ಜನಪದ ಗೀತೆಗಳಲ್ಲಿ ಸ್ಥೂಲವಾಗಿ ಹೆಣ್ಮಕ್ಕಳು ಹಾಡುವ ಹಾಡುಗಳೆಂದೂ, ಗಂಡುಮಕ್ಕಳು ಹಾಡುವ ಹಾಡುಗಳೆಂದೂ ಎರಡು ವಿಧಗಳುಂಟು ಗಂಡುಮಕ್ಕಳ ಹಾಡುಗಳಲ್ಲಿ ಡೊಳ್ಳಿನ ಹಾಡುಗಳಿಗೆ ಪ್ರತ್ಯೇಕತೆಯಿದೆ. ಯಾಕಂದರೆ ಲಾವಣಿ, ಹಂತಿ ಹೋಳಿಯ ಹಾಡುಗಳಂತೆ, ಡೊಳ್ಳಿನ ಹಾಡುಗಳನ್ನು ಎಲ್ಲ ಗಂಡಸರೂ ಹಾಡುವದಿಲ್ಲ. ಡೊಳ್ಳು ಎಂಬ ಚರ್ಮವಾದ್ಯವನ್ನು ಎರಡೂ ಕೈಗಳಿಂದ ಬಾರಿಸುತ್ತ ಕುರುಬರು ಅಂದರೆ ಭರಮದೇವರ ಭಕ್ತರು ಹಾಡುವ ಹಾಡುಗಳಿಗೆ ಡೊಳ್ಳಿನ ಹಾಡುಗಳೆಂದು ಅನ್ನುತ್ತಾರೆ. ರಚನೆ ಮಾಡಿ ಅವರದೇ ಒಂದು ರೀತಿಯಿಂದ ಡೊಳ್ಳಿನ ಹಾಡುಗಳು ಭಕ್ತಿರಸ ಪೂರಿತವಾಗಿರುತ್ತವೆ. ದೈವಭಕ್ತಿ-ದೈವಭಕ್ತರನ್ನು ಕೇಂದ್ರವಾಗಿರಿಸಿಕೊಂಡು ಹಾಡುವ ಹಾಡುಗಳೇ ಡೊಳ್ಳಿನ ಹಾಡುಗಳೆನಿಸುತ್ತವೆ.

ಕುರುಬರೆಂದರೆ?

ಕುರುಗಳನ್ನೋ ಆಡುಗಳನ್ನೋ ಕಾಯುವ ಉದ್ಯೋಗವಾಗಿರಿಸಿಕೊಂಡವರೇ ಕುರುಬರೆನಿಸಿವರು. ಅವರಿಗೆ ಹಾಲುಮತದವರೆಂದೂ ಹೇಳುತ್ತಾರೆ. ಹಾಲುಮತದವರೇ ಈ ನಾಡಿನ ಮೊದಲಿಗರೆನ್ನುತ್ತಾರೆ. ಅತ್ಯಂತ ಪರಂಪರಾ ಪ್ರಿಯರಾದ್ದರಿಂದ ಅವರು ಪುರಾತನ ಪದ್ಧತಿಗಳನ್ನು ಕಾಪಡಿಕೊಂಡು, ಅನುಸರಿಸಿಕೊಂಡು ಬಂದಿದ್ದಾರೆ. ಮಾರ್ಪಾಡು ಹೊಂದುವುದಕ್ಕೆ ಮೂಲ ದ್ರಾವಿಡರು ಆರ್ಯರಿಗಿಂತ ಹೆಚ್ಚು ಬೇಸರುಪಟ್ಟುಕೊಳ್ಳುವ ಜನಾಂಗವಂತೆ. ಅಂತೆಯೇ ಶ್ರೀ ಶಂ.ಭಾ.ಜೋಶಿಯವರು ಹೇಳುವಂತೆ, ಪ್ರಾಚೀನ ಜನಾಂಗವಾದ ಕುರುಬರಿಗೆ ರುದ್ರ-ಶಿವನೇ ಕುಲದೈವತ. ರುದ್ರನೇ ವೀರ-ಬೀರದೇವ ಎಂದೂ, ಅವರೇ ಬೀರದೇವನ ವೀರಭಕ್ತರೆಂದು ಹೇಳಬಹುದಾಗಿದೆ. ಮಂದ ಬುದ್ದಿಯವರಿಗೆ ಕುರುಬರೆಂದು ನಗೆಯಾಡುವುದುಂಟು. ಎರಡು ತಾಸು ಹೊತ್ತೇರಿದರೂ ಅವರ ನಿದ್ದೆಯ ಮಬ್ಬು ಹರಿಯುವದಿಲ್ಲವೆಂದು ಹೇಳವವರೂ ಇದ್ದಾರೆ. ಮದಡುತನವನ್ನು ಆರೋಪಿಸಿ, ಕುರುಬರ ಮೇಲೆ ಅವೆಷ್ಟೋ ಕಥೆಗಳು ಹುಟ್ಟಿ ಕೊಂಡಿದ್ದನ್ನು ನಾವೆಲ್ಲರೂ ಕೇಳಿದ್ದೇವೆ. ಉದಾ- ಕುರುಬನಿಗೆ ಹೂ ಕೊಟ್ಟರೆ ಅವನು…..ಯಲ್ಲಿ ಏರಿಸಿಕೊಂಡನಂತೆ. ಅವರು ಅಷ್ಟೊಂದು ಮದಡು ಆಗಿರುವುದಕ್ಕೆ ಅವರು ಕುರಿಯ ಹಾಲು ಉಣ್ಣುವುದೇ ಕಾರಣವೆಂದು ಹೇಳಲಾಗುತ್ತದೆ. ತಂಗಳು ರೊಟ್ಟಿಗಳನ್ನು ಕುರಿಯ ಹಾಲಲ್ಲಿ ಕುದಿಸಿ “ಹಾಲಹುಗ್ಗಿ”ಯನ್ನು ಮಾಡಿಕೊಂಡು ಉಣ್ಣುವುದು, ಅವರಿಗೆ ಅಡವಿಯ ಸಂಚಾರದಲ್ಲಿ ಅನಿವಾರ್ಯವಾಗಿದೆ. ಕುರಿಯ ಹಿಂಡೇ ಅವರ ಬದುಕು. ಅದನ್ನು ಕಾಪಾಡಿಕೊಂಡು ಹೋಗಲು ಒಂದೆರಡು ನಾಯಿಗಳ ಜೊತೆ ಹೆಗಲು ಮೇಲೆ ಕಂಬಳಿ. ಕೈಯಲ್ಲಿ ಬೀಸು ಬಡಿಗೆ. ಒಂದು ಕುರಿಹಳ್ಳಕ್ಕೆ ಬಿದ್ದರೆ ತೀರಿತು. ಅದರ ಹಿಂದೆ ಇಡಿಯ ಹಿಂಡೇ ಹಳ್ಳಕ್ಕೆ ಬೀಳುವದು ನಿಶ್ಚಯ. ಇದೇ ಸ್ವಭಾವ ಕುರುಬರಿಗು ಆನುಷಂಗಿಕವಾಗಿ ದೊರೆತ ಉಂಬಳಿಯಾಗಿದೆ. ಅವರ ಬುದ್ದಿವಂತಿಕೆ ಹೇಗೆಯೇ ಇರಲಿ, ಆದರೆ ಅವರ ಹೃದಯ ಮಾತ್ರ ಅದಾವ ಚಪಲ ಛಾಯೆಗೂ ಈಡಾಗಿಲ್ಲ. ಅವರ ಪ್ರಪಂಚದರ್ಥವನ್ನೂ ಗ್ರಹಿಸಲಾರೆವು. ಕೇಳಿರಿ-

