ಜನಪದಗೀತೆಗಳೆಂದರೆ ಜೀವನದ ಸಂಗಾತಿಗಳು, ಜೀವನವಿರುವಲ್ಲೆಲ್ಲ ಗೀತೆಗಳು ಇದ್ದೇ ಇವೆ. ದಿನದ ಇಪ್ಪತ್ತುನಾಲ್ಕು ತಾಸುಗಳಲ್ಲಿ, ನಿದ್ರೆಯ ತಾಸುಗಳನ್ನು ಬಿಟ್ಟರೆ, ಕೆಲಸ ಮಾಡುವ ಎಂಟು ತಾಸುಗಳಲ್ಲಿ ಗೀತೆಗಳು ಬೆಂಬಲವಾಗಿ ನಿಂತುಕೊಂಡಿರುತ್ತವೆ. ವಿನೋದ-ವಿಹಾರಗಳ ಎಂಟು ತಾಸುಗಳಲ್ಲಂತೂ ಗೀತೆಗಳು ಮುಂಬಲವಾಗಿಯೇ ಸಾಗುತ್ತಿರುತ್ತವೆ. ದುಡಿಮೆ- ವಿಶ್ರಾಂತಿ, ಸುಖ-ದುಃಖ ಸ್ನೇಹ-ಕಲಹ ಇಂಥ ವಿರೋಧ ಪರಿಸ್ಥಿಗಳಲ್ಲಿಯೂ ಗೀತಗಳು ಸುಳಿದು ಬರದೆ ಇರುವುದಿಲ್ಲ. ಕನಸಿನಲ್ಲಿ ಸಹ ಗೀತೆಯ ತನನವು ಮಿಡಿಯುವುದುಂಟು. ಅಂತೆಯೇ ಅವು ಬಾಳ ಕೈಪಿಡಿ.

ಬೀಸು-ಕುಟ್ಟುವ ಹಾಡುಗಳು ಮೊಟ್ಟಮೊದಲು ಕೃಷ್ಣನ ತಂಗಿ ಸುಭದ್ರೆಯಿಂದ ಕಲಿತು ಕೊಂಡವುಗಳಂತೆ. ಇನ್ನುಳಿದ ಗೀತಗಳೆಲ್ಲ ಹಿಂದಿನ ತಲೆಮಾರುಗಳಲ್ಲಿ ರಚಿತವಾದವುಗಳೆಂದು ಸ್ಥೂಲವಾಗಿ ಹೇಳಬಹುದು ಅಂದಿನವರ ಜೀವನದಂತೆ ಅಂದಿನ ಸಾಹಿತ್ಯವೂ ಸಮೃದ್ಧವಾಗುತ್ತು. ಇತ್ತೀಚೆಗೆ ಜೀವನವು ಹದಗೆಟ್ಟಿತು: ಸಾಹಿತ್ಯವೂ ಹೊಲಸಿಟ್ಟಿತು. ಕೆಲ ಲಾವಣಿಕಾರರು ಸಮಕಾಲೀನರಾಗಿದ್ದ, ಕುರುಡರಿಗಿಂತ ಮೆಳ್ಳಗಣ್ಣವನು ಚೆಲುವನೆಂಬಂತೆ, ಇದ್ದುದರಲ್ಲಿಯೇ ಒಳ್ಳೆಯ ಹಾಡುಗಳನ್ನು ರಚಿಸಿದ್ದುಂಟು.

ಎರಡು ಬಗೆ

ಜನಪದ ಗೀತೆಗಳಲ್ಲಿ ಎರಡು ವಿಧ- ಗಂಡಸರ ಹಾಡುಗಳು, ಹೆಂಗಸರ ಹಾಡುಗಳು. ನೇಗಿಲು ಹೊಡೆಯುವಾಗ, ಮೊಟ್ಟೆಯೆತ್ತುವಾಗ, ಹಂತಿ ತುಳಿಸುವಾಗ ಹಾಡುವ ದುಡಿಮೆಯ ಹಾಡುಗಳಲ್ಲದೆ, ಹಬ್ಬ-ಹುಣ್ಣಿಮೆಗಳಲ್ಲಿ, ಉತ್ಸವ-ಆಮೋದಗಳಲ್ಲಿ ಹಾಡುವ ಉತ್ಸಾಹದ ಹಾಡುಗಳೂ, ಭಜನೆ ಬಯಲಾಟದ ಹಾಡುಗಳೂ ರೂಢಿಯಲ್ಲಿವೆ. ತನ್ನಷ್ಟಕ್ಕೆ ತಾನೇ ಹಾಡಿಕೊಂಡು ಆನಂದಿಸುವ ಹಾಡುಗಳಿದ್ದಂತೆ, ಅನ್ಯರಿಗೆ ಕೇಳಿಸಿ, ಅನ್ಯರಿಂದ ಕೇಳಿಸಿ ಸಂತಸಪಡುವ ಹಾಡುಗಳೂ ಇರುತ್ತವೆ. ಹೆಣ್ಣು ಮಕ್ಕಳಿಗೆ ಬೀಸುಕಟ್ಟುವ ಹಾಡುಗಳು, ಜೋಗುಳದ ಹಾಡುಗಳು, ಹತ್ತಿಬಿಡಿಸುವಾಗ ಹಾಡುವ ಹಾಡುಗಳು ಮೀಸಲು.

ಅಲ್ಲದೆ ಮದುವೆಯ ಕಾಲಕ್ಕೆ, ಉಡಿತುಂಬುವ ಕಾಲಕ್ಕೆ ಹಾಡುವ ಹಾಡುಗಳೂ ಪ್ರಾರ್ಥನೆಯ ಹಾಗೂ ಮನೋರಂಜನೆಯ ಹಾಡುಗಳೂ ಸರಸಲ್ಲಾಪದ ಹಾಗೂ ಕುಣಿತ ಕೋಲಾಟದ ಹಾಡೂಗಳೂ ಹೆಣ್ಣು ಮಕ್ಕಳಿಗೆ ಉಂಬಳಿಯಾಗಿವೆ. “ಹಾಲು ಬೇಡಿ ಅತ್ತಾನ, ಕೋಲು ಬೇಡಿ ಕುಣಿದಾನ, ಮೊಸರು ಬೇಡಿ ಕೆಸರು ತುಳಿದಾನ” ಎಂದು ಮಕ್ಕಳನ್ನು ರಂಜಿಸುವ ಹಾಡುಗಳನ್ನು ಹಾಡುವ ಬಾಯಿಂದ, ಹಾಡಿಹಾಡಿಕೊಂಡು ಆಳುವ ಗೀತಗಳು ರಗಳೆಯೋಪಾದಿಯಲ್ಲಿ ಆತ್ಮೀಯರು ಅಗಲಿದ ಕಾಲಕ್ಕೆ ಹೊರ ಹೊಮ್ಮುವುದನ್ನು ಕೇಳುತ್ತೇವೆ. ಕನಿಷ್ವೆನಿಸುವ ನೌಕರಿಗಿಂತಲೂ ನಿಕೃಷ್ಟವೆನಿಸುವ ತಿರುಪೆಯನ್ನು ಬೇಡುವಾಗ, ತಿರಸ್ಕಾರ-ನಿಷ್ಠುರತೆಗಳ ಪ್ರತಿಶಬ್ಧಗಳನ್ನು ಕೇಳುವ ಪ್ರಸಂಗದಲ್ಲಿಯೂ ಹಾಡುಗಳು ಕೇಳಲು ಸಿಗುತ್ತವೆ.

