೧. ತೊತ್ತಲಾದ ಹಾತಿಲ್ಲ

ಚಿಕ್ಕಂದಿನಲ್ಲೆ ಮದುವೆಯಾಗಿಬಿಡುವ ರೂಢಿಯು ಅದೆಷ್ಟು ಪರಮಾವಧಿಗೆ ಅಥವಾ ಅಪರಾವಧಿಗೆ ಮುಟ್ಟಿತ್ತೆನ್ನುವುದಕ್ಕೆ ಒಂದು ಉದಾಹರಣೆ.

ಒಂದೂರಿನ ರೈತನ ಮನೆಯ ಮದುವೆ. ಮದುವೆ ಅಂದರೆ ಒಂದೇ ಅಲ್ಲ, ಹಲವು. ಮದುಮಕ್ಕಳ ಹಿಂಡನ್ನೇ ನೋಡಬಹುದಾಗಿತ್ತು. ಚಿಕ್ಕ ಚಿಕ್ಕ ಬಾಲಕರು, ಎಳೆಎಳೆಯ ಬಾಲಿಕೆಯರು ಬಾಲಿಕೆಯರಲ್ಲಿ ಹಲವರು ಶಿಶುಗಳೂ, ಹಸುಗಳೂ ಇದ್ದರು.

ಅಕ್ಷತೆಯ ಕಾರ್ಯಕ್ರಮ ಮುಗದಿತ್ತು.

ಮದುವೆಗೆ ಬಂದ ನೆಂಟರು ಅಡ್ಡನಿಬ್ಬಣಿಗರು ಮದುಮಕ್ಕಳನ್ನು ಕೆಣಕಿ ಹೆಸರು ಕೇಳತೊಡಗಿದರು, ಹೆಸರೆಂದರೆ ಮದುಮಗನು ತನ್ನ ಹೆಂಡತಿಯ ಹೆಸರು ಹೇಳುವುದು; ಮದುಮಗಳು ತನ್ನ ಗಂಡನ ಹೆಸರು ಹೇಳುವುದು.

ಮದುಮಗಳಂತೂ ಎಳೆ ಹಸುಳೆ. ತಾಯಮಡಿಲಲ್ಲಿ ಮೂಲೆಕುಡಿದು ನಿದ್ದೆ ಹೋಗಿದೆ. ಮದುಮಗನಾದ ಒಬ್ಬ ಚಿಕ್ಕ ಬಾಲಕನಿಗೆ ದುಂಬಾಲುಬಿದ್ದರು ನೆಂಟರಿಸ್ಟರು, “ಹೆಂಡತಿಯ ಹೆಸರು ಹೇಳು” ಎಂದು. ಅದೆಷ್ಟು ಸಾರೆ ಕೇಳಿದರೂ ಮದುಮಗನು ಬಾಯಿ ಹೊಲಿದವನಂತೆ ತೆಪ್ಪಗೆ ಕುಳಿತು ಬಿಟ್ಟ. ಕೇಳುವವರು ಮಾತ್ರ ಬೇಸರಿಸಿದೆ ‘ಹೆಂಡತಿಯ ಹೆಸರು ಹೇಳು’ಎಂದು ಹಟ ಹಿಡಿದರು.

ಕೊನೆಗೆ ಮದುಮಗನು ನಿರ್ವಾಹವಿಲ್ಲದೆ, ನುಡಿದನು-

‘ಇನ್ನು ತೊತ್ತಲಾದ ಹಾತಿಲ್ಲ” (ಇನ್ನೂ ತೊಟ್ಟಿಲಲ್ಲಿ ಹಾಕಿಲ್ಲ)

ಆ ಮಾತು ಕೇಳಿ ಕೂಡಿದವರೆಲ್ಲ ಖೊಳ್ಳನೆ ನಕ್ಕರು. ತೊದಲು ನುಡಿಯ ಮದುಮಗ. ಹುಟ್ಟಿದ ಹದಿಮೂರನೇ ದಿನಕ್ಕೆ ಮಾಡುವ ನಾಮಕರಣೋತ್ಸವವೂ ಆಗದ ಮದುಮಗಳು. ಬಾಲ್ಯವಿವಾಹದ ಉದಾಹರಣೆ ಇದಕ್ಕಿಂತ ಮಿಗಿಲಾದದ್ದು ಸಿಕ್ಕೀತು?

೨. ಮೊದಲೇ ಕೇಳಬೇಕಿತ್ತು ಕುಲ?

