ಮಹಾತ್ಮಾಗಾಂಧಿಯವರು ಇಡಿಯ ಜೀವನವನ್ನೇ ಯೋಗ ಕ್ಷೇತ್ರವನ್ನಾಗಿಸಿಕೊಮಡು ಜೀವನ ಯೋಗಿಗಳಾದರು. ಆದ್ದರಿಂದ ಅವರ ಮಾತು, ಕೃತಿ, ಬರವಣಿಗೆ, ಉಸಿರಾಟಗಳೆಲ್ಲ ಯೋಗಸಾಧನದ ಹೋರಾಟವಾದವು; ಆತ್ಮಾನುಸಂಧಾನಕ್ಕೆ ಸಾಧಕಗಳಾದವು. ಅಂತೆಯೇ ಅವರು ಬರೆದುದು ಸಾಹಿತ್ಯವಾದಂತೆ, ಬರೆದುದೂ ಸಾಹಿತ್ಯವಾಗಿ ಪರಿಣಮಿಸಿತು.

ಗಾಂಧಿಯವರ ಜೀವನವು ಸಾಹಿತ್ಯ ವಸ್ತುವಾಗಿ, ನಾಗರಿಕ ಸಾಹಿತ್ಯ ನಿರ್ಮಿತಿಗೆ ಕಾರಣವಾದಂತೆ, ಲೋಕಸಾಹಿತ್ಯ ನಿರ್ಮಿತಿಗೂ ಕಾರಣವಾಯಿತು. ಆದರೆ ಗಾಂಧಿಯವರನ್ನು ಕುರಿತ ನಾಗರಿಕ ಸಾಹಿತ್ಯ ನಿರ್ಮಿತಿಗೆ ಕಾರಣವಾದಂತೆ, ಲೋಕಸಾಹಿತ್ಯ ನಿರ್ಮಿತಿಗೂ ಕಾರಣವಾಯಿತು. ಆದರೆ ಗಾಂಧಿಯವರನ್ನು ಕುರಿತ ನಾಗರಿಕ ಸಾಹಿತ್ಯವು ವಿಫುಲವಾಗಿ ನಿರ್ಮಾಣವಾದಂತೆ, ಲೋಕಸಾಹಿತ್ಯವು ಅದೇಕೋ-ವಿಪುಲವ್ಯಾಪ್ತಿ ನಿರ್ಮಾಣಗೊಳ್ಳಲಿಲ್ಲ.

ಸ್ವಾತಂತ್ರ್ಯ ಪೂರ್ವದ ಗಾಂಧೀಜಿ ಜೀವನವು ತೀರ ಸಾಮಾನ್ಯರಲ್ಲಿಯೂ ಪ್ರಚೋದನವನ್ನು ಬಿತ್ತಿತು; ಆದರ್ಶವನ್ನು ಮೂಡಿಸಿತು. ಅಂದು ಗಾಂಧೀಜಿಯಿಂದ ಪ್ರಚೋದನೆಗೊಳ್ಳುವುದೆಂದರೆ ಮಹಾಗಂಡಾಂತರದ ಕೆಲಸವೇ ಆಗಿತ್ತು. ಸೆರೆಮನೆಯ ಶಿಕ್ಷೆ, ಆಸ್ತಿಪಾಸ್ತಿಗಳ ಮುಟ್ಟುಗೋಲು ಲಾಠಿಯ ಏಟು, ಗುಂಡಿನೆಸೆತಗಳಿಗೆ ಈಡಾಗಲು ಸಿದ್ಧರಾಗಬೇಕಿತ್ತಲ್ಲದೆ ತನ್ನ ಹಾಗೂ ತನ್ನವರ ಅವಮಾನದಂಥ ದುರ್ಧರ ಪ್ರಸಂಗವನ್ನೂ ಎದುರಿಸಲು ಅಣಿಯಾಗಬೇಕಾಗುತ್ತಿತ್ತು. ಇಷ್ಟಾದರೂ ಸ್ವರಾಜ್ಯವಾಗಲಿ, ಸ್ವಾತಂತ್ರ್ಯವಾಗಲಿ ಅಯ್ಯನ ಜೋಳಿಗೆಯೊಳಗಿನ ಹೋಳಿಗೆಯೇ ಆಗಿತ್ತು.

ಸೆಲೆಯೊಡೆದ ಸಾಹಿತ್ಯ

ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿಯವರನ್ನು ಕುರಿತು ಸಾಹಿತ್ಯ ನಿರ್ಮಣಗೊಂಡಿದ್ದರಲ್ಲಿ ಲೋಕಸಾಹಿತ್ಯವು ಸಾಕಷ್ಟಿದೆ. ಲೋಕಸಾಹಿತ್ಯವೆಂದರೆ ಸಾಮಾನ್ಯವಾಗಿ, ಸಾಮಾನ್ಯ ಜನರು ರಚಿಸಿದ ಸಾಹಿತ್ಯವೆಂದೇ ಹೇಳುವ ವಾಡಿಕೆಯಿದೆ. ಗಾಂಧಿಯವರನ್ನು ಕುರಿತ ಲೋಕಸಾಹಿತ್ಯದಲ್ಲಿ ಸಾಮಾನ್ಯರು ರಚಿಸಿಕೊಂಡ ಸಾಹಿತ್ಯ ಹಾಗೂ ಸಾಮಾನ್ಯ ಜನರಿಗಾಗಿ ರಚಿತವಾದ ಸಾಹಿತ್ಯ ಎಂದು ಎರಡು ವಿಧಗಳಿವೆ.