ಡೊಳ್ಳ ಹೊಡಿಯೇ ಡೊಗ್ಗೀ ಮಗನೇ
ಡುರ್ರಕ ಜಡಿಮಣಿ
ನಾಗರಹೆಡಿಮಣಿ
ಕೋಣನ ತಾಯಿ ಕೊರವಂಜೆವ್ವಾ
ಪರಪಂಚೋ
ಪರಪಂಚೋ ||

ಅದರಂತೆ ಕುರುಬರು ವಾದ್ಯದ ಗತ್ತು-ಗಮ್ಮತ್ತುಗಳ ನೆಲೆಯನ್ನು ಗುರುತಿಸುವುದೂ ಸುಲಭ ಸಾಧ್ಯವಲ್ಲ. ಅವರ ಬಾಳು ಒಡಪಿನದಾದಂತೆ ಹಾಡೂ ಒಡಪಿನದು, ವಾದ್ಯವೂ ಒಗಟಿವದು.

ಉಪಾಸ್ಯ ದೈವತ

ಕುರುಬರ ಕುಲದೈವತ ರುದ್ರ-ಶಿವನೇ ಬೀರಪ್ಪನೆನಿಸಿದರೂ, ಹಳ್ಳಿ ಹಳ್ಳಿಯಲ್ಲಿ ಕುರುಬರು ಕಟ್ಟಿಕೊಂಡ ಭರಮದೇವರ ಗುಡಿಗಳೇ ಕಂಡು ಬರುತ್ತವೆ. ತೀರಾ ಪ್ರಾಚೀನರೂ ಮೂಲ ದ್ರಾವಿಡರೂ ಆದ ಹಾಲುಮತದವರು ಸೃಷ್ಟಿ ಸ್ಥಿತಿ-ಲಯಗಳಿಗೆ ಕಾರಣರಾದ ಮೂವರು ದೇವತೆಗಳಲ್ಲಿ ಸೃಷ್ಟಿಕರ್ತನೆನಿಸುವ ಬ್ರಹ್ಮ ದೇವರನ್ನೇ ಉಪಾದಿಸುವುದು ವಾಸ್ತವಿಕವಾಗಿದೆ. ಕುರುಬರಲ್ಲಿ ಕಾಲಕ್ರಮೇಣ ಕೆಲವರು ಲಿಂಗಾಯ್ತರಾಗಿದ್ದರೂ ಆಗಿರಬಹುದು. ಅವರು ಈಗಲೂ ತಮ್ಮ ಮೂಲದೈವತ-ಭರಮದೇವರನ್ನು ನಡಕೊಳ್ಳುತ್ತಿದ್ದಾರೆ. ಡೊಳ್ಳು ವಾದ್ಯದಲ್ಲಿ ಬ್ರಹ್ಮದೇವರ ಅಗ್ಗಳಿಕೆಯನ್ನೇ ಕೇಳುತ್ತಿದ್ದಾರೆ. ಹೇಗೆಂದರೆ-

ಬ್ರಹ್ಮ-ದೊಡ್-ಡಾಂವ್ | ಬ್ರಹ್ಮ-ದೊಡ್-ಡಾಂವ್
ಹಿಡಿದ್ಹ್ಯಾಂಗ್ |ಬಿಟ್ಹ್ಯಾಂಗ್ |
ಡುಬ್ಬಧುರಿ! ಡುಬ್ಬಧುರಿ! ಡುಬ್ಬಧುರಿ!!

ಇದು ಡೊಳ್ಳು ವಾದ್ಯದ ಮೊಳಗಿನಲ್ಲಿ ಕೇಳಿಬರುವ ಅರ್ಥ. ಉಪಾಸ್ಯ ದೈವತವಾದ ಬ್ರಹ್ಮ ದೇವರನ್ನು ಡೊಳ್ಳುವಾದ್ಯದ ವಾಲಗದಲ್ಲಿ ಹೊಗಳಿ ಹೊಗಳಿ, ಮುಗಿಲಿಗೆ ಮುಟ್ಟುವಂತೆ ಮಡಿದ ಮೇಲೆ, ಮುಗುಸುವುದು ವಾಡಿಕೆ. ಆಮೇಲೆ “ಡೊಳ್ಳು ಬಡಿದು ಸಾಕಾಯ್ತು! ಹುಗ್ಗೀ ಪರ್ಯಾಣ ಬೇಕಾಯ್ತು” ಎನ್ನುತ್ತ ಹಸಿವೆಯನ್ನು ತಣಿಸುವುದಕ್ಕೆ ಹಾತೊರೆಯುವರು. ಆ ಸಂದರ್ಭವನ್ನು ವರ್ಣಿಸುವ ಹಾಡೊಂದಿದೆ-

ಕಳ್ಳೀಯ ಸಾಲ್ಯಾಗ | ಕಟ್ಟಂಬಲಿ ಊರ್ಯಾದ
ಬಟ್ಟಲು ತಗೊಂಡು ಬಾರಯ್ಯ ||

ದೈವೋಪಾಸನೆಗೆ ಆನುಷಂಗಿಕವಾಗಿ ಉದರೋಪಾಸನೆಯೂ ಕ್ರಮ ಪ್ರಾಪ್ತವಷ್ಟೇ?

ಹಾಡಿನ ವಿಷಯ

ಶ್ರಾವಣ ಸೋಮವಾರ ಹಾಗೂ ಅಮವಾಸಿಯ ದಿನ ಮತ್ತು ಯುಗಾದಿಯ ದಿವಸ ಪಲ್ಲಕ್ಕಿ ಉತ್ಸವದ ತರ್ವಾಯ, ಪೂರ್ವ ರಾತ್ರಿಯಲ್ಲಿ ಭರಮ ದೇವರ ಗುಡಿಯ ಮುಂದೆ, ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ. ಅದರಂತೆ, ಭಕ್ತರು ಆಹ್ವಾನಿಸಿ, ದೇವರ ಪಲ್ಲಕ್ಕಿಯನ್ನು ಮನೆಗೆ ಬರಮಾಡಿಕೊಂಡು ಪೂಜಾರಿಗಳನ್ನು, ಪಲ್ಲಕ್ಕಿಯ ಸೇವೆ ಪೂರೈಸಿದ ಸಾಮಾಜಿಕರನ್ನೂ ಹುಗ್ಗಿಯೂಟದಿಂದ ತೃಪ್ತಿಪಡಿಸಿದ ಮೇಲೆ ಬಹುಶಃ ಹಾಡುಗಳು ಕಾರ್ಯಕ್ರಮ ಆರಂಭಗೊಳ್ಳುತ್ತದೆ. ಮುಮ್ಮೇಳ ಹಿಮ್ಮೇಳ ಮಾಡಿಕೊಂಡು ಮುಮ್ಮೇಳದವರಲ್ಲಿ ಒಬ್ಬನು ಡೊಳ್ಳುಬಾರಿಸುತ್ತ ಹಾಡು ಹೇಳುವನು. ಹಿಮ್ಮೇಳನದಲ್ಲಿ ಒಬ್ಬನು ತಾಳ, ಇನ್ನೊಬ್ಬನು ಕೊಳಲು ಬಾರಿಸುತ್ತ ಮುಮ್ಮೇಳದವನು ಹೇಳಿಕೊಟ್ಟ ಪದದ ಭಾಗವನ್ನು ಹಿಮ್ಮೇಳದವರು ಹೇಳುವರು. ಅದರೊಂದಿಗೆ ಕೋಚು ಎತ್ತುವುದೂ ಉಂಟು. ಹಾಡಿನ ವಿಷಯ ಬಹುಶಃ ದೈವ ಮಹಿಮೆಯೋ ದೈವಭಕ್ತರ ಕಥೆಯೋ ಇರಬಹುದು.

