ಗಾದೆಯ ಮಾತು ವೇದಕ್ಕೆ ಸಮಾನವೆನಿಸಿವೆ. ಆದರೆ ವೇದಗಳೇ ಮೂಲೆಹಿಡಿದು ಕುಳಿತ ಕಾಲದಲ್ಲಿ ಗಾದೆಯ ಮಾತು ಯಾವ ಗಿಡದ ತೊಪ್ಪಲು? ಹನುಮಪ್ಪನೇ ಹಗ್ಗ ತಿನ್ನುವಾಗ ಪೂಜಾರಿ ಶಾವಿಗೆ ಬೇಡುವುದು ಹಾಸ್ಯಾಸ್ಪದ. ವೇದಗಳು ದೇವಮುಖದಿಂದ ಹೊಮ್ಮಿದ ಮಾತುಗಳೆಂದು ಹೇಳಲಾಗುವಂತೆ, ಗಾದೆಗಳು ಯಾವ ಮುಖದಿಂದ ಹೊಮ್ಮಿದವೆಂಬುದನ್ನು ಯಾರೂ ಹೇಳಲಾರರು. ಆದರೆ ಅವು ಹೊರಹೊಮ್ಮುವುದಕ್ಕೆ ಮುಖವೊಂದು ಇರಲೇಬೇಕಲ್ಲವೇ?

ಅಚ್ಚುಕಟ್ಟಾದ ಮೈಕಟ್ಟಿನಿಂದ ಗಾದೆಯ ಮಾತು ಕಾವ್ಯಸ್ವರೂಪವನ್ನು ತೊಟ್ಟಿದ. ನಿಶ್ಚಿತಾನುಭದದಿಂದ ಅಜರಾಮರತೆಯನ್ನು ಪಡೆದಿದೆ. ಉಚಿತ ಶಬ್ದಾರ್ಥಗಳಿಂದ ಅರ್ಥಾಂತರನ್ಯಾಸವಾಗಿ ಭಾಷೆಯನ್ನು ಅಲಂಕರಿಸಿದೆ. ವಾಸ್ತವಿಕತೆಯಿಂದ ಯಾರಿಗೂ ದೂರದಗುಡ್ಡವಾಗಿ ನಿಂತಿಲ್ಲ. ಇಂದಿನ ಯೋಧನು ಉಪಯೋಗಿಸಲಾರನೆಂದು, ಕತ್ತಿ ಗುರಾಣಿಗಳು ಆಯುಧವನಿಸಲಾರವೇ? ಮುದ್ರೆ ಸವಕಳಿಗೊಂಡರೂ ನಾಣ್ಯದ ಧಾತು ಬೆಲೆ ಕಳಕೊಳ್ಳಲಾರದು. ಹೊನ್ನಮುದ್ರೆಯ ನಾಣ್ಯಕ್ಕೆಂದಾದರೂ ತುಕ್ಕು ಹಿಡಿಯುವುದೇ? ಕಾಸಿತೆಗೆದರೆ ಅದು ಥಳಥಳಿಸುವ ಮಿಂಚು ಮೈಯಿಂದ ಸುವರ್ಣವೆನಿಸಲಾರದೇ? ರೊಟ್ಟಿಯೇ ಬಂಗಾರವಾಗಿರುವ ಇಂದಿನ ಕಾಲದಲ್ಲಿ ನಿಜವಾದ ಬಂಗಾರವು ಯಾರ ಬಳಿಯಲ್ಲಿ ಉಳಿದಿದೆ?

ಎತ್ತು ಎರೆಗೆ ಕೋಣ ಕೆರೆಗೆ

ಈ ಮಾತು ತಾಜಮಹಲಿನಿಂದ ಕಳಚಿಬಿದ್ದ ಸಂಗಮದವರಿ ಶಿಲೆಯಂತಿದೆ. ಬೆಲೆಯಲ್ಲಿ, ನೆಲೆಯಲ್ಲಿ, ಕಲೆಯಲ್ಲಿ, ಕುಶಲತೆಯಲ್ಲಿ, ಎರೆಯೆಂದರೆ ಮುತ್ತಿನಂಥ ಜೋಳವನ್ನೂ, ಹವಳದಂಥ ಗೋದಿಯನ್ನೂ ಬೆಳೆಯುವ ನೆಲ. ತೆನೆಗಣಿಕೆಯನ್ನು ತಿಂದುಬೆಳೆದ ಹೋರಿಯೇ ಎತ್ತಾಗಿದೆ. ನೀರು ಕಂಡಲ್ಲಿ ಮುಳುಗಿ, ಹುದಿಲು ಕಂಡಲ್ಲಿ ಹೊರಳಾಡಿ ಬೆಳೆದುಬಂದ ಎಮ್ಮೆಯ ಮಗುವೇ ಕೋಣವಾಗಿದೆ. ಒಂದು ಎತ್ತು, ಇನ್ನೊಂದು ಕೋಣ ಗಾಡಿಗೆ ಹೂಡಿ ಹೊಡೆದರೆ, ಅವು ಸರಿದಾರಿಯಲ್ಲಿ ನಡೆಯಲಾರವು. ಎರೆಯ ನೆನಹು ಎತ್ತಿಗೆ, ಕೆರೆಯ ಸ್ಮರಣೆ ಕೋಣನಿಗೆ. ವಿಷಮ ದಾಂಪತ್ಯವು ಎತ್ತು ಕೋಣಗಳ ಜೊತೆಯಂತೆ ಅಡ್ಡಾದಿಡ್ಡಿಯಾಗುವದೆನ್ನುವ ಅರ್ಥದಲ್ಲಿ ಎತ್ತು ಎರೆಗೆ, ಕೋಣ ಕೆರೆಗೆ ಎಂಬ ಗಾದೆಯನ್ನು ಬಳಸುವುದುಂಟು.