ರಬಕವಿ-ನಿಂಬರಗಿ

ವಿಜಾಪುರ ಜಿಲ್ಲೆಯಲ್ಲಿ ರಬಕವಿ ಹಾಗೂ ನಿಂಬರಗಿ ಎಂಬ ಎರಡು ಗ್ರಾಮಗಳಿವೆ. ರಬಕವಿಯು ಕೃಷ್ಣಾತೀರಕ್ಕೆ ಹತ್ತಿರದಲ್ಲಿದೆ. ಅಲ್ಲಿ ಮನೆ ಮನೆಗೂ ಹಿಂಡುವ ಎಮ್ಮೆಗಳು, ಕುಸುರಿನ ಸೀರೆಗಳು ಸಿದ್ಧವಾಗಿ ಅಲ್ಲಿಂದ ದಿಗ್ದೇಶಗಳಿಗೆ ಹೋಗುತ್ತವೆ. ಆದರೆ ಅಲ್ಲಿ ಒಂದಾನೊಂದು ಕಾಲಕ್ಕೆ ಕುಡಿಯುವ ನೀರಿನ ಕೊರತೆ ಬಹಳ. ಆಳವಾದ ಬಾವಿಯಲ್ಲಿಳಿದು ಕೂಡ ತುಂಬಿಕೊಂಡು ಮೇಲೆ ತರುವಷ್ಟರಲ್ಲಿ ಹೆಣ್ಣು ಮಕ್ಕಳು ಸೋತುಹೋಗುತ್ತಿದ್ದರು. ನಿಂಬರಗಿ ಗ್ರಾಮವು ಬಲಭೀಮನ ದೇವಾಲಯದಿಂದ ಪ್ರಸಿದ್ಧವಾಗಿದೆ. ಊರ ಮುಂದಿನ ಚಿಕ್ಕಹಳ್ಳದಲ್ಲಿ ವರ್ತಿ ತೆಗೆದು, ಕುಡಿಯುವ ನೀರನ್ನು ಕೊಡದಲ್ಲಿ ತುಂಬಿಸಿಕೊಳ್ಳಲು ಉಪಯೋಗಿಸಲಾಗುತ್ತಿತ್ತು. ರಬಕವಿಯ ಹೆಣ್ಣನ್ನು ನಿಂಬರಗಿಗೂ, ನಿಂಬರಗಿಯ ಹೆಣ್ಣನ್ನು ರಬಕವಿಗೂ ಕೊಟ್ಟು ಇದಿರುಗುಬಸ ಮಾಡಲಾಗಿತ್ತೆಂದು ತೋರುತ್ತದೆ. ಆ ಅತ್ತಿಗೆ-ನಾದಿನಿಯರು ಒತ್ತಟ್ಟಿಗೆ ಕೂಡಿದಾಗ ನೀರಬವಣೆಯನ್ನು ರಬಕವಿಯ ಹೆಣ್ಣು ತೆಗಳುವುದನ್ನು ಎರಡು ತ್ರಿಪದಿಗಳು ಸ್ಪಷ್ಟಪಡಿಸುತ್ತವೆ-

ಹೆಸರೀಗಿ ರಬಕವಿ, ಮೊಸರೀಗಿ ನೀರಿಲ್ಲ |
ಕುಶಲದ ಸಿಂಬಿ ಬರಿಗೊಡದ | ಬಾಲೆಯರು
ಉಸಿರೆಂದು ಬಾವಿ ಇಳಿದಾರ ||
ಚಂದಕ್ಕ ನಿಂಬರಗಿ, ಗಂಧಕ್ಕ ನೀರಿಲ್ಲ
ತೆಂಗೀನ ಪರಟಿ ಬರಿಗೊಂಡ ಬಾಲ್ಯಾರ
ರಂಭೇರ ಜಗಳ ವರತ್ಯಾಗ ||

“ಗಂಡ ಹೇಳಿದ ಮಾತಕೊಂಡಾಡೇ ಸಾತವ್ವ, ಗಂಡನ ನಿನ ಮ್ಯಾಲೆ ಬಲುಜೀವ”

ಹಿಗ್ಗಿನ ಕುರುಹು

ಹಾಡು ಹಿಗ್ಗಿನ ಕುರುಹು, ಕೈಗೆ ಎಣ್ಣೆ ಸವರಿಕೊಂಡರೆ, ಹಲಸಿನ ಹಣ್ಣು ಹಚ್ಚಿ ತೊಳೆಗಳನ್ನು ಬಿಡಿಸುವುದಕ್ಕೆ ಸುಗಮವಾಗುವುದಂತೆ. ಹಾಡಿನ ಎಣ್ಣೆ ಸವರಿಕೊಂಡು ಜಂಜಡ ಸಂಸಾರದ ತೊಡಕುಗಳನ್ನು ಬಿಡಿಸುವ ಹದವು ನಮ್ಮ ಜನಾಂಗಕ್ಕೆ ಎಂದೋ ದೊರಕಿದೆ. ಅಳವಡಿಕೆಯಾಗಿದೆ. “ಸಂಸಾರವೆಂಬುದು ಬಲು ಕೆಟ್ಟ, ಇದನ್ಯಾವ ಸೂಳೆಮಗ ಮಾಡಿಟ್ಟ” ಎಂದು ಬೇಸರ ತೋರ್ಪಡಿಸುವವರೂ ಸಹ ಹಾಡಿನಿಂದಲೇ ಅದನ್ನು ಪ್ರಕಟಪಡಿಸುತ್ತಾರೆ! ಬಿಟ್ಟೆನೆಂದರೂ ಈ ಮಾಯೆ ಬಿಡದು. ಒಲ್ಲೆನೆನ್ನುವ ಹಾಡಿನಿಂದಲೂ ಹಿಗ್ಗು ಮೊಳೆಯುವುದು.

ಮಕ್ಕಳು ನಕ್ಕರೆ ಸಕ್ಕರೆ, ಅತ್ತರೆ ಮುತ್ತು ಉದುರುವುದನ್ನು ಕಾಣುವ ತಾಯ ದೃಷ್ಟಿಯು “ಅತ್ತರೆ ಅಳಲೆವ್ವ ಈ ಕೂಸು ನನಗಿರಲಿ” ಎನ್ನುವ ನಿರ್ಧಾರಕ್ಕೆ ತಂದು ನಿಲ್ಲಿಸುವುದು.