ಕೇಳ್ರೆಪ್ಪ ಕುಂತೋ | ಹೇಳುವೆನು ನಿಂತೋ | ದೇವರ ಮಾತೋ
ಆದವೃತ್ತಾಂತೋ |ದೈವ ಕುಂತಿರಿ ಸಿಸ್ತೋ |
ದೇವರ ಕತಿಕೇಳಿ ಆಗ್ರೆಪ್ಪ ಶಾಂತೋ ||

ಹೀಗೆ ಶ್ರೋತೃಗಣಕ್ಕೆ ಬಿನ್ನೈಸಿಕೊಂಡು ಕಥೆಯನ್ನು ಆರಂಭಿಸುತ್ತಾರೆ.

ಗ್ವಾಲಗೇರಿ ಭೂಮ್ಯಾಗಸತ್ತುಳ್ಳ ಶರಣ ಕುರಿ ಕಾಯತಿದ್ದ ಯಾವತ್ತೋ
ಕುರೀ ಕಾಯುತ್ತಿದ್ದ ನೋಡ್ರಿ ಯಾವತ್ತೋ
ಸಾವಿರಾರು ಜಂಗಮರು ಕಂಬಿಯ ಹೊತ್ತೋ
ಶ್ರೀಶೈಲಕ ಹೊಂಟಾರ ಎಲ್ಲಾರೊಂದೇ ಜುತ್ತೋ ಘೇ ಘೇ ಅನ್ನುತ್ತೋ ||
ಶರಣ ಕೇಳ್ಯಾನ ದೂರಿಂದ ನಿಂತೋ |
ಒಡಿಬಂದ ಅಡ್ಡಗಟ್ಟಿ ಕೇಳ್ತಾನ ಎಲ್ಲೀಗಿ ಹೋಗ್ತಿರೆಂತ್ತೋ ||

ಒಡಿಬಂದ ಗೋಲಗೇರಿಯ ಗೊಲ್ಲಾಳನೆಂಬ ಮುಗ್ಧಭಕ್ತನ ಕಥೆಯ ಮದರಿ. ಇನ್ನು ಮಾವನರಲ್ಲಿ ‘ಮತಿಗೇಡಿ’ ಅನಿಸಿದರೂ, ಬನ್ನಿಗ ಸಾವಿರ ಭಾಗ್ಯ ಕಾಯುತ್ತ ಬೀಜಗುಂತಿಯ ಮೇಲೆ ವಾಸಿಸುತ್ತಿದ್ದ ಸತ್ಯಶರಣನೆನಿಸಿದ ಮುತ್ತಯ್ಯ ಮಾಳಿಂಗರಾಯನ ಕಥೆ ಆರಂಭ ಹೀಗಿದೆ-

ಸಿದ್ಧರೊಳಗ ಸಿದ್ಧ ಅತಿ
ಮುದ್ದ ಪ್ರಸಿದ್ಧ ಏನು
ಶುದ್ಧಮಾಟ ಹುಟ್ಟಾದಪ್ಪ ಮಾಳಪ್ಪಂದು |
ಜಾಗ ನೋಡಿ ನೆನೆದಾನಿಂಬ
ಹಳ್ಳನೆಳ್ಳ ಆರಂಭ
ತುಂಬಿ ತುಳಕತಾನ ಸಾಂಬ…..

ಬೀರಪ್ಪ ದೇವನ ಪೂಜೆಗೆ ಅಣಿಯಾದ, ಸತ್ಯಶರಣದೊಳಿಂಗರಾಯನ ಸಲಕರಣೆಗಳನ್ನು ನೋಡುವಂತಿವೆ-

ಹರಹರ ನಮ್ಮ ದೇವ್ರ ಮಾಳಿಂಗರಾಯ
ಹೂವಿನ ಝಲ್ಲ್ಯಾ ಹಿಡಿದಿಹನೋ |
ಹೂವಿನ ಝಲ್ಲೆ ಹಿಡಿದಾನ ಮಾಳಿಂಗರಾಯ
ಸೀತಾಳಬಿಂದಿಗಿ ಹಿಡಿದಿಹನೋ |
ಹೋಮದ ಕಂಬಳಿ ಹೊತ್ತಿಹನೋ
 ನೇಮದ ಬೆತ್ತಹಿಡಿದಿಹನು
ಸಿಡ್ಯಾಣ ಮಾರಬಟ್ಟು ಮಾಳಿಂಗರಾಯ
ಹೂವಿನ ಮಾರ್ಗ ಹಿಡಿದಿಹನೋ ||

ಶಿವನ ಮನಿ ಸಿದ್ದನೇ ಆದ ಸಿದ್ಧಮಾಳಿಂಗರಾಯನಿಗೆ, ಲಿಂಗಬೀರಣ್ಣ ದೇವರ ನಿತ್ಯ ಪೂಜೆಗೆ, ಅದೇ ಹೂ ಕಾಯಿಯಾಗಲಿ, ಅದೇ ಸೀತಾಳವಾಗಲಿ ಸೊಗಸದು. ನಿಚ್ಚವೂ ಅಚ್ಚಹೊಸ ಹೂ;ಅಚ್ಚಹೊಸ ತಾಳಬೇಕು. ಲಾಲಬಾಗದ ಹೂ, ನಾಗರಭಾವಿಯೊಳಗಿನ ಸೀತಾಳ ತಂದರಾಗುವದು. ಹಗಲು ಹೊತ್ತಿನಲ್ಲಿ ಭಾಗಿ (ಕುರಿಹಿಂಡು)ಯ ಧ್ಯಾನಾಸಕ್ತನೂ ಇರಿಳಿನಲ್ಲಿ ಗುರುವಿನ ಧ್ಯಾನಾಸಕ್ತನೂ ಆದ ಮಾಳಪ್ಪನ ಭಕ್ತಿಯೆಂದರೆ, ಅಂಥ ಇಂಥದಲ್ಲ. ಅಂಗೈಗೆ ಅಯ್ನುರು ಲಿಂಗ, ಮುಂಗೈಗೆ ಮುನ್ನೂರು ಲಿಂಗ, ಸಾವಿರದೇಳು ನೂರು ಲಿಂಗಗಳಿಗೆ ಭಕ್ತಿ ಮಾಡುತ್ತಾನಂತೆ.