ಬೇಸಗೆಯ ಒಂದು ಮಧ್ಯಾಹ್ನ. ಒಬ್ಬ ಮುದುಕಿ ಹರಿಗಡಿದು ಹೋದ ಹಳ್ಳದ ವರ್ತಿಯಲ್ಲಿ ತನ್ನ ಮಣ್ಣು ಕೊಡವನ್ನು ಪರಟೆಯಿಂದ ತುಂಬುತ್ತಿದ್ದಳು. ಆಗಾಗ ತಡೆದು ಅತ್ತ ಇತ್ತ ಹೊರಳಿ ದಾರಿಯಲ್ಲಿ ಬರಹಗುವವರು ಯಾರಾದರೂ ಕಾಣಿಸಿಕೊಳ್ಳವರೇ – ಎಂದು ನೋಡುತ್ತಿದ್ದಳು.

ಕೊಡವನ್ನೊಮ್ಮೆ ತುಂಬಿ ಉಸಿರುಗರೆದು ಕುಳಿತಳು. ಆದರೆ ಅದನ್ನೆತ್ತಿ ತಲೆಯ ಮೇಲೆ ಇಡುವವರು ಬೇಕು. ಯಾರ ಸುಳಿವೂ ಕಂಡುಬರಲಿಲ್ಲ.

ಬಹಳ ಹೊತ್ತಿನ ಮೇಲೆ ದಾರಿ ಹಿಡಿದು, ಒಬ್ಬ ತರುಣನು ಸಾಗಿದ್ದನು. ಅವನನ್ನು ಕಂಡು ಆ ಮುದುಕಿ – “ಏ ತಮ್ಮಾ, ಇಲ್ಲಿ ಬಾರೋ. ಈ ಕೊಡವನ್ನೆತ್ತಿ ಮುದುಕಿಯ ನನ್ನ ತಲೆಯ ಮೇಲಿಡು ಪುಣ್ಯ ಬರುತ್ತದೆ” ಎಂದು ಹಲುಬಿದಳು.

ಆತುರಣನು ಅವಸರದಿಮದ ಬಂದವನೇ ಕೊಡವನೆತ್ತಿ ಮುದುಕಿಯ ತಲೆಯ ಮೇಲೆ ಹೊರಿಸಿ, ತನ್ನ ಹಾದಿ ಹಿಡಿದು ಬಿರಿ ಬಿರಿ ನಡೆದ.

ಕೊಡಹೊತ್ತ ಮುದುಕಿ ಹೊರಳಿ ನಿಂತು ಮತ್ತೆ ಹಲುಬಿದಳು.

“ಏ ತಮ್ಮಾ, ನೀನು ಯಾವ ಕುಲದವನೋ ಅಪ್ಪಾ? ನನ್ನ ಮಣ್ಣುಕೊಡ ಮೈಲಿಗೆ ಆಯಿತೇನೋ. ಯಾತರವನೋ ಹುಡುಗಾ ನೀನು?”

“ನನ್ನ ಕುಲ ತೆಗೆದುಕೊಂಡು ಇನ್ನೇನು ಮಾಡುತ್ತೀ? ಕೊಡ ಹೊರಿಸಿಕೊಳ್ಳುವ ಮೊದಲೇ ಕೇಳಬೇಕಿತ್ತು! ಈಗ ಕೇಳಿ ಬಂದುದೇನು?” ಎನ್ನುತ್ತ ತನ್ನ ದಾರಿಯಲ್ಲಿ ಸಾಗಿಯೇ ಬಿಟ್ಟ.

“ಅಯ್ಯಯ್ಯೋ! ಕೊಡ ಮುಡಚಟ್ಟು ಮಾಡಿಕೊಂಡೆನಲ್ಲ! ಮನೆಗೆ ಹೋಗಿ ನೂರು ಕುಳ್ಳು ತಂದು ಕೆಳಗೂ ಮೇಗೂ ಒಟ್ಟಿ ಕೊಡವನ್ನು ಸುಟ್ಟು ತೆಗೆಯಬೇಕಾಯಿತು” ಎಂದು ಗೊಣಗುಟ್ಟುತ್ತ ಆ ಮುದುಕಿ ತನ್ನ ಮನೆಯ ಹಾದಿ ಹಿಡಿದಳು.

೩. ನಿಮ್ಮಪ್ಪನಿಗೆ ಹೇಳುವುದಿಲ್ಲ

ಅಂಬಣ್ಣನ ಚಿಲುಮೆ ಹೊತ್ತುವುದು ದಿನದಲ್ಲಿ ನೂರಾರು ಸಾರೆ. ‘ಬತ್ತು ಸಾರೆ ತಂಬಾಕು ಸೇದುವ ಅಂಬಣ್ಣ’ ಎಂಬ ಬಿರುದಾವಳಿಯಲ್ಲಿಯೇ ಆತನನ್ನು ಮಾತಾಡಿಸುತ್ತಿದ್ದರು.