ಉಟ್ಟು ತೊಟ್ಟು ಮನೆಯಲ್ಲಿಯೇ ಉಯ್ಯಲಾಡುವ ಬಾಲಿಕೆಯನ್ನು ತನ್ನೊಡನೆ ಹೊಲಕ್ಕೆ ಕರೆದೊಯ್ಯುವಾಗ ಮನವೊಲಿಸಲು ಮಾವನು ಈ ಹಾಡು ಹೇಳುತ್ತಾನೆ- “ಗುಲ್‌ಗುಲ್‌ಗುಲ್ಲಕ್ಕ ನಡಿ ನಮ್ಮ ಹೊಲಕ್ಕ, ಸೀ ತನಿ ತಿಲ್ಲಕ್ಕ ಹೋಗೂನು ಮೆಲ್ಲಕ್ಕ.” ಮಾತಿನ ಮುದ್ದೆಯಿಂದ ಮುದ್ದಿನ ಬೊಂಬೆ ಮಾಡಿ ಕುಣಿಸುತ್ತದೆ ಈ ಹಾಡು-

ಹರೆಯದ ಒಕ್ಕಲುಮಗನು ಹೆಂಡತಿಗೆ ಹೇಳುತ್ತಾನೆ- “ರೊಟ್ಟೀ ಮಾಡು ಬೆಳ್ಳಾಗ ಕೆತ್ತಿತೆಗಿ ತೆಳ್ಳಾಗ, ಬ್ಯಾಳಿಗ್ಹಾಕು ಕುಳ್ಯಾಗ, ಚೆಟ್ನಿ ಕುಟ್ಟು ವಳ್ಳಾಗ, ಹಾಕ ಬಳ್ಳೊರ್ಳಳಿ” ಒಡಲಿಗೆ ಪಂಚಾಮೃತ, ಮನಸ್ಸಿಗೆ ಗೀತಾಮೃತ.

ಉದ್ಯೋಗ ನಿಷ್ಠೆ

ಕುರಿ ಕಾಯುವ ಕುರುಬನಿಗಾಗಲಿ, ದನ ಕಾಯುವ ದನಗಾಲಿಗಾಗಲಿ ತನ್ನ ಉದ್ಯೋಗದಲ್ಲಿ ತುಂಬ ನಿಷ್ಠೆಯಿರುತ್ತದೆ. ಅದರಿಂದ ಆ ಉದ್ಯೋಗವು ಅವನಿಗೆ ಶರಣರ ಕಾಯಕವಾಗಿ ಪರಿಣಮಿಸುತ್ತದೆ. ಅಲ್ಲಿ ಪ್ರಾಪ್ತಿಗಿಂತ ಮನಸ್ಸಿನ ಸಮಾಧಾನ ಹೆಚ್ಚಿನದು. “ಕುರಿಯ ಕಾಯುತ ಹೋದಿವಣ್ಣ ಕುಂಕುಮದ್ಹಳ್ಳ ತಂದಿವೋ, ಆಡುಕಾಯುತ ಹೋದಿವಣ್ಣ ಜೋಡು ಮಲ್ಲಿಗೆ ತಂದಿವೋ” ಕುಂಕುಂದ ಹರಳಿಗೂ, ಜೋಡು ಮಲ್ಲಿಗೆಗೂ ಪೇಟೆಯಲ್ಲಿ ಕಾಸಿನ ಬೆಲೆಯೂ ಇರಲಿಕ್ಕಿಲ್ಲ. ಆದರೆ ವಾಸ್ತವವಾಗಿ ಆನಂದವನ್ನು ಉಕ್ಕಿಸುವ ಅವುಗಳಿಗೆ ಬೆಲೆಯೇ ಇಲ್ಲ; ಅಮೌಲ್ಯ, ಅವುಗಳಿಗೆ ಏನು ಕೊಟ್ಟರೂ, ಎಷ್ಟು ಕೊಟ್ಟರೂ ಸಮನಾಗದು.

“ಇಪ್ಪತ್ತು ಮೊಳದ ಘೊಂಗಡಿಯೋ ಒಪ್ಪೊತ್ತಿನಾಗ ನೇದಾನೋ, ಆರುನೂರು ಹಿಂಡ ಕುರಿಗಳನೋ. ಅರಗಳಿಗ್ಯಾಗ ಹಿಂಡ್ಯಾನೊ” ಇಂಥ ಕೈಚಳಕದ ಕುರುಬನಿಗೆ ಜೀವನದ ಜೊತೆಗಾರ್ತಿಯೂ ಅಂಥವಳೇ. ಆಕೆಯ ಹೆಸರು ಮಾಯವ್ವ. ಇನ್ನೊಬ್ಬಾಕೆ ಬಾಳವ್ವ “ನಾಯಿಯ ನುಚ್ಚ ಹೊತ್ತಾಳ ಮಾಯವ್ವ, ಬಾಯಿಲೆ ಕಾಯಿ ತಿಂತಾಳೋ. ತೋಳಿನಾಗ ತೋಳಬಂದಿ ಗಿಟ್ಟಾಳ ಬಾಳವ್ವ ಗಾಳಿಗೆ ತುರುಬ ಬಿಚ್ಯಾಳೋ.” ಕುರಿಯ ಕಾವಲಿಗಾಗಿ ನೆರವಾಗುವ ನಾಯಿಗಳಿಗಾಗಿ ನುಚ್ಚು ಹೊತ್ತುಕೊಂಡು, ಬಾಯಲ್ಲಿ ಅದೇತರದೋ ಕಾಯಿ ತಿನ್ನುತ್ತ ಮಾಯವ್ವ ಹೊರಟಿದ್ದು ಒಂದು ಸಡಗರವಾದರೆ, ತೋಳಿನಲ್ಲಿ ತೋಳಬಂದಿಯನ್ನಿಟ್ಟುಕೊಂಡು ಗಾಳಿಗೆ ತುರುಬ ಬಿಚ್ಚಿ ಬಿಟ್ಟು ಬಾಳವ್ವ ಬರುತ್ತಿದ್ದುದು ಇನ್ನೊಂದು ಸಡಗರವಾಗಿದೆ. ಒಂದಕ್ಕಿಂತ ಇನ್ನೊಂದು ಮಿಗಿಲು. ಕಣ್ಣಿಗೆ ಹಬ್ಬ, ಮನಕ್ಕೆ ಉಬ್ಬ, ಹೃದಯಕ್ಕೆ ದಿಬ್ಬ! ಇವೇ ಮೂರು ಜೀವನಾನಂದಕ್ಕೆ ಬಿಟ್ಟ ಮೂರು ಎಸಳು, ಮೂರು ಟಿಸಿಲು, ಆ ಬಿಲ್ವಪತ್ರಿ ಶಿವನಮುಡಿಗೆ ಸಲ್ಲುವಂಥದು.