ಮಾಳಿಂಗರಾಯನ ತಪಸ್ಸು ಕೆಡಿಸಲು, ವೀಳ್ಯೆಯೆತ್ತಿದ ಶೀಲವಂತಿ ಧಾವತಿಗೊಳ್ಳುತ್ತಾಳೆ. ಅದು ಪ್ರಭುದೇವ, ಮಾಯಾದೇವಿಯ ಕಥಾ ಸಂದರ್ಭವನ್ನು ನೆನಪಿಗೆ ತರುತ್ತದೆ. ಆದರೆ ಪರ್ಯವಸಾನ ಮಾತ್ರ ಬೇರೊಂದು ವಿಧದಲ್ಲಿ ಪರಿಣಮಿಸುತ್ತದೆ. ಬೀರಪ್ಪನು ಮಾಳಿಂಗರಾಯನಿಗೆ ದೈವತವಾದಂತೆ, ಮಾಳಿಂಗರಾಯನು ಶೀಲವಂತಿಗೆ ದೈವತವಾಗಿ ಪರಿಣಮಿಸುವನು. ಸಮುದ್ರದಾಳವನ್ನು ಅಳೆಯಬದ ಉಪ್ಪಿನಗೊಂಬೆಯು ಕರಗಿ ಕಡಲಲ್ಲಿ ಬೆರೆತಂತೆ ಶೀಲವಂತಿ, ಮಾಳಪ್ಪನ ಪಾದ ಮೂಲದಲ್ಲಿ ಒಂದುಗೂಡಿ ಕರಗುತ್ತಾಳೆ. ಹುಲಜಂತಿಯು ಮಾಳಪ್ಪನ ನೆಲೆಯಾದ, ಸಿಹಿಯಾಣವು ಶೀಲವಂತಿಗೆ ನೆಲವಾಗಿ ಬಿಡುವದು.

ಬಾಳಿದ್ದೇ ಹಾಡು, ಹಾಡಿದ್ದೇ ಬಾಳು

ಬಾಗಿ ಅಂದರೆ ಕುರಿಹಿಂಡುಗಳನ್ನು ಕಾಯುತ್ತ ಅಲ್ಲಿಂದಿಲ್ಲಿಗೆ, ಇಲ್ಲಿಂದೆಲ್ಲಿಗೋ ಅಳೆಯುವ ಕುರುಬರ ಬಾಳು, ಇಲ್ಲಿಂದ ಅಲ್ಲಿಯವರೆಗೆ ಬುಳುಬುಳು, ಅಲ್ಲಿಂದ ಕಲ್ಯಾಣದವರೆಗೆ ಬುಳು ಬುಳು-ಎನ್ನುವ ಒಡಪಿನಂತಿದೆ. ಅಲ್ಲಿ ಕುಂಕುಮದ ಹರಳು ಆಯ್ದುಕೊಳ್ಳುತ್ತ, ಇಲ್ಲಿ ಜೋಡು ಮಲ್ಲಿಗೆ ಕೊಯ್ದುಕೊಳ್ಳುತ್ತ ಸಾಗಿಯೇ ಸಾಗುತ್ತಾರೆ. ಅರೆಕ್ಷಣ ತಡೆಯಿಲ್ಲ. ಹೇಗೆಂದರೆ-

ತೆಗ್ಗಿನ ಕುರಿಯ ತೆವರಿಗಿ ಹೋಡಿಯೋ ಮಜ್ಜಿಗೆ ಕುಡಿದು ಬರತೇನೋ
ದಡ್ಡಿಯ ಕುರಿಯ ಮಡ್ಡಿಗಿ ಹೊಡಿಯೋ ಅಂಬಲಿ ಕುಡಿದು ಬರತೇನೋ
ಇಪ್ಪತ್ತು ಮೊಳದ ಘೊಂಗಡಿಯೋ ಒಪ್ಪೊತ್ತಿನಾಗ ನೇದಾನೋ
ಆರುನೂರು ಹಿಂಡ ಕುರಿಗಳನೋ ಅರಗಳಿಗ್ಯಾಗ ಹಿಂಡ್ಯಾನೋ

ಸೃಷ್ಟಿಯ ಮಹಾಚಕ್ರಕ್ಕೆ ಕೀಲಿಸಿದ ಚಿಕ್ಕಗಾಲಿಯಂತಾಗಿ ಬಿಡುವುದರಿಂದ ಕುರುಬನಲ್ಲಿ ಅಷ್ಟೊಂದು ಆಗಾಧ ಶಕ್ತಿ, ಅಗಾಧ ಕಾರ್ಯಕ್ಷಮತೆ ಸಂಗಳಿಸಿದ್ದು ಕಂಡುಬರುತ್ತದೆ. “ತೋಳ ಬಂದಿತೋ ತೋಳ ಬಂದಿತೋ ಭಾಳ ಜಾಕಲೇ ಬೀರಣ್ಣಾ” ಎಂದು ಬಹುಶಃ ಮಗನಿಗೆ ಎಚ್ಚರಿಸಿ, ಬಾಳ್ಯಾ ಸಾವಳ್ಯಾ ನಾಯಿಗಳ ನೆರವು ಪಡೆಯಲು ಆತನಿಗೆ ಸೂಚಿಸುತ್ತಾನೆ. ಅಗೋ! ಮನೆಯೊಡತಿ ಮಾಯವ್ವ ಅದನ್ನೇನೋ ಹೊತ್ತುತರುತ್ತಿದ್ದಾಳೆ!-

“ತೋಳಿನಾಗ ತೋಳಬಂದಗಿಟ್ಟಾಳ | ಗಾಳಿಗೆ ತುರುವಾ ಬಿಟ್ಟಾಳ |
ನಾಯಿಯ ನುಚ್ಚು ಹೊತ್ತಾಳ ಮಾಯವ್ವ ಬಾಯಿಲೆಕಾಯಿ ತಿಂತಾಳ ||”

ಬೀರದೇವರು

ಮಾನವರಲ್ಲಿ ಮನಿಗೇನಿ (ಮಾನಘನ) ಎನಿಸುವ ಭಕ್ತನು, ಸಾವಿರ ಭಾಗ್ಯವನ್ನು ಕಾಯುತ್ತಲೆ ದೇವದೇವನನ್ನು ಒಲಿಸುವ ಒಲುಮೆ ಪಡೆದಿರುತ್ತಾನೆ. ಅವನ ಬೀರದೇವನು ಎಂಥವನೆನ್ನುವುದನ್ನು ಅವನ ಹಾಡಿನಲ್ಲಿಯೇ ಕೇಳಬೇಕು-

ಅಂಗೈ ಜೋಳಿಗಿ, ಮುಂಗೈ ಬೆತ್ತ, ತುದಿಬೆರಳೀಬತ್ತಿ ಹಚ್ಯಾನೇ |
ಅವನು ಕಗ್ಗಾಲಕಣವಿಯ ಮುಗ್ಗಾಲದಾರಿಗೆ ಬರತಾನೇ ||

