ಹಿಂದಿನ ಕಾಲದಲ್ಲಿ –ಸುಮಾರು ಐದು ದಶಕಕ್ಕೂ ಹಿಂದೆ ಹಳ್ಲಿಗಳಲ್ಲಿ ಬೇನೆಬೇಸರಿಕೆಗಳೂ ಕಡಿಮೆ; ಒಂದು ವೇಳೆ ಕಾಣಿಸಿಕೊಂಡರೆ ಅವುಗಳಿಗೆ ಚಿಕಿತ್ಸೆಯೂ ಕಡಿಮೆ. ಕೈಮೀರಿದಾಗ ಬದುಕುವವರೂ ಕಡಿಮೆ. ಅಂದಿನವರಲ್ಲಿ ರೋಗ ಪ್ರತಿಬಂಧಕ ಶಕ್ತಿಯೂ ನೈಸರ್ಗಿಕವಾಗಿ ಹೆಚ್ಚಾಗಿಯೇ ಇತ್ತು. ಅಂದಿನವರಲ್ಲಿ ರೋಗ ಪ್ರತಿಬಂಧಕ ಶಕ್ತಿಯೂ ನೈಸರ್ಗಿಕವಾಗಿ ಹೆಚ್ಚಾಗಿಯೇ ಇತ್ತು. ಕೆಲವೊಂದು ಸಣ್ಣ ಪುಟ್ಟ ಜಡ್ಡುಗಳಿಗೆ ಮಾಡುವ ಚಿಕಿತ್ಸೆಗಳನ್ನು ನಾವುಚಿಕ್ಕಂದಿನಲ್ಲಿ ಕಂಡಿದ್ದೇವೆ, ಕೇಳಿದ್ದೇವೆ ಅಂಥ ಚಿಕಿತ್ಸೆಗಳನ್ನು ಬಲ್ಲವರು ಬಹಳ ವಿರಳ. ಇನ್ನು ಅವನ್ನುಮಾಡಿಕೊಳ್ಳುವವರಂತೂ ತೀರ ವಿರಳ. ದುರ್ಲಭವೆಂದರೂ ಸರಿ. ಅಂಥ ಚಿಕಿತ್ಸೆಗಳು ವೈಜ್ಞಾನಿಕ ದೃಷ್ಟಿಯಲ್ಲಿ ತಳಬುಡ ಇಲ್ಲದವುಗಳಾಗಿ ತೋರುವುವು.

ಪರಂಪರಾಗತವಾಗಿ ವೈದ್ಯಕೀಯ ನಡೆಸುವವರಲ್ಲಿ ತಿಳಿವಳಿಕೆಯೂ ಕಡಿಮೆ. ಚಿಕಿತ್ಸೆ ಪಡೆಯುವವರಲ್ಲಿ ಶ್ರದ್ಧೆಯೂ ಕಡಿಮೆ. ಹೀಗಾಗಿ ಹಳೆಯ ಕಾಲದ ಗುಳಿಗೆಗಳೂ, ಕಢೆಗಳೂ ನಗೆಗೀಡಾಗಿರುವುದನ್ನು ಬಲ್ಲೆವು. “ವಿನಾಯಕ ವೈದ್ಯನ ಕಾಡ್ಯಾತಗೊಳ್ಳುವವಖೋಡಿ ಭಾಡ್ಯಾ” ಎಂದೂ, “ವಾಮನರಾಯನ ಗುಳಿಗಿ ಸಾಯೂದು ಮೂರು ಗಳಿಗಿ” ಎಂದೂ ಅಪಹಾಸ್ಯ ಮಾಡುವುದನ್ನು ನಾವೆಲ್ಲರೂ ಕೇಳಿದ್ದೇವೆ. ಇರಲಿ, ಅಂದಿನ ಕಾಲದ ಶಾಲಾ ಶಿಕ್ಷಕರು ಸಾಕಷ್ಟು ವೈದ್ಯಕೀಯವನ್ನು ತಿಳಿದವರು. ಅವರು ಸದಾಚಾರಿಗಳಾಗಿ ಪ್ರತಿಫಲವನ್ನು ಅಪೇಕ್ಷಿಸದೆ ತಮಗೆ ಗೊತ್ತಿದ್ದ ಚಿಕಿತ್ಸೆಯನ್ನು ಪ್ರಾಮಾಣಿಕವಾಗಿ ಸಹೃದಯತೆಯಿಂದ ನಡೆಸುತ್ತಿದ್ದರು. ವೈದ್ಯ ಅಂದು ವೃತ್ತಿಯಾಗಿರಲಿಲ್ಲ ಸೇವಾಧನವಾಗಿತ್ತು. ಪ್ರತಿಫಲ ತೆಗೆದುಕೊಂಡರೆ, ಚಿಕಿತ್ಸೆ ಪರಿಣಾಮಕಾರಿ ಆಗುತ್ತಲೇ ಇರಲಿಲ್ಲವಂತೆ. ಅಂದಿನ ಕಾಲದಲ್ಲಿ ಪ್ರಭಾವಿಯಾಗಿದ್ದ ಅವೆಷ್ಟೋ ಚಿಕಿತ್ಸೆಗಳು ಈಗಲೂ ಹೆಚ್ಚಾಗಿ ಕೇಳಸಿಗುತ್ತವೆ; ಯಶಸ್ವಿಯಾದುದನ್ನು ನೋಡಿದವರೂ ಇದ್ದಾರೆ. ಅಂಥ ಕೆಲವು ಚಿಕಿತ್ಸೆಗಳನ್ನು ಇಲ್ಲಿ ವಿವರಿಸಲಾಗಿದೆ.