ಎಲ್ಲೆಲ್ಲೂ ಚೆಲುವು

ಗರತಿಯೊಬ್ಬಳು ತನ್ನ ಜೀವದ ಗೆಳತಿಯ ಅಂದವನ್ನು ಅದಾವ ಸಂಭಾರದಲ್ಲಿ ಕಾಣುತ್ತಾಳೆ, ನೋಡಿರಿ-

ಮೂಗುತಿ ಮುಂಭಾರ, ತುರುಬಿನ ಹಿಂಬಾರ |
ಸೇರಿನ ಒಂಕಿ ಕೈಭಾರ | ನನ ಗೆಳತಿ |
ನಾ ಕೊಟ್ಟ ಸೀರಿ ನಿರಿಭಾರ ||

ಮೂಗಿನೊಳಗಿನ ಮೂಗುತಿ, ತಲೆಯ ಹಿಂದಿನ ತುರುಬು ಮುಖದಲ್ಲಿ ಸಮತೋಲವನ್ನು ಕಾಯ್ದುಕೊಂಡರೆ, ಸೇರಿನ ಒಂಕಿ ತೋಳುಗಳಲ್ಲಿ ತೂಕವನ್ನು ಸಾಧಿಸುತ್ತವೆ. ಇನ್ನುಳಿದ ನಿತಂಬವನ್ನು ತೂಗಿಕೊಳ್ಳಲು ಸೀರೆಯ ನೀರಿಗೆ ನೆರವಾದವು. ಗಂಡಿಗೆ ಹೆಣ್ಣು ಮಾಯೆ, ಹೆಣ್ಣಿಗೆ ಗಂಡುಮಾಯೆ, ಒಂದಿಷ್ಟು ಗಂಡಿನ ಚೆಲುವನ್ನು ಏಕೆ ನೋಡಬಾರದು?

ಸಂತೆಯಲ್ಲಿ ಹಾಯ್ದು ಹೋಗುವ ಸಂಪಿಗೆತೆನೆಯಂಥ ಹುಡುಗನನ್ನು ಕಂಡ ಹೆಣ್ಣಿಗೆ ನೋಡಬಾರದು?

ಸಂತೆಯಲ್ಲಿ ಹಾಯ್ದು ಹೋಗುವ ಸಂಪಿಗೆ ತೆನೆಯಂಥ ಹುಡುಗನನ್ನು ಕಂಡ ಹೆಣ್ಣಿಗೆ ಹೀಗನ್ನಿಸುತ್ತದೆ :

ಚಕ್ಕರಗಣ್ಣ ಕೊಕ್ಕರ ಮೀಸಿ | ನಕ್ಕರ ಚಂದ ನನ್ನ ಮುಂದ
ತೊಟ್ಟ ಅಂಗಿ ಹೊತ್ತಶಾಲಿ ಜರತಾರ ||
ಇಂವ ಹತ್ತು ಮಂದ್ಯಾಗ ಮುತ್ತಿನಂಥ ಸರದಾರ |
ಇವನ ಚಿಂತಿಯೊಳಗ ಜೀವಕಿಲ್ಲ ಸ್ಥಿರಾರ ||

ಇದರಲ್ಲಿ ವಾಸ್ತವತೆಗಿಂತ ಕಲ್ಪನೆಯೇ ಹೆಚ್ಚಾಗಿರುವುದು ಸ್ವಾಭಾವಿಕ. ಒಂದು ಮಹತ್ವದ ಪ್ರಸಂಗವನ್ನಾಗಲಿ, ಸಂದರ್ಭವನ್ನಾಗಲಿ, ಪರಿಣಾಮಕಾರಿಯಾಗಿ ಹೇಳುವುದರಲ್ಲಿ ಹೆಣ್ಣು ಮಕ್ಕಳು ನಿಷ್ಣಾತರು. ಅನಾವೃಷ್ಟಿಯ ಬರಗಾಲವೋ, ಅತಿವೃಷ್ಟಿಯ ಹಸಿಗಾಲವೋ ಧುಮ್ಮಿಕ್ಕಿ ಬಂದಾಗ ಒಕ್ಕಲಗೇರಿಯವರು, ಹೊಟ್ಟೆಗಾಗಿ ಮಕ್ಕಳನ್ನು ಮಾರನಿಲ್ಲುವುದು ಅದೆಂಥ ಶೋಚನೀಯ ಸ್ಥಿತಿ! ಮಕ್ಕಳ ಮಾರಾಟದಿಂದ ರೊಕ್ಕವೇನೋ ಕೈಗೆ ಬಂತೆಂದು ತಿಳಿಯುವಾ. ಆದರೆ ಆ ರೊಕ್ಕ ತೆಗೆದುಕೊಂಡು ಧಾನ್ಯ ಕೊಡಬೇಕಾರು? “ಮಕ್ಕಳ ಮಾರಿ ರೊಕ್ಕಾ ಹಿಡಕೊಂಡು ಭತ್ತಂತ ತಿರಗ್ಯಾರೋ ಮಳೆರಾಜ” ಎಂದು ಗೋಳಿಡುವುದು ತಪ್ಪಲಿಲ್ಲ. ಮುಂದಿನ ಹಾದಿ ಉಪವಾಸ, ದುರ್ಮರಣಕ್ಕೆ ಸಿದ್ಧತೆ.

ಒಟ್ಟಿನಲ್ಲಿ ಸುಣ್ಣ ಬೆರಸಿ ಮಾಡಿದ ರೊಟ್ಟಿಯನ್ನು ಹಸಿದ ಮಕ್ಕಳು ಗಪಗಪನೆ ತಿಂದು, ಒದ್ದಾಡಿ ಸತ್ತವು. ಅಕ್ಕಿಯಲ್ಲಿ ಆಪು ಕೂಡಿಸಿ ಕುದಿಸಿದ ಅನ್ನವನ್ನು “ಸಣ್ಣ ಕೂಸಿಗಿ ಮನ್ನಿಸಿ ಉಣಸ್ಯಾರ, ಕಣ್ಣನೇ ಮುಚ್ಚಾವ ಮಳೆರಾಜ” ಎಂದು ತಮ್ಮ ವರದಿಯನ್ನು ಒಪ್ಪಿಸಿದರು. ದುಡಿದು ತಂದು ಹಾಕುವ ಗಂಡನಿದ್ದರೂ, ದುಡಕೊಂಡು ತಿನ್ನುವ ಶಕ್ತಿಯಿದ್ದರೂ “ಗಂಡುಳ್ಳ ಬಾಲೇರು ಭಿಕ್ಷಾಕ ಹೊರಟಾರ” ಎನ್ನುವ ದುರ್ದೆಸೆ ಒದಗಿತು.

ಅನಾಹುತವೆಲ್ಲ ಆಗಿ ಮುಗಿದ ಬಳಿಕ, ಮಳೆರಾಯನಿಗೆ ಕರುಣೆ ಬರುವುದು | ಸ್ವಾತೀ ಮಳೆಯು ಸುತ್ತು ದೇಶದಲ್ಲೆಲ್ಲ ಸುರಿಯುವುದು. ಅದು ಅಟ್ಟ ಮೇಲೆ ಒಲೆ ಉರಿದಂತಾಯಿತು, “ಹಳ್ಳಿಕೊಳ್ಳ ಹೆಣ ಹರಿದಾಡಿ ಹೋದವು, ಯಾವಾಗ ಬಂದೆಪ್ಪ ಮಳೆರಾಜ?” ಎಂದು ಕೇಳುವರೂ ಇಲ್ಲದಾಗಿದ್ದರು.