ಕುರುಬ ಕುಂಬಾರತಿಗೆ ಹೋದರೆ
ಜೇಡನು ಆಡಿನ ಕಾಲು ಮುರಿದನು.

ಇದೇನಿದು? ಎಮ್ಮೆಗೆ ಹೊಡೆದು ಹೋದರೆ, ಕುದುರೆ ಲತ್ತೆ ಹೊಡದಂತಾಗಿದೆ. ಕುರಿಗಳನ್ನು ಮೇಯುತ್ತ ಕಾಡಿನಲ್ಲಿ ಅಲೆಯುವ ಕುರುಬನು, ಮನೆಯಲ್ಲಿ ಕುಳಿತು ಗಡಿಗೆ-ಮಡಿಕೆ ಮಾಡುವ ಕುಂಬಾರನ ಹೆಂಡತಿಯೊಡನೆ ಸ್ನೇಹ ಬೆಳೆಸಿದ್ದನು. ಆದರೆ ಹಗಲು ಹನ್ನೆರಡು ತಾಸು ಮಗ್ಗದಲ್ಲಿ ಕುಳಿತು ನೆಯ್ಗೆ ಕೆಲಸ ಮಾಡುವ ಜೇಡನು, ಅದೇಕೆ ಎದ್ದು ಹೋಗಿ ಆಡಿನ ಕಾಲುಮುರಿಯಬೇಕು? ಆಡು ಕುರುಬನ ಬದುಕು. ಅದರ ಕಾಲು ಹೋದರೆ, ಕುರುಬನ ಕಾಲು ಮುರಿದಂತಾಗುವದೆಂದು ಬಗೆದಿರಬಹುದೇ ಆ ಜೇಡ? ನೇರವಾಗಿ ಕುರುಬನ ಕಾಲು ಮುರಿಯಲಿಲ್ಲವೇಕೆ? ಅಂರ್ಥ ಧೈರ್ಯ ಜೇಡನಿಗೆ ಬಂದಿರಲಾರದು. ಹೊಟ್ಟೆಯೊಳಗಿನ ಸಿಟ್ಟು ರಟ್ಟೆಯಲ್ಲಿ ಇರಬೇಕಲ್ಲ! ಅದಾವ ಸಿಟ್ಟು ಆತನ ಹೊಟ್ಟೆಯಲ್ಲಿ ಹುದುಗಿತ್ತು? ಆ ಸಿಟ್ಟನ್ನು ತಣಿಸುವುದಕ್ಕಾಗಿ ಆಡಿನ ಕಾಲು ಮುರಿದು, ಜೇಡನು ಅದಾವ ಕನಸು ತೀರಿಸಕೊಂಡನು? ಇಲ್ಲಿ, ಕುಂಬಾರತಿ ಮೊದಲು ಜೇಡನ ಮನದನ್ನೇ ಆಗಿರಬಹುದೇ? ಅಹುದು, ಸಾಧ್ಯವಿದೆ. ತನ್ನ ಬಾಯತುತ್ತು ಕಸಿದುಕೊಂಡ ಕುರುಬನನ್ನು ಕೆಣಕಲಿಕ್ಕಾಗದೆ, ಆತನ ಆಡಿನೊಡನೆ ಸೆಣಸಾಡಿ ಅದರ ಕಾಲು ಮುರಿದಿರಬಹುದು.

ಅಂದಂತೆ ಅನ್ನುವವನು ಹಂದಿಯ ಹೇಲು ತಿಂದಂತೆ.

ಮುಗ್ಧರು ಮಾತಾಳಿಯ ಮಾತಿಗೆ ಮಾರುಮಾತಿನಿಂದ ಉತ್ತರ ಕೊಡಲಿಕ್ಕಾಗದೆ, ಅನಿಸಿಕೊಂಡಿದ್ದನ್ನೇ ಮರಳಿ ಅಂದು ಬಿಟ್ಟು ತೃಪ್ತರಾಗುವುದುಂಟು. ಮರುಳೇ ಎಂದಾಗ ‘ನೀಮರುಳ’ ಎಂದೂ, ಹೇಸಿ ಮುಖದವನೇ ಅಂದಾಗ ‘ನೀ ಹೇಸಿ ಮುಖದವನೇ’ ಎಂದೂ ಮಾರುತ್ತರವಿತ್ತು, ಸೋತಿಲ್ಲವೆನ್ನುವಂತೆ ವರ್ತಿಸುವುದುಂಟು. ಅಂಥ ಸಂದರ್ಭದಲ್ಲಿ ಮೇಲಿನ ಮಾತು ಹುಟ್ಟಿಕೊಂಡಿತೇನೋ, ಅಂದಂತೆ ತಿನ್ನುವುದು ಚಿರ್ವಿತ ಚರ್ವಣ ಎಂಜಲುಗಿಂಜಲು. ಹಂದಿ ಊರಜನರ ಹೊಲಸನ್ನೆಲ್ಲ ತಿಂದುಹಾಕುವುದು ಸ್ವಾಭಾವಿಕ. ಆದರೆ ಹಂದಿಯು ಹೊಲಸನ್ನೇ ತಿನ್ನುವುದು ಮನುಷ್ಯನಿಗೆ ಅವಾಸ್ತವ. ಮಾತಿಗೊಂಡು ಮರುಮಾತು ವಾಸ್ತವಿಕ. ಆದರೆ ಅದನ್ನೇ ಮರಳಿ ಆಡುವುದು ಶುದ್ಧ ಅವಾಸ್ತವಿಕ-ಎಂಬುದು ಮೇಲಿನ ಲೋಕೋಕ್ತಿಯಲ್ಲಿ ಧ್ವನಿಸುವದು.