ಸೂರ್ಯನ ಹೊಳಪಿಗೆ ಮೂಗುವಡುವಂತೆ, ಆತನ ಪ್ರಕಾಶಕ್ಕೂ ಬೆರಗುಬಿಡುತ್ತೇವೆ. ಸ್ವಯಂ ಗಾಂಧಿಯವರನ್ನು ಕುರಿತ ಸಾಹಿತ್ಯದೊಡನೆ, ಗಾಂಧಿಯವರ ಪ್ರಭಾವವನ್ನು ಕುರಿತು ಸಾಹಿತ್ಯವೂ ತಲೆಯೆತ್ತಿತ್ತು; ಮೈದೋರಿತು. ಹುಡುಗರು ಬೆರೆದರು; ಹೆಂಗಸರು ಬೆರೆದರು. ಪ್ರೌಢರು ಉಸುರಿದರು. ಹುಡುಗರಿಗಾಗಿ, ಹೆಂಗಸರಿಗಾಗಿ ಎನ್ನದೆ ಸಕಲರಿಗಾಗಿ ಗಾಂಧಿಯವರನ್ನು ಕುರಿತ ಸಾಹಿತ್ಯ-ಸೆಲೆಯೊಡೆಯಿತು.

ಶರಣರು ಮೋಹನದಾಸಗೆ

ಮೋಹನದಾಸನು ಮಹಾತ್ಮನೂ ಆಗಿಬಿಟ್ಟರೆ, ಕಾಣಿಸಿಬಿಟ್ಟರೆ ಅದಾರು ಶರಣು ಅನ್ನುವದಿಲ್ಲ? ಸಾಮಾನ್ಯರಂತೂ ಮೆಚ್ಚಿಯೇ ತೀರುವರೆಂದಮೇಲೆ, ಸಾಮಾನ್ಯವಾಗಿ ಮೆಚ್ಚುಗೆ ತೋರುವವರೆಲ್ಲರೂ ಸಾಮಾನ್ಯರೇ ಅಹುದಲ್ಲವೇ? ಧಾರವಾಡದ ಗೆಳೆಯರ ಗುಂಪಿನವರಾದ ದಿ. ಖಾನೋಳಕರ ಅವರು ಅಂದು ಹಾಡಿದ, ಗಾಂಧಿಯವರಿಗೆ ಶರಣು ಎಂಬ ಹಾಡು ಹೀಗಿದೆ-

ಶರಣು ಮೋಹನದಾಸಗೆ | ಶರಣು |
ಶರಣು ಮೋಹನದಾಸಗೆ || ಪ ||
ಶರಣು ಶರುಣವ ಸುರಿವ ತರಣಿಗೆ
ಶರಣು ಭಾರತ ತನಯಗೆ || ಅ. ಪ.||
ಧರ್ಮವೇ ತಳಹದಿಯು ಕರ್ಮಕೆ
ಕರ್ಮವೇ ತಳಹದಿಯು ಧರ್ಮಕೆ
ಧರ್ಮದಿಂದಲೇ ಪಾರತಂತ್ರ್ಯದ
ಮರ್ಮಹಿಂಗುವುದೆಂಬ ವೀರಗೆ || ೧ ||

ಅರೆಮೈ ಬತ್ತಲೆಯಾಗಿರುವ ಗಾಂಧೀಜಿಯವರನ್ನು ಕಂಡು, ಒಬ್ಬ ಮಗುವು ಆತ್ಮೀಯತೆಯಿಂದ ಅಜ್ಜನನ್ನು ಮಾತಾಡಿಸುವ ರೀತಿಯಲ್ಲಿ ಈ ಕೆಳಗಿನ ಕೃತಿಯನ್ನು ಓದಿಕೊಳ್ಳಬಹುದು. ಇದು ಶ್ರೀ ಹೊಯಿಸಳರ ರಚನೆ.

ಬಾಪೂಜಿ! ಬಾಪೂಜೀ! ಬರಿಮೈಲಿದ್ದೀಯಾ?
ಚಳಿಯಿಲ್ಲವೆ ನಿನಗೆ? ಮಳೆಯಿಲ್ಲವೆ ನಿನಗೆ?
ನಾನು ಬೆಳೀತೇನೆ, ಹತ್ತೀ ಬೇಳಿತೇನೆ
ನೂಲು ತೆಗಿತೇನೆ, ಅರಿವೆ ನೆಯ್ಯುತೇನೆ
ನಾನು ಮಾಡಿದ್ದು ಅಂತ ತಂದು ಕೊಡ್ತೇನೆ
ಉಟ್ಟುಗೊಂತಿಯಾ? ತೊಟ್ಟಗೊಂತಿಯಾ?
ಬೆಚ್ಚಗಿರತೀಯಾ?

ತುಂಡು ಪಂಚೆಯನ್ನುಟ್ಟು, ಬರಿ ಮೈ ಬೊಕ್ಕತಲೆಯಲ್ಲಿ ನಿಂತ ಗಾಂಧಿ ಕೈಯಲ್ಲಿ ಕೋಲು, ಕಣ್ಣಿಗೆ ಕನ್ನಡ, ಕೊರಳಿಗೆ ಗಡಿಯಾರ. ಬೊಕ್ಕತಲೆಯ ಬೊಕ್ಕಡ ತಲೆಯೂ ಆಗಿದೆ. “ನಕ್ಕವರ ಹಲ್ಲು ಕಾಣಿಸುವವು” ಎಂಬ ಲೋಕೋಕ್ತಿಯನ್ನು ಸುಳ್ಳು ಮಾಡುವುದಕ್ಕೆ ನಗುತ್ತಿರುವ ಬಚ್ಚ ಬಾಯಿಯಿದೆ. ಆಧುನಿಕ ಯಂತ್ರಶಕ್ತಿಯನ್ನು ವಿರೋಧಿಸಿದರೂ ಕನ್ನಡವನ್ನೂ ಗಡಿಯಾರವನ್ನೂ, ಆಧರಿಸಿ ಧರಿಸಿಕೊಂಡಿದ್ದಾರೆ. ಇಂಥದೊಂದು ಗಾಂಧಿ ಚಿತ್ರವನ್ನು ತೂಗುಹಾಕಿ, ಉಪಾಧ್ಯಾಯನು ಮಕ್ಕಳಿಗೆ ಅದನ್ನು ತೋರಿಸುತ್ತ ಗಾಂಧಿ ಪರಿಚಯವನ್ನು ಒಂದು ಕವನದ ಮೂಲಕ ಮಾಡಿಕೊಡುತ್ತಾನೆ.

