ಮನುಷ್ಯನಿಗೆ ಬೇಕಾಗುವ ಅತ್ಯಗತ್ಯದ ಮೂಲಭೂತ ವಸ್ತುಗಳಲ್ಲಿ ಅನ್ನ ಅರಿವೆಗಳು ಮುಖ್ಯವಾಗಿವೆ. ಅವುಗಳಿಗೆ ಜನಪದವು ಹೊಟ್ಟೆ-ಬಟ್ಟೆ ಎನ್ನುತ್ತ ಬಂದಿದೆ. ಆ ಹೊಟ್ಟೆ ಬಟ್ಟೆಯ ಸಮಸ್ಯಗಳನ್ನು ಬಿಡಿಸುವ ಹೋರೆಗಳಿಗೆ ಮೇಟಿ-ರಾಟಿ ಅನ್ನುತ್ತಿದ್ದರು. ಮೇಟಿಯನ್ನು ಆಧರಿಸಿ ಹಲವು ಉದ್ಯೋಗಗಳೂ ರಾಟಿಯನ್ನು ಅನುಸರಿಸಿ ಹಲವು ಉದ್ಯೋಗಗಳೂ ಆನುಷಿಂಗಿಕವಾಗಿ ಹುಟ್ಟಿಕೊಂಡವು. ಅವೆಲ್ಲ ಜನಪದ ಉದ್ಯೋಗಗಳಾಗಿ ಹಳ್ಳಿ-ಗ್ರಾಮಗಳಲ್ಲಿ ಕಂಡು ಬಂದವು. ಆ ಆ ಉದ್ಯೋಗಗಳು ನಮ್ಮ ಜನಪದಕ್ಕೆ ಉತ್‌ಯೋಗಗಳಾಗಿ ಪರಿಣಮಿಸಿದ್ದರಿಂದ ಜಾನಪದವು ನೆಮ್ಮದಿಯಿಂದ ಬದುಕಲು ಸಾಧ್ಯವಾಯಿತು ಆದರೆ.

ಭಾರತವು ಪರಕೀಯರ ದಾಳಿಗೆ ಈಡಾಗುತ್ತ ಬಂದಂತೆ, ಅವುಗಳನ್ನು ಅದೆಷ್ಟು ಸಮರ್ಥವಾಗಿ ಎದುರಿಸಿದರೂ ಸ್ವಾಧೀನತೆ ಮಾತ್ರ ಕಳಚತೊಡಗಿತು. ಮಹಮ್ಮದೀಯರು ದಾಳಿಯಿಟ್ಟು ದೇಶದ ಸಂಪತ್ತನ್ನೂ ಸೂರೆ ಮಾಡಲು ಬಂದವರಾದರೂ ಅವರು ಅರಸೊತ್ತಿಗೆಯನ್ನು ಗಳಿಸಿಕೊಂಡು ಇಲ್ಲಿಯೇ ನೆಲೆಸಿ ಭಾರತೀಯರಾದರು. ಆದರೆ ಬ್ರಿಟಿಷರು ಭಾರತದಲ್ಲಿ ಇಡಿಯ ಶತಮಾನಕಾಲ ವಾಸ ಮಾಡಿದರೇ ಹೊರತು ನಿಂತು ನೆಲೆಸಲಿಲ್ಲ: ಭಾರತೀಯರಾಗಲಿಲ್ಲ. ಅವರು ಭಾರತ ದೇಶವನ್ನು ತಮ್ಮ ಉದ್ಯೋಗಗಳಿಂದ ಸಿದ್ಧವಾಗುವ ವಸ್ತುಗಳನ್ನು ಮಾರಿಕೊಳ್ಳುವ ಮಾರುಕಟ್ಟೆಯನ್ನಾಗಿ ಮಾರ್ಪಡಿಸಿಕೊಂಡರು.