ಬೀಡಾದ ಮದ್ದು

ಮಲೇರಿಯಾ ಅಂದರೆ ಚಳಿಜವರಕ್ಕೆ ಕ್ವಿನಾಯಿನ್‌ಗಿಂತ ಫಲಕಾರಿಯಾದ ಮದ್ದು ಹಳ್ಳಿಗಳಲ್ಲಿ ಬಳಕೆಯಲ್ಲಿತ್ತು. ಜ್ವರ ಬರವುದಕ್ಕಿಂತ ಮುಂಚೆ ಚಳಿಯಿಂದ ನಡುಗುತ್ತ ಎಷ್ಟೋ ಹೊದಿಕೆಗಳನ್ನು ಹೊದ್ದು ಮುದ್ದೆಯಾಗಿ ಬಿದ್ದಬಳಿಕ, ಬಹಳ ಹೊತ್ತಿನ ಮೆಲೆ ಜ್ವರ ಬರುವುದು. ಒಂದೆರಡು ಗಂಟೆಗಳಲ್ಲಿ ಜ್ವರ ಇಳಿದುಹೋಗಲು, ರೋಗಿ ಹಾಸಿಗೆಯಿಂದೆದ್ದು ಉಂಡು, ತಿಂದು ತಿರುಗಾಡುತ್ತಿದ್ದ. ಆದರೆ ಚಳಿಜ್ವರದ ಬಾಧೆಯಿಂದ ನಿಶ್ಯಕ್ತಿ ಬರುತ್ತಿತ್ತು. ದಿನಾಲೂ ನಿಯಮಿತ ಕಾಲಕ್ಕೆ ಉರಿ ಚಳಿ ಬಂದೇ ಬರುವುದು. ಮದ್ದೆಂದು ಹಳ್ಳಿಯ ವೈದ್ಯರು-ವೀಳ್ಯದೆಲೆಯಿಂದ ಒಂದೋ ಎರಡೋ ಬೀಡಕಟಟಿ, ಅವಕ್ಕೆ ಲವಂಗ ಚುಚ್ಚಿ ರೋಗಿಯ ಕೈಗೆ ಕೊಡುತ್ತಿದ್ದರು. ಅವನು ಆ ಬೀಡಗಳನ್ನು ರುಮಾಲಿನ ಚುಂಗಿನಲ್ಲಾಗಲಿ, ಉಟ್ಟ ಧೋತರ ಪದರದಲ್ಲಾಗಲಿ, ಕಟ್ಟಿಕೊಂಡು ಚಳಿ ಬರಲಾರಂಭಿಸಿದ ಕೂಡಲೇ ಒಂದು ಬೀಡಾ ತಿಂದರೆ ತೀರಿತು. ಮತ್ತೊಮ್ಮೆ ಚಳಿಯೇ ಬರುವಂತಿಲ್ಲ. ಚುಂಗಿನಲ್ಲಿ ಬೀಡ ಕಟ್ಟಿಕೊಂಡ ಮಾತ್ರಕ್ಕೇ ಚಳಿಜ್ವರ ನಿಂತುಹೋದ ಉದಾಹರಣೆಗಳೂ ಸಾಕಷಟು ಸಿಗುತ್ತಿದವು. ಆ ಬೀಡದಲ್ಲಿ ಹಾಕಿದ್ದೇನು? ಬಿಳಿ ಕಣಗಲ ಬೇರು ಹಾಗೂ ಒಂದೆರಡು ಸೊಪ್ಪು. ಅದು ಎಲ್ಲಿ ಬೇಕಾದಲ್ಲಿ ಸಿಗುವ ವನಸ್ಪತಿ.