ಬೆರಗಾಗಿ ನಿಂತಿತ್ತು ಜನ

ಕಾಣುವುದಕ್ಕೆ ಗಾಂಧಿ ಮುಪ್ಪಿನ ಮುದುಕ; ನಗೆಮೊಗದಾರ್ಯ; ನಾಡಿಗೆ ಅಜ್ಜ. ಆದರೆ ಆತನ ಚಟುವಟಿಕೆ, ಉತ್ಸಾಹ, ದಣಿಯದ ಬಲ ಇವುಗಳನ್ನು ಕಂಡವರು ಅದಕ್ಕೆ ಲೀಲೆ ಅಂದರು; ಬಾಲಲೀಲೆ ಅಂದರು, ಆಂಜನೇಯನ ಅಗಾಧವಾದ ಚಟುವಟಿಕೆಗಳನ್ನು ವರ್ಣಿಸುತ್ತ ಪುರಂದರದಾಸರು “ಕೂಸಿನ ಕಂಡಿರಾ” ಎಂದು ಕೇಳುವಂತೆ ಹಾಡಿದರು. ಗಾಂಧಿ ಅವರ ನಗೆಮೊಗ, ಸರಳಮನ, ಸರ್ವರ ಮೇಲಿನ ಪ್ರೀತಿ ಕಂಡವರಿಗೆ, ಅವರೊಂದು ಕೂಸಿನಂತೆ ತೋರದಿರಲಾರರು. ಗುಡೂರಿನ ರುದ್ರಾರಾದ್ಯಶಾಸ್ತ್ರಿ ಯಾವಗಲ್ಲಮಠ ಅವರ ಈ ರಚನೆ ಅದೇ ದೃಷ್ಟಿಯಲ್ಲಿ ರಚಿಸಿದ್ದಾಗಿದೆ. ಇದೊಂದು ಜೋಗುಳ ಹಾಡು-

ಜೋ ಜೋ ಎನ್ನ ಮೋಹನದಾಸ | ಜೋ ಜೋ || ಪ ||
ಹೊಟ್ಟೆಗೆ ಇಲ್ಲದ ದೇಶದ ಜನರು
ಕಷ್ಟಸೋಸುವ ಕಂಡು ನಿನ್ನ ಕಣ್ಣೀರು
ಗಟ್ಟಾಗಿ ನಿಂತೆಲ್ಲೊ ನೀನು ತಯ್ಯಾರು
ನಡs ಕಟ್ಟನೀ ಚಳವಳಿ ಮಾಡಿದಿಯೋ | ಜೋ ||
ಮುಪ್ಪಿನಕಾಲಕ್ಕೆ ಬಂದೀತು ಕೂಸು

ಉಪ್ಪಿನ ಕಾಯ್ದೆದು ಮುರಿದಂಥ ಕೂಸು
ಛಪ್ಪನ್ನ ದೇಶಕ್ಕೆ ಒಪ್ಪೀದ ಕೂಸು | ಈ |
ಭಾರತ ಜೋಪಾನ ಮಾಡಿದ ಕೂಸು | ಜೋ ||
ಎಷ್ಟೊಂದ ನೊಂದಿತ್ತೊ ನಿನ್ನ ತಿಳಿಮನವು

ಎಷ್ಟೊಂದು ಬೆಂದಿತ್ತೊ ನಿನ್ನ ಕೃಶತನುವು
ಬೆರಗಾಗಿ ನಿಂತಿತ್ತು ಲೋಕದ ಜನವು | ಆ |
ಗುಡವೂರ ಕವಿರುದ್ರ ಹೇಳಿದ್ದು ನೆನವು | ಜೋ ||

ಅಂಬಿಕಾತನಯದತ್ತರಂಥ ಅಗ್ರಗಣ್ಯ ಕವಿಗೆ ಗಾಂಧಿಯವರು, ಕಾವ್ಯ ವಸ್ತುವಾಗುವುದು ಅರಿದಲ್ಲ. ಗಾಂಧಿಯವರನ್ನು ಕುರಿತು ಅವೆಷ್ಟೋ ಕವನಗಳನ್ನು ಅವರು ಬರೆದಿರುವರೆಂದರೂ ಜಾನಪದ ನಡಿಗೆಯ ಈ ಕೃತಿಯನ್ನು ನೋಡಿದರೆ, ಅದೊಂದು ಲೋಕ ಸಾಹಿತ್ಯವಾಗಿ ಸಾಹಿತ್ಯ ಲೋಕದಲ್ಲಿ ನಿಲ್ಲಬಹುದಾಗಿದೆ. ಗಾಂಧಿಯವರು ಮೊದಲನೇ ದುಂಡುಮೇಜಿನ ಪರಿಷತ್ತನ್ನು ಅಲ್ಲಗಳೆದರೂ, ಎರಡನೇ ದುಂಡುಮೇಜಿನ ಪರಿಷತ್ತಿಗೆ ಅಲ್ಲಗಳೆಯದೆ ಇಂಗ್ಲೆಂಡಿಗೆ ಹೋದರೆಂದೂ, ಅವರು ಹೋದ ಹಾಗೆಯೇ ಮರಳಿ ಬಂದರೆಂದೂ ಇತಿಹಾಸವು ಇಂದಿಗೂ, ಎಂದೆಂದಿಗೂ ಸಾಕ್ಷಿ ನುಡಿಯುತ್ತಿದೆ. ಆ ಪರಿಷತ್ತು ಅದೇಕೆ ಯಶಸ್ವಿ ಆಗಲಿಲ್ಲ; ಅದರ ಪ್ರಯೋಜನವು ಶೂನ್ಯ ಸಂಪಾದನೆ ಆಗಲು ಕಾರಣವೇನು-ಎಂಬುದನ್ನು ಶ್ರೀ ಬೇಂದ್ರೆ ಅವರ ಈ ಲೋಕಸಾಹಿತ್ಯವು ಅದಾವ ಬಗೆಯಲ್ಲಿ ಚಿತ್ರಿಸುತ್ತದೆ ಕೇಳಿರಿ.

