ಮಾತು ಜೀವನದ ಉಸಿರು. ಅದು ಜನಪದ ಸಮ್ಮತವಾದ ಬಳಿಕ ಅದಕ್ಕೊಂದು ಮುದ್ರೆ ಬೀಳುತ್ತದೆ. ಆ ಮುದ್ರೆಯೇ ಸಾಹಿತ್ಯ ದೀಕ್ಷೆಯ ಕುರುಹು. ಹಾಗೆ ದೀಕ್ಷೆ ಪಡೆದ ಮಾತು ಜನಪದ ಸಾಹಿತ್ಯವೆನಿಸುತ್ತದೆ. ಜನಪದ ಸಾಹಿತ್ಯದ ಸಾವಿರ ಪ್ರಕಾರಗಳಲ್ಲಿ ಕೊಂಕುನುಡಿಯೂ ಒಂದಾಗಿದೆ. ಸರಳ ನುಡಿಯು ಒಂದು ಕಿವಿಯನ್ನು ಸೇರಿ, ಇನ್ನೊಂದು ಕಿವಿಯಿಂದ ಸುಲಭವಾಗಿ ಹೊರಬೀಳುವದು. ಆದರೆ ಕೊಂಕುನುಡಿ ಕಿವಿಯಿಂದ ಒಳಸೇರಿ ಮುಂದುವರಿಯದೇ ಕೆಳಕ್ಕಿಳಿದು ಹೃದಯವನ್ನು ಸೇರುವದು. ಹೃದಯವನ್ನು ತಟ್ಟುವ ಮಾತೇ ನಿಜವಾದ ಸಾಹಿತ್ಯ. ಕೊಂಕು ನುಡಿಯು ಹೇಳಿ ಕೇಳಿ ನಿಜವಾದ ಸಾಹಿತ್ಯದ ಜಾತಿಗೆ ಸೇರುವಂಥದು.

ಕೊಂಕುನುಡಿ ಪದ್ಯವಂತೂ ಅಲ್ಲ. ಅದಕ್ಕೆ ಗದ್ಯದ ಅವಕಾಶವಿದ್ದರೂ ಪದ್ಯದ ಸೊಗಡಿನಿಂದ ತುಂಬಿರುತ್ತದೆ. ತೋರಿಕೆಯಲ್ಲಿ ಗಡಸು, ಬಾವಿಸಲು ಪಡೆದು. ಕಾಂತೆಯ ಮಾತಿನ ಕಾಂತಿ ಅದಕ್ಕಿರುತ್ತದೆ. ಕೊಂಕುನುಡಿಯ ಚಲಕ ಅಕ್ಕಸಾಲಿಯು ಕಿವಿಚುಚ್ಚುವಂತೆ, ನೋವೆನಿಸದಲು. ತುಸು ಸಹಿಸಿದರೆ ತೀರಿಹೋಯಿತು. ಮರುಕ್ಷಣದಲ್ಲಿ ಗೆದ್ದ ಹುಂಜಿನಂತೆ, ತುರಾಯಿ ನಿಗುರು ನಿಲ್ಲುವುದು.

ನಿರ್ಣಾಯಕ ಶಬ್ದ ಸಂಖ್ಯೆಯಿಲ್ಲ. ಕೊಂಕು ನುಡಿಗೆ. ವಿಶೇಷ್ಯವನ್ನು ವಿಶೇಷಣದಿಂದ ಅಲಂಕರಿಸಿದಾಗ ಕೊಂಕುನುಡಿ ಕೆಚ್ಚುನುಡಿಯೋ ಚೆಚ್ಚು ನುಡಿಯೆನಿಸಬಹುದು. ಇಳಿಗೂದ ಲೀಸಾಡಿಸುವ ವಯ್ಯಾರಿಯಂತೆ ಸುಳಿದಾಗ ಅದು ಚುಚ್ಚುನುಡಿಯೋ ಹುಚ್ಚುನುಡಿಯೋ ಅನಿಸಬಹುದು. ಕೆಚ್ಚುನುಡಿ-ಚೆಚ್ಚುನುಡಿಯಾಗಲಿ, ಚುಚ್ಚು-ಹುಚ್ಚು ನುಡಿಯೋ ಅನಿಸಬಹುದು. ಕೆಚ್ಚುನುಡಿ ಚೆಚ್ಚುನುಡಿಯಾಗಲಿ, ಚುಚ್ಚು ಹುಚ್ಚು ನುಡಿಯಾಗಲಿ ಜನ ಉಸಿರಿನಲ್ಲಿ ಮೂಡಿಬಂದ ಮಾತು. ಅದರ ಕುಸುರಿನ ಮೋಡಿಯನ್ನು ಅದು ಗೂಡಿನ ಕೈವಾಡವೋ ಹೆಣ್ಣಿನ ಕೈವಾಡವೋ ಎನ್ನುವುದು ಸ್ಪಷ್ಟವಾಗುತ್ತದೆ. ನಿಸರ್ಗದ ಮುಕ್ತ ಪರಿಸರದಲ್ಲಿ ಮೂಡಿಬಂದ ಕಾಡು ಕುಸುಮವಾದರೂ ಸುಗಂಧವಿಡುವುದರಲ್ಲಿ ಹಿಂದೆ ಬೀಳದು.