ಅಳುವವರ ಎಡಕ್ಕೆ ಕೂಡಬಾರದು.
ಹೊಲಿಯುವವರ ಬಲಕ್ಕೆ ಕೂಡಬಾರದು.

ಕಾರಣವೇನಿರಬಹುದು? ಕಣ್ಣಲ್ಲಿ ನೀರು, ಮೂಗಿನಲ್ಲಿ ಸುಂಬಳ ಸುರಿದರೆ ಮಾತ್ರ ನಿಜವಾಗಿ ಅತ್ತಂತೆ. ಅದಿಲ್ಲದೆ ಅಳುವು ಸುಳ್ಳು ಸೋಗು. ಕಣ್ಣಿರನ್ನು ಬಟ್ಟೆಯಿಂದ ಒರೆಸಿಕೊಳ್ಳಲಿಕ್ಕಾಗದು. ಆದರೆ ಸುಂಬಳವನ್ನು. ಹಾಗೆ ಒರೆಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ಸೋರುವ ಮೂಗನ್ನು ಎಡಗೈಯಿಂದ ಹಿಂಡಿ ತೆಗೆದು ಅತ್ತ ಬಿಸಾಡಲಾಗುವದು, ಅತ್ತ ಅಂದರೆ, ಎಡಮಗ್ಗುಲಿನ ಬಯಲಿಗೆ ಎಡಗೈಯಿಂದ ತೆಗೆದದ್ದು ಎಡಮಗ್ಗುಲಿಗೆ ಕೊಡಹಿಕಾಹುವುದು ಸ್ವಾಭಾವಿಕವಾಗುತ್ತದೆ. ಆದ್ದರಿಂದ ಅಳುವವರ ಎಡಕ್ಕೆ ಕುಳಿತರೆ ಸುಂಬಳ ಸಿಂಪಡಿಸಿಕೊಳ್ಳಬೇಕಾಗುತ್ತದೆ. ಅದರಂತೆ ಹೊಲಿಯುವ ಕೆಲಸ. ಹೊಲಿಗೆಯಂತ್ರ ಬರುವ ಮೊದಲು, ಸೂಜಿಗೆ ದಾರಪವಣಿಸಿ ಬಲಗೈಯಿಂದ ಹೊಲಿಗೆ ಹಾಕುತ್ತಿದ್ದರಷ್ಟೇ? ಹೊಲಿಗೆ ಹಾಕಿದ ಪ್ರತಿಯೊಂದು ಸಾರೆ, ಬಲಗೈಯಿಂದ ಸೂಜಿಯನ್ನು ಬಲಭಾಗಕ್ಕೆ ದಾರ ತಟ್ಟಿ ನಿಲ್ಲುವಂತೆ ಎಳೆಯಬೇಕಾಗುತ್ತದೆ. ಅಲ್ಲಿ ಯಾರಾದರೂ ಮೈಮರೆತು ಕುಳಿತರೆ, ಹೊಲಿಯುವವನ ಸೂಜಿಯಿಂದ ಚುಚ್ಚಿಸಿಕೊಳ್ಳಬೇಕಾಗುತ್ತದೆ. ಅಂತೆಯೇ ಹೊಲಿಯುವವನ ಬಲಕ್ಕೆ ಕುಳಿತುಕೊಳ್ಳಬಾರದೆಂದು ಹೇಳಿದ್ದುಂಟು. ಹೊಲಿಯುವ ಯಂತ್ರ ಬಂದ ಬಳಿಕ ಈ ಮಾತು ತನ್ನ ಅಸ್ತಿತ್ವವನ್ನೇ ಕಳಕೊಂಡು ತೆಪ್ಪಗೆ ಬಿದ್ದುಕೊಳ್ಳಬೇಕಾಯಿತು. ಮಿಂಚುದೀವಿಗೆ ಬಂದ ಬಳಿಕ, ದೀಪದ ಬುಡಕ್ಕೆ ಕತ್ತಲೆ- ಎನ್ನುವುದು ಸುಳ್ಳುಸಂಗತಿಯಾದಂತೆ.