ಎತ್ತಿನ ಹಾಡು

ಎಂಥ ಭಾವಗೀತೆಯನ್ನಾದರೂ ಹಿಂದೆ ಹಾಕಬಲ್ಲ ಭಾವಗೀತೆಯನ್ನು ಹೆಣ್ಣು ಮಕ್ಕಳು ಹೆಣೆಯಬಲ್ಲರು. ಆ ಮಾತಿಗೆ ಉತ್ತಮ ಉದಾಹರಣೆ ಎಂದರೆ ಎತ್ತಿನ ಹಾಡು. ಹಳೆ ಎತ್ತು ಹೆಗಲು ತೊಳೆದದ್ದು, ಅಂದರೆ ಯಾವ ಕೆಲಸಕ್ಕೂ ಅದು ಉಪಯೋಗವಿಲ್ಲದಂತಾಗಿದೆ. ಕೆಲಸವೇ ಇಲ್ಲವೆಂದಾಗ ಉತ್ತಮ ಮೇವಾದರೂ ಅದಕ್ಕೆ ಹೇಗೆ ಸಿಗಬೇಕು? ಉತ್ತಮ ಮೇವನ್ನು ದುಡಿಯುವ ದನಗಳಿಗಾಗಿ ಕಾದಿಡಲಾಗಿದೆ. ಹಳೆ ತ್ತು, “ನಾ ಹೋಗಿ ಒಂದು ತೆನಿದಂಟ ತಿಂದರ ಕಲು ಕಲ್ಲಿಗೆ ಹೊಡೆದ್ಯೋ | ನಮ್ಮ ಜೀವ ಹೋದಾವ ಕೈಲಾಸಕ” ಎಂದು ಕೃತಜ್ಞನಾದ ಒಕ್ಕಲಿಗನಲ್ಲಿ ಸಂಕಟವನ್ನು ತೋಡಿಕೊಳ್ಳುತ್ತದೆ, “ನಾ ಒಂದು ಬಿತ್ತಿದ | ನಾ ಒಂದು ಬೆಳೆದೀದ |’’ ಹೊಡೆದುಂಟು ತಿನ್ನುವ ಅಧಿಕಾರವಿಲ್ಲವೇ ನನಗೆ? ಒಂದು ಹೊಡೆದಂಟಿಗೆ ಬಾಯಿ ಹಾಕಿದ್ದಕ್ಕಾಗಿ ಬಡಿಗೆಯ ಏಟು ತಿಂದ ಸತ್ತು ಕೈಲಾಸ ಕಾಣಬೇಕಾಗುತ್ತದೆ. ಮೈಗಳ್ಳ ದನಗಳಿಗೆ ಸಮೀಚಿನವಾದ ಹಿಂಡಿ, ಹತ್ತಿಕಾಳು, ಹೊಡೆಹುಲ್ಲು, ಹಸಿಬಾಟಿ | ಕೆಲಸ ತುಸುಮಾಡಿ, ಮೇವು ಹೆಚ್ಚು ಬೇಡುವ ತುಂಡು ದನಗಳಿಗೆ ಮಾತ್ರ ಆಸ್ಥೆವಹಿಸಿ ಮೇಯಿಸುವರಲ್ಲ !” ಹೆಗಲು ತೊಳೆದ ಹಳೆಯ ಎತ್ತಾದರೂ, ಬಿದ್ದರೇಳದ ಮುಪ್ಪು ಅಡರಿದರೂ ತನ್ನಿಂದಾಗುವ ಪ್ರಯೋಜನವೇನು ಕಡಿಮೆಯೇ” ಎತ್ತು ಬಾಯಿ ಬಿಚ್ಚಿ ಎದೆಕರಗುವಂತೆ ಹೇಳುವುದೇನೆಂದರೆ-

ಇಕ್ಕಿದರ ಹೆಂಡಿನಾದಿನ | ಹಚ್ಚಿದರ ಕುಳ್ಳನಾದಿನ |
ದೇವರ ಮುಂದಿನ ಪರಸಾದ ನಾ ಆದೀನ ||
ಸತ್ತರ ತೊಗಲಾದೀನ | ಮೆಟ್ಟಿದರ ಕೆರವಾದೀನ |
ಹೆಗಲ ಮ್ಯಾಲಾಡದಂಥ ಬಾರಕೋಲ ನಾ ಆದೆ |
ಮತ್ತೇತಕಾದೀನ?

ಇಂಥ ಪರಿಸ್ಥಿತಿಯಲ್ಲಿ ಸಾಯದೆಯೂ ನಮ್ಮ ಜೀವ ಕೈಲಾಸ ಕಾಣುತ್ತದೆ ಎನ್ನುವ ಎತ್ತಿನ ಹಾಡು ಸಹೃದಯರ ಅಂತಃಕರಣವನ್ನು ಕರಗಿಸದಿರದು.

ಗರತಿ ಸಂಗವ್ವ

ನಿರಕ್ಷರಿಗಳೆನಿಸುವ ಹೆಂಗಳೆಯರಾಗಲಿ, ಸಾಮಾನ್ಯ ಜನರಾಗಲಿ ಸಹಜವಾಗಿಯೇ ಭಾವುಕರಾಗಿದ್ದಾರೆ. ಸುಸಂಸ್ಕೃತ ರಕ್ಕಸ ವೃತ್ತಿಗೆ ಕಾರಣವಾಗಬಲ್ಲ ಸಾಕ್ಷರತೆಯು ಅವರ ಹತ್ತಿರ ಸುಳಿದಿರಲಾರದು. ಕತ್ತಿ ಧಾರೆಯ ಮೇಲೆ ನಡೆದಂತೆ ನೀತಿಯನ್ನು ಅನುಸರಿಸುವುದರಲ್ಲಿ ಅವರ ಸಮಾನರು ಇನ್ನಾರೂ ಇಲ್ಲವೆನ್ನಬೇಕು. ಅವರದೇ ರಚನೆಯಾದ ಗರತಿ ಸಂಗವ್ವನ ಹಾಡು, ಎಂಥವರ ಮನವನ್ನೂ ಬೆರಗುಳೊಸುವಂತಿದೆ. ಎಡಗೈಯಲ್ಲಿ ಸಿಂಬಿಯನ್ನೂ, ಬಲಗೈಯಲ್ಲಿ ಕೊಡವನ್ನೂ ಹಿಡಿದುಕೊಂಡು, ಸಂಗವ್ವನು ನೀರು ತರುವುದಕ್ಕೆ ಹೊಳೆಯತ್ತ ಸಾಗಿದ್ದಾಳೆ. ಆಕೆಯನ್ನು ಕಂಡು ಕಿತ್ತೂರ ದೊರೆಯ ಮನಸ್ಸು ಚಂಚಲಗೊಳ್ಳುವುದು. ಆಕೆಯನ್ನು ದಾರಿಯಲ್ಲಿ ತಡೆದು, “ಹತ್ತೂರು ಕೊಡತೀನೆ ಮೊಗದೋರು” ಎಂದು ಅಂಗಲಾಚುವನು. ಅದಕ್ಕೆ ಸಂಗವ್ವನು ಕೊಟ್ಟ ಉತ್ತರವೆಂಥದು?

