಪುವುದು. ಉಪಾಧ್ಯರ ಕರುವಿಗೆ ಹಾಲು ಸಿಗದಿದ್ದರೂ ಅದಕ್ಕೆ ತಾಯಮೊಲೆಯ ದರ್ಶನವಾದರೂ ಆಗುತ್ತದೆ. ಆದರೆ ಗೌಳಿಗರ ಮನೆಯಲ್ಲಿ ಬೆಳೆದ ಕರು ತಾಯ ಹಾಲನ್ನೂ ಕಾಣದು, ತಾಯ ಮೊಲೆಯನ್ನೂ ಕಾಣದು. ಅಂತೆಯೇ ಅದು ಕೇಳುತ್ತದೆ. “ಅವ್ವನಿಗೆ ಮೊಲೆಗಳಿರುವವೇ” ಎಂದು.

ಈ ಕಥೆಯನ್ನು ನಮ್ಮ ಜೀವನದ ಹಲವು ಸಂದರ್ಭಗಳಿಗೆ ಹೋಲಿಸಿ ಇಲ್ಲವೆ ಹೊಂದಿಸಿ ನೀತಿಯನ್ನೋ ರೀತಿಯನ್ನೋ ಕಲ್ಪಿಸಬಹುದು. ಕಲಿಯಬಹುದು. ಈ ಕಥೆ ಲೌಕಿಕ ಜೀವನದ ಹೆದ್ದಾರಿಯನ್ನು ತೋರುವಂತೆ, ಪಾರಮಾರ್ಥಿಕ ರಾಜ ಮಾರ್ಗವನ್ನು ತೋರಿಸಬಲ್ಲದು, ಆದ್ದರಿಂದ ಈ ಕಥಯನ್ನು ಶರಣರ ಭಾಷೆಯಲ್ಲಿ “ಬಾಳಬಟ್ಟೆಯ ಪರಮಾವಗದು” ಎಂದು ಕರೆಯಬಹುದಾಗಿದೆ. ಅದೊಂದು ಮಹಾ ಅನುಭಾವ, ಅದನ್ನು ಕಂಡುಂಡು ಉಸುರಿದ ಜನಪದ ಜೀವಕ್ಕೆ ದೃಷ್ಟಾರಜೀವ ಎಂದು ಕರೆದರೆ ತಪ್ಪಾಗಲಾರದು.

ಆಶೆಬುರುಕ ನರಿ ನಿರಾಶೆಗೊಂಡ ಕಥೆ ಕೇಳಿದರೆ ಅದೆಂಥ ಭಿಕನಾಶಿಗೂ ನಾಚಿಕೆಯುಂಟಾಗಿ ಬುದ್ಧಿಬರಬಹುದಾಗಿದೆ. ಮೆಲಕಾಡಿಸುತ್ತ ನಿಂತ ಒಂಟೆಯ ಬಾಯೆಳಗಿನ ಕಬಳದ ಮುದ್ದೆ ಒಂದಿಷ್ಟು ಕೆಳಗೆ ಬೀಳುವಂತಿದೆ ಅದನ್ನು ತಿಂದು ಹಸಿವೆ ಹಿಂಗಿಸಿಕೊಳ್ಳಬೇಕೆಂದು ಹೊಂಚುಹಾಕಿ ಕುಳಿತ ನರಿಗೆ ಬಹಳ ಹೊತ್ತಿನ ಮೇಲೆ ತಿಳಿಯಿತು- ಒಂಟೆಯ ಬಾಯಿಂದ ಬೀಳುವಂತೆ ತೋರುವುದನ್ನು ತುತ್ತಿನ ಮುದ್ದೆಯಲ್ಲ: ಗಂಟಲದಲ್ಲಿ ತುತ್ತು ಇಳಿಸುವಾಗ ಜೋಲು ಬೀಳುವ ಅದರ ಕೆಳದುಟಿ! ಆದ್ದರಿಂದ ಆಶೆಮಾಡುವುದು ವ್ಯರ್ಥ; ಫಲವಿಲ್ಲ- ಎಂದು ನರಿ ಅಲ್ಲಿಂದ ಎದ್ದು ಬಾಲಜಾಡಿಸುತ್ತ ಓಡಿಹೋಯಿತು.

ಕಪಿಗಳನ್ನು ಹಿಡಿಯುವ ಸಲುವಾಗಿ ಹೆತ್ತಬಾಯಿಯ ಹೂಜೆಯಲ್ಲಿ ನೆಲಗಡಲೆಯ ಕಾಳು ಹಾಕಿ ಅದನ್ನು ಕುತ್ತಿಗೆ ಮಟ ಹುಗಿದಿರುತ್ತಾರಂತೆ. ಮಂಗ ನೆಲಗಡಲೆಯ ವಾಸನೆ ಹಿಡಿದು ಅಲ್ಲಿಗೆ ಬಂದು ಮೆಲ್ಲನೆ ಹೂಜಿಯಲ್ಲಿ ಕೈಹಾಕಿ, ಮುಷ್ಟಿತುಂಬ ನೆಲಗಡಲೆ ತೆಗೆದುಕೊಳ್ಳಬೇಕೆಂದು ಎತ್ತುಗಡೆ ನಡೆಸಿದರೆ, ತುಂಬಿದ ಮುಷ್ಟಿ ಕಡೆಗೆ ಬರುವಂತಿಲ್ಲ. ಕೈ ಹೊರತೆಗೆದುಕೊಳ್ಳಬೇಕೆಂದರೆ ಕಾಳಿನ ಆಶೆ ಬಿಡಬೇಕಾಗುತ್ತದೆ. ಹೀಗೆ ಜೋಡುಪದರಿನ ಆಶೆಯಲ್ಲಿ ತೊಳಲಾಡುತ್ತಿರುವಾಗ, ಗುರಿಯಿಟ್ಟವರು ತಟ್ಟನೆ ಓಡಿ ಬಂದು, ಮಂಗನನ್ನು ಹಿಡಿದುಬಿಡುತ್ತಾರೆ.