ಕೋಡಗನನ್ನು ಕಟ್ಟಿನೋಡು
ಜೇಡನನ್ನು ಬಿಟ್ಟುನೋಡು.

ಅರೆಕ್ಷಣ ಸಹ ಒತ್ತಟ್ಟಿಗೆ ನಿಲ್ಲದ ಚಂಚಲ ಬುದ್ಧಿಗೆ ಹೆಸರಾದ ಕೋಡಗನನ್ನು ಕಟ್ಟಿಹಾಕಿದರೆ ಏನಾದೀತು? ಕಟ್ಟುಹರಿದುಕೊಂಡು, ನೆಗೆದು ಹೋಗಲು ಅದು ಹೆಣಗುವದು. ಕಟ್ಟಿದ ಹಗ್ಗವನ್ನೋ ಸರಪಳಿಯನ್ನೋ ಹಲ್ಲಿನಿಂದ ಕತ್ತರಿಸಲು ಯತ್ನಿಸುವುದು. ಕೈಯಿಂದ ಜಗ್ಗಿ ಹರಿದುಹಾಕಲು ತಡವರಿಸಬಹುದು. ಕಟ್ಟಿದವನಿಗೆ ಅನಿಸುವದು-ಕೋಡಗನನ್ನು ಬಿಟ್ಟು ಬಿಡುವುದೇ ಲೇಸು. ಅದರಂತೆ ಇಡಿಯ ದಿವಸ ಮಗ್ಗವಾಯಿತು: ಮನೆಯಾಯಿತು ಎನ್ನುವಂತೆ, ಸ್ಥಳ ಬಿಟ್ಟು ಕದಲಲಿಕ್ಕೆ ಸಾಧ್ಯವಿಲ್ಲದ ಜೇಡನ ಕೆಲಸವು ಅವನನ್ನು ಕಟ್ಟಿಹಾಕಿರುತ್ತದೆ. ಆದರೆ ಅವನನ್ನು ಅವನ ಕೆಲಸದ ಕುಣಿಕ ಬಿಚ್ಚಿಬಿಟ್ಟು ಕೊಟ್ಟರೆ ಜೇಡನು ಯಾರ ಕೈಗು ಸಿಗಲಾರನೆಂದು ಒಮ್ಮೆಲೆ ಹೇಳಬಹುದು. ಆದರೆ ನಿಜವಾಗಿ ಜೇಡನು ಮಗ್ಗಬಿಟ್ಟು ಮನೆಬಿಟ್ಟು ಹೊರ ಬೀಳುವನೋ ಇಲ್ಲವೋ. ಕಟ್ಟಿಹಾಕುವುದು ಕೊಡಗನಿಗೆ ಅಸ್ವಾಭಾವಿಕವಾಗಿರುವಂತೆ, ಬಿಟ್ಟು ಕೊಡುವುದು ಜೇಡನಿಗೆ ಅಸ್ವಾಭಾವಿಕವಾಗಿರುವದು.

ಚಿಂತೆಯಿಲ್ಲದ ಕೊಣ ಸಂತೆಯಲ್ಲಿ ಮೆಲಕಾಡಿಸಿತು

ಸಂತೆಯೆನ್ನುವುದು ಮಾರು ಕೊಳ್ಳುವವರ ವಿನಿಮಯದ ಕೇಂದ್ರ. ಅಲ್ಲಿ ವಸ್ತುಗಳನ್ನು ಲಾಭಕರವಾಗಿ ಮಾರುವ ಚಿಂತೆ ಒಬ್ಬನಿಗಿದ್ದರೆ, ವಸ್ತುವನ್ನು ಅಗ್ಗವಾಗಿ ಕಡಿಮೆ ಬೆಲೆಯಲ್ಲಿ ಕೊಳ್ಳುವ ಚಿಂತೆ ಇನ್ನೊಬ್ಬನಿಗಿರುತ್ತದೆ. ತಂದ ದುಡ್ಡು ಸಾಕಾಗುವದೋ ಕಡಿಮೆ ಬೀಳುವದೋ ಎಂಬ ಚಿಂತೆ ಒತ್ತಟ್ಟಿಗೆ. ಇದ್ದ ದುಡ್ಡು ಕಳ್ಳರ ಪಾಲು ಮಾಡಬಾರದೆಂಬ ಚಿಂತೆ ಇನ್ನೊತ್ತಟ್ಟಿಗೆ.