ಹತ್ತೂರು ಕೊಟ್ಟರು ನತ್ತೀನ ಬೆಲೆಯಲ್ಲ |
ಅತ್ತೀ ಹೊಟ್ಟೇಲಿ ಅರ್ಜುನೋ ||
ಅತ್ತಿಯ ಹೊಟ್ಟೇಲಿ ಅರ್ಜುನನ ಕಾಲನ್ನ |
ಮೆಟ್ಟಿನ ಬೆಲೆಯು ನಿನಗಿಲ್ಲ ||

ಆ ಮರುನುಡಿಯನ್ನು ಕೇಳಿ ದೊರೆಯ ಪ್ರಾಣವು ನೆತ್ತಿಯಿಂದಲೇ ಹಾರಿಹೋಗಿರಬಹುದು! ಅಂದರೆ ಅಂಥ ಮಾತನಾಡಿದ ಸಂಗವ್ವನ ಹೊಟ್ಟೆಯಲ್ಲಿಯೂ ಸಾಸಿವೆ ಹೊಯ್ದಂತೆ ತಳಮಳ ಆಗದಿರಲಿಲ್ಲ. ಮನೆಗೆ ಬಂದವಳೇ ಸಂಗವ್ವ ತಲೆಕಟ್ಟಿ ಮಲಗುವಳು, ಮಾವಯ್ಯ ಬಂದು ಕೇಳಿದರೆ- “ಕಾಲು ಬ್ಯಾನಿ, ಕೈ ಬ್ಯಾನಿ, ಹಲವು ಚಿತ್ತರದ ಬ್ಯಾನಿ, ಮಾವಯ್ಯ ಸಾವುತೀನಿ, ತವರೀಗಿ ಸುದ್ದಿ ಕಳುಹಿಸಿರಿ” ಎನ್ನುತ್ತಾಳೆ. ಗಂಡ ಕೇಳಿದರೆ ಆತನಿಗೂ ಅದೇ ಹೇಳುತ್ತಾಳೆ. ಆಕೆಯ ತಾಯಿ ತಂದೆಗಳು ಇದ್ದಕ್ಕಿದ್ದ ಹಾಗೆ, ಸಂಗವ್ವ ತೀರಿಕೊಂಡಳೆಂಬ ಸುದ್ದಿ ಕೇಳುತ್ತಾರೆ. ಚಂಡು ಹೂವಿನ ದಂಡೆಯನ್ನು ಸಂಗವ್ವನ ತಲೆಗೆ ಮುಡಿಸಿ, ಬಾಳೆಯ ಬನದಲ್ಲಿ ಆಕೆಯ ಅಂತ್ಯಕ್ರಿಯೆ ಮಾಡಲಾಗುತ್ತದೆ. ತನ್ನವರಿಗೆ ಬರಬಹುದಾದ ಅರಸು ಕೇಡುಗಳನ್ನು ಮೊದಲೇ ಕಲ್ಪಿಸಿಕೊಂಡು, ವಿಷನುಂಗಿ ಅಸುನೀಗಿ ಭವಿಷ್ಯವನ್ನು ನಿರಾತಂಕಗೊಳಿಸಿದಳು.

ಮಹಾಕಾವ್ಯದ ಮಿಂಚುಗೆರೆ

ರಾಮಾಯಣದಂಥ ಅಮರಕಾವ್ಯವನ್ನು ಬರೆದ ವಾಲ್ಮೀಕಿಯ ಕಲ್ಪನೆಗೂ ನಿಲುಕದ ಮಾತು, ಸಂಗವ್ವನಂಥ ಗರಗಿತೆ ಮಾತ್ರ ಹೊಳೆಯಬಲ್ಲದು. “ಅಡವಿ ಆರ್ಯಾಣದಾಗ ಹಡೆದಾಳ ಸೀತಾದೇವಿ ತೊಡಿಯ ತೊಳಿಯಾಕ ನೀರಿಲ್ಲ ಹನುಮಂತ, ಸೇತುಕಟ್ಯಾನ ಸಮುದರಕ ಎನ್ನುವ ಈ ಮಾತು ಸಣ್ಣದಲ್ಲ. ಅವನಿಜಾತೆಗೆ ಒಂದು ಹೆರಿಗೆಯ ಪ್ರಸಂಗದಲ್ಲಿ ತೊಡೆಯನ್ನು ತೊಳೆಯುವುದಕ್ಕೆ ನೀರಿಲ್ಲವೆಂದರೆ ಅದೆಂಥ ಅಸಹಾಯಕಸ್ಥಿತಿ! ಅಂಥ ಘೋರ ಸಂದರ್ಭವನ್ನು ಲಕ್ಷ್ಯಕ್ಕೆ ತಂದುಕೊಟ್ಟ ಗರತಿ ಅದಾವ ಕವಿಗೆ ಕಡಿಮೆ? “ಜನಕರಾಯನ ಮಗಳು ಬನಕ ತೊಟ್ಟಿಲ ಕಟ್ಟಿ ಲವಕುಶರನ್ನು ಹಡೆದಾಳೋ” ಎಂಬ ಮಾತಿಗೆ ತಳಮಳಿಸದ ಹೃದಯವು ಹೃದಯವೇ ಅಲ್ಲ. ಜನಕರಾಯನಂಥ ರಾಜರ್ಷಿಯ ಮಗಳು, ಶ್ರೀರಾಮಚಂದ್ರನಂಥ ಅವತಾರಿ ಪುರುಷನ ಹೆಂಡತಿ ಎನಿಸಿದ ಸೀತಾದೇವಿ ಹಡೆದಾಗ ತೊಟ್ಟಿಲು ಕಟ್ಟುವದಕ್ಕೆ ಮುರುಕಮನೆ ಸಹ ಸಿಗದೆ, ಕಟ್ಟಡವಿಯೊಳಗಿನ ಒಂದು ಗಿಡವನ್ನು ಆಶ್ರಯಿಸಬೇಕಾಯಿತು.

ವ್ಯಂಗದ ಮಾದರಿ

ಹೃದಯದ್ರಾವಕ ಸನ್ನಿವೇಶವಗಳನ್ನು ಶಬ್ದಗಳಲ್ಲಿ ಚಿತ್ತಿಸಬಲ್ಲವಳು, ದಿನನಿತ್ಯದ ಸಂದರ್ಭಗಳಲ್ಲಿ ಕಂಡುಬರುವ ಕೊಂಕು ಕೊರತೆಗಳನ್ನು ಇದ್ದಕ್ಕಿದ್ದ ಹಾಗೆ ರೇಖಿಸಿ, ವ್ಯಂಗ್ಯವನ್ನು ತೋರಿಸುವ ಚಳಕವನ್ನೂ ಪಡೆದಿದ್ದಾಳೆ.