ದುಂಡುಮೇಜಿನ ಸುತ್ತ

ದುಂಡು ಮೇಜಿನ ಸುತ್ತ
ದುಂಡ ದುಂಡ ಮಂದಿ
ದುಂಡ ದುಂಡ ಮಂದೀಗಿ
ಬಂಡಿಗಾಲಿ ಹೊಟ್ಟಿ
ಬಂಡಿಗಾಲಿ ಹೊಟ್ಟೀಗಿ
ಗುಂಡಗಲ್ಲಿ ತಲೆಯು
ಗುಂಡಗಲ್ಲ ತಲೆಗೆ
ಸೊನ್ನೀ ಸುತ್ತಿದ ಮೆದುಳು
ಸೊನ್ನೀ ಸುತ್ತಿದ ಮೆದುಳೀಗಿ
ಗೊರಟಿ ಗೊರಟಿ ಫಲವು
ಮುತ್ಯಾ ಮಾಡಿದ ಬೇಟಿ
ತಂತಮ್ಮನೀಗಿ ಓಟ ||

ಅವ್ವವ್ವ ಹ್ಯಾಂಗ ಮರೊಯಾಲೇ?

ಮಹಾತ್ಮರು ದೇಹವಿಟ್ಟಾಗ ಅತ್ತ ಹೆಂಗಸರಿಗೆ ಲೆಕ್ಕವಿಲ್ಲ. ಮಿಡುಕಿದ ಹೆಂಗರುಳಿನವರಿಗೆ ಎಣಿಕೆಯಿಲ್ಲ. ಒಳಗೊಳಗೇ ಮಿಡುಕಿದರೂ ಹೊರಗೆ ದುಡುಕದವರಿಲ್ಲ. ಗಾಂಧಿಯವರ ಕೊಲೆಯ ಸುದ್ದಿ ಬಂದರು ಕಿವಿಗೆ ಅಪ್ಪಳಿಸುತ್ತಲೆ ಮೈನಡುಗಿ ಮೂರ್ಛೆ ಹೋದವರೂ ಇದ್ದಾರೆ. ಅಂಥ ಸಂದರ್ಭದಲ್ಲಿ ಹಳ್ಳಿಯ ಸಂಸ್ಕಾರವಂತ ಹೆಣ್ಣುಮಗಳೊಬ್ಬಳು ಹಾಡಿಕೊಂಡಿದ್ದು ಹೇಗೆಂದರೆ-

ಅವ್ವವ್ವ ಹ್ಯಾಂಗ ಮರೆಯಾಲೇ | ಈ ಮುದುಕನ್ನ ||
ಅಪ್ಪಪ್ಪ ಹ್ಯಾಂಗ ಮರೆಯಾಲೇ || ಪಲ್ಲ ||
ನಮ್ಮ ದೇಶದ ದುಡ್ಡು ನಮ್ಮಲ್ಲುಳಿಯಲೆಂದು

ನೂಲು ನೇಯುವುದನೆ ಕಲಿಸಿ
ಖಾದೀ ಬಟ್ಟೆ ತೊಡಿಸಿದನವ್ವ | ಹ್ಯಾಂಗ ಮರೆಯಾಲೇ || ೧ ||
ಸಾವಿರದಾ ಒಂಬೈನೂರಾ ನಾಲ್ವತ್ತೆಂಟನೆ ಇಸವಿ

ಜಾನೇವಾರಿ ಮೂವತ್ತಕ್ಕೆ
ಕತ್ತಲುಗೂಡಿಸಿ ಹೋಗಿತ್ತವ್ವ | ಹ್ಯಾಂಗ ಮರೆಯಲಾಲೆ || ೨ ||

ಹಳ್ಳಿಯಲ್ಲಿ ಹುಟ್ಟಿ ಬೆಳೆದರೂ ಅಕ್ಷರವಂತೆಯಾದ ಹೆಣ್ಣುಮಗಳೊಬ್ಬಳು, ಸಂಸ್ಕಾರವಂತಿಕೆಗೆ ಅಕ್ಷರವಂತಿಕೆಯ ಸೇರುವೆಯಾದರೆ, ಅದಾವ ನಿಷ್ಪತ್ತಿ ಕಂಡುಬರುವುದೆಂಬುದನ್ನು ತೋರ್ಪಡಿಸುವಂತೆ ಒಂದು ಹಾಡನ್ನು ಹೆಚ್ಚು ಪರಿಣಾಮಕಾರಿಯಾಗುವಂತೆ ಪವಣಿಸಿರುವಳು.