ದುಡ್ಡೆ ಇಲ್ಲ ಸಂತೆ ಏತರಿಂದ ಮಾಡುವುದು- ಎನ್ನುವ ಚಿಂತೆ ಬೇರೊತ್ತಟ್ಟಿಗೆ. ಸಂತೆಯಲ್ಲಿ ಜನ ನೆರೆದಂತೆ ತೋರಿದರೂ, ನಿಜವಾಗಿ ಹಲವು ಚಿಂತೆಗಳು ಒತ್ತಟ್ಟಿಗೆ ಸೇರಿಕೊಂಡು ಸಂತೆ ನೆರೆಯಿಸುವವು. ಅಂಥ ಚಿಂತೆಯ ಕೇಂದ್ರದಲ್ಲಿ ನಿಶ್ಚಿಂತ ಪುರುಷನೆಂದರೆ ಕೋಣನೇ. ಅವನಿಗೆ ಅಲ್ಲಿ ಇನ್ನಾವ ಕೆಲಸವೂ ಇಲ್ಲ. ಕೊಡುವುದೂ ಇಲ್ಲ, ಕೊಳ್ಳುವುದು ಇಲ್ಲ – ಎಂದಾಗ, ಕಣ್ಣು ಮುಚ್ಚಿ ತೂಕಡಿಸುತ್ತ ಮೆಲಕಾಡಿಸುವುದೇ ಒಂದು ಕೆಲಸ; ಕೋಣನ ಹಾಗೂ ಕೋಣ ನಂಥವರ ಕೆಲಸ. ಸಾಧ್ಯವಾದರೆ ಯೋಗಿಯಂಥವರ ನಿಶ್ಚಿಂತರಾಗಿ ಇರಬಲ್ಲರು, ಇಲ್ಲವೆ ಕೋಣನಂಥವರು ನಿಶ್ಚಿಂತರಾಗಿರಬಲ್ಲರು. ನಿಶ್ಚಿಂತೆಯೆಂದಾಗ ತೂಕಡಿಕೆ, ಮೆಲಕಾಡಿಸುವುಕೆ ಇವೇ ಸ್ವಾಭಾವಿಕ ಕೆಲಸಗಳಾಗುತ್ತವೆ.

ಬಡವನ ಹೆಂಡತಿ ಬಸಿರು ಆಗಬಾರದು

ಯಾರೂ ಹೇಳುತ್ತಾರೆ ಹೀಗೆ? ಹೊಟ್ಟೆಕಿಚ್ಚಿನಿಂದ ಬಂಜೆ ಹೇಳಿದ ಮಾತೇ ಇದು? ಇಲ್ಲವೇ ಬಸಿರು ಹೊತ್ತ ಬಡವಿಯ ಗೋಳಾಟ ಕಂಡು, ಕನಿಕರದಿಂದ ಸಹೃದಯರಾರೋ ನುಡಿದ ಮಾತೇ ಇದು? ತಿನ್ನಲಿಕ್ಕಿಲ್ಲದೆ, ಉಣ್ಣಲಿಕ್ಕಿಲ್ಲದೆ ಬಡವನ ಹೆಂಡತಿಯು ಮರುಗಿ ಕೊರಗುವ ಹೊಟ್ಟೆ ಬಸಿರು ಹೊತ್ತರೆ, ಹೊತ್ತವಳಿಗಂತೂ ಸುಖವಿಲ್ಲ. ಆ ಬಸುರಿಗಾಗಿ ಇಮ್ಮಡಿ ಕಷ್ಟಕ್ಕೆ ಈಡಾಗುವಳು. ಹಸಿವೆ ಹಿಂಗಿಸಲು ದುಡಿಯಬೇಕು. ಯಾಕೆಂದರೆ ಬಡವನ ಹೆಂಡತಿ ದುಡಿಯದಿದ್ದರೆ ಸಾಗದು. ಇನ್ನು ಬಸಿರು ಹೊತ್ತ ಮೇಲೆ ಅದರ ಕಲ್ಯಾಣಕ್ಕಾಗಿ ದುಡಿಯಬೇಕು. ಬಾಣಂತಿತನದ ಏರ್ಪಾಡು, ಹಡೆದಾಗ ದುಡಿಮೆ ಕಟ್ಟಾಗುವುದರಿಂದ ಮುಂಚಿತವಾಗಿಯೇ ಆಹಾರ ಧಾನ್ಯದ ಸಂಗ್ರಹ- ಇವೆರಡೂ ಹಡೆಯುವ ಮುಂಚೆ ಮಾಡಿಟ್ಟುಕೊಳ್ಳಬೇಕಾದ ಸಿದ್ಧತೆ, ಅದೂ ಭಾರವಾದ ಬಸಿರು ಹೊತ್ತು. ಆ ಪ್ರಸಂಗದಲ್ಲಿ ಯಾರಾದರೂ ಹೇಳಬಹುದು-ಬಡವನ ಹೆಂಡತಿ ಬಸುರಾಗಬಾರದು, ಬಸಿರು ಹೊತ್ತ ಬಡವನ ಹೆಂಡತಿ ಸಹ ಹಾಗೇ ಹೇಳಬಹುದೇನೋ. ಆದರೆ, ಆ ಗೋಳಾಟದ ಸಂದರ್ಭ ಮುಗಿದು ಹೋದ ಬಳಿಕ –“ಬಡತನ ನನಗಿರಲಿ, ಬಾಲ ಮಕ್ಕಳಿರಲಿ, ಮ್ಯಾಲ ಗುರುವಿನ ದಯವಿರಲಿ” ಎಂದು ಹಾಡುತ್ತ ಬೀಸತೊಡಗುವಳು. “ತೊಟ್ಟಿಲದಾಗೊಂದು ತೊಳೆದು ಮುತ್ತು ಕಂಡೆ” ಎಂದು ಜೋಗುಳ ಹಾಡುವಳು. ಮಕ್ಕಳಿಲ್ಲದ ಶ್ರೀಮಂತನ ಹೆಂಡತಿಯಾಗಲಿ, ಹುಟ್ಟು ಬಂಜೆಯಾಗಲಿ, ಹಡೆದರೂ ಮಕ್ಕಳು ಬದುಕವೆಂದು ಬವಣಿಸಿಪಡುವವಳಾಗಲಿ ಬಸುರಿಯಾದ ಬಡವನ ಹೆಂಡತಿಯನ್ನು ಕಂಡು ಅಸೂಯೆಪಡುವುದು ಸ್ವಾಭಾವಿಕ. ಹಸಿವೆಯ ಕಿಚ್ಚಿನಲ್ಲಿ ಬೆಂದು ಬಡತನದ ಬೇಗೆಯಲ್ಲಿ ಹುರುಪಳಿಸಿ, ಮತ್ಸರಪಡುವವರ ಅಸೂಯಾಗ್ನಿಯಲ್ಲಿ ಬೂದಿಯಾಗದೆ ಅದೆಂತು ಉಳಿದಳೋ ಆ ಬಡವನ ಹೆಂಡತಿ?

