ಭೂಮಿಗಿಳಿದ ಮೇಲೆ

ಗರತಿಯ ಚಿದಾದ್ರಿಯ ಉತ್ತುಂಗ ಶಿಖರದಿಂದ ನೆಲಕ್ಕಿಳಿದ ಬಳಿಕ ಮಗಳು, ಅಕ್ಕ, ತಂಗಿ, ಸೊಸೆ, ಮೊಮ್ಮಗಳು ಮೊದಲದ ಬಂಧುವಾಚಕ ಶಬ್ದಗಳಿಂದ ಒಮ್ಮೆಲೆ ಕರೆಸಿಕೊಂಡಳು. ಕೂಸಾಗಿ ಲಾಲಿಯನ್ನು ಕೇಳಿದಳು, ಹಸುಳೆಯಾಗಿ ಹಾಲು ಕುಡಿದಳು. ಬೆನ್ನ ಮೇಲೆ ಹೊಟ್ಟೆಯ ಮೇಲೆ ಮಲಗಿ ದಶಾವತಾರಗಳನ್ನು ಅಣಕಿಸಿದಳು. ಕೇಕೆ ಹೊಡೆದಳು. ನೆಲದಲ್ಲಿ ಈಸಿದಳು. ಆಕಾಶವನ್ನು ಒದೆದಳು. ತನಗಿಂತ ಮುಂಚಿತ ಬಂದು ನೆರೆದ ಪರಿಚಿತರನ್ನು ಕಂಡು ನಕ್ಕಳು, ಅತ್ತಳು. ಕಾಯದ ಹಾಲಿನ ಕೆನೆ ಬೇಡಿ ಹಟ ತೆಗೆದಳು. ಹವಳದ ಕುಡಿಯಂತೆ ಅಳುವ ಕಂದನ ತುಟಿ ಕಂಗೊಳಿಸಿದವು. ಬೇವಿನೆಸಳಂಥ ಕುಡಿ ಹುಬ್ಬು ಕಾಣಿಸಿದಳು. ಶಿವನ ಕೈಯಲಗು ಹೊಳೆದ ಹಾಗೆ ಕಣ್ಣನೋಟ ಮಿಂಚಿತು. ಕಾಡಿಗೆ ಕಣ್ಣು, ತೀಡಿ ಮಾಡಿದ ಹುಬ್ಬು, ಮಾವಿನ ಹೋಳಿನಂಥ ಕಣ್ಣು ಹೀಗೆ ಸಲ್ಲಕ್ಷಣವಾದ ಕೂಸು ಅಳಬುರುಕು ಇದ್ದರೂ ಇರಲೊಲ್ಲದೇಕೆ, ಈ ಕೂಸು ನನಗಿರಲಿ ಎನಿಸುವದು. ತೆಂಗಿನ ತಿಳಿನೀರಿನಿಂದಲೇ ತೊಳೆಯಬೇಕೆನಿಸುವ ಬಂಗಾರ ಮುಖವುಳ್ಳ ಕೂಸು ಅತ್ತರೆ ತಾಯಿ-

ಕೂಸು ನೀ ಅಳಬ್ಯಾಡ ಕುಸುಮಲ್ಲಿ ಅಳಬ್ಯಾಡ
ರಾಸಿ ಬಂಗಾರ ಅಳಬ್ಯಾಡ |ನನ್ನ ಬಾಳ |
ಬಂಗಾರ ಭಾರ ಬಗಲಾಗ |

ಎಂದೂ, ಎತ್ತಿಕೊಳ್ಳುವಳು. ಇಲ್ಲವೆ

ಕಸ್ತೂರ್ಹೆಂತಾಬಾಲ ಕಸದಾಗ ಆಡಿದರ
ಕಸವೀಸಿ ನನ್ನ ಮನದಾಗ | ಕಂದನ |
ಇಸವಾಸದ ಗೆಳದಿ ಕರೆದೊಯ್ಯೋ ||

ಎಂದು ಗೆಳತಿಯ ಕಡೆಗೆ ಒಪ್ಪಿಸುವಳು.

ಹೆಣ್ಣು ಹುಟ್ಟಿದ ಮನೆಗೆ ಹೆಗ್ಗಣ ಹತ್ತಿದ ಹಾಗೆ ಎಂದು ಕೆಲವರ ಆಡಿಸಿಕೊಳ್ಳುವುದುಂಟು. ಆದರೆ ಹಡೆದವ್ವನು ‘ಹೆಣ್ಣಲ್ಲ ನಮಗ ರವಿಚಿನ್ನ’ ಎಂದೇ ಹೇಳಿಕೊಳ್ಳುವಳು.

ನಡೆದು ಬಾ ಕಂದಯ್ಯ ನಡಗೀಯ ನೋಡೇನ
ಪದುಮದ ಪಾಪ ಬಲಗಾಲ ಕಂದಯ್ಗ |
ಕಿರಿಗೆಜ್ಜಿ ಇಡಿಸಿ ನೋಡೇನ ||

ಎನ್ನುವ ಹಂಬಲ ತಾಯಿಗಿರುತ್ತದೆ. ‘ಕಣ್ಣು ಮೂಗಿಲೆ ನನ್ನ ಹೆಣ್ಣುಮಗಳು ಚೆಲುವಿ’ಯೆಂದು ತಾಯಿಯ ನಂಬಿಕೆ. ಅಂಥ ಮಗಳು ‘ನಡೆದರೆ ನಡು ಸಣ್ಣ; ಪದುಮ ಜಾತಿಯ ಹೆಣ್ಣು; ಅವಳಿಗೆ ಮಾವಿನ ಹೋಳಿನಂತ ಕಣ್ಣು. ಅವಳು ಕಟ್ಟಾಣಿ ಕಟ್ಯಾಳ; ಕಟ್ಟಿಮ್ಯಾಲ ನಿಂತಾಳ; ಬಟ್ಟಲಗಣ್ಣ ತಿರುವ್ಯಾಳ’ ಎಂದು ಕಲ್ಪಿಸಿದರೆ, ಆ ಕಂದಮ್ಮನಿಗೆ ದಿಟ್ಟಿ ಸೋಂಕಲಾರವೇ? ‘ಅರಿಸಿಣ ಹಚ್ಚಿದ ಮಾರಿ, ಸರಪಳಿ ಹಚ್ಚಿದ ವಾಲಿ, ಒಲಿಯುವ ಗೊಂಡೇದ ಸೆರಗ’ವುಳ್ಳ ಕಾಮಕಸ್ತೂರಿಯಂಥ ಹೂವು ಭೂಮಿ ತಿರುಗಿದರೂ ಸಿಗಲಾರದು. ಅಂಥ ಕೋಮಲೆಗೆ ಭೂಮಿತೂಕದ ವರ ಬರಬೇಕಲ್ಲವೆ? – ಇದೆಲ್ಲವೂ ತಾಯಿತಂದೆಗಳ ಕಣ್ಣಿಗೆ ಕಾಣಿಸುವ ಮಗಳ ರೂಪ. ಅಣ್ಣ ತಮ್ಮಂದಿರಿಗೆ ಆಕೆಯು-“ಅಕ್ಕತಂಗೇರು ಮೇಲ ಮುತ್ತು ಮಾಣಿಕ ಮೇಲ, ಉತ್ತುರಿ ಸ್ವಾತಿ ಮಳಿ ಮೇಲ”ವಾಗಿ ತೋರುವಳು. ಅಕ್ಕನಿಗೆ ತೋರುವ ದೃಶ್ಯ ಇನ್ನೊಂದು ತೆರ-