ಹಾಗೆ ಮಾಡುವಾಗ ನಮ್ಮದೇಶದ ಉದ್ಯೋಗಗಳು ಕತ್ತು ಹಿಸುಕಿ ಸಾಯ ಹೊಡೆಯುವ ಮದಗುಣಿಕಿಯನ್ನು, ಮುದ್ದಿಡುವ ನೆಪದಲ್ಲಿ ನುಂಗಿಸುತ್ತ ಬಂದರು, ಅದರಿಂದ ರಾಟಿಯ ಉದ್ಯೋಗಕ್ಕೂ, ಅದನ್ನು ಆಧರಿಸಿಕೊಂಡು ಬಂದ ಉದ್ಯೋಗಗಳಿಗೂ ಅರದಾಳ ಹತ್ತುತ್ತ ಬಂದಿತು. ಅದರ ಪರಿಣಾಮವಾಗಿ ಕ್ರಮೇಣ ರಾಟಿಯ ಉದ್ಯೋಗವು ನಡುಗಹತ್ತಿದ್ದರಿಂದ ಉಳಿದ ಉದ್ಯೋಗಗಳು ಉಡುಗತೊಡಗಿದವು. ಉದ್ಯೋಗದ ಬೇರಿಗೇ ಕೊಡಲಿಯೇಟು ಬೀಳಹತ್ತಿದ್ದರಿಂದ, ಅದರ ಕಸಬಿಗೂ ಬಳಕೆ ತಪ್ಪಿ ಅದು ಜಂಗು ತಿನ್ನತೊಡಗಿತ್ತು. ಆದ್ದರಿಂದ ಕಸಬು ಕಳಕೊಂಡವರೆಲ್ಲ ಅಡ್ಡ ಕಸಬಿಗಳಾಗಿ ಹೊಟ್ಟೆಯ ಪಾಡಿಗೆ ಇನ್ನೇತಕ್ಕೋ ಒತ್ತೆಗೊಂಡಿದ್ದರಿಂದ ಆ ಆ ಉದ್ಯೋಗಳಿಗೆ ಸಂಬಧಿಸಿದ ಪಾರಿಭಾಷಿಕ ಶಬ್ದಗಳೆಲ್ಲೆ ಅಪರಿಚಿತವಾಗತೊಡಗಿದವು. ಅವು ಪರಕೀಯವಾಗಿ ಪರಿಣಮಿಸಿದ್ದರಿಂದ ಸಂಬಂಧವೇ ತಪ್ಪಿ ಗುರುತಿಸಲಾರದಂತಾಗಿ ಬಿಟ್ಟವು.

ಪಾರತಂತ್ರ್ಯದ ಕಾಲಾವಧಿಯಲ್ಲಿ ರಾಟಿಯ ಉದ್ಯೋಗವು ಮೂಲೆ ಗುಂಪಾಗಿ ಕೈಮಗ್ಗಗಳು ಮೆರುಗಟ್ಟತೊಡಗಿದಾಗ ಮಹಾತ್ಮ ಗಾಂಧಿಯವರ ‘ಖಾದಿ’ ಚಳುವಳಿಯಿಂದ ಅದು ತುಸು ಮಿಸುಕಾಡಿದರೂ ಕಳಕೊಂಡ ಜೀವವಾಗಲಿ, ಕಳೆಗುಂದಿದ ಜೀವಾಳವಾಗಲಿ, ಅದಕ್ಕೆ ಮರಳಿ ಬರಲಿಲ್ಲವೆಂದೇ ಹೇಳಬೇಕು. ಬ್ರಿಟಿಷರ ಪ್ರತಿಕ್ರಿಯೆ ಬಟ್ಟೆಯೊಡನೆ ಮಾತ್ರ ಸಂಬಂಧಪಟ್ಟಿದ್ದರಿಂದ, ರಾಟಿಯನ್ನು ಮುಂದೆ ಮಡಿಕೊಂಡ ಉದ್ಯೋಗಗಳಲ್ಲಿ ಕಾಲೆಳೆಯ ತೊಡಗಿದವು. ಮೇಟಿಗೆ ಸಂಬಂಧಿಸಿದ ಉದ್ಯೋಗಗಳಲ್ಲಿ ಇನ್ನೂ ಜೀವನಾಡಿ ಮಿಡಿಯುತ್ತಿದ್ದರೂ, ದೇಶದ ಅಂಗಾಂಗಳೆಲ್ಲ ಅರ್ಧಾಂಗವಾಯುವಿಗೆ ಈಡಾಗುವ ಲಕ್ಷಣ ಸ್ಪಷ್ಟವಾಗಿ ಕಂಡುಬರತೊಡಗಿತು.