ಎಲ್ಲರಂತೆ ತನ್ನ ಹೆಂಡತಿ ನೂಲಬೇಕೆಂಬ ಕಕ್ಕುಲತೆಯುಳ್ಳ ಗಂಡನು ತನ್ನ ಹೆಂಡತಿಗೆ ಕೇಳುತ್ತಾನೆ. “ನೂಲೋಲ್ಯಾಕ ಚೆನ್ನಿ?” ಎಂದು, ಆಕೆ ರಾಟಿಯಿಲ್ಲವೆಂದಾಗ, ಆತನು ಮನೆಯೊಳಗಿನ ಬಂಡಿಯನ್ನು ಮುರಿಸಿ, ರಾಟಿಯನ್ನು ಮಾಡಿಸಿಕೊಟ್ಟು ನೂಲಲು ಹೇಳುತ್ತಾನೆ. ಹೆಂಡತಿಗೆ. ಈ ಸಾರೆ “ಕದಿರಿಲ್ಲೋ ಜಾಣ” ಎನ್ನುವ ಕಾರಣವನ್ನು ಮುಂದೆ ಮಾಡುತ್ತಾಳೆ. ಆಗ ಗಂಡನು ಮನೆಯೊಳಗಿನ ಹಾರಿಯನ್ನು ಮುರಿಸಿ, ಕದಿರು ಮಾಡಿಸಿಕೊಟ್ಟರೆ, ಚಿಲ್ಲ ಇಲ್ಲವೆನ್ನುತ್ತಾಳೆ. ಗಂಡನು ಚಿಲ್ಲುಮಾಡಿಸಿಕೊಡುತ್ತಾನೆ. ಆಮೇಲೆ ಕಟ್ಟೆ, ಜೊತೆಗಾರ್ತಿಯರು, ಗುಗ್ಗರಿ, ಇವು ಕ್ರಮವಾಗಿ ಮುಂದೆ ಬರುತ್ತವೆ. ಅದಕ್ಕಾಗಿ ಊರ ಒಡ್ಡರನ್ನು ಕರೆಯಿಸಿ ಕಟ್ಟೆಯನ್ನು ಕಟ್ಟಿಸಿ ಕೊಡುತ್ತಾನೆ. ಕೇರಿಯೊಳಗಿನ ಅಕ್ಕ-ತಂಗಿಯರನ್ನು ಕೇಳಿಕೊಂಡು, ಹೆಂಡತಿಗೆ ಜೊತೆಗಾರ್ತಿಯರನ್ನು ಒದಗಿಸುತ್ತಾನೆ. ಗೋದಿ, ಕಡಲೆ ತರಿಸಿ ಗುಗ್ಗರಿ ಹಾಕಿಸಿ ಕೊಡುತ್ತಾನೆ. ತರುವಾಯ “ನೂಲೋಲ್ಯಾಕ ಚೆನ್ನಿ?” ಎಂದು ಕೇಳಿದರೆ, “ಬರೂದಿಲ್ಲೋ ಜಾಣ” ಎಂದು ಮರುನುಡಿಯುವಳು. ಆತನು ನಿರುಪಾಯನಾಗುತ್ತಾನೆ. ಇದೊಂದು ವ್ಯಂಗ್ಯದ ಮಾದರಿ.

ಮುಖ್ಯವಾಗಿ ಬೇಕಾದದ್ದು ಕೆಲಸ ಮಾಡುವ ಒಲವು. ಅದೇ ಇಲ್ಲದಲ್ಲಿ ಹೊರಗಿನ ಸಲಕರಣೆಗಳನ್ನು ಅದೆಷ್ಟು ಒದಗಿಸಿದರೂ, ಪ್ರಯೋಜನವಿಲ್ಲ.

ಸಂಸಾರಿಗ ಶಿವ

“ದೇವರು ಮನುಷ್ಯನನ್ನು ತನ್ನಂತೆ ಮಾಡಿಕೊಳ್ಳಬೇಕೆಂದು ಯೋಚಿಸುವಷ್ಟರಲ್ಲಿ, ಮನುಷ್ಯನು ದೇವನನ್ನೇ ತನ್ನಂತೆ ಮಾಡಿಕೊಂಡಿಬಿಟ್ಟನು” ಎಂದು ಗಾಂಧಿಯವರು ಹೇಳುತ್ತಾರೆ. ಜನಪದವು ಶಿವನನ್ನೂ ಸಂಸಾರಿಗನನ್ನಾಗಿ ಮಾಡಿಟ್ಟಿದೆ. ಇಬ್ಬರು ಹೆಂಡಿರು, ಸವತಿಯಲ್ಲಿ ಕಲಹ ಮಕ್ಕಳ ಮೇಲಾಟ-ಇವೆಲ್ಲ ಶಿವನ ಸಂಸಾರದಲ್ಲಿ ಹಣಕಿಹಾಕಿವೆ. ಹೆಂಡಿರು ತವರು ಮನೆಗೆ ಹೋಗುತ್ತಾರೆ, ಬರುತ್ತಾರೆ; ಬರುವಾಗ ತವರುಮನೆಯಿಂದ ಹಲವು ವಿಧದ ಉಡುಗೊರೆಗಳನ್ನು ತರುತ್ತಾರೆ. ತಂದವರು ತಮ್ಮ ತವರುಮನೆಯ ಹೆಗ್ಗಳಿಕೆಯನ್ನು ಹೇಳಿಕೊಳ್ಳುತ್ತಾರೆ. ಮಾನವ ಸಂಸಾರವನ್ನು ಹಿಂದೂಡುವಂಥದಾಗಿರುತ್ತದೆ ಶಿವನ ಸಂಸಾರ!

ಒಮ್ಮೆ ಶಿವನ ಹೆಂಡತಿ ಗೌರಿ ತನ್ನ ತವರುಮನೆಗೆ ಹೋಗಿ ಬಂದಳು. ಬರುವಾಗ ತವರವರು ಕೊಡಮಾಡಿದ ಉಡುಗೊರೆಗಳ ವಿವರಗಳನ್ನು ಹೇಳಿಯೇ ಹೇಳಿದಳು; ಹನುಮನ ಬಾಲದಂತೆ ಅದು ಬೆಳೆದೇ ಬೆಳೆಯಿತು. ಆದರೆ ಮಾತಿಗೊಮ್ಮೆ “ನಮ್ಮವರು ಬಡವರು, ಇನ್ನೇನು ಕೊಟ್ಟಾರು” ಎಂಬ ಒಳಜಂಭವನ್ನೂ ಮೆರೆಯಿಸುವಳು.

“ಹಿರಿಪಿಲ್ಲಿ –ಕಿರಿಪಿಲ್ಲಿ, ಉಂಗುರ –ಪೈಜಣ, ಕಾಳಸಳಿ-ಒಡ್ಯಾಣ, ಗೆಜ್ಜಿಯ ಸರ-ಟೀಕೆ, ವಜ್ಜರದ ಮೇಲ್ಬುಗುಡಿ, ಹರಳು ಬಂಗಾರದ ಮೂಗುತಿ, ಸರಪದಕ” ಇವು ವಸ್ತು ಒವಡೆಗಳಾದವು. “ಹಂಡೆ, ಕೊಡಪಾನ, ತಪ್ಪೇಲಿ, ತಂಬಿಗೆ, ಹರಿವಾಣ, ಅಲ್ಲದೆ, ನಿಂಬೀಬಣ್ಣದ ಸೀರೆ, ಪಟ್ಟೆ ಪೀತಾಂಬರ, ಮಂಚ” ಮತ್ತು “ಮೂರು ಹೇರು ಸಣ್ಣಕ್ಕಿ, ಆರು ಹೇರು ದೊಡ್ಡಕ್ಕಿ, ಮೂರು ಹೇರು ಬೆಲ್ಲ, ಎಮ್ಮೆ-ಆಕಳು ನೂರು, ಅವುಗಳನ್ನು ಕಾಯಲು ಗೊಲ್ಲರು. ನೂರುಜನ ದಾಸಿಯರು, ಒಂಟೆ ಆನೆಯ ಸಾಲು, ಛತ್ರ ಚಾಮರ ಹಿಡಿದು ಹೊಗಳುವ ಭಟ್ಟಂಗಿಗಳು…”.