ಗಿಡ್ಡರು ನಡೆದರ ಗಿಣಿಹಿಂಡು ನಡೆದಂಗ |
ಉದ್ದನ ಬಾಲಿ ನನ ತಂಗಿ | ನಡದರ |
ರುದ್ದರನ ಥೇರ ಎಳೆದಂಗ ||

ಗೆಳತಿಯ ಕಣ್ಣಿಗೆ ಈಕೆಯ ಕೂದಲು ಜೊಗಚಿಯ ಕಾಯಂತೆ ಕಾಣಿಸುವವು. ಗೆಳತಿಯರ ಬಳಗಕ್ಕೆ ಆಕೆ ಅತಿ ಚೆಲುವೆಯೆನಿಸುವಳು. ಗೆಳತಿಯೊಂದಿಗೆ ನೀರಿಗೆ ಹೊರಟರೆ, ಬಹಮಂದಿ ಕುಲ ಕೇಳುವರು. ಆದರೆ ಕುಲವೆರಡಾದರೂ ಮನವೊಂದು. ನಡುಮಧ್ಯಾಹ್ನದಲ್ಲಿ ವರತಿಯೊಳಗಿನ ನೀರು ತುಂಬುವಾಗ ಗೆಳತಿಯ ಕಣ್ಣಿಗೆ ದ್ರೌಪದಿಯಂತೆ ತೋರುವಳು. ಹೇಗೆಂದರೆ-

ಮಟಮಟ ಮದ್ಯಾಣ ತಿಟತಿಟ ಕುಬ್ಬಸ
ವರತ್ಯಾನ ನೀರ ಒನ – ಒನೆದು | ತುಂಬುವ |
ದ್ರೌಪದಿ ಚಲುವಿ ನನ ಗೆಳದಿ ||

ಇನ್ನು ಅವಳನ್ನು ಕಂಡು –‘ಎರಳಿ ನೋಟದ ಗೊಂಬೀ ಸುರಳಿಗೂದಲಿನ ಸುಲಿಹಲ್ಲಿನ ಸುಗುಣೀ ನೀನಾರ ಮಗಳವ್ವ?’ ಎಂದು ಕೇಳಿದರೆ ಆಶ್ಚರ್ಯವೇನು? ಆಕೆಯ ದನಿ ಶುದ್ಧ, ಗುಣ ಶುದ್ಧ. ಆದ್ದರಿಂದ ಯಾರಾದರೂ ಆಕೆಯೊಂದಿಗೆ ಗೆಳೆತನ ಕಟ್ಟಲು ಅಪೇಕ್ಷಿಸಬಹುದು. ಎಳ್ಳು ಹೂವಿನ ಸೀರೆಯುಟ್ಟು, ಬೆಳ್ಳಿ ಕಾಲುಂಗರ ಇಟ್ಟು ಹಳ್ಳದ ನೀರು ತರುವ ಗೆಳತಿಯರಿಗೆ ಹಳ್ಳಿಗೌಡರ ಹಿರಿ ಮಗಳಂತೆ ಕಾಣಿಸಿದರೆ ಆಶ್ಚರ್ಯವೇನು? ಅವಳಿಗಿರುವ ಇನ್ನೂ ಒಬ್ಬಿಬ್ಬ ಗೆಳತಿಯರು ಎಂಥವರಿದ್ದವರೆಂಬುದನ್ನು ಅರಿಯಬಹುದು.

ಕೂಡಿದ ಕುಡಿಹಬ್ಬ ತೀಡಿದ ಬೈತಲ
ಕಾಡೀಗಿಗಣ್ಣ ರಸಗೆಂಪ | ನನ ಗೆಳದಿ |
ಹೂಳಿಯ ಹಾದ್ಯಾವ ಕೂಡ್ಯಾಳ ||
ಇವಳೊಬ್ಬಳಾದರೆ –
ಮೂಗುತಿ ಮುಂಭಾರ ತುರುಬಿನ ಹಿಂಭಾರ
ಸೇರಿನ ಒಂಕಿ ಕೈಭಾರ | ನನ ಗೆಳದಿ |
ಹೂಳಿಯ ಹಾದ್ಯಾಗ ಕೂಡ್ಯಾಳ ||
ಇವಳೊಬ್ಬಳಾದರೆ-
ಮೂಗುತಿ ಮುಂಭಾರ ತುರುಬಿನ ಹಿಂಭಾರ
ಸೇರಿನ ಒಂಕಿ ಕೈಭಾರ | ನನ ಗೆಳದಿ |
ನಾ ಕೊಟ್ಟ ಸೀರಿ ನಿರಿಭಾರ ||

ಇವಳಿನ್ನೊಬ್ಬಳು. ಹೀಗೆ ಮಗಳಾಗಿ ಭೂಮಿಯನ್ನು ತಲುಪುತ್ತಲೇ ಆ ಸಂಬಂಧಿಕರ ಕಣ್ಣಿಗೆ ಇಷ್ಟು ವಿಧದಲ್ಲಿ ಕಾಣಿಸಿಕೊಳ್ಳುವಳು. ಇದೆಲ್ಲ ತಾಯಿ ಮನೆಯಲ್ಲಿರುವಾಗಿನ ಹಿನ್ನಲೆಯೊಂದಿಗೆ ಕಾಣಿಸಿಕೊಳ್ಳುವ ಒಂದು ದೃಶ್ಯವಾಯಿತು.