ಸಂಸ್ಕಾರವಂತರಿಗೆ ಕೊಂಕುನುಡಿ ಬಯ್ಗಳಾಗಿಯೋ, ಅಪಶಬ್ದವಾಗಿಯೋ ತೋರಬಹುದು, ಅಶ್ಲೀಲವೂ ಅನಿಸಬಹುದು. ಸಂಸ್ಕಾರವಂತರ ನಡುವಳಿಯ ನಡುಮನೆಯವರೆಗೂ ಬೆಕ್ಕಿನಂತೆ ಸುಳಿದಾಡಬಲ್ಲದು, ಆದರೆ ತೆರೆಯ ಮರೆಯಲ್ಲಿ ಮುಡಚಟ್ಟು ಇಲ್ಲ. ಆದರೆ ಅದನ್ನು ಜನಪದವು ಮಾತಿನ ಜಗುಲಿಯವರೆಗೂ ಯಾವ ಮುಟ್ಟುತಪ್ಪು ಇಲ್ಲದೆ ಬರಮಾಡಿಕೊಳ್ಳಬಹುದು.

ಆಗದವರನ್ನು ಕಂಡು ಕುಂದಿಟ್ಟು ನುಡಿಯುವುದು, ಜರಿದು ಮಾತಾಡುವುದೂ ಸಹಜ. ಹೀಗಳಿಕೆಯಾಗಲಿ ಮೂದಲಿಕೆಯಾಗಲಿ ಮನುಷ್ಯನ ಮಾತಿಗೆ ಸ್ವಾಭಾವಿಕ. ಮೈಲಿಕಲೆಗಳು ಎದ್ದು ಕಾಣುವ ಮುಖಕ್ಕೆ ದೋಸೆಯ ಮುಖವೆಂದೋ ಮೂರದ್ದನ ಕೊಟ್ಟು ಮುಳ್ಳಾಡಿಸಿದ ಕಲ್ಲಿನಂಥ ಮುಖವೆಂದೋ ಕುಂದಿಡುವುದುಂಟು. ತಲೆಗೆ ಕರೀಪದೊಳಗಿನ ಕಡ್ಡುಗಾಯಿಯೆಂದೂ, ಕಣ್ಣಿಗೆ ಪರಟಿಯ ತೂತು ಇಲ್ಲವೆ, ಹಿಟ್ಟಿನಲ್ಲಿ ಬೊಟಟೂರಿದಂತೆ ತೋರುವ ಕಣ್ಣು ಎಂದೂ ಹೀಗಳೆಯುವುದುಂಟು, ಮೆಳ್ಳನಿಗೆ ಯಂಕಂಚಿಯ ಕಡೆಗೆ ನೋಡು ಎಂದರೆ, ಯರಗಲ್ಲ ಕಡೆಗೆ ನೋಡುವ ಠಿವಿಯೆಂದು ಆಡಿಸಾಡಬಹುದಾಗಿದೆ. ಬೋರಲು ಬಿದ್ದ ಎಲ್ಲಮ್ಮನ ಕವಡೆಯಂಥ ಕಣ್ಣು-ಎಂದು ನಗೆಯಾಡಲೂ ಬಹುದಾಗಿದೆ. ದಪ್ಪ ಕಣ್ಣಿನವನಿಗೆ.