ಅದೇತಕ್ಕೆ? ಯಾರಿದ್ದಾರೆ ಅಲ್ಲಿ? ಗೌಳಿಗರ ವಸತಿಗೆ ಹಾಲಿನಭಿಕ್ಷೆ ಬೇಡಲು ಬಂದಿದ್ದಾನೆ. “ಗೌಳೇರಣ್ಣ, ಗೌಳೇರ ತಮ್ಮ ಹಾಲಿನ ಭಿಕ್ಷೆ ನೀಡಂದಾನೆ.” ಗೌಳಿಗನು ಆತನನ್ನು ಆದರದಿಂದ ಬರಮಾಡಿಕೊಂಡು ಕಂಬಳಿ ಗದ್ದುಗೆ ಕೊಟ್ಟು, ಅಲ್ಲಿ ಮೂರ್ತಮಾಡಲು ಸ್ವಾಮಿಯನ್ನು ಬಿನ್ನಯಿಸುತ್ತಾನೆ. ತಾನು ತಟ್ಟನೆ ಕೊಟ್ಟಿಗೆಗೆ ನಡೆದು, ಕರುಗಳನ್ನು ಬಿಟ್ಟು, ಹಾಲು ಹಿಂಡಿಕೊಂಡು ದೇವರಿಗೆ ಎಡೆಮಾಡಿಬರುತ್ತಾನೆ. ಆದರೆ ಕರು ಉಂಡ ಹಾಲು ಎಂಜಿಲೆಂಜಲು ಎಂದು ಸ್ವಾಮಿ ಹಿಂದಿರುಗುತ್ತಾನೆ. ಬಂದದಾರಿಯಲ್ಲಿ ಹಿಂದಿರುಗಿ ಹೊರಟು, ಮುಗ್ಗಾಲ ದಾರಿಯಲ್ಲಿ ಕಗ್ಗಾಲ ಕಣವಿಗೆ ಬರುತ್ತಾನೆ. ಅಲ್ಲಿ ಕುರುಬಣ್ಣನನ್ನು ಕಾಣುತ್ತಾನೆ. “ಕುರುಬರ ಅಣ್ಣ, ಕುರುಬರ ತಮ್ಮ, ಹಾಲಿನ ಭಿಕ್ಷೆ ನೀಡು” ಎನ್ನಲು “ಬಾರೋ ಬಾರೋ ಹೇ ನನ್ನ ಗುರುವೇ” ಎಂದು ಸ್ವಾಗತಿಸಿ, ಕಂಬಳಿ ಗದ್ದುಗೆಯಲ್ಲಿ ಶಿವನನ್ನು ಕುಳ್ಳಿರಿಸುತ್ತಾನೆ. ಮುಂದೇನಾಯಿತು ಕೇಳಿರಿ.

ಮುಂದಾಲ ಹಾಲ ಹಿಂಡ್ಯಾನೇ | ಅವ ಹಿಂದಾಲ ಕರುಗಳ ಬಿಟ್ಟಾನೇ
ಹಾಲs ಉಂಡು ಹಾರೈಸುತ |ನಮ್ಮಯ್ಯ ಹಿಂದಕ್ಕೆ ಹೊಂಟಾನೇ.

ಕುರುಬರಣ್ಣನ ಕಣ್ಣಿಗೆ ಕಟ್ಟಿದ ಸ್ವಾಮಿಯ ಚಿತ್ರವು ಎಂದಾದರೂ ಅಳುಕಬಹುದೇ? ಅಂಗೈ ಜೋಳಗಿ! ಮುಂಗೈ ಬೆತ್ತ! ತುದಿಬೆರಳೀಬತ್ತಿ !!

ಶಿವಪಾರ್ವತಿಯರ ಸೋಲು

ಜ್ಞಾನಿಗಳು ವಾಗರ್ಥಗಳನ್ನು ಶಿವಪಾರ್ವತಿಯರಿಗೆ ಹೋಲಿಸುವುದುಂಟು. ನೈಸರ್ಗಿಕ ಜೀವನವನ್ನು ನಡೆಸಿಕೊಂಡು ಬಂದವರ ನುಡಿಯಲ್ಲಿ ಬುದ್ಧಿಯ ಪ್ರಖರತೆಗಿಂತ ಭಾವದ ಪ್ರಶಾಂತತೆಯು ಲಾಸ್ಯವಾಡುತ್ತಿರುತ್ತದೆ. ಶಿವಪಾರ್ವತಿಯರಂತ ವಾಗರ್ಥಗಳನ್ನು ಅಳವಡಿಸಿಕೊಂಡ ಕುರುಬನ ಹೃದಯವು, ಶಿವಪಾರ್ವತಿಯರಂಥ ಸೆರೆಹಿಡಿಯುವುದು ಅರಿದಲ್ಲ. ತಿಳಕೊಳ್ಳುವುದು ತೀರುತ್ತಲೆ ತಿಳುವಳಿಕೆಯುಂಟಾಗುವದೆಂದೂ, ತಿಳುವಳಿಕೆಯೇ ಸಾಧಕ ತಿಳುವಳಿಕೆಯು ಬಾಧಕವೆಂದು ಹೇಳಲಾಗುತ್ತದೆ. ಬಾಧಕವಾಗದೆ ಸಾಧಕವೇ ಆಗುವಷ್ಟು ತಿಳುವಳಿಕೆಯನ್ನು ಆಳುಮಾಡಿಕೊಂಡು, ಎದೆಯ ರಸವನ್ನು ಪಟ್ಟಗಟ್ಟಿದ ಜೀವನಿಗೆ ನಿಸರ್ಗವು ತಂದೆಯಾಗಿ, ಗೆಳೆಯನಾಗಿ ಅವನೊಡನೆ ಅಕ್ಕರೆಯಿಂದ ಆಡನಿಲ್ಲುವದು. ಒಮ್ಮೆ ಸೋತಂತೆ ಮಾಡಿದರೆ, ಇನ್ನೊಮ್ಮೆ ಗೆದ್ದಂತೆ ಮಡುವುದು. ಆಟದ ಸೋಲು, ಆಟದ ಗೆಲುವು ಯಾರನ್ನು ನೋಯಿಸಬಲ್ಲವು?

ಹಾಡೇ ಕಥೆಯಾಗಿ ನಿಂತಿತೋ, ಕಥೆಯೇ ಹಾಡಾಗಿ ಹರಿಯಲಿರುವದೋ ಅಂಥ ಹಾಡಿನ ಕಥೆ ಇಲ್ಲಿದೆ- “ಶಿವಪಾರ್ವತಿಯರ ಸೋಲು”

ಕುರುಬರ ಬೀರನು ಕುರಿಹಿಂಡು ಅಟ್ಟಿಕೊಂಡು ಒಂದು ಹಳ್ಳದ ದಂಡೆಗೆ ಬರುವನು. ಅಲ್ಲಿಯೇ ನೀರು ನೆರಳು ಕಂಡು, ತನ್ನ ಕುರಿಗಳಿಗೆ ದಡ್ಡಿ ಹಾಕಲು ತಕ್ಕ ಸ್ಥಳವೆಂದು ಬಗೆದು ಅದರ ಎತ್ತುಗಡೆ ನಡೆಸಿದನು. ಅತ್ತಕಡೆಯಿಂದ ಶಿವಪಾರ್ವತಿಯರು ಬಂದರು. ಕೇಳಿದರು-

“ಹಳ್ಳದಲ್ಲೇಕೆ ದಡ್ಡಿ?”

ಹಳ್ಳದ ತೊಂದರೆಯೇನು ಆಗುವದಿಲ್ಲವಲ್ಲ” ಎಂದನು ಬೀರ.

“ಮಳೆಗಿಳೆ ಆಗಿಬಿಟ್ಟು ಹಳ್ಳ ತುಂಬಿಬರುವದಿಲ್ಲವೇ?” ಎಂದು ಕೇಳಿದರು ಶಿವಪಾರ್ವತಿಯರು.

“ಮಳೆ ಹೋಯಿತು ಮೂರು ತಿಂಗಳು ತನ್ನ ನಾಡಿಗೆ” ಎಂಬುದು ಕುರುಬನ ಮರುನುಡಿ. ಶಿವಪಾರ್ವತಿಯರು ಅಲ್ಲಿ ನಿಲ್ಲದೆ, ನೇರವಾಗಿ ವರುಣಲೋಕಕ್ಕೆ ತೆರಳಿದರು-“ಮಳೆರಾಯನನ್ನು ಈಗಲೇ ಭೂಮಿಗೆ ಕಳಿಸಿಕೊಡು’””” ಎಂದರು ವರಣನಿಗೆ. ವರುಣನು ವಿನಯಿಸಿದನು-“ಮಳೆರಾಯನನ್ನು ಬೇರೆ ನಾಡಿಗೆ ಕಳಿಸಿದ್ದೇನೆ. ಮೂರು ತಿಂಗಳು ಕಳೆದ ಬಳಿಕ ಅವನು ಬರುವುದು.”