ಅತ್ತೆಯ ಮನೆಯಲ್ಲಿ

ತಾಯಿ ತಂದೆಗಳ ಮಗಳು, ಅಣ್ಣ ತಮ್ಮಂದಿರ ಸಹೋದರಿ; ಅಜ್ಜ ಅಜ್ಜಿಯರ ಮೊಮ್ಮಗಳು, ಅತ್ತಿಗೆಯರ ನಾದಿನಿ, ಗೆಳದಿಯರ ಗೆಳದಿ ಇನ್ನೊಂದು ಹಿನ್ನೆಲೆಯನ್ನು ಅನುಸರಿಸಿ ಸಾಗುವಳು. ಗಂಡನಿಗೆ ಹೆಂಡತಿ, ಅತ್ತೆ ಮಾವಂದಿರ ಸೊಸೆ, ನಾದಿನಿ ಭಾವ ಮೈದುನರಿಗೆ ಅತ್ತಿಗೆಯಾಗಿ ಅತ್ತೆಯ ಮನೆಯನ್ನು ಪ್ರವೇಶಿಸುವಳು. ಆ ಗಳಿಗೆಯು ಜೀವಿತದಲ್ಲಿಯ ಪುನರ್ಜನ್ಮದ ಸಂಧಿ. ಬಂಗಾರದ ತಂಗಿಯೆಂದೂ, ಅಕ್ಕರೆಯ ಅಕ್ಕನೆಂದೂ, ಮುದ್ದಿನ ಮಗಳೆಂದೂ ಕರೆಯಿಸಿಕೊಂಡ ಕೊಡುಗೂಸು ಗಂಡನ ಮನೆಯಲ್ಲಿ ಗಂಡನಿಂದ “ನೀಯೆನ್ನ ಹೆಂಡತಿಯೊ ಮೈಗೊಂಡ ನನ್ನಿಯೋ” ಅನ್ನಿಸಿಕೊಳ್ಳಬೇಕಾದರೆ ಆಕೆ ಅದೆಷ್ಟು ತಪಶ್ಚರ್ಯ ಮಾಡಬೇಕೋ, ಅದೆಷ್ಟು ಕಠೋರವಾಗಿ ಪುರುಷಾರ್ಥ, ಸಾಧಿಸಬೇಕೋ ಅಂಥ ಅಗ್ನಿ ಪರೀಕ್ಷೆಯೊಳಗಿಂದ ಪಾರಾಗಿ ಕನಿಮನೆಯ ತಾಯೆನಿಸಿಕೊಳ್ಳುವಳು. ತಾಯ್ತಂದೆಗಳು ಆಗ “ಮಗಳೋ ನನ್ನದೆಯ ಮುಗಳೋ” ಎಂದು ತಮ್ಮೆದೆಯನ್ನು ಹಗುರು ಮಾಡಿಕೊಳ್ಳುವರು. ಅಲ್ಲಿಯವರೆಗೆ ಅತ್ತೆಯ ಮನೆಯ ಆಶ್ರಮದಲ್ಲಿ ಆಕೆ ವಹಿಸಿಕೊಳ್ಳಬೇಕಾದ ಕಠೋರ ವ್ರತಗಳನ್ನೂ ಜಟಿಲ ನಿಯಮಗಳನ್ನೂ ಒಂದಿಷ್ಟು ಅವಲೋಕಿಸುವಾ. ಮೊಟ್ಟಮೊದಲಿಗೆ ಗಂಡನ ಮನೆಯು ಆಕೆಗೆ ಪರಸ್ಥಳ; ಮನೆತನದವರಲ್ಲಿ ಪರಿಚಯ ಕಡಿಮೆ; ಅವರ ಸ್ವಭಾವವನ್ನು ಅರಿಯಳು. ಗಂಡನು ತನ್ನವನೆಂಬ ಭರವಸೆ ಅಷ್ಟೊಂದು ಬೆಳೆದಿಲ್ಲ. ಅಂಥ ಸಂದರ್ಭದಲ್ಲಿ ಹೊಸಬಳಾದ ಈಕೆಯ ಮೇಲೆಯೇ ಎಲ್ಲರ ಕಣ್ಣು. ಅವಳ ಮಾತು, ನಡೆ, ನಗೆ, ಉಸಿರು ಮೊದಲು ಮಾಡಿಕೊಂಡು ತಿನಿಸು, ಉಣಿಸು, ಆಶೆ-ತ್ಯಾಗ ಮುಂತಾದವುಗಳನ್ನೆಲ್ಲ ದುರ್ಬೀನು ಹಚ್ಚಿ ನೋಡಲಿಕ್ಕೆ ಮನತನದವರೆಲ್ಲ ಸಜ್ಜಾಗಿ ನಿಂತಿರುವಾಗ ಅಷ್ಟು ದೃಷ್ಟಿಗಳನ್ನೂ ತಪ್ಪಿಸಿ ತನ್ನ ಸಾತ್ವಿಕ ಗುಣವನ್ನು ಪ್ರಕಟಿಸುವುದು ಸಣ್ಣ ಮಾತೇನಲ್ಲ. ಈ ಪರಿಕ್ಷೆಯೊಳಗಿಂದ ತೇರ್ಗಡೆಯಾಗುವ ರ್ಧೈವೂ ಭರವಸೆಯೂ ಆಕೆಗೆ ಮುಖ್ಯವಾಗಿ ಬೇಕು.

ತನ್ನೊಡಲಿಗೆ ತನ್ನ ಮನವ ಕಾಪಿಸುವುದು
ತನ್ನ ಮನಕೆ ತನ್ನ ಮತಿಯ
ತನ್ನ ಮತಿಗೆ ತನ್ನ ಸ್ವಾತಿಕ ಧೈರ್ಯವ
ನುನ್ನತಿವಡೆದೊಪ್ಪುವುದು ||

ಮೈ, ಉಡಿಗೆ, ತೊಡಿಗೆಗಳ ಅಚ್ಚುಕಟ್ಟುತನವನ್ನು ಲಕ್ಷ್ಯಗೊಟ್ಟು ಕಾಪಾಡಿಕೊಳ್ಳುವುದು. ಮಾತಿನಲ್ಲಿ ತೂಕ, ವಿಚಾರದಲ್ಲಿ ಶುದ್ಧತೆ ಕಾಯ್ದುಕೊಳ್ಳಬೇಕಾದರೆ ಮನಕ್ಕೆ ಬೆಂಬಲವಾಗಿ ಮತಿಯು ನಿಲ್ಲಬೇಕು. ಮತಿಯು ಅನುಮತಿಗೊಡಲಿಕ್ಕೂ ಸನುಮತಿ ತಳೆಯಲಿಕ್ಕೂ ಸಾತ್ವಿಕ ಧೈರ್ಯವನ್ನು ಆಶ್ರಯಿಸಬೇಕು. ಇದು ಉನ್ನತಿಮಾರ್ಗದ ಪಾಠ. ಮುನಿ ಸತಿಯರಿಗಿರುವಂತೆ ಧರ್ಮಾಶ್ರಮ, ಧರ್ಮ, ದೇವಪೂಜೆ ಇವು ಗರತಿಗೆ ಬೇಡವೇ? “ಮನೆಯ ಧರ್ಮಾಶ್ರಮ, ಮನೆವಾಳ್ತೆಯ ಧರ್ಮ, ಇನಿಯನೊಳಿಗೆ ದೇವಪೂಜೆ.” ಇವುಗಳಿಂದ ಮುನಿಸತಿಯರಿಗೆ ಪ್ರಾಪ್ತವಾಗುವ ಫಲವನ್ನು ಗರತಿಯು ಮನೆಯಲ್ಲಿಯೇ ಸಂಪಾದಿಸಬಲ್ಲಳು. ಪುರುಷಾರ್ಥಗಳು ಪುರುಷರಿಗೆ ಮಾತ್ರವೆಂದು ನಾವು ತಿಳಿದ್ದೆವು. ಆದರೆ ಪೌರುಷದ ದಾರಿಯು ಸ್ತ್ರೀಗೆ ಬೇಡವೇ? ಪೌರುಷದ ದಾರಿಯಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳೆನಿಸಿದರೂ ಅವು ಸ್ತ್ರೀಗೂ ಬೇಕಾಗುತ್ತವೆ.