ಗಾಂಧಿ ಪ್ರಭಾವ

ಗಾಂಧಿಯವರ ಪ್ರಭಾವವನ್ನೂ, ಅವರ ಪ್ರಭಾವದಿಂದ ದೇಶದ ಮೇಲಾದ ಪರಿಣಾಮವನ್ನೂ ಚಿತ್ರಿಸುವ ಪದ್ಯ ಸಾಹಿತ್ಯವನ್ನು ನಿರೀಕ್ಷಿಸುವ ಜನಸಾಮಾನ್ಯರು ಕೆಲವು ಹಾಡಿನ ಸಾಲುಗಳನ್ನು ಆತ್ಮಸಾತ್‌ಮಾಡಿಕೊಂಡು, ನೆರೆಹೊರೆಯವರ ಆತ್ಮಜಾಗೃತಿಯ ಸಲುವಾಗಿ ಉಪಯೋಗಿಸುವುದನ್ನು ಕಾಣಬಹುದು.

ಲೋಕಸಾಹಿತ್ಯದಲ್ಲಿ ಗಾಂಧೀಜಿ

ಏಳಿರಿ ಏಳಿರಿ ಬಲುಬೇಗ
ಬೆಳಗಾಗಿದೆ ಏಳಿರಿ ಬಲುಬೇಗ
ಏಳಿರಿ ತೊರೆಯುತ ನಿಮಭೋಗ
ಬಲು ಯೋಗದ ಹರಿ ಬಂದಿಹನೀಗ ||
ಜಾತಿಯ ಬೇಧವ ತರಬೇಡಿ

ನೀತಿಯ ನಾರೂ ಬಿಡಬೇಡಿ
ಮಾತುಗಳಾಡುತ ಕೆಡಬೇಡಿ
ನೀವು | ಕಡಿಯಿರಿ ನಿಮದೇಶದ ಬೇಡಿ ||

“ರಾಟಿಯ ತಿರುಗಿಸಿರಿ | ಬಡತನ | ಕಾಟವ ನೀಗಿಸಿರಿ” ಎಂದು ಆರಂಭವಾಗಿ ಒಂದು ಸುತ್ತಿಗೆ ರಾಟಿ ಏನು ಕೊಡುವುದು, ಎರಡು ಸುತ್ತಿಗೆ ರಾಟಿ ಏನು ನೀಡುವುದು-ಎಂಬುದನ್ನು ಹೇಳುತ್ತ “ಕೋಟಿ ಜನಕೆ ಸುಖದೂಟವ ಹಾಕುವ ರಾಟಿಯ ತಿರುಗಿಸಿರಿ” ಎಂದು ಮುಗಿಸಲಾಗುವ ಹಾಡು. ಅಚ್ಚ ಲೋಕಗೀತದ ಛಂದಸ್ಸಿನಲ್ಲಿಯೇ ಧಾಟಿಯಲ್ಲಿಯೇ ಇದೆ. “ಬಸವಗೆ ಬಸವೆನ್ನಿರೇ | ಬಸವನ ಪಾದಕ ಶರಣೆನ್ನಿರೇ” ಎಂಬ ಪದವನ್ನು ಹಳ್ಳಿಯ ಕೊಡುಗೂಸುಗಳು ಹಾಡುತ್ತ ಗುಳ್ಳವ್ವನ ಮಣ್ಣು ತರುವುದು ಎಲ್ಲರಿಗೂ ತಿಳಿದ ವಿಷಯ.

ದಿ. ಸರ್ದಾರ ವಲ್ಲಭಬಾಯಿ ಪಟೇಲ ನೇತೃತ್ವದಲ್ಲಿ ಬಾರ್ಡೋಲಿಯ ಕರನಿರಾಕರಣೆಯ ಆಂದೋಲನವು ಬಹು ವ್ಯವಸ್ಥಿತವಾಗಿ ಸಾಗಿತ್ತು. ಅಲ್ಲಿಯ ರೈತರು ಆವಾಗ ತೋರಿದ ನಿಷ್ಠೆ ಅಚುದ್ರಧತೆ. ಕಷ್ಟನಿಷ್ಠುರಗಳನ್ನು ಎದುರಿಸುವ ಧೈರ್ಯ ಪ್ರಚಂಡ ತ್ಯಾಗ ಇವುಗಳನ್ನು ಕಂಡು ಕೇಳಿದವರಿಗೂ ಹೊಸ ಹುರೂಪು ಸೋಂಕದಿರನು. ಎಲ್ಲೆಲ್ಲಿಯೂ ಮಿಂಚು ಸಂಚರಿಸುವುದು, ಆ ಕಾಲಕ್ಕೆ ದಿನಕ ದೇಸಾಯಿ ಅವರು ಒಂದು ಹಾಡು ಬರೆದರು. ಅದರ ಹೆಸರು “ಸ್ವರಾಜ್ಯ ತಾಯೀ ಭಾರತಭೂ.” ಬಾರ್ಡೋಲಿಯಲ್ಲಿ ಸತ್ಯಾಗ್ರಹೀ ರೈತರು ಹಾಡಿರಲಿಲ್ಲ. ಆದರೂ ಅವರೇ ಹಾಡಿದಂತಿದೆ. ಕವಿಯ ಬಾಯಲ್ಲಿ ಹಾಡು ರೈತರದು; ರಚನೆ ಕವಿಯದು.