ಭಾರತಕ್ಕೆ ಸ್ವಾಧೀನತೆ ಪ್ರಾಪ್ತವಾದ ಬಳಿಕ ಅದರ ಪಾರ್ಶ್ವವಾಯುವು ಹಿಮ್ಮೆಟ್ಟಿ ಶಕ್ತಿ ತುಂಬಿ ಆರೋಗ್ಯ ಸಂಪಾದಿಸಬಹುದೆಂದು ಎಣಿಸಲಾಗಿತ್ತು. ಆದರೆ ಕೈನೂಲಿನ ಸ್ಥಳವನ್ನು ಗಿರಣಿ ನೂಲು ಆಕ್ರಮಿಸಿದಂತೆ ಕೈಮಗ್ಗಗಳ ನೆಲೆಯಲ್ಲಿ ಯಾಂತ್ರಿಕ ಮಗ್ಗಗಳು ಕಾಲು ಚಾಚತೊಡಗಿದ ಕಾರಣದಿಂದ ನೆಯ್ಯುವ ಉದ್ಯೋಗವೂ ಹೇಳಹೆಸರಿಲ್ಲದಂತಾಗುವ ಪರಿಸ್ಥಿತಿಗೆ ಬಂದಿದೆ.

ಇನ್ನು ಮೇಟಿಗೆ ಸಂಬಂಧಿಸಿದ ವಿಷಯಗಳೆಲ್ಲ ಸ್ವಾಧೀನತೆಯ ವಾತಾವರಣದಲ್ಲಿ ತುಂಬ ಕಳಕಳಿಸಬಹುದೆಂದು ನಂಬಲಾಗಿತ್ತು. ಅದೆಷ್ಟು ಹೊಯ್ ಹಾಲು ಹಾಕಿದರೂ ತಾಯಿಯ ಮೊಲೆ ಹಾಲು ಕುಡಿದಂತಾಗಲೊಲ್ಲದಾಗಿದೆ. ಮೇಟಿಯ ಸ್ವರೂಪವೇ ಬದಲಾಗುತ್ತಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. “ರಾಟಿ ಮೇಟಿಗಳೆಳಿಯೆ ದೇಶದಾಟವೇ ಕೆಡಗು” ಎನ್ನುವ ಸರ್ವಜ್ಞವಾಣಿಯನ್ನು ಸುಳ್ಳುಮಾಡಿ ತೋರಿಸುವದಕ್ಕೆ ಯಂತ್ರಗಳು ಫಲ ಕೊಟ್ಟೇ ನಿಂತಿವೆಯೆಂದರೂ, ಸಕಲ ಜನರಿಗೆ ಲೇಸನೊದಗಿಸುತ್ತಿದ್ದ ರಾಟಿ ಮೇಟಿಗಳ ಸಾರ್ವಭೌಮಿಕ ಗಾತ್ರವು ಕೈಕಾಲು ಕಳಕೊಂಡ ಮೋಟಮರವಾಗಹತ್ತಿದ್ದು ಪ್ರತ್ಯಕ್ಷ ಪ್ರಮಾಣವಾಗಿ ನಿಲ್ಲತೊಡಗಿದೆ. ಅದರೊಡನೆ ಪ್ರತ್ಯಕ್ಷ ಪರಿಣಾಮವನ್ನೂ ಅನುಭವಿಸುತ್ತಲಿದ್ದೇವೆ.

ಇದೆಲ್ಲ ರಾಟಿ ಮೇಟಿಗಳಿಗೆ ಸಂಬಂಧಿಸಿದ ಜೀವನವನ್ನು ಕುರಿತು ಕಥೆಯಾಯಿತು.