ಇನಿಯನ ಸೇವೆಯೊಳೆಣೆಯಿಲ್ಲದ ಧರ್ಮ
ಮನೆವಾಳ್ತೆಯೊಳರ್ಥಕಾಮ
ಮನದನ್ನನೊಳು ಮಾಧವನ ಭಾವಿಸೆ ಮೋಕ್ಷ
ವೆನೆ ಸತಿಯರಿಗರಿದೇನು ||

ಪತಿಯನ್ನು “ವರದೇವತೆಯೆಂದು ಭಕ್ತಿಗೈವುದು, ಬಲು ದೊರೆಯೆಂದು ಉಪಚರಿಸುವದು; ಗುರುವೆಂದು ವಿನಯಗೂಡಿರ್ಪುದು” ಅಲ್ಲದೆ “ಹಿತವಿದು, ಶಾಸ್ತ್ರವಿಹಿತವಿದು, ಮನಕೆ ಸಮ್ಮತವಿದು” ಎಂಬ ಮರ್ಮವರಿತು ಮನದನ್ನನ ಸೇವೆಗೆ ಅಣಿಗೊಳಿಸಬೇಕಂತೆ. ಇಷ್ಟೆಲ್ಲಕ್ಕೂ ಮೂಲವಾಗಿ ಪತಿವ್ರತೆಯ ಪರಿಶುದ್ಧತೆ ಅಣಿಗೊಳಿಸಬೇಕಂತೆ. ಇಷ್ಟೆಲ್ಲಕ್ಕೂ ಮೂಲವಾಗಿ ಪತಿವ್ರತೆಯ ಪರಿಶುದ್ಧತೆ ಗಳಿಸದೆ ಗತ್ಯಂತರವಿಲ್ಲ. ಮೈ-ಕೈ, ಉಡಿಗೆ-ತೊಡಿಗೆ ಪರಿಶುದ್ಧವಾದರೆ ಸಾಲದು. ಈ ಬಾಹ್ಯ ಉಪಕರಣಗಳ ಪರಿಶುದ್ಧತೆಯು ಅಂತಃಕರಣದ ಪರಿಶುದ್ಧತೆಯನ್ನು ಆಧರಿಸದಿದ್ದರೆ, ಅದೆಲ್ಲವೂ ವ್ಯರ್ಥವಾಗುವದು. ಹಾಗಾದರೆ ಅಂಥಃಕರಣಗಳನ್ನು ಪರಿಶುದ್ಧತೆಯನ್ನು ಆಧರಿಸದಿದ್ದರೆ, ಅದೆಲ್ಲವೂ ವ್ಯರ್ಥವಾಗುವುದು. ಹಾಗಾದರೆ ಅಂತಃಕರಣಗಳನ್ನು ಪರಿಶುದ್ಧಗೊಳಿಸುವ ದಾರಿ ಯಾವುದು?

ನೀರೊಳು ಮೈಯ್ಯ, ನೇಮದೊಳು ಕರಣಗಳ,
ಭೂರಿ ಸತ್ವದೊಳು ಬುದ್ಧಿಯನ್ನು,
ನಾರಾಯಣನಾಳುತನದೊಳಾತ್ಮನ, ತೊಳೆ
ದೋರಂತೆ ಒಪ್ಪುವಡೆವುದು ||

ಈ ಒಳಗು ಹೊರಗುಗಳ ಪಾವಿತ್ರ್ಯ-ಪರಿಶುದ್ಧತೆಗಳಿಗೆ ಶುಚಿಯೆನ್ನುತ್ತಾರೆ. ಬಾಹ್ಯ ಶುಚಿಯನ್ನು ಕಾಯ್ದುಕೊಳ್ಳುವುದಕ್ಕೆ ಅಂತಃಶುಚಿಯು ಅವಶ್ಯವಾಗಿರಬೇಕು. ಈ ಅಂತರ್ಬಾಹ್ಯ ಶುಚಿಗಳು ಗರತಿಗೆ ಅದೆಂಥ ಸತ್ವವನ್ನೊದಗಿಸುತ್ತವೆಂಬುದನ್ನೂ, ಅನಿಷ್ಟಗಳಿಂದ ಅದೆಂಥ ಸಂರಕ್ಷಣೆಯನ್ನೊದಗಿಸುತ್ತವೆಂಬುದನ್ನೂ ತಿಳಿಯಬೇಕು-

ಶುಚಿಯಾಗಿರೆ ದೇವತೆಗಳು ಸಲಹುವರು
ಶುಚಿಯನು ಪಿತೃಗಳೋವುವರು
ಶುಚಿಗಂಜುವವು ಪ್ರೇತಭೂತಗಳದವರಿಂದ
ಶುಚಿಯಪ್ಪುದೆಲ್ಲ ವೇಳೆಯೊಳು ||

ಮನೆ ಹಾಗೂ ಮನೆವಾಳ್ತೆಗಾಗಿ ಕಕ್ಕುಲತೆಯಿಂದ ಶ್ರಮಿಸುವದೇ ಶಾರೀರ ತಪ. ಮನೆಯವರೊಡನೆ ಮಮತೆಯಿಂದಲೂ ಸಂತೋಷದಿಂದಲೂ ವರ್ತಿಸುವುದು ಮಾನಸಿಕ ತಪ. ಸತ್ಯವಾದ ಪ್ರಿಯವಾದ ವಚನ, ಮೃದುವಾದ ಮಧುರವಾದ ಧ್ವನಿ, ಜೋಗುಳ ಲಲ್ಲೆಗಳ ಹಾಡು, ಮಕ್ಕಳಿಗೆ ಹೇಳುವ ಬುದ್ಧಿಯ ಕಥೆ ಇವೆಲ್ಲ ವಾಙ್ಮಯ ತಪ. ತ್ರಿಕರಣ ಪೂರ್ವಕವಾಗಿ ಮಾಡಿದ ಈ ತಪಸ್ಸಿನಿಂದ ಪತಿಯು ಒಲಿದರೆ ಶ್ರೀಪತಿಯು ಪ್ರಸನ್ನನಾಗುವನು. ಪೆರರೊಡವೆಯೆನಿಸುವ ಕೊಡಗೂಸು ಮನೆಯೊಡತಿಯಾಗುವಳು. ತಾಯಿಯಾಗುವಳು. ಮಕ್ಕಳಿಗೆ ಮೂಲೆಯೂಡುವ ತಾಯಿಯಾದರೆ, ಮನೆಯವರಿಗೆ ಅನ್ನಪೂರ್ಣೇಯಾಗುವಳು. ಗಂಡನಿಗೆ ‘ಭೂಜೇಸು ಮಾತೆ’ ಆಗುವಳು. ಅತ್ತೆಯೊಡನೆ ನಡೆದು ಕಲಿತ ಸೊಸೆ, ಸೊಸೆಯನ್ನು ನಡೆಯಿಸಿಕೊಳ್ಳುವ ಅತ್ತೆಯಾಗುವಳು. ತಾನು ಮನೆತನದವಳೂ, ಮನೆತನದವರು ತನ್ನವರೂ ಎಂಬ ಭಾವನೆಯು ಸ್ಥಿರವಾಗುವುದು. ಇದೇ ಗರತಿಯು ಸಾಧಿಸಬೇಕಾದ ಸಿದ್ಧಿ. ಇಂಥ ಸಿದ್ಧಿಯನ್ನು ಪಡೆದ ತಪಸ್ವಿನಿಗೆ “ಸ್ತ್ರೀಯೆ ಕಾಪಾಡಿದೌಪಾಡಾಗಿ ಮೂಢನನು ತಕ್ಕೈಸಿ ನೂರು ತೆರದಿ” ಎಂದು ಅದಾವ ಪತಿಯು ಕೃತಜ್ಞತೆಯನ್ನು ತೋರಿಸುವುದಿಲ್ಲ? ಆ ಪತಿಯು ಕವಿಯಾಗಿದ್ದರೆ