ಚಿಲುಮೆ, ತಳದರುವೆ-ಎರಡೇ ಅವನ ತಂಬಾಕು ಸೇವನೆಯ ಮೂಲ ಬಂಡವಲು ಕುಳಿತಲ್ಲಿ, ನಿಂತಲ್ಲಿ ಚಿಲುಮೆ ಜಾಡಿಸಿ ಹರಳು ತೆಗೆದು, ಊದಿ ಮತ್ತೆ ಅದರಲ್ಲಿ ಇಟ್ಟನೆಂದರೆ ತೀರಿತು. ಯಾರಿಂದಲೋ ಒಂದು ಚಿಟುಕು ತಂಬಾಕು ಇಸಗೊಂಡು, ಎಲ್ಲಿಂದಲೋ ಕಿಡಿಬೆಂಕಿ ತರಿಸಿದರಾಯಿತು. ಅದರದೇ ಆದ ಅರಿವೆಯನ್ನು ತೊಯಿಸಿ, ಚಿಲುಮೆಯ ತಳಕ್ಕೆ ಸುತ್ತಿ ಜುರುಕಿ ಜಗ್ಗಿದನೆಂದರೆ, ಚಿಲುಮೆಯ ತುದಿಯಲ್ಲಿ ಉರಿ ಕಾಣಿಸುವುದು.

ಅಂಬಣ್ಣನ ಕೆಲಸಕ್ಕೆ ಸಹಕರಿಸಿ ತಂಬಾಕು-ಬೆಂಕಿ ತಂದುಕೊಟ್ಟು, ಅರಿವೆಗೆ ನೀರು ಹನಿಸಿದ ನಿಂಬೆಣ್ಣ ಆತನ ಮುಂದೆ ಕುಳಿತು, ಎವೆಯಿಕ್ಕದೆ ಆ ಲೀಲೆಯನ್ನು ನೋಡುತ್ತಿದ್ದ. ಹೊತ್ತಿಸಿದ ಚಿಲುಮೆಯನ್ನು ಅಂಬಣ್ಣ ನಿಂಬೆಣ್ಣನ ಮುಂದೆ ಚಾಚಿ ಹಿಡಿದು “ಒಂದು ಜುರುಕಿ ಎಳೆ” ಎಂದ.

“ಛೇ ಛೇ! ಬೇಡಪ್ಪಾ” ಎಂದು ಹೊರಳಿ ಕುಳಿತ ನಿಂಬೆಣ್ಣ.

“ಒಲ್ಲೆಯೇಕೆ? ನಿನ್ನ ಓರಗೆಯವರೆಲ್ಲಾ ಸೇದುತ್ತಾರೆ, ನೀನೇಕೆ ಒಲ್ಲೆ?” ಎಂದು ಕೇಳಿದ ಅಂಬಣ್ಣ.

“ನಮ್ಮಪ್ಪನಿಗೆ ಗೊತ್ತಾದರೆ ಕೊಂದಾನು ನನ್ನ” ನಿಂಬೆಣ್ಣ ಕಳವಳದಿಂದ ನುಡಿದ.

“ನಿಮ್ಮಪ್ಪನಿಗೆ ನಾನೇಕೆ ಹೇಳ ಹೋಗಲಿ?”

“ನಿನ್ನದೇನು ಭರವಸೆ? ಮಾತಿಗೆ ಮಾತು ಬಂದು ಹೇಳಿಬಿಟ್ಟರೆ ನನ್ನ ಗತಿ ಏನಾದೀತು”

ಎಂಬ ಸಂಶಯವನ್ನು ಒಡ್ಡಿದ ನಿಂಬೆಣ್ಣ.

“ನಿನ್ನ ತಮ್ಮ ಕದ್ದು ಸೇದುವುದನ್ನು ನಾನು ನಿನ್ನ ಮುಂದೆ ಹೇಳಿರುವೆನೇ? ಇಷ್ಟರ ಮೇಲಿಂದ ನನ್ನು ನಂಬಬೇಕು” ಎಂಬ ಭರವಸೆಯ ನುಡಿಯಾಡಿದ, ಅಂಬಣ್ಣ.

“ಹೊರಟೇ ಬಿಟ್ಟಿತಲ್ಲ ನಿನ್ನ ಭರವಸೆಯ ಗುಣ! ನನ್ನ ತಮ್ಮ ಕದ್ದು ಸೇವುದುದನ್ನು ನನ್ನ ಮುಂದೆ ಬಯಲುಮಾಡಿದಂತೆ, ನಾನು ಕದ್ದು ಸೇವುದನ್ನು ನಮ್ಮಪ್ಪನ ಮುಂದೆ ಹೇಳದೆ ಇರುತ್ತಿಯಾ ನೀನು” ಎನ್ನುತ್ತಾ ನಿಂಬೆಣ್ಣ ದೂರ ಸರಿದು ಕುಳಿತ.