ಜೀವನವೇ ಹಳಸಿದ ಬಳಿಕ ಅದರ ಸಾಹಿತ್ಯಕ್ಕೆ ಬೇರೆ ವಾಸನೆ ಎಲ್ಲಿಂದ ಬಂದೀತು? ಅದೇ ವಾಸನೆ ಬರತೊಡಗಿದರೆ ಆಶ್ಚರ್ಯವೇನು? ನೂಲುತ್ತಿರುವಾಗ, ಭತ್ತ ಕುಟ್ಟುವಾಗ ಬಗೆದುಂಬಿ ಹಾಡುವ ಅನಾಥರಂತೆ ರಂಡೆತನ ಭೋಗಿಸತೊಡಗಿದವು. ಪಂಪಿನಿಂದ ನೀರೆತ್ತುವ ಸೌಕರ್ಯವುಟಾದರೆ, ಯಂತ್ರಗಳಿಂದ ತೆನೆ ತುಳಿಸುವ ಅನುಕೂಲತೆಯುಂಟಾದರೆ ಮೊಟ್ಟೆಯ ಹಾಡುಗಳಾಗಲಿ, ಹಂತಿಯ ಹಾಡುಗಳಾಗಲಿ ಎಲ್ಲಿ ಕೇಳಸಿಗಬೇಕು?

ಯಂತ್ರಗಳ ಕಾರಣದಿಂದ ಮರೆಯಾದ ಜಾನಪದ ಹಾಡುಗಳನ್ನು ಯಂತ್ರಗಳಲ್ಲಿಯೇ ಸೈತಿಡುವ ಎತ್ತುಗಡೆ ನಡೆದಿದೆ. ಅದರಿಂದ ಹಾಡುಗಳು ನಾಲ್ಕೊಪ್ಪತ್ತು ಬದುಕಿ ಉಳಿಯಬಹುದು. ಆದರೆ ಅವುಗಳಿಂದ ಆಗಬೇಕಾದ ಪ್ರಯೋಜನವಾಗಲಿ, ಸಾಪಲ್ಯವಾಗಲಿ, ಉಂಟಾಗಬಹುದೇ?

ರಾಟಿಮೇಟಿಗಳಿಗೆ ಸಂಬಂಧಿಸಿದ ಉದ್ಯೋಗಗಳೆಲ್ಲ ಹುಳಹತ್ತಿ ಹಿಟ್ಟುದುರಿ ಹೋದ ಬಳಿಕ, ಅದರ ಪರಿಭಾಷೆಯಾಗಲಿ, ಆಯಾ ಉದ್ಯೋಗಗಳಲ್ಲಿ ಬಳಸಲಾಗುತ್ತಿದ್ದ ವಿಶಿಷ್ಟ ಶಬ್ದಗಳಾಗಲಿ ಹಣ್ಣೆಲೆಗಳಂತೆ ಸಪ್ಪಳಿಲ್ಲದೆ ನೆಲಕ್ಕಿಳಿದು ಬೀಳು ಸೊಪ್ಪೆಯಾಗಿ ಗಾಳಿ ಒಯ್ದತ್ತ ಹಾರಿ ಹೋಗಿ ಮಳೆ-ಬಿಸಿಲುಗಳಲ್ಲಿ ಗುರುತು ಸಹ ಕಳಕೊಂಡು ಮಣ್ಣುಗೂಡಿ ಹೋಗುವವು. ಅದು ಕನ್ನಡ ಶಬ್ದ ಭಾಂಡಾರಕ್ಕೆ ಒದಗಿದ ತುಂಬಿ ಬಾರದ ಹಾನಿಯಲ್ಲವೇ? ಕೈಬಿಟ್ಟು ಹೋದ ಉದ್ಯೋಗಗಳೇ ಮರೆತು ಹೋಗುತ್ತಿರುವಾಗ, ಆ ಉದ್ಯೋಗಗಳಿಗೆ ಸಂಬಂಧಿಸಿದ ಶಬ್ದಗಳು ಯಾವ ಕೆಲಸಕ್ಕೆ ಬಂದಾವು ಎನ್ನುವುದಾದರೆ ಅಡ್ಡಿಯಿಲ್ಲ.