ನರಿ ಹಸಿದು ಕಂಗಾಲಾದಾಗ ತಿನ್ನಬೇಕೆಂದು ಯಾರದೋ ಎಕ್ಕಡ ಕದ್ದುಕೊಂಡು ಬಂದಿತು. ಆ ಕಳ್ಳತನವನ್ನು ಭೂಮಿಯ ಹೊರತು ಇನ್ನಾರೂ ನೋಡಿರಲಿಲ್ಲ. ಆದ್ದರಿಂದ ಈ ಭೂಮಿಯ ಕಣ್ಣು ತಪ್ಪಿಸಿ ಅಂದರೆ ಭೂಮಿಯಿಲ್ಲದಲ್ಲಿಸೇ ಹೋಗಿ ಎಕ್ಕಡ ತಿಂದು ಬಂದರೆ ತನ್ನ ಮೇಲೆ ಯಾವ ವಿಗಲವೂ ಬರುವಂತಿಲ್ಲವೆಂದು, ನರಿ ಬಾಯಲ್ಲಿ ಎಕ್ಕಡ ಕಚ್ಚಿಕೊಂಡು ಓಡೇ ಓಡಿತು. ಓಡೇ ಓಡಿತು! ಆದರೆ ಭೂಮಿಯಿಲ್ಲದಲ್ಲಿ ಹೋಗಲು ಸಾಧ್ಯವೇ. ದಣಿವು ಮಾತ್ರ ಆಯಿತು.

ಹಾವಿನ ತಲೆಯಲ್ಲಿ ರತ್ನವಿದ್ದರೂ ಅದು ಕಪ್ಪೆಯನ್ನು ತಿಂದು ಬದುಕುವದು ಈ ಮಾತು ರತ್ನಕ್ಕು ಅಪಮಾನ, ರತ್ನಹೊತ್ತ ಹಾವಿಗೂ ಅಪಮಾನ. ಅಲ್ಲವೇ? ಹತ್ತಿರ ರತ್ನವಿದ್ದುದರ ಪ್ರಯೋಜನವಾದರೂ ಏನು?

ಒಕ್ಕಲಿಗ ಮಂಚಿಗೆಯ ಮೇಲೆ ನಿಂತು ಕವಣೆಗಲ್ಲು ಬೀಸುವಾಗ ಎಲ್ಲ ಗುಬ್ಬಿಗಳು ಹಾರಿ ಹೋದವು. ಆದರೆ ಒಂದುಮಾತ್ರ ತೆನೆಹಿಡಿದು ಕುಳಿತಿತ್ತು. ಒಕ್ಕಲಿಗ ಮೆಲ್ಲನೆ ಹೋಗಿ ಅದನ್ನು ಗಪ್ಪನೆ ಹಿಡಿದು ಕೇಳಿದನು- “ಸತ್ತೇಯೇನು ಗುಬ್ಬೀ” ಆ ಮಾತಿಗೆ ಗುಬ್ಬಿ ಮರು ನುಡಿದದ್ದು ಏನೆಂದರೆ-

“ಗುಂಡಗುಂಡ ತೆನಿತಿಂದು | ಗುಂಡಾದಾಗ ನೀರು ಕುಡಿದು |
ಮಂಚಗೀ ಕಾಲಲ್ಲಿ ಜೋಕಾಲಿ ಆಡತಿದ್ದೇನೆ, ನಾನೇಕೆ ಸಾಯಲ್ಲ”?

ಆ ಗುಬ್ಬಿಯನ್ನು ಕೊಲ್ಲಬೇಕೆಂದು ಗಾಣದಲ್ಲಿ ತುರುಕಿದರೆ, ಎಣ್ಣೆ ಹೂಸಿಕೊಳ್ಳುತ್ತಿದ್ದೇನೆಂದು,

ಒತ್ತಲದ ಬಿಸಿನೀರಲ್ಲ ಚೆಲ್ಲಿದರೆ, ಎರಕೊಳ್ಳುತ್ತಿದ್ದೇನೆಂದು ಹೇಳಿದ ಗುಬ್ಬಿಯನ್ನು ಆತನು ಹೆಂಡತಿಗೆ ಒಪ್ಪಿಸಿ, ಅದನ್ನು ಕೊಯ್ದು ಅಡಿಗೆಮಾಡಿ ತನಗೆ ಉಣಬಡಿಸೆಂದು ತಿಳಿಸಿದನು.

ಅಡಿಗೆ ಆಯಿತು. ಗಂಡನು ಅದನ್ನುಂಡು ತೇಗಿ-“ಸತ್ತೆಯಾ ಗುಬ್ಬಿ” ಎಂದು ಕೇಳಿದರೆ, ಅದು ತನ್ನ ವಾಡಿಕೆಯ ಹಾಡನ್ನೇ ಹಾಡಿ, “ನಾನೇಕೆ ಸಾಯುವೆನು” ಎಂದು ಸರಿ ಬುರ್ರನೇ ಹಾರಿ ಹೋಯಿತಂತೆ.

ಈ ಬಗೆಯಾಗಿ ಜಾನಪದದಲ್ಲಿ ಪ್ರಾಣಿಗಳ ಅನ್ಯೋಕ್ತಿಗಳೂ ಆ ಗುಬ್ಬಿಯಂತೆ ಅಜರಾಮರವಾಗಿವೆಯೆಂದೇ ಹೇಳಬಹುದಾಗಿದೆ.