ರಂಜಣಿಗೆಯ ಅಂಚಿನಂಥ ತುಟಿಯೆಂದು ಚುಚ್ಚಿಯಾಡುವುದುಂಟು. ಅದರಂತೆ ಹಲ್ಲಿನ ಬಗ್ಗೆ ಹೇಳುವ ರೀತಿ ವಿಚಿತ್ರವಾಗಿದೆ. ಏನೆಂದರೆ-

ಕುರ್ಚಿಯ ಮೇಲೆ ಕುಳಿತು ಮೇಜಿನ ಮೇಲೆ ಚಾಚಿದ ಮಾಸ್ತರನ ಕಾಲುಗಳಂತೆ ಮುಂದಿನ ಎರಡು ಹಾಯ್ದ ಹಲ್ಲು. ಮೇಲಿನ ಎರಡು ಹಲ್ಲು ಬಾಯಿ ಮುಚ್ಚಿದರೂ ಕೆಳದುಟಿಯ ಮೇಲೆ ಇಳಿಯುತ್ತವೆ ಎಂದಂತಾಯ್ತು.

ಡೊಳ್ಳುಹೊಟ್ಟೆ ಡಬ್ಬುಬಿದ್ದ ನಗಾರಿಯನ್ನು ನನಪಿಗೆ ತಂದುಕೊಟ್ಟರೆ, ತುಂಬಿದ ಮೂಗು ಸುಲೇಷನ ಟ್ಯೂಬನ್ನು ಲಕ್ಷ್ಯಕ್ಕೆ ತರುತ್ತದೆ. ತಿಗಗಳಿಲ್ಲದ ನಿತಂಬವು, ಕುಂಡಿಯೆಲ್ಲ ಕಾಲು ಎನಿಸುತ್ತವೆ. ಹುರಿಕಟ್ಟಿಲ್ಲದೆ ಸಪುರಾಗಿ ಇಳಿದ ಕೈ ಪಡುವಲಕಾಯಾಗಿ ತೋರಿದರೆ, ಬಲಹೀನವಾದ ಕಾಲು ಹೂರಣಿಗೆಯನ್ನು ಹೋಲುತ್ತವೆ.

ಸಣ್ಣಗಿನ ಕೈಕಾಲುಗಳು, ದಪ್ಪಗಿನ ತಲೆ ಉಳ್ಳವನನ್ನು ಜನಪದವು ಜೇಡಿಗೊಂಬೆಯೆಂದೋ, ಮುಚಟ್ಟುಕೂಸು ಎಂದೋ ಹೆಸರಿಡುವುದಕ್ಕೆ ಹಿಂಜರಿಯುವುದಿಲ್ಲ.

ಇನ್ನುಳಿದ ಆಚಾರಗಳ ಗೊಡವೆಗಳ ಹೋಗದೆ, ಹಣೆಗೆ ಢಾಳ ವಿಭೂತಿಯನ್ನು ಧರಿಸುವ ಶೆಟ್ಟಿಗೆ ಬದ್ದಿ ಹೊಡೆದು ಬಂದಿರಾ – ಎಂದು ಚೇಷ್ಠಿಸುವುದುಂಟು. ಅದರಂತೆ ಕೈಕಾಲಿಗೆ ಹೋಗಿಬಂದ ಆಚಾರ್ಯರ ಜನಿವಾರ ಕಿವಿಗೆ ಸುತ್ತಿರುವುದನ್ನು ಕಂಡು-ಅಡ್ಡಹೊತ್ತಿನಲ್ಲಿ ಕಡೆಮಿಣಿಬಿದ್ದಿದೆಯಲ್ಲ ಗುರುಗಳೇ ಎಂದು ನಗೆಚಾಟಿಗೆ ಮಾಡುವುದುಂಟು. ಬೂದಿಗೊಬ್ಬರದ ಒಟ್ಟಿಲನ್ನು ದನಗಳು ಕೋಡಿನಿಂದ ಕೆದರಿದಾಗ ಹಣೆಗೆ ಬೂದಿ ಮೆತ್ತಿರುವುದುನ್ನು ಯಾರು ಕಂಡಿಲ್ಲ? ಕಂಬರಗೋಲಿನ ಗಾಲಿಯ ಮೇಲೆ ಹಾಯದಾಡುವ ಮೊಟ್ಟೆಯ ಮಿಣಿಯು ಅದೆಂಥದೋ ಅಸವಸಿತನದಿಂದ ಕೆಳಗಿಳಿದು ಗಾಲಿಯ ಅಚ್ಚಿಗೆಸುತ್ತಿಕೊಳ್ಳುವುದು ಎಲ್ಲರಿಗೂ ಗೊತ್ತು.