ಕಿರುನಾಲಿಗೆ

ಗಂಟಲಿನಲ್ಲಿ ಗುಳು ಗುಳು ಮಾಡುತ್ತ ಸದಾ ಕೆಮ್ಮಿಸುವ ಕೆಮ್ಮಿಗೆ, ಕಿರುನಾಲಗೆ ಬಿದ್ದಿರುವುದೆಂದು ಹೇಳಲಾಗುತ್ತದೆ. ತಂಪಿನಿಂದಲೋ, ಇನ್ಯಾವುದರಿಂದಲೋ ಟಾಣಿನಲ್ಲಿದ್ದ ಗಂಟೆಯು ಇಳಿಬಿದ್ದು ಗಂಟಲಿನ ಉಸಿರು ಕೊಳವೆಯಲ್ಲಿ ಕಾಲು ಚಾಚುತ್ತದೆ. ಅದನ್ನು ಅಲ್ಲಿಂದೋಡಿಸು ಸಲುವಾಗಿ ಕೆಮ್ಮು ಬರುತ್ತದೆ. ಅದಕ್ಕೆ ಎಷ್ಟೋ ಸಲುಭ ಹಾಗೂ ಕಠಿಣ ಚಿಕಿತ್ಸೆಗಳಿರಬಹುದು. ಆದರೆ ತೀರ ಸುಲಭ ಚಿಕಿತ್ಸೆಯೊಂದಿದೆ. ರೋಗಿ ತುದಿ ಗುಂಡಿಯಲ್ಲಿ ಕುಳಿತು ಬಲಗೈ ಮೇಲಕ್ಕೆತ್ತಿ ಬೆನ್ನಲ್ಲಿ ನಡುವಿನ ಬೆರಳಿನಿಂದ ಮುಟ್ಟಲಿ ಆ ಸ್ಥಳವನ್ನು ಗುರುತಿಸಿ, ಬೆರಳಾಡಿಸಿದರೆ ಅಲ್ಲೊಂದು ಉಬ್ಬಿದ ನರ ಕೈಗೆ ಸಿಗುತ್ತದೆ ಅಲ್ಲೊಂದು ಹನಿ ಎಣ್ಣೆ ಸವರಿ, ಆ ಉಬ್ಬಿದ ನರವನ್ನು ತಿಕ್ಕಿ ಒಡೆದು ನಾಲ್ಕು ಕಾಳು ಮೆಣಸು ತಿನ್ನಗೊಟ್ಟರೆ ಕಿರುನಾಲಗೆ ಏರಿ ಹೋಗಿ ತನ್ನ ಸ್ಥಳದಲ್ಲಿ ಅಂಟಿಕೊಳ್ಳುತ್ತದೆ. ಮರು ದಿನವೂ ಅವಶ್ಯವೆನಿಸಿದರೆ ಆ ಉಪಾಯ ಮಾಡಿದರೆ ಸಾಕು.