ಹಾಳಾಗಲಿ ಮನೆಮಠ ಹೊಲವೆಲ್ಲಾ
ಹಾಳಾಗಲಿ ಈ ಜೋಳವು ಬೆಲ್ಲ
ದಾಷ್ಯದಿ ಬೆಳೆದಾ ಬೆಳೆ ನಮಗಲ್ಲ
ಸ್ವರಾಜ್ಯ ತಾಯಿ ಭಾರತಭೂ ||
ಉತ್ತಿ ಬಿತ್ತಿದಾ ಜೋಳದ ಪೈರು

ಸಾಕಿಸಲುಹಿದಾ ತಾಪಿಯ ನೀರು
ಎಲ್ಲವು ಬರಿದೋ ಭಣಭಣ ಊರು
ಸ್ವರಾಜ್ಯ ತಾಯೀ ಭಾರತಭೂ ||

ಲಾವಣಿಗಳು

ಗಾಂಧಿಯವರ ಅನುಯಾಯಿಯಾಗುವುದು ಸುಲಭದ ಮಾತಲ್ಲ ಅದಕ್ಕೆ ಅಂತರಂಗದ ಪರಿಶುದ್ಧತೆ ಬೇಕು. ಆ ಪರಿಶುದ್ಧತೆಗಾಗಿ ಹಲವೊಂದು ವ್ರತನಿಯಮಗಳನ್ನು ಆಚರಣೆಯಲ್ಲಿ ತರಬೇಕು. ಆಮೇಲೆ ಗಿರಣಿ ಬಟ್ಟೆಗಳನ್ನು ಸುಡುವುದ ಚಂದ; ಖಾದಿ ಬಟ್ಟೆಗಳನ್ನು ತೊಡುವುದೂ ಚಂದ. ಆ ಮಾತನ್ನು ಲಾವಣಿಕಾರನು ತನ್ನದೇ ಆದ ರೀತಿಯಲ್ಲಿ ಹೇಳಿದ್ದು ಹೇಗೆಂದರೆ-

ಬಿಡಬಾರದೇನೋ ಜೀ? || ಪಲ್ಲ ||
ಬಿಡಬಾರದೇನೋ ಚಹಾ ಕುಡಿವುದು
ಬಿಡಬಾರದೇನೋ ಸಿಂದಿ ಕುಡಿವುದು
ಬಿಡಬಾರದೇನೋ ಸುಳ್ಳು ಸಾಕ್ಷಿ ನುಡಿವುದು
ಬಿಡಬಾರದೇನೋ ಜೀ || ೧ ||
ತೊಡಬಾರದೇನೋ ಖಾದಿ ಬಟ್ಟೆಯ

ಸುಡಬಾರದೇನೋ ಗಿರಣಿ ಬಟ್ಟೆಯ
ಹಿಡಿಬಾರದೇನೋ ಗಾಂಧಿ ಬಟ್ಟೆಯ
ಬಿಡಬಾರದೇನೋ ಜೀ || ೨ ||

ಖಾದಿ ಅಂಗಿ ಖಾದಿ ಚಣ್ಣ

ಮಕ್ಕಳು ತಮ್ಮೂರಲ್ಲಿ ನಡೆಯುವ ಧ್ವಜವಂದನೆ, ನಗರ ಸಂಕೀರ್ತನೆ ಮೊದಲಾದ ಕಾರ್ಯಕ್ರಮಗಳನ್ನು ಕಂಡು, ಆ ಪುರುಷ-ಹುಮ್ಮಸ್ಸಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಹಜವಾಗಿ ಅಪೇಕ್ಷಿಸುವುದುಂಟು. ಆದರೆ ದೈನಂದಿನ ಉಡಿಗೆತೊಡಿಗೆಗಳಲ್ಲಿ ಕಾರ್ಯಕ್ರಮ ನಡೆಸಲಿಕ್ಕಾಗುವುದೇ? ಕಾರ್ಯಕ್ರಮಕ್ಕೆ ಕಳೆಬರಬೇಕಾದರೆ ಸಮವಸ್ತ್ರ ಮೊದಲು ಬೇಕು. ಆ ಮೇಲೆ ನೂಲುವುದಕ್ಕೆ ತಕಲಿಬೇಕು. ಅದನ್ನು ಕೊಂಡುಕೊಡಬೇಕೆಂದು ಮಗು ದುಂಬಾಲು ಬೀಳುತ್ತದೆ ತಾಯಿಗೆ.

ಯವ್ವಾ! ನನಗೊಂದು ತಕಲಿಯ ಕೊಂಡು ಕೊಡs
ಯವ್ವಾ!ನನಗೊಂದು ತಕಲಿಯ ಕೊಂಡು ಕೊಡs ||
ಖಾದಿ ಅಂಗಿ, ಖಾದಿ ಚಣ
ಖಾದಿ ಟೊಪಗಿ ಹೊಲಿಸವ್ವ || ೧ ||

ಈ ಹಾಡು ಒಬ್ಬರ ಬಾಯಿಂದ ಇನ್ನೊಬ್ಬರ ಕಿವಿಗೆ ಬಿದ್ದು, ಎದೆಯಲ್ಲಿಳಿದು ಬಾಯಲ್ಲಿ ನುಸುಳುವದು, ವಾಸ್ತವಿಕ, ಒಂದೆರಡು ದಿನಗಳಲ್ಲಿ ಹಳ್ಳಿಯ ಮೂಲೆ ಮೂಲೆಯಲ್ಲಿಯೂ ಇದೇ ಹಾಡು ಕೇಳಿ ಬರುತ್ತದೆ.

ಹಳ್ಳಿಯ ಹೆಣ್ಮಕ್ಕಳಿಗೂ ಆಂದೋಲನದಲ್ಲಿ ಸೇರಿಕೊಳ್ಳುವುದಕ್ಕೆ ಇಚ್ಛೆ.