ಗಿಡ್ಡರನ್ನು ನೆಲಬುರಕಿಯೆಂದೂ, ಉದ್ದರನ್ನು ನಂದಿಕೋಲವೆಂದೂ ಯಾರಾದರೂ ಹೇಳಬಲ್ಲರು ಕೆಂಪು ಮುಸುಡಿಯ ಬಾಲಕರನ್ನು ಕೋಡಗನ ಕುಂಡಿಯಂಥ ಮೋತಿಯವನೆಂದು ಗೇಲಿ ಮಾಡುವುದನ್ನು ನೋಡಿದ್ದೇವೆ.

ಕೊಂಕೊತನವನ್ನೇ ಹಾಸುಹೊಕ್ಕು ಮಾಡಿಕೊಂಡ ಕೆಲವು ಲೋಕೋಕ್ತಿಗಳ ಬಣ್ಣವನ್ನು ಗುರುತಿಸುವಾ. ಗಾದೆಯಲ್ಲಿ ಬರುವ ಮೊದಲ ವಾಕ್ಯವು ಪ್ರಶ್ನೆಯಂತಿದ್ದು, ಇನ್ನೊಂದು ವಾಕ್ಯವು ಅದಕ್ಕೆ ಉತ್ತರವನ್ನು ಒದಗಿಸುತ್ತದೆ; ಅಥವಾ ಪರಿಣಾಮ ಬೀರುತ್ತದೆ.

೧. ಉಂಡು ಹೋಗೋ ಮೂಳಾ ಯಾವ ಹೊದಲ ಜೋಳ.

೨. ಹಾಲು-ಬೋನ ಉಂಡು ಹಾಸುಹೊಯ್ಯೇ ಮಗಳೇ, ಊರ ಮಿಂಡರೊಡನೆ ನೀರು ಹೊರುತ್ತೇನೆ.

೩. ಹಾದಿಗೆ ಹೋಗುವವನನ್ನು ಅಪ್ಪಾ ಎಂದು ಕರೆದರೆ ಯಾರಿಗೆ ಹುಟ್ಟಿದೆಯೋ ಮಗನೇ-ಅಂದಾನು.

೪. ಕರೆದು ಹೆಣ್ಣು ಕೊಟ್ಟರೆ ಅಳಿಯನಿಗೆ ಮಲರೋಗ ಬಂತು.

೫. ಕುಂಡರಲಾರದೆ ಕುಲಕರ್ಣಿಯ ಮನೆಗೆ ಹೋದರೆ ಕುಂಡರಿಸಿ ಮೂರು ರೂಪಾಯಿ ತಗೊಂಡ.

೬. ಕಂಗೆಟ್ಟು ಕಂಬಾರನಿಗೆ ಹೋದರೆ ಮೂಗಿನ ತಟಕು ಬಾಯಲ್ಲಿ ಬಿತ್ತು.

೭. ರಂಗೀಮನಗನಿಗೆ ದಂಡಿಗೆ ಕಳಿಸಿದಾಗ ಸತ್ತರೆ ಪೀಡೆ ಹೋಯಿತು. ಬದುಕಿದರೆ ಕೀರ್ತಿಬಂತು.

ಕೆಲವು ಗಾದೆಗಳು, ತಾವು ಹುಟ್ಟಿಕೊಂಡ ಕಾಲದ ಸಮಾಜೇತಿಹಾಸದ ವಾಸನೆಯನ್ನು ಬೀರುತ್ತವೆ.

ದುಗ್ಗಾಣಿ ರಂಡೆಗೆ ದುಡ್ಡು ಕೊಟ್ಟು ತಲೆ ಬೋಳಿಸಿದರು.