ಅರೆತಲೆನೋವಿಗೆ

ಅರೆ ತಲೆನೋವಿಗೆ ಎರಡು ವಾರ ಚಿಕಿತ್ಸೆ ಹೇಳುವ ವೈದ್ಯರಿದ್ದಂತೆ, ನಾಲ್ಕಾರು ಇಂಜೆಕ್ಷನ್‌ ಚುಚ್ಚುವ ಡಾಕ್ಟರರೂ ಇದ್ದಾರೆ. ಅವರಿಬ್ಬರರಿಗೂ ಹಣಿಯಲಾರದೆ ಉಳಿದುಕೊಂಡ ಅರೆ ತಲೆನೋವು. ಹಳೆ ಕಾಲದ ಶಾಲಾ ಗುರುಗಳು ಅರೆ ಗಳಿಗೆಯಲ್ಲಿ ವಾಸಿಮಾಡಿದರೆಂದು ಹೇಳಿದರೆ ಸಾಕಾಗದು. ಆ ಉಪಾಯವನ್ನು ಮತ್ತೆ ನಾಲ್ಕಾರು ಜನರಿಗೆ ಮಾಡಿದಾಗಲೂ ಯಶಸ್ವಿಯಾದದ್ದು ಕಂಡುಬಂದಿದೆ. ಅದಾವ ಉಪಾಯ? ನಾಲ್ಕು ಮೆಣಸಿನ ಕಾಳುಗಳನ್ನು ನಯವಾಗಿ ಅರೆದು ಒಂದು ತೊಟ್ಟು ತುಪ್ಪದಲ್ಲಿ ಕಲೆಸಿ ರೋಗಿಯ ಮೂಗಿನಲ್ಲಿ ಹನಿ ಹನಿ ಹಾಕಬೇಕು. ಮೊದಲ ಹನಿಯು ಮುಗಿನೊಳಗಿನ ಶ್ಲೇಷ್ಮತ್ವಚವನ್ನು ತಲಿಪಿದ ಕ್ಷಣದಲ್ಲಿಯೇ ತಲೆನೋವು ಇಲ್ಲದಂತಾಗುವುದನ್ನು ಕಂಡಿದ್ದೇನೆ.

ಹಾಲುಗಳ್ಳಿಯ ಸೋಂಕು ತಗುಲಿ ಕಣ್ಣು ತೆರೆದಾಗ, ತೆರೆದಾಗ, ಬೆಂಕಿಯಿಟ್ಟಂತೆ ಉರಿಯುತ್ತಿದ್ದರೆ, ಮುಖವು ಬಾತುಕೊಂಡಿದ್ದರೆ ವಿಭೂತಿಯನ್ನು ಬೆರಳಿಗೆ ಹಚ್ಚಿಕೊಂಡು ಮುಖ-ಕಣ್ಣುಗಳ ಮೇಲೆಳೆದರಾಯ್ತು ಅದೇ ಕ್ಷಣದಲ್ಲಿ ಉರಿ ತಣ್ಣಗಾಗುತ್ತದೆ. ಡಾಕ್ಟರ ಮುಲಾಮು, ಇಂಜೆಕ್ಷನ್ನುಗಳು ಪರಿಣಾಮಕಾರಿಯಾಗದ ಪ್ರಸಂಗದಲ್ಲಿ ವಿಭೂತಿ ಚಿಕಿತ್ಸೆ ಮಾಡಿ ತತ್ಕಾಲಕ್ಕೆ ಗುಣಪಡಿಸಿದ್ದುಂಟು.

ಚೇಳಿ ಕಡಿತದ ಉರಿಯಿಂದ ಅಳುತ್ತಿದ್ದ ಒಬ್ಬ ಹೆಂಗಸನ್ನು ಹೋಳು ಮೈಯಲ್ಲಿ ಮಲಗಿಸಿ, ದೇಹದ ಎಡಭಾಗಕ್ಕೆ ಚೇಳು ಕುಟುಕಿದ್ದರಿಂದ ಬಲಕಿವಿಯಲ್ಲಿ ತಂಬಾಕಿನ ಘಟ್ಟಿರಸವನ್ನು ಹನಿಸಿದ್ದರಿಂದ ಒಂದೆರಡು ನಿಮಿಷದಲ್ಲಿ ಏರಿದ ವಿಷವೆಲ್ಲ ಇಳಿದು ತಣ್ಣಗಾಯಿತು. ಈ ಚಿಕಿತ್ಸೆಯನ್ನು ಅಡವಿಯ ಗೆಳೆಯನು ಮಾಡಿದ್ದೆಂದರೆ ಇನ್ನೂ ಆಶ್ಚರ್ಯವೆನಿಸುತ್ತದೆ.