ಮುಗಿಯದ ಈ ಯಾದಿಯನ್ನು ಕೇಳಿ ಬೇಸತ್ತು “ನೆಚ್ಚಿನ ಮಗಳೆಂದು ಇಷ್ಟೆಲ್ಲ ನಿನಗೆ ಮುಚ್ಚಿಕೊಟ್ಟರು ಆದರೆ ನನಗೇನು ಕೊಟ್ಟರು”? ಎಂದು ಶಿವನು ಪ್ರಶ್ನಿಸಿದನು.

“ಈ ಎಲ್ಲ ಸರಂಜಾಮದೊಡನೆ ನನ್ನನ್ನೇ ನಿಮಗೆ ಧಾರೆಯೆರೆದು ಕೊಟ್ಟಿದ್ದಾರೆ” ಎಂದು ಗೌರಿ ಮರುನುಡಿದಳು.

ಮೀನಿನ ಹೆಜ್ಜೆ

ಹೆಂಗಸಿನ ನೆಲೆ, ನೀರ ನೆಲೆ ಯಾರಿಗೂ ತಿಳಿಯಲಾರವೆಂದು ಗಂಡಸಿನ ಆಪಾದನೆ. ಆದರೆ ಗಂಡರಲ್ಲಿಯೂ ಇಬ್ಬಗೆಯುಂಟು.

ಅರ್ಧರಾತ್ರಿ ಕಳೆದರೂ ಪತಿ ಮನೆಗೆ ಬಂದಿರಲಿಲ್ಲ. ಮನೆಯಲ್ಲಿ ಒಬ್ಬೊಂಟಿಗಳಾದ ಸತಿ ಪತಿಯ ದಾರಿಯನ್ನೇ ನೋಡುತ್ತ ಹಾಸಿಗೆಯಲ್ಲಿ ಹೊರಳಾಡುತ್ತಿದ್ದಳು. ಪತಿ ಬಂದಾಗ ಕಡೆಗೊಮ್ಮೆ ಹೆಂಡತಿ ಆತನನ್ನು ಮೊದಲು ಬರಮಾಡಿಕೊಂಡು, ಬಳಿಕ ಕೇಳುತ್ತಾಳೆ.

“ನೀವೆಲ್ಲಿ ಹೋಗಿ ಬಂದ್ರಿ? ನೀವೆಲ್ಲಿ ಆಡಿ ಬಂದ್ರಿ?” ಆತನು ನಯವಾಗಿಯೇ ಮರುನುಡಿಯುತ್ತಾನೆ “ಜಾಣೀ, ಬೆಟ್ಟಂಬು ಬ್ಯಾಸಗಿ, ಕಣ್ಣಿಗೆ ನಿದ್ದಿಲ್ಲ, ತನುಗಾಳಿಗೆ ಹೋಗಿದ್ದೆವು” ಆದರೆ ನೀರಲ್ಲಿ ಮೀನಹೆಜ್ಜೆಯನ್ನು ಗುರುತಿಸಬಲ್ಲ ಹೆಂಡತಿ ಅಷ್ಟಕ್ಕೆ ಬಿಡಲಿಲಲ. ಮತ್ತೆ ಕೇಳುತ್ತಾಳೆ.

“ಎದೆಯ ಮೇಲೆ ಎಳೆಯ ಚಂದ್ರಮನಂತೆ ಗಾಯಮೂಡಿವೆ. ಅದೆಲ್ಲಿ ಹಾಯ್ದು ಬಂದಿರರಿ”

ಒಂದು ಸುಳ್ಳನ್ನು ಸತ್ಯಮಾಡುವ ಭರದಲ್ಲಿ ಗಂಡನು ನೂರು ಸುಳ್ಳನ್ನು ಪವಣಿಸುತ್ತಾನೆ.

“ಬಾಳೆಯ ಬನದಲ್ಲಿ ಹಾದು ಬರುವಾಗ ಬಾಳೆಯ ಗರಿ ತಾಕಿವೆ”

“ಹುಬ್ಬ ಹುಬ್ಬಿನ ಗಾಯ, ಹುಬ್ಬೆಲ್ಲ ಚಿವುರುಗಾಯ, ಇವೇನು?”

“ತೋಟದೊಳಗಿನ ನೀಟುಳ್ಳ ಗಜನಿಂಬಿಯ ಗರಿ ತಾಕಿವೆ”

“ನಾರಿಯರು ಹಚ್ಚುವ ಹಲ್ಲುಪುಡಿ, ನಿಮ್ಮ ಹಲ್ಲಿಗೇಕೆ?”

“ಗೊಲ್ಲರೋಣಿಯಲ್ಲಿ ಹಾದು ಬರುವಾಗ ಅವರು ಹಲ್ಲಿಗೆ ತಂದು ಒರೆಸಿದ್ದಾರೆ”

“ಹತ್ತುವಾರಿನ ಹೂವಿನಶಾಲು ಮಾಸಿದೆಯೇಕೆ? ಇಷ್ಟೇಕೆ ಬೆವೆತಿರುವಿರಿ?”

“ಗರಡಿಯ ಮನೆಯಲ್ಲಿ ಸಾಮು ತೆಗೆಯುವಾಗ ನಸು ಬೆವರುಬಿಟ್ಟಿದೆ”

“ಮುತ್ತಿನ ನಡಕಟ್ಟು ಮಾಸಿದೆಯಲ್ಲ!”

“ಚಂಡಾಟ ಆಡುವಾಗ ಕೃಷ್ಣರು ಬಂದು ಹಿಡಿವಾಗ ಬಿದ್ದುದರಿಂದ ಮಾಸಿರಬೇಕು. ಎಷ್ಟೆಂದು ಹೇಳಲಿ, ಎಷ್ಟೆಂದು ಕೇಳುವಿ? ಕೃಷ್ಣರ ದೇಶಕ್ಕೆ ಹೋಗಿದ್ದೆವು | ಬಹಳ ಬಹಳ ಮಾತಾಡುವಿ. ಬಾಯಿಪಾಠದಲ್ಲಿ ಕೆಡುನುಡಿ ಆಡುವಿ. ಏಟಿಗೆ ಬಂದಿರುವಿ, ಊರ ಹೊರಗಿನ ನಿಠೆಯುಳ್ಳ ಹನುಮನ ಮುಂದೆ ಆಣೆಮಾಡೋಣ ನಡೆ.”

ಮೊದಲಿಗೆ ಹುಳ್ಳಹುಳ್ಳಗಾದ ಕಳ್ಳನ ಜೀವ, ಕೈಲಾಗದಕ್ಕೆ ಮೈ ಮೈ ಹರಕೊಳ್ಳುವುದಂತೆ, ಕೊನೆಯಲ್ಲಿ ಆಣೆಮಾಡಿ ಸತ್ಯವಂತನೆಂದು ತೋರ್ಪಡಿಸುವ ಎತ್ತುಗಡೆ ನಡೆಸುವನು. ಆದರೆ ಆಣೆಗೆ ಆಣೆಯಿಲ್ಲ, ಕುದುರೆಗೆ ಕೋಡು ಇಲ್ಲ!