ಜೌದ್ಯೋಗಿಕ ಶಬ್ದಗಳನ್ನು ಲೆಕ್ಕಿಸುವುದೆಂದರೆ ಸತ್ತ ಎಮ್ಮೆಯ ಸೇರು ತುಪ್ಪ ನೆನೆಸಿದಂತೆಯೇ ಸರಿ. ಬೋಳಿ ತನ್ನ ತುರುಬ ನೆನೆಸಿಕೊಂಡು ಅತ್ತರೆ,ಅದು ಮತ್ತೆ ಚಿಗುರಬಹುದೇ? ಎಂಥಂಥ ಸುಂದರವಾದ ಶಬ್ದಗಳು! ಎಂಥೆಂಥ ಅರ್ಥಪೂರ್ಣವಾದ ಪದಗಳು!!

ಹೊಲ ಕೆಲಸಕ್ಕೆ ಸಂಬಂಧಿಸಿದ ಕೆಲವು ಶಬ್ದಗಳನ್ನು ಉದಾಹರಣೆಗಾಗಿ ನೋಡುವಾ,

ಹಿಡಿದೆನೆ, ಉಡಿದೆನೆ, ಪೆಂಡೋಳಿ, ಕಂಬರಗೋಲು, ಮೆಟ್ಟುನಾಲಗೆ, ಮುಂಬು, ಹುಳಿನೀರು, ತೊಳೆನೀರು, ಮಿಣಿ, ಬಿಡುಗಾವಲಿ, ಸಡ್ಡು ಹೊಡೆ ಇತ್ಯಾದಿ

ಮಗ್ಗಕ್ಕೆ ಸಂಬಂಧಿಸಿದ ಕೆಲವು ಶಬ್ದಗಳು-

ಕೈಯಲ್ಲಿ, ಠಾಣೆಕೋಲು, ಸುಂದರಿಕೆ, ಚಟ್ಟಲಿ, ಊಟಗೋಲು, ಠಾಣೆಗೆ, ಸಳ್ಳುಉಳಿಗೆಚ್ಚು ಇತ್ಯಾದಿ.

ಬಣ್ಣಗಾರಿಕೆಗೆ ಸಂಬಂಧಿಸಿದ ಕೆಲವು ಶಬ್ದಗಳು-

ಪಡಗು, ಬಳ್ಳೊಣ್ಣೆ, ಕಲೇ, ಲಂದೆ, ಕಡೆಕಟ್ಟಿ, ಕೇಲು, ಕಾರದ ನೂಲು, ಆಣಿಹಾಕು, ಸುರಂಜಿ, ಬಣ್ಣಚೆಕ್ಕಿ, ಕಾರಬೂಡಿ, ಸೌಳುಕಾರ ಇತ್ಯಾದಿ.

ಮೇಲೆಕಾಣಿಸಿದ ಶಬ್ದಗಳಿಗೆ ಅರ್ಥಗಳನ್ನು ಇಲ್ಲಿ ಕೊಡಲಾಗಿದೆ.

ಹಿಡಿದೆನೆ….ಒತ್ತಟ್ಟಿಗೆ ಕೂಡಿಸಿದ ಉತ್ತಮ ಕಾಳಿನ ತೆನೆ: ಉಡಿದೆನೆ-ಹೊಲಗೆಲಸಕ್ಕೆ ಬಂದ ಹೆಣ್ಣುಮಕ್ಕಳಿಗೆ ಕೂಲಿಯಲ್ಲದೆ, ಉಡಿಯಲ್ಲಿ ಹಾಕಿದ ತೆನೆ.

ಪೆಂಡೊಳಿ-ವಿಚಿತ್ರ ಗಂಟುಗಳುಳ್ಳ ಕವಣಿಯ ಒಬ್ಬದಿರ ದಾರ.

ಕಂಬರಗೋಲು-ಮೊಟ್ಟೆಯೆತ್ತಲು ಅನುಕೂಲವಾಗುವಂತೆ ಏರ್ಪಡಿಸಿದ ಗಾಲಿ ಮೆಟ್ಟು ನಾಲಿಗೆ: ಹಂತಿಯೊಳಗಿನ ಮದವನ್ನು ತೂರುವ ಕೆಲಸಕ್ಕೆ ಉಪಯೋಗಿಸುವ ಮೂರು ಕಾಲಿನ ಮಂಚಿಕೆ.