ಇದರಲ್ಲಿ ಎದ್ದು ಕಾಣುವ ಅಪವ್ಯಯದ ವಿಷಯವನ್ನು ಬದಿಗಿಟ್ಟರೂ, ಅಂದಿನ ಕಾಲದಲ್ಲಿ ತಲೆಬೋಳಿಸುವುದಕ್ಕೆ ಒಂದು ದುಡ್ಡು ಮಾತ್ರ ತೆಗೆದುಕೊಳ್ಳುತ್ತಿದ್ದರೆಂಬ ಸಂಗತಿ ಇತಿಹಾಸಕ್ಕೆ ಸಂಬಂಧಿಸಿದೆ. ದುಡ್ಡು, ದುಗ್ಗಾಣಿ ಅಂದಿನ ನಾಣ್ಯ ವಿಶೇಷ. ತಪ್ಪಿತಸ್ಥ ಹೆಂಗಸಿಗೆ ತಲೆಬೋಳಿಸುವ ಶಿಕ್ಷೆಯನ್ನೂ ಕೊಡಬಹುದಾಗಿತ್ತು, ಅಂದು.

ಕೋತಂಬ್ರಿಗೆ ಕಜ್ಜಿಲ್ಲ, ಕರುಳಿಗೆ ಲಜ್ಜೆಯಿಲ್ಲ.

ಹಳ್ಳಿಯಲ್ಲಿ ಕಾಯಿಪಲ್ಲೆಕೊಳ್ಳಲು ಮಾರುಕಟ್ಟೆಗೆ ಹೋಗುವವರು ರೊಕ್ಕ ಒಯ್ಯದೆ, ಜೋಳವನ್ನೋ, ಸಜ್ಜೆಯನ್ನೋ ಒಯ್ಯುತ್ತಿದ್ದರು ಹಾಕಿದ ಧಾನ್ಯದ ತೂಕಕ್ಕೆ ಅನುಸರಿಸಿ, ಸರಿಗೆ ಸರಿ ಅಥವಾ ಎರಡು ತೂಕ ಇಲ್ಲವೆ ಅರ್ಧ ತೂಕ ಗಜ್ಜರಿ, ಮೂಲಂಗಿ, ಬದನಿಕಾಯಿ, ಉಳ್ಳೇಗಡ್ಡಿ ಕೊಡುತ್ತಿದರು. ಹಾಗೆ ಕೊಂಡವರಿಗೆ ಕೋತಂಬರಿಯನ್ನಿಟ್ಟು ಕೊಟ್ಟು ಬಿಡುತ್ತಿದ್ದರು. ಅದಕ್ಕಾಗಿ ಪ್ರತ್ಯೇಕ ಕಾಳು ಸುರಿಯಬೇಕಾಗಿಲ್ಲ. ಕಾಯಿಪಲ್ಲೆಯ ಬೆಲೆಯೆಂದು ಸುರಿಯುವ ಕಾಳಿಗೆ ಕೆಜ್ಜು ಅನ್ನುತ್ತಾರೆ.

ಮೂರುದ್ದನ ಕೊಟ್ಟು ಮುಳ್ಳಡಿಸಿದ ಕಲ್ಲು.

ಬೀಸುವ ಕಲ್ಲು ಬೀಸಿಬೀಸಿ ನುಣುಪಾದಾಗ ಅದಕ್ಕೆ ಮುಳ್ಳು ಮೂಡಿಸಬೇಕಾಗುತ್ತಿತ್ತು. ಅದಕ್ಕೆ ಮುಳ್ಳಾಡಿಸುವುದು ಅನ್ನುತ್ತಾರೆ. ಅದರ ಕೂಲಿ ಮೂರು ಗಿದ್ದನ ಜೋಳ ಅದರಿಂದ ಅತ್ಯುತ್ತಮ ಕೆಲಸವಾಗುತ್ತಿತ್ತು;

ಅಲ್ಪನಿಗೆ ಐಶ್ವರ್ಯ ಬಂದರೆ
ಮಧ್ಯರಾತ್ರಿಯಲ್ಲಿ ಕೊಡೆಹಿಡಿಸಿಕೊಂಡನು

ಮಳೆಯಿಲ್ಲ, ಬಿಸಿಲಿಲ್ಲ, ಮಧ್ಯರಾತ್ರಿಯ ಕತ್ತಲೆಗಾಗಿಯೋ, ಕೊರೆಯುವ ಚಳಿಗಾಗಿಯೋ ಕೊಡೆಹಿಡಿಸಿಕೊಳ್ಳುವವನು ಕಗ್ಗನೂ ಅಲ್ಲ, ಎಗ್ಗನೂ ಅಲ್ಲ ಅಲ್ಪನೇ.