ಆ ಮಾತು ಕೇಳಿ ಶಿವಪಾರ್ವತಿಯರು ನಿರುತ್ತರರಾದರು. ಅವರ ಮುಖ ಬಾಡಿದವು ಕೈಲಾಸಕ್ಕೆ ತೆರಳಿದರು.

ಹಳ್ಳದಲ್ಲಿ ಬೀರನದಡ್ಡಿ, ಹಳ್ಳದ ದಂಡೆಯಲ್ಲಿ ಕುರಿಗಳ ಬೀಡು, ಹಳ್ಳದ ದಡದಲ್ಲಿ ಬೆಳೆದುನಿಂತ ಹಸಿರು ಹುಲ್ಲು ಮೇದು, ಹಳ್ಳದ ತಿಳಿನೀರು ಕುಡಿಯುತ್ತ ಕುರಿಗಳು ಮೂರು ತಿಂಗಳು ಕಳೆದವು.

“ಬೀರಾ, ದಡ್ಡಿ ಕಿತ್ತಿದೆಯಲ್ಲ !ಯಾಕೆ?” ಎಂದು ಕೇಳಿದರು ಅತ್ತಿಂದಬಂದ ಶಿವ ಪಾರ್ವತಿಯರು.

“ಮಳೆರಾಜ ಬಂದಿರುವನಲ್ಲವೇ ನಮ್ಮ ನಡಿಗೆ” ಎಂದು ಮರುನುಡಿದನು ಬೀರ.

ಎಷ್ಟೊ ಸೊಕ್ಕು ಈ ಕುರುಬನಿಗೆ? ಮಳೆ ಬಂದೇ ತಿರುವುದೆಂದು ಸ್ಪಷ್ಟವಾಗಿ ಹೇಳುತ್ತಿರುವನಲ್ಲ! ಏತರ ಮೇಲಿಂದ ಹೀಗೆ ಹೇಳುತ್ತಾನೆ?” ಎಂದುಕೊಳ್ಳುತ್ತ ಆ ದೇವದಂಪತಿಗಳು ನೇರವಾಗಿ ಸುರಲೋಕಕ್ಕೆ ತೆರಳಿ ವರುಣನನ್ನು ಕರೆಯಿಸಿ ಹೇಳಿದರು-

“ಮಳೆರಾಯನನ್ನು ಮರಳಿ ಕರೆಯಿಸು”

“ನೀವು ಹೇಳಿದಂತೆ ಇಂದೇ ಅವನನ್ನು ಅತ್ತ ಕಳಿಸಿದ್ದೇನೆ. ಮೋಡಗಳು ಮುಂದೆ ಮುಂದೆ, ಸಿಡಿಲು ಮಿಂಚು ಹಿಂದೆ ಹಿಂದೆ ಹೋಗಿವೆ. ನನ್ನ ಕೈಯಲ್ಲೇನದೆ? ಕೊಟ್ಟ ಹುಕುಮು ಅವುಗಳ ಕೈಯಲ್ಲಿದೆ” ಎಂದು ವರುಣನು ಬಿನ್ನಯಿಸಿದನು.

“ನಾವಿಂದು ಸೋತೆವು ಕುರುಬನಿಗೆ” ಎಂದು ಕೊಂಡು ಶಿವಪಾರ್ವತಿಯರು. ಕುರುಬನು ಹೋರಾಡಿ ಪಡೆದ ಗೆಲಿವಲ್ಲ ಇದು. ಆಡಾಡುತ್ತ ಉಡಿಯಲ್ಲಿ ಬಿದ್ದ ಗೆಲುವು ನಿಸರ್ಗ ಶಿಶುವಿಗೆ ನಿಸರ್ಗದೊಡೆತನ ಸಹಜ ಪ್ರಾಪ್ತಿ; ಕ್ರಮಪ್ರಾಪ್ತ. ಶ್ರೀರಾಮಕೃಷ್ಣ ಪರಮಹಂಸರು ಹೇಳಿದಂತೆ-“ ನಾವು ಭೂಮಿಯ ಮೇಲೆ ಶಿಶುವಾಗಿ ಬಂದಾಕ್ಷಣವೇ ಈ ಸೃಷ್ಟಿಗೆ ಹಕ್ಕುದಾರರಾದೆವು.” ಆದರೆ ನಿಸರ್ಗದ ಶಿಶುವದಗ ಅತ್ರ ಅದು ಸಾಧ್ಯ ಕುರುಬರು ಹೆಗಲಮೇಲಿನ ಕಂಬಳಿ ತೆಗೆದು ಜಾಡಿಸಿದರೆ, ಎಳಸಿಹೋದ ಮಳೆ ಬಂದೇ ಬಿಡುತ್ತಿತ್ತೆಂದು ಹೇಳುತ್ತಾರೆ. ಅದರಲ್ಲಿ ಸಂತ್ಯಾಶವಿಲ್ಲದೆ ಇಲ್ಲ