ಕಸ್ತೂರಬಾ, ಸರೋಜಿನಿ ನಾಯ್ಡು, ಕಮಲಾದೇವಿ ಅವರನ್ನು ಕಣ್ಣಾರೆ ಕಂಡಿರದಿದ್ದರೂ ಅವರು ನೆರೆಹೊರೆಯ ಅವ್ವ-ಅಕ್ಕಂದಿರೆಂದೇ ಬಗೆದಿದ್ದರು. ಅವರ ಮುಂದಾಳಳ್ತನದಲ್ಲಿ ನಾವೆಲ್ಲರೂ ಚಳವಳಿಗೆ ಸೇರಿ, ಮಹಾತ್ಮಾ ಗಾಂಧಿಯವರ ಅಪ್ಪಣೆಯಂತೆ ನಡೆದುಕೊಂಡು ದೇಶಕ್ಕೆ ಕೀರ್ತಿಯನ್ನೂ, ಆತ್ಮಕ್ಕೆ ಗೌರವವನ್ನೂ ತಂದುಕೊಳ್ಳುವೆವೆಂದು ಹೇಳುವ ಧೈರ್ಯವು ಹಳ್ಳಿಯ ಹೆಂಗಳೆಯರಲ್ಲಿಯೂ ಅಂದು ಉಂಟಾಗಿತ್ತು. ಈ ಹಾಡು ಕೇಳಿ-

ನಾವು ಚಳವಳಿ ಮಾಡುವರ ||
ಕಸ್ತೂರಿಬಾಯಿಯವರ | ಕಮಲಾದೇವಿಯವರ
ಸರೋಜಿನಿ ನಾಯ್ಡು ಇವರಾರ |
ನಾವು ಚಳವಳಿ ಮಾಡವರ || ೧ ||

ಚಳವಳಿ ಮಾಡವರ | ತಿಳಿಯನು ಹೇಳವರ
ತಿಳಿಸಿ ಸ್ವರಾಜ್ಯ ತರುವವರ |
ನಾವು ಚಳವಳಿ ಮಾಡವರ || ೨ ||

ಖಾದಿಯ ಉಡುವವರ | ಪರದೇಶಿ ಸುಡುವವರ
ಪರತಂತ್ರದಲ್ಲಿ ಎಂದೂ ಇರದವರ
ನಾವು ಚಳವಳಿ ಮಾಡವರ || ೩ ||

ರಾಟಿಯ ನೂಲವರ | ರಾಷ್ಟ್ರವ ಗೆಲುವವರ
ಕೋಟ್ಯನುಕೋಟಿ ರೂಪಾಯಿ ಉಳಿಸವರ
ನಾವು ಚಳವಳಿ ಮಾಡವರ || ೪ ||

ಚಹ ಕುಡಿಯುವುದಾಗಲಿ, ತಂಬಾಕು ಸೇದುವುದಾಗಲಿ ಗಾಂಧಿ ತತ್ವಕ್ಕೆ ವಿರೋಧ ಕೆಲಸವೆಂದು ಹಳ್ಳಿಯಲ್ಲಿ ತಿಳಿಯಲಾಗಿತ್ತು. ಕರ್ನಾಟಕ ಗಾಂಧಿಯೆನಿಸಿದ ದಿ. ಹರ್ಡೇಕರ ಮಂಜಪ್ಪನವರಂತೂ ಖಾದಿ ಪ್ರಚಾರ, ಅಸ್ಪೃಶ್ಯತಾನಿವಾರಣೆ, ಸತ್ಯಾಗ್ರಹಾಚರಣೆ ಮೊದಲಾದ ವಿಚಾರಗಳನ್ನು ಹಳ್ಳಿಗರಿಗೆ ಬೋಧಿಸುವಂತೆ, ಚಹ-ತಂಬಾಕುಗಳ ನಿಷೇಧವನ್ನೂ ಮಾರ್ಮಿಕವಾಗಿ ವಿವೇಚಿಸುತ್ತಿದ್ದರು. ಹೆಣ್ಣು ಮಕ್ಕಳು ದಿನನಿತ್ಯದ ಉದ್ಯೋಗ ಮಾಡುವಾಗ ಹಾಡಿಕೊಳ್ಳಬಹುದಾದ ಅಂದಿನ ಅನೇಕ ಚುಟುಕುಗಳನ್ನೂ ಇಂದಿಗೂ ನೆನೆಸಿಕೊಳ್ಳುವಂತಿದೆ.

ಲಾಠಿಯ ಹೊಡೆತಕ್ಕೆ ನೀಟಾಗಿ ತಲೆಯನ್ನು
ಪೆಟ್ಟಿಗೆ ಸರಿಯಾಗಿ ಕೊಡುವವರು ||
ವಂದೇ ಮಾತರಂವೆಂದು ಹುರುಪಿನಲ್ಲಿ ಗರ್ಜನೆ ಮಾಡುತ್ತ
ಸುಂದರ ಭಾರತ ಮಾತೆಗೆ ಬಾಗುವಾ ಸಕಲರು ವಂದಿಸುತ ||

ಅಕ್ಕಿ ಥಳಿಸುವಾಗ ಹಾಡಬಹುದಾದ ಹಾಡುಗಳು –

ಒಳಕಲ್ಲು ಪೂಜೆಗೆ ಬರಬೇಕೆಲ್ಲರು
ಜಳಕಮಾಡಿ ಖಾದೀ ಉಡಬೇಕರೆವ್ವಾ
ಸು ಸೂ ಸುವ್ವಾಲೆ ||

ಮುತ್ತೈದೆರೆಲ್ಲರೂ ಜತ್ತಾಗಿ ಕೂಡಿರಿ
ಮುಪ್ಪಿನ ಗಾಂಧಿನ್ನ ತಪ್ಪದೆ ಹಾಡಿದರೆ
ಉಪ್ಪದ್ರವವೆಲ್ಲ ಬಯಲಾದೀತರೆವ್ವ
ಸು ಸೂ ಸುವ್ವಾಲೆ ||