ಮುಂಬು:ಬೆಳೆಯೊಳಗಿನ ಕಸಕೀಳುವದಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರ. ಹುಳಿ ನೀರು: ಮಳೆ ನೀರಿನ ಹಸಿಯಿದ್ದರೂ ಬೆಳೆಗಳಿಗೆ ಬಿಡುವ ಬಾವಿ ನೀರು. ತೊಳೆನೀರು: ಹಾಲುಕಾಸುವ ಗಡಿಗೆಯಲ್ಲಿ ಹಿಂಡಿಕೊಂಡು ತಂದ ಹಾಲಿನೊಡನೆ ಪಾತ್ರೆ ತೊಳೆದು ಬೆರೆಸುವ ನೀರು.

ಮಿಣಿ:ಮೊಟ್ಟೆ ಎಳೆಯುವದಕ್ಕೆ ಉಪಯೋಗಿಸುವ ಹಗ್ಗ. ಬಿಡುಗಾವಲಿ: ಮೊಟ್ಟೆಯೆಳೆದು ಸಂಗ್ರಹಿಸಿದ ನೀರು ಸಾವಧಾನದಿಂದ ಮಡಿಗಳಿಗೆ ಸಾಗಿಸುವ ಹರಿ; ಸಡ್ಡುಹೊಡೆ; ಮದ ತೂರಿದಾಗ ಕೆಳಗಿನ ಕಾಳಿನಿಂದ ಕಂಕಿಯನ್ನು ಕಡೆಗಾಗಿಸುವುದು. ಕೈಯೆಳೆ ಜೇಡರಲ್ಲಿ ಹೆಚ್ಚಾಗಿರುವ ಎಳೆಯನ್ನು ತುದಿ ಬೆರಳುಗಳಿಗೆ ಸುತ್ತಿದ್ದು. ಠಾಣಕೋಲು: ಮಗ್ಗದ ಮೇಲಿನ ಹಾಸನ್ನು ಬಿಗಿದು ಕಟ್ಟುವದಕ್ಕೆ ಉಪಯೋಗಿಸುವ ಕೋಲು. ಸಂದರಿಕೆ: ಉಂಕಿಯೆಳೆಗಳನ್ನು ಕೆಚ್ಚಿ ನೆಯ್ಯುವದಕ್ಕೆ ಅನುಗೊಳಿಸಿದ ಹಾಸು. ಚಟ್ಟಲಿ: ಕಂಡಿಕೆಗಳು ಹಸಿಯಾಗಿ ಉಳಿಯುವಂತೆ ಕಾದಿಡುವ ಮಣ್ಣಿನ ಪಾತ್ರೆ. ವಾಟಗೋಲು-ಉಂಕಿಯನ್ನು ಬಿಗಿದು ನಿಲ್ಲಿಸುವುದಕ್ಕೆ ಉಪಯೋಗಿಸುವ ಕತ್ತರಿಯಾಕಾರದ ಉಪಕರಣ; ಠಾಣೆಗೆ ನೇಯುವ ಹಾಸಿಗೆ ಉಪಯೋಗಿಸಿ ಉಳಿದ ಉಂಕಿಯ ಭಾಗ; ಸಳ್ಳು-ಮಗ್ಗದ ಮೇಲಿನ ಹಾಸಿನಲ್ಲಿರುವ ಒಂದು ತಿಳುವಾದ ಬಿದಿರುಕಂಬಿ; ಉಳಿಗೆಚ್ಚು-ಬೇರೆ ಬೇರೆ ಠಾಣಿಗೆಗಳನ್ನು ಕೆಚ್ಚಿ ನೇಯ್ಗೆಯ ಹಾಸು ತಯಾರಿಕೆ; ಪಡಗುನೂಲು ಬಣ್ಣ ಗ್ರಹಿಸುವುದಕ್ಕೆ ಅಣಿಗೊಳಿಸುವ ಮೊದಲು, ತೋಯಿಸಿ ತುಳಿಯುವ ಒಂದು ಕಲ್ಲಿನ ಕುಣೆ; ಬಳ್ಳೊಣ್ಣೆ-ಪಡಗಿನಲ್ಲಿ ಹಾಕಿದ ನೂಲು ತೊಯಿಸುವ ರಾಸಾಯನಿಕ ನೀರು; ಕಲ್ಲೆ ನೂಲನ್ನು ಬಣ್ಣದ ನೀರಲ್ಲಿ ತೊಯಿಸುವುದು, ಲಂದೆ ಕಲ್ಲೆ ಮಾಡುವುದಕ್ಕೆ ಉಪಯೋಗಿಸುವ ಮಣ್ಣಿನ ದೊಡ್ಡ ಪಾತ್ರೆ; ಕಡೆಕಟ್ಟಿ-ಬಣ್ಣ ಹಾಕಿದ ನೂಲನ್ನು ಕುದಿಸುವ ಒಲೆ; ಕೇಲು ನೀಲಿ ಬಣ್ಣ ಆಣೆಗೊಳಿಸಿದ ರಂಜನೆಗೆ; ಕಾರದ ನೂಲು-ರಾಸಾಯನಿಕ ನೀರಲ್ಲಿ ತೊಯಿಸಿ ಒಣಗಿಸಿದ ನೂಲು; ಡಬರಿ-ರಾಸಾಯನಿಕ ನೀರನ್ನು ಬಳಸುವ ಕಲ್ಲಿನ ಪಾತ್ರೆ; ಅಣಿಹಾಕು ಬಣ್ಣ ಹಾಕುವ ನೂಲು ಗುಂಜಾಗದಂತೆ ಮಾಡುವ ಏರ್ಪಾಡು; ಸುರಂಜಿ-ಬಣ್ಣದ ಬೇರು; ಬಣ್ಣ ಚೆಕ್ಕಿ ಬಣ್ಣದ ಬೇರು; ಕಾರಬೂದಿ – ಬಾಳೆಯ ಸೊಪ್ಪು ಸುಟ್ಟು ಮಾಡಿದ ಬೂದಿ; ಸೌಳುಕಾರ ರಾಸಾಯನಿಕ ನೀರು ತಯಾರಿಸುವ ಒಂದು ಹೆಂಟೆ.