ಮಂಗಮನಸಿನ ಕೂಡ ಜಂಗಮ ಜಗತ್ತಿನೊಳು
ದಂಗು ಬಡೆದವನಾಗೆ ಸ್ಫೂರ್ತಿಯಾಗುತೆ ಬಂದು
ಹೆಂಗುರುಳಿನಂದದಿಂ ಗದ್ದವಂ ಪಿಡಿದು-
ಮುದ್ದಾಡಿ ಮುಂಗುರುಳ ತೀಡಿ ||

ತಿಂಗಳಿನ ಬೆಳಕ ಹೊಂಗೆಳತಿ ಜೊತೆಯಾದೆ ನೀ
ಕಂಗಳಿಗೆ ಕತ್ತಲೆಯೊಳಿದ್ದವಗೆ ಬೆಂದವಗೆ
ಮಂಗಲೆಯ ಸಂತೈಸಿದೌ ಕಾಂತೆ ಶಾಂತಿಯೇ
ಹೊದ್ದಿಕೆಯ ನಿದ್ದೆಯಾಗಿ ||

ಎಂದು ಶ್ರೀ ಅಂಬಿಕಾತನಯರಂತೆ ಹಾಡಲಾರನೇ ‘ಹರಯಳಿಯದ ಜರೆಯೇ’ ಎಂದು ಮೈಮರೆತು ಸಂಬೋಧಿಸಲಾರನೇ? “ಸಾವೆಂದು ತೋರ್ಪಪರಿಸೆರೆಯಿಂದ ಸತತ ನೀ ಬಿಸಿಸುವೆ ಜಗಜ್ಜನನೀ?” ಎಂದು ಶಿರಬಾಗಿ ಶರಣು ಬಂದೆನು ಶರಣ್ಯಳೇ, ಹೆಣ್ಣೆ, ಸೃಷ್ಟಿಯೇ, ಸಲಹುವೆ ಧರಿತ್ರಿಯಾಗಿ ಎಂದು ಕೈ ಮುಗಿಯಲಾರನೆ?

ಸಿದ್ಧಿ ಜೀವಿಯ ನಡೆನುಡಿ

ಸಿದ್ಧಜೀವಿಗೆ ನಡೆದದ್ದೇ ಹಾದಿ, ನುಡಿದದ್ದೇ ವೇದ. ತನ್ನ ದೈವವನ್ನರಿತು ಅದರೊಡನೆ ಆಂತರಿಕ ಸಂಬಂಧ ಅಂದರೆ ಭಕ್ತಿಯನ್ನಿರಿಸಿಕೊಂಡು, ಬಳಗದವರೊಡನೆಯೂ ನೆರೆಯವರೊಡನೆಯೂ ಮಧುರ ನುಡಿಯಾಡುತ್ತ ಕಕ್ಕುಲತೆಯಿಂದ ನಡಕೊಳ್ಳುವ ಜೀವವು ಆಡಿದ ಮಾತು. ನಡೆದ ನಡಾವಳಿ ಯಾರಿಗೆ ಬೇಡವಾದೀತು? ಉತ್ಸವ ಆಮೋದಗಳಲ್ಲಿ ಹಾಡುವಂತೆ ಶ್ರಮಿಸಿ ದುಡಿಯುವಾಗಲೂ ಹಾಡುವ ಬಾಳು ಆದರ್ಶವಾಗಲಾರದೇ? ಹಬ್ಬಗಳಲ್ಲಿ ಉತ್ಸಾಹ ತೊಟ್ಟು, ಮಂಗಲಪ್ರಸಂಗದಲ್ಲಿ ನಲಿದು, ದುಡಿದುದೆಲ್ಲ ಕೈಬಿಟ್ಟು ಹೋಗುವುದೆಂದು ಅಳುಕದೆ, ಖರ್ಚಿಗೆ ಹೇಸದೆ ಆಪ್ತರು, ಮಿತ್ರರು ನೆರೆಯವರು, ಋಣಾನುಬಂಧಿಗಳೊಂದಿಗೆ ಮದುವೆ ಮುಂಜೆ ಮಾಡುವುದರಲ್ಲಿ ಸಂತೋಷ ತೋರ್ಪಡಿಸುವ ಗರತಿಯ ನಡೆ-ನುಡಿಗಳು ಅನುಕರಣೀಯವಾಗಲಾರವೇ? ಹೃದಯದಲ್ಲಿ ಭಕ್ತಿಯನ್ನು ತುಂಬಿಕೊಂಡು, ಕರ್ತವ್ಯಕರ್ಮಗಳನ್ನೆಲ್ಲ ಗೊಣಗುಟ್ಟದೆ ಹಾಡುತ್ತ, ಕಕ್ಕುಲತೆಯಿಂದ ಮಾಡುವ ಗರತಿ ಸಾಧ್ವಿಯಲ್ಲವೇ? ತಪಸ್ವಿನಿಯಲ್ಲವೇ? ಕರ್ಮಯೋಗಿನಿ ಅಲ್ಲವೇ? ಅವಳ ನುಡಿಯೊಳಗಿನ ಒಂದೊಂದು ಶಬ್ಧವು ಬಳಕೆಯಿಂದ ನುಣುಪಾಗಿರುತ್ತದೆ. ಉಚಿತ ಪ್ರಸಂಗದಲ್ಲಿ ಅದನ್ನು ಪ್ರಯೋಗಿಸಿದ್ದರಿಂದ ಅದರಲ್ಲಿ ಅರ್ಥಬಲವು ತುಂಬಿಕೊಂಡಿರುತ್ತದೆ. ಶ್ರೀ ತಾಯಿಯವರು ಹೇಳುವಂತೆ “ಕೆಲವು ಶಬ್ದಗಳು ಮಾತಾಡಿ ಬಿಡುವ ಕಾಲಕ್ಕೆ ಮಾತಾಡುವವನ ಸಜೀವ ವಿಚಾರದ ಕಾರಣದಿಂದ ಒಂದು ತಾತ್ಕಾಲಿಕ ಮಹತ್ವವನ್ನು ಪಡೆದುಕೊಳ್ಳುತ್ತವೆ.” ಈ ಎಲ್ಲ ಕಾರಣಗಳಿಂದ ಗರತಿಯ ಮಾತು ಮಾಣಿಕ್ಯ; ಮಿಂಚಿನ ಶಲಾಕೆ ಮಾಣಿಕ್ಯದ ಮಾತಿನಲ್ಲಿ ಮಮತೆಯ ಮಾಧುರ್ಯ ತುಂಬಿರುತ್ತದೆ; ಮಿಮಚಿನ ಶಲಾಕೆಯಲ್ಲಿ ಕಕ್ಕುಲತೆಯ ಸೀಯಾಳ ತುಳುಕುತ್ತದೆ. ಭಕ್ತಿಯ ನೆಲೆಯಾದ ಗರತಿಯ ಮಾತಿನ ಮನೆಯು ಹೃದಯವಾಗಿರುವದರಿಂದ, ಹೃದಯದಿಂದ ಹೊರಟ ಮಾತು ಹೃದಯವನ್ನು ಸೇರುತ್ತದೆ. ಅದು ಗಂಟಲಿನಿಂದ ಹೊರಬಿದ್ದ ಗಂಟೆಯ ನಾದವಲ್ಲ. ಭಕ್ತಿ, ಮಮತೆಯ ಮಾರ್ಧು, ಕಕ್ಕುಲತೆ, ಜೀವನಿಷ್ಠೆ ಈ ಎಲ್ಲ ಕಾರಣಗಳಿಂದ ಆಕೆಯ ನುಡಿ ಪ್ರಸನ್ನಪೂರ್ಣವಾಗಿರುತ್ತದೆ. ದೇವನ ಉದ್ದೇಶದಂತೆ ಮಾಯೆಯ ಮುಸುಕು ತೊಟ್ಟು, ಮನೆ, ಮನೆತನ, ಬಳಗ ನೆರೆಯವರು ಈ ಎಲ್ಲ ಸಂಬಂಧಗಳಲ್ಲಿ ತೃಪ್ತಿಕರವಾಗಿ ಅಭಿನಯಿಸಿ ಸಿದ್ಧಜೀವಿಯಾದ ಗರತಿಯ ನಡಾವಳಿಗೆ ಸಂಸಾರವೆನ್ನಬೇಕಾದೀತು. ಆ ಸಂಸಾರದ ಸೂತ್ರಗಳನ್ನು ಹೃದಯಂಗಮವಾಗಿ ಹಾಡಿದ ಗರತಿಯ ಹಾಡು ಸಂಸಾರವೇದವಾಗಲಾರದೇ? ಅಲ್ಲಿ ಸಲ್ಲುವ ಹಂಬಲವುಳ್ಳವನು ಇಲ್ಲಿ ಸಲ್ಲುವವನಾಗಬೇಕಾಗುವದು. ಇಲ್ಲಿ ಸಲ್ಲುವವನಾಗಬೇಕಾದರೆ ಸಂಸಾರವೇದವನ್ನರಿಯಬೇಕು. ಅಂಥ ಸಂಸಾರ ವೇದವನ್ನು ರಚಿಸಿದ ಋಷಿಯಾರು? ನಮ್ಮ ಗರತಿ ವೃಂದ ಲೆಕ್ಕವಿಲ್ಲದ ಗರತಿ-ಋಷಿಗಳು, ಲೆಕ್ಕವಿಲ್ಲದ ಕಾಲದಿಂದ ಲೆಕ್ಕವಿಲ್ಲದಷ್ಟು ಹಾಡಿದ್ದಾರೆನ್ನಬಹುದು. ಆ ಹಾಡುಗಳ ತಳಮೂಲವನ್ನು ಹೇಳಲಿಕ್ಕಾಗದಿದ್ದರೂ, ಪರಂಪರೆಯನ್ನು ಹೇಳುವುದುಂಟು-