ಗಾಣದೆಣ್ಣೆ ಔಷಧಿ

೧೯೨೦-೨೧ರಲ್ಲಿ ಧಾರವಾಡದ ಟ್ರೈನಿಂಗ್‌ಕಾಲೇಜಿಗೆ ಸಂಬಂಧಿಸಿದ ಪ್ರ್ಯಾಕ್ಟಿಸಿಂಗ್‌ಸ್ಕೂಲಿನ ಮುಖ್ಯ ಗುರುಗಳಾದ ದಿ. ವಲ್ಲಭ ಮಹಲಿಂಗ ಕಟ್ಟಿಯವರು “ಬಾಲಮಿತ್ರ” ಎಂಬ ಮಾಸಪತ್ರಿಕೆಯನ್ನು ಹೊರಡಿಸುತ್ತಿದ್ದರು. ವಾರ್ಷಿಕ ಚಂದಾ ೧-೫೦ ರೂ. ಮಾತ್ರ ಇದ್ದರೂ ಅದರಲ್ಲಿ ಸೊಗಸಾದ ವಿಷಯಗಳು ಬರುತ್ತಿದ್ದವು. ನಡೆದು ಹೋದ ಸಂಗತಿಗಳನ್ನು ಇದ್ದಕ್ಕಿದ್ದ ಹಾಗೆ ಪ್ರಕಟಿಸುತ್ತಿದ್ದರು. ಅವುಗಳಲ್ಲಿ ವೈದ್ಯಕೀಯ ಚಿಕಿತ್ಸೆಗಳೂ ಮುಖ್ಯವಾಗಿದ್ದವು. ಆ ಚಿಕಿತ್ಸೆ ನಡೆದ ಊರು, ಚಿಕಿತ್ಸೆ ನಡೆಸಿದವರ ಹೆಸರು ಸಹ ಕಾಣಿಸುತ್ತಿದ್ದರು. ಒಂದು ಪ್ರಸಂಗ ಇನ್ನೂ ನೆನಪಿದೆ. ಧಾರವಾಡ ಜಿಲಲೆಯ ಸೊರಟೂರಿನ ಶಾಲಾ ಗುರುಗಳು ನಡೆಸಿದ ಒಂದೊಂದು ಚಿಕಿತ್ಸೆಯನ್ನೂ ಇಲ್ಲಿ ವಿವರಿಸಬಹುದು.

ಗುರುಗಳು ಹನ್ನೊಂದು ಗಂಟೆಯ ಸುಮಾರಿಗೆ ಶಾಲೆಯಿಂದ ತಮ್ಮ ಮನೆಗೆ ಹೊರಟಾಗ ದಾರಿಯಲ್ಲಿ ಗಾಣಿಗರ ಮನೆಯ ಮುಂದೆ ಒಬ್ಬ ಬಾಲಕ ಬರಿಮೈಯಲ್ಲಿ ಆಡುತ್ತಿದ್ದನು. ಅವನನ್ನು ಚೆನ್ನಾಗಿ ನೋಡಿದರು. ಏನೋ ಸಂಶಯ ಬಂತು ಅವನ ತಾಯಿಯನ್ನು ಕರೆದು, ಹೇಳಿದರು “ಇನ್ನು ತಾಸರ್ಧ ತಾಸು ಕಳೆಯುವಷ್ಟರಲ್ಲಿ ನಿನ್ನ ಮಗ ಬಾಯಾರಿ ಬರುವನು. ಆಗ ಅವನಿಗೆ ನೀರು ಕೊಡದೇ ಒಂದು ತಂಬಿಗೆ ಗಾಣದೆಣ್ಣೆ ಕೊಡು.” ಗುರುಗಳ ಸೂಚನೆಯಂತೆ, ಮಗ ಬಾಯಾರಿ ಬರಲು. ಒಂದು ತಂಬಿಗೆ ಎಣ್ಣೆ ಕೊಟ್ಟಳು. ಬಾಲಕ ಅದಾವುದನ್ನೂ ಲೆಕ್ಕಿಸದೆ, ತಂಬಿಗೆ ಎಣ್ಣೆಯನ್ನೆಲ್ಲ ಕುಡಿದುಬಿಟ್ಟನು. ಮರುಗಳಿಗೆಯಲ್ಲಿ ವಾಂತಿಯಾಗತೊಡಗಲು ತಾಯಿ ಗಾಬರಿಯಾಗಿ ಗುರುಗಳನ್ನು ಕರೆತಂದಳು. ಗುರುಗಳು ಬಂದು ವಾಂತಿಯೊಳಗಿನ ಜೀರಿಗೆಯಷ್ಟಿದ್ದ ಒಂದು ಹುಳುವನ್ನು ಚಿಮಟದಿಂದ ಹಿಡಿದು, ಕಬ್ಬಿಣದ ದೊಡ್ಡ ಪಾತ್ರೆಯಲ್ಲಿ ನೀರು ಹಾಕಿಸಿ ಅದರಲ್ಲಿ ಹಾಕಿದರು. ನೋಡು ನೋಡುವಷ್ಟರಲ್ಲಿ ಆ ಹುಳು ಅದರೊಳಗಿನ ನೀರನ್ನೆಲ್ಲ ಕುಡಿದು ಉಬ್ಬಿಕೊಂಡು ಪಾತ್ರೆಯ ತುಂಬ ಆಗಿಬಿಟ್ಟಿತು. “ನೋಡಿದೆಯಾ? ನಿನ್ನ ಮಗ ಸತ್ತೇ ಹೋಗುತ್ತಿದ್ದನ್ನಲವೇ? ಎನ್ನಲು, ಅಲ್ಲಿದ್ದವರಿಗೆಲ್ಲಆ ಮಾತುಸರಿಯೆನಿಸಿ ಆಶ್ಚರ್ಯಚಕಿತರಾದರು. ಮಗನನ್ನು ಉಳಿಸಿಕೊಟ್ಟರೆಂದು ಗುರುಗಳನ್ನು ಕೊಂಡಾಡಿದರು.