ಕೈಬಿಟ್ಟು ಹೋದ ವಿವಿಧ ಉದ್ಯೋಗಗಳಿಂದ ಇಂಥ ಶಬ್ದಗಳನ್ನು ಉದಾಹರಿಸಬಹುದು. ಇವುಗಳನ್ನು ಕಾಪಾಡಿಕೊಳ್ಳುವ ಎತ್ತುಗಡೆಯೊಡೆನೆ ಇವುಗಳ ಬಳಕೆಯೂ ಆಗುತ್ತಲಿರುವಂತೆ ನೋಡಿಕೊಳ್ಳುವ ಹತ್ತಗಡೆಯೂ ನಡೆಯಬೇಕಾಗಿದೆ. ಆಯಾ ಉದ್ಯೋಗಗಳಿಗೆ ಸಂಬಂಧಿಸಿದ ಕತೆಗಳನ್ನೋ ಲಲಿತ ಪ್ರಬಂಧಗಳನ್ನೋ ಬರೆದು ಲಾವಣಿಗಳನ್ನೋ ಹಾಸ್ಯಗಳನ್ನೋ ಹೆಣೆದು, ಅದರಲ್ಲಿ ಅಂಥ ಶಬ್ದಗಳು ಅನುಷಂಗಿಕವಾಗಿ ಬರುವಂತೆ ಲೇಖಕರು ಯಥಾಶಕ್ತಿ, ಆಸಕ್ತಿ ಚಿತ್ರವಾಗಿ ಉಳಿಯುವುದಲ್ಲದೆ, ಔದ್ಯೋಗಿಕ ಶಬ್ದಗಳು ಜೀವಕಳೆ ಹೊಂದಿ ಬದುಕುವವು. ಆಸಕ್ತಿಯುಳ್ಳವರು ಇತ್ತ ಗಮನಿಸಬಹುದೇ?