ಕುಟ್ಟು ಬೀಸುವ ಹಾಡು ಯಾವಾಕಿ ಕಲಿಸ್ಯಾಳ
ಕೃಷ್ಣ ತಂಗಿ ಸುಭದ್ರಿ | ಕಲಿಸ್ಯಾಳ |
ಕೃಷ್ಣ ಮ್ಯಾಲ ಪದಗೋಳ ||

ಬದುಕಬಲ್ಲ ಶಕ್ತಿ

ಅಷ್ಟೊಂದು ಹಿಂದಿನ ಕಾಲದಿಂದ ಈವರೆಗೆ ಸಂಸಾರ ವೇದವು ಬದುಕಿ ಬಂದ ಬಗೆ ಹೇಗೆ? ಅದನ್ನಾದರೂ ಬರೆದಿಟ್ಟಿಲ್ಲ. ಆಶ್ರಮಗಳಲ್ಲಿ ಕಂಠಪಾಠ ಮಾಡಿಸಿಲ್ಲ. “ಹೆಂಗಸರ ಬುದ್ಧಿ ಮೊಳ ಕಾಲ ಕೆಳಗೆ” ಎನ್ನುವ “ನಾಯಿಗೆ ಬೊಗುಳಲಿಕ್ಕೆ ಕಲಿಸಿಲ್ಲ, ಹೆಂಗಸಿಗೆ ಹಾಡಲಿಕ್ಕೆ ಕಲಿಸಿಲ್ಲ” ಎನ್ನುವ ತಿರಸ್ಕಾರದ ಪರಿಸ್ಥಿಯಲ್ಲಿಯೂ ಅದು ಉಳಿದು ಬಂದುದು ಹೇಗೆ? ಅದು ಸ್ವಯಂ ಸತ್ವಪೂರ್ಣವಾಗಿರುವದರಿಂದ, ಅದು ವೇದಗಳಂತೆ ಅಪೌರುಷೇಯವಾಗಿರುವದರಿಂದ, ತನ್ನಿಂದ ತಾನೇ ಬದುಕಬಲ್ಲದು. ದಿ|| ಬಿ.ಎಂ.ಶ್ರೀ. ಅವರು ಹೇಳುವ ಮಾತು ಯಥಾರ್ಥವಾಗಿದೆ. ಅದೇನೆಂದರೆ- “ತನ್ನದನ್ನು ದೇಶ್ಯವೆಂದು ಧಿಕ್ಕರಿಸಿ, ಅನ್ಯಮಾರ್ಗದಲ್ಲಿಯೇ ಸ್ವೇಚ್ಛೆಯಾಗಿ ಮದಿಸಿ ತಿರುಗುತ್ತ ಇದ್ದು ಕಲೆಗೆ ನವೀನತೆಯ ಕುತೂಹಲವೂ, ಸಾಮರ್ಥ್ಯವೂ ಹಳಸಿ ಯಾವ ನಿಜವಾದ ಸತ್ವವೂ ಇಲ್ಲದೆ ಜನರಿಂದ ದೂರವಾಗಿ ಸಾಹಿತ್ಯವು ನಿಸ್ಸಾರವಾಗುವದು; ತೇಜೋ ಹೀನವಾಗುವದು. ಸಣ್ಣ ಪಂಡಿತ ಸಂಸ್ಥೆಗಳಲ್ಲಿ ಪೋಷಿತವಾಗುವದು. ಆಗ ಮತ್ತೆ ಹಳೆಯ ಸಾಹಿತ್ಯದ ಪುನರುತ್ಥಾನವಾಗುವದು. ಸಹೃದಯರು ತವರುನಾಡಿನ ತಾಯಹಾಡಿನ ಹಾಲನ್ನು ಕುಡಿದು ಸಜೀವರಾಗಬೇಕೆಂದು ಹಿಂದಿರುಗುವರು. ಜನರೊಡನೆ ಜನರಾಗುವರು. ಆ ಭಾಷೆ, ಆ ಛಂದಸ್ಸು, ಆ ಜೀವ ಮತ್ತೆ ಹೊಳಪುಗೂಡಿ ಹೆಮ್ಮೆಗೇರುವದು. ಸಾಹಿತ್ಯದ ಏಳಿಗೆಯ ಕಾಲದಲ್ಲೆಲ್ಲ ಪ್ರಪಂಚದ ಎಲ್ಲಾ ಕಡೆಯಲ್ಲಿಯೂ ಹೀಗೆಯೇ ಆಗಿದೆ; ಆಗುತ್ತಿದೆ.” ಸಂಸಾರ ವೇದವು ಸಾಕ್ಷರತೆಯನ್ನು ಅವಲಂಬಿಸಿಲ್ಲವಾದ್ದರಿಂದ, ನಾಡಿನಲ್ಲಿ ಅರ್ಧ ಸಂಖ್ಯೆಯಲ್ಲಿದ್ದ ಹೆಣ್ಣುಮಕ್ಕಳು ಅದನ್ನು ಬಳಸುವರು. ಮನೆಯೇ ಧರ್ಮಶ್ರಮವೂ ಮನೆ ವಾಳ್ತೆಯೇ ಧರ್ಮವೂ ಆಗಿರುವದರಿಂದ ಆ ಕೊಡಗೂಸುಗಳೂ, ಕನ್ನಿಕೆಯರೂ ಈ ಹಾಡುಗಳನ್ನು ಪಠ್ಯಪುಸ್ತಕದ ಪಾಠಗಳಿಗಿಂತ ಹೆಚ್ಚಾಗಿ ಕಂಠಪಾಠ ಮಾಡುವರು. ದುಡಿಮೆ, ಕೆಲಸ, ಕುಟ್ಟು ಬೀಸುವುಕೆ, ತೊಟ್ಟಿಲ ಜೀಕು, ಲಲ್ಲೆ, ಮದುವೆ, ಶೋಭನ ಮೊದಲಾದ ಪ್ರಸಂಗಗಳು ಮುಳುಗಿದರಲ್ಲವೇ ಈ ಹಾಡುಗಳು ಮುಳುಗುವದು? ಸಂಸಾರ ಮುಳುಗಿದರಲ್ಲವೇ-ಸಂಸಾರ ವೇಧವು ಅಳಿಯುವುದು? ನಿತ್ಯದ ಕೆಲಸವನ್ನೆಲ್ಲ ಮುಗಿಸಿ ಅನುಕೂಲವಾದ ಕಾಲವನ್ನು ಗೊತ್ತು ಮಾಡಿಕೊಂಡು ಜಾಣನಾದ ಪುರಾಣಿಕನನ್ನು ಕರೆತಂದು ಪುರಾಣ ಕೇಳುವುದು ಬೇರೆ. ಮನೆಯ ಧರ್ಮಾಶ್ರಮದಲ್ಲಿ, ಮನೆವಾಳ್ತೆಯವರೇ ವಟುಗಳಾಗಿ ಸಂಸಾರ ವೇದವನ್ನು ಪ್ರಸಂಗಾನುಸಾರವಾಗಿ ಪಠಿಸಿ ಉಚ್ಚರಿಸುತ್ತ ಸಾಗುವುದರಿಂದ, ಸಂಸಾರವಿರುವವರೆಗೂ ಸಂಸಾರ ವೇದಕ್ಕೆ ಸಾವಿಲ್ಲವೆಂದು ಹೇಳಬಹುದು. ಅಂಥ ಅಜರಾಮರವಾದ ಸಾಹಿತ್ಯವನ್ನು ರಚಿಸಿಟ್ಟ ದಿವ್ಯಕವಿ ಗರತಿಯಲ್ಲದೆ ಇನ್ನಾರು?