ಸಿಡಿಗೇಡಿಗೆ ಸೀರಿ ಉಡಿಸಿದರೆ
ಹೊಲಗೇರಿಗೆ ಹೇಳಹೋಗಿತ್ತು.

ತನ್ನೂರಿಗೆ ಹೋಗುವವರು ಬೀಳ್ಕೊಳ್ಳುವಾಗ ಕಾಣುವ ಕ್ರಮವೇ ಹೇಳಹೋಗುವುದು.

ಧರ್ಮಕಕೆ ದಟ್ಟಿ ಉಡಿಸಿದರೆ
ದಡ್ಡಿಯಲ್ಲಿ ಒಯ್ದು ಮೊಳಹಾಕಿದರು.
ಖಬರಗೇಡಿಯ ಕೈಯಲ್ಲಿ ಕೊಬ್ಬರಿ ಕೊಟ್ಟರೆ
ಅಬರಂಗ ಮಾಡಿ ಮೈಗೆ ಹಚ್ಚಿಕೊಂಡಿತು

ಇವೆಲ್ಲ ಬಹುತರವಾಗಿ ಸ್ತ್ರೀಲೋಕದ ಲೋಕೋಕ್ತಿಗಳೇ ಸರಿ. ಹೆಂಗಳೆಯರ ಮುಂಗುರುಳಿನಂತೆ, ಮಂಗಲಾಂಗಿಯರ ಮಂಗಮನಸಿನಂತೆ ಅವರ ಮಾತು ಅಂಕಡೊಂಕವಾಗಿ ಮಿಡಿದು ಕೊಂಕುನುಡಿಯೆನಿಸುವದು.

ಅನುಕೂಲತೆಯಿದ್ದಾಗಲೂ ಭೋಗಿಸುವುದಕ್ಕೆ ಸಾಧ್ಯವಿಲ್ಲದಾಗುತ್ತದೆ. ಇದಕ್ಕೆ ದೈವ ಅನ್ನಬೇಕೋ ಹಣೆಬರಹ ಅನ್ನಬೇಕೋ?

ಬತ್ತ ಇದ್ದೂ ಬಡತನ
ಗಂಡ ಇದ್ದೂ ರಂಡೆತನ.
ಊರ ತುಂಬ ಗಂಡರು
ಉಡಲು ಸೀರೆಯಿಲ್ಲ.
ಹುಚ್ಚಿಗೆ ತವರ ಮನೆಯೂ ಅಷ್ಟೇ
ಅತ್ತೆಯ ಮನೆಯೂ ಅಷ್ಟೇ.

ಸಭ್ಯ ಮನುಷ್ಯ ದನಗಳಲ್ಲಿ ಹೊಡೆದರೆ ದನಗಳಲ್ಲಿ
ಕರುಗಳಲ್ಲಿ ಹೊಡೆದರೆ ಕರುಗಳಲ್ಲಿ ಹೋಗುತ್ತಾನೆ.
ಕುರುಡಿ ಬೀಸಿದ್ದೆಲ್ಲ ನಾಯಿಯ ಪಾಲು

ಇದ್ದುದನ್ನೆಲ್ಲ ಕಬಳಿಸಿ, ಇಲ್ಲದ್ದಕ್ಕಾಗಿ ಹಲಬುವವರ ಸಲುವಾಗಿ ಹುಟ್ಟಿಕೊಂಡು ನಾಣ್ಣುಡಿಗಳು ಹೀಗಿವೆ-

ಹಾದರಗಿತ್ತಿ ಹಾಲು ಕುಡಿದು ಸತ್ತಳು
ಗರತಿ ಹುಳುಬಿದ್ದು ಸತ್ತಳು.
ತಿಂದೂ ಉಂಡೂ ರಂಗಿ ಗಂಡಗತ್ತಳು.