ರಗಳೆಯ ನಡಿಗೆ

ಡೊಳ್ಳಿನ ಹಾಡುಗಳಿಗೆ ರಗಳೆಯ ನಡಿಗೆ ಇರುತ್ತದೆ. ಸ್ವರ್ಗದಲ್ಲಿ ರಚಿತವಾಗುವದೆನ್ನುವ ಕವಿತೆಯು ತಲೆಗಿಳಿಯದೆ, ನೇರವಾಗಿ ಹೃದಯಕ್ಕಿಳಿಯುವದು ನಿಜವೆಂದರೆ, ಹೃದಯದಿಂದ ಉಕ್ಕುವ ಕವಿತೆಯ ಸೆಲೆಗೆ ರಗಳೆಯೇ ಉತ್ತಮವಾಹಕವೆನ್ನುವುದು ಹದಿನಾರಾಣೆ ಸತ್ಯ. ಮ.ಗಾಂಧಿ ರಾ.ಕೃ.ಪರಮಹಂಸರಂಥವರಲ್ಲಿ ಶಿಶುಭಾವನೆಯನ್ನು ಸ್ವಾಭಾವಿಕವಾಗಿ ಹೊರಹೊಮ್ಮಿಸುತ್ತವೆ. ಅವರು ವರಕವಿಗಳಂತೆ, ಇವರು ಸಾಮಾನ್ಯ ಜೀವಿಗಳಂತೆ, ಅವರ ವಾಣಿ ಕವಿಗಳ ಕವಿತೆ, ಇವರ ನುಡಿ ಕವಿಗಳಲ್ಲದವರ ಕವಿತೆಯುಂಟು ದಿ. ಮಧುರಚೆನ್ನರ ಭಾಷೆಯಲ್ಲಿ ಹೇಳಬಹುದು. ಪ್ರತಿಯೊಂದು ಜೀವವೂ ಕವಿಮೊಗ್ಗೆಯಾಗಿರುವುದೇ ನಿಜವಾದರೆ, ಆ ಮೊಗ್ಗೆಯಿಂದ ಸೂಸುಗಂಪು ಹೊರಬರುವುದು ಆಶ್ಚರ್ಯವೇ? ಬೌದ್ಧಿಕ ಸಂಘರ್ಷಣವಿಲ್ಲದ ಅರಳಿದೆದೆಯು ರಸನಿಮಿಷದಲ್ಲಿ ಕವನ ಕಿರಣವನ್ನು ಚಿಮ್ಮಿಸಬಲ್ಲದೆನ್ನುವ ಮಾತು ಎಲ್ಲರೂ ಒಪ್ಪಿಕೊಳ್ಳುವಂತಿದೆ. ದಿ. ಮಧುರಚೆನ್ನರು “ಮಲ್ಲಿಗೆ ದಂಡೆ”ಯ ಮುನ್ನುಡಿಯಲ್ಲಿ ಅನುಮಾನ ಪಟ್ಟು ಮನಗಂಡಂತೆ ಕಲ್ಪನೆಯು. ಆಂತರಿಕವಾದ ಒಂದು ಸತ್ಯ ಸಾಮ್ರಾಜ್ಯಕ್ಕೆ ಸಂಬಧಿಸಿದ್ದಾಗಿರಲೇಬೇಕು. ಕುರುಬರ ಬೀರನ ಹಾಡು ಕೇಳುತ್ತಿರುವಾಗ ಆ ಹಾಡಿನಲ್ಲಿ ನೀರಿಗೆ ನಡೆದ ಬಾಲೆಯೊಬ್ಬಳ ವರ್ಣನೆಯನ್ನು ಕೇಳಿದಾಗ ಅವರಿಗೆ-“ ಪೂರ್ವಕಾಲದ ಕುರುಬರು ಇಂತಹ ಹೆಣ್ಣನ್ನು ಎಲ್ಲಿ ಕಂಡಿದ್ದಾರು” ಎಂಬ ಅನುಮಾನವುಂಟಾಯಿತು. ಚಿತ್ತವನ್ನು ಸ್ಪರ್ಶಿಸಿದ ಭಾವ ಮತ್ತು ಅಂತರಂಗ ಲೋಕದ ಸೂಕ್ತ ಕಲ್ಪನಾ ಕವಚ ಇವುಗಳ ಸಂಗಳಿಕೆಯೇ ಕವಿತೆಯಷ್ಟೇ? ಸುಂದರವಾದ ಹಾಗೂ ನಿರ್ಮಲವಾದ ಚಿತ್ತಕ್ಷೇತ್ರವೇ ಕವಿತೆ ಹೊರಹೊಮ್ಮುವುದಕ್ಕೆ ಆಸ್ಪದ ನೀಡುವದು. ನಿಸರ್ಗಜೀವನ ನಡೆಸಿ, ಸೃಷ್ಟಿಮಾತೆಗೆ ಹತ್ತಿರದ ಮಗುವಾಗಿ ನಿಂತಿರುವ ಸಾಮಾನ್ಯರನ್ನು ಕಾವ್ಯದೇವತೆ ಒಲಿದು ಬರುವುದು ವಾಸ್ತವಿಕವಾಗಿದೆ. ಡೊಳ್ಳಿನ ಹಾಡುಗಳನ್ನು ರಚಿಸಿ ಹಾಡುವ ಕುರುಬ ಹೃದಯವನ್ನು ಅರಿಸುತ್ತ ಕವನ ಸೆಲೆಯು ತನ್ನ ತವರಿನಿಂದ ನೇರವಾಗಿ ಇಳಿದು ಬರುತ್ತಿದ್ದಿತೆಂದು ಹೇಳಬಹುದಾಗಿದೆ. ಅಂಥ ಉತ್ಸಾಹದ ಝರಿಯೇ ಆದ ಕವನಕ್ಕೆ ರಗಳೆಯೇ ಯೋಗ್ಯವಾದ ಮಾಧ್ಯಮವಲ್ಲವೇ?

ನಮ್ಮಯ್ಯ ಹಿಂದಕೆ ಹೊಂಟಾನೆ | ಅವ |
ಮುಗ್ಗಲ ದಾರಿಗೆ ಬಂದಾನೆ | ಅವ |
ಕಗ್ಗಾಲ ಕಣವಿಯ ಹಿಡಿದಾನೆ ||
ಕಗ್ಗಾಲ ಕಣವಿಯ ಹಿಡಿದಾನೆ | ಅವ |
ಕುರುಬರಣ್ಣನ ಕಂಡಾನೆ ||
ಸೊನಗಿ ಗ್ರಾಮದಲಿ ಮುದ್ದುಗೊಂಡ ಎಂಬ ದೇವಭಕ್ತೋ
ಅವನ ಸತಿ ಸುಗ್ಗಾಲದೇವಿ ಆಕಿ ಭಾಳೆ ಸತ್ಯವಂತ್ಯೊ ||
ರೇವಣಸಿದ್ಧನ ಭಕ್ತಿ ಮಾಡಹಿತ್ತಿದ್ದಳೊ ದಿನಕೆ ಎರಡು ಹೊತ್ತೋ
ಸತೀಮತೀಗಿ ಮಕಕಳಿದ್ದಿದ್ದಿಲ್ಲ ಮನಸು ಮರಗುತ್ತಿತ್ತೋ ||
ದಂಪತಿ ಭಕ್ತಿಗೊಲ್ತು ಶ್ರೀಗುರು ಕೊಟ್ಟಾನ ಸಂತತ್ಯೋ
ಸಿದ್ಧರಾಮ ಎಂಬ ಮಗಾ ಹುಟ್ಟಿದಾ ರೂಪಚಂದ್ರಜ್ಯೋತ್ಯೋ ||

ರಗಳೆಯೆಂದರೆ ಮಾರವಾಡಿಗಳ ಮುಂಡಾಸವಿದ್ದ ಹಾಗೆ. ಅವಕಾಶವಿರುವವರೆಗೆ ಸುತ್ತಿಯೇ ಸುತ್ತುವುದು. ಅವಕಾಶ ತೀರಿತೋ ಉಳಿದಷ್ಟು ಮುಂಡಾಸನ್ನು ಉಂಡಾಳಿ ಮಾಡಿಟ್ಟು ಬಿಗಿದು ಮುಗಿಸುವುದು. ರಗಳೆ ಕೇಳುವೆನೆಂದವರಿಗೆ ತಗೊಳ್ಳಿರೆನ್ನುವುದು ಸಾಕಾಯಿತೆಂದವರಿಗೆ ಮುಗಿಯಿತೆನ್ನುವುದು.

ಶಬ್ದಸೌರಭ ವೈಶಿಷ್ಟ್ಯ

ತಾಯ್ನುಡಿಯ ಶಬ್ದಭಂಡಾರ ಬೆಳೆಯುವುದು ಸಾಮಾನ್ಯ ಜನರಿಂದಲೇ, ಜನಸಾಮಾನ್ಯರ ಪ್ರತೀಕನಾದ ಸರ್ವಜ್ಞ ಕವಿಯ ತುತ್ತಿನ ಚೀಲ, ಹುತ್ತಿನ ಹುಳು, ಹುಳಿತಿಳಿ ಮೊದಲಾದ ಶಬ್ದಗಳಂತ ಅವೆಷ್ಟೋ ಶಬ್ದಗಳು ಡೊಳ್ಳಿನ ಹಾಡು ರಚಿಸಿದ ಕವಿಗಳ ಬಾಯಿಂದ ನುಸುಳಿ ಬಂದಿವೆ. ಅವನ್ನೆಲ್ಲ ಉಲ್ಲೇಖಿಸಲು ಇಲ್ಲಿ ಸ್ಥಳವಿಲ್ಲ. ಉದಾಹರಣೆಗಾಗಿ ಹೇಳಬೇಕೆಂದರೆ ಕುಂಕುಮದ ಹರಳು, ಡೊಗ್ಗಿಮಗ, ಎಡಿಮಣಿ, ತುದಿಬೆರಳಿಬತ್ತಿ, ಮುಗ್ಗಾಲದಾರಿ, ಕಗ್ಗಾಲ ಕಣವಿ, ಸಾವಿರಭಾಗ್ಯ, ಮನಿಗೇನಿ, ಹೋಮದ ಕಂಬಳಿ, ನೇಮದ ಬೆತ್ತ ಇತ್ಯಾದಿ:

ಬರಿಯ ಮಾಳಿಂಗ ಮಾಳಪ್ಪ ಎನ್ನದೆ, ಆ ಶಬ್ದಕ್ಕೆ ರಾಯ ಎಂಬ ಶಬ್ದ ಸೇರಿಸಿ ಮಾಳಿಂಗರಾಯ, ತಂದೆ ತುಕ್ಕಪ್ಪರಾಯ, ಅಣ್ಣ ಜಕ್ಕರಾಯ ಎಂದು ಹೇಳಿಕೊಳ್ಳುತ್ತಿದ್ದಂತೆ ಕಂಡುಬರುತ್ತದೆ. ವಿಜಯನಗರದ ಅರಸರಿಗೆ ಮಾತ್ರ ಮೀಸಲಾಗಿರುವ ಈ ರಾಯ ಶಬ್ದವು ಕುರುಬರಿಗೆಂತು ಅಂಟಿಕೊಂಡಿತು ಎಂಬುದರ ತಳ ಬುಡಗಳನ್ನು ಆಸ್ಥೆವಹಿಸಿ ತಿಳಿದುಕೊಳ್ಳಬೇಕಾಗಿದೆ.

ಪರಂಪರೆ

ಇಂದಿನ ಸುಧಾರಣೆಯ ಯುಗದಲ್ಲಿ ಕುರುಬರಾಗಲಿ, ಕುರಿಕಾಯುವ ವೃತ್ತಿಯಾಗಲಿ ಕಾಣಸಿಗುವುದು ಕಡಿಮೆಯಾಗಿದೆ. ಆದರೆ ಅವುಗಳ ಅಸ್ತಿತ್ವು ಉಳಿದೇ ಇದೆ. ಭರಮದೇವರ ಗುಡಿ, ಪಲ್ಲಕ್ಕಿ ಉತ್ಸವ ಇರುವ ತನಕ ಡೊಳ್ಳುವಾದ್ಯಕ್ಕೆ ಗಂಡಾಂತರವಿಲ್ಲ. ಡೊಳ್ಳಿಗನತ್ತು ಇರುವವರೆಗೆ ಡೊಳ್ಳಿನ ಹಾಡುಗಳು ಉಳಿಯಲೇಬೇಕು. ಕಾಲಮಾನಕ್ಕೆ ತಕ್ಕಂತೆ ಹೊಸ ಹಾಡುಗಳು ಹುಟ್ಟಿಕೊಳ್ಳಬೇಕು; ಹುಟ್ಟಿಕೊಳ್ಳುತ್ತಲೂ ಇವೆ. ಜೀವನದಂತೆ ಸಾಹಿತ್ಯ. ಬಾಳು ಬದಲುಗೊಂಡರೆ ಆನುಷಂಗಿಕವಾಗಿ ಉದ್ಯೋಗ-ವೃತ್ತಿಗಳು ಬದಲಾಗುವಂತೆ ಡೊಳ್ಳಿನ ಹಾಡಿನ ವಿಷಯಗಳೂ ಬದಲಾಗುವುದು ಸಹಜ. ಸವವರ್ಗದಿಂದ ಇಳಿದು ಬಂದ ಕವಿತೆ, ಮೊದಲು ಕವಿತೇ ತಗುಲಿ, ಅದನ್ನು ಪ್ಲಾವಿತಗೊಳಿಸುವ ಕೆಲಸಮಾಡಿ, ಅಳಿದುಳಿದ ರಸಾಂಶವು ಹಿಂದುಗಡೆ ಹೃದಯಕ್ಕೆ ಇಳಿಯುವದು.

ಸಿದ್ಧರಾಮ ಸಿದ್ಧರಾಮ ಅಂತ ಒದರಿಧಂಗ ಆಯ್ತೋ
ಈಗೇನಾದರೋ ಕುರಿತಾರಂತ ನೋಡತಾನ ಸುತ್ತಮುತ್ತೋ ||
ಧ್ಯಾನಮಗ್ನನಾಗಿ ಕುಳಿತ ಸಿದ್ಧರಾಮ ಚಮತ್ಕಾರ ಆಯ್ತೋ |
ಮಲ್ಲಿಕಾರ್ಜುನ ಜಂಗಮನಾಗಿ ಮುಂದು ಬಂದುನಿಂತೋ ||
ಹಿಂದಿನ ಮಾತು ಹಿಂದೆ ಹೋಯಿತೋ ಇಂದಿನ ಯುಗದಾಗೋ
ಹೊಸ ಕಲ್ಪನಾ ಹೊಸರಚನಾ ಬ್ಯಾರೆ ನಡೆದೀಗೋ ||
ಆದಿಶೇಷನು ಹೊತ್ತು ನಿಂತನೋ ಈ ಭೂಮಿಯ ಕೆಳಗೋ
ಶಾಸ್ತ್ರದೊಳಗ ಬರದಾದ ಹೀಂಗ ಗೊತ್ತಿದ್ದು ನಮನಿಮಗೋ ||
ರಾಕಿಟೆಂಬುದು ಹಾಯ್ದು ಹೋಗೂದು ಕಂಡಾದ ಎಲ್ಲರಿಗೊ
ಪೃಥ್ವಿ ಸುತ್ತು ಹಾಕಿ ಬರ್ತಾರ ತಿರುಗಿ ಕೊಂಕಿಲ್ಲ ಕೂದಲೆಳಿಗೋ ||

ಕಾಯಕಲ್ಪ

ಹೊಸದಾಗಿ ಹುಟ್ಟಿ ಬರುತ್ತಿರುವ ಡೊಳ್ಳಿನ ಹಾಡುಗಳಂತೆ ಬಹುತರ ಜನಪದ ಹಾಡುಗಳಿಗೆ ಎಲುವು, ತೊಗಲು ಎರಡೇ ಕುರುಹು ಕಂಡುಬರುತ್ತಿವೆ. ಅವು ರಕ್ತ ಮಾಂಸಗಳನ್ನು ಹೊತ್ತು, ಜೀವಕಳೆ ಪಡೆಯಬೇಕಾದರೆ, ಹಿಂದಿನ ಕಾಲದ ಹಾಡುಗಳನನು ಅಭ್ಯಸಿಸುವುದು ಅನಿವಾರ್ಯವಾಗಿದೆ. ಹಾಗೆ ಮಾಡುವುದರಿಂದ ಮುಂಬರುವ ಹಾಡುಗಳಿಗೆ ಕಾಯಕಲ್ಪ ಒದಗಿಸಿದಂತಾಗುತ್ತದೆ. ಕಾಯಕಲ್ಪ ಪಡೆದ ಸಾಹಿತ್ಯದಿಂದ ನಮ್ಮ ಬಾಳಿಗೂ ಹೊಸ ಜೀವಕಳೆ ಬರಬಹುದಾಗಿದೆ.