ದೇಶೀ ದುಂದುಮೆ

ದಿ. ಖಾನೋಳಕರ ಅವರು ಅಂದು ರಚಿಸಿದ “ದೇಶೀ ದುಂದುಮೆ”ಯ ಮಾದರಿಯನ್ನು ತುಸು ಅವಲೋಕಿಸೋಣ, ಅದರ ಮಟ್ಟವೆಂಥದೂ ಹಳ್ಳಿಯ ಹೆಣ್ಣು ಮಕ್ಕಳು ಹಾಡುವ ಶುದ್ಧ ಜನಪದ ಹಾಡಿನದು. ಗಾಂಧೀ ಪ್ರಭಾವಕ್ಕೆ ಈಡಾದವರ ಮನಸ್ಸಿನ ಮೇಲೆ ಕಟ್ಟುನಿಟ್ಟಾಗಿ ಅಚ್ಚೊತ್ತಬಹುದಾದ ವಿಚಾರಗಳು. ಬ್ರಿಟಿಷರ ಕೈಯಿಂದ ಭಾರತದೇಶವು ನಮ್ಮವರ ಕೈಯಲ್ಲಿ ಬರಬೇಕಾದುದರ ಅಗತ್ಯವೇನಿದೆ, ಅವರ ದುರುದ್ದೇಶದಿಂದ ನಾವು ಅದೇತಕ್ಕಾಗಿ ತಪ್ಪಿಸಿಕೊಳ್ಳಬೇಕು-ಈ ಮಾತನ್ನು ಅಚ್ಚುಕಟ್ಟಾಗಿ ಹೇಳುವ ನೂರಾರು ನುಡಿಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಪರಾಮರ್ಶಿಸುವಾ-

ಮಾತರಂ | ವಂದೇ ಮಾತರಂ || ಪಲ್ಲ ||
ಅರವಿಂದನಾಭನ ಸುರವಂದ್ಯ ಪಾದವ
ಶಿರದೊಳು ವಿನಯದಿ ಧರಿಸುವೆನು | ನಾನು |
ಸರಸತಿ ಪಾದಕ್ಕೆ ನಮಿಸುವೆನು | ಬಲು |
ಕರುಣದಿ ಮತಿಯನು ಬೇಡುವೆನು |
ಪರದಾಶ್ಯ ಬೇಡಿಯ ಕಡಿಯಲು ಬೇಡುವೆ
ಸಾಸಿರ ಹೆಸರಿನ ಜಗದೀಶನನ್ನು |
ಮಾತರಂ | ವಂದೇ ಮಾತರಂ || ೧ ||
ತಕ್ಕಡಿ ಹಿಡಕೊಂಡು ಬೇಸಾಯ ಮಾಡುತ

ಬಿಳುಪಾದ ಪರಕೀಯ ಜನರೆಲ್ಲರು | ಬಂದು |
ಕಕ್ಕಸಬಡುತಲಿ ಕೂಡಿದರು | ನಮ್ಮ |
ಉಕ್ಕುವ ನಾಡನು ಕೆಡಿಸಿದರು |
ಯುಕ್ತಿಯ ಬಲದಿಂದ ನೆಕ್ಕುತ ರಾಜ್ಯವ
ರಾಜಕಾರಣವನ್ನು ಭರದಿ ಹೂಡಿದರು |
ಮಾತರಂ | ವಂದೇ ಮಾತರಂ || ೨ ||
ಸೂರೆಗೊಂಡವರು ನಮ್ಮ ಭಾರತದೇಶವ

ಮೀರಿದ ಸ್ವಾತಂತ್ರ್ಯ ಕುಕ್ಕಿದರು | ಸರ |
ಕಾರದ ದಾಸರು ಸೊಕ್ಕಿದರು | ದರ |
ಕಾರವಿಲ್ಲದೆ ರಾಜ್ಯವಾಳಿದರು
ಧೀರತನವ ತುಂಡು ತುಂಡಾಗಿ ಕಡಿದರು
ಗಂಡಸುತನವನು ಮೊಂಡ ಮಾಡಿದರು |
ಮಾತರಂ | ವಂದೇ ಮಾತರಂ || ೩ ||

“ಲೋಕಸಾಹಿತ್ಯದಲ್ಲಿ ಗಾಂಧೀಜಿ”ಯನ್ನು ನಾವು ಕಥೆಗಳಲ್ಲಂತೂ ಕಂಡಂತಿಲ್ಲ; ಕೇಳಿದಂತಿಲ್ಲ. ಹಂತಿಯ ಹಾಡುಗಳಲ್ಲಿ ಗಾಂಧಿಯ ಕಥೆ ಸೇರ್ಪಡೆಗೊಂಡಂತೆ ತೋರುವುದಿಲ್ಲ. ಸ್ವಯಂ ಗಾಂಧಿಯ ಪ್ರಭಾವವೇ ಗ್ರಹಣಕ್ಕೀಡಾದ ಕಾರಣದಿಂದಲೋ ಏನೋ ಅವರ ಕಥೆಯಾಗಲಿ ವಿಚಾರವಾಗಲಿ ಲೋಕಸಾಹಿತ್ಯದಲ್ಲಿ ವಿಪುಲವಾಗಿ ಬರಲು ಸಾಧ್ಯವಾಗಿಲ್ಲ.

ಪರಾನುಕರಣದ ದಾರಿಯನ್ನು ಬಿಟ್ಟು, ಜಾನಪದ ಸಾಹಿತ್ಯದಂಥ ತವರುದಾರಿಗೆಳೆಸಲು ಆರಂಭವಾಗಿ ಮೂರು ಪಟ್ಟಕಳೆದವು. ಜೀವನದ ಹೋರಾಟವೂ, ಆ ಹೋರಾಟದ ಕಥೆಯೂ ನಾಳಿನ ಸಾಹಿತ್ಯಕ್ಕೆ ಜೀವಾಳವಾಗಲಿರುವಾಗ ಮಹಾತ್ಮಾ ಗಾಂಧಿಯಂಥವರ ಜೀವನ ಕಥೆಗೂ ಉಕ್ಕು ಬರಲಾರದೆ ಹೋಗುವುದಿಲ್ಲ.