ಬೀಸಿದಾಕಿಗೆ ಮುಕ್ಕಿದಷ್ಟೇ ಲಾಭ. ಕೈಲಾಗದ ಸೂಳಿ ಅಯ್ಯನ ಕೂಡ ಎದ್ದು ಹೋದಳು.

ನಾಚಿಕೆಗೇಡಿ ನಾಲಗೆ ಬಾಯಲ್ಲಿದ್ದರೆ
ನಾಕೆಮ್ಮೆಯ ಹಯನು ಕಟ್ಟಿದಂತೆ.

ಹುಟ್ಟಾ ಸತ್ತಿಲ್ಲ, ಸುಡಗಾಡು ಕಂಡಿಲ್ಲ-ಎಂದು ಅನುಭವದ ಕೊರತೆಯನ್ನು ಬಗೆಯುತ್ತ ಕುಳಿತುಕೊಳ್ಳಬಾರದೆಂದೂ, ಏನಾದರೂ ಧಡಪಡಿ ಮಾಡುತ್ತಿರಬೇಕೆಂದೂ ಪ್ರತಿಪಾದಿಸುವವರಿಗೆ ಬೆಂಬಲ ನೀಡುವ ಗಾದೆಗಳೂ ಉಂಟು.

೧. ಎಮ್ಮಿ ಕರು ಒಯ್ದು ಆಕಳಿಗೆ ಆಕಳ ಕರು ಒಯ್ದು ಎಮ್ಮೆಗೆ ಬಿಟ್ಟರು.

೨. ಸುಳ್ಳು ಸುದ್ದಿ ಹೇಳಿ ಉಳ್ಳಿಕ್ಕೆ ಬಂದರು.

೩. ಈ ಬೆರಳಿನ ಉಗುಳು ಆ ಬೆರಳಿಗೆ ಬೆರಳಿನ ಉಗುರು ಈ ಬೆರಳಿಗೆ

೪. ಆಯ್ಕೊಂಡು ತಿಂದು ಕಾಯ್ಕೋಲ ದೀವಟಿಗೆ ಆಗಿದ್ದಾನೆ

೫. ಜೋಗದವರ ಮನೆಗೆ ಜೋಗಕ್ಕೆ ಹೋದರೆ

ಆಚೆಯ ಓಣಿ ನಿಮಗಾಗಿ ಬಿಟ್ಟಿದ್ದೇವೆ-ಅಂದರು.

ದೊಡ್ಡ ದೊಡ್ಡ ಶಬ್ದಗಳನ್ನು ಉಪಯೋಗಿಸುವುದು ಗೌರವದ ಲಕ್ಷಣವೆಂದು ತೋರಿದರೂ ಅದು, ಅವಹೇಳನಕ್ಕೆ ದಾರಿ ಮಾತ್ರ ಮಾಡಿಕೊಡುತ್ತದೆ. ಓಣಿಯೊಳಗಿನ ಸೆಗಣಿಯಂತೆ ಹಿಗ್ಗಿದವರ ಮುಖ ಸರಿಯಾದ ಅರ್ಥ ತಿಳಿದ ಮೇಲೆ, ಕಡಿಜೀರಿಗೆ ಹುಳು ಕಡಿದಂತೆ ಮುಖ ಕೆಂಪಗೆ ಕಾಣಹತ್ತುವದು. ಓಣಿಯೊಳಗಿನ ವಜೀರನೆಂದು ನಾಯಿಗೂ, ಬಚ್ಚಲೊಳಗಿನ ಬಹಾದ್ದೂರನೆಂದು ಕಪ್ಪೆಗೂ ಹೇಳುವುದು ಜಾನಪದದಲ್ಲಿ ನಡೆದು ಬಂದ ಹಳೆರೂಢಿ. ಸುಗಂಧದ ತೈಲವನ್ನು ಸವರಿಕೊಂಡು ಹತ್ತಿರ ಬಂದವನನ್ನು ಕುರಿತು ಮುಸ್ಲಿಮರ ಹೆಣ ಸನಿಹದಲ್ಲೇ ಬಂದ ಹಾಗಿದೆ-ಎಂದು ಹೇಳಿದರೆ ಅದೆಂಥದೋ ಒಂದು ನಗೆಮಾತ್ರ ಬರುತ್ತದೆ.

ಕೆಲವೊಂದು ಹೊಂದಾಣಿಕೆಗಳು ಬಸವನ ಹಿಂದೆ ಬಾಲದಂತಿವೆ. ಆ ಹೊಂದಾಣಿಕೆ ತಪ್ಪಿದರೆ ಬೇರೆಡೆಯಲ್ಲಿ ನೆಲೆಯೇ ಇಲ್ಲ.

ಹೇಸಿ ಗುರು ಸಮಗಾರ ಶಿಷ್ಯ
ಹೇಲು ಗುಂಡಿ ಕಲಕು ನೀರು
ಹಸಿದ ನಾಯಿ ಹಳಿಸಿದ ನುಚ್ಚು
ಕರ್ಕೀಬೇರು ವರ್ತೀ ನೀರು
ಹಾಳುಗೋಡೆ ತಪ್ಪಿಸಿಕೊಂಡ ಕತೆ
ಊರು ಇದ್ದಲ್ಲಿ ಹೊಲಗೇರಿ

ಕಾಳ ಅಂದರೆ ವಿಧಿ ಅಥವಾ ಕಾಲಪುರುಷ ಹತ್ತಿರದಲ್ಲಿಯೇ ಇರುತ್ತಾನಂತೆ. ವಿಧಿ ಬೆನ್ನ ಬಿಡದು-ಎಂಬ ದಾಸವಾಣಿಯ ಅರ್ಥ ಇದೆ ಆಗಿದೆ. ತನ್ನನ್ನೇ ಅಂಟಿಕೊಂಡಿರುವ ವಿಧಿಯನ್ನು, ಎಲ್ಲಿಗೆ ಹೋದರೂ ಕಳಕೊಳ್ಳಲು ಸಾಧ್ಯವಿಲ್ಲ. ಅಂತೆಯೇ ‘ತಾ ಬಲ, ಜಗ ಬಲ’ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ. ಅದೊಂದೇ ಸರಿಯಾದ ತೀರ್ಮಾನ. ವಿಧಿಯನ್ನು ತಪ್ಪಿಸುವುದು ಸರ್ಕಾರಕ್ಕೂ ಸಾಧ್ಯವಿಲ್ಲ, ಧರ್ಮಸಂಪ್ರದಾಯಕ್ಕೂ ಸಾಧ್ಯವಿಲ್ಲ.

ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡದು.
ಖೋಡೀನ್ನ ಕರಕೊಂಡು ಕೊಲ್ಲಾಪುರಕ್ಕೆ ಹೋದರೆ
ಬೇಡಿ ಮನ್ಯಾಗ ಸುದ್ದಾ ಬ್ಯಾಡಬ್ಯಾಡ ಅಂದರು

ಹೀಗೆ ಕೊಂಕುನುಡಿಯು ಮನವನ್ನು ಕೆರಳಿಸಿ, ಜಾಡ್ಯವನ್ನು ಕೆರಳಿಸಿ, ತಲೆತುರಿಸಿಕೊಳ್ಳುವಂತೆ ಮಾಡುವದು. ತಲೆತುರಿಸುವುದೆಂದರೆ, ಚೋಟುದ್ದ ಬೆಳಗಿ ಎಡೆ ಹೊಡೆದಂತೆ, ಮುಂದಿನ ಬೆಳವಣಿಗೆಗೆ ದಾರಿಮಾಡಿಕೊಡುವದು. ಹೃದಯವನನು ತಟ್ಟಬಲ್ಲದ್ದೇ ಹೃದಯಪರಿವರ್ತನ ಮಾಡಬಲ್ಲದು. ಹೃದಯ ಪರಿವರ್ತನಗೊಂಡಾಗಲೇ ಮಾನವಪ್ರಾಣಿ ಮನನೀಯನೂ ಮಾನನೀಯನೂ ಆಗಬಲ್ಲನು. ಆ ಸಾಧನೆ ನಡೆಸಿದವನಿಗೆ ಗೆಲುವಾಗುವುದು ನಿಶ್ಚಯಂ.