ಬಂಥನಾಳ ಶರಣಯ್ಯ ನಾ ನಿನ್ನ ಮಗಳಯ್ಯ
ಲೇಸಗಿತ್ತೆಯ್ಯ ಬಡವೆಯ್ಯ ನನ್ನ ಮೇಲೆ |
ಸಾಸೀವಿಕಾಳಷ್ಟು ದಯವಿರಲಿ ||

ಶರಣಯ್ಯನ ಮಗಳೊ ಲೇಸಗಿತ್ತಿಯೂ ಆಗಿರುವ ಬಡವಿಯ ಬೆಂಬಲಕ್ಕೆ ಸಾಸಿವೆ ಕಾಳಿನಷ್ಟಾದರೂ ದಿವ್ಯಕೃಪೆ ರಕ್ಷಾಶಕ್ತಿಯಾಗಿ ಕಾಪಾಡುತ್ತಿರುತ್ತದೆ. ಅಂತೆಯೇ ಬೇಡವಾದ ಬಸಿರು ಒಡಲಿಲ್ಲಿ ಮೂಡಿದರೂ ಬಡವನ ಹೆಂಡತಿ ಅಷ್ಟೊಂದು ಚಿಂತಿಸದೆ ಬದುಕನ್ನು ನಿರ್ವಹಿಸುತ್ತ ಸಾಗುತ್ತಾಳೆ.

ಹುಟ್ಟಿದ ಮನೆ ಹೋಳೀ ಹುಣ್ಣಿವೆ
ಕೊಟ್ಟ ಮನೆ ಶಿವರಾತ್ರಿ

ಪರಿಣಾಮ ಏನೆನ್ನುವುದು ಸ್ಪಷ್ಟವಿದೆ. ಹೊಯ್‌ಕೊಳ್ಳುವುದೇ ಹಬ್ಬದ ಕುರುಹಾದ ಹೋಳೀ ಹುಣ್ಣಿವೆಯೇ ತವರಾಗಿರುವ ಹೆಣ್ಣು, ಹೆರವರು ಹನ್ನೆರಡು ತಿಂಗಳಿಗೊಮ್ಮ ಮಾಡುವ ಹಬ್ಬವನ್ನು, ಹನ್ನೆರಡು ತಿಂಗಳೊ ಮಾಡುವ ಭಾಗ್ಯವನ್ನು ಪಡೆದುಬಂದಿದ್ದಾಳೆ. ಕೊಡಗೂಸು ಕೊಟ್ಟ ಮನೆಗೆ ಹೊಗುವ ಹೆಣ್ಣು. ಕೊಟ್ಟಮನೆ ಶಿವರಾತ್ರಿಯಾಗಿದ್ದರೆ ಉಪವಾಸವೇ ಅಲ್ಲಿಯ ನಿತ್ಯವ್ರತ. ಶರಣರೇನೋ ನಿಚ್ಚಶಿವರಾತ್ರಿಯೆಂದರು. ಅದು ಅವರಿಗೆ ದಕ್ಕಿತು, ಒಪ್ಪಿತು. ಯಾಕಂದರೆ ಅವರು ಆಧ್ಯಾತ್ಮ ಸಂಪನ್ನರು. ದಟ್ಟದರಿದ್ರರಿಗೆ ಶಿವರಾತ್ರಿಯಂಥ ನಿತ್ಯವ್ರತ ನಿರ್ವಹಿಸಲಿಕ್ಕಾಗುವದೇ? ಹೋಳಿಹುಣ್ಣಿವೆ ತವರುಮನೆ, ಶಿವರಾತ್ರಿ ಅತ್ತೆಯ ಮನೆ, ಮುಗಿದೇ ಹೋಯಿತು. ಎರಡೂ ಕೈಯಿಂದ ಉಣ್ಣುವುದರ ಹೊರತು, ಮತ್ತಾವ ಕೆಲಸವೂ ಇಲ್ಲ ಜೀವನದಲ್ಲಿ.