ಲೌಕಿಕ ಅನುಭವ ಪೂರ್ಣ

ಕನ್ನಡನಾಡಿನಲ್ಲಿ ಶರಣರ ವಚನಗಳೂ ದಾಸರ ಹಾಡುಗಳೂ ಅಲೌಕಿಕ ಅನುಭವವನ್ನು ಚೊಕ್ಕಾಗಿ ಚಿತ್ರಿಸುವದಕ್ಕೆ ಶಕ್ತವೂ ಹಾಳತವೂ ಆಗಿರುವಂತೆ ಸಂಸಾರವೇದವು ಲೌಕಿಕ ಅನುಭವವನ್ನು ಸ್ಪಷ್ಟವಾಗಿ ಚಿತ್ರಿಸುವುದಕ್ಕೆ ಸಮರ್ಥವೂ ಯೋಗ್ಯವೂ ಆಗಿದೆಯೆಂದು ಹೇಳುವುದರಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಐಹಿಕ ಜೀವನವನ್ನು ಬಣ್ಣಿಸುವುದಕ್ಕೆ ಲೇಖನಿಯು ಮನೆಯಾಗಿರುವುದು. ಈ ನಮ್ಮ ಸಂಸಾರವೇದದಿಂದಲೇ, ಎಂಬುದನ್ನರಿತರೆ ಅದನ್ನು ಅಭ್ಯಸಿಸುವುದರ ಅವಶ್ಯಕತೆಯು ಇಂದಿನ ಜಗತ್ತಿಗೆ, ಇಂದಿನ ಕಾಲಕ್ಕೆ ಕಂಡುಬರದೆ ಇರಲಾರದು – “ಇವುಗಳ ಛಂದಸ್ಸು ಬಹು ಸಹಜ, ಸರಳ ಭಾಷೆಯೂ ಸಹಜ, ಸರಳ ಆಡುವ ಮಾತು, ಹಾಡುವ ಮಟ್ಟು. ಆದರೂ ಜನಗಳ ಹೃದಯದಿಂದ ಸಂತೋಷದ ಅಥವಾ ದುಃಖದ ಸಮಯದಲ್ಲಿ ನೇರವಾಗಿ ಉಕ್ಕಿಬಂದ ಕಾರಣದಿಂದ ಇವುಗಳಲ್ಲಿ ಒಂದು ಸೊಗಸೂ ಒಂದು ಕಾತಿಯೂ ಒಂದು ರಮಣೀಯತೆಯೂ ಮರೆಯುವವು. ಮಕ್ಕಳ ತೊದಲು, ಇನಿಯಳ ಲಲ್ಲೆ, ತೆಂಗಾಳಿಯ ತೀಟ, ಮಲ್ಲಿಗೆಯ ಕಂಪು; ಬೆಳದಿಂಗಳ ತಂಪು-ಮುಂತಾದ ಉಪಮಾನಗಳು ಕೃತಕ ಕವಿತ್ವಕ್ಕಿಂತಲೂ ಈ ಹಾಡುಗಳಿಗೆ ಹೆಚ್ಚಾಗಿ ಒಪ್ಪುತ್ತವೆ.” ಈ ಸಾಹಿತ್ಯವನ್ನು ಕುರಿತು ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರು ಹೇಳುವುದೇನೆಂದರೆ-“ಅದು ಹೃದಯದ ನೂರು ಭಾವಗಳನ್ನು ನಿರಾಯಾಸವಾಗಿ ವರ್ಣಿಸುತ್ತದೆ. ಓದುವವರ ಮನಸ್ಸನ್ನು ಅರ್ಥಕ್ಕೆ ನೇರವಾಗಿ ಒಯ್ಯುತ್ತದೆ. ಕಾವ್ಯದ ವಸ್ತು ಕೇವಲ ಐಶ್ವರ್ಯವಂತರ ಬಾಳು ಮಾತ್ರವಲ್ಲ, ಕೇವಲ ಶೃಂಗಾರ ಲೀಲೆ ಮಾತ್ರವಲ್ಲ, ಎನ್ನುವುದು ಸಾಮಾನ್ಯ ಜನದ ಬದುಕಿನ ಬೇನೆ ಬೇಗೆಗಳೂ ನಲುಮೆ ನಗೆಯಾಟಗಳೂ ಕಾವ್ಯದಲ್ಲಿ ಸುಂದರವಾಗಿ ರೂಪಗೊಳ್ಳಬಹುದು….. ನಮ್ಮ ಬಡನಾಡಿನ ಬಡ ಜೀವನದ ವಿಷಯದಲ್ಲಿ ಮರುಕವನ್ನು ಇಂಥ ಬಡತನದಲ್ಲಿ ಬೆಳೆದರೂ ನಮ್ಮ ಅಕ್ಕ ತಂಗಿಯರು ತಾಯಿ ಅಜ್ಜಿಯರು ತಮ್ಮ ಹೃದಯದಲ್ಲಿ ತುಂಬಿಕೊಂಡಿರುವ ಸೌಜನ್ಯ, ಸಾರಳ್ಯ, ಬಂಧು ಪ್ರೇಮದ ಐಶ್ವರ್ಯವನ್ನು ಕುರಿತು ಹೆಮ್ಮೆಯನ್ನೂ ನಮ್ಮಲ್ಲಿ ಉಂಟುಮಾಡುತ್ತವೆ ಈ ಪದಗಳ ಸಮುಚ್ಚಯವು ಕನ್ನಡ ಜನರ ವಿನಯದ ಚಿತ್ರ, ಕನ್ನಡ ನುಡಿಯ ಗೆಲುವಿನ ಕಳೆ, ಕನ್ನಡದ ಹೊಸ ಕವಿತೆಯ ಪಯರಿಗೆ ರಸ” ಇಷ್ಟೊಂದು ಗುಣಪೂರ್ಣವಾದ ಸಾಹಿತ್ಯವು ವೇದವೆನಿಸಲಾರದೇ? ಇಂಥ ಸಹಜ ಸಾಹಿತ್ಯವು ಸಹಜಜೀವನಕ್ಕೆ ಸಂಜೀವಿನಿಯಾಗಲಾರದೇ? ಇದು ಬೀಳರ್ಧ ಹೆಂಗಳೆಯರ ವಾಣಿಯಾದರೂ ಗಂಡಿನಲ್ಲಿ ಕೆಚ್ಚು ಮೂಡಿಸುವ ಸಾಮರ್ಥವನ್ನು ಪಡೆದಿದೆ. ಇದು ಬಹುಸಂಖ್ಯಾತರ ಒಡನುಡಿಯಾಗಿದ್ದರೂ, ಕಂಡವರಿಗಲ್ಲದೆ ಕಂಡವರಿಗೆಲ್ಲ ಕಾಣಿಸಿಕೊಳ್ಳಲಾರದು. ಅಶಿಕ್ಷಿತ ಜನಾಂಗದ ಕೈಗೋಲು ಎನಿಸಿದರೂ ಸುಸಂಸ್ಕೃತರ ಮುನ್ನಡೆಗೆ ಕೈಗಂಬವಾಗಿ ನಿಂತಿದೆ. ಅದು ಕರ್ಣೋಪಕರ್ಣವಾಗಿ ಬೆಳೆದುಳಿದು ಬಂದ ಅಮರಸಾಹಿತ್ಯವೆನಿಸುತ್ತದೆ. ಪಂಡಿತಮನ್ನಣೆಯನ್ನು ಆಶಿಸದೆ ಲೋಕಮಾನ್ಯವಾಗಿ ಬದುಕಿದ ಜೀವಸಾಹಿತ್ಯವೆನಿಸುತ್ತದೆ. ಅದು ಕೇರಿಕೇರಿಗೂ ಮನೆಮನೆಗೂ ಲಭ್ಯವಾಗಿರುವ ಸುಲಭ ಸಾಹಿತ್ಯ, ಸಹಜ ಸಾಹಿತ್ಯ. ಅದು ಹವೆಯಂತೆ ನೆಲಮುಗಿಲುಗಳನ್ನು ವ್ಯಾಪಿಸಿದ ನಿಸ್ಸೀಮ ಸಾಹಿತ್ಯ. ನಿರಕ್ಷರರ ಕುಟೀರದಿಂದ ಹೊರಹೊಮ್ಮಿದ ಮಹಾಮಹಿಮ ಸಾಹಿತ್ಯ. ಗರತಿಯು ತನ್ನ ಜೀವನದ ಅದ್ಭುತ ರಸಾಯನದಲ್ಲಿ ಸಿದ್ಧಿಪಡೆದ, ಅನುಭವಸಿದ್ಧವಾದ ವಾಣಿಯಲ್ಲಿ ನುಡಿದು, ತನ್ನ ಹೃದಯದ ಹಾಡುಗಳನ್ನು ಹಿಗ್ಗಿನಿಂದ ಹಾಡಿ ಜಗತ್ತನ್ನು ಬದುಕಿಸಿದ್ದಾಳೆ, ಬಾಳಿಸಿದ್ದಾಳೆ ಅದೇ ಹಾಡು ನಾಳಿನ ಜಗತ್ತಿನ ಬದುಕಿಗೆ ಕಾರಣವಾಗಲಿದೆ. ಆ ಹಾಡು ಇರುವವರೆಗೆ ನಮ್ಮ ಬದುಕಿಗೆ ಸಾವಿಲ್ಲ. ಬಾಳಿಗೆ ಭಂಗವಿಲ್ಲ. ಹೀಗೆ ಸಂಸಾರವೇದವು ಸತ್ವಯುತವಾಗುವುದಕ್ಕೂ, ಅಜರಾಮರವಾಗುವುದಕ್ಕೂ ಗರತಿಯ ಜೀವನದ ದಿವ್ಯತೆಯೇ ಕಾರಣವೆಂದು ಹೇಳುವುದಕ್ಕೆ ಅಡ್ಡಿಯೇನೂ ತೋರುವದಿಲ್ಲ.