ಅದೇ ಗುರುಗಳು ಇನ್ನೊಂದು ಮಗುವಿನ ಅದಾವುದೋ ಕಾಯಿಲೆಗಾಗಿ ಚಿಕಿತ್ಸೆ ನಡೆಸಿದರು. ಒಂದೆರಡು ವಾರ ಕಳೆದರೂ ಗುಣವಾಗಲಿಲ್ಲ. ಆಗ ಗುರುಗುಳು ಆ ಮಗುವಿನ ತಾಯಿಯನ್ನು ಒತ್ತಟ್ಟಿಗೆ ಕರೆದು“ನಿನ್ನ ಮಗು ಬದುಕಬೇಕೆಂದಿದ್ದರೆ ನನ್ನ ಮುಂದೆ ನಿಜ ಹೇಳು. ನಾನು ನಿನ್ನ ತಂದೆಯ ಸಮಾನ, ಎನ್ನಲು ಆಕೆ ಒಪ್ಪಿದಳು” “ಈ ಮಗುವಿಗೆ ಜನ್ಮ ಕೊಟ್ಟವರಾರು?” ಎಂದು ಗುರುಗಳು ಕೇಳಲು, ಆ ತಾಯಿ “ಒಬ್ಬ ಮುಸ್ಲಿಂ ತರುಣ ಈ ಮಗುವಿಗೆ ಜನ್ಮಕೊಟ್ಟವರು ಎಂದಳು. ಗುರುಗಳು ಮಾಂಸಾಹಾರಿಗಳಿಗಾಗಿ ಇರುವ ಬೇರೊಂದು ಚಿಕಿತ್ಸೆ ನಡೆಸಿ ನಾಲ್ಕು ದಿನಗಳಲ್ಲಿ ಆ ಮಗುವಿಗೆ ಗುಣಪಡಿಸಿದರು.