ಊಟಕ್ಕೆ ಮೊದಲು ಉಪ್ಪಿನಕಾಯಿ

ಇದೊಂದು ಬುದ್ಧಿ ಜೀವಿಗಳ ಅನುಭವವೆಂದು ತೋರುತ್ತದೆ. ಉಪ್ಪಿನ ಕಾಯಿಯ ಹುಳಿಯನ್ನು ನೆನೆದರೆ ಬಾಯಿ ನೀರೂಡೆಯುತ್ತದೆ. ಅದನ್ನು ಕಂಡರೇ ಬಾಯಲ್ಲಿ ಹಸಿಯೂರಿ, ಹೊಟ್ಟೆಯಲ್ಲಿ ಎಲ್ಲಿಲ್ಲದ ಹಸಿವು ಕಾಣಿಸಿಕೊಳ್ಳುತ್ತದೆ. ಊಟದ ಆರಂಭಕ್ಕೆ ಉಪ್ಪಿನಕಾಯಿಯನ್ನು ಬಾಯಿಗೆ ಹಚ್ಚಿಕೊಂಡರಂತೂ, ಉಳಿದೆಲ್ಲ ಆಹಾರ ಪದಾರ್ಥಗಲಿಗೆ ರುಚಿಬರುತ್ತದೆ. ಶ್ರಮ ಜೀವಿಗಳ ಪರಿಸ್ಥಿತಿಯೇ ಬೇರೆ. ಅವರಿಗೆ ಷಡ್ರಿಪುಳಿಗೆ ಮೀರಿದ ಇನ್ನೊಂದು ರುಚಿಯಿರುತ್ತದೆ. ಅದೇ ನಿಗಿ ಹಸಿವು. ಜಠರದೊಳಗಿನ ಹಸಿವೆಯೆಂದರೆ, ಪ್ರತ್ಯಕ್ಷ ಪರಮಾತ್ಮನೇ ಸರಿ, ಅವನ ಪಾಲಿಗೆ. ಅವನು ಉಪ್ಪಿನಕಾಯಿಯಿಂದಲೇ ಜೊಲ್ಲುಸುರಿಸುವವನಲ್ಲ; ಆದರೆ ದೈಹಿಕ ಶ್ರಮ ಮಾಡದ ಬುದ್ಧಿಜೀವಿಯು, ಅನ್ನ ರುಚಿಸಲು ಮೊದಲು ತುತ್ತು ಉಪ್ಪಿನ ಕಾಯಿಂದ ಸುಗಮಗೊಂಡರೆ ಮುಂದಿನ ಇಡಿಯ ಊಟವು ನಿರಾತಂಕವಾಗುವದು, ಇಷ್ಟೇ ಅಲ್ಲ, ಬಾಯಿಗೆ ಸ್ವಾದುವೆನಿಸಿ ಉಂಡಿದ್ದರಿಂದ ನಾಳೆ ಮುಂಜಾವಿನ ಕಾರ್ಯಕ್ರಮವೂ ಯಶಸ್ವಿಯಾಗುವದು. ಆದ್ದರಿಂದ ಬುದ್ಧಿಜೀವಿಯು ತನ್ನ ಅನುಭವವನ್ನು ಬಾಯಿಬಿಚ್ಚಿ ಮಾತ್ರ ಹೇಳಿಬಿಡದೆ, ಬಾಯಿ ತೆಗೆದು ಬಾಯಿಮಾಡಿ ಹೇಳುತ್ತ ಬಂದಿದ್ದಾನೆ-ಊಟಕ್ಕೆ ಮೊದಲು ಉಪ್ಪಿನಕಾಯಿ ಎಂದು.

ಕೂಳು ಕುತ್ತ, ನೀರು ಪಿತ್ತ

ರೋಗಿ ಪರಿಹಾಕ್ಕಿಂತ ರೋಗಬಾರದಂತೆ ಜಾಗ್ರತೆವಹಿಸುವುದು ಮಿಗಿಲೆಂದು ನಮ್ಮವರಿಗೆ ಎಂದೋ ತಿಳಿದಿದೆ. ಅವೆಷ್ಟೋ ಉಪಾಯಗಳನ್ನು ಕಂಡುಹಿಡಿದು ‘ಆರ್ಯರ್ವೇದ’ದಲ್ಲಿ ಬರೆದಿಟ್ಟಿದ್ದಾರೆ. ರೋಗ ಬಂದ ಮೇಲೆ ಮಾಡುವ ಉಪಾಯಗಳಿದ್ದರೂ ರೋಗಬಾರದಂತೆ ನಡೆಯುವ ತೂಕವನ್ನು ಅನುಸರಿಸುವದಕ್ಕೆ ನಮ್ಮವರು ಹೆಚ್ಚು ಲಕ್ಷ್ಯಗೊಟ್ಟಿದ್ದಾರೆ. ಆಯುರ್ವೇದವು ಅದನ್ನೇ ಗಮನಿಸಿದೆಯೆಂದು ಹೇಳುತ್ತಾರೆ. ಆಯುರ್ವೇದವು ಹೇಳಿದ ಸುಲಭ ಚಿಕಿಯ್ಸೆಯನ್ನು ಸರ್ವಜ್ಞ ಕವಿಯು ಒಂದೆರಡೇ ತ್ರಿಪದಿಗಳಲ್ಲಿ ಹೇಳಿಬಿಟ್ಟಿದ್ದಾರೆ.

ಹಸಿಯದೆ ಉಣಬೇಡ ಹಸಿದು ಮತ್ತಿರಬೇಡ
ಬಿಸಿಗೂಡಿ ತಂಗುಣ ಬೇಡ | ವೈದ್ಯರ |
ಗಸಣಿಯೇ ಬೇಡ ಸರ್ವಜ್ಞ ||

ಇಷ್ಟೇ ಸಾಕಾಗದೆನ್ನುವವರಿಗೆ ಮತ್ತೆರಡು ಮಾತು ಹೇಳಿದ್ದಾನೆ-

ಉಂಡು ನೂರಡಿಯಿಟ್ಟು ಕೈಕಾಸಿ
ಗಂಡು ಮೇಲಾಗಿ ಮಲಗಿದರೆ | ವೈದ್ಯನ |
ಮಿಂಡ ತಾನಕ್ಕು ಸರ್ವಜ್ಞ ||

ಹೀಗೆ ವೈದ್ಯರ ಉದ್ಯೋಗಕ್ಕೆ ಅಡ್ಡಗಾಲು ಹಾಕುವವರನ್ನು ನಿರ್ಮಿಸುವ ಧೋರಣೆ ಸರ್ವಜ್ಞ ವಚನಗಳಲ್ಲಿ ಕಂಡುಬರುತ್ತದೆ. ಗಾದೆಯ ಮಾತು ಸ್ವಾಸ್ಥ್ಯದ ವಿಷಯವನ್ನು ಮತ್ತೂ ಹಗುರಗೊಳಿಸಿತು. ಕೂಳು ಕುತ್ತ, ನೀರು ಪಿತ್ತ. ಆದ್ದರಿಂದ ಅವು ಮೀರಿದಂತೆ ಜಾಗ್ರತೆ ವಹಿಸಬೇಕು. ಕುತ್ತಿಸಿರು ಬರುವಂತೆ ಉಣ್ಣುವುದಕ್ಕೂ, ಪಿತ್ತ ನೆತ್ತಿಗೇರುವ ಮಟ್ಟಿಗೆ ಕುಡಿಯುವದಕ್ಕೂ ಗಾದೆಯ ಮಾತು ತಡೆಹಾಕಲು ಹೇಳಿದೆ.

ಜೀವನದ ವಿವಿಧಾಂಗಗಗಳನ್ನು ಲಕ್ಷ್ಯಿಸಿ ಗಾದೆಯ ಮಾತುಗಳು ಅವೆಷ್ಟೋ ಅನುಭವಗಳನ್ನು ಎತ್ತಿತೋರಿಸುತ್ತವೆ. ಅನುಭವದ ಸಕ್ಕರೆಯನ್ನು ಸುಂದರ ಪಡಿಯಚ್ಚಿನಲ್ಲಿ ಹೊಯ್ದು ಮನ ಮೆಚ್ಚಿಕೆಯಾಗುಂವಂತೆ, ಅಚ್ಚುಕಟ್ಟಾಗಿ ಮುದ್ರೆಯಾಗುವಂತೆ ಗಾದೆಯ ಮಾತು ಪಿಸುನುಡಿಯಲ್ಲಿ ಉಸಿರುತ್ತವೆ. ಇನ್ನೊಮ್ಮೆ ನಕ್ಕು ಹೇಳಿದರೆ, ಮಗದೊಮ್ಮೆ ಬಯ್ದು ಹೇಳುತ್ತವೆ. ಬಯ್ದು ಹೇಳಿದವರು ಬುದ್ಧಿ ಹೇಳುತ್ತಾರೆನ್ನುವ ಗುಟ್ಟನ್ನು ಬಿಚ್ಚಿಡುತ್ತವೆ.

ಯಾವ ಬಗೆಯಿಂದ ಹೇಳಿದರೂ ಅದರಲ್ಲಿ ಔಚಿತ್ಯವಿರುತ್ತದೆ. ಔಚಿತ್ಯವನ್ನು ಮನಗಂಡಾಗ ಗಾದೆಯ ಮಾತಿನ ವಾಸ್ತವಿಕತೆಯ ಕಲ್ಪನೆ ನಿಚ್ಚಳವಾಗುತ್ತದೆ. ಪ್ರಜಾಪ್ರಭುವಿನ ಭಾಷೆಯ ಮರ್ಮವನ್ನು ಅರಿಯದಿದ್ದರೆ ನಾವು ಆತನನ್ನು ಸಮೀಪಿಸಲಾರೆವು. ಪ್ರಜಾಪ್ರಭುತ್ವಕ್ಕೆ ಒಳಪಟ್ಟವರಿಗೆ ಆತನ ದರ್ಶನ ಅನಿವಾರ್ಯವಾಗಿರುವಂತೆ, ಆತನವರಿಂದ ಭಾಷೆಯ ತೊಡಕು ಅಡ್ಡಯಿಸುವಂತೆ ಔಚಿತ್ಯವನ್ನು ಅರಿತುಕೊಳ್ಳಬೇಕಾಗಿದೆ.

“ನಿನ್ನ ಮಕ್ಕಳು ನಿನ್ನ ಅರಿವ ದನಿಯಾವುದೋ
ಚೆನ್ನಕೇಶವ. ನನಗೆ ಆ ದನಿಯ ನೀಡು”