ಹಸಿವು ದೂರ

ಒಮ್ಮೆ ತಿಂದುಬಿಟ್ಟರೆ ಎಂದೆಂದೂ ಹಸಿವೆಯಾಗದ ಒಂದು ಗಿಡದ ಸೊಪ್ಪು ಇದೆಯೆಂದು ಕೇಳಿದ ಒಬ್ಬಾತ ಗುಡ್ಡಗಾಡು ಎನ್ನದೆ ತಿರುಗುತ್ತ ಆ ಗಿಡದ ಶೋಧದಲ್ಲಿ ತೊಡಗಿದ. ಅದು ಕಪ್ಪತಗುಡ್ಡವೇ ಇರಬೇಕು. ಕಟ್ಟಾರಣ್ಯದ ಬಂಡೆಗಳಲ್ಲಿನ ಮೇಲೆ ಒಬ್ಬ ಸಾಧು ಏನೋ ಅರೆಯುತ್ತ ಕುಳಿತಿದ್ದನ್ನು ದೂರದಿಂದಲೇ ಕಂಡು ಅತ್ತ ಸಾಗಿದ. ಯಾರೋ ಹೊಸಬರು ತನ್ನತ್ತ ಬರುವುದನ್ನು ಕಂಡು, ಸಾಧು ತಾನು ಅರೆಯುತ್ತಿದ್ದ ಸೊಪ್ಪನೆಲ್ಲ ಅವಸರದಿಂದ ಮುದ್ದೆಮಾಡಿಕೊಂಡು ತನ್ನ ಗವಿ ಸೇರಿ ಬಾಗಿಲಿಗೆ ಬಂಡೆಗಲ್ಲು ಅನಿಸಿಕೊಂಡುಬಿಟ್ಟ. ಆ ಕಾಡಾಡಿ ಹಾಸುಗಲ್ಲ ಬಳಿಗೆ ಬಂದು ನೋಡಿದರೆ, ಅದೇ ತರದ ಸೊಪ್ಪು ಅರೆದ ಲಕ್ಷಣ ಕಾಣಿಸಿತು. ಅದು ತಾನು ಹುಡುಕುತ್ತಿದ್ದ ಸೊಪ್ಪೇ ಇರಬೇಕು ಅಂತೆಯೇ ಆ ಸಾಧು ಬಳಕೊಂಡು ಓಡಿಹೋಗಿ ಅಡಗಿಕೊಂಡನೆಂದು ಭಾವಿಸಿ, ಹಾಸುಗಲ್ಲಿಗೆ ಹತ್ತಿರ ಸೊಪ್ಪಿನ ಅಂಶವನ್ನೆಲ್ಲ ಉಗುರಿನಿಂದ ಗೀರಿ ಗೀರಿ ಒಂದು ಗುಳಿಗೆ ಮಾಡಲು ಅದು ತೊಗರಿ ಕಾಳಿನಷ್ಟಾಯಿತು. ಅದನ್ನು ನುಂಗಿಬಿಟ್ಟ.

ಅಂದಿನಿಂದ ಅವನಿಗೆ ಹಸಿವೆಯೇ ಆಗಲಿಲ್ಲ. ಆರೆಂಟು ತಿಂಗಳು ಕಳೆಯಿತು. ಅವನನ್ನು ನೋಡಲು ದೂರದೂರದಿಂದ ಜನರು ಬರತೊಡಗಿದರು. ಹಾಗೆ ಬಂದವರಲ್ಲಿ ಒಬ್ಬ ಸಾಧು ಇದ್ದನು. ಅವನಿಗೆ ಸಂಶಯ ಬಂತು ಈತ ಹಸಿವೆಯಾಗದ ಸೊಪ್ಪು ತಿಂದಿದ್ದಾನೆಂದು. ಸಾಧುವೂ ಅದೇ ಸೊಪ್ಪು ಹುಡುಕುತ್ತಿದ್ದ; ಸಿಕ್ಕಿರಲಿಲ್ಲ. ಸಾಧು ಆತನೊಡನೆ ಸ್ನೇಹ ಬೆಳೆಸಿ, ಅದೆಂಥದೋ ಪ್ರಸಾದವನ್ನು ಕೊಟ್ಟು ಬಾಯಲ್ಲಿ ಹಾಕಿಕೊಳ್ಳಲು ಹೇಳಿದನು. ಅವನು ಅದರಂತೆ ಮಾಡಲು ಮರುಕ್ಷಣದಲ್ಲಿ ವಾಂತಿಯಾಯಿತು. ಅದರಲ್ಲಿ ಹಸಿರು ಗುಳಿಗೆ ಕುಣಿಸಲು, ಅದನ್ನು ತೆಗೆದುಕೊಂಡು ಆ ಸಾಧು ತೊಳೆದು ಬಾಯಲ್ಲಿ ಹಾಕಿಕೊಂಡು ನುಂಗಿ ಹೋಗಿಬಿಟ್ಟನು. ವಾಂತಿಯಾದವನಿಗೆ ಅಂದಿನಿಂದ ಹಸಿವೆಯಾಗಿ ಎಂದಿನಂತೆ ಉಣ್ಣತೊಡಗಿದ.

ಜನಪದ ಚಿಕಿತ್ಸೆಗಳು ಇಂಥ ಆಶ್ಚರ್ಯಕರ ಸಂಗತಿಗಳನ್ನು ಕೈಯೆತ್ತಿ ಹೇಳುತ್ತಿರುವುದರಿಂದ ಅವುಗಳನ್ನು ಸಂಗ್ರಹಿಸುವುದು ಅವಶ್ಯವಲ